Tuesday, June 27, 2006

ಸ್ವಲ್ಪ ತಡವಾಗಿಯಾದರೂ ಬಂದ ಬುದ್ಧಿ

ನನಗೆ ಮೊದಲೆಲ್ಲ ಮಕ್ಕಳು ಅಂದ್ರೆ ಅಷ್ಟಕಷ್ಟೇ - ಒಂಥರಾ ಸೆಮಿ-ಅವಿಭಕ್ತ ಕುಟುಂಬವಾದ ನಮ್ಮನೆಯಲ್ಲಿ ಮಕ್ಕಳಿಗೇನೂ ಕಡಿಮೆ ಇರಲಿಲ್ಲ, ಯಾವಾಗ ನೋಡಿದ್ರೂ ತೊಟ್ಟಿಲಲ್ಲಿ ಒಬ್ಬರಲ್ಲ ಒಬ್ರು ಮಲಗೋ ಪರಿಸ್ಥಿತಿ ಇತ್ತು, ಆದರೆ ಈ ಮಕ್ಕಳು ಮಾಡೋ ಗದ್ದಲವನ್ನು ಕಂಡರೆ ನನಗೆ ಸುತಾರಾಂ ಆಗುತ್ತಿರಲಿಲ್ಲ. ಎಷ್ಟೋ ಸಾರಿ ಅವರನ್ನು ದುರುಗುಟ್ಟಿ ನೋಡಿ ಹೆದರಿಸಿದ್ದಿದೆ, 'ಥೂ, ಯಾವಾಗ್ ನೋಡಿದ್ರೂ ಅಳ್ತಾನೆ ಇರುತ್ತೆ' ಎಂದು ಬೈದಿದ್ದಿದೆ, ಕೆಲವೊಮ್ಮೆ ಕೈ ಮಾಡಿದ್ದೂ ಇದೆ. ನನ್ನ ಅಣ್ಣನ ಮಗ ನನ್ನ ಪ್ಯಾಂಟಿನ ಮೇಲೆ ಅಚಾನಕ್ಕಾಗಿ ಒಂದೂ-ಎರಡೂ ಮಾಡಿದನೆಂದು ನನ್ನ ಸಹನೆಯ ಪೆಟ್ಟಿಗೆಯ ಮುಚ್ಚುಳ ಹಾರಿ ಹೋಗಿ ಎಲ್ಲರ ಎದುರಿಗೇ ಅವನ ಬೆನ್ನಿಗೆ ರಪ್ಪನೆ ಬಾರಿಸುವಷ್ಟು ಸಿಟ್ಟು ಬಂದಿದ್ದು ಇವತ್ತಿಗೂ ನನ್ನ ಕಣ್ಣ ಮುಂದಿದೆ - ನಾನು ಕೈ ಮುಂದು ಮಾಡೋ ಪ್ರವೃತ್ತಿಯವನು ಅಲ್ಲದಿದ್ದರೂ ಅದೇನೋ ಕೆಲವೊಂದು ಸಾರಿ ಕೈ-ಕಾಲುಗಳು ಬಹಳ ಚುರುಕಾಗಿಬಿಡುತ್ತವೆ, ಒಂಥರಾ ತೋಟಕ್ಕೆ ಹೊಕ್ಕವರು ಪಟಪಟನೆ ಬಾರಿಸಿ ಸೊಳ್ಳೆಗಳನ್ನು ಹೊಡೆಯೋ ಹಾಗೆ ಆ ಸಮಯದಲ್ಲಿ ಬೇರೆ ಯಾವುದೇ ಪ್ರಪಂಚ ಜ್ಞಾನವೂ ಕೆಲಸ ಮಾಡುವುದಿಲ್ಲ ಎಂದರೇನೆ ಸರಿ.

ನನ್ನ ಅಕ್ಕ-ತಂಗಿಯರು 'ಈ ಥರಾ ಎಲ್ಲ ಮಕ್ಳಿಗೂ ಬಯ್ಯೋನು, ಮುಂದೆ ನಿನ್ ಮಕ್ಳನ್ನು ಹೇಗೆ ನೋಡಿಕೋತೀಯೋ, ನಾವೂ ನೋಡ್ತೀವಿ!' ಎಂದು ಯಾವತ್ತೂ ತೆರೆದೇ ಇರೋ ಈ ಒಂದು ಸಾಲನ್ನು ಅವಾಗಾವಾಗ ಹೇಳ್ತಾನೇ ಇರೋರು. ನಾನು ಮಕ್ಕಳ ಮೇಲೆ ಯಾವತ್ತಾದರೂ ಕೈ ಮಾಡಿದ್ದಿದ್ರೆ ಅದನ್ನು ದೊಡ್ಡ ಅಂಧಕಾರ ಅಂತಲೇ ಒಪ್ಪಿಕೊಂಡು ಬಿಡ್ತೀನಿ, ಮೊನ್ನೆ ರೇಡಿಯೋದಲ್ಲಿ ಯಾವುದೋ ಒಂದು ಸಂದರ್ಶನದ ತುಣುಕನ್ನು ನಾನು ಕೇಳುತ್ತಿದ್ದಾಗ ತನ್ನ ೧೮ ತಿಂಗಳ ವಯಸ್ಸಿನ ಅಕ್ಕನ ಮಗನ ಮೇಲೆ ಆ ಹುಡುಗನ ಅಪ್ಪ ಕೈ ಮಾಡುತ್ತಾನೆ ಅನ್ನೋದನ್ನು ಒಬ್ಬ ಮನೋವೈದ್ಯರು ಚರ್ಚಿಸಿ ಪ್ರಶ್ನೆ ಕೇಳಿದಾಕೆಗೆ ಸಮಾಧಾನ ಹೇಳುತ್ತಿದ್ದರು. ಮಕ್ಕಳು, ಅವರು ಯಾವ ವಯಸ್ಸಿನವರಾದರೂ ಇರಲಿ, ಅವರು ಆ ವಯಸ್ಸಿಗೆ ತಕ್ಕಂತೆ ವರ್ತಿಸಬೇಕೇ ವಿನಾ ದೊಡ್ಡವರ ನಿರೀಕ್ಷೆಗೆ ತಕ್ಕಂತೆ ಇದ್ದರೆ ಅವರಲ್ಲಿ ಏನೋ ತಪ್ಪಿದೆಯೆಂತಲೇ ಅರ್ಥವಂತೆ. ಮಕ್ಕಳಿಗೆ ಹೊಡೆಯೋದರಿಂದಾಗಲಿ, ಗದರಿಸೋದರಿಂದಾಗಲೀ ಯಾವುದೇ ಪ್ರಯೋಜನವಿಲ್ಲ, ಅವರಿಗೆ ತಿಳಿಸಬೇಕಾದ ರೀತಿಯಲ್ಲಿ ತಿಳಿಸಿದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ, ಮಿಕ್ಕೆಲ್ಲ ರೀತಿಯೂ ಒಂದು ಥರದ ಹೆದರಿಕೆಯ ಪರಿಭಾಷೆಯನ್ನು ಹುಟ್ಟಿಸಿ ಮಕ್ಕಳು 'ವಿಕಾರ'ರಾಗುತ್ತಾರೆ ಅನ್ನೋದು ಅದರ ಸಾರವಾಗಿತ್ತು. ಅಲ್ಲದೇ ಈ ಹಿಂದೆಯೇ ಎಲ್ಲೋ ಒಂದು ಕಡೆ ನಮ್ಮ ಕಡೆ 'ಗುಮ್ಮನ ಹೆದರಿಕೆ'ಯನ್ನೊಡ್ಡಿ ಮಕ್ಕಳನ್ನು ಅವರಿಗಿಷ್ಟವಿರದ ಕೆಲಸದಲ್ಲಿ ತೊಡಗಿಸೋದು ತಪ್ಪು ಎಂಬುದಾಗಿ ಕೇಳಿದ್ದೆ. ನಾನು ಇವತ್ತಿಗೂ ನೋಡೋ ಹಾಗೆ ನಮ್ಮೂರುಗಳಲ್ಲಿ 'ಗುಮ್ಮ ಬರ್ತಾನೆ' , ಅಥವಾ 'ಪೋಲೀಸ್ ಬಂದು ಹಿಡಕೊಂಡ್ ಹೋಗ್ತಾನೆ' ಎಂದು ತಾಯಂದಿರು ಗದರಿಸಿದ ಕೂಡಲೇ ಮಕ್ಕಳು ಸೆರಗಿನಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ಕಾಣಬಹುದು.

ಅಮೇರಿಕನ್ ಮಕ್ಕಳಿಗೆ 'ಹಾಯ್' ಎಂದರೆ ಅವು ಅದಕ್ಕೆ ಅಷ್ಟೇ ಸಹಜವಾಗಿ 'ಹಾಯ್' ಎನ್ನುವುದನ್ನೂ, ಅಮೇರಿಕನ್ ಇಂಡಿಯನ್ ಮಕ್ಕಳಿಗೆ 'ಹಾಯ್' ಎಂದರೆ ತಮ್ಮ ತಂದೆ-ತಾಯಿಯರನ್ನು ಹುಡುಕಿಕೊಂಡು ಗಾಭರಿ ಪ್ರಕಟಿಸುವುದನ್ನು ನಾನು ಬೇಕಾದಷ್ಟು ಸಾರಿ ನೋಡಿದ್ದೇನೆ. ಮಕ್ಕಳೇಕೆ, ದೊಡ್ಡವರಿಗೂ ಸಹ ಬೇರೆಯವರೊಡನೆ ಮನಬಿಚ್ಚಿ ನಿರರ್ಗಳವಾಗಿ ಮಾತನಾಡುವುದು (ಕೊನೇಪಕ್ಷ) ನನ್ನ ತಲೆಮಾರಿನವರಿಗೆ ಬರಲೇ ಇಲ್ಲ ಎಂದು ಹೇಳಬಹುದೇನೋ? ನಾನು ಭಾಗವಹಿಸುವ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಇವತ್ತೂ-ನಿನ್ನೆ ಕಂಪನಿ ಅಥವಾ ಪ್ರಾಜೆಕ್ಟ್ ಸೇರಿದ ಅಮೇರಿಕನ್ನರು ಲಂಗೂ-ಲಗಾಮಿಲ್ಲದೆ ಜೋರಾಗಿ ಮಾತನಾಡಿ ಭಾಗವಹಿಸುವುದು ಕಂಡುಬಂದರೆ, ನಮ್ಮ ಆತ್ಮವಿಶ್ವಾಸಕ್ಕೆ ಅದ್ಯಾವುದೋ ಅವ್ಯಕ್ತ ಕಡಿವಾಣ ಬಿದ್ದುಬಿಟ್ಟು, 'ಐ ಥಿಂಕ್' ಎಂದು ಆರಂಭವಾಗುವ ಹಲವಾರು ವಾಕ್ಯಗಳು ಎಷ್ಟೋ ಬಾರಿ ಕೊನೆಯಾಗದೇ 'ಮಂಬಲ್' ಆಗಿಬಿಡುವುದನ್ನು ನಾನು ಅಲ್ಲಲ್ಲಿ ನೋಡಿದ್ದೇನೆ. ನಮ್ಮ ಇಂಗ್ಲೀಷ್ ಚೆನ್ನಾಗಿಲ್ಲ, ನಮಗೆ ಇಂಗ್ಲೀಷ್ ಬರೋದಿಲ್ಲ ಅನ್ನೋದು ಕಾರಣವಲ್ಲ - ನಮ್ಮ ಎದುರಿನವರು ಅದೇ ವಿಷಯದ ಮೇಲೆ ಅಥಾರಿಟಿಯಿಂದ ಮಾತನಾಡಿದಾಗ ನಮಗೆ ಒಳಗೊಳಗೇ 'ಹೌದೌದು' ಎನ್ನಿಸತ್ತೆದೆಯೇ ವಿನಾ ನಾವೂ ಹಾಗೆ ಮಾತನಾಡಬಹುದಿತ್ತಲ್ಲ, ಏಕೆ ಮಾತನಾಡಲಿಲ್ಲ - ಎನ್ನುವ ಪ್ರಶ್ನೆಗಳಿಗೆ ಉತ್ತರಗಳು ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ. ನಾನು ಅತಿಯಾಗಿ ಜೆನರಲೈಜೇಷನ್ ಮಾಡಿ ಹೇಳುತ್ತಿರಬಹುದು ಅಥವಾ ಇದು ನನ್ನ ಅನುಭವ ಅಥವಾ ಮಿತಿಯಾಗಿರಬಹುದು - ಆದರೂ ಸ್ವಲ್ಪವಾದರೂ ಈ ಮೇಲಿನ ಅಬ್ಸರ್‌ವೇಷನ್‌ನಲ್ಲಿ ಸತ್ಯವಿಲ್ಲದಿದ್ದರೆ please keep me honest.

ಅಲ್ಲಿ ದೊಡ್ಡ ಕುಟುಂಬವೊಂದರಲ್ಲಿ ಸಕ್ರಿಯ ಸದಸ್ಯನಾದವನು ಇಲ್ಲಿ ಒಬ್ಬಂಟಿ ಕುಟುಂಬವಾಗಿ ಎಷ್ಟೋ ಸಾರಿ ಕೊಳೆದಿದ್ದಿದೆ, ಹತ್ತಿರವಿರುವ ಕನ್ನಡ ಕೂಟಗಳ ಕಾರ್ಯಕ್ರಮಗಳಲ್ಲಿ ಇನ್ನಾದರೂ ನನ್ನನ್ನು ಚೆನ್ನಾಗಿ ತೊಡಗಿಸಿಕೊಳ್ಳಬೇಕು, ಅದು ಮಾಡಬೇಕು, ಇದು ಮಾಡಬೇಕು ಎಂದು ಹೇಳಿಕೊಂಡು ಹಾರಾಡಿದ್ದೇನೆಯೇ ವಿನಾ ಒಂದೂ ಕಾರ್ಯರೂಪಕ್ಕೆ ಬಂದಿಲ್ಲ. ಇಲ್ಲಿ ಬಂದು ನನಗೂ ಒಂದು ಮಗು ಎಂದು ಆದಾಗ ಭಾರತದಿಂದ ಯಾರಾದರೂ ಸಹಾಯಕ್ಕೆ ಬರದೇ ಹೋದರೆ ವಿಷಯವನ್ನು ನಾವೇ ಕೈಗೆತ್ತಿಕೊಳ್ಳುವುದಾಗಿ ನಿಶ್ಚಯಿಸಿ ಅಥವಾ ಅನಿವಾರ್ಯತೆಯಿಂದ ಒಂದಿಷ್ಟು ಮಕ್ಕಳ ಬಗ್ಗೆ, ಪೋಷಣೆ ಬಗ್ಗೆ ಇಲ್ಲಿಯವರ ಹಾಗೆ ಒಂದಿಷ್ಟು ಪುಸ್ತಕಗಳನ್ನು ಮುತುವರ್ಜಿಯಿಂದ ಓದಿದ್ದಕ್ಕೆ ಬೇಕಾದಷ್ಟು ವಿಷಯಗಳು ಗೊತ್ತಾದವು. ಈ ರೇಡಿಯೋ ಹಾಗೂ ಟಿವಿಯಲ್ಲಿ ಬರುವ ಹಲವಾರು ಕಾರ್ಯಕ್ರಮಗಳ ದೆಸೆಯಿಂದ, ಪೋಷಕರು, ಮಕ್ಕಳ ಮನೋವೈದ್ಯರು ಬರೆದ ಪುಸ್ತಕಗಳ ವಿಸ್ತರಿಸಿದ ಬೆಳಕಿನಿಂದ ನನ್ನ ಸಹನೆಯ ಕಟ್ಟೆಯಂತೂ ವಿಸ್ತಾರಗೊಂಡಿದೆ, ನನಗೆ ಯಾವ ಹೊತ್ತಿನಲ್ಲಿ ಬೇಕಾದರೂ ಈಗ ಮಕ್ಕಳು ಅತ್ತರೆ ಮೊದಲಿನಷ್ಟು ಬೇಸರವೆನ್ನಿಸುವುದಿಲ್ಲ, ಸಿಟ್ಟಂತೂ ಬರುವುದಿಲ್ಲ.

ಆದರೆ, ನನ್ನ ಈ ಹೊಸ ಮುಖ ಮೊದಲಿದ್ದ ವಿಶ್ವಾಮಿತ್ರ ಗೋತ್ರದವನ ಮುಖಕ್ಕಿಂತ ಬಹಳಷ್ಟು ಭಿನ್ನವಾಗಿರುವುದೂ, 'ನಮ್ಮ ಮಕ್ಕಳನ್ನು ಕಂಡರೆ ಹಾರಾಡುತ್ತಿದ್ದವನು, ಈಗ ತನ್ನ ಮಕ್ಕಳನ್ನು ಚಕಾರವೆತ್ತದವನು' ಎಂದು ಆಡಿಕೊಳ್ಳಬಹುದಾದ ನನ್ನ ಬಂಧು ಬಳಗದವರಿಗೆ ಹೇಗೆ ಕಂಡೀತು ಎಂದು ಸೋಜಿಗವಾಗುತ್ತದೆ. ನನ್ನ ವಿಸ್ತರಿಸಿದ ಅನುಭವ ಅಥವಾ ತಿಳುವಳಿಕೆ ಅವರಿಗೆ 'ತನಗೊಂದು, ಪರರಿಗೊಂದು' ಮುಖವಾಗಿ ಕಂಡರೆ ತಪ್ಪೇನೂ ಇಲ್ಲ ಅಲ್ಲವೇ? 'ಹೆತ್ತವರಿಗೆ ಹೆಗ್ಗಣವೂ ಮುದ್ದು' ಎಂದು ಆಲೋಚಿಸಿಕೊಂಡರೆ ಈ ಪರರಿಗೊಂದು ನೀತಿಯನ್ನು ಹಿಪೋಕ್ರಸಿ ಎಂದು ಒಪ್ಪಿಕೊಳ್ಳಲಾದೀತೇ? ಅಥವಾ 'ಮಕ್ಕಳಿಗೆ ಗದರಿಸಬೇಡವೋ' ಎಂದು ನನ್ನ ಅಣ್ಣಂದಿರಿಗೆ ತಿಳಿಸಿ ಹೇಳಿದರೆ 'ನೋಡಪ್ಪಾ, ಇವತ್ತು ಮಕ್ಕಳನ್ನು ಕಂಡೊರ ಹಾಗೆ ನಮಗೇ ಬುದ್ಧಿ ಹೇಳೋದಕ್ಕೆ ಬಂದಿದಾನೆ!' ಎಂದು ಅಪಹಾಸ್ಯಕ್ಕೆ ಗುರಿಯಾಗುತ್ತೇನೆಯೇ? ಇತ್ಯಾದಿ ಪ್ರಶ್ನೆಗಳು ಮನದಲ್ಲಿ ಮಂಡಿಗೆ ತಿನ್ನುವ ಈ ಅರಿಷ್ಟ ಅಭಿಶಾಪಕ್ಕೆ ಇನ್ನೂ ಒತ್ತುಕೊಡತೊಡಗುತ್ತದೆ.

ಇವತ್ತಿಗೂ ಪರಿಚಯವಿರದವರ ಜೊತೆಯಲ್ಲಿ ಮಾತನಾಡುವಾಗ ಪದಗಳು ಅಷ್ಟು ಸುಲಭವಾಗಿ ಹೊರ ಬರೋದಿಲ್ಲ, ಇನ್ನು ಯಾರೋ ಗೊತ್ತಿರದ ಹೆಣ್ಣು ಮಕ್ಕಳಿಗೆ ಒಂದೇ ಯತ್ನದಲ್ಲಿ ವಾಯ್ಸು ಮೆಸ್ಸೇಜನ್ನು ಬಿಡುವಾಗ ವಿಷಯಗಳು ಕಲಸುಮೇಲೋಗರವಾಗೇ ಆಗುತ್ತವೆ. ಪೋಲೀಸ್ ಮಾಮಾನ ಕಂಡರೆ ಅವ್ಯಕ್ತ ಹೆದರಿಕೆ ಇದ್ದೇ ಇದೆ, ಯಾವತ್ತೋ ಸಿಗಬಹುದಾದ ಇನ್ನೂರು-ಮುನ್ನೂರು ಡಾಲರಿನ ದಂಡಕ್ಕೆ ನಾನೇಕೆ ಅಷ್ಟಾಗಿ ಹೆದರುತ್ತೇನೆಯೋ ಯಾರಿಗೆ ಗೊತ್ತು. ಪರಸ್ಥಳದಲ್ಲಿ, ಅಥವಾ ಯಾವತ್ತಾದರೂ ಲೇಟ್ ನೈಟ್‌ನಲ್ಲಿ ತುಂಬಾ ಭಯ ಹುಟ್ಟಿಸುವ ಸಿನಿಮಾವನ್ನೇನಾದರೂ ಒಬ್ಬನೇ ನೋಡುತ್ತಿದ್ದರೆ ಗುಮ್ಮನ ವಿಚಾರಗಳು ಸುತ್ತಿಕೊಳ್ಳತೊಡಗುತ್ತವೆ. 'ಗುಮ್ಮನ ಕರೆಯದಿರೇ, ಅಮ್ಮಾ ನೀನು' ಎಂದು ಯಾರೋ ಎಷ್ಟೋ ವರ್ಷಗಳ ಹಿಂದೆಯೇ ಹಾಡಿದ್ದರೂ ನಮ್ಮ ತಾಯಂದಿರು ಊಟ ಮಾಡದ ಮಕ್ಕಳನ್ನು ಹಿಡಿದುಕೊಂಡು ಹೋಗಲು ಇನ್ನೂ ಗುಮ್ಮನ ಮೊರೆ ಹೋಗುತ್ತಲೇ ಇದ್ದಾರೆ, ಗುಮ್ಮ ಬರುತ್ತದೆಯೋ ಇಲ್ಲವೋ ನಾವು ಎಷ್ಟೆ ಬೆಳೆದರೂ ತಾಯಿಯ ಸೀರೆ ನೆರಿಗೆಗಳನ್ನು ಹುಡುಕಿಕೊಂಡು ಹೋಗುವ ಪರಿಪಾಟ ಒಂದಲ್ಲ ಒಂದು ರೀತಿಯಿಂದ ಹೊರಕ್ಕೆ ಬಂದೇ ಬರುತ್ತದೆ.

2 comments:

Anonymous said...

ತಮಗೇ ಮದುವೆಯಾಗಿ, ಮಕ್ಕಳಾದ ಮೇಲೆ ಮಾತ್ರ ಈ "ಒಳ್ಳೆ"ಬುದ್ಧಿ ಬರೋದು ಆಶ್ಚರ್ಯ! :-)

Satish said...

ಹೇಗೋ, ಕೊನೆಗಾದ್ರೂ ಬರುತ್ತಲ್ಲ!