ಇಷ್ಟು ದಿನ ಎಲ್ಲಿತ್ತೋ ಏನೋ ಈಗ ದಿಢೀರನೇ ಬಂದ ಸ್ನೇಹಿತನ ಹಾಗೆ ಸೆಪ್ಟೆಂಬರ್ ಕೊನೇ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ನಾವು ಮುಂಗಾರು ನಿರೀಕ್ಷಿಸೋ ಹಾಗೆ ಮುಂಬರುವ ಛಳಿಗಾಲವನ್ನು ನಿರೀಕ್ಷಿಸೋದು ಅಭ್ಯಾಸವಾಗಿ ಹೋಗಿಬಿಟ್ಟಿದೆ. ಕಳೆದ ವರ್ಷದ ಛಳಿ ಹಾಗಿತ್ತು ಹೀಗಿತ್ತು, ಇನ್ನು ಮುಂಬರುವ ಛಳಿ ಹೇಗಿರುತ್ತೋ ಏನೋ ಎಂಬುದು ಕೆಲವು ಮಾತುಕಥೆಗಳನ್ನು ಆರಂಭಗೊಳಿಸಬಲ್ಲ ವಾಕ್ಯವಾಗಬಹುದು.
ನಾನು ಈ ದೇಶಕ್ಕೆ ಬಂದ ಹೊಸತರಲ್ಲಿ ಮೊದಮೊದಲು ಆಫೀಸಿನ ಎಲಿವೇಟರುಗಳಲ್ಲಿ ಯಾರಾದರೂ What a nice day! ಅಥವಾ Its very nice outside! ಎಂದು ಉದ್ಗಾರವೆತ್ತಿದಾಗೆಲ್ಲ ’ಅಯ್ಯೋ, ಇವರೆಲ್ಲ ಬದುಕಿನಲ್ಲಿ ಬಿಸಿಲನ್ನೇ ನೋಡದವರ ಹಾಗೆ ಆಡುತ್ತಿದ್ದಾರಲ್ಲ!’ ಎಂದು ಸ್ವಗತವನ್ನಾಡಿಕೊಳ್ಳುತ್ತಿದ್ದೆ. ಆದರೆ ನಾನೂ ಈಗ ಅವರಂತೆಯೇ ಆಗಿ ಹೋಗಿದ್ದೇನೆ. ಚೆನ್ನಾಗಿ ಬಿಸಿಲು ಇದ್ದಾಗ ಅದೇನು ಮಾಡುತ್ತೇವೋ ಬಿಡುತ್ತೇವೋ ಆದರೆ ಕೆಟ್ಟ ಛಳಿ ಇದ್ದಾಗೆಲ್ಲ ರಜೆ ಇದ್ದರೂ ಇರದಿದ್ದರೂ ಗೂಡು ಸೇರಿಕೊಂಡು ಬಿಡೋದು ಕೊನೇಪಕ್ಷ ನನ್ನ ಅನುಭವ. ಹೀಗೆ ಬರೋ ಛಳಿ, ವಾತಾವರಣದ ಉಷ್ಣತೆಯನ್ನಷ್ಟೇ ಕಡಿಮೆ ಮಾಡಿದ್ದರೆ ಪರವಾಗಿರಲಿಲ್ಲ, ದಿನದಲ್ಲಿ ಸೂರ್ಯನ ಬೆಳಕು ಬೀಳುವ ಅವಧಿಯನ್ನೂ ಕುಗ್ಗಿಸುವುದು ಕೂಡ ಮನಸ್ಸಿಗೆ ಸಾಕಷ್ಟು ಹಿಂಸೆಯನ್ನು ಉಂಟು ಮಾಡಬಲ್ಲದು. ಡಿಸೆಂಬರ್ ಇಪ್ಪತ್ತೊಂದರ ಹೊತ್ತಿಗೆಲ್ಲಾ ದಿನದ ಸೂರ್ಯನ ಬೆಳಕು ಕೆಲವೇ ಕೆಲವು ಘಂಟೆಗಳಿಗೆ ಸೀಮಿತವಾಗಿ ಇನ್ನೇನು ಪ್ರಪಂಚವೇ ಛಳಿಯಲ್ಲಿ ಸೋಲುತ್ತಿರುವ ಅನುಭವವನ್ನು ಉತ್ತರ ಅಮೇರಿಕಾ ಖಂಡದವರಿಗೆ ಹುಟ್ಟಿಸುತ್ತದೆ.
ಛಳಿ ತನ್ನ ಬೆನ್ನ ಹಿಂದೆ ಹೊತ್ತು ತರುವ ವ್ಯವಹಾರಗಳ ಯಾದಿ ದೊಡ್ಡದು - ಹಿಮ ಬೀಳುವುದನ್ನು ತೆಗೆಯಲು, ಬೆಚ್ಚಗಿನ ಬಟ್ಟೆಗಳನ್ನು ಹೊದೆಯಲು, ಮುಖ-ಮೈ ಚರ್ಮ ಒಡೆದು ಹೋಗದ ಹಾಗೆ ಕ್ರೀಮ್ ಅನ್ನು ಮೆತ್ತಿಕೊಳ್ಳಲು, ಕಾರು-ಮನೆಗಳಲ್ಲಿ ಬೆಚ್ಚಗಿನ ವಾತಾವರಣವನ್ನು ಇಟ್ಟುಕೊಳ್ಳಲು - ವ್ಯಕ್ತಿಯ ಮಟ್ಟದಲ್ಲಿ ಹಾಗೂ ಸಂಸ್ಥೆಗಳಿಗೂ ಅನುಗುಣವಾಗುವಂತೆ ಇನ್ನೂ ಅನೇಕ ರೀತಿಗಳಲ್ಲಿ ಛಳಿ ಇನ್‌ಫ್ಲೂಯೆನ್ಸ್ ಮಾಡುತ್ತದೆ. ಬಿಸಿಲಿನಲ್ಲಿ ಒಂದು ರೀತಿಯ ಸಮಾನತೆಯ ಮಟ್ಟವನ್ನು ಗುರುತಿಸಿದರೂ ಛಳಿಯಲ್ಲಿ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾದ ಹಾಗೆ ಕಂಡು ಬಂದಿದ್ದು ನನ್ನ ಭ್ರಮೆ ಇದ್ದಿರಬಹುದಾದರೂ, ವರ್ಷದ ಆರು ತಿಂಗಳು ಭಾರತದ ಉದ್ದಗಲಕ್ಕೂ ಇದೇ ರೀತಿ ಛಳಿ/ಹಿಮ ಬಿದ್ದು ಹೋಗಿದ್ದರೆ ಏನೇನೆಲ್ಲ ಬದಲಾಗುತ್ತಿತ್ತು ಎಂದು ನಾನು ಬಹಳಷ್ಟು ಯೋಚಿಸಿದ್ದಿದೆ. ಬಿಸಿಲಿನಲ್ಲಿ ಕಂಬಳಿ ಹೊರುವ ನಮ್ಮೂರಿನ ಗ್ವಾರಪ್ಪಗಳಿಂದ ಹಿಡಿದು ರಸ್ತೆ-ರಸ್ತೆಗಳಲ್ಲಿ ಭಿಕ್ಷೆ ಬೇಡುವವರಿಂದ ಹಿಡಿದು ಉಳ್ಳವರ ವರೆಗೆ ಏನೇನೇಲ್ಲ ಬದಲಾಗುತ್ತಿತ್ತು. ಇಲ್ಲಿನ ರಸ್ತೆಗಳು ಅಗಲವಾಗಿರುವುದಕ್ಕೆ ಕಾರಣ ವರ್ಷದ ಮೂರು ತಿಂಗಳು ಬೀಳುವ ಹಿಮ ಎಂದು ಹೇಳಲು ಯಾವ ಸಮೀಕರಣವನ್ನು ಹುಡುಕಲಿ? ಇಲ್ಲಿನ ಜನರು ವ್ಯವಸ್ಥಿತವಾದ ಮನೆಗಳಲ್ಲಿ ಇದ್ದು, ಪ್ರಪಂಚದ ಎಲ್ಲರಿಗಿಂತ ಹೆಚ್ಚು ಸಂಪನ್ಮೂಲ ಹಾಗೂ ಶಕ್ತಿಯನ್ನು ಬಳಸುವುದನ್ನು ಯಾವ ತತ್ವದಿಂದ ದೃಢೀಕರಿಸಲಿ? ವರ್ಷದಲ್ಲಿ ಮೂರು-ನಾಲ್ಕು ತಿಂಗಳು ಬೀಳುವ ಹಿಮ ಜನರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಹುಟ್ಟಿಸುತ್ತದೆ ಎನ್ನುವುದಾದರೆ, ಅಂತಹ ಬದಲಾವಣೆಗಳು ಎಲ್ಲರ ದೃಷ್ಟಿಯಲ್ಲಿ ಒಳ್ಳೆಯವು ಎಂದು ಹೇಳಲು ಬಾರದಿದ್ದರೂ ನಾನಂತೂ ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.
ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಸವಾಲುಗಳು ಬೇರೆ - ಅಲ್ಲಿನ ಮರಗಳಿಗೆ ಒಂದಕ್ಕಿಂತ ಒಂದು ಹೆಚ್ಚು ಎತ್ತರಕ್ಕೆ ಬಲಶಾಲಿಯಾಗಿ ಬೆಳೆದು ಸೂರ್ಯನ ಕಿರಣಗಳನ್ನು ತಾವೇ ಮೊದಲು ಮುಟ್ಟಬೇಕು ಎಂಬ ಮಹದಾಸೆ, ತಮ್ಮ ಎಲೆಗಳು ವರ್ಷದಲ್ಲಿ ಎಲ್ಲ ದಿನಗಳೂ ದ್ಯುತಿಸಂಶ್ಲೇಷಣೆಯಿಂದ ಬೇಕಾದ ಶಕ್ತಿಯನ್ನು ಪೂರೈಸುವ ಎಂದೂ ನಿಲ್ಲದ ಕಾರ್ಖಾನೆಗಳಿದ್ದ ಹಾಗೆ. ಆದರೆ ಈ ಛಳಿ ಪ್ರದೇಶದ ಮರಗಳೋ ವರ್ಷಕ್ಕೊಮ್ಮೆ ತಮ್ಮ ತಮ್ಮ ಎಲೆಗಳ ಸಂತತಿಯನ್ನು ರಿ ನ್ಯೂ ಮಾಡದೇ ವಿಧಿಯೇ ಇಲ್ಲ, ವರ್ಷದಲ್ಲಿ ಕೆಲವೊಮ್ಮೆ ಆರು ತಿಂಗಳು ಎಲೆಗಳಿಲ್ಲ ಬೋಳು ಮರಗಳು ಒಣ ಕಟ್ಟಿಗೆಗಳ ಹಾಗೆ ಕೊನೆ ಕೊನೆಗೆ ಗಾಳಿ ಬೀಸಿದರೂ ತೊನೆದಾಡದ ಸ್ಥಿತಿಯನ್ನು ತಲುಪಿಹೋಗುತ್ತವೆ. ಸೂರ್ಯನ ಬೆಳಕು ಬಿದ್ದರೂ ಅದು ನೇರವಾಗಿ ತಮ್ಮ ಮೇಲೆ ಬೀಳದ ಹಾಗೆ ಹಿಮ ಮುಸುಕಿದ್ದರೂ ಎಂತಹ ಕೆಟ್ಟ ಛಳಿಯಲ್ಲಿ ಬದುಕುಳಿಯುವ ದಿಟ್ಟತನವನ್ನು ಹುಟ್ಟಿನಿಂದ ಪಡೆದುಕೊಂಡು ಬರುತ್ತವೆ. ಈ ಹೊರಗಿನ ಮರಗಳ ಕಷ್ಟವನ್ನು ನೋಡಲಾರದೇ ನಮ್ಮಂತಹವರ ಮನೆಯ ಒಳಗೆ ಬೇಸಿಗೆಯಲ್ಲಿ ಸೊಂಪಾಗಿ ಬೆಳೆಯುವ ಮಲ್ಲಿಗೆ-ತುಳಸಿ-ಬಾಳೆ ಗಿಡಗಳು ಛಳಿಗಾಲದಲ್ಲಿ ಸುರುಟಿಕೊಂಡಿದನ್ನು ನಾನು ಕಣ್ಣಾರೆ ನೋಡಿದ್ದೇನೆ. ಛಳಿ ಪ್ರದೇಶದ ಪ್ರಾಣಿ ಪಕ್ಷಿಗಳು ಖಂಡಿತವಾಗಿ ಭಿನ್ನವಾದವುಗಳು. ನಮ್ಮೂರಿನ ಪಾರಿವಾಳ-ಕಾಗೆ-ಗುಬ್ಬಿಗಳ ಹಾಗೆ ಇಲ್ಲಿಯವುಗಳಲ್ಲ, ನಮ್ಮೂರಿನ ಕೆರೆಗಳಲ್ಲಿ ಈಜು ಹೊಡೆಯುವ ಹಂಸಗಳು ಇಲ್ಲಿಯವಲ್ಲ, ಇಲ್ಲಿನ ಅಳಿಲುಗಳೂ ಸಹ ಭಿನ್ನವಾದವುಗಳೇ. ಅವುಗಳ ಪ್ರಬೇಧ ಒಂದೇ ಇರಬಹುದು ಆದರೆ ಅವುಗಳ ನಡತೆ, ಅವು ವಾತಾವರಣಕ್ಕೆ ಹೊಂದಿಕೊಳ್ಳುವ ರೀತಿ ಖಂಡಿತ ಭಿನ್ನವಾದದ್ದು.
ಈ ಸೃಷ್ಟಿಯಲ್ಲಿನ ಭಿನ್ನತೆ ಇಲ್ಲಿನವರ ಮೈ-ಮನ-ಚರ್ಮದಲ್ಲಿ ಅಡಕವಾಗಿದೆ, ಆದರೆ ನಮ್ಮಂತಹವರಿಗೆ ಅದು ನಮ್ಮ ಚರ್ಮದಿಂದ ಕೆಳಕ್ಕೆಂದೂ ಇಳಿಯುವುದೇ ಇಲ್ಲ. ನಾವೆಂದೂ ಛಳಿಗಾಲವನ್ನು ಒಂದು ಹೀಗೆ ಬಂದು ಹೋಗುವ ಹಂತವನ್ನಾಗಿ ಗುರುತಿಸಿಕೊಂಡಿದ್ದೇವೆಯೋ ಹೊರತು ಬದುಕಿನ ಅಂಗವಾಗಿ ಅಲ್ಲ. ಬೇಕೆಂದರೆ ನಾಳೆ ಆಫೀಸಿನಲ್ಲಿನ ಸ್ಥಳೀಯರನ್ನು ನೋಡಿ, ಅವರುಗಳಲ್ಲಿ ತೊಡುವ ಬಟ್ಟೆಗಳಲ್ಲಿ ಫಾಲ್ ಇನ್‌ಫ್ಲುಯೆನ್ಸ್ ಇದ್ದೇ ಇರುತ್ತದೆ, ಆದರೆ ನಾನು ತೊಡುವ ಬಟ್ಟೆಗಳಲ್ಲಿ ಅಂತಹ ವ್ಯತ್ಯಾಸವಿರೋದಿಲ್ಲ. ಇದೊಂದು ಅಂಶವೇ ಸಾಕು ದಕ್ಷಿಣ ಭಾರತದ ನಾನು ಎಂದಿಗೂ ಇಲ್ಲಿ ಭಿನ್ನವಾಗಿ ಇರಲು - ಹಾಗಿರುವುದು ಒಳ್ಳೆಯದೋ ಕೆಟ್ಟದ್ದೋ ಯಾರಿಗೆ ಗೊತ್ತು?