Monday, May 22, 2006

ನ್ಯೂ ಯಾರ್ಕ್ ನಗರದ ಕೆಲವು ನೆನಪುಗಳು





ಇತ್ತೀಚೆಗೆ ನ್ಯೂ ಯಾರ್ಕ್ ನಗರದಿಂದ ಹೊರವಲಯಕ್ಕೆ ನಮ್ಮ ಅಫೀಸು ಸ್ಥಳಾಂತರವಾಯಿತು. ೨೦೦೩ ರಿಂದ ೨೦೦೬ ರ ಏಪ್ರಿಲ್‌ವರೆಗೆ ನ್ಯೂ ಯಾರ್ಕ್ ನಗರದಲ್ಲಿ ಕೆಲಸ ಮಾಡಿ ಛಳಿ, ಮಳೆ, ಹಿಮ, ಹಾಗೂ ಬಿಸಿಲಿನಲ್ಲಿ ಈ ಮಹಾನಗರಿ ಹಲವು ರೀತಿಯಲ್ಲಿ ಕಂಡಿದೆ, ಹಾಗೆ ಕಂಡು ಬಂದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದರೆ ಹೇಗೆ ಎನಿಸಿತು.

***

ನಾನು ಇಲ್ಲಿಗೆ ಬರುವ ಮುನ್ನ ಬಾಂಬೆಯಲ್ಲಿ ಮೂರ್ನಾಲ್ಕು ತಿಂಗಳು ಇದ್ದವನು, ಅಲ್ಲಿಯ ಜನಸಂದಣಿ, ವ್ಯಸ್ತ ಜೀವನ, ಆಧುನಿಕತೆ ಇವುಗಳಿಗೆಲ್ಲ ಆಗಲೇ ಪರಿಚಯವಾಗಿ 'ಓಹ್' ಎನ್ನುವಂತಾಗಿತ್ತು. ಆದರೂ ಬಾಂಬೆ ಮಹಾನಗರಿಯಷ್ಟು ನಿಗೂಢವಾಗಿ ನನಗೆ ನ್ಯೂ ಯಾರ್ಕ್ ಎಂದಿಗೂ ಕಂಡದ್ದಿಲ್ಲ. ಅಲ್ಲಿಯ ಚರ್ಚ್ ಗೇಟ್, ಬೀಚು ಏರಿಯಾಗಳಲ್ಲಿ ತಿರುಗಾಡಿ ಸ್ನೇಹಿತರೊಡನೆ ಹರಟೆ ಹೊಡೆದಿದ್ದಿದೆ, ಚಿತ್ತಾಲರು ಇದನ್ನೇ ನೋಡಿ ಬರೆದಿದ್ದೇನೋ ಎಂದು ಹಲವು ಪ್ರತಿಮೆಗಳನ್ನು ಊಹಿಸಿಕೊಂಡಿದ್ದಿದೆ, ಆಗಿನ ನೂರು-ನೂರೈವತ್ತು ರೂಪಾಯಿ ಕೊಟ್ಟು ಒಂದು ಸಿನಿಮಾ ನೋಡುವ ಗತ್ತೂ, ಇಪ್ಪತ್ತೈದು ರೂಪಾಯಿ ಕೊಟ್ಟು ಒಂದು ಪ್ಲೇಟು ಇಡ್ಲಿ ತಿನ್ನುವ ಗಮ್ಮತ್ತೂ ಈ ನ್ಯೂ ಯಾರ್ಕ್ ನಗರದಲ್ಲಿ ನನಗೆಂದೂ ಬಂದಿದ್ದಿಲ್ಲ. ಆದರೆ, ನ್ಯೂ ಯಾರ್ಕ್ ನಗರ ತನ್ನದೇ ಆದ ವಿಶೇಷ ರೀತಿಯಲ್ಲಿ ನಾನು ಇನ್ನೆಂದೂ ಮರೆಯಲಾರದಂತೆ ನನ್ನ ಮನಸ್ಸಿನಲ್ಲಿ ಛಾಪು ಒತ್ತಿ ಬಿಟ್ಟಿದೆ - ಹೇಳಿಕೊಳ್ಳುವಂತಹ ಯಾವ ಒಳ್ಳೆಯ ಹಾಗೂ ಕೆಟ್ಟ ಅನುಭವಗಳು ಇಲ್ಲದಿದ್ದರೂ, ನನ್ನ ಇಂದಿನ ಪ್ರಬುದ್ಧತೆಯಲ್ಲಿ ಈ ಮಹಾನಗರಿಯಿಂದ ಕಲಿತದ್ದು ಬಹಳ.



ನನ್ನ ಸ್ನೇಹಿತ ಗಾರ್‌ಫೀಲ್ಡ್ ನ್ಯೂ ಯಾರ್ಕ್ ನಗರವನ್ನು ಹಗಲೂ ಮತ್ತು ರಾತ್ರೆಯೂ ಕಂಡವನು, ಅವನು ಹೇಳೋ ಪ್ರಕಾರ 'ಮಧ್ಯ ರಾತ್ರಿಯಿಂದ ಮುಂಜಾನೆ ವರೆಗೆ ಈ ನಗರ ಹಲವಾರು ಟ್ರಾನ್ಸ್‌ಫರ್ಮೇಷನ್ ಗೊಳಪಡುತ್ತೆ' ಎನ್ನುವುದನ್ನು ಹಲವಾರು ಸ್ವಾರಸ್ಯಕರವಾದ ನಿದರ್ಶನಗಳ ಮೂಲಕ ನನ್ನಲ್ಲಿ ಹಂಚಿಕೊಂಡಿದ್ದಾನೆ, ಆತನಿಗೆ ನಮ್ಮ ಕಂಪನಿಯಲ್ಲಿ ಕೆಲವು ವರ್ಷಗಳ ಹಿಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ಅವನು 'ರಾತ್ರಿ ಬೇರೆ ಮುಖವನ್ನು ಹೊತ್ತುಕೊಳ್ಳುವ' ನಾನು ಕಾಣದ ನ್ಯೂ ಯಾರ್ಕ್ ನಗರವನ್ನು ಕಂಡಿದ್ದಾನೆ. ಅವನ ಜೊತೆಯಲ್ಲಿ ಕಾರಿನಲ್ಲಿ ಕುಳಿತು ಎಷ್ಟೋ ಬಾರಿ ಆಫೀಸಿಗೆ ಹೋಗಿ ಬಂದ ಸಂದರ್ಭಗಳಲ್ಲಿ 'ನಿನಗೆ ಗೊತ್ತೇ, ನಾವು ಈ ದೊಡ್ಡ ನಗರದಲ್ಲಿ ಸಣ್ಣ ಧೂಳಿನ ಕಣಕ್ಕಿಂತಲೂ ಚಿಕ್ಕವರು!' ಎಂದು ಈ ನಗರದಲ್ಲಿ ಬೆಳೆದು ಶಾಲೆಗೆ ಹೋಗಿ ಮುಂದೆ ಇಲ್ಲೇ ಕೆಲಸಕ್ಕೆ ಸೇರಿಕೊಂಡರೂ ಈಗಷ್ಟೇ ನ್ಯೂ ಯಾರ್ಕಿಗೆ ಬಂದವನೇನೋ ಎಂಬಂತೆ - ಮೋಡವಿರದ ರಾತ್ರಿಯಲ್ಲಿ ಮೇಲೆ ಕಾಣುವ ನಕ್ಷತ್ರಗಳನ್ನು ಅಣಗಿಸುವಂತೆ ಅಲ್ಲಲ್ಲಿ ಕಾಣುವ ಪ್ರಜ್ವಲಿಸುವ ನಿಯಾನ್ ದೀಪಗಳನ್ನೂ, ಹುಚ್ಚಿಯಂತೆ ಸದಾ ತಲೆಯನ್ನು ಕೆದರಿಕೊಂಡೇ ಇರುವ ಟೈಮ್ಸ್ ಸ್ಕ್ವಯರನ್ನೂ ಕಂಡು ಸಂತಸಪಡುತ್ತಾನೆ.


ನ್ಯೂ ಯಾರ್ಕ್ ನಗರದಲ್ಲಿ ಈಗಿರುವ ಬಿಲ್ಡಿಂಗುಗಳಲ್ಲಿ ಅತಿ ಎತ್ತರವಾದದ್ದು ಎಂಪೈರ್ ಸ್ಟೇಟ್ ಬಿಲ್ಡಿಂಗ್, ನಮ್ಮ ಆಫೀಸಿನಲ್ಲಿ ಮೂವತ್ತ ಮೂರನೇ ಫ್ಲೋರಿನಲ್ಲಿರುವ ಕ್ಯಾಫೆಟೇರಿಯಾದಿಂದ ಈ ಕಟ್ಟಡದ ಅತ್ಯಂತ ಸುಂದರವಾದ ಚಿತ್ರ ಸಿಗುತ್ತದೆ, ನಾನು ಪ್ರತೀ ಸಾರಿ ಟ್ರೈನ್ ನಿಲ್ದಾಣದಿಂದ ಹೊರಕ್ಕೆ ಬಂದವನೇ ಈ ಕಟ್ಟಡವನ್ನು ತಲೆ ಎತ್ತಿ ನೋಡುತ್ತೇನೆ, ಅದು ತನ್ನದೇ ಆದ ಗಂಭೀರತೆಯಲ್ಲಿ ತನ್ನ ಮೈ ಮೇಲೆ ಬಿದ್ದ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವುದರ ಮೂಲಕ ಇಂದಿನ ಹವಾಮಾನ ಮುನ್ಸೂಚನೆಯನ್ನು ಸೂಕ್ಷ್ಮವಾಗಿ ನೀಡಿದರೂ ಅವರವರ ಭಾವಕ್ಕೆ ತಕ್ಕಂತೆ ಒಂದಲ್ಲ ಒಂದು ರೀತಿಯ ಅರ್ಥಗಳಿಗೆ - ಕೆಲವೊಮ್ಮೆ ಸರಳವಾಗಿಯೂ ಹಾಗೂ ಅಷ್ಟೇ ನಿಗೂಢವಾಗಿಯೂ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಹೆರಾಲ್ಡ್ ಸ್ಕ್ವಯರ್‌ನ ಸುತ್ತಮುತ್ತಲೂ ಎಷ್ಟು ಹೊತ್ತಿಗೆ ಹೋದರೂ ಒಬ್ಬರಲ್ಲ ಒಬ್ಬರು ಈ ಕಟ್ಟಡದ ಫೋಟೋ ತೆಗೆಯುತ್ತಿರುತ್ತಾರೆ, ಇಂಥಹ ಕಟ್ಟಡದ ದಿವ್ಯ ನಿಲುವು ನೋಡುಗರ ಕಣ್ಣುಗಳಲ್ಲಿ ಪ್ರತಿಫಲಿಸಿ, ಅವರ ಅರಳುವ ಮುಖಗಳನ್ನು ಕಾಣುವ ನನ್ನ ಭಾಗ್ಯ ಇನ್ನಿಲ್ಲವಲ್ಲಾ ಎಂದು ಎಷ್ಟೋ ಸಾರಿ ಬೇಸರವಾಗಿದೆ. ಒಂದೆರಡು ತಿಂಗಳುಗಳ ಹಿಂದೆ ಕ್ಯಾಫೆಟೇರಿಯಾವನ್ನು ಇನ್ನೇನು ಮುಚ್ಚಿ ಬಿಡುತ್ತಾರೆ ಎಂದು ನಾವೆಲ್ಲರೂ ಕಾಫಿ ಕುಡಿಯುತ್ತಾ ಕುಳಿತಿದ್ದೆವು, ಎಲ್ಲರೂ ಅವರವರಿಗೆ ಬೇಕಾದ ದಿಕ್ಕಿನಲ್ಲಿ ಕುಳಿತು ಹೊರಗಡೆ ನೋಡುತ್ತಾ ಮಾತಿಗೆ ಶುರುಮಾಡಿಕೊಂಡಿದ್ದೆವು, ನಾನು ಎಂಪೈರ್ ಸ್ಟೇಟ್ ಬಿಲ್ಡಿಂಗಿನ ಕಡೆಗೆ ನೋಡಿದೆ, ನಾನಿದ್ದ ಮೂವತ್ತ ಮೂರನೇ ಮಹಡಿಯಿಂದ ಈ ಕಟ್ಟಡವನ್ನು ನನ್ನ ಕಣ್ಣಿನ ನೇರದಲ್ಲಿ ನೋಡಿದಾಗ ನಾನು ಆ ಕಟ್ಟಡದ ಕಾಲು ಭಾಗಕ್ಕೂ ಬರುತ್ತಿರಲಿಲ್ಲ, ದಿನವೂ ರಸ್ತೆಯಲ್ಲಿ ಕಾಣುತ್ತಿದ್ದ ಆ ನೋಟಕ್ಕೂ, ಮೂವತ್ತ ಮೂರನೇ ಮಹಡಿಯ ಈ ನೋಟಕ್ಕೂ ಬಹಳ ವ್ಯತ್ಯಾಸವಿತ್ತು, ನನ್ನ ಜೊತೆಯವರಿಗೆಲ್ಲ ತೋರಿಸಿದೆ, ಅವರೆಲ್ಲರೂ ಹೌದುಹೌದೆಂದರು. ಅಲ್ಲದೇ ಐದು ಅಥವಾ ಆರನೇ ಅವೆನ್ಯೂಗಳ ಆಜೂಬಾಜಿನಲ್ಲಿ ನಿಂತು ನೋಡಿದರೆ ಈ ಕಟ್ಟಡ ಅತಿ ಎತ್ತರವಾದದ್ದು ಎಂದು ಅನ್ನಿಸುವುದೇ ಇಲ್ಲ - ಅಂದರೆ ನಮ್ಮ ನಡುವಿನಲ್ಲಿದ್ದ ಎತ್ತರವಾದದ್ದನ್ನು ನಾವು ಕಂಡು ಅನುಭವಿಸುವಾಗ ಒಂದೇ ಅದರಿಂದ ಕೊಂಚ ದೂರವಿದ್ದೋ, ಇಲ್ಲಾ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಏರಿಯೋ ನೋಡಿದರೆ ಅಷ್ಟು ಒಳ್ಳೆಯದು ಎಂದುಕೊಂಡೆ.

***



ನಮ್ಮ ಊರಿನಲ್ಲಿ ದೇವಸ್ಥಾನಕ್ಕೆ ಹೂವು ಕೊಟ್ಟು ಬರುತ್ತಿರುವಾಗಲೋ, ಬಾವಿಗೆ ಹೋಗಿ ನೀರು ತರುತ್ತಿರುವಾಗಲೋ ಹಾಡುಗಳನ್ನು ಗುನುಗಿಕೊಂಡೇ ಓಡಾಡುತ್ತಿದ್ದವನು ನಾನು. ಪ್ರತೀ ದಿನ ನ್ಯೂ ಯಾರ್ಕ್ ನಗರದಲ್ಲಿ ಆಫೀಸಿನಿಂದ ಮನೆಗೆ ಬರುವಾಗ ಹತ್ತು ನಿಮಿಷದ ಹಾದಿ ನಡೆಯುವುದಕ್ಕಿತ್ತು - ಆರನೇ ಅವೆನ್ಯೂವಿನಲ್ಲಿ ಬ್ರಯಾಂಟ್ ಪಾರ್ಕಿನ ಮುಂದೆ ೪೨ನೇ ರಸ್ತೆಯಿಂದ ಶುರುಮಾಡಿ ೩೩ರವರೆಗೆ ನಡೆಯುವ ಈ ಹಾದಿಯಲ್ಲಿ, ನನ್ನ ಸುತ್ತ ಮುತ್ತಲೂ ಸಮರೋಪಾದಿಯಲ್ಲಿ ಜನರು ನಡೆಯುತ್ತಿದ್ದರೂ, ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್‌ಗಳಿಗೆ ಕಾಯುತ್ತಾ ನಡೆಯುವವರ ಮಧ್ಯೆ ನಿಂತಿರುತ್ತಿದ್ದರೂ ಮನದಲ್ಲಿ ಸದಾ ಯಾವುದಾದರೊಂದು ಹಾಡು ಗುನುಗುತ್ತಿದ್ದೆ, ಮೂಡಿಗೆ ತಕ್ಕಂತೆ, ವಾತಾವರಣಕ್ಕೆ ತಕ್ಕಂತೆ, ಆಫೀಸು ಬಿಡುವುದಕ್ಕಿಂತ ಮುಂಚೆ ಓದಿದ ವಿಷಯಗಳು ನನ್ನ ಮೇಲೆ ಮಾಡಿದ ಪರಿಣಾಮಕ್ಕೆ ತಕ್ಕಂತೆ ಯಾವುದಾದರೊಂದು ಸಿನಿಮಾ ಹಾಡೋ, ಭಾವಗೀತೆಯೋ, ಕೆಲವು ಜನಪದಗೀತೆಗಳೋ ಮನದಲ್ಲಿ ಬಂದು, ೧೦ ಬ್ಲಾಕುಗಳನ್ನು ದಾಟುವವರೆಗೆ ಮನದಲ್ಲಿ ಮೂಡಿ ಮರೆಯಾಗುತ್ತಿದ್ದವು. ಅಪರೂಪಕ್ಕೊಮ್ಮೆ ಯಾವ ಭಾಷೆಯಲ್ಲಿನ ಹಾಡೂ ಬರದೆ ಬರೀ ಆಲಾಪನೆ ಬಂದದ್ದಿದೆ, ಕೆಲವೊಮ್ಮೆ ಯಾವ ಸದ್ದೂ ಬರದೆ 'ನಾಳೆಯ ಚಿಂತೆ' ಮುತ್ತಿಕೊಂಡಿದ್ದಿದೆ. ನಾನು ಹಾಡು ಗುನುಗಿಕೊಂಡು ಹತ್ತು ಬ್ಲಾಕುಗಳನ್ನು ಕ್ರಮಿಸುವ ದೂರದಷ್ಟು ಸಮಯ, ಸುಮಾರು ೮ ರಿಂದ ೧೦ ನಿಮಿಷಗಳ ಕಾಲ ನನ್ನದೊಂದು ಪ್ರಪಂಚವೇ ತೆರೆದುಕೊಳ್ಳುತ್ತಿತ್ತು, ಹೀಗೆ ಎಲ್ಲೇ ಹೋದರೂ ಎಲ್ಲೇ ಬಂದರೂ ನನ್ನದೊಂದು ಪ್ರಪಂಚದಲ್ಲಿ ಮುಳುಗಿಕೊಳ್ಳಲು ಹಾಡುಗಳು ನನಗೆ ನೆರವಾಗಿವೆ, ಈಗಂತೂ ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತೇನಾದ್ದರಿಂದ ಮಧ್ಯೆ-ಮಧ್ಯೆ ಟ್ರಾಫಿಕ್ಕಿನಿಂದ ತಲೆ ಚಿಟ್ಟುಹಿಡಿದರೂ ನನ್ನ ಪ್ರಪಂಚ ಸ್ವಲ್ಪ ವಿಸ್ತಾರಗೊಂಡಿದೆ - ಆದರೂ ನ್ಯೂ ಯಾರ್ಕ್ ನಗರದಲ್ಲಿ ಹಾಡನ್ನು ಗುನುಗಿಕೊಂಡು ಓಡಾಡುತ್ತಿದ್ದ ದಿನಗಳು ಇನ್ನಿಲ್ಲವಲ್ಲ ಎಂದೂ ಬೇಸರವಾಗುತ್ತದೆ. ಆದರೆ ಒಂದು ಆಶ್ಚರ್ಯವೆಂದರೆ ಹೀಗೆ ನಡೆಯುವಾಗ ಗುನುಗಿಕೊಳ್ಳುತ್ತಿದ್ದ ಹಾಡುಗಳು ನಾನು ಟ್ರೈನನ್ನು ಹತ್ತಿ ಮನೆಗೆ ಬಂದ ಮೇಲೆ ಅಷ್ಟು ಸುಲಭವಾಗಿ ನೆನಪಿಗೆ ಬರುವುದಿಲ್ಲ, ಬಂದರೂ ಅವು ಬಂದಷ್ಟು ವೇಗದಲ್ಲೇ ಹಾರಿ ಹೋಗಿ ಬಿಡುತ್ತವೆ!

***

ವರ್ಲ್ಡ್ ಟ್ರೇಡ್ ಸೆಂಟರ್ ಇದ್ದ ಜಾಗಕ್ಕೆ ಆಗಾಗ್ಗೆ ನಮ್ಮ ಮನೆಗೆ ಬಂದ ಅತಿಥಿಗಳನ್ನು ಕರೆದುಕೊಂಡು ಹೋಗುತ್ತಿರುತ್ತೇನೆ, ನಾನು ಮೊಟ್ಟ ಮೊದಲ ಸಲ ಬರಿದಾದ ಸ್ಥಳವನ್ನು ನೋಡಿದಾಗ ಒಂದು ರೀತಿಯ ಡಿಪ್ಪ್ರೆಷನ್ನಿಗೆ ಒಳಗಾಗಿದ್ದೆ, ಅಂದಿನಿಂದ ಯಾರೇ ಬಂದರೂ 'ನೀವೆ ಹೋಗಿ ನೋಡಿಕೊಂಡು ಬನ್ನಿ' ಎಂದು ನಾನು ದೂರವೇ ಉಳಿಯುತ್ತೇನೆ. ಹೋದವಾರ ಈ ಸ್ಥಳಕ್ಕೆ ಅಂಟಿಕೊಂಡೇ ಇರುವ ವೆಷ್ಟ್ ಸ್ಟ್ರೀಟ್‌ನಲ್ಲಿರುವ ನಮ್ಮ ಕಂಪನಿಯ ಮತ್ತೊಂದು ಆಫೀಸಿಗೆ ಹೋಗುವ ಅವಕಾಶ ಬಂದಿತ್ತು, ಆಗ ಬೇರೆ ಯಾವುದೇ ಮಾರ್ಗವಿರದೇ ಈಗ ಕಾಣುವ ದೊಡ್ಡ ಗುಂಡಿಯ ಹತ್ತಿರವೇ ಹೋಗಿ ಅದನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು, ನಾನು ಹತ್ತೊಂಬತ್ತನೇ ಮಹಡಿಯಿಂದ ಈ ಅವಶೇಷ, ಅಲ್ಲಿ ಮತ್ತೊಂದು ಹೊಸ ಕಟ್ಟಡವನ್ನು ಕಟ್ಟುತ್ತಿರುವುದನೆಲ್ಲಾ ನೋಡಿ, ನ್ಯೂ ಯಾರ್ಕಿನಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬನಿಗೆ 'ಇದನ್ನೆಲ್ಲ ನೋಡಿ ಏನನ್ನಿಸುತ್ತೆ' ಎಂದೆ, ಅವನು ನನ್ನ ಮಾತನ್ನು ಹೇಗೆ ಅರ್ಥ ಮಾಡಿಕೊಂಡನೋ ಏನೋ, 'ಎಲ್ಲರನ್ನೂ ಮೆಚ್ಚಿಸುತ್ತೇನೆ ಎನ್ನುವ ಪಟಾಕಿಯಲ್ಲಿ (George Pataki) ನನಗೆ ಯಾವತ್ತೂ ವಿಶ್ವಾಸವಿರಲಿಲ್ಲ, ೯/೧೧ ಆಗಿ ಐದು ವರ್ಷಗಳು ಕಳೆಯುತ್ತಾ ಬಂದಿದ್ದರೂ ಇಲ್ಲಿ ಇನ್ನೂ ಹೀಗೆ ಗುಂಡಿ ಇರುವುದು ನಮ್ಮ ದೌರ್ಭಾಗ್ಯ' ಎಂದ. ನಾನು ಅಲ್ಲಲ್ಲಿ ಓದಿ-ಕೇಳಿದಂತೆ ಈ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡ ಕಟ್ಟುವ ಪ್ರಕ್ರಿಯೆ, ಅದರ ಜೊತೆಯಲ್ಲೆ ಮೆಮೋರಿಯಲನ್ನು ಕಟ್ಟುವ ಚರ್ಚೆಗಳು ಬಹಳ ದಿನಗಳಿಂದ ಪ್ರಚಲಿತದಲ್ಲಿದ್ದು, ಯಾರಿಗೂ ತೃಪ್ತಿಯಾದಂತೆ ಕಂಡು ಬಂದಿಲ್ಲ, ಆದರೆ ಒಂದಂತೂ ಸತ್ಯ, ನ್ಯೂ ಯಾರ್ಕಿನಲ್ಲಿ ಯಾವುದಾದರೊಂದು ಇಂಥ ಪಬ್ಲಿಕ್ ಪ್ರಾಜೆಕ್ಟ್ ಮಾಡಿ ಗೆಲ್ಲುವುದಿದೆ ನೋಡಿ ಅದಕ್ಕಿಂತ ಮಹತ್ವದ ಗೆಲುವು ಮತ್ತೊಂದಿಲ್ಲ, ಏಕೆಂದರೆ ನ್ಯೂ ಯಾರ್ಕಿನವರನ್ನು ತೃಪ್ತಿ ಪಡಿಸಿದಿರೆಂದರೆ ಪ್ರಪಂಚದ ಯಾರನ್ನು ಬೇಕಾದರೂ ಸಂತೈಸಬಹುದಾದ ಶಕ್ತಿ ನಿಮ್ಮಲ್ಲಿ ತನ್ನಿಂದ ತಾನೇ ಬಂದು ಬಿಡುತ್ತದೆ.

***

ಈ ನಗರದ ಜೀವನ ಯಾಂತ್ರಿಕವಾದದ್ದು ಎಂದು ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ, ಎಲ್ಲಿ ಹೋದರೂ ಸುತ್ತಲೂ ಜನಗಳಿರುವ ನ್ಯೂ ಯಾರ್ಕ್ ನಗರ ನಾನು ಕಳೆದುಕೊಂಡ 'ಗಿಜಿಗಿಜಿ' ಪ್ರಪಂಚವನ್ನು ಆಗಾಗ್ಗೆ ನೆನಪಿಗೆ ತರುವುದೂ ಅಲ್ಲದೆ, ಇಲ್ಲಿಯ ವೈವಿಧ್ಯತೆ ನನ್ನನ್ನು 'ಅಮೇರಿಕದಲ್ಲಿ ಇಲ್ಲದಂತೆ' ಮಾಡುವಲ್ಲಿ ಸಫಲವಾಗಿದೆ.

No comments: