Saturday, June 10, 2006

ಮಾರ್ಗದ ಮಧ್ಯದಲ್ಲಿ breakdown ಆದ ಪ್ರಸಂಗ

ನಿನ್ನೆ ಆಫೀಸಿನಿಂದ ಮನೆಗೆ ಬರುತ್ತಿರುವಾಗ ಈ ವಾರ ಶುರು ಮಾಡಿದ ಹೊಸ ಕೆಲಸದ ವಿಷಯಗಳು, ಹಳೆಯದ್ದನ್ನು ಬೇಕಾದಷ್ಟು ಓದಬೇಕಾಗಿ ಬಿದ್ದುಕೊಂಡಿರೋ ಬ್ಯಾಕ್‌ಲಾಗ್, ಹನೂರು ಘಟನೆಯನ್ನು ಏಕಾದರೂ ಪ್ರಜಾವಾಣಿಯಲ್ಲಿ ಓದಿದೆನೋ, ಅದಕ್ಕೆ ಪ್ರತಿಕ್ರಿಯೆಯನ್ನು ಏಕಾದರೂ ತೋರಿದೆನೋ ಅನ್ನುವ ಪದೇ-ಪದೇ ರಿಯರ್‌ವ್ಯೂವ್ ಮಿರರ್ ನಲ್ಲಿ ಇಣುಕುವ ಪ್ರಶ್ನೆಹಾಕುವ ಮುಖಗಳು, ಸದ್ಯ ವಾರಾಂತ್ಯ ಬಂತಲ್ಲ ಅನ್ನೋ ಸಮಾಧಾನ ಇವೆಲ್ಲವೂ ನನ್ನ ಮನಸ್ಸಿನಲ್ಲಿ ಸುತ್ತಾಡುತ್ತಿದ್ದವು. (ಸದ್ಯ, ಈ ರಿಯರ್ ವ್ಯೂ ಮಿರರ್ ಅನ್ನು ಚಿಕ್ಕದಾಗಿ ಮಾಡಿಟ್ಟಿದ್ದಾರೆ, ಒಂದು ವೇಳೆ ಅದೇನಾದರೂ ಇನ್ನೂ ದೊಡ್ಡದಿದ್ದರೆ ಎಂದು ಹೆದರಿಕೆಯಾಗುತ್ತದೆ, ಆದರೂ get off the rear view mirror ಎನ್ನುವುದು ಎಲ್ಲರಿಗಿಂತಲೂ ಹೆಚ್ಚು ನನಗೆ ಅನ್ವಯವಾಗುತ್ತದೆ.)

ನಾನು ಒಂದು ವಾರಕ್ಕೆ ಒಂದೇ ಬದಲಾವಣೆಯನ್ನು ಮಾಡಿಕೊಂಡಿದ್ದರೆ ಚೆನ್ನಾಗಿತ್ತು, ಆದರೆ ಈ ವಾರ ಹೊಸ ಕೆಲಸದ ಜೊತೆಗೆ ಒಂದು ನನಗೆ ಹೊಸದಾದ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನೂ ಕೂಡ ಚಲಾಯಿಸತೊಡಗಿದ್ದು ವಾರ ಪೂರ್ತಿ ಎಲ್ಲೂ ತೊಂದರೆ ಕೊಡದಿದ್ದರೂ ನಿನ್ನೆ ಸಂಜೆ ಸರಿಯಾಗಿ ಕೈಕೊಟ್ಟಿತು. ನಿನ್ನೆ ಆಫೀಸಿನಿಂದ ದಾರಿಯಲ್ಲಿ ಸಿಗುವ ಡ್ರೈ ಕ್ಲೀನರ್ ಹತ್ತಿರ ಹೋಗಿ ಬಟ್ಟೆಯನ್ನು ಹಿಂದಕ್ಕೆ ತರೋಣವೆಂದು ಯೋಚಿಸಿದ್ದು ನನ್ನನ್ನು ಕಷ್ಟಕ್ಕೀಡು ಮಾಡಿತು. ಈ ಹಳೆಯ ಕಾರಿನಲ್ಲಿ ಸ್ವಲ್ಪ ಸ್ಟಾರ್ಟಿಂಗ್ ಟ್ರಬಲ್ ಇದ್ದಿದ್ದು ನನ್ನ ಅರಿವಿಗೆ ಬಂದಿದ್ದರೂ ಶೋ ಸ್ಟಾಪರ್ ಎನ್ನಿಸಿರಲಿಲ್ಲ. ಬೆಳಿಗ್ಗೆ ಮನೆಯಿಂದ ಹೊರಟಾಗ ಚೆನ್ನಾಗಿದ್ದ ಕಾರು, ಸಂಜೆ ಆಫೀಸಿನಿಂದ ಸುಲಭವಾಗೇ ಸ್ಟಾರ್ಟ್ ಆಗುತ್ತಿದ್ದ ಕಾರು ಶುಕ್ರವಾರ ಸಂಜೆ ಡ್ರೈ ಕ್ಲೀನರ್ ಅಂಗಡಿಯ ಮುಂದೆಯೇ ಏನಾದರೂ ಸ್ಟಾರ್ಟ್ ಆಗಲೊಲ್ಲದು. ಈಗಾಗುತ್ತೆ, ಇನ್ನೊಂದು ಘಳಿಗೆಯಲ್ಲಾಗುತ್ತೆ ಎಂದು ಪದೇ-ಪದೇ ಪ್ರಯತ್ನಿಸಿದ ನನ್ನ ಪ್ರಯತ್ನಗಳೆಲ್ಲ ವ್ಯರ್ಥವಾದವು. ಬಹಳ ಬೇಸರದಿಂದ ಸ್ಟಿಯರಿಂಗ್ ವೀಲನ್ನು ಹಿಡಿದು ಸ್ವಲ್ಪ ತಿರುಗಿಸಿದೆನೆಂದು ಅದೂ ಕೂಡ ಲಾಕ್ ಆಯಿತು, ಇನ್ನೇನೂ ಮಾಡೋದಕ್ಕೆ ವಿಧಿ ಕಾಣದೇ ಟ್ರಿಪಲ್ ಎ.ಗೆ ಫೋನ್ ಮಾಡಿದರೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ನನ್ನನ್ನು ಐದು ನಿಮಿಷಗಳಿಗಿಂತ ಹೆಚ್ಚು ಸಮಯ ಹೋಲ್ಡ್‌ನಲ್ಲಿ ಇಟ್ಟ ಆ ಕಡೆಯ ಕಸ್ಟಮರ್ ಸರ್ವೀಸ್ ರೆಪ್ ಮೇಲೂ ಒಮ್ಮೆ ಸಿಟ್ಟು ಬಂತು. ನನ್ನ ಹಣೇಬರಕ್ಕೆ ನಾನೇ ಜವಾಬ್ದಾರ ಎಂದುಕೊಂಡು ಟ್ರಿಪಲ್ ಎ. ಕಾಲನ್ನು ಡಿಸ್‌ಕನೆಕ್ಟ್ ಮಾಡಿ ಅದೇನಾಗಿದೆಯೋ ನೋಡಿಯೇ ಬಿಡುತ್ತೇನೆ ಎಂದು ತೋಳನ್ನು ಮೇಲೇರಿಸಿದೆ.

ಇದು ನಿಸ್ಸಾನ್ ಮ್ಯಾಕ್ಸಿಮಾ ಕಾರು, ೧೯೯೫ ರ ಮಾಡೆಲ್, ೧೭೨,೦೦೦ ಸಾವಿರಕ್ಕೂ ಹೆಚ್ಚು ಮೈಲು ಓಡಿದ್ದರೂ ಟೆಸ್ಟ್ ಡ್ರೈವಿನಲ್ಲಿ ನನಗೆ ಎಲ್ಲಾ ಥರದ ಭರವಸೆ ಕೊಟ್ಟಿದ್ದರಿಂದ ಹಿಂದೂ-ಮುಂದೆ ನೋಡದೆ ತೆಗೆದುಕೊಂಡೆ (ಈ ಕಾರನ್ನು ನನಗೆ ಮಾರಿದವರು ಮತ್ತೊಬ್ಬ ಕನ್ನಡಿಗರು, ಅವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ). ಹೀಗೆ ಅಪರೂಪಕ್ಕೊಮ್ಮೆ ಇಂಜಿನ್ ಸ್ಟಾರ್ಟ್ ಆಗಲು ಕಷ್ಟಕೊಡುತ್ತಿದ್ದುದನ್ನು ಅವರು ಮೊದಲೇ ತಿಳಿಸಿದ್ದರಿಂದ ಇದರಲ್ಲಿ ಅವರದ್ದೇನೂ ತಪ್ಪಿಲ್ಲ. ಕಳೆದ ಶನಿವಾರ ರಾತ್ರಿ ಕಾರನ್ನು ತೆಗೆದುಕೊಂಡು, ಸೋಮವಾರ ಸಂಜೆ ಅಫಿಷಿಯಲ್ ಆಗಿ ನನ್ನ ಹೆಸರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವವರೆಗೆ ಆ ಕಾರನ್ನು ಓಡಿಸುವುದು ಅಷ್ಟೊಂದು ಸರಿ ಎನಿಸಲಿಲ್ಲ - ಇನ್ಸೂರೆನ್ಸ್ ಕಂಪನಿಯವರು ಓಡಿಸಬಹುದು ಎಂದಿದ್ದರೂ, ಆ ಕಾರನ್ನು ಓಡಿಸಿ ಏನಾದರೂ ಹೆಚ್ಚೂ ಕಡಿಮೆ ಆದರೆ ಆ ಕಷ್ಟ ಯಾರಿಗೆ ಬೇಕು ಎಂದು ಸುಮ್ಮನೇ ಇದ್ದೆ. ಸರಿ, ಸೋಮವಾರ ಸಂಜೆ ಈ ಕಾರನ್ನು ನನ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದೆನಾದರೂ ಸಂಜೆ ಐದೂವರೆಗೆಲ್ಲ ತನ್ನ ಅಂಗಡಿಯನ್ನು ಕ್ಲೋಸ್ ಮಾಡುವ ನನಗೆ ಗೊತ್ತಿರುವ ಮೆಕ್ಯಾನಿಕ್ ಹ್ಯಾರಿಯನ್ನು ನೋಡಲು ಶನಿವಾರದವರೆಗೆ ಕಾಯಬೇಕಾಗುತ್ತದೆಯೆಲ್ಲಾ, ಅಲ್ಲಿಯವರೆಗೆ ಈ ಕಾರು ಹೇಗೋ ಏನೋ ಎಂದು ಅಳುಕಾಯಿತು. ಆದರೂ ನಿನ್ನೆ ಸಂಜೆ ಆಫೀಸಿನಿಂದಲೇ ಹ್ಯಾರಿಗೆ ಶನಿವಾರ ಬೆಳಿಗ್ಗೆ ಎಂಟು ಘಂಟೆಗೆಲ್ಲಾ ಬಂದು ಬಿಡುತ್ತೇನೆ, ಕಾರನ್ನು ಸರಿ ಮಾಡಿಕೊಡು ಎಂದು ನೆನಪಿಸಿದ್ದೆ. ನನಗೆ ಆಪೀಸಿನಿಂದ ಮನೆಗೆ ೩೩ ಮೈಲು ಉದ್ದದ ಪ್ರಯಾಣವಿದೆ, ನನ್ನ ಸ್ನೇಹಿತ ಗಾರ್‌ಫೀಲ್ಡ್ 'ಹುಷಾರಾಗಿರು' ಎಂದೂ ಸಹ ಹೇಳಿದ್ದ. ಆದರೆ ದೇವರ ದಯದಿಂದ ಶುಕ್ರವಾರ ಸಂಜೆಯವರೆಗೂ ಯಾವ ತೊಂದರೆಯೂ ಆಗಲಿಲ್ಲ.

ಈ ಟ್ರಿಪಲ್ ಎ. ಅವರು ಸಹಾಯ ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಬೈದುಕೊಂಡು ವಿಷಯಗಳನ್ನು ನನ್ನ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ರಾತ್ರಿ ಒಂಭತ್ತು ಘಂಟೆಯಾಗಿ ಹೋಗಿತ್ತು. ನಾನೇನೂ ಯಾವ ಮೆಕ್ಯಾನಿಕ್ಕೂ ಅಲ್ಲ, ಆದರೆ ಒಂದು ಕೈ ನೋಡೋಣವೆಂದುಕೊಂಡು ಸ್ಟಿಯರಿಂಗ್ ವ್ಹೀಲ್ ಲಾಕ್ ಆಗಿದ್ದನ್ನು ಪದೇ-ಪದೇ ತಿರುಗಿಸಿ ನೋಡಿದೆ, ಅದು ಅಲುಗಾಡಲೂ ಇಲ್ಲ. ಕೊನೆಗೆ ಅದೇನು ಹೊಳೆಯಿತೋ ಏನೋ, ಕೀಯನ್ನು ಇಗ್ನಿಷನ್ನಲ್ಲಿಟ್ಟು, ಇಂಜಿನ್ ಕ್ರ್ಯಾಂಕ್ ಮಾಡದೇ ಸ್ಟಿಯರಿಂಗ್ ವ್ಹೀಲನ್ನು ತಿರುಗಿಸಿದಾಗ ಅದು ಮೊದಲಿನ ಸ್ಥಿತಿಗೆ ಬಂದಿದ್ದರಿಂದ ಸ್ವಲ್ಪ ಸಮಾಧಾನವಾಯಿತು. ಆದರೆ ಕಾರು ಶುರುವಾಗದಿರುವ ಮುಖ್ಯ ಸಮಸ್ಯೆ ಇನ್ನೂ ಹಾಗೇ ಉಳಿಯಿತು - ಕೀ ಇಗ್ನಿಷನ್ನಲ್ಲಿರುವಂತೆಯೇ ಅಲ್ಲಿಯವರೆಗೂ ಲಾಕ್ ಆಗಿದ್ದ ಗಿಯರ್ ಸ್ಟಿಕ್ಕನ್ನು ಆಕಡೆ-ಈಕಡೆ ಅಲುಗಾಡಿಸಿ ನ್ಯೂಟ್ರಲ್‌ಗೆ ತಂದೆ, ಕೊನೆಗೆ ಡ್ರೈವರ್ ಬಾಗಿಲನ್ನು ಓಪನ್ನಿಟ್ಟು ನಮ್ಮ ಊರುಗಳಲ್ಲಿ ಅಟೋರಿಕ್ಷಾಗಳನ್ನು ಡ್ರೈವರುಗಳು ತಳ್ಳಿಕೊಂಡು ನಡೆಯುವ ಹಾಗೆ ಪಾರ್ಕಿಂಗ್ ಲಾಟಿನಲ್ಲೇ ಕಾರನ್ನು ಒಂದು ಅಡಿ ಹಿಂದೇ-ಮುಂದೇ ಓಡಿಸಿದೆ, ನನ್ನ ಪ್ರಕಾರ ಆ ಚಾಲನೆಯಿಂದ ಕೊನೇಪಕ್ಷ ಲಾಕ್ ಆದ ಬ್ರೇಕ್ ಪೆಡಲ್ ಆದರೂ ಸರಿಯಾದೀತು, ಮುಂದೆ ಗಿಯರ್ ಸ್ಟಿಕ್ ಅನ್ನು ಪಾರ್ಕಿಂಗ್‌ಗೆ ಹಾಕಿ ಇಂಜಿನ್ ಶುರುಮಾಡಿದರೆ ಆದೀತು ಎನ್ನುವ ಹುಂಬ ನಂಬಿಕೆ ಬಲವಾಗತೊಡಗಿತು. ಅದೇ ಡ್ರೈ ಕ್ಲೀನರ್ ಅಂಗಡಿಗೆ ಬಂದು ಹೋಗುತ್ತಿದ್ದ ಗಿರಾಕಿಗಳು ನನ್ನನ್ನು ನೋಡಿ ತಮ್ಮ ಮುಖದಲ್ಲಿ ಪ್ರಶ್ನೆ-ಆಶ್ಚರ್ಯಗಳ ಗೆರೆಯನ್ನು ವ್ಯಕ್ತ ಪಡಿಸುತ್ತಿದ್ದರೂ ಅವರನ್ನು ಸಹಾಯಕ್ಕೆ ಕೇಳುವ ಗೋಜಿಗೆ ನಾನು ಹೋಗಲಿಲ್ಲ, ಅವರು ಏನಾಗಿದೆ ಎಂದು ಕೇಳಲಿಲ್ಲ.

ಏನಾಶ್ಚರ್ಯ, ಹಾಗೆ ನಾನು ಕಾರನ್ನು ಪಾರ್ಕಿಂಗ್ ಗಿಯರ್‌ಗೆ ತಂದು ಇಂಜಿನ್ ಶುರುಮಾಡಿದ ಮೊದಲ ಯತ್ನದಲ್ಲೇ ಇಂಜಿನ್ ಆನ್ ಆಗಿ ಈಗಾದರೂ ಮನೆಗೆ ಹೋಗುತ್ತೇನಲ್ಲಾ ಎಂದು ಬಹಳ ಖುಷಿಯಾಯಿತು. ಸದ್ಯ, ಆ ತ್ರಿಪಲ್ ಎ. ನವರು ಬರುತ್ತಾರೆ ಎಂದು ಕಾದಿದ್ದರೆ ಇನ್ನೊಂದು ಘಂಟೆಯಾದರೂ ಅಲ್ಲೇ ಒದ್ದಾಡಬೇಕಿತ್ತು ಎಂದು ಅವರನ್ನು ಮಧ್ಯದಲ್ಲಿಯೇ ತುಂಡುಮಾಡಿದ ನನ್ನ ನಿರ್ಧಾರಕ್ಕೆ ಒಳಗೊಳಗೆ ಮೆಚ್ಚುಗೆಯೂ, ನಾನು ಹಾಗೆ ಮಾಡಿದ್ದು ಮೂರ್ಖತನವೂ ಎನ್ನಿಸಿತು. ಮನೆಗೆ ಬರುವಾಗೆಲ್ಲ ಸುಮಾರು ಹತ್ತು ಘಂಟೆಯ ಹತ್ತಿರವಾಗಿತ್ತು, ನನ್ನ ಮಗಳು ಅದ್ಯಾವಗಲೋ ನಿದ್ರೆಗೆ ಶರಣುಹೋಗಿದ್ದಳು. ಡ್ರೈ ಕ್ಲೀನರ್‌ನಿಂದ ತಂದ ಬಟ್ಟೆಗಳನ್ನು ಇಡಬೇಕಾದ ಸ್ಥಳದಲ್ಲಿಟ್ಟು, ಕೈ ಕಾಲು ಮುಖ ತೊಳೆದುಕೊಂಡು, ಡಿ.ವಿ.ಆರ್.ನಲ್ಲಿ ರೇಕಾರ್ಡ್ ಆಗಿದ್ದ ನೈಟ್ಲೀ ಬ್ಯುಸಿನೆಸ್ ರಿಪೋರ್ಟನ್ನು ನೋಡುತ್ತಾ ಊಟ ಮಾಡಿ ನೀರುಕುಡಿಯುವಷ್ಟರಲ್ಲಿ ವಾರದ ನಿದ್ದೆಯಲ್ಲಾ ಒಮ್ಮೆಲೇ ಕಣ್ಣಿಗೆ ಹತ್ತಿಕೊಂಡಂತೆ ಕಣ್ಣು ರೆಪ್ಪೆಗಳು ತಮ್ಮ ಮೇಲೆ ಇಟ್ಟಿಗೆಯನ್ನು ಹೊತ್ತಿವೆಯೇನೋ ಎನ್ನುವಂತೆ ಭಾರವಾದವು. ಮೇಲೆ ಹೋಗಿ ಹಾಸಿಗೆಯ ಮೇಲೆ ಮಲಗಲೂ ಸೋಮಾರಿಯಾದವನನ್ನು ನನ್ನ ಹೆಂಡತಿ ಸುಮ್ಮನೇ ಹಾಗೇ ಬಿಟ್ಟಿದ್ದರಿಂದ ಸೋಫಾದಲ್ಲಿಯೇ ಕಣ್ಣುಮುಚ್ಚಿ ಕಣ್ಣು ತೆರೆಯುವಂತಹ ಸುಖ ನಿದ್ರೆಯನ್ನು ಮುಗಿಸಿ ನೋಡುವುದರೊಳಗೆ ಹಿಂದಿನ ದಿನವೇ ಬ್ಯಾಟರಿ ಬದಲಾಯಿಸಿದ ರಘುವಿನ ಗಡಿಯಾರ ಹಾಗೂ ಕಾಮ್‌ಕ್ಯಾಸ್ಟಿನ ಡಿವಿಆರ್ ಎರಡರಲ್ಲೂ ರಾತ್ರಿ ಒಂದು ಘಂಟೆಯ ಹೊತ್ತಾಗಿಹೋಗಿತ್ತು! ಮತ್ತೆ ಎದ್ದು ಸ್ವಲ್ಪ ನೀರು ಕುಡಿದು ಮೇಲೆ ಹೋಗಿ ಈ ಬಾರಿ ಸರಿಯಾಗಿ ಮಲಗಿದವನಿಗೆ ಮತ್ತೆ ಎಚ್ಚರವಾದದ್ದು ಬೆಳಿಗ್ಗೆ ಐದೂವರೆಯ ನಂತರವೇ.

***

ಕಾಕತಾಳೀಯವೋ ಎಂಬಂತೆ ನಾನು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾರಾಗಿದ್ದೇನೆ, ಕೆಲವೊಮ್ಮೆ ಊಹಿಗೆ ನಿಲುಕದ ಮೂಲಗಳಿಂದ ಸಹಾಯವೂ ದೊರೆಯುತ್ತದೆ. ನಿನ್ನೆಯ ಘಟನೆ ದೊಡ್ಡ ವಿಷಯವೇನಲ್ಲ, ಆದರೂ ಒಂದು ವ್ವವಸ್ಥಿತವಾದ ಕಾರು ದಿನನಿತ್ಯದಲ್ಲಿ ಎಷ್ಟು ಮುಖ್ಯ ಎನ್ನುವ ಪಾಠವನ್ನು ಈ ರೀತಿ ಕಲಿತುಕೊಂಡಿದ್ದೇನೆ.

ಈ ಬೆಳಿಗ್ಗೆ ಎದ್ದು ಓದುವ ಬ್ಯಾಕ್‌ಲಾಗನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದೇನೆ, ಎಲ್ಲಕ್ಕಿಂತ ಮುಖ್ಯವಾಗಿ ಯಾರನ್ನು ಬಿಟ್ಟರೂ ಹ್ಯಾರಿಯನ್ನು ನೋಡದೇ ಇರಬಾರದು ಎಂದು ಇನ್ನು ಕೆಲವೇ ನಿಮಿಷಗಳಲ್ಲಿ ಅವನ ಮುಂದೆ ಹಾಜರಾಗುವ ಸಿದ್ಧತೆಯನ್ನು ನಡೆಸತೊಡಗುತ್ತೇನೆ.

1 comment:

Shrilatha Puthi said...

ಹೌದು, there is a solution for every problem ಅಂತ ಮಾತೇ ಇದ್ಯಲ್ಲಾ, funny ಅಂದ್ರೆ ಈ ತರ ಏನಾದ್ರೊಂದು problem ಇದ್ದಾಗ ಆ ನಿಮಿಷದಲ್ಲಿ ಅದೇ ತುಂಬಾ ದೊಡ್ಡ ಬೆಟ್ಟದ ತರ ನಮ್ಗೆ ಕಾಣೋದು, ಮುಂದೆ ಯಾವತ್ತಾದ್ರೂ ಅದ್ರ ಬಗ್ಗೆ ನೆನಸಿಕೊಂಡಾಗ ಅದೇನೂ ಅಷ್ಟು ದೊಡ್ಡ problem ಆಗ್ರಿಲ್ಲಿಲ್ಲ ಅಂತ ಅನ್ಸೋದು..

'Life is set of problems one after another' ಅಂತ ಎಲ್ಲೋ ಓದಿದ ನೆನಪು.