Tuesday, June 06, 2006

ಮಾಡುವ ಕೆಲಸವೂ ಹೋಗಿ ಇಮಿಗ್ರೇಷನ್ ಸ್ಟೇಟಸ್ಸೂ ಹೋದರೆ?

ದಿನ ನನ್ನ ಸಹೋದ್ಯೋಗಿ ಮಿತ್ರರಿಬ್ಬರ ಜೊತೆ ಚಾಟ್ ಮಾಡುತ್ತಿದ್ದಾಗ ಇದೇ ಸೋಮವಾರ ಬಂದ, ಪ್ರಸ್ತುತ ಹಣಕಾಸಿನ ಸನ್ನಿವೇಶ ಹಾಗೂ ಕಾಸ್ಟ್ ಕಟ್ಟಿಂಗ್‌ಗಳನ್ನು ಮುಖ್ಯವಾಗಿ ಕಾರಣವಾಗಿ ನೀಡಿ ಮುಂಬರುವ ಲೇ ಆಫ್ ಅನ್ನು ಕುರಿತ ಮೇಲಿನವರೊಬ್ಬರ ಇ-ಮೇಲ್ ಬಗ್ಗೆ ಚರ್ಚಿಸುತ್ತಿದ್ದೆ. ಅವರಿಬ್ಬರೂ ಚಾಟ್ ವಿಂಡೋನಲ್ಲಿ ತಮ್ಮ ಭಾವನೆಗಳನ್ನೇನೂ ಹೇಳಿಕೊಳ್ಳದಿದ್ದರೂ ಇನ್ನೂ ಗ್ರೀನ್‌ಕಾರ್ಡ್‌ನ ಪ್ರೋಸೆಸ್ಸಿಂಗ್ ಗೊಂದಲದಲ್ಲಿ ಸಿಕ್ಕು ಪ್ರತಿವರ್ಷವೂ h1B ವೀಸಾವನ್ನು ಅವಧಿ ವಿಸ್ತರಿಸಿಕೊಳ್ಳುತ್ತಿರುವ ಅವರ ಕಷ್ಟಗಳು ಸ್ಪಷ್ಟವಾಗಿ ಗೋಚರಿಸತೊಡಗಿತು. ಅವರಿಗೆ ಬೇಕಾಗಿಯೋ ಬೇಡವಾಗಿಯೋ ಇಲ್ಲಿರಲೇ ಬೇಕಾದ ಸಂದರ್ಭವನ್ನು ನೆನೆದು, ಒಂದುವೇಳೆ ಈ ಲೇ ಆಫ್‌ನಲ್ಲಿ ಅವರೇದೇನಾದರೂ ಕೆಲಸ ಹೋದರೆ ಮುಂದೆ ಏನು ಮಾಡುತ್ತಾರೋ ಎಂದೆನಿಸಿ ಸ್ವಲ್ಪ ಬೇಸರವೂ ಆಯಿತು.


೨೦೦೧ ರಲ್ಲಿ ಅಮೇರಿಕಕ್ಕೆ ಭಯೋತ್ಪಾದಕರು ಧಾಳಿ ಮಾಡುವ ಮುನ್ನ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ೯೦ ರ ದಶಕದ ಮಧ್ಯದ ತರುವಾಯ ಅನೇಕಾನೇಕರು ನನ್ನ ಹಾಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೆ ಒಂದಲ್ಲ ಒಂದು ವೀಸಾದಲ್ಲಿ (ಹೆಚ್ಚಿನವರು h1B ವೀಸಾದಲ್ಲಿ) ಇಲ್ಲಿಗೆ ಬಂದಿದ್ದೆವು. ಹೀಗೆ ಬಂದವರಲ್ಲಿ ಕೆಲವರು ೨೦೦೦ ಇಸವಿಯ ಹೊತ್ತಿಗೆ ಶುರುವಾದ ಡೌನ್ ಟೈಮ್‌ನ್ನು ನೆಪಮಾಡಿಕೊಂಡು ಭಾರತಕ್ಕೆ ಹೊರಟುಹೋದರು, ಇನ್ನು ಕೆಲವರು ಒಂದಲ್ಲ ಒಂದರಲ್ಲಿ ಕೆಲಸ ಮುಂದುವರೆಸಿಕೊಂಡು (ನನ್ನ ಹಾಗೆ) ಇಲ್ಲೇ ಉಳಿದುಕೊಂಡರು, ಮತ್ತೆ ನನಗೆ ಗೊತ್ತಿರುವಂತೆ ಸ್ವಲ್ಪ ಜನ ಆರು ವರ್ಷಗಳ h1B ವೀಸಾದ ಅವಧಿಯ ನಂತರ ಹಿಂತಿರುಗಿದವರೂ ಇದ್ದಾರೆ. ೨೦೦೧ ರ ಹೊತ್ತಿಗೆ ಅಥವಾ ಅದಕ್ಕಿಂತ ಮೊದಲು ಗ್ರೀನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚೂ ಕಡಿಮೆ ಎಲ್ಲರಿಗೂ ಒಂದೆರಡು ವರ್ಷಗಳಲ್ಲಿ ಗ್ರೀನ್‌ಕಾರ್ಡ್ ಬಂದಿರಬಹುದು ಎಂಬುದು ನನ್ನ ಊಹೆ, ೨೦೦೨, ೨೦೦೩ ರ ನಂತರವೇ ಗ್ರೀನ್‌ಕಾರ್ಡ್ ಪ್ರಾಸೆಸ್ಸಿಂಗ್‌ನಲ್ಲಿ ಹಿಂದೆಂದಿಗೂ ಆಗದ ವಿಳಂಬವೂ, ಬ್ಯಾಕ್‌ಗ್ರೌಂಡ್ ಚೆಕ್ಕೂ ಅದೂ-ಇದೂ ಎಂದು ವಿಪರೀತ ಸಮಯ ತೆಗೆದುಕೊಳ್ಳುವುದೂ ನಡೆದು ಕೆಲವರು ಲೇಬರ್ ಪ್ರಾಸೆಸ್ಸಿಂಗ್‌ನಿಂದಲೇ ಇನ್ನೂ ಹೊರಬಂದಿಲ್ಲ, ಇನ್ನು ಕೆಲವರು ಎರಡನೇ ಅಥವಾ ಮೂರನೇ ಹಂತದಲ್ಲೂ ಸಾಕಷ್ಟು ವಿಳಂಬವನ್ನು ಅನುಭವಿಸಿದ್ದಾರೆ. ಈ ವಿಳಂಬದ ಚಕ್ರದಲ್ಲಿ ಸಿಕ್ಕಿಕೊಂಡು ಒಮ್ಮೆ ತಮ್ಮ h1B ವೀಸಾದ ಆರು ವರ್ಷಗಳನ್ನು ಮುಗಿಸಿಕೊಂಡರೆ ಅದರಷ್ಟು ನೋವಿನ ಕೆಲಸ ಮತ್ತೊಂದಿಲ್ಲ. ಒಂದು ಕಡೆ ಕಂಪನಿಗಳು ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಕಡಿಮೆ ಖರ್ಚು ಮಾಡಲು ಹೆಣಗುತ್ತಿರುವಾಗ ಹೀಗೆ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳಬಯಸುವ ಪ್ರತಿಯೊಬ್ಬನ ಮೇಲೂ ಕಡಿಮೆ ಎಂದರೆ ಒಂದು ಸಾವಿರ ಡಾಲರನ್ನಾದರೂ ಖರ್ಚು ಮಾಡಬೇಕು, ಹೀಗೆ ಎಷ್ಟು ಬಾರಿ ಮಾಡಬಹುದು, ಒಮ್ಮೆ, ಎರಡು ಬಾರಿ ಅಥವಾ ಮೂರು ಬಾರಿ. ಕೊನೆಗೆ ಒಂದು ದಿನ ಇವನಿಗೆ ವೀಸಾ ಅವಧಿಯನ್ನು ವಿಸ್ತರಿಸುವ ಬದಲು ಇವನ ಬದಲಿಗೆ ಬೇರೆ ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಂಡರೆ ಹೇಗೆ ಎಂದು ಅನ್ನಿಸದೇ ಇರದು.

ಟೆಕ್ನಾಲಜಿಯೇ ಮುಖ್ಯ ವ್ಯವಹಾರವಾಗಿ ಮಾಡಿಕೊಂಡಿರದ ಕಂಪನಿಗಳು, ಅವುಗಳಲ್ಲಿನ IT ಡಿವಿಜನ್ನುಗಳು ತಮ್ಮಲ್ಲಿನ ಕೆಲಸಗಾರರನ್ನು ಕಳೆದುಕೊಂಡು ಸಣ್ಣವಾಗುತ್ತಿರುವುದಕ್ಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಜೆಟ್ ಒಂದೇ ಕಾರಣವಲ್ಲ, ಅದರ ಜೊತೆಯಲ್ಲಿ (ಅದಕ್ಕೆ ಪೂರಕವಾಗೇ ಇರುವ) ಔಟ್‌ಸೋರ್ಸಿಂಗ್ ಅಥವಾ ಆಫ್‍ಶೋರಿಂಗ್ ಕೂಡಾ ಅಷ್ಟೇ ಮುಖ್ಯವಾದ ಕಾರಣವಾಗುತ್ತದೆ. ಎಲ್ಲೋ ಓದಿದ/ಕೇಳಿದ ಹಾಗೆ ಭಾರತದ ಒಬ್ಬ IT ಉದ್ಯೋಗಿಯ ಮೇಲೆ ಒಂದು ಘಂಟೆಗೆ ೧೨ ಡಾಲರ್ ಅಂತೆ ಖರ್ಚು ಮಾಡುವುದಕ್ಕೆ ಈಗಾಗಲೇ ಹೊಂದಿಕೊಂಡಿರುವ ಕಂಪನಿಗಳು ಹಣವನ್ನು ಉಳಿಸುವ ಪ್ರಕ್ರಿಯೆಯಲ್ಲಿ ಭಾರತದಂತಹ ದೇಶಗಳೆಡೆಗೆ ಮುಖ ಮಾಡಿ ಈಗಾಗಲೇ ನಿಂತುಬಿಟ್ಟಿವೆ. ಭಾರತದಲ್ಲಿ ಕೆಲಸ ಮಾಡುತ್ತಿರುವವರಿಗೇನೋ ಇದು ಒಳ್ಳೆಯ ಕಾಲವಾಗಿರಬಹುದು, ಆದರೆ ಆಗಿಂದಾಗ್ಗೆ 'ಇಲ್ಲಿ ಜನರನ್ನು ಕಡಿಮೆ ಮಾಡಿ ಅಲ್ಲಿ ಜನರನ್ನು ಹೆಚ್ಚು ಮಾಡುತ್ತೇವೆ' ಎನ್ನುವ ಮಾತನ್ನು ಕೇಳಿದಂತೆಲ್ಲ ನಮಗೂ ಈ ದೇಶದಲ್ಲಿ ಹುಟ್ಟಿ ಬೆಳೆದವರಿಗಾಗುವಂತೆಯೇ 'ಅಯ್ಯೋ' ಎನಿಸುತ್ತದೆ. ಸಿಟಿಜನ್‌ಶಿಪ್, ಗ್ರೀನ್‌ಕಾರ್ಡ್ ಇದ್ದವರು ಹೇಗಾದರೂ ಅದೂ-ಇದೂ ಕೆಲಸ ಮಾಡಿ ಬದುಕಿಕೊಳ್ಳುತ್ತೇವೆ ಎಂದುಕೊಂಡರೂ ಯಾವುದೇ ಇಮಿಗ್ರೇಷನ್ ಸ್ಟೇಟಸ್ ಇರಲಿ, ಕೈಲಿದ್ದ ಕೆಲಸ ದಿಢೀರ್ ಮಾಯವಾಗುತ್ತದೆಯೆಂದಾದರೆ ಅದರಿಂದಾಗುವ ಪರಿಣಾಮ ಮಾತ್ರ ಎಲ್ಲರ ಮೇಲೂ ಒಂದೇ. ಒಂದು ಕೆಲಸವನ್ನು ಬಿಟ್ಟು ಅಥವಾ ಬದಲಾಯಿಸಿ ಮತ್ತೊಂದು ಕೆಲಸವನ್ನು ಸಂಪಾದಿಸುವುದು ಮಹಾ ಸ್ಟ್ರೆಸ್ಸಿನ ವಿಷಯಗಳಲ್ಲೊಂದು, ಅದರಲ್ಲೂ ಕೈಲಿದ್ದ ಕೆಲಸ ಹೋಗಿ ಮತ್ತೊಂದನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕೆಂದರೆ ಅದು ಇನ್ನೂ ಕಷ್ಟ. ಮೊದಲಿದ್ದ ಹಾಗೆ ಈಗ ದಿನಕ್ಕೊಂದು ಕೆಲಸ ಸಿಗುವುದಿಲ್ಲ, ಒಂದು ಅಂದಾಜಿನಲ್ಲಿ ಹೇಳುವುದಾದರೆ ಒಳ್ಳೆಯ ನೆಟ್‌ವರ್ಕ್ ಇದ್ದೂ, ಕಂಡಕಂಡಲ್ಲಿ ಅರ್ಜಿ ಗುಜರಾಯಿಸಿ, ಹಗಲಿಡೀ ಫುಲ್‌ಟೈಮ್ ಎಫರ್ಟ್ ಹಾಕಿದರೂ ಒಂದು ತಿಂಗಳ ಒಳಗೆ ಮತ್ತೊಂದು ಕೆಲಸ ಸಿಗುವುದು ಕಷ್ಟವೇ.

ಹೀಗೆ ವೀಸಾ-ಗ್ರೀನ್‍ಕಾರ್ಡ್ ವಿಷ ವರ್ತುಲದಲ್ಲಿ ಸಿಕ್ಕಿಕೊಂಡು ಬಳಲುತ್ತಿರುವ ಅನೇಕರಿಗೆ ಶಾಲೆಗೆ ಹೋಗುವ ಮಕ್ಕಳಿದ್ದಾರೆ, ಮಾರ್ಟ್‌ಗೇಜೂ ಮತ್ತೊಂದು ಅಂತ ಮೈ ತುಂಬಾ ಸಾಲವಿದೆ, ಇಷ್ಟು ವರ್ಷ ಇಲ್ಲಿ ದುಡಿದು ಸಾಕಷ್ಟು ಹಣ ಉಳಿಸಿದ್ದರು ಅವೆಲ್ಲವೂ ಕೈಗೆ ಬೇಕೆಂದಾಗ ಸಿಗದಿರುವ ಹಾಗೆ ಅಲ್ಲಲ್ಲಿ ತೊಡಗಿಕೊಂಡಿವೆ. ಒಂದು ವೇಳೆ h1B ಯ ಎಕ್ಸ್‌ಟೆನ್ಷನ್‌ನಲ್ಲಿ ಇರುವ ಯಾರಿಗಾದರೂ ಈಗಿರುವ ಕೆಲಸ ಕೈ ತಪ್ಪಿದರೆ ಅವರಿಗೆ ಅದೇ ಕಂಪನಿಯಲ್ಲೇ ಎಲ್ಲಾದರೂ ಮತ್ತೊಂದು ಕೆಲಸ ಸಿಗಬೇಕು (ಅದೂ ಒಂದು ತಿಂಗಳ ಒಳಗೆ), ಇಲ್ಲಾ ಆದಷ್ಟು ಬೇಗ ಗಂಟು-ಮೂಟೆ ಕಟ್ಟಬೇಕು. ಮುಂಬರುವ ಪರಿಸ್ಥಿತಿಗಳಿಗೆ ನಾವೆಷ್ಟೇ ತಯಾರಾಗಿದ್ದರೂ ನಾವಾಗೇ ಆರಂಭಿಸದೇ ಹುಟ್ಟಿಕೊಂಡ ಬದಲಾವಣೆಗಳಿಗೆ ಸ್ಪಂದಿಸುವುದು ಬಲು ಕಷ್ಟದ ಕೆಲಸ. ನನಗೇ ಯಾರಾದರೂ ದಿಢೀರನೆ ಇನ್ನೊಂದು ತಿಂಗಳಲ್ಲಿ ಅಮೇರಿಕವನ್ನು ಬಿಟ್ಟು ಹೋಗು ಎಂದರೆ ಹೇಗಿರಬಹುದು ಎಂದು ಊಹಿಸಿಕೊಳ್ಳಬಲ್ಲೆನಾದರೂ, ನಿಜಸ್ಥಿತಿಯ ಅರಿವು ನನಗೆ ಪೂರ್ಣವಾಗಿ ಆಗಲಾರದು.

***

ಒಬ್ಬ ಕೆಲಸಗಾರನಾಗಿ ಹೆಚ್ಚು ಸಮಯವನ್ನು ಇಲ್ಲಿಯೇ ಕಳೆದದ್ದರಿಂದ ನನಗೆ ನಮ್ಮ ದೇಶದಲ್ಲಿ ಕೆಲಸವನ್ನು ಕಳೆದುಕೊಳ್ಳುವುದು, ಹಾಗೆ ಕಳೆದುಕೊಂಡು ಮತ್ತೊಂದನ್ನು ಹುಡುಕಿಕೊಳ್ಳುವಾಗಿನ ಮನಸ್ಥಿತಿ ಹೇಗಿರಬಹುದು ಎಂದು ಗೊತ್ತಿಲ್ಲ (ಸಮಸ್ಯೆಗಳ ವ್ಯಾಪ್ತಿ ಎಲ್ಲಿದ್ದರೂ ಒಂದೇ ಎನ್ನುವುದು ಚೆನ್ನಾಗಿ ಗೊತ್ತು). ಆದರೆ ಇಲ್ಲಿ ಕೆಲಸ ಕಳೆದುಕೊಂಡವರು ಗಾಯದ ಮೇಲೆ ಉಪ್ಪು ಸುರಿದಂತೆ ತಮ್ಮ-ತಮ್ಮ ಇಮಿಗ್ರೇಷನ್ ಸ್ಟೇಟಸ್ಸನ್ನೂ ಕಳೆದುಕೊಂಡು ಲಗುಬಗೆಯಿಂದ ದೇಶವನ್ನು ತೊರೆದಿರುವುದನ್ನು ನೋಡಿ ಬಲ್ಲೆ. ಹೆಚ್ಚಿನವರು ಈ ವೀಸಾದ ಗೊಂದಲ ಮುಗಿಯುವವರೆಗೆ ಮನೆಯನ್ನು ಕೊಂಡುಕೊಳ್ಳುವ ಗೋಜಿಗೆ ಹೋಗೋದಿಲ್ಲ, ಹಾಗೆ ಕೊಂಡುಕೊಂಡರೂ ಆದಷ್ಟು ಬೇಗ ಮಾರುವ ಪೀಕಲಾಟಕ್ಕೆ ಸಿಕ್ಕಿಕೊಳ್ಳುತ್ತಾರೆ, ಅಲ್ಲದೇ ಇರುವ ಕೆಲವೇ ಕೆಲವು ದಿನಗಳಲ್ಲಿ ತಮ್ಮ ಕಾರನ್ನು ಮಾರಬೇಕಾಗಿ ಬರುತ್ತದೆ, ಮನೆಯಲ್ಲಿನ ಸಾಮಾನುಗಳೂ ಅವರಿವರ ಪಾಲಾಗುತ್ತದೆ. ಇಲ್ಲೇನೋ ಕೆಲಸ ಹೋಯಿತು ಇನ್ನು ಅಲ್ಲಾದರೂ ಒಳ್ಳೆಯ ಕೆಲಸವೇನಾದರೂ ಸಿಕ್ಕರೆ ಸಿಗಲಿ ಎಂದು ಇಲ್ಲಿ ಇದ್ದಷ್ಟು ದಿನಗಳಲ್ಲೇ ಪ್ರಯತ್ನ ಸಾಗಿರುತ್ತದೆ.

ಒಂದು ಕಾಲದಲ್ಲಿ ವರ್ಷಕ್ಕೆ ಅರವತ್ತೈದು ಸಾವಿರದಷ್ಟು ಮಾತ್ರ H1B ವೀಸಾಗಳನ್ನು ನೀಡುತ್ತಿದ್ದವರು ಕೆಲವು ವರ್ಷಗಳ ವರೆಗೆ ಅದನ್ನು ಲಕ್ಷದ ಮೇಲೆ ಹೆಚ್ಚಿಸಿದ್ದರು, ಮುಂದೆ ೨೦೦೧ರ ನಂತರ ಅದು ಮತ್ತೆ ಅರವತ್ತೈದು ಸಾವಿರಕ್ಕೆ ಬಂದು ನಿಂತಿತು. ಹೀಗೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಬಂದವರಲ್ಲಿ ನೂರಕ್ಕೆ ನಲವತ್ತೈದು ಜನರಾದರೂ ಭಾರತೀಯರೇ. ಹೀಗೆ ಬಂದವರಲ್ಲಿ ಇನ್ನೂ ಬೇಕಾದಷ್ಟು ಜನ ತಮ್ಮ ಆರು ವರ್ಷಗಳನ್ನು ಮುಗಿಸಿಕೊಂಡು ವರ್ಷಕ್ಕೊಮ್ಮೆ ವೀಸಾದ ಅವಧಿ ವಿಸ್ತರಣೆಯನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಒಮ್ಮೆ ವೀಸಾದ ಅವಧಿ ಮುಗಿದ ಮೇಲೆ ತಮ್ಮ-ತಮ್ಮ್ ಬಾಸ್ ಮೂಲಕ ಅವರು ಎಕ್ಸ್ಟೆಂಷನ್ನಿಗೆ ಅರ್ಜಿ ಗುಜರಾಯಿಸಬೇಕು, ಮುಂದೆ ವೀಸಾ ಬಂದ ನಂತರ ಪಾಸ್‌ಪೋರ್ಟ್ ಸ್ಟ್ಯಾಂಪಿಂಗ್ ಮಾಡಿಸಬೇಕು, ಹಾಗೆ ಮಾಡಲು ಮದ್ರಾಸಿನ ಕನ್ಸಲೇಟಿನಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು, ಹೀಗೆಲ್ಲಾ ಮಾಡಿ ಮುಗಿಸುತ್ತಿರುವಾಗಲ್ಲೇ ಮತ್ತೆ ವೀಸಾದ ಅವಧಿ ಮುಗಿಯುತ್ತದೆ - ಒಂದು ರೀತಿಯ ಚಿತ್ರಹಿಂಸೆಯ ಚಕ್ರದ ಆರಂಭವಾಗುತ್ತದೆ. ಇನ್ನು ಭಾರತಕ್ಕೆ ಹೋದರೆ ತಾನೆ ತೊಂದರೆ ಎಂದು ನಾಲ್ಕು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವ ವ್ಯಕ್ತಿಗಳನ್ನೂ ನಾನು ಬಲ್ಲೆ.

ಹೀಗೆ ಹಸಿರು ಕಾರ್ಡಿನ ಬೆನ್ನ ಹತ್ತಿ ಹಪಾಪಿಗಳಾದವರು ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ, ಅನಿಶ್ಚಿತತೆಯಿಂದ ಬದುಕುವ ಕಷ್ಟವನ್ನು ಅನುಭವಿಸಿದವರೇ ಬಲ್ಲರು!

No comments: