Showing posts with label ಹೊಟ್ಟೆ. Show all posts
Showing posts with label ಹೊಟ್ಟೆ. Show all posts

Friday, August 02, 2024

ಎಲ್ಲಾರು ಮಾಡುವುದು...

ಹದಿನಾರನೇ ಶತಮಾನದ (16th century, Kanakadasa) ಈ ಕೀರ್ತನೆ ಇಂದಿಗೂ, ಎಂದಿಗೂ ಪ್ರಚಲಿತವೇ. ಪ್ರಾಣಿ ಪ್ರಬೇಧದಲ್ಲಿ ವಿಶಿಷ್ಟ ಸ್ಥಾನವನ್ನು ಕಂಡುಕೊಂಡಿರುವ ಮಾನವ, ಎಂದಿಗೂ ಈ ಹೊಟ್ಟೆ ಮತ್ತು ಬಟ್ಟೆಗಳಿಂದ ವಿಮುಕ್ತನಾಗುವ ಮಾತೇ ಇಲ್ಲ. ಅಂದಿನ ಸರಳವಾದ ಸಮಾಜದಲ್ಲಿದ್ದುಕೊಂಡು, ಇಂತಹ ಉನ್ನತವಾದ ಆಲೋಚನೆಗಳನ್ನು ಅತಿ ಸರಳವಾದ ಆಡುಭಾಷೆಯ ಮೂಲಕ ಜನರಿಂದ ಜನರಿಗೆ ತಲುಪಿಸಿದ, ಕನಕದಾಸರನ್ನು ನಾವು ಎಂದಿಗೂ ಮರೆಯಲಾರೆವು.



ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ...


ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ

ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು

ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ

ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ

ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ

ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು

ಕಷ್ಟ ಮಾಡಿ ಉಣ್ಣುವುದು  ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ

ನಾನ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು

ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಅಂದಣ  ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ

ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ|


ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು

ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ|


ಈ ಮೇಲಿನ ಕೀರ್ತನೆಯಲ್ಲಿ ಕನಕದಾಸರು, ಒಂಬತ್ತು ಚರಣಗಳಲ್ಲಿ ಎಲ್ಲ ರೀತಿಯ ಕಾಯಕವನ್ನೂ ಸೇರಿಸಿ ಅವುಗಳ ಫಲಮೂಲವನ್ನು ವರ್ಣನೆ ಮಾಡಿದ್ದಾರೆ. ಎಲ್ಲರೂ ಕಾಯಕಗಳನ್ನು, ಕೇಶವನ ಧ್ಯಾನವನ್ನು ಹೊರತು ಪಡಿಸಿ, ಮಾಡುವುದು ತಮ್ಮ ತಮ್ಮ ಹೊಟ್ಟೆ-ಬಟ್ಟೆಗಾಗಿಯೇ.


ಮನುಷ್ಯನನ್ನು ಹೊರತುಪಡಿಸಿದರೆ ಬಟ್ಟೆ ತೊಡುವ ಜೀವಿಗಳು ಮತ್ತ್ಯಾವೂ ಇಲ್ಲ. ಉಳಿದೆಲ್ಲ ಜೀವ-ಜೀವಿಗಳ ಧೋರಣೆ ಹೊಟ್ಟೆಗೋಸ್ಕರ, ಅದು ಅವುಗಳ ಮೂಲ ಮಂತ್ರ, ಹೊಟ್ಟೆ ತುಂಬಿದ ಮೇಲೆ ಉಳಿದೆಲ್ಲ ವಿಷಯಗಳು ಹೊರಬರುವುದು.


ಬಟ್ಟೆ ಎಂದರೆ, ದಾರಿ, ಮಾರ್ಗ, ಪಥ ಎಂದೂ ಕನ್ನಡದಲ್ಲಿ ಅರ್ಥವಿದೆ. ಈ ಅರ್ಥದಲ್ಲಿ, ಎಲ್ಲಾರು ಮಾಡುವುದು ಅವರವರಿಗೆ ಸರಿ ಎನಿಸಿದ ರೀತಿಯಲ್ಲಿ ಎಂದೂ ಅರ್ಥೈಸಿಕೊಳ್ಳಬಹುದು.


***

ಅಮೇರಿಕದ ಐಟಿ ಫ಼ೀಲ್ಡ್‌ನಲ್ಲಿ ಕೆಲಸ ಮಾಡ್ತಾ ಇರೋರಿಗೆ ಈಗ ಸ್ವಲ್ಪ ಕಷ್ಟದ ಸಮಯ. ಒಮ್ಮೆ ಇರುವ ಕೆಲಸ ಹೋಯ್ತು ಎಂದರೆ ಮತ್ತೆ ಹೊರಗಡೆ ಕೆಲಸ ಸಿಗುವಾಗ ಸ್ವಲ್ಪ ಸಮಯ ಬೇಕಾಗುತ್ತದೆ... ಕೆಲವೊಮ್ಮೆ ತಿಂಗಳುಗಟ್ಟಲೆ ಆಗಲೂಬಹುದು. ಅಮೇರಿಕಕ್ಕೆ ಬಂದು ಕೆಲವೊಂದು ಕಂಪನಿಗಳಲ್ಲಿ ಸುಮಾರು ಹತ್ತಿಪ್ಪತ್ತು ವರ್ಷ ಸರ್ವೀಸು ಮಾಡಿಕೊಂಡು ಸೀನಿಯರುಗಳಾಗಿ ಕುಳಿತುಕೊಂಡವರಿಗೆ ಈಗ ಔಟ್‌ಸೋರ್ಸಿಂಗ್, ಆಫ಼್‌ಶೋರಿಂಗ್‌ಗಳ ಮರ್ಮ ತಮ್ಮ ಬುಡಕ್ಕೆ ಬಂದು ನಿಂತಿದೆ. ಇದು ಒಂದು ರೀತಿಯ ವಿಪರ್ಯಾಸ: ಒಂದು ಕಾಲದಲ್ಲಿ ಹೊರಗಿನಿಂದ ಬಂದ ನಾವು ಇಲ್ಲಿ ಕೆಲಸಗಳನ್ನು ಮಾಡತೊಡಗಿದೆವು. ಈಗೀಗ, ಇಲ್ಲಿಂದ ಹೊರಗೆ ಕೆಲಸ ಕಳಿಸುತ್ತಲೇ, ನಮ್ಮ ಬುಡಕ್ಕೆ ನಾವು ಕೊಡಲಿಯನ್ನು ಹಾಕಿಕೊಳ್ಳುತ್ತಿದ್ದೇವೇನೋ ಅನ್ನಿಸುತ್ತದೆ.


ಸುಖ-ಸಂತೋಷದಿಂದ, ನೆಮ್ಮದಿಯಿಂದ ಇರಲು ಹೆಚ್ಚು ಬೇಕಾಗಿಲ್ಲ. ಆದರೆ, ನಮ್ಮ ಸಾಲದು ಎಂಬ ಮನೋಭಾವನೆಗೆ ಬೇಕು ಎನ್ನುವ ಧೋರಣೆಗಳು ಸೇರಿಕೊಂಡು, ನಮ್ಮ ಬದುಕು ದುಬಾರಿಯ ಬದುಕಾಗಿದೆ. ಹಾಗಾಗಿ ವೃತ್ತಿಪರ ಜೀವನದಲ್ಲಿ ಸ್ವಲ್ಪ ಏರುಪೇರಾದರೂ ಸಹಿಸಲಾಗದ ಹೊಡೆತ ಬೀಳುವುದು ಹೆಚ್ಚಿನವರಿಗೆ ಖಾತರಿಯ ವಿಷಯ.


ನಾವು ಎಲ್ಲಿಂದಲೋ ಬಂದು ನೆಲೆ ನಿಲ್ಲುವ ಹಕ್ಕಿಗಳ ಹಾಗೆ. ನಮ್ಮ ಕ್ಷಮತೆ ಮತ್ತು ಶಕ್ತಿಗನುಸಾರವಾಗಿ ನಾವು ಆಯಾ ಮರ-ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದಲ್ಲದೇ, ನಮಗೆ ನಿಲುಕುವ ಎತ್ತರವನ್ನೂ ಏರಿ ಒಂದು ಟೊಂಗೆಯ ಮೇಲೆ ಕುಳಿತುಕೊಳ್ಳುತ್ತೇವೆ. ಆದರೆ, ನಾವು ಕುಳಿತುಕೊಂಡಿರುವ ಮರಗಿಡಗಳಿಗೂ ತಮ್ಮದೇ ಆದ ಇತಿಮಿತಿಗಳೂ, ಅನುಕೂಲ-ಅನಾನುಕೂಲಗಳೂ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಒಂದು ವೇಳೆ, ನಾವು ಕುಳಿತ ಟೊಂಗೆ ಏನಾದರೂ ಇದ್ದಕ್ಕಿದ್ದ ಹಾಗೇ ಮುರಿತು ಬಿತ್ತೆಂದಾದರೆ, ಟೊಂಗೆಯ ಮೇಲೆ ಕುಳಿತ ಪಕ್ಷಿ ತನ್ನ ರೆಕ್ಕೆಗಳ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ಬದುಕ ಬೇಕಾಗುತ್ತದೆ. ಅದು ಮುರಿದು ಹೋದ ಟೊಂಗೆಯನ್ನು ನಂಬಿಕೊಂಡರೆ ಅದರ ಬಗ್ಗೆ ಮರುಕ ಪಡಬೇಕಾದೀತು.


ಎಷ್ಟಿದ್ದರೆ ಸಾಕು, ಏನೆಲ್ಲ ಬೇಕು, ಯಾವುದು ಅಗತ್ಯ, ಅದರಲ್ಲಿಯೂ ಯಾವುದು ಅತ್ಯಗತ್ಯ ಎನ್ನುವುದನ್ನು ಇಂದಿನ ಆಧುನಿಕ ಯುಗದಲ್ಲಿ ನಾವು ಕಲಿಯದವರಾಗಿದ್ದೇವೆ.  ನಮಗೆ ಕಷ್ಟ ಬಂದಾಗ ನಮ್ಮಲ್ಲಿ ಸೋಶಿಯಲಿಸ್ಟಿಕ್ ಮೌಲ್ಯಗಳು ಗರಿಗೆದರಿ ನಿಲ್ಲತೊಡಗುತ್ತವೆ. ಅದೇ ನಮ್ಮ ಉಚ್ಛ್ರಾಯ ಸ್ಥಿತಿಯಲ್ಲಿ, ನಮ್ಮ ಕ್ಯಾಪಿಟಲಿಸ್ಟಿಕ್ ಮೌಲ್ಯಗಳು ದೊಡ್ಡವಾಗಿ ಕಾಣತೊಡಗುತ್ತವೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಹೆಚ್ಚಿನವರು, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ವಿಶಾಲ ಸಾಗರದಲ್ಲಿ, ಸೋಶಿಯಲಿಸ್ಟಿಕ್ ನಾವೆಯನ್ನು ಹುಟ್ಟು ಹಾಕಿ ಚಲಿಸತೊಡಗಿದಂತೆ, ಒಂದು ಹಂತದಲ್ಲಿ, ನಾವು ಬಿಟ್ಟು ಬಂದ ದಡವೂ ನಮ್ಮ ದೃಷ್ಟಿ ಮತ್ತು ಊಹೆಯಿಂದ ದೂರವಾಗುತ್ತಾ ಹೋಗುತ್ತದೆ. ಇದು ಕೆಲವರಲ್ಲಿ ಅಧೀರತೆಯನ್ನು ಸೃಷ್ಟಿಸಬಹುದು, ಇನ್ನು ಕೆಲವರಲ್ಲಿ ಛಲದಿಂದ ಉದ್ಭವಿಸಬಹುದಾದ ಹೊಸದೊಂದು ಲವಲವಿಕೆಯನ್ನೂ ತೋರಬಹುದು.


***

ಭಕ್ತ ಸಿರಿಯಾಳ ಚಿತ್ರದ ಹಾಡಿನಲ್ಲಿ ಒಂದೆರಡು ಸಾಲುಗಳು ಹೀಗಿವೆ:

"ಪ್ರೀತಿ-ಪ್ರೇಮಗಳೇ ಬದುಕಿಗೆ ಸಿರಿತನ

ಹೊಂದಿ ಬಾಳದ ಬದುಕೇ ಬಡತನ


ಉಪವಾಸ-ವನವಾಸ ದೈವಾಧೀನ

ಅದಕಾಗಿ ಕೊರಗುವನು ಜಗದಲಿ ಬಲು ಹೀನ"


ನಮ್ಮ ಮೂಲ ಅಗತ್ಯಗಳನ್ನು ಮನಗಂಡು, ಹಾಸಿಗೆ ಇದ್ದಷ್ಟು ಕಾಲುಚಾಚಿಕೊಂಡು, ಸರಳ ಸಂಪನ್ನವಾದ ಜೀವನವನ್ನು ನಡೆಸಿಕೊಂಡು ಒಂದಿಷ್ಟು ವರ್ಷ ದುಡಿಮೆಯ ದೇವರಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಜಾಣತನ. ದುಡಿಮೆಯ ಉನ್ನತ ಹಂತದಲ್ಲಿ ಅಗತ್ಯಕ್ಕೆ ತಕ್ಕಷ್ಟು ಉಳಿತಾಯ ಮಾಡಿಕೊಂಡು, ದಿಢೀರನೆ ಬರುವ ಕಷ್ಟ-ನಷ್ಟಗಳನ್ನು ಸಂತೈಸಿಕೊಂಡು ಹೋಗುವುದಕ್ಕೆ ಬಹಳ ಜಾಣತನವೇನೂ ಬೇಕಾಗಿಲ್ಲ. ಸಣ್ಣಪುಟ್ಟ ಉಳಿತಾಯಗಳು, ಹಲವಾರು ವರ್ಷಗಳ ಕಾಲ ಮಾಡಿಕೊಂಡು ಬಂದಿದ್ದಾದರೆ, ಒಳ್ಳೆಯ ಫಲವನ್ನೇ ಕೊಡುತ್ತವೆ. ಸಮಾಜದ ಮೇಲ್ಪಂಕ್ತಿಯಲ್ಲಿರುವ ನಮ್ಮ ಕಷ್ಟಗಳು ಕಷ್ಟಗಳೇ ಅಲ್ಲ. ಏನಾದರೂ ಆಗಲಿ, ಈಸಬೇಕು ಇದ್ದು ಜೈಸಬೇಕು ಎನ್ನುವ ಮನೋಭಾವದವರು ನಾವಾದರೇ, ನಮಗೆ ಬರುವ ಕಷ್ಟಗಳು ಕಷ್ಟಗಳೇ ಅಲ್ಲ. ಕಷ್ಟದ ಕಾಲದಲ್ಲಿ ಹಳೆಯ ನಿರ್ಣಯಗಳನ್ನು ಬೈದುಕೊಂಡು ಯಾವ ಪ್ರಯೋಜನವೂ ಇಲ್ಲ. ಇಂದಿರುವ ಕಷ್ಟಗಳು ಮುಂದೊಂದು ದಿನ ದೂರವಾಗುತ್ತವೆ ಎಂದುಕೊಂಡು, ಉಪಾಯ ಮತ್ತು ಜಾಣತನದಲ್ಲಿ ಕಾಲ ನೂಕುವುದು ಎಲ್ಲರಿಗೂ ಎಲ್ಲಕಾಲಕ್ಕೂ ಅನ್ವಯವಾಗುವ ಸರಳಸೂತ್ರ!


***


ಮ್ಯಾಸ್ಲೋವ್‌ನ ಮಾನವ ಅಗತ್ಯಗಳನ್ನೆಂದಾದರೂ ಕರೆಯಿರಿ, ಅಥವಾ ನಮ್ಮ ಸನಾತನರು ಸಾವಿರಾರು ವರ್ಷಗಳಿಂದ ನಂಬಿಕೊಂಡ ಪರಂಪರೆ ಎಂದಾದರೂ ಅಂದುಕೊಳ್ಳಿ. ಮಾನವನ ಮೂಲಭೂತ ಅಗತ್ಯಗಳು ಬಹಳ ಸರಳವಾದವು. ಪ್ರಾಣ, ಅನ್ನ, ಜ್ಞಾನ, ವಿಜ್ಞಾನ, ಮತ್ತು ಆನಂದಗಳನ್ನು ಏರುವ ಒಂದು ಹಂತ. ಅವುಗಳ ಸುತ್ತಲಿನಲ್ಲಿ ಆಹಾರ, ನಿದ್ರೆ, ಮೈಥುನ, ಭಯ ಮತ್ತು ಚಿಂತನೆಗಳ ಮತ್ತೊಂದು ಹಂತ. ಇವು ನಮ್ಮನ್ನು ಪ್ರಾಣಿವರ್ಗದಲ್ಲಿ ಉಳಿದೆಲ್ಲ ಪ್ರಾಣಿಗಳಿಗಿಂದ ಭಿನ್ನವಾಗಿ ಮಾಡುತ್ತವೆ. ಬುಡದಲ್ಲಿ ಎಲ್ಲರ ಅಗತ್ಯವೂ ಪ್ರಾಣ ಮತ್ತು ಅನ್ನವಾದರೆ, ಎತ್ತರಕ್ಕೆ ಹೋದಂತೆಲ್ಲ ಆನಂದದ ಅಗತ್ಯ ಹೆಚ್ಚಾಗುತ್ತದೆ.

Maslow Need Hierarchy theory | Abraham Maslow hierarchy of needs



ಇದನ್ನೇ ಕನಕದಾಸರು ಹೇಳಿದ್ದು ಕೂಡ:

"ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು

ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ"