Thursday, May 11, 2006

ಎರಡು ದೊಡ್ಡ ಸೋಲುಗಳು

ಇಷ್ಟೊಂದು ಹಾರಾಡುವ ನಾನು ಎರಡು ಬಾರಿ ನೆಲಕಚ್ಚಿ ಸೋತದ್ದಿದೆ - ಬರೀ ಮೂಗಷ್ಟೇ ನೆಲಕ್ಕೆ ತಾಗುವ ಹಾಗಲ್ಲ, ಮೂಗು ನೆಲದ ಒಳಗೆ ಹುದುಗಿ-ಜಜ್ಜಿ ಹೋಗುವ ಹಾಗೆ, ಅಂದು ಹೊಡೆತ ತಿಂದು ಮೂಗಿನಿಂದ ಸೋರುತ್ತಿರುವ ರಕ್ತ ಎಂದೂ ನಿಲ್ಲದ ಹಾಗೆ. ಹಲವಾರು ಬಾರಿ ಸೋತು-ಗೆಲ್ಲುವ ಬದುಕನ್ನು ಎಲ್ಲರಂತೆ ನಾನೂ ಈ ವರೆಗೆ ಬದುಕಿದ್ದೇನಾದರೂ ಈ ಎರಡು ಸೋಲುಗಳ ಬಗ್ಗೆ ಯೋಚನೆ ಮಾಡಿದಷ್ಟೂ ಅಷ್ಟೇ ಗಾಢವಾಗತೊಡಗುತ್ತವೆ.

***

ಸೋಲು ೧: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನಕ್ಕೆ ಹೋದಾಗ ಅವಮಾನಿತನಾಗಿದ್ದು.

ಆಗ (೧೯೯೩-೯೪) ನಾನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕನಾಗಿದ್ದೆ (guest lecturer). ಬರೀ ಅದರ ಹಿಂದಿನ ವರ್ಷವೇ ಮೈಸೂರಿನಲ್ಲಿ ಎಂ.ಎಸ್ಸಿ., ಮುಗಿಸಿಕೊಂಡು ಬಂದು, ಸಹ್ಯಾದ್ರಿ ಹಾಗೂ ಡಿ.ವಿ.ಎಸ್. ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಪಾಠಮಾಡಿಕೊಂಡು ನನ್ನಷ್ಟಕ್ಕೆ ನಾನೇ ಇದ್ದವನಿಗೆ ಕುವೆಂಪು ವಿಶ್ವವಿದ್ಯಾನಿಲಯದ ಎಮ್.ಎಸ್ಸಿ., ವಿದ್ಯಾರ್ಥಿಗಳಿಗೂ ಪಾಠ ಮಾಡುವಂತೆ ಬುಲಾವು ಬಂತು: ಆಗಿನ್ನೂ ವಿಶ್ವವಿದ್ಯಾನಿಲಯದ ಕಟ್ಟಡಗಳು ಇನ್ನೂ ತಯಾರಿರದಿದ್ದ ಕಾರಣ ಹೆಚ್ಚಿನ ಪಾಠ ಪ್ರವಚನಗಳೆಲ್ಲ ಸಹ್ಯಾದ್ರಿ ಕಾಲೇಜಿನ ಆವರಣದಲ್ಲೇ ನಡೆಯುತ್ತಿದ್ದವು. ಅಲ್ಲದೆ ಸಹ್ಯಾದ್ರಿ ಕಾಲೇಜಿನ ಉಳಿದ ಉಪನ್ಯಾಸಕರೂ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡುತ್ತಿದ್ದರು, ಆದರೆ ಅಲ್ಲಿ ಹೊಸದಾಗಿ ಸೇರಿದ್ದ ಅರೆಕಾಲಿಕ ಉಪನ್ಯಾಸಕರಲ್ಲಿ ಎಲ್ಲರನ್ನೂ ಬಿಟ್ಟು ಈ ಕೆಲಸ ನನ್ನನ್ನೇ ಬಂದು ಸುತ್ತಿಕೊಳ್ಳುವುದೇ? ಮೊದಮೊದಲು ವಿಪರೀತ ಕಷ್ಟವಾಗುತ್ತಿತ್ತು, ಬರೀ ಪ್ರಾಕ್ಟಿಕಲ್ ತರಗತಿಗಳಿಗೆ ಹೇಳಿಕೊಡಿ ಎಂದು ಕೆಲಸಕ್ಕೆ ತೆಗೆದುಕೊಂಡವರು ಮುಂದೆ ಥಿಯರಿ ಕ್ಲಾಸಿಗೂ ಪಾಠ ಮಾಡಿ ಎಂದು ಗಂಟು ಬಿದ್ದರು.

ಹೀಗೆ ಎಲ್ಲವೂ ಬಂಗಾರವಿದ್ದಂತಹ ಒಂದು ಅಮೃತಘಳಿಗೆಯಲ್ಲಿ ಸುಮ್ಮನಿರಲಾರದ ನಾನು, Solid State Electronics ನಲ್ಲಿ ಯಾವುದೋ ಭಯಂಕರ ರಿಸರ್ಚ್ ಪ್ರಾಜೆಕ್ಟ್ ಒಂದರಿಂದ ಮೋಹಿತನಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಲು ಅರ್ಜಿ ಗುಜರಾಯಿಸಿದೆ. ನನ್ನ ಅನುಭವವನ್ನು ನೋಡಿ ನನಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂದರ್ಶನಕ್ಕೆ ಬುಲಾವು ಬಂದಿತು.

ನಾನು ಈ ಸಂದರ್ಶನಕ್ಕೆ ಹಿಂದಿನ ದಿನವೇ ಮಂಗಳೂರಿಗೆ ಹೋಗಿ ಯಾವುದಾದರೂ ಲಾಜಿಂಗ್‌ನಲ್ಲಿ ಉಳಿದುಕೊಂಡು ಮರುದಿನ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರೆ ಬುದ್ದಿವಂತನಾಗುತ್ತಿದ್ದೆ, ಆದರೆ ಆಗ ನನ್ನ ಬುದ್ಧಿ ಇನ್ನೂ ಸ್ಥಿಮಿತದಲ್ಲಿರದಿದ್ದುದರಿಂದ 'ಬೇಕಾದ್ದು ಆಗಲಿ, ಒಂದು ಕೈ ನೋಡೋಣ'ವೆಂದುಕೊಂಡು ಮುಂಜಾನೆ ಎರಡೂವರೆಗೋ-ಮೂರು ಘಂಟೆಗೋ ಶಿವಮೂಗ್ಗ ಬಿಟ್ಟು ಮಂಗಳೂರನ್ನು ಸೇರುವ ಬಸ್ಸನ್ನು ಹತ್ತಿ ಬೆಳಗ್ಗೆ ಎಂಟು ಘಂಟೆಗೆಲ್ಲ ಮಂಗಳಗಂಗೋತ್ರಿಯನ್ನು ತಲುಪುವ ಹೊತ್ತಿಗೆ ಹಣ್ಣುಗಾಯಿ-ನೀರುಗಾಯಿ ಆಗಿ ಹೋಗಿತ್ತು. ಅಲ್ಲಿ ಸ್ಥಳೀಯ ಅಭ್ಯರ್ಥಿಗಳು ಮೂರು ಜನರಿದ್ದರು, ನಾನೊಬ್ಬನೇ ಹೊರಗಿನಿಂದ ಬಂದವನು - ಮೈಸೂರಿನಲ್ಲಿ ಓದಿ, ಕುವೆಂಪುನಲ್ಲಿ ಪಾಠ ಮಾಡಿ ಸಂದರ್ಶನಕ್ಕೆ ಬಂದಿದ್ದೇನೆ ಎಂದು ನನಗೆ ಪ್ರಾಶಸ್ತ್ಯವನ್ನು ನೀಡಲಾಗಿತ್ತು.

ಸರಿ, ಎಲ್ಲರಿಗಿಂತ ಮೊದಲೇ ನನಗೆ ಒಳಗೆ ಬರುವಂತೆ ಕರೆ ಬಂದಿತು, ನಾನು ಹೋದೆ, ಒಂದು ಲೆಕ್ಚರ್ ಹಾಲ್ ನ ಕಟ್ಟೆಯ ಮೇಲೆ, ಮೇಜಿನ ಹಿಂದೆ ನಾಲ್ಕು ಜನ ಪ್ರೊಫ಼ೆಸರ್‌ಗಳು ಕುಳಿತಿದ್ದರು, ಅನಂತರ ಸಂದರ್ಶನದ ಮಧ್ಯೆ ಮತ್ತಿಬ್ಬರು ಬಂದು ಸೇರಿಕೊಂಡರು:

ಶುರುವಾಯಿತು ನೋಡಿ ಪ್ರಶ್ನೆಗಳ ಮೋಡಿ - ಸುಮಾರು ಒಂದು ಘಂಟೆ ನಡೆದಿದ್ದ ಸಂದರ್ಶನದಲ್ಲಿ ನನ್ನ ಜನ್ಮವನ್ನೇ ಜಾಲಾಡಿ ಬಿಟ್ಟರು! ಅಣು, ಪರಮಾಣು, ವಿಕಿರಣ, ಗುರುತ್ವಾಕರ್ಷಣೆ, ವಸ್ತುವಿನ ಹಲವು ಸ್ಥಿತಿಗಳ ಬಗ್ಗೆ, ಅದ್ಯಾವ್ಯಾವೋ ಫಾರ್ಮುಲಾಗಳು, ಸೂತ್ರಗಳು, ಲಾಗಳು, ಥೇರಮ್‌ಗಳು, ಒಂದೇ ಎರಡೇ - ನಾನು ಓದಿದ ಮೈಸೂರಿನ ಪಠ್ಯಕ್ರಮವನ್ನೇ ದೂರುವಂತಹ, ಎಲ್ಲ ಅಬ್ಸ್ಟ್ರಾಕ್ಟ್ ಪ್ರಶ್ನೆಗೂ ರಿಯಲ್ ಉತ್ತರವನ್ನು ಬುಡದಿಂದ ಕೇಳುತ್ತಾ ತಮ್ಮಳೊಗಿದ್ದ ಯಾವುದೋ ಜನ್ಮದ ವೈರವನ್ನೆಲ್ಲ ನನ್ನ ಮೇಲೆ ಕಾರತೊಡಗಿದರು. ಅವರು ಪ್ರಶ್ನೆಗಳನ್ನು ಕೇಳೋದು, ನಾನು ನನಗೆ ಬಂದ ಉತ್ತರವನ್ನು ಕೊಡೋದು, ಆ ಉತ್ತರಗಳ ಮೇಲೆ ಮತ್ತೆ ಪ್ರಶ್ನೆಗಳನ್ನ ಕೇಳೋರು, ನಾನು ಮತ್ತೆ ಉತ್ತರವನ್ನು ಕೊಡೋದು, ಹೀಗೆ ಮಾಡಿ-ಮಾಡಿ ಅವರೆಲ್ಲರೂ ಸುಸ್ತಾಗಿ ಹೋದರು, ನನ್ನ ಕಥೆಯಂತೂ 'ಇನ್ನು ಮಂಗಳೂರಿನ ಕಡಲಿಗೆ ಬಿದ್ದು ಬಿಡೋಣ, ಶಿವಮೊಗ್ಗಕ್ಕೆ ಹಿಂತಿರುಗಿ ಹೋಗುವುದೇ ಬೇಡ' ಎನ್ನಿಸುವಂತಾಗಿ ಹೋಗಿತ್ತು.

ಎಣಿಸಿದಂತೆ ನಾನು ಸಂದರ್ಶನದಲ್ಲಿ ನಪಾಸಾಗಿದ್ದೆ, ಅದಕ್ಕೆ ಮಂಗಳೂರಿನ ಸೆಕೆ ವಾತಾವರಣವಿದ್ದಿರಬಹುದು, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಮಜಾ ತೆಗೆದುಕೊಂಡು ನಕ್ಕ ಆ ಪ್ರೊಫೆಸರ್‌ಗಳ ಕುಹಕವಿದ್ದಿರಬಹುದು, ಅಥವಾ ಎಮ್.ಎಸ್ಸಿ., ಮುಗಿಸಿಯೂ, ಅಲ್ಲಲ್ಲಿ ಪಾಠ ಮಾಡಿಯೂ ತಲೆಯಲ್ಲಿ ಏನನ್ನೂ ತುಂಬಿಕೊಳ್ಳದ ನನ್ನ ಬುದ್ಧಿವಂತಿಕೆಯೂ ಇರಬಹುದು, ಅಥವಾ ಯಾರೂ ಹೋಗಲಾರದ ಮಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶನಕ್ಕೆ ಹೋಗಿದ್ದೇ ತಪ್ಪಾಗಿರಬಹುದು.

ಆ ದೇವರಿಗೆ ದೊಡ್ಡ ನಮಸ್ಕಾರ, ಅಂದು ನನ್ನನ್ನು ಸಂದರ್ಶನದಲ್ಲಿ ಫೇಲ್ ಆಗುವಂತೆ ಮಾಡಿದ್ದಕ್ಕೆ!

ಅಂದು ಅವರೆಲ್ಲರೂ ಮಾಡಿದ ವಿಚಿತ್ರ ಸಂದರ್ಶನ, ಅದರ ಅಸಫಲತೆ ತಂದ ನೋವು ನನ್ನನ್ನು ಬಲವಾಗಿ ಕಾಡಿತ್ತು, ಅದು ನನ್ನನ್ನು ಎಷ್ಟು ಮಾನಸಿಕವಾಗಿ ಹಿಂಸಿಸಿತ್ತೆಂದರೆ ಬಹಳ ದಿನಗಳ ಕಾಲ ಒಂದು ರೀತಿ ರೋಗಬಂದವನಂತೆ ನಡೆದುಕೊಳ್ಳಲಾರಂಭಿಸಿದ್ದೆ. ಇವತ್ತಿನ ತಿಳುವಳಿಕೆಯೇನಾದರೂ ಇದ್ದಿದ್ದರೆ ಎಲ್ಲಾದರೂ ಮನೋವೈದ್ಯರ ಬಳಿ ತೋರಿಸಿ counseling ಪಡೆದುಕೊಳ್ಳುತ್ತಿದ್ದೆನೋ ಏನೋ.

ಅಂದು ನನ್ನನ್ನು ಹಿಂಸಿಸಿ ಮಜಾ ತೆಗೆದುಕೊಂಡ ಪ್ರೊಫೆಸರುಗಳಿಗೆ ನನ್ನ ಧಿಕ್ಕಾರವಿರಲಿ, ಅವರುಗಳು ಇವತ್ತೇನಾದರೂ ನನ್ನ ಕೈಗೆ ಸಿಕ್ಕಿದರೆ ಒಂದು ಕೈ ನೋಡಿಕೊಳ್ಳುತ್ತೇನೆ, ಸದಾ ಯೂನಿವರ್ಸಿಟಿಯಲ್ಲಿ ಪಾಠ ಹೇಳಿಕೊಂಡು ಯೂನಿವರ್ಸನ್ನೇ ಕೊಂಡುಕೊಂಡಂತೆ ಆಡುವ ಅವರ ಕೊಬ್ಬನ್ನು ಇಳಿಸುವುದು ಹೇಗೆ ಎಂದು ನನಗೆ ಚೆನ್ನಾಗಿ ಗೊತ್ತು!


ಸೋಲು ೨: ನಾನು ಅಮೇರಿಕೆಗೆ ಬಂದು ಇಷ್ಟೊಂದು ವರ್ಷವಾದರೂ ನನ್ನ ಕಡೆಯಿಂದ ಯಾರೂ ಅಮೇರಿಕೆಗೆ ಬಾರದಿದ್ದುದು.

೨೦೦೧ ರಲ್ಲಿ ಅಮೇರಿಕದ ಮೇಲೆ ಭಯೋತ್ಪಾದಕರ ಧಾಳಿಯಾಗುತ್ತೆ, ಮುಂದೆ ಇರಾಕ್ ಯುದ್ಧವಾಗುತ್ತೆ, ಇಮಿಗ್ರೇಷನ್ ಲಾ ಗಳು ರಾತ್ರೋ ರಾತ್ರಿ ಬದಲಾಗುತ್ತವೆ ಎಂದು ಯಾರಿಗೆ ತಾನೇ ಗೊತ್ತಿತ್ತು? ೯೮ ರಲ್ಲಿ ನಾನು ಭಾರತಕ್ಕೆ ಹೋದಾಗ ಆದಷ್ಟು ಬೇಗ ವೀಸಾ ಪೇಪರುಗಳನ್ನು ರೆಡಿ ಮಾಡಿಕೊಂಡು ಅಮೇರಿಕದಿಂದಲೇ ನನ್ನ ಅಮ್ಮನಿಗೆ ವಿಸಿಟರ್ ವೀಸಾಕ್ಕೆ ಅರ್ಜಿ ಗುಜರಾಯಿಸುತ್ತೇನೆ ಎಂದು ಮಾತು ಕೊಟ್ಟು ಬಂದವನು - ಯಾವ್ಯಾವ ಕಾರಣಕ್ಕೋ ಏನೋ ೨೦೦೧ ರವರೆಗೂ ಅರ್ಜಿಯನ್ನೇ ಹಾಕಲಿಲ್ಲ. ಆಗೆಲ್ಲ ಬೆಂಗಳೂರಿನಲ್ಲೇ ಡ್ರಾಪ್ ಬಾಕ್ಸ್ ವ್ಯವಸ್ಥೆ ಇತ್ತು, ಕೊನೆಗೆ ಆ ಡ್ರಾಪ್ ಬಾಕ್ಸ್ ವ್ಯವಸ್ಥೆಯನ್ನು ಇನ್ನೇನು ಮುಚ್ಚಿ ಬಿಡುತ್ತಾರೆ ಎಂದು ಗೊತ್ತಾದ ತಕ್ಷಣ ನಾನು ಪರೀಕ್ಷೆಗೆ ಲಗುಬಗೆಯಿಂದ ತಯಾರಿಯಾಗುವ ವಿದ್ಯಾರ್ಥಿಯಂತೆ ಕೊನೆಯ ಕ್ಷಣದಲ್ಲಿ ನನ್ನ ಅಮ್ಮ ಹಾಗೂ ಅಣ್ಣನಿಗೆ ವಿಸಿಟರ್ ವೀಸಾಕ್ಕೆ ಅರ್ಜಿ ಹಾಕಿದೆ. ಆದರೆ ನನ್ನ ದುರಾದೃಷ್ಟಕ್ಕೋ ಏನೋ ವೀಸಾ ನಿರಾಕರಣೆಯಾಗಿ, ಅಮ್ಮ ಹಾಗೂ ಅಣ್ಣನಿಗೆ ಮದ್ರಾಸಿಗೆ ಬರುವಂತೆ ಬುಲಾವು ಬಂದಿತು. ನನಗಿಲ್ಲಿ ಹಸಿರು ಕಾರ್ಡು ಇದ್ದುದಕ್ಕೋ, ಅಥವಾ ನನ್ನ ಅಣ್ಣನ ಕಲ್ಲೀ ಮೀಸೆಗೆ ಹೆದರಿಯೋ, ಅಥವಾ ನನ್ನ ಅಮ್ಮನಿಗೆ ಮಂಡಿ ನೋವಿನಿಂದ ಹೆಚ್ಚು-ಹೆಚ್ಚು ಓಡಾಡಲು ಬರದ ಅಸಹಾಯಕತೆಯಿಂದಲೋ, ನನ್ನ ಪೆಚ್ಚು ಮೋರೆಯನ್ನು ಇನ್ನಷ್ಟು ಪೆಚ್ಚು ಮಾಡುವುದಕ್ಕೋ - ಮೊದಲ ಬಾರಿ ವೀಸಾವನ್ನು ನಿರಾಕರಿಸಿದರು.

ಸರಿ, ೨೦೦೧ ರಲ್ಲಿ ಸಿಗದೇ ಹೋದರೂ ಪರವಾಗಿಲ್ಲ, ಮತ್ತೊಮ್ಮೆ ಪ್ರಯತ್ನಿಸೋಣ ಎಂದು ೨೦೦೩ ರಲ್ಲಿ ಮತ್ತೆ ಅರ್ಜಿಯನ್ನು ಗುಜರಾಯಿಸಿದೆ - ಈ ಬಾರಿ ನನ್ನ ಅಮ್ಮನಿಗೆ ಮಾತ್ರ ಹಾಕಿದ್ದೆ, ಹಾಗಾದರೂ ಕೊಡಲಿ ಎಂಬ ಉದ್ದೇಶದಿಂದ. ಬ್ಯಾಂಕಿನ ದಾಖಲೆ ಪತ್ರಗಳನ್ನು ಎರಡೆರಡು ಬಾರಿ ಪರೀಕ್ಷಿಸಿದ್ದಾಯ್ತು, ಅವರು ಕೇಳಿದ್ದಕ್ಕಿಂತ ಹೆಚ್ಚು ದಾಖಲೆಗಳನ್ನು ತೆಗೆದುಕೊಂಡು ಹೊದರೂ, ಮತ್ತೆ ಯಾವುದೋ ಕ್ಷುಲ್ಲಕ ಕಾರಣಗಳಿಗೆ ವೀಸಾವನ್ನು ನಿರಾಕರಿಸಿದರು. ನನ್ನ ಅಣ್ಣನಿಗೆ ವೀಸಾಕ್ಕೆ ಅರ್ಜಿ ಹಾಕಿರದಿದ್ದರೂ ಅವನೇ ಅಮ್ಮನನ್ನು ಮದ್ರಾಸಿನವರೆಗೆ ಕರೆದುಕೊಂಡು ಹೋಗಿದ್ದ. ಆನವಟ್ಟಿಯಿಂದ ಬೆಂಗಳೂರಿಗೆ ಸುಮಾರು ೧೦ ಘಂಟೆ ಪ್ರಯಾಣ, ಅಲ್ಲಿಂದ ಮದ್ರಾಸಿಗೆ ಮತ್ತೆ ಹತ್ತು ಘಂಟೆ. ಮಂಡಿ ನೋವಿನಿಂದ ಹೆಚ್ಚು ಓಡಾಡಲಾಗದ ಅಮ್ಮ ಪ್ರತೀ ಸಾರಿ ಮದ್ರಾಸಿಗೆ ಹೋಗಿ ಬಂದಾಗಲು 'ಇನ್ನೊಮ್ಮೆ ಜೀವ ಹೋದ್ರೂ ಹೋಗೋದಿಲ್ಲಪ್ಪಾ' ಎಂದು ಹೇಳುತ್ತಿದ್ದಳು - ನನ್ನ ಅಣ್ಣನೂ ಎರಡು-ಮೂರು ದಿನಗಳ ಮಟ್ಟಿಗೆ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಮದ್ರಾಸಿಗೆ ಹೋಗಿ 'ವೀಸಾ ಸಿಗಲಿಲ್ಲ'ವೆಂದು ಹಿಂತಿರುಗಿ ಬರುವುದರ ಜೊತೆಗೆ ತನ್ನ ಕೈಯಲ್ಲಿನ ಕಾಸನ್ನೂ ಖಾಲಿ ಮಾಡಿಕೊಳ್ಳುತ್ತಿದ್ದ.

ಸರಿ, ಎರಡು ಸರಿಯಾಯಿತು, ಏನಾದರೂ ಮಾಡಿ ಮೂರನೇ ಸಾರಿಯಾದರೂ ಅರ್ಜಿ ಹಾಕೋಣ ಕೊಡುತ್ತಾರೆ ಎಂದರೆ ನನ್ನ ಅಮ್ಮ ಕೇಳುತ್ತಲೇ ಇರಲಿಲ್ಲ, ಸರಿ ಅವಳನ್ನು ಅವಳಷ್ಟಕ್ಕೇ ಬಿಟ್ಟು, ಮುಂದೆ ಪ್ರಯತ್ನಿಸೋಣವೆಂದು ೨೦೦೫ರಲ್ಲಿ ಮತ್ತೆ ಅರ್ಜಿ ಗುಜರಾಯಿಸಿದೆ. ಈ ಸಾರಿ ಬೆಂಗಳೂರಿನಿಂದ ಮದ್ರಾಸಿಗೆ ವಿಮಾನ ಟಿಕೇಟನ್ನು ತೆಗೆದುಕೊಟ್ಟು (ಆ ಪ್ರಯಾಣದ ದೆಸೆಯಿಂದಲಾದರೂ ಅಮ್ಮ ಮದ್ರಾಸಿಗೆ ಹೋಗಲಿ ಎಂಬ ಆಸೆಯಿಂದ), ಅಂತರ್ಜಾಲದಲ್ಲಿ ಇದ್ದ ವಿವರಗಳನ್ನೆಲ್ಲ ತಡಕಾಡಿ, ಬೆಂಗಳೂರಿನ ಚಾರ್‍ಟೆಡ್ ಅಕೌಂಟೆಂಟ್‌ರೊಬ್ಬರಿಂದ ಆಸ್ತಿ ಪಾಸ್ತಿ ಎಲ್ಲವನ್ನೂ ಸರ್ಟಿಫಿಕೇಟ್ ಮಾಡಿಸಿಕೊಂಡು, ನನ್ನ ಕೈಯಲ್ಲಿ ಆಗಬಹುದಾದ ಎಲ್ಲ ತಯಾರಿಯನ್ನೂ ಮಾಡಿಸಿ, ಹೇಳಬೇಕಾದ ಬುದ್ಧಿಮಾತನ್ನೂ ಹೇಳಿ ಅಮ್ಮನನ್ನು ವೀಸಾಕ್ಕೆ ಕಳುಹಿಸಿದರೆ, ಮೂರನೇ ಸಾರಿಯೂ ರಿಜೆಕ್ಟ್ ಮಾಡಿಬಿಟ್ಟರು. ನನ್ನ ಅಮ್ಮ ಇನ್ನು ಬದುಕಿದ್ದರೆ ಮದ್ರಾಸಿಗೆ ಹೋಗುವುದಿಲ್ಲವೆಂದು ಅಲ್ಲೆ ಶಪಥಮಾಡಿದಳೆಂದು ಕಾಣುತ್ತೆ, ವೀಸಾದ ವಿಷಯ ಬಂದಾಗಲೆಲ್ಲ ಫೋನಿನಲ್ಲಿ ಆಕೆ ಮಾತನಾಡುವುದನ್ನೇ ನಿಲ್ಲಿಸುತ್ತಾಳೆ. ನನಗಂತೂ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತೆ, ಏನು ಮಾಡುವುದಕ್ಕೂ ತೋರುವುದಿಲ್ಲ.

ಇತ್ತೀಚೆಗೆ ನನ್ನ ಅಮ್ಮನಿಗೆ ಮಂಡಿಯ ನೋವು ಉಲ್ಬಣಗೊಂಡು ಆಸ್ಪತ್ರೆಗೆ ಸೇರಿಸಿದ್ದರು, ಅವಳು ನಡೆಯುವ ದೂರ ಈಗಂತೂ ಬಹಳಷ್ಟು ಕಡಿಮೆಯಾಗಿದೆ. ಸುಮಾರು ಎಪ್ಪತ್ತರ ವಯಸ್ಸಿನ ನನ್ನ ಅಮ್ಮನಂತಹವರಿಗೆ ಕೇವಲ ಒಂದೇ ಒಂದು ತಿಂಗಳ ಮಟ್ಟಿಗೆ ವೀಸಾ ಕೊಡಿ ಎಂದು ನಾನು ಬರೆದಿದ್ದ ಪತ್ರವನ್ನೂ ಓದಿಯೂ ವೀಸಾ ಕೊಡಲು ನಿರಾಕರಿಸಿದ ಮದ್ರಾಸಿನ ಕನ್ಸಲೇಟಿನ ಆಫೀಸರರಿಗೆ ಧಿಕ್ಕಾರವಿರಲಿ. ನನ್ನ ಅಮ್ಮ ಯಾವತ್ತೂ ಅಮೇರಿಕೆಗೆ ಬರುವುದೇ ಇಲ್ಲ, ವಿದೇಶ ನೋಡುವ ಅವಳಾಸೆ ಪೂರೈಸುವುದೇ ಇಲ್ಲವೆಂದು ಗೊತ್ತಾದಾಗಲೆಲ್ಲ ಬಹಳಷ್ಟು ಬೇಸರವಾಗುತ್ತದೆ.

ನಾನು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಹೋದಾಗ ನಾಲ್ಕನೇ ಹಾಗೂ ಕಡೇ ಬಾರಿ ಪ್ರಯತ್ನಿಸಲೋ ಎಂದು ಯೋಚಿಸುತ್ತೇನೆ. ಆದರೆ ನಾನೇ ಕರೆದುಕೊಂಡು ಹೋಗಲಿ, ಇನ್ಯಾರೇ ಕರೆದುಕೊಂಡು ಹೋಗಲಿ ಒಳಗೆ ಬಿಡುವುದು ನನ್ನ ಅಮ್ಮನನ್ನು ಮಾತ್ರ - ಅದರಿಂದ ಬಹಳಷ್ಟೇನೂ ವ್ಯತ್ಯಾಸವಾಗದಿದ್ದರೂ ನನ್ನ ಅಣ್ಣನಿಗೆ ತೊಂದರೆಯಾಗುವುದು ತಪ್ಪುತ್ತದೆ. ಅಥವಾ ಯಾವುದಾದರೂ ಲಾಯರ್ ಹಿಡಿದು ಕೇಳಿ ನೋಡಿದರೆ ಹೇಗೆ, ಅಥವಾ ಕೌನ್ಸಲರ್ ಆಫೀಸರರಿಗೆ ಈಗಿನಿಂದಲೇ, ಇಲ್ಲಿಂದಲೇ ತಿವಿಯುತ್ತ ಬಂದರೆ ಹೇಗೆ...ಇನ್ನೂ ನಾನಾ ರೀತಿಯ ಆಲೊಚನೆಗಳಲ್ಲಿ ಮುಳುಗಿ ಹೋಗುತ್ತೇನೆ.

***

ಏನೂ ಮಾಡಲಾಗದ ಅಸಹಾಯಕತೆ ಬಲು ದೊಡ್ಡದು - ಅದು ಎಂಥವನನ್ನೂ ನೆಲಕ್ಕೆ ಹಚ್ಚಿ ಬಿಡಬಲ್ಲದು. ಈ ಸೋಲುಗಳಿಂದ ಆಗುವ ಪರಿಣಾಮ ಬಹಳ ಗಂಭೀರವಾದದ್ದಾದರೂ, ಪ್ರತೀ ಸಾರಿ ಇಂತಹ ಸೋಲಿಗೆ ಸಿಕ್ಕಾಗಲೆಲ್ಲ, ಪುಟಿಯುವ ಚೆಂಡಿನಂತೆ ಸೋಲಿಗೆ ಕಾರಣವಾದ ವ್ಯವಸ್ಥೆಯನ್ನು ಧಿಕ್ಕರಿಸಿ ಬದುಕುವ ಧ್ವನಿಯೂ ಮೂಡಿ ಬರುತ್ತದೆ - ನಾನು ಇದನ್ನು ಆಶಾವೇದನೆ ಎಂದು ಕರೆಯುತ್ತೇನೆ.

4 comments:

Anveshi said...

ಮೊದಲನೇ ಸೋಲಿಗೆ "ಸೋಲೇ ಗೆಲುವಿನ ಮೆಟ್ಟಿಲು" ಅಂತ ತೃಪ್ತಿಪಡಿ.
ಆದರೆ ಎರಡನೇ ಸೋಲಿನ ಬಗ್ಗೆ ನನಗೆ ಹೇಳಲೇನೂ ಉಳಿದಿಲ್ಲ, ಯಾಕಂದ್ರೆ....
ಗೊತ್ತಿಲ್ಲಾ....!
ಬಹುಶಃ ಇಂಥ ಸಂದರ್ಭದಲ್ಲಿ ಆತ್ಮೀಯರು, ಮಿತ್ರರು ನೆರವಾಗಬಹುದೇನೋ...

Anonymous said...

"ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು ಹೆಚ್ಚು" - ಎಂಬ ಗಾದೆ ಮಾತಿನಂತೆ ಅವಮಾನ ಕೊಡುವ ಪೆಟ್ಟು ಹೆಚ್ಚಿನದು. ಅದು ಮನುಷ್ಯನ ಆತ್ಮವಿಶ್ವಾಸವನ್ನೇ ಹೊಸಕಿ ಹಾಕಿಬಿಡುತ್ತದೆ. ಆದರೆ ಹಳೆಯ ಗಾಯವನ್ನು ಕೆರೆಯುತ್ತಾ ಕೂಡುವ ಬದಲು, ಅದನ್ನು ಮರೆತು
ಮುಂದೆ ಸಾಗುವುದೇ ಜೀವನ. ನಿಮ್ಮನ್ನು ಘಾಸಿಪಡಿಸಿದ ಆ ಜನರಿಗಿಂತ , ನಿಮ್ಮ ನೋವನ್ನು ಅರಿಯಬಲ್ಲ ಸಹೃದಯಿ ಸ್ನೇಹಿತರು ಈ ಪ್ರಪಂಚದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದಾರೆಂದು ಭಾವಿಸಿ. ಅಗ ಬದುಕು ಸುಂದರವೆನಿಸುತ್ತದೆ.

ನಿಮ್ಮ ತಾಯಿಯವರ ವೀಸಾ ಅಷ್ಟೊಂದು ಬಾರಿ ನಿರಾಕರಣೆಯಾಗಲು ಏನು ಕಾರಣವೆಂದು ತಿಳಿಯಲಿಲ್ಲ.

Satish said...

ಮೊದಲನೇ ಬಾರಿ 221(g):document missing, additional information required ಎಂದು ನಿರಾಕರಿಸಿದರು.

ಎರಡು ಹಾಗೂ ಮೂರನೇ ಬಾರಿ 214(b): unable to demonstrate to the satisfaction of consulate officer about returning back to India ಎಂದು ನಿರಾಕರಣೆ ಮಾಡಿದರು. ಅವರ ಜೊತೆ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ವೀಸಾಕ್ಕಾಗಿ ಹೋಗಿ ಬರುವ ಪ್ರಾಸೆಸ್ ಎಂತಹವರಿಗೂ ಕಷ್ಟಕೊಡುತ್ತದೆ.

ನನ್ನ ಅಮ್ಮನಿಗೆ ಅವರು ಇಲ್ಲಿರುವಂತೆ ಸಿಟಿಜನ್‌ಶಿಪ್ ಕೊಟ್ಟರೂ ಇರುವುದಿಲ್ಲ, ಅಲ್ಲದೇ ಬೇಕಾದಷ್ಟು ಜನ ಮಕ್ಕಳು ಮೊಮ್ಮಕ್ಕಳು ಭಾರತದಲ್ಲಿ ಇದ್ದರೂ, ಆಸ್ತಿ-ಪಾಸ್ತಿ ಇದ್ದರೂ ಅವರಿಗೆ ಇನ್ನೇನು ಪ್ರೋಫ್ ತೋರಿಸಬೇಕೋ ಯಾರಿಗೆ ಗೊತ್ತು.

ಅಮ್ಮನಿಗೆ ಇಂಗ್ಲೀಷ್ ಬರೋದಿಲ್ಲ, ಪ್ರತೀ ಸಾರಿ ಟ್ರಾನ್ಸ್‌ಲೇಟರ್ ಸಹಾಯದಿಂದನೇ ಮಾತಾಡೋದು. ಅವರೇನು ಕೇಳುತ್ತಾರೋ, ಅಮ್ಮ ಏನು ಉತ್ತರಕೊಡುತ್ತಾಳೋ ನನಗೆ ತಿಳಿಯದು, ಆದರೆ ಕೇಳಿದ ಪ್ರಶ್ನೆಗಳಿಗೆಲ್ಲ ಸರಿಯಾಗೇ ಉತ್ತರ ಕೊಟ್ಟಿರುವುದಾಗಿ ಪ್ರತೀಸಾರಿಯೂ ಅಮ್ಮ ಹೇಳುತ್ತಾಳೆ.

***

ಆದರೆ ಇದೇ ರೀತಿ ಪೇಪರುಗಳನ್ನು ತೆಗೆದುಕೊಂಡ ಹೋದ ನನ್ನ ಅತ್ತೆ-ಮಾವ ಅವರಿಗೆ (ಕನ್ನಡದಲ್ಲೇ) ಕೇವಲ ಒಂದೋ ಎರಡೋ ಪ್ರಶ್ನೆಗಳನ್ನು ಕೇಳಿ, ಇವರು ತೆಗೆದುಕೊಂಡು ಹೋದ ಯಾವ ಪೇಪರು-ಪತ್ರವನ್ನೂ ನೋಡದೇ, ಹತ್ತು ವರ್ಷಗಳ ವೀಸಾ ಕೊಟ್ಟಿದ್ದಾರೆ! ನನ್ನ ಅಮ್ಮನ ಕಥೆಯನ್ನು ಕೇಳಿ ಹೆದರಿದ್ದ ಅವರಿಗೆ ಆಶ್ಚರ್ಯವಾಯಿತಂತೆ, ನನಗೆ ಮಹಾ ಆಶ್ಚರ್ಯವಾಯಿತು.

Anonymous said...

Ha...ha....I know what you mean: My wife is facing the same kind of frustrating 'solu' in trying to get me to be a 'graduate'. IGNOU-Anna University - again IGNOU, Phoenix University, San Jose State University - 5 Univs in 10 years, all discontinued/non-starters due to one reason or another.

On the other front: My mother and my mother-in-law faced the same issue: 'Unable to demontrate to the satisfaction......'.