Showing posts with label ಡ್ರೈವಿಂಗ್. Show all posts
Showing posts with label ಡ್ರೈವಿಂಗ್. Show all posts

Saturday, March 02, 2024

ಸರಿಯಾದ ದಾರಿ...

"ಬೆಳ್ಳಂಬೆಳಗ್ಗೆ ಇವ್ರು ಯಾರೋ ನಿಧಾನವಾಗಿ ಡ್ರೈವ್ ಮಾಡಿಕೊಂಡ್ ಹೋಗೋರು ಸಿಕ್ಕಿಕೊಂಡ್ರಲ್ಲ!" ಎಂದು ಪ್ರಲಾಪನೆಗೆ ಮೊರೆ ಹೋದವನಿಗೆ, "ಅಷ್ಟಕ್ಕೂ ಅವರು ಮಾಡುತ್ತಿರುವ ತಪ್ಪಾದರೂ ಏನು?" ಎನ್ನುವ ತಂತಾನೆ ಹುಟ್ಟಿದ ಉತ್ತರ, ಆಂತರಿಕ ತಲ್ಲಣಗಳಿಗೆ ಸೂಕ್ಷ್ಮವಾಗಿ ಪೂರ್ಣ ವಿರಾಮವನ್ನು ನೀಡುವ ಹಾಗೆ ಕಂಬದ ನೆರಳಿನಂತೆ ಎದ್ದು ನಿಂತಿತ್ತು.



ನಾನು ದಿನಾ ಡ್ರೈವ್ ಮಾಡಿಕೊಂಡು ಫ಼್ರೀವೇ ದಾಟಿ ಎಕ್ಸಿಟ್ ತೆಗೆದುಕೊಂಡ ಕೂಡಲೇ ದುತ್ತನೇ ಎದುರಾಗುವ ಸ್ಟಾಪ್ ಸೈನಿಗೆ ಮರ್ಯಾದೆ ತೋರಿಸಿದಂತೆ ಮಾಡಿ, ಏದುಸಿರು ಬಿಡುತ್ತಾ ಏರಿಯನ್ನು ಹತ್ತುವ ಓಟಗಾರನಂತೆ ಮುಂದೆ ಹೋಗುವ ಕಾರು. ಮುಂದಿನ ಅರ್ಧ-ಮುಕ್ಕಾಲು ಮೈಲು ಏನಿದ್ದರೂ ಬರೀ ಇಪ್ಪತ್ತೈದರ ಸ್ಪೀಡೇ ಎಂದು ಅದು ತನಗೆ ಎದುರಾಗುವ ಸ್ಪೀಡ್ ಸೈನುಗಳಿಗೆ ಮೂತಿ ತಿರುವಿ ಅಣಗಿಸಿಕೊಂಡು ಹೋಗೋ ರೀತಿ ಕಾಣುತ್ತದೆ. ಅಪರೂಪಕ್ಕೊಮ್ಮೆ ಕ್ರಾಸಿಂಗ್‌ನಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾ ನಿಧಾನವಾಗಿ ನಡೆದು ರಸ್ತೆ ದಾಟುವ ಪಾದಚಾರಿಗಳಿಗೆ ಒಮ್ಮೊಮ್ಮೆ ಹಿಡಿ ಶಾಪ ಹಾಕಿದ್ದೂ ಉಂಟು. ಆದರೆ, ಮರೆಯಲ್ಲಿ ನಿಂತು ಕಾಯುವ ಮಾಮಾಗಳನ್ನು ಯಾವತ್ತೂ ನಾವು ದೂರದೃಷ್ಟಿಯಿಂದ ನೋಡುತ್ತೇವೆಯೇ ಹೊರತು, ದುರುಳ ದೃಷ್ಟಿಯಿಂದಂತೂ ಅಲ್ಲ!

ಈ ಜಾಗದಲ್ಲಿ (ಮತ್ತು ಎಲ್ಲಕಡೆ), ಸ್ಪೀಡ್ ಲಿಮಿಟ್ ಇಪ್ಪತ್ತೈದು ಇದ್ದರೂ ಎಲ್ಲರೂ ಮೂವತ್ತರ ಮೇಲೇ ಹೋಗುವವರು. ಹಾಗಾಗಿ, ಎಲ್ಲರೂ ವೇಗವಾಗಿ ಹೋದಾಗ ಅದು ಸರಿಯಾಗಿ ತೋರುವುದರ ಜೊತೆಗೆ, ಅಪರೂಪಕ್ಕೊಮ್ಮೆ ಸರಿಯಾದ ವೇಗದಲ್ಲಿ ಹೋಗುವವರು ತಪ್ಪಾಗಿ ಕಂಡು ಬರುವುದು, ಒಂದು ರೀತಿಯಲ್ಲಿ ವಿಚಕ್ಷಣೆ ಇಲ್ಲದ ವ್ಯಾಖ್ಯಾನ ಎಂದರೆ ತಪ್ಪೇನೂ ಇಲ್ಲ!

ಆದರೆ, ಇಂದು ನನ್ನ ಮುಂದಿನ ಕಾರು ಅದೇನೇ ಆಗಲಿ, ಈ ದಾರಿಯಲ್ಲಿ ನಾನು ಇಪ್ಪತ್ತೈದರ ಲಿಮಿಟ್ ಅನ್ನು ದಾಟುವುದಿಲ್ಲ ಎಂದು ಯಾರಿಗೋ ಪ್ರತಿಜ್ಞೆ ಮಾಡಿ ಬಂದಂತಿದೆ. ಒಬ್ಬರು ಸರಿಯಾದ ದಾರಿಯಲ್ಲಿ, ಸರಿಯಾದ ವೇಗದಲ್ಲಿ ನಡೆದರೆ, ಅವರ ಹಿಂಬಾಲಕರಿಗೆ ಅವರನ್ನು ವ್ಯವಸ್ಥಿತವಾಗಿ ಹಿಂಬಾಲಿಸದೇ ಬೇರೆ ದಾರಿಯೇನಿದೆ ಎಂಬ ಯೋಚನೆ ಬಂತು. ಬೇರೆ ದಾರಿ ಎನ್ನುವುದು ಇಲ್ಲದಿದ್ದಾಗ ಇರುವುದು ಸರಿಯಾದ ದಾರಿ ಆಗುತ್ತದೆ ಎನ್ನುವ (corollary) ಉಪಸಿದ್ಧಾಂತ ಬೇರೆ ಹುಟ್ಟಿತು.

ಜನ ವೇಗವಾಗಿ ಏಕೆ ಡ್ರೈವ್ ಮಾಡುತ್ತಾರೆ? ಸ್ಪೀಡ್ ಲಿಮಿಟ್ ಇಷ್ಟೇ ಎಂದು ಸೈನ್‌ಗಳು ಸಾರಿ ಸಾರಿ ಹೇಳುತ್ತಲೇ ಇದ್ದರೂ ಜನರು ಅದಕ್ಕಿಂತ ಹೆಚ್ಚು ವೇಗವಾಗಿ ಏಕೆ ಚಲಾಯಿಸುತ್ತಾರೆ? ಹೀಗೆ ವೇಗವಾಗಿ ಹೋಗುವ ಗಾಡಿಗಳು ಮತ್ತುಅವುಗಳ ಸವಾರರು ಅದೇನನ್ನು ಕಟ್ಟಿ-ಕಡಿದು ಹಾಕುತ್ತಾರೆ? ಹಾಕಿರಬಹುದು? Conditions permitting... ಎಂದು ತಮ್ಮ ಆಂತರ್ಯದಲ್ಲಿ ಮೇಳೈಸಿದ ಸತ್ಯದ ಹಿನ್ನೆಲೆಯಲ್ಲಿ ಮಿತಿಯನ್ನು ತೋರಿ ಜನರ ಸುರಕ್ಷತೆಗೆ ಆದ್ಯತೆ ಕೊಡುವ ಈ ಮೂಕ ಜೀವಿಗಳನ್ನು ಜನರು ಅಷ್ಟೊಂದು ಅಗೌರವದಿಂದ ನೋಡುವುದಾದರೂ ಏಕೆ? ದಿನದ 24 ಗಂಟೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡಿರುವ ಈ ರಕ್ಷಕರನ್ನು ಆರಕ್ಷಕರ ಸಹಾಯವಿಲ್ಲದೇ ಆದರಿಸುವವರು ಇಲ್ಲವೇ?... ಹೀಗೆ ಪ್ರಶ್ನೆಗಳೋಪಾದಿಯಲ್ಲಿ ಮತ್ತಿಷ್ಟು ಪ್ರಶ್ನೆಗಳು ಮೂಡಿದವು.

***

ಬೇರೆಯವರು ತಮ್ಮ ಕಾರನ್ನು ವೇಗವಾಗಿ ಚಲಾಯಿಸುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ, ನಾನು ಮತ್ತಿನ್ನೆಲ್ಲೋ ತಡವಾಗಿ ಹೋಗಬಾರದಲ್ಲ ಎಂಬ ಕಾರಣಕ್ಕೆ ವೇಗವಾಗಿ ಚಲಾಯಿಸುತ್ತೇನೆ. ಹಾಗಾದರೆ, ವೇಗದ ಮಿತಿಯಲ್ಲಿ ಚಲಾಯಿಸುವುದು ಎಂದಾದರೆ, ಮನೆಯನ್ನು ಐದು-ಹತ್ತು ನಿಮಿಷ ಮೊದಲೇ ಬಿಡಬಹುದಲ್ಲ? ಹಾಗೆ ಹೆಚ್ಚಿನ ಸಮಯ ಆಗೋದಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹೋಗುವವರು ಮತ್ತು ಸೂಚಿಸಿದ ಸಮಯಕ್ಕೆ ಮೊದಲೇ ಹೋಗಿ ತಲುಪುವವರು ವಿರಳ. ಅಂದ ಮೇಲೆ ಎಲ್ಲರೂ (ಮಿತಿಯನ್ನು ಮೀರಿ) ವೇಗವಾಗಿ ಚಲಾಯಿಸುತ್ತಾರೆ ಅಂತಲೇ ಆಯಿತು.

ಇನ್ನು ಸಮಯಕ್ಕೆ ಸರಿಯಾಗಿ ತಲುಪುವವರು, ಸಮಯ ಪಾಲನೆಯನ್ನು ಮಾಡುವವರು, ತಮ್ಮ ತಮ್ಮ ರಸ್ತೆಯಲ್ಲಿ ವೇಗದ ಮಿತಿಗೆ ಅನುಸಾರವಾಗಿ ಚಲಿಸಿದರೆ, ಅದರಿಂದ ಅವರಿಗೇನೂ ಹಾನಿ ಇಲ್ಲ - ಆದರೆ ಅವರ ಬೆನ್ನಿಗೆ ಬಿದ್ದ ವೇಗಿಗಳ ರಕ್ತದೊತ್ತಡ ಹೆಚ್ಚಾಗುವುದಂತೂ ನಿಜ.

ನನ್ನ ಇಪ್ಪತ್ತೈದು ವರ್ಷಗಳ ಡ್ರೈವಿಂಗ್ ಜೀವನದಲ್ಲಿ ಎಲ್ಲ ರೀತಿಯ ಡ್ರೈವರುಗಳನ್ನು ನೋಡಿದ್ದೇನೆ. ಮಿರಿ ಮಿರಿ ಮಿಂಚುವ ಸ್ಪೋರ್ಟ್ಸ್ ಕಾರುಗಳನ್ನು ಓಡಿಸುವ ಹದಿಹರೆಯದವರಿಂದ ಹಿಡಿದು, ತಮಗೆ ಬೇಕಾದಕ್ಕಿಂತಲೂ ದೊಡ್ಡ ಸೈಜಿನ ಹಳೆಯ ಕಾರುಗಳನ್ನು ಓಡಿಸುವ ಹಿರಿಯವರೆಗೆ. ಕಾರಿನಲ್ಲಿ ಹುಷಾರಿಲ್ಲದೆ ರಚ್ಚೆ ಹಿಡಿದು ಅಳುವ ಮಗುವನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ಪೋಷಕರಿಂದ ಹಿಡಿದು, ಹೆರಿಗೆ ನೋವು ಅನುಭವಿಸುತ್ತಿರುವ ಗರ್ಬಿಣಿ ಹೆಂಡತಿಯನ್ನು ತುರಂತಾಗಿ ಆಸ್ಪತ್ರೆ ಸೇರಿಸುವ ಗಂಡಂದಿರವರೆಗೆ. ಶವವನ್ನು ಸಾಗಿಸುತ್ತಿರುವ ಹರ್ಸ್ (hearse) ವಾಹನದ ಹಿಂದೆ ಮೌನವಾಗಿ ದುಃಖತಪ್ತರಾಗಿ ರೋಧಿಸುತ್ತಾ ಡ್ರೈವ್ ಮಾಡುವ ಕುಟುಂಬಸ್ಥರಿಂದ ಹಿಡಿದು, ತಮ್ಮ ಕುಟುಂಬಕ್ಕೆ ಇದೀಗ ತಾನೇ ಸೇರಿಕೊಂಡ ಹೊಸ ಮಗುವನ್ನು ಹೆಮ್ಮೆಯಿಂದ ಜೋಪಾನವಾಗಿ  ಕಾರು ಸೀಟಿನಲ್ಲಿ ಕರೆದುಕೊಂಡು ಹೋಗುತ್ತಿರುವ ದಂಪತಿಗಳವರೆಗೆ. ಎರಡು ಚಕ್ರದವರ ಆಟಾಟೋಪಗಳಿಂದ ಹಿಡಿದು ಹದಿನಾರು ಚಕ್ರದ (ಶೋಡಷ/ಷಿ) ಒಡೆಯರ ಒನಪು-ವೈಯಾರದಿಂದ ರಸ್ತೆಯನ್ನು ಅಪ್ಪಿಕೊಳ್ಳುವ ವರೆಗೆ...

ಹೀಗೆ, ಪ್ರತಿಯೊಂದು ಸಂದರ್ಭಕ್ಕೂ ಈ ರಸ್ತೆಗಳು ಒಂದು ರೀತಿಯಲ್ಲಿ ಸಾಮಾಜಿಕ ಸ್ಥಿತಿ-ಗತಿಯನ್ನು ಮಟ್ಟ ಮಾಡುವ ಲೆವೆಲ್ಲರುಗಳು ಇದ್ದ ಹಾಗೆ. ಈ ರಸ್ತೆಗಳ ಮೇಲೆ ನಿಮ್ಮ ನಿಮ್ಮ ಖಾಸಗೀ ವಿಚಾರಗಳು, ಅವುಗಳನ್ನು ಕುರಿತು ಶಾಂತವಾಗಿಯಾಗಲೀ ಉದ್ವೇಗದಿಂದಾಗಲೀ ಏಳುವ ನಿಮ್ಮ ಸ್ಪಂದನೆಗಳು ಇವೆಲ್ಲಕ್ಕೂ ಯಾವ ಬಿಡಿಗಾಸು ಬೆಲೆಯೂ ಇಲ್ಲ. ಈ ರಸ್ತೆಗಳು, ತಮ್ಮ ಹೊಳೆಯುವ ಕಪ್ಪು ಮುಖದ ಮೇಲೆ ನಿರ್ಧಾಕ್ಷಿಣ್ಯವನ್ನು ಮೈವೆತ್ತುಕೊಂಡಂತೆ ಸದಾ ಸುಮ್ಮನಿರುವ ಸರದಾರರು. ಇಂಥ ರಸ್ತೆಗಳಿಗೆ ಸಾತ್ ಕೊಡುವ ಬದಿಯ ವಾರ್ನಿಂಗ್ ಸೈನುಗಳು! ಇವೆಲ್ಲವೂ ಒಂದು ವ್ಯವಸ್ಥೆ - ಇವುಗಳನ್ನು ಮೀರಿದರೆ ಆಪತ್ತು ಕಾದಿದೆ, ಎನ್ನುವ ಕುತಂತ್ರವನ್ನು ತಮ್ಮೊಡಲೊಳಗೆ ಹೂತುಕೊಂಡಿರುವ ಸಭ್ಯರು ಎನ್ನಬೇಕು.

***



ಎಲ್ಲರೂ ಮಿತಿಗಿಂತ ಹೆಚ್ಚು ವೇಗವಾಗಿ ಹೋಗುತ್ತಿರುವಾಗ, ವೇಗದ ಮಿತಿಗೆ ಸರಿಯಾಗಿ ಹೋಗುವವರು ನಮ್ಮ ಸಮಾಜದಲ್ಲಿ ಒಂದು ರೀತಿಯ ಉಪಟಳ ಕೊಡುವ ಉಪದ್ರವಿಗಳಾಗಿ (nuisance) ಕಂಡುಬರುತ್ತಾರೆ.  ಇವರೊಬ್ಬರು ಸರಿಯಾದ ಹಾದಿಯಲ್ಲಿ ಸರಿಯಾದ ವೇಗದಲ್ಲಿ ನಡೆದು ಬಿಟ್ಟರೆ... ಎಲ್ಲವೂ ಸರಿ ಹೋದೀತೇ? ಮೇಲೆ ಹೇಳಿದ ವೇಗಿಗಳು, ದುಃಖಿಗಳು, ಸುಖಿಗಳು, ತೀವ್ರವಾಗಿ ಬದಲಾವಣೆಯನ್ನು ಅಪ್ಪಿಕೊಳ್ಳುತ್ತಿರುವ ಜನಸಮುದಾಯ ಇವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ಮೌನದ ಮೊರೆಯಲ್ಲಿಯೇ ವೇಗದ ಮಿತಿಯನ್ನು ತೋರಿಸುವ, Conditions permitting...ಎನ್ನುವ ಅದಮ್ಯ ತತ್ವವನ್ನು ಯಾರು ಗೌರವಿಸುತ್ತಾರೆ ಈಗಿನ ಕಾಲದಲ್ಲಿ? ಒಬ್ಬ ಮಿತಿಗಿಂತ ಹೆಚ್ಚಾಗಿ ವೇಗವಾಗಿ ಹೋದರೆ, ಅವನನ್ನು ಅನುಸರಿಸಲು ಹಿಂಬಾಲಿಕರಿಗೇನೂ ಕೊರತೆ ಇಲ್ಲ... ಆದರೆ, ಒಬ್ಬ ಸರಿಯಾದ ವೇಗದಲ್ಲಿ ಹೋದಾಗ ಅವನನ್ನು ಹಿಂಬಾಲಿಸಲು ಹಿಂಜರಿಯುವ ಜನ ಹೆಚ್ಚು! ಹಾಗಾದರೆ, ಸರಿಯಾದ ವೇಗದಲ್ಲಿ ಹೋಗುವುದು ಹೆಚ್ಚು ಜನರಿಗೆ ಇಷ್ಟವಾಗದಂಥ ವ್ಯವಸ್ಥೆಯನ್ನು, ಹೆಚ್ಚು ಜನರ ಮೇಲೆ ಇಲ್ಲಿನ ಜನತಂತ್ರ ವ್ಯವಸ್ಥೆ ಹೇರುವುದಾದರೂ ಏಕೆ?

ತಮ್ಮ ತಮ್ಮ ನಿಧಾನಗಳನ್ನು, ತಮ್ಮ ಯೋಜನೆಯ ಹುಳುಕುಗಳನ್ನು, ತಾವು ತಡವಾಗಿ ಹೊರಟಿರುವುದರ ಕಾರಣ ಮತ್ತು ಪರಿಣಾಮಗಳನ್ನು ಈ ಮೌನವಾಗಿ ಬಿದ್ದುಕೊಂಡ ರಸ್ತೆಗಳ ಮೇಲೆ ತೀರಿಸಿಕೊಳ್ಳುವ ಹಕ್ಕನ್ನ  (ಸಿಕ್ಕಿ ಬಿದ್ದರೆ, ಕಾನೂನಿನ ದೃಷ್ಟಿಯಲ್ಲಿ ತಪ್ಪಾಗುವ) ಈ ವೇಗಿಗಳಿಗೆ ಯಾರು ಕೊಟ್ಟಿದ್ದು? ವ್ಯವಸ್ಥೆಯ ಮಿತಿಯನ್ನು ಮೀರಿ ವೇಗವಾಗಿ ಹೋಗುವವರಿಗೆ ಹಲವಾರು ಕಾರಣಗಳಿರಬಹುದು, ಆದರೆ, ಸಮಾಜದಲ್ಲಿ ನೆಟ್ಟಗೆ, ನ್ಯಾಯವಾಗಿ ಬದುಕುವರಿಗೆ ಕಾರಣಗಳು ಬೇಕಿಲ್ಲ.

***

ನಿಮ್ಮ ಮುಂದೆ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವವರು ನಿಮ್ಮಲ್ಲಿ ಅದ್ಯಾವ ತುಡಿತ-ತಲ್ಲಣಗಳನ್ನು ರೂಪಿಸುತ್ತಾರೆಯೋ ಗೊತ್ತಿಲ್ಲ. ಆದರೆ, ಇಂದು ನನ್ನ ಮುಂದೆ, ಮಿತಿಗೆ ತಕ್ಕಂತೆ ಒಂದು ಅರ್ಧ-ಮುಕ್ಕಾಲು ಮೈಲು ದೂರ ಡ್ರೈವ್ ಮಾಡಿಕೊಂಡು ಹೋದ ಮನುಷ್ಯ ನನಗೊಬ್ಬ ಹೀರೋ ಆಗಿ ಕಂಡು ಬಂದ. ಇಂಥ ನಗಣ್ಯ (unsung) ಹೀರೋಗಳನ್ನು ನಾವು ಗೌರವಿಸುವುದನ್ನು ಮೈಗೂಡಿಸಿಕೊಳ್ಳಲು ಕಲಿಯದಿದ್ದರೆ, ಸಮಾಜದಲ್ಲಿ ನ್ಯಾಯ-ನೀತಿಯಿಂದ ನಡೆಯುತ್ತೇವೆ ಎಂದು ಜೀವನವನ್ನೇ ಮುಡಿಪಾಗಿಟ್ಟಿರುವವರನ್ನು ಗೌರವಿಸುವುದನ್ನು ಕಲಿಯುವುದು ಯಾವಾಗ?