Showing posts with label ವಿಪರ್ಯಾಸ. Show all posts
Showing posts with label ವಿಪರ್ಯಾಸ. Show all posts

Friday, April 03, 2020

... ಸ್ಕ್ರೀನುಗಳೇ ಗೆದ್ದವು!

ಕೊರೋನಾ ವೈರಸ್ ದೆಸೆಯಿಂದ ಕೊನೆಗೆ ಗೆದ್ದವು - ಈ ಸ್ಕ್ರೀನುಗಳು!  ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೆ ಈ ಸ್ಕ್ರೀನುಗಳದ್ದೇ ದರ್ಬಾರು, ಅವುಗಳ ಸುತ್ತಮುತ್ತಲೂ ನಮ್ಮದೆಲ್ಲ ಒಂದು ರೀತಿ ಡೊಂಬರಾಟ ಇದ್ದ ಹಾಗೆ!

ವಿಪರ್ಯಾಸವೆಂದರೆ, ನಾನು ಇತ್ತೀಚೆಗಷ್ಟೇ Tiffany Shlain ಬರೆದ 24/6 The Power of Unplugging One Day A Week ಪುಸ್ತಕ ಓದಿದ ನಂತರ ಹೀಗಾಗಿದ್ದು.  ಎಷ್ಟೆಲ್ಲ ತಂತ್ರಜ್ಞಾನ ಮುಂದುವರೆದಿದ್ದರೂ ಸಹ, ಅರ್ಥೋಡಾಕ್ಸ್ ಯಹೂದಿಗಳು ಇಂದಿಗೂ ಕೂಡ ಸೆಬಾತ್ (Shabbat) ಆಚರಿಸಿಕೊಂಡು ಬಂದಿದ್ದಾರ‍ೆ.  ಅವರುಗಳು ವೃತ್ತಿಯಿಂದ ವೈದ್ಯರಿರಲಿ, ಇಂಜಿನಿಯರುಗಳಿರಲಿ, ಅಥವಾ ಯಾರೇ ಇರಲಿ ವಾರಕ್ಕೊಂದು ದಿನ, ಯಂತ್ರಗಳ ಸಹವಾಸವಿಲ್ಲದೆ ಬದುಕುತ್ತಾರೆ.  ಈ ಪುಸ್ತಕದಲ್ಲಿ ಲೇಖಕಿ ತನ್ನ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳನ್ನು ತಂತ್ರಜ್ಞಾನಕ್ಕೂ ವಿಸ್ತರಿಸಿ Techonology Shabbat ಅನ್ನು ಪರಿಚಯಿಸುತ್ತಾರೆ.  ನಾನು ಈ ಪುಸ್ತಕವನ್ನು ಓದಿ, ಕಷ್ಟಸಾಧ್ಯ ಎಂದು ಪಕ್ಕದಲ್ಲಿಟ್ಟೆ, ಆದರೂ ಸಹ ವಾರಕ್ಕೊಂದು ದಿನ ಟೆಕ್ನಾಲಜಿ ಅಥವಾ ಯಾವುದೇ ಸ್ಕ್ರೀನುಗಳ ಪರಾಧೀನತೆ ಇಲ್ಲದೇ ಬದುಕುವಂತಿದ್ದರೆ ಎಂದು ಅನ್ನಿಸದೇ ಇರಲಿಲ್ಲ.

***
ಎಲ್ಲ ಕಡೆ ಕೊರೋನಾ ವೈರಸ್ಸು ಹಾವಳಿಯಿಂದ ನಮ್ಮ ಆಫೀಸಿನ ಕೆಲಸವಷ್ಟೇ ಅಲ್ಲ, ದೈನಂದಿನ ಸಂಭಾಷಣೆ, ವಿಚಾರ-ವಿನಿಮಯ, ಮನರಂಜನೆ, ಮಾಹಿತಿ, ಸುದ್ದಿ-ಸಮಾಚಾರ ಮೊದಲಾದ ಎಲ್ಲವೂ ನಮಗೆ ಈ ಸ್ಕ್ರೀನುಗಳಿಂದಾನೇ ದೊರೆಯೋದು.  ನಾವು ಹೊಸದಾಗಿ iPhoneನಲ್ಲಿ ಬಂದಿರೋ Screen Time ಉಪಯೋಗಿಸಿ ದಿನದಲ್ಲಿ/ವಾರದಲ್ಲಿ ಬಳಸಿದ ಎಲ್ಲ ಅಪ್ಲಿಕೇಶನ್ನುಗಳನ್ನೂ ನೋಡುತ್ತಿದ್ದೆವು.  ಆದರೆ, ಈಗೆಲ್ಲ ನಮ್ಮ ಸ್ಕ್ರೀನುಗಳ ಉಪಯೋಗ ದಿನೇದಿನೇ ಹೆಚ್ಚಾಗುತ್ತಿದೆ.  ಅದರಲ್ಲೂ ಹೊರಗಡೆ ಹೋಗದೆ ಮನೆಯಲ್ಲಿ ಕುಳಿತಿರುವ ನಮಗೆಲ್ಲ ಈ ಚಿಕ್ಕ-ದೊಡ್ಡ ಸ್ಕ್ರೀನುಗಳೇ ದೊಡ್ಡ ಸವಲತ್ತುಗಳಾಗಿವೆ.  ಅಕಸ್ಮಾತ್ ನಮ್ಮಿಂದ ಊಟವನ್ನಾದರೂ ದೂರವಿಡಬಹುದು, ಆದರೆ ಸ್ಕ್ರೀನುಗಳನ್ನಲ್ಲ ಎಂದು ರಚ್ಚೆ ಹಿಡಿದು ಒದ್ದಾಡುವ ಮಗುವಿನಂತಾಗಿದೆ ಮನಸ್ಥಿತಿ.

ಇತ್ತೀಚೆಗೆ ಎಲ್ಲೋ ಓದಿದ ನೆನಪು, "ಹೊರಗೆಲ್ಲೂ ಸುತ್ತಾಡಲಾಗದಿದ್ದರೇನಂತೆ... ಮನದಾಳದ ಒಳಗೆ ಹೋಗಿ ನೋಡಿ!"  ಇದಂತೂ ಹೇಳಲು ಬಹಳ ಸುಲಭವಾದುದು.  ಆದರೆ ಮನದಾಳದೊಳಗಡೆ ಇಳಿಯಲು ತೊಡಗಿದರೆ, ನೂರೊಂದು ತೊಡಕುಗಳು.  ಜಗದೆಲ್ಲ ಸಮಸ್ಯೆಗಳು ಬಂದು ನಮ್ಮ ಕೊರಳನ್ನು ಸುತ್ತಿಕೊಳ್ಳುವ ಅನುಭವ.  ಇರದ ಜಂಜಡಗಳೆಲ್ಲ ಬಂದು ಒಮ್ಮೆಲೇ ರಭಸದಿಂದ ಅಪ್ಪಳಿಸುವ ಅಳೆಯಂತೆ ಒಂದರ ಹಿಂದೆ ಮತ್ತೊಂದು ಬಂದು ಮನದ ದಂಡೆಯನ್ನು ತಬ್ಬಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಚಂದವಾಗಿ  ಹೊರಗಡೆ ಸುತ್ತಾಡುವ ಮನಸ್ಸಿಗೆ ಒಳಗಿನ ಪಯಣಕ್ಕೆ ಇಷ್ಟೊಂದು ಗಾಭರಿ ಏಕೋ?  ಮನಸ್ಸನ್ನು ತಡುವಿಕೊಂಡು ಒಂದೊಂದೇ ಮೆಟ್ಟಿಲನ್ನು ಇಳಿದು ನೆಲಮಾಳಿಗೆಯ ನೆಲವೇನೋ ತಡಕಾಡೀತೆಂದು ಕಾಲನ್ನು ಆಡಿಸಿ ನೋಡಿದರೆ ಆ ಕತ್ತಲೆಯ ಕೋಣೆಯಲ್ಲಿನ ತೆಳ್ಳಗಿನ ಹವೆ ತನ್ನೊಳಗಿನ ಆರ್ಧ್ರತೆಯೊಂದಿಗೆ ಒಂದು ಕುಮುಟು ವಾಸನೆಯನ್ನೂ ಅಲವತ್ತುಕೊಂಡಿರುವುದರಿಂದಲೋ ಏನೋ ಒಂದು ರೀತಿಯ ತಣ್ಣಗಿನ ಅನುಭವದ ಜೊತೆಗೆ ನಮ್ಮ ಹಳೆಯ ನೆನಪುಗಳ ಪದರಗಳನ್ನು ಪಕ್ಕಳ ಪಕ್ಕಳವಾಗಿ ಕಿತ್ತು ತರುವುದು.

***

ಸದಾ ಸುಖವನ್ನು ಬಯಸುವ ನಾವು, ಸಾವಿಗೆ ಹೆದರುವ ಸಂತತಿಯಾಗಿ ಇತಿಹಾಸದಲ್ಲಿ ದಾಖಲಾಗಲಿದ್ದೇವೆ.  ಕಣ್ಣಿಗೆ ಕಾಣದ, ಜೀವವಿದ್ದೂ ಇರದ, ಉಸಿರಿನ ಮೂಲಕ್ಕೇ ತಂತ್ರದಿಂದ ಲಗ್ಗೆ ಹಾಕುವ ಸೂಕ್ಷ್ಮ ಜೀವಿಗಳ ವಿರುದ್ಧ ಹೆಣೆಯುವ ಪಾಟೀ ಸವಾಲುಗಳು ನಮ್ಮಲ್ಲಿಲ್ಲ.  ನಾವು ಈ ಯುದ್ಧಕ್ಕೆ ಸನ್ನದ್ದರಾದವರಂತೂ ಅಲ್ಲವೇ ಅಲ್ಲ.  ಒಂದು ದೇಶದ ಮಿಲಿಟರಿ ಪಡೆಗೆ ಶತ್ರುಗಳ ವಿರುದ್ಧ ಸೆಣೆಸಾಡುವ ತರಬೇತಿಯನ್ನು ನೀಡಲಾಗಿರುತ್ತದೆ.  ನಿಜವಾದ ಯುದ್ಧವಿರಲಿ, ಇಲ್ಲದಿರಲಿ ಒಂದು ಸಿಮ್ಯುಲೇಟೆಡ್ ಎನೈರ್‌ಮೆಂಟಿನಲ್ಲಾದರೂ ಅವರಿಗೆ ಯುದ್ಧದ ಆಗು-ಹೋಗುಗಳನ್ನು ಅರಿವಿಗೆ ಮೂಡಿಸಿ ಅವರನ್ನು ತಕ್ಕ ಮಟ್ಟಿಗೆ ತಯಾರು ಮಾಡಿರಲಾಗುತ್ತದೆ.  ಅವರು ತಮ್ಮ ಮೈ-ಮನಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಗಾಗ್ಗೆ ಕವಾಯತ್ ಅನ್ನಾದರೂ ಮಾಡಿಕೊಂಡು ತಯಾರಿರುತ್ತಾರೆ.  ಆದರೆ, ವಿಶ್ವದಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು, ನರ್ಸುಗಳು, ಮೊದಲಾದವರಿಗೆ ಈ ರೀತಿಯ ಯುದ್ಧಕಾಲದ ಯಾವುದೇ ತಯಾರಿಯೂ ಇರೋದಿಲ್ಲ.  ಮೆಡಿಕಲ್ ಸ್ಕೂಲ್‌ನಲ್ಲಿ ಓದು ಮುಗಿಸಿ ರೆಸಿಡೆನ್ಸಿ ಮಾಡಿದವರೆಲ್ಲರೂ ಈ ಕಣ್ಣಿಗೆ ಕಾಣದ ಶತ್ರುಗಳನ್ನು ಹೊಡೆದೋಡಿಸೋ ಯೋಧರಲ್ಲ.  ಪ್ರತಿ ದಿನವೂ ಎದ್ದು ಕೊರೋನಾ ವೈರಸ್ ಸೋಂಕಿದ ರಣರಂಗಕ್ಕೆ ಸೇವಾ ಮನೋಭಾವನೆಯಿಂದ ಹೋಗಿ, ಕೈಲಾದ ಸೇವೆಯನ್ನು ಮಾಡಿ, ಯಾವುದೇ ಸೋಂಕನ್ನು ತಮಗೆ ತಗುಲಿಸಿಕೊಳ್ಳದೇ, ಇನ್ನೊಬ್ಬರಿಗೆ ಹರಡದೇ, ಕೆಲಸ ಮುಗಿದ ಮೇಲೆ ಮತ್ತೆ ಮನೆಗೆ ಬಂದು ತಮ್ಮ ಕುಟುಂಬದವರನ್ನು ಸಂತೈಸುವ ಕೆಲಸ ಮಾಡುತ್ತಿರುವ ಈ ಎಲ್ಲ ಯೋಧರಿಗೂ ಈ ಯುದ್ಧದಲ್ಲಿ ಬದುಕುಳಿದ ನಾವೆಲ್ಲರೂ ಚಿರಋಣಿಗಳಾಗುತ್ತೇವೆ.  ಈ ಮೆಡಿಕಲ್ ಫೀಲ್ಡ್‌ನಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಇಂಥ ಯೋಧರದ್ದು ನಿಜವಾದ ಕೆಚ್ಚೆದೆ, ಇವರೇ ಇಂದಿನ ಹೀರೋಗಳು.  ನಮ್ಮ ಮಾನವ ಜನಾಂಗ ಮುಂದಿನ ಹೆಜ್ಜೆ ಇಡುವಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುತ್ತಿರುವ ಯೋಧರು.

Thursday, January 01, 2009

ಹೊಸತು ಹಳೆಯದರ ನಡುವೆ

2008 ಅನ್ನೋದು ಈಗ ಇತಿಹಾಸ, ಇಷ್ಟೊತ್ತಿಗಾಗಲೇ ವಿಶ್ವದೆಲ್ಲಾಕಡೆ ಗಡಿಯಾರಗಳು ೨೦೦೯ ನ್ನು ತೋರಿಸ್ತಿರೋ ಹೊತ್ತಿನಲ್ಲಿ ಒಬ್ಬರೊನ್ನೊಬ್ಬರು ಕರೆ ಮಾಡಿ ’ಹೊಸ ವರ್ಷದ ಹಾರ್ಧಿಕ ಶುಭಾಶಯಗಳು’ ಎಂದು ವಿಶ್ ಮಾಡೋದು ನಿಂತು ಹೋಗಿರಬಹುದು. ಈ ಹಿಂದೆ ಹಲವಾರು ಸಾರಿ ಬರೆದ ಹಾಗೆ ನಾವು ನಮ್ಮನ್ನು ಇಂಗ್ಲೀಷ್ ಕ್ಯಾಲೆಂಡರಿಗೆ ಸಮರ್ಪಿಸಿಕೊಂಡಿದ್ದೇವೆ. ನಮ್ಮ ಮಾರ್ಚ್-ಏಪ್ರಿಲ್ ತಿಂಗಳ ನಡುವೆ ಎಲ್ಲೋ ಬರುವ ಚಂದ್ರಮಾನ ಯುಗಾದಿ, ಚೈತ್ರ ಮಾಸ ವಸಂತ ಋತು ಉತ್ತರಾಯಣ ಪುಣ್ಯಕಾಲಾರಂಭ ಇವೆಲ್ಲವೂ ನಿಧಾನವಾಗಿ ಮರೆಯಾಗುತ್ತಿವೆ. ಇದೇ ಹಾಡನ್ನು ಸ್ವಲ್ಪ ಜೋರಾಗಿ ಹಾಡಿದರೆ ’ಹಿಂದೂ ಮೂಲಭೂತವಾದಿ’ಯಾಗಿ ಬಿಡಬಹುದಾದ ಸಾಧ್ಯತೆಗಳೂ ಇವೆ, ಹಾಡನ್ನು ಹಾಡದೇ ಸುಮ್ಮನಿದ್ದರೆ ನಮ್ಮತನವನ್ನು ಕಳೆದುಕೊಂಡ ಅನುಭವಾಗುವುದೂ ನಿಜವೇ ಹೌದು.

ನಿನ್ನೆ ರಾತ್ರಿಯ ಇಪ್ಪತ್ತರ ಡಿಗ್ರಿ ಫ್ಯಾರನ್‌ಹೈಟ್ ಛಳಿಯಲ್ಲಾಗಲೀ ಇಂದು ಹೊಸ ವರ್ಷದ ದಿನದಲ್ಲಾಗಲೀ ಹೆಚ್ಚಿನ ಬದಲಾವಣೆಯೇನೂ ಇಲ್ಲ. ಬೇವುಗಳು ಇನ್ನೂ ಚಿಗುರಿಲ್ಲ, ಬೆಲ್ಲ ಮಾಡುವ ಸೀಜನ್ನೂ ಅಲ್ಲ. ಮರಗಳೆಲ್ಲ ಮರಗಟ್ಟಿ ಹೋಗೀ ನಿತ್ಯ ಹರಿದ್ವರ್ಣಿಗಳ ಮೇಲಿನ ಹಸಿರನ್ನು ಹೊರತುಪಡಿಸಿದರೆ ಮತ್ತೆಲ್ಲಾ ಛಳಿಯ ಬಣ್ಣವನ್ನು ಹೊದ್ದಿರುವ ಹೊರಗಿನ ವಾತಾವರಣ. ಅಲ್ಲಲ್ಲಿ ಬಿದ್ದ ಹಿಮ, ಮತ್ತೆ ಅದೇ ಅದರ ಛಳಿಗೆ ಹರಳುಗಟ್ಟಿ ಘನೀಭವಿಸಿ ಮತ್ತಿನ್ನಷ್ಟು ಶೀತಲತೆಯನ್ನು ಮುಖದ ಮೇಲೆ ತಂದುಕೊಂಡು ನೋಡೋಕೆ ಪುಡಿಯಂತೆ ಕಂಡುಬಂದರೂ ಒಳಗೆ ಗಟ್ಟಿಪದರವನ್ನು ಕಟ್ಟಿಕೊಂಡು ತನ್ನ ಮೈ ಶಾಖದಲ್ಲಿ ತಾನು ಯಾವುದೋ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಹೆಮ್ಮೆಯಿಂದ ಬೀಗುತ್ತಿರುವ ಹಾಗೆ ಕಂಡುಬಂತು. ಬೇಕಾದಷ್ಟು ಬೀಸುತ್ತಿರುವ ಗಾಳಿಗೆ ತಲೆ ತೂಗೀ ತೂಗೀ ಕಂಗಾಲಾದ ಮರಗಳು ಯಾವುದೋ ದಿಕ್ಕಿನಲ್ಲಿ ಅವಿತುಕೊಂಡ ವಾಯು-ವರುಣರಿಗೆ ಚಪ್ಪೆ ಮುಖವನ್ನು ತೋರಿಸುವಷ್ಟು ದೀನರಾಗಿ ಹೋಗಿದ್ದರೆ, ಕಪ್ಪಾದ ರಸ್ತೆಯ ಮೇಲ್ಮೈ ಸಹ ಇಂದು ಬೀಳದ ಬಿಸಿಲಿಗೆ ಶಪಿಸುತ್ತಾ ತಮ್ಮ ಕಳೆದುಕೊಂಡ ಕಾವಿಗೆ ಚಡಪಡಿಸಿ ತಮ್ಮ ಮೈ ಮೇಲೆ ತೆಳ್ಳಗೆ ಸವರಿದ ಬಿಳಿಯ ಮಂಜಿನ ಪುಡಿಗೆ ಹೆದರಿಕೊಂಡಿದ್ದವು. ನಿನ್ನೆ-ಇಂದಿಗೆ ಹೆಚ್ಚು ವ್ಯತ್ಯಾಸ ಕಂಡು ಬರದ ನನ್ನ ಹಾಗಿನ ಉಳಿದವೆಲ್ಲವೂ ಇದೊಂದು ದಿನ ಮತ್ತೊಂದು ದಿನ ಎಂದುಕೊಂಡು ಸುಮ್ಮನಿದ್ದವು.

ಹಳೆಯ ವರ್ಷ ಗೆದ್ದವರು ಬಿದ್ದವರೆದ್ದೆಲ್ಲವನ್ನು ಟಿವಿ ಪರದೆ ತಾನು ತೋರಿಸಿಯೇ ತೀರುತ್ತೇನೆ ಎಂದು ಸೆಡ್ಡು ಹೊಡೆದುಕೊಂಡು ನಿಂತಿತ್ತು. ಈ ವರ್ಷದ ಆರಂಭದ ಕ್ಷಣಗಣನೆ ಮುಗಿದು ಘಂಟೆಗಳೇ ಕಳೆದಿದ್ದರೂ ಹೊಸತಕ್ಕೆ ಈಗಾಗಲೇ ಹೋದವರಿಗಿಂತಲೂ ಹಳೆಯದ್ದಕ್ಕೆ ಅಂಟಿಕೊಂಡವರಿಗಿಂತಲೂ ಇನ್ನೂ ಹಳೆಯದು-ಹೊಸತರ ನಡುವೆ ಓಲಾಡುತ್ತಿರುವವರು ಓಲಾಡುತ್ತಲೇ ಇರುವವರ ಹಾಗೆ ಕೆಲವು ಚಿತ್ರಗಳಲ್ಲಿ ಕಂಡುಬಂತು. ಕ್ಯಾಲೆಂಡರಿನ ದಿನ ಬದಲಾದಂತೆ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ತೊಲಗಿ ಹೋದವು ಎಂದುಕೊಂಡು ಬೀಗಿ ನಿಂತವರು ಈ ಮೊದಲು ಹೇಳಿದ ಯಾವುದೇ ಗುಂಪಿನಲ್ಲಿ ಸೇರದೇ ತಮ್ಮದೇ ಒಂದು ಪಂಥವನ್ನು ಕಟ್ಟಿಕೊಂಡವರಂತೆ ಕಂಡುಬಂದರು. ’ಹಾಗಾದರೆ ನಮ್ಮೆಲ್ಲ ಕಷ್ಟಗಳೆಲ್ಲ ತೊಲಗಿದವೇನು ಇಂದಿಗೆ?’ ಎಂದು ನಾನೆಸೆದ ಪ್ರಶ್ನೆಯೊಂದಕ್ಕೆ ನಮ್ಮ ಬ್ಯಾಂಕಿನ ಮ್ಯಾನೇಜರಿಣಿ ’ಇದು ಕೇವಲ ಐಸ್‌ಬರ್ಗಿನ ತುದಿ ಮಾತ್ರ!’ ಎಂದು ಈಗಾಗಲೇ ಕುಸಿದ ವ್ಯವಸ್ಥೆ ಮತ್ತಿನ್ನಷ್ಟು ಕುಸಿದು ಹೋಗುವ ಮುನ್ಸೂಚನೆಯನ್ನು ನೀಡಿದಳು. ಅದೇ ಐಸ್‌ಬರ್ಗ್ - ಅದೆಷ್ಟೋ ವರ್ಷಗಳಿಂದ ಹರಳುಕಟ್ಟಿದ ಹಿಮ, ನೀರಿನ ಒಳಗೇ ತನ್ನದೊಂದು ಪುಟ್ಟ ಪ್ರಪಂಚದ ವಾಸ್ತ್ಯವ್ಯವನ್ನು ಸ್ಥಾಪಿಸಿಕೊಂಡಿರುವ ಅದು ಅಷ್ಟು ಸುಲಭವಾಗಿ ಕರಗಲಾರದು, ಅದು ಪುಡಿಯಾಗಿ-ಕರಗುವ ಮೊದಲು ಅದೆನ್ನೆಷ್ಟು ಟೈಟಾನಿಕ್ ವ್ಯವಸ್ಥೆಗಳನ್ನು ಬಲಿತೆಗೆದುಕೊಳ್ಳಬೇಕೋ ಬಲ್ಲವರಾರು?

ನಿನ್ನೆಗೆ ಕೊರಗಬಾರದು, ನಾಳೆಗೆ ನರಳಬಾರದು, ಇಂದಿನದನ್ನು ಇಂದೇ ನೋಡಿ ಅನುಭವಿಸಿ ತೀರುವ ಪುಟ್ಟದೊಂದು ತಂತ್ರ. ಆ ತಂತ್ರದಲ್ಲಿನ ಸೂತ್ರದಾರನ ಬೆನ್ನಿಗೆ ಎಲ್ಲೆಲ್ಲಿಂದಲೋ ಹೊತ್ತು ತಂದ ಈವರೆಗೆ ಶೇಖರಿಸಿಕೊಂಡ ಒಂದಿಷ್ಟು ಬ್ಯಾಗುಗಳು. ನಾಗಾಲೋಟದ ಮನಸು, ಅದಕೆ ವ್ಯತಿರಿಕ್ತವಾಗಿ ಗಟ್ಟಿಯಾದ ಭೂಮಿಗೆ ಅಂಟಿಕೊಂಡು ಅದರಲ್ಲಿನ ಘರ್ಷಣೆ ಅದರ ಮೇಲ್ಮೈ ಎತ್ತಿ ಕೊಡುವ ವಿರುದ್ಧ ಬಲದ ಸಹಾಯದಿಂದ ನಿಧಾನವಾಗಿ ಚಲಿಸುವ ಕಾಲುಗಳು, ಹೊಟ್ಟೆಗಾಗಿ ಏನೇನೋ ಮಾಡೋ ಜೀವದ ಸಂತೃಪ್ತಿಗೆ ಮತ್ತೆ ಅದೇ ನೆಲದಲ್ಲಿ ಸಿಕ್ಕ ಅಂಶಗಳಿಂದ ಪೋಷಣೆ. ಮತ್ತೆ ಎಲ್ಲರಿಗೂ ಇದ್ದು ಯಾರಿಗೂ ಸಿಗದಿರುವ ಪಂಚಭೂತಗಳು. ಈ ತಂತ್ರಗಾರಿಕೆಯ ವ್ಯವಸ್ಥೆಯನ್ನು ಚಲಾಯಿಸೋದಕ್ಕೆ ಅವರವರ ದುಡ್ಡೂ-ಕಾಸು, ಅದಕ್ಕೆ ತಕ್ಕನಾದ ಮೋಜು-ಮಸ್ತಿ. ಮನೆಯಲ್ಲಿದ್ದರೆ ಕೆಲಸದ ಬಗ್ಗೆ, ಕೆಲಸದಲ್ಲಿದ್ದರೆ ಮನೆಯ ಬಗ್ಗೆ ಚಿಂತಿಸುವ ಕೊರಗು. ಅದ್ಯಾರೋ ದೊಡ್ಡ ಮನುಷ್ಯರು ಹೇಳಿದ ಹಾಗೆ ಇರೋದನ್ನೆಲ್ಲ ಬಿಟ್ಟು ಇರುದುದರೆಡೆಗೆ ತುಡಿವ ಮರುಗು.

ಈ ಆಸೆಯದ್ದೇ ವಿಶೇಷ - ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವ ಹೋಪ್ ಬಹಳ ಪ್ರಭಲವಾದದ್ದು. ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಹಲವಾರು ವರ್ಷಗಳಲ್ಲಿ ಬಿದ್ದ ದಿನಗಳಿಗಿಂತಲೂ ಮೇಲೆ ಎದ್ದ ದಿನಗಳೇ ಹೆಚ್ಚಾದರೂ ಕಳೆದುಕೊಳ್ಳುವವರಿಗೆ ಕಳೆದುಕೊಂಡವರಿಗೇನೂ ಕಡಿಮೆ ಇಲ್ಲ. ಒಬ್ಬರು ಕಳೆದುಕೊಂಡರೆ ತಾನೇ ಮತ್ತೊಬ್ಬರು ಗಳಿಸೋದು - ಆದರೆ ಅದು ಯಾವ ನ್ಯಾಯ? ಹಾಗಾದರೆ ಈ ಪ್ರಪಂಚದಲ್ಲಿ ಕೂಡುವವರು ಇದ್ದಾರೆಂದರೆ ಕಳೆಯುವವರೂ ಇದ್ದಾರೆ ಎಂತಲೇ ಅರ್ಥವೇ? ಇದೆಲ್ಲದರ ಒಟ್ಟು ಮೊತ್ತ ಯಾವಾಗಲೂ ಶೂನ್ಯವೇ? ಹಾಗಿದ್ದ ಮೇಲೆ ಕೊಡು ಕೊಳ್ಳುವ ವ್ಯವಹಾರವಾದರೂ ಏಕೆ ಬೇಕು? ಕೂಡುವುದು ನಿಜವಾದ ಮೇಲೆ, ಅದರ ಜೊತೆಗೆ ಕಳೆದುಕೊಳ್ಳುವುದೂ ನಿಜವೆಂದ ಮೇಲೆ ಶ್ರೀ ಕೃಷ್ಣ ಉಪದೇಶ ಮಾಡಿದ ಸ್ಥಿತಪ್ರಜ್ಞ ಸ್ಥಿತಿಯನ್ನು ಜನರು ಅದೇಕೆ ತಲುಪೋದಿಲ್ಲ? ಸಾಕು ಎನ್ನುವುದು ಹೆಚ್ಚು ಕೇಳಿ ಬರದಿರುವಾಗ ಬೇಕು ಎನ್ನುವುದು ಪ್ರಭಲವಾಗಿ ಕಂಡರೆ ಅದೊಂದೇ ಅನನ್ಯವಾದರೆ, ಅದೇ ಸ್ಥಿತಿ ಎಲ್ಲರಲ್ಲೂ ಸೇರಿಕೊಂಡರೆ, ಬೇಕು ಎನ್ನುವುದೇ ಬದುಕಾದರೆ...ಬೇಕು ಎನ್ನುವ ಆಸೆಗೆ ಕೂಡುವುದು ಇದೇ ಜೊತೆಗೆ ಕಳೆಯುವುದೂ ಇದೆ ಎಂದ ಮೇಲೆ ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವುದು ಎಷ್ಟರ ಮಟ್ಟಿಗೆ ಸರಿ; ಜೊತೆಗೆ ಒಬ್ಬರ ಒಳಿತು ಇನ್ನೊಬ್ಬರ ಒಳಿತಾಗಬೇಕೆಂದೇನೂ ಇಲ್ಲ ಎಂದು ಯೋಚಿಸಿಕೊಂಡಾಗ ಅದೇ ಶೂನ್ಯದ ಸಂಭ್ರಮ, ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ತುಂಬಿಕೊಂಡ ಶುಷ್ಕ ನಗೆ.