Showing posts with label ಕುಟುಂಬ. Show all posts
Showing posts with label ಕುಟುಂಬ. Show all posts

Friday, May 08, 2020

ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

***
ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

***
ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

Sunday, May 03, 2020

ಸಿನಿಮಾ ವ್ಯಥೆ

ಈ ಕೋವಿಡ್ ವ್ಯಥೆಯಿಂದ ಎಷ್ಟೆಷ್ಟು ಹೊಸ ಕಥೆಗಳು ಹುಟ್ಟುತ್ತವೆಯೋ ಅಥವಾ ಕೋವಿಡ್‌ನಿಂದ ಒಂದು ಹೆಚ್ಚಿನ ಗುಣಮಟ್ಟದ ಸಿನಿಮಾ ಕಥೆಗಳು ಬರಬಹುದೋ ಎಂದು ನಿರೀಕ್ಷೆಯಲ್ಲಿದ್ದ ನನಗೆ, ನಮ್ಮ ಸಿನಿಮಾ ಉದ್ಯಮದ ಬಗ್ಗೆ ಹೆಚ್ಚು ಆಲೋಚಿಸಿದಂತೆಲ್ಲ, ನಲಿವಿಗಿಂತ ನೋವೇ ಹೆಚ್ಚಾಗಿ ಕಂಡಿತು.

ಮೊದಲೇ ಥಿಯೇಟರುಗಳಿಗೆ ಹೋಗದೇ ಹೊರಗುಳಿದಿದ್ದ ಪ್ರೇಕ್ಷಕರು ಈಗಂತೂ ಇನ್ನೂ ದೂರವೇ ಉಳಿಯುತ್ತಾರೆ.  ಎಲ್ಲ ಕಡೆಗೆ ವ್ಯವಸ್ಥಿತವಾಗಿ ಮತ್ತೆ ವ್ಯಾಪಾರ ವಹಿವಾಟುಗಳು ಓಪನ್ ಆಗುತ್ತಿದ್ದಂತೆ, ಸಿನಿಮಾ ಪ್ರಪಂಚ ಚೇತರಿಸಿಕೊಳ್ಳಲು ಇನ್ನೂ ಸಮಯ ಹಿಡಿಯುತ್ತದೆ.  ಈ ವರ್ಷವಂತೂ ನಾವೆಲ್ಲ, ಈಗಾಗಲೇ ಬಿಡುಗಡೆ ಹೊಂದಿರುವ ಸಿನಿಮಾಗಳನ್ನು ಆನ್‌ಲೈನ್ ಮಾಧ್ಯಮದಲ್ಲಿ ಮಾತ್ರ ನೋಡಿ ಖುಷಿ ಪಡಬೇಕು, ಅಷ್ಟೇ.

ಸಿನಿಮಾವನ್ನು ನಂಬಿಕೊಂಡು ಬದುಕಿದ ಕಲಾವಿದರಷ್ಟೇ ಅಲ್ಲ, ಅವರನ್ನು ಆದರಿಸಿದ ಅನೇಕ ಕುಟುಂಬ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ.  ಈ ವೇದನೆ ಕೇವಲ ರಾಜ್ಯ, ರಾಷ್ಟ್ರದ ಮಟ್ಟಿಗೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ.

ಒಳ್ಳೆಯ ಸಿನಿಮಾವನ್ನು ಮಾಡಲು ಮೊದಲೇ ಹಿಂಜರಿಯುತ್ತಿದ್ದ ನಿರ್ಮಾಪಕರುಗಳು ಬಂಡವಾಳವನ್ನು ತೊಡಗಿಸಲು ಹಿಂದೆ ಹೆಜ್ಜೆ ಇಡುತ್ತಾರೆ.  ಅವರನ್ನು ನಂಬಿಕೊಂಡು ಒಳ್ಳೆಯ ಕಥೆಯನ್ನು ಕೈಯಲ್ಲಿಟ್ಟುಕೊಂಡ ನಿರ್ದೇಶಕರ ತಂಡ ಮಂಕಾಗುತ್ತದೆ.  ಒಂದು ಉತ್ತಮ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನೇ ಹುಟ್ಟಿಸುವುದು ಕಷ್ಟವಾದಾಗ, ಕೆಲಸಗಾರರ ವೇತನ ಮತ್ತು ಕಲಾವಿದರ ಸಂಭಾವನೆಗಳಿಗೆ ಕತ್ತರಿ ಬೀಳುತ್ತದೆ. ಇದರಿಂದ ಹೊರಬರುವ ಸಿನಿಮಾಗಳ ಸಂಖ್ಯೆ ಮಿತಿಯಾಗುತ್ತದೆ.  ಕೊನೆಗೆ ಹೆಚ್ಚಿನ ಕಾರ್ಮಿಕ ವರ್ಗ, ಈಗಾಗಲೇ ನಲುಗಿರುವ ಕಲಾವಿದರ ನೋವು ಮುಗಿಲು ಮುಟ್ಟುತ್ತದೆ.

ಇದು ಒಂದು ರೀತಿಯ ಕಾಡ್ಗಿಚ್ಚಿನ ಅನುಭವವನ್ನು ಸೃಷ್ಟಿಸುತ್ತದೆ.  ಅದು ತನ್ನ ಹಾದಿಯಲ್ಲಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತದೆ.  ಕಲಾವಿದರ/ನಟ-ನಟಿಯರ ಮಾರ್ಕೆಟ್ಟುಗಳು ಕುಸಿಯತೊಡಗಿ, ಅವರು ತಮ್ಮ ಹೈ ಮೇಂಟೆನೆನ್ಸ್ ಜೀವನವನ್ನು ನಡೆಸುವುದು ದುಸ್ತರವಾಗುತ್ತದೆ.  ಕಲೆಯಿಂದ ಬದುಕೋ ಅಥವಾ ಬದುಕಿಂದ ಕಲೆಯೋ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗುತ್ತದೆ.

ಒಮ್ಮೆ ಕಾಡ್ಗಿಚ್ಚು ಬಂದಾದನಂತರ ಅಗ್ನಿ ಆವರಿಸಿದ ಜಾಗದಲ್ಲಿ ದೈತ್ಯ ವೃಕ್ಷಗಳು ದುತ್ತನೆ ರಾತ್ರೋ ರಾತ್ರಿ ಬಂದಿಳಿಯುವುದಿಲ್ಲ.  ಮತ್ತೆ ಜೀವನ ಸಣ್ಣಸಣ್ಣ ಗಿಡಗಳಿಂದ, ನೆಲದಲ್ಲಿ ಹುದುಗಿದ ಬೀಜಗಳು ಮುಂದಿನ ಮಳೆಗಾಲದಲ್ಲಿ ಮೊಳಕೆ ಒಡೆಯುವುದರಿಂದ ಆರಂಭವಾಗುತ್ತವೆ.  ಈ ಸಂದರ್ಭದಲ್ಲಿ ಹುಟ್ಟುವ ಗಿಡಗಳು ನಿಜವಾಗಿಯೂ ಪ್ರಕೃತಿಯ ವಿಕೋಪದಿಂದಷ್ಟೇ ಅಲ್ಲ, ಪ್ರಕೃತಿಯ ಪ್ರಯೋಗಾಲಯದಲ್ಲೂ ಸಹ ಜಯಿಸಿದಂತಹವು.  ರಾತ್ರೋ ರಾತ್ರಿ ನಾಯಿಕೊಡೆಗಳಂತೆ ನೂರಾರು ಏಳದೆ, ಎಷ್ಟೋ ಚದುರ ಹೆಕ್ಟೇರ್‌ಗಳಿಗೆ ಒಂದರಂತೆ ಬೃಹತ್ ವೃಕ್ಷಗಳು ಸಸಿಗಳಾಗಿ ಹುಟ್ಟಿ ಬೆಳೆದು ಮರವಾಗಲು ಮತ್ತೆ ನೂರು ವರ್ಷವಾದರೂ ಬೇಕಾಗುತ್ತದೆ.

ನಿಜ.  ಒಂದು ನೂರು ವರ್ಷಗಳಲ್ಲಿ ಏನು ಬೇಕಾದರೂ ಆಗಬಹುದು.  ಜೀವನಗತಿ ಬದಲಾದಂತೆ ಸಿನಿಮಾವೂ ಬದಲಾಗುತ್ತದೆ.  ಸಿನಿಮಾವನ್ನು ನಂಬಿ ಬದುಕುವ ಕುಟುಂಬಗಳು ಕಡಿಮೆಯಾಗುತ್ತವೆ.  ಸಮಾಜಕ್ಕೆ ಏನನ್ನಾದರೂ ಹೊಸತೊಂದನ್ನು ಕೊಡಬೇಕು ಎನ್ನುವ ಅತೀವ ತುಡಿತದ ನಿರ್ದೇಶಕ ಕಷ್ಟಸಾಧ್ಯವಾದರೂ ತನ್ನ ಗುರಿಯನ್ನು ಕಂಡುಕೊಳ್ಳುತ್ತಾನೆ.  ಆ ನಿಟ್ಟಿನಲ್ಲಿ ಮುಂದೆ ತೆರೆಕಾಣುವ ಚಿತ್ರಗಳು ಸಮಯದ ಸಮರದಲ್ಲಿ ಬೆಂದು, ಕಷ್ಟದಲ್ಲಿ ಪುಳಕಿತವಾಗಿ ಅರಳಿದ ಹೂಗಳಂತೆ ನಮಗೆಲ್ಲರಿಗೂ ಕಾಣಿಸಿಕೊಳ್ಳಬಹುದು.

ಬಿಲಿಯನ್ ಡಾಲರ್‌ ಬಂಡಾವಾಳದ ಬಿಸಿನೆಸ್ಸ್‌ನಿಂದ ಖ್ಯಾತರಾದ ಪ್ರಪಂಚದ ಕೆಲವೇ ಕೆಲವು ಕಂಪನಿಗಳು ಈ ಕಲಾವಿದರ, ತಂತ್ರಜ್ಞರ ರಕ್ತವನ್ನು ಕುಡಿಯದಿದ್ದರೆ ಸಾಕು!

Wednesday, April 29, 2020

ಅಕ್ಕಿ ಆರಿಸುವಾಗ...

ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್


 ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು.  ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು.  ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ.  ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.

ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ.  ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು


ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು.  ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ.     ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ.  ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ!  ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ.  ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು.  ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ.  ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು.  ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ.  ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ.  ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ.  ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.

ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|

ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ.  ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ.  ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ.  ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.


ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|

ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ.  ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ.  ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು

ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು  ಇರುತ್ತಿರಲಿಲ್ಲ.  ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ.  ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು.  ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು.  ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು.  ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.


ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|

ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ.  ಒಳಮನೆ ಹಾಗೂ ಆಡುಗೆ  ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು.  ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ.  ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ.  ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು

ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ.  ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.

ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|

ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ   ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ.  ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ.  ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ.  ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ.  ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

Thursday, May 01, 2008

ಮೊದಲು ಅಪ್ಪ-ಅಮ್ಮನಿಗೆ ಬುದ್ಧಿ ಹೇಳಿ!

ಬ್ರೂ ಕಾಫಿ ಸ್ವಾದ-ತಾಜಾತನದ ಬಗ್ಗೆ ಒಂದು ಕಮರ್ಷಿಯಲ್ ಅಡ್ವರ್‌ಟೈಸ್‌ಮೆಂಟು ಉದಯ ಟಿವಿಯಲ್ಲಿ ಬರುತ್ತೆ, ಅದರಲ್ಲಿ ನವದಂಪತಿಗಳನ್ನು ಅವರ ಮನೆಯಲ್ಲಿ ಸಂದರ್ಶಿಸಲೆಂದು ಹತ್ತಿರದ ಸಂಬಂಧಿಕರು ಬಂದಿರುತ್ತಾರೆ, ಆಧುನಿಕ ಉಡುಪಿನಲ್ಲಿರುವ ಯುವತಿ ಮನೆಯನ್ನು ಕಿಟಕಿಯಿಂದಲೇ ಪ್ರವೇಶ ಮಾಡಿ ಮನೆಗೆ ಬಂದವರ ಸಮಾಧಾನಕ್ಕೆ ಹಾಗೂ ಅವರಿಗೆ ಆಶ್ಚರ್ಯವಾಗುವಂತೆ ಕೂಡಲೇ ಟ್ರೆಡಿಷನಲ್ ಡ್ರೆಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ತೋರಿಸುತ್ತಾರೆ. ಕೈ ಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಬರುವುದು ಅದರ ಜೊತೆಗೆ ಸೇರಿರುತ್ತೆ. ಆ ವಿಡಿಯೋ ತುಣುಕಿನ ಸಂದೇಶವೇನೇ ಇರಲಿ, ದೂರದ ನನಗೆ ನಮ್ಮ ದೇಶದಲ್ಲಿನ ಗೊಂದಲ ಒಡನೆಯೇ ನೆನೆಪಿಗೆ ಬಂತು. ಅದೇ ನಮ್ಮಲ್ಲಿನ ಜನರೇಶನ್ ಗ್ಯಾಪ್.

ಇಂದಿನ ಕಾಲದಲ್ಲಿ ಹೈ ಸ್ಕೂಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರವನ್ನು ಶಾಲೆಯ ಆವರಣದಲ್ಲಿ ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ ನೋಟ. ಶಾಲೆ-ಕಾಲೇಜಿನವರೆಗೆ ತಮ್ಮ ದಿನನಿತ್ಯದ ಡ್ರೆಸ್‌ಗಳಲ್ಲಿ ಬಂದು, ಶಾಲೆಯು ಹತ್ತಿರ ಬಂದಾಗ ಸಮವಸ್ತ್ರವನ್ನು ಧರಿಸಿಕೊಳ್ಳುವುದು ಬೆಳಗ್ಗಿನಿಂದ ಸಂಜೆವರೆಗೆ ಹೈ ಸ್ಕೂಲು ಸಮವಸ್ತ್ರವನ್ನೇ ಧರಿಸಿ ತಿರುಗಾಡುತ್ತಿದ್ದ ನಮಗೆ ವಿಶೇಷವಾಗಿ ಕಾಣಿಸುವುದರಲ್ಲಿ ತಪ್ಪೇನು ಇಲ್ಲ.

***

ಹಿಂದಿನ ಸಂಬಂಧ-ಸೂಕ್ಷ್ಮತೆ ಲೇಖನ ಬರೆದ ಮೇಲೆ ಆ ಕುರಿತು ಮತ್ತಿನ್ನಷ್ಟು ಆಲೋಚಿಸಲಾಗಿ ಈ ನಡುವೆ ಕುಟುಂಬಗಳಲ್ಲಿ ಅಸಮಧಾನ ಏಕೆ ಹೊಗೆ ಆಡುತ್ತದೆ ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಕ್ಕ ಹಾಗಿದೆ. ಅದರಲ್ಲಿ ಪ್ರತಿಯೊಬ್ಬರೂ ಅವರವರ ತಂದೆ-ತಾಯಿ ಬಂಧು ಬಳಗದವರನ್ನು ಅದೆಷ್ಟರ ಮಟ್ಟಿಗೆ ತಿಳುವಳಿಕೆ ಹೇಳಿಕೊಡುತ್ತಾರೆ ಅದರ ಮೇಲೂ ಬಹಳಷ್ಟು ನಿರ್ಧರಿತವಾಗುತ್ತದೆ. ಈ ಕೆಳಗಿನ ನಿದರ್ಶನಗಳನ್ನು ಪರಿಶೀಲಿಸಿ ನೋಡಿ:

೧) ಇತ್ತೀಚಿನ ಚಿಕ್ಕ (nuclear) ಕುಟುಂಬಗಳಲ್ಲಿ ಗಂಡ-ಹೆಂಡತಿಯರು ತಮ್ಮ ತಮ್ಮಲ್ಲಿ ಏಕವಚನದಲ್ಲೇ ಸಂಭಾಷಣೆ ನಡೆಸುತ್ತಾರೆ.
೨) ಡಬಲ್ ಇನ್‌ಕಮ್ ಇರುವ ಕುಟುಂಬಗಳಲ್ಲಿ ಗಂಡ-ಹೆಂಡತಿಯ ಸಂಬಳದಲ್ಲಿ ಹೆಚ್ಚು ವ್ಯತ್ಯಾಸವಿರಬೇಕಿಲ್ಲ, ಹೆಂಡತಿಗೆ ಗಂಡನಿಗಿಂತ ಹೆಚ್ಚು ಸಂಬಳಬರುವ ಸಾಧ್ಯತೆಗಳೂ ಇವೆ.
೩) ಗಂಡ-ಹೆಂಡತಿಯರ ವಯಸ್ಸಿನಲ್ಲಿ ಹೆಚ್ಚಿನ ಅಂತರವಿರಬೇಕೆಂದೇನಿಲ್ಲ ಜೊತೆಗೆ ಅವರ ವಿದ್ಯಾರ್ಹತೆಯೂ ಒಂದೇ ಮಟ್ಟದಲ್ಲಿರಬಹುದು.

ಪ್ರತಿಯೊಂದು ಕುಟುಂಬದಲ್ಲಿಯೂ ಈ ಹೌಸ್‌ಹೋಲ್ಡ್ ಕಾಯಕಗಳು ಸಹಜವಾದವುಗಳು: ಅವೇ - ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆದು-ಒಣಗಿಸಿ-ಮಡಚಿಡುವುದು, ಮಕ್ಕಳಿದ್ದರೆ ಅವರ ಹೋಮ್‌ವರ್ಕ್ ಊಟ-ಉಪಚಾರದಲ್ಲಿ ತೊಡಗುವುದು, ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮ್ಯಾನೇಜ್ ಮಾಡುವುದು, ದಿನಕ್ಕೆರಡು ಬಾರಿಯಾದರೂ ಅಡಿಗೆ ಮನೆಯಲ್ಲಿನ ಕೆಲಸಗಳಿಗೆ (ಕುಕು, ಕ್ಲೀನ್, ಆರ್ಗನೈಜ್, ಇತ್ಯಾದಿ) ಆದ್ಯತೆ ಕೊಡುವುದು ಇತ್ಯಾದಿ. ಈ ಕೆಲಸಗಳು ಒಂದು ದಿನಕ್ಕೆ ಮಾತ್ರ ಬಂದು ಹೋಗುವಂಥದ್ದಲ್ಲ, ಇವುಗಳನ್ನು ಪ್ರತಿದಿನ, ಪ್ರತಿರಾತ್ರಿ ನಿರ್ವಹಿಸುತ್ತಲೇ ಇರಬೇಕು ಎಂಥ ಕುಟುಂಬವಾದರೂ. ದುಡ್ಡಿದ್ದವರು ಕೆಲಸದವರನ್ನು ನೇಮಿಸಿಕೊಂಡಿರಬಹುದು, ಆದರೆ ಕೆಲಸ ಮಾಡುವವರನ್ನು ನಿಭಾಯಿಸುವುದು ತಪ್ಪುವುದಿಲ್ಲ. ಅಂದರೆ ಮನೆ ಎಂದರೆ ಇಂತಿಷ್ಟು ಕೆಲಸಗಳು ಇದ್ದೇ ಇರುತ್ತವಾದ್ದರಿಂದ ಈ ಆಧುನಿಕ ಕುಟುಂಬಗಳ ಹೆಚ್ಚಿನ ಸಮಸ್ಯೆಯೇ ಈ ಕೆಲಸಗಳ ಹೂಡಿಕೆ-ಹಂಚಿಕೆಗಳಿಂದ ಎಂದರೆ ತಪ್ಪಾಗಲಾರದು. ಇಂಥದರ ನಡುವೆ ಅಥವಾ ಇಷ್ಟೆಲ್ಲಾ ಇದ್ದೂ, ಅದರ ಮೇಲೆ ಬರುವುದೇ "in-law" factor, ಅಥವಾ ಸಂಬಂಧಿಕರ ಉಪದ್ರವ! ದೂರದ ಅಮೇರಿಕೆಯಲ್ಲಿರುವ ನಮಗೆ ಸಂಬಂಧಿಕರಿಲ್ಲ ಎಂದು ಕೊರಗುವವರು ಒಂದು ಕಡೆ, ದಿನಕ್ಕೊಮ್ಮೆ ಒಬ್ಬರಲ್ಲ ಒಬ್ಬರು ಬರುತ್ತಾರಲ್ಲ ಎಂದು ಹಲಬುವ ಬೆಂಗಳೂರಿನ ದಂಪತಿಗಳು ಮತ್ತೊಂದು ಕಡೆ.

ಅದೇ "in-law" factor ಎಂದರೆ ತಮ್ಮ ಸಣ್ಣ ಕುಟುಂಬಕ್ಕೆ ಅವರವರ ತಂದೆ-ತಾಯಿಯರಿಂದಲೇ ಕಷ್ಟಗಳು ಬರುತ್ತವೆ ಎನ್ನುವ ಮಾತು. ಉದಾಹರಣೆಗೆ, ಗಂಡ-ಹೆಂಡತಿ ಇಬ್ಬರೂ ಸಮವಯಸ್ಕ, ಸಮಾನ ಅಭಿರುಚಿ, ಸಮಾನ ವಿದ್ಯಾರ್ಹತೆ, ಸಮಾನ ಕೆಲಸದಲ್ಲಿದ್ದಾರೆಂದುಕೊಳ್ಳೋಣ. ಹುಡುಗನ ತಂದೆ ತಾಯಿಯರು ಈ ನವದಂಪತಿಗಳಿರುವ ಗೂಡಿಗೆ ದೂರದ ಊರಿನಿಂದ ಬಂದರೆಂದುಕೊಂಡರೆ ಅಲ್ಲಿ ತನ್ನ ಅತ್ತೆ-ಮಾವಂದಿರ ಉಪಚಾರವನ್ನು ಈ ಹುಡುಗಿಯೇ ಕೈಗೊಳ್ಳಬೇಕೆ, ಅದು ಎಷ್ಟರ ಮಟ್ಟಿನ ನಿರೀಕ್ಷೆಯಾಗಿರಬೇಕು ಎನ್ನುವುದು ಒಳ್ಳೆಯ ಪ್ರಶ್ನೆ. ಅದೇ ಮನೆಗೆ ಹುಡುಗಿಯ ತಂದೆ-ತಾಯಿಯರು ಬಂದರೆಂದುಕೊಂಡರೆ ಹುಡುಗನಿಂದ ಅವರು ಏನೇನನ್ನು ನಿರೀಕ್ಷಿಸಬಹುದು? ನಮ್ಮ ಸಮಾಜ ಇನ್ನೂ ಪುರುಷ-ಪ್ರಧಾನವಾದುದು ಎನ್ನುವ ಉತ್ತರ ನಾವಂದುಕೊಂಡಷ್ಟು ಪ್ರಬಲವಾಗಿ ಇಲ್ಲಿ ಸಹಾಯ ಮಾಡೋದಿಲ್ಲ. ಆ ಮನೆಯ ಹುಡುಗಿಗೂ ತಕ್ಕ ಕೆಲಸ, ಡೆಡ್‌ಲೈನುಗಳು, ಜವಾಬ್ದಾರಿ ಮುಂತಾದವುಗಳೆಲ್ಲ ಇದ್ದಾಗ ತನ್ನ ತಂದೆ-ತಾಯಿಯರಿಗೆ ತನ್ನ ಕೈಯಾರೇ ತಾನೇ ಮಗ ಒಂದು ಕಪ್ ಕಾಫಿ ಮಾಡಿಕೊಟ್ಟ ಎಂದೇ ಇಟ್ಟುಕೊಳ್ಳಿ ಆ ತಂದೆ-ತಾಯಿ ಅದನ್ನು ನೋಡುವ ರೀತಿಯೇ ಬೇರೆ. ಕೆಲಸಕ್ಕೆ-ಸಂಬಳಕ್ಕೆ-ಸ್ಟೇಟಸ್ಸಿಗೆ ಮಾತ್ರ ಹೆಂಡತಿ ಎಂದುಕೊಂಡರೆ ಆದೀತೆ? ಇಂತಹ ಸಮಯದಲ್ಲೇ ನಾನು ಆ ಹುಡುಗ ತನ್ನ ತಂದೆ-ತಾಯಿಯರ ನಿರೀಕ್ಷೆಗೆ ತಕ್ಕ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳಬೇಕು ಎನ್ನುವುದು. ಡಬಲ್ ಇನ್‌ಕಮ್ ಕುಟುಂಬಗಳಲ್ಲಿನ ಜವಾಬ್ದಾರಿಗಳು ತಕ್ಕಮಟ್ಟಿಗೆ ಡಿವೈಡ್ ಆಗಿ ಒಬ್ಬರಿಗೊಬ್ಬರು ಪೂರಕವಾಗಿ ನಡೆದುಕೊಳ್ಳುವುದೇ ಉತ್ತರ ಹೊರತು ಹೊರಗಿನ ಸಮಾಜಕ್ಕೆ (ತಮ್ಮ ತಂದೆ-ತಾಯಿ ಕುಟುಂಬದವರನ್ನೂ ಸೇರಿ) ತಕ್ಕಂತೆ ನಡೆಯುತ್ತೇವೆ ಎಂದುಕೊಳ್ಳುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನು?

ನಮ್ಮಲ್ಲಿ ಸಣ್ಣ-ಸಣ್ಣ ವಿಷಯಗಳೂ ದೊಡ್ಡದಾಗಿ ಬೆಳೆದುಕೊಳ್ಳಲು ಬೇಕಾದ ರೀತಿಯ ವಾತಾವರಣ ಇರುತ್ತೆ. ಈ ಉದಾಹರಣೆಯನ್ನು ನೋಡಿ: ನನಗೆ ಗೊತ್ತಿರುವ ಯುವ ದಂಪತಿಗಳು ತಮ್ಮ ತಮ್ಮನ್ನು ಏಕವಚನದಲ್ಲೇ ಸಂಬೋಧಿಸಿಕೊಳ್ಳೋದು - ಅಂದರೆ ಹೋಗೋ-ಬಾರೋ ಎಂಬ ರೀತಿಯಲ್ಲಿ. ಒಬ್ಬೊರಿಗೊಬ್ಬರು ಅನ್ಯೋನ್ಯವಾಗಿರುವ ಅವರು ತಮ್ಮನ್ನು ಪ್ರೀತಿಯಿಂದ ಈ ಸಂಬೋಧನೆಗೆ ಹೊಂದಿಸಿಕೊಂಡಿದ್ದಾರೆ ಅಷ್ಟೇ. ಅದೇ ದಂಪತಿಗಳು ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದಾಗಲೂ ತಮ್ಮ ಸಂಬಂಧಿಕರ ನಡುವೆಯೂ ತಮ್ಮನ್ನು ಹೀಗೇ ಕರೆದುಕೊಳ್ಳುತ್ತಾರಷ್ಟೇ. ಅಕಸ್ಮಾತ್ ಅವರು ತಮ್ಮತಮ್ಮ ತಂದೆತಾಯಿಯರ ನಡುವೆ "ಏನ್ರೀ-ಬನ್ರೀ" ಪ್ರಯೋಗಕ್ಕೆ ತೊಡಗಿಕೊಂಡರೆಂದರೆ ಹೇಗಿರಬಹುದು? ನೆರೆಹೊರೆಗೆ ಹೊಂದಿಕೊಂಡಿರುವುದೋ ಅಥವಾ ತಮಗೆ ಬೇಕಂತೆ ನಡೆದುಕೊಳ್ಳುವುದೋ ಎನ್ನುವ ಪ್ರಶ್ನೆ ಬರುತ್ತದೆ. ನನ್ನ ಅನಿಸಿಕೆ ಪ್ರಕಾರ, ಯುವ-ದಂಪತಿಗಳು ಈ ನಿಟ್ಟಿನಲ್ಲೂ ತಮ್ಮ ಹಿರಿಯರಿಗೆ ತಿಳಿಹೇಳುವ ಅಗತ್ಯವಿದೆ.

***

ಮೊನ್ನೆ ಯಾರೋ ಹೇಳೋದನ್ನು ಕೇಳಿದೆ - ’ನಮ್ಮ ಮಗ ಅಮೇರಿಕಕ್ಕೆ ಇದಷ್ಟೇ ಬಂದಿದ್ದಾನೆ, ಅವನಿಗೊಂದು ಭಾರತೀಯ ಮೂಲದ ಅಮೇರಿಕನ್ ಸಂಜಾತೆಯೊಡನೆ ಮದುವೆ ನಿಶ್ಚಯವಾಗಿದೆ, ಆದರೆ ನಮ್ಮದು ಒಂದೇ ಒಂದು ಕಂಡೀಷನ್ ಎಂದರೆ ಇನ್ನೈದು ವರ್ಷಗಳ ನಂತರ ಅವರಿಬ್ಬರೂ ಪರ್ಮನೆಂಟ್ ಆಗಿ ಭಾರತಕ್ಕೆ ಹಿಂದಿರುಗಿಬಿಡಬೇಕು!’. ನನ್ನ ಮನಸ್ಸಿನಲ್ಲಿ, ’ಏಕೆ?’ ಎನ್ನುವ ಪ್ರಶ್ನೆ ಬಂದು ಹಾಗೇ ಉಳಿದುಹೋಯಿತು.

ನಮಗೆಲ್ಲ ೨೪ ವರ್ಷವಾಗುವವರೆಗೆ ಫುಲ್‌ಟೈಮ್ ಓದಿಸುವವರೆಗೆ ನಮ್ಮ ನಮ್ಮ ಪೋಷಕರು ಸಹಾಯ ಮಾಡಿದ್ದಾರೆ ನಿಜ. ನಮಗೆಲ್ಲ ಜಾತಿ-ಜಾತಕಗಳ ಬಂಧನಕ್ಕೆಳೆದು ಅವರ ಮನಸ್ಸಿಗೆ ಸಮಾಧಾನವಾಗುವಂತೆ ವಿವಾಹ ಮಾಡಿದ್ದಾರೆ ನಿಜ. ಇದೇ ಪೋಷಣೆ ಸಾಯುವವರೆಗೂ ನಮ್ಮನ್ನು ಕಾಯಬೇಕೇಕೆ? ನಮ್ಮ ಪೋಷಕರು ನೋಡಿರದ ಅಮೇರಿಕಕ್ಕೆ ನಾವು ಬಂದಿರೋದು, ಇನೈದು ಹತ್ತು ಇಪ್ಪತ್ತು ವರ್ಷಗಳಲ್ಲಿ ಈ ಹುಡುಗ-ಹುಡುಗಿಯ ಪ್ರಬುದ್ಧತೆ ಬದಲಾಗುತ್ತೆ, ಅವರಿಗೂ ಒಂದು ಕುಟುಂಬವಿರುತ್ತೆ, ಮೇಲಾಗಿ ಜವಾಬ್ದಾರಿ ಇರುತ್ತೆ, ಅದರ ನಡುವೆ ಇನ್ನೈದು ವರ್ಷಗಳಲ್ಲಿ ’ಭಾರತಕ್ಕೆ ಹಿಂತಿರುಗಿ’ ಎಂದು ಆಜ್ಞೆ ಮಾಡಲು ಇವರ ಹಿನ್ನೆಲೆ ಏನಿರಬಹುದು? ಸರಿ, ಆ ಅಮೇರಿಕನ್ ಸಂಜಾತೆ ಹೆಣ್ಣಿಗೆ ಇವರ ಬಾಯಿ ನೀರೂರುವ ಇಡ್ಲಿ-ದೋಸೆಯನ್ನು ಮಾಡಲು ಬಾರದಿದ್ದರೆ ಅದು ಆಕೆಯ ತಪ್ಪೇ? ನಮ್ಮಲ್ಲಿ ಒಂದು ಗಾದೆ ಮಾತಿದೆ, ಅಕ್ಕನೂ ಉಳಿಯಲಿ ಅಕ್ಕಿಯೂ ಉಳಿಯಲಿ ಎಂದರಾಗದು. ಅತ್ತೆ-ಮಾವಂದಿರನ್ನು ಮೆಚ್ಚಿಸಿಕೊಂಡು ಗಂಡನ ಸಮಸಮಕ್ಕೆ ಕೆಲಸವನ್ನೂ ಮಾಡಿಕೊಂಡು ಮನೆಯಲ್ಲಿ ಮತ್ತೆ ಹೊರಗೆ "ತಗ್ಗಿ-ಬಗ್ಗಿ" ನಡೆಯುವ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಇಟ್ಟುಕೊಂಡರಾದರೆ ಅದು ಅನಿರೀಕ್ಷಿತ ಪ್ರತಿಫಲವನ್ನು ತಂದುಕೊಡಬಹುದು.

ಇಷ್ಟೇ ಅಲ್ಲದೆ, ಹಣ ಕಾಸಿನ ದೃಷ್ಟಿಯಿಂದಲೂ ಬೇಕಾದಷ್ಟು ಸಂಕಷ್ಟಗಳು ಬಂದೊದಗುವುದು ಸಹಜ. ತಮ್ಮ ಮಗ ತಮ್ಮನ್ನು ಇಳಿವಯಸ್ಸಿನಲ್ಲಿ ಸಲಹಲಿ ಎಂದು ಆಶಿಸುವ ಅಪ್ಪ-ಅಮ್ಮ ಅದೇ ರೀತಿ ತಮ್ಮ ಮನೆಯ ಸೊಸೆಗೂ ಹಾಗೇ ಜವಾಬ್ದಾರಿ ಇರಬಹುದು ಎನ್ನುವುದನ್ನು ನೋಡಲಾರರೇಕೆ? ತನ್ನ ತಂದೆಯ ಆಸ್ತಿಯಲ್ಲಿ ತನ್ನ ಸಹೋದರರ ಸಮಸಮಕ್ಕೆ ಪಾಲು ಕೇಳುವಂತೆ ಕಾನೂನೇ ಇದ್ದಾಗ ಗಂಡು ಮಕ್ಕಳ ಸಮಕ್ಕೆ ಹೆಣ್ಣು ಮಕ್ಕಳೂ ಅವರರವರ ಹೆತ್ತವರನ್ನು ನೋಡಿಕೊಂಡರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಎನ್ನುವ ಗಾದೆ ಮಾತಿನ ಮೊರೆ ಏಕೆ ಹೋಗಬೇಕು?

ಹೀಗೆ...ಈ ವಿಷಯವನ್ನು ಕುರಿತು ಬೇಕಾದಷ್ಟು ಬರೆಯಬಹುದು, ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ ಎಂದೆನಿಸಿದ್ದು ಈ ಹೊತ್ತಿನ ತತ್ವಗಳಲ್ಲೊಂದು!