Showing posts with label ವಿಸ್ಮಯ. Show all posts
Showing posts with label ವಿಸ್ಮಯ. Show all posts

Saturday, May 16, 2020

ಹಾಲು-ನೀರಿನ ಅನ್ಯೋನ್ಯತೆ!

"ಕಾಯದಿದ್ರೆ ಕೆನೆ ಕಟ್ಟೋದಿಲ್ಲ!" ಎಂದು ಎನಿಸಿದ್ದು ಇವತ್ತು ಚಹಾ ಮಾಡೋದಕ್ಕೋಸ್ಕರ ಹಾಲು ಕಾಯಿಸುತ್ತಿರುವಾಗ.  ನಾವು ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟು ಸಲ ನೀರು ಅಥವಾ ಹಾಲನ್ನು ಬಿಸಿ ಮಾಡಿರೋದಿಲ್ಲ?  ಕೆಲವೊಮ್ಮೆ ಈ ಗೊತ್ತಿರುವ ವಿಷಯಗಳನ್ನೂ ಗಹನವಾಗಿ ನೋಡಿದಾಗ, ಅವುಗಳಲ್ಲಿನ ಜೀವನ ಸೂಕ್ಷ್ಮ ನಮಗೆ ಗೊತ್ತಾಗುತ್ತದೆ.  ಈ ವಿಚಾರದಲ್ಲಿ ನಿಸರ್ಗ ನಮಗೆಲ್ಲರಿಗೂ ಕಲಿಸೋ ಪಾಠಗಳು ಜೀವನ ಪರ್ಯಂತ ಅನೇಕಾನೇಕ ಇದ್ದೇ ಇರುತ್ತವೆ, ನಾವು ನೋಡಬೇಕು, ಗಮನಿಸಬೇಕು ಅಷ್ಟೇ.

ನಮ್ಮ ಕಡೆ ನೀರು ಕುದ್ದು (ಕುದಿದು) ಮರಳುತ್ತದೆ ಎನ್ನುತ್ತಾರೆ... ಅದನ್ನು ಇಂಗ್ಲೀಷಿನಲ್ಲಿ rolling boil ಅಂತಲೂ ಹೇಳ್ತಾರೆ.  ಕಾಯುವ, ಕುದಿಯುವ ಪ್ರಕ್ರಿಯೆ ಬಹಳ ಸುಲಭವಾದದ್ದು.  ನಾವು ಒಲೆ/ಸ್ಟೋವ್ ಮೇಲೆ ನೀರನ್ನು ಕಾಯಲು ಇಟ್ಟಾಗ ಅದರ ತಳ ಬೆಂಕಿಯಿಂದ ಬಿಸಿಯಾಗಿ ತಳಕ್ಕೆ ಹತ್ತಿರವಿರುವ ನೀರಿನ ಅಣುಗಳು ಬಿಸಿಯನ್ನು ತಗುಲಿಕೊಂಡು ಮೇಲೆ ಬರುತ್ತವೆ.  ಅವುಗಳು ಮೇಲೆ ಬಂದಂತೆಲ್ಲ, ಮೇಲಿನ ತಂಪಾಗಿರುವ (relatively) ಅಣುಗಳು ಕೆಳಗೆ ಹೋಗುತ್ತವೆ.  ಹೀಗೆ ನೀರು ಕುದಿಯುವ ಮಟ್ಟವನ್ನು ತಲುಪಿದ ಹಾಗೆ, ಈ ನೀರಿನ ಅಣುಗಳು, ಕೆಳಗೆ ಹೋದವು, ಮತ್ತೆ "ಮರಳು"ವ ಹೊತ್ತಿಗೆ ಅವುಗಳ ವೇಗ ಹೆಚ್ಚಾಗುತ್ತದೆ... ನಂತರ ನೀರು ಕೊತ ಕೊತ ಕುದಿಯತೊಡಗುತ್ತದೆ.

ಆದರೆ, ಹಾಲನ್ನು ಬಿಸಿ ಮಾಡಿದಾಗ ಅದೇ ರೀತಿ ಹಾಲಿನ ಕಣಗಳು ಮೇಲೆ ಕೆಳಗೆ ಹೋಗುತ್ತಿದ್ದರೂ ಸಹ, ಹಾಲು ಬಿಸಿ ಆದಂತೆಲ್ಲ, ಅದರ ಮೇಲ್ಮೈ ಮೇಲೆ ಒಂದು ತೆಳುವಾದ ಕೆನೆಯ ಪರದೆ ಹುಟ್ಟಲು ಆರಂಭವಾಗುತ್ತದೆ.  ಹಾಲು ನೀರಿಗಿಂತ ಸ್ವಲ್ಪ "ದಪ್ಪ"ನಾದ ದ್ರವ ಪದಾರ್ಥವಾದರೂ ಕೂಡ, ಹಾಲಿನ boiling point ನೀರಿಗಿಂತ ಹೆಚ್ಚೇನೂ ಭಿನ್ನವಾಗಿರೋದಿಲ್ಲ, ಆದರೆ ಈ ಎರಡೂ ದ್ರವ ಪದಾರ್ಥಗಳು ಕುದಿಯುವ ಹೊರಮುಖ ಬೇರೆ ಬೇರೆ ಅಷ್ಟೇ.

ಹಾಲು ಕುದಿಯುತ್ತಾ ಹೋದಂತೆಲ್ಲ ಅದರ ಮೇಲ್ಮೈಯಲ್ಲಿರುವ ಕೆನೆಯ ದಪ್ಪ ಹೆಚ್ಚಾಗುತ್ತಾ ಹೋಗುತ್ತದೆ.  ಪಾತ್ರೆಯ ಬುಡದಲ್ಲಿ ಬಿಸಿ ಎಲ್ಲ ರೀತಿಯಲ್ಲೂ ಒಂದೇ ಸಮನಾಗಿ ಇದೆಯೆಂದು ಭಾವಿಸಿದರೆ, ಹಾಲು ಕುದಿಯುವ ಮಟ್ಟವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಕಟ್ಟಿರುವ ಕೆನೆಯ ಪರದೆ ಒಡೆದು ಒಂದೇ ಸಮನೆ ಮೇಲೆ ಉಕ್ಕಲು ಆರಂಭಿಸುತ್ತದೆ.  ಆದರೆ ನೀರು ಹೀಗು ಕುದ್ದು ಉಕ್ಕೋದಿಲ್ಲ.


ಇದನ್ನು ಇಬ್ಬರು ಗೆಳೆಯರ ಅನಾಲಜಿಯನ್ನು ಉಪಯೋಗಿಸಿಯೂ ವಿವರಿಸಬಹುದು!  ಹಾಲು ಮತ್ತು ನೀರು ಇಬ್ಬರೂ ಜೀವದ ಗೆಳೆಯರು. ಹಾಲಿನಲ್ಲಿ ಸಾಮಾನ್ಯವಾಗಿ ನೀರನ್ನು ಮಿಶ್ರ ಮಾಡಿರುತ್ತಾರೆ, ಅಥವಾ ನೀರಿನ ಪ್ರಮಾಣ ಇದ್ದೇ ಇರುತ್ತದೆ. ಹಾಲು ಕುದಿಯುತ್ತಾ ಬಂದ ಹಾಗೆ ನಿಧಾನವಾಗಿ ಹಬೆಯಾಡತೊಡಗುತ್ತದೆ... ಅಂದರೆ, ಅದರಲ್ಲಿನ ನೀರು ಆವಿಯಾಗಲು ತೊಡಗುತ್ತದೆ... ಅಂದರೆ, ಹಾಲಿನ ಸ್ನೇಹಿತ ನಿಧಾನವಾಗಿ ಹೊರಗಡೆ ಹೋಗುತ್ತಾನೆ.  ಆದರೆ, ತನ್ನ ಸ್ನೇಹಿತ ನೀರು ಇನ್ನೇನು ಪೂರ್ಣ ಪ್ರಮಾಣದಲ್ಲಿ ಆವಿಯಾಗಿ ಹೋಗೇ ಬಿಟ್ಟಿತು ಎಂದು ಹೆದರಿಕೆಯಿಂದ ಹಾಲೂ ಸಹ "ನೀನು ಹೋದಲ್ಲಿಗೆ ನಾನೂ ಬರುತ್ತೇನೆ!" ಎಂದು ಹಠ ಹಿಡಿದು ಉಕ್ಕುತ್ತಾನಂತೆ.  ಅದೇ ಸಮಯಕ್ಕೆ ನೀವು ಸ್ವಲ್ಪ ನೀರನ್ನು ಪಾತ್ರೆಯ ಮೇಲೆ ಚಿಮುಕಿಸಿದರೆ ಉಕ್ಕುವ ಹಾಲು ಸುಮ್ಮನಾಗುತ್ತಾನಂತೆ!

ಹೀಗೆ, ಈ ದಿನ ಚಹಾ ಮಾಡಲು ಹೋಗಿ, ಹಾಲು-ನೀರಿನ ಜೋಡಿಗಳನ್ನು ಬೆಂಕಿಯ ಸಹವಾಸದಲ್ಲಿ ಕುದಿಯುವಂತೆ ಮಾಡಿದ್ದು, ಅವುಗಳ ಅನ್ಯೋನ್ಯ ಗೆಳೆತನವನ್ನು ಪರೀಕ್ಷೆಗೆ ಒಡ್ಡಿ ಹತ್ತಿರದಿಂದ ನೋಡಿದ್ದು ಕೋವಿಡ್ ಕವಿದು ಮನೆಯಲ್ಲೇ ಮುದುರಿಕೊಂಡಿರುವ ನಮ್ಮಂತಹವರು ಮಾಡಿದ ದೊಡ್ಡ ಕಾರ್ಯ!

Tuesday, September 29, 2009

(ಕುರುಚಲು ಗಡ್ಡ, ಓಡುವ ಮೋಡ ಹಾಗೂ) ಆಲೋಚನೆಗಳು

ಈ ಆಲೋಚನೆಗಳೇ ಹಾಗೆ ಕೆಲವೊಮ್ಮೆ ತಂಡೋಪತಂಡವಾಗಿ ಸರಣಿಗಳಲ್ಲಿ ಬಂದು ಮುತ್ತಿಗೆ ಹಾಕಿ ಬಿಡುತ್ತವೆ, ತಿಳಿಯಾದ ಕೊಳವನ್ನು ಕಲಕಿ ರಾಡಿಯನ್ನು ಮೆಲಕೆತ್ತಿದ ಹಾಗೆ ಹಳೆಯದೆಲ್ಲ ಮೇಲಕ್ಕೆದ್ದು ಕೇಂದ್ರೀಕೃತ ಅಲೆಗಳ ಹಿಂಡು ದಡವನ್ನು ಅಪ್ಪಳಿಸುವಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಏನೇನೋ ಅಗಿ ಹೋಗುತ್ತದೆ. ಈ ಮನಸೆಂಬ ಮರ್ಕಟ ಹಾರಿ ಬಂದ ಮರಗಳ ರೆಂಬೆ-ಕೊಂಬೆಗಳಿಗೆ ಹೇಗೆ ಕೊನೆಯಿಲ್ಲವೋ ಹಾಗೆ ಆಲೋಚನೆಗಳ ದಂಡು.

ಈ ಆಲೋಚನೆಗಳಿಗೂ ಓಡುವ ಮೋಡಗಳಿಗೂ ಏನು ಸಂಬಂಧ? ಈ ಆಲೋಚನೆಗಳಿಗೂ ಕುರುಚಲು ಗಡ್ಡಕ್ಕೂ ಏನು ನಂಟು? ಎಂದು ಯೋಚಿಸಿಕೊಂಡಂತೆಲ್ಲ ಮೇಲ್ಮಟ್ಟದಲ್ಲಿ ಗೋಕುಲಾಶ್ಠಮಿ-ಇಮಾಮ್ ಸಾಬಿಗಳಂತೆ ಕಂಡುಬಂದರೂ ಒಳಗೊಳಗೆ ಅವುಗಳ ಅರ್ಥಬದ್ಧ ಬಾಂಧವ್ಯದ ಬಗ್ಗೆ ನನಗೆ ತಿಳಿದದ್ದು ಇತ್ತೀಚೆಗಷ್ಟೇ. ಈ ಆಳವಾಗಿ ಆಲೋಚಿಸುವ ಕೆಲವರು ಮುಗಿಲನ್ನು ಎವೆಯಿಕ್ಕದೆ ದಿಟ್ಟಿಸುವುದನ್ನು ನೀವು ಗಮನಿಸಿರಬಹುದು. ಹೌದು, ಈ ಆಳವಾದ ದೃಷ್ಟಿಯೇ ಮುಗಿಲಿನ ಹಂದರದಲ್ಲಿ ಹರವಿಕೊಂಡ ಆ ಮೋಡಗಳಲ್ಲಿ ಚಲನಶಕ್ತಿಯನ್ನು ಕುದುರಿಸೋದು. ಹಾಗೇ ಆಲೋಚನೆಯಲ್ಲಿ ಮುಳುಗಿದವರು ಗದ್ದಕ್ಕೆ ಕೈಯಿಟ್ಟು ಯೋಚನೆ ಮಾಡಿದಂತೆಲ್ಲ ನುಣುಪಾದ ಅಂಗೈ ಹಾಗೂ ಕೆನ್ನೆಯ ನಡುವೆ ಘರ್ಷಣೆ ಹುಟ್ಟುವ ಹೊತ್ತಿನಲ್ಲಿ ಕೈ ಜಾರದಂತೆ ಜೀವವಿಕಾಸ ಸೃಷ್ಟಿಸಿದ ವಿಸ್ಮಯಗಳಲ್ಲಿ ಕುರುಚಲು ಗಡ್ಡವೂ ಒಂದು!

ಆಲೋಚನೆಗಳನ್ನು ಮಾಡಿ ತಲೆ ಕೆಡಿಸಿಕೊಂಡವರೇ ಹೆಚ್ಚು, ಉದ್ದಾರವಾದವರು ಯಾರು ಎಂದು ಅಲ್ಲಗಳೆಯಬೇಡಿ, ಹೆಚ್ಚು ಆಲೋಚನೆ ಮಾಡಿದವರೇ ದೊಡ್ಡ ಮನುಷ್ಯರು, ಅವರವರ ಆಲೋಚನೆಗಳ ಆಳ ಅವರವರ ಚಿಂತನಶೀಲತೆಯ ಪ್ರತೀಕ ಎಂದರೆ ತಪ್ಪೇನು ಇಲ್ಲ. ಆದರೆ ಆಲೋಚನೆ, ಕೊರಗು, ಚಿಂತೆ ಹಾಗೂ ಚಿಂತನೆಗಳಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ನನ್ನ ಪ್ರಕಾರ ಆಲೋಚನೆ ತನ್ನ ಪ್ರಭೇದದ ಇತರ ಸೋದರರಾದ ಕೊರಗು-ಮರುಗು-ಚಿಂತೆ-ಚಿಂತನೆಗಳಿಗಿಂತ ಸ್ವಲ್ಪ ಭಿನ್ನ ಹಾಗೂ ತನ್ನಷ್ಟಕ್ಕೆ ತಾನು ಒಂದು ಅಮೋಘವಾದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡ ಧೀರ ಬೇರೆ. ಆಲೋಚನೆಗೆ ಯಾವುದೇ ವಿಷಯ-ವಸ್ತುವೆಂಬುದಿಲ್ಲ, ಎಂದು ಇತರರ ಜೊತೆ ಬೆಳೆದು ಸಮಾಲೋಚನೆಯಾಗಬಹುದು, ಅಥವಾ ತನ್ನ ದೂರದ ಮಟ್ಟಕ್ಕೆ ದೂರಾಲೋಚನೆಯಾಗಬಹುದು, ಕೆಟ್ಟ ವಸ್ತುಗಳಿದ್ದರೆ (ಕೆಟ್ಟದು ಎಂಬುದು ಸಾಪೇಕ್ಷವಾದುದು) ದುರಾಲೋಚನೆಯೂ ಆಗಬಹುದು. ಆಲೋಚನೆ ಎನ್ನುವುದು ತನ್ನಷ್ಟಕ್ಕೆ ತಾನು ಇದ್ದರಿರಬಹುದು ಅಥವಾ ಅದು ಉಳಿದವರ ಜೊತೆ ಸೇರಿ ಒಂದು ಸಿದ್ಧಾಂತವಾಗಬಹುದು. ಒಟ್ಟಿನಲ್ಲಿ ಆಲೋಚನೆ ಎನ್ನುವುದು ನೀರಿದ್ದ ಹಾಗೆ, ಅದು ತನ್ನಷ್ಟಕ್ಕೆ ತಾನು ಯಾವುದೇ ಆಕಾರ, ಗಾತ್ರ, ಬಣ್ಣ, ವಾಸನೆ, ಗಡಿರೇಖೆಗಳಿಗೆ ಒಳಪಡದ ಒಂದು ರೀತಿಯ ಎಲ್ಲವನ್ನು ತ್ಯಜಿಸಿದ ಸಂತನ ಮನಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆ ಜೊತೆಗೆ ತಾನು ಇದ್ದ ಯಾವುದೇ ಒಂದು ವಸ್ತುವಿನ ರೂಪರೇಶೆಗಳನ್ನು ದಿಢೀರನೆ ಪಡೆದುಕೊಂಡುಬಿಡಬಲ್ಲದು.

ಒಟ್ಟಿನಲ್ಲಿ ಈ ಆಲೋಚನೆಯ ಪರಿ ಭಿನ್ನ. ನನ್ನ ಮನಸ್ಸಿನಲ್ಲಿ ಬರುವ ಆಲೋಚನೆಗಳ ಮಹಾಪೂರವನ್ನು ನೋಡಿ ಕೆಲವೊಮ್ಮೆ ಈ ಪರಿಯ ಸೊಬಗ ಇನ್ಯಾವ ಮನಸ್ಥಿತಿಯಲೂ ಕಾಣೆ ಎಂದು ಹಾಡಿಕೊಂಡಿದ್ದಿದೆ. ಈ ಆಲೋಚನೆಗಳೆಂಬುವುದಕ್ಕೆ ಮಿತಿಯಂತೂ ಇಲ್ಲವೇ ಇಲ್ಲ - ಅದರಲ್ಲಿ ಬಿಳಿ-ಕಪ್ಪಿದೆ, ಕೆಟ್ಟದ್ದು-ಒಳ್ಳೆಯದಿದೆ, ಸಂಭ್ರಮ-ಸಂಗಮಗಳಿವೆ, ನೋವು-ನಲಿವಿದೆ, ಹೀಗೆ ಅನೇಕಾನೇಕ ಪರ-ವಿರೋಧಗಳನ್ನು ತನ್ನೊಡಲಿನಲ್ಲಿ ಹರವಿಕೊಂಡ ಅಲೋಚನೆಗಳ ದಿಬ್ಬಣವನ್ನು ನಾನು ನಮ್ಮೂರ ಜಾತ್ರೆಯ ತೇರಿಗೆ ಹೋಲಿಸಿಕೊಳ್ಳೋದು. ತೇರಿನ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಅಸಂಖ್ಯ ಭಕ್ತರು ಎಳೆದು ಜನತುಂಬಿ ತುಳುಕುತ್ತಿರುವ ರಸ್ತೆಯ ಮಧ್ಯದಲ್ಲಿ ನಿಧಾನವಾಗಿ ತೇಲಿ ಹೋಗುವ ತೇರಿನ ಹಾಗೆ - ನಾವು ಎಲ್ಲಿದ್ದರೂ ಹೇಗಿದ್ದರೂ ಏನನ್ನೇ ಮಾಡುತ್ತಿದ್ದರೂ ನಮ್ಮ ಮನದಲ್ಲಿ ಈ ಆಲೋಚನೆಗಳ ತೇರು ಎಳೆಯಲ್ಪಡುತ್ತಿರುತ್ತದೆ, ನಿರಂತರವಾಗಿ.