Showing posts with label ಈ ವರ್ಷ. Show all posts
Showing posts with label ಈ ವರ್ಷ. Show all posts

Monday, June 08, 2020

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...


ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...ಹೀಗೆನಿಸಿದ್ದು ನಮ್ಮ ಇತ್ತೀಚಿನ ಸ್ಟಾಕ್ ಮಾರ್ಕೆಟ್ ಮತ್ತು ಎಕಾನಮಿ ಇವುಗಳನ್ನು ಗಮನಿಸಿದಾಗಿನಿಂದ.  ಕೊರೋನಾ ವೈರಸ್ಸಿನ ಕೃಪೆಯಿಂದ ಎಷ್ಟೊಂದು ಜನರು ನಿರುದ್ಯೋಗಿಗಳಾಗಿದ್ದಾರೆ, ಎಷ್ಟೋ ಉದ್ಯಮಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.  ಇನ್ನು ಎಷ್ಟೋ ಸೆಕ್ಟರುಗಳು ಚೇತರಿಸಿಕೊಳ್ಳಲಾರದ ಮಟ್ಟಕ್ಕೆ ದೈನ್ಯ ಸ್ಥಿತಿಯನ್ನು ತಲುಪಿರುವಾಗ, ಇವತ್ತಿನ ಸ್ಟಾಕ್ ಮಾರ್ಕೆಟ್ಟಿನ ಪ್ರತಿಕ್ರಿಯೆಯನ್ನು ನೋಡಿದರೆ ಒಂದಕ್ಕೊಂದು ತಾಳೆಯಂದಂತೆನಿಸುವುದಿಲ್ಲ, ಅಲ್ಲವೇ?

ಎಕಾನಮಿ ಹದಗೆಟ್ಟಿದೆ, ಇನ್ನು ಚಿಗುರಿಕೊಳ್ಳಲು ಹಲವು ತಿಂಗಳುಗಳೇ ಬೇಕು, ವಿಶ್ವದಾದ್ಯಂತ ಎಲ್ಲ ಕಡೆಗೆ ರಿಸೆಶ್ಶನ್ನು ಎಂದು ನೀವು ಬೇಕಾದಷ್ಟು ಕಡೆ ಓದಿರುತ್ತೀರಿ, ಕೇಳಿರುತ್ತೀರಿ.  ಆದರೆ, ಇದನ್ನೆಲ್ಲ ಬದಿಗಿಟ್ಟು ವಿಶ್ವದಾದ್ಯಂತ ಮುಖ್ಯ ಮಾರುಕಟ್ಟೆಗಳು ತಮ್ಮ ಸ್ಟಾಕ್ ಇಂಡೆಕ್ಸುಗಳನ್ನು ಕಳೆದ ಎರಡು ತಿಂಗಳ ಕುಸಿತದಿಂದ ಸಂಪೂರ್ಣ ಚೇತರಿಸಿಕೊಂಡಂತೆ ಕಾಣಿಸುತ್ತಿದೆ.  ಮಾರ್ಚ್ ತಿಂಗಳ ಕೆಳ ಮಟ್ಟದ ಸೂಚ್ಯಂಕಗಳು, ಎರಡು-ಮೂರು ತಿಂಗಳುಗಳಲ್ಲಿ V ಆಕಾರದ ರಿಕವರಿಯನ್ನು ಪಡೆದುಕೊಂಡಿವೆ, ಇದಕ್ಕೆ ಏನು ಕಾರಣವಿರಬಹುದು?

- ಬೇರೆ ಕಡೆಗೆ ಹೂಡಿಕೆ ಮಾಡಲಾರದೆ ಹೆಚ್ಚಿನ ರಿಟರ್ನ್‌ಗೋಸ್ಕರ ಸ್ಟಾಕ್ ಮಾರ್ಕೆಟ್ ನಂಬಿಕೊಂಡು ಹೆಚ್ಚು ಹೆಚ್ಚು ಹಣ ಹೂಡುವ ಶ್ರೀಮಂತರು ಇನ್ನೂ ಇರಬಹುದೇ?
- ಮೊದಲೆಲ್ಲ ಮನುಷ್ಯರು ಮಾಡುವ ಕೆಲಸವನ್ನು ಈಗೀಗ ಕಂಪ್ಯೂಟರುಗಳು (algo trading) ಮಾಡುತ್ತಿರುವುದರಿಂದ, ಅಂತಹ ಟ್ರೇಡಿಂಗ್ ಸಿಸ್ಟಂಗಳಲ್ಲಿ ಜನ ಸಾಮಾನ್ಯರ ಯಾವುದೇ ಎಮೋಷನ್‌ಗೆ ಬೆಲೆ ನೀಡುತ್ತಿಲ್ಲವೇ?
- ಸೊರಗಿದ ಆರ್ಥಿಕತೆ, ರಿಸೆಶನ್ ಇತರ ಪದಪುಂಜಗಳೆಲ್ಲ ಕೇವಲ ಬಡವರಿಗೆ ಮಾತ್ರ ಅನ್ವಯಿಸುವಂತಹವೇ?
- ಕೊಳ್ಳುಬಾಕತನದ ಕನ್ಸೂಮರುಗಳು ಇಲ್ಲದಿದ್ದರೂ ಈ ಸ್ಟಾಕ್ ಮಾರ್ಕೆಟ್ ಅನ್ನು ಯಾವುದೋ ಅವ್ಯಕ್ತ ಶಕ್ತಿಯೊಂದು [ವಿದೇಶಿ ಹೂಡಿಕೆ (foreign investment), ಸರ್ಕಾರೀ ಮಧ್ಯವರ್ತಿತನ (quantitative easing), ಪುನಃ ಕೊಳ್ಳುವಿಕೆ (trade buyback), ಇತ್ಯಾದಿ] ಮುನ್ನಡೆಸುತ್ತಿರಬಹುದೇ?

ಈ ವರ್ಷ, ಬೆಳೆಯುವ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರಿಗೂ ಹೊಸ ಬಟ್ಟೆ ಬೇಕಾಗಿರಲಾರದು.  ಎಲ್ಲರ ಸಮ್ಮರ್ ವೆಕೇಶನ್ ಕೂಡ ಒಂದಲ್ಲ ಒಂದು ರೀತಿಯಿಂದ ಕೊರೋನಾ ವೈರಸ್ಸಿನ ಪ್ರಭಾವಕ್ಕೆ ಒಳಗಾಗಿದೆ.  ಮುಂದೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಅಮೇರಿಕದಲ್ಲಿ ಶಾಲೆಗಳು ತೆರೆಯದೇ ಮಕ್ಕಳು ಮನೆಯಲ್ಲೇ ಇದ್ದರೆ, ಬ್ಯಾಕ್-ಟು-ಸ್ಕೂಲ್ ಖರೀದಿಗೂ ದಕ್ಕೆಯಾಗುತ್ತದೆ.  ಜನರು ಕಡಿಮೆ ಡ್ರೈವ್ ಮಾಡುತ್ತಿದ್ದಾರೆ, ಹೆಚ್ಚಿನ ಕಾರುಗಳನ್ನು ಕೊಳ್ಳುತ್ತಿಲ್ಲ.  ಕಾರುಗಳು ರೀಪೇರಿಗಾಗಲೀ, ಸರ್ವೀಸಿಗಾಗಲೀ ಬರುತ್ತಿಲ್ಲ.  ರೆಸ್ಟೋರಂಟುಗಳಿಗೆ ಜನರು ಹೋಗುವುದು ಕಡಿಮೆಯಾಗಿದೆ.  ಜನರ ತಿಂಗಳ ಖರ್ಚು ಕನಿಷ್ಠ ಪ್ರಮಾಣಕ್ಕೆ ಬಂದು ನಿಂತಿದೆ.  ಇನ್ನು ಏರ್‌ಲೈನ್ಸ್ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ನೆನೆಗುದ್ದಿಗೆ ಬಿದ್ದಿದೆ. ಹೀಗೆ, ರೀಟೈಲ್-ಹೋಲ್‌ಸೇಲ್ ಎಲ್ಲ ಖರೀದಿಗಳೂ ಸಹ ಕಷ್ಟಕ್ಕೆ ಒಳಗಾಗಿ ಸೊರಗಿವೆ.  ಹಾಗಿದ್ದರೆ, ಇವುಗಳೆಲ್ಲದರ ಒಟ್ಟು ಹೊಡೆತ ಸ್ಟಾಕ್ ಮಾರ್ಕೆಟ್ಟಿನ ಮೇಲೆ ಒಂದಲ್ಲ ಒಂದು ರೀತಿಯಿಂದ ಆಗಲೇ ಬೇಕಲ್ಲವೇ?

ಒಂದು ವರದಿಯ ಪ್ರಕಾರ, ಅಮೇರಿಕದಲ್ಲಿ ನೂರಕ್ಕೆ ಐವತ್ತೈದು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೂಡಿಕೆ ಮಾಡುತ್ತಾರೆ.  ಈ ರೀತಿ ಹೂಡಿಕೆ ಮಾಡುವವರಲ್ಲಿ individual (retail) traders ಮತ್ತು institutional traders ಎಂದು ಎರಡು ರೀತಿಯವರನ್ನು ಗುರುತಿಸಬಹುದು.  ರೀಟೈಲ್ ಟ್ರೇಡರ್ಸ್ ತಮ್ಮ ಚಿಕ್ಕ ಚಿಕ್ಕ ಪೋರ್ಟ್‌ಫೋಲಿಯೋ ಗಳನ್ನು ಸ್ವಯಂ ಮ್ಯಾನೇಜು ಮಾಡುತ್ತಾರೆ, ಹೆಚ್ಚಿನವರು ಹಣ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಿರುವ ವಿಷಯ.  ಆದರೆ, Institutional traders ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ ಬಿಲಿಯನ್ ಗಟ್ಟಲೆ ಲಾಭಗಳಿಸುತ್ತಾರೆ... ಇವರ ಪ್ರಮಾಣ ಸಾವಿರದಲ್ಲಿ ಒಬ್ಬರ ಲೆಕ್ಕ. ಇಂಥ ಶ್ರೀಮಂತರು ಎಂತಹ ಎಕಾನಮಿ ಇದ್ದರೂ ಅದರಲ್ಲಿ ಲಾಭಗಳಿಸುವ "ತಂತ್ರ" ಉಳ್ಳವರಾಗಿರುತ್ತಾರೆ.  ಇವರಿಗೆ ಸಾಧಾರಣವಾಗಿ ಯಾವುದೇ ರೀತಿಯಲ್ಲಿ ಹೊಡೆತ ಬೀಳದಂತೆ ತಮ್ಮ ಪೋರ್ಟ್‌ಫೋಲಿಯೋಗಳಲ್ಲಿ ಹೆಡ್ಜ್ (hedge) ಮಾಡಿರುತ್ತಾರೆ.

ಈಗ ಈ ಎಲ್ಲ ವಿವರಗಳನ್ನಿಟ್ಟುಕೊಂಡು (ನಿಜವನ್ನು) ಯೋಚಿಸಿದರೆ, ಇಲ್ಲಿನ ಸ್ಟಾಕ್ ಮಾರ್ಕೆಟ್ಟುಗಳನ್ನು drive ಮಾಡುವವರು ಎಂಬುದು ನಿಮಗೆ ಗೊತ್ತಾಗುತ್ತದೆ.  ಒಂದು ಕಡೆಗೆ ಜನರ pension funds ಮತ್ತಿತರ long term investment ಗಳಿಗೆ ಕಾಲಕ್ರಮೇಣ ಹೂಡಿಕೆ ಮಾಡುವುದರ ಅಗತ್ಯ ಯಾವತ್ತೂ ಇದ್ದೇ ಇರುವಾಗ ಮಾರುಕಟ್ಟೆಗೆ ನಿಧಾನವಾಗಿ ಹಣ ಬರುತ್ತಲೇ ಇರುತ್ತದೆ.  ಮತ್ತೊಂದು ಕಡೆಗೆ, ಹಣವುಳ್ಳವರು ಇನ್ನೂ ಶ್ರೀಮಂತರಾಗುವ ಅನೇಕ ಸೌಲಭ್ಯಗಳ ವರದಾನವೇ ಅವರಿಗೆ ಸಿಗುತ್ತದೆ.   ಈ ಎಲ್ಲದರ ನಡುವೆ ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಪ್ರತಿದಿನದ ತಿಣುಕಾಟ-ಗೊಣಗಾಟಗಳು ಹಾಗೆ ಮುಂದುವರೆಯುತ್ತವೆ.  ಕಷ್ಟದ ಕಾಲದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ.  ಪ್ರಪಂಚದಾದ್ಯಂತ ನೀವು ಯಾವುದೇ ದೇಶವನ್ನು ಯಾವುದೇ "ಇಸಂ" (ism) ಮಸೂರದಲ್ಲಿ ನೋಡಿದರೂ ಎಲ್ಲ ಒಂದೇ ರೀತಿಯಲ್ಲಿ ಕಾಣುತ್ತದೆ!

Tuesday, May 26, 2020

ಮತ್ತೆ ಬಾ ಕರೋನಾ...


ಇಂದಲ್ಲ ನಾಳೆ ನಮ್ಮವರಿಗೆಲ್ಲ ತಿಳಿ ಹೇಳುವುದಕ್ಕಾಗಿ
ಇಂದು ತಿಳಿಯದ ಮಂದಿಗೆ ತಿದಿಯ ತಿವಿದು
ಬಗ್ಗಿದರೂ ಬಾಗದ ಜನರ ನಡುವಿಗೆ ಒದೆದು
ಸರಳ ಸೂತ್ರವನು ಎಲ್ಲರಲ್ಲೂ ಅಳವಡಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ವಿಶ್ವ ಜೀವ ಸಂಕುಲಗಳನ್ನೆಲ್ಲ ಕಡೆಗಣಿಸಿ ದುಡಿಸಿದ್ದಕ್ಕಾಗಿ
ಹಡೆದವ್ವನ ಕೆಡವಿ ಸಲಹದವರಿಗೆ ನೀರು ಕುಡಿಸಿ
ಅವರವರ ಹೊಟ್ಟೆಯಲ್ಲಿರುವ ವಿಷವ ಕಕ್ಕಿಸಿ
ಎಲ್ಲರೆದೆಯೆಲ್ಲೂ ಸಾವಿನ ಭಯವ ಹುಟ್ಟಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ಜೀವ ಜಂತುಗಳ ಸಂಹರಿಸಿ ತಮ್ಮ ಸಂತತಿ ಬೆಳೆಸಿದ್ದಕ್ಕಾಗಿ
ಮುಗಿಲಿನಲ್ಲೂ ತಮ್ಮ ಕಚಡವನ್ನು ಹರಡುವ
ನೆಲದಾಳವನ್ನು ಬಗೆದು ತಮ್ಮ ದಾಹ ತೀರಿಸಿಕೊಳ್ಳುವ
ನಮಗೆ ಕ್ಷುದ್ರ ಜೀವಿಗಳಿಂದ ಬದುಕಿನ ಪಾಠ ಕಲಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ವಸುಧೈವ ಕುಟುಂಬದ ನಿಜ ಮೌಲ್ಯ ಬಿತ್ತರಿಸುವುದಕ್ಕಾಗಿ
ಕಣ್ಣೀರಲ್ಲಿ ಕೈ ತೊಳೆಯುವರಿಗೆ ಸಮತೆಯ ಸಾರುತ
ಹೊಟ್ಟೆಯ ಬೆಂಕಿಯನು ನೀಗಿಸಲು ಹಾರಾಡುತ
ಅಸಮಾನತೆಯಲ್ಲಿ ತೂಗುವವರ ಸಮಾಧಾನದ ಹಾಡಾಗಿ...

ಮತ್ತೆ ಬಾ ಕರೋನಾ...
ಎಲ್ಲವನೂ ಸ್ತಬ್ಧ ಸ್ತಂಬೀಭೂತಗೊಳಿಸುವುದಕ್ಕಾಗಿ
ಓಡುವುದನ್ನೇ ಬದುಕಾಗಿಸಿಕೊಂಡವರ ತುಸು ನಿಲ್ಲಿಸಿ
ಜೀವ ಜಲ ವಾಯು ಸುತ್ತಲಿನ ಪ್ರಕೃತಿಯನ್ನು ಲಾಲಿಸಿ
ಎಲ್ಲರಿಗೂ ಮತ್ತೆ ಮತ್ತೆ ಬುದ್ಧಿ ಹೇಳುವುದಕ್ಕಾಗಿ|

ಮತ್ತೆ ಬಾ ಕರೋನಾ...  ಮತ್ತೆ ಬಾ ಕರೋನಾ...

Friday, May 08, 2020

ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

***
ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

***
ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

Saturday, April 12, 2014

... ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌‍ಗಳು...

ಬಹಳ ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ.

"ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ?" ಅಂತ ಲೋಕೋಭಿರಾಮವಾಗಿ ಕೇಳಿದೆ,

"ಏನಿಲ್ಲ, ಚೆನ್ನಾಗಿದ್ದೀನಿ, ಬೆಳೆ, ಕೊಯ್ಲು, ಎಲೆಕ್ಷನ್ನು ಅಂತೆಲ್ಲಾ ಸ್ವಲ್ಪ ಬ್ಯುಸಿ ಅಷ್ಟೇ...ನೀನ್ ಹೆಂಗಿದಿ? ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್"

"ನಮಿಗೇನ್ ಆಗತ್ತೆ, ನಾವೆಲ್ಲಾ ಚೆನ್ನಾಗೇ ಇದ್ದೀವಿ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ" ಅಂದೆ.

"ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ?" ಎಂದು ಕಾಳಜಿ ತೋರಿಸಿದ.

"ಅದೇನಿಲ್ಲ, ಲಾಸ್ಟ್ ಈಯರ್ ಮಾರ್ಕೆಟ್ಟುಗಳೆಲ್ಲ ಮೇಲ್ ಹೋಯ್ತಲ್ಲಾ, ಈ ವರ್ಷ ಒಂದಲ್ಲಾ ಒಂದು ಕಾರ್ಣ ಹಿಡಕೊಂಡು ಅವಕಾಶ ಸಿಕ್ಕಾಗೆಲ್ಲ ಕೆಳಗಡೆ ಬೀಳ್ತಾನೇ ಇವೆ. ಒಂದ್ಸರ್ತಿ ಚೈನಾದಲ್ಲಿ ಪ್ರಾಬ್ಲಮ್ಮು ಅಂತ ಬಿತ್ತು, ಇನ್ನೊಂದ್ಸರ್ತಿ ಎಮರ್ಜಿಂಗ್ ಮಾರ್ಕೇಟ್ಟಲ್ಲಿ ಪ್ರಾಬ್ಲಂ ಅಂತ ಬಿತ್ತು, ಮತ್ತೊಂದ್ ಸರ್ತಿ ರಷ್ಯಾದ ಪೂಟಿನ್ನ್ ದೆಸೆಯಿಂದ ಬಿತ್ತು...ಇನ್ನೂ ವರ್ಷ ಶುರುವಾಗಿ ಮೂರು ತಿಂಗಳು ಮುಗ್ದು ನಾಕಕ್ಕೆ ಬಿತ್ತು - ಆಗ್ಲೆ ನಾಕ್ ಸರ್ತಿ ಮಗುಚಿಕೊಂತು ನೋಡು..." ಎಂದು ಸಿಎನ್‌ಬಿಸಿ ಡಾಮಿನಿಕ್ ಚು ಥರ ನನ್ನ ಸ್ಟಾಕ್ ಮಾರ್ಕೆಟ್ ತತ್ವವನ್ನು ಅರುಹಿದೆ.

ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, "ಅಲ್ಲಾ ಮಾರಾಯಾ, ಆ ಪುಟಿನ್ ನೋಡು, ಹೆಂಗ್ ಗೆದ್ಕೋಂಬಿಟ್ಟಾ, ಕ್ರಿಮಿಯಾ ಅಂತಾ ಅಲ್ಲಿಗೇ ನಿಲ್ಲುಸ್ತಾನೋ, ಅಥವಾ ಇನ್ನೂ ತನ್ನದೇ ದೊಡ್ಡು ಅಂತ ಮಂತ ಶುರು ಹಚ್ಗೊಂತಾನೋ?"
"ಅವ್ನು ಏನ್ ಮಾಡ್ತಾನೋ ಕಾಣೇ, ಆದ್ರೆ ನಮ್ ಕಡೆಯವ್ರು ಸ್ಯಾಂಕ್ಷನ್ನು, ಗೀಂಕ್ಷನ್ನು ಅಂತ ಫೋರ್ಸ್ ಹಾಕ್ತಾನೇ ಅವ್ರೆ" ಅನ್ನೋಷ್ಟರಲ್ಲಿ,

"ಏ ಸುಮ್ನಿರೋ, ನಿಮ್ ಸ್ಯಾಂಕ್ಷನ್ನುಗಳ ಮುಖಾ ನೋಡ್ಕೊಂಡು ಅದುಮಿಕ್ಯಂಡ್ ಇರೋಕೇ ಅವ್ನೇನು ಸದ್ದಾಮ್ ಹುಸೇನ್ ಕೆಟ್ಟೋದ್ನೇ? ಒಂದ್ಸರ್ತಿ ಕಮ್ಯುನಿಷ್ಟ್ ಆದ್ರೇ ಯಾವಾಗ್ಲೂ ಕಮ್ಮುನಿಷ್ಟೇ ತಿಳಕಾ" ಎಂದು ಅವನ ಪ್ರಪಂಚದ ಇತಿಹಾಸದ ಪ್ರಹಸನವನ್ನು ನಿವೇದಿಸಿದ.

ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊಂಡು, ನಿಧಾನವಾಗಿ ಟಾಪಿಕ್ ಬದಲಾಯಿಸಿದೆ, "ಹೌದು, ಅಡಿಕೆ ಬೆಳೆ ಬಂಪರ್ ಬಂದಿದೆ ಅಂತ ಕೇಳ್ದೆ, ಹೆಂಗಿದೆ ವ್ಯವಹಾರ?"

"ಕೆಂಪ್ ಅಡಿಕೆಗೆ ಸ್ವಲ್ಪ ಬೆಲೆ ಬಂದ್ ನಾವ್ ಬಚಾವಾದ್ವಿ, ಇಲ್ಲಾಂದ್ರೆ ಈ ವರ್ಷ ಬಾಳ ಕಷ್ಟ ಇತ್ತು. ಎಲ್ಲ ಕಡೆ ಬೆಲೆ ಜಾಸ್ತಿ, ದುಡ್ಡೀಗ್ ಬೆಲೇನೇ ಇಲ್ಲ, ಹೆಂಗ್ ನಮ್ ಜೀವ್ನ ನಡೀತಾ ಇದೆ ಅಂತ ಬಿಡಿಸಿ ಹೇಳೋದೇ ಕಷ್ಟಾ"

"ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬಿಟ್ಟು, ನೀನು ಒಂದಿಷ್ಟು ಎಲೆಕ್ಷನ್ನ್ ಟೈಮಲ್ಲಿ ಕಾಸ್ ಮಾಡ್ಕೊಳ್ಳೋದಪ್ಪಾ"

"ಏ ಸುಮ್ನಿರೋ ಮಾರಾಯಾ, ಇವರು ಕೊಡೋ ಎಂಜಲು ಕಾಸಿಗೆ ನಾವ್ ಕೈ ಚೆಲ್ಲಿಕೊಂಡು ಕೂತ್ರೆ ತೋಟದ ಕೆಲ್ಸಾ ಎಲ್ಲಾ ಮಠ ಹತ್ತ್ ಹೋಗುತ್ತೆ, ಅದರ ಸವಾಸ ಅಲ್ಲ..."


"ಏ ಯಾಕೋ ಹಂಗಂತಿ? ನಾನು ಎಲೆಕ್ಷನ್ನ್ ಕಮೀಷನ್ನ್ ವೆಬ್ ಸೈಟ್ ನೋಡಿದ್ನಪ್ಪಾ, ಒಂದೊಂದು ಕ್ಯಾಂಡಿಡೇಟ್‌ಗಳು ಫೈಲ್ ಮಾಡಿರೋ ಅಫಿಡೇವಿಟ್ಟ್ ನೋಡಿದ್ರೆ, ಎಲ್ಲೆಲ್ಲೂ ಕೋಟಿ ಕೋಟೀ, ಎಲ್ಲಿಂದ ಬಂತೋ ಇವುಗಳ್ ಹತ್ರ ಇಷ್ಟೊಂದು? ಒಬ್ಬೊಬ್ರ ಹತ್ರ ನೂರು, ಸಾವಿರ ಕೋಟಿ..." ಎಂದು ನಿಜವಾಗಿ ಆಶ್ಚರ್ಯ ವ್ಯಕ್ತಪಡಿಸಿದೆ.

"ಅದೇ ನಿಜವಾದ ಮರ್ಮ ನೋಡು. ಎಷ್ಟೋ ಜನ ನೆಟ್ಟಗೆ ಹೈಸ್ಕೂಲೂ ಪಾಸಾಗಿರಂಗಿಲ್ಲ, ಲೆಕ್ಕಕ್ಕೆ ತೋರಿಸಿರೋದೆ ಕೋಟಿಗಟ್ಟಲೆ ಅಂದ್ರೆ ಇನ್ನು ಒಳಗೆಷ್ಟು ಇಟ್ಟಿರಬಹುದು?"

"ಹಂಗಂದ್ರೆ ಇವುಗಳ ಮುಂದೆ ನಮ್ಮ ವಾರನ್ನ್ ಬಫೆಟ್ಟು, ಬಿಲ್ ಗೇಟ್ಸ್ ಇವ್ರೆಲ್ಲ ಲೆಕ್ಕಕ್ಕೇ ಇಲ್ಲ..." ಅಂತ ಲೇವಡಿ ಮಾಡಿದೆ, ಅವನು ಅದನ್ನು ನಿಜ ಅಂದುಕೊಂಡು,

"ಮತ್ತಿನ್ನೇನು, ಆ ಫೋರ್ಬ್ಸು, ಫಾರ್ಚೂನ್ ನವರಿಗೆಲ್ಲ ಇಂಡಿಯಾದ್ ಬಗ್ಗೆ ಒಂದು ವರದಿ ಮಾಡೋಕ್ ಹೇಳು, ನಮ್ಮಲ್ಲಿ ನಿಜವಾಗಿ ಎಷ್ಟು ದುಡ್ಡಿದೇ ಅಂತ ಗೊತ್ತಾಗುತ್ತೆ?"

"ಹಾಗಾದ್ರೆ, ನಮ್ ಅಮೇರಿಕದ ಬಿಲಿಯನ್ನುಗಳೆಲ್ಲ ಲೆಕ್ಕಕ್ಕೇ ಇಲ್ಲ ಅನ್ನು?" ಎಂದು ಮೂದಲಿಸಿದ್ದಕ್ಕೆ...

"ಗುರುವೇ, ನಿನಗೇನ್ ಗೊತ್ತಿದೆ ಹೇಳು, ಒಂಥರ ಇನ್ನೂ ಹೈಸ್ಕೂಲ್ ಹುಡುಗನಂಗೆ ಮಾತಾಡ್ತಿ ನೋಡು. ಕಳೆದ ವರ್ಷ ನಿನ್ನ ಅಮೇರಿಕದ ಇಂಡೆಕ್ಸ್‌ಗಳು ಅಬ್ಬಬ್ಬ ಅಂದ್ರೆ ಎಷ್ಟು ಪರ್ಸೆಂಟ್ ಮೇಲಕ್ಕ್ ಹೋದ್ವು ಹೇಳೂ, ಇಪ್ಪತ್ತೋ ಮೂವತ್ತೋ ಪರ್ಸೆಂಟ್ ತಾನೆ? ಕಳೆದ ಐದು ವರ್ಷದಲ್ಲಿ ಮಾರ್ಕೆಟ್ಟು ಕೆಳಗ್ ಬಿದ್ದದ್ದು ಡಬ್ಬಲ್ಲೋ ತ್ರಿಬ್ಬಲ್ಲೋ ಆಯ್ತಲ್ಲಾ? ಅದೇ ದೊಡ್ದು ತಾನೆ? ಹುಚ್ಚಪ್ಪಾ, ಕೇಳು...2009 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರ್‌ಗಳನ್ನ 2014 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರುಗಳಿಗೆ ಕಂಪೇರ್ ಮಾಡಿ ನೋಡು. ನಮ್ಮ ದೇಶದ ಒಬ್ಬೊಬ್ಬ ರಾಜಕೀಯ ನಾಯಕನ ಪರ್ಸನಲ್ಲ್ ಸ್ವತ್ತು ಅದೆಷ್ಟು ಸಾವಿರ ಪರ್ಸೆಂಟ್ ಬೆಳೆದಿದೆ ಅಂತ? ಒಂದ್ ಕೆಲ್ಸಿಲ್ಲ, ಉದ್ಯಮಾ ಇಲ್ಲಾ, ಹೇಳಿ-ಕೇಳಿ ಸಮಾಜ ಸೇವೆ ರಾಜಕೀಯದ ಕೆಲ್ಸ, ಎಲ್ಲಿ ನೋಡಿದ್ರೂ ಇನ್‌ಫ್ಲೇಷನ್ನ್ ಜಾಸ್ತಿ ಅಗಿರೋ ಹೊತ್ನಲ್ಲಿ ಅದ್‍ ಹೆಂಗೆ ಐದು ವರ್ಷದ ಹಿಂದೆ ಹತ್ತು ಕೋಟಿ ಡಿಕ್ಲೇರ್ ಮಾಡ್ದೋನು ಈ ಸರ್ತಿ ನೂರು ಕೋಟಿ ಡಿಕ್ಲೇರ್ ಮಾಡ್ತಾನೆ? ಅದನ್ನ್ ಯಾವ್ ಇಂಡೆಕ್ಸಿಗೆ ಹೋಲಿಸ್ತಿ?"

"ಹೌದೋ ಸುಬ್ಬಾ ಎಲ್ಲಿಂದ ಬರುತ್ತೆ ದುಡ್ಡು ಇವ್ರಿಗೆ? ಕೆಲವ್ರದ್ದಂತೂ 760, 800 ಕೋಟಿಗಳಷ್ಟು ಒಟ್ಟು ಮೊತ್ತ ಅಂತಲ್ಲಪ್ಪಾ?"

"ಏಳ್ನೂರು ಕೋಟಿ ಬಾಳಾ ಕಡಿಮೆ ಆಯ್ತು, ಇನ್ನೂ ಸಾವ್ರ ಸಾವ್ರ ಕೋಟಿಗಟ್ಟಲೇ ಇದ್ದೋರು ಇದಾರೆ, ತಿಳ್ಕಾ"

"ಮತ್ತೆ ಇವ್ರ ಹತ್ರ ಇಷ್ಟೊಂದು ದುಡ್ಡು ಇರೋರ್, ರಾಜಕೀಯಾನಾದ್ರೂ ಯಾಕ್ ಮಾಡ್ತಾರೆ, ಸುಮ್ನೆ ತಾವ್ ತಮ್ದು ಅಂತ ಇರಬಾರ್ದಾ?"

"ಅದೇ ವಿಶೇಷ ನೋಡು, ಅದು ನಿಮ್ಮಂತೋರಿಗೆ ಅರ್ಥ ಆಗಲ್ಲ, ಯಾರು ರಾಜಕೀಯಕ್ಕ್ ಬರ್ತಾರೆ ಅಂತ ತಿಳಕಂಡೀ? ದುಡ್ಡ್ ಇಲ್ದೋನ್ ದುಡ್ಡು ಮಾಡೋಕ್ ಬರ್ತಾನೆ, ದುಡ್ಡ್ ಮಾಡ್ದೋನ್ ಅದನ್ನ ಉಳಸ್ ಕೊಳೋಕ್ ಬರ್ತಾನೆ".

"ಅಲ್ಲಾ ಮಾರಾಯಾ, ನಾವ್ ಸುಮ್ನೇ ಊರೂ-ಕೇರೀ, ದೇಶ-ಮನೆ ಬಿಟ್ಟು ಅದನ್ನ ಇದನ್ನ ಓದಿ, ಇತ್ಲಾ ಕಡೇ ಬಂದಿದ್ದೆಲ್ಲಾ ವೇಷ್ಟ್ ಆಯ್ತು ಅನ್ನು, ಸುಮ್ನೇ ಯಾವ್ದಾರ ಪಾರ್ಟಿ ಪಕ್ಷದ ಹೆಸ್ರು ಹಿಡಕೊಂಡ್ ಒಂದಿಪ್ಪತ್ತ್ ವರ್ಷ ಓಡಾಡಿದ್ರೆ ನಾವೂ ಕೋಟಿ-ಕೋಟಿ ಎಣಿಸ್ಬೋದಿತ್ತು..." ಈ ಮಾತಿನಿಂದ ಸುಬ್ಬನಿಗೆ ಸ್ವಲ್ಪ ಸಿಟ್ಟು ಬಂತು ಅಂತ ಅನ್ಸುತ್ತೆ, ನನ್ನ ಮಾತಿನ್ನ ಮಧ್ಯೆ ಹೀಗನ್ನೋದೇ,

"ಅವಾಗ ಇದು ಎಲ್ಲಿಗೆ ಬರುತ್ತೆ ಗೊತ್ತೇನೋ? ನಿನ್ನಂಥಾ ಎನ್ನಾರೈಗಳು ಒಂಥರಾ ಸಪ್ಪೆ ನಾಯ್‌ಗಳು ಇದ್ದಂಗೆ, ಇತ್ಲಾಗ್ ಬೊಗೊಳೋದೂ ಇಲ್ಲ, ಅತ್ಲಾಗ್ ಕಚ್ಚೋದೂ ಇಲ್ಲ. ನಾಯಿ ಅಂದ್ರೆ ನಾಯಿ ಇದ್ದ ಹಾಗೆ ಇರ್‌ಬಕು, ಇವೆಲ್ಲ ನಮಿಗ್ ಬ್ಯಾಡಾ ಅಂತ ಬಿಟ್ಟ್ ವಿರಾಗಿಗಳಾಗ್ ಹೋದ್‌ಮೇಲೆ ಅವಾಗವಾಗ ಇಂಥಾ ಚಿಂತಿ ಯಾಕ್ ಹಚ್‌ಗಂತೀರ್ ಹೇಳು? ಅದರಿಂದ ಏನ್ ಉದ್ದಾರಾಗಿದೆ? ಒಂದ್ಸರ್ತಿ ಮೂಡ್ ಬಂದಾಗ ದುಡ್ಡೇನು ಸರ್ವಸ್ವ ಅಲ್ಲಾ ಅಂತಾ ಬಾಷ್ಣಾ ಬಿಗೀತಿ, ಈಗ ಇಲೆಕ್ಷನ್ನ್ ಅಂಕಿ-ಅಂಶ ನೋಡ್ಕೊಂಡು ದುಡ್ಡೇ ದುಡ್ಡೂ ಅಂತೀ, ನಿನಗೂ ಈ ರಾಜಕಾರ್ಣಿಗಳಿಗೂ ಏನರ ವ್ಯತ್ಯಾಸ ಐತಾ?" ಎಂದು ಎಲೆ-ಅಡಿಕೆ ಹಾಕ್ಕೊಂಡು ಚೆನ್ನಾಗ್ ಉಗದಾ... ಆದ್ರೆ ನಾನು ಬಿಟ್ಟು ಕೊಡ್ಲಿಲ್ಲಾ,

"ನಿಮ್ದು ದೊಡ್ಡ ವ್ಯಾಪಾರೀ ಮನೋಭಾವ್ನೆ ದೇಶ, ನಿನ್ನಂಥೋರ್ ಹತ್ರ ತಪ್ಪೂ-ಸರಿ ಅಂತ ಏನ್ ಮಾತಾಡೋದ್ ಹೇಳು? ಭ್ರಷ್ಟಾಚಾರ ವ್ಯವಸ್ಥೆನಲ್ಲಿ ಪ್ರತಿ ಓಟಿಗೆ ಎರಡೆರಡು ಸಾವ್ರ ಅಂತ ಮಾರ್ಕೋಳ್ಳೋರು ನೀವು" ಅಂತ ನಾನು ಧ್ವನಿ ಜೋರು ಮಾಡಿದೆ,

’ನೋಡು, ಸುಖಾ ಸುಮ್ನೇ ಅನ್ನಬ್ಯಾಡ. ಭ್ರಷ್ಟಾಚಾರ ವ್ಯವಸ್ಥೇ ಎಲ್ಲಾ ಕಡೆ ಇದೆ, ನಿಮ್ಮಲ್ಲಿ ನಾಜೂಕಾಗಿ ಸಗಣೀನ ಫೋರ್ಕ್ ತೊಗೊಂಡ್ ತಿಂತೀರಿ, ಆ ಚೈನಾದವ್ರು ಚಾಪ್ ಸ್ಟಿಕ್ಕ್‌ನಲ್ಲಿ ತಿಂತಾರೆ, ಮತ್ತೊಂದ್ ಕಡೆ ಚಮಚಾದಲ್ಲಿ ತಿಂತಾರೆ, ಆದ್ರೆ ನಮ್ ಕಡೆ ಅವಕಾಶ ಸಿಕ್ಕಾಗ ನೀಟಾಗಿ ಕೈ ಹಾಕಿ ಕಲಸಿಗೊಂಡು ತಿಂತಾರೆ. ಅಲ್ಟಿಮೇಟ್ಲಿ ಅಂತಾ ಏನ್ ವ್ಯತ್ಯಾಸ ಇಲ್ಲ, ಎಲ್ಲಾ ಒಂದೇ"

"ಏನ್ ಅಂತ ಮಾತಾಡ್ತಿಯೋ, ಏನೇ ಆದ್ರೂ ಅಮೇರಿಕದ ಜನ ನಿಮ್ ಥರ ದುಡ್ಡಿಗ್ ಓಟ್ ಹಾಕೋದಿಲ್ಲ, ತಿಳಕಾ..."

"ನೀ ಏನ್ ಮಾತಾಡ್ತಿದಿಯೋ, ಇಷ್ಟು ವರ್ಷ ಅಲ್ಲಿದೀ, ಇಷ್ಟೋ ಗೊತ್ತಾಗಂಗಿಲ್ಲ ಅಂದ್ರೆ ಹೆಂಗೆ? ಗುರುವೇ ಎಲೆಕ್ಷನ್ನ್ ಕ್ಯಾಂಫೇನ್ ಫಂಡು ಅಂಥ ಕಾರ್ಪೋರೇಷನ್ನುಗಳು ಪಕ್ಷಕ್ಕೆ ಕೊಡೋ ದುಡ್ಡೂ ಎಲ್ಲಿಂದ ಬರುತ್ತೆ ಎಲ್ಲೀಗ್ ಹೋಗುತ್ತೆ?"

"ಅದು ಲೀಗಲೈಜ್ಡ್ ವ್ಯವಸ್ಥೆ ಅಲ್ವಾ..."

"ನಿನ್ ತಲೆ, ಲೀಗಲ್ಲು... ನಾವು ನಿಮ್ಮನ್ನ ಸಪೋರ್ಟ್ ಮಾಡ್ತೀವಿ ಅಂತ ಪಾರ್ಟಿಗಳಿಗೆ ದೇಣಿಗೆ ಕೋಡೋದರಲ್ಲಿ ಕಂಪನಿಗಳ ಸ್ವ ಇಚ್ಚೆ ಸ್ವಾರ್ಥ ಒಂದಿಷ್ಟೂ ಇಲ್ಲಾ ಅಂದ್ರೆ ಅವರ್ಯಾಕೆ ಕೊಡ್ತಾರೆ?"

"ಅದು ಕಂಪನಿಗಳ ಲೆಕ್ಕ, ನಮ್ಮ ಜನಸಾಮಾನ್ಯರದ್ದೇನು ಅದ್ರಲ್ಲಿ ಪಾತ್ರ ಇಲ್ಲ"

"ಥೂ ನಿನ್ನ, ಅದೇ ತಪ್ಪು, ನೀನು ಕಂಪನೀನಲ್ಲಿ ಇನ್ವೆಷ್ಟ್ ಮಾಡ್ದಿ ಅಂದ್ರೆ, ಅದ್ರಲ್ಲಿ ನೀನೂ ಶಾಮೀಲೂ ಅಂತ ತಾನೇ ಅರ್ಥ. ನಿನಗೆ ಬೇಕೋ ಬೇಡ್ವೋ ನೀನಿರೋ ವ್ಯವಸ್ಥೆ ನಿನ್ ಸುತ್ಲೂ ಸುತ್ತ್ ಕೊಳ್ಳೋದೇ ಮಾಡರ್ನ್ ಸೋಷಿಯಲ್ಲಿಸ್ಸಮ್ಮು ನೋಡು, ಒಂಥರಾ ಡೊಕೋಮೋ ಅಂಥ ನೆಟ್‌ವರ್ಕ್ ಕರೀತಾನೇ ಇರುತ್ತೆ ಎಲ್ಲ್ ಹೋದ್ರೂ ಬಿಡಂಗಿಲ್ಲ" ಎಂದು "ಡೊಕೋಮೋ..." ಅಡ್ವರ್ಟೈಸ್‌ಮೆಂಟ್ ಇಮಿಟೇಟ್ ಮಾಡಿ ಜೋರಾಗಿ ನಕ್ಕ.

"ಹಂಗಂದ್ರೆ ಎಲೆಕ್ಷನ್ನು ಅಂದ್ರೆ ಬರೀ ರೊಕ್ಕ ಇರೋರ್ ಆಟ ಅನ್ನು, ಇನ್ನು ಸಾಮಾನ್ಯರ ಪಾಲು ನಾಯಿ ಪಾಲು ?"

"ಇದು ಹೆಂಗೆ ಗೊತ್ತಾ, ಇದು ಬೈ ಡೆಫನಿಷನ್ ಯಾರು ಬೇಕಾದ್ರೂ ಭಾಗವಹಿಸೋ ಪ್ರಜಾಪ್ರಭುತ್ವ ವ್ಯವಸ್ಥೇನೇ, ಆದ್ರೆ ದುಡ್ಡಿರೋರು ದೊಡ್ಡಪ್ಪ ಅಷ್ಟೇ. ಒಂಥರಾ ಈ-ಟಿವಿ ಡ್ಯಾನ್ಸ್ ಪ್ರೋಗ್ರಾಂ ತಕಧಿಮಿತ ಬರುತ್ತಲ್ಲ ಹಂಗೆ, ಅವರ ಸ್ಲೋಗನ್ನ್ ಏನ್ ಹೇಳು? ’ಯಾರು ಬೇಕಾದ್ರು ಕುಣೀಬೋದು’ - ಆದ್ರೆ ನಾವು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡ್ತೀವಿ ಅಂತ ಹಂಗೆ.

"ಸರಿ ಬಿಡು, ಇನ್ನೇನು ಎಲೆಕ್ಷನ್ನು ಮುಗಿಯುತ್ತೇ, ಅಮೇಲೇ ಕುದುರೆ ವ್ಯಾಪಾರ ಶುರು, ಒಬ್ಬೊಬ್ಬ ಎಮ್ಮೆಲ್ಲೆಗಳನ್ನ ಎಂಪಿಗಳನ್ನ ಕೊಡೊ-ಕೊಳ್ಳೋ ಆಟ ನಡೆಯುತ್ತೇ" ಅಂದೆ,

"ಈ ಎಮ್ಮೆಲ್ಲೆಗಳನ್ನ ಹೆಂಗೆ ಕೊಳ್ತಾರೆ ಅನ್ನೋದಕ್ಕೆ ತೆಲುಗಿನಲ್ಲಿ ಲೀಡರ್ ಅಂತ ಒಂದು ಸಿನಿಮಾ ಇದೆ ನೋಡು, ಅದ್ರಲ್ಲಿ ಒಂದು ಫ್ಯಾಟ್ ಕೀ ಕೊಟ್ಟು ಅದ್ರಲ್ಲಿರೋ ಎಲ್ಲಾ ಬೀರು ಅಲ್ಮೇರಾಗಳಲ್ಲಿ ನೋಟುಗಳನ್ನ ತುಂಬಿ ಇಟ್ಟಿರ್ತಾರೆ, ಅಂತದನ್ನ ಬ್ಯಾಡ ಅನ್ನೋದಕ್ಕೆ ಬಾಳಾ ಗಟ್ಟಿ ಎದೆ ಬೇಕು, ಸೋ ಐ ಡೋಂಟ್ ಬ್ಲೇಮ್ ದೆಮ್"

"ಸರಿ, ಟೈಮ್ ಆಯ್ತು...ಈ ಎಲೆಕ್ಷನ್ನಲ್ಲಿ ನಿನ್ ಪ್ರಿಡಿಕ್ಷನ್ನ್ ಏನು, ಕರ್ನಾಟಕದಲ್ಲಿ ಯಾರ್ ಬರ್ತಾರೆ, ದೇಶದ ಚುಕ್ಕಾಣೀ ಯಾರ್ ಹಿಡೀತಾರೆ?"


"ನನ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಕಷ್ಟ, ಗಣಿ ದೊರೆಗಳ ಸವಾಸದಿಂದ ಬಾಳ ಗಬ್ಬಿಟ್ಟ್ ಹೋಗವ್ರೆ ನಮ್ ನಾಯಕ್ರು. ಅಲ್ದೇ ಆಳೋ ಪಕ್ಷದ ಪರವಾಗಿ ಕಾಂಗ್ರೆಸ್ ಮೆಜಾರಿಟಿ ಬರ್ಬೋದು. ಆದ್ರೆ ದೇಶದಲ್ಲಿ ಸ್ವಲ್ಪ ಮೋದಿ ಅಲೆ ನಡೀತಾ ಇದೆ. ಏನಾಗತ್ತೋ ಗೊತ್ತಿಲ್ಲ"

"ಮತ್ತೇ, ಆಪೂ... ಪಾಪೂ, ಇವೆಲ್ಲ?"

"ಏ, ತೆಗಿ ತೆಗಿ, ಆಪ್ ಬರ್ಬೇಕು ಅಂದ್ರೆ, ಇನ್ನೊಂದು ಇಪ್ಪತ್ತೈದು ವರ್ಷಾನಾದ್ರೂ ಬೇಕು, ಒಬ್ಬ ಕಪಾಳ ಮೋಕ್ಷದ ನಾಯಕನಿಂದ ಇಡೀ ದೇಶದ ರಾಜ್‌ಕಾರ್ಣ ಬದಲಾಗೋಕ್ಕೆ ಸಾಧ್ಯವೇ?"

"ಯಾಕ್ ಆಗ್‌ಬಾರ್ದು?"

"ಅದೇ ನಿಂಗೊತ್ತಾಗೋಲ್ಲ ಅನ್ನೋದು. ದುಡ್ಡಿಗೆ ಓಟ್ ಮಾರ್ಕೊಳ್ಳೋ ಜನರಲ್ಲಿ ಒಂಥರ ಎನ್‌ಟೈಟಲ್ಲ್‌ಮೆಂಟ್ ಬರುತ್ತೆ. ಅದ್ಕೇ ನಮ್ ಜನ ಗಾದೆ ಮಾಡಿರೋದು - ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡಾ - ಅಂತ" ಎಂದು ದೊಡ್ಡದಾಗಿ ನಕ್ಕ.

"ಮತ್ತೇನಪ್ಪಾ ಸಮಾಚಾರ..."

"ಮತ್ತೇನಿಲ್ಲ ಗುರುವೇ, ಅಯ್ಯೋ ಅಡಿಕೇ ಮಂಡಿಗ್ ಹೋಗ್ಬೇಕು, ನಿನ್ ಹತ್ರ ಮಾತಾಡಿ ಹೊತ್ ಹೋಗಿದ್ದೇ ಗೊತ್ತಾಗಿಲ್ಲ, ಅವಾಗವಾಗ ಫೋನ್ ಮಾಡ್ತಾ ಇರು" ಎಂದು ನನ್ನ ಉತ್ತರಕ್ಕೂ ಕಾಯ್ದೆ ಫೋನ್ ಇಟ್ಟೇಬಿಟ್ಟ...ನಾನು ಒಂಥರಾ ಟಿ.ವಿ. ನೈನ್ ಬ್ರೇಕಿಂಗ್ ನ್ಯೂಸ್ ನೋಡಿದ ಶಾಕ್‌ನಲ್ಲಿ ಆಫೀಸಿನ ಕೆಲಸಕ್ಕೆ ತಿರುಗಿದೆ.

Thursday, June 17, 2010

ಗೋಲ್ಡ್ ಫಿಶ್ - 2010

 

ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ, ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ (oranda) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು.  ಒಂದು ಸಾಕು ಪ್ರಾಣಿಯ ಕುರಿತು, ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ.

 

Gold fish 2010

***

ಮಕ್ಕಳಿದ್ದವರ ಮನೆಯಲ್ಲಿ ಈ ಪ್ರಶ್ನೆ ಬಂದೇ ಬರುತ್ತೆ - ನಮ್ಮ ಮನೆಯಲ್ಲೂ ಬೇರೆ ಬೇರೆ ಸಾಕು ಪ್ರಾಣಿಗಳೇಕಿಲ್ಲ? ಎಂಬುದಾಗಿ.  ಈ ನಿಟ್ಟಿನಲ್ಲಿ ಹೆಚ್ಚಿನವರು ಒಂದು ಬೆಕ್ಕನ್ನೋ ಅಥವಾ ನಾಯಿಯನ್ನೋ ಸಾಕುವುದು ಸಾಮಾನ್ಯ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೊಲವನ್ನೋ, ಗಿಣಿಯನ್ನೋ ಇಟ್ಟುಕೊಂಡಾರು.  ಕೆಲವರು ಎಲ್ಲರನ್ನು ಮೀರಿ exotic ಪ್ರಾಣಿಗಳಾದ ಚೇಳು, ಹಾವು ಮೊದಲಾದ ಸರೀಸೃಪಗಳನ್ನು ಪೋಷಿಸಿಯಾರು.  ಆದರೆ ಇವೆಲ್ಲಕ್ಕಿಂತ ಸುಲಭವಾದ ವಿಧಾನವೊಂದಿದೆ, ಅದು ಮನೆಯಲ್ಲೇ ಅವರವರ ಸಾಮರ್ಥ್ಯ ಅನುಕೂಲಗಳಿಗೆ ತಕ್ಕಂಥ ಫಿಶ್ ಟ್ಯಾಂಕ್ ಒಂದನ್ನು ಇಟ್ಟು ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು.

ನಮ್ಮ ಮನೆಯಲ್ಲಿ ಸುಮಾರು ೨೦೦೧ ರಿಂದ ಹೀಗೇ ನೋಡಿಕೊಂಡು ಬಂದ ಐದು ಗ್ಯಾಲನ್ ನೀರು ಹಿಡಿಯುವ ಮೀನಿನ ಒಂದು ಚಿಕ್ಕ ಟ್ಯಾಂಕ್ ಇದೆ, ಅದರಲ್ಲಿ ಗೋಲ್ಡ್ ಫಿಶ್‌ಗಳನ್ನು ಬಿಟ್ಟು ಮತ್ತೇನನ್ನೂ ನಾವು ಸಾಕಿ ನಮಗೆ ಗೊತ್ತಿಲ್ಲ.  ನಮ್ಮ ಪ್ರಯೋಗದ ಮೊದ ಮೊದಲು ಅನೇಕ ಮೀನುಗಳು ಸಾಯುತ್ತಿದ್ದವು: ಪಿ.ಎಚ್. ಅಮೋನಿಯಾ, ಕ್ಲೋರೀನ್, ನೈಟ್ರೇಟ್, ನೈಟ್ರೈಟ್ ಮೊದಲಾದ ಕೆಮಿಕಲ್ ವಸ್ತುಗಳಲ್ಲಿ ಯಾವುದೇ ಏರುಪೇರಾದರೂ ಮೀನುಗಳು ಗೊಟಕ್.  ಹೀಗೆ ಜೋಡಿಸಿಟ್ಟ ಫಿಶ್ ಟ್ಯಾಂಕ್‌ಗೆ ನಾವು ಹೊಂದಿಕೊಳ್ಳಲು ನಮಗೆ ಸುಮಾರು ಒಂದು ವರ್ಷವೇ ಬೇಕಾಯಿತು, ಜೊತೆಗೆ ಅನೇಕ ಮೀನುಗಳನ್ನು ನಮ್ಮ ಪ್ರಯೋಗಗಳಿಗೆ ಬಲಿಕೊಟ್ಟದ್ದೂ ಆಯಿತು.  ಹೀಗೆ ನಡೆದು ಬಂದ ಫಿಶ್ ಮ್ಯಾನೇಜ್‌ಮೆಂಟ್ ಅನುಭವದ ಕೊನೆಗೆ ಬಂದು ಮುಟ್ಟಿದಾಗ ಉಳಿದವು ಎರಡು ಗೋಲ್ಡ್ ಫಿಶ್‌ಗಳು - ಅದರಲ್ಲಿ ಒಂದು ಬಿಳಿ ಬಣ್ಣದ್ದು, ಮತ್ತೊಂದು ಕಿತ್ತಳೆ ಬಣ್ಣದ್ದು.  ಎರಡೂ ಕೂಡ ಚೆನ್ನಾಗಿ ರೆಕ್ಕೆಗಳನ್ನು ಉದ್ದುದ್ದವಾಗಿ ಬೆಳೆಸಿಕೊಂಡು ಟ್ಯಾಂಕ್‌ನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಈಜಾಡುವುದನ್ನು ನೋಡುವುದೇ ಎಂಥವರಿಗೂ ಮುದಕೊಡುತ್ತಿತ್ತು.

ನಮ್ಮ ಚಲನವಲನಗಳು, ವೆಕೇಷನ್ನುಗಳು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಬದಲಾವಣೆ ಮಾಡುವುದು ಇವೆಲ್ಲ ನಮ್ಮ ಮನೆಯ ಫಿಶ್ ಟ್ಯಾಂಕ್‌ನ ನಿವಾಸಿಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು.  ನಾವು ಮೂರು ವಾರ ಭಾರತಕ್ಕೆ ವೆಕೇಷನ್ನ್ ಹೊರಟರೆ ನಮ್ಮ ಬದಲಿಗೆ ಬೇರೆ ಯಾರಾದರೂ ನಮ್ಮ ಮನೆಗೆ ಬಂದು ಈ ಮೀನುಗಳಿಗೆ ಊಟ ಹಾಕುವ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದೆವು, ಅಥವಾ ಈ ಮೀನಿನ ಟ್ಯಾಂಕ್ ಅನ್ನೇ ಅವರ ಮನೆಯಲ್ಲಿಟ್ಟು ನಾವು ಬರುವ ತನಕ ಜೋಪಾನವಾಗಿ ಕಾಯ್ದುಕೊಂಡಿರುವಂತೆ ಮಾಡಿದ್ದೂ ಇದೆ.  ಒಟ್ಟಿನಲ್ಲಿ ಒಂದು ಕಡೆ ಸರಿಯಾಗಿ ನೆಲೆ ನಿಂತ ಇಕೋ ಸಿಸ್ಟಂ ಅನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುವುದು ಅಷ್ಟು ಸುಲಭದ ಮಾತಂತೂ ಅಲ್ಲ.  ಈ ನಿಟ್ಟಿನಲ್ಲಿ ನನ್ನ ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಿದೆ.

ನಮ್ಮ ಮನೆಯಲ್ಲಿ ಇದ್ದ ಎರಡು ಮೀನುಗಳನ್ನು ಅವುಗಳ ಟ್ಯಾಂಕ್ ಹಾಗೂ ಪರಿಕರಗಳ ಸಮೇತ ವರ್ಜೀನಿಯಾದಿಂದ ನ್ಯೂ ಜೆರ್ಸಿಗೆ ೨೫೦ ಮೈಲು ದೂರ ತಂದು ನಮ್ಮ ಮನೆಯ ಸಾಮಾನುಗಳ ಜೊತೆಗೆ ಅವುಗಳನ್ನು ಜೋಡಿಸುವಾಗ ಆದ ಕಷ್ಟ ಅಷ್ಟಿಷ್ಟಲ್ಲ.  ಹೀಗೆ ಮಾಡಿ ಅನೇಕ ತಿಂಗಳುಗಳ ತರುವಾಯ ಬಿಳಿಯ ಮೀನು ಯಾವುದೋ ಖಾಯಿಲೆಗೆ ಬಲಿಯಾಗಿ ಸತ್ತು ಹೋದ ಮೇಲೆ ಉಳಿದದ್ದು ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಒಂದೇ.  ಎರಡು ಮೂರು ಮನೆಗಳನ್ನು ತಿರುಗಿ ಬಂದ ಮೇಲೆ ಅದು ಟ್ಯಾಂಕ್‌ನಲ್ಲಿ ತಾನೊಂದೇ ಪ್ರಾಬಲ್ಯವನ್ನು ಮೆರೆಯುತ್ತಾ ತಂದಾಗ ಎರಡು ಅಂಗುಲ ಉದ್ದ ಇದ್ದದ್ದು ದಿನೇ ದಿನೇ ಬೆಳೆದು ಸುಮಾರು ಆರು ಅಂಗುಲ ಉದ್ದಕ್ಕೂ ಹೆಚ್ಚು ದೊಡ್ಡದಾಯಿತು.  ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ಸ್ನೇಹಿತ ಗಾರ್‌ಫೀಲ್ಡ್ ಮನೆಯಲ್ಲಿ ನಾವು ವೇಕೇಷನ್ನಿಗೆ ಹೋದಾಗ ಮೊಕ್ಕಾಂ ಹೂಡಿ ಜನವರಿಯಿಂದ ಮೇ ವರೆಗೂ ಚೆನ್ನಾಗಿಯೇ ಇತ್ತು.

ಮೇ ತಿಂಗಳ ಮೊದಲ ವಾರದಲ್ಲಿ ಅದರ ಲವಲವಿಕೆ ಕುಂಠಿತಗೊಂಡಿತು, ಅದು ಆಹಾರ ಸೇವಿಸುವುದನ್ನು ಸಂಪೂರ್ಣ ಬಿಟ್ಟು ಟ್ಯಾಂಕಿನ ಬುಡದಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿ ಬಿದ್ದುಕೊಂಡಿರುತ್ತಿತ್ತು.  ಅದು ಇನ್ನೇನು ಸರಿ ಹೋದೀತು ಎಂದುಕೊಂಡವನಿಗೆ ಮುಪ್ಪಿನಿಂದ ಅದು ದಿನೇದಿನೇ ಕುಗ್ಗತೊಡಗಿದ್ದು ಗಮನಕ್ಕೆ ಬಂದು ಈ ಮೀನಿನ ಬದುಕಿಗೆ ಯಾವ ರೀತಿಯ ಅಂತ್ಯವನ್ನು ಹಾಡಬೇಕು ಎಂದು ಗೊತ್ತಾಗದೆ ಒಂದೆರೆಡು ಬಾರಿ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಎಲ್ಲವನ್ನು ಸ್ವಚ್ಛಗೊಳಿಸಿಟ್ಟು ಹಾಗಾದರೂ ಮೀನಿನ ಲವಲವಿಕೆ ಮರುಕಳಿಸಲಿ ಎಂದುಕೊಂಡರೆ ಹಾಗಾಗಲಿಲ್ಲ.

ನನ್ನ ಸ್ನೇಹಿತರು ಹಾಗೂ ಹಿರಿಯರು ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ಟ್ಯಾಂಕಿನಿಂದ ಸಣ್ಣದೊಂದು ಗಾಜಿನ ಜಾಡಿಗೆ ಬದಲಾಯಿಸಿ ಅದರ ಬದಲಿಗೆ ಬೇರೆ ಹೊಸ ಮೀನುಗಳನ್ನು ತಂದು ಹಾಕುವುದೆಂದು ಯೋಚಿಸಿ ಹಾಗೆ ಮಾಡಲನುವಾದೆ.  ಅಂಗಡಿಗೆ ಹೋಗಿ ಉತ್ಸಾಹದಿಂದ ಪುಟಿಯುತ್ತಿದ್ದ ಅವೇ ಒರ್ಯಾಂಡಾ (oranda) ಜಾತಿಯ ಥರಾವರಿ ಬಣ್ಣಗಳ ನಾಲ್ಕು ಮೀನುಗಳನ್ನು ತಂದೆ.  ಒಂದು ಕಡೆ ಹೊಸ ಮೀನುಗಳನ್ನು ಅವುಗಳನ್ನು ತಂದ ಪ್ಲಾಸ್ಟಿಕ್ ಕವರ್ ಸಮೇತ ಟ್ಯಾಂಕಿನ ನೀರಿನ ತಾಪಮಾನಕ್ಕೆ ಹೊಂದುಕೊಳ್ಳಲು ಬಿಟ್ಟು, ಮತ್ತೊಂದು ಸಣ್ಣ ಗಾಜಿನ ಜಾಡಿಯನ್ನು ಅನುಗೊಳಿಸಿದೆ.  ಅದರಲ್ಲಿ ಹಳೆಯ ಮೀನನ್ನು ಹುಷಾರಾಗಿ ಇಟ್ಟೆ, ನಾನು ತೆಗೆದು ಹಾಕುವಾಗ ಒಂದಿಷ್ಟು ಕೊಸರಾಡಿದ ಮೀನು, ಹೊಸ ಜಾಡಿಯ ತಳದಲ್ಲಿ ನಿಧಾನವಾಗಿ ಉಸಿರಾಡುತ್ತಾ ಬಿದ್ದುಕೊಂಡಿದ್ದು ನೋಡಿ ಕರುಳು ಕಿವುಚಿದಂತಾಯಿತು.  ಅದನ್ನು ಅಲ್ಲಿಗೆ ಬಿಟ್ಟು ಹೊಸ ಮೀನುಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಾಗ ಅವುಗಳಿಗೆ ಒಂದು ಕಡೆ ಸಂಭ್ರಮವೂ ಮತ್ತೊಂದು ಕಡೆ ಹೆದರಿಕೆಯೂ ಸೇರಿಕೊಂಡು ಟ್ಯಾಂಕಿನ ಮೂಲೆ ಮೂಲೆಗಳಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು.  ಸ್ವಲ್ಪ ಹೊತ್ತಿನ ತರುವಾಯ ಅವುಗಳು ತಮ್ಮ ಹೊಸ ವಾತಾವರಣಕ್ಕೆ ಹೊಂದಿಕೊಂಡ ಎಲ್ಲ ಸೂಚನೆಗಳೂ ಕಂಡು ಬಂದು, ಈ ಟ್ಯಾಂಕಿನಲ್ಲಿ ವರ್ಷಾನುಗಟ್ಟಲೆ ಮನೆ ಮಾಡಿದ್ದ ನೆಲೆ ನಿಂತಿದ್ದ ಆ ಮಹಾಶಯನ ಗುರುತು ಪರಿಚಯವೂ ವಾಸನೆಯೂ ಅವುಗಳಿಗೆ ಒಂದಿಷ್ಟು ಇರದಿದ್ದ ಮುಗ್ಧತೆಯಲ್ಲಿ ಜೀವಿಸತೊಡಗಿದವು.

ಇತ್ತ ಸಣ್ಣ ಗಾಜಿನ ಜಾಡಿಯಲ್ಲಿನ ಹಳೆಯ ಮೀನಿನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗದೇ ಅದೇ ದಿನ ರಾತ್ರಿ ಎಷ್ಟೋ ಹೊತ್ತಿಗೆ ಅದರ ಪ್ರಾಣಪಕ್ಷಿ ಹಾರಿ ಹೋಗಿದ್ದು ನಮಗೆಲ್ಲ ನಿಚ್ಛಳವಾಯಿತು.  ನಮಗೆಲ್ಲ ಇಷ್ಟೊಂದು ವರ್ಷ ಫ್ಯಾಮಿಲಿ ಮೆಂಬರಿನಂತಿದ್ದ ಮೀನಿನ ಅಂತ್ಯಕ್ರಿಯೆಗೋಸ್ಕರ ನಾನು ಶವೆಲ್ಲೊಂದನ್ನು ತೆಗೆದುಕೊಂಡು ರಾತ್ರಿ ನಮ್ಮ ಹಿತ್ತಲಿಗೆ ಹೋಗಿ ಸಣ್ಣ ತಗ್ಗನ್ನು ತೆಗೆದು ಅಲ್ಲಲ್ಲಿ ಮಿಡತೆಗಳು ಅಳುತ್ತವೆಯೇನೋ ಎನ್ನುವ ಕಿರುಗುಟ್ಟುವಿಕೆಯ ಹಿನ್ನೆಲೆಯ ನಡುವಿನ ಮೌನದ ಸಹಾಯದಿಂದ ಯಾವೊಂದು ಮಾತನಾಡದೆ ಎರಡು ಮುಷ್ಠಿ ಮಣ್ಣನ್ನು ಕೈಯಿಂದ ಹಾಕಿ ಉಳಿದದ್ದನ್ನು ಶವೆಲ್ಲಿನಿಂದಲೇ ಮುಚ್ಚಿ ಸಂಸ್ಕಾರ ಮಾಡಿದೆ.

ಮರುದಿನ ಇಂಚರ (ನಮ್ಮ ನಾಲ್ಕು ವರ್ಷದ ಮಗಳು) ಅನೇಕ ಬಾರಿ ಹಳೇ ಮೀನು ಎಲ್ಲಿ ಹೋಯಿತು? ಅದು ಏಕೆ ಸತ್ತಿತು? ಸತ್ತಾಗ ಏನಾಗುತ್ತದೆ? ಯಾಕೆ ಹಿತ್ತಲಿನಲ್ಲಿ ಮಣ್ಣು ಮಾಡಿದೆ? ನನ್ನನ್ನೇಕೆ ಕರೆಯಲಿಲ್ಲ? ಎಂದು ಕೇಳಿದ ಅನೇಕಾನೇಕ ಪ್ರಶ್ನೆಗಳಿಗೆ ನನ್ನ ಶಕ್ತಿ ಮೀರಿ ಸರಳವಾಗಿ ಉತ್ತರಿಸಿದ್ದಾಯಿತು.  ನಾವು ಹಳೇ ಮೀನಿಗೆ ಯಾವುದೇ ಹೆಸರನ್ನಿಟ್ಟಿರಲಿಲ್ಲ - Elmo’s world ನಲ್ಲಿ ಬರುವ Dorothyಯ ದೆಸೆಯಿಂದ ಇಂಚರ ಅದನ್ನು ನಮ್ಮ ಮನೆಯ ಡೊರೋತಿ ಅಂದುಕೊಂಡಿದ್ದನ್ನು ಬಿಟ್ಟರೆ, ಅದೇ ಛಾಳಿಯನ್ನು ಮುಂದುವರೆಸಿ ನಾವು ಈ ಹೊಸ ಮೀನುಗಳಿಗೂ ಹೆಸರನ್ನೂ ಇಟ್ಟಿಲ್ಲ.

ಪ್ರತಿ ದಿನ ಆಫೀಸಿನಿಂದ ಬಂದಾಗ ಶೂ ತೆಗೆದು ಅದರ ಸ್ಥಳದಲ್ಲಿಟ್ಟು ನಂತರ ಮಾಡುವ ಕೆಲಸವೇ ಈ ಮೀನಿನ ಟ್ಯಾಂಕಿನ ಲೈಟ್ ಹಾಕಿ ಅವುಗಳಿಗೆ ಪ್ಲ್ಹೇಕ್ ಫುಡ್ಡನ್ನು ಹಾಕುವುದು, ಈ ಹೊಸ ಮೀನುಗಳ ಸಹಾಯದಿಂದ ವರ್ಷಾನುಗಟ್ಟಲೆ ನಡೆದ ಬಂದ ಕಾಯಕ ಇಂದಿಗೂ ಹಾಗೇ ಮುಂದುವರೆದಿದೆ.

***

ಸಾವು-ನೋವಿನ ವಿಚಾರಕ್ಕೆ ಬಂದಾಗ ಅಮೇರಿಕದ ನಮ್ಮ ಅನುಭವ ವ್ಯಾಪ್ತಿ ಕಡಿಮೆಯೇ.  ಬೇರೆ ಯಾರೂ ರಕ್ತ ಸಂಬಂಧಿಗಳಿಲ್ಲದ ಈ ದೇಶದಲ್ಲಿ ಸಾವು ಎನ್ನುವ ಮಹತ್ವಪೂರ್ಣವಾದ ಬದುಕಿನ ಮಜಲಿನ ಅನುಭವ ನಮಗೆ ಭಾರತದಲ್ಲಿ ಇದ್ಧಾಗ ಆಗುವಂತೆ ಇಲ್ಲಿ ಆಗುವುದಿಲ್ಲ.  ನಮ್ಮ ನೆಂಟರು-ಇಷ್ಟರು-ಬಂಧು-ಬಳಗ ಇವರೆಲ್ಲರ ಮದುವೆ ಮುಂಜಿಗಳಿಗೆ, ಕಷ್ಟ-ನಷ್ಟಗಳಿಗೆ ನಾವು ಎಂದಿನ ಸಂವೇದನೆಯನ್ನು ತೋರೋದಿಲ್ಲ.  ಸಾವನ್ನು ಬೇಕು ಎಂದು ಆರಿಸಿಕೊಳ್ಳದಿದ್ದರೂ ಹುಟ್ಟು ತರುವಷ್ಟೇ ಮುಖ್ಯವಾದ ಬದಲಾವಣೆಯನ್ನು ಸಾವೂ ತರಬಲ್ಲದು.  ಈ ನಿಟ್ಟಿನಲ್ಲಿ ಸಾಕು ಪ್ರಾಣಿ ಮೀನಿನ ಸಾವು ಅದರ ಜೊತೆಗಿದ್ದ ನಮ್ಮ ವರ್ಷಾನುಗಟ್ಟಲೆಯ ಬಂಧನವನ್ನು ಕಳಚಿ ಹಾಕುವುದರ ಮೂಲಕ ದೂರದಲ್ಲಿರುವ ನಮಗೆ ಹತ್ತಿರದ ಬಂಧುವನ್ನು ಕಳೆದುಕೊಂಡ ನೆನಪನ್ನು ಎತ್ತಿ ಹಿಡಿಯಿತು.  ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನವನ್ನು ಇನ್ನೂ ಯಾರಾದರೂ ಮಾಡುತ್ತಿದ್ದರೆ ಆ ದೃಷ್ಟಿಯಲ್ಲಿ ನಾವು ಹೊರಗುಳಿದಿರುವುದು ಸ್ಪಷ್ಟವಾಯಿತು.  ನಮ್ಮಂಥ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಸಣ್ಣ ಅಗಲಿಕೆ ಬದುಕು ಒಡ್ಡುವ ಅನೇಕ ಬದಲಾವಣೆಗಳ ನೆನಪು ಮಾಡುವಲ್ಲಿ ಯಶಸ್ವಿಯಾಯಿತು.  ಜೊತೆಯಲ್ಲಿ ನಮ್ಮ ಸಂಬಂಧಿಗಳ, ಬಂಧು-ಮಿತ್ರರ, ಒಡಹುಟ್ಟಿದವರ ನೋವು-ನಲಿವುಗಳಿಗೆ ಸಕಾಲಕ್ಕೆ ಆಗಿಬರದ ನಾವು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಬಿಟ್ಟೆವೇನೋ ಎನ್ನಿಸಿಬಿಟ್ಟಿತು.

Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

Wednesday, December 30, 2009

ಶ್ರದ್ದಾಂಜಲಿ...ವಿಷ್ಣು, ಅಶ್ವಥ್ ಇನ್ನಿಲ್ಲ

೨೦೦೯ ಸುಮ್ನೇ ಹೋಗಲಿಲ್ಲ...ತನ್ನ ಕೊನೆಯ ದಿನಗಳಲ್ಲಿ ಎರಡು ಮಹಾನ್ ಚೇತನಗಳನ್ನ ತನ್ನ ಜೊತೆ ತೆಗೆದುಕೊಂಡು ಹೋಯ್ತು...ಇನ್ನೂ ಒಂದು ದಿನ ಬಾಕಿ ಇದೆ ವರ್ಷದ ಬಾಬ್ತು ಮುಗಿಯೋದಕ್ಕೆ ಅನ್ನೋದು ಹೆದರಿಕೆಯ ವಿಷಯವೇ, ಏನೇನು ಆಗಲಿಕ್ಕೆ ಇದೆಯೋ!

 

ಕೆಲವು ತಿಂಗಳುಗಳ ಹಿಂದೆ ಅಶ್ವಥ್ ಅಮೇರಿಕಕ್ಕೆ ತಮ್ಮ ತಂಡದವರೊಂದಿಗೆ ಬಂದು ನಮಗೆಲ್ಲ ಸುಗಮ ಸಂಗೀತದ ರಸದೌತಣವನ್ನು ನೀಡಿದ್ದರು, ಅವರು ಇನ್ನಿಲ್ಲ...ತಾನು ಹುಟ್ಟಿದ ದಿನವೇ ಸಾಯುವ ಕಾಕತಾಳೀಯವನ್ನು ಬಹಳ ಜನ ಕಾಣಲಾರರು, ಅಂಥವರಲ್ಲಿ ಅಶ್ವಥ್ ಅವರು ಒಬ್ಬರು, ಇಂದಿಗೆ ಅವರಿಗೆ ಬರೋಬ್ಬರಿ ಎಪ್ಪತ್ತು ವರ್ಷ.

 

ashwath241209_1

***

 

ವಿಷ್ಣುವರ್ಧನ್, ಕೇವಲ ೫೯ ವರ್ಷಕ್ಕೆ ಹೃದಯಾಘಾತಕ್ಕೆ ಈಡಾಗುತ್ತಾರೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.  ಇತ್ತೀಚೆಗಷ್ಟೇ ಯಾವುದೋ ಉದಯ ಟಿವಿ ಕಾರ್ಯಕ್ರಮವನ್ನು ತೋರಿಸಿ ’ಪರವಾಗಿಲ್ಲ, ವಿಷ್ಣು ತನ್ನ ಫಾರ್ಮ್ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ!’ ಎಂದು ಹೇಳಿದ್ದು ನನಗೆ ಚೆನ್ನಾಗಿ ನನಪಿದೆ.

 

vishnuvardhan-6677

***

ಈ ಇಬ್ಬರು ಕನ್ನಡದ ಚೇತನಗಳಿಗೆ "ಅಂತರಂಗ"ದ ನಮನ, ಅವರ ಆತ್ಮಗಳು ಶಾಂತಿಯಿಂದಿರಲಿ, ಹಾಗೂ ಮತ್ತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬರಲಿ.

 

picture source:

http://www.indiaglitz.com/channels/kannada/article/52939.html

http://entertainment.oneindia.in/tag/vishnuvardhan

Friday, December 26, 2008

ಗಿರಕಿ ಹೊಡೆಯೋ ಲೇಖನಗಳು...

ಯಾಕೋ ಈ ವರ್ಷ ಆಲೋಚನೆಗಳ ಒರತೆಯಲ್ಲಿ ಬರೆಯುವಂತಹ ವಿಚಾರಗಳ ಸೆಲೆ ಉಕ್ಕಿ ಬಂದಿದ್ದೇ ಕಡಿಮೆ ಎನ್ನಬಹುದು, ಕಳೆದ ಒಂದೆರಡು ವರ್ಷಗಳಿಗೆ ಹೋಲಿಸಿದರೆ ೨೦೦೮ ರಲ್ಲಿ ಬರೆದ ಬರಹಗಳ ಪಟ್ಟಿ ಅವುಗಳ ಅರ್ಧದಷ್ಟೂ ಇಲ್ಲ ಎಂದು ಗೊತ್ತಾದ ಮೇಲಂತೂ ಏಕೆ ಹೀಗೆ ಎನ್ನುವ ಆಲೋಚನೆಗಳು ಹುಟ್ಟತೊಡಗಿದವು.

ಈ ವರ್ಷ ಜನವರಿ ೨೦ ರಂದು "ಅಂತರಂಗ-೩೦೦" ರ ಲೇಖನದಲ್ಲಿ ಬರೆದ ಮುಂದಿನ ಗುರಿ/ಒತ್ತಾಸೆಗಳೆಲ್ಲ ಇನ್ನೂ ಹಾಗೇ ಇವೆ. ಬರಹಗಳ ಸಂಖ್ಯೆ ಇಳಿಮುಖವಾದರೂ ಅವುಗಳ ಗುಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದೆಲ್ಲ ಅಂದುಕೊಂಡಿದ್ದಷ್ಟೇ ಬಂತು, ’ಅಂತರಂಗ’ದಲ್ಲಿ ಯಾವತ್ತಿದ್ದರೂ ಒಂದೇ ರೀತಿ ಬರಹಗಳು ಎಂದು ಕೆಲವು ಪ್ರಯೋಗಗಳನ್ನು ಮಾಡಿದ್ದು ಆಯ್ತು. ಇನ್ನು ಈ ಬ್ಲಾಗಿಗೆ ಪ್ರತ್ಯೇಕ ವೆಬ್‌ಸೈಟ್ ಬೇರೆ (ಕೇಡಿಗೆ); ಈ ಪುಕ್ಕಟೆ ಬ್ಲಾಗನ್ನು ಅಪ್‌ಡೇಟ್ ಮಾಡಿಕೊಂಡಿದ್ದರೆ ಸಾಲದೂ ಅಂತ ಸ್ವತಂತ್ರ ವೆಬ್‍ಸೈಟ್ ಅನ್ನು ಮ್ಯಾನೇಜ್ ಮಾಡೋ ಕಷ್ಟ ಬೇರೆ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು


’ಅಂತರಂಗ’ದಲ್ಲಿ ನೀವು ಪ್ರಕಟಿಸೋ ಬರಹದಂತಿರುವವುಗಳನ್ನು ನಾವು ನಮ್ಮ ಸೈಟ್‌ನಲ್ಲಿ ಪ್ರಕಟಿಸೋದಿಲ್ಲ ಅಂತ ಬೇರೆ ಹೇಳಿಸಿಕೊಳ್ಳಬೇಕಾಗಿ ಬಂತು - ಅದೂ ನನಗೆ ದಶಕಗಳಿಂದ ಪರಿಚಯವಿರುವ ಸಂಪಾದಕರೊಬ್ಬರಿಂದ - ಅದೂ ಈ ಲೇಖನಗಳು ಉದ್ದವಾದುವು ಈಗಿನ ಚೀಪ್ ಸ್ಟೋರೇಜ್ ಯುಗದಲ್ಲೂ ನಮ್ಮಲ್ಲಿ ನಿಮ್ಮ ಲೇಖನಗಳಿಗೆ ಸ್ಥಳಾವಕಾಶವಿಲ್ಲ ಎಂಬುದಾಗಿ - I think he was just being decent, in saying so.

***

- ಯಾಕೆ ನಮ್ಮ ಲೇಖನಗಳು ನಮ್ಮ ಮಕ್ಕಳ ಹಾಗೆ ಯಾವಾಗಲೂ ನಮ್ಮ ಸುತ್ತಲೇ ಗಿರಕಿ ಹೊಡಿತಾ ಇರ್ತವೆ?
- ಯಾಕೆ ನಮ್ಮ ಲೇಖನಗಳಲ್ಲಿ ಇನ್ನೊಬ್ಬರ ಹೃದಯಸ್ಪರ್ಶಿ ಅಂಶಗಳು ಕಡಿಮೆಯಾಗಿ ಹೋಗಿವೆ?
- ಯಾಕೆ ನಮ್ಮ ಸೃಜನಶೀಲತೆ ಅನ್ನೋದು ಮಳೆಗಾಲದಲ್ಲಿ ಮಂಡಕ್ಕಿ ಮಾರೋ ಸಾಬಿಯ ಪ್ಯಾಂಟಿನ ಹಾಗೆ ಮಂಡಿಗಿಂತ ಮೇಲೆ ಮಡಿಚಿಕೊಂಡಿದೆ?
- ನಮ್ಮ ಲೇಖನಗಳಲ್ಲಿ ಬಡತನ, ನೋವು, ಬದಲಾವಣೆಗಳಿಗೆ ಸ್ಪಂದನವೇ ಸಿಗೋದಿಲ್ಲವೆ?
- ಈ ಆನ್‌ಲೈನ್ ಮಾಧ್ಯಮಗಳ ಓದುಗರಿಗೆ ಏನು ಬೇಕೋ ಅದನ್ನು ಕೊಡೋದಕ್ಕೆ ನಮ್ಮ ಕೈಯಲ್ಲಾಗೋದಿಲ್ಲವೇನು?
- ನಮ್ಮ ವರದಿಗಳಾಗಲೀ, ನಮ್ಮ ಭಾಷಣಗಳಾಗಲೀ ಮೊನಟನಸ್ ಆಗಿ ಹೋಗೋದೇಕೆ?

****

ಆಫೀಸಿನಲ್ಲಿ ವಿಪರೀತ ಕೆಲಸ ಸಾರ್, ಜೊತೆಗೆ ಅನಿವಾಸಿತನ ಬೇರೆ. ಈ ವರ್ಷವನ್ನೇ ತೊಗೊಳ್ಳಿ, ಪ್ರತೀವಾರ ಐವತ್ತೈದು ಅರವತ್ತು ಘಂಟೆಗಳ ಕೆಲಸ ಮಾಡೋದು ನಮ್ಮ ಕರ್ಮ ಜೀವ(ನ); ಯಾವ ಪುಸ್ತಕವನ್ನೂ ಓದಿಲ್ಲ, ಯಾರೊಬ್ಬ ಸ್ನೇಹಿತರ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡಿದ ನೆನಪಿಲ್ಲ. ಹೀಗೇ ಆಗ್ತಾ ಹೋದ್ರೆ ನಮ್ಮ ಪ್ರೇರಣೆಗಳು, ಸೃಜನಶೀಲತೆ ಬದುಕಿದ ಹಾಗೇ. ಆನ್‌ಲೈನ್ ಮಾಧ್ಯಮದಲ್ಲಿ ಬೇಕಾದಷ್ಟು ಓದೋ ಹಾಗಿದ್ದರೂ ಓದೋಕೆ ಸಮಯವಿಲ್ಲವೋ ಅಥವಾ ಓದೋಕೆ ಸಾಧ್ಯವೇ ಇಲ್ಲವೋ ಅನ್ನೋ ಹಾಗೆ ಆಗಿದೆ.

ಇದಕ್ಕೆಲ್ಲ ನಮ್ಮ ಬೆಳವಣಿಗೆಯೂ ಕಾರಣ ಅನ್ನಬೇಕು. ಈ ಹಾಳಾದ ಇ-ಮೇಲ್‌ ಗಳನ್ನು ಓದೀ-ಓದಿ ಉದ್ದವಾದದ್ದನ್ನು ಬೇರೆ ಏನೂ ಓದೋಕ್ಕೇ ಸಾಧ್ಯವಿಲ್ಲವೆನ್ನುವ ಹಾಗೆ ಆಗಿದೆ. ಆಫೀಸಿನಲ್ಲಿ ಯಾರಾದರೂ ಬರೆದ ಉದ್ದವಾದ ಇ-ಮೇಲ್ ಅನ್ನೋ ಅಥವಾ ಡಾಕ್ಯುಮೆಂಟ್ ಅನ್ನೋ ಓದಿ ಅರ್ಥ ಮಾಡಿಕೊಂಡು ಉತ್ತರ ಕೊಡೋದಾಗಲೀ ಅಥವಾ ತಿದ್ದೋದಾಗಲೀ ಪೀಕ್ ಅವರ್ ನಲ್ಲಿ ಸಾಧ್ಯವೇ ಇಲ್ಲದ ಚಟುವಟಿಕೆಯಾಗಿ ಹೋಗಿದೆ. ನಾವೆಲ್ಲ (ಅಥವಾ ನಾನು) ಅಲ್ಪತೃಪ್ತರಾಗಿ ಹೋಗಿದ್ದೇವೆ, ಏನಾದರೊಂದನ್ನು ಹಿಡಿದುಕೊಂಡು ಹಠ ಸಾಧಿಸುವುದಿರಲಿ ಒಂದು ಪುಸ್ತಕಕ್ಕೆ ಅರ್ಧ ಘಂಟೆ ಮನಸ್ಸು ಕೊಡದವರಾಗಿ ಹೋಗಿದ್ದೇವೆ. ಒಂದು ಒಳ್ಳೆಯ ಪದ್ಯವನ್ನು ಓದಿ, ಒಂದು ಉತ್ತಮವಾದ ಕಾದಂಬರಿಯನ್ನು ಮೆಲುಕು ಹಾಕಿ ಜಮಾನವಾಗಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ನನ್ನ ತಿಳುವಳಿಕೆ ಸೀಮಿತವಾಗಿದೆ.

ಮೊದಲೆಲ್ಲ ಒಂದಿಷ್ಟು ಟೆಕ್ನಿಕಲ್ ಸ್ಕಿಲ್ಸ್ ಆದರೂ ಇತ್ತು - ಜಾವಾದಲ್ಲಿ ಬರೆದು ಡಿಬಿ೨ (DB2) ಡೇಟಾ ತೆಗೆದು ಅನಲೈಸ್ ಮಾಡುವುದಾಗಲೀ, ಸಿಐಸಿಎಸ್ (CICS) ನಲ್ಲಿ ಮಲ್ಟಿ ಯೂಸರ್ ಸೆಷನ್ನುಗಳನ್ನು ಕ್ರಿಯೇಟ್ ಮಾಡಿ ಅದನ್ನು ಈ ದೇಶದ ನಾನಾ ಭಾಗಗಳಿಂದ ಯೂಸರ್‌ಗಳು ಟೆಸ್ಟ್ ಮಾಡಿ ಸಾಧಿಸಿಕೊಂಡಿದ್ದಾಗಲೀ ಇವತ್ತು ಇತಿಹಾಸವಾಗಿ ಹೋಗಿದೆ. ಒಂದು ಸಣ್ಣ HTML ಟ್ಯಾಗ್‌ಗೆ ಕೂಡಾ ರೆಫೆರೆನ್ಸ್ ಬೇಕಾಗಿದೆ. ನನ್ನ ಇಂಡಷ್ಟ್ರಿ ಸ್ಕಿಲ್ಸ್ ಅನ್ನುವುದು ಏನೇ ಇದ್ದರೂ ಕರಿಮಣಿ ಸರದ ನಡುವೆ ಇರುವ ತಾಳಿಯ ಹಾಗೆ, ಈ ಕಂಪನಿಯಿಂದ ಹೊರಗೆ ಬಂದು ಮತ್ತೊಂದು ಕಂಪನಿಯ ಹಿತಾಸಕ್ತಿಯಿಂದ ನೋಡಿದರೆ ಅದಕ್ಕಷ್ಟು ಮೌಲ್ಯವಿಲ್ಲ. ಈ ಹದಿಮೂರು ವರ್ಷಗಳ ಎಕ್ಸ್‌ಪೀರಿಯನ್ಸ್ ಅನ್ನುವುದು ಎರಡೂ ಕಡೆ ಹರಿತವಾದ ಕತ್ತಿಯ ಹಾಗೆ, ಅದರ ಬಳಕೆಯ ಬಗ್ಗೆ ಹುಷಾರಾಗಿರುವುದೇ ಒಳ್ಳೆಯದು. ಮೊದಲೆಲ್ಲ ಕನ್ಸಲ್‌ಟೆಂಟ್ ಆಗಿದ್ದಾಗ ಒಂದು ಕಂಪನಿಯಿಂದ ಮತ್ತೊಂದಕ್ಕೆ ಹಾರಲು ಅನುಕೂಲವಾದ ಸ್ಕಿಲ್‌ಗಳೆಲ್ಲ ಇಂದು ಒಂದೇ ಕಂಪನಿಯಲ್ಲಿ ಇದ್ದ ಪ್ರಯುಕ್ತ ಸಾಣೆ ಹಿಡಿಯದ ಕತ್ತಿಯಾಗಿ ಹೋಗಿದೆ. ಆಫೀಸಿನಲ್ಲಿ ನಾನು ಮಾಡುವ ತಪ್ಪುಗಳು ಅವು ಹುಟ್ಟಿದ ಹಾಗೇ ಮುಚ್ಚಿಯೂ ಹೋಗುತ್ತವೆ.

***
You have to get your ass kicked once in a while... ಅಂತಾರಲ್ಲ ಹಾಗೆ. ಏನಾದರೊಂದು ಛಾಲೆಂಜ್ ಇರಬೇಕು ಬದುಕಿನಲ್ಲಿ. ಯಾವುದೋ ಕಷ್ಟಕರವಾದ ಕಾದಂಬರಿಯನ್ನು ಹತ್ತು ಸಾರಿ ಓದಿ ಆಯಾ ಪಾತ್ರಗಳ ಹಿಂದಿನ ಸಂವೇದನೆಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನವಾಗಲೀ; ಇಂದಿನ ಕಷ್ಟಕರವಾದ ಎಕಾನಮಿಯಲ್ಲಿ ಎಲ್ಲೂ ಇದ್ದು ಬದುಕಬಲ್ಲೆ ಎನ್ನುವ ಛಲಕ್ಕೆ ಬೇಕಾದ ಸ್ಕಿಲ್ಲುಗಳನ್ನು ಬೆಳೆಸಿಕೊಳ್ಳುವುದಾಗಲೀ; ನಿರಂತರವಾಗಿ ಒಂದಿಷ್ಟು ಪುಸ್ತಕಗಳನ್ನು ಅಭ್ಯಸಿಸುವ ರೂಢಿಯಾಗಲೀ ಅಥವಾ ಸ್ನೇಹಿತರ-ಸಂಬಂಧಿಕರ-ಒಡನಾಡಿಗಳಿಗೆ ಸ್ಪಂದಿಸುವ ಮನಸ್ಥಿತಿಯಾಗಲೀ...ಹೀಗೆ ಒಂದಿಷ್ಟು ತೊಡಗಿಕೊಳ್ಳುವುದು ಯೋಗ್ಯ ಅನ್ನಿಸೋದು ಈ ಹೊತ್ತಿನ ತತ್ವ. ಅಂತೆಯೇ ಈ ಮುಂದಿನ ವರ್ಷಕ್ಕೆ ಯಾವುದೇ ಗುರಿ/ಒತ್ತಾಸೆಗಳು ಇಲ್ಲದಿರುವುದೇ ಇಂದಿನ ವಿಶೇಷ!