ಆ ಧ್ವನಿ - ಈ ಧ್ವನಿ: ಭಾಗ ೧
ಆ ಧ್ವನಿ: ನೀನ್ ಸುಮ್ಕೇ ತಲೆ ಕೆಡಿಸಿಕ್ಯಂತಾ ಕುಂತಿ ನೋಡ್ ತಮ್ಮಾ, ಇಷ್ಟು ಕಡ್ದ್ ಅಷ್ಟ್ ಕಡ್ದ್ ಅದ್ರಿಂದ್ ಈಗ ಏನಾತೂ ಅಂತs?
ಈ ಧ್ವನಿ: ಏನಾದ್ರೂ ಆಗ್ಲೀ ಅಂತಾನೇ ಎಲ್ಲಾನೂ ಮಾಡೋಕಾಗುತ್ತಾ, ನಮ್-ನಮ್‌ಗೆ ಏನ್ ಬೇಕೋ ಅದನ್ನ ಮಾಡ್‌ಬೇಕಪ್ಪಾ. ಪ್ರತಿಯೊಂದರಲ್ಲೂ ಒಂದಲ್ಲ ಒಂದು ಪ್ರತಿಫಲ ಇರ್‍ಲೇ ಬೇಕು ಅಂತ್ಲೇ ಈ ಪ್ರಪಂಚದಲ್ಲಿರೋದೆಲ್ಲ ನಡೆಯುತ್ತೇನು?
ಆ ಧ್ವನಿ: ಹಂಗಲ್ಲ, ನೀ ಹೇಳಿರೋ ಈ ಮಾತು ನಿಂಗ್ ನೆನ್‌ಪಿರ್‍ಲೀ, ವ್ಯವಹಾರ್‌ದಾಗ್ ಏನಿದ್ರೂ ನಿನ್ನ ಮಾತಾs ಮುಂದಪಾ, ಮಾಡೊ ಕೆಲಸ ಏನಿದ್ರೂ ತಲೆ ತೆಗಿಸಿ ಮಾಡೋನ್ ನಾನು ಅಂಥಾದ್ದರಾಗ ನನೀಗೆ ಹೇಳಾಕ್ ಬರ್ತೀಯಲಾ!
ಈ ಧ್ವನಿ: ನಿನ್ನಂಥಾ ಹಳ್ಳೀ ಜನಕ್ಕೆ ಆಧುನಿಕ ಬದುಕಿನ ಬಗ್ಗೆ ಗೊತ್ತಾಗಲ್ವೋ. ನಮ್ ಬದುಕಿನ ತುಮುಲಾನೇ ಬೇರೆ, ನಿನಗೆ ಅದರ ಆಯಾಮಗಳ ಅರಿವು ಸ್ವಲ್ಪಾನೂ ಆಗೋಲ್ಲ ಅಂತ್ಲೇ ಹೇಳ್ತೀನಿ - ನಿನಗ್ಗೊತ್ತಾಗಲ್ಲ, ಸುಮ್ನೇ ಬಿಟ್ ಬಿಡು.
ಆ ಧ್ವನಿ: ಏನ್ ನಿನ್ ಮಾತಿನ್ ಆರ್ಥಾ - ಹಳ್ಳೀ ಜನಾ ಅಂದ್ ಕೂಡ್ಲೇ ಜೀವಂತಾನೂ ಇರಲ್ಲಾ ಅಂತ ತಿಳಕಂಡೀಯೇನೂ? ನಿನ್ ಪಟ್ನದ್ ಉಸಾಬರೀನೆಲ್ಲಾ ತಗೊಂಡೋಗಿ ಕಾರಾ ಹಚ್ಚಿ ನೆಕ್ಕೋ - ಎನೋ ಪಾಪ ತಲೆಕೆಡಿಸಿಕ್ಯಂಡ್ ಕುಂತ್ಯಾನೇ ಅಂತ ತಿಳಿಹೇಳಾಕ್ ಬಂದ್ರೆ ನನೀಗೇ ಗೊತ್ತಿಲ್ಲಾ ಅಂತೀಯಲ! ನಮ್ಮೂರ್ ಹಳ್ಳೀನೇ ಇರಬೋದ್ ಬಿಡು, ನಮ್ ಹೃದಯಾ ನೀನ್ ನೋಡಿರೋ ಎಲ್ಲಾ ಪಟ್ನಕ್ಕಿಂತಾ ದೊಡ್ಡದೈತಿ.
ಈ ಧ್ವನಿ: ಹಾಗಿದ್ದ ಮೇಲೆ ಅವರವ್ರ ಕೆಲ್ಸ ನೋಡಿಕೊಂಡು ಸುಮ್ನಿರಬೇಕಪ್ಪ, ಇನ್ನೊಬ್ರ ವಿಷಯದಲ್ಲಿ ಮೂಗು ಯಾಕೆ ತೂರಿಸ್ತೀರಿ?
ಆ ಧ್ವನಿ: ಏ, ಯಾವ್ದೋ ದೆವ್ವ ಮೆಟಗಂಡಂಗ್ ಆಡ್‌ಬ್ಯಾಡಾ - ಆವಾಗೇ ಹೇಳ್ಳಿಲ್ಲೇನು, ನಮ್ ರೀತಿ ನೀತಿ ಅಂದ್ರೆ ನಮಿಗೆ ಬೇಕಾದೋರ್ ನಲಿವಷ್ಟೇ ಅಲ್ಲ, ನೋವೂ-ಸಂಕ್ಟಾನೂ ನಮೀಗ್ ಬೇಕು, ಒಂದೇ ಮಾತಲ್ಲಿ ಹೇಳೋದಾದ್ರೆ ನೀನು ಕಂಡಿರೋ ಎಲ್ಲಾ ಸುಖಾನೂ ಒಂಥರಾ ನೋವಲ್ಲೇ ಹುಟ್ತಾವಂತೆ, ತಿಳಕೋ!
ಈ ಧ್ವನಿ: ನೋಡೋ, ನಿನಗೆ ತಿಳೀ ಹೇಳೋಕೆ ನನ್ನಲ್ಲಿ ಸ್ವಲ್ಪಾನೂ ತಾಳ್ಮೆ ಉಳಿದಿಲ್ಲ, ನಿನಗೆ ಹೇಗೆ ಬೇಕೋ ಹಾಗೆ ಮಾಡು.
ಆ ಧ್ವನಿ: ತಡಿ, ತಡಿ. ಸಿಟ್ ಮಾಡಿಕ್ಯಾ ಬ್ಯಾಡಾ, ಬರೀ ನನ್ನ ಎರಡ್ ಮಾತ್ ಕೇಳಿ ಅದಕ್ಕುತ್ರ ಕೊಡೋಕೇ, ಮುಖಕ್-ಮುಖಾ ಕೊಟ್ಟು ಮಾತಾಡೋಕೂ ಆಗ್ದೇ ಇರೋ ಪ್ಯಾಟೇ ಮಂದಿ ಥರ್‍ಆ ಆಡಬ್ಯಾಡಾ - ಅದು ಏನ್ ಸಮಸ್ಯೇ ಐತೀ ಅಂತ ನನಿಗ್ ಹೇಳು, ಇರೋದ್ರಲ್ಲೇ ಒಳ್ಳೇ ಹಾದಿ ಹಿಡಿಯೋ ಹಾಂಗs ಒಂದು ಹೂಟಿ ಹೇಳಿಕೊಡ್ತೀನಿ!
ಈ ಧ್ವನಿ: ಹಾಗೇನಿಲ್ಲ, ಎಲ್ಲ ಸರಿಯಾಗೆ ಇದೆ, ಈ ನಮ್ ಪೇಟೇ ಜೀವನದಲ್ಲಿ ಎಲ್ಲಾ ಇದ್ರೂ ಏನೋ ಬೇಕು ಅಂತ ಅನ್ನಿಸ್ತಾನೇ ಇರತ್ತೆ. ಕಳಕೊಂಡಿದ್ದೇನು ಅಂತ ಗೊತ್ತಾದ್ರೇ ತಾನೇ ಹುಡುಕೋ ದಾರಿ ತಿಳಿಯೋದು?
ಆ ಧ್ವನಿ: ಆಷ್ಟೇನೋ, ಇನ್ನೇನಾದ್ರೂ ಐತೋ?
ಈ ಧ್ವನಿ: ಇನ್ನೇನು ಇಲ್ಲಾ, ಮೇಲೆ-ಮೇಲೆ ಬಂದಂತೆಲ್ಲಾ ಕೈಯಲ್ಲಿ ದುಡ್ಡೇ ನಿಲ್ಲಲ್ಲ, ದುಡ್ ನಿಲ್ಲಲಿ ಅಂತ ದುಡದಂಗೆಲ್ಲ ಕೆಲ್ಸಾ ನಿಲ್ಲಲ್ಲ - ಕೆಲ್ಸಾ ಮಾಡಿ, ದುಡ್ಡೂ ದುಡ್ದೂ ಅಷ್ಟೂ-ಇಷ್ಟೂ ಅಂತ ಕೂಡಿಹಾಕೋದ್ರೊಳಗೆ ಇನ್ನೇನೂ ಉಳಿಯೋದೇ ಇಲ್ಲಾ ಅನ್ನಿಸಿಬಿಟ್ಟಿದೆ.
ಆ ಧ್ವನಿ: ಹಂಗಾದ್ರೆ, ಗುಡಚಾಪೇ ಕಟ್ಟಿ ನಮ್ಮೂರಿಗ್ ಬಂದ್ ಬಿಡು, ಮತ್ಯಾಕ್ ತಡಾ?
ಈ ಧ್ವನಿ: ಅದಂತೂ ಇನ್ನೂ ಆಗದ ಮಾತು ಬಿಡು. ಒಂದು, ಇಲ್ಲಿಗೆ ಬಂದು ನಾನು ಮಾಡೋದಾದ್ರೂ ಏನು? ಎರಡನೇದಾಗಿ, ಅಲ್ಲಿ ನಾನು ಮೂಗಿನ ತನಕಾ ಹುಗಿದುಕೊಂಡು ಬಿಟ್ಟಿದ್ದೇನೆ, ಇತ್ಲಾಗೆ ಏಳೋಕೂ ಆಗಲ್ಲ, ಅತ್ಲಾಗೆ ಮುಳುಗೋಕೂ ಆಗಲ್ಲ ಅನ್ನೋ ರೀತಿ.
ಆ ಧ್ವನಿ: ಛೇ, ಛೇ, ಹಂಗೆಲ್ಲಾದ್ರೂ ಆಗ್‌ತೈತಾ - ನಮ್ಮದೇ ಒಂದ್ ಹತ್ತೆಕ್ರೆ ಜಮೀನ್ನ ಬಿಟ್ಟುಕೊಡ್ತೀನಂತೆ, ಒಂದ್ ರೀತಿ ಮೊದಲೇ ವಾನಪ್ರಸ್ಥಾ ಸೇರಿಕ್ಯಂಬಿಡು, ನಿನಗ್ಯಾವನೂ ಕ್ಯಾರೇ ಅನ್ನಂಗಿಲ್ಲ.
ಈ ಧ್ವನಿ: ಇಲ್ವೋ, ಆ ವಾನಪ್ರಸ್ಥದಲ್ಲಿ ಸಿಗಬೇಕಾದ ಸುಖಗಳನ್ನೆಲ್ಲ ಅಲ್ಲೇ ಅನುಭವಿಸೋಣಾ ಅಂಥ ಪ್ರತೀದಿನ ಯೋಗ, ಧ್ಯಾನಾ ಮಾಡ್ತೀನಿ - ಆದರೆ ಧ್ಯಾನದ ಮಧ್ಯೆ ಹಂಗೆ ಮಾಡಿದ್ರೆ ಹೆಂಗೆ, ಹಿಂಗೆ ಮಾಡಿದ್ರೆ ಹೆಂಗೆ ಅನ್ನೋ ಹಗಲ್‌ಗನಸ್ಗಳು ಶುರುವಾಗ್ತಾವೆ ನೋಡು.
ಆ ಧ್ವನಿ: ನೋಡಪಾ, ನನ್ ಕೈಲಿ ಏನಾಗ್ತೇತೋ ಅದನ್ನ ಹೇಳ್ದೆ. ನಾನೇನು ನಿನ್ನಂಗಾs ಹೆಚ್ಚಿಗಿ ಓದ್ದೋನೂ ಅಲ್ಲಾ, ಆದ್ರೂ ಒಂದೊಂದ್ ಸಲಿ ನಿನ್ನಂಥಾ ಓದ್ದೋರ್ ಆಡೋದ್ ನೋಡಿದ್ರೆ ಹಿಡ್ದು ಮೆಟ್ನ್ಯಾಗ್ ಹೊಡಿಬಕು ಅನ್ಸತಿ ನೋಡ್! ನನ್ನ್ ಜೋಡೀ ಸಾಲೀ ಬಿಟ್ಟು ಊರಿನ್ಯಾಗಾ ಇದ್ದಿದ್ರ ಹಿಂಗಾಗತಿತ್ತಾ ಮತ್ತಾs. ಈಗ ನೋಡು ಅದೈತಿ, ಇದೈತಿ ಎಲ್ಲಾನೂ ಐತಿ ಅಂತೀ ಸಮಾಧಾನ ಒಂದ್ ಬಿಟ್ಟು - ಮೈ ತುಂಬ ಸಾಲ ಮಾಡಿಕ್ಯಂಡ್ ಹಗಲೂ ರಾತ್ರೀ ಚಿಂತೀ ಮಾಡ್ಸೋ ಆ ಐಷಾರಾಮಾ ನಂಗ್ ಬ್ಯಾಡಾಪ್ಪೋ! ನನಿಗೋ ಹಂಗ್ ಉಂಡು ಹಿಂಗs ಬಿದ್ರ ಸಾಕ್ ನೋಡು, ನಿದ್ರೀ ಅನ್ನೋದು ಅವನೌನ್ ಎಲ್ಲಿರತತೋ ಏನೋ ಹುಡಿಕ್ಯಂಬಂದ್ ವಕ್ಕರ್‍ಸಕ್ಯಂತತಿ.
ಈ ಧ್ವನಿ: ನೀನೇ ಪುಣ್ಯವಂತ, ನನಗೂ ನಿದ್ರೆ ಬರುತ್ತೆ, ಇಲ್ಲಾ ಅಂತ ಏನಿಲ್ಲ. ನನ್ ಮುಖಾ ಸರಿಯಾಗಿ ನೋಡು, ನನಗೂ-ನಿನಗೂ ಒಂದೇ ವಯಸ್ಸಾದ್ರೂ ನನ್ನ ಹಣೇ ಮೇಲೆ ಆಗ್ಲೇ ಅದೆಷ್ಟೋ ನೆರಿಗೆಗಳು ಕಾಣೋಕೆ ಶುರು ಆಗಿದೆ, ತಲೆ ಕೂದ್ಲೆಲ್ಲಾ ಹಣ್ಣಾಗೋಕ್ ಶುರುವಾಗಿದೆ ನೋಡು - ನೀನಂತೂ ಕಲ್‌ಗುಂಡಿನಂಗೆ ಹೆಂಗಿದಿಯೋ ಹಂಗೇ ಇದೀಯ.
ಆ ಧ್ವನಿ: ಈಗ ನನ್ ಮ್ಯಾಲ ಕಣ್ ಹಾಕಬ್ಯಾಡಾ. ನಾನ್ ಅಂದೇ ಅಂತ ಮನೀ ಹಾದಿ ಹಿಡಿ, ಛೋಲೋತ್ನಾಗ್ ರೊಟ್ಟೀ, ಎಣ್ಣಗಾಯ್ ಮಾಡಿರ್ತಾರೆ, ಬಾ ಇಲ್ಲೇ ಸ್ವಲ್ಪ ಉಂಡ್‌ಕೋಂಡ್ ಹೋಗೋವಂತಿ. ಅದೆಷ್ಟೋ ದೂರದಿಂದ ಇಲ್ಲೀ ತಂಕಾ ಬಂದು, ಮಗನಾs ಒಂದು ತುತ್ತು ತಿನ್ನದೇ ಇದ್ರೆ ಹೆಂಗs?
ಈ ಧ್ವನಿ: ಇಲ್ಲ, ಯಾಕೋ ಹಸಿವೇನೇ ಇಲ್ಲ. ಅಲ್ಲೀ-ಇಲ್ಲೀ ತಿಂದೂ-ತಿಂದೂ ಊಟದ ಹೊತ್ತಾದ್ರೂ ಏನೂ ಸೇರೋದೇ ಇಲ್ಲ ನೋಡು, ಸೇರಿದ್ರೂ ಅರಗೋ ಮಾತೇ ಇಲ್ಲ.
ಆ ಧ್ವನಿ: ಸರಿ ಬಿಡಪ್ಪ, ನಮ್ಮಂತಾ ಬಡಬಗ್ಗರ ಮನ್ಯಾಗ ನಿನ್ನಂಥೋರು ಕೂತು ತಿಂದ್ರಾ ಇನ್ಯಾವ ರೋಗ ಬರ್‍ತೈತೋ ಅಂಥ ಯೋಚಿಸೋ ಮಂದಿ ನೀವು. ಇಲ್ಲಾಂದ್ರಾ ನೀರನ್ನೂ ಕೊಂಡ್‌ಕಂಡ್ ಯಾವನ್ನಾರಾ ಕುಡೀತಾನೇನು? ಮನುಷ್ಯರೊಳಗೆ ಮೋಸಾ ಇರಬೋದು, ಆ ಗಂಗವ್ವ್ ಏನ್ ಮಾಡ್ಯಾಳೋ? ಇದೇ ನೀರ್‍ನಾಗೆ ಹಿಂದೆ ಕುಪ್ಪಳಿಸಿ ಹಾರ್‍ತಾ ಇದ್ದೆ, ಈಗ ನಿನಗೆ ಅದೇ ದೂರ ಆಗೈತೇನು?
ಈ ಧ್ವನಿ: ಹೌದೋ, ಇಪ್ಪಂತ್ತೆಂಟು ಕಡೆ ನೀರು ಕುಡಿದ್ರೆ ಅದೂ-ಇದೂ ಖಾಯಿಲೆ ಬರುತ್ತೆ, ಮತ್ತೆ ಇನ್ನೊಂದೆರಡು ಮೂರು ದಿನದಲ್ಲಿ ಹಿಂತಿರುಗಿ ಹೋಗೋದೂ, ಕೆಲ್ಸಾ ಮಾಡೋದೂ ಇದ್ದೇ ಇರತ್ತಲ್ಲಾ...
ಆ ಧ್ವನಿ: ಇದೊಳ್ಳೇ ಛೋಲೋ ಆತ್ ನೋಡು, ಹಂಗಿದ್ದ ಮ್ಯಾಲ ಇಲ್ಲೀ ತಂಕಾ ಯಾತಕ್ ಬರ್‍ತೀರಿ? ಇಲ್ಲೀ ನೀರು-ನಿಡಿ ಕುಡಿಯೋಂಗಿಲ್ಲ, ಇಲ್ಲಿ ದಾರಿ ತುಳಿಯೋಂಗಿಲ್ಲ, ನಮ್ಮಂಥೋರ್ ಮನ್ಯಾಗ ಒಂದು ತುತ್ತು ರೊಟ್ಟಿ ತಿನ್ನಂಗಿಲ್ಲಾ, ಧೂಳ್ ಬಂದ್ರ ಹಾರಾಡ್ತೀರಿ, ಬಿಸ್ಲ ಬಂದ್ರೆ ಏಗಾಡ್ತೀರಿ - ನೀವಾತೂ ನಿಮ್ಮ ಪ್ರಪಂಚಾತೂ ನೋಡು. ಇಷ್ಟೊಂದು ರೊಕ್ಕಾ ಖರ್ಚ್ ಮಾಡಿ ಬರೋ ಬದ್ಲಿ ಅಲ್ಲೇ ಎಲ್ಲರಾ ಇದ್ದು ಬಿಡಬೇಕಪಾ.
ಈ ಧ್ವನಿ: ಹಾಗಲ್ಲ, ಊರು ಮಂದಿ ನೋಡೋದು ಬೇಡವೇನು, ಮನೇ ಮಂದೀನೆಲ್ಲ ಮಾತಾಡ್ಸೋದು ಬೇಡೇನೂ...
ಆ ಧ್ವನಿ: ತಥ್ ನಿನ್ನ, ಸ್ವಲ್ಪ ತಡಿ. ಹಾಂಗಂದ್ರ ಇಲ್ಲೀ ಮಂದಿ ಯಾವ್ದೋ ಕಾರ್‍ಣಕ್ಕೆ ನೆಗದು ಬಿದ್ರು ಅಂತ ತಿಳಕಾ ಹಂಗಂದ್ರ ನೀನು ಇಲ್ಲಿಗ್ ಬರಂಗಿಲ್ಲ ಮತ್ತಾ? ನೀನು ಅಂತೋನು ಇಂತೋನು ಅನಕೊಂಡಿದ್ದೆ, ಇವತ್ತ್ ಗೊತ್ತಾಯ್ತು ನೋಡ್ ನಿನ್ನ ಅಸಲೀ ಬಣ್ಣ.
ಈ ಧ್ವನಿ: ಏ, ಸುಮ್ನೇ ಏನೇನೋ ಹೇಳಿ ತಲೇ ತಿನ್ನ ಬೇಡವೋ... ಮತ್ತೇ ಮನೇ ಕಡೇ ಎಲ್ಲ ಹೆಂಗಿದಾರೆ, ಗದ್ದೇಲಿ ಈ ಸಾರಿ ಏನೇನು ಹಾಕೀರಿ ಹೇಳು.
ಆ ಧ್ವನಿ: ನೀನು ಸುಮ್-ಸುಮ್ನೇ ಮಾತ್ ಬದಲಾಯ್ಸ್ ಬ್ಯಾಡಾ...ನಾವ್ ಹಳ್ಳೀ ಮಂದೀಗೆ ನಿಮ್ ಥರಾ ನಯಾ ನಾಜೂಕ್ ಒಂದೂ ಗೊತ್ತಾಗಂಗಿಲ್ಲ, ಬಾಯಿಗ್ ಬಂದಿದ್ದು ಹೇಳಿಬಿಡ್ತೀವಪ್ಪಾ, ನೀನ್ ಬೇಜಾರ್ ಮಾಡಿಕೊಳ್ಳದಿದ್ರೆ ಅಷ್ಟೇ ಸಾಕು.
ಅದಿರ್ಲಿ ನೀನು ಅದೆಷ್ಟೋ ದಿನದ ಮ್ಯಾಲ ಈ ಕಡಿ ಬಂದೀದಿ, ನಮ್ ತ್ವಾಟದ್ ಕಡಿ ಹೋಗೋಣ್ ನಡಿ, ಆ ಕೆಂದಾಳ್ ಮರದ್ದು ಒಂದೆರಡು ಎಳ್‌ನಿರಾದ್ರೂ ಕುಡ್ದು ಒಂದಿಷ್ಟು ತಗೊಂಡ್ ಹೋಗುವಂತಿ, ಏನು?
ಈ ಧ್ವನಿ: ಸರಿ, ಹಾಗೇ ಮಾಡೋಣ, ನಡಿ.
2 comments:
ಅಬ್ಬಾ, ಒಂದೇ ದಿನದಲ್ಲಿ ನೀವು ಆವರಣ ರೋಗದಿಂದ ಮುಕ್ತರಾದಂತಿದೆಯಲ್ಲಾ....
ಸಾರಿ ರೀ... ನನ್ನ ಬೊಗಳೆಯಲ್ಲಿ ನಿನ್ನೆ ಕಾಮೆಂಟಿಸಲು ಆಗದಿದ್ದುದಕ್ಕೆ ತಾಂತ್ರಿಕ ವೈಫಲ್ಯವೇ ಕಾರಣ. ಇದಕ್ಕಾಗಿ ತಂತ್ರಜ್ಞರು ವಿಷಾದಿಸುತ್ತಾರೆ. ಈಗ ಸರಿಯಾಗಿದೆ.
Super color scheme, I like it! Keep up the good work. Thanks for sharing this wonderful site with us.
»
Post a Comment