Friday, June 16, 2006

ಏರ್‌ಪೋರ್ಟ್‌ನಲ್ಲಿ ಡಿಲೇ ಆದಾಗ ನಾನೇನ್ ಮಾಡ್ತೀನಿ ಅಂದ್ರೆ...

ಇವತ್ತು ಟೆಕ್ಸಾಸ್‌ನಿಂದ ನಮ್ಮನೆಗೆ ಬರಬೇಕಾದ ವೆಂಕಟೇಶ್ ಫೋನ್ ಮಾಡಿ ವಿಮಾನ ತಡವಾಗಿ ಬಿಡ್ತಾ ಇದೆ, ಒಂದು ನಾಲ್ಕು ಘಂಟೇನಾದ್ರೂ ತಡವಾಗುತ್ತೆ, ನಮಗೋಸ್ಕರ ಕಾಯಬೇಡಿ ಎಂದು ಫೋನ್ ಮಾಡಿದ್ರು. ಹೀಗ್ ಮಾಡಿ ಹಾಗ್ ಮಾಡಿ ಎಂದು ಒಂದಿಷ್ಟೊತ್ತು ಮಾತನಾಡಿದ ಮೇಲೆ ನಾನೇನಾದ್ರೂ ಹೀಗೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ್ರೆ ಏನ್ ಮಾಡ್ತೀನಿ ಅಂತ ಯೋಚಿಸ್ದಾಗ ಟರ್ಮಿನಲ್ ಸಿನೆಮಾ ನೆನಪಿಗೆ ಬಂತು. ೨೦೦೪ ರಲ್ಲೇ ಬಿಡುಗಡೆಯಾದ ಈ ಸಿನೆಮಾವನ್ನು ನಾನು ನೋಡಿದ್ದು ೨೦೦೫ ರ ಕೊನೆಯಲ್ಲಿ ಅದೂ ಟಿವಿನಲ್ಲಿ ಬಂದು ಹಳಸಲು ಹೊಡೆದ ಮೇಲೆ. ನನಗೆ ಇಲ್ಲಿನ ಚಿತ್ರ ನಟ ನಟಿಯರಲ್ಲಿ ಕೆಲವೊಂದಿಷ್ಟು ಜನರನ್ನು ಕಂಡ್ರೆ ಆಗೋದೇ ಇಲ್ಲ - ಅದರಲ್ಲಿ ನಂಬರ್ ಒನ್ ಅಂದ್ರೆ ಜನ್ನಿಫರ್ ಲೋಪೆಜ್, ನಂಬರ್ ಟೂ ಅಂದ್ರೆ ಟಾಮ್ ಹ್ಯಾಂಕ್ಸ್. ಆದ್ರೆ ನಾನು ಬಹಳ ವಿರೋಧವನ್ನಿಟ್ಟುಕೊಂಡೂ ಟರ್ಮಿನಲ್ ಸಿನೆಮಾ ನೋಡಿದ ಮೇಲೆ ಟಾಮ್‌ ಹ್ಯಾಂಕ್ಸ್ ಮೇಲೆ ವಿಶೇಷ ಒಲವು ಬಂದು ಬಿಟ್ಟಿದೆ! ಆದ್ದರಿಂದ ನಂಬರ್ ಒನ್ ಹಾಗೂ ನಂಬರ್ ಟೂ ಎರಡನ್ನೂ ಜನ್ನಿಫರ್ ಲೋಪೆಜ್ ಗಳಿಸಿಕೊಂಡಿದ್ದಾಳೆ - ನನ್ನ ವಿರೋಧಕ್ಕೆ ಯಾವ ಕಾರಣ, ರೀತಿ-ನೀತಿ ಎಂದೇನೂ ಇಲ್ಲ, ಆದ್ರೆ ಏಕೋ ಏನೋ ನನಗೆ ಕೆಲವರ ಸೊಡ್ಡನ್ನ ನೋಡಿದ್ರೆ ಸುತಾರಾಂ ಆಗೋದಿಲ್ಲ - ಅದಕ್ಕೆ ಅವರ ಬಗ್ಗೆ ತಿಳಿಯದಿರುವ ನನ್ನ ಮೌಢ್ಯವೂ ಸ್ವಲ್ಪ ಮಟ್ಟಿಗೆ ಕಾರಣವೆನ್ನಬಹುದು.


ನಾನು ಸಿನಿಮಾ ನೋಡೋದೇ ಕಡಿಮೆ, ನೋಡಿದ್ರೂ ಮೊದ್ಲಿಂದ ಕೊನೇವರೆಗೆ ಕೂತು ನೋಡೋದು ಇನ್ನೂ ಕಡಿಮೆ - ಇವುಗಳಿಗೆ ಹೊರತು ಎಂಬಂತೆ ಇಲ್ಲಿ ಬಂದ ಕನ್ನಡ ಸಿನಿಮಾಗಳನ್ನು ಎಷ್ಟೇ ಕೆಟ್ಟವಾಗಿದ್ದರೂ ಅಷ್ಟೇ ಅಸ್ಥೆಯಿಂದ ನೋಡುತ್ತೇನೆ, ಅಥವಾ ಇನ್ಯಾರಾದರೂ ಶಿಫಾರಸ್ಸು ಮಾಡಿದ್ದರೆ ಏನಾದರೂ ಇದ್ದೀತೋ ಎಂದು ಕಾದು ನೋಡುತ್ತೇನೆ. ಇಷ್ಟೆಲ್ಲ ಹೇಳಿದ ಮೇಲೆ ನಾನು ಒಂದು ಸಿನಿಮಾದ ಬಗ್ಗೆ ಬರೆದೆನೆಂದು ಅದನ್ನು ವಿಮರ್ಶೆ ಎಂದು ಯಾರೂ ಕರೆಯದಿದ್ದರೆ ಸಾಕು!

ಟರ್ಮಿನಲ್ ಸಿನೆಮಾದಲ್ಲಿ ಅಂಥಾದ್ದೇನೂ ಇಲ್ಲ - ವಿಕ್ಟರ್ ಅನ್ನೋ ಒಬ್ಬ ಕ್ರಕೋಝಿಯಾ ದೇಶದ ಪ್ರವಾಸಿ ಜೆ.ಎಫ್.ಕೆ. ಏರ್‌ಪೋರ್ಟಿನಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಾನೆ - ಒಂದು ಕಡೆ ಮಿಲಿಟರಿ ಸಂಘರ್ಷಗಳಿಂದ ಅರಾಜಕತೆ ಬೆಳೆದು ಅವನ ಪಾಸ್‌ಪೋರ್ಟ್ ವೀಸಾಕ್ಕೆ ಯಾವುದೇ ಬೆಲೆ ಉಳಿಯೋದಿಲ್ಲ ಆದ್ದರಿಂದ ಅವನ ಇಮಿಗ್ರೇಷನ್ ಸ್ಟೇಟಸ್ ತೀರ್ಮಾನವಾಗೋವರೆಗೆ ಅವನು ಏರ್‌ಪೋರ್ಟಿನಲ್ಲೇ ಕಳೆಯುತ್ತಾನೆ. ಆಗಿನ ಬೆಳವಣಿಗೆ ಅವನು ತನ್ನದೇ ಒಂದು ಪ್ರಪಂಚವನ್ನು ಅಲ್ಲಿ ನಿರ್ಮಿಸಿಕೊಳ್ಳುವುದು ಮುಂತಾದವುಗಳು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ರಂಜಿಸುತ್ತವೆ. ಒಂದೇ ವಾರದಲ್ಲಿ ಅದು ಹೇಗೆ ಇಂಗ್ಲೀಷ್ ಕಲಿತು ಬಿಡುತ್ತಾನೆ ಅನ್ನೋ ತರ್ಕಗಳನ್ನೆಲ್ಲ ಬದಿಗಿಟ್ಟು ನೋಡಿದರೆ 'ಓಕೆ' ಎನ್ನಬಹುದಾದ ಸಿನಿಮಾವನ್ನು ನಿರ್ದೇಶಿಸಿದ ಸ್ಟೀವನ್ ಸ್ಪೀಲ್‌‍ಬರ್ಗ್ ಅಂಥಾದ್ದೆನೂ ಪರಿಣಾಮವನ್ನು ನನ್ನ ಮೇಲೆ ಈ ಸಿನಿಮಾದ ಮೂಲಕ ಬೀರಲಿಲ್ಲ ಆದರೆ ಟಾಮ್ ಹ್ಯಾಂಕ್ಸ್ ನ ನಟನೆ ಮಾತ್ರ ಅದ್ಭುತವಾಗಿ ಬಂದಿದೆ. ಅವನು ವಿಕ್ಟರ್ ನವೋರ್‌ಸ್ಕಿಯ ಪಾತ್ರಕ್ಕೆ ಖಂಡಿತವಾಗಿ ನ್ಯಾಯವನ್ನು ಒದಗಿಸಿದ್ದಾನೆ. ಈ ಸಿನಿಮಾವನ್ನು ನೋಡುವವರೆಗೂ ಟಾಮ್ ಹ್ಯಾಂಕ್ಸ್ ಎಂದರೆ ಅಷ್ಟಕಷ್ಟೇ ಅನ್ನೋನು ಅವನ್ ಫ್ಯಾನ್ ಆಗಿ ಹೋಗಿದ್ದೇನೆ. ಆದರೆ ನಾನು ಮೇಲೆ ಬಿದ್ದೇನೂ ಟಾಮ್ ಹ್ಯಾಂಕ್ಸ್‌ನ ಬೇರೆ ಸಿನಿಮಾಗಳನ್ನೇನೂ ನೋಡಿಲ್ಲ, ನೋಡೋದೂ ಇಲ್ಲ - ಯಾವತ್ತಾದರೂ ಅವನ ಸಿನಿಮಾಗಳು ಬಂದಾಗ ಪುರುಸೊತ್ತಿದ್ದರೆ ನೋಡಿದರಾಯಿತು ಎಂದು ಸುಮ್ಮನಿದ್ದೇನೆ.


ನಾನು ಒಮ್ಮೆ ಫ್ರ್ಯಾಂಕ್‌ಫರ್ಟ್ ಏರ್‌ಪೋರ್ಟಿನಲ್ಲಿ ಪೈಲಟ್‌ಗಳು ಮುಷ್ಕರ ಮಾಡಿದ್ದರಿಂದ ಅರ್ಧ ದಿನ ಸಿಕ್ಕಿ ಹಾಕಿಕೊಂಡಿದ್ದೆ. ಆಗ ಅಲ್ಲಿ ಏರ್‌ಪೋರ್ಟಿನಲ್ಲಿ ಓದಲು ಬರೆಯಲು ಬೇಕಾದಷ್ಟು ವಸ್ತುಗಳಿದ್ದರೂ ನಾನು ಒಂದು ಕಡೆ ಕುಳಿತು ಅಲ್ಲಿ ಟರ್ಮಿನಲ್‌ನಲ್ಲಿ ಬಂದು ಹೋಗುವ ಪ್ರಯಾಣಿಕರನ್ನೆಲ್ಲ ಗಮನಿಸುತ್ತಿದ್ದೆ. ಎಷ್ಟೋ ತರಾವರಿ ಮುಖಗಳ ದರ್ಶನವಾಗಬೇಕೆಂದರೆ ಒಂದು ಅಂತಾರಾಷ್ಟ್ರೀಯ ಏರ್‌ಪ್ರೋರ್ಟಿಗಿಂತಲೂ ಮತ್ತ್ನಿನ್ಯಾವ ಪ್ರಶಸ್ತ ಸ್ಥಳ ಬೇಕು? ಬರೀ ಅಲ್ಲಿ ಹೋಗಿ ಬರುವವರ ಮುಖಗಳನ್ನು ಓದುತ್ತಾ ಹೋದರೆ ಒಂದೆರಡು ಘಂಟೆಗಳಲ್ಲಿ ಎಂತಹವನೂ ಮನಶಾಸ್ತ್ರಜ್ಞನಾಗಬಹುದು! ಕೆಲವು ಮುಖಗಳಲ್ಲಿ ತೀಕ್ಷ್ಣವಾದ ನೋವಿನ ಗೆರೆಗಳು, ಇನ್ನು ಕೆಲವು ಮುಖಗಳಲ್ಲಿ ಅನಿಶ್ಚಯತೆ. ಕೆಲವು ಜನರಲ್ಲಿ ಸಂಭ್ರಮ, ಇನ್ನು ಕೆಲವರಲ್ಲಿ ಕೊರಗು ಮುಂತಾಗಿ ಎಷ್ಟೋ ವಿಧವಿಧವಾದ ಜನರನ್ನು ಅಲ್ಲಿ ಗುರುತಿಸುತ್ತಿದ್ದೆ - ಅವರನ್ನೆಲ್ಲ ನೇರವಾಗಿ ನೋಡದಂತೆ ಕಪ್ಪು ಗಾಜಿನ ಕನ್ನಡಕ ಸಹಾಯ ಮಾಡಿತ್ತು. ಕೈಯಲ್ಲಿ ಓದುವುದಕ್ಕೆ ಯಾವುದಾದರೂ ವೃತ್ತಪತ್ರಿಕೆಯೋ ಮತ್ತೊಂದೋ ಇದ್ದೇ ಇರುತ್ತೆ ಆದರೆ ಒಂದು ಏರ್‌ಪೋರ್ಟಿನಲ್ಲಿ ಬಂದು ಹೋಗುವ ನಾನಾ ದೇಶದ ಜನರು ಒಂದೇ ಕಡೆ ನೋಡಲು ಸಿಗುವುದು ಅಪರೂಪ. ಅಲ್ಲಲ್ಲಿ ನಡೆದಾಡುವ ಜನರನ್ನು ಗುರುತಿಸಿಕೊಂಡು ಇವರು ಯಾವ-ಯಾವ ದೇಶದವರಿದ್ದಿರಬಹುದು, ಮಂಗನಿಂದ ಮಾನವನಾಗಿ ಬೆಳೆದ/ಬೆಳೆಯುತ್ತಿರುವ ನಮ್ಮ ಪರಂಪರೆಯಲ್ಲಿ ಇವರ ತಳಿ ಎಲ್ಲಿ ಇದ್ದಿರಬಹುದು, ಕೆಲವರ ಮುಖ ಲಕ್ಷಣಗಳು ಹೀಗೇಕೆ, ಅವರ ಮೈ ಬಣ್ಣವನ್ನು ನೋಡಿ ಭೂಮಿಯ ಸಮಭಾಜಕ ವೃತ್ತದಿಂದ ಅವರು ಅಥವಾ ಅವರ ಪೋಷಕರು ಹುಟ್ಟಿದ ದೇಶ ಎಷ್ಟು ದೂರವಿದ್ದಿರಬಹುದು ಮುಂತಾದವುಗಳನ್ನು ಕೂಲಂಕಷವಾಗಿ ಹಿಡಿದು ಯೋಚಿಸುವುದರಲ್ಲೇ ಸಾಕಾಗಿ ಹೋಗುತ್ತದೆ. ಕಪ್ಪು, ಬಿಳಿ, ಕಂದು, ಹಳದಿ, ಕೆಂಪು ಮುಂತಾದ ಚರ್ಮದ ಬಣ್ಣದವರ ಮಿಶ್ರ ಸಂತಾನಗಳಂತೂ ಇನ್ನೂ ಕುತೂಹಲವನ್ನು ಹುಟ್ಟುಸುತ್ತವೆ.

ನನಗೆ ಕನೆಕ್ಷನ್ ಫ್ಲೈಟ್ ತಪ್ಪಿ ಹೋಗದೇ ಇದ್ದು ನನ್ನ ಫ್ಲೈಟ್ ತಡವಾದರೆ ಒಂದಿಷ್ಟು ಹೊತ್ತು ಏರ್‌ಪೋರ್ಟ್‌ನಲ್ಲಿ ಕಳೆಯುವುದಕ್ಕೆ ಯಾವ ಬೇಸರವೂ ಇಲ್ಲ. ದಿನ ಬೆಳಗಾದರೆ ಕಂಪ್ಯೂಟರ್ ಪರದೆ ಅಥವಾ ಪುಸ್ತಕ/ಪೇಪರ್‌‌ಗಳಲ್ಲಿ ತಲೆ ಹುದುಗಿಸಿಕೊಳ್ಳುವ ನನಗೆ ಅದು ಜನರೊಡನೆ ಬೆರೆಯಲು, ಜನರ ಬಗ್ಗೆ ತಿಳಿದುಕೊಳ್ಳಲು ಮತ್ತೊಂದು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದಲೇ ಡಿಲೇ ಅನ್ನೋದು ನನ್ನ ದೃಷ್ಟಿಯಿಂದ ಕೆಟ್ಟದಂತೂ ಅಲ್ಲ!

4 comments:

Anveshi said...

ಅಂತರಂಗಿಗಳೆ,
ನೋವಿನಲ್ಲೂ ನಲಿವು ಕಾಣುವುದು ಇಂದಿನ ಜೀವನದ ಅವಶ್ಯಕತೆಗಳಲ್ಲೊಂದು.

ಆದ್ರೆ ನೀವು ಕನ್ನಡದ ಮಚ್ಚು-ಲಾಂಗು-ಕೊಚ್ಚು, ಹಿಡಿ, ಬಡಿ ಸಿನಿಮಾಗಳನ್ನು ಅಷ್ಟೊಂದು ಅಚ್ಚುಮೆಚ್ಚಿನಿಂದ ನೋಡುವುದೇಕೆ?
ಮಚ್ಚಿನದೇ ನಿಮಗೆ ಮೆಚ್ಚಿನದು ಆಯಿತೆ?

Satish said...

ಅನ್ವೇಷಿಗಳೇ,
ಮಚ್ಚಿನ ಚಿತ್ರಗಳು ಖಂಡಿತವಾಗಿ ಸೇರೋದಿಲ್ಲ, ಇಲ್ಲಿ ನಾವಿರುವಲ್ಲಿ ಅವುಗಳ ಹಾವಳಿ ಅಷ್ಟೊಂದು ಇಲ್ಲ.
ಮಚ್ಚಿನ ಚಿತ್ರಗಳು ಮೆಚ್ಚುಗೆಯಾಗದಿದ್ದರೂ ಕೆಲವೊಮ್ಮೆ 'ಪೋಲೀಸ್' ಪಾಟೀಲರ ನಾನ್‌ಸ್ಟಾಪ್ ಡೈಲಾಗ್‍ಗಳನ್ನು ಕೇಳುವುದಕ್ಕೆಂದೇ ನೋಡಿದ್ದಿದೆ.

Vishwanath said...

ನೀವು ಹೇಳಿದಂತೆ ಆಬ್ಸರ್ವೇಶನ್ ನಿಜಕ್ಕೂ ರೋಮಾಂಚಕ.

ಅದರಲ್ಲೂ ಬೇರೆ ಬೇರೆ ದೇಶಗಳ ಜನ ಒಂದೇ ಸೂರಿನಡಿ ನೋಡುವುದು, ಅವರ ಮುಖದಲ್ಲಿನ ಭಾವನೆಗಳಿಂದಲೇ ಅವರ ಮನಸ್ಸಿನ ಭಾವನೆಗಳನ್ನು ಓದುವುದಿದೆಯಲ್ಲ ಪುಸ್ತಕ-ಪತ್ರಿಕೆಯನ್ನು ಓದುವುದಕ್ಕಿಂತಲೂ ಹೆಚ್ಚು ಖುಷಿ ಕೊಡುತ್ತದೆ.

Shrilatha Puthi said...

ಹೌದು, ಈ ತರ ಜನರನ್ನು ಗಮನಿಸೋದು ಕೆಲವರಿಗೆ ಒಂದು ಹವ್ಯಾಸ ಗೊತ್ತಾ? ಬೆಂಗ್ಳೂರಲ್ಲಿ ಹಾಗೆ ಕೆಲವು ಜನ ಸುಮ್ನೆ ಹೋಗಿ ಮೆಜಿಸ್ಟಿಕ್ ಬಸ್ ಸ್ಟ್ಯಾಂಡಲ್ಲಿ, ರೈಲ್ವೇ ಸ್ಟೇಶನ್ನಲ್ಲಿ ಕೂತ್ಕೊಂಡು ಹೋಗೋ ಬರೋ ಜನಗಳನ್ನ ನೋಡ್ತಾ ಇರ್ತಾರಂತೆ..

ಆಮೇಲೆ Tom Hanks & J Lo ವಿಷಯ, ನನ್ಗೆ Tom Hanks most favorite. ನೀವು ಅವ್ನ Cast Away ಮುಂತಾದ ಸಿನಿಮಾಗಳನ್ನು ನೋಡಿ, he's one of the best actors of our generation.

J Lo ನನಗೆ ಸಿನಿಮಾಗಳಲ್ಲಿ ಇಷ್ಟಾನೇ, she looks decent in movies. ನನ್ಗೆ Wedding Planner, Maid in Manhattan ಇಷ್ಟ ಆಯ್ತು.