Wednesday, May 24, 2006

ಹಳೆಯ ಆಫೀಸೂ, ಫ್ಯಾಶನ್ ಸೂಪೂ!

ದಿನ ಹಳೆಯ ಆಫೀಸಿಗೆ ಕಾರಣಾಂತರಗಳಿಂದ ಹೋಗಿದ್ದೆ - ಆದಷ್ಟು ಬೇಗಬೇಗ ಕೆಲಸಗಳನ್ನು ಮುಗಿಸಿ ಸಂಜೆ ಬಿಗ್ ಬ್ರದರ್ಸ್ ಬಿಗ್ ಸಿಸ್ಟರ್ಸ್ ಪ್ರೋಗ್ರಾಮ್ ಆಡಿಯಲ್ಲಿ ನನಗೆ ಅಸೈನ್ ಮಾಡಿದ ಹೈ ಸ್ಕೂಲು ಹುಡುಗನನ್ನು ಮಾತನಾಡಿಸಿದ ಹಾಗೂ ಆಯಿತು, ಹಾಗೂ ಕೆಲವು ವಾರಗಳಿಂದ ಹೋಗಿರದ ಮುಂಜಾವಿನ ನ್ಯೂ ಯಾರ್ಕ್ ಸಿಟಿಯನ್ನು ನೋಡಿಕೊಂಡು ಬಂದರಾಯಿತು ಎಂದು. ನಮ್ಮ ಆಫೀಸಿನ ಕಟ್ಟಡವನ್ನು ಈಗಾಗಲೇ ಯಾರೋ ಖರೀದಿಸಿರೋದರಿಂದ ಒಂದು ಕಾಲದಲ್ಲಿ ದೊಡ್ಡ ಕಂಪನಿಯೊಂದರ ಹೆಡ್ ಆಫೀಸಾದ ೪೧ ಮಹಡಿಗಳ ಕಟ್ಟಡ ಕೆಲವೇ ವಾರಗಳಲ್ಲಿ ಒಡೆಯುವವರ ಕೈಗೆ ಸಿಕ್ಕು ತನ್ನ ಗತ್ತನ್ನೆಲ್ಲ ಕಳೆದುಕೊಂಡು ಒಂದು ಕಾಲದಲ್ಲಿ ಮೆರೆದ ಊರಿನ ಗೌಡ ಮುದುಕನಾದ ಹಾಗಿತ್ತು. ಸುಮಾರು ಮೂವತ್ತು ವರ್ಷಕ್ಕಿಂತಲೂ ಹಳೆಯದಾದ ಈ ಕಟ್ಟಡದಲ್ಲಿ ಅಲ್ಲಲ್ಲಿ ಹಾಕಿದ್ದ ಅಮೃತಶಿಲೆ ಸ್ಲ್ಯಾಬುಗಳನ್ನು ಹೇಗೆಬೇಕೋ ಹಾಗೆ ಒಡೆದು ಹಾಕಿದ್ದರು, ಮುಖ್ಯದ್ವಾರವನ್ನು ಮುಚ್ಚಿ ಎಲ್ಲೋ ಬದಿಯ ದ್ವಾರದಿಂದ ಕೆಲಸಗಾರರನ್ನು ಒಳಗೆ ಬಿಡುತ್ತಿದ್ದರು. 'ಇನ್ನೆಷ್ಟು ದಿನ ಇಲ್ಲಿ ಹೀಗೆ ಒಳಗೆ ಬಿಡುತ್ತಾರೆ?' ಎಂದು ಎಲಿವೇಟರ್‌ನ ಒಳಗೆ ಒಂದು ಕಾಲನ್ನು ಇಟ್ಟು ಕೈಯಿಂದ ಬಾಗಿಲನ್ನು ಹಿಡಿದುಕೊಂಡು ಅಲ್ಲೇ ನಿಂತಿದ್ದ ಸೆಕ್ಯುರಿಟಿಯವನನ್ನು ಕೇಳಿದ್ದಕ್ಕೆ 'ಈ ಶುಕ್ರವಾರವೇ ಕಡೆ ಅಂತ ಕಾಣ್ಸುತ್ತೆ, ಆದರೂ ಆಮೇಲೆ ಜನರನ್ನ ಬಿಟ್ಟರೂ ಬಿಡಬಹುದು' ಎಂದ. ಸರಿ ಎಂದು ಯಾವಾಗಲೂ ಬರುವಂತೆ ಹದಿನಾರನೇ ಮಹಡಿಗೆ ಬಂದೆ, ಯಾವಾಗಲೂ ಮುಚ್ಚಿರುತ್ತಿದ್ದ ಫೈರ್ ಡೋರುಗಳು ಅಪರೂಪಕ್ಕೆ ಬಂದವನನ್ನು ಸ್ವಾಗತಿಸಲೋ ಎಂಬಂತೆ ಪೂರ್ತಿ ತೆರೆದುಕೊಂಡು ಹಲ್ಲುಗಿಂಜುತ್ತಿದ್ದವಂತೆ ಕಂಡುಬಂದವು. ಮುಖ್ಯ ದ್ವಾರದಿಂದ ಒಳಗೆ ಬಂದು ನೋಡುತ್ತೇನೆ ಎಲ್ಲವೂ ಬಟಾಬಯಲು, ಹಿಂದೆ ಅಲ್ಲಿ ಎಷ್ಟೊಂದು ಜನರು ಕೆಲಸ ಮಾಡುತ್ತಿದ್ದರು, ಈಗ ಅವರ ‍ಯಾರ ಸುಳಿವೂ ಇರಲಿಲ್ಲ, ಅಲ್ಲೆಲ್ಲ ಕತ್ತಲು ತಾಂಡವಾಡುತ್ತಿದ್ದು, ನಾನು ಸ್ವಿಚ್ ಅದುಮಿದೊಡನೆಯೇ ಇವನೊಬ್ಬ ಬಂದ ಎಂದು ಬೈದುಕೊಂಡು ಅದೆಲ್ಲೋ ಮರೆಯಾಯಿತು.

ನನ್ನ ಹಳೆ ಮೇಜಿನ ಮೇಲೆ ಫೋನೂ ಇರಲಿಲ್ಲ, ನಾನು ಉಪಯೋಗಿಸುತ್ತಿದ್ದ ಖುರ್ಚಿಯೂ ಇದ್ದ ಜಾಗದಲ್ಲಿ ಇರಲಿಲ್ಲ. ಲ್ಯಾಪ್‌ಟಾಪ್ ಕನೆಕ್ಷನ್ ಕೊಟ್ಟು ಎಲ್ಲಿಂದಲೋ ಖುರ್ಚಿ ಫೋನುಗಳನ್ನು ಎಳೆತಂದು ಇನ್ನೇನು ಲಾಗಿನ್ ಆಗಬೇಕು ಎನ್ನುವಷ್ಟರಲ್ಲಿ ದಿಢೀರನೆ ಎರಡು ಸೀನುಗಳು ಒಂದರ ಮುಂದೊಂದು ಬಂದು ಧೂಳಿನ ಜೊತೆಗೆ ಗೆಳೆತನ ಬೆಳೆಸದೆ ಬೇರೆ ವಿಧಿಯಿಲ್ಲ ಎಂದು ಅಣಕಾವಾದಿದಂತೆ ಕಂಡುಬಂತು. ಅಲ್ಲಲ್ಲಿ ಇದ್ದ ಟಿಷ್ಯೂ ಪೇಪರುಗಳನ್ನು ತೆಗೆದುಕೊಂಡು ಮೇಜನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛ ಮಾಡಿಕೊಂಡು ಹದಿನೈದು ಇಂಚಿನ ಡೆಲ್ ಪರದೆಯಲ್ಲಿ ಮುಖ ಹುದುಗಿಸಿದೆ. ಮೊದಲೆಲ್ಲಾ ಆದರೆ ಯಾರು ಯಾರು ಬಂದು ಕಾಫಿಗೆ ಕರೆಯುತ್ತಿದ್ದರು, ಏನೇನೋ ಕೇಳುತ್ತಿದ್ದರು, ಕೊನೇಪಕ್ಷ ಹಾಲ್‌ವೇಗೆ ಮುಖ ಮಾಡಿ ಕುಳಿತ ನಾನು ಪ್ರತಿದಿನ ಅದೆಷ್ಟೋ ಸಾರಿ ಮಂತ್ರದಂತೆ ಗುಡ್‌ಮಾರ್ನಿಂಗ್, ಹೌ ಆರ್ ಯೂ ಗಳನ್ನು ಹೇಳಬೇಕಿತ್ತು, ಆಗೆಲ್ಲ ಮುಂಜಾನೆ ಜನಗಳು ಅದೂ-ಇದೂ ಮಾತನಾಡಿಕೊಂಡು, ಅವರು ಬಂದು ಇವರು ಹೋಗಿ ಎಲ್ಲರ ಕಾಫಿ ತಿಂಡಿ ಆಗುವಷ್ಟರಲ್ಲಿ ಹತ್ತು ಘಂಟೆಯಾಗಿಹೋಗುತ್ತಿತ್ತು, ಆದರೆ ಈ ದಿನ ಅದೆಷ್ಟೋ ದಿನಗಳನಂತರ ನಾನೊಬ್ಬನೇ ತುಂಬಾ ಹೊತ್ತು ಯಾರ ಜೊತೆಯಲ್ಲೂ ಮಾತನಾಡದೇ, ಮಧ್ಯೆ-ಮಧ್ಯೆ ಇನ್ಸ್ಟಂಟ್ ಮೆಸ್ಸೇಜುಗಳನ್ನು ಕಳಿಸಿದವರಿಗೆ ಸಮಾಧಾನ ಮಾಡುತ್ತಾ ಯಾವುದೋ ಸ್ಪ್ರೆಡ್‌ಶೀಟನ್ನು ತಿದ್ದುತ್ತಾ ಕುಳಿತೆ, ಅದು ಹೇಗೆ ಹನ್ನೊಂದು ಘಂಟೆಯಾಯಿತೋ ಗೊತ್ತಾಗಲಿಲ್ಲ. ಬೆಳಿಗ್ಗೆ ಪಾವ್‌ಬಾಜಿ ಬ್ರೆಡ್ಡಿಗೆ ನಿನ್ನೆಯ ಚಟ್ನಿಯನ್ನು ಹಚ್ಚಿ ತಿಂದುಕೊಂಡು, ಒಂದು ಲೋಟಾ ಕಾಫಿ ಕುಡಿದುಕೊಂಡು ಓಡಿದವನಿಗೆ ಹೊಟ್ಟೆಯಲ್ಲಿ ಆತ್ಮೀಯರರೊಬ್ಬರನ್ನು ನಿರ್ಲಕ್ಷಿಸುತ್ತಿರುವ ತಳಮಳ ಶುರುವಾಗಿ ಹನ್ನೊಂದರಿಂದ ಹನ್ನೆರಡು ಘಂಟೆಗಳವರೆಗೆ ಒಂದು ಹತ್ತು ಬಾರಿಯಾದರೂ ಗಡಿಯಾರವನ್ನು ನೋಡಿಕೊಂಡು ಹನ್ನೆರಡು ಹೊಡೆಯುವುದನ್ನೆ ಕಾಯುತ್ತಾ ಇರುವ ಕಾರ್ಖಾನೆ ಕೆಲಸಗಾರನ ಹಾಗೆ ಹೊರಗೆ ದೊಡ್ಡ ಸದ್ದು ಮಾಡಿಯೂ ಒಳಗೆ ಕೇಳಿಸದ ಸೈರನ್ ಧ್ವನಿಯಿಂದ ಬೆಳಗ್ಗಿನ ಪಾಳಿ ಮುಗಿಯುವ ಸೂಚನೆಗಳು ಸಿಕ್ಕವು.

ನ್ಯೂ ಯಾರ್ಕ್ ನಗರದಲ್ಲೇನು ರೆಸ್ಟೋರೆಂಟುಗಳಿಗೆ ಬರ - ಒಂದು ಸ್ಲೈಸ್ ಪೀಡ್ಜಾದಿಂದ ಹಿಡಿದು ಒಳ್ಳೊಳ್ಳೆಯ ಹೋಟೇಲುಗಳೆಲ್ಲವೂ ಕೂಗಳತೆಯಲ್ಲಿದ್ದುದರಿಂದ ಊಟ ತರೋಣವೆಂದು ಹೊರಗೆ ಹೋದಾಗಲೆಲ್ಲ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು, ಆದರೆ ಎಲಿವೇಟರ್‌ನಲ್ಲಿ ಬಂದು ಹೊರಗಡೆಯ ಗಾಳಿಯನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಅದಕ್ಕುತ್ತರ ಸಿಕ್ಕು ಕೈಕಾಲುಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದವು. ಆದರೆ ಈ ದಿನ ಹಾಗಾಗಲಿಲ್ಲ, ಹೊರಗಡೆ ಬಂದರೂ ಎಲ್ಲಿ ಹೋಗುವುದು ಎನ್ನುವದಕ್ಕೆ ಉತ್ತರ ಸಿಗಲಿಲ್ಲ, ಆದರೂ ೪೧ನೇ ಸ್ಟ್ರೀಟ್‌ನಲ್ಲಿರುವ ಸಬ್‌ವೇ ಗೆ ಹೋಗಿ ಒಂದು ಸ್ಯಾಂಡ್‌ವಿಚ್ ತಂದರಾಯಿತು ಎಂದು ಹೊರಟೆ. ಸಬ್ ವೇಗೆ ಹತ್ತಿಕೊಂಡಂತೆಯೇ ಒಂದು ಸೂಪ್ ಅಂಗಡಿ ಇದೆ, ಅದರ ಮುಂದೆ ಬಣ್ಣ-ಬಣ್ಣದ ಸೀಮೇಸುಣ್ಣದಲ್ಲಿ ಪ್ರತೀದಿನವೂ ಮೆನ್ಯುಗಳನ್ನು ಬರೆದಿರುತ್ತಾರಾದರೂ ನಾನು ಅದನ್ನು ಯಾವತ್ತೂ ನೋಡುವ ಗೌಜಿಗೇ ಹೋದವನಲ್ಲ, ಆದರೆ ಈ ದಿನ, ಸೈಡ್ ವಾಕ್‌ನಲ್ಲಿ ಹೆಚ್ಚು ಜನರಿರದಿದ್ದುದರಿಂದಲೋ ಅಥವಾ ಅದೇ ತಾನೆ ಹನ್ನೆರಡು ಹೊಡೆದು ಇನ್ನೂ ಲಂಚ್ ಅವರ್ ಶುರುವಾಗುತ್ತಾ ಇದ್ದುದರಿಂದಲೋ ಸೂಪ್ ಶಾಪ್‌ನಲ್ಲೂ, ಅದರ ಮುಂದಿನ ಸೈಡ್ ವಾಕ್‌ನಲ್ಲೂ ಯಾರೂ ಇರಲಿಲ್ಲ. ಅಂಗಡಿಯ ಹೆಸರನ್ನು ನೋಡಿದೆ 'ಫ್ಯಾಶನ್ ಸೂಪ್' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದರು. ಈ ಅಂಗಡಿಯನ್ನು ಎಷ್ಟೋ ಬಾರಿ ನೋಡಿ ಒಳಗೆ ಹೋಗಬೇಕು ಎಂದು ಮನಸ್ಸಾಗಿದ್ದರೂ ಎಂದೂ ಹೋಗಿರಲಿಲ್ಲ, ಆದರೆ ಇಂದು ಹಿಂದಿನಿಂದ ಯಾರೋ ತಳ್ಳಿದ ಅನುಭವವಾಯಿತು. ಒಳಗೆ ಕೌಂಟರಿನ ಹಿಂದೆ ಒಬ್ಬ ಕಪ್ಪು ದೈತ್ಯ ಮೈಮೇಲೆ ಏಪ್ರನ್ ಕಟ್ಟಿಕೊಂಡು ಥರಥರನ ಬಿಸಿಯಾದ ಸೂಪು ಇದ್ದಂತಹ ಕೊಳಗಂತಹ ಪಾತ್ರೆಗಳಲ್ಲಿ ಚಮಚೆಯಿಂದ ಕಲಕುತ್ತಿದ್ದವನು 'ಹೇಗಿದ್ದೀರಾ ಸಾರ್' ಎಂದ, ಕ್ಯಾಷ್ ರಿಜಿಷ್ಟರಿನ ಹಿಂದೆ ನಿಂತಿದ್ದ ಬಿಳಿ ಚೆಲುವೆ ಸುಮ್ಮನೇ ಮುಗುಳ್ನಕ್ಕಳು. ನಾನು 'ಇಲ್ಲಿ ವೆಜಿಟೇರಿಯನ್ ಸೂಪ್' ಸಿಗುತ್ತದೆಯೇ ಎಂದೆ, ಅವನು 'ಖಂಡಿತವಾಗಿ' ಎಂದು ನನ್ನ ಮುಂದೆ ಇದ್ದ ಆರೇಳು ಸೂಪುಗಳಲ್ಲಿ ಮೂರು ನಾಲ್ಕು ವೆಜಿಟೇರಿಯನ್ ಸೂಪುಗಳನ್ನು ಪರಿಚಯಿಸಿದ, ನನ್ನ ಹಿಂದೆಯಾಗಲೀ ಮುಂದೆಯಾಗಲೀ ಯಾರೂ ಜನರಿಲ್ಲದಿದ್ದರಿಂದ ಆತ ಏನು ಪ್ರಶ್ನೆ ಬೇಕಾದರೂ ಕೇಳು ಎನ್ನುವಂತೆ ಶಾಂತಚಿತ್ತನಾಗಿದ್ದ. ನಾನು 'ಬ್ರಾಥ್ ಏನೂ ಉಪಯೋಗಿಸುವುದಿಲ್ಲವೇ ವೆಜಿಟೇರಿಯನ್ ಸೂಪ್ ಮಾಡಲು' ಎಂದದ್ದಕ್ಕೆ ಅವನು 'ಇಲ್ಲ, ನಾವು ಬಳಸೋಲ್ಲ' ಎಂದ. ನಾನು ಇದ್ದ ಚಿಕ್ಕ ಕಪ್‌ನಲ್ಲಿ ಲೆಂಥಿಲ್ ಸೂಪ್ ತೆಗೆದುಕೊಂಡೆ, ಅವನು ಸೂಪ್ ಜೊತೆಗೆ ಬ್ರೆಡ್ ಅಥವಾ ಚಿಪ್ಸ್ ಬರುತ್ತದೆ ಯಾವುದು ಬೇಕು ಎಂದ, ಬ್ರೆಡ್ ಎಂದೆ, ಆತ ಸೂಪ್ ಮತ್ತು ಬ್ರೆಡ್ ಅನ್ನು ಬ್ರೌನ್‌ಬ್ಯಾಗ್‌ನಲ್ಲಿ ಇಟ್ಟು, ಸೂಪು ಕುಡಿಯೋದಕ್ಕೆ ಗುಂಡಿ ಇರುವ ಸಣ್ಣ ಪ್ಲಾಸ್ಟಿಕ್ ಚಮಚೆ ಹಾಗೂ ನ್ಯಾಪ್‌ಕಿನ್ ಇರುವ ಒಂದು ಪ್ಲಾಸ್ಟಿಕ್ ಕವರನ್ನೂ ಇಟ್ಟು, ಕ್ಯಾಷ್ ರೆಜಿಸ್ಟರಿನ ಹಿಂದಿದ್ದ ಚೆಲುವೆಗೆ ನಾನು ತೆಗೆದುಕೊಂಡ ಸೂಪಿನ ಬಗ್ಗೆ ಹೇಳಿದ. ಸೂಪಿನ ಜೊತೆಯಲ್ಲಿ ಒಂದು ಹಣ್ಣು ಸಹಾ ಬರುತ್ತದೆ - ಬಾಳೆಹಣ್ಣು, ಪಿಯರ್ ಅಥವಾ ಸೇಬುಗಳಲ್ಲಿ ಯಾವುದೊಂದನ್ನಾದರೂ ಆರಿಸಿಕೋ ಎಂದ, ನಾನು ಬಾಳೆಹಣ್ಣನ್ನು ತೆಗೆದುಕೊಂಡು 'ಎಷ್ಟಾಯಿತು' ಎಂದೆ, ಅವನು ಅಲ್ಲಿದ್ದ ಬೋರ್ಡನ್ನು ತೋರಿಸಿ, ಇದಕ್ಕೆ ಕೇವಲ ಮೂರು ಡಾಲರ್ ಎಪ್ಪತ್ತೈದು ಸೆಂಟ್, ಟ್ಯಾಕ್ಸ್ ಸೇರಿ ನಾಲ್ಕೂ ಚಿಲ್ಲರೆಯಾಗುತ್ತದೆ ಎಂದ, ನನಗೆ ಇಷ್ಟು ಕಡಿಮೆ ಬೆಲೆಗೆ ಅಷ್ಟೆಲ್ಲಾ ವಸ್ತುಗಳು ದೊರೆತಿದ್ದು ನೋಡಿ ಆಶ್ಚರ್ಯವಾಯಿತು. ನಾಲ್ಕು ಡಾಲರ್ ಹನ್ನೊಂದು ಸೆಂಟ್ ಕೊಟ್ಟು, ಚಿಲ್ಲರೆ ಪಡೆದು ಹೊರಬಂದೆ. ಇಷ್ಟು ಕಡಿಮೆ ಬೆಲೆಯಲ್ಲಿ, ಅದೂ ಟೈಮ್ಸ್ ಸ್ಕ್ವಯರ್‌ಗೆ ಕೂಗಳತೆ ದೂರದಲ್ಲಿ ಇಷ್ಟೊಂದು ವಸ್ತುಗಳು ಬಂದದ್ದನ್ನು ನೋಡಿ ನನಗೆ ಸೂಪಿನ ಕ್ವಾಲಿಟಿ ಬಗ್ಗೆ ಅನುಮಾನವಾಯಿತು. ಹೊರಗಡೆ ಇದ್ದ ನ್ಯೂಸ್ ಸ್ಟ್ಯಾಂಡಿನಲ್ಲಿ ಜ್ಯೂಸ್ ಒಂದನ್ನು ಕೊಂಡುಕೊಂಡು ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಲಗುಬಗೆಯಿಂದ ನನ್ನ ಅಫೀಸಿಗೆ ಬಂದೆ. ನನಗೆ ಖುಷಿಯಾಗುವಂತೆ ಸೂಪಿನ ಗುಣಮಟ್ಟ ಚೆನ್ನಾಗಿದ್ದುದೂ ಅಲ್ಲದೇ, ಬ್ರೆಡ್ಡಿನ ಜೊತೆಯಲ್ಲಿ ಅವನು ಒಂದು ಕುಕ್ಕೀಯನ್ನೂ ಇಟ್ಟಿದ್ದು ಬಹಳ ಇಷ್ಟವಾಯಿತು, ಇಷ್ಟು ದಿನ ಈ ಅಂಗಡಿಗೆ ಹೋಗದೇ ಇದ್ದುದಕ್ಕೆ ಕೈ-ಕೈ ಹಿಸುಕಿಕೊಂಡೆ!

ನಾನು ಇಲ್ಲಿಗೆ ಬರುವ ಮೊದಲು ಆಗೆಲ್ಲ ಇಲ್ಲಿ ಬಂದು ಎಮ್.ಎಸ್. ಮಾಡಿ ಬಹಳ ಕಷ್ಟಪಟ್ಟು ಮುಂದೆ ಬಂದ ನನ್ನ ಸಹೋದ್ಯೋಗಿಗಳು ನಾನು ಒಂದು ಕಾಲದಲ್ಲಿ ಉಪ್ಪಿಟ್ಟು ತಿಂದ ಹಾಗೆ ಅವರು ತಾವು ಕುಡಿದ ಸೂಪುಗಳ ಹಾಗೂ ತಿಂದ ಬ್ರೆಡ್ಡುಗಳ ಬಗ್ಗೆ ಬಹಳ ಹೆದರಿಸಿದ್ದರಾದರೂ ಫುಡ್ ನೆಟ್‌ವರ್ಕಿನ ದೆಸೆಯಿಂದಾಗಿ ನನಗಂತೂ ಸೂಪು ಎಂದರೆ ಪಂಚಪ್ರಾಣ, ಒಂದೆರಡು ಡಾಲರ್ ಕೊಟ್ಟರೆ ನಮ್ಮ ಕೆಫೆಟೇರಿಯಾದಲ್ಲಿ ದಿನಕ್ಕೊಂದು ಸೂಪನ್ನು ಕುಡಿಯಬಹುದು, ಸೂಪು ಎಂದರೆ ಸುಮ್ಮನೇ ನೀರಲ್ಲ, ಅದರಲ್ಲಿ ಏನೇನೋ ಮಹತ್ವವಿದೆ ಎಂದು ಗೊತ್ತಾದದ್ದು ಆಲ್ಟನ್ ಬ್ರೌನ್, ಎಮರಿಲ್ ಲಗಾಸಿ ಹಾಗೂ ನನ್ನ ಎರಡನೇ ಹೆಂಡತಿ ಎಂದು ನಾನು ಜಂಭದಿಂದ ಹೇಳಿಕೊಳ್ಳುವ ರೇಚಲ್ ರೇ ಯರಿಂದಾಗಿ - ಅವರು ತೋರಿಸಿದ ಅಡುಗೆಗಳನ್ನು ಮಾಡಿ ತಿನ್ನದ್ದಿದ್ದರೇನಂತೆ, ಕಣ್ತುಂಬ ನೋಡಲೇನೂ ಆಡ್ಡಿಯಿಲ್ಲ ಅಲ್ಲವೇ?

***

ನಾಲ್ಕೂ ಕಾಲರವರೆಗೆ ಕಮಕ್-ಕಿಮಕ್ ಎನ್ನದೇ ಕೆಲಸ ಮಾಡಿಕೊಂಡು, ನಾಲ್ಕೂ ಇಪ್ಪತ್ತಕ್ಕೆ ಆಫೀಸನ್ನು ಬಿಟ್ಟು (ಇನ್ನು ಇಲ್ಲಿಗೆ ಬರುತ್ತೇನೋ ಇಲ್ಲವೋ ಎಂದು ಯಾರೂ ಇಲ್ಲದ ಮೂಕ ಜಾಗಕ್ಕೆ ಗುಡ್ ಬೈ ಹೇಳಿ) ನಮ್ಮ ಕಡೆ ಬ್ಯಾಣ ನುಗ್ಗಿದೆಯೆಂದು ತುಡುಗು ದನಕ್ಕೆ ಕೊರಳಿನಲ್ಲಿ ದೊಣ್ಣೆ ಕಟ್ಟಿದಾಗ ಕಾಲನ್ನು ಎಳೆದುಕೊಂಡು ಓಡಾಡುವ ಹಾಗೆ ನಾನು ಬಗಲಿನಲ್ಲಿ ಲ್ಯಾಪ್‌ಟಾಪ್ ತುಂಬಿದ್ದ ಭಾರವಾದ ಚೀಲವನ್ನು ಹೆಗಲಿನಲ್ಲಿ ಆಗಾಗ್ಗೆ ಬದಲಾಯಿಸಿಕೊಂಡು ಬ್ರಯಾಂಟ್ ಪಾರ್ಕಿನಲ್ಲಿ ಈ ಹಿಂದೆಂದೂ ಬಿಸಿಲನ್ನೇ ನೋಡಿಲ್ಲ ಎಂದು ಮೈ ಚೆಲ್ಲಿ ಮಲಗಿದವರೆನ್ನೆಲ್ಲ ನನ್ನ ಕಪ್ಪು ಕನ್ನಡಕದ ಅಂಚಿನಲ್ಲಿ ನೋಡಿಕೊಂಡು ನಾಲ್ಕು ಸ್ಟ್ರೀಟ್‌‌ಗಳನ್ನೂ, ಐದು ಅವೆನ್ಯೂಗಳನ್ನೂ ದಾಟಿ ನನ್ನ ಮೆಂಟಿಯನ್ನು (ಹೈ ಸ್ಕೂಲು ಹುಡುಗ) ಭೇಟಿಯಾಗೋಣವೆಂದು ನಮ್ಮ ಮತ್ತೊಂದು ಆಫೀಸಿಗೆ ಬಂದೆ.

ಇಂದಿನ ಆಟದಲ್ಲಿ ಅಲ್ಲಿ ಸೇರಿದ್ದ ಬಿಗ್ ಮತ್ತು ಲಿಟ್ಲ್ ಗಳಿಗೆ ತಲಾ ಅವರವರ ಜೋಡಿಯಾಕ್ ಸೈನ್ (ರಾಶಿ), ಶೂ ಸೈಜ್, ಎತ್ತರ, ಬದುಕಿನಲ್ಲಿ ಅತ್ಯಂತ ಸಂತಸದ ಘಳಿಗೆ ಹಾಗೂ ಬದುಕಿನ ಅತಿ ದೊಡ್ಡ ಭಯವನ್ನು ಒಬ್ಬೊಬ್ಬರಾಗಿಯೇ ಚೀಟಿಯಲ್ಲಿ ಬರೆಯುವಂತೆ ಸೂಚಿಸಿದರು. ಹೀಗೆ ಬರೆದುದ್ದನ್ನು ಮಡಿಕೆಗಳನ್ನಾಗಿ ಮಡಚಿ ಒಂದು ದಬ್ಬದಲ್ಲಿ ಹಾಕಿ ಪ್ರತಿಯೊಬ್ಬರೂ ತಮಗೆ ಬಂದ ಚೀಟಿಯನ್ನು ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಓದಿ, ಹಾಗೆ ಬರೆದವರು ಯಾರು ಕಂಡುಹಿಡಿಯುವ ಆಟ ಅದಾಗಿತ್ತು. ಸನ್ ಸೈನ್, ಶೂ ಸೈಜ್, ಎತ್ತರಗಳನ್ನು ಬರೆದ ನನಗೆ ಬದುಕಿನ ಸಂತಸದ ಘಳಿಗೆಯ ಬಗ್ಗೆ ಒಂದು ಕ್ಷಣ ಯೋಚಿಸುವಂತಾಯಿತು, ಹಲವಾರು ಅಭ್ಯರ್ಥಿಗಳು ಮನದಲ್ಲಿ ಬಂದರೂ 'ನನ್ನ ಮಗಳು ಹುಟ್ಟಿದ ಕ್ಷಣ' ಎಂದು ಬರೆದೆ, ಆದರೆ ಬದುಕಿನ ದೊಡ್ಡ ಭಯಕ್ಕೆ ಏನು ಬರೆಯಬೇಕೆಂಬುದಕ್ಕೆ ತಿಳಿಯದೇ ಒದ್ದಾಡುತ್ತಿದ್ದಾಗ, ಇದಕ್ಕೂ 'ಕೆಲಸ ಕಳೆದುಕೊಳ್ಳುವುದು', 'ಆಕ್ಸಿಡೆಂಟ್ ಆಗುವುದು' ಎಂದು ಒಂದೆರಡು ಅಭ್ಯರ್ಥಿಗಳು ಸಿಕ್ಕಿದರೂ ಕೊನೆಯಲ್ಲಿ 'ಸಾವು' ಎಂದು ಬರೆದುಕೊಟ್ಟೆ.

ಬರೆದೇನೋ ಕೊಟ್ಟೆ, ಆದರೆ ಒಮ್ಮೆಗೇ ದಿಗಿಲಾಯಿತು, ನಾನು ಸಾಯುವುದಕ್ಕೆ ಏಕೆ ಹೆದರುತ್ತೇನೆ, ಅದೇ ನನ್ನ ಬದುಕಿನ ಮಹಾ ಭಯವೇ ಎಂಬ ಧ್ವನಿಯೂ, ನಾನು ಇನ್ನೂ ಸಾಯಲು ಸಿದ್ಧನಿಲ್ಲ, ಅದೇನನ್ನೋ ಕಡಿದು ಹಾಕುವುದಕ್ಕೆ ಇನ್ನೂ ಬಾಕಿಯಿದೆ ಎಂಬ ಸಮಜಾಯಷಿಯೂ ಒಂದೇ ಸಮಯಕ್ಕೆ ಮನಸ್ಸಿನಲ್ಲಿ ನುಗ್ಗಿದವು. ಉಳಿದವರ ಕೆಟ್ಟ ಭಯಗಳೇನೇನಿರಬಹುದು ಎಂದು ಮುಂದಾಗಿಯೇ ಯೋಚಿಸುವ ಪೀಕಲಾಟದ ಜೋಕಾಲಿಗೆ ಮನಸ್ಸು ತೂಗತೊಡಗಿತು. ಆದರೆ ನನಗೆ ಆಶ್ಚರ್ಯವಾಗುವಂತೆ ಅಲ್ಲಿ ಸೇರಿದ್ದ ಹೈ ಸ್ಕೂಲಿನ ಮಕ್ಕಳು ವಾಟರ್ ಬಗ್, ಪಾರಿವಾಳ, ಕಾಕ್‍ರೋಚ್, ಮುಂತಾದವುಗಳನ್ನು ಬರೆದಿದ್ದರೆ, ದೊಡ್ಡವರಲ್ಲಿ ಸುಮಾರು ಜನ 'ಸಾವಿನ' ಪ್ರಸ್ತಾಪವನ್ನು ಮಾಡಿದ್ದರು, ಒಂದೆರಡು ಜನ ನನ್ನ ಹಾಗೇ 'ಸಾವು' ಎಂದು ನೇರವಾಗಿ ಬರೆದಿದ್ದರೆ, ಇನ್ನು ಕೆಲವರು 'ಅಮ್ಮನ ಸಾವು', 'ಕುಟುಂಬದಲ್ಲಿ ಯಾರದ್ದಾದರೂ ಸಾವು', 'ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು' ಮುಂತಾಗಿ ಬರೆದಿದ್ದರು - ಅವನ್ನೆಲ್ಲ ಕೇಳಿ ನನ್ನ ವ್ಯಗ್ರ ಮನಸ್ಸಿಗೆ ಒಮ್ಮೆಲೆ ಬಹಳ ಖುಷಿಯಾದರೂ, ಆ ಖುಷಿ ಬಹಳ ಕಾಲ ನಿಲ್ಲದೇ 'ಅವರೆಲ್ಲರೂ ಹೀಗೇಕೆ ಬರೆದಿರಬಹುದು?' ಎಂದು ಮತ್ತೆ ಮನದಲ್ಲಿ ಮಂಡಿಗೆ ತಿನ್ನತೊಡಗಿದೆ. ಅಲ್ಲಿ ಸೇರಿದ ಹದಿನೈದು ಜನರಲ್ಲಿ ನನ್ನನ್ನು ಬಿಟ್ಟು ಬೇರೇ ಯಾರೂ ಕ್ಯಾಪ್ರಿಕಾರ್ನ್ ಜನರಿರಲಿಲ್ಲ!

ಪ್ರಾಂಕಿ ಎನ್ನುವ ಒಬ್ಬ ಹೈ ಸ್ಕೂಲು ಹುಡುಗ ಕೇಳಿಯೇ ಬಿಟ್ಟ - 'ಸಾವಿನಲ್ಲಿ ಅಂತದ್ದೇನಿದೆ? ತುಂಬಾ ಜನ ಸಾವು ಎಂದು ಬರೆದಿದ್ದಾರಲ್ಲಾ...' ಎಂದು, ಅವನ ಪ್ರಶ್ನೆಯನ್ನು ಕೇಳುವಾಗ ಮಾತ್ರ ಇದ್ದ ನಿಶ್ಶಬ್ದ ಮುಂದೆ ಅವರಿವರು ಅದೇನೇನೋ ಮಾತಿಗೆ ತೊಡಗಿ ಗದ್ದಲವಾಯಿತೇ ವಿನಾ ಆ ಹುಡುಗನ ಪ್ರಶ್ನೆಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ, 'ದೊಡ್ಡವರ ವಿಚಾರ ನನಗೇಕೆ...' ಎಂದು ಪ್ರಾಂಕಿ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುವವನಂತೆ ಕಂಡುಬಂದ.

2 comments:

Anveshi said...

ಅಲ್ಲಾ ಅಂತರಂಗಿಗಳೆ
ಬಿಗ್ ಬ್ರದರ್ ಆಗಿ ಸಾವಿಗೆ ಹೆದರೋದೇ? ಜಗತ್ತಿನ 'ಬಿಗ್ ಬ್ರದರ್' ಯಾವತ್ತೂ ಲಾಡೆನ್‌ಗೆ ಹೆದರೋನಲ್ಲ ಎಂದು ಹೇಳುತ್ತಲೇ ಇರುತ್ತಾರಲ್ಲ?

ಅದಿರ್ಲಿ... ನೀವು ವೆಜಿಟೇರಿಯನ್ನೋ....
ನಾನು ವೆಜಿಟೇರಿಯನ್ನು!!

Satish said...

ಅನ್ವೇಷಿಗಳೇ,

ಏನ್ ಮಾಡೋದ್ ಹೇಳಿ?
ಇವರು ಲಾಡೆನ್‌ಗೆ ಹೆದರ್ದೇ ಇದ್ದರಿಂದಲೇ ಅವನನ್ನ ಸುಮ್ನೇ ಬಿಟ್ ಬಿಟ್ಟಿರೋದು!

ನಾನು ವೆಜಿಟೇರಿಯನ್ನೇ ಆದ್ರೆ ಪುಳಿಚಾರಲ್ಲಿ ಅಷ್ಟೊಂದ್ ರುಚಿ ಇರಲ್ಲಾಂತ ಅವಾಗಾವಾಗ 'ಅಂತರಂಗ'ದ ಓದುಗರ ತಲೆ ತಿನ್ತಾ ಇರ್ತೀನಿ! ನೀವು 'ದುಷ್ಟರಿಂದ ದೂರ ಇರು' ಅನ್ನೋ ಹಾಗೆ ಸ್ವಲ್ಪ 'ಹುಷಾರ್'ಆಗಿರಿ, ಇಲ್ಲಾಂತಂದ್ರೆ ಬೊಗಳೆ ಬಿಡೋರ್‍ಯಾರು?