Showing posts with label ಭಾಷೆ. Show all posts
Showing posts with label ಭಾಷೆ. Show all posts

Tuesday, April 14, 2020

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಸವಿ ನೆನಪುಗಳು ಬೇಕು
ಕವಿ: ಪಿ.ಆರ್. ರಾಮದಾಸ್ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕಿ: ವಾಣಿ ಜಯರಾಂ
ಚಿತ್ರ: ಅಪರಿಚಿತ (1978)




"ಸವಿ ನೆನಪುಗಳು ಬೇಕು" ಈ ಹಾಡನ್ನು ನಾನು ಬಹಳ ವರ್ಷಗಳಿಂದ ಕೇಳುತ್ತಾ ಬಂದಿದ್ದರೂ ನನಗೆ ಈ ಸಿನಿಮಾ ನೋಡಿದ ನೆನಪಿಲ್ಲ.  ದೂರದ ದೇಶಕ್ಕೆ ಬಂದು, ಇಂಟರ್ನೆಟ್ಟಿನಲ್ಲಿ ಹಳೆಯದ್ದನ್ನೆಲ್ಲ ಸೋಸಿ ಜಾಲಾಡುತ್ತಿದ್ದಾಗ ಈ ಹಾಡು ಗಮನಕ್ಕೆ ಬಂತು.  ಈ ಹಾಡಿನಲ್ಲಿ ಬಳಸಿದ ರಾಗ ಯಾವಾಗದರೊಮ್ಮೆ ನನ್ನನ್ನು ಕಾಡುತ್ತಿದ್ದುದೂ ಹೌದು... ಪ್ರತಿ ಸಾರಿ ನಾನು ಈ ಹಾಡಿನ ಸಾಲುಗಳನ್ನು ಕೇಳಿದಾಗ, ಈ ಹೆಣ್ಣಿನ ಪ್ರೀತಿ ಎಷ್ಟೊಂದು ತನ್ಮತೆಯಲ್ಲಿ ಇದ್ದಿರಬಹುದು, ಅದು ದೂರವಾಗಲು ಏನು ಕಾರಣವಿದ್ದಿರಬಹುದು ಅಥವಾ ಈ ಸಿನಿಮಾದ ಕೊನೆಯಲ್ಲಿ ಈ ವಿರಹ ಸುಖಾಂತವನ್ನು ಕಾಣುತ್ತದೆಯೇನೋ ಎಂದೆಲ್ಲ ಪ್ರಶ್ನೆಗಳು ಏಳುತ್ತಿದ್ದವು.  ಇತ್ತೀಚಿನ ಕಾಲದಲ್ಲಿ ದೊರಕದ ಪ್ರೇಮ, ಅಥವಾ ಕೈಗೆಟುಕದ ಪ್ರೀತಿ ಒಂದು ಕಮಾಡಿಟಿ ಇದ್ದಿರಬಹುದೋ ಏನೋ, ಆದರೆ ಈ ಹಾಡಿನ ಗುಂಗನ್ನು ನೋಡಿದರೆ ತನ್ನನ್ನು ಸಂಪೂರ್ಣವಾಗಿ ತನ್ನ ಪ್ರೀತಿಗೆ ಸಮರ್ಪಿಸಿಕೊಂಡು, ಅದು ಕೈಗೆಟುಗದ ಸನ್ನಿವೇಶದಲ್ಲಿ ಆ ನೆನಪುಗಳಿಂದಲೇ ಜೀವನ ತಳ್ಳುವ ನಿರ್ಭರತೆಯನ್ನು ಎದುರಿಸುತ್ತಿರುವ ಒಂದು ಹೆಣ್ಣು ಧ್ವನಿ ವಿಶೇಷವಾಗಿ ಕೇಳಿಬರುತ್ತದೆ.

ಎದೆಯಾಳದ ಆಲಾಪನೆಯೊಂದಿಗೆ ಆರಂಭಗೊಳ್ಳುವ ಈ ಹಾಡಿನ ಗಾಢ ಭಾವನೆ, "ಕಾಡುತಿದೆ ಮನವ" ಎಂಬಲ್ಲಿ ಪರ್ಯಾವಸಾನವಾಗುತ್ತದೆ.  ಆಲಾಪನೆಯ ತದನಂತರ ಅತ್ಯಂತ ಸೂಕ್ಷ್ಮವಾಗಿ ಹಲವಾರು ವಯಲಿನ್‌ಗಳು ನುಡಿದು, ಏನೋ ಒಂದು ರಹಸ್ಯ ಬೇಧನೆಯ ಸಂಕೇತವನ್ನು ನೀಡುತ್ತವೆ.  ಕಥಾನಾಯಕಿಯ ಮನದಾಳದಿಂದ ಬಂದಂಥ ಹಾಡಾದ್ದರಿಂದ, ಚಿತ್ರದ ನಾಯಕಿ ಹಾಡಿನ ಸಾಲಿಗೆ ತಕ್ಕಂತೆ ಯಾವುದೇ ತುಟಿ ಚಲನೆಯನ್ನು ಬಳಸದೇ, ಹಾಡಿನುದ್ದಕ್ಕೂ ಹಿನ್ನೆಲೇ ಸಂಗೀತವೇ ಕಥೆಯನ್ನು ಸುರಳೀತವಾಗಿ ಮುಂದೆಕೊಂಡೊಯ್ಯುವಂತೆ ಚಿತ್ರಣಗಳನ್ನು ಹೆಣೆಯಲಾಗಿದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು


ನಿಜ, ಸವಿ ನೆನಪುಗಳು ಖಂಡಿತ ಬೇಕು...’ಸವಿನೆನಪು" ಎಂದು ಬರೆಯುವಲ್ಲೇ ಕವಿ ಇದು ಸವಿ ನೆನಪಲ್ಲದೇ ಮತ್ತೇನನ್ನೋ ಒಳಗೊಂಡಿದೆ ಎಂಬ ಸೂಕ್ಷ್ಮವನ್ನು ಹೊರಹಾಕುತ್ತಾರೆ.  "ಸವಿಯಲೀ ಬದುಕು" ಎಂಬುದನ್ನು ಈ ಬದುಕನ್ನು ಸವಿಯಲು ಹಾಗೂ ಈ ಬದುಕನ್ನು ಸವೆಯಲೂ ಎಂದು ಅರ್ಥ ಮಾಡಿಕೊಳ್ಳಬಹುದು.  ಅದೇ ರೀತಿ, ಹಾಲಿನ ಪಾತ್ರೆಗೆ ಒಂದು ಹನಿ ಹುಳಿ ಹಿಂಡಿದಂತೆ, ಅಂತಹ ಸವಿಯಾದ ಬದುಕು ಮಾಸಲು ಒಂದೇ ಒಂದು "ಕಹಿ ನೆನಪು" ಸಾಕು...ಈ ಎರಡು ಸಾಲಿನಲ್ಲೇ ಕವಿ ಪೂರ್ಣ ಪದ್ಯದ ಆಳ ಹಾಗೂ ಅಂತಃಸತ್ವವನ್ನು ಹಂಚಿಕೊಂಡಿದ್ದಾರೆ ಎನ್ನಬಹುದು.

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ....
ಕಾಡುತಿದೆ ಮನವ...|


ಒಮ್ಮೆ ಸವಿನೆನಪುಗಳು ಹುಟ್ಟಿದಾಗ ಅವು ಬೆಂಬತ್ತಿ ನಮ್ಮ ದಿನ ಹಾಗೂ ಜೀವಮಾನವನ್ನು ಕಾಡುತ್ತವೆಯೇನೋ ಗೊತ್ತಿಲ್ಲ, ಆದರೆ ಕಹಿ ನೆನಪಿನ ವಿಚಾರಕ್ಕೆ ಬಂದರೆ ಅದೇ ಅದೇ ಮರುಕಳಿಸಿ ಮನಸ್ಸನ್ನ ಕಾಡುವುದನ್ನ ಈ ಎರಡು ಸಾಲುಗಳಲ್ಲಿ ಮೂಡಿಸಲಾಗಿದೆ.  ಈ ಸಾಲಿನ ಕೊನೆಯಲ್ಲಿ ನೀರವ ರಾತ್ರಿಯ ನಿಶ್ಶಬ್ಧವನ್ನು ನೆನಪಿಸುವ ಎರಡು-ಮೂರು ಕ್ಷಣಗಳ ಮೌನ ಕೂಡ ಇದೆ.  ಜೊತೆಗೆ ಇದೇ ನೀರವತೆಯ ಶಬ್ದವನ್ನ ಇಡೀ ಹಾಡಿನ ಉದ್ದಕ್ಕೂ ಹಿನ್ನೆಲೆಯಲ್ಲಿ ಗಮನಿಸಬಹುದು.
ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತೊಮ್ಮೆ ಸವಿ ನೆನಪುಗಳ ಪ್ರಾಶಸ್ತ್ಯವನ್ನು ಪ್ರಸ್ಥಾಪಿಸುತ್ತ ಪಲ್ಲವಿ ಮುಗಿಯುತ್ತದೆ.

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನಾ ಎದೆಗೊರಗಿ ಆಸರೆಯ ಬೇಡಿ|
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ|


ಈ ಚರಣದ ಆರಂಭದಲ್ಲಿ ಪ್ಲೇಫುಲ್ ಹಿನ್ನೆಲೆ ಸಂಗೀತ ಮುಂಬರುವ ಹಳೆಯ ಚಿತ್ರಣಗಳಿಗೆ ನಾಂದಿ ಹಾಡುತ್ತದೆ...ಇದೇ ಸಂದರ್ಭದಲ್ಲಿ ’ಕುಕ್ಕುಕ್ಕುಕ್ಕು" ಎಂದು ಮತ್ತೆ ವಯಲಿನ್‌ಗಳು ಮೊರೆಯ ತೊಡಗಿ ಮತ್ತೇನು ಆತಂಕ ಕಾದಿದೆಯೋ ಎನ್ನುವ ಕಾತುರವನ್ನು ಕೇಳುಗರ ಮನಸ್ಸಿನಲ್ಲಿ ಮೂಡಿಸುತ್ತವೆ.  ಪ್ಲೇಬ್ಯಾಕ್ ಸನ್ನಿವೇಶಗಳಾದ್ದರಿಂದ ಅವೇ ವಯಲಿನ್ನ್‌ಗಳು ಮತ್ತೆ ಪ್ಲೇಫುಲ್ ಸಂಗೀತವನ್ನು ನುಡಿಸಿ, ಹಳೆಯ ಚಿತ್ರಗಳಿಗೆ ಪೂರಕವಾಗುತ್ತವೆ.

"ಪ್ರಿಯತಮನ ಒಲವಿಂದ ಕನಸುಗಳು ಮೂಡಿ" ಎಂದು ಕೇಳುವಾಗ ಓಹ್ ಇದೊಂದು ಸೋತ ಪ್ರೇಮದ ಕಥೆಯೇ ಸೈ ಎಂದು ಕೇಳುಗರು ಕನ್‌ಕ್ಲೂಷನ್‌ಗೆ ಬಂದು ಬಿಡಬಹುದಾದರೂ, ಮುಂದಿನ ಪ್ರಾಸದ ಸಾಲುಗಳು ಕೇಳುಗರ ಕಾತುರತೆಯನ್ನು ಇನ್ನೂ ಜಾಗೃತವಾಗೇ ಇರಿಸಿಕೊಳ್ಳುತ್ತವೆ.  ಆದರೆ, ’ಇನಿಯನಾ ಎದಗೊರಗಿ" ಎಂದು ಗಾಯಕಿ ಎಲ್ಲಿ ತಪ್ಪಾಗಿ ಹೇಳಿದರೇನೋ ಅನ್ನಿಸುವಷ್ಟರಲ್ಲಿ ಸರಸ-ಸವಿ, ವಿರಹ-ವಿಫಲದ ಸಾಲುಗಳು ಕೇಳುಗರನ್ನು ಮತ್ತೆ ಮೋಡಿಗೊಳಗಾಗಿಸಿಕೊಳ್ಳುತ್ತವೆ.  ಈ ಸಾಲುಗಳಲ್ಲಿ ಕವಿ, ಅಂತ್ಯ ಪ್ರಾಸಕ್ಕೆ ಬೆಲೆ ಕೊಡದೆ ಸರಸವನ್ನು ಬಯಸಿದ ಮನ, ವಿರಹಕ್ಕೆ ಕೊರಗುವುದನ್ನು ಎತ್ತಿ ತೋರಿಸಿದ್ದಾರೆ.  ಮತ್ತೆ ಈ ಎರಡು ಸಾಲುಗಳಲ್ಲಿ ಪೂರ್ಣ ಕಥೆಯನ್ನು ಹೆಣೆಯುವ ಚಾಕಚಕ್ಯತೆ!

ಇನಿಯನಾ ಎದೆ ಬಡಿತ ಗುಂಡಿನಾ ದನಿಗೆರೆದೂ
ಮಾಸುತಿದೆ ಕನಸು...|


ಇಲ್ಲಿಯವರೆಗೆ ಟಿಪಿಕಲ್ ಕನ್ನಡ ಪದ್ಯದಂತಿದ್ದದ್ದು, ಎದೆ ಬಡಿತವನ್ನು ಗುಂಡಿನ ದನಿಗೆ ಹೋಲಿಸಿ ಕ್ರಾಂತಿಕಾರಿ ದೇಶಗಳ ಸಾಹಿತ್ಯವನ್ನು ನೆನಪಿಗೆ ತಂದುಕೊಡುತ್ತದೆ.  ಈ ಪದ್ಯವನ್ನು ಅವರು ಈ ಸಿನಿಮಾಕ್ಕಾಗಿಯೇ ಬರೆದರೋ ಅಥವಾ ಭಾವಗೀತೆಯನ್ನು ಈ ಸಿನಿಮಾಕ್ಕೆ ಅಳವಡಿಸಿಕೊಳ್ಳಲಾಗಿದೆಯೋ ಗೊತ್ತಿಲ್ಲ, ಆದರೆ ೧೯೭೮ರ ಕಾಲಕ್ಕಾಗಲೇ ಸ್ವಾತಂತ್ರ್ಯ ಚಳುವಳಿಗಳು ಮುಗಿದು ಗುಂಡಿನ ದನಿ ಆಡಗಿ ದಶಕಗಳೇ ಕಳೆದುಹೋಗಿದ್ದ ಸಮಯ, ಕವಿಯ ಈ ವಿಶ್ಲೇಷಣೆಯನ್ನು ಫ್ರೆಂಚ್ ರೆವಲ್ಯೂಷನ್ ಬಂದ ಸಮಯದ ಸಾಹಿತ್ಯಕ್ಕೆ ಹೋಲಿಸಿದರೆ, ಅಥವಾ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿದ ದೇಶಗಳಲ್ಲಿ ಗಣನೀಯವಾದ ಹೋಲಿಕೆಯಾದೀತೇ ವಿನಾ, ಆಗ ಕರ್ನಾಟಕಕ್ಕೆ ಇನ್ನೂ ಬಂದೂಕಿನ ಕಲ್ಚರ್ ಬಂದಿರಲಿಲ್ಲವಾದ್ದರಿಂದ, ಈ ಸಾಲುಗಳು ವಿಶೇಷವೆನಿಸುತ್ತವೆ...ಹಾಗೆ ಗುಂಡಿನಾ ದನಿಗೆರೆದಂತೆ ಧ್ವನಿಸುವ ಎದೆ ಬಡಿತ ಕನಸನ್ನು ಮಾಸುತ್ತದೆಯೇ ವಿನಾ ನೆನಪನ್ನಲ್ಲ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತು ಆರಂಭವಾಗುವ ಪ್ಲೇಫುಲ್ ಸಂಗೀತ ಮಧುರವಾದ ಹಳೆಯ ನೆನಪುಗಳನ್ನು ಹೊತ್ತು ತರುವ ಬೆನ್ನಲ್ಲಿಯೇ ಭೋರ್ಗರೆಯುವ ವಯಲಿನ್‌ಗಳು ಕರಾಳ ಛಾಯೆಯನ್ನು ಹೊತ್ತು ತರುತ್ತವೆ.

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನಾ ಭೀತಿಯಲಿ ನಾ ಬಂಧಿಯಾಗಿ
ಮನಸೂ ಹೃದಯಾ ನೊಂದು ನೋವಾಗಿದೆ
ಒಲವೂ ನಲಿವೂ ಮೂಡಿ ಮಸಕಾಗಿದೆ|


ಮೇಲಿನ ನಾಲ್ಕು ಸಾಲುಗಳು ಕಾಡುವ ನೋವಿನ ಆಳವನ್ನು ತೋರುತ್ತವೆ, ತಂಗಾಳಿಯೇ ಬೀಸುತ್ತಿದ್ದರೂ ಅದು ಬಿಸಿಯಾಗಿ ಕಾಡುವಂತೆ, ತಮ್ಮ ನೆನಪುಗಳು ತರುವ ಮೌನ, ಒಂಟಿತನ ಹಾಗೂ ಅದರ ಒಂದು ಚೌಕಟ್ಟು ಜೈಲಿನ ಪರ್ಯಾಯ ಭಾವನೆಯನ್ನು ಖಂಡಿತ ಮೂಡಿಸಬಲ್ಲವು.  ಜೊತೆಗೆ ಇದು ಮನಸ್ಸಿನ ವಿಚಾರವಷ್ಟೇ ಅಲ್ಲ, ಹೃದಯದ ವಿಚಾರವೂ ಹೌದು, ಅವುಗಳು ನೊಂದು ನೋವಾಗಿದೆ.  ಎಲ್ಲಕ್ಕಿಂತ ಮುಖ್ಯವಾಗಿ, ಕೊನೆಯ ಸಾಲು ಮತ್ತೆ ಒಲವು-ನಲಿವನ್ನು ನೆನಪಿಸುತ್ತ, ಅದೇ ಸಾಲಿನಲ್ಲೇ ಅಷ್ಟೇ ಬೇಗ ಅವು ಮಸಕಾಗುವಂತೆ ಮಾಡುವಲ್ಲಿ ಮತ್ತೆ ಹಿನ್ನೆಲೆ ಸಂಗೀತದ ವಯಲಿನ್‌ಗಳ ಪಾತ್ರ ಹಿರಿದು.

ಅರಳುವಾ ಹೂವೊಂದು ಕಮರುವಾ ಭಯದಲೀ...
ಸಾಗುತಿದೆ ಬದುಕು|


ಅರಳಿದ ಹೂವು ಕಮರಲೇ ಬೇಕು, ಆದರೆ ಇಲ್ಲಿ ವ್ಯಕ್ತಪಡಿಸಿದ ನೋವಿನ ಹಿನ್ನೆಲೆಯಲ್ಲಿ, ಅರಳಿದ ಹೂವು ತಾನು ಕಮರುವ   ಭಯದಲ್ಲಿ, ತನ್ನ ಅಂತ್ಯವನ್ನು ಕಾಣುವುದೇ ಒಂದು ಪ್ರಯಾಣವಾಗುವ ಬದುಕು ಸಾಗುತ್ತಿದೆ ಎಂದು ಕವಿ ವೇದ್ಯವಾಗಿ ಹೇಳಿದ್ದಾರೆ.  "ಕಮರುವಾ ಭಯದಲೀ..." ಎಂದು ಎಳೆದಿರುವುದು ಆ ಕಥಾ ನಾಯಕಿಯ ನೋವು ಅದೆಷ್ಟು ಗಾಢವಾದದ್ದು ಎಂದು ಎಂಥವರೂ ಚಿಂತಿಸುವಂತೆ ಮಾಡುತ್ತದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ
ಕಾಡುತಿದೆ ಮನವ...|


ಸವಿ ನೆನಪುಗಳು ಬೇಕು... ಸವಿಯಲೀ ಬದುಕು...'

ಕೇವಲ ನಾಲ್ಕೂವರೆ ನಿಮಿಷಗಳಲ್ಲಿ ಈ ಹಾಡಿನಲ್ಲಿ ಬಳಸಲಾದ ರಾಗ ನಿಮ್ಮ ಮನವನ್ನು ಮಣ ಭಾರ ಮಾಡಬಲ್ಲುದು.  ಸಾಹಿತ್ಯ ಮತ್ತು ಸಂಗೀತದ ಮೇಳ ಬಹಳ ಚೆನ್ನಾಗಿದ್ದು, ಹಿನ್ನೆಲೆಯಲ್ಲಿ ಮೂಡುತ್ತಲೇ ತೆರೆಯ ಮೇಲೆ ಬರುವ ಡಿಸ್ಕ್ರೀಟ್ ಚಿತ್ರಗಳಿಗೆ ಪೂರಕವಾಗಿವೆ.  ಈ ಹಾಡನ್ನು ನೀವು ಚಿತ್ರಗಳ ಸಹಾಯವಿಲ್ಲದೆಯೇ ಕೇಳಬಹುದು, ಅಲ್ಲದೇ ಮಧ್ಯೆ ಮಧ್ಯೆ ಕೇಳುವ ಕರಾಳ ರಾತ್ರಿಯ ಶಬ್ದ, ಆಗಾಗ ಮೊರೆಯುವ ವಯಲಿನ್ನುಗಳ ಟೆಕ್ನಿಕ್ ನಿಮ್ಮನ್ನ ಮಂತ್ರ ಮುಗ್ಧರನ್ನಾಗಿಸುವರಲ್ಲಿ ಸಂಶಯವಿಲ್ಲ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Tuesday, September 20, 2011

ನಿಜವಾದ "ಅಂತರಂಗ"ದ ನಂಬಿಕೆ

ಕನ್ನಡ ಹಿರಿಮೆಗೆ ಮತ್ತೊಂದು ಪ್ರಶಸ್ತಿ, ಕನ್ನಡ ತಾಯಿಯ ಮಕುಟಕ್ಕೆ ಮತ್ತೊಂದು ಗರಿ. ಈ ದಿನ ವಿಶ್ವದಾದ್ಯಂತ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ದಿನ. ನಮ್ಮ ಗುರುಗಳಾಗಿ, ಅಧ್ಯಾಪಕರಾಗಿ, ನಾಟಕಕಾರರಾಗಿ, ನಿರ್ದೇಶಕ ಮೊದಲಾಗಿ ಕನ್ನಡ ಸಾಹಿತ್ಯ ಅನೇಕ ಮಜಲುಗಳಲ್ಲಿ ಪಳಗಿದ ಸುಮಾರು ನಾಲ್ಕು ದಶಕದ ಸಾಧನೆಯ ಪರಿಪೂರ್ಣತೆಯನ್ನು ಪಡೆದ ಚಂದ್ರಶೇಖರ ಕಂಬಾರರಿಗೆ ೮ ನೇ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಬಹಳ ಸಂತೋಷದ ವಿಷಯ.

***
ನಾನು ಜ್ಞಾನಪೀಠ ಎಂದರೆ ಸುಮ್ಮನೆಯೇ? ಎಂದು ೨೦೦೬ (ಮೇ ೧೭, ೨೦೦೬) ರಲ್ಲಿ ಬರೆದದ್ದು ನಿಜವಾಯಿತು. "...ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು.". ಈ ಪ್ರಶಸ್ತಿಯನ್ನು ಪಡೆದ ಕನ್ನಡದ ದಿಗ್ಗಜರಲ್ಲಿ ನಾನು ಬಹಳ ಹತ್ತಿರದಿಂದ ನೋಡಿದವರೆಂದರೆ ಕಂಬಾರರು. ಈ ದಿನ ಅವರಿಗೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಬಹಳ ಸಂತಸದ ವಿಚಾರ.

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.
***

ಕಂಬಾರರ ಭಾಷೆ ಬಹಳ ಚೆಲುವಾದುದು - ಬೆಳಗಾವಿಯ ಗ್ರಾಮೀಣ ಕನ್ನಡದ ಸೊಗಡನ್ನು ಸವಿಯ ಬೇಕಾದರೆ ಅವರ ಮಾತುಗಳನ್ನು ಆ ಭಾಷೆ ಬಲ್ಲವರಿಂದ ಗಟ್ಟಿಯಾಗಿ ಓದಿಸಿ ಕೇಳಬೇಕು, ಅಥವಾ ಅವರ ನಾಟಕಗಳನ್ನು ನುರಿತ ಕಲಾವಿದರು ಮಾಡಿದ್ದನ್ನು ನೋಡಿ ಸವಿಯ ಬೇಕು. ಇದೇ ಬೆಳಗಾವಿಯ ಕನ್ನಡದಲ್ಲಿಯೇ ಅವರು "ಮರತೇನಂದರ ಮರೆಯಲಿ ಹೆಂಗ..." ಬರೆದದ್ದು.
ಇದು ನಿಜವಾಗಿಯೂ ನಮಗೆಲ್ಲ ಸಂತೋಷದ ದಿನ.
ಜೈ ಕನ್ನಡ ಮಾತೆ!

Monday, May 10, 2010

Claire ಎಂಬ ಕಳೆದು ಹೋದ ನಾಯಿ...

ಇವತ್ತಿಗೆ ಸರಿಯಾಗಿ ಒಂದು ವಾರ ಆಯ್ತು, ಕಳೆದ ಸೋಮವಾರ ನಾನು ಆಫೀಸಿಗೆ ಹೋಗೋ ದಾರಿಯಲ್ಲಿ ನಾಯಿ ಕಳೆದು ಹೋಗಿದ್ದರ ಬಗ್ಗೆ Mendham ಪಟ್ಟಣದ ಸರಹದ್ದಿನಲ್ಲಿ ಹಲವಾರು ಸೈನ್ ಪೋಸ್ಟ್‌ಗಳನ್ನು ಲೈಟ್ ಕಂಭಗಳ ಮೇಲೆ ಅಂಟಿಸಿದ್ದರು, ಕೆಲವು ಕಡೆ ಬಣ್ಣ ಬಣ್ಣದ ಕೋಲುಗಳನ್ನು ಹುಗಿದು ಅದರ ಮೇಲೆ ಕಳೆದು ಹೋದ ನಾಯಿಯ ಚಿತ್ರ ಹಾಗೂ ವಿವರಗಳನ್ನು ತೋರಿಸಿ, ಸಿಕ್ಕಿದ್ದರೆ ತಿಳಿಸಿ ಎಂಬ ಮನವಿಯನ್ನು ಎಲ್ಲಾ ಕಡೆಗೂ ಅಂಟಿಸಿದ್ದರು.  ಸುಮಾರು ಐದು ಮೈಲು ಸುತ್ತಳತೆಯ ಕಾಡಿನಂತಹ ಆ ವಾತಾವರಣದಲ್ಲಿ ಕಳೆದು ಹೋದ ನಾಯಿ ಎಲ್ಲಿ ಹೋಯಿತೋ ಯಾರಿಗೆ ಸಿಕ್ಕಿತೋ, ಆದರೆ ಆ ನಾಯಿಯ ವಾರಸುದಾರರು ಪಟ್ಟ ಶ್ರಮ ನಿಜವಾಗಲೂ ಬಣ್ಣಿಸಲಸದಳವಾಗಿತ್ತು.  ನಾಯಿಯನ್ನು ಕಳೆದುಕೊಂಡ ವಾರಸುದಾರರ ಶ್ರಮವನ್ನು ನೋಡಿ ನಾನಾದರೂ ಒಂದು ದಿನ ಆಫೀಸಿಗೆ ರಜೆ ಹಾಕಿ ಹುಡುಕಲು ಸಹಾಯ ಮಾಡಲೇ ಎನ್ನಿಸದಿರಲಿಲ್ಲ.

ಆ ನಾಯಿಯ ಹೆಸರು Claire - ಕಳೆದು ಹೋಗಿದ್ದಾಳೆ, ಹುಡುಕಲು ಸಹಾಯ ಮಾಡಿ ಎಂದು ತಮ್ಮ ಫೋನ್ ನಂಬರ್ ಅನ್ನು ನೀಡಿದ ಸರಳವಾದ ಸಂದೇಶ ಆ ಪೋಸ್ಟರ್‌ಗಳಲ್ಲಿತ್ತು.  ಪೋಸ್ಟರ್‌ಗಳನ್ನು ಥರಾವರಿ ಬಣ್ಣ-ಬಣ್ಣದ ಪೇಪರುಗಳಲ್ಲಿ ಮುದ್ರಿಸಿ ಅಲ್ಲಲ್ಲಿ ಮರಗಳಿಗೆ ಮೊಳೆ ಹೊಡೆದಿದ್ದರು, ಜೊತೆಗೆ ಕಡು ಹಳದಿ ಬಣ್ಣ ಹಾಗೂ ಗುಲಾಬಿ ಬಣ್ಣಗಳ ಗೂಟಗಳನ್ನು ಅಲ್ಲಲ್ಲಿ ಹುಗಿದು ಅವುಗಳಿಗೂ ರಟ್ಟಿನ ಸೈನ್ ಅನ್ನು ಎರಡೂ ಕಡೆಗಳಿಂದಲೂ ಓದುವಂತೆ ತಗುಲಿಸಿದ್ದರು.  ನಾಯಿಯ ಚಿತ್ರವನ್ನು ಸೇರಿಸಿದ್ದರು, Claire ಸಣ್ಣ ಸೈಜಿನ ನಾಯಿ, ಚಪ್ಪರ ಕಾಲುಳ್ಳ dachshund ಜಾತಿಯ ವೆರಾಂಡಾದ ಅಲಂಕೃತ ನಾಯಿಯ ಹಾಗಿತ್ತು, Curious George ವೀಡಿಯೋಗಳಲ್ಲಿ ಬರೋ Hundley ಅಷ್ಟು ದೊಡ್ಡದಿರಬಹುದು ಎಂಬುದು ನನ್ನ ಊಹೆ.

ಒಬ್ಬ ವ್ಯಕ್ತಿ ಅಥವಾ ಸಾಕು ಪ್ರಾಣಿಯ ಬಗ್ಗೆ ನಾವು ತೋರುವ ಕಾಳಜಿ ಹಾಗೂ ಮುತುವರ್ಜಿಗಳನ್ನು ಯೋಚಿಸಿಕೊಂಡಾಗ, ಒಬ್ಬ ವ್ಯಕ್ತಿ ಅಥವಾ ಸಾಕು ಪ್ರಾಣಿ ಇಲ್ಲವಾದಾಗ ನಾವು ಅನುಭವಿಸುವ ದುಃಖ ಇವೆಲ್ಲವನ್ನೂ ಹತ್ತಿರದಿಂದ ಗಮನಿಸಿದಾಗ ಆಯಾ ದೃಷ್ಟಿಕೋನ ಅಥವಾ ಪ್ರೀತಿಯ ಆಳದ ಬಗ್ಗೆ ಅರಿವಾಗುತ್ತದೆ.  ಈ ನಾಯಿಯನ್ನು ಕಳೆದುಕೊಂಡ ವ್ಯಕ್ತಿ ಸುಮಾರು ಐವತ್ತಕ್ಕೂ ಹೆಚ್ಚು ಪೋಸ್ಟರುಗಳನ್ನು ಪ್ರಿಂಟ್ ಮಾಡಿ ಆಯಕಟ್ಟಿನ ಸ್ಥಳಗಳಲ್ಲಿ ಗೂಟಗಳನ್ನು ಹುಗಿದು ಮರಗಳಿಗೆ ಎಲ್ಲರಿಗೂ ತೋರುವ ಹಾಗೆ ಪೋಸ್ಟರುಗಳನ್ನು ಸುಮಾರು ಐದು ಚದುರ ಮೈಲು ವಿಸ್ತೀರ್ಣದಲ್ಲಿ ಹಚ್ಚಿರುವಾಗ ಅವರು ಪಟ್ಟ ಶ್ರಮವನ್ನು ನೋಡಿ ಆಶ್ಚರ್ಯವಾಯಿತು, ಈ ಪೋಸ್ಟರುಗಳ ಜೊತೆಗೆ ಇಂಟರ್ನೆಟ್ ಹಾಗೂ ಲೋಕಲ್ ಪ್ರಿಂಟ್ ಮಾಧ್ಯಮಗಳಲ್ಲೂ ’ನಾಯಿ ಕಳೆದಿದೆ’ ಎಂದು ಮೆಸ್ಸೇಜನ್ನು ಹಾಕಿರಲಿಕ್ಕೂ ಸಾಕು.  ಕಳೆದು ಹೋದ ನಾಯಿಯ ಬಗ್ಗೆಯೇ ಕಳೆದುಕೊಂಡವರ ಕಳಕಳಿ ಹೀಗಿರುವಾಗ ಕಳೆದು ಹೋಗುವ ಮೊದಲು ಆ ನಾಯಿಯ ಆರೈಕೆಯನ್ನು ಎಷ್ಟರ ಮಟ್ಟಿಗೆ ಆ ವಾರಸುದಾರರು ಮಾಡಿರಬಹುದು ಎಂದು ಊಹಿಸತೊಡಗಿದೆ.  Claire ಅಂತಹ ಕುಳ್ಳನೆ ಚಪ್ಪರ ಕಾಲಿನ ಲಾಬ್ಬಿ ನಾಯಿಗಳು ಸಾಮಾನ್ಯವಾಗಿ ಶ್ರೀಮಂತರ ಮನೆಯ ನಾಯಿಗಳು, ಅವು ಸಹಜವಾಗಿ ಎತ್ತರದ (elevated) ವಾತಾವರಣದಲ್ಲಿ ಬೆಳೆದಿರುತ್ತವೆ, ಜೊತೆಗೆ ತಕ್ಕ ಆರೈಕೆಗೂ ಒಳಗಾಗಿರುತ್ತವೆ.  ಶ್ರೀಮಂತರ ಮನೆಯ ಸಕಲೈಶ್ವೈರ್ಯವನ್ನೂ ಹೊಂದಿದ ನಾಯಿಗಳು ಆ ಮನೆಯ ಎಲ್ಲಾ ಸದಸ್ಯರಂತೆಯೇ ಎಂಬುದು ಇವತ್ತು ನಿನ್ನೆಯ ವಿಷಯವೇನಲ್ಲ.

ಹಾಗಾದರೆ ಪ್ರತಿಯೊಬ್ಬರೂ ತಮ್ಮ ನೆರೆಹೊರೆಯನ್ನು, ಬಂಧು ಮಿತ್ರರನ್ನೂ, ಸಾಕು ಪ್ರಾಣಿಗಳನ್ನು ಪ್ರೀತಿಸುವ ಅಥವಾ ನೋಡುವ ದೃಷ್ಟಿಕೋನ ಅವರವರ ಅಂತಸ್ತಿನ ಮೇಲೆ ಅವಲಂಭಿತವಾಗಿದೆಯೇ? ಬಡವರ ಮನೆಯ ನಾಯಿ ಎಂದರೆ ಈ ರೀತಿಯ ಹುಡುಕುವಿಕೆ ದೊರೆಯುತ್ತಿರಲಿಲ್ಲವೆಂದೇ? ಅಥವಾ ಬಡವರ ಮನೆಯ ನಾಯಿಗಳು ಹುಡುಕಲು ಯೋಗ್ಯವಲ್ಲವೋ? ಅಥವಾ ಬಡವರು ಶ್ರೀಮಂತರು ಎನ್ನುವ ವ್ಯತ್ಯಾಸಗಳಲ್ಲಿ ಬದುಕುವಾಗ ಅವರವರ ಅಗತ್ಯ, ಆಲೋಚನೆಗಳು ಬದಲಾಗುವುದು ಸ್ಪಷ್ಟವೋ?

***

ಅಮೇರಿಕದಲ್ಲಿ ಸಾಕು ಪ್ರಾಣಿಗಳನ್ನು ಪುಲ್ಲಿಂಗ/ಸ್ತ್ರೀಲಿಂಗವನ್ನು ಬಳಸಿ ಕರೆಯುವ ರೀತಿಯನ್ನು ನೀವು ನೋಡಿರಬಹುದು.  ನಾವು ಭಾರತದಲ್ಲಿ ನಮ್ಮ ಸಾಕು ಪ್ರಾಣಿಗಳಿಂದ ಹಿಡಿದ ಯಾವುದೇ ಪ್ರಾಣಿ-ಪಕ್ಷಿಗಳನ್ನೂ ಕೂಡಾ ಅದು-ಇದು ಎಂದು ನಪುಂಸಕ ಲಿಂಗದಲ್ಲಿ ಹೇಗೆ ಸಂಬೋಧಿಸುತ್ತೇವೋ ಇಲ್ಲಿ ಪ್ರಾಣಿ-ಪಕ್ಷಿಗಳನ್ನು ಪುಲ್ಲಿಂಗ/ಸ್ತ್ರೀಲಿಂಗವನ್ನು ಉಪಯೋಗಿಸಿ ಮಾತನಾಡುವುದು ವಿಶೇಷ ಅನ್ನಿಸುತ್ತೆ.  ತಮ್ಮದೇ ಸಾಕು ಪ್ರಾಣಿಗಳಿಂದ ಹಿಡಿದು ಕಾಡಿನ ಪಕ್ಷಿಗಳು, ರಕ್ಕೂನುಗಳು, ಇಣಚಿಗಳು...ಯಾವುದೇ ಪ್ರಾಣಿ ಪಕ್ಷಿಗಳಿಗೂ, He ಅಥವಾ She ಯ 3rd person singular ಬಳಕೆಯಾಗುತ್ತದೆ.  ಈ ಕಳೆದು ಹೋದ ನಾಯಿಯ ವಿಚಾರಕ್ಕೆ ಬಂದರೆ "Claire - ಕಳೆದು ಹೋಗಿದ್ದಾಳೆ!" ಹುಡುಕಲು ಸಹಾಯ ಮಾಡಿ ಎಂಬುದಾಗುತ್ತದೆ.

ನಮ್ಮ, ಅದರಲ್ಲೂ ಕನ್ನಡದ ನಪುಂಸಕ ಲಿಂಗದ ಬಳಕೆ ಎರಡು ರೀತಿಯದ್ದು: ಒಂದು, ಕಲ್ಲು, ಬುಕ್ಕು, ಬಸ್ಸು ಮೊದಲಾದ ’ಜೀವವಿರದ’ ವಸ್ತುಗಳನ್ನು "ಇದು, ಅದು, ಹೋಯ್ತು, ಬಂತು" ಎಂದು ಸಂಬೋಧಿಸುವ ಪರಿ; ಎರಡು, ದನ, ಕರು, ನಾಯಿ, ನರಿ, ಗಿಡ, ಮರ ಮೊದಲಾದ ಜೀವವಿರುವ ವಸ್ತುಗಳನ್ನೂ "ಇದು, ಅದು, ಹೋಯ್ತು, ಬಂತು" ಎಂದು ಸಂಬೋಧಿಸುವ ಪರಿ.  ಇದಕ್ಕೆ ಸ್ವಲ್ಪ ಭಿನ್ನವಾಗಿ ಹಿಂದಿಯಲ್ಲಿ ’ರೇಲ್ ಆ ರಹಿ ಹೈ’ ಎನ್ನುವಂತೆ ಬಸ್ಸು, ಲಾರಿ, ಟ್ರೇನುಗಳಿಗೂ ಸ್ತ್ರೀಲಿಂಗದ ಬಳಕೆ.  ಕನ್ನಡದ 3rd person singular ಬಳಕೆಯಂತೆ ನಾವು ನಮ್ಮ ಸಾಕು ಪ್ರಾಣಿಗಳನ್ನು ’ಅದು, ಇದು’ ಎಂದು ಕರೆಯಬಲ್ಲೆವು, ಹಾಗೆ ಕರೆಯುವ ರೂಢಿ ಪ್ರಾಣಿಗಳನ್ನು ನೋಡುವ ಹೊಸ ದೃಷ್ಟಿಕೋನವನ್ನು ನಮಗೆ ತಂದುಕೊಟ್ಟಿದೆ ಎಂದು ನನ್ನ ವಾದ.  ’ನಾಯಿ ಬಂತಾ?’ ಎನ್ನುವುದು ಸಹಜವಾದ ವಾಕ್ಯವೇ ಹೊರತು, ’ನಾಯಿ ಬಂದಳೋ?’ ಎನ್ನುವುದು ಅಷ್ಟು ಸರಿಯಾಗಿ ಉಪಯೋಗಕ್ಕೆ ಬಾರದು.

***

ಒಂದು ವಾರದ ನಂತರವೂ Claire ಇನ್ನೂ ಕಳೆದೇ ಹೋಗಿದ್ದಾಳೆ!  ಅಕಸ್ಮಾತ್ ಈಗಾಗಲೇ ಅವಳು ಸಿಕ್ಕಿದ್ದರೆ, ಅವಳ ವಾರಸುದಾರರು ಆ ಪೋಸ್ಟರುಗಳನ್ನು ತೆಗೆದಿರುತ್ತಿದ್ದರು.  ಸುಮಾರು ಈ ಎರಡು ವಾರಗಳ ಅಂತರದಲ್ಲಿ ಆ ಚಪ್ಪರಕಾಲಿನ ಕುಳ್ಳ ನಾಯಿಯ ಅರಣ್ಯದ ರೋಧನ ಯಾರಿಗೂ ಕೇಳಿರಲಿಕ್ಕಿಲ್ಲ.  ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿದ Claireಗೆ ರಾತ್ರಿ ಹೊತ್ತಿನ ಫ್ರೀಜಿಂಗ್ ಉಷ್ಣತೆಯಲ್ಲಿ ಕಷ್ಟವಾಗಿರುತ್ತದೆ, ದಪ್ಪನೆ ಚರ್ಮ ಹಾಗೂ ಕಠಿಣ ಪರಿಸ್ಥಿತಿಗಳಿಗೆ ಈಗಾಗಲೇ ಒಗ್ಗದ ಮನಸ್ಸು ಕಷ್ಟದ ಸಮಯದಲ್ಲಿ ಬಗ್ಗದೇ ಹೋಗುತ್ತದೆ.

Friday, October 31, 2008

ಗಂಟಲ ಒಳಗಿನ ಪದಗಳು

ನಾವೆಲ್ಲ ಹಾಗೇ ನಮ್ಮ ಬಾಯಲ್ಲಿ ಪದಗಳೇ ಹೊರಡೋದಿಲ್ಲ, ಯಾರೋ ನಮ್ಮ ಗಂಟಲಿನಲ್ಲಿ ಶವೆಲ್ಲನ್ನು ತೆಗೆದು ಪದಗಳನ್ನು ಗೋಚಿ ಬದಿಗೆ ಎತ್ತಿ ಹಾಕಿದ ಹಾಗೆ ಒಂದು ರೀತಿ ಛಳಿಗಾಲದಲ್ಲಿ ರಸ್ತೆಯ ಬದಿ ಗೋಚಿಹಾಕಿದ ಬಿಳಿಯ ಹಿಮದಂತೆ. ನಮ್ಮಲ್ಲಿನ ಪದಗಳೋ ಹಿಮದ ಹಾಗೆ ಕಪ್ಪು ಮಣ್ಣಿನ ಬಣ್ಣ ಕಂಡು ಬಿಸಿಲಿಗೆ ಕರಗಿ ಮತ್ತೆ ನೀರಾಗಿ ಇಂದಲ್ಲ ನಾಳೆ ಮತ್ತೆ ಬಿಳಿಯ ಹಿಮವಾಗುವ ಪ್ರಕ್ರಿಯೆಯಂತೆ ಹಿಂದೆ ಬಾರದೇ ಎಲ್ಲೋ ಅನತಿ ದೂರದ ಮೋಡಗಳ ಹಾಗೆ ದೂರವೇ ಉಳಿದು ಬಿಡುತ್ತವೆ. ನಾವು ನಮ್ಮ ಭಾಷೆ ನಮ್ಮತನವೆನ್ನುವುದು ಪದೇ ಪದೇ ಅವುಗಳ ಅಸ್ತಿತ್ವವನ್ನು ಹುಡುಕಿಕೊಳ್ಳುವ ಎಂದೂ ಮುಗಿಯದ ಲೂಪ್‌ನಲ್ಲಿ ಸೇರಿಕೊಂಡು ಮತ್ತೆ ಬರೋದೇ ಇಲ್ಲ.

ನಮಗೆ ನಮ್ಮತನ ನಮ್ಮದರ ನಡುವೆ ಇರೋದು ಭಾಷೆಯ ಸಮಸ್ಯೆಯೋ, ಅಭಿರುಚಿಯ ಸಮಸ್ಯೆಯೋ ಅಥವಾ ನಮ್ಮ ಸಂಸ್ಕೃತಿಯೇ ಹಾಗೋ? ಇಲ್ಲಿ ದಿನಕ್ಕೆ ನೂರು ಬಾರಿ ’ಧನ್ಯವಾದಗಳು’ ಎಂದು ಒಣಗಂಟಲಿನಲ್ಲಿ ಅನ್ನುವ ನಾವು ನಮ್ಮೂರುಗಳಲ್ಲಿ ಅಂದದ್ದಿಲ್ಲ. ಎಂದೋ ಯಾರದ್ದೋ ಕೈ ಹಿಡಿದುಕೊಂಡು ಕೃತಾರ್ಥರಾಗಿದ್ದೇವೆ, ನಿಂತು ಹೋದ ಮದುವೆಯನ್ನು ನಡೆಸಿಕೊಟ್ಟವರ ಕುರಿತು ಕನ್ಯಾಪಿತೃಗಳು ಗದ್ಗದರಾದ ಹಾಗೆ ಮಂಜುಕಣ್ಣಿನವರಾಗಿದ್ದೇವೆ, ದೊಡ್ಡವರು-ದೇವರ ಮುಂದೆ ಆರ್ತರಾಗಿದ್ದೇವೆ, ಅಷ್ಟೇ. ನಮ್ಮೂರಿನ ಮೇಷ್ಟ್ರುಗಳೋ ಬರೀ ಬೈಯುತ್ತಲೇ ಕಲಿಸುತ್ತಾ ಹೋದರು, ಬೈಗಳು ಮಾಮೂಲಿ ಸಂವಹನಾ ಶಬ್ದಗಳಾದವು. ನಮ್ಮ ಹಿರಿಯರು ನಮ್ಮನ್ನು ಕಣ್ಣಿನಿಂದಲೇ ಹೆದರಿಸುತ್ತಾ ಬಂದರು, ಅವರನ್ನು ನೋಡಿದಾಗಲೆಲ್ಲ ತಾಯ ಮಡಿಲಿನಲ್ಲಿ ಮಗು ಕಂಡು ಕೇಳರಿಯದ ಗುಮ್ಮನ ಹೆಸರನ್ನು ಕೇಳಿ ಮುದುರಿಕೊಳ್ಳುವ ಹಾಗೆ ಮಾಡಿದರು, ಶಕ್ತಿ ಸಾಧಿಸುವವರು ಸಾಧಿಸಿ ತೋರಿಸಿದರು, ಇಲ್ಲದವರು ಇದ್ದವರ ವ್ಯತ್ಯಾಸವನ್ನು ಗುರುತಿಸುತ್ತಲೇ ಬಂದರು.

ನಮ್ಮ ಭಾಷೆ, ಪದ ಬಂಡಾರ ಬೆಳೆಯಲೇ ಇಲ್ಲ. ನಮ್ಮ ಸ್ನೇಹಿತರು ವಾರಿಗೆಯವರು ಇಂಗ್ಲೀಷೇ ಸರ್ವಸ್ವ ಎಂದುಕೊಂಡು ಊಟ ಮಾಡಿದವರು ಕೈತೊಳೆದುಕೊಂಡಷ್ಟು ಸಲೀಸಾಗಿ ಉತ್ತಮವಾಗೇ ಮಾತನಾಡುತ್ತಿದ್ದ ಕನ್ನಡವನ್ನು ಮರೆತು, ಹರಿದು-ಬೆರೆತು-ಅರಿಯದೇ ಇಂಗ್ಲೀಷಿಗೆ ತೊಡಗಿಕೊಂಡರು. ನಮ್ಮ ಸಹಪಾಠಿಗಳಿಗಾಗಲೇ ಇಂಗ್ಲೀಷು ಓದಿನ ಹುಚ್ಚು ಹತ್ತಿ ಹೋಗಿತ್ತು, ಇಂಗ್ಲೀಷು ಸಿನಿಮಾಗಳು ಸರ್ವವ್ಯಾಪಿಗಳಾಗಿ ಹೋಗಿದ್ದವಾಗಲೇ. ಕನ್ನಡ ಸಿನಿಮಾಗಳ ಕೌಟುಂಬಿಕ ಚಿತ್ರಣಕ್ಕೆ ಮೀರಿ ನಮ್ಮ ಪಡ್ಡೆತನಕ್ಕೆ ಇಂಗ್ಲೀಷಿನ ಬೆತ್ತಲೆ ಚೆಲುವೆಯರು ಉತ್ತರ ಕೊಡತೊಡಗಿದ್ದರು, ನಮಗೆ ಗೊತ್ತಿಲ್ಲದೇ ನಾವೇ ಮಾರು ಹೋಗಿದ್ದೆವು - ನಮ್ಮ ಭಾಷೆ, ಔಚಿತ್ಯ, ಗಾಂಭೀರ್ಯತೆಯನ್ನು ಮೀರಿ ಮತ್ತೆಂದೂ ಹಿಂದೆ ಬರದಷ್ಟು ದೂರಕ್ಕೆ. ನಾವು ಬಳಸುವ ಶಾಲೆ ಮೇಜು ಪಡಸಾಲೆ ಕಾಲುಚೀಲ ಎನ್ನುವ ಪದಗಳು ನಮ್ಮ ಓರಗೆಯವರ ಹುಬ್ಬೇರುವುದಕ್ಕೆ ಕಾರಣವಾದವು. ಈ ಕಡೆ ಕನ್ನಡವನ್ನೂ ಓದದ ಆ ಕಡೆ ಇಂಗ್ಲೀಷನ್ನೂ ಸರಿಯಾಗಿ ತಿಳಿಯದವರ ಜೊತೆ ನಾವು ಕನ್ನಡವನ್ನು ಬಲ್ಲ ಕೆಲವರು ಅಲ್ಪರಾದೆವು. ನಮ್ಮೊಳಗೆ ನಾವು ಅಂತರ್ಮುಖರಾಗಿಕೊಂಡು ವರ್ಷಕ್ಕೊಮ್ಮೆ ಕಷ್ಟಪಟ್ಟು ಸಂಪಾದಿಸಿಕೊಳ್ಳುವ ಕಾಲೇಜು ವಾರ್ಷಿಕೋತ್ಸವದ ಮ್ಯಾಗಜೀನಿನಲ್ಲಿ ಒಂದು ಕವನ ಲೇಖನ ಬರೆಯುವಷ್ಟರಲ್ಲಿ ಸ್ಖಲಿತರಾಗಿ ಹೋಗುವಲ್ಲಿ ನಮ್ಮ ಅಂತಃಸತ್ವ ಮಿತಗೊಂಡಿತು. ಹಾಗೆ ಬರೆದ ಲೇಖನ ನಮ್ಮ ನಡುಗೆ ಉಡುಗೆ ಮಾತುಕಥೆಗಳು ಓರಗೆಯವರಿಗೆ ಗಾಂಧೀತನವಾಗಿ ಕಂಡಿತು. ರೆಟ್ಟೆಗಳನ್ನು ಬಲಿಸಿಕೊಳ್ಳದ ನಾವು ಮಿದುಳನ್ನು ಬಲಿಸಿಕೊಳ್ಳುವತ್ತ ವಾಲಿಕೊಂಡಾಗ ರೆಕ್ಕೆ ಬಲಿತ ಕೆಲವು ಪಡ್ಡೆ ಹುಡುಗರು ನಮ್ಮಕ್ಕ ತಂಗಿಯರನ್ನು ಕೀಟಲೆ ಮಾಡಿ ನಕ್ಕರೆ ಅವರಿಗೆರಡೇಟು ಬಿಡದಿರುವುದು ಮೇಲ್ನೋಟಕ್ಕೆ ಆದರ್ಶವೆಂದುಕೊಂಡರೂ ಅದು ನಮ್ಮ ಕೈಲಾಗದ ಮಾತು ಎನ್ನುವುದು ನಮ್ಮ ಹೊಟ್ಟೆಯಲ್ಲೇ ಹುಟ್ಟಿ ಸತ್ತ ಸತ್ಯವಾಗಿ ಹೋಗಿತ್ತು.

***

ಹೀಗೇ ಒಂದು ತಣ್ಣನೆ ಸೋಮವಾರದ ಸಂಜೆ. ಅಮೇರಿಕದಲ್ಲಿ ನಮ್ಮ ಬದುಕಿನ ಸುಗಮ ಸಂಗೀತವೆನ್ನುವುದು ಆರಂಭ ಹಾಗೂ ಅಂತ್ಯವಾಗುವುದು ವಾರಾಂತ್ಯಗಳಲ್ಲೇ ಎಂದು ಯಾರೋ ಬರೆದು ಶಾಸನ ಮಾಡಿಟ್ಟು ಹೋದ ಹಾಗಿದ್ದುದನ್ನು ಉಲ್ಲಂಘಿಸಿ ಸೋಮವಾರ ಆಫೀಸಿನ ತರುವಾಯ ನಡೆದ ಮುಖಾಮುಖಿ ಮಾತುಕಥೆಯೊಂದರಲ್ಲಿ ಜಯಂತ ಕಾಯ್ಕಿಣಿ ನನ್ನನ್ನು ಕೇಳಿದರು, ’ನಿಮ್ಮ ತಲೆಮಾರುಗಳಲ್ಲಿ ಮೇಷ್ಟ್ರುಗಳೇ ಇಲ್ಲ, ಭಾರತದಲ್ಲಿ ಚೆನ್ನಾಗಿ ಅಂಕಪಡೆದ ಎಲ್ಲರೂ ಉದ್ಯಮವನ್ನು ಕುರಿತ ಶಿಕ್ಷಣವನ್ನು ಪಡೆಯಲು ಸ್ಪರ್ಧಿಸಿದಂತೆ ಮೂಲ ಶಿಕ್ಷಣ - ಹ್ಯುಮಾನಿಟೀಸ್, ಬೇಸಿಕ್ ಸೈನ್ಸ್, ಎಜುಕೇಷನ್, ಆರ್ಥಶಾಸ್ತ್ರ ಮುಂತಾದವುಗಳು - ಎನ್ನುವುದನ್ನು ಕಲಿಯುವರೂ ಇಲ್ಲ, ಕಲಿಸುವವರೂ ಇಲ್ಲ. ಹೀಗಾದರೆ ಮುಂಬರುವ ತಲೆಮಾರು ಹೇಗಿದ್ದಿರಬಹುದು?’

ನಾನೆಂದೆ, ’ಬೇಕಾದಷ್ಟು ಹೊಸ ಶಾಲೆಗಳಿವೆ, ಖಾಸಗಿಯವರು ಜೋರಾಗಿಯೇ ಇದ್ದಾರೆ, ಇವುಗಳ ನಡುವೆ ಗುರುಗಳೇ ಇಲ್ಲವೇ?’

ಅವರೆಂದರು, ’ಇಲ್ಲ, ಚೆನ್ನಾಗಿ ಓದುವವರು ವೃತ್ತಿನಿರತ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡರೆ ಉಳಿದ ಶಿಕ್ಷಣ ಕ್ಷೇತ್ರಗಳಿಗೆ ಕಾಲಿರುಸುವವರು ಮೊದಲಿನವರು ಕಷ್ಟಪಡುತ್ತಿದ್ದಷ್ಟಂತೂ ಕಷ್ಟಪಡುತ್ತಿಲ್ಲ.’

ಇದು ನಿಜ, ನಾವು ಹತ್ತನೇ ತರಗತಿ ಪಾಸ್ ಮಾಡುತ್ತಿದ್ದ ಹೊತ್ತಿಗೇನೇ ಫಸ್ಟ್ ಕ್ಲಾಸ್ ಪಡೆದವರು ಪಿಯುಸಿ ಸೈನ್ಸ್ ಅಥವಾ ಡಿಪ್ಲೋಮಾ ವಿಭಾಗ, ಸೆಕೆಂಡ್ ಹಾಗೂ ಥರ್ಡ್ ಕ್ಲಾಸ್ ಪಾಸ್ ಮಾಡಿದವರು ಕಾಮರ್ಸ್ ಅಥವಾ ಆರ್ಟ್ಸ್ ತೆಗೆದುಕೊಳ್ಳುತ್ತಿದ್ದುದು ಸಹಜವಾಗಿತ್ತು. ಅಲ್ಲಲ್ಲಿ ಎಕ್ಸೆಪ್ಷನ್ನುಗಳನ್ನು ನೋಡಿದ್ದೇನೆ, ತುಂಬ ಬುದ್ಧಿವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮಗೆ ಬೇಕಾದ ವಾಣಿಜ್ಯ, ಅರ್ಥಶಾಸ್ತ್ರವನ್ನು ತೆಗೆದುಕೊಂಡು ಅದನ್ನು ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗಿಂತಲೂ ಅವರೇ ಹೆಚ್ಚು ಓದಿಕೊಂಡಿದ್ದ ಪ್ರಸಂಗಗಳನ್ನು.

ಕಾಯ್ಕಿಣಿಯವರ ನಡುವಿನ ಮಾತುಕಥೆಯಲ್ಲಿ ಮತ್ತೊಂದು ವಾಸ್ತವಾಂಶ ಸ್ಪಷ್ಟವಾಗಿತ್ತು: ಇಂದಿನ ಜನ ಅದೆಷ್ಟು ಬೇಗ ಪ್ರತಿಫಲವನ್ನು ಆಶಿಸುತ್ತಾರೆ ಎಂಬುದು ಆಶ್ಚರ್ಯ ಮೂಡಿಸಿತ್ತು. ಟಿವಿ ಕಾರ್ಯಕ್ರಮಗಳಿಗೆ ತಯಾರಾಗಲೆಂದೇ ಮಕ್ಕಳಿಗೆ ಸಂಗೀತ ಕಲಿಸಿಕೊಡುವ ವ್ಯವಸ್ಥೆ ಹುಟ್ಟಿದೆ, ಒಂದು ವಾರ-ತಿಂಗಳು ಅಥವಾ ಕೆಲವೇ ತಿಂಗಳುಗಳಲ್ಲಿ ಮಕ್ಕಳಲ್ಲಿ ಸಂಗೀತವನ್ನು ತುಂಬುತ್ತೇವೆನ್ನುವ ಗ್ಯಾರಂಟಿ ಕೊಡುವ ವ್ಯವಸ್ಥೆ ಬಂದಿದೆ ಅಥವಾ ಹಾಗಿರುವುದಕ್ಕೆ ಡಿಮ್ಯಾಂಡ್ ಇದೆ ಎನ್ನುವ ಮಾತು ಆಶ್ಚರ್ಯ ಮೂಡಿಸಿತ್ತು. ಎಲ್ಲವೂ ವೇಗವಾಗಿ ಆಗಬೇಕೆನ್ನುವ ವ್ಯವಸ್ಥೆಯಲ್ಲಿ ಸಾಧನೆಗೆ ಸ್ಥಳವಿಲ್ಲ. ಸಾನ್ಯಾ ಮಿರ್ಜಾ ಲಿಯಾಂಡರ್ ಪೇಸ್ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ಕಠಿಣ ಪರಿಶ್ರಮ ಪಟ್ಟು ಮುಂದೆ ಬರುವುದನ್ನು ನೋಡಿಕೊಂಡೂ ಜನರು ಒಂದೇ ಉಸಿರಿನಲ್ಲಿ ಚಾಂಪಿಯನ್ನರಾಗುವ ಕನಸು ಕಂಡರೆ ಅದಕ್ಕೇನೆನ್ನೋಣ? ನಮ್ಮ ಗುರುಗಳು ತಮ್ಮ ಜೀವನ ಪರ್ಯಂತ ಹಿಂದೂಸ್ತಾನೀ ಸಂಗೀತ ಸಾಧನೆ ಮಾಡಿಯೂ ಸಂಗೀತವೆನ್ನುವುದು ಒಂದು ಸಾಗರ ಅದರಲ್ಲಿ ನಾನು ಕುಡಿದದ್ದು ಒಂದು ಬೊಗಸೆ ಉಪ್ಪು ನೀರು ಅಷ್ಟೇ ಎನ್ನುವುದನ್ನು ಇಂದಿನ ವೇಗಮಯ ಜೀವನದ ಮುಂದೆ ಸರಳವಲ್ಲದ್ದು ಎನ್ನೋಣವೆ?

***

ಏಕೋ ಅಶ್ವಥ್ ತಮ್ಮ ಹಾಡಿನ ನಡುವೆ ’ನಾವು ಭಾರತೀಯರು...’ ಎಂದಾಗ ಸ್ವಲ್ಪ ಹೊತ್ತಿನ ಮೊದಲು ’...ಇವರು ನಿಮ್ಮ ದೇಶದವರು!’ ಎಂದು ಯಾರನ್ನೋ ಪರಿಚಯಿಸಿಕೊಟ್ಟ ನನ್ನನ್ನೇ ನೋಡಿ ಕೈ ಮಾಡಿ ’ನಾವು ಭಾರತೀಯರು...’ ಎಂದು ಹಾಡಿದಂತಾಯಿತು. ನಾವು ಭಾರತೀಯರು ಎನ್ನುವುದರಲ್ಲಿ ಹುರುಳಿದೆ ತಿರುಳಿದೆ, ಒಂದೇ ಒಂದು ಮಾತಿನಲ್ಲಿ ಎಲ್ಲವೂ ಇದೆ. ಅಮೇರಿಕದಲ್ಲೇ ಹುಟ್ಟಿ ಬೆಳೆದವನಂತಿರುವ ನನ್ನ ಸಹೋದ್ಯೋಗಿ ನಮ್ಮ ಕಾನ್‌ಫರೆನ್ಸ್ ಕಾಲಿನ ನಡುವೆ ಇನ್ಯಾರನ್ನೋ ಕುರಿತು, ’ಅದೊಂದು ಆರ್ಡರನ್ನು ಹೇಗೋ ತಳ್ಳಿಬಿಡು, ಸ್ವಲ್ಪ ಅಡ್ಜಷ್ಟ್ ಮಾಡಿಕೋ...’ ಎಂದು ಹೇಳಿದಾಗ ನನ್ನ ಪಕ್ಕೆಗೆ ತಿವಿದಂತಾಗಿ ಒಂದು ಕಡೆ ರಿಪೀಟಬೆಲ್ ಪ್ರಾಸೆಸ್ಸುಗಳನ್ನು ಎಸ್ಟಾಬ್ಲಿಷ್ ಮಾಡುವುದು ನನ್ನ ಜವಾಬ್ದಾರಿ ಅಂತಹುದರಲ್ಲಿ ’ಸ್ವಲ್ಪ ಅಡ್ಜಷ್ಟ್ ಮಾಡಿಕೊಳ್ಳುವುದನ್ನು’ ಅದು ಹೇಗೆ ರಿಪೀಟ್ ಮಾಡಲಿ? ಅಥವಾ ಅದು ನಮ್ಮ ಕ್ರೋಮೋಸೋಮು, ಡಿಎನ್‍ಎ ಗಳಲ್ಲಿ ಯಾವತ್ತೂ ರಿಪೀಟ್ ಆಗುತ್ತಲೆಯೇ ಇದೆಯೋ?

ನಮ್ಮ ಗುರುಗಳೆಲ್ಲ ಇಂಗ್ಲೀಷನ್ನು ಗಾಢವಾಗಿ ಓದಿಕೊಂಡ ಪಂಡಿತರು ಅಥವಾ ಅಂತಹ ಪಂಡಿತರನ್ನು ಬಲ್ಲವರು. ಅವರು ಇಂಗ್ಲೀಷನ್ನು ಓದಿಕೊಂಡ ಹಿನ್ನೆಲೆಗೆ ತಕ್ಕಂತೆ ಕನ್ನಡದ ಗಂಧ-ಗಾಳಿಯನ್ನೂ ಬಲ್ಲವರು ಒಂದು ರೀತಿ ಫ್ಲ್ಯಾಷ್ ಲೈಟ್‌ನ ನೇರಕ್ಕೆ ಒಂದು ಒಂದು ಬೆಳಕಿನ ವರ್ತುಲ ಬಿದ್ದರೆ ಅದಕ್ಕೆ ಸುತ್ತಲಿನ ಪ್ರಭಾವಳಿ ಇದ್ದಂತೆ. ನಾವುಗಳೆಲ್ಲ ನಮಗೆ ಬೇಕಾದುದನ್ನು ಓದಿಕೊಂಡು ಬೇಕಾದಷ್ಟು ಅಂಕಗಳನ್ನು ಗಳಿಸಿ ಮುಂದೆ ಬಂದೆವು. ಇಲ್ಲಿಯವರೆಗೂ ನಮ್ಮ ಸಬ್ಜೆಕ್ಟಿನ ಬಗ್ಗೆಯೇ ಯಾರೇ ಪ್ರಶ್ನೆ ಕೇಳಿದರೂ ’ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎನ್ನುವ ಉತ್ತರವನ್ನು ಆ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಿಂತ ಮೊದಲು ಯೋಚಿಸಿಕೊಳ್ಳುತ್ತಿದ್ದೆವು. ಒಂದು ದಿನವೂ ನಾವು ಕಲಿಯುವುದರ ಹಿನ್ನೆಲೆ ಮುಂದೆ ಅದನ್ನು ಜೀವನದಲ್ಲಿ ಬಳಸುವ ಬಗ್ಗೆ ತಲೆ ಕೆಡಿಸಿಕೊಂಡು ಗೊತ್ತಿಲ್ಲದವರಾಗಿದ್ದೆವು. ನಮಗೆ ಗೊತ್ತಿರದೆಯೋ ಗೊತ್ತಿದ್ದೋ ಮುಂದಿನ ಜಗತ್ತಿಗೆ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುತ್ತಿದ್ದೆವು ಆದರೆ ಅದರ ವೇಗ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದ್ದುದೂ ಇತ್ತು.

ಮತ್ತದೇ ಮಾತು, ಕೆಲವೊಂದು ಭಾವನೆಗಳು ಭಾಷೆಯನ್ನೂ ಮೀರುತ್ತವೆಯಂತೆ, ಆದರೆ ಆ ಸಮಸ್ಯೆಯ ಆಳ ನಮಗೆಂದೂ ಅರಿವಾಗದು ಏಕೆಂದರೆ ನಮ್ಮ ಭಾಷೆಯ ಆಳವೇ ಅಷ್ಟು. ಯಾರಾದರೊಡನೆ ಮುಖ ಕೊಟ್ಟು ಮಾತನಾಡೋಣವೆಂದರೆ ಅವರು ಇಂಗ್ಲೀಷಿನ ಮೊರೆ ಹೊಕ್ಕು ಕೊನೆಗೆ ಮಾತೇ ನಿಂತು ಹೋಗುವ ಸ್ಥಿತಿ ಬರುವ ಹಾಗೆ ನಮಗೆ ನಮ್ಮತನವೇ ದೊಡ್ಡದಾಗಿ ಯಾವತ್ತೂ ಎಲ್ಲೂ ಕಾಣೋದಕ್ಕೆ ಒಂದು ಕಾರಣ ಹುಟ್ಟಿಕೊಳ್ಳುತ್ತದೆ. ನಮ್ಮ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಹಲವಾರು ಧ್ವನಿಗಳು ಹುಟ್ಟೋದೇನೋ ನಿಜ, ಆದರೆ ಅವುಗಳು ರಾಗವಾಗಿ ಬೆಳೆಯೋದೇ ಇಲ್ಲ, ಒಂದು ಆಲಾಪನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಹಾಗೆ ಮತ್ತೊಂದು ಹುಟ್ಟಿದರೂ ಹುಟ್ಟಬಹುದು ಎನ್ನುವ ನಿರೀಕ್ಷೆಯಲ್ಲೇ ಬದುಕು-ಭಾವನೆ-ಬಂಡವಾಳವೆಲ್ಲವೂ ಕಳೆದು ಹೋದ ಹಾಗೆ. ಹ್ಞೂ, ನಮ್ಮ ನಮ್ಮ ಮುಸುಡಿಯನ್ನು ನಾವು ನಾವೇ ನೋಡಿಕೊಂಡು ನಮ್ಮ ಪ್ರಪಂಚದಲ್ಲಿ ನಾವೇ ತೇಲಾಡಿ ಓಲಾಡಿಕೊಂಡು ನಾವೇ ಬರೆದು ಸಂಪಾದಿಸಿ ಪ್ರಕಟಿಸುವ ಸಾಹಿತ್ಯದಲ್ಲಾದರೂ ಅದೇನು ಮಹತ್ತವಿದ್ದಿರಬಹುದು? ತೀಡಿ ಗಂಧವಾಗಲಿಲ್ಲ, ಕಾಯಿಸಿ ಬಗ್ಗಿ ಹೊಳೆಯಲಿಲ್ಲ ಎನ್ನುವ ಸಂಬಂಧಗಳಲ್ಲಿ ಸೂಕ್ಷ್ಮವಾದರೂ ಎಲ್ಲಿಂದ ಬಂದೀತು? ನಿಜವಾದ ನೋವಿಗೆ ಸ್ಪಂದಿಸದೇ ಅದೆಷ್ಟು ದಿನ ಎಲ್ಲವನ್ನೂ ಮುಂದೆ ತಳ್ಳಲಾದೀತು?

Sunday, August 31, 2008

ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು?

Even tea bags have instructions to follow! ಅಂತ ಅನ್ನಿಸಿದ್ದು ಇತ್ತೀಚೆಗೆ. ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು? ಬೆಳಕಿನ ಬಗ್ಗೆ ತಿಳಕೊಳ್ಳೋಣ ಅಂತ ಶಾಲೆ-ಕಾಲೇಜಿಗೆ ಹೋದ್ರೆ ಬೆಳಕು ಅಂದ್ರೆ ಪಾರ್ಟಿಕಲ್ಲೋ ವೇವೋ ಅಂತ ನಮ್ಮನ್ನೇ ಕನ್‌ಫ್ಯೂಸ್ ಮಾಡ್ತಾರೆ, ಕ್ಲಾಸಿಕಲ್ ಥಿಯರೀನೂ ಬೇಡಾ ಮಾಡರ್ನ್ ಸೈನ್ಸೂ ಬೇಡಾ ಅಂತಂದ್ರೆ ಯಾವಾಗ್ಲೂ ಕ್ವಾಂಟಮ್ ಮೆಕ್ಯಾನಿಕ್ಸ್ ಇದ್ದೇ ಇದೆ, ಆದ್ರೆ ನಮ್ಮ ಕಾಲೇಜು ಮೇಷ್ಟ್ರುಗಳು ಮಾಡೋ ಪಾಠವನ್ನು ಅರ್ಥ ಮಾಡ್ಕೋ ಬೇಕಾದ್ರೆ ವಿದ್ಯಾರ್ಥಿಗಳು ಬೆಳಕಿನ್ ವೇಗಕ್ಕಿಂತ್ಲೂ ಹೆಚ್ಚು ಚುರುಕಾಗಿರಬೇಕು. ಇನ್ನೇನು Heisenberg's Uncertainity Principle ತಲೆ ಒಳಗೆ ಹೊಕ್ಕಿರುತ್ತೋ ಇಲ್ವೋ ಅಷ್ಟೊತ್ತಿಗೆ ಎಕ್ಸಾಮ್ ಅಂತ ತಲೆ ತಿಂದು ಕಲಿ ಬೇಕಾದ್ದು ಕಲಿಯೋ ಹೊತ್ತಿಗೆ ಎಕ್ಸಾಮ್ ಪ್ರಿಪರೇಷನ್ನ್ ಎಕ್ಸಾಮ್ ಪ್ರಿಪರೇಷನ್ನ್ ಮಾಡೋ ಹೊತ್ತಿಗೆ ಕಲಿ ಬೇಕಾದ್ದು ಕಲಿಯೋ ಸಂದರ್ಭ ಬಂದಿದ್ದು ನನಗಂತೂ ಮೊದಲ್ನೇ ಸರ್ತಿ ಅಲ್ಲಾ ತಾನೆ?

ಇಂತಲ್ಲೇ ರಸ್ತೆ ದಾಟೀ ಅಂತ ಬಿಳಿ-ಗೆರೆಗಳನ್ನು ಎಳೆದಿರ್ತಾರೆ, ಅದನ್ನ ದಾಟೋದಕ್ಕಿಂತ ಮೊದ್ಲೇ zeebra crossing ಅಂತ ಹೇಳಿ ಕನ್‌ಫ್ಯೂಸ್ ಮಾಡ್ತಾರೆ. ಪೈಥಾಗೊರೋಸ್ ಥಿಯರಮ್ ಅಂತಾ ತಲೆ ತಿಂತಾರೆ, ಅದನ್ನು ಕಲಿತು ಮುಗೀತಿದ್ದ ಹಾಗೆ it is also known as Donkey's formula ಅಂತಾರೆ. ಝೀಬ್ರಾ ಕತ್ತೆ ಕುದುರೆಗಳಿಗೆ ಗೊತ್ತಿರೋ ಲಾಜಿಕ್ಕನ್ನ ತಿಳಕೊಳ್ಳೋದಕ್ಕೆ ನಾವ್ಯಾಕೆ ಶಾಲೆಗೆ ಹೋಗ್ಬೇಕು?

ನಮ್ ಕನ್ನಡಿಗರದ್ದು ಯಾವಾಗ್ಲೂ ಸಪ್ಪೆ ಸ್ವಭಾವ, ಯಾಕೆ ಅಂತೀರಾ? ಮತ್ತಿನ್ನೇನು, ನಾವೆಲ್ಲ ದೊಡ್ಡದಾಗಿ ’ನಮಸ್ಕಾರ, ಹೇಗಿದ್ದೀರಾ?’ ಅಂತ ಕೇಳ್ತೀವಲ್ಲ, ಈ ’ನಮಸ್ಕಾರ’ ಅನ್ನೋದರಲ್ಲಿ ಕಿಕ್ ಇಲ್ಲ, ಅದರಲ್ಲಿ ನಮಸ್ಕಾರಮ್, ವಣಕ್ಕುಮ್, ಸಲಾಮ್, Hey, Hi ಅನ್ನೋದರಲ್ಲಿರೋ ಗ್ಲಾಮರ್ ಇಲ್ಲ. ’ನಮಸ್ಕಾರ, ನಮಸ್ಕಾರ, ನಮಸ್ಕಾರ’ ಅಂತ ಹೇಳ್ಕೊಂಡು ಆ ಗಣೇಶನೇನೋ ಮುಂದೆ ಬಂದ, ಅದೇ ರೀತಿ ನೀವೇನಾದ್ರೂ ದಾರೀಲಿ ಹೋಗೋರ್ ಬರೋರಿಗೆ ’ನಮಸ್ಕಾರ ನಮಸ್ಕಾರ’ ಅಂದ್ರೆ ತಲೆ ಸರಿ ಇಲ್ಲ ಅಂದ್‌ಕೋತಾರೆ ಅಷ್ಟೇ. ಅದಕ್ಕೋಸ್ಕರನೇ ನಮ್ ಬಯಲ್ ಸೀಮೆಯಲ್ಲಿ ’ಅರಾಮಾ?’ ಅನ್ನೋದು ಅದು How're you doing? ಅನ್ನೋದರ ಯಥಾ ನಕಲೇ, ಆದ್ರೆ ಬಹಳ ಸಿಂಪಲ್ಲಾಗಿರೋದು. ಒಂದು ರೀತಿ ಅರ್ಧ ಪೇಜ್ ಬರೆದಿರೋ ಸ್ಪ್ಯಾನಿಷ್ ಡೈಲಾಗನ್ನು ಮೂರೇ ಮೂರು ಸಾಲು ಇಂಗ್ಲೀಷಿನಲ್ಲಿ ಹೇಳಿದ ಹಾಗೆ.

ಸಹ್ಯಾದ್ರಿ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೋತಿದ್ದೆ, ನಾನೋ ಟೈಮರನ್ನು ಒಡಲಾಳದಲ್ಲೇ ಇಟ್ಟುಕೊಂಡು ಹುಟ್ಟಿದ ಹಾಗೆ ಬಹಳ ಶಿಸ್ತಿನವನು. ಪಾಪ ಯಾವ್ದೋ ಹಳ್ಳಿ ವಿದ್ಯಾರ್ಥಿ ಒಂದೆರಡು ನಿಮಿಷ ಲೇಟ್ ಆಗಿ ಬಂದ, ’ಯಾಕೆ, ಕ್ಲಾಸ್ ಇರೋದ್ ಮರ್ತು ಹೋಯ್ತಾ?’ ಅಂದೆ (’ಊಟ ಮಾಡೋದ್ ಮರೆಯೋದಿಲ್ವಾ?’ ಅನ್ನೋದು ಫಾಲ್ಲೋ ಅಪ್ ಡೈಲಾಗು, ಪರಿಸ್ಥಿತಿ ಅಲ್ಲೀವರೆಗೆ ಹೋಗ್ಲಿಲ್ಲ), ಅವನು, ’ಇಲ್ಲಾ ಸಾರ್, ಈಗಷ್ಟೇ ಊರಿಂದ ಬಂದೆ?’ ಅಂದ. ನಾನು, ’ಹಾಗಾದ್ರೆ ನಾವೆಲ್ಲ ಕಾಡಿಂದ ಬರ್ತೀವೇನು?’ ಅಂದು ಸುಮ್ಮನಾದೆ, ಕ್ಲಾಸ್ ಎಲ್ಲ ನಗ್ತು, ಹುಡುಗನ ಮೋರೆ ಪೆಚ್ಚಗಾಗಿ ನನಗೆ ’ನೀನು ಅಮೇರಿಕದಲ್ಲಿ ಹೋಗಿ ಬೀಳು!’ ಅಂತ ಶಾಪಾ ಹಾಕ್ದಾ ಅನ್ಸತ್ತೆ, ಅದಕ್ಕೆ ಇಲ್ಲ್ ಬಂದ್ ಬಿದ್ದಿದ್ದೀನ್ ನೋಡಿ. ಇಲ್ಲೋ, ವಿದ್ಯಾರ್ಥಿಗಳು ಆನ್‌ಟೈಮ್ ಬರೋದಿರ್ಲಿ ಶಾಲೇಲಿ ಮೇಷ್ಟ್ರುಗಳ ಎದಿರು ವಿದ್ಯಾರ್ಥಿಗಳು ತಿಂಡಿ-ತೀರ್ಥ ತಿನ್ನಬಹುದು ಕುಡೀಬಹುದು. ನಾನು ಯಾವ್ದೋ ಡಾಕ್ಟ್ರು ಅಪಾಯಿಂಟ್‌ಮೆಂಟು ಅಂತ ಅವರು ಕೊಟ್ಟ ಟೈಮಿಗೆ ಹೋದ್ರೆ ಅವರು ಮೊದ್ಲು ದೊಡ್ಡ ರೂಮಿನಲ್ಲಿ ಕಾಯಿಸಿದ್ದು ಆಲ್ದೇ ಅದಕ್ಕಿಂತ ಸಣ್ಣ ರೂಮಿನಲ್ಲಿ ಮತ್ತೆ ಕಾಯಿಸ್ತಾರಲ್ಲ. ಇಲ್ಲಿಯವರಿಗೆ ಟೈಮ್ ಸೆನ್ಸೇ ಇಲ್ಲ, ನನ್ ಮೀಟಿಂಗ್‌ಗಳು ಆನ್‌ಟೈಮ್ ಶುರು ಆಗೋದಿರಲಿ, ಅವು ಸರಿಯಾದ ಟೈಮಿಗೆ ಮುಗಿಯೋದೂ ಇಲ್ಲ. ಯಾವ್ದೂ ಬೇಡಪ್ಪಾ ನ್ಯಾಸಾದ ಉಡಾವಣೆಗಳೇ ಸರಿಯಾದ ಸಮಯಕ್ಕೆ ಆಗೋದಿಲ್ಲ ಅಂದ್ರೆ, ಅಮೇರಿಕದಲ್ಲಿ ಟೈಮಿಗೆ ಎಲ್ಲಿ ಬೆಲೆ ಇದೆ ನೀವೇ ಹೇಳಿ? ನನ್ ತಂದೆ ತಾಯಿ ಮಾಡಿದ ಮೂವತ್ತೈದು ವರ್ಷ ಮೇಷ್ಟ್ರ ಸರ್ವೀಸ್‌ನಲ್ಲಿ ಪ್ರತಿದಿನ ಕೆಲ್ಸಕ್ಕೆ ಹೋಗೋವಾಗ್ಲೂ ಯಾವಾಗ್ಲೂ ಆನ್‌ಟೈಮ್ ಅವರು ಶುರು ಮಾಡುತ್ತಿದ್ದ ತರಗತಿಗಳು ಆನ್‌ಟೈಮ್, ಆದ್ರೆ ನಾನ್ ನೋಡಿ ನನ್ನ ಹದಿನೈದು ವರ್ಷದ ವೃತ್ತಿ ಜೀವನದಲ್ಲಿ ಒಂದ್ ದಿನಾನೂ ಮನೇನ ಆನ್‌ಟೈಮ್ ಬಿಟ್ಟಿದ್ದಿಲ್ಲ - ಎಲ್ಲಾ ಆ ಸಹ್ಯಾದ್ರಿ ಕಾಲೇಜ್ ಹುಡುಗನ್ದೇ ತಪ್ಪು!

ಇಷ್ಟು ಚಿಕ್ಕ ಮನುಷ್ಯ ನಾನು, ನನ್ನದೊಂದು ದೊಡ್ಡ ಮಾತಿದೆ - ಕನ್ನಡಿಗರಿಗೆ ಆತ್ಮಾಭಿಮಾನ ಕಮ್ಮಿ - ಅಂತ. ಬೇರೆ ಯಾವ್ ಭಾಷೇನೋರೂ ಆವರ ಮಾತುಕಥೆಯ ನಡುವೆ ಮತ್ತೊಬ್ಬ ಪರಭಾಷಿಯ ಆಗಮನವಾದ್ರೆ ತಮ್ ಮಾತೃಭಾಷೆಯಲ್ಲಿನ ಡೈಲಾಗನ್ನು ಬದಲಾಯಿಸೋದಿಲ್ಲ, ಕೇವಲ ಕನ್ನಡಿಗರು ಮಾತ್ರ ಒಂದೇ ಕಾಮನ್ ಲಾಂಗ್ವೇಜ್ ಇಂಗ್ಲೀಷಿಗೆ ಮೊರೆ ಹೋಕ್ತಾರೆ, ಇನ್ನೂ ವರ್ಸ್ಟ್ ಅಂದ್ರೆ ಆಗಮಿಸಿದ ಪರಭಾಷಿಯ ಭಾಷೆಯಲ್ಲಿ ತಮ್ಮ ಡೈಲಾಗನ್ನು ಕಂಟೀನ್ಯೂ ಮಾಡ್ತಾರೆ. ನನಗೆ ಹಾಗೆ ಆದಾಗ್ಲೆಲ್ಲ ಮೈ ಉರಿಯುತ್ತೆ ಅನ್ನೋದೇನೋ ನಿಜ, ಆದ್ರೆ ಏನ್ ಮಾಡ್ಲಿ ಹೇಳಿ? ಅದಕ್ಕೆ ಒಂದು ಹೊಸ ಫಾರ್ಮುಲಾ ಕಂಡ್ ಹಿಡಿದಿದ್ದೀನಿ. ನಿಮ್ಮ ಎದುರು ಯಾರಾದ್ರೂ ಕನ್ನಡಿಗರು ನನಗೆ ಆ ಭಾಷೆ ಬರುತ್ತೆ, ಈ ಭಾಷೆ ಬರುತ್ತೆ ಅಂತ ಕೊಚ್ಚಿಕೋತಾರೆ ನೋಡಿ, ಆಗ ಅವರಿಗೆ ಒಂದು ಸರಳ ಪ್ರಶ್ನೆ ಕೇಳಿ ಬಾಯಿ ಮುಚ್ಚಿಕೊಂಡು ಸುಮ್ಮನಿರ್ತಾರೆ. ನಮ್ಮ್ ಸೋದರಮಾವ ಹಾಗೆ ಭಾರತದಲ್ಲಿ ಅಲ್ಲಿ ಇಲ್ಲಿ ಇದ್ದು ಬಂದೋರು ಕನ್ನಡವೂ ಬರೋಲ್ಲ, ಉಳಿದ ಭಾಷೆಗಳೂ ಬರೋದಿಲ್ಲ ಅಂತಂದ್ರೇನೇ ಚೆನ್ನ. ಒಂದ್ ದಿನ ಅವರು ಕೊಚ್ಚಿ ಕೊಳ್ತಾ ಇದ್ರು, ನನಗೆ ತಮಿಳು ಬರುತ್ತೆ, ತೆಲುಗು ಬರುತ್ತೆ, ಮುಂತಾಗಿ ಒಟ್ಟು ಹನ್ನೊಂದೋ ಹನ್ನೆರಡೋ ಕೌಂಟು ಮಾಡುವಷ್ಟು. ನಾನೆಂದೆ ’ನಿಮಗೆ ತಮಿಳು ಬರುತ್ತಾ? ಹಾಗಾದ್ರೆ - ಆಧುನಿಕ ಭಾರತದಲ್ಲಿ ಜನಸಂಖ್ಯಾ ಸ್ಪೋಟದಿಂದ ಸಮಸ್ಯೆಗಳು ಉಲ್ಬಣಗೊಂಡಿವೆ - ಅನ್ನೋದನ್ನು ಆ ಭಾಷೆಯಲ್ಲಿ ಹೇಗೆ ಹೇಳ್ತೀರಿ?’ ನಮ್ಮ್ ಮಾವ ಬೆಬ್ಬೆಬ್ಬೆ ಆದ್ರು. ನಾನು ಹೇಳಿರೋ ಕನ್ನಡದ ವಾಕ್ಯದಲ್ಲಿ ಸಂಸ್ಕೃತ ಪದಗಳೇ ಇರಬಹುದು, ಆದ್ರೆ ನಾನು ಹೇಳಿದ್ದನ್ನ ಅವರು ಆಯಾ ಭಾಷೇನಲ್ಲಿ ಟ್ರಾನ್ಸ್‌ಲೇಟ್ ಮಾಡ್ದೇ ಹೋದ್ರೆ ಅವರಿಗೆ ಆ ಭಾಷೆ ಬರುತ್ತೇ ಅಂತ ಹೇಗ್ ಹೇಳ್ಲಿ, ಹೇಗೆ ಒಪ್ಪಿಕೊಳ್ಳಲಿ. ಸ್ವಲ್ಪ ವರ್ಷಗಳ ಮೇಲೆ ತಿಳೀತು, ನಾನು ಹೇಳಿದ ಕನ್ನಡದ ಸಾಲೇ ಅವರಿಗೆ ಅರ್ಥವಾಗಿರಲಿಲ್ಲ ಅಂತ!

ಗುರುದ್ವಾರ-ಗುದದ್ವಾರದ ಕಥೆ ಹೇಳಿ ನಿಮ್ಮನ್ನ ಬಿಟ್ಟು ಬಿಡ್ತೀನಿ, ನೈಜ ಘಟನೆ ಆದರೆ ಪಾತ್ರಗಳನ್ನು ಬದಲಾಯಿಸಿದ್ದೀನಿ ಅಷ್ಟೇ - ಆದ್ರೆ ಹೀಗೆ ಹೇಳ್ದೋನು ನಾನಂತೂ ಅಲ್ಲ!
ಒಂದು ದಿನ ನಮ್ಮ ಐಟಿ ಪ್ರಾಜೆಕ್ಟ್ ಟೀಮಿನ ಪ್ರೊಡಕ್ಷನ್ನ್ ಮೀಟಿಂಗ್ ನಡೀತಾ ಇತ್ತು, ವೀಕೆಂಡಿನಲ್ಲಿ ಯಾವ್ದೋ ಎಮರ್ಜನ್ಸಿ ಬಂದಿತ್ತಾದರಿಂದ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಎಲ್ಲರನ್ನೂ ಪೇಜ್ ಮಾಡೀ ಮಾಡೀ ಕಾನ್‌ಫರನ್ಸ್ ಕಾಲ್‌ಗೆ ಸೇರಿಕೊಳ್ಳೋದಕ್ಕೆ ಹೇಳ್ತಾ ಇದ್ವಿ. ಐಟಿ ಟೀಮು ಅಂದ್ರೆ ಭಾರತೀಯರ ಸಮೂಹ - ಬರೀ ವರ್ಕರ್ ಬೀಸ್ ಮಾತ್ರ ಸಾರ್, ಮ್ಯಾನೇಜ್‌ಮೆಂಟ್ ಅಲ್ಲ - ಅದರಲ್ಲಿ ಸರ್ದಾರ್‌ಜಿಗಳು, ಸೌತ್ ಇಂಡಿಯನ್ಸೂ (ಕನ್ನಡಿಗರೂ ಸೇರಿ!) ಇರೋ ಅಂತದ್ದು. ನಾನು ರಾಮ್ ಸಿಂಗ್ ಇನ್ನೂ ಯಾಕೆ ಬಂದಿಲ್ಲ ಅಂತ ಯೋಚಿಸ್ತಾ ಇರೋವಾಗ ನನ್ನ ಕನ್ನಡ ಮಿತ್ರ ಅವನಿಗೆ ಪೇಜ್ ಮಾಡಿ, ಅವನ ಜೊತೆ ಫೋನ್‌ನಲ್ಲಿ ಮಾತನಾಡಿದ ನಂತರ ಬಂದು ಕಿವಿಯಲ್ಲಿ ಹೇಳಿದ - ’ರಾಮ್ ಸಿಂಗ್, ಗುದದ್ವಾರಕ್ಕೆ ಹೋಗಿದ್ದಾನೆ, ಇನ್ನೊಂದು ಅರ್ಧ ಘಂಟೆ ಬರೋಕೆ ತಡವಾಗುತ್ತಂತೆ!’ ಅಂತ. ನಾನು ಮುಖ ಕಿವುಚಿ, ’What?!’ ಅಂದ್ರೆ, ಮತ್ತೆ ’ಅವನು ಗುದದ್ವಾರದಲ್ಲಿದ್ದಾನೆ!’ ಅಂತ ಹೇಳ್ದ. ಅವನು ಇನ್ನೊಂದ್ ಸರ್ತಿ ಹಂಗೇ ಹೇಳಿದ್ರೆ ನಾನು ನಂಬ್‌ಕೊಂಡ್ ಬಿಡ್ತಿದ್ನೋ ಏನೋ, ನನಗಂತೂ ನಗು ತಡೆಯಲಾಗದೇ ಕಾನ್‌ಫರೆನ್ಸ್ ಕಾಲ್‌ನ ಮ್ಯೂಟ್ ಮಾಡಿ, ’Are you sure?' ಅಂದೆ, ಆದರೆ ನನ್ನ ಕನ್ನಡ ಮಿತ್ರನಿಗೆ ತಾನು ಏನು ಹೇಳಬೇಕಾಗಿತ್ತು ಏನು ಹೇಳ್ದೆ ಅನ್ನೋದೇ ಅರ್ಥ ಆಗ್ಲಿಲ್ಲ. ’ಗುರುದ್ವಾರ, ಗುದದ್ವಾರ ಎರಡೂ ಭಗವಂತನ ಸೃಷ್ಟಿಗಳೇ, ಸದ್ಯ ಅಲ್ಲಿಂದ ಬರ್ತಾನಲ್ಲ ಸಾಕು’ ಎಂದು ಸುಮ್ಮನಾದೆ. ಈ ವಿಷಯವನ್ನು ನೆನೆಸಿಕೊಂಡಾಗಲೆಲ್ಲ ಎಂತಹ ಕಷ್ಟದ ಸಮಯದಲ್ಲೂ ನನಗೆ ತಿಳಿ ನಗು ಬರುತ್ತೆ.

***
ಕೊಸರು: ಇಂಗ್ಲೀಷೇ ದೊಡ್ಡದು ಅಂತ ಹಾರಾಡಿ ಒದ್ದಾಡೋರಿಗೆಲ್ಲ ಒಂದು ಸವಾಲು, ಯಾವಾಗ್ಲೂ ’ಶಿಟ್-ಶಿಟ್’ ಅಂತ ಅನ್ನೋರು ದಯವಿಟ್ಟು ತಮ್ಮ ಮಾತಿನ ಮಧ್ಯೆ ಒಂದ್ ಸರ್ತೀನಾದ್ರೂ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿ ನಿಮ್ಮ ಬಾಯಿ ಎಷ್ಟು ಕೊಳಕಾಗಿದೆ ಅಂತ ಎಲ್ಲರಿಗೆ ತೋರಿಸಬಾರದೇಕೆ?

Wednesday, September 19, 2007

ಅಂತರಂಗದಲ್ಲಿ ಆಡಿಯೋ - ಇನ್ನೂರೈವತ್ತರ ಹೊಸ ಪ್ರಯೋಗ

ಬರೀ ಹದಿನೆಂಟು ತಿಂಗಳಲ್ಲಿ ’ಅಂತರಂಗ’ದಲ್ಲಿ ಇನ್ನೂರೈವತ್ತು ಲೇಖನಗಳು ಬಂದಿವೆ ಅನ್ನೋದನ್ನ ನನಗೇ ನಂಬೋಕಾಗ್ತಾ ಇಲ್ಲ...ದಿನಾ ಸಾಯೋರಿಗೆ ಅಳೋರ್ ಯಾರು ಅನ್ನೋ ಹಾಗೆ ಕೆಲವರು ಬಂದು ಮತ್ತೆ ಬಾರದೇ ಹೋದರೂ, ಇವತ್ತಿಗೂ ತುಂಬಾ ಜನ ಇಲ್ಲಿನ ಲೇಖನಗಳನ್ನ ನೋಡ್ತಾ ಇರೋದರ ಜೊತೆಗೆ ಇಲ್ಲಿಗೆ ಒಂದು ಸೀಮಿತ ವೀಕ್ಷಕರಿದ್ದಾರೆ ಅನ್ನೋದಂತೂ ಸ್ಪಷ್ಟ. ಈ ಬರಹಗಳ ಸಂಖ್ಯೆಗೇನೂ ಮಹತ್ವವಿಲ್ಲ ಬಿಡಿ, ಆದರೆ ಹೆಚ್ಚೂ ಕಡಿಮೆ ಅರ್ಧ ಘಂಟೆಯಲ್ಲಿ ಹುಟ್ಟಿ ದಾಖಲಾಗೋ ಈ ಲೇಖನಗಳಿಗೆ ಬೇಕಾದಷ್ಟು ಮಿತಿಗಳಂತೂ ಇವೆ. ಇಲ್ಲಿನ ಲೇಖನಗಳು ಪರಿಪೂರ್ಣವಂತೂ ಅಲ್ಲವೇ ಅಲ್ಲ, ಜೊತೆಯಲ್ಲಿ ಈ ಲೇಖನಗಳು ಸಾಧಿಸೋ ತರ್ಕಕ್ಕೆ ಹೆಚ್ಚಿನ ಪಕ್ಷ ಯಾವುದಾದ್ರೂ ಹುಂಬ ತರ್ಕ ಇರುತ್ತ್ಯೇ ವಿನಾ ಸರಿಯಾದ ದಾಖಲೆಗಳಾಗಲೀ ಪರಾಮರ್ಶೆಗಳಾಗಲೀ ಸಿಗೋದಿಲ್ಲ...ಯಾಕೆ ಇಲ್ಲಾ ಅಂತಂದ್ರೆ ಅವುಗಳನ್ನ ಒಟ್ಟು ಮಾಡುತ್ತಾ ಹೋದ್ರೆ ಅದಕ್ಕೆ ಸಮಯ ತಗೊಳುತ್ತೆ, ಇದಕ್ಕಿಂತ ಹೆಚ್ಚಿನ ಸಮಯ ಯಾರ ಬಳಿಯಲ್ಲಿದೆ ಹೇಳಿ!?

ತಮಾಷೆಯ ಮಾತು ಹಾಗಿರಲಿ, ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ರೆ ಹೇಗೆ ಅನ್ನೋ ಆಸೆ ಬಂದಿದ್ದಂತೂ ನಿಜ. ನಿನ್ನೆ ಬರೆದ ’ಒಣದ್ರಾಕ್ಷಿ ಸ್ನೇಹಿತರ ಪರಸಂಗ’ ಲೇಖನದಲ್ಲಿ ಯಾವತ್ತೂ ಮಾತನಾಡದ ಒಣದ್ರಾಕ್ಷಿಗಳಿಂದ ಒಂದಿಷ್ಟು ಕಲ್ಪನೆಯ ಪಾತ್ರಗಳನ್ನು ಸೃಷ್ಟಿಸಿದ್ದೆ, ಹಾಗೆ ಮಾಡೋದರಿಂದ ಹೇಳೋದನ್ನ ನಿರ್ಭಿಡೆಯಿಂದ ಹೇಳಬಹುದು ನೋಡಿ ಒಂದು ರೀತಿ ಕಾರ್ಟೂನ್ ಶೋಗಳಲ್ಲಿ ಬರೋ ಪಾತ್ರಗಳ ಹಾಗೆ ಯಾರನ್ನೂ ಅಫೆಂಡ್ ಮಾಡದೆ. ಈ ದಿನ ಕನ್ನಡ ಬರಹಗಳಿಗೆ ಆಡಿಯೋ ಸ್ವರೂಪವನ್ನು ಕೊಟ್ಟರೆ ಹೇಗೆ ಎಂದು ಇಲ್ಲೊಂದು ತುಣುಕು ಎಮ್‌ಪಿ೩ ಪೈಲ್ ಅನ್ನು ಹಾಕಿದ್ದೇನೆ, ಈ ಪ್ರಯೋಗ ಮುಂದೆ ಬೆಳೆಯುತ್ತೋ ಬಿಡುತ್ತೋ ಗೊತ್ತಿಲ್ಲ, ಕೊನೇಪಕ್ಷ ಭಾಷೆಯ ಬಳಕೆಯ ಸಂದರ್ಭದಲ್ಲಿ ಬರೆದು ಸಿದ್ಧಪಡಿಸಲಾರದ್ದನ್ನು, ಸಾಧಿಸಿ ತೋರಿಸಲಾಗದ್ದನ್ನು ಹೇಳಿಯಾದರೂ ತೋರಿಸೋಣವೆಂಬ ಹುಂಬ ಕಲ್ಪನೆ ಅಷ್ಟೇ.

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

ಭಾಷೆ ಅನ್ನೋದು ಬರೆದಾಗಲೇ ಚೆಂದವಂತೆ, ಆದ್ರೆ ಒಂದು ಆಡುವ ಧ್ವನಿಯಲ್ಲಿರೋ ಜೀವಂತಿಕೆಯನ್ನ ಬರವಣಿಗೆಗೆ ಹೇಗೆ ತರೋದು? ಅದರಲ್ಲಿರೋ ಸವಾಲುಗಳೇ ಬೇರೆ. ಉದಾಹರಣೆಗೆ, ’ನಮಸ್ಕಾರ ಸಾರ್ ಹೇಗಿದ್ದೀರಾ?’ ಅನ್ನೋದನ್ನ ಬರೆದ್ರೆ ಯಾವ ಧ್ವನಿಯಲ್ಲಿ ಹೊರ ಹೊಮ್ಮುತ್ತೆ ಅಂತ ಹೇಳೋದ್ ಕಷ್ಟಾ. ಪ್ರತೀ ವಾಕ್ಯವನ್ನ ಯಾರು ಯಾವಾಗ ಯಾವ ಸಂದರ್ಭದಲ್ಲಿ ಹೇಳಿದ್ರು ಅನ್ನೋದರ ಮೇಲೆ ಆಯಾ ವಾಕ್ಯದ ಹಿಂದಿನ ಜೀವಂತಿಕೆ ನಿರ್ಣಯವಾದ್ರೂ ಅದನ್ನ ಬರೆದವರಿಗಿಂತ್ಲೂ ಓದೋರಿಗೆ ತಾನೇ ಅದು ಹೆಚ್ಚು ಅರ್ಥವಾಗಬೇಕಾದ್ದು? ಓದೋರಿಗೆ ನಿಜವಾಗ್ಲೂ ಬರವಣಿಗೆಯ ಹಿಂದಿನ ಧ್ವನಿ ತಲುಪಿಸುವ ನಿಟ್ಟಿನಲ್ಲಿ ಬರವಣಿಗೆಯ ಜೊತೆಗೆ ಶಬ್ದವನ್ನೂ ಜೊತೆ ಮಾಡಿದ್ರೆ ಹೇಗೆ ಎಂಬ ಆಲೋಚನೆ ಮೂಡಿತು. ಜೊತೆಗೆ ’ಅಂತರಂಗ’ದ ಕೆಲವು ಬರಹಗಳನ್ನ ಆಡಿಯೋ ರೂಪದಲ್ಲಿ ಹಾಕಿದ್ರೆ ಹೇಗೆ ಎನ್ನೋ ಉಪಾಯ ಹೊಳೆಯಿತು, ಅದರ ಬೆನ್ನ ಹಿಂದೆ ಒಂದಿಷ್ಟು ವೆಬ್ ಸೈಟ್‌ಗಳನ್ನು ಹುಡುಕಿಕೊಂಡು ಹೋದ ನನಗೆ ಕೆಲವು ಪುಕ್ಕಟೆ ಸಾಫ್ಟ್‌ವೇರುಗಳ ಸಹಾಯದಲ್ಲಿ ಸುಲಭವಾಗಿ MP3 ಆಡಿಯೋ ಫೈಲುಗಳನ್ನು ತಯಾರ್ಸೋಕ್ ಆಯ್ತು. ಹಾಗೆ ತಯಾರಿಸಿದ್ದನ್ನ ಅಪ್‌ಲೋಡ್ ಮಾಡಿ ಅದನ್ನ ಆಡಿಯೋ ರೂಪದಲ್ಲಿ ಲಿಂಕ್ ಮಾಡಿ, ಈಗ ನಿಮ್ಮ ಮುಂದೆ ಒಂದು ತುಣುಕನ್ನ ಇಡ್ತಾ ಇದ್ದೇನೆ. ಇದನ್ನ ನೋಡಿ/ಕೇಳಿ ನಿಮಗೇನನ್ನಿಸುತ್ತೋ ತಿಳಿಸಿ.

ನಾವು ಆಡೋ ನುಡಿ, ಅದರ ಧ್ವನಿಯಲ್ಲಿನ ಬದಲಾವಣೆಗಳು, ಆಕ್ಸೆಂಟುಗಳು, ಆಡುನುಡಿಗಳು, ಡಯಲೆಕ್ಟುಗಳು, ಕೀರಲು ಸ್ವರದಿಂದ ಹಿಡಿದು ಬೋರ್ ಹೊಡೆಸುವ ಒಂದೇ ವೇಗದ ಧ್ವನಿಗಳವರೆಗೆ ಇವೆಲ್ಲವೂ ಸಾಕಷ್ಟು ವೈವಿಧ್ಯತೆಯನ್ನು ನೀಡುತ್ತವೆ. ಬರೆಯೋ ಮಾಧ್ಯಮಕ್ಕೆ ಮಾತಿನ ಮಾಧ್ಯಮಕ್ಕಿಂತ ಸಾಕಷ್ಟು ಮಿತಿಗಳಿವೆ. ಎಷ್ಟೋ ಸಾರಿ, ನಾವು ಏನು ಹೇಳಬೇಕೆಂದುಕೊಂಡಿರುತ್ತೇವೆ ಅವೆಲ್ಲವನ್ನೂ ಹೇಳೋಕೇ ಆಗೋದಿಲ್ಲ, ಇನ್ನು ಕೆಲವು ಸಾರಿ ನಾವು ಬರೆಯೋದೇ ಒಂದು ಅದರ ಅರ್ಥವೇ ಇನ್ನೊಂದು ಎನ್ನುವಂತಾಗುವುದು ಸಾಮಾನ್ಯ ಎಂದು ನನ್ನ ಅನಿಸಿಕೆ.

ಈ ಪ್ರಯೋಗ ಯಶಸ್ವಿಯಾಗದಿದ್ದರೇನಂತೆ ನಷ್ಟವಂತೂ ಇಲ್ಲ, ಆದರೆ ಬೇಕೆನಿಸಿದ್ದನ್ನು ಮಾತಿನ ರೂಪದಲ್ಲಿ ದಾಖಲಿಸಿ ಕೊನೆಗೆ ಅದನ್ನು ಸಾವಧಾನವಾಗಿ ಟೈಪ್ ಮಾಡಿಕೊಂಡು ಯಾವತ್ತಿದ್ದರೂ ಬರವಣಿಗೆಗೆ ಇಳಿಸುವುದು ಇದ್ದೇ ಇರುತ್ತೆ. ಜೊತೆಗೆ, ನೀವು ಮಾತನಾಡಿದ್ದನ್ನು ಇನ್ನೊಬ್ಬರು ವೇಗವಾಗಿ ಟೈಪ್ ಮಾಡಿಕೊಟ್ಟರೂ ನಡೆದೀತು. ಅಕ್ಷರಗಳ ಜೊತೆಗೆ ಮಾತನ್ನೂ ತೇಲಿಬಿಡುವುದು ಒಂದು ಆಲೋಚನೆಯಾದರೆ, ಬರವಣಿಗೆಯ ಶಿಸ್ತನ್ನು ಕಾಪಾಡಿಕೊಂಡು ಬಂದ ಕೆಲವರಿಗೆ ಅವರವರ ಮಾತಿನ ಶಿಸ್ತನ್ನೂ ಕಾಪಾಡಿಕೊಂಡು ಹೋಗುವುದು ಅಗತ್ಯವಾಗುತ್ತದೆ, ಇಲ್ಲವೆಂದಾದರೆ ಮೊದಲೆಲ್ಲ ಆತ್ಮವಿಶ್ವಾಸದಿಂದ ಕನ್ನಡದಲ್ಲಿ ಮಾತನಾಡುತ್ತಿದ್ದ ನನಗೆ ಆಯಾ ಸಂದರ್ಭಕ್ಕೆ ಯೋಗ್ಯ ಪದಗಳನ್ನು ಹುಡುಕುವ ಆಭಾಸವಾದಂತಾಗುತ್ತದೆಯೇನೋ ಎನ್ನುವ ಹೆದರಿಕೆ ಇತ್ತೀಚೆಗೆ ಹೆಚ್ಚಾಗುತ್ತಿತ್ತೇಕೆ?