Showing posts with label ಮನಸ್ಸು. Show all posts
Showing posts with label ಮನಸ್ಸು. Show all posts

Sunday, June 08, 2008

ಬೆತ್ತಲಾಗದ ಮನಸ್ಸಿನ ಕತ್ತಲೆ

ಹನ್ನೊಂದು ವರ್ಷದ ಹಿಂದೆ ಈ ದೇಶಕ್ಕೆ ಬಂದ ಹೊಸದರಲ್ಲಿ ಇಲ್ಲಿ ಜಿಮ್‍ಗೆ ಸೇರಿಕೊಳ್ಳಬೇಕು, ನಾನೂ ಎಲ್ಲರಂತೆ ಒಂದು ಎಕ್ಸರ್‌ಸೈಸ್ ರುಟೀನ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇ ಬಂತು, ನಮ್ಮ ಮನೆಯ ಹತ್ತಿರದ ಹೆಲ್ತ್ ಕ್ಲಬ್ ಒಂದಕ್ಕೆ ಮೆಂಬರ್ ಆದದ್ದು ಚೆನ್ನಾಗಿ ನೆನಪಿದೆ. ನನ್ನಂತಹವರು ಖುರ್ಚಿ ಮೇಲೆ ಕುಳಿತೇ ದುಡಿದು ತಿನ್ನುವ ಕಾಯಕಕ್ಕೆ ಬದ್ಧರಾದಂತೆ, ಆಗಾಗ್ಗೆ ಹಲವಾರು ದಿಕ್ಕುಗಳಲ್ಲಿ ತಿರುಗಿ ಬಾಗಿ ಬಳಕುವ ಖುರ್ಚಿಯ ಮುಂದಿನ ಜಡ ಚೇತನ ಟೇಬಲ್ಲಿನ ಸಂಗಕ್ಕೆ ಜೋತು ಬಿದ್ದು ನನ್ನ ಹೊಟ್ಟೆ ಕಿಂಚಿತ್ತು ಕಿಂಚಿತ್ತಾಗೇ ಮುಂದೆ ಬರಲು ಆರಂಭಗೊಂಡಿದ್ದು ಅನೇಕ ರೀತಿಯಲ್ಲಿ ನನಗೆ ಸೋಜಿಗವನ್ನುಂಟು ಮಾಡುತ್ತಲೇ ಇದೆ, ಆದರೆ ಪರಿತ್ಯಾಗಿ ಮನಸ್ಸು ಅದೇನೇ ಸಂಕಲ್ಪಗಳನ್ನು ಮಾಡಿಕೊಂಡರೂ ದಿನಕ್ಕೊಮ್ಮೆಯಾದರೂ ಹಲ್ಲು ತಿಕ್ಕುವ ಕಾಯಕದಂತೆ ಇಂದಿಗೂ ಮೈ ಮುರಿದು ವ್ಯಾಯಾಮ ಮಾಡುತ್ತಿಲ್ಲವಲ್ಲ ಎನ್ನುವುದು ನನ್ನ ಲಾಂಗ್‌ಟರ್ಮ್ ಕೊರಗುಗಳಲ್ಲೊಂದು. ದಶಕದ ಹಿಂದೆ ಒಂದಿಷ್ಟು ದಿನ ನೆಪಕ್ಕೆಂದು ಹೆಲ್ತ್‌ಕ್ಲಬ್‌ಗೆ ಹೋದಂತೆ ಮಾಡಿ ಕೊನೆಗೆ ಇವತ್ತಿನವರೆಗೂ ಮತ್ತೆ ಅಂತಹ ಸ್ಥಳಗಳಿಗೆ ಕಾಲಿಕ್ಕದ ಭೂಪ ನಾನು ಎಂದು ನನ್ನನ್ನು ನಾನೇ ಹೀಯಾಳಿಸಿಕೊಂಡು ನಗುವ ಪ್ರಸಂಗವೊಂದು ನೆನಪಿಗೆ ಬಂತು.

ಅವತ್ತೇ ಮೊದಲು ನಾನು ಇಲ್ಲಿನ ಹೆಲ್ತ್‌ಕ್ಲಬ್‌ನ ಶೌಚಾಲಯಗಳಿಗೆ ಭೇಟಿ ನೀಡಿದ್ದು. ನಾನು ಅಲ್ಲಿನ ಥರಾವರಿ ಉಪಕರಣಗಳನ್ನು, ಮಷೀನುಗಳನ್ನು ಬಳಸಿ ಏನು ಬೇಕಾದರೂ ಮಾಡಿ ಧಾರಾಳವಾಗಿ ಬೆವರಿಸಿಕೊಂಡು ಅಲ್ಲಿನ ಶೌಚಾಲಯ ದಾರಿ ಹಿಡಿದು ಅಲ್ಲಿ ನೋಡಿದರೆ ಅಲ್ಲಿ ಬೇಕಾದಷ್ಟು ಜನ ತಮ್ಮ ಹುಟ್ಟುಡುಗೆಲ್ಲಿರುವುದೇ? ಅಂದರೆ ಬರೀ ಬೆತ್ತಲಾಗಿ ನಿಂತುಕೊಂಡು ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿರುವುದೇ? ಇದು ಮುಂದುವರೆದ ದೇಶ, ಇಲ್ಲಿನ ಜನರಿಗೆ ತಮ್ಮ ಮಾನ-ಮರ್ಯಾದೆ, ನಾಚಿಕೆ-ಸಂಕೋಚಗಳು ಒಂದೂ ಅಡ್ಡಿ ಬಾರವೇ? ಎನ್ನಿಸಿ ಶಾಕ್ ಹೊಡೆದದ್ದು ನಿಜ. ಅಂದಿನಿಂದ ನಾನು ಮತ್ತೆ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಮನಸ್ಸು ಮಾಡಿಲ್ಲ.

ಹೌದು, ನಮ್ಮ ಬೆಳವಣಿಗೆಯೇ ಹಾಗಿದೆ, ಹಾಗಿತ್ತು. ಶಾಲಾ ದಿನಗಳಲ್ಲಿ ನಮ್ಮೂರಿನ ಹಳ್ಳಿ ಬಯಲಿನಲ್ಲಿ ಕೊ ಎಜುಕೇಶನ್‌ ಇದ್ದ ಕಾರಣ ನಾವೆಲ್ಲರೂ ಮಧ್ಯಂತರ ವಿರಾಮ ಕಾಲದಲ್ಲಿ ಸಾಲಿನಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಿದ್ದೇ ನಮ್ಮಲ್ಲಿನ ಇಂಟಿಮಸಿ. ಅದನ್ನು ಬಿಟ್ಟರೆ ಬತ್ತಲಾಗುವುದೆಂದರೆ ಶಾಪ, ಅದೂ ತನ್ನ ಸಹಪಾಠಿಗಳೆದುರು, ಸಹೋದರ-ಸಹೋದರಿಯರ ಎದುರು, ಊಹ್ಞೂ ಸಾಧ್ಯವಿಲ್ಲದ ಮಾತು. ಹಾಗಿದ್ದ ಮೇಲೆ, ಇನ್ನು ಸ್ಟ್ರೇಂಜರ್ಸ್ ಎದುರು ಬತ್ತಲಾಗುವುದಕ್ಕೆ ಸಂಕೋಚವೇಕೆ ಎಂದು ಪ್ರಶ್ನೆ ಎದ್ದಿದ್ದೂ ಸಹಜ. ಆದರೆ, ಸಾರ್ವಜನಿಕವಾಗಿ ಬತ್ತಲಾಗುವುದು ಖಂಡಿತವಾಗಿ ಸಲ್ಲದ ನಡವಳಿಕೆ, ಅದು ನನ್ನ ಕಲ್ಪನೆಯಲ್ಲಂತೂ ಈವರೆಗೆ ಬಂದೇ ಇಲ್ಲ ಎನ್ನಬಹುದು.

ಸೆಪ್ಟೆಂಬರ್ ಹನ್ನೊಂದರ ನಂತರ ಬಿಗಿಯಾದ ಭದ್ರತಾ ವ್ಯವಸ್ಥೆಯಲ್ಲಿ ಒಂದು ಕೋಮಿನವರನು ಬೆತ್ತಲೆ ಸರ್ಚ್ ಮಾಡುವುದರ ಬಗ್ಗೆ ಕೇಳಿದ್ದೇನೆ. ತಮ್ಮ ಬಗಲಿನ ಚೀಲದಲ್ಲಿರುವ ಕುರ್ ಆನ್ ಪುಸ್ತಕವನ್ನು ಪೋಲೀಸ್ ನಾಯಿಗಳು ಮೂಸುವುದನ್ನು ತಪ್ಪು ಎಂದುಕೊಂಡ ಮನಸ್ಥಿತಿಗಳ ಬಗ್ಗೆ ಕೇಳಿದ್ದೇನೆ. ನನ್ನ ಹಾಗೆ ನನ್ನ ಹಿನ್ನೆಲೆಯಲ್ಲಿಂದ ಬಂದಿರುವವರು ಸಾರ್ವಜನಿಕವಾಗಿ ಬೆತ್ತಲಾಗದಿರುವುದನ್ನು ಅನೋಮೋದಿಸುವುದನ್ನು ನೋಡಿದ್ದೇನೆ. ಹೀಗಿರುವಲ್ಲಿ ನಾವಿರುವ ಪರಿಸರ ಹೊಸದಾದರೂ, ಏಕ್ ದಂ ನಮಗೆಲ್ಲ ಇಲ್ಲಿನ ರೀತಿ-ರಿವಾಜುಗಳಿಗೆ ಹೊಂದಿಕೊಳ್ಳಿ ಎನ್ನುವುದು ಹೇಳಲು ಮಾತ್ರ ಚೆಂದ, ಆಚರಿಸಲು ಅಷ್ಟೇ ಕಷ್ಟ ಎನ್ನುವುದಕ್ಕೆ ನನ್ನದೇ ಉದಾಹರಣೆ ತೆಗೆದುಕೊಳ್ಳಿ - ಇಂದಿಗೂ ಸಾರ್ವಜನಿಕವಾಗಿ ಬತ್ತಲಾಗುವುದನ್ನು ಮನಸ್ಸು ಒಪ್ಪದು.

***

ಆಫೀಸಿನಲ್ಲಿ ನನ್ನ ಸಮವಯಸ್ಕ, ಈಗಾಗಲೇ ಅಮೇರಿಕದ ಸಿಟಿಜನ್‌ಶಿಪ್ ಪಡೆದುಕೊಂಡು ನಮ್ಮ ಆಫೀಸಿನ ವ್ಯಾಪ್ತಿಯಲ್ಲೆ ಇರುವ ಫಿಟ್‌ನೆಸ್ ಸೆಂಟರ್ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕಟ್ಟು ಮಸ್ತಾಗಿರುವ ಪರಾಗ್ ನನ್ನನ್ನು ಒತ್ತಾಯ ಮಾಡಿ ಸುಮ್ಮನೆ ವಿಸಿಟ್‌ಗೆಂದು ಫಿಟ್‌ನೆಸ್ ಸೆಂಟರ್‌ ಅನ್ನು ನೋಡಲು ಕಳೆದ ವಾರ ಕರೆದುಕೊಂಡು ಹೋದ. ಮತ್ತೆ ಅದೇ - ಮಟ ಮಟ ಮಧ್ಯಾಹ್ನ ಮೈ ಬಗ್ಗಿಸಿ ವ್ಯಾಯಾಮ ಮಾಡಿದ ಪ್ರಯುಕ್ತ ಅನೇಕರು ಸ್ನಾನದ ಕೋಣೆಗಳಿಂದ ಬೆತ್ತಲೆ ಓಡಾಡಿಕೊಂಡಿದ್ದರು ತಮ್ಮ ಸುತ್ತು ಮುತ್ತಲೂ ಏನೂ ಯಾರೂ ಇಲ್ಲವೇ ಇಲ್ಲ ಎನ್ನೋ ಹಾಗೆ. ನನಗಂತೂ ಒಂದು ರೀತಿಯ ಅಸಮಧಾನ, ಕಸಿವಿಸಿ - ಅದೇನೋ ಹೇಳಿಕೊಳ್ಳಲಾಗದ ಕಷ್ಟ... ’ನಿನಗೂ ಇವತ್ತಲ್ಲ ನಾಳೆ ರೂಢಿಯಾಗುತ್ತೆ!’ ಎನ್ನುವ ಪರಾಗ್‌ನ ಧ್ವನಿಗೆ ನನ್ನನ್ನು ಸಮಾಧಾನ ಮಾಡಲಾಗಲಿಲ್ಲ. ನಾನೋ ಇನ್ನೆಂದೂ ಇಲ್ಲಿ ಕಾಲಿಡಬಾರದು ಎಂದುಕೊಳ್ಳುತ್ತಲೇ ಅಲ್ಲಿಂದ ಕಂಬಿಕಿತ್ತೆ.

ಸಾರ್ವಜನಿಕವಾಗಿ ಬೆತ್ತಲಾಗದ, ಸಾರ್ವಜನಿಕವಾಗಿ ಬೆತ್ತಲನ್ನು ನೋಡದ ಕತ್ತಲ ಮನಸ್ಥಿತಿಗೆ ಒಂದಿಷ್ಟು ಬೆಳಕು ಚೆಲ್ಲೋಣ: ನನ್ನ ಮನಸ್ಸಿನಲ್ಲಾಗಲೀ, ನನ್ನ ಹಾಗೆ ಆಲೋಚಿಸುವವರ ಮನಸ್ಸಿನಲ್ಲೇನಿದೆ? ನಾವು ಏಕೆ ಈ ರೀತಿ ಆಲೋಚಿಸುತ್ತೇವೆ. ಅದರ ಹಿನ್ನೆಲೆ ಏನು? ಸಭ್ಯತೆ, ಸಂಸ್ಕೃತಿಗಳ ಚೌಕಟ್ಟಿನಲ್ಲಾಗಲೀ, ಅಥವಾ ನಾವು ಬೆಳೆದು ಬಂದ ರೀತಿಯನ್ನು ಶೋಧಿಸಿ ನೋಡಿದರೆ ಈ ರೀತಿಯ ಮನಸ್ಥಿತಿಗೆ ತಕ್ಕ ಉತ್ತರ ಸಿಗುತ್ತದೆ.

ನೀನು ಹಾಲು ಕುಡಿದು ಮಲಗದೇ ಇದ್ದರೆ ಗುಮ್ಮನನ್ನು ಕರೆಯುತ್ತೇನೆ ಎಂದು ಹೆದರಿಸುವ ಅಮ್ಮನ ಧ್ವನಿಯಿಂದ ನಮ್ಮ ನೆರೆಹೊರೆಯಲ್ಲಿನ ಕತ್ತಲು-ಬೆಳಕುಗಳ ಮೇಲೆ ನಮ್ಮ ಅವಲಂಭನೆ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ’ಶೇಮ್-ಶೇಮ್, ಸ್ವಲ್ಪವೂ ಇವನಿಗೆ ಸ್ವಲ್ಪ ನಾಚಿಕೆ-ಮಾನ-ಮರ್ಯಾದೆ ಅನ್ನೋದೇ ಇಲ್ಲ, ಎಲ್ಲರ ಎದುರಿಗೆ ಹೀಗೆ ಬೆತ್ತಲೆ ಬಂದಿದ್ದಾನೆ!’ ಎನ್ನುವ ಮಾತುಗಳು ಮುಗ್ಧ ಮನಸ್ಸಿನ ಮೇಲೆ ಅವುಗಳ ಪ್ರಭಾವವನ್ನು ಮಾಡುತ್ತವೆ. ಬಸ್‌ಸ್ಟ್ಯಾಂಡಿನ ಆವರಣಗಳಲ್ಲಿ ಸಿಗುವ ಅರೆಬೆತ್ತಲೆ ಭಿಕ್ಷುಕರೂ, ಅಲ್ಲಲ್ಲಿ ಹುಚ್ಚು ಹಿಡಿದು ಅಲೆಯುವ ಬೆತ್ತಲೆ ಹುಚ್ಚರೂ ನೆನಪಾಗಿ ಒಂದು ಹೀನ ಸ್ಥಿತಿಗೆ ತಳಪಾಯವಾಗುತ್ತಾರೆ. ಇನ್ನು ನಮ್ಮ ಭಾರತೀಯ ನೆಲೆಯಲ್ಲಿ ಬೆತ್ತಲೆ ಇರುವವರೆಂದರೆ ಯಾರು? ಆದಿವಾಸಿಗಳು, ಕಾಡಿನಲ್ಲಿ ಬದುಕುವವರು, ಮೊದಲಾದ ವಿಭಿನ್ನ ಸಂಸ್ಕೃತಿಯ ಜನರು. ಈ ಮನಸ್ಸಿನ ಮೂಲದ ನಾವುಗಳು ಹತ್ತು-ಹದಿನೈದು ವರ್ಷಗಳ ಹಿಂದೆ ಆಧುನಿಕ ಫಿಟ್‌ನೆಸ್ ಸೆಂಟರ್‍ಗೆ ಬೆಂಗಳೂರು-ಮದ್ರಾಸ್ ವಾತಾವರಣದಲ್ಲಿ ಹೋಗಿದ್ದೂ ಇಲ್ಲ, ಅಲ್ಲೂ ಇಂದು ಪರಿಸ್ಥಿತಿ ಬದಲಾಗಿದೆ ಎಂದು ಹೇಳುವ ಪರಾಗ್‌ನ ಮಾತುಗಳು ನಂಬಲೂ ಕಷ್ಟವಾಗುತ್ತಿರುವುದಕ್ಕೆ ಸಾಕಲ್ಲವೇ ಇಷ್ಟು ಕಾರಣಗಳು?

***

ಬೆತ್ತಲಾಗದ ನಮ್ಮ ಮನಸ್ಸಿನ ಹಿಂದಿನ ಕಾರಣಗಳೇನು? ನಾವೂ ಈ ರೀತಿ ಇಲ್ಲಿನವರಂತೆ ಬದಲಾಗಬೇಕೇ? ಎಲ್ಲರೊಳಗೊಂದಾಗದ ಮನಸ್ಸಿನಲ್ಲೇ ಮಂಡಿಗೆ ತಿಂದುಕೊಂಡು ನಮ್ಮ ಪ್ರಪಂಚದ ಖುರ್ಚಿ ಮೇಜಿಗೆ ಸಂಬಂಧವನ್ನು ಗಟ್ಟಿಯಾಗಿ ಬೆಳೆಸಿಕೊಂಡು ಜೊತೆಗೆ ದಿನೇದಿನೇ ಬೊಜ್ಜನ್ನು ಹೆಚ್ಚಿಸಿಕೊಳ್ಳುವ ಬತ್ತಲಾಗದ ನಮ್ಮ ಮನಸ್ಸಿನ ಕತ್ತಲೆಗೆ ಕನ್ನಡಿ ಹಿಡಿಯುವವರಾರು? ಅಥವಾ ಇಲ್ಲಿಗೆ ಬಂದು ನಮ್ಮ ತನವೆಲ್ಲ ದಿನೇದಿನೇ ಕಳೆದುಕೊಂಡು ಹೋಗುತ್ತಿರುವ ಹಾಗೆ ಇದೂ ಒಂದು ಬಿಹೇವಿಯರ್ ಅನ್ನು ಬದಲಾಯಿಸಿಕೊಳ್ಳದೇ ಹಾಗೇ ಇದ್ದರೆ ಏನಾದೀತು?