ಪಾನೀಪೂರಿಯ ಅಲೆ
ಒಂದು ವಾರದ ಹಿಂದೆ ಸ್ನೇಹಿತರೊಬ್ಬರ ಮನೆಯಲ್ಲಿ ಪಾನೀಪೂರಿ ಮಾಡಿ ಕೊಟ್ಟಿದ್ದರು, ಅವರು ತಟ್ಟೆಯಲ್ಲಿ ತಂದು ಸುತ್ತಲೂ ಸಣ್ಣ ಸಣ್ಣ ಪೂರಿಗಳನ್ನು ಇಟ್ಟು ಮಧ್ಯೆ ಪೂರಿ ಒಳಗೆ ತುಂಬೋದಕ್ಕೆ ಈರುಳ್ಳಿ-ಕೊತ್ತುಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಇಟ್ಟು, ಪಕ್ಕದಲ್ಲಿ ಮ್ಯಾಷ್ಡ್ ಅಲೂಗಡ್ಡೆಯ ಜೊತೆಗೆ ಒಂದು ಸೂಪ್ ಬೌಲ್‌ನಲ್ಲಿ ಪಾನೀ ಅನ್ನೂ ಇಟ್ಟಿದ್ದರು. ಅವರು ಪಾನೀಪೂರಿ ತಯಾರಿಸಿದ್ದಕ್ಕಿಂತಲೂ ಅವರ ಪ್ರೆಸೆಂಟೇಷನ್ ಬಹಳ ಇಷ್ಟವಾಯ್ತು. ಒಂದೊಂದೇ ಪೂರಿ ಹೊಟ್ಟೆ ಒಳಗೆ ಹೋಗುತ್ತಿದ್ದ ಹಾಗೆ ನಾಲಗೆಗೆ ತಡೆ ಅನ್ನುವುದೇ ಇಲ್ಲವಾಗಿ ಹತ್ತರ ಮೇಲೆ ತಿಂದರೂ ಇನ್ನೂ ಬೇಕು ಅನ್ನುವಂತಾಗಿತ್ತು, ಅಷ್ಟು ರುಚಿಯಾಗಿತ್ತು! ಎಷ್ಟೇ ರುಚಿಯಾಗಿದ್ದರೂ, ನಾವು ಚಮಚೆಯಿಂದ ಪಾನಿಯನ್ನು ಪೂರಿಯೊಳಗೆ ತುಂಬಿಕೊಳ್ಳುತ್ತಿದ್ದೆವಾದ್ದರಿಂದ ಭಾರತದಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿಯನ್ನು ತಿಂದಷ್ಟು ರುಚಿಯಂತೂ ಇರಲಿಲ್ಲ, ಏಕೆಂದರೆ ಅಲ್ಲಿ ಪಾನೀ ಇಟ್ಟ ಕೊಳಗದೊಳಗೆ ಆತ ಕೈ ಮುಳುಗಿಸಿ ಪೂರಿಯ ತುಂಬ ಪಾನಿಯನ್ನು ಹಾಕಿಕೊಟ್ಟಾಗಲೇ ಅದರ ರುಚಿ, ಹಿಂದೆ
ಬನಿಯನ್ ಚಹಾದ ಮಹಿಮೆಯನ್ನು ಓದಿದವರಿಗೆ ಆಹಾರ ಪದಾರ್ಥಗಳ ರುಚಿಯ ಬಗ್ಗೆ ಮತ್ತೆ ಹೇಳುವುದೇನಿದೆ?
ಆದರೆ ಈ ದಿನ ಪಾನೀಪೂರಿಯನ್ನು ವಿಶೇಷವಾಗಿ ನೆನೆಸಿಕೊಳ್ಳಬೇಕಾಗಿ ಬಂತು ಏಕೆಂದರೆ ಅಂದು ಸ್ನೇಹಿತರ ಮನೆಯಲ್ಲಿ ಸ್ಪೂರ್ತಿ ಸಿಕ್ಕು ನಾನೂ ಮನೆಯಲ್ಲಿ ಮಾಡೋಣವೆಂದು ಪಾನೀಪೂರಿ ಪ್ರಾಜೆಕ್ಟನ್ನು ಕೈ ಹಚ್ಚಿಕೊಂಡರೆ ಗಣಪತಿ ಹಬ್ಬದ ಪ್ರಯುಕ್ತವೇನೋ ಎನ್ನುವಂತೆ ಬರೀ ವಿಘ್ನಗಳೇ ಎದುರಾಗುತ್ತಿದ್ದವು. ಅಡುಗೆಮನೆಗೆ ಬೇಕಾದಷ್ಟು ಸಾರಿ ಹೋಗಿ ಗೊತ್ತು ಆದರೆ ಯಾವ ಯಾವ ಸಾಮಾನು ಎಲ್ಲೆಲ್ಲಿದೆ ಎಂದು ಗೊತ್ತಿರಬೇಕಲ್ಲ? ಉಪ್ಪು ಸಿಕ್ಕರೆ ಸಕ್ಕರೆ ಸಿಗದು, ಸಕ್ಕರೆ ಸಿಕ್ಕರೆ ಮತ್ತಿನ್ನೇನೋ ಸಿಗದು. ಹೀಗಿದ್ದಾಗ್ಯೂ ನಾನೂ ಒಂದು ಪಾನೀಪೂರಿಯನ್ನು ಸೆಟ್ ಅನ್ನು ತಯಾರಿಸಿ ಅದರಲ್ಲಿ ಬೇಕು ಬೇಕಾದ ಅನ್ನುವುದಕ್ಕಿಂತಲೂ ಕೈಗೆ ಸಿಕ್ಕವುಗಳನ್ನು ನೀಟಾಗಿ ಜೋಡಿಸತೊಡಗಿದೆ. ಮೊದಲೇ ಅಂಗಡಿಯಿಂದ ತಂದ ಪೂರಿ - ಗೋದಿ ಹಿಟ್ಟನ್ನು ಗೋಲಿಯಾಕಾರದಲ್ಲಿ ಕಲೆಸಿ ಲಟ್ಟಣಿಗೆಯಲ್ಲಿ ನಾದು ಎಣ್ಣೆಯಲ್ಲಿ ಹುರಿಯುವಷ್ಟು ವ್ಯವಧಾನ ಈ ಪ್ರಪಂಚದಲ್ಲಿ ಯಾರಿಗಿದೆ ಹೇಳಿ - ಮೇಲೆ ಒತ್ತಿದರೆ ಕೆಳಗೂ ಬಿರುಕುಬಿಡುತ್ತಿತ್ತು. ಹಾಗೂ ಹೀಗೂ ಮಾಡಿ ಒಂದು ಹತ್ತು ಪೂರಿಯನ್ನು ತಯಾರು ಮಾಡಿ ಅದರ ಜೊತೆಯಲ್ಲಿ ಬಿಸಿ ಚಹಾವನ್ನು ಮಾಡಿಟ್ಟುಕೊಂಡು ಚುಮು ಚುಮು ಛಳಿ ಇದ್ದರೂ ಹೊರಗಡೆ ಕುಳಿತು ಸಂಜೆಯ ಹೊತ್ತಿಗೆ ಮನೆಯ ಸುತ್ತಲು ಚಿರ್ಪ್ ಚಿರ್ಪ್ ಎನ್ನುವ ಮಿಡತೆಗಳ ಸದ್ದಿನೊಂದಿಗೆ ಆಸ್ವಾದಿಸುವುದಿದೆ ನೋಡಿ, ಅದರ ಮುಂದೆ ಯಾವ ಸ್ವರ್ಗಸುಖವೂ ಇಲ್ಲ ಬಿಡಿ.
ನಾನು ಅಡುಗೆ ಮಾಡೋದೇ ಕಡಿಮೆ - ಥ್ಯಾಂಕ್ ಗುಡ್‌ನೆಸ್, ಈ ದೇಶದಲ್ಲಿ ಬ್ರೆಡ್ಡೂ-ಬನ್ನಿಗೇನೂ ಕಡಿಮೆ ಇಲ್ಲ - ಎರಡು ಘಂಟೆ ವ್ಯಯಿಸಿ ಒಂದು ಬಿಸಿಬೇಳೆ ಬಾತ್ ಮಾಡಿ ತಿಂದು ಅದರ ಪಾತ್ರೆಗಳನ್ನು ತೊಳೆದು ಒಪ್ಪ ಮಾಡುವುದಕ್ಕೆ ಇನ್ನೊಂದು ಘಂಟೆಯನ್ನು ವ್ಯಯಿಸುವುದು ನನ್ನ ಜಾಯಮಾನದಲ್ಲೇನೂ ಬರೆದ ಹಾಗಿಲ್ಲ. ತಿನ್ನುವುದಕ್ಕಾಗಿ ಬದುಕಬಾರದು, ಬದುಕುವುದಕ್ಕಾಗಿ ತಿನ್ನಬೇಕು - ಎನ್ನುವ ವೇದಾಂತವನ್ನು ಬಹಳ ವರ್ಷಗಳ ಹಿಂದೆಯೇ ಅನುಸರಿಸಿ ಅದೇ ರೀತಿ ಇವತ್ತಿಗೂ ಚಾಚೂ ತಪ್ಪದೇ ನಡೆದುಕೊಂಡು ಬಂದಿದ್ದಾಗಿದೆ. ನಾಲಗೆ ರುಚಿ ಆದೇಶಿಸೋ ಹೊರವಲಯದ ತಿನ್ನುವಿಕೆಯಲ್ಲಿ ಏನು ಸುಖ ಇದೇ ಹೇಳೀ, ಅದು ಕ್ಷಣಿಕವಾದದ್ದು, ಅದರ ಬದಲಿಗೆ ಏನೋ ಒಂದು ಪುಸ್ತಕವನ್ನು ಓದಿದರೆ ಬರೆದರೆ ಅದು ಯಾವತ್ತಿಗೂ ಇರುವಂತದ್ದು. ಅಂತಹದ್ದರಲ್ಲಿ ದಿನದ ಕಾಲು ಭಾಗವನ್ನು ತಿನ್ನುವುದಕ್ಕಾಗಿ ಬಳಸುವ ಯಾರನ್ನಾದರೂ ನೋಡಿ ಮರುಕಪಡದೇ ಇನ್ನೇನನ್ನು ಮಾಡಬೇಕೋ? ಆದರೆ, ತಿನ್ನುವವರಲ್ಲಿ ಎಲ್ಲರೂ ಒಂದೇ ರೀತಿ ಎಂದು ಹೇಳಲಾಗದು. ಕೆಲವರು ಕಂಬಳಿಹುಳುವಿನ ಥರ ಯಾವಾಗಲೂ ಕುರುಕಲುಗಳನ್ನು ಮೇಯುತ್ತಲೇ ಇದ್ದರೆ ಇನ್ನು ಕೆಲವರು ನಿಯಮಿತವಾಗಿ ಹೊತ್ತುಹೊತ್ತಿಗೆ ಊಟ-ತಿಂಡಿ ಮಾಡಿಕೊಂಡಿರುವವರು. ಆದರೆ ನಮ್ಮ ಗುಂಪಿಗೆ ಸೇರುವವರೇ ಬಹಳ ಮಂದಿ, ದಿನಕ್ಕೆ ಇಂತಿಷ್ಟೇ ಹೊತ್ತಿಗೆ ಇಂಥದ್ದನ್ನೇ ತಿನ್ನಬೇಕು ಎಂದು ಅಶ್ವಮೇಧಯಾಗ ಮಾಡುವವರನ್ನು ಬದುಕಲೇ ಅಯೋಗ್ಯರು, ತಿನ್ನಲು ಮಾತ್ರ ಯೋಗ್ಯರು ಎಂದು ಹಣೆಪಟ್ಟಿಕೊಡದೇ ಮತ್ತಿನೇನು ಮಾಡಬೇಕು.
ತಿನ್ನೋದರ ಬಗ್ಗೆಯೇ? ನನಗೂ ಗೊತ್ತು...ದಾವಣಗೆರೆ ಮಸಾಲೆ ಮಂಡಕ್ಕಿಯಿಂದ ಹಿಡಿದು, ಧಾರವಾಡಾ ಪೇಡಾದವರೆಗೆ, ಮೈಸೂರಿನ ಮಸಾಲೆ ದೋಸೆಯಿಂದ ಹಿಡಿದು, ಮದ್ದೂರುವಡೆ ವರೆಗೆ, ಯಾವುದೋ ಒಂದು ಸೀಜನ್ ನಲ್ಲಿ ಸಿಗೋ ಆನೆಬಂಡಾದಿಂದ ಹಿಡಿದು, ನೇರಳೇಹಣ್ಣಿನಿಂದ ಹಿಡಿದು, ಥರಾವರಿ ಪಲ್ಯ-ಪದಾರ್ಥಗಳಿಗೆ ಬರೋ ಕಳಲೆಯವರೆಗೆ. ಒಂದೆಲಗದ ಸೊಪ್ಪಿನಿಂದ ಹಿಡಿದು ಹರಿವೇ ಸೊಪ್ಪಿನವರೆಗೆ, ಅಪರೂಪಕ್ಕೆ ಮಾಡೋ ನುಗ್ಗೇ ಸೊಪ್ಪಿನಿಂದ ಹಿಡಿದು ಬಸಳೇ ಸೊಪ್ಪಿನವರೆಗೆ... ಇವೆಲ್ಲವನ್ನು ನೆನೆನೆನೆಸಿಕೊಂಡೇ ಬಾಯಲ್ಲಿ ಹಲವರಿಗೆ ನೀರು ಊರಿರಬಹುದು. ಆದರೆ, ಇದರ ಹಿಂದಿನ ಮರ್ಮ ಕೆಲವರಿಗೆ ಮಾತ್ರ ಗೊತ್ತು. ಅಮೇರಿಕದ ಉದ್ದಗಲಕ್ಕೂ ಭಾರತೀಯ ಮೂಲದ ಅಂಗಡಿಗಳೇನೂ ಇಲ್ಲ, ಹತ್ತಿಪ್ಪತ್ತು ವರ್ಷಗಳ ಹಿಂದೆ ಒಂದು ಪೌಂಡು ತೊಗರಿಬೇಳೆಯನ್ನು ಪೋಸ್ಟ್‌ನಲ್ಲಿ ಎಷ್ಟೋ ಜನ ತರಿಸಿಕೊಂಡು ಹೋಳಿಗೆ ಮಾಡಿಕೊಂಡು ತಿಂದಿದ್ದಿರಬಹುದು, ಇತ್ತೀಚೆಗೆ ಇಂತಹ ಅಂಗಡಿಗಳು ಹೆಚ್ಚಾಗಿರಬಹುದು, ಆದರೆ ನಮಗೆ ಬೇಕಾದ ಪದಾರ್ಥ, ತರಕಾರಿ ಮುಂತಾದವುಗಳು ಯಾವಾಗಲೂ ಸಿಗುತ್ತವೆ ಎಂದು ಗ್ಯಾರಂಟಿ ಕೊಡಲಿಕ್ಕೆ ಬಾರದು. ಹಲ್ಲಿದ್ದಾಗ ಕಡೆಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವುದನ್ನು ನಮ್ಮಂತಹವರನ್ನು ನೋಡೇ ಹೇಳಿರಬಹುದು. ಅಂದರೆ ನನ್ನ ಆಹಾರ ಪದಾರ್ಥಗಳ ವೈರಾಗ್ಯದ ಹಿಂದೆ ಅಭಾವ ಕಾರಣ, ನನ್ನ ಹಾಗೇ ಬೇಕಾದಷ್ಟು ಮಂದಿ ಇದ್ದಾರೆ ಎನ್ನೋದೂ ನನಗೆ ಗೊತ್ತು.
ಹಾಗಿಲ್ಲವೆಂದಾಗಿದ್ದರೆ, ನಮ್ಮೂರುಗಳಲ್ಲಿ ಗಣಪತಿ ಹಬ್ಬಕ್ಕೆಂದು ಎಲ್ಲರೂ ಬಿಸಿಬಿಸಿ ಹೋಳಿಗೆಯನ್ನು ತುಪ್ಪ ಹಾಲು ಹಾಕಿಕೊಂಡು ಸವಿಯುತ್ತಿದ್ದರೆ ಇಲ್ಲಿ ನಾವು ಹಗಲೂ-ರಾತ್ರಿ ಕೆಲಸವನ್ನು ಮಾಡಿಕೊಳ್ಳುವ ಪ್ರಮೇಯವೇಕೆ ಬರುತ್ತಿತ್ತು. ನಮ್ಮ ಭಾರತೀಯ ಹಬ್ಬಗಳಿಗೆ ರಜೆ ತೆಗೆದುಕೊಳ್ಳಬೇಕೆಂದರೂ ಎಷ್ಟೋ ಜನರಿಗೆ ಹಾಗೆ ಆಗದು. ಅನಿವಾಸಿಗಳ ಹಬ್ಬಗಳೆಲ್ಲ ವೀಕ್‌ಎಂಡಿನಲ್ಲೇ ಬರೋದು ಎಂದು ತಮಾಷೆ ಮಾಡುತ್ತಿರುವವರಿಗೂ ಅಣಕಿಸುವಂತೆ ಗಣೇಶನ ಹಬ್ಬ ಶನಿವಾರಕ್ಕೆ ಬಂದರೂ ಎಮರ್ಜನ್ಸಿ ಕೆಲಸದ ಮೇಲೆ ದುಡಿಯಬೇಕಾಗಿ ಬಂದವರಿಗೆ ಹಬ್ಬಗಳೆಲ್ಲ ಸೆಕೆಂಡರಿಯಾಗಿ ಕಾಣಿಸದೇ ಇನ್ನೇನಾದೀತು? ಹಬ್ಬಗಳನ್ನು ಆದರಿಸಿ, ಆಚರಿಸುವುದಕ್ಕೆ ಹಲವು ರೂಪಗಳು - ಹೊಸಬಟ್ಟೆ ಧರಿಸುವುದಾಗಲೀ, ಸುಗ್ಗಿ ಸಮೃದ್ಧಿಯ ಸೂಚಕವಾಗಿಯಾಗಲೀ, ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಆಸ್ವಾದಿಸುವುದಾಗಲೀ, ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವುದಾಗಲೀ, ಕುಲದೇವರ ಆರಾಧನೆಯಾಗಲೀ ಎಲ್ಲವೂ ಮುಖ್ಯವಾದ ಕಾರಣಗಳೇ. ಸಮಾಜದ ಹಲವು ಧ್ಯೋತಕಗಳಲ್ಲೊಂದಾಗಿ ಬರುವ ಹಬ್ಬಗಳನ್ನು ಸ್ಕಿಪ್ ಮಾಡಿಕೊಂಡು ಹೋಗುವ ನಾವೆಲ್ಲರೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಬೆಲೆಯನ್ನು ತೆತ್ತಲೇ ಬೇಕಾಗುತ್ತದೆ. ಮಕ್ಕಳು-ಮರಿ ಇದ್ದವರಿಗೆ ಹಬ್ಬಗಳು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಯನ್ನು ಒಂದು ತಲೆಯಿಂದ ಮತ್ತೊಂದು ತಲೆಗೆ ರವಾನಿಸುವ ಕೊಂಡಿಯಾಗಿರುವಾಗ ಪ್ರತಿಯೊಂದು ಹಬ್ಬವೂ, ಅದರ ವೈಶಿಷ್ಠ್ಯವೂ ಬಹಳ ಮುಖ್ಯ.
ತಿಂಡಿ-ಹಬ್ಬಗಳನ್ನು ನೆನೆಸಿಕೊಳ್ಳುತ್ತಿರುವಾಗ ಒಂದು ರೂಪಕ ನೆನಪಿಗೆ ಬಂತು. ಮಗು ಚಿಕ್ಕದಿರುವಾಗ ತಾಯಿ ಎಷ್ಟೋ ಕಷ್ಟ ಪಟ್ಟು, ಏನೇನೆಲ್ಲ ತೋರಿಸಿ, ಎಷ್ಟೇ ರಂಪ ಮಾಡಿಯಾದರೂ ಬಲವಂತವಾಗಿ ಮಗುವಿಗೆ ತಿನ್ನಿಸುತ್ತಾಳೆ. ಮುಂದೆ ಮಗು ಬೆಳೆದು ಶಾಲೆಗೆ ಹೋಗುವ ಹೊತ್ತಿಗೆ ಒಂದು ಹೋಳಿಗೆ ಹಾಕಿದಲ್ಲಿ ಎರಡು ಬೇಕು ಎಂದು ಹಠ ಹಿಡಿದರೆ ಅದಕ್ಕೆ ಬೇಕಾದಷ್ಟು ಕೊಡುವಲ್ಲಿ ತಾಯಿ ಹುಸಿ ಮುನಿಸು ತೋರಿಸುತ್ತಾಳೆ, ಅಥವಾ ಮಾಡಿದ್ದೆಲ್ಲವನ್ನೂ ನೀನೇ ತಿಂದರೆ ಮನೆಯಲ್ಲಿ ಇತರರಿಗೆ ಸಾಲದು ಎನ್ನುವ ಭಯವನ್ನು ಹುಟ್ಟಿಸುತ್ತಾಳೆ. ಮಗು ಮುಂದೆ ಬೆಳೆದು ಪ್ರಬುದ್ಧತೆಯ ಹಂತಕ್ಕೆ ಬಂದಾಗ ಮತ್ತೆ ಎಲ್ಲರೂ ಒತ್ತಾಯ ಮಾಡಿ ತಿನ್ನಿಸತೊಡಗುತ್ತಾರೆ. ಇನ್ನು ಹಾಗೇ ವಯಸ್ಸಾಗುತ್ತಾ ವಯಸ್ಸಾಗುತ್ತಾ ಏನೇನೋ ಖಾಯಿಲೆಗಳು ಬರಬಹುದು ಎನ್ನುವ ಭಯದಲ್ಲಿ ನಾಲಿಗೆಯ ರುಚಿಗೆ ಮತ್ತೆ ಕಡಿವಾಣ ಬೀಳತೊಡಗುತ್ತದೆ. ಕೊನೆಗೆ ರುಚಿಯೂ-ಚಪಲವೂ ಕಡಿಮೆಯಾಗಿ ಒಂದು ದಿನ ಈ ಲೋಕವನ್ನೇ ಖಾಲಿ ಮಾಡಬೇಕಾಗಿ ಬರುತ್ತದೆ.
ಹೀಗೆ ಪಾನೀಪೂರಿ ಮಹಿಮೆ ಎಲ್ಲಿಯವರೆಗೆ ಬಂತು ನೋಡಿ, ತಿಂದಿದ್ದೂ ಅಲ್ಲದೇ, ಮಾಡಿ ನೋಡಿದ್ದೂ ಅಲ್ಲದೆ, ಅದರ ಬಗ್ಗೆ ಬರೆದು ಓದುವುದಕ್ಕೆ ಸಮಯ ಸಿಕ್ಕಿತಲ್ಲಾ ಅಷ್ಟೇ ಸಾಕು, ಏನಂತೀರಾ?