ಎಲ್ಲರ ಮಹಾತಾಯಿ ನೀರಿನ ಹಲವಾರು ರೂಪಗಳು ನಮಗೆಲ್ಲಾ ಪರಿಚಿತವೇ, ವಿಶ್ವದ ತುಂಬೆಲ್ಲಾ ತುಂಬಿಕೊಂಡು ಅನೇಕಾನೇಕ ರೂಪಗಳಲ್ಲಿ ಜೀವಕುಲದ ಬೆಳವಣಿಗೆಯ ಮಾಧ್ಯಮವಾಗಿರುವ ಅಪಾರ ಜಲರಾಶಿ ಹಾಗೂ ಅದರ ವಿಶ್ವಸ್ವರೂಪವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಘನ ಗಾಳಿ ಹಾಗೂ ದ್ರಾವಕ ರೂಪ (ಸ್ಥಿತಿ) ದಲ್ಲಿ ಮಾತ್ರ ಇರಬಹುದಾದ ಒಂದು ವಸ್ತು, ರುಚಿ ಇಲ್ಲದ್ದು, ಬಣ್ಣವಿಲ್ಲದ್ದು ಎಂದೇನೇ ಓದಿಕೊಂಡು ಬಂದು ನಮ್ಮ ಗಂಟು ಮೂಟೆಗಳ (Bags) ಸಮೇತ ಅಮೇರಿಕಕ್ಕೆ ಬಂದರೂ ಇಲ್ಲಿಗೆ ಬಂದ ಮೇಲೆ ಇವೇ ಇಷ್ಟು ಸ್ಥಿತಿಗಳಲ್ಲಿ ಇನ್ನೂ ಹಲವಾರು ರೀತಿಯ ನೀರಿನ ದರ್ಶನವಾಗಿದ್ದು ಮಹದಾಶ್ಚರ್ಯಗಳಲ್ಲೊಂದು.
ಭಾರತದಲ್ಲೂ ಹಿಮಾಲಯವಿದೆ, ಕಾಶ್ಮೀರವಿದೆ - ಆದರೆ ನಾವು ಕಂಡ ಹಿಮವೇನಿದ್ದರೂ ಚಿತ್ರ ಅಥವಾ ಟಿವಿ ಪರದೆಯ ನೋಟಕ್ಕೆ ಮಾತ್ರ ಸೀಮಿತವಾಗಿತ್ತು. ಇಲ್ಲಿಗೆ ಬಂದ ಮೇಲೇನೇ ಅದು "ಸ್ನೋ" ಎನ್ನುವ ಬೃಹತ್ ಆಕಾರವನ್ನು ತಳೆದು ವರ್ಷದ ಆರು ತಿಂಗಳ ಛಳಿಯ ವಾತಾವರಣದ ಅನುಭವಗಳ ಅವಿಭಾಜ್ಯ ಅಂಗವಾಗಿ ಹೋಯಿತು. ಸ್ನೋ, ಸ್ಲೀಟ್, ಫ್ರೀಜಿಂಗ್ ರೈನ್, ಬ್ಲ್ಯಾಕ್ ಐಸ್, ಪೌಡರಿ ಸ್ನೋ, ಸ್ಟಿಕ್ಕಿಂಗ್ ಸ್ನೋ, ಸ್ನೋ ಫ್ಲೇಕ್ಸ್, ಹೇಯಿಲ್ (Hail), ಗ್ರಾಪೆಲ್ (Graupel), ರೈಮ್ (Rime), ಸ್ಲಷ್ (Slush) ಇನ್ನೂ ಹಲವಾರು ರೀತಿ/ರೂಪಗಳಲ್ಲಿ ಕಂಗೊಳಿಸುವ ಈ ತಾಯಿಯ ವಿಶ್ವರೂಪವನ್ನು ವರ್ಣಿಸುವುದೇ ಅಸದಳ, ಅದು ನನ್ನ ಭಾಷೆಗೆ ಮೀರಿದ ಮಾತು.
***
ಮನೆಯ ಬದಿಯಲ್ಲಿನ ಕರಿಯ ಡ್ರೈವ್ ವೇ ಮುಖದ ಮೇಲೆ ನಿಸರ್ಗ ಅಗಾಧವಾದ ಸ್ನೋ ಪ್ಲೇಕ್ಸ್‌ಗಳನ್ನು ಒಂದರ ಹಿಂದೆ ಒಂದರಂತೆ ಸುರಿಸುತ್ತಲೇ ಇತ್ತು, ಈ ಮಹಾಲೀಲೆಯ ಮುಂದೆ ನಾನು ಹೋಮ್‌ಡಿಪೋದಲ್ಲಿ ಖರೀದಿಸಿ ಹರಡುತ್ತಿರುವ ಸಣ್ಣ ಸಣ್ಣ ಬಿಳಿಯ ಉಪ್ಪಿನ ಹರಳಿನ ಗುಂಡುಗಳು ಹೊಳೆಯಲ್ಲಿ ಹುಣಿಸೇಹಣ್ಣು ಕಲಿಸಿದ ಆಗಿ ಹೋಗಿಹೋಗಿತ್ತು. ಶಾಲೆಯಲ್ಲಿ ಓದಿದ ಹಾಗೆ ನೀರಿಗೆ ಉಪ್ಪು ಸೇರಿಸಿದಾಗ ಅದು ಕುದಿಯುವ ತಾಪಮಾನವನ್ನು ಹೆಚ್ಚಿಸುತ್ತದೆ, ಘನೀಭವಿಸುವ ತಾಪಮಾನವನ್ನು ಕುಗ್ಗಿಸುತ್ತದೆ ಎಂಬುದನ್ನು ಇಲ್ಲಿ ಅಕ್ಷರಷಃ ನಂಬಿಕೊಂಡು ನಿಧಾನವಾಗಿ ಉಪ್ಪಿನ ಹರಳುಗಳನ್ನು ಹರಡುತ್ತಲೇ ಹೋದೆ (elevation of boiling point, depression of freezing point), ಈ ನಿಯಮಗಳನ್ನು ನಾನು ನೆನಪಿನಲ್ಲಿಟ್ಟುಕೊಂಡಿದ್ದೆನೇನ್ನುವ ಒಂದು ಸರಳ ಅಭಿಮಾನವನ್ನೂ ಪ್ರಶಂಸಿಸದ ನಿರ್ದಯಿ ಮುಗಿಲು ನಮ್ಮ ಮನೆಯ ಮುಂದೆ ಸ್ನೋ ಸುರಿಸುತ್ತಲೇ ಹೋಯಿತು. ಇದೀಗ ಬಿದ್ದ ಸ್ನೋವನ್ನು ತೆಗೆಯುವಲ್ಲಿ ಕೆಲವೇ ಘಂಟೆಗಳ ವಿಳಂಬಕ್ಕೆ ಮನಸೋತ ನಾನು, ಕೊನೆಗೆ ಅದನ್ನು ತೆಗೆಯಲು ಒದ್ದಾಡೀ ಒದ್ದಾಡೀ ಅದನ್ನು ಹಾಗೆ ಬಿಟ್ಟು ಕರಿಯ ಡ್ರೈವ್ ವೇ ಮೇಲೆ ಬಿಳಿಯ ಕಾಂಕ್ರೀಟಿನ ಹಾಗೆ ಬಿದ್ದುಕೊಂಡು ಕಲ್ಲಿಗಿಂತಲೂ ಗಟ್ಟಿಯಾದ ಐಸ್ ಅನ್ನು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡಿ ಅನುಭವಿಸುವ ಆಸಕ್ತಿಯಿಂದ ಚೂಪಾದ ಉಕ್ಕಿನ ಶೆವೆಲ್ ತೆಗೆದುಕೊಂಡು ಕೆದಕುತ್ತಲೇ ಹೋದರೆ ಜಪ್ಪಯ್ಯಾ-ಜುಪ್ಪಯ್ಯಾ ಎಂದರೂ ಒಂದಿಂಚೂ ಕದಲಲಿಲ್ಲ!
ಅದು ಅಲ್ಲಿಯೇ ಬಿದ್ದು ಸಾಯಲಿ ಎಂದುಕೊಂಡು ಎಷ್ಟು ಸಾಧ್ಯವೋ ಅಷ್ಟನ್ನು ಮನೆಯ ಮುಂದೆ ಹಾಗೂ ಬದಿಗೆ ಸ್ವಚ್ಛ ಮಾಡಿಕೊಂಡು ಅದರ ಮೇಲೆ ಕಾರನ್ನು ಓಡಿಸಿಕೊಂಡು ಇವತ್ತಿಗೂ ಇರುವ ನನ್ನನ್ನು ನನ್ನ ನೆರೆಹೊರೆಯವರು ಮಹಾ ಸೋಂಬೇರಿ ಎಂದು ಈಗಾಗಲೇ ಹಣೆಪಟ್ಟಿ ಕಟ್ಟಿಕೊಂಡಿರಬಹುದು, ಅವರು ಏನೆಂದುಕೊಳ್ಳುತ್ತಾರೆ ಎಂದು ನಾನಾದರೂ ಏಕೆ ಯೋಚಿಸಲಿ? ಹಾಗೆ ಯೋಚಿಸಿದ ಮಾತ್ರಕ್ಕೆ ಅವರೇನಾದರೂ ಬಂದು ಸ್ವಚ್ಛ ಮಾಡಿಕೊಡುತ್ತಾರೇನು? ಅಕ್ಕಪಕ್ಕದವರ ಮನೆಯ ಮುಂದಿನ ಲಾನ್ ಅನ್ನು ನೋಡಿದರೆ ಅಲ್ಲಿ ಈಗಷ್ಟೇ ಸಗಣಿ ಸಾರಿಸಿಟ್ಟ ಹಾಗೆ ನುಣುಪಾಗಿ ಐಸ್‌ನಿಂದ ಮಾಡಿದ ಜಗುಲಿ ಕಂಡುಬರುತ್ತಿತ್ತು. ಕೊನೇಪಕ್ಷ ಈ ಜಗುಲಿಯ ರೂಪದಲ್ಲಾದರೂ ಎಲ್ಲರ ಮನೆಯ ಮುಂದೆ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಎನ್ನುವ ಸಮಾಧಾನವೂ ಮನದಲ್ಲಿ ಮನೆ ಮಾಡಿಕೊಂಡಿತು.
ಕಾರನ್ನು ತೆಗೆದುಕೊಂಡು ಆಫೀಸಿಗೆ ಹೋಗುವ ಮಾರ್ಗದಲ್ಲಿ ಈಗಾಗಲೇ ಎಲೆಗಳನ್ನು ಕಳೆದುಕೊಂಡು ಬೋಳಾದ ಮರಗಳ ನಡುವೆ ಸೂರ್ಯನ ಕಿರಣಗಳು ಹೊರಗೆ ಬರಲೋ ಬೇಡವೋ ಎನ್ನುವ ಮುಜುಗರದಿಂದಲೋ ಎನ್ನುವಂತೆ ಸಾವಕಾಶವಾಗಿ ಹರಡುತ್ತಿದ್ದವು. ಹಸಿರಿನ ಹಿನ್ನೆಲೆಯಲ್ಲಿ ಕಂಗೊಳಿಸಬೇಕಾದ ಬಿಳಿಯ ಬೆಳಕು ಎತ್ತ ನೋಡಿದರತ್ತ ಬಿದ್ದ ಬಿಳಿಯ ಸ್ನೋ, ಐಸ್ ಮೇಲೆ ಬಿದ್ದು ಪ್ರತಿಫಲನವಾಗುತ್ತಲೇ ನಾನು ಇದ್ದಲ್ಲೇ ದ್ವಿಗುಣ, ತ್ರಿಗುಣನಾಗುತ್ತೇನೆ ಎಂದು ಒಮ್ಮೆ ಹೆಮ್ಮೆಯಿಂದ ಬೀಗುವಂತೆ ಕಂಡುಬಂದರೂ, ಕಾರಿನ ಡಯಲಿನಲ್ಲಿ ತೋರಿಸುತ್ತಿದ್ದ 23 ಡ್ರಿಗ್ರಿ ಫ್ಯಾರನ್‌ಹೈಟ್ ಉಷ್ಣತೆ - ನಿಮ್ಮ ಆಟವೇನೂ ನಡೆಯೋದಿಲ್ಲ - ಎಂದು ಸೂರ್ಯ ಕಿರಣಗಳ ಬಿಮ್ಮನ್ನು ಕುಸಿಯುವಂತೆ ಮಾಡಿತ್ತು. ಮರಗಳ ಮೇಲೆ ತಲೆಯೆತ್ತಿ ನೋಡುತ್ತೇನೆ, ಪ್ಲಾಟಿನಮ್‌ನಲ್ಲಿ ಮಾಡಿದ ಜುಮುಕಿ ತೊಟ್ಟ ಮದುವಣಗಿತ್ತಿಯಂತೆ ಮರಗಳ ತುದಿಗಳು ತಮ್ಮ ಮೇಲೆ ಹರಳುಕಟ್ಟಿದ ಐಸ್ ಕ್ರಿಸ್ಟಲ್ಲುಗಳನ್ನು ಹೊತ್ತುಕೊಂಡು ಬಿಸಿಲಿಗೆ ಕಂಗೊಳಿಸುತ್ತಿವೆ. ಇನ್ನೂ ಕೆಲವು ಬೃಹದಾದ ಮರದ ತುದಿ ಅದ್ಯಾವುದೋ ದೊಡ್ಡ ಹೊಟೇಲೋ ಕ್ಯಾಸಿನೋಗಳಲ್ಲಿರುವ (ಚಾ)ಶಾಂಡಲೀಯರ್‌ಗಳನ್ನು ನೆನಪಿಸುತ್ತಿದ್ದವು. ಹೊರಗಡೆ ಛಳಿ ಇದ್ದು ಈ ಮರಗಳು ಸುರುಟಿ ಹೋಗುವುದಂತೂ ನಿಜ, ಜೊತೆಗೆ ತಮ್ಮ ಮೇಲಿನ ಐಸ್‌ನ ಭಾರವನ್ನೂ ಹೊತ್ತುಕೊಂಡಿರಬೇಕಲ್ಲ ಎಂದು ಮೊದಲ ಬಾರಿಗೆ ಮರಗಳ ಬಗ್ಗೆ ಅನುಕಂಪ ಮೂಡಿತು, ಜೊತೆಗೆ ಅವರವರ ಕರ್ಮ ಅವರಿಗೆ ಎಂಬ ವೇದಾಂತದ ಅಲೋಚನೆಯೂ ಹೊರಗೆ ಬಂತು.
***
ಪುಷ್ಪಕ ವಿಮಾನ ಸಿನಿಮಾದಲ್ಲಿ ಖಳನೊಬ್ಬ ಐಸ್‌ನಲ್ಲಿ ಮಾಡಿದ ಚೂರಿಯಿಂದ ಇರಿದು ಕೊಲ್ಲಲು ಪ್ರಯತ್ನಿಸುವ ದೃಶ್ಯ ನೆನಪಿಗೆ ಬಂತು. ಆ ಸಿನಿಮಾವನ್ನು ಭಾರತದಲ್ಲಿ ನೋಡಿದವರಿಗೆ ಮಂಜು ಕಟ್ಟಿದ ನೀರು ಉಕ್ಕಿನಷ್ಟು ಗಟ್ಟಿ ಇರಬಲ್ಲದೇ ಎಂಬ ಸಂಶಯ ಮೂಡಿರಲೂಬಹುದು. ಆದರೆ ಅತಿ ಕಡಿಮೆ ತಾಪಮಾನದಲ್ಲಿ ಹರಳುಗಟ್ಟಿದ ಮಂಜೂ ಸಹ ಉಕ್ಕಿನಷ್ಟೇ ಕಠಿಣವಾದದ್ದು ಎಂದು ನೋಡಿ ಅನುಭವಿಸಿದವರಿಗೇ ಗೊತ್ತು. ವೆದರ್ ಚಾನೆಲ್ಲ್ ಅನ್ನು ತಿರುಗಿಸಿ ನೋಡಿದರೆ ಅಲ್ಲಿ ಒಮಾಹಾ, ನೆಬ್ರಾಸ್ಕಾದಲ್ಲಿ 1 ಡಿಗ್ರಿ ಫ್ಯಾರನ್‌ಹೈಟ್ ತಾಪಮಾನವನ್ನು ತೋರಿಸುತ್ತಿದ್ದರು, ಅದರ ಮುಂದೆ ನಮ್ಮೂರಿನ 26 ಡಿಗ್ರಿ ಫ್ಯಾರನ್‌ಹೈಟ್ ಭಿಕ್ಷುಕರ ಮುಂದೆ ಲಕ್ಷಾಧೀಶ್ವರನ ಹಾಗೆ ಕಾಣಿಸುತ್ತಿತ್ತು.
ಈ ನೀರು ಎನ್ನುವುದಾಗಲೀ, ಅದರ ಅಸಾಧಾರಣ ರೂಪಗಳಾಗಲೀ, ಅದರ ವಿಭಿನ್ನ ಸ್ಥಿತಿಗಳಾಗಲೀ ನನ್ನ ಮನಸ್ಸಿನಲ್ಲಿ ಯಾವತ್ತೂ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡೇ ಇರುತ್ತೆ. ನನ್ನ ಪ್ರಕಾರ ಹೊರಗಿನ ತಾಪಮಾನದ ಹಿನ್ನೆಲೆಯಲ್ಲಿ ನೀರು ಹರಳುಗಟ್ಟುವ ರೀತಿಯನ್ನು ಹಲವಾರು ವರ್ಷಗಳಿಂದ ಅನುಭವಿಸಿ ಬಲ್ಲವರು ಪ್ರಕೃತಿಯ ವಿಶೇಷವಾದ ವ್ಯವಸ್ಥೆಯೊಂದನ್ನು ಹತ್ತಿರದಿಂದ ಬಲ್ಲವರು, ನೀರನ್ನಾಗಲೀ ಅದರ ವಿಭಿನ್ನ ನೆಲೆಗಳನ್ನಾಗಲೀ ಜಯಿಸಿದವರಿಗೆ ಸೋಲೆನ್ನುವುದು ಖಂಡಿತ ಇಲ್ಲ!
ನಾವು ಓದಿದ ಓಡರ್‌ಲೆಸ್ ಕಲರ್‌ಲೆಸ್ ಟೇಸ್ಟ್‌ಲೆಸ್ ಎನ್ನುವ ಒಂದು ಮೂಲಭೂತ ಅಂಶ, ನನ್ನ ಕಣ್ಣ ಮುಂದೆಯೇ ಹಲವಾರು ವಿಸ್ತೃತ ಸ್ವರೂಪವನ್ನು ಧರಿಸಿದ್ದನ್ನು ನೋಡಿದ್ದೇನೆ. ಬಣ್ಣವಿಲ್ಲದ ನೀರು, ಘನೀಭವಿಸಿ ಬಿಳಿಯಾಗಿ ಎಲ್ಲ ಬಣ್ಣವನ್ನೂ ತನ್ನಲ್ಲಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಬಿಳಿಯ ಮೋಡಗಳು ಮಳೆಯನ್ನು ತಾರವು, ಕರಿಯ ಮೋಡಗಳು ಬಿಳಿಯ ಮೋಡಗಳಿಗಿಂತ ದೊಡ್ಡ ದೊಡ್ಡ ಕಣಗಳನ್ನು ಹೊಂದಿರುತ್ತವೆ, ಅವೇ ಮೋಡಗಳಿಗೂ ಬಣ್ಣವನ್ನು ಬದಲಾಯಿಸುತ್ತವೆ ಎಂದು ಓದಿಕೊಂಡು ವಿಜೃಂಭಿಸಿದ್ದೇನೆ. ನೀರಿಗೆ ಹಲವಾರು ರೂಪವಿದೆ, ಭೋಗೋಳದ ಪ್ರತಿಶತ ಎಂಭತ್ತು ಭಾಗವನ್ನು ನೀರು ಅಥವಾ ನೀರಿನ ರೂಪ ಆವರಿಸಿದೆ ಎಂದೆಲ್ಲಾ ಡಿಸ್ಕವರಿ ಚಾನೆಲ್ಲುಗಳಲ್ಲಿ ನೋಡಿದಾಗ ಹುಬ್ಬೇರಿಸಿದ್ದೇನೆ. ನಮ್ಮ ನಿಮ್ಮಲ್ಲೂ ನೀರಡಗಿದೆ, ಈ ನೀರು ನಿಜವಾಗಿಯೂ ಸರ್ವಾಂತರ್ಯಾಮಿ, ಎಲ್ಲರಿಗೂ ಜೀವಜಲವಾದ ನೀರೇ ದೇವರು! (ಬೇಸಿಗೆಯಲ್ಲಿ ಈ ಮಾತು ಬದಲಾಗಿ ಗಾಳಿ, ಮಣ್ಣು, ಅಗ್ನಿ ಮೊದಲಾದ ಪಂಚಭೂತಗಳಿಗೆ ಆದ್ಯತೆಕೊಟ್ಟರಾಯಿತು, ಈಗ ಛಳಿಗಾಲ, ಅದು ನೀರಿನ ಕಾಲ!)