Showing posts with label ಚಿಂತನೆ. Show all posts
Showing posts with label ಚಿಂತನೆ. Show all posts

Friday, August 02, 2024

ಎಲ್ಲಾರು ಮಾಡುವುದು...

ಹದಿನಾರನೇ ಶತಮಾನದ (16th century, Kanakadasa) ಈ ಕೀರ್ತನೆ ಇಂದಿಗೂ, ಎಂದಿಗೂ ಪ್ರಚಲಿತವೇ. ಪ್ರಾಣಿ ಪ್ರಬೇಧದಲ್ಲಿ ವಿಶಿಷ್ಟ ಸ್ಥಾನವನ್ನು ಕಂಡುಕೊಂಡಿರುವ ಮಾನವ, ಎಂದಿಗೂ ಈ ಹೊಟ್ಟೆ ಮತ್ತು ಬಟ್ಟೆಗಳಿಂದ ವಿಮುಕ್ತನಾಗುವ ಮಾತೇ ಇಲ್ಲ. ಅಂದಿನ ಸರಳವಾದ ಸಮಾಜದಲ್ಲಿದ್ದುಕೊಂಡು, ಇಂತಹ ಉನ್ನತವಾದ ಆಲೋಚನೆಗಳನ್ನು ಅತಿ ಸರಳವಾದ ಆಡುಭಾಷೆಯ ಮೂಲಕ ಜನರಿಂದ ಜನರಿಗೆ ತಲುಪಿಸಿದ, ಕನಕದಾಸರನ್ನು ನಾವು ಎಂದಿಗೂ ಮರೆಯಲಾರೆವು.



ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ...


ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ

ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು

ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ

ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ

ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ

ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು

ಕಷ್ಟ ಮಾಡಿ ಉಣ್ಣುವುದು  ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ

ನಾನ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು

ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಅಂದಣ  ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ

ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು

ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ|


ಈ ಮೇಲಿನ ಕೀರ್ತನೆಯಲ್ಲಿ ಕನಕದಾಸರು, ಒಂಬತ್ತು ಚರಣಗಳಲ್ಲಿ ಎಲ್ಲ ರೀತಿಯ ಕಾಯಕವನ್ನೂ ಸೇರಿಸಿ ಅವುಗಳ ಫಲಮೂಲವನ್ನು ವರ್ಣನೆ ಮಾಡಿದ್ದಾರೆ. ಎಲ್ಲರೂ ಕಾಯಕಗಳನ್ನು, ಕೇಶವನ ಧ್ಯಾನವನ್ನು ಹೊರತು ಪಡಿಸಿ, ಮಾಡುವುದು ತಮ್ಮ ತಮ್ಮ ಹೊಟ್ಟೆ-ಬಟ್ಟೆಗಾಗಿಯೇ.


ಮನುಷ್ಯನನ್ನು ಹೊರತುಪಡಿಸಿದರೆ ಬಟ್ಟೆ ತೊಡುವ ಜೀವಿಗಳು ಮತ್ತ್ಯಾವೂ ಇಲ್ಲ. ಉಳಿದೆಲ್ಲ ಜೀವ-ಜೀವಿಗಳ ಧೋರಣೆ ಹೊಟ್ಟೆಗೋಸ್ಕರ, ಅದು ಅವುಗಳ ಮೂಲ ಮಂತ್ರ, ಹೊಟ್ಟೆ ತುಂಬಿದ ಮೇಲೆ ಉಳಿದೆಲ್ಲ ವಿಷಯಗಳು ಹೊರಬರುವುದು.


ಬಟ್ಟೆ ಎಂದರೆ, ದಾರಿ, ಮಾರ್ಗ, ಪಥ ಎಂದೂ ಕನ್ನಡದಲ್ಲಿ ಅರ್ಥವಿದೆ. ಈ ಅರ್ಥದಲ್ಲಿ, ಎಲ್ಲಾರು ಮಾಡುವುದು ಅವರವರಿಗೆ ಸರಿ ಎನಿಸಿದ ರೀತಿಯಲ್ಲಿ ಎಂದೂ ಅರ್ಥೈಸಿಕೊಳ್ಳಬಹುದು.


***

ಅಮೇರಿಕದ ಐಟಿ ಫ಼ೀಲ್ಡ್‌ನಲ್ಲಿ ಕೆಲಸ ಮಾಡ್ತಾ ಇರೋರಿಗೆ ಈಗ ಸ್ವಲ್ಪ ಕಷ್ಟದ ಸಮಯ. ಒಮ್ಮೆ ಇರುವ ಕೆಲಸ ಹೋಯ್ತು ಎಂದರೆ ಮತ್ತೆ ಹೊರಗಡೆ ಕೆಲಸ ಸಿಗುವಾಗ ಸ್ವಲ್ಪ ಸಮಯ ಬೇಕಾಗುತ್ತದೆ... ಕೆಲವೊಮ್ಮೆ ತಿಂಗಳುಗಟ್ಟಲೆ ಆಗಲೂಬಹುದು. ಅಮೇರಿಕಕ್ಕೆ ಬಂದು ಕೆಲವೊಂದು ಕಂಪನಿಗಳಲ್ಲಿ ಸುಮಾರು ಹತ್ತಿಪ್ಪತ್ತು ವರ್ಷ ಸರ್ವೀಸು ಮಾಡಿಕೊಂಡು ಸೀನಿಯರುಗಳಾಗಿ ಕುಳಿತುಕೊಂಡವರಿಗೆ ಈಗ ಔಟ್‌ಸೋರ್ಸಿಂಗ್, ಆಫ಼್‌ಶೋರಿಂಗ್‌ಗಳ ಮರ್ಮ ತಮ್ಮ ಬುಡಕ್ಕೆ ಬಂದು ನಿಂತಿದೆ. ಇದು ಒಂದು ರೀತಿಯ ವಿಪರ್ಯಾಸ: ಒಂದು ಕಾಲದಲ್ಲಿ ಹೊರಗಿನಿಂದ ಬಂದ ನಾವು ಇಲ್ಲಿ ಕೆಲಸಗಳನ್ನು ಮಾಡತೊಡಗಿದೆವು. ಈಗೀಗ, ಇಲ್ಲಿಂದ ಹೊರಗೆ ಕೆಲಸ ಕಳಿಸುತ್ತಲೇ, ನಮ್ಮ ಬುಡಕ್ಕೆ ನಾವು ಕೊಡಲಿಯನ್ನು ಹಾಕಿಕೊಳ್ಳುತ್ತಿದ್ದೇವೇನೋ ಅನ್ನಿಸುತ್ತದೆ.


ಸುಖ-ಸಂತೋಷದಿಂದ, ನೆಮ್ಮದಿಯಿಂದ ಇರಲು ಹೆಚ್ಚು ಬೇಕಾಗಿಲ್ಲ. ಆದರೆ, ನಮ್ಮ ಸಾಲದು ಎಂಬ ಮನೋಭಾವನೆಗೆ ಬೇಕು ಎನ್ನುವ ಧೋರಣೆಗಳು ಸೇರಿಕೊಂಡು, ನಮ್ಮ ಬದುಕು ದುಬಾರಿಯ ಬದುಕಾಗಿದೆ. ಹಾಗಾಗಿ ವೃತ್ತಿಪರ ಜೀವನದಲ್ಲಿ ಸ್ವಲ್ಪ ಏರುಪೇರಾದರೂ ಸಹಿಸಲಾಗದ ಹೊಡೆತ ಬೀಳುವುದು ಹೆಚ್ಚಿನವರಿಗೆ ಖಾತರಿಯ ವಿಷಯ.


ನಾವು ಎಲ್ಲಿಂದಲೋ ಬಂದು ನೆಲೆ ನಿಲ್ಲುವ ಹಕ್ಕಿಗಳ ಹಾಗೆ. ನಮ್ಮ ಕ್ಷಮತೆ ಮತ್ತು ಶಕ್ತಿಗನುಸಾರವಾಗಿ ನಾವು ಆಯಾ ಮರ-ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದಲ್ಲದೇ, ನಮಗೆ ನಿಲುಕುವ ಎತ್ತರವನ್ನೂ ಏರಿ ಒಂದು ಟೊಂಗೆಯ ಮೇಲೆ ಕುಳಿತುಕೊಳ್ಳುತ್ತೇವೆ. ಆದರೆ, ನಾವು ಕುಳಿತುಕೊಂಡಿರುವ ಮರಗಿಡಗಳಿಗೂ ತಮ್ಮದೇ ಆದ ಇತಿಮಿತಿಗಳೂ, ಅನುಕೂಲ-ಅನಾನುಕೂಲಗಳೂ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಒಂದು ವೇಳೆ, ನಾವು ಕುಳಿತ ಟೊಂಗೆ ಏನಾದರೂ ಇದ್ದಕ್ಕಿದ್ದ ಹಾಗೇ ಮುರಿತು ಬಿತ್ತೆಂದಾದರೆ, ಟೊಂಗೆಯ ಮೇಲೆ ಕುಳಿತ ಪಕ್ಷಿ ತನ್ನ ರೆಕ್ಕೆಗಳ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ಬದುಕ ಬೇಕಾಗುತ್ತದೆ. ಅದು ಮುರಿದು ಹೋದ ಟೊಂಗೆಯನ್ನು ನಂಬಿಕೊಂಡರೆ ಅದರ ಬಗ್ಗೆ ಮರುಕ ಪಡಬೇಕಾದೀತು.


ಎಷ್ಟಿದ್ದರೆ ಸಾಕು, ಏನೆಲ್ಲ ಬೇಕು, ಯಾವುದು ಅಗತ್ಯ, ಅದರಲ್ಲಿಯೂ ಯಾವುದು ಅತ್ಯಗತ್ಯ ಎನ್ನುವುದನ್ನು ಇಂದಿನ ಆಧುನಿಕ ಯುಗದಲ್ಲಿ ನಾವು ಕಲಿಯದವರಾಗಿದ್ದೇವೆ.  ನಮಗೆ ಕಷ್ಟ ಬಂದಾಗ ನಮ್ಮಲ್ಲಿ ಸೋಶಿಯಲಿಸ್ಟಿಕ್ ಮೌಲ್ಯಗಳು ಗರಿಗೆದರಿ ನಿಲ್ಲತೊಡಗುತ್ತವೆ. ಅದೇ ನಮ್ಮ ಉಚ್ಛ್ರಾಯ ಸ್ಥಿತಿಯಲ್ಲಿ, ನಮ್ಮ ಕ್ಯಾಪಿಟಲಿಸ್ಟಿಕ್ ಮೌಲ್ಯಗಳು ದೊಡ್ಡವಾಗಿ ಕಾಣತೊಡಗುತ್ತವೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಹೆಚ್ಚಿನವರು, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ವಿಶಾಲ ಸಾಗರದಲ್ಲಿ, ಸೋಶಿಯಲಿಸ್ಟಿಕ್ ನಾವೆಯನ್ನು ಹುಟ್ಟು ಹಾಕಿ ಚಲಿಸತೊಡಗಿದಂತೆ, ಒಂದು ಹಂತದಲ್ಲಿ, ನಾವು ಬಿಟ್ಟು ಬಂದ ದಡವೂ ನಮ್ಮ ದೃಷ್ಟಿ ಮತ್ತು ಊಹೆಯಿಂದ ದೂರವಾಗುತ್ತಾ ಹೋಗುತ್ತದೆ. ಇದು ಕೆಲವರಲ್ಲಿ ಅಧೀರತೆಯನ್ನು ಸೃಷ್ಟಿಸಬಹುದು, ಇನ್ನು ಕೆಲವರಲ್ಲಿ ಛಲದಿಂದ ಉದ್ಭವಿಸಬಹುದಾದ ಹೊಸದೊಂದು ಲವಲವಿಕೆಯನ್ನೂ ತೋರಬಹುದು.


***

ಭಕ್ತ ಸಿರಿಯಾಳ ಚಿತ್ರದ ಹಾಡಿನಲ್ಲಿ ಒಂದೆರಡು ಸಾಲುಗಳು ಹೀಗಿವೆ:

"ಪ್ರೀತಿ-ಪ್ರೇಮಗಳೇ ಬದುಕಿಗೆ ಸಿರಿತನ

ಹೊಂದಿ ಬಾಳದ ಬದುಕೇ ಬಡತನ


ಉಪವಾಸ-ವನವಾಸ ದೈವಾಧೀನ

ಅದಕಾಗಿ ಕೊರಗುವನು ಜಗದಲಿ ಬಲು ಹೀನ"


ನಮ್ಮ ಮೂಲ ಅಗತ್ಯಗಳನ್ನು ಮನಗಂಡು, ಹಾಸಿಗೆ ಇದ್ದಷ್ಟು ಕಾಲುಚಾಚಿಕೊಂಡು, ಸರಳ ಸಂಪನ್ನವಾದ ಜೀವನವನ್ನು ನಡೆಸಿಕೊಂಡು ಒಂದಿಷ್ಟು ವರ್ಷ ದುಡಿಮೆಯ ದೇವರಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಜಾಣತನ. ದುಡಿಮೆಯ ಉನ್ನತ ಹಂತದಲ್ಲಿ ಅಗತ್ಯಕ್ಕೆ ತಕ್ಕಷ್ಟು ಉಳಿತಾಯ ಮಾಡಿಕೊಂಡು, ದಿಢೀರನೆ ಬರುವ ಕಷ್ಟ-ನಷ್ಟಗಳನ್ನು ಸಂತೈಸಿಕೊಂಡು ಹೋಗುವುದಕ್ಕೆ ಬಹಳ ಜಾಣತನವೇನೂ ಬೇಕಾಗಿಲ್ಲ. ಸಣ್ಣಪುಟ್ಟ ಉಳಿತಾಯಗಳು, ಹಲವಾರು ವರ್ಷಗಳ ಕಾಲ ಮಾಡಿಕೊಂಡು ಬಂದಿದ್ದಾದರೆ, ಒಳ್ಳೆಯ ಫಲವನ್ನೇ ಕೊಡುತ್ತವೆ. ಸಮಾಜದ ಮೇಲ್ಪಂಕ್ತಿಯಲ್ಲಿರುವ ನಮ್ಮ ಕಷ್ಟಗಳು ಕಷ್ಟಗಳೇ ಅಲ್ಲ. ಏನಾದರೂ ಆಗಲಿ, ಈಸಬೇಕು ಇದ್ದು ಜೈಸಬೇಕು ಎನ್ನುವ ಮನೋಭಾವದವರು ನಾವಾದರೇ, ನಮಗೆ ಬರುವ ಕಷ್ಟಗಳು ಕಷ್ಟಗಳೇ ಅಲ್ಲ. ಕಷ್ಟದ ಕಾಲದಲ್ಲಿ ಹಳೆಯ ನಿರ್ಣಯಗಳನ್ನು ಬೈದುಕೊಂಡು ಯಾವ ಪ್ರಯೋಜನವೂ ಇಲ್ಲ. ಇಂದಿರುವ ಕಷ್ಟಗಳು ಮುಂದೊಂದು ದಿನ ದೂರವಾಗುತ್ತವೆ ಎಂದುಕೊಂಡು, ಉಪಾಯ ಮತ್ತು ಜಾಣತನದಲ್ಲಿ ಕಾಲ ನೂಕುವುದು ಎಲ್ಲರಿಗೂ ಎಲ್ಲಕಾಲಕ್ಕೂ ಅನ್ವಯವಾಗುವ ಸರಳಸೂತ್ರ!


***


ಮ್ಯಾಸ್ಲೋವ್‌ನ ಮಾನವ ಅಗತ್ಯಗಳನ್ನೆಂದಾದರೂ ಕರೆಯಿರಿ, ಅಥವಾ ನಮ್ಮ ಸನಾತನರು ಸಾವಿರಾರು ವರ್ಷಗಳಿಂದ ನಂಬಿಕೊಂಡ ಪರಂಪರೆ ಎಂದಾದರೂ ಅಂದುಕೊಳ್ಳಿ. ಮಾನವನ ಮೂಲಭೂತ ಅಗತ್ಯಗಳು ಬಹಳ ಸರಳವಾದವು. ಪ್ರಾಣ, ಅನ್ನ, ಜ್ಞಾನ, ವಿಜ್ಞಾನ, ಮತ್ತು ಆನಂದಗಳನ್ನು ಏರುವ ಒಂದು ಹಂತ. ಅವುಗಳ ಸುತ್ತಲಿನಲ್ಲಿ ಆಹಾರ, ನಿದ್ರೆ, ಮೈಥುನ, ಭಯ ಮತ್ತು ಚಿಂತನೆಗಳ ಮತ್ತೊಂದು ಹಂತ. ಇವು ನಮ್ಮನ್ನು ಪ್ರಾಣಿವರ್ಗದಲ್ಲಿ ಉಳಿದೆಲ್ಲ ಪ್ರಾಣಿಗಳಿಗಿಂದ ಭಿನ್ನವಾಗಿ ಮಾಡುತ್ತವೆ. ಬುಡದಲ್ಲಿ ಎಲ್ಲರ ಅಗತ್ಯವೂ ಪ್ರಾಣ ಮತ್ತು ಅನ್ನವಾದರೆ, ಎತ್ತರಕ್ಕೆ ಹೋದಂತೆಲ್ಲ ಆನಂದದ ಅಗತ್ಯ ಹೆಚ್ಚಾಗುತ್ತದೆ.

Maslow Need Hierarchy theory | Abraham Maslow hierarchy of needs



ಇದನ್ನೇ ಕನಕದಾಸರು ಹೇಳಿದ್ದು ಕೂಡ:

"ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು

ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ"

Monday, June 08, 2020

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...


ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...ಹೀಗೆನಿಸಿದ್ದು ನಮ್ಮ ಇತ್ತೀಚಿನ ಸ್ಟಾಕ್ ಮಾರ್ಕೆಟ್ ಮತ್ತು ಎಕಾನಮಿ ಇವುಗಳನ್ನು ಗಮನಿಸಿದಾಗಿನಿಂದ.  ಕೊರೋನಾ ವೈರಸ್ಸಿನ ಕೃಪೆಯಿಂದ ಎಷ್ಟೊಂದು ಜನರು ನಿರುದ್ಯೋಗಿಗಳಾಗಿದ್ದಾರೆ, ಎಷ್ಟೋ ಉದ್ಯಮಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.  ಇನ್ನು ಎಷ್ಟೋ ಸೆಕ್ಟರುಗಳು ಚೇತರಿಸಿಕೊಳ್ಳಲಾರದ ಮಟ್ಟಕ್ಕೆ ದೈನ್ಯ ಸ್ಥಿತಿಯನ್ನು ತಲುಪಿರುವಾಗ, ಇವತ್ತಿನ ಸ್ಟಾಕ್ ಮಾರ್ಕೆಟ್ಟಿನ ಪ್ರತಿಕ್ರಿಯೆಯನ್ನು ನೋಡಿದರೆ ಒಂದಕ್ಕೊಂದು ತಾಳೆಯಂದಂತೆನಿಸುವುದಿಲ್ಲ, ಅಲ್ಲವೇ?

ಎಕಾನಮಿ ಹದಗೆಟ್ಟಿದೆ, ಇನ್ನು ಚಿಗುರಿಕೊಳ್ಳಲು ಹಲವು ತಿಂಗಳುಗಳೇ ಬೇಕು, ವಿಶ್ವದಾದ್ಯಂತ ಎಲ್ಲ ಕಡೆಗೆ ರಿಸೆಶ್ಶನ್ನು ಎಂದು ನೀವು ಬೇಕಾದಷ್ಟು ಕಡೆ ಓದಿರುತ್ತೀರಿ, ಕೇಳಿರುತ್ತೀರಿ.  ಆದರೆ, ಇದನ್ನೆಲ್ಲ ಬದಿಗಿಟ್ಟು ವಿಶ್ವದಾದ್ಯಂತ ಮುಖ್ಯ ಮಾರುಕಟ್ಟೆಗಳು ತಮ್ಮ ಸ್ಟಾಕ್ ಇಂಡೆಕ್ಸುಗಳನ್ನು ಕಳೆದ ಎರಡು ತಿಂಗಳ ಕುಸಿತದಿಂದ ಸಂಪೂರ್ಣ ಚೇತರಿಸಿಕೊಂಡಂತೆ ಕಾಣಿಸುತ್ತಿದೆ.  ಮಾರ್ಚ್ ತಿಂಗಳ ಕೆಳ ಮಟ್ಟದ ಸೂಚ್ಯಂಕಗಳು, ಎರಡು-ಮೂರು ತಿಂಗಳುಗಳಲ್ಲಿ V ಆಕಾರದ ರಿಕವರಿಯನ್ನು ಪಡೆದುಕೊಂಡಿವೆ, ಇದಕ್ಕೆ ಏನು ಕಾರಣವಿರಬಹುದು?

- ಬೇರೆ ಕಡೆಗೆ ಹೂಡಿಕೆ ಮಾಡಲಾರದೆ ಹೆಚ್ಚಿನ ರಿಟರ್ನ್‌ಗೋಸ್ಕರ ಸ್ಟಾಕ್ ಮಾರ್ಕೆಟ್ ನಂಬಿಕೊಂಡು ಹೆಚ್ಚು ಹೆಚ್ಚು ಹಣ ಹೂಡುವ ಶ್ರೀಮಂತರು ಇನ್ನೂ ಇರಬಹುದೇ?
- ಮೊದಲೆಲ್ಲ ಮನುಷ್ಯರು ಮಾಡುವ ಕೆಲಸವನ್ನು ಈಗೀಗ ಕಂಪ್ಯೂಟರುಗಳು (algo trading) ಮಾಡುತ್ತಿರುವುದರಿಂದ, ಅಂತಹ ಟ್ರೇಡಿಂಗ್ ಸಿಸ್ಟಂಗಳಲ್ಲಿ ಜನ ಸಾಮಾನ್ಯರ ಯಾವುದೇ ಎಮೋಷನ್‌ಗೆ ಬೆಲೆ ನೀಡುತ್ತಿಲ್ಲವೇ?
- ಸೊರಗಿದ ಆರ್ಥಿಕತೆ, ರಿಸೆಶನ್ ಇತರ ಪದಪುಂಜಗಳೆಲ್ಲ ಕೇವಲ ಬಡವರಿಗೆ ಮಾತ್ರ ಅನ್ವಯಿಸುವಂತಹವೇ?
- ಕೊಳ್ಳುಬಾಕತನದ ಕನ್ಸೂಮರುಗಳು ಇಲ್ಲದಿದ್ದರೂ ಈ ಸ್ಟಾಕ್ ಮಾರ್ಕೆಟ್ ಅನ್ನು ಯಾವುದೋ ಅವ್ಯಕ್ತ ಶಕ್ತಿಯೊಂದು [ವಿದೇಶಿ ಹೂಡಿಕೆ (foreign investment), ಸರ್ಕಾರೀ ಮಧ್ಯವರ್ತಿತನ (quantitative easing), ಪುನಃ ಕೊಳ್ಳುವಿಕೆ (trade buyback), ಇತ್ಯಾದಿ] ಮುನ್ನಡೆಸುತ್ತಿರಬಹುದೇ?

ಈ ವರ್ಷ, ಬೆಳೆಯುವ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರಿಗೂ ಹೊಸ ಬಟ್ಟೆ ಬೇಕಾಗಿರಲಾರದು.  ಎಲ್ಲರ ಸಮ್ಮರ್ ವೆಕೇಶನ್ ಕೂಡ ಒಂದಲ್ಲ ಒಂದು ರೀತಿಯಿಂದ ಕೊರೋನಾ ವೈರಸ್ಸಿನ ಪ್ರಭಾವಕ್ಕೆ ಒಳಗಾಗಿದೆ.  ಮುಂದೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಅಮೇರಿಕದಲ್ಲಿ ಶಾಲೆಗಳು ತೆರೆಯದೇ ಮಕ್ಕಳು ಮನೆಯಲ್ಲೇ ಇದ್ದರೆ, ಬ್ಯಾಕ್-ಟು-ಸ್ಕೂಲ್ ಖರೀದಿಗೂ ದಕ್ಕೆಯಾಗುತ್ತದೆ.  ಜನರು ಕಡಿಮೆ ಡ್ರೈವ್ ಮಾಡುತ್ತಿದ್ದಾರೆ, ಹೆಚ್ಚಿನ ಕಾರುಗಳನ್ನು ಕೊಳ್ಳುತ್ತಿಲ್ಲ.  ಕಾರುಗಳು ರೀಪೇರಿಗಾಗಲೀ, ಸರ್ವೀಸಿಗಾಗಲೀ ಬರುತ್ತಿಲ್ಲ.  ರೆಸ್ಟೋರಂಟುಗಳಿಗೆ ಜನರು ಹೋಗುವುದು ಕಡಿಮೆಯಾಗಿದೆ.  ಜನರ ತಿಂಗಳ ಖರ್ಚು ಕನಿಷ್ಠ ಪ್ರಮಾಣಕ್ಕೆ ಬಂದು ನಿಂತಿದೆ.  ಇನ್ನು ಏರ್‌ಲೈನ್ಸ್ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ನೆನೆಗುದ್ದಿಗೆ ಬಿದ್ದಿದೆ. ಹೀಗೆ, ರೀಟೈಲ್-ಹೋಲ್‌ಸೇಲ್ ಎಲ್ಲ ಖರೀದಿಗಳೂ ಸಹ ಕಷ್ಟಕ್ಕೆ ಒಳಗಾಗಿ ಸೊರಗಿವೆ.  ಹಾಗಿದ್ದರೆ, ಇವುಗಳೆಲ್ಲದರ ಒಟ್ಟು ಹೊಡೆತ ಸ್ಟಾಕ್ ಮಾರ್ಕೆಟ್ಟಿನ ಮೇಲೆ ಒಂದಲ್ಲ ಒಂದು ರೀತಿಯಿಂದ ಆಗಲೇ ಬೇಕಲ್ಲವೇ?

ಒಂದು ವರದಿಯ ಪ್ರಕಾರ, ಅಮೇರಿಕದಲ್ಲಿ ನೂರಕ್ಕೆ ಐವತ್ತೈದು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೂಡಿಕೆ ಮಾಡುತ್ತಾರೆ.  ಈ ರೀತಿ ಹೂಡಿಕೆ ಮಾಡುವವರಲ್ಲಿ individual (retail) traders ಮತ್ತು institutional traders ಎಂದು ಎರಡು ರೀತಿಯವರನ್ನು ಗುರುತಿಸಬಹುದು.  ರೀಟೈಲ್ ಟ್ರೇಡರ್ಸ್ ತಮ್ಮ ಚಿಕ್ಕ ಚಿಕ್ಕ ಪೋರ್ಟ್‌ಫೋಲಿಯೋ ಗಳನ್ನು ಸ್ವಯಂ ಮ್ಯಾನೇಜು ಮಾಡುತ್ತಾರೆ, ಹೆಚ್ಚಿನವರು ಹಣ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಿರುವ ವಿಷಯ.  ಆದರೆ, Institutional traders ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ ಬಿಲಿಯನ್ ಗಟ್ಟಲೆ ಲಾಭಗಳಿಸುತ್ತಾರೆ... ಇವರ ಪ್ರಮಾಣ ಸಾವಿರದಲ್ಲಿ ಒಬ್ಬರ ಲೆಕ್ಕ. ಇಂಥ ಶ್ರೀಮಂತರು ಎಂತಹ ಎಕಾನಮಿ ಇದ್ದರೂ ಅದರಲ್ಲಿ ಲಾಭಗಳಿಸುವ "ತಂತ್ರ" ಉಳ್ಳವರಾಗಿರುತ್ತಾರೆ.  ಇವರಿಗೆ ಸಾಧಾರಣವಾಗಿ ಯಾವುದೇ ರೀತಿಯಲ್ಲಿ ಹೊಡೆತ ಬೀಳದಂತೆ ತಮ್ಮ ಪೋರ್ಟ್‌ಫೋಲಿಯೋಗಳಲ್ಲಿ ಹೆಡ್ಜ್ (hedge) ಮಾಡಿರುತ್ತಾರೆ.

ಈಗ ಈ ಎಲ್ಲ ವಿವರಗಳನ್ನಿಟ್ಟುಕೊಂಡು (ನಿಜವನ್ನು) ಯೋಚಿಸಿದರೆ, ಇಲ್ಲಿನ ಸ್ಟಾಕ್ ಮಾರ್ಕೆಟ್ಟುಗಳನ್ನು drive ಮಾಡುವವರು ಎಂಬುದು ನಿಮಗೆ ಗೊತ್ತಾಗುತ್ತದೆ.  ಒಂದು ಕಡೆಗೆ ಜನರ pension funds ಮತ್ತಿತರ long term investment ಗಳಿಗೆ ಕಾಲಕ್ರಮೇಣ ಹೂಡಿಕೆ ಮಾಡುವುದರ ಅಗತ್ಯ ಯಾವತ್ತೂ ಇದ್ದೇ ಇರುವಾಗ ಮಾರುಕಟ್ಟೆಗೆ ನಿಧಾನವಾಗಿ ಹಣ ಬರುತ್ತಲೇ ಇರುತ್ತದೆ.  ಮತ್ತೊಂದು ಕಡೆಗೆ, ಹಣವುಳ್ಳವರು ಇನ್ನೂ ಶ್ರೀಮಂತರಾಗುವ ಅನೇಕ ಸೌಲಭ್ಯಗಳ ವರದಾನವೇ ಅವರಿಗೆ ಸಿಗುತ್ತದೆ.   ಈ ಎಲ್ಲದರ ನಡುವೆ ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಪ್ರತಿದಿನದ ತಿಣುಕಾಟ-ಗೊಣಗಾಟಗಳು ಹಾಗೆ ಮುಂದುವರೆಯುತ್ತವೆ.  ಕಷ್ಟದ ಕಾಲದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ.  ಪ್ರಪಂಚದಾದ್ಯಂತ ನೀವು ಯಾವುದೇ ದೇಶವನ್ನು ಯಾವುದೇ "ಇಸಂ" (ism) ಮಸೂರದಲ್ಲಿ ನೋಡಿದರೂ ಎಲ್ಲ ಒಂದೇ ರೀತಿಯಲ್ಲಿ ಕಾಣುತ್ತದೆ!

Friday, May 08, 2020

ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

***
ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

***
ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

Thursday, May 07, 2020

ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

***
ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

***

ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

Friday, May 01, 2020

ಸಾಲವೆಂಬ ಶೂಲ!

ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...".  ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು.  "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ.  ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ.  ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು.  ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು.  ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು.  ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.

***
ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ.  ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು.  ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು.  ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.  ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ.  ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು.  ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.

ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು".  ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು.  ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು.  ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು.  ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ!  ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.

ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ.  ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು.  ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು.  ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು.  ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು.  ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು.  ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!

ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು.  ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.

***
ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ.  ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"!  ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.

ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ.  "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ.  ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.

ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು,  ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್‌ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು,  ಹಾಗೆ ಮಾಡುವುದರಿಂದ ಟ್ಯಾಕ್ಸ್‌ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!

ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ,  ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ!  (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!).  ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ!  ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು.  ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!

ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ!  ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು.  ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು.  ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!

ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!

***
ನಮ್ಮ ಸುತ್ತಲೂ ಈಗ ಯಂತ್ರಗಳಿವೆ:  ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು  ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ!  ಸಾಲ ದೊಡ್ಡದಿದೆ.  ಹೂಡಿಕೆಗಳು ಹಲವಿವೆ.  ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ.  "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ!  ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!

ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?

Saturday, April 25, 2020

ಎಲ್ಲಾ ಕಸಮಯವೋ!

ಕೊರೋನಾ ವೈರಸ್‌ಗೆ ಸಂಬಂಧಿಸಿದ ಬಿಕ್ಕಟ್ಟನ್ನು ನಾವೆಲ್ಲ ಎದುರಿಸುತ್ತಿರುವಾಗ ಒಂದು ವಿಷಯವನ್ನು ನಮ್ಮ ಅನುಕೂಲಕ್ಕೋಸ್ಕರ ಮರೆತುಬಿಡುತ್ತಿದ್ದೇವೆಂದರೆ ಅದು ನಮ್ಮ ಕಸ ಸಂಸ್ಕರಣೆಯ ವೈಫಲ್ಯ.  ನಮ್ಮ ತಂತ್ರಜ್ಞಾನಗಳು ಅದೆಷ್ಟೇ ಮುಂದುವರೆದರೂ, ಬಾಲ್ಟಿಮೋರ್‌ನಿಂದ ಬೆಂಗಳೂರಿನವರೆಗೆ ನಾವು ಕಸವನ್ನು ಪರಿಷ್ಕರಿಸುವ ರೀತಿಯನ್ನು ನೋಡಿದರೆ ತಿರಸ್ಕಾರ ಮೂಡುತ್ತದೆ.  ಇತ್ತೀಚೆಗೆ I-95ನಲ್ಲಿ ಡ್ರೈವ್ ಮಾಡುತ್ತಾ ಇನ್ನೇನು ಬಾಲ್ಟಿಮೋರ್ ನಗರವನ್ನು ಹೊಕ್ಕುತ್ತಿರುವಂತೆ (ಕಸವನ್ನು ಸುಟ್ಟು) ಗಗನಕ್ಕೆ  ಹೊಗೆಯನ್ನು ಉಗುಳುವ ಹೊಗೆ ಕೊಳವೆಗಳು ನಾವು ಇನ್ನೂ ಜೀವಂತವಿದ್ದೇವೆ ಎಂದು ನೆನಪಿಸಿದವು.  ಅದೇ ರೀತಿ ನೀವು ಭಾರತದ ಯಾವುದೇ ಮಹಾನಗರಕ್ಕೆ ಹೋದರೂ ಕಸದ ಪ್ರಮಾಣ ಮತ್ತು ಸಂಸ್ಕರಣಾ ವಿಧಾನ ಎರಡೂ ನಿಮ್ಮನ್ನು ಹೈರಾಣಾಗಿಸುತ್ತವೆ ಎಂದರೆ ತಪ್ಪೇನಿಲ್ಲ.



ದಿನೇ-ದಿನೇ ಬೃಹದಾಕಾರವಾಗಿ ಬೆಳೆಯುವ ಕಸದ ಪ್ರಮಾಣ ಒಂದು ದಿನ ಇಡೀ ಪ್ರಪಂಚದ ಪ್ರಗತಿಗೇ ಮಾರಕವಾಗಬಹುದೇ ಎಂಬ ಕೊರಗು ಇತ್ತೀಚೆಗೆ ಬಲವಾಗಿ ಕಾಡುತ್ತಿದೆ.

***
ನಮ್ಮ ಆಧುನಿಕ ಬದುಕಿನಲ್ಲಿ ನಾವೇ ಉತ್ಪಾದಿಸಿದ ಸಮಸ್ಯೆಗಳಲ್ಲಿ ಈ ಕಸವೂ ಒಂದು.  ಇದನ್ನ ಕಸ ಅನ್ನಿ, ಟ್ರ್ಯಾಶ್ ಅನ್ನಿ, ಅಥವಾ ರಬ್ಬಿಶ್ ಅನ್ನಿ, ತ್ಯಾಜ್ಯ ಅನ್ನಿ, ಕಲ್ಮಷ ಅನ್ನಿ - ಎಲ್ಲವೂ ಒಂದೇ.   ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದ್ದೇ ಇದೆ, ಆದರೆ ಭಾರತದಲ್ಲಿ ಇದು ಅತಿ ಹೆಚ್ಚು ಎನ್ನಬಹುದು.  ಈಗಿನ ಎಲ್ಲೆಲ್ಲೂ ಕಸವೇ ಕಸ ಎನ್ನುವ ಅಂತಿಮ ಹಂತವನ್ನು ತಲುಪುವಲ್ಲಿ ಸಹಾಯ ಹಸ್ತ ನೀಡಿದ ಪೆಡಂಭೂತಗಳಲ್ಲಿ ಮುಖ್ಯವಾದುವು: ಯದ್ವಾತದ್ವಾ ಬೆಳೆದ ಜನಸಂಖ್ಯೆ, ಎಂಥ ಸಮಸ್ಯೆಗಳನ್ನೂ ಉಲ್ಬಣಗೊಳಿಸಬಲ್ಲ ಜನಸಾಂದ್ರಂತೆ, ಇವೆಲ್ಲಕ್ಕೂ ಮೂಲಭೂತ ಕಾರಣವಾದ ಪ್ಲಾನಿಂಗ್ (ಅಥವಾ ಪ್ಲಾನಿಂಗ್ ಇರದೇ ಇರುವ ಸ್ಥಿತಿ), ಎಂಥ ಸಂದರ್ಭವನ್ನೂ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಹಾಗೂ ಲಂಚ ಲಂಪಟತನ.

ಭಾರತದವೆಂದರೆ ಬೆಂಗಳೂರೊಂದೇ ಅಲ್ಲ, ಆದರೆ ನಮ್ಮ ಬೆಂಗಳೂರಿಗೆ ಈ ಗತಿ ಬಂದಿರುವಾಗ ಇನ್ನುಳಿದ ನಗರಗಳ ಪಾಲು ಹೇಗಿರಬೇಡ.  ಏಳು (೨೦೧೧) ವರ್ಷಗಳ ಹಿಂದೆ ೮೫ ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಇಂದು ೧೨೫ ಲಕ್ಷ (೨೦೧೭) ತಲುಪಿದೆ. ಇಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಷರಕುಕ್ಷಿಗಳಿದ್ದರೂ ಸಹ, ಇಡೀ ನಗರ ಅನಾಗರೀಕರ ಬೀಡಾಗಿದೆ.  ತಮ್ಮ ಮನೆಯ ಒಳಗನ್ನು ಬೆಳಗಿಕೊಳ್ಳುವ ಜನ, ಹೊರಗನ್ನು ಅದೆಷ್ಟು ಕೊಳಕಾಗಿಟ್ಟುಕೊಂಡಿದ್ದಾರೆಂದರೆ ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ, ಆದ್ದರಿಂದ ಎಲ್ಲರಿಗೂ ಅದು ’ಒಪ್ಪಿಕೊಂಡ’ ಅಥವಾ ’ಒಗ್ಗಿಕೊಂಡ" ವಿಷಯವಾಗಿದೆ.

ಒಂದು ನಗರ ನಿರ್ಮಲೀಕರಣಗೊಳ್ಳ ಬೇಕಾದರೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು.  ಅಲ್ಲಿ ಬಳಕೆಯಾಗುವ ನೀರನ್ನು ಪರಿಷ್ಕರಿಸಿ ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಿಬೇಕು.  ಇದೇ ರೀತಿ ಕಸವನ್ನು ಸಹ ಪರಿಷ್ಕರಿಸಿ, ರಿಸೈಕಲ್ ಮಾಡಬಹುದಾದವುಗಳನ್ನು ಬೇರ್ಪಡಿಸಿ ರಿಸೈಕಲ್ ಮಾಡಬೇಕು.  ಇವೆಲ್ಲಕ್ಕೂ ವ್ಯವಸ್ಥಿತವಾದ ಸಾಮಾಜಿಕ ಕಾಳಜಿ ಇರಬೇಕು.  ನಗರೀಕರಣ, ಅತಿ ಜನಸಾಂದ್ರತೆಯಿಂದ ನಮ್ಮ ಸಮಸ್ಯೆಗಳು ಹೆಚ್ಚಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತಳ್ಳಿ ಹಾಕುವಂತಿಲ್ಲ.  ಉದಾಹರಣೆಗೆ, ೯೦ ಲಕ್ಷ ಜನಸಂಖ್ಯೆ ಇರುವ ನ್ಯೂ ಯಾರ್ಕ್ ನಗರ, ಇದಕ್ಕಿಂತಲೂ ನಾಲ್ಕು ಪಟ್ಟು ಜನಸಾಂದ್ರತೆ ಇರುವ ಟೋಕ್ಯೋದಲ್ಲಿ ಜನರು ಬದುಕುತ್ತಿಲ್ಲವೇ? ಅಲ್ಲಿಯೂ ಕಸದ ಸಮಸ್ಯೆ ಇದೆಯೇ ಎಂದು ಯೋಚಿಸಬೇಕಾಗುತ್ತದೆ.

ನಮ್ಮ ಕಸದ ಸಮಸ್ಯೆಗೆ ನಾವು ಏನು ಮಾಡಬೇಕು? ಈ ಹಿಂದೆ ವ್ಯವಸ್ಥಿತವಾದ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದ ನಗರಗಳ ಕನಿಷ್ಠ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬೆಳೆಸುವುದರ ಜೊತೆಗೆ, ಅಲ್ಲಿ ಎಲ್ಲೆಲ್ಲಿಂದಲೋ ವಲಸೆ ಬಂದು ಸೇರಿಕೊಂಡ ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು.  ಜೊತೆಗೆ ತಿರಸ್ಕೃತ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸರಿಯಾಗಿ "ವಿನಿಯೋಗಿಸುವ" ಉದ್ಯಮಗಳು ಹಾಗೂ ಅದಕ್ಕೆ ಸೂಕ್ತವಾದ ಟೆಕ್ನಾಲಜಿ ಮತ್ತು ಮಷೀನುಗಳ ಸಹಾಯದಿಂದ ಕಸದ ಪೆಡಂಭೂತವನ್ನು ನಿಯಂತ್ರಿಸಬಹುದು.   ನಾನು ನೋಡಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಈಗ      ಚಾಲ್ತಿಯಲ್ಲಿರುವ ವ್ಯವಸ್ಥೆ ಕಲೆಕ್ಟ್ ಎಂಡ್ ಡಂಪ್.  ಇದು ಹೀಗೇ ಮುಂದುವರೆದರೆ ಇಡೀ ನಗರವೇ ತಿಪ್ಪೇಗುಂಡಿಯಾಗುವುದು ಗ್ಯಾರಂಟಿ.

ಕಸವನ್ನು ಕಲೆಕ್ಟ್ ಮಾಡಿ, ಅದನ್ನು ಸರಿಯಾಗಿ ಬೇರ್ಪಡಿಸಿ, ರಿಸೈಕಲ್ ಮಾಡುವವನ್ನು ಸರಿಯಾದ ಜಾಗಕ್ಕೆ ತಲುಪಿಸಿ, ಕೊಳೆಯುವುದನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಮತ್ತೆ ಅವೇ ರಿಸೋರ್ಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳುವುದು ತ್ಯಾಜ್ಯವನ್ನು ಪರಿಷ್ಕರಿಸಲು ಇರುವ ಒಂದು ಸಾಲಿನ ಸೂತ್ರ.  ಮೊದಲೆಲ್ಲ ನಮ್ಮಲ್ಲಿ ಪ್ಲಾಸ್ಟಿಕ್ಕುಗಳು ಬಳಕೆಯಾಗುತ್ತಿರಲಿಲ್ಲ.  ಮನೆಗೊಂದು ತಿಪ್ಪೇಗುಂಡಿ ಇರುತ್ತಿತ್ತು, ಅಲ್ಲಿ ದಿನಬಳಕೆಯ ತ್ಯಾಜ್ಯ ಕೊಳೆತು ಗೊಬ್ಬರವಾಗುತ್ತಿತ್ತು. ಹಳೆಯ ಟೂತ್‌ಪೇಸ್ಟ್ ಟ್ಯೂಬುಗಳಿಂದ ಹಿಡಿದು, ಒಡೆದ ಪ್ಲಾಸ್ಟಿಕ್ ಕೊಡಪಾನಗಳ ತುಂಡುಗಳನ್ನು, ಖಾಲಿ ಬಾಟಲುಗಳನ್ನು, ರದ್ದಿ ಪೇಪರುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಿಷ್ಟೇ ಅಲ್ಲ, ಹಳೆಯ ಪಾತ್ರೆಗಳನ್ನೂ, ರೇಷ್ಮೆ ಬಟ್ಟೆ ಮೊದಲಾದವುಗಳನ್ನೂ ಸಹ ನಮಗೆ ಗೊತ್ತಾದ ರೀತಿಯಲ್ಲಿ ’ರಿಸೈಕಲ್’ ಮಾಡುತ್ತಿದ್ದೆವು.
ಇಂದಿನ ಆಧುನಿಕ ಜನತೆಗೆ ತಮ್ಮ ತ್ಯಾಜ್ಯವನ್ನು ವಿನಿಯೋಗಿಸಲು ತಾವು ಹಣವನ್ನೇಕೆ ಖರ್ಚು ಮಾಡಬೇಕು ಎಂಬ ಸರಳ ಸತ್ಯ ತಿಳಿಯುತ್ತಿಲ್ಲ?  ನಿಮ್ಮ ಮನೆಯ ಮುಸುರೆಯನ್ನು ತೊಳೆಯುವವರಿಗೆ ದುಡ್ಡು ಕೊಡುವುದಿಲ್ಲವೇ? ಹಾಗೇ ತ್ಯಾಜ್ಯ ತೆಗೆದು ಪರಿಷ್ಕರಿಸಲು ಕೂಡ ಹಣ ತೆರಬೇಕಾಗುತ್ತದೆ.  ಅಲ್ಲದೇ ತ್ಯಾಜ್ಯವನ್ನು ಪರಿಷ್ಕರಿಸುವ ಉದ್ಯಮ/ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ಒಂದು ವ್ಯವಸ್ಥೆಯ ಮುಖ್ಯ ಅಂಗವನ್ನಾಗಿ ಪರಿಗಣಿಸಬೇಕಾಗುತ್ತದೆ.  ನನ್ನ ಅನಿಸಿಕೆಯ ಪ್ರಕಾರ, ನಾವು ಸೇವಿಸುವ ಆಹಾರಕ್ಕೆಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅದರ ಕಾಲು ಪಟ್ಟಾದರೂ ತ್ಯಾಜ್ಯ ಸಂಸ್ಕರಣೆಗೆ ಮನ್ನಣೆ ನೀಡಬೇಕಾಗುತ್ತದೆ.  ಇಲ್ಲವೆಂದಾದಲ್ಲಿ ಇಂದು ನಾವು ಬೆಲೆ ತೆರದೆಯೇ ಕಸವನ್ನು ಎಲ್ಲಿ ಬೇಕಂದಲ್ಲಿ ಎಸೆದು ಮುಂದೆ ಅದು ಎಲ್ಲವನ್ನು ಮೀರಿ ಬೆಳೆತು ಅನೇಕ ಅನಾಹುತಗಳು, ಹಾನಿಗಳೂ ಸಂಭವಿಸುವಾಗ ತುಂಬಾ ನಿಧಾನವಾಗಿರುತ್ತದೆ.

***

ನಮ್ಮಲ್ಲಿ ತಂತ್ರಜ್ಞಾನ, ಅವಿಷ್ಕಾರ ಬೇರೆ ಎಲ್ಲ ದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಂತೋಷವಾಗುತ್ತದೆ.  ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಆರನೇ ಸಾಲಿನಲ್ಲಿದೆ ಎಂದು ಓದಿದಾಗ ಖುಷಿಯಾಗುತ್ತದೆ.  ನಮ್ಮಲ್ಲಿ ಅನೇಕ ಉದ್ಯಮಗಳು ಬೆಳೆಯುತ್ತಿವೆ, ನಾವು ಅತಿ ಹೆಚ್ಚು ಇಂಜಿನಿಯರುಗಳನ್ನು ಹೊರತರುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಆದರೆ, ಈವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿರುವುದನ್ನು ನೋಡಿಯೂ ನೋಡದೇ ಇರುವಂತಿರುವುದು ಏಕೆ? ಎಂದು ಯೋಚಿಸಿದರೆ ಉತ್ತರ ದೊರೆಯುವುದಿಲ್ಲ.

ಅಮೇರಿಕದಲ್ಲಿ ವೇಷ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಂಥವುಗಳು ಪಬ್ಲಿಕ್ ಟ್ರೇಡಿಂಗ್ ಕಂಪನಿಗಳಾಗಿ ಬೆಳೆದು ತಮ್ಮ ಗ್ರಾಹಕರಿಗೆ, ಬಳಕೆದಾರರಿಗೆ ಸೇವೆಯನ್ನು ಸಲ್ಲಿಸುತ್ತಿಲ್ಲವೇ? ಹಾಗೆಯೇ ನಮ್ಮಲ್ಲೂ ಸಹ ಈ ಸಮಸ್ಯೆಗೆ ಇದುವರೆಗೆ ಯಾರೂ ಉತ್ತರವನ್ನೇ ಕಂಡು ಹಿಡಿಯದಂಥ ಅಸಹಾಯಕ ಪರಿಸ್ಥಿತಿ ಬಂದಿದೆಯೇ?

ಮುಂದೆ ಇದೇ ಬೆಂಗಳೂರಿನ ಜನಸಂಖ್ಯೆ ದ್ವಿಗುಣವಾದಾಗ, ಈ ಕಸದ ಮಹಾತ್ಮೆ ಏನಾಗಿರಬೇಡ? ಮನೆಯ ದಿನನಿತ್ಯದ ಕಸದ ಜೊತೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉತ್ಪನ್ನಗಳೂ, ಲಿಥಿಯಂ ಬ್ಯಾಟರಿಗಳೂ ಸೇರಿಕೊಂಡು, ನೀರು-ಮಣ್ಣು ಎರಡೂ ಪಾದರಸ, ಆರ್ಸೆನಿಕ್, ಮೊದಲಾದ ವಿಷ ಪದಾರ್ಥಗಳಿಂದ ಕೂಡಿಕೊಂಡರೆ ಯಾರಿಗೆ ಹಾನಿ ಎಂದು ಎಲ್ಲರೂ ಯೋಚಿಸಬೇಕಾದ ವಿಚಾರ.  ಎಲ್ಲಾ ಕಡೆ ಕಸಮಯವಾಗಿದೆ.  ಇನ್ನೂ ನಾವು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದಿದ್ದರೆ, ನಿಸರ್ಗ ಎಂದಿನಂತೆ ತನ್ನನ್ನು ತಾನು ನೋಡಿಕೊಳ್ಳುತ್ತದೆ, ಅದಕ್ಕೆಲ್ಲ ಬೆಲೆ ತೆರಬೇಕಾದವರು ನಾವೇ!

Saturday, April 18, 2020

ದೊಡ್ಡ ನೋವಿನ ಮುಂದೆ...

ದೊಡ್ಡ ನೋವಿನ ಮುಂದೆ ಚಿಕ್ಕ-ಚಿಕ್ಕ ನೋವುಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ ಎನ್ನುವ ಹಾಗೆ... ಇತ್ತೀಚೆಗೆ ನಮ್ಮ ಮೆಡಿಕಲ್ ಫೆಸಿಲಿಟೀಸ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳದ್ದೇ ಹೆಚ್ಚಿನ ಪಾಲು.  ಅಂದಂತೆ ಎಲ್ಲ ಕಡೆ ಹೆಚ್ಚು ಹೆಚ್ಚು ಹಾಸಿಗೆಗಳು ಇರುವ ಆಸ್ಪತ್ರೆಗಳನ್ನು ಸಮರೋಪಾದಿಯಲ್ಲಿ ತೆರೆಯಲಾಗಿದೆ.  ದೊಡ್ಡ ಕನ್ವೆನ್ಷನ್ ಸೆಂಟರುಗಳಲ್ಲಿ ಈಗಾಗಲೇ ಅನೇಕ ರೋಗಿಗಳನ್ನು ಒಟ್ಟೊಟ್ಟಿಗೆ ಏಕಕಾಲಕ್ಕೆ ನೋಡುವಂತೆ ಮುಂಜಾಗರೂಕತೆಯನ್ನು ಕೈಗೊಳ್ಳಲಾಗಿದೆ.  ನಮ್ಮ ಹತ್ತಿರದಲ್ಲಿರುವ ನ್ಯೂ ಯಾರ್ಕ್‌ ನಗರದಲ್ಲಿ ಜಾವಿಟ್ಸ್ ಸೆಂಟರ್‌ ಅನ್ನು ಈಗಾಗಲೇ ಆಸ್ಪತ್ರೆಯಾಗಿ ಬದಲಾಯಿಸಲಾಗಿದ್ದು ಸುಮಾರು 2500 ಜನರನ್ನು ಏಕಕಾಲಕ್ಕೆ ನೋಡುವಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದರೂ ಅದರ ಕಾಲು ಭಾಗವೂ ಇನ್ನೂ ತುಂಬಿಲ್ಲ.  ಯು.ಎಸ್. ನೇವಿ  ಹಾಸ್ಪಿಟಲ್ ಶಿಪ್ "ಕಂಫರ್ಟ್" ಇನ್ನೂ ಖಾಲಿ ಇದೆ.  ಈ ನಿಟ್ಟಿನಲ್ಲಿ, ನ್ಯೂ ಯಾರ್ಕ್ ಮೇಯರ್ ಮತ್ತು ಗವರ್ನರುಗಳು ಸುಕಾ ಸುಮ್ಮನೇ ಆರ್ತನಾದ ಹೊರಡಿಸಿದರೇ? ಎನ್ನುವುದು ಇನ್ನೊಂದು ದಿನದ ಪ್ರಶ್ನೆ!

ಈ ಕೊರೋನಾ ವೈರಸ್ ಹಾವಳಿಯಿಂದ ಒಂದಂತೂ ಗ್ಯಾರಂಟಿ - ಯಾರು ಯಾರಿಗೆ ತಡೆದುಕೊಳ್ಳಬಲ್ಲ ಖಾಯಿಲೆ ಇದೆಯೋ ಅವರು ಯಾರೂ ಆಸ್ಪತ್ರೆಯ ಬಳಿ ಸುಳಿಯುತ್ತಿಲ್ಲ.  ಎಲ್ಲ ಎಲೆಕ್ಟಿವ್ ಸರ್ಜರಿಗಳು ಮುಂದೂಡಲ್ಪಟ್ಟಿವೆ.  ಒಂದು ಮಾಹಿತಿಯ ಪ್ರಕಾರ, ಕೇವಲ ಕ್ರಿಟಿಕಲ್ ಪೇಷಂಟ್‌ಗಳನ್ನು ಮಾತ್ರ ಆಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ, ಉಳಿದವರನ್ನು ಹೊರಗೇ ಟ್ರೀಟ್ ಮಾಡಿ ಮನೆಗೆ ಕಳಿಸುತ್ತಿದ್ದಾರೆ.  ಕ್ರಿಟಿಕಲ್ ಪೇಷಂಟ್ ಎಂದರೆ ಹಾರ್ಟ್‌ಅಟ್ಯಾಕ್, ಸ್ಟ್ರೋಕ್, ಮೊದಲಾದ ಜೀವಕ್ಕೆ ಅಪಾಯ ತಂದೊಡ್ಡುವ ಖಾಯಿಲೆ ಇರುವ ರೋಗಿಗಳು ಎಂದರ್ಥ.

***
ನಮ್ಮ ಆಸ್ಪತ್ರೆಗಳಿಗೆ ಮೊದಲೆಲ್ಲ ಅಂದರೆ ದಿನದಲ್ಲಿ ಒಂದಿಷ್ಟು ಮೋಟಾರು ವೆಹಿಕಲ್ ಅಫಘಾತದ ಕೇಸುಗಳು ಬರುತ್ತಿದ್ದವು.  ಎಲೆಕ್ಟಿವ್ ಸರ್ಜರಿ ಕೇಸುಗಳು ಬರುತ್ತಿದ್ದವು.  ಏನಿಲ್ಲವೆಂದರೂ "ರುಟೀನ್ ಟೆಸ್ಟ್" ಎಂದುಕೊಂಡು, ಬಂದ ಪೇಷೆಂಟುಗಳಿಗೆ ತಲೆನೋವಿಂದ ಕಾಲು ನೋವಿನವರೆಗೆ ಅನೇಕ ಟೆಸ್ಟ್‌ಗಳನ್ನು ಮಾಡುವ ವ್ಯವಸ್ಥೆ ಇತ್ತು.  ಅದನ್ನು ಅವಲಂಬಿಸಿ ದೊಡ್ಡದೊಂದು ಬಿಸಿನೆಸ್ ವಾತಾವರಣ ನಿರ್ಮಾಣಗೊಂಡಿತ್ತು.

ಈ ಕೊರೋನಾ ವೈರಸ್‌ನ ದೆಸೆಯಿಂದಾಗಿ ಅವೆಲ್ಲ ಈಗ ಕಡಿಮೆಯಾಗಿದೆ.  ಲಾಭ ಮಾಡುವುದೇ ತಮ್ಮ ಧ್ಯೋತಕ ಎಂಬಂತೆ (ಭಾರತದಲ್ಲಿ) ನಾಯಿಕೊಡೆಗಳಂತೆ ಎದ್ದು ನಿಂತ ಅನೇಕ ನರ್ಸಿಂಗ್ ಹೋಮ್‌ಗಳು ಇವತ್ತು ಖಾಲಿಯಾಗಿವೆ.  ಅದೇ ರೀತಿ ಅಮೇರಿಕದಲ್ಲೂ ಸಹ, ಎಲ್ಲ ಕಡೆ ಕೋವಿಡ್ ಮಯವಾದ್ದರಿಂದ ಆಸ್ಪತ್ರೆಗಳು ಹಾಗೂ ಅದಕ್ಕೆ ಹೊಂದಿಕೊಂಡ ಹಲವಾರು ಸರ್ವಿಸ್ ಪ್ರೊವೈಡರುಗಳಿಗೆ ಅವರ ಆದಾಯಕ್ಕೇ ಸಂಚಕಾರ ಬಂದಿದೆ.

ಇನ್ನು ಕೋವಿಡ್ ಗಲಾಟೆ ಭರಾಟೆ ಎಲ್ಲ ಮುಗಿದ ಮೇಲೆ, ನಮ್ಮ ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಧೀರ್ಘಕಾಲೀನವಾಗಿ ಏನೇನು ಪರಿಣಾಮಗಳು ಬೀರುತ್ತವೆಯೋ? ಅವನ್ನೆಲ್ಲ ನಾವು ಕಾದು ನೋಡಬೇಕು.

ಒಟ್ಟಿನಲ್ಲಿ, ಕೋವಿಡ್ ನಮ್ಮನ್ನು ಕೊಳ್ಳುಬಾಕತನದಿಂದ ದೂರವಿರಿಸಿ, ಉತ್ತಮ ಹಾಗೂ ಸಮತೋಲಿತ ಆಹಾರ ಸೇವನೆಯತ್ತ ಗಮನ ಕೊಡುವಂತೆ ಮಾಡಿ, ನಮ್ಮ ನಮ್ಮ ಸಂಬಂಧಗಳ ಸುಧಾರಣೆಗೆ ಆದ್ಯತೆಯನ್ನು ಹೆಚ್ಚಿಸಿ, ಇನ್ನೆಂದಿಗೂ ನಮ್ಮ ಸರ್ವತೋಮುಖ ಆರೋಗ್ಯವನ್ನು ನಾವೆಲ್ಲ ಜೋಪಾನ ಮಾಡಿಕೊಳ್ಳುವಂತೆ ಪಾಠ ಕಲಿಸಿದೆಯೆಲ್ಲ... ಅದರಿಂದಲಾದರೂ ನಮ್ಮ ಹೆಲ್ತ್‌ಕೇರ್ ವ್ಯವಸ್ಥೆ ಎಲ್ಲರ ಒಳಿತನ್ನು ಗಮನದಲ್ಲಿಟ್ಟುಕೊಂಡು ಸುಧಾರಿಸಲಿ!

Monday, April 13, 2020

ನೋಡುವ ಕಣ್ಣಿರಲು...

ನಿನ್ನೆ ಶುಭ್ರವಾದ ಮುಂಜಾನೆ ಹೊರಗೆ ತಿರುಗಾಡಿಕೊಂಡು ಬರುವಾಗ ಇನ್ನೇನು ಅದಾಗ್ಗೆ ನಿದ್ದೆಯಿಂದ ಕಣ್ಣೊರೆಸಿಕೊಂಡು ಎದ್ದೇಳುತ್ತಿದ್ದ ಸೂರ್ಯ.  ಸೂರ್ಯನ ಸ್ನೇಹಿತರಾದ ಪಕ್ಷಿ ಸಂಕುಲದ ಸದಸ್ಯರುಗಳು ಬಹಳ ಗಡಿಬಿಡಿಯಲ್ಲಿ ತಮ್ಮ ದಿನಗಳನ್ನು ಆರಂಭಿಸುತ್ತಿದ್ದಂತೆ ಕಂಡುಬಂತು.  ಅವುಗಳ ಚಿಲಿಪಿಲಿ ಧ್ವನಿಯೊಂದಿಗೆ ಪೈಪೋಟಿ ನೀಡುತ್ತೇವೆ ಎಂದು ನಂಬಿಕೊಂಡು ಆಗೊಮ್ಮೆ ಈಗೊಮ್ಮೆ ಬೊಗಳುವ ನಾಯಿಗಳ ಸದ್ದು ದೂರದಲ್ಲಿ ಕೇಳುತ್ತಿತ್ತು.  ಹಿಂದಿನ ದಿನದ ವಿಪರೀತ ಗಾಳಿ, ಸ್ವಲ್ಪ ಮಳೆ/ಆಲಿಕಲ್ಲುಗಳ ಆಘಾತದಲ್ಲಿಸ್ವಲ್ಪ ನೊಂದಂತೆ ಕಂಡ ಗಿಡಮರಗಳೂ ಸಹ ಮುಂಬರುವ ಬಿಸಿಲನ್ನು ಆಹ್ಲಾದಿಸಲು ಸ್ವಲ್ಪವೂ ಅಲುಗಾಡದೇ ಕಾಯುತ್ತಿದ್ದವು.  ವಿಶ್ವದಾದ್ಯಂತ ಕೊರೋನಾ ವೈರಸ್ ಸುದ್ದಿಗೆ ಗ್ರಾಸವಾಗಿ ಹೆದರಿದ್ದ ಚಂದ್ರ ದೂರದಲ್ಲಿ ಅವತರಿಸಿದ್ದರೂ, ಇಂದು ಮತ್ತೇನು ಗ್ರಹಚಾರ ಕಾದಿದೆಯೋ, ತನಗೆಲ್ಲಿ ಸೋಂಕು ತಗುಲೀತು ಎನ್ನುವ ಹುನ್ನಾರದಿಂದ ಮೋಡಗಳ ನಡುವೆಯೇ ಮುಖವನ್ನು ಹುದುಗಿಸಿಕೊಂಡು ಆಗಾಗ್ಗೆ ಚಲಿಸುವ ಮೋಡಗಳ ಕೃಪೆಯಲ್ಲಿ ತೂಗುಯ್ಯಾಲೆಯಲ್ಲಿ ಆಟವಾಡುತ್ತಿದ್ದ.




ಸುತ್ತಲಿನಲ್ಲಿ ಹಸಿರು ತುಂಬಿಕೊಂಡಿದ್ದರೂ ನಾವು ನಡೆಯುವ ರಸ್ತೆಯಲ್ಲಿ ಮಾಗಿದ ಎಲೆಗಳು ಹಿಂದಿನ ದಿನದ ಗಾಳಿ-ಮಳೆಯ ರಭಸದ ಭರಾಟೆಯನ್ನು ನೆನಪಿಸುವಂತೆ ತಮ್ಮನ್ನು ತಾವು ರಸ್ತೆಯ ಮುಖದ ಮೇಲೆ ಚಾಚಿಕೊಂಡಿದ್ದವು.  ಅಲ್ಲಿಲ್ಲಿ ಮುರಿದು ಬಿದ್ದ ಒಣಗಿದ ಎಲೆರಹಿತ ಮರದ ಟೊಂಗೆಗಳು ಅದ್ಯಾವುದೋ ಗಣಿತದ ಸಮೀಕರಣವನ್ನು ಧ್ಯಾನಿಸಿಕೊಳ್ಳುವಂತೆ ತಮ್ಮನ್ನು ತಾವು ಚದುರಿಸಿಕೊಂಡಿದ್ದು, ಹಲವಾರು ಕೋನಗಳಿಂದ ಅನೇಕ ಬಹುಭುಜಾಕೃತಿಗಳ ಸಾಧ್ಯತೆಯನ್ನು ಎತ್ತಿ ತೋರಿಸುತ್ತಿದ್ದವು.  ಈಗಾಗಲೇ ಹಲವಾರು ಬಾರಿ ಮಳೆಯಲ್ಲಿ ಮಿಂದು ತೋಯ್ದು ಹೋದ ನೆಲ ಯಾವುದೇ ಕಂಪನ್ನು ಬೀರುತ್ತಿರಲಿಲ್ಲ, ಅದರ ಬದಲಿಗೆ ಹಿಂದಿನ ದಿನ ಕತ್ತರಿಸಿದ ಹುಲ್ಲಿನ ಗರಿಕೆಗಳು ಬೀಸುವ ಗಾಳಿಗೆ ತಮ್ಮ ಹಲುಬನ್ನು ನಿಲ್ಲಿಸಿ, ಒಂದು ರೀತಿಯ ಗಾಢವಾದ ಪರಿಮಳವನ್ನು ಎಲ್ಲಕಡೆಗೆ ಹರಡಿದ್ದವು.  ರಸ್ತೆಯ ಬದಿಯಲ್ಲಿ ಗುಂಪು ಕಟ್ಟಿಕೊಂಡು, ಪುಡಿಪುಡಿ ಮಣ್ಣಿನಲ್ಲಿ ಮನೆಕಟ್ಟುವ ಇರುವೆಗಳ ಚಡಪಟಿಕೆ ಜೋರಾಗಿ ನಡೆದಿತ್ತು.  ತಮ್ಮ ಭವಿಷ್ಯದ ಸೌಧದ ಮೇಲೆ ತಣ್ಣೀರೆರೆಚಿದ ಮಳೆರಾಯನಿಗೆ ಆಗಾಗ್ಗೆ ಎದ್ದು ಎರಡು ಕಾಲಿನಲ್ಲಿ ನಿಂತು ಶಾಪಹಾಕುತ್ತಿರುವವರಂತೆ ಕಂಡುಬಂದವು.  ಏನೇ ಆದರೂ ಛಲವನ್ನು ಬಿಡಬಾರದು ಎಂದು ತಮ್ಮ ಸೈನಿಕರುಗಳಿಗೆ ಮಳೆಯಿಲ್ಲದ ಶುಭ್ರ ಮುಗಿಲಿನಡಿಯಲ್ಲಿ ಕವಾಯತು ಮಾಡಿಸಲು ಹಿರಿಯ ಇರುವೆಗಳು ತಾಕೀತು ಮಾಡುತ್ತಿರುವಂತೆನಿಸಿತು.

"ನೋಡೋದಕ್ಕೆ ಎಷ್ಟೆಲ್ಲಾ ಇದೆ!" ಎಂಬ ಉದ್ಗಾರ ಹೊರಬರಲು ಯಾವ ಸದ್ದಿನ ಸಹಕಾರವೂ ಬೇಕಾಗಿರಲ್ಲ.  ಇದೇ ಸೃಷ್ಟಿಯಲ್ಲಿ ಎಲ್ಲವೂ ಇವೆ...ನೋಡುವ ಕಣ್ಣಿರಲು...ಬ್ರಹ್ಮಾಂಡವೇ ಒಂದು ಚಿತ್ರಪಟವಾಗುತ್ತದೆ.  ಆದರೆ ಚಿತ್ರಕಾರನೊಬ್ಬನನ್ನು ಬಿಟ್ಟು ಮತ್ತೆಲ್ಲವನ್ನೂ ಇಲ್ಲಿ ಕಾಣಲು ಸಾಧ್ಯ? ಅಥವಾ ಚಿತ್ರಕಾರನೇ ಚಿತ್ರದ ಒಂದು ಅಂಗವಾಗಿಬಿಡುತ್ತಾನೆಯೋ? ಇಲ್ಲಿನ ವಿಸ್ಮಯದ ಲೋಕ ಮೇಲ್ನೋಟಕ್ಕೆ ಸರಳ, ಗೊಂದಲ ರಹಿತವಾಗಿ ಕಂಡುಬಂದರೂ ಒಳಗೊಳಗೆ ಎಂತೆಂಥ ಸತ್ಯಗಳನ್ನು ಬಚ್ಚಿಟ್ಟುಕೊಂಡ ಪ್ರಸಂಗಗಳಿವೆ.  ಚಿಂತೆ-ಚಿಂತನೆಗಳಲ್ಲಿ ತೊಡಗಿಕೊಂಡ ಮನಗಳಿಗೆ ಮೇಲ್ನೋಟಕ್ಕೆ ಬಿಡುಬೀಸಾಗಿ ಎಲ್ಲವೂ ತೆರೆದುಕೊಂಡಂತೆ ಕಂಡರೂ, ಸುತ್ತಲಿನ ಜೀವ-ನಿರ್ಜೀವ ವಸ್ತುಗಳಲ್ಲಿ ವಿಷಯಗಳು ಅಡಗಿಕೊಂಡಿವೆ.  ಅದಕ್ಕಾಗಿಯೇ ಇಂಥವುಗಳನ್ನು "ವಸ್ತು-ವಿಷಯ" ಎನ್ನೋದಿರಬೇಕು!  ವಸ್ತುನಿಷ್ಠತೆ, ವಾಸ್ತವವನ್ನು ಆಧರಿಸಿರುವಂತೆ ಅದೇ ನಿಜ ಹಾಗೂ ಅದೇ ನಿಜವಾದ ನೆರೆಹೊರೆಯಾಗಬಲ್ಲದು.

ಈ ನೆರೆಹೊರೆಯ ಮೋಡಿಯಲ್ಲಿ ಮಿಂದ ಮನಸ್ಸು ಒಂದು ಕ್ಷಣ ಯಾವುದು ನಿಜ, ಯಾವುದು ಅದ್ಭುತ, ಯಾವುದು ಗೋಪ್ಯ, ಯಾವುದು ನಿಗೂಢವಾದದ್ದು ಎನ್ನುವುದನ್ನೆಲ್ಲ ಲೆಕ್ಕ ಹಾಕತೊಡಗಿತು.  ಇವೆಲ್ಲಕ್ಕಿಂತ ಮೇಲಾಗಿ ಇಂಥ ನಿಗೂಢತೆಯನ್ನು ತನ್ನ ಮಡಿಲಿನಲ್ಲಿ ಹುದುಗಿಕೊಂಡು ಅದ್ಯಾವ ಗಣಿತದ ಸಮೀಕರಣಗಳನ್ನು ಹೆಣೆದು ಈ ವ್ಯವಸ್ಥೆಯನ್ನು ಅದ್ಯಾರು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದಾರೋ ಎಂದು ಸೋಜಿಗವಾಯಿತು!

Thursday, April 26, 2018

ಚಿತ್ರಗಳ ನೆನಪು

ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡು ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!

Tuesday, February 09, 2010

ಬೀಳದೇ ಏಳೋದಾದರೂ ಹೇಗೆ?

ಹೀಗೇ ಒಂದು ಛಳಿಗಾಲದ ದಿನ, ಮಧ್ಯಾಹ್ನ ಆಗಿ ಸಂಜೆ ನಾಲ್ಕು ಘಂಟೆ ಹೊತ್ತಿಗೆಲ್ಲಾ ಅದನ್ನು ದಿನ ಎನ್ನಬೇಕೋ, ಕತ್ತಲು ಎನ್ನಬೇಕೋ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದಾದಂತಹ ಮಸುಕು ಮುಸುಕಿದ ಮುಸ್ಸಂಜೆ. ಈಗಲೋ ಆಗಲೋ ಉಸಿರು ಕಳೆದುಕೊಂಡು ಹೋಗೇ ಬಿಟ್ಟ ಎನ್ನುವ ಸೂರ್ಯನನ್ನು ಸಂತೈಸುವ ಹಾಗೆ ಅಲ್ಲಲ್ಲಿ ಬಿದ್ದುಕೊಂಡು ಛಳಿಗೆ ಗಟ್ಟಿಯಾಗಿ ಮುಖ ಸಿಂಡರಿಸಿಕೊಂಡ ಹಿಮದ ತುಕುಡಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಬೆಳಕಿನ ಸೈನಿಕರ ಉತ್ಸಾಹ ಕತ್ತಲಿನ ಶತ್ರುಗಳ ಎದುರು ಸಂಪೂರ್ಣವಾಗಿ ಕಳೆದು ಹೋಗದ ಹಾಗೆ ಕಾಪಾಡಿಕೊಂಡಿದ್ದವು. ಯಾವತ್ತಿನಂತೆ ರಸ್ತೆಗಳು ಊರ್ಧ್ವಮುಖಿಗಳಾಗಿ ತಮ್ಮನ್ನು ತಾವು ಸೇವೆಗೆ ಒಪ್ಪಿಸಿಕೊಂಡಿದ್ದರೂ ಕಪ್ಪಗಿನ ರಸ್ತೆಗಳ ಮೇಲೆ ಬೂದಿ ಬಳಿದುಕೊಂಡ ಹಾಗಿನ ಛಾಯೆ ಯಾಕೋ ಮುಂಬರುವ ಕೆಟ್ಟದ್ದನ್ನು ತಾವು ಬಲ್ಲೆವು ಎಂಬಂತೆ ಅಜ್ಜ-ಮುತ್ತಾತರ ಭಂಗಿಯಲ್ಲಿ ಇದ್ದವು. ನಮ್ಮ ಮನೆಯ ಡ್ರೈವ್‌ ವೇ ತನ್ನ ಮೇಲಿನ ಅರ್ಧ ಇಂಚು ದಪ್ಪಗಿನ ಐಸ್ ಲೇಯರ್‌ನ್ ಅವಶೇಷಗಳಡಿಯಲ್ಲಿ ಸಮಾಧಿಯಾಗಿತ್ತು, ನಮ್ಮ ಮನೆಯ ಮೇಲ್ ಬಾಕ್ಸ್ Mohawk Indian ಹೇರ್ ಸ್ಟೈಲ್ ಮಾಡಿಕೊಂಡು ತನ್ನ ಮೇಲೆ ಒಂದು ರೀತಿಯ ಚೂಪನೆ ಐಸ್ ಪದರವನ್ನು ನಿರ್ಮಿಸಿಕೊಂಡಿತ್ತು, ಅದರ ಬುಡದಲ್ಲಿ ಲಾಲಿ ಪಾಪ್ ನೆಕ್ಕಿ ಬಣ್ಣದ ಜೊಲ್ಲು ಸುರಿಸುವ ಮುಗ್ಧ ಮಗುವಿನಂತೆ ಬಿಸಿಲಿಗೆ ಕರಗಿ ಐಸ್ ನೀರಾಗುತ್ತ ನೀರಾಗುತ್ತ ಹನಿಗಳು ಅಲ್ಲಲ್ಲಿ ಹೆಪ್ಪು ಕಟ್ಟಿಕೊಂಡು ಮೇಲ್ ಬಾಕ್ಸ್ ಸಂರಕ್ಷರ ಹಾಗಿನ ಚೂಪುಗಳನ್ನು ನಿರ್ಮಿಸಿಕೊಂಡಿದ್ದವು.

ಬ್ಲ್ಮೂಮ್‌ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು, ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು. ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ’ಬಿಸಿಲೇ ಇರಲಿ, ಮಳೆಯೇ ಇರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ…’ ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು, ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ. ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು, ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್‌ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು.

ಮನೆಯ ಟ್ರ್ಯಾಷ್ ಕ್ಯಾನುಗಳನ್ನು ಎತ್ತಿಡುತ್ತಾ ನಾನು ’ನಿಧಾನವಾಗಿ ನಡೆಯಬೇಕು, ಬಿದ್ದರೆ ಅಷ್ಟೇ ಗತಿ…’ ಎಂದು ಏನೇನೆಲ್ಲ ಮನಸ್ಸಿನ್ನಲ್ಲಿ ಅಂದುಕೊಂಡರೂ, ಅಂದುಕೊಂಡವುಗಳು ಪ್ರಯೋಜನಕ್ಕೆ ಬಾರವು ಏನಿದ್ದರೂ ಕ್ರಿಯಾಶೀಲತೆ ಮುಖ್ಯ ಎನ್ನುವ ವಿಧಿ ಕಣ್ಣು ತೆಗೆದು ಕಣ್ಣು ಬಿಡುವಷ್ಟರಲ್ಲಿ ನನ್ನ ಕಾಲುಗಳು ತಲೆಗಿಂತ ಮೊದಲು ಹೋಗತೊಡಗಿ ದೊಪ್ಪನೆ ಜಾರಿ ಬಿದ್ದದ್ದಾಯಿತು. ಕೈ ಊರಿ ಎದ್ದು, ಮೈ ಕೈ ಕೊಡವಿಕೊಂಡು ಸುಧಾರಿಸಿಕೊಳ್ಳೂತ್ತಾ ಸದ್ಯ ಯಾವುದೇ ಎಲುಬು ಮುರಿಯಲಿಲ್ಲ ಎಂದು ಸಮಾಧಾನ ಪಡುವಂತಾಯಿತು. ಕತ್ತಲಿನ ದಯೆಗೆ ನಾನು ನೆಲಕ್ಕೆ ಅಪ್ಪಳಿಸಿದ ದೃಷ್ಯ ಜನಜನಿತವಾಗಲಿಲ್ಲ. ನೆಲದಲ್ಲಿನ ಐಸ್ ಪದರ ನಮಗೇನೂ ಆಗಿಲ್ಲ ಎಂದು ಬೀಗಿದಂತೆ ಕಾಣಿಸಿತು. ನಾನು ಚೆಲ್ಲಾ ಪಿಲ್ಲಿಯಾದ ಟ್ರ್ಯಾಷ್ ಕ್ಯಾನ್‌ಗಳನ್ನು ಮತ್ತೆ ಎತ್ತಿಟ್ಟು ಕೆಲಸ ಮುಂದುವರೆಸಿದೆ.

ಈ ಏಳು-ಬೀಳುಗಳು ಸಹಜ, ಆದರೆ ವಯಸ್ಸಾಗುತ್ತಾ ಬಂದ ಹಾಗೆ ಬೀಳುಗಳ ಬಗ್ಗೆ ಗಮನಕೊಡಬೇಕಾಗುತ್ತದೆ, ಎಲ್ಲ ಬೀಳುಗಳೂ ಏಳುಗಳಲ್ಲಿ ಕೊನೆಯಾಗಬೇಕು ಎಂದೇನೂ ಇಲ್ಲ. ಬಹಳ ಸರಳವಾದ ಸಿದ್ಧಾಂತ, ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದು ಸರಿ, ಆದರೆ ಹೆಚ್ಚಿನ ರಿಟರ್ನ್ ಬಯಸಿದಂತೆ ಅಲ್ಲಿ ರಿಸ್ಕ್ ಹೆಚ್ಚಾಗುತ್ತದೆ, ಎಲ್ಲರಿಗೂ ಎಲ್ಲ ರಿಸ್ಕ್ ಟೇಕಿಂಗ್ ಸ್ಟ್ರಾಟೆಜಿ ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸೇಫ್ಟಿ ಫರ್ಸ್ಟ್ ಎಂದುಕೊಂಡು ಯಾವುದು ನಮ್ಮ ಹಿತರಕ್ಷಣೆಯನ್ನು ಮಾಡಬಹುದೋ ಅಂತಹ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಇವೆಲ್ಲ ಗುಡ್ ಎಕನಾಮಿಕ್ಸ್ ಇಂಡಿಕೇಟರುಗಳು, ಹೂಡಿಕೆಯ ಮೂಲಭೂತ ಅಂಶಗಳು – ಇವುಗಳ ಬಗ್ಗೆ ಅದೆಷ್ಟೇ ಪಬ್ಲಿಷ್ ಆಗಿದ್ದರೂ ಸಹ ಬೀಳುವವರು ಮಾತ್ರ ಕಡಿಮೆಯಾಗೋದಿಲ್ಲ. ಅದರಲ್ಲೂ ನನ್ನಂತಹವರು ಎಲ್ಲವನ್ನು ತಮ್ಮಷ್ಟಕ್ಕೇ ತಾವೇ ಅನುಭವಿಸಿ ನೋಡುತ್ತೇವೆ ಎಂದು ಕಂಕಣ ತೊಟ್ಟುಕೊಂಡಿರುವಾಗ…ಯಾವ ಉಪದೇಶ ಎಲ್ಲಿಯ ಲೆಕ್ಕ ಬಿಡಿ. ಬೀಳದೇ ಏಳೋದಾದರೂ ಹೇಗೆ? ಒಮ್ಮೆ ಬಿದ್ದ ಅನುಭವದ ಲೆಕ್ಕಕ್ಕೆ ಮತ್ತೆ-ಮತ್ತೆ ಮೇಲೆ ಹೋಗುವ ರಿಯಾಯತಿ ಸಿಗಬಹುದೇ? ಬಿದ್ದರೆ ಮಾತ್ರ ಏಳಲು ಬಿಡುತ್ತೇನೆ ಎನ್ನುವ ಆಟದ ನಿಯಮಗಳನ್ನು ಯಾರು ಬರೆದವರು? ಅದನ್ನೇಕೆ ನಾವು ಒಪ್ಪಿಕೊಳ್ಳಬೇಕು? ಈ ಒಪ್ಪಿಕೊಳ್ಳದ ನಿಯಮಕ್ಕೆ ಬೀಳುವ-ಏಳುವ ಅನುಪಾತಗಳನ್ನಾದರೂ ಸಮತೂಕ ಮಾಡಬೇಕು ಎನ್ನುವ ಹಂಬಲವೇಕಿಲ್ಲ? ಕೆಟ್ಟ ಮೇಲೆ ಬುದ್ದಿ ಬಂದದ್ದು ಎಲ್ಲಿ ಹೋಯಿತು, ಅದು ಮತ್ತೆ-ಮತ್ತೆ ನಮ್ಮನ್ನು ಬೀಳದಂತೆ ತಡೆಹಿಡಿಯೋದರಲ್ಲಿ ವಿಫಲವಾಗೋದೇಕೆ?

ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ. ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ. ಇವತ್ತಿಲ್ಲದಿದ್ದರೆ ನಾಳೆ, ಇಂದಲ್ಲದಿದ್ದರೆ ಮುಂದೆ ಎನ್ನುವ ಆಶಾವಾದ ತಿಪ್ಪೆ ಸಾರುವ ಸಗಣಿಯಾಗುತ್ತದೆ. ಮುಂದಿನ ಜನ್ಮದಲ್ಲಿ ಮಾಡಿದರೆ ಆಯಿತು ಎನ್ನುವುದು ನನಗದು ಬೇಕೇ ಬೇಕು ಎಂದು ಹಠ ಹಿಡಿದ ಮಗುವಿಗೆ ನಾಳೆ ಕೊಡುತ್ತೇನೆ ಎಂದು ಸಾಂತ್ವನ ಹೇಳುವ ಒಣ ತತ್ವವಾಗುತ್ತದೆ. ಏನೆಲ್ಲವನ್ನು ಮಾಡಬೇಕು ಎನ್ನುವ ಉನ್ಮಾದ ಏನೂ ಮಾಡಿಲ್ಲವಲ್ಲ ಎನ್ನುವ ಉದ್ವೇಗದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹದ ನೀರಿನ ಒಂದು ಭಾಗವಾಗುತ್ತದೆ. ಅವರವರ ತೂಕಕ್ಕೆ ಅವರವರ ಸಾಮರ್ಥ್ಯಕ್ಕೆ ಬೀಳದೇ ಎದ್ದೋ ಅಥವಾ ಎದ್ದು ಬಿದ್ದೋ ನೆಲೆ ನಿಲ್ಲಿಸುವ ಗುರುತ್ವಾಕರ್ಷಣ ಶಕ್ತಿ ಈ ಹೊತ್ತಿನ ತತ್ವದ ಮಹಾ ಲೆವೆಲ್ಲರ್ ಆಗಿಬಿಡುತ್ತದೆ.

Thursday, January 07, 2010

ಲಘುವಾಗೆಲೆ ಅನಿವಾಸಿ ಮನ...

ನವೆಂಬರ್ ೧೩ ರಂದು ಬರೆದ ’ಗೆಲುವಾಗೆಲೆ ಅನಿವಾಸಿ ಮನ...’ಬರಹಕ್ಕೆ ಪೂರಕವಾಗಿ ಈ ಲೇಖನ. ನವೆಂಬರ್ ೧೩ ನಾವು ಭಾರತಕ್ಕೆ ವೆಕೇಷನ್ನ್ ಹೋಗೋದರ ಹಿಂದಿನ ದಿನ, ಹಲವಾರು ಕೆಲಸಗಳ ನಡುವೆಯೂ ನಾನು ಮೂರು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿರೋ ಭಾರತ ಈಗ ಹೇಗಿರಬಹುದು, ಏನೇನೆಲ್ಲ ಬದಲಾವಣೆಗಳಾಗಿರಬಹುದು...ಎಂದು ಯೋಚಿಸಿಕೊಳ್ಳುತ್ತಲೇ ಇಲ್ಲಿ-ಅಲ್ಲಿಯ ತವಕಗಳ ಎರಡು ಚಿತ್ರಗಳನ್ನು ತರಾತುರಿಯಾಗಿ ಕಕ್ಕಿ ಕೊಂಡು ಆ ಲೇಖನವನ್ನು ಬರೆದು ಮುಗಿಸಿದ್ದಾಯಿತು. ಈಗ ಭಾರತದ ವೆಕೇಷನ್ನ್ ಮುಗಿಸಿ ಹಿಂತಿರುಗಿ ಬಂದ ಮೇಲೆ ಹಾಗೂ ಸುಧಾರಿಸಿಕೊಂಡ ಮೇಲೆ ನನ್ನ ಅನುಭವಗಳನ್ನು ಹೊರಹಾಕಿ ಮತ್ತೊಂದು ಲೇಖನವನ್ನು ಬರೆಯಬೇಕು ಎನ್ನುವ ಆಶಯದ ಫಲವೇ ಇದು.

ಈ ಬದುಕು-ಬವಣೆಗಳು ಅದೇನೇ ಕಷ್ಟವನ್ನು ತಂದು ಒಡ್ಡಲಿ, ಜಾಗತೀಕರಣದ ಪರಿಣಾಮಗಳು ಎಷ್ಟು ದೂರ ಬೇಕಾದರೂ ಪಸರಿಸಿಕೊಂಡಿರಲಿ ನಮ್ಮ ಊರು ನಮ್ಮ ದೇಶ ನಮ್ಮ ಮನೆ...ಇವೆಲ್ಲವೂ ಎಂದಿಗೂ ಅಪ್ಯಾಯಮಾನವೇ. ನನ್ನೊಳಗೆ ಹುದುಗಿರುವ ಫಾಸಿಟಿವ್ ಸ್ಪಿರಿಟ್ಸ್ ಈ ವಿಚಾರದಲ್ಲಿ ನೆಗೆಟಿವ್ ಎಂದೂ ಆಗಲು ಸಾಧ್ಯವಿಲ್ಲ!

***

ತೊಂಭತ್ತರ ಮಧ್ಯೆ ಹಾಗೂ ಕೊನೆಯಲ್ಲಿ ಪ್ರಪಂಚವನ್ನು ಅರಸುತ್ತಾ ಬಂದಂತಹ ನನ್ನಂಥ ಟೆಕ್ಕಿಗಳಿಗೆ (ಅಂದಿನ ಕಾಲದ ಹೆಸರು) ನಮ್ಮ ಅಗತ್ಯಗಳು ಬೇರೆಯಾಗಿದ್ದವು. ಜೇಬಿನಲ್ಲಿ ಮೂರು ಸಾವಿರ ಡಾಲರ್ ಇಟ್ಟುಕೊಂಡು ಬಂದು ನೆವರ್ಕ್ ಲಿಬರ್ಟಿ ಏರ್‌ಪೋರ್ಟಿನಲ್ಲಿ ಇಳಿದ ನನ್ನ ಹಾಗಿನವರಿಗೆ ಅವರ ದೃಷ್ಟಿಕೋನ ಬೇರೆಯಾಗಿತ್ತು. Y2K ಮುಗಿದು, ಮತ್ತೊಂದು ದಶಕವೂ ಕಳೆದು ಹೋಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಇಲ್ಲಿನ ಪೈಪೋಟಿಗೆ ಏಗಿ-ಬೇಗಿ ಹಾಗೂ ಇಲ್ಲಿನ ಸಂಪನ್ಮೂಲಗಳನ್ನುಂಡು ನಮ್ಮ ಬೆಳವಣಿಗೆ ಬೇರೆ ರೀತಿಯದ್ದೇ ಆಗಿದೆ. ನನ್ನ ಜೊತೆಯವರು, ವಾರಗೆಯವರು ಇಲ್ಲಿಗೆ ಬಂದು ಈಗಾಗಲೇ ಅಮೇರಿಕನ್ ಸಿಟಿಜನ್ನ್ ಪಟ್ಟಕಟ್ಟಿಕೊಂಡಿರಬಹುದಾದ ಸಮಯದಲ್ಲಿ ಸೇಫ್‌ನಲ್ಲಿರುವ ನನ್ನ ಭಾರತದ ಪಾಸ್‌ಪೋರ್ಟ್ ಯಾವತ್ತೋ ಒಮ್ಮೆ ಭಾರತಕ್ಕೆ ಹೋಗಿ ತಿಣುಕುವ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ ಎಂದೇ ಹೇಳಬೇಕು. ಸೋಜಿಗದ ವಿಷಯವೆಂದರೆ ನಾವು ಬದಲಾದಂತೆ ನಮ್ಮ ಹಳೆಯ ಪಾಸ್‌ಪೋರ್ಟಿನಲ್ಲಿರುವ ಚಿತ್ರವಾಗಲೀ ಮಾಹಿತಿಯಾಗಲೀ ಬದಲಾಗುವುದೇ ಇಲ್ಲ, ಅವು ಯಾವತ್ತಿದ್ದರೂ ’ನಾನೇ’ ಎನ್ನುವ ಚಿರಂತನ ಪ್ರತಿಮೆಯನ್ನು ಎತ್ತಿ ತೋರಿಸುವ ಮಾಧ್ಯಮ.

ಈ ಒಂದು ದಶಕದಲ್ಲಿ ಬೇಕಾದಷ್ಟಾಗಿದೆ: ನಮ್ಮ ಸ್ಪ್ರೆಡ್‌ಶೀಟು, ಗ್ರಾಫು, ನಂಬರುಗಳು ತಮ್ಮನ್ನು ತಾವು ನಮ್ಮ ಎದುರು ತೋರಿಸಿಕೊಂಡು ನಮ್ಮನ್ನು ಲೇವಡಿ ಮಾಡುವ ಪರಿಸ್ಥಿತಿಯೂ ಬಂದು ಹೋಗಿದೆ. ಈ ಒಂದು ದಶಕದಲ್ಲಿ ಮಾರ್ಕೆಟ್ಟಿನ ಮುಖ್ಯ ಮೂರು ಏಳು ಬೀಳುಗಳ ಕೃಪೆಯಿಂದಾಗಿ - ಡಾಟ್ ಕಾಮ್, ರಿಯಲ್ ಎಸ್ಟೇಟ್ ಹಾಗೂ ಕ್ರೆಡಿಟ್ ಕ್ರಂಚ್ - ನಮ್ಮ ದುಡಿಮೆಯ ಫಲ ಸ್ಟ್ರೆಸ್ಸಿಗೆ ಒಳಗಾಗಿದೆ, ನಮ್ಮ ಹೂಡಿಕೆಯ ಹಣ ಇನ್‌ಫ್ಲೇಷನ್ನಿನ ಎದುರು ತಲೆ ತಗ್ಗಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇವೆಲ್ಲದರ ಜೊತೆಗೆ ಸೆಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕತನ ನನ್ನಂಥ ಅನಿವಾಸಿಗಳಿಗೆ ಸಾಕಷ್ಟು ಕಷ್ಟ ಸುಖದ ದರ್ಶನ ಮಾಡಿಸಿದೆ.

’ವಿಜಯ ಕರ್ನಾಟಕ’ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ "Take it easy...ಟೆಕ್ಕಿ" ಲೇಖನಗಳು ನ್ಯೂಕ್ಲಿಯರ್ ಕುಟುಂಬಗಳ ಬವಣೆಯನ್ನು ಒಂದು ಹೆಜ್ಜೆ ಮುಂದುವರೆದು ರಸ್ತೆ ಮೇಲೆ ಬಿಸಾಡಿ ಮಾನ ಕಳೆದಿವೆ, ಆಧುನಿಕ ಕುಟುಂಬಗಳಲ್ಲಿನ ಇರಿಸು-ಮುರಿಸುಗಳು ಮನ-ಮನೆಯನ್ನು ಮುರಿಯುವ ಪ್ರಸಂಗಗಳನ್ನು ಲೇವಡಿ ಮಾಡಿವೆ. ಈ ನ್ಯೂಕ್ಲಿಯರ್ ಕುಟುಂಬಗಳ ಕ್ಲೀಷೆಗಳು ಮೈನ್‌ಸ್ಟ್ರೀಮ್ ಸಮಾಜಕ್ಕೆ ಗೊತ್ತೇ ಆಗದೇ ಒಂದು ದಶಕ ಉರುಳಿ ಹೋಗಿದ್ದು ವಿಪರ್ಯಾಸ. ’ನಮ್ಮ ಮಗ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಾನೆ...’ ಎನ್ನುವುದರ ಹಿಂದೆ ಬಳುವಳಿಯಾಗಿ ಬರುವ ಫಲಾಫಲಗಳನ್ನು ದೂರದ ತಂದೆ-ತಾಯಿಯರು ಯಾಕೆ ಗುರುತಿಸುವುದರಲ್ಲಿ ಸೊರಗಿ ಹೋದರೋ? ನನ್ನ ಹಾಗೆ ಹೆಚ್ಚಿನವರು ಇಲ್ಲಿ ಬಂದೇ ಕುಟುಂಬವನ್ನು ಆರಂಭಿಸಿದ್ದು ನಿಜವಾದರೆ ನಮಗೆಲ್ಲ ಸಹಬಾಳ್ವೆ ಎನ್ನೋದರ ಪರಿಕಲ್ಪನೆಯೇ ಇಲ್ಲ ಎನ್ನಬೇಕು. ನಾವು ಪರಿವಾರದವರೊಟ್ಟಿಗೆ ಮದುವೆ-ಮುಂಜಿಗಳಲ್ಲಿ ಭಾಗವಹಿಸೋದಿಲ್ಲ, ವಾರದ ದಿನಗಳನ್ನು ಒಂದು ರೀತಿ, ವಾರಾಂತ್ಯವನ್ನು ಮತ್ತೊಂದು ರೀತಿಯಲ್ಲಿ ಉರುಳಿಸಿ ವಾರ-ವರ್ಷಗಳನ್ನು ಕಳೆಯುವ ನಮಗೆ ಅವಿಭಾಜ್ಯ ಕುಟುಂಬಗಳ ಕಷ್ಟಗಳು ಹತ್ತಿರ ಸಹ ಸುಳಿಯೋದಿಲ್ಲ. ಸಹೋದರ-ಸಹೋದರಿ, ನಾದಿನಿ, ಮೈದುನ, ಅತ್ತೆ-ಮಾವ, ತಂದೆ-ತಾಯಿ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮಗಳ "interference" ನಮ್ಮ ಕುಟುಂಬಗಳಿಗಿರೋದಿಲ್ಲ. ನಮ್ಮ ಮಕ್ಕಳ ಡೈಪರ್ರ್ ತೆಗೆದು ತೊಳೆಯೋದು, ಅವರ ಯೋಗ-ಕ್ಷೇಮ ನೋಡಿಕೊಳ್ಳೋದು ನಮ್ಮ ದಿನನಿತ್ಯದ ಸಾಧನೆಗಳಲ್ಲೊಂದು. ನಾವು ನಮ್ಮ ಖರ್ಚನ್ನು ಮೀರಿ ಕೂಡಿಸೋ ಹಣ ಕೆಲವರಿಗೆ ಒಂದು ರೀತಿಯಲ್ಲಿ ನಾಯಿ ಮೊಲೆಯ ಹಾಲು - ಅದು ಬಹಳಷ್ಟು ಸಾರಿ ನೆರೆಹೊರೆಯ ಕಷ್ಟಗಳಿಗೆ ಸ್ಪಂದಿಸಿರಲಾರದು, ಹಾಗೆ ಕೂಡಿಟ್ಟ ಹಣ ಭದ್ರತೆಯಿದ್ದರೂ ಅದರ ಜೊತೆ ಅಸಹಾಯಕತೆಯನ್ನೂ ಸೇರಿಸಿಕೊಂಡಿರುತ್ತದೆ. ಹಾಗೆ ಸೇರಿಕೊಂಡ ಡಾಲರ್ ಹಣ ಇಲ್ಲಿಯ ಮಿಡ್ಲ್‌ಕ್ಲಾಸ್ ಮಟ್ಟದ್ದಿದ್ದರೂ ಅದು ಭಾರತದ ರೂಪಾಯಿಗೆ ಬದಲಾದಾಗ ಒಂದು ಹೊಸ ಅರ್ಥ ಪಡೆದುಕೊಳ್ಳುತ್ತದೆಯೇ ಹೊರತು ಕ್ಲಾಸ್ ವಿಚಾರದಲ್ಲಿ ಹೆಚ್ಚು ಬದಲಾವಣೆ ಆಗೋದಿಲ್ಲ.

***

ಯಾಕೆ ಭಾರತಕ್ಕೆ ಹಿಂತಿರುಗಿ ಹೋಗಬೇಕು? ಎನ್ನುವ ಆಲೋಚನೆಗಳು ಒಂದು ದಶಕದ ನಂತರ ಆಗಾಗ್ಗೆ ನಾಯಿಕೊಡೆಗಳಂತೆ ತಲೆ ಎತ್ತುವುದು ಸಾಮಾನ್ಯವಾಗುತ್ತದೆ. ಮೊದಲೆಲ್ಲ ಯಾವತ್ತು ಹೋದೇವೋ ಎನ್ನುವ ಆಲೋಚನೆಯೇ ರೋಮಾಂಚನವನ್ನು ಮೂಡಿಸುವಂತಹ ವಿಚಾರಗಳು ಈಗ ಹತ್ತಿರ ಸುಳಿಯೋದಿಲ್ಲ. ಅದರ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸುವ ಮನಸ್ಸು ಎಲ್ಲರಿಗಿಂತ ಮುಂದಾಗಿ ಭಾವನೆಗಳು ಹಾಗೂ ಸ್ಪಂದನಗಳೆಂಬ ಮೊದಲಾದ ಮನಸ್ಸಿನ ಲಘು ವಿಹಾರಗಳು ಕನಸಿಗೆ ಹತ್ತಿರವಾಗತೊಡಗುತ್ತವೆ. ಮೊದಲು ಎರಡು ಭುಜಗಳ ಜೊತೆಗೆ ಎರಡು ಸೂಟ್‌ಕೇಸ್ ಇಟ್ಟುಕೊಂಡು ಬಂದವರಿಗೆ ಸಂಸಾರದ ಹಲವಾರು ಇತರ ಭುಜಗಳ ಮತ್ತಿನ್ನೊಂದಿಷ್ಟು ಬ್ಯಾಗೇಜುಗಳು ಬೆನ್ನೇರುತ್ತವೆ. ಇಲ್ಲಿ ಇದ್ದೂ ಇಲ್ಲದವರ ಹಾಗೆ ಬದುಕಿ ಸುಸ್ತಾಗಿ ಹೋದ ಪರಿಣಾಮಕ್ಕೆ ನಮ್ಮ ಇಮ್ಮೂವಬೆಲ್ಲ್ ಅಸ್ಸೆಟ್ಟಿನ ಲಿಸ್ಟಿಗೆ ಇಲ್ಲಿಯ "ಮನೆ"ಯೂ ಸೇರಿಕೊಳ್ಳುತ್ತದೆ.

ಯಾಕೆ ಹೋಗಬೇಕು ಅನ್ನೋ ಪ್ರಶ್ನೆಗೆ ಒಂದೇ ಒಂದು ಬ್ರಹ್ಮಾಸ್ತ್ರದಂತಹ ಉತ್ತರವನ್ನು ನೀಡಬಹುದು - ಅದು ನಮ್ಮೂರಿನ ಹವಾಮಾನ. ಅಲ್ಲಿನವರಿಗೆ ಅದರ ಬೆಲೆ ಖಂಡಿತ ಗೊತ್ತಿಲ್ಲ ಬಿಡಿ. ನಾನಂತೂ ಡಿಸೆಂಬರಿನ ಅಲ್ಲಿನ ಛಳಿಗಾಲದ ರಾತ್ರಿ ಹಾಗೂ ಹಗಲು ಯಾವುದೇ ಹೀಟರ್ ಅಥವಾ ಏರ್‌ಕಂಡೀಷನರ್ ಇಲ್ಲದೇ ಕಳೆಯಬಹುದಾದಂಥ ಪರಿಸ್ಥಿತಿ ಯಾವತ್ತಿದ್ದರೂ ಮನಸ್ಸಿಗೆ ಮುದ ನೀಡುವ ಅನುಭವವೇ ಹೌದು. ಹವಾಮಾನದ ಜೊತೆಗೆ ನಮ್ಮವರು, ತಮ್ಮವರು, ನಮ್ಮಂತೇ ಇರುವವರು, ನಮ್ಮ ಜೊತೆ ಒಡನಾಡುವವರು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುವವರು - ಮೊದಲಾಗಿ ಇಡೀ ನಾಡನ್ನೇ ’ಯಾಕೆ ಹಿಂತಿರುಗಿ ಹೋಗಬೇಕು?’ ಎನ್ನುವ ಪ್ರಶ್ನೆಗೆ ಪಣವಾಗಿ ಒಡ್ಡಬಹುದು. ಆದರೆ ’ನಮ್ಮೂರು-ನಮ್ಮ ಜನ’ ಎನ್ನುವುದು ಪ್ಲಸ್ ಪಾಯಿಂಟ್ ಹೇಗೋ ಹಾಗೇ ಮೈನಸ್ಸ್ ಕೂಡ ಆಗಬಹುದು ಎನ್ನುವುದು ವಿಪರ್ಯಾಸವಲ್ಲದೇ ಮತ್ತಿನ್ನೇನು!

ಒಂದು ದಶಕಕ್ಕಿಂತ ಹೆಚ್ಚು ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಬದುಕಿಕೊಂಡಿದ್ದವರಿಗೆ (ಅಥವಾ ಅದನ್ನೇ ಬದುಕು ಎಂದು ನಂಬಿಕೊಂಡಿದ್ದವರಿಗೆ) ಧಿಡೀರನೇ ಮನೆಯ ಬಾಗಿಲನ್ನು ಬಡಿದು ಬರುವ ಅಥವಾ ಹಾಗೇ ಒಳನುಗ್ಗುವ ಬಂಧು-ಬಳಗದವರು ಅನಾಗರಿಕರಂತೆ ಕಂಡು ಬರಬಹುದು. ಅಥವಾ ಮದುವೆ-ಮುಂಜಿಗಳಲ್ಲಿ ನಾವು ಡಾಲರ್ ಮಹಾತ್ಮೆಯನ್ನು ಬಲ್ಲವರಾದರೂ ನಮ್ಮ ಎದುರೇ ಗುಲಗಂಜಿ ಬಂಗಾರಕ್ಕೆ ಕಿತ್ತು ತಿನ್ನುವ ಜಗಳವಾಗಬಹುದು. ’ನಾನು ಸತ್ತರೂ ನಿಮ್ಮ ಮನೆಯಲ್ಲಿ ನೀರು ಕುಡಿಯಲ್ಲ...’ ಎನ್ನುವ ವರಸೆಯೂ; ’ನೀನು ಯಾರ ಮನೆಗೆ ಹೋದ್ರೂ ಅವರ ಮನೆಗೆ ಮಾತ್ರ ಹೋಗಬೇಡ...’ ಎನ್ನುವ ಹಕ್ಕೀಕತ್ತೂ...ಹೀಗೆ ಅನೇಕಾನೇಕ ಅಗೋಚರ ಅವ್ಯಕ್ತ ಹಾಗೂ ಅಮೂರ್ತ ಮಾನವೀಯ ಸಂಬಂಧಗಳ ದರ್ಶನದ ಓವರ್‌ಲೋಡ್ ಆಗಿಬಿಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರ-ಪ್ರೈವಸಿ ಎಂಬುದರ ಬುಡವನ್ನೇ ಅಲುಗಾಡಿಸುವ ಘಟನೆಗಳು ನಡೆಯಬಹುದು. ಅಥವಾ ’ಬೆಂಡೇಕಾಯ್, ಸೋರೇಕಾಯ್...’ ಎಂದು ಬೀದಿಯಲ್ಲಿ ತರಕಾರಿ ಮಾರುವವರ ತಾರಕ ಸ್ವರದಿಂದ ಹಿಡಿದು ವಾಹನಗಳ ಹಾರ್ನ್‌ನಿಂದ ಕಮ್ಮ್ಯೂನಿಕೇಟ್ ಮಾಡುವ ಅಲ್ಲಿನ ವಾತಾವರಣ ಶಬ್ದಮಾಲಿನ್ಯವಾಗಿ ಕಾಡಬಹುದು. ಇವೆಲ್ಲದರ ಜೊತೆಯಲ್ಲಿ ಓವರ್‌ಲೋಡ್ ಆಗಿ ಓಡುವ ವಾಹನಗಳಿಂದ ಹಿಡಿದು ಲಂಗು-ಲಗಾಮಿಲ್ಲದ ಫ್ಯಾಕ್ಟರಿಗಳ ಹೊಗೆ ನಮಗೆ ಉಸಿರುಕಟ್ಟಿಸಬಹುದು. ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಈ ಹೆಚ್ಚಿನ ಜನಸಂಖ್ಯೆ ಯಾವುದೇ ಒಂದು ಸಮಸ್ಯೆಗೂ ಅದರದ್ದೇ ಆದ ಒಂದು ಹೊಸ ಆಯಾಮವನ್ನು ಸೃಷ್ಟಿಸಬಲ್ಲದು. ಹೀಗೇ...ಅನೇಕಾನೇಕ ನೆಗೆಟಿವ್ ಕಾಂಟೆಕ್ಸ್ಟ್‌ಗಳನ್ನು ತೋರಿಸಿದರೂ ಸಹ ’ವೆದರ್’ ಎನ್ನುವ ಒಂದೇ ಒಂದು ರಾಮಬಾಣಕ್ಕೆ ನಮ್ಮ ಊರನ್ನು ಕ್ಷಣಾರ್ಧದಲ್ಲಿ ಎಲ್ಲಕ್ಕಿಂತ ಹತ್ತಿರವಾಗಿಸಬಲ್ಲ ಶಕ್ತಿ ಇರುವುದಂತೂ ನಿಜ.

ಕೇವಲ ಹವಾಮಾನದ ಬಗ್ಗೆ ನ್ಯೂ ಜೆರ್ಸಿಯಲ್ಲಿ ಈ ಕಡುವಿಂಟರಿನ ನಡುವೆ ಬೆಚ್ಚಗೆ ಕುಳಿತು ಬರೆಯೋದು ದೊಡ್ಡ ವಿಷಯವಲ್ಲ. ಜೊತೆಗೆ ನಾರ್ಥ್ ಈಸ್ಟ್ ಬಿಟ್ಟು ಈ ದೇಶದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೋಡಿದರೆ ಅಲ್ಲಿ ಇಷ್ಟು ಕೆಟ್ಟ ಹವಾಮಾನ ಇಲ್ಲ. ವಾರ್ಮರ್ ಕ್ಲೈಮೇಟ್ ಬೇಕು ಎಂದರೆ ಫ್ಲೋರಿಡಾಗೆ ಹೋದರೆ ಆಗದೇ? ಬಹಳ ಸುಲಭವಾದ ಪ್ರಶ್ನೆ ಆದರೆ ಅದಕ್ಕೆ ಉತ್ತರ ಅಷ್ಟೊಂದು ಸುಲಭವಲ್ಲ. ಪ್ರತೀವರ್ಷ ಹರಿಕೇನ್‌ಗಳು ಬಂದರೂ, ಸುಂಟರಗಾಳಿ ಸುಳಿದರೂ, ಏನೇ ಹಾನಿ ಆದರೂ ಎಷ್ಟೋ ಕುಟುಂಬಗಳು ಅದೇ ಪ್ರದೇಶದಲ್ಲಿ ನೆಲೆಸೋದಿಲ್ಲವೇನು? ವೆದರ್ ಒಂದೇ ಕಾರಣವೆಂದರೆ ಇವತ್ತು ವಿಂಡೀಸಿಟಿ ಶಿಕಾಗೋ ಈ ಛಳಿಗಾಲದಲ್ಲಿ ನಿರ್ಜನಪೀಡಿತವಾಗಬೇಕಿತ್ತು. ಪ್ರತೀವರ್ಷ ಆರು ಅಡಿಗಳಷ್ಟು ಸ್ನೋ ಬಂದ ಬಫೆಲೋ ನಗರದಿಂದ ಎಲ್ಲರೂ ಗುಳೇ ಹೊರಡಬೇಕಿತ್ತು...ಹಾಗಾಗೋದಿಲ್ಲ. ಕರ್ಮವನ್ನು ಅರಸಿಬಂದ ನಮಗೆ ಒಂದು ಒಳ್ಳೆಯ ಕೆಲಸ ಬೇಕು, ಅದರ ಜೊತೆಯಲ್ಲಿ ನಮಗೆ ಅನುಕೂಲಕರವಾದ ನೆರೆಹೊರೆ ಇರಬೇಕು, ಇತ್ಯಾದಿ ಇತ್ಯಾದಿ. ಇವೆಲ್ಲವನ್ನೂ ಮೀರಿ ಒಮ್ಮೆ ಯಾರಾದರೂ ಅಮೇರಿಕದ ನೆಲದಲ್ಲಿ ಬೇರು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಮತ್ತೆ ಇನ್ನೇಲ್ಲೋ ನೆಲೆಸುವುದು ಕಷ್ಟದ ಮಾತೆ ಸರಿ.

***

ನಾವು ಕೇವಲ ಕರ್ಮವನ್ನು ಅರಸಿಬಂದವರು, ಅದರ ಜೊತೆಯಲ್ಲಿ ಪ್ರಾಸ್ಪೆರಿಟಿ ಕೂಡ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ನಾವು ರಿಡಿಫೈನ್ ಮಾಡಬೇಕಾದ ಅಗತ್ಯವಿದೆ. ನಿಧಾನವಾಗಿ ಮುವತ್ತರ ಮಡಿಲಿನಿಂದ ಜಾರಿ ನಲವತ್ತರ ಹರೆಯಕ್ಕೆ ನನ್ನಂಥವರು ಬೀಳತೊಡಗುತ್ತೇವೆ. ಒಂದು ಕಾಲದಲ್ಲಿ ’ರಿಟೈರ್‌ಮೆಂಟ್ ಎಂದರೆ ನಮಗಲ್ಲ...’ ಎನ್ನುವ ಆಟಿಟ್ಯೂಡ್ ಇಟ್ಟುಕೊಂಡವರಿಗೆ ಈಗ ಮಾರ್ಕೆಟ್ಟುಗಳ ಏಳುಬೀಳುಗಳಲ್ಲಿ ಬಳಲಿದ ಮೇಲೆ ರಿಟೈರ್‌ಮೆಂಟ್ ಎನ್ನುವುದು ಮರೀಚಿಕೆಯಾಗದಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ. ನಮ್ಮ ಮಕ್ಕಳು ಬೆಳೆದು ದೊಡ್ಡವರಾದಂತೆ ನಮ್ಮ ಮೂಲ ಸಂಸ್ಕಾರ-ಸಂಸ್ಕೃತಿಗಳು ದಿನನಿತ್ಯದ ಅಗತ್ಯಗಳಲ್ಲೊಂದಾಗುತ್ತವೆ. ಹಣವನ್ನು ಕೂಡಿಡುವುದರ ಜೊತೆಗೆ ’ಇನ್ನು ಮುಂದೆ ಹೇಗೋ?’ ಎನ್ನುವ ಹೆದರಿಕೆ ಸೇರಿಕೊಂಡು ಕನ್ಸರ್‌ವೆಟಿವ್ ಮೈಂಡ್ ಜಾಗೃತವಾಗುತ್ತದೆ.

ಇವೆಲ್ಲ ಚಿಂತೆಗಳು ಯಾವತ್ತಿದ್ದರೂ ಇರೋವೆ, ದಿನೇದಿನೇ ಮನದಾಳದಲ್ಲಿ ಖಾಲಿಯಾಗುವ ದೂರದ ಭಾರತದ ನೆನಪು ನಾಸ್ಟಾಲ್ಜಿಯಾ ಆಗಿ ಹೋಗುತ್ತಾ ಸ್ಥಳೀಯ ಅನಿವಾಸಿ ಕರ್ಮಗಳು ಬೆನ್ನಿಗೆ ಅಂಟಿಕೊಂಡು ಹೊರೆ ಯಾವತ್ತಿಗೂ ತೂಕವಾಗೋದು ಇದ್ದೇ ಇದೆ, ಇವೆಲ್ಲದರ ನಡುವೆಯೂ ನಗುವ ಅಗತ್ಯವಿದೆ, ಸಹಜವಾಗಿ ಬದುಕುವ ತುಡಿತವಿದೆ. ಹಗುರವಾಗಬೇಕು, ಲಘುವಾಗಬೇಕು ಎಂದುಕೊಳ್ಳುತ್ತಾ ಅನಿವಾಸಿ ಮನ ಅಲ್ಲಿಯ ಹಳೆಯ ಹಾಗೂ ಇಲ್ಲಿಯ ಹೊಸ ತಲೆಮಾರುಗಳಿಗೆ ಬೆಸೆಯುವ ಕೊಂಡಿಯಾಗುತ್ತದೆ. ತನ್ನೊಳಗಿನ ತುಮುಲ-ತುಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಮುಂದಿನ ಸಂತತಿ ತನ್ನಂತಾಗದು ಎಂದು ಮಮ್ಮಲ ಮರಗುತ್ತದೆ, ಇವೆಲ್ಲದರ ಜೊತೆಯಲ್ಲಿ ಅಲ್ಲಿಯವರಿಗೆ ನಾವು "ಆಗಿ" ಬರಲಿಲ್ಲ ಎನ್ನುವ ಚಿಂತೆ ಕೊರೆಯತೊಡಗುತ್ತದೆ.

Monday, November 02, 2009

ಬಿಸಿನೆಸ್ಸ್ ಮೈಂಡ್

’ವ್ಯವಹಾರ ಅನ್ನೋದು ನಮ್ಮ ರಕ್ತದಲ್ಲೇ ಬಂದಿಲ್ಲಾ ಕಣ್ರಿ!’ ಎಂದು ನನ್ನ ಸಹೋದ್ಯೋಗಿಯೊಬ್ಬರಿಗೆ ಹೇಳಿದ್ದಕ್ಕೆ ಅವರು ದೊಡ್ಡದಾಗಿ ನಕ್ಕು ’ಅದು ರಕ್ತದಲ್ಲಿ ಬರಬೇಕಾದ್ದಿಲ್ಲ, ಮನಸ್ಸಿನಲ್ಲಿದ್ದರಾಯಿತು, ರಿಸ್ಕ್ ತೆಗೆದುಕೊಂಡು ಮುಂದುಬರಬೇಕು ಎನ್ನುವುದು ವಂಶಪಾರಂಪರ್ಯವಾಗಿರಬೇಕು ಎಂದೇನು ಇಲ್ಲವಲ್ಲ’ ಎಂದರು.

ಇತ್ತೀಚೆಗೆ ನನ್ನ ಮತ್ತೊಬ್ಬ ಗುಜರಾತ್ ಮೂಲದ ಸಹೋದ್ಯೋಗಿಯೊಬ್ಬರು once for all, for good ಎಂದು ನಮ್ಮ ಕಂಪನಿಯಿಂದ ರಿಟೈರ್‌ಮೆಂಟ್ ಪ್ಯಾಕೇಜ್ ತೆಗೆದುಕೊಂಡು ತಮ್ಮ ತಂದೆಯ ಬಿಸಿನೆಸ್ಸ್ ನೋಡಿಕೊಳ್ಳುವುದಕ್ಕೋಸ್ಕರ ಭಾರತಕ್ಕೆ ಹೊರಡುವ ಸುದ್ದಿಯ ಹಿನ್ನೆಲೆಯಲ್ಲಿ ನಾವು ಮಾತನಾಡಿಕೊಳ್ಳುತ್ತಿದ್ದೆವು.

ನಾವು ಈ ಕಂಪನಿಯ ನೌಕರರಾಗಿ ಇಲ್ಲಿ ತೊಡಗಿಸುವ ಶ್ರಮವನ್ನೇ ನಮ್ಮ ನಮ್ಮ ಉದ್ಯಮದಲ್ಲಿ ತೊಡಗಿಸಿದ್ದೇ ಆದರೆ ಅದು ಖಂಡಿತವಾಗಿ ಮುಂದೆ ಬರುವುದುರಲ್ಲಿ ಸಂಶಯವಿಲ್ಲ, ಎಲ್ಲರೊಳಗೂ ಒಬ್ಬ ಆಂಟ್ರಪ್ರೀನರ್ (entrepreneur) ಇರುತ್ತಾನೆ, ಆ ಸುಪ್ತಾವಸ್ಥೆಯ ಮನಸ್ಥಿತಿಯನ್ನು ಜಾಗೃತಗೊಳಿಸಬೇಕಷ್ಟೇ ಎನ್ನುವುದು ನನ್ನ ಸಹೋದ್ಯೋಗಿಯ ವಾದ.

ಅದಕ್ಕೆ ಪ್ರತಿಯಾಗಿ, ಬಿಸಿನೆಸ್ಸ್ ಎಂದರೆ ಸುಮ್ಮನೇ ಆಗುತ್ತಾ, ಹತ್ತರಲ್ಲಿ ಒಂಭತ್ತು ಮುಳುಗುವ ಸಾಧ್ಯತೆಯೇ ಹೆಚ್ಚಿರುವಾಗ, ಎಲ್ಲೋ ಒಂದು nitch ಏರಿಯಾ ಹಿಡಿದುಕೊಂಡು ಅದನ್ನೇ ಹಗಲೂ-ರಾತ್ರಿ ಧ್ಯಾನಿಸಿ ಮೇಲೆ ತಂದು ಅದನ್ನು ಬೆಳೆಸುವುದು ಅಂದರೆ ಸುಮ್ಮನೆಯೇ? ಅದಕ್ಕೆ ಈಗ - ಈ ಪರಿಸ್ಥಿತಿ, ಕಾಲ, ಸಂದರ್ಭ - ಇವೆಲ್ಲ ತಕ್ಕುವೇನು? ಎನ್ನುವುದು ನನ್ನ ವಾದ.

ನಾವು ಮೊದಲಿನಿಂದಲೂ ಅಷ್ಟೇ, ದಕ್ಷಿಣ ಭಾರತೀಯರು. ಸರ್ಕಾರಿ ಕೆಲಸ ಸಿಗುವುದು ನಮ್ಮ ಮನೆತನಗಳಲ್ಲಿ ದೊಡ್ಡ ವಿಷಯ, ತಲ-ತಲಾಂತರದಿಂದ ಸರ್ಕಾರದ ಸೇವೆ ದೇವರ ಸೇವೆ ಎಂದು ಬೆಳೆದುಬಂದವರು ನಾವು. ಈ ಬಿಸಿನೆಸ್ಸ್ ಸ್ಯಾವಿ ಮನಸ್ಸು, ಅದರ ಒಳ-ಹೊರಗಿನ ಸೆನ್ಸಿಟಿವಿಟಿಗಳು ನಮಗೆ ತಿಳಿದವೇ? ನಮಗೆ ಒಂದು ಸಹಾಯ ಹಸ್ತವೂ ಇಲ್ಲದಿರುವಾಗ ಯಾವ ಪಾರ್ಟನರುಗಳನ್ನು ನೆಚ್ಚಿಕೊಂಡು ಏನನ್ನು ಸಾಧಿಸೋದು? ಬಿಸಿನೆಸ್ಸು ಎಂದರೆ ಯಾವ ರಂಗವನ್ನು ಆಯ್ದುಕೊಳ್ಳೋದು? ಅದರ ಮಾರ್ಕೆಟ್ ರಿಸರ್ಚ್ ಮಾಡುವವರು ಯಾರು? ಮಾಡುವುದು ಯಾವಾಗ? ಅದಕ್ಕೆ ತಕ್ಕ ಇನ್‌ವೆಸ್ಟ್‌ಮೆಂಟ್ ಎಲ್ಲಿಂದ ತರೋದು? ಕಷ್ಟಮರುಗಳು ಯಾರು? ಕಂಪನಿಯ ಧ್ಯೇಯ-ಧೋರಣೆಗಳೇನು? ಉತ್ಪಾದಿಸುವ ವಸ್ತು ಯಾವುದು? ಕೊಡುವ ಸೇವೆ ಏನು, ಇತ್ಯಾದಿ ಇತ್ಯಾದಿ...ಪುಂಖಾನುಪುಂಕ ಪ್ರಶ್ನೆಗಳು ಶುರುವಷ್ಟೇ ಇದು.

ಇದೇ ದಿನ ಮಧ್ಯಾಹ್ನ ಟೆಕ್ಸಾಸ್‌ ಮೂಲದ ಬಿಸಿನೆಸ್ಸ್ ಅನ್ನು ನಮ್ಮ ಕಂಪನಿಗೆ ಪರಿಚಯಿಸಲು ವಿಸಿಟರ್ರ್ ಒಬ್ಬರು ಬಂದಿದ್ದರು. ಅವರು ಭಾರತೀಯ ಮೂಲದವರು ಎಂದು ತಿಳಿದು ಆಶ್ಚರ್ಯದ ಜೊತೆ ಸಂತೋಷವೂ ಆಯಿತು. ಗಂಡ-ಹೆಂಡತಿ ಇಬ್ಬರು ಸೇರಿ ಅಮೇರಿಕದಲ್ಲಿ ಒಂದು ಕನ್ಸಲ್‌‍ಟಿಂಗ್ ಕಂಪನಿಯನ್ನು ತೆರೆದಿದ್ದಾರೆ, ಅದರ ಮಾರ್ಕೆಟಿಂಗ್‌ನಿಂದ ಹಿಡಿದು ಎಲ್ಲ ವಿಷಯವನ್ನೂ ಗಂಡ-ಹೆಂಡತಿಯೇ ನೋಡಿಕೊಳ್ಳುತ್ತಾರೆ ಎಂದು ತಿಳಿದು ಆಶ್ಚರ್ಯವಾಯಿತು. ೨೦೦೬ ರಲ್ಲಿ ಕೆಲಸ ಕಳೆದುಕೊಂಡ ಅವರು ಒಂದು ಹೊಸ ಕಂಪನಿಯನ್ನು ಹುಟ್ಟುಹಾಕಿ ಒಂದು ಮಟ್ಟಕ್ಕೆ ಬೆಳೆಸಿದ್ದು ಈ ಎಕಾನಮಿಯಲ್ಲಿ ಗಮನಾರ್ಹವೇ.

ಹೀಗೆ ಅಲ್ಲಲ್ಲಿ ಹಲವಾರು ಯಶಸ್ಸಿನ ಹಾಗೂ ಫೇಲಾದ ಉದ್ಯಮಗಳು ಕೇಳಿಬರುವುದು ಸಹಜ, ಆದರೆ ನನ್ನ ಮನಸ್ಸು ಮಾತ್ರ ಪೇ-ಚೆಕ್ ನಿಂದ ಪೇ-ಚೆಕ್‌ಗೆ ಅಂಟಿಕೊಂಡು ಬಿಟ್ಟಿದೆ. ರಿಸ್ಕ್ ತೆಗೆದುಕೊಳ್ಳುವುದಿರಲಿ, ಅದರ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತು ಇಲ್ಲ ಎನ್ನುವಂತಾಗಿದೆ.

ನಿಮ್ಮ ನಿಮ್ಮ ಪರಿಸ್ಥಿತಿ ಏನು? ನೀವು ನಿಮ್ಮದೇ ಬಿಸಿನೆಸ್ಸ್ ಆರಂಭಿಸಿದ್ದೀರೋ ಅಥವಾ ಬೇರೆಯವರ ಬಿಸಿನೆಸ್ಸಿನಲ್ಲಿ ಒಂದಾಗಿ ಹೋಗಿದ್ದೀರೋ?

Sunday, August 16, 2009

ಕೇವಲ 62 ವರ್ಷದ ಸ್ವಾತ್ಯಂತ್ರ್ಯ

ನಿನ್ನೆ ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿ‌ವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.

ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.

ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?

ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.

ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.

ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.

ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.

ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್‌ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?

Sunday, July 19, 2009

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ’ಅಂತರಂಗ’ದಲ್ಲಿ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:
೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?
೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?
೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?


ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಕ್ಕೆ ಬರೋಣ, ಏನು ಇಲಿ ಪಾಷಾಣ ಇದು ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:
I: investment risk
L: longevity risk
I: inflation risk


ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಡಾಲರ್ ಗಿಂತಲೂ ದುಬಾರಿಯಾಗುವುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ, ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ ILI ಪಾಷಾಣದ ಬಗ್ಗೆ ಕೊರಗಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅವಸ್ಥೆಯಲ್ಲಿ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗೋದು ಇನ್ನೂ ದೊಡ್ಡದು.

Sunday, March 08, 2009

ಹೊಸವರ್ಷ ಹೊಸತನ್ನು ತರಲಿ!

ಎಲ್ಲಾ ಇಂಡೆಕ್ಸುಗಳೂ ಮಾರ್ಕೆಟ್ ಇಂಡಿಕೇಟರುಗಳು ಇಳಿಮುಖ ಹಿಡಿಯುತ್ತಿದ್ದಂತೆ ದಿನಕ್ಕೊಮ್ಮೆ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ನಮ್ಮ ನಮ್ಮ ಪೊಸಿಷನ್ನುಗಳನ್ನು ಪ್ರಶ್ನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯವಾಗಲಾರದು. ಸೆಕ್ಯುರಿಟೀಸ್‌ಗಳ ಮೇಜರ್ ಇಂಡಿಕೇಟರುಗಳು ಅಮೇರಿಕದಲ್ಲಿ ಹನ್ನೆರಡು ಹದಿಮೂರು ವರ್ಷದ ಕೆಳಗಿನ ಮಟ್ಟಕ್ಕೆ ಕುಸಿದಿರುವಾಗ ಈ ಹನ್ನೆರಡು ವರ್ಷಗಳಿಂದ ನಾವಿಲ್ಲಿ ದುಡಿದು ಉಳಿಸಿ ಬೆಳೆಸಿದ್ದು ಎಲ್ಲವೂ ಮರೀಚಿಕೆಯಂತಾಗಿ ಹೋಗಿದೆ ಅನ್ನೋದು ನನ್ನ ತಲೆಮಾರಿನವರ ತಳಮಳ. ಹೆಚ್ಚಿನ ಎಕ್ಸ್‌ಪರ್ಟ್‌ಗಳು ಹೇಳೋ ಹಾಗೆ ನಿಮ್ಮ ಎಮರ್ಜನ್ಸಿ ಫಂಡ್ ಅನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಪೊಸಿಷನ್ ಹೀಗೇ ಇರಲಿ, ಇವತ್ತಲ್ಲ ಮುಂದೆ ಮಾರ್ಕೆಟ್ ಮೇಲೆ ಬಂದೇ ಬರುತ್ತದೆ ಎನ್ನುವುದೆಲ್ಲ ಸುಳ್ಳಿನ ಪ್ರಣಾಳಿಕೆಗಳಾಗಿ ಕಂಡುಬರುತ್ತಿವೆ.

ಇಲ್ಲಿ ನಮಗೆ ನಾವೇ ದಿಕ್ಕು ದೆಸೆಗಳಾಗಿ ಬದುಕುತ್ತಿರುವ ಅನಿವಾಸಿಗಳಿಗೆ ಈ ಏರಿಳಿತದಿಂದ ದೊಡ್ಡ ಹೊಡೆತ ಬಿದ್ದೇ ಬೀಳುತ್ತದೆ. ನಾವು ಇರುವ ರೆಸಿಡೆನ್ಸ್ ಅನ್ನು ಹೊರತುಪಡಿಸಿ ಇರುವುದೆಲ್ಲವೂ ನಮ್ಮ ನೆಟ್‌ವರ್ತ್‌ನಲ್ಲಿ ಸೇರಿಕೊಳ್ಳುವ ಅಸ್ಸೆಟ್ ಎಂದು ಪರಿಗಣಿಸಿಕೊಂಡರೆ ಎಲ್ಲ ಕಡೆಯೂ ಹೊಡೆತವೆ. ರಿಟೈರ್‌ಮೆಂಟ್ ಉಳಿತಾಯದಿಂದ ಹಿಡಿದು ಇನ್ವೆಸ್ಟ್‌ಮೆಂಟಿನವರೆಗೆ ನಮ್ಮದು ಎನ್ನುವ ಎಲ್ಲವೂ ಕುಸಿದು ಹೋದ ಹಾಗಿನ ಅನುಭವ ಒಂದು ರೀತಿ ಸಮುದ್ರದ ತೆರೆಗಳು ನಮ್ಮ ಕಾಲಿನ ಕೆಳಗಿನ ಮರಳನ್ನು ಸಡಿಲಗೊಳಿಸುತ್ತಾ ಕ್ರಮೇಣ ನೀರಿನಲ್ಲಿ ಹೂತುಹೋಗುವ ಹಾಗೆ.

***

ಈ ಇಳಿತ ಎಲ್ಲರಿಗೂ ಆಗುತ್ತಿರುವುದೇ ಆದ್ದರಿಂದ ಅದರ ಬಗ್ಗೆ ಹಾಡಿದ್ದೇ ಹಾಡಿದಲ್ಲಿ ಏನೂ ಪ್ರಯೋಜನವಂತೂ ಇಲ್ಲ. ಇನ್ನು ಮುಂದೆ ಹೇಗೆ ಎಂದು ಏನಾದರೂ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟರೂ ಅವುಗಳು ಹೆದರಿಸುವುದು ಸಾಮಾನ್ಯ. ಇನ್ನು ಈ ಮಾರ್ಚ್ ತಿಂಗಳು ಕಳೆಯುತ್ತಿದ್ದ ಹಾಗೆ ಏಪ್ರಿಲ್ ಮೊದಲ ದಿನಗಳಲ್ಲಿ ಪ್ರಥಮ ಕ್ವಾರ್ಟರ್ ನಂಬರುಗಳು ಎಲ್ಲ ಕಡೆಯಿಂದ ಬರತೊಡಗಿ ಮತ್ತೆ ಮಾರುಕಟ್ಟೆ ಕುಸಿಯುವಂತೆ ಆದರೂ ಆಗಬಹುದು, ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಕ್ವಾರ್ಟರ್ ನಂತರ ಕಂಪನಿಗಳು ಕಡಿಮೆ ಮಾಡುವ ಎಕ್ಸ್‌ಪೆನ್ಸ್ ನಿಂದಾಗಿ ಜನರ ಕೆಲಸ ಹೋಗುವ ಸಾಧ್ಯತೆಯೂ ಹೆಚ್ಚು. ನಮ್ಮ ಟೀಮುಗಳಲ್ಲಂತೂ ವರ್ಷದೆಲ್ಲದ ಲೆಕ್ಕವನ್ನು ಇನ್ನೊಂದೆರಡು ವಾರಗಳಲ್ಲಿ ಮುಗಿಸಿ ಕೊನೆಗೆ ಅದರಲ್ಲಿ ಮೇಲಿನವರ ಆದೇಶದಂತೆ ಕಡಿತಗೊಳಿಸುತ್ತಾ ಬರುವುದು ಪದ್ಧತಿ, ಅದಕ್ಕೆ ಈ ವರ್ಷ ಭಿನ್ನವೇನೂ ಆಗೋದಿಲ್ಲ.

ಈ ಕೆಟ್ಟ ನ್ಯೂಸ್/ವಿಚಾರಗಳ ಸಂಘವೇ ಬೇಡ ಎಂದು ರೆಡಿಯೋ/ಇಂಟರ್ನೆಟ್ ಮೊದಲಾದವನ್ನು ಮುಚ್ಚಿ ಇಟ್ಟರೂ ಒಂದಲ್ಲ ಒಂದು ರೀತಿಯಿಂದ ಕೆಟ್ಟ ವಿಚಾರಗಳು ಮಿದುಳನ್ನು ಹೊಕ್ಕೇ ತೀರುತ್ತವೆ ಎಂದು ಪ್ರತಿಜ್ಞೆ ಮಾಡಿದವರ ಹಾಗೆ ಮುತ್ತಿಕೊಳ್ಳುತ್ತವೆ. ಈಗಾಗಲೇ ಇರುವ ಸ್ಟ್ರೆಸ್ ಕಡಿಮೆ ಎನ್ನುವ ಹಾಗೆ ಇನ್ನೂ ಏನೇನೋ ಕೆಟ್ಟ ಆಲೋಚನೆಗಳನ್ನು ವಿಜೃಂಬಿಸಿ ಬರೆಯುವವರ ವರದಿಗಳೂ ಸಿಗತೊಡಗುತ್ತವೆ. ಹೇಗಾದರೂ ಮಾಡಿ ಕೆಟ್ಟ ವಿಚಾರಗಳು ಯಾವುವೂ ನಮ್ಮನ್ನು ಹಿಂಸಿಸದಿರುವಂತೆ ಮಾಡುವುದು ಅಸಾಧ್ಯವೆನಿಸತೊಡಗುತ್ತದೆ. ಅವೇ ಹಳಸಲು ಅಂಕಿ-ಅಂಶಗಳು, ಅವೇ ವಿಚಾರಗಳು, ಎಲ್ಲ ಕಡೆ ಕೋಲಾಹಲ -- ಇಷ್ಟೇ.

ಕೊರೆಯುವ ಕೆಟ್ಟ ಛಳಿಯ ಮಾರನೇ ದಿನ ಬೆಚ್ಚಗಿನ ಬಿಸಿಲಿನ ಹಾಗೆ ಹೊಸ ವರ್ಷದ ದಿನಗಳಾದರೂ ಶುಭವನ್ನು ತರಲಿ, ಮುಂದಿನ ಯುಗಾದಿ ಹೊಸ ಸಂವತ್ಸರಗಳು ಹೊಸತನ್ನು ಹಾರೈಸಲಿ!

Friday, December 26, 2008

ಗಿರಕಿ ಹೊಡೆಯೋ ಲೇಖನಗಳು...

ಯಾಕೋ ಈ ವರ್ಷ ಆಲೋಚನೆಗಳ ಒರತೆಯಲ್ಲಿ ಬರೆಯುವಂತಹ ವಿಚಾರಗಳ ಸೆಲೆ ಉಕ್ಕಿ ಬಂದಿದ್ದೇ ಕಡಿಮೆ ಎನ್ನಬಹುದು, ಕಳೆದ ಒಂದೆರಡು ವರ್ಷಗಳಿಗೆ ಹೋಲಿಸಿದರೆ ೨೦೦೮ ರಲ್ಲಿ ಬರೆದ ಬರಹಗಳ ಪಟ್ಟಿ ಅವುಗಳ ಅರ್ಧದಷ್ಟೂ ಇಲ್ಲ ಎಂದು ಗೊತ್ತಾದ ಮೇಲಂತೂ ಏಕೆ ಹೀಗೆ ಎನ್ನುವ ಆಲೋಚನೆಗಳು ಹುಟ್ಟತೊಡಗಿದವು.

ಈ ವರ್ಷ ಜನವರಿ ೨೦ ರಂದು "ಅಂತರಂಗ-೩೦೦" ರ ಲೇಖನದಲ್ಲಿ ಬರೆದ ಮುಂದಿನ ಗುರಿ/ಒತ್ತಾಸೆಗಳೆಲ್ಲ ಇನ್ನೂ ಹಾಗೇ ಇವೆ. ಬರಹಗಳ ಸಂಖ್ಯೆ ಇಳಿಮುಖವಾದರೂ ಅವುಗಳ ಗುಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದೆಲ್ಲ ಅಂದುಕೊಂಡಿದ್ದಷ್ಟೇ ಬಂತು, ’ಅಂತರಂಗ’ದಲ್ಲಿ ಯಾವತ್ತಿದ್ದರೂ ಒಂದೇ ರೀತಿ ಬರಹಗಳು ಎಂದು ಕೆಲವು ಪ್ರಯೋಗಗಳನ್ನು ಮಾಡಿದ್ದು ಆಯ್ತು. ಇನ್ನು ಈ ಬ್ಲಾಗಿಗೆ ಪ್ರತ್ಯೇಕ ವೆಬ್‌ಸೈಟ್ ಬೇರೆ (ಕೇಡಿಗೆ); ಈ ಪುಕ್ಕಟೆ ಬ್ಲಾಗನ್ನು ಅಪ್‌ಡೇಟ್ ಮಾಡಿಕೊಂಡಿದ್ದರೆ ಸಾಲದೂ ಅಂತ ಸ್ವತಂತ್ರ ವೆಬ್‍ಸೈಟ್ ಅನ್ನು ಮ್ಯಾನೇಜ್ ಮಾಡೋ ಕಷ್ಟ ಬೇರೆ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು


’ಅಂತರಂಗ’ದಲ್ಲಿ ನೀವು ಪ್ರಕಟಿಸೋ ಬರಹದಂತಿರುವವುಗಳನ್ನು ನಾವು ನಮ್ಮ ಸೈಟ್‌ನಲ್ಲಿ ಪ್ರಕಟಿಸೋದಿಲ್ಲ ಅಂತ ಬೇರೆ ಹೇಳಿಸಿಕೊಳ್ಳಬೇಕಾಗಿ ಬಂತು - ಅದೂ ನನಗೆ ದಶಕಗಳಿಂದ ಪರಿಚಯವಿರುವ ಸಂಪಾದಕರೊಬ್ಬರಿಂದ - ಅದೂ ಈ ಲೇಖನಗಳು ಉದ್ದವಾದುವು ಈಗಿನ ಚೀಪ್ ಸ್ಟೋರೇಜ್ ಯುಗದಲ್ಲೂ ನಮ್ಮಲ್ಲಿ ನಿಮ್ಮ ಲೇಖನಗಳಿಗೆ ಸ್ಥಳಾವಕಾಶವಿಲ್ಲ ಎಂಬುದಾಗಿ - I think he was just being decent, in saying so.

***

- ಯಾಕೆ ನಮ್ಮ ಲೇಖನಗಳು ನಮ್ಮ ಮಕ್ಕಳ ಹಾಗೆ ಯಾವಾಗಲೂ ನಮ್ಮ ಸುತ್ತಲೇ ಗಿರಕಿ ಹೊಡಿತಾ ಇರ್ತವೆ?
- ಯಾಕೆ ನಮ್ಮ ಲೇಖನಗಳಲ್ಲಿ ಇನ್ನೊಬ್ಬರ ಹೃದಯಸ್ಪರ್ಶಿ ಅಂಶಗಳು ಕಡಿಮೆಯಾಗಿ ಹೋಗಿವೆ?
- ಯಾಕೆ ನಮ್ಮ ಸೃಜನಶೀಲತೆ ಅನ್ನೋದು ಮಳೆಗಾಲದಲ್ಲಿ ಮಂಡಕ್ಕಿ ಮಾರೋ ಸಾಬಿಯ ಪ್ಯಾಂಟಿನ ಹಾಗೆ ಮಂಡಿಗಿಂತ ಮೇಲೆ ಮಡಿಚಿಕೊಂಡಿದೆ?
- ನಮ್ಮ ಲೇಖನಗಳಲ್ಲಿ ಬಡತನ, ನೋವು, ಬದಲಾವಣೆಗಳಿಗೆ ಸ್ಪಂದನವೇ ಸಿಗೋದಿಲ್ಲವೆ?
- ಈ ಆನ್‌ಲೈನ್ ಮಾಧ್ಯಮಗಳ ಓದುಗರಿಗೆ ಏನು ಬೇಕೋ ಅದನ್ನು ಕೊಡೋದಕ್ಕೆ ನಮ್ಮ ಕೈಯಲ್ಲಾಗೋದಿಲ್ಲವೇನು?
- ನಮ್ಮ ವರದಿಗಳಾಗಲೀ, ನಮ್ಮ ಭಾಷಣಗಳಾಗಲೀ ಮೊನಟನಸ್ ಆಗಿ ಹೋಗೋದೇಕೆ?

****

ಆಫೀಸಿನಲ್ಲಿ ವಿಪರೀತ ಕೆಲಸ ಸಾರ್, ಜೊತೆಗೆ ಅನಿವಾಸಿತನ ಬೇರೆ. ಈ ವರ್ಷವನ್ನೇ ತೊಗೊಳ್ಳಿ, ಪ್ರತೀವಾರ ಐವತ್ತೈದು ಅರವತ್ತು ಘಂಟೆಗಳ ಕೆಲಸ ಮಾಡೋದು ನಮ್ಮ ಕರ್ಮ ಜೀವ(ನ); ಯಾವ ಪುಸ್ತಕವನ್ನೂ ಓದಿಲ್ಲ, ಯಾರೊಬ್ಬ ಸ್ನೇಹಿತರ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡಿದ ನೆನಪಿಲ್ಲ. ಹೀಗೇ ಆಗ್ತಾ ಹೋದ್ರೆ ನಮ್ಮ ಪ್ರೇರಣೆಗಳು, ಸೃಜನಶೀಲತೆ ಬದುಕಿದ ಹಾಗೇ. ಆನ್‌ಲೈನ್ ಮಾಧ್ಯಮದಲ್ಲಿ ಬೇಕಾದಷ್ಟು ಓದೋ ಹಾಗಿದ್ದರೂ ಓದೋಕೆ ಸಮಯವಿಲ್ಲವೋ ಅಥವಾ ಓದೋಕೆ ಸಾಧ್ಯವೇ ಇಲ್ಲವೋ ಅನ್ನೋ ಹಾಗೆ ಆಗಿದೆ.

ಇದಕ್ಕೆಲ್ಲ ನಮ್ಮ ಬೆಳವಣಿಗೆಯೂ ಕಾರಣ ಅನ್ನಬೇಕು. ಈ ಹಾಳಾದ ಇ-ಮೇಲ್‌ ಗಳನ್ನು ಓದೀ-ಓದಿ ಉದ್ದವಾದದ್ದನ್ನು ಬೇರೆ ಏನೂ ಓದೋಕ್ಕೇ ಸಾಧ್ಯವಿಲ್ಲವೆನ್ನುವ ಹಾಗೆ ಆಗಿದೆ. ಆಫೀಸಿನಲ್ಲಿ ಯಾರಾದರೂ ಬರೆದ ಉದ್ದವಾದ ಇ-ಮೇಲ್ ಅನ್ನೋ ಅಥವಾ ಡಾಕ್ಯುಮೆಂಟ್ ಅನ್ನೋ ಓದಿ ಅರ್ಥ ಮಾಡಿಕೊಂಡು ಉತ್ತರ ಕೊಡೋದಾಗಲೀ ಅಥವಾ ತಿದ್ದೋದಾಗಲೀ ಪೀಕ್ ಅವರ್ ನಲ್ಲಿ ಸಾಧ್ಯವೇ ಇಲ್ಲದ ಚಟುವಟಿಕೆಯಾಗಿ ಹೋಗಿದೆ. ನಾವೆಲ್ಲ (ಅಥವಾ ನಾನು) ಅಲ್ಪತೃಪ್ತರಾಗಿ ಹೋಗಿದ್ದೇವೆ, ಏನಾದರೊಂದನ್ನು ಹಿಡಿದುಕೊಂಡು ಹಠ ಸಾಧಿಸುವುದಿರಲಿ ಒಂದು ಪುಸ್ತಕಕ್ಕೆ ಅರ್ಧ ಘಂಟೆ ಮನಸ್ಸು ಕೊಡದವರಾಗಿ ಹೋಗಿದ್ದೇವೆ. ಒಂದು ಒಳ್ಳೆಯ ಪದ್ಯವನ್ನು ಓದಿ, ಒಂದು ಉತ್ತಮವಾದ ಕಾದಂಬರಿಯನ್ನು ಮೆಲುಕು ಹಾಕಿ ಜಮಾನವಾಗಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ನನ್ನ ತಿಳುವಳಿಕೆ ಸೀಮಿತವಾಗಿದೆ.

ಮೊದಲೆಲ್ಲ ಒಂದಿಷ್ಟು ಟೆಕ್ನಿಕಲ್ ಸ್ಕಿಲ್ಸ್ ಆದರೂ ಇತ್ತು - ಜಾವಾದಲ್ಲಿ ಬರೆದು ಡಿಬಿ೨ (DB2) ಡೇಟಾ ತೆಗೆದು ಅನಲೈಸ್ ಮಾಡುವುದಾಗಲೀ, ಸಿಐಸಿಎಸ್ (CICS) ನಲ್ಲಿ ಮಲ್ಟಿ ಯೂಸರ್ ಸೆಷನ್ನುಗಳನ್ನು ಕ್ರಿಯೇಟ್ ಮಾಡಿ ಅದನ್ನು ಈ ದೇಶದ ನಾನಾ ಭಾಗಗಳಿಂದ ಯೂಸರ್‌ಗಳು ಟೆಸ್ಟ್ ಮಾಡಿ ಸಾಧಿಸಿಕೊಂಡಿದ್ದಾಗಲೀ ಇವತ್ತು ಇತಿಹಾಸವಾಗಿ ಹೋಗಿದೆ. ಒಂದು ಸಣ್ಣ HTML ಟ್ಯಾಗ್‌ಗೆ ಕೂಡಾ ರೆಫೆರೆನ್ಸ್ ಬೇಕಾಗಿದೆ. ನನ್ನ ಇಂಡಷ್ಟ್ರಿ ಸ್ಕಿಲ್ಸ್ ಅನ್ನುವುದು ಏನೇ ಇದ್ದರೂ ಕರಿಮಣಿ ಸರದ ನಡುವೆ ಇರುವ ತಾಳಿಯ ಹಾಗೆ, ಈ ಕಂಪನಿಯಿಂದ ಹೊರಗೆ ಬಂದು ಮತ್ತೊಂದು ಕಂಪನಿಯ ಹಿತಾಸಕ್ತಿಯಿಂದ ನೋಡಿದರೆ ಅದಕ್ಕಷ್ಟು ಮೌಲ್ಯವಿಲ್ಲ. ಈ ಹದಿಮೂರು ವರ್ಷಗಳ ಎಕ್ಸ್‌ಪೀರಿಯನ್ಸ್ ಅನ್ನುವುದು ಎರಡೂ ಕಡೆ ಹರಿತವಾದ ಕತ್ತಿಯ ಹಾಗೆ, ಅದರ ಬಳಕೆಯ ಬಗ್ಗೆ ಹುಷಾರಾಗಿರುವುದೇ ಒಳ್ಳೆಯದು. ಮೊದಲೆಲ್ಲ ಕನ್ಸಲ್‌ಟೆಂಟ್ ಆಗಿದ್ದಾಗ ಒಂದು ಕಂಪನಿಯಿಂದ ಮತ್ತೊಂದಕ್ಕೆ ಹಾರಲು ಅನುಕೂಲವಾದ ಸ್ಕಿಲ್‌ಗಳೆಲ್ಲ ಇಂದು ಒಂದೇ ಕಂಪನಿಯಲ್ಲಿ ಇದ್ದ ಪ್ರಯುಕ್ತ ಸಾಣೆ ಹಿಡಿಯದ ಕತ್ತಿಯಾಗಿ ಹೋಗಿದೆ. ಆಫೀಸಿನಲ್ಲಿ ನಾನು ಮಾಡುವ ತಪ್ಪುಗಳು ಅವು ಹುಟ್ಟಿದ ಹಾಗೇ ಮುಚ್ಚಿಯೂ ಹೋಗುತ್ತವೆ.

***
You have to get your ass kicked once in a while... ಅಂತಾರಲ್ಲ ಹಾಗೆ. ಏನಾದರೊಂದು ಛಾಲೆಂಜ್ ಇರಬೇಕು ಬದುಕಿನಲ್ಲಿ. ಯಾವುದೋ ಕಷ್ಟಕರವಾದ ಕಾದಂಬರಿಯನ್ನು ಹತ್ತು ಸಾರಿ ಓದಿ ಆಯಾ ಪಾತ್ರಗಳ ಹಿಂದಿನ ಸಂವೇದನೆಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನವಾಗಲೀ; ಇಂದಿನ ಕಷ್ಟಕರವಾದ ಎಕಾನಮಿಯಲ್ಲಿ ಎಲ್ಲೂ ಇದ್ದು ಬದುಕಬಲ್ಲೆ ಎನ್ನುವ ಛಲಕ್ಕೆ ಬೇಕಾದ ಸ್ಕಿಲ್ಲುಗಳನ್ನು ಬೆಳೆಸಿಕೊಳ್ಳುವುದಾಗಲೀ; ನಿರಂತರವಾಗಿ ಒಂದಿಷ್ಟು ಪುಸ್ತಕಗಳನ್ನು ಅಭ್ಯಸಿಸುವ ರೂಢಿಯಾಗಲೀ ಅಥವಾ ಸ್ನೇಹಿತರ-ಸಂಬಂಧಿಕರ-ಒಡನಾಡಿಗಳಿಗೆ ಸ್ಪಂದಿಸುವ ಮನಸ್ಥಿತಿಯಾಗಲೀ...ಹೀಗೆ ಒಂದಿಷ್ಟು ತೊಡಗಿಕೊಳ್ಳುವುದು ಯೋಗ್ಯ ಅನ್ನಿಸೋದು ಈ ಹೊತ್ತಿನ ತತ್ವ. ಅಂತೆಯೇ ಈ ಮುಂದಿನ ವರ್ಷಕ್ಕೆ ಯಾವುದೇ ಗುರಿ/ಒತ್ತಾಸೆಗಳು ಇಲ್ಲದಿರುವುದೇ ಇಂದಿನ ವಿಶೇಷ!

Monday, March 24, 2008

ಮೀನಿನ ತೊಟ್ಟಿ...

ಮೀನಿನ ತೊಟ್ಟಿಯ ಚಿತ್ರ ಒಂದು ವಾರದ ಹಿಂದೆ ನನ್ನ ಆಫೀಸಿನ ಹತ್ತಿರವೇ ಕುಳಿತುಕೊಳ್ಳೋ ಆಡಮ್ ಆಫೀಸಿನ ಗಾಜಿನ ಗೋಡೆಯ ಮೇಲೆ ಹುಟ್ಟಿಕೊಂಡಿದ್ದು ನಮಗೆಲ್ಲರಿಗೂ ಆಶ್ಚರ್ಯ ತರಿಸಿತ್ತು. ಆಡಮ್ ತನ್ನ ಆಫೀಸಿನ ಒಳಗಡೆಯಿಂದ ಗಾಜಿನ ಮೇಲೆ ಚಿತ್ರ ಬರೆದಿದ್ದ, ಉಳಿದವರಿಗೆ ಹೊರಗಡೆಯಿಂದ ತಮಗೆ ಬೇಕಾದ ಅವತರಣಿಕೆಗಳನ್ನು ಸೇರಿಸುವ ಮುಕ್ತ ಅವಕಾಶ ಇತ್ತು. ಗಾಜಿನ ಗೋಡೆಯ ಮೇಲೆ ಎರಡೂ ಕಡೆಯಿಂದಲೂ ಚಿತ್ರಗಳನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೆ.

ಎರಡು ಮಕ್ಕಳಿರೋ ಆಡಮ್ ತನ್ನ ಚಿತ್ರದಲ್ಲಿ ನಾಲ್ಕು ಗೋಲ್ಡ್ ಫಿಶ್‌ಗಳು, ಅವುಗಳು ಉಸಿರಾಡೋದಕ್ಕೆ ಅನುಕೂಲವಾಗುವ ಹಾಗೆ ಏರ್ ಬಬಲ್ ಬರುವಂತೆ ಜೊತೆಗೆ ಒಂದು ಗಿಡವನ್ನೂ ಅದರ ಪಕ್ಕದಲ್ಲಿ ಬರೆದಿದ್ದ. ನೀರಿನ ಮಟ್ಟವನ್ನು ಸಾಕಷ್ಟು ಎತ್ತರಕ್ಕೆ ಏರಿಸಿ ’ಸ್ವಲ್ಪ ದಿನಗಳಲ್ಲಿ ನೀರು ಬತ್ತಿ ಹೋದರೂ ಅಡ್ಡಿ ಇಲ್ಲ’ ಎಂದಿದ್ದ. ನಾನು ಕೇಳಿದೆ, ’ನಮ್ಮ ಮನೆಯಲ್ಲಂತೂ ಮೇಂಟೆನೆನ್ಸ್‌ಗೆ ಸುಲಭವೆಂದು ಗೋಲ್ಡ್ ಫಿಶ್‌ ಇಟ್ಟಿದ್ದೇವೆ, ಚಿತ್ರದಲ್ಲಾದರೂ ಬೇರೆ ಮೀನುಗಳನ್ನು ಬರೆಯಬಹುದಿತ್ತಲ್ಲ?’ ಎಂದು. ಆಡಮ್ ’That's a good observation...' ಎಂದು ಚಿಕ್ಕದಾಗಿ ಹೇಳಿ ನಕ್ಕು ಬಿಟ್ಟಿದ್ದ. ಆತ ಬರೆದ ಚಿತ್ರ ಕೇವಲ ಒಂದೇ ಒಂದು ಅದರ ಮೂಲ ಸ್ವರೂಪದಲ್ಲಿ ಉಳಿದಿತ್ತು ಎಂದು ಹೇಳಬಹುದು. ಮರುದಿನ ಆತನೇ ಒಂದು ಗಿಡದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗಿಡವನ್ನು ಬರೆದ ಹಾಗೂ ಯಾರಿಗಾದರೂ ಸ್ಕೂಬಾ ಡೈವರ್‌ನ ಚಿತ್ರವನ್ನು ಬರೆಯಲು ಬರೆಯುತ್ತದೆಯೇ ಎಂದು ಕೇಳಿದ್ದೂ ಆಯಿತು. ಹೆಚ್ಚಿನ ನಮಗೆ ಬರೋದಿಲ್ಲ ಎಂದು ಹೆಗಲು ಕುಣಿಸಿದೆವು, ಪಕ್ಕದ ಆಫೀಸಿನ ಜೆಫ್ ಬಂದು ಕೇವಲ ಎರಡೇ ನಿಮಿಷಗಳಲ್ಲಿ ಸ್ಕೂಬಾ ಡೈವರ್ ಅನ್ನು ಸೇರಿಸಿಬಿಟ್ಟ. ಜೆಫ್ ಚಿತ್ರ ಬರೆಯೋದಕ್ಕೆ ಮೊದಲು ಸ್ಕೂಬಾ ಡೈವರ್ ಎಂದರೆ ಹೇಗೆ ಬರೆಯಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದ ನನಗೆ ಆತ ಚಿತ್ರ ಬರೆದ ಮೇಲೆ ’ಅಯ್ಯೋ ಇಷ್ಟು ಸುಲಭವೇ!’ ಎನ್ನಿಸಿದ್ದು ನಿಜ.

ಮರುದಿನ ಮುಂಜಾನೆ ನೋಡಿದಾಗ, ಅಕ್ವೇರಿಯಮ್ ತಳಕ್ಕೆ ಒಂದೆರಡು ಹಸಿರು ಸ್ಟಿಕ್ಕರುಗಳು ಅಂಟಿಕೊಂಡಿದ್ದವು. ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಮೀನಿನ ಮುಖವೂ ಬದಿಯಿಂದ ಎದ್ದು ಕಾಣತೊಡಗಿತ್ತು, ಇನ್ನೇನು ಸಣ್ಣ ಮೀನನ್ನು ನುಂಗಿ ಬಿಡುವ ಹಾಗೆ. ಇದಾದ ತರುವಾಯ ಆಡಮ್ ಹಸಿರು ಗಿಡಗಳ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದ. ಮುಂದಿನ ದಿನಗಳಲ್ಲಿ ಗಾಜಿನ ತೊಟ್ಟಿಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಚಿತ್ರವೂ ಹಾಗೂ ಗಾಜಿನ ತೊಟ್ಟಿಗೆ ಅಡಿಯಿಂದ ಬಿಸಿ ಮಾಡುವಂತೆ ಯಾರೋ ಒಬ್ಬರು ಮೊಂಬತ್ತಿ (ಕ್ಯಾಂಡಲ್ಲ್) ಯನ್ನೂ ಹಚ್ಚಿ ಬಿಟ್ಟಿದ್ದರು! ಈ ಚಿತ್ರಕ್ಕೆ ಕೊನೆಯ ಬದಲಾವಣೆ ಎಂಬಂತೆ ಸಣ್ಣ ಮೀನನ್ನು ನುಂಗಲು ಹವಣಿಸುವ ದೊಡ್ಡ ಮೀನಿನ ಬಾಯಿಯಿಂದ ರಕ್ತ ಜಿನುಗಿದ ಹಾಗೆ ಮತ್ತು ದೊಡ್ಡ ಮೀನಿನ ಕಣ್ಣಿರುವ ಜಾಗೆಯಲ್ಲಿ ಒಂದು ಸ್ಮೈಲಿ ಸ್ಟಕ್ಕರ್ರೂ ಪ್ರತ್ಯಕ್ಷವಾದವು.

ಹೀಗೆ ಒಂದು ವಾರದಲ್ಲಿ ಒಳಗಡೆಯಿಂದ ಆಡಮ್ ಚಿತ್ರವನ್ನು ಬೆಳೆಸುತ್ತಾ ಹೋದ ಹಾಗೆ ಹೊರಗಡೆಯಿಂದ ಅದೇ ಗಾಜಿನ ಮೇಲೆ ಅಕ್ಕ ಪಕ್ಕದ ಜನರು ತಮಗೆ ಬೇಕಾದ ’ಎಲಿಮೆಂಟು’ಗಳನ್ನು ಸೇರಿಸುತ್ತಾ ಹೋದರು. ಆಕ್ವೇರಿಯಮ್ ಎನ್ನುವುದು ನಿಜ ಜೀವನದಲ್ಲಿ ಒಂದು ಜೈವಿಕ ವ್ಯವಸ್ಥೆಯೆಂಬಂತೆ ಈ ಗಾಜಿನ ಮೇಲೆ ಬರೆದ ಚಿತ್ರವೂ ಚಿತ್ರದಲ್ಲಿ ಜೀವಂತವಾಗಿಯೇ ಇತ್ತು.

***

ಚಿತ್ರ ಬರೆಯುವವರ ಮನಸ್ಸಿನಲ್ಲಿದೆ ಎಲ್ಲ ಥರದ ಕಲ್ಪನೆಗಳು, ಅವು ದಿನಕ್ಕೆ, ಘಳಿಗೆಗೊಮ್ಮೆ ಬದಲಾಗುವುದು ಸಹಜ. ಜೊತೆಗೆ ನಿಜ ಜೀವನವೂ ಸಹ ನಾನಾ ರೀತಿಯ ಸವಾಲುಗಳನ್ನು ಒಡ್ಡುವುದು ಇದ್ದೇ ಇದೆ. ಒಂದು ಚಿತ್ರದ ವ್ಯವಸ್ಥೆಯಲ್ಲಿ ಹಲವಾರು ಸರಿ ಉತ್ತರಗಳಿವೆ, ಹೀಗೆ ಬರೆದರೆ ತಪ್ಪು ಎಂಬುವುದು ದೂರದ ಮಾತು. ನೀವು ವಾಷಿಂಗ್ಟನ್ ಡಿಸಿಯ ಕಲಾ ಮ್ಯೂಸಿಯಮ್‌ಗಳನ್ನು ನೋಡಿದ್ದರೆ ನಿಮಗೆ ಗೊತ್ತು, ಪುರಾತನ ಚಿತ್ರಕಲೆಯಿಂದ ಹಿಡಿದು ಆಧುನಿಕ (abstract) ಕಲೆಯವರೆಗೆ ಬೇಕಾದಷ್ಟು ವೇರಿಯೇಷನ್ನುಗಳಿಗೆ ಒಳಪಟ್ಟ ಮಾಧ್ಯಮವದು. ಆಕ್ವೇರಿಯಮ್ ಒಂದು ಜೈವಿಕ ವ್ಯವಸ್ಥೆ, ಅದರ ಹಲವಾರು ವಸ್ತುಗಳು ಅದರದ್ದೇ ಆದ ಒಂದು ವಿಶೇಷ ವಾತಾವರಣವನ್ನು (eco system) ಸೃಷ್ಟಿಸುತ್ತದೆ.

ನೀವು ಬರ್ಲಿನ್ ಗೋಡೆಯ ಮೇಲೆ ಉದ್ದಾನುದ್ದಕ್ಕೂ ಜನರು ಥರಾವರಿ ಚಿತ್ರಗಳನ್ನು ಗೋಡೆಯ ಎರಡೂ ಬದಿಗೆ ಜನರು ಬರೆದ ಡಾಕ್ಯುಮೆಂಟರಿಯನ್ನು ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಅದು ಒಂದು ರೀತಿಯ ಓಪನ್ ಕ್ಯಾನ್‌ವಾಸ್ ಇದ್ದ ಹಾಗೆ. ನಮ್ಮ ಆಫೀಸಿನಲ್ಲೂ ಬೇಕಾದಷ್ಟು ಜನರ ಆಫೀಸಿನಲ್ಲೂ ಈ ರೀತಿಯ ದೊಡ್ಡ ಗಾಜಿನ ಗೋಡೆಗಳಿದ್ದರೂ ಕೇವಲ್ ಆಡಮ್ ಮಾತ್ರ ನಾನು ಕಂಡಂತೆ ಮೊದಲ ಬಾರಿಗೆ ತನ್ನ ಬದಿಗಿದ್ದ ಗಾಜಿನ ಮೇಲ್ಮೈ ಮೇಲೆ ಚಿತ್ರ ಬರೆದು ಉಳಿದವರು ಅದಕ್ಕೇನೇನೋ ರೂಪಗಳನ್ನು ಕೊಡುತ್ತಿದ್ದರೂ ಅದನ್ನು ಪುರಸ್ಕರಿಸುತ್ತಿದ್ದ. ಹೀಗೆ ಒಂದು ವಾರ ಕಳೆದ ನಂತರ ನಿನ್ನೆ ನನ್ನ ಕಣ್ಣೆದೆರಿಗೇ ಈ ಚಿತ್ರವನ್ನು ಅಳಿಸಿ ಹಾಕಿದ, ಏಕೆ ಎಂದು ಕೇಳಿದ್ದಕ್ಕೆ ’ಚಿತ್ರ ಬರೆದದ್ದಾಯಿತು, ಅದು ಬೆಳೆದದ್ದೂ ಆಯಿತು, ಈಗ ಅದು ತನ್ನ ಚಾರ್ಮ್ ಕಳೆದುಕೊಂಡಿದೆ’ ಎಂದ. ಅದು ನಿಜವೂ ಹೌದು ಮೊದಮೊದಲು ಈ ಚಿತ್ರದ ಹತ್ತಿರ ಸುಳಿದಾಡುವವರು ಒಂದಲ್ಲ ಒಂದು ರೀತಿಯ ಕಾಮೆಂಟುಗಳನ್ನು ಹಾಕಿ ಹೋಗುತ್ತಿದ್ದರು, ಅನಂತರ ಈ ಚಿತ್ರ ಗೌಣವಾಯಿತು.

***

ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಈ ಚಿತ್ರ ಆಫೀಸಿನ ಕ್ರಿಯೇಟಿವಿಟಿಗೆ ಒಂದು ಮಾದರಿಯಾಗಿತ್ತು. ಕೆಲವರು ಮಾರ್ಕರ್ ಪೆನ್ನುಗಳಿಂದ ಚಿತ್ರಕ್ಕೆ ತಮ್ಮದೊಂದು ಕೊಡುಗೆಯನ್ನು ನೀಡಿದ್ದರೆ, ಇನ್ನು ಕೆಲವರು ವರ್ಬಲ್ ಕಾಮೆಂಟುಗಳನ್ನು ಹಂಚಿಕೊಂಡರು. ಕೆಲವರು ಚಿತ್ರವನ್ನು ಬೆಳೆಸಿದರೆ (constructive), ಇನ್ನು ಕೆಲವರು ಅದನ್ನು ಧ್ವಂಸ ಮಾಡಲು ನೋಡಿದರು (destructive). ಜನರ ಸೃಜನಶೀಲತೆ, ಅವರ ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವುದು ಇಲ್ಲಿ ನನಗಂತೂ ಸ್ಪಷ್ಟವಾಗಿತ್ತು.

Wednesday, March 19, 2008

ಮೀನಿನ ತೊಟ್ಟಿ, ಬದುಕು ಮತ್ತು ಸೃಜನಶೀಲತೆ


ಇದರ ಬಗ್ಗೆ ಲೇಖನ ಬರೀತೀನಿ, ಈ ಚಿತ್ರವನ್ನು ನೋಡಿ ನಿಮಗೇನನ್ನಿಸುತ್ತೋ ಅನ್ನೋದನ್ನ ತಿಳಿಸಿ.

Sunday, January 20, 2008

ಅಂತರಂಗ - ಮುನ್ನೂರು



’ಅಂತರಂಗ’ ಒಂದರಲ್ಲೇ ಮುನ್ನೂರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾಯಿತು, ಇನ್ನಾದರೂ ನನ್ನ ಹುಚ್ಚು ಆಲೋಚನೆಗಳಿಗೆ ಒಂದಿಷ್ಟು ಕಡಿವಾಣ ಬೀಳುತ್ತದೆಯೇನೋ ಎಂಬ ಆಶಯದಲ್ಲಿ ಈ ಹಿಂದೆಯೇ ಯೋಚಿಸಿಟ್ಟಂತೆ ಹೊಸವರ್ಷ ಆರಂಭವಾದಂದಿನಿಂದ ಕಾರಿನಲ್ಲಿ ರೆಡಿಯೋವನ್ನು ನಿಲ್ಲಿಸಿದ್ದಾಯಿತು. ಆದರೂ ಬರೆಯೋಕೇನು ಬೇಕಾದಷ್ಟು ವಿಷಯಗಳು ಇದ್ದೇ ಇವೆ, ಅದರ ಜೊತೆಗೆ ಕಾಕತಾಳೀಯ ಎಂಬಂತೆ ಜನವರಿ ೧೩ ರಂದು ಭೂಮಿಕಾದ ವೇದಿಕೆಯಲ್ಲಿ ಕನ್ನಡ ಬ್ಲಾಗ್‌ಗಳ ಬಗ್ಗೆ ಮಾತನಾಡಿದಂದಿನಿಂದ ದಟ್ಸ್‌ಕನ್ನಡ ಕೃಪೆಯಿಂದ ಬ್ಲಾಗಿಗೆ ಎಲ್ಲೆಲ್ಲಿಂದಲೋ ಓದುಗರು ಬಂದು ಹೋಗುತ್ತಿರುವುದನ್ನು ನೋಡೀ ನೋಡೀ ಏನಾದರೂ ಬರೆಯುವ ಹಂಬಲದ ಹಿಂದೆ ಬರೆಯುವ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿಕೊಳ್ಳುವಂತಾಗಿರೋದೂ ನಿಜವೇ ಹೌದು.

ನನ್ನ ಸ್ನೇಹಿತ ಹರೀಶ್ ಹೇಳೋ ಹಾಗೆ ಕ್ರಿಯಾಶೀಲತೆ ಬಹಳ ಮುಖ್ಯ, ಪ್ರತಿಯೊಬ್ಬರೂ ಅವರ ಜೀವನದ ಉತ್ತುಂಗದಲ್ಲಿ ಏನೇನೆಲ್ಲವನ್ನು ಮಾಡಬೇಕು ಎಂದು ಆಲೋಚಿಸಿಕೊಂಡರೂ ಅಂದುಕೊಂಡಿದ್ದನ್ನು ಮಾಡಿ ತೋರಿಸುವುದು ಇದೆ ನೋಡಿ ಅದು ಕಷ್ಟದ ಕೆಲಸ. ಜೀವನದ ಒಂದು ಘಟ್ಟದಲ್ಲಿ ಎಲ್ಲರೂ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಳ್ಳೋದು ಸಹಜವಿರಬಹುದು, ಆದರೆ ಒಂದು ಪುಸ್ತಕವನ್ನು ಬರೆಯುವುದಕ್ಕೆ ಹಂದರವನ್ನು ಆಲೋಚಿಸಿಕೊಂಡು ಅದನ್ನು ಒಂದು ರೂಪಕ್ಕೆ ತಂದು ತಿದ್ದಿ ತೀಡಿ ಪ್ರಕಟಿಸಿ ಜನರಿಗೆ ತಲುಪಿಸುವುದು ಒಂದು ದೊಡ್ಡ ಕಾಯಕವೇ ಸರಿ. ಅಂತಹ ತಪಸ್ಸಿಗೆ ಬಹಳಷ್ಟು ವ್ಯವಧಾನ ಬೇಕು, ಸಾಕಷ್ಟು ಬೇಸರವನ್ನು ಸಹಿಸಿಕೊಂಡು ಮೈ ಬಗ್ಗಿಸಿ ದುಡ್ಡಿಯುವ ಕೆಚ್ಚಿರಬೇಕು. ಆ ನಿಟ್ಟಿನಲ್ಲಿ ಹೇಳೋದಾದರೆ ಒಂದು ಕಾಲದಲ್ಲಿ ಯಾವುದಾದರೊಂದು ಸಣ್ಣ ಲೇಖನವನ್ನು ಬರೆಯಲು ಭೌತಿಕವಾಗಿ ಕೊಸರಾಡುತ್ತಿದ್ದ ನನಗೆ ಇಂದು ಇಷ್ಟೊಂದು ಬ್ಲಾಗ್‌ ಪರಿಧಿಯಲ್ಲಿ ಬರೆದು ಪ್ರಕಟಿಸಿದ ಮೇಲೆ ಕುಳಿತು ಬರೆಯುವುದು ಇನ್ನೂ ಸವಾಲಾಗೇನೂ ಉಳಿದಿಲ್ಲ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಆದರೆ, ಆ ಹೆಮ್ಮೆಯ ಹಿಂದೆ ಬೇಕಾದಷ್ಟು ಕ್ಷೋಭೆಗಳಿವೆ: ಮೊದಲೆಲ್ಲ ಗಹನವಾದದ್ದನ್ನೇನೋ ಬರೆಯುವಾಗ ಮೊದಲು ಪೇಪರಿನಲ್ಲಿ ಬರೆದುಕೊಂಡು ನಂತರ ಕಂಪ್ಯೂಟರಿನಲ್ಲಿ ಅಕ್ಷರ ಜೋಡಿಸಿಕೊಳ್ಳುತ್ತಿದ್ದವನಿಗೆ ಇಂದು ಏಕ್‌ದಂ ಕಂಪ್ಯೂಟರ್ ಮೇಲೇ ಬರೆಯುವುದಕ್ಕೆ ರೂಢಿಸಿಕೊಂಡಿರುವುದರ ಹಿಂದೆ ಕೀ ಬೋರ್ಡಿನ ವೇಗಕ್ಕೆ ಮನಸ್ಸು ಹೊಂದಿಕೊಂಡಿರುವುದನ್ನು ಗಮನಿಸಿ ಸಂಕಟವಾಗುತ್ತದೆ. ಬ್ಲಾಗ್ ಕೊಡುವ ಸ್ವಾತಂತ್ರ್ಯ ಡೆಸ್‌ಟಾಕ್ ಪಬಿಷಿಂಗ್ - ಅದೇ ಅದರ ಮಿತಿ ಕೂಡ, ಬರಹವನ್ನು ಯಾರಾದರೂ ತಿದ್ದಿ ಹೀಗಲ್ಲ ಹಾಗೆ ಎಂದು ಹೇಳುವುದನ್ನು ಮೀರಿ ಬೆಳೆದ ನನ್ನಂಥ ಬ್ಲಾಗ್ ಬರಹಗಾರರಿಗೆ ನಮ್ಮ ಮಿತಿಯನ್ನು ಕಂಡುಕೊಳ್ಳುವುದೂ ಅದನ್ನು ತಿದ್ದಿಕೊಂಡು ಬೆಳೆಯುವುದೂ ದೊಡ್ಡ ಸವಾಲು. ಜೊತೆಗೆ ಬ್ಲಾಗ್ ಒದಗಿಸುವ ಬ್ಲಾಗ್ ಪರಿಧಿಯಲ್ಲಿ ವಸ್ತು-ವಿಷಯಕ್ಕೆ ಆಧ್ಯತೆ ಕೊಡುವುದಕ್ಕಿಂತಲೂ ಅವರವರ ಅಭಿಪ್ರಾಯ ದೊಡ್ಡದಾಗುತ್ತದೆ, ನಮ್ಮ ಅನಿಸಿಕೆಗಳು ನಮ್ಮ ಇಂದಿನ ಪ್ರಬುದ್ಧತೆಯೇ ನಮ್ಮ ಮಿತಿಯಾಗದೆ ನಮ್ಮನ್ನು ಇದ್ದಲ್ಲೇ ನಿಲ್ಲಿಸದಿದ್ದರೆ ಸಾಕು.

ಪ್ರತಿಯೊಬ್ಬ ಬ್ಲಾಗಿಗನೂ ತಮ್ಮ ಬೆಳವಣಿಗೆಗೆ ತಾವು ಓದುವ ಇತರ ಬ್ಲಾಗುಗಳ ಜೊತೆಗೆ ಇತರ ಮಾಧ್ಯಮಗಳನ್ನು ಅನುಸರಿಸಿಕೊಂಡಿದ್ದರೆ ಪುಣ್ಯ. ಬ್ಲಾಗ್ ಒಂದು ಅಭಿವ್ಯಕ್ತಿ ಮಾಧ್ಯಮ, ಆದರೆ ಅದೇ ಕೊರತೆಯಾಗಬಾರದು. ಮುಂದಿನ ಬರಹಗಳಲ್ಲಾದರೂ ತಕ್ಕ ಮಟ್ಟಿನ ರೆಫೆರೆನ್ಸ್‌ಗಳನ್ನು ಒದಗಿಸಿಯೋ, ಅಂಕಿ-ಅಂಶಗಳನ್ನು ಬಳಸಿಯೋ, ಶಬ್ದ-ಚಿತ್ರ ಮುಂತಾದವುಗಳ ಮೂಲಕವೋ ಬೇರೆ ಬೇರೆ ನಿಲುವುಗಳನ್ನು ತೋರಿಸುವ ಪ್ರಯತ್ನವನ್ನು ಮಾಡಬಾರದೇಕೆ ಎಂದು ಅನ್ನಿಸಿದ್ದಿರ ಹಿನ್ನೆಲೆಯಲ್ಲಿ ಮನಸ್ಸಿನಲ್ಲಿ ಬರುವ ಚಿಂತನೆ/ಆಲೋಚನೆಯೊಂದಕ್ಕೆ ಭಿನ್ನವಾಗಿ ನೋಡುವ ದೃಷ್ಟಿಕೋನ ಬಂದರೆ ಒಳ್ಳೆಯದೇ. ಸರಿ-ತಪ್ಪು ಎನ್ನುವುದಕ್ಕಿಂತ ಒಂದು ವಿಷಯಕ್ಕಿರುವ ಹಲವಾರು ಮಜಲುಗಳನ್ನು ಶೋಧಿಸುವ ವ್ಯವಧಾನ ಸಿಕ್ಕರೆ ಅದು ನನ್ನ ದೊಡ್ಡಸ್ತಿಕೆಯಾಗಲಿ. ರಾಬರ್ಟ್ ಕಿಯೋಸಾಕಿ (Robert Kiyosaki) ರಿಚ್‌ಡ್ಯಾಡ್ ಪೂವರ್ ಡ್ಯಾಡ್‌ನಲ್ಲಿ ಹೇಳೋ ಹಾಗೆ ಬ್ಲಾಗ್ ಆಗಲಿ ಪುಸ್ತಕವಾಗಲೀ ಯಾವುದೇ ಮಾಧ್ಯಮಕ್ಕಾದರೂ ಬೆಸ್ಟ್ "ಸೆಲ್ಲರ್" ನಿಲುವು ಮುಖ್ಯವಾದುದು, ಬ್ಲಾಗ್ ಬರೆಯುವವನು ತಾನು ಎಷ್ಟು ಬೇಡವೆಂದರೂ ಬ್ಲಾಗ್ ಓದುವವರ ಬಗ್ಗೆ ಯೋಚಿಸಿಯೇ ಯೋಚಿಸುತ್ತಾನೆ, ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಬ್ಲಾಗ್ ಓದುಗರ ಆಶಯಕ್ಕೆ ಒತ್ತಾಸೆಯಾಗಬೇಕು. ಹೀಗೆ ಹೇಳೋದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ ಇಂದು ಎಷ್ಟೋ ಜನ ಬ್ಲಾಗ್ ಓದುವುದಕ್ಕೆ ಮಾತ್ರ ಸೀಮಿತವಾದರೆ ಎನ್ನುವ ಹೆದರಿಕೆ, ಎರಡನೆಯದಾಗಿ ಮುಂದಿನ ವರ್ಷಗಳಲ್ಲಿ ಬ್ಲಾಗ್ ಒಂದು ಸಾಹಿತ್ಯ ಪ್ರಕಾರವಾಗಿ ನಿಲ್ಲುವ ಭಯ. ಆದ್ದರಿಂದಲೇ ’ಬಾಯಿಗೆ ಬಂದಂತೆ ಬರೆಯುವ’ ಬ್ಲಾಗಿಗರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇಂಗ್ಲೀಷ್ ಬ್ಲಾಗುಗಳೋ ಹಲವಾರು ರೀತಿಯಲ್ಲಿ ಇವಾಲ್ವ್ ಆದವುಗಳು, ಆದರೆ ಮಿತಿಯಲ್ಲಿರುವ ಕನ್ನಡದ ಬ್ಲಾಗ್‌ಗಳಿಗೆ ಸೂಕ್ಷ್ಮವಾದ ಜವಾಬ್ದಾರಿ ಇದೆ ಎನ್ನುವುದು ನನ್ನ ಆಶಯ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು

***

ಕ್ಯಾಪಿಟಲಿಷ್ಟಿಕ್ ವ್ಯವಸ್ಥೆಯಲ್ಲಿ ದಿನವೂ ನೀರು ಕುಡಿಯುವ ನಮಗೆ ಬರುವ ಚಿಂತನಶೀಲ ವಿಷಯಗಳ ಹರಿವು ಒಂದೇ ಮಟ್ಟದ್ದೇ ಎಂದು ಹೇಳಬಹುದು. ನಾವು ಇಲ್ಲಿನ ಕಾರ್ಪೋರೇಟ್ ಏಣಿಯ ಮೆಟ್ಟಿಲುಗಳಲ್ಲಿ ನಿಂತು ಅಮೇರಿಕದ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೇವೆ ಎಂದುಕೊಂಡರೆ ಅದು ನಮ್ಮ ಭ್ರಮೆ. ನಮ್ಮ ಮ್ಯಾನೇಜುಮೆಂಟ್ ಕೆಲಸಗಳಲ್ಲಿ ಜನಸಾಮಾನ್ಯರ ಪರಿಚಯ ಪ್ರಭಾವ ಕಡಿಮೆಯೇ, ನಮ್ಮ ಪ್ರಭಾವಳಿಯ ತ್ರಿಜ್ಯ ಯಾವತ್ತೂ ಒಂದೇ ಮಟ್ಟದ್ದೇ, ಅಪರೂಪಕ್ಕೊಮ್ಮೆ ದೊಡ್ಡ ಮನುಷ್ಯರ ಮಾತಿನಿಂದ ಪ್ರಭಾವಿತಗೊಂಡ ನಮ್ಮ ನಿಲುವಿನ ಚೇತನಶೀಲತೆಯನ್ನು ಒರೆಹಚ್ಚಲು ಸಿಗುವ ಸಾಣೇಕಲ್ಲುಗಳೂ ನುಣುಪಾದವುಗಳೇ. ತಾಯ್ನಾಡನ್ನು ಬಿಟ್ಟು ಬಂದ ನಮ್ಮ ನಂಬಿಕೆ, ವಿಶ್ವಾಸ, ನೆನಪುಗಳು ನಿಧಾನವಾಗಿ ನಾಷ್ಟಾಲ್ಜಿಯಾದ ವ್ಯಾಖ್ಯಾನವನ್ನು ಹೋಲುತ್ತವೆಯೇನೋ ಎನ್ನುವ ಭಯದ ಜೊತೆಗೆ ವೇಗದಲ್ಲಿ ಬೆಳೆಯುತ್ತಿರುವ ನಮ್ಮೂರು-ದೇಶದಿಂದ ಭಿನ್ನವಾಗಿ ಬೆಳೆಯುತ್ತಿರುವ ನಮ್ಮ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಬೇಕಾದಷ್ಟು ಸಾರಿ ಪ್ರಶ್ನಿಸಿಕೊಳ್ಳುವ ಅಖಾಡದಲ್ಲಿ ಸೆಣೆಸುವುದು ದಿನನಿತ್ಯದ ಮಾತುಕಥೆಗಳಲ್ಲೊಂದು. ಎಲ್ಲಕ್ಕಿಂತ ಮುಖ್ಯವಾಗಿ ’ಇಲ್ಲಿಯೇ ಇದ್ದು ಇಲ್ಲಿಯವರಾಗುವ ಪ್ರಯತ್ನವನ್ನು ಇನ್ನು ಮುಂದೂ ಮಾಡುತ್ತಲೇ ಇರುತ್ತೀರೋ?’ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದಿರಲಿ, ಇನ್ನೂ ಪ್ರಶ್ನೆಯ ವಿಸ್ತಾರವನ್ನೇ ಅರ್ಥ ಮಾಡಿಕೊಳ್ಳದಿರುವ ಅಸಹಾಯಕತೆ ನಮ್ಮದು.

ಓಹ್, ಬರೆಯೋಕೇನು ಬೇಕಾದಷ್ಟಿದೆ - ನಿಲ್ಲಿಸೋ ಮಾತೇ ಇಲ್ಲ!

***

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದುತ್ತಿರುವವರೆಲ್ಲರಿಗೂ ನನ್ನ ನಮನಗಳು. ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!