Showing posts with label Music. Show all posts
Showing posts with label Music. Show all posts

Saturday, September 16, 2006

ಭಕ್ತಿ ಸಂಗೀತದ ಪುನರುಜ್ಜೀವನ - Resurgence

ಕೆಲವು ತಿಂಗಳ ಹಿಂದೆ ದೂರದ ಮೆಂಫಿಸ್‌ನಿಂದ ವಿಶ್ವೇಶ್ ಮತ್ತು ಅಶ್ವಿನಿ ಅವರು ಕರೆ ಮಾಡಿ ನಮ್ಮ ಹೊಸ ಮ್ಯೂಸಿಕ್ ಆಲ್ಬಮ್ ಇನ್ನೇನು ಕೆಲವು ದಿನಗಳಲ್ಲೇ ಹೊರಬರುತ್ತದೆ, ಅದರಲ್ಲಿ ಒಂದು ಹೊಸ ಪ್ರಯೋಗವನ್ನು ಮಾಡುತ್ತಿದ್ದೇವೆ ಎಂದಾಗ ನನಗೇನು ಅತಿಶಯೋಕ್ತಿ ಎನ್ನಿಸಲಿಲ್ಲ. ಏಕೆಂದರೆ ವಿಶ್ವೇಶ್ ಅವರ ಮೊದಲ ಆಲ್ಬಮ್ 'ಘಮ ಘಮ'ವನ್ನು ಕೇಳಿದವರಿಗೆ ಅವರ ಸಂಗೀತದ ಬಗೆಗಿನ ಆಳವಾದ ಜ್ಞಾನದ ಅರಿವಿನ ಜೊತೆಗೆ ಹೊಸ ಪೀಳಿಗೆಯವರು ಮನಸ್ಸಿನಲ್ಲಿ ಯೋಚಿಸುವ ಇಲ್ಲಿನ-ಅಲ್ಲಿನ, ಹಳೆಯ-ಹೊಸ ಕಲ್ಪನೆಗಳಿಗೆ ಒಂದು ವಿಶಿಷ್ಟ ರೂಪವನ್ನು ಕೊಡುವ ಅವಿರತ ಪ್ರಯತ್ನದ ಅರಿವೂ ಇದೆ. ನಾನು ಮೊಟ್ಟ ಮೊದಲ ಬಾರಿ 'ಘಮ-ಘಮ'ದ ಟೈಟಲ್ ಸಾಂಗ್ ಕೇಳಿದಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಾಳಪ್ಪಾ ಹುಕ್ಕೇರಿಯವರು 'ಘಮಾ-ಘಮಾ ಘಮಾಡ್ತಿಸ್ತಾವ ಮಲ್ಲೀಗೆ...' ಎಂದು ಹಾಡಿದ ನೆನಪು ಬಂತು - ವಿಶ್ವೇಶ್ ಅವರ ಕಂಠದಲ್ಲಿ ಹುಕ್ಕೇರಿಯವರ ಕಂಠದ ಹಾಗೆಯೇ ಆಡುನುಡಿಗಳನ್ನು ಹಾಡುವ ಒರಿಜಿನಾಲಿಟಿಯನ್ನು ನಾನು ಗುರುತಿಸಿದ್ದೆ - ಸಾಮಾನ್ಯವಾಗಿ ಪಟ್ಟಣದವರಿಗೆ ಸೆರೆಹಿಡಿಯಲು ಸಾಧ್ಯವಿಲ್ಲದ ವಿಶೇಷ ಧ್ವನಿಗಳನ್ನು ವಿಶ್ವೇಶ್ ಅವರು ಆ ಹಾಡಿನಲ್ಲಿ ಸೆರೆಹಿಡಿದದ್ದು ಅವರ ಸಹಜ ಪ್ರತಿಭೆಗೆ ಹಿಡಿದ ಕನ್ನಡಿ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದುಕೊಂಡು ತಾವು ಭಾರತದಿಂದ ಬಳುವಳಿ ತಂದ ತಮ್ಮ ಸಂಗೀತ ಸಾಧನೆಯನ್ನು ಸಮಯ ಸಿಕ್ಕಾಗಲೆಲ್ಲ ಒರೆಗೆ ಹಚ್ಚಿ ಅದರಿಂದ ಹೊಸ ಕಂಪನ್ನು ಹೊರ ತರುವ ಅವರ ಪ್ರಯತ್ನ ಶ್ಲಾಘನೀಯ. ತಾವು ಚಿಕ್ಕ ಹುಡುಗನಾಗಿದ್ದಾಗಿನಿಂದ ಆರಂಭಿಸಿದ್ದ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಹಾಗೂ ಬೆಳವಣಿಗೆಯನ್ನು ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಸಂಗೀತದಲ್ಲಿ ಸಾಧನೆ ಮಾಡಿದ ವಿಶ್ವೇಶ್ ಅವರ ಪ್ರತಿಭೆ ಕೇವಲ ಸಂಗೀತಕ್ಕಷ್ಟೇ ಸೀಮಿತವಾಗಿರದೇ ಚಿತ್ರಕಲೆ ಹಾಗೂ ಸಂಘಟನೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೯೯೭ರಿಂದ ೨೦೦೦ದ ವರೆಗೆ ಡೆಕ್ಕನ್ ಹೆರಾಲ್ಡ್‌ಗೆ ನೂರಾರು ಕಾರ್ಟೂನ್‌ಗಳನ್ನು ಬರೆದ ಪ್ರತಿಭೆ ಅವರದು. ಜೊತೆಯಲ್ಲಿ ತಾವು ಮೆಂಫಿಸ್‌ಗೆ ಬಂದ ಹೊಸದರಲ್ಲಿ ಅಲ್ಲಿನ ಕನ್ನಡಿಗರೊಡಗೂಡಿ 'ತರಂಗ' ಕನ್ನಡ ಸಂಘವನ್ನು ಹುಟ್ಟು ಹಾಕಿದ ಮೊದಲಿಗರೂ ಹೌದು. ತಾವಿರುವ ಮೆಂಫಿಸ್ ಪ್ರದೇಶದಲ್ಲಿ ಹಲವಾರು ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತಗಾರರನ್ನು ಕಲೆ ಹಾಕಿ ತಮ್ಮ ಮನೆಯಲ್ಲಿಯೇ ಒಂದು ರೆಕಾರ್ಡಿಂಗ್ ಸ್ಟುಡಿಯೋವನ್ನು ನಿರ್ಮಿಸಿ ಸಂಗೀತದ ಅಲೆಗಳನ್ನು ಹೊರಡಿಸಿ ಅಮೇರಿಕದ ಉದ್ದಗಲಕ್ಕೆ ಬೇಕಾದಷ್ಟು ಕಾರ್ಯಕ್ರಮಗಳನ್ನು ಕೊಟ್ಟಿರುವ ಕೀರ್ತಿ ಅವರದು. ವಿಶ್ವೇಶ್ ಅವರ ಛಲ ಮತ್ತು ಸಾಧನೆಯಲ್ಲಿ ಸಮಭಾಗಿಗಳಾಗಿರುವ ಅವರ ಧರ್ಮಪತ್ನಿ ಅಶ್ವಿನಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ವಿಶ್ವೇಶ್ ಅವರಂತೆ ಇವರೂ ಸಹ ಚಿಕ್ಕ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ವೀಣಾವಾದನದಲ್ಲಿ ಸಾಧನೆಯನ್ನು ಮಾಡಿ, ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ವಿಶ್ವೇಶ್ ಅವರ ಹಾಡಿನಲ್ಲಿ ವೀಣೆಯ ಹಿಮ್ಮೇಳವನ್ನು ನೀಡುವುದರೊಂದಿಗೆ ತಾವೂ ಜೊತೆಯಲ್ಲಿ ದನಿಗೂಡಿಸಿರುವುದೂ ಅಲ್ಲದೇ ಈ ಧ್ವನಿ ಸುರುಳಿಗಳನ್ನು ಹೊರತರುವಲ್ಲಿ ಬೆಂಬಲಿಗರಾಗಿ ಸಾಕಷ್ಟು ಶ್ರಮಿಸಿದ್ದಾರೆ.

ಇವರ ಹೊಸ ಆಲ್ಬಮ್ "ರಿಸರ್ಜನ್ಸ್" ನಲ್ಲಿ ಐದು ಟ್ರ್ಯಾಕ್‌ಗಳಿವೆ, ಇದರಲ್ಲಿರುವ ಪ್ರಯೋಗದ ವಿಶೇಷವೆಂದರೆ ಭಕ್ತಿರಸವನ್ನು ಪ್ರಧಾನವಾಗಿಟ್ಟುಕೊಂಡು ಮರಾಠಿ, ಕನ್ನಡ, ಹಿಂದಿ ಹಾಗೂ ಸಂಸ್ಕೃತದಲ್ಲಿ ಆಯ್ದ ಗೀತೆಗಳಿಗೆ ವಿಶ್ವೇಶ್-ಅಶ್ವಿನಿಯವರೇ ಹೊಸ ರಾಗ ಸಂಯೋಜನೆ ಮಾಡಿರುವುದು. ಮೊದಲ ಟ್ರ್ಯಾಕ್‌ನಲ್ಲಿ ಡಾ. ಅಶೋಕ್ ರಾವ್ ಅವರ ಸುಂದರ ನಿರೂಪಣೆಯೊಂದಿಗೆ ದಿವ್ಯ ತಂಬೂರಿಯ ಮಧುರವಾದ ಹಿನ್ನೆಲೆ ಆರಂಭವನ್ನು ಮುದಗೊಳಿಸುತ್ತದೆ. ಡಾ. ಅಶೋಕ್ ರಾವ್ ಅವರು ಹೇಳಿದ ''There is a belief that Indian classical music is a divine vehicle that can help us reach a higher spiritual state...' ಎನ್ನುವ ಮಾತು ಅಕ್ಷರಷಃ ಸತ್ಯ. 'ರಿಸರ್ಜೆನ್ಸ್'ನಲ್ಲಿ ಹೊರ ಹೊಮ್ಮುವ ಸಂಗೀತ ಭಕ್ತಿ ರಸವನ್ನು ಪ್ರಧಾನವಾಗಿಟ್ಟುಕೊಂಡು ಕೇಳುಗರನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆಧುನಿಕ ಬದುಕಿನ ಮತ್ತೊಂದು ಮುಖವಾದ ವ್ಯಸ್ತ ಜಗತ್ತಿನಲ್ಲಿ ವಿಶ್ವೇಶ್ ಅವರ ಭಕ್ತಿರಸದ ಪ್ರಯೋಗ ನಿಜವಾಗಿಯೂ ಒಂದು ಹೊಸ ದಾರಿಯನ್ನು ತೋರಿಸುತ್ತದೆ.



ಮೊದಲ ಹಾಡು ಗುರುವಿಗೆ ಮೀಸಲಾಗಿದ್ದು, ಶ್ರೀಪಾದ ಶ್ರೀ ವಲ್ಲಭರ 'ಗುರು ವಿನಾ ನಾಹಿ ಕೋಣಿರೇ...' ಎಂದು ಗುರುವಿನ ಮಹತ್ವವನ್ನು ಹೊರ ಸೂಸುವ ಮಧುರವಾದ ಹಾಡನ್ನು ವಿಶ್ವೇಶ್ ಹಾಗೂ ಅಶ್ವಿನಿ ಅವರಿಬ್ಬರ ಸ್ವರದಲ್ಲಿ ಕೇಳಬಹುದು. ಮರಾಠಿ ಅರ್ಥವಾಗದಿದ್ದವರಿಗೂ ಗುರುವಿನ ಮಹತ್ವವನ್ನು ಸಾರಿ, ಗುರುವನ್ನು ಎಲ್ಲ ಬಂಧುಗಳಿಗಿಂತಲೂ ದೊಡ್ಡದಾಗಿ ಮಾಡುವ ತೋಡಿ-ಭಟಿಯಾರ ರಾಗಗಳಲ್ಲಿ ಹೊರ ಹೊಮ್ಮುವ ಸ್ವರಗಳು ಗುರುವನ್ನು ಎಂಥವರ ಮನದಲ್ಲೂ ಬಹಳ ಎತ್ತರದಲ್ಲಿ ನಿಲ್ಲಿಸುತ್ತದೆ. ಈ ಹಾಡಿನಲ್ಲಿರುವ ಇನ್ನೊಂದು ವಿಶೇಷವೆಂದರೆ ಎಲ್ಲೂ ಅತಿ ಎನಿಸದೇ ತಕ್ಕ ಪ್ರಮಾಣದಲ್ಲಿ ಮೂಡುವ ಹಿನ್ನೆಲೆ ಸಂಗೀತ. ತಮ್ಮ ಇತಿಮಿತಿಗಳಲ್ಲಿ, ಸಿಕ್ಕ ಅವಕಾಶಗಳಲ್ಲಿ ವಿಶ್ವೇಶ್-ಅಶ್ವಿನಿ ಅವರು ಸಾಕಷ್ಟು ಸ್ವರಗಳನ್ನು ಹೊರಡಿಸಿ ಗುರುವಿಗೆ ಒಂದು ಹೆಚ್ಚಿನ ಸ್ಥಾನವನ್ನು ವಿವಿಧ ರೀತಿಗಳಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ತೋಡಿ ರಾಗಕ್ಕೆ ಪಾಶ್ಚಾತ್ಯ ಗಿಟಾರ್ ಧ್ವನಿಯನ್ನು ಹೊಂದಿಸುವಲ್ಲಿ ವಿಶ್ವೇಶ್ ಅವರ ಕೈಚಳಕ ಎದ್ದು ಕಾಣುತ್ತದೆ.



ಎರಡನೆಯ ಹಾಡು 'ನಿರಂತರ', ಹರಿ ಭಜನೆ ಮಾಡೋ ನಿರಂತರ... ಎನ್ನುವ ಶ್ರೀ ವಾದಿರಾಜರ ಕೃತಿಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಭೀಮ್‌ಪಲಾಸ್ ರಾಗದಲ್ಲಿ ಆರಂಭವಾಗುವ ವಿಶ್ವೇಶ್ ಅವರ ಆಲಾಪನೆ ಎಂಥವರ ಮನಸ್ಸಿನಲ್ಲೂ ಇರುವ ತಲ್ಲಣಗಳನ್ನು ಒಂದು ಕ್ಷಣ ದೂರ ಮಾಡಿ ಹರಿಭಜನೆಯ ನಿರಂತರ ಗಾನದಲ್ಲಿ ಧ್ಯಾನದ ಎತ್ತರವನ್ನು ಹುಟ್ಟುಹಾಕುತ್ತದೆ. 'ಪರಗತಿಗಿದು ಇದು ನಿರ್ಧಾರ ನೋಡೋ...' ಎನ್ನುವ ಒಂದೇ ಸಾಲಿನಲ್ಲಿ ವಿಶ್ವೇಶ್ ಪೂರ್ವ-ಪಶ್ಚಿಮದವರಿಗೆಲ್ಲ ಅಪ್ಯಾಯಮನವಾಗುತ್ತಾರೆ. ಈ ಹಾಡಿನ ಹಿನ್ನೆಲೆಯಲ್ಲಿ ಹತ್ತಾರು ವಯಲಿನ್‌ಗಳ ಮಾಧುರ್ಯವನ್ನು ಸೆರೆಹಿಡಿದು ಸಿಂಫನಿ ಎಫೆಕ್ಟ್ ಹುಟ್ಟಿಸುವ ಒಂದು ಹೊಸ ಪ್ರಯೋಗವಿದೆ. ಈ ಹಾಡಿನ ಕೊನೆಯಲ್ಲಿ 'ಹರಿ ಭಜನೆ-ಭಜನೆ...' ಅನ್ನೋದು ಹದಿನಾಲ್ಕು ಸಲ ಪುನರಾವರ್ತನೆಯಾಗುತ್ತದೆ, ಪ್ರತಿಯೊಂದು ಸಲ ಪುನರಾವರ್ತನೆಯಾದಾಗಲೂ ಹಾಗೂ ಭಜನೆ ಎನ್ನುವ ಪದವನ್ನು ವಿಶ್ವೇಶ್ ಅವರು ಭಿನ್ನವಾಗಿ ಮೂಡಿಸಿದ್ದಾರೆ, ಒಟ್ಟಿನಲ್ಲಿ ೨೮ ಸಲ ಬರುವ 'ಭಜನೆ' ನಿಜವಾಗಿಯೂ ಮನವನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ.

ಮೂರನೇ ಹಾಡು ಮೀರಾಬಾಯಿಯ 'ಗೋವರ್ಧನ್ ಗಿರಿಧಾರಿ' ಯನ್ನು ಅಶ್ವಿನಿಯವರು ಸಾಕ್ಷಾತ್ಕರಿಸಿದ್ಧಾರೆ. 'ತುಮ್ ಬಿನ್ ಮೋರಿ ಕೌನ್ ಖಬರಲೇ ಗೋವರ್ಧನ್ ಗಿರಿಧಾರಿ' ಎನ್ನುವಲ್ಲಿ ಮೀರಾಬಾಯಿ ಕೃಷ್ಣನನ್ನು ಪ್ರಶ್ನಿಸುವ ಆತ್ಮೀಯತೆಯನ್ನು ಪಲ್ಲವಿಯಲ್ಲೇ ಸಾಧಿಸಿಕೊಂಡಿದ್ದಾರೆ. ಯಮನ್ ರಾಗದಲ್ಲಿ ಹೊರಹೊಮ್ಮುವ ಸುಂದರ ಶೃತಿಯ ಜೊತೆಗೆ ಸುಂದರವಾದ ಗಿಟಾರ್ ಮತ್ತು ಕೊಳಲಿನ ಹಿನ್ನೆಲೆಯೂ ಇದೆ. ಸರಳವಾದ ರಾಗದಲ್ಲಿ ಹೊರ ಹೊಮ್ಮುವ ಅಶ್ವಿನಿಯವರ ಧ್ವನಿ ಶ್ರೀ ಕೃಷ್ಣನೊಂದಿಗೆ ತನ್ಮಯತೆಯನ್ನು ಸಾಧಿಸಿದ ಮೀರಾಬಾಯಿಯ ಮೊರೆಯನ್ನು ಕಣ್ಣಿಗೆ ಕಟ್ಟುತ್ತದೆ.

ನಾಲ್ಕನೆಯ ಹಾಡು ತುಲಸೀ ದಾಸರ 'ರಾಮ ಚರಣ ಸುಖದಾ' ವನ್ನು ವಿಶ್ವೇಶ್-ಅಶ್ವಿನಿಯವರಿಬ್ಬರ ಧ್ವನಿಯಲ್ಲಿ ಕೇಳಬಹುದು. ಭೈರವಿ ರಾಗದಲ್ಲಿ ಹೊರ ಹೊಮ್ಮುವ ಈ ಅದ್ಭುತ ಕೃತಿ ಎಂಥವರಿಗೂ ರಾಮ ಚರಣವನ್ನು ಭಜಿಸುವ ಮನಸ್ಥಿತಿಯನ್ನು ಮೂಡಿಸುತ್ತದೆ. ತುಲಸೀ ದಾಸರ ಚರಣಗಳಿಗೆ ಜಲತರಂಗದ ಹೊಸ ಅಲೆಗಳನ್ನು ಹೊಮ್ಮಿಸುವ ಪ್ರಯೋಗದಲ್ಲಿ ರಾಮ ಚರಣದ ಕಲ್ಪನೆ ಎಂಥವರಿಗೂ ಮುದನೀಡುತ್ತದೆ.

ಕೊನೆಯ ಹಾಡು ಶ್ರೀ ಜಯದೇವರ 'ನಾಥ ಹರೇ, ಜಗನ್ನಾಥ ಹರೇ' ಎನ್ನುವ ಹಾಡು ದರ್ಬಾರಿ ಕಾನಡಾ ರಾಗದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ವಿಶ್ವೇಶ್ ಅವರ ಸರಳ ಶೈಲಿ, ಜೊತೆಗೆ ಹದವಾದ ಮೃದಂಗದ ನಿನಾದ ಹಾಗೂ ಭಾವಪರವಶ ಸಂಗೀತ ಭಕ್ತಿಯ ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಈ ಹಾಡಿನಲ್ಲಿ ಮೂಡುವ ವಿಶ್ವೇಶ್ ಅವರ ಆಲಾಪನೆಯನ್ನು ಕೇಳುವುದು ನಿಜವಾಗಿಯೂ ಒಂದು ಹೊಸ ಅನುಭವ. ಬಹಳ ಸರಳವಾಗಿ ಆರಂಭವಾಗುವ ಹಾಡು ಆಲಾಪನೆಗಳ ಸಾಂಗತ್ಯ ಜೊತೆಯಲ್ಲಿ ವೀಣೆಯ ಮಧುರವಾದ ಧ್ವನಿಯಲ್ಲಿ ಶ್ರೋತೃಗಳ ಮನಸ್ಸಿನಲ್ಲಿ ಬಹಳ ಎತ್ತರವನ್ನು ತಲುಪುತ್ತದೆ.

"ರಿಸರ್ಜೆನ್ಸ್" ಹೊರ ಬರಲು ಅಶ್ವಿನಿ-ವಿಶ್ವೇಶ್ ಅವರ ಜೊತೆಯಲ್ಲಿ ಹಲವಾರು ಸಹ ಕಲಾವಿದರೂ ದುಡಿದಿದ್ದಾರೆ: ಗಿಟಾರ್ ಸಹಗಾಯನವನ್ನು ನೀಡಿದವರು ಜಾನ್ ಓಮನ್ (John Oommen), ಮೃದಂಗದಲ್ಲಿ ಲಕ್ಷ್ಮಣ್, ತಬಲಾ ಸಾಥಿಗಳಾಗಿ ಯೋಗೇಶ್ ಹಾಗೂ ಶೇಖರ್, ಹಾರ್ಮೋನಿಯಮ್‌ನಲ್ಲಿ ಪ್ರಭಾಕರ್ ಪಾರೀಖ್, ಕೊಳಲಿನಲ್ಲಿ ಕೃಷ್ಣಾ ಪ್ರಸಾದ್, ವೀಣಾ ವಾದಕಿಯಾಗಿ ಅಶ್ವಿನಿ. ಈ ಆಲ್ಬಮ್‌ಗೆ ಸಂಗೀತ ಸಂಯೋಜಿಸಿರುವ ವಿಶ್ವೇಶ್ ತಮ್ಮ ಕೀ ಬೋರ್ಡಿನಿಂದ ಅದ್ಭುತವಾದ ಧ್ವನಿಗಳನ್ನು ಹೊರಡಿಸಿದ್ದಾರೆ. ತಾವಿರುವ ಮೆಂಫಿಸ್‌ನಲ್ಲಿ ನ್ಯೂ ಜೆರ್ಸಿ ಅಥವಾ ಕ್ಯಾಲಿಫೋರ್ನಿಯಾದಲ್ಲಿ ಸಿಕ್ಕ ಹಾಗೆ ಕಲಾವಿದರು ಸಿಕ್ಕೋದಿಲ್ಲ ಎನ್ನುವುದನ್ನು ಚೆನ್ನಾಗಿ ಮನಗಂಡಿರುವ ವಿಶ್ವೇಶ್-ಅಶ್ವಿನಿ, ಈ ಸಹ ಕಲಾವಿದರನ್ನು ಒಟ್ಟುಗೂಡಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ ಹಾಗೂ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ ಹೊಸವರ್ಷದ ಸಂದರ್ಭದಲ್ಲಿ ಸುಮಾರು ೫೦೦ ಮೈಲು ದೂರದ ಸೀಡರ್ ರಾಪಿಡ್ಸ್‌ನಿಂದ ಯೋಗೇಶ್ ಇವರ ಮನೆಗೆ ಬಂದಿದ್ದಾಗಲೇ ಅವರ ತಬಲಾವನ್ನು ರೆಕಾರ್ಡ್ ಮಾಡಿಕೊಂಡು ಮುಂದೆ ಅದನ್ನು ವಿಶ್ವೇಶ್ ಅವರು ಬಳಸಿಕೊಂಡಿದ್ದಾರೆ. ಸಾವಿರಾರು ಡಾಲರುಗಳನ್ನು ಸುರಿದು ದೊಡ್ಡ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಪ್ರೊಫೆಷನಲ್ ಆರ್ಟಿಸ್ಟುಗಳು ಮಾಡಿರುವ ಧ್ವನಿ ಮುದ್ರಣಕ್ಕೆ ಯಾವುದೇ ಕೊರತೆಯಿಲ್ಲದೇ ತಮ್ಮ ಮನೆಯಲ್ಲಿಯೇ ತಾವೇ ಹೊಂದಿಸಿಕೊಂಡ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ಗಳನ್ನು ಬಳಸುವುದರ ಮೂಲಕ ನಮ್ಮೆಲ್ಲರ ನಡುವೆ ಎದ್ದು ಕಾಣುತ್ತಾರೆ. ತಮ್ಮ ಅವಿರತ ದುಡಿಮೆಯ ಜೊತೆಗೆ ಎಲ್ಲ ಕಲಾವಿದರೂ ಸಾಕಷ್ಟು ಶ್ರಮಿಸಿದ್ದಾರೆ, ಇಲ್ಲಿ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಕಲಾವಿದರೆಲ್ಲರೂ ಒಟ್ಟಿಗೆ ಸಿಡಿ ಬಿಡುಗಡೆಯ ಸಮಾರಂಭದಲ್ಲೇ ಸೇರಿದ್ದು ಎನ್ನುವುದನ್ನೂ ವಿಶ್ವೇಶ್ ಹೆಮ್ಮೆಯಿಂದ ಸ್ಮರಿಸುತ್ತಾರೆ.

ಈ ಧ್ವನಿ ಸುರುಳಿಯಲ್ಲಿ ಭಾರತೀಯ ಸಾಹಿತ್ಯ-ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನು ಎಷ್ಟು ಚೆನ್ನಾಗಿ ಬೆರೆಸಿದ್ದಾರೆಂದರೆ ಅದು ಭಕ್ತಿ ಸಂಗೀತ ಮಾಧುರ್ಯವನ್ನು ಹೆಚ್ಚಿಸಿದೆಯೇ ವಿನಾ ಎಲ್ಲೂ ಕರ್ಕಶವೆಂದೆನಿಸಿಲ್ಲ. ಜೊತೆಗೆ ವಿಶ್ವೇಶ್ ಅವರ ರಾಗಗಳ ಬಳಕೆ ಬೆಳಗಿನ ಜಾವದ ರಾಗಗಳಿಂದ ಆರಂಭವಾಗಿ ಸರಿ ರಾತ್ರಿಯ ರಾಗಗಳವರೆಗೆ ವಿಸ್ತರಿಸಿರುವುದೂ ಅವರ ಪ್ರಯೋಗಗಳಲ್ಲೊಂದು. ವಿಶ್ವೇಶ್-ಅಶ್ವಿನಿಯವರು ತಮ್ಮ ಪ್ರಯೋಗಗಳನ್ನು ಹೀಗೆಯೇ ಮುಂದುವರೆಸಿ, ಇನ್ನೂ ಹಲವಾರು ಧ್ವನಿ ಸುರುಳಿಗಳನ್ನು ಹೊರಗೆ ತಂದು ಸಂಗೀತದಲ್ಲಿ ಸಾಧನೆಯನ್ನು ಮಾಡುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಒಟ್ಟಿನಲ್ಲಿ "ರಿಸರ್ಜೆನ್ಸ್" ನಮ್ಮ ನಡುವಿನ ಕನ್ನಡದ ಧ್ವನಿಯಾಗಿ ಹೊರಬಂದಂತೆ ಕಂಡು ಬಂದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಜನರ ಮನ್ನಣೆಗಳಿಗೆ ಪಾತ್ರವಾಗಿರೋದು ಸತ್ಯದ ಸಂಗತಿ. ವಿಶ್ವಿನಿ.ಕಾಮ್ ವೆಬ್ ಸೈಟ್‌ನಲ್ಲಿ ತೋರಿಸಿದ ಎಷ್ಟೋ ಜನರ ಅನಿಸಿಕೆಗಳು ಅತಿಶಯೋಕ್ತಿ ಎಂದು ಎಲ್ಲೂ ಅನ್ನಿಸುವುದಿಲ್ಲ. ವಿಶ್ವೇಶ್-ಅಶ್ವಿನಿಯವರ ಸಾಧನೆಗಳ ಬಗ್ಗೆ ನೀವು http://www.vishwini.com/ ನಲ್ಲಿ ವಿವರವಾಗಿ ನೋಡಬಹುದು ಹಾಗೇ "ಘಮ-ಘಮ" ಗೀತೆಗಳನ್ನು Kannada Audio.com ನಲ್ಲಿ ಕೇಳಬಹುದು.

***

ಸೂಚನೆ: ಈ ಬಗ್ಗೆ ನಿನ್ನೆ ThatsKannada.com ದಲ್ಲಿ ಪ್ರಕಟವಾದ ಬರಹವನ್ನು ಹೆಚ್ಚು ಜನರು ನೋಡಲಿ ಎಂದು 'ಅಂತರಂಗ'ದಲ್ಲಿಯೂ ಹಾಕಿದ್ದೇನೆ.