Thursday, June 01, 2006

ಅಂತರಂಗದ ಹಾಡು

ಸುಮಾರು ಆರು ವರ್ಷಗಳ ಹಿಂದೆ ನನ್ನ ಸ್ನೇಹಿತ ವಾಸು ಮತ್ತು ಅವನ ತಂದೆ-ತಾಯಿಯರನ್ನು ನೋಡೋಣವೆಂದು ತಾಳಗುಪ್ಪಕ್ಕೆ ಹೋದಾಗ ವಾಸುವಿನ ತಾಯಿ ಗೌರಮ್ಮನವರು ಒಂದು ಹೊಸ ಹಸೆಯನ್ನು ಬರೆಯುತ್ತಿದ್ದರು (ವಾಸುವಿನ ಬಗ್ಗೆ ಇನ್ನೂ ಹೆಚ್ಚು ಜ್ಞಾನಪೀಠ ಲೇಖನದಲ್ಲಿ ಬರೆದಿದ್ದೇನೆ). ನಾನೂ ನನ್ನ ಎರಡನೇ ಅಣ್ಣನೂ ಅವರ ಮನೆ, ಮನೆ ಸುತ್ತಲಿನ ತೋಟ, ಹಾಗೂ ಅವರ ಜೊತೆಯಲ್ಲಿ ಕೆಲವೊಂದು ಫೋಟೋಗಳನ್ನು ತೆಗೆದುಕೊಂಡು ಬಂದಿದ್ದೆವು, ಅವರು ಬಿಡಿಸುತ್ತಿದ್ದ ಹಸೆಯನ್ನು ನೋಡಿ (ಹಸೆ ಎಂದರೆ ಮಲೆನಾಡಿನಲ್ಲಿ ಕೆಲವು ಜಾತಿಯ ಜನರಲ್ಲಿ ಹೆಂಗಸರು ಮದುವೆ ಮೊದಲಾದ ವಿಶೇಷ ಕಾರ್ಯಗಳಿಗೆ ಬಿಡಿಸುವ ಚಿತ್ತಾರ, ವಿವರಗಳಿಗೆ ಇಲ್ಲಿ, ಇಲ್ಲಿ ನೋಡಿ) ನನಗೇನನ್ನಿಸಿತೋ ಏನೋ, ಅದೇ ದಿನ ಈ ಕೆಳಗಿನ ಕವನವನ್ನು ಬರೆದಿದ್ದೆ, ಈ ದಿನ ಎಲ್ಲ ಹಳೆಯ ಫೈಲುಗಳನ್ನು ಎತ್ತಿ ಝಾಡಿಸುತ್ತಿರುವಾಗ 'ನಾನಿನ್ನೂ ಬದುಕಿದ್ದೇನೆ!' ಎಂದು ಕಣ್ಣಿಗೆ ಬಿತ್ತು. ಇವತ್ತಿನ ಬದಲಾದ ಪ್ರಬುದ್ಧತೆ, ಸ್ಥಿತಿ-ಗತಿಗಳಲ್ಲಿ 'ಹುಟ್ಟು, ಪ್ರೀತಿ ಮತ್ತು ಬದುಕನ್ನು' ಓದಿದಾಗ ಇದರ ಹಿನ್ನೆಲೆ ಏನಿರಬಹುದು ಎಂದು ಬೇರೆ ಯಾರದ್ದೋ ಕವನವನ್ನು ಓದುವಂತೆ ಹಲವಾರು ಬಾರಿ ಓದಿಕೊಂಡರೂ ಇಲ್ಲಿನ ಮೂರು ಪ್ಯಾರಾಗಳು ಹೆಚ್ಚು ಗುಟ್ಟೇನನ್ನೂ ಬಿಡಲಿಲ್ಲ. ಅಲ್ಲದೇ ಕೊನೆಯ ಎರಡು ಸಾಲುಗಳಲ್ಲಿ ಬರೆದಂತೆ '...ನಿರಂತರ ನಡೆವ ಬಹಿರಂಗಕೆ ಬಾರದ ಅಂತರಂಗದ ಹಾಡೇ?' ಎನ್ನುವ ಸಾಲುಗಳು 'ಅಂತರಂಗ'ಕ್ಕೆ ಹೊಂದಿಕೊಳ್ಳಬಹುದು ಎಂದೂ ಈ ಪದ್ಯವನ್ನು ಇಲ್ಲಿ ತೋರಿಸಿದ್ದೇನೆ. ಎಲ್ಲಾದರೂ ಧೂಳು ತಿನ್ನುತ್ತಾ ಬೀಳುವ ಬದಲಿಗೆ ಹೀಗೆ ಒಂದು ಸ್ಥಳದಲ್ಲಿ ಇದ್ದರೆ ಒಳ್ಳೆಯದು ಎಂದು ಕೂಡಾ ಅನ್ನಿಸಿದ್ದರಿಂದ ಇನ್ನು ಮುಂದೆ ಹಲವು ಹೊಸ ಹಾಗೂ ಹಳೆಯ ಕವನಗಳನ್ನು ಅಲ್ಲಲ್ಲಿ ತೋರಿಸೋಣವೆಂದುಕೊಂಡಿದ್ದೇನೆ.

ತಮ್ಮ ತೋಟದಲ್ಲಿ ನಾನಾ ವಿಧವಾದ ಹೂವುಗಳನ್ನು ಬೆಳೆದೂ ನನಗೆ ಗೊತ್ತಿರುವಂತೆ ಬೇರೆ ಯಾರಿಗೂ ಒಂದು ಹೂವನ್ನು ಮುಟ್ಟಲು ಕೊಡದಿದ್ದ ಗೌರಮ್ಮನವರ ಬುದ್ಧಿ ತಿಳಿದೂ-ತಿಳಿದೂ ಆದಿನ ನಾನು 'ಒಂದು ಹೂವನ್ನು ಕೊಯ್ದುಕೊಳ್ಳಲೇ?' ಎಂದು ನಗುತ್ತಾ ಕೇಳಿದ್ದೆ, ಅವರು 'ಆಯ್ತು' ಎಂದಿದ್ದನ್ನೇ ಕಾಯುತ್ತಾ ಯಾವುದೋ ವ್ರತ ಭಂಗ ಮಾಡುವ ಹರ್ಷದಿಂದ ಹತ್ತಿರದಲ್ಲೇ ಸುಂದರವಾಗಿ ಅರಳಿದ್ದ ಡೇಲಿಯಾ ಹೂವೊಂದನ್ನು ಕೊಯ್ದುಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅವರು 'ಮತ್ತೆ ಬಂದಾಗ ಬಾ' ಎಂದಿದ್ದರೂ ಅವರನ್ನು ನೋಡದೇ ಅದೆಷ್ಟೋ ವರ್ಷಗಳಾಗಿ ಹೋಗಿಬಿಟ್ಟವು. ವಾಸುವಿನ ತಾಯಿ ಗೌರಮ್ಮನವರಲ್ಲಿ ನನ್ನದು ಯಾವಾಗಲೂ ಸಲಿಗೆಯೇ, ಹಿಂದೆ ಯಾವತ್ತೋ 'ನೀವು ಕೋಳಿಸಾರನ್ನು ಮಾಡುವಾಗ ಮಸಾಲೆಯನ್ನು ಬೇರೆಯಾಗಿ ರುಬ್ಬಿ ಸಾರು ಮಾಡುವುದಕ್ಕಿಂತ ಕೋಳಿಗೇ ಮಸಾಲೆಯನ್ನು ತಿನ್ನಿಸಿ ಅಂತಹ ಕೋಳಿಯನ್ನು ಬೇಯಿಸಿದರೆ ಹೇಗೆ?' ಎಂದು ತಮಾಷೆಗೆ ಕೇಳಿ ಬಯ್ಯಿಸಿಕೊಂಡಿದ್ದನ್ನು ನೆನೆಸಿಕೊಂಡರೆ ಇವತ್ತಿಗೂ ಜೋರಾಗಿ ನಗುಬರುತ್ತದೆ.

***

ಹುಟ್ಟು, ಪ್ರೀತಿ ಮತ್ತು ಬದುಕು
(ಜುಲೈ ೨೦೦೦)

ಮೈ ಮನಗಳ ತೃಷೆ ತೀರಿಸೋ ಮಿಲನ
ಮಹೋತ್ಸವದಂದು ಹುಟ್ಟಿ ಬಂದಿಹ ಧೀರ;
ಸುತ್ತೆಲ್ಲ ಕಬಳಿಸಿ ವಕ್ಕರಿಸಿಕೊಂಡಿರುವೆದೆಯಲಿ
ತನ್ನನ್ನೇ ತಾನು ತಿಳಿಯದ ಶೂರ.
ಹಿಂಗಿದ ಬಾಯಾರಿಕೆ, ಮನಸ್ಸಿನ ಚಡಪಡಿಕೆ
ಯಾರಿಂದಲೂ ತಿದ್ದಲಾಗದೀ ಹುಟ್ಟು;
ಸೂತ್ರವೂ ಗೋತ್ರವೂ ಬರಿದೆ ಬಯಲಾದರೂ
ಯಾರಿಗೂ ಬಿಡಿಸಲಾಗದೀ ಗುಟ್ಟು.

ದಕ್ಕಿದ್ದು ಸಿಕ್ಕದಿರುವ, ಸಿಕ್ಕಿದ್ದು ಸೊಗಸಾಗಿರದ
ಉನ್ಮತ್ತತೆಯೇ ಮೈವೆತ್ತ ಪ್ರಬುದ್ಧತೆ;
ಅರಿಕೆ ಅರಿವುಗಳಲ್ಲಿ ಬೆರಕೆ ತಿರುವುಗಳಿಲ್ಲಿ
ತನ್ನನೇ ಮರೆಯಿಸುವ ಉತ್ಕಂಠತೆ.
ತನು-ಮನಗಳ ನಿಲ್ಲಿಸಿಕೊಳ್ಳದ, ನೇರವನ್ನು
ತಿರುವಿಕೊಂಡ, ನಭವೇ ತನ್ನದಾಗುವ ಆಸೆ;
ಕುದಿಯುತಿದೆ ಧಮನಿಗಳಲಿ ಸರ್ವಾಕಾಂಕ್ಷೆಯ ಛಲ
ಬಿಸಿಯಿಲ್ಲದೆ ಬಿರುಕುಬಿಟ್ಟಿಹ ಮೂಸೆ.

ಅರಿಯುವ ಉರಿಯಲ್ಲಿ, ಒಟ್ಟಿಗಿದ್ದರೂ ಬೇರೆ
ಬಯಸುವ ದೇಹ-ಮನಗಳ ಮೂಲ ಕಾಣುವಾಸೆ;
ನೆನಪುಗಳಿರಲಿ, ನವಿರಾಗಿ ಏಳುತಿಹ ನಲುಮೆಗಳಲಿ
ತ್ರಿಕೋನ, ವೃತ್ತಾದಿಗಳಾಕೃತಿಯ ಬರೆವ ಹಸೆ.
ಹಸಿಯಿದೆ, ಹಸಿವೆಯಿದೆ, ಹಿಂಗದ ದಾಹವಿದ್ದರೂ
ಎದುರಾಗುವ ಅಡ್ಡಿ ಬರೀ ಜಿಗಿವ ಮೋಟುಗೋಡೆ;
ಕತ್ತಲೆಕೋಟೆ ಕೋಮಲತೆಗಳ ನಡುವೆ ನಿರಂತರ
ನಡೆವ ಬಹಿರಂಗಕೆ ಬಾರದ ಅಂತರಂಗದ ಹಾಡೇ?

3 comments:

Anveshi said...

ನಿಮ್ಮ ತೋಟದಲ್ಲಿ ಅರಳಿದ ಇಂಥ ಕವನಗಳ ಹೂವುಗಳು ಇನ್ನೆಷ್ಟಿವೆ?
ಆಗಲೂ "ಅಂತರಂಗ"ವಿತ್ತೆ, ಅಥವಾ ಇದು ಕಾಕತಾಳೀಯವೆ?

Satish said...

ಅನ್ವೇಷಿಗಳೇ,

ಕವನಗಳು ಬೇಕಾದಷ್ಟಿವೆ, ಕೆಲವು ಮಾಗಿವೆ, ಇನ್ನು ಕೆಲವು ಬಾಡಿವೆ!

ಇದು ಕಾಕತಾಳೀಯ ಮಾತ್ರ, 'ಅಂತರಂಗ' ಕೇವಲ ಇತ್ತೀಚೆಗೆ ಹುಟ್ಟಿದ್ದು.

Anonymous said...

ನಿಮ್ಮ ಹಳೆಯ ಕವನಗಳನ್ನು ಇಲ್ಲಿ ತೋರಿಸಲು ತೀರ್ಮಾನಿಸಿದ್ದಕ್ಕೆ ಸಂತೋಷ. ಸ್ವಾಗತ!

ನಿಮ್ಮ ಈ ಬರಹದಲ್ಲಿ ಅಂತರಂಗ, ಹೂವು, ಹೋದೋಟ ಮುಂತಾದ ಶಬ್ದಗಳು ಬಳಕೆಯಾಗಿರುವುದನ್ನು ನೋಡಿ ನನಗೆ ದೊಡ್ಡರಂಗೇಗೌಡರ "ಅಂತರಂಗದ ಹೂಬನಕೆ ಒಲುಮೆ ಗಾಳಿ ಬೀಸಿತೇ?" - (ಏಳು ಸುತ್ತಿನ ಕೋಟೆ).... ಹಾಡು ನೆನಪಾಯಿತು :)