Monday, May 29, 2006

ಜೋಗಾದ್ ಗುಂಡಿಯಲ್ಲಿ ರೆಸ್ಟೋರಂಟೇ, ಛೇ!

ಮೇ ೧೪ರಂದು ಪ್ರಜಾವಾಣಿಯಲ್ಲಿ ಜೋಗದ ಗುಂಡಿಯಲ್ಲಿ ರೆಸ್ಟೋರಂಟ್ ಕಟ್ಟುವ ಪ್ರಸ್ತಾಪ ಹಾಗೂ ಆ ಬಗ್ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದರ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ನಾನು ಸಾಧ್ಯವಾದಾಗಲೆಲ್ಲ ಜೋಗಕ್ಕೆ ಹೋಗಿ ಬರುತ್ತೇನೆ, ಅಲ್ಲಿಗೆ ಹೋದ ಮೇಲೆ ಸುಮ್ಮನೇ ಸುರಿಯುವ ನೀರು ಎನಿಸಿದರೂ ಅಲ್ಲಿಗೆ ಹೋಗುವವರೆಗಿನ ಉತ್ಸಾಹ, ಆ ದಾರಿಯಲ್ಲಿ ತೆರಳುವಾಗ ಹಿಂತಿರುಗುವ ಹಳೆಯ ನೆನಪುಗಳು, ಹೋದ ಕೂಡಲೇ ಅದೇ ಮುಖವನ್ನಿಟ್ಟುಕೊಂಡು ಸ್ವಾಗತಿಸುವ ಜಲಧಾರೆ ಇವೆಲ್ಲವೂ ಪ್ರತೀ ಭೇಟಿಯಲ್ಲಿ ಹೊಸತೇನನ್ನೋ ಕಂಡುಕೊಳ್ಳಲು ಸಹಾಯಮಾಡುತ್ತವೆ. ನನ್ನ ಕ್ಯೂಬಿಕಲ್‌ನಲ್ಲಿ ಗೋಡೆಗೆ ನಾನು ೧೯೯೮ರಲ್ಲಿ ಹೋದಾಗ ತೆಗೆದ ಜೋಗದ ಜಲಪಾತದ ಒಂದು ಚಿತ್ರ ಜೊತೆಯಲ್ಲಿ ಗೇರುಸೊಪ್ಪಾ ಜಲಪಾತದ ಮತ್ತೊಂದು ಚಿತ್ರವನ್ನೂ ಅಂಟಿಸಿಕೊಂಡಿದ್ದೇನೆ, ನನ್ನನ್ನು ಭೇಟಿ ಮಾಡಲು ಬಂದ ಹೊಸಬರೆಲ್ಲ 'ಇದು ಎಲ್ಲಿಯದು?' ಎಂದು ಕೇಳುತ್ತಾರೆ, ನಾನು ವಿವರವಾಗಿ ಜೋಗದ ಕಥೆಯನ್ನು ಹೇಳುತ್ತೇನೆ, ಜೊತೆಯಲ್ಲಿ 'ಇದು ನ್ಯಾಚುರಲ್ಲಾಗಿ ಹುಟ್ಟಿರೋದು' ಎನ್ನುವುದಕ್ಕೆ ಒತ್ತುಕೊಡುತ್ತೇನೆ. ನಾನು ತೆಗೆದ ೪ ಬೈ ೬ ಅಂಗುಲದ ಫೋಟೋದಲ್ಲಿ ಜೋಗದ ಹತ್ತಿರಹತ್ತಿರ ಸಾವಿರದ ಅಡಿ ಜಲಧಾರೆಯನ್ನು ಊಹಿಸಿಕೊಳ್ಳುವುದು ಹೊಸಬರಿಗೆ ಕಷ್ಟ, ಪಾಪ.



ಬೇಸಿಗೆಯಲ್ಲಿ ನಮ್ಮೂರಿನ ಬಡವರನ್ನು ನೆನಪಿಗೆ ತರುವಂತೆ ಮೈಮೇಲೆ ಎಲುಬುಗಳು ಕಾಣುವ ರೀತಿಯಲ್ಲಿ ರಾಜಾ-ರೋರರ್-ರಾಕೇಟ್-ಲೇಡಿಗಳು ಬಡವಾಗಿರುತ್ತವೆ, ಮಳೆಗಾಲ, ಮಳೆಗಾಲದ ತರುವಾಯದ ಕೆಲವು ತಿಂಗಳುಗಳು ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರನ್ನೇನಾದರೂ ವಿಶೇಷ ಸಂದರ್ಭಗಳಲ್ಲಿ ಬಿಟ್ಟರೆ ಆಗ ಮತ್ತೆ ಮೈತುಂಬಿಕೊಳ್ಳುತ್ತವೆ. ನೀರು ಕಡಿಮೆ ಇರುವ ಬೇಸಿಗೆಯಲ್ಲೇ ಜೋಗಕ್ಕೆ ಪ್ರವಾಸಿಗರು ಹೆಚ್ಚು ಬರೋದು. ಮಳೆಗಾಲದಲ್ಲಿ ಹೆಚ್ಚಿನ ಪಕ್ಷ ಮಂಜು ಕವಿದು ಏನನ್ನಾದರೂ ನೋಡಲು ಸಿಗುವುದೇ ದೊಡ್ಡ ವಿಷಯ. ಪರಿಸ್ಥಿತಿ ಹೀಗಿರುವಾಗ ಜಲಪಾತದ ಬುಡದಲ್ಲಿ ಸುಮಾರು ೬೦೦ ಜನರು ಕುಳಿತುಕೊಳ್ಳಬಹುದಾದ ಒಂದು ರೆಸ್ಟೋರಂಟನ್ನು ನಿರ್ಮಾಣಮಾಡಲು ಹಾಗೂ ಜಲಪಾತಕ್ಕೆ ಇಳಿಯುವ ಮೆಟ್ಟಿಲುಗಳನ್ನು ದುರಸ್ತಿ ಮಾಡಲು ಕೇಂದ್ರದಿಂದ ೪.೧೨ ಕೋಟಿ ರೂಪಾಯಿಗಳನ್ನು ಬಿಡುಗಡೆಮಾಡಿದ್ದಾರೆ ಎಂದು ವರದಿಯಾಗಿದೆ. ಬರೀ ಮೆಟ್ಟಿಲುಗಳನ್ನು ದುರಸ್ತಿಮಾಡುವುದಕ್ಕೆ ಮಾತ್ರ ನಾಲ್ಕು ಕೋಟಿ ರೂಪಾಯಿಗಳು ಸಾಕಾಗುತ್ತವೆ - ಏಕೆಂದರೆ ಅವರೂ-ಇವರೂ ತಿಂದು ಉಳಿದ ಹಣದಲ್ಲಿ ಮೆಟ್ಟಿಲುಗಳೂ ಸುಮಾರು ದುರಸ್ತಿಯನ್ನು ಪಡೆಯುತ್ತಿದ್ದವು, ಆದರೆ ನಾಲ್ಕು ಕೋಟಿ ರೂಪಾಯಿಯಲ್ಲಿ ಜಲಪಾತದ ಬುಡದಲ್ಲಿ ಆರು ನೂರು ಜನರು ಕೂರುವ ಒಂದು ರೆಸ್ಟೋರಂಟನ್ನು ಕಟ್ಟುವುದೂ, ಅಲ್ಲಿಗೆ ಹೋಗಿ ಬರಲು ಲಿಫ್ಟ್‌ಗಳನ್ನು ನಿರ್ಮಿಸುವುದೂ, ಹಾಗೂ ರೆಸ್ಟೋರಂಟಿನ ಮೇಂಟೆನೆನ್ಸ್ ಮಾಡುವುದು ಇವೆಲ್ಲ ಆಗಿಹೋಗದ ವಿಚಾರ ಎಂದು ಧೈರ್ಯವಾಗಿ ಹೇಳಬಲ್ಲೆ. ಒಂದು ವೇಳೆ ಹಣ ಮಂಜೂರಾದ ರೀತಿಯಲ್ಲೇ ಕಾರ್ಯ ನಡೆದಿದ್ದೇ ಆದರೂ ಸದಾ ಜಲಪಾತದ ಬುಡದಲ್ಲಿರುವ ಈ ರೆಸ್ಟೋರಂಟ್ ಒಂದು ದಿನ ಕಳಪೆ ಕಾಮಗಾರಿಯಿಂದ ಕುಸಿದು ಬೀಳಲಿಕ್ಕೂ ಸಾಕು. ನನ್ನನ್ನು ಕೇಳಿದರೆ ನಾಲ್ಕು ಕೋಟಿ ರೂಪಾಯಿಗಳನ್ನು ನಿಜವಾದ ಜೋಗದ ಅಭಿವೃದ್ಧಿಗೆ ಬಳಸಿಕೊಂಡು ಅಲ್ಲಿಗೆ ಹೋಗಿ ಬರುವವರಿಗೆ ಸಿಗುವ ಪ್ರವಾಸೀ ಮೌಲ್ಯವನ್ನು ಹೆಚ್ಚು ಮಾಡಲು ಬಳಸುವಂತಿದ್ದರೆ ಎಷ್ಟೋ ಚೆನ್ನಾಗಿತ್ತು.



ಸಾಗರದ ಸ್ಥಳೀಯ ರಾಜಕಾರಣಿಗಳು ಏನೇ ಹೇಳಿದರೂ ಜೋಗದ ಸುತ್ತಮುತ್ತಲೂ ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವ ನಾ. ಡಿಸೋಜಾರವರ ಮಾತಿಗೆ ನಾನು ಖಂಡಿತ ಬೆಲೆ ಕೊಡುತ್ತೇನೆ, 'ಜೋಗದ ಗುಂಡಿಯೊಳಗೆ ಯಾವುದೇ ಕಟ್ಟಡ ಕಟ್ಟುವುದು ಮೂರ್ಖತನ' ಎನ್ನುವಲ್ಲಿ ಅವರಲ್ಲಿರುವ ಸಾಹಿತಿಯ ಸಂವೇದನೆಗಳಷ್ಟೇ ಅಲ್ಲ ಒಬ್ಬ ನಾಗರಿಕನ ಸಾಮಾನ್ಯ ಜ್ಞಾನವೂ, ಒಬ್ಬ ಲೋಕೋಪಯೋಗಿ (ಇಲಾಖೆಯ) ನೌಕರನ ಕಳಕಳಿಯೂ ಇದೆ, ಅವರದೇ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತ ಕಾರ್ಗಲ್ಲಿನ ತಿಮ್ಮಪ್ಪನ ಮೂಲಕ ಅವರನ್ನು ನಾನು ಚೆನ್ನಾಗಿ ಬಲ್ಲೆ. ಜೋಗದ ಗುಂಡಿಯಲ್ಲಿ ಕಟ್ಟಡ ಕಟ್ಟುವ ವಿಚಾರಗಳು ಯಾರ ತಲೆಯಲ್ಲಿ ಹೇಗೆ ಬರುತ್ತವೋ, ಹೀಗೆ ದಿಢೀರನೆ ಹಣ ಸ್ಯಾಂಕ್ಷನ್ ಆಗಿದೆ ಎಂದರೆ ಅದರ ಹಿಂದಿರುವವರ ಕೆಲಸದ ಬಗ್ಗೆ ಊಹಿಸಿಕೊಳ್ಳಬಲ್ಲೆ, ಅವರೇನಾದರೂ ಒಂದು ಬಿಸಿನೆಸ್ ಪ್ಲಾನ್ ಮಾಡಿದ್ದು, ಅದರಲ್ಲಿ ಈ ಕಟ್ಟಡ ಕಟ್ಟುವುದರ ಬಗ್ಗೆ, ಕಟ್ಟಿ ವ್ಯವಹಾರ ಮಾಡುವ ಬಗ್ಗೆ, ಮಾಡಿ ಲಾಭ ಹೊಂದುವ ಬಗ್ಗೆ, ಹೆಚ್ಚು ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುವ ಬಗ್ಗೆ ವಿವರಗಳಿದ್ದಿರಬಹುದೇ ಎಂದು ಸೋಜಿಗಗೊಳ್ಳುತ್ತೇನೆ, ಆದರೆ ನಾನು ಓದಿದ ಪತ್ರಿಕೆಗಳಲ್ಲಿ ಯಾವ ವಿವರವೂ ಸಿಕ್ಕೋದಿಲ್ಲ. ಅಲ್ಲದೇ ಸ್ಥಳೀಯರಿಗೆ ಬೇಡವಾದ ಈ ಯೋಜನೆಯ ಹಿಂದೆ ದೆಹಲಿಯಲ್ಲಿ ಯಾವ ರೀತಿಯ ಕುಮ್ಮಕ್ಕು ಸಿಕ್ಕಿರಬಹುದು ಎಂದೂ ಆಶ್ಚರ್ಯವಾಗುತ್ತದೆ.

ಒಂದಂತೂ ನಿಜ - ಜೋಗದ ಗುಂಡಿಗೆ ಹೋಗಲಿರುವ ಈಗಿನ ಮೆಟ್ಟಿಲುಗಳಲ್ಲಿ ಜಾರಿ ಬಿದ್ದು ಕೈ ಕಾಲು ಮುರಿದುಕೊಂಡವರು ‍ಯಾರೂ ಇಲ್ಲಿಯವರ ಥರ 'ಕಿತ್ತು ಹೋದ ಮೆಟ್ಟಿಲುಗಳು ನನ್ನ ಬದುಕನ್ನು ಹಾಳುಗೆಡವಿದವು' ಎಂದು ಲಾ ಸೂಟನ್ನು ಇನ್ನೂ ಹಾಕಿಲ್ಲ, ಮುಂದೆ ಇಂತಹ ಕೋರ್ಟು ಕೇಸುಗಳಿಂದಲೇ ಪರಿಸ್ಥಿತಿ ಸುಧಾರಿಸುತ್ತೇನೋ ಎನ್ನುವ ಆಶಾವಾದವೂ ಮನದಲ್ಲಿ ಮಿಂಚಿ ಮರೆಯಾಗುತ್ತೆ.

***

ಇಲ್ಲಿನ ನಯಾಗರ ಜಲಪಾತಕ್ಕೆ ಯಾರ ಯಾರ ಜೊತೆಯಲ್ಲೋ ಹಲವಾರು ಬಾರಿ ಹೋಗಿದ್ದೇನೆ - ನನ್ನ ಜೊತೆ ಬಂದವರಲ್ಲಿ ಈಗಾಗಲೇ ಜೋಗ ಜಲಪಾತವನ್ನು ನೋಡಿದವರಿಗೆ ನಯಾಗರ ವಿಶೇಷವಾಗೇನೂ ಕಾಣುವುದಿಲ್ಲ, ಅದರಲ್ಲೂ ಇಲ್ಲಿಯವರ ಕೈ ಚಳಕದಿಂದ ನಿರ್ಮಿತವಾಗಿದ್ದೂ ಅಥವಾ ಮಾರ್ಪಾಟುಹೊಂದಿದ್ದೂ ಎಂದು ಕೇಳಿದ ಮೇಲೆ 'ಹೌದಾ' ಎನ್ನುವ ಉದ್ಗಾರ ಬರುತ್ತದೆ. ಆದರೆ, ಎಲ್ಲವೂ ಮೈ ತುಂಬಿಕೊಂಡಿರುವ ಇಲ್ಲಿ ನಯಾಗರವು ಎಂದೂ ಬತ್ತಿದ್ದಾಗಲೀ ಅಥವಾ ಕೃಶವಾಗಿದ್ದಾಗಲೀ ಕೇಳಿಲ್ಲ - ಛಳಿಗಾಲದಲ್ಲಿ ಮೇಲೆ ದಪ್ಪನಾದ ಹಿಮ ಆವರಿಸಿದ್ದರೂ ಹರಿಯುವ ನೀರಿನ ಪ್ರಮಾಣ ಅಷ್ಟೆ ಇರುವುದು ಸೋಜಿಗವಲ್ಲದೇ ಮತ್ತೇನು?

1 comment:

Anonymous said...

Jog falls defintely needs some development. Not exaclty sure why locals are opposing it, but Jog falls definitely needs some face lifting. Maybe they should build the hotel at the top of the hill, instead.

Jog falls brings sweet memories to me as well. I went to high school in Kargal and used to visit Falls with friends when I was going to college. It is always a beatiful site no matter what tourism dept does.