Sunday, May 21, 2006

'ಅಲ್ಲಿ-ಇಲ್ಲಿ'ನ ಪಕ್ಷಿನೋಟ

ನನ್ನನ್ನು 'ಪಾಪಿಷ್ಟ' ಎಂದು ಕರೆದುಕೊಂಡು 'ಅನಿವಾಸಿ ಭಾರತೀಯ ಎಂಬುದಕ್ಕೆ ಸಮನಾರ್ಥಕ ಪದ' ಎಂದು ವಿವರಣೆಯನ್ನು ಪ್ರೊಫೈಲಿನಲ್ಲಿ ಕೊಟ್ಟುಕೊಂಡಿರುವುದು ನನ್ನ ಅನಿವಾಸಿತನಕ್ಕೆ ಅಪಮಾನಮಾಡುವುದಕ್ಕಂತೂ ಅಲ್ಲ. ಈ ಅನಿವಾಸಿ ಸ್ಥಿತಿಯ ಜೊತೆಯಲ್ಲಿ ಬರುವ ನೋವು-ನಲಿವುಗಳನ್ನು ಅವಲೋಕಿಸುವುದಕ್ಕಿಂತ ಮೊದಲು ಒಂದೆರಡು ಹೇಳಿಕೆಗಳನ್ನು ಘಂಟಾಘೋಷವಾಗಿ ದಾಖಲಿಸುವುದು, ಸದಾ 'ಅತ್ತಿಂದಿತ್ತ' ತೂಗುವ ನನ್ನ ಮನಸ್ಸಿಗೆ ಸಮಾಧಾನವನ್ನು ತರಬಹುದು ಎಂಬ ಆಶಯದಿಂದ. ನಾನು ಭಾರತೀಯನೂ, ಭಾವನಾಜೀವಿಯೂ ಹಾಗೂ ಭಾರವಾದ ಮನಸ್ಸುಳ್ಳವನೂ (ಹಲವಾರು ಸರಕುಗಳನ್ನು ತುಂಬಿಕೊಂಡು) ಆದ್ದರಿಂದ ಭಾರತದಲ್ಲಿ ನನ್ನ ವ್ಯಕ್ತಿತ್ವದ ಬುನಾದಿಯನ್ನು ಹಾಕಿದ ಇಪ್ಪತ್ತೈದು ವರ್ಷಗಳು, ನಾನು ಬೆಳೆದ ಪರಿಸರ, ಊರು-ಕೇರಿ-ಶಾಲೆ-ಪಡಸಾಲೆಗಳು ಸುಮ್ಮನೇ ಕೊಡವಿಕೊಂಡು ಬಿಡುವಷ್ಟು ಹಗುರವೂ ಅಲ್ಲ - ಇವುಗಳನ್ನು ನನ್ನಿಂದ ಬೇರ್ಪಡಿಸಿದರೆ ನನ್ನ ಅಸ್ತಿತ್ವದಲ್ಲಿ ಹೆಚ್ಚೇನೂ ಉಳಿಯುವುದಿಲ್ಲವಾದ್ದರಿಂದ ಒಂದಲ್ಲ ಒಂದು ರೀತಿಯಲ್ಲಿ ಇವುಗಳ ಕಡೆಗೆ ಮನಸ್ಸು ತೊನೆಯುತ್ತದೆ.

***

ಈಗ ಒಂದು ದಶಕ ಹಿಂದಕ್ಕೆ ಹೋಗಿ ನನಗೆ ಮತ್ತೆ ಅಮೇರಿಕೆಗೆ ಬಂದು ಈಗ ಬದುಕುವ ಹಾಗೆ ಮತ್ತೊಂದು ಅವಕಾಶ ಸಿಕ್ಕಿದರೆ ನಾನು ಖಂಡಿತವಾಗಿ ಅದೇ ನಿರ್ಧಾರವನ್ನು ಕೈಗೊಂಡು ಮತ್ತೆ ಇಲ್ಲಿಗೆ ಬರುತ್ತೇನೆ. ಹಾಗಿದ್ದ ಮೇಲೆ ನನ್ನ ಇಲ್ಲಿನ ಅಸ್ತಿತ್ವವನ್ನು ಖಂಡಿತವಾಗಿ ಮೆಚ್ಚುತ್ತೇನೆ: ಆದರೆ ಯುದ್ಧ, ವಿದೇಶಾಂಗ ನೀತಿಯಂತಹ ಹಲವು ದೊಡ್ಡ ವಿಷಯಗಳಲ್ಲಿ ಭಿನ್ನಾಬಿಪ್ರಾಯವಿದ್ದರೂ, ದಿನ ನಿತ್ಯದ ಒಡನಾಟ, ಆಟ-ಓಟ ಮುಂತಾದ ಅಷ್ಟೊಂದು ದೊಡ್ಡದಲ್ಲದ ವಿಷಯಗಳಲ್ಲಿ ವ್ಯತ್ಯಾಸವಿದ್ದರೂ ಇಲ್ಲಿಗೆ ಬಂದು ನೆಲೆಸಿದ ಮೇಲೆ ಆಗಿರುವ ಅನುಕೂಲಗಳು ಅನಾನುಕೂಲಗಳನ್ನು ಹೆಚ್ಚಿನ ಅನುಪಾತದಲ್ಲಿ ಗೆಲ್ಲುವುದರಿಂದ ನಾವೆಲ್ಲರೂ ಈದಿನ ಇಲ್ಲಿದ್ದೇವೆ, ಇನ್ನು ಮುಂದೆಯೂ ಹೀಗೇ ಇರುತ್ತೇವೆ. ಒಂದು ಯಾವುದೋ ಘಳಿಗೆಯಲ್ಲಿ 'ಸಾಕು' ಎನ್ನಿಸಿದಾದ ಕಿತ್ತುಕೊಂಡು ಹೋದರಾಯಿತು, ಹಾಗೆ ಎಷ್ಟೋ ಜನ ಯಾವು ಯಾವುದೋ ಹಂತದಲ್ಲಿ ಹೋಗಿದ್ದಾರೆ, ಹೋಗಬಹುದು.

ನಾನು ಬೆಂಗಳೂರಿನಲ್ಲಿದ್ದರೆ ಕನ್ನಡ ನಾಟಕಗಳನ್ನು ನೋಡುತ್ತಿದ್ದೆ, ಸಿನಿಮಾಗಳನ್ನು ನೋಡುತ್ತಿದ್ದೆ, ಕಂಡಕಂಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿದ್ದೆ, ವರ್ಷದ ಆರು ತಿಂಗಳ ಛಳಿಯಲ್ಲಿ ಕೊರಗಬೇಕಾಗುತ್ತಿರಲಿಲ್ಲ, ನನ್ನ ಸಪೋರ್ಟು ನೆಟ್‌ವರ್ಕ್‌ನ್ನು ಹಿಗ್ಗಿಸಿಕೊಳ್ಳಬಹುದಿತ್ತು, ಕಂಡಿದ್ದನ್ನೆಲ್ಲ ತಿನ್ನಬಹುದಿತ್ತು, ನನಗೆ ಬೇಕಾದ ಪರಿಸರವನ್ನು ಸೃಷ್ಟಿಸಿಕೊಳ್ಳಬಹುದಿತ್ತು, ನನ್ನದೇ ಆದ ರೀತಿಯಲ್ಲಿ ಸಮಾಜದಲ್ಲಿ ಬೆರೆಯಬಹುದಿತ್ತು, ಸಾಮಾಜಿಕವಾಗಿ-ರಾಜಕೀಯವಾಗಿ-ಸಾಂಸ್ಕೃತಿಕವಾಗಿ ನನ್ನ ಧ್ವನಿಯಲ್ಲಿ ಏರಿಳಿತವನ್ನು ಕಾಣಬಹುದಿತ್ತು, 'ಪ್ರತಿಭಾ ಪಲಾಯನ'ದ ಶಾಪದಿಂದ ಹೊರಬಂದು ನನ್ನ ಋಣವನ್ನು ತೀರಿಸಬಹುದಿತ್ತು ಎಂದೆಲ್ಲಾ ಯೋಚಿಸಿಕೊಂಡಾಗ ಯಾವುದೋ ಕರ್ಮದ ಫಲವೆಂದು ಇಲ್ಲಿಯ ನೀರು ಕುಡಿಯಬೇಕಾಗಿ ಬಂದಿದ್ದರಿಂದ 'ಪಾಪಿಷ್ಟ' ಎಂದು ನನ್ನನ್ನು ಕರೆದುಕೊಳ್ಳುವಂತಾಗುತ್ತದೆ.

ಅದೇ ಇಲ್ಲಿಗೆ ಬರದೇ ಹೋದರೆ ಲಂಚ, ಅಸತ್ಯಗಳಂತಹ ದೊಡ್ಡ ವಿಷಯಗಳನ್ನೂ, ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ, ಕೊಂಡ ಪ್ರತಿಯೊಂದು ವಸ್ತುವಿನಲ್ಲಿಯೂ ಉತ್ಕೃಷ್ಟತೆಯನ್ನು ನೋಡುವ ಮತ್ತೊಂದು ದೃಷ್ಟಿಕೋನ ಹುಟ್ಟಿಕೊಳ್ಳುತ್ತಿರಲಿಲ್ಲ, 'ಹೀಗೂ ಬದುಕಬಹುದು' ಎನ್ನಿಸುತ್ತಿರಲಿಲ್ಲ, ಸಾಮಾಜಿಕವಾಗಿ-ಆರ್ಥಿಕವಾಗಿ ಸ್ವಾಯುತ್ತತೆಯನ್ನು ಪಡೆಯಲಾಗುತ್ತಿರಲಿಲ್ಲ. ಸಾಗರದ ತಳವನ್ನು ಶೋಧಿಸಲೂ ಅದೆಷ್ಟೋ ಮೈಲು ಎತ್ತರದಲ್ಲಿ ನಭದಲ್ಲಿ ಹಾರಿಬಿಟ್ಟ ಉಪಗ್ರಹಗಳನ್ನು ಬಳಸುತ್ತಾರಂತೆ - ನನಗೆ ನಮ್ಮ ಬಗ್ಗೆ ಭಾರತದಲ್ಲಿ ಗೊತ್ತಿರದ ಎಷ್ಟೋ ವಿಷಯಗಳು ಇಲ್ಲಿಗೆ ಬಂದ ಮೇಲೇ ಗೊತ್ತಾಗಿದ್ದು.

***

ನಾನು ಪ್ರತೀವಾರವೂ ಭಾರತದಲ್ಲಿರುವ ನಮ್ಮ ಮನೆಯವರೊಡನೆ ಮಾತನಾಡುತ್ತೇನೆ, ಇಲ್ಲಿ ನನ್ನ ಮನೆಯಲ್ಲಿರುವ ಕಂಪ್ಯೂಟರುಗಳಲ್ಲಿ 'ಕನ್ನಡ ಪ್ರಭ' ಹೋಮ್ ಪೇಜ್ ಆಗಿದೆ - ಇಲ್ಲವೆಂದರೆ ರಾಜ್‌ಕುಮಾರ್ ನಮ್ಮನ್ನಗಲಿದ ಸುದ್ದಿ ನನ್ನ ಕಣ್ಣಿಗೆ ಸ್ವಲ್ಪ ತಡವಾಗಿ ಬೀಳುತ್ತಿತ್ತು. ನಾನು ಕನ್ನಡದಲ್ಲಿ ಓದುವ ವಿಷಯಗಳಲ್ಲಿ ಹೆಚ್ಚಿನವು ನಮ್ಮ ದೇಶಕ್ಕೆ ಸಂಬಂಧಿಸಿದವೇ. ಅಂತರ್ಜಾಲದಲ್ಲೂ ಸಹ ದಿನ ನಿತ್ಯದ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯ, ಸುದ್ದಿ, ವರದಿಗಳನ್ನು ಹೊರತುಪಡಿಸಿ ನಾನು ಓದುವುದೇನಿದ್ದರೂ ಕನ್ನಡದಲ್ಲಿ ಬರೆದುದ್ದನ್ನೇ. ಅಲ್ಲಿನ ಸಾಮಾಜಿಕ-ರಾಜಕೀಯ ವಿದ್ಯಮಾನಗಳಿಗೆ ಇಲ್ಲಿನವುಗಳಿಗಿಂತ ಹೆಚ್ಚಾಗಿ ಸ್ಪಂದಿಸುತ್ತೇನೆ. ಇವೆಲ್ಲ ನನ್ನ ಹೆಚ್ಚುಗಾರಿಕೆಯೇ ಎಂದು ಪ್ರಶ್ನಿಸಿಕೊಂಡರೆ 'ಇಲ್ಲ' ಎನ್ನುವ ಉತ್ತರ ಹೊರಬರುತ್ತದೆ, ಕನ್ನಡದಲ್ಲಿ ಬರೆದದ್ದನ್ನು ಓದುವುದು ಒಂದು ವೀಕ್‌ನೆಸ್ ಆಗಿ ಕಾಣುತ್ತದೆ. ಇಂಗ್ಲೀಷಿನಲ್ಲಿ ಬರೆದ ಸುಂದರಾತಿ ಸುಂದರ ಅನಾಲಿಸೀಸ್ಸುಗಳನ್ನು ಬೇಕಾದಷ್ಟು ಓದಿದ್ದೇನೆ, ತಾರಿ (ಬ್ಲಾಗು) ಗಳನ್ನು ನೋಡಿದ್ದೇನೆ ಅದರೂ ಕನ್ನಡದಲ್ಲಿ ಬರೆದುದನ್ನು ಓದಿದಾಗ, ನೋಡಿದಾಗ, ಕೇಳಿದಾಗ ಆಗುವ ಅನುಭವಕ್ಕೂ ಇತರ ಭಾಷೆಗಳಲ್ಲಿ ಅವೇ ವಸ್ತುಗಳನ್ನು ಗ್ರಹಿಸಿದಾಗ ಆಗುವ ಅನುಭವಕ್ಕೂ ವ್ಯತ್ಯಾಸವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದಲ್ಲಿ ಬರೆದದ್ದನ್ನ ಪುಟದಿಂದ ಪುಟಕ್ಕೆ ಓದಿದರೆ, ಬೇರೆ ಭಾಷೆಯಲ್ಲಿ ಬರೆದದ್ದನ್ನ ಸಾಲಿನಿಂದ ಸಾಲಿಗೆ ಓದಿಕೊಂಡು ಹೋಗುತ್ತೇನೆ - ಇವೆಲ್ಲವೂ ನನ್ನ ಮಿತಿಗಳೆಂದು ಮಾತ್ರ ಪರಿಗಣಿಸಬೇಕೇ ವಿನಾ ಎಲ್ಲಾ ಅನಿವಾಸಿಗಳೂ ಈ ರೀತಿ ಇರಲೇಬೇಕೆಂದೇನೂ ಇಲ್ಲ - ನಾನು ಭಿನ್ನನಾದುದರಿಂದಲೇ ಇಷ್ಟು ಹೊತ್ತಿಗೆ ಇದನ್ನು ಕುಟ್ಟುತಿರುವುದು, ಇಲ್ಲವೆಂದರೆ 'ಉಪಯೋಗಕ್ಕೆ ಬರುವ' ಬೇರೇನನ್ನೋ ಮಾಡಿಕೊಂಡಿರಬಹುದಿತ್ತು!

ಕೊನೇ ಪಕ್ಷ ಅಲ್ಲಿಂದ ಇಲ್ಲಿಗೆ ಬರುವಾಗ ಯಾವ ಪ್ರಬುದ್ಧತೆ, ಸ್ಪರ್ಧೆ, ಹಸಿವುಗಳಿದ್ದವೋ ಅವು ಈಗಂತೂ ಇಲ್ಲ, (ಯಾವತ್ತಾದರೂ ಒಂದು ದಿನ) ಮುಂದೆ ಇಲ್ಲಿಂದ ಗುಡಚಾಪೆ ಕಟ್ಟೋದಾದರೂ ಸ್ವಲ್ಪ ಸಮಾಧಾನವಾಗಿ ಯೋಚಿಸುವ ಮನಸ್ಸಿರುತ್ತದೆ, ನಾನೊಬ್ಬನೇ ಅಲ್ಲದೇ ಉಳಿದವರೂ, ಅವರವರ ಅಸ್ತಿತ್ವಗಳೂ ನನ್ನ ನಿರ್ಣಯದಲ್ಲಿ ಭಾಗಿಯಾಗಿರುತ್ತವೆ, ಇಲ್ಲಿಗೆ ಬರುವಾಗ ಇದ್ದ 'unknown factor' ಗಳು ಇಲ್ಲಿಂದ ಅಲ್ಲಿಗೆ ಹೋಗುವಾಗ ಕಡಿಮೆಯಾಗಿರುತ್ತವೆ. ಆದರೆ, ನನ್ನ ನೆನಪಿನಲ್ಲಿರುವ ಎಪ್ಪತ್ತರ, ಎಂಭತ್ತರ, ಅರ್ಧಭಾಗ ತೊಂಭತ್ತರ ದಶಕಗಳ ಮುಂದೆ ದೊಡ್ಡದೊಂದು ಹಳ್ಳ ಕಾಣತೊಡಗುತ್ತದೆ, ನಾನು ಇಲ್ಲಿ ಇದ್ದಷ್ಟು ವರ್ಷಗಳ ಮೇಲೆ ಆ ಹಳ್ಳದ ಆಳ-ಅಗಲಗಳು ನಿರ್ಧಾರಿತಗೊಳ್ಳಬಲ್ಲವು. ಈ ಹಳ್ಳವನ್ನು ನಾನು ಬೇರೆ ವಿಚಾರಧಾರೆಗಳಿಂದ ತುಂಬಿಕೊಂಡಿದ್ದರೂ, ಅಲ್ಲಿ ಮಹತ್ವಪೂರ್ಣ ಬದಲಾವಣೆಗಳಾದ ಹಲವು ವರ್ಷಗಳನ್ನು ಕಳೆದುಕೊಂಡಿದ್ದು ಮುಂದೆ ನಾನು ಅಲ್ಲಿ ಹೋಗಿ ಬದುಕಿದ ಮೇಲೆ ಒಂದಲ್ಲ ಒಂದು ದಿನ ಸತಾಯಿಸುತ್ತೆ ಎನ್ನುವುದು ಗ್ಯಾರಂಟಿ. ಏನಿಲ್ಲವೆಂದರೂ ಅಲ್ಲಿನ ಈಗಿನ ಬದಲಾದ ಜಗತ್ತಿಗೆ ಹೊಂದಿಕೊಳ್ಳುವುದು ಮೊದಮೊದಲು ಕಷ್ಟವಾದರೂ ನನಗಂತೂ ಅಲ್ಲಿ ಹೊಂದಿಕೊಂಡು ಬದುಕುತ್ತೇನೆ ಎನ್ನುವುದರಲ್ಲಿ ಲವಲೇಶವೂ ಸಂಶಯವಿಲ್ಲ.

***

ಹೀಗೆ - ನನ್ನ ಇಲ್ಲಿನ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತ್ತೇನೆ, ಇಲ್ಲಿ ಇರುವ ಅಗತ್ಯ, ಹಂಬಲ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಇರುತ್ತೇನೆ, ಅದು ಬದಲಾದ ಕ್ಷಣದಲ್ಲಿ ಇಲ್ಲಿಂದ ಕಂಬಿ ಕೀಳುತ್ತೇನೆ - ಆ ಕ್ಷಣ ಯಾವಾಗ ಬರಬಹುದು ಎಂಬ ಕಾತರತೆಯಿದ್ದರೂ 'ಅದು ಎಷ್ಟು ಬೇಗ ಬರುವುದೋ ಅಷ್ಟು ಒಳ್ಳೆಯದು' ಎಂದು ಪದಗಳಿಗೆ ನಿಲುಕದ ಯಾವುದೋ ಒಂದು ಧ್ವನಿ ಹೇಳುತ್ತದೆಯಾದ್ದರಿಂದ ಅಂತಹ ಘಳಿಗೆ ಆದಷ್ಟು ಬೇಗನೆ ಬರಲಿ ಎಂದು ಆರ್ತನಾಗುತ್ತೇನೆ.

ಅಂತಹ ಕ್ಷಣ ಬರುವವರೆಗೆ ವರ್ತಮಾನದಲ್ಲಿ ಬದುಕುವುದೇ ಜಾಣತನ, ಅದಕ್ಕಾಗಿಯೇ ವರ್ತಮಾನಕ್ಕೆ ಗೌರವ ಕೊಡುವ ಇಲ್ಲಿಯ ಪರಂಪರೆಯನ್ನು ಮೆಚ್ಚಿಕೊಂಡಿದ್ದು, ಅತಿಯಾಗಿ ಹಚ್ಚಿಕೊಂಡಿದ್ದು!

1 comment:

Sarathy said...

:+D
No comments!!