Friday, June 23, 2006

ಸೈಕಲ್ ರಿಕ್ಷಾದ ಜೊತೆಯಲ್ಲಿ ಬರುವ ಬಳುವಳಿ

ಉತ್ತರ ಭಾರತವನ್ನು ಸುತ್ತಿಬಂದವರಿಗೆ ಚೆನ್ನಾಗಿ ಗೊತ್ತಿರೋ ಹಾಗೆ ಸೈಕಲ್ ರಿಕ್ಷಾಗಳು ಬೇಕಾದಷ್ಟು ಶಹರಗಳ ಜೀವನಾಡಿ. ಕೆಲವೊಂದು ಶಹರಗಳ ಮುಂದುವರೆದ ಪ್ರಾಂತ್ಯಗಳಲ್ಲಿ ಇವುಗಳಿಗೆ ನಿಷೇಧವಿದ್ದರೂ ಉಳಿದೆಡೆಗಳಲ್ಲಿ ಬಡವರ ಇಂಧನ ರಹಿತ, ಪರಿಸರ ಪ್ರೇಮಿ ವಾಹನವೆಂದರೆ ಇದೇ ಇರಬೇಕು. ನನಗಾದಂತೆ ಎಷ್ಟೋ ಜನರಿಗೆ ಆಶ್ಚರ್ಯವಾಗುವುದಾದರೆ ನಮ್ಮ ಕರ್ನಾಟಕದಲ್ಲೂ ಸೈಕಲ್‌ರಿಕ್ಷಾಗಳಿವೆ, ಆದರೆ ಉತ್ತರಭಾರತದವುಗಳಿಗಿಂತ ನಮ್ಮಲ್ಲಿರುವ ಇವುಗಳ ಪರಂಪರೆ ಬೇರೆ.

ಬನಾರಸ್‌ನಲ್ಲಿ ಆಗಾಗ್ಗೆ ಸೈಕಲ್ ರಿಕ್ಷಾ ಏರುತ್ತಿದ್ದೆನಾದರೂ ಅವುಗಳ ಪರಿಸರ ಪ್ರೇಮಿ ನಿಲುವುಗಳಿಗಿಂತಲೂ ಅವುಗಳನ್ನು ತಮ್ಮ ಜೀವವನ್ನೇ ಭಾರಹಾಕಿ ಜೀಕಿ-ಜೀಕಿ ಕಷ್ಟಪಟ್ಟು ತುಳಿಯುವವರ ಕಷ್ಟವನ್ನು ನೋಡಲಾಗದೇ ಎಷ್ಟೋ ಸಾರಿ ನಡೆದೋ ಅಥವಾ ಮತ್ಯಾವುದೋ ರೀತಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಿದ್ದಿದೆ. ಬನಾರಸ್‌ನಲ್ಲಿ ಸೈಕಲ್‌ರಿಕ್ಷಾದವರದ್ದು ಒಂದು ರೀತಿಯ ಜೀತವೆಂದೇ ಹೇಳಬೇಕು - ದಿನವೊಂದಕ್ಕೆ ಆಗ ಹದಿನಾರು-ಇಪ್ಪತ್ತು ರೂಪಾಯಿ ಕೊಟ್ಟು ಬಾಡಿಗೆಗೆ ರಿಕ್ಷಾ ಪಡೆದು ಅದರಲ್ಲಿ ಸುಮಾರು ನಲವತ್ತು ಐವತ್ತು ರೂಪಾಯಿಗಳನ್ನು ದುಡಿದು ಅಸಲು ಕಳೆದು, ಅದು ತಂದ ಮೈ ನೋವನ್ನು ಪರಿಹರಿಸಿಕೊಳ್ಳಲು ಮದ್ಯದ ಶರಣಾಗಿ ಹೋಗಿ ಉಳಿಯುವುದು ಬಹಳ ಕಡಿಮೆ, ಅಂತದ್ದರಲ್ಲಿ ಅವರನ್ನು ನಂಬಿಕೊಂಡು ಬದುಕುವುದಿರಲಿ ಅವರು ಬದುಕುವುದೇ ಹೆಚ್ಚು - ಆದ್ದರಿಂದಲೇ ತಲತಲಾಂತರದಿಂದ ರಿಕ್ಷಾ ತುಳಿಯುವವರ ಸ್ಥಿತಿ-ಗತಿಯಲ್ಲಿ ಅಂತಾದ್ದೇನೂ ಬದಲಾವಣೆಗಳಾಗಿದ್ದನ್ನು ನಾನು ನೋಡಿಲ್ಲ. ಉತ್ತರದ ಕೆಟ್ಟ ಛಳಿ ಅಥವಾ ಘೋರ ಬಿಸಿಲಿನಲ್ಲೂ ಮೈಮೇಲೆ ಕಡಿಮೆ ಬಟ್ಟೆಯಿಂದ ಉಸಿರುಬಿಡುತ್ತಾ ಜೀಕಿ-ಜೀಕಿ ಸೈಕಲ್ ತುಳಿಯುವುದು ಸುಲಭದ ಮಾತೇನೂ ಅಲ್ಲ. ಆದರೆ ಆ ರಿಕ್ಷಾದಲ್ಲೂ ಗುಂಪಾಗಿ ಕುಳಿತುಕೊಂಡವರ ದೇಹ ಪ್ರಕೃತಿಗೂ, ಜೀವ ಸೆಲೆಗೂ ಅದನ್ನು ಬಿಸಿಲು-ಛಳಿಯಲ್ಲಿ ನೂಕುವ ರಿಕ್ಷಾವಾಲಾಗಳ ಬದುಕಿಗೂ ಬಹಳಷ್ಟು ವ್ಯತ್ಯಾಸ ಕಾಣಿಸುತ್ತದೆ.

ನಾನು ಒಮ್ಮೆ ಬನಾರಸ್‌ನಿಂದ ಕರ್ನಾಟಕಕ್ಕೆ ಬರುವಾಗ ರೈಲನ್ನು ಗುಲ್ಬರ್ಗದ ವಾಡಿಯಲ್ಲೇ ಇಳಿದು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಮೂಲಕ ರಾಯಚೂರಿಗೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ ಬಂದಿದ್ದೆ. ಕರ್ನಾಟಕವೆಂದರೆ ಬರೀ ಬೆಂಗಳೂರು-ಶಿವಮೊಗ್ಗವೆಂದು ಆಗ ನಂಬಿಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು. ನಾನು ರಾಯಚೂರಿನಲ್ಲೂ ಈ ಸೈಕಲ್‌ರಿಕ್ಷಾಗಳನ್ನು ನೋಡಿ ಒಮ್ಮೆ ತತ್ತರಿಸಿದ್ದೆ - ಅಂದರೆ ನಾನು ಕಂಡ ಬನಾರಸ್‌ನ ಬಡತನ, ಹಿಂದುಳಿದ ಪರಂಪರೆಯನ್ನು ನೋಡಲು ಶಿವಮೊಗ್ಗದಿಂದ ಬಹಳಷ್ಟು ದೂರವೇನೂ ಹೋಗಬೇಕಾಗಿರಲಿಲ್ಲ. ಇವತ್ತಿಗೂ ಸಹ ನಮ್ಮ ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ - ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಉತ್ತರ ಭಾರತದ ಹಲವಾರು ಜಿಲ್ಲೆಗಳು ಪ್ರಗತಿಯಿಂದ ಇನ್ನೂ ಬಹಳಷ್ಟು ದೂರದಲ್ಲಿರೋದು ಸತ್ಯ. ನನ್ನ ಸ್ನೇಹಿತರೊಬ್ಬರು ವಿವರಿಸಿದ ಹಾಗೆ ಅಲ್ಲಲ್ಲಿ ಆಗಾಗ ಏಳೋ 'ಕರ್ನಾಟಕ ವಿಭಜನೆ'ಯ ಕೂಗಿನ ಹಿಂದೆ ಉತ್ತರ ಕರ್ನಾಟಕದ ಈ ಸಾಮಾಜಿಕ ಹಿನ್ನೆಡೆಯೂ ಸಹ ಒಂದು. ಈ ಹಿಂದುಳಿದ ಜಿಲ್ಲೆಗಳ ಪ್ರಜಾನಾಯಕರ ಧ್ವನಿ ಇಂದಿಗು ವಿಧಾನ ಸಭೆ-ಪರಿಷತ್ತುಗಳಲ್ಲಿ ಕ್ಷೀಣವೆಂದೇ ಹೇಳಬೇಕು, ಸಂಖ್ಯೆಯ ಬಲದಿಂದ ಸಮಾನ ರೆಪ್ರೆಸೆಂಟೇಷನ್ ಸಿಕ್ಕಿದರೂ ಉತ್ತರದ ನಾಯಕರು ತಮ್ಮ ಧ್ವನಿಯನ್ನು ದಾಖಲಿಸಲು ಅದೇಕೆ ಹಿಂದು-ಮುಂದು ನೋಡುತ್ತಾರೋ ಯಾರು ಬಲ್ಲರು?

ನನಗೆ ಆಶ್ಚರ್ಯವಾಗುವಂತೆ ನ್ಯೂ ಯಾರ್ಕ್ ನಗರದಲ್ಲೂ ಸೈಕಲ್ ರಿಕ್ಷಾಗಳಿವೆ - ಆದರೆ ಇಲ್ಲಿನ ರಿಕ್ಷಾವಾಲಾಗಳು ನಮ್ಮವರ ಹಾಗೆ ತಮ್ಮ ಮೇಲೆ ನಡೆದ ದಬ್ಬಾಳಿಕೆ, ದೌರ್ಜನ್ಯಗಳ ಪ್ರತೀಕಾರವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳದೇ ಬದಲಿಗೆ 'ಎಂತಹ ಟ್ರಾಫಿಕ್ ಕಂಜೆಷನ್‌ನಲ್ಲೂ ಮುಂದೆ ಹೋಗುತ್ತೇವೆ', ಅಥವಾ 'ಪರಿಸರ ಪ್ರೇಮಿ ನಡೆ' ಎಂದು ತಮ್ಮನ್ನು ತೋರಿಸಿಕೊಳ್ಳುವುದನ್ನು ನೋಡಿದ್ದೇನೆ. ನಮ್ಮಲ್ಲಿ ಜೀವನ ಪರ್ಯಂತ (ಅಥವಾ ಸಾಯುವವರೆಗೆ) ಕೆಲವರು ರಿಕ್ಷಾವನ್ನು ಓಡಿಸಿದರೆ ಇಲ್ಲಿನವರಲ್ಲಿ ಕೆಲವು ಕಾಲ ಮಾತ್ರ ಓಡಿಸುವ ಹೆಚ್ಚಿನವರು ಯುವಕರೆಂದೇ ಹೇಳಬೇಕು. ಹೀಗೆ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸೈಕಲ್‌ರಿಕ್ಷಾವಾಲಾಗಳು ವಿಧವಿಧವಾದ ಪ್ರತೀಕವನ್ನು ಹೊತ್ತವರಂತೆ ಕಂಡುಬರುತ್ತಾರೆ, ಆದರೆ ಅವರ ಮುಖದಲ್ಲಿ ತೋರೋ ಬಳಲಿಕೆ, ಆಯಾಸಗಳಲ್ಲಿ ಯಾವ ವ್ಯತ್ಯಾಸವೂ ಕಾಣಿಸೋದಿಲ್ಲ.


ಉಳಿದ ವಾಹನಗಳ ಹಾಗೆ ಸೈಕಲ್‌ರಿಕ್ಷಾಗಳು ಸರ್ವಾಂತರ್ಯಾಮಿಳಲ್ಲ, ಆದರೆ ಅವುಗಳು ಇದ್ದಲ್ಲಿ ಒಂದು ಪರಂಪರೆಯನ್ನು ಜೀವಂತವಾಗಿಡುತ್ತವೆ, ಸೈಕಲ್‌ರಿಕ್ಷಾಗಳ ಜೊತೆಯಲ್ಲಿ ಒಂದು ಭಾಗ್ಯಹೀನ ಬದುಕೂ ಸಹ ಜೊತೆಯಲ್ಲೇ ಬಳುವಳಿಯಾಗಿ ಬರುತ್ತದೆ - ಅವುಗಳು ಉಳಿಸುವ ಇಂಧನದ ಮಾತು ಹಾಗಿರಲಿ, ಹೊಟ್ಟೆ ಬೆನ್ನಿಗಂಟಿದ ಗೂರಲು ವ್ಯಕ್ತಿಯೊಬ್ಬ ತನ್ನ ಕಸುವು ಮೀರಿ ತುಳಿಯುವ ಕ್ರಿಯೆ ಎಂಥವರ ಹೊಟ್ಟೆ ಚಳಕ್ ಎನ್ನಿಸುವುದಕ್ಕೂ ಸಾಕು. ಈ ಸಂಕಷ್ಟದಿಂದ ಹೊರಗಿರುವುದಕ್ಕೋಸ್ಕರವೇ ನನ್ನ ಹಾಗೆ ಎಷ್ಟೋ ಜನ ಅವುಗಳನ್ನು ಸವಾರಿ ಮಾಡುವುದಿಲ್ಲ, ಒಂದುವೇಳೆ ಹಾಗೇನಾದರೂ ಮಾಡಿದರೂ ಆ ಪ್ರಯಾಣ ಹೆಚ್ಚು ಕಾಲ ನೆನಪಿನಲ್ಲುಳಿಯುವುದಂತೂ ನಿಜ.

No comments: