Tuesday, June 13, 2006

ಒಂದು ಸುಳ್ಳು ಸೃಷ್ಟಿಸಿದ ಹದಿನೈದು ತಿಂಗಳ ಒದ್ದಾಟ!

ನಮ್ಮ ಕಂಪನಿಯಲ್ಲಿ ೨೦೦೦ ದಿಂದ ಇತ್ತೀಚೆಗೆ ಪ್ರಮೋಷನ್‌ಗಳನ್ನು 'ಕೊಡು'ವುದನ್ನು ಕಡಿಮೆ ಮಾಡಿಬಿಟ್ಟರು - ಅದಕ್ಕೆ ಬೇಕಾದಷ್ಟು ಕಾರಣಗಳನ್ನು ಗುರುತಿಸಿಕೊಂಡು ಸಮಾಧಾನ ಹೇಳಿಕೊಳ್ಳಬಹುದಾದರೂ ಕೊನೆಯಲ್ಲಿ ಫಲಿತಾಂಶ 'ಪ್ರಮೋಷನ್' ಸಿಗದೇ ಹೋಗಿದ್ದಕ್ಕೆ ೨೦೦೧ ರ ನಂತರ ಮಾಹಿತಿ ತಂತ್ರಜ್ಞಾನದ ಕೆಲಸಗಳನ್ನು ಭಾರತಕ್ಕೆ ಕಳಿಸುವುದು, ದೊಡ್ಡ ಕಂಪನಿಯ ಐ.ಟಿ. ಬಜೆಟ್ ಚಿಕ್ಕದಾದದ್ದು ಹಾಗೂ ಪ್ರಮೋಷನ್ ಸಿಗುವುದಕ್ಕೆ ಇರುವ ತೀವ್ರ ಪೈಪೋಟಿ ಮುಂತಾದವುಗಳನ್ನು ಹೆಸರಿಸಬಹುದು. ಒಂದೇ ನಾನಿದ್ದ ಇಲಾಖೆಯಲ್ಲಿ ನನ್ನನ್ನು ಗುರುತಿಸಿ ಅವರು ಮೇಲಕ್ಕೆ ತರಬೇಕು, ಇಲ್ಲಾ ನಾನೇ ಪ್ರಮೋಷನ್ ಆಗಬಹುದಾದ ಒಂದು ಯಾವುದಾದರೂ ಅವಕಾಶವನ್ನು ನನ್ನ ಸದುದ್ದೇಶಕ್ಕೆ ಬಳಸಿಕೊಂಡು ಬೇರೆಡೆಯೆಲ್ಲಾದರೂ ಕೆಲಸಗಿಟ್ಟಿಸಿಕೊಳ್ಳಬೇಕು - ಇವೆರಡೂ ಹೇಳುವುದಕ್ಕೆ ಮಾತ್ರ ಸುಲಭವೇ ವಿನಾ ಮಾಡಿ ತೋರಿಸುವುದು ಅಷ್ಟೇ ಕಷ್ಟ.

ಇಲ್ಲಿನ ಕೆಲವು ಕಂಪನಿಗಳಲ್ಲಿ ಮಾಡಿದ ಹಾಗೆ ನಮ್ಮ ಕಂಪನಿಯಲ್ಲೂ ವರ್ಷಕ್ಕೆ ಎರಡು ಬಾರಿ ಪರ್‌ಫಾರ್‌ಮೆನ್ಸ್ ಇವ್ಯಾಲ್ಯುಯೇಷನ್ ನಡೆಯುತ್ತದೆಯಾದ್ದರಿಂದ ವರ್ಷದ ಎರಡು ಅವಧಿಗಳಲ್ಲೂ ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹೆಸರನ್ನು ತೆಗೆದುಕೊಂಡು ಸಂಪನ್ನನಾದರೂ ವರ್ಷದ ಕೊನೆಯಲ್ಲಿ ಪ್ರಮೋಷನ್‌ಗೆ ಅಭ್ಯರ್ಥಿಗಳನ್ನು ಗೊತ್ತು ಮಾಡುವ 'ರೇಟಿಂಗ್ ಮತ್ತು ರ್‍ಯಾಂಕಿಂಗ್'ನಲ್ಲಿ ಆಗುವ ಕಥೆಯೇ ಬೇರೆ. ಚೆನ್ನಾಗಿ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಬೋನಸ್ಸೂ, ಇಂಕ್ರಿಮೆಂಟೂ ಸಿಗುತ್ತದಾದರೂ ಅವ್ಯಾವುದೂ ಪ್ರಮೋಷನ್ನಿನ ಹಾಗಲ್ಲ. ಒಮ್ಮೆ ಪ್ರಮೋಷನ್ ಬಂದಿತೆಂದರೆ ಅದರಿಂದಾಗುವ ಅನುಕೂಲಗಳೇ ಬೇರೆ, ಅದು ಮುಂದೆ ಹೋಗಲು ಸಹಾಯಮಾಡುವುದೂ ಅಲ್ಲದೇ ಹೆಚ್ಚು-ಹೆಚ್ಚು ಜವಾಬ್ದಾರಿಯುತ ಕೆಲಸಗಳನ್ನು ಮಾಡಿ, ಒಳ್ಳೆಯ ಕೆಲಸಗಳನ್ನು ಮಾಡಿ ಇನ್ನಷ್ಟು ಹೆಸರನ್ನು ಗಳಿಸಬಹುದು. ಆದರೆ ಈ ವರ್ಷಕ್ಕೆರಡು ಬಾರಿ ಆಗುವ ಇವ್ಯಾಲ್ಯುಯೇಷನ್‌ಗಳ ಉದ್ದೇಶವೇ ಬೇರೆ - You are as good as your last assignment ಅನ್ನೋ ಹಾಗೆ ಪ್ರತೀ ಆರು ತಿಂಗಳಿಗೊಮ್ಮೆ ನನ್ನ ಮೇಲೆ ಉಳಿದವರೆಲ್ಲರು ಇಟ್ಟಿರುವ ನಂಬಿಕೆಗಳನ್ನು ಪುನರ್‌ವಿಮರ್ಶೆಗೊಳಪಡಿಸಲಾಗುತ್ತದೆ. ಮುಂದೆ ಬರುವ ಅಡೆತಡೆಗಳನ್ನೆಲ್ಲ ಯಶಸ್ವಿಯಾಗಿ ಜಯಿಸಿದರೆ ಮಾತ್ರ ಪ್ರಮೋಷನ್ನೋ ಮತ್ತೊಂದೋ ಸಿಕ್ಕು ಮುಂದೆ ಹೋಗಬಹುದು.

೧೯೯೭ ರಲ್ಲೇ ನನ್ನ ಯೂಕ್ರೇನಿಯನ್ ಸಹೋದ್ಯೋಗಿ ಆಂಟೋನೀನಾ ಹೇಳಿದ್ದಳು 'ಅಮೇರಿಕದಲ್ಲಿ ನಿನ್ನ ಯೋಗಕ್ಷೇಮವನ್ನು ನೀನೇ ನೋಡಿಕೋಬೇಕು, ಇಲ್ಲಿ ಯಾರೂ ನಿನ್ನ ಆರೈಕೆ ಮಾಡೋದಿಲ್ಲ' ಎಂದು, ಆಗ ನಾವಿಬ್ಬರೂ ಕನ್ಸಲ್‌ಟೆಂಟ್‌ಗಳಾಗಿ ಕೆಲಸಮಾಡುತ್ತಿದ್ದೆವಾದ್ದರಿಂದ ನನ್ನ ಕ್ಲೈಂಟಿನ ಆಫೀಸಿನ ರಾಜಕೀಯ ನಮ್ಮನ್ನು ಅಷ್ಟೊಂದು ಬಾಧಿಸುತ್ತಿರಲಿಲ್ಲವಾದರೂ ಪದೇ-ಪದೇ ಇತರ ಸಹೋದ್ಯೋಗಿಗಳು ರೆಡ್‌ಟೇಪಿಸಂ, ಅಫೀಸಿನ ರಾಜಕೀಯದ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದ ಹಲವಾರು ಸಂದರ್ಭಗಳಲ್ಲಿ ನಾನು ಕನ್ಸಲ್‌ಟೆಂಟ್ ಆಗೇ ಮುಂದುವರೆದರೆ ಎಷ್ಟೋ ಚೆನ್ನ ಎಂದು ಅನ್ನಿಸಿದ್ದೂ ಇದೆ. ಆದರೆ ಕನ್ಸಲ್‌ಟೆಂಟ್ ಆದರೆ ಅನುಕೂಲಗಳು ಇದ್ದಹಾಗೆ ಅನಾನುಕೂಲಗಳೂ ಇಲ್ಲದೇನಿಲ್ಲ, ಅದರ ಮೇಲೆ ಮುಂದೆಲ್ಲಾದರೂ ಬರೆಯುತ್ತೇನೆ.

ಈ ದಿನ ಮೈಸೂರಿನಲ್ಲಿ ಕುಳಿತು ನಮ್ಮ ಕಂಪನಿಗೆ ಕೆಲಸ ಮಾಡುತ್ತಿರುವ ತರುಣ ಮಿತ್ರನೊಬ್ಬ ತನಗೆ ಇತ್ತೀಚಿನ ಫರ್‌ಫಾರ್ಮೆನ್ಸ್ ಇವ್ಯಾಲ್ಯುಯೇಷನ್‌ನಲ್ಲಿ ಕಡಿಮೆ ರೇಟಿಂಗ್‌ನ್ನು ಕೊಟ್ಟಿದ್ದಾರೆ ಎಂದು ತನ್ನ ಕಷ್ಟವನ್ನು ನನ್ನಲ್ಲಿ ಚಾಟ್ ಮೂಲಕ ತೋಡಿಕೊಂಡ. ತನ್ನನ್ನು ಒಂದು ವ್ಯವಸ್ಥಿತ ಜಾಲದಲ್ಲಿ ಸಿಕ್ಕಿಸಿ ಈ ರೀತಿ ಮಾಡಲಾಗಿದೆಯೆಂದು ಬೇಸರ ಪಟ್ಟುಕೊಂಡಿದ್ದ, ನಾನು ವಿವರವನ್ನು ಕೇಳಲಾಗಿ, ಅವನ ಕೆಲಸದ ಬಗ್ಗೆ ಅವನ ಹಳೆಯ ಬಾಸನ್ನು ಸ್ವಲ್ಪವೂ ಸಂಪರ್ಕಿಸದೆ ಎಲ್ಲ ನಿರ್ಧಾರವನ್ನೂ ಈ ಹೊಸ ಬಾಸೇ ಮಾಡಿರೋದರಿಂದ ಹೀಗಾಯಿತು, ನನ್ನ ಹೊಸ ಬಾಸಿಗೆ ನನ್ನ 'ನಡವಳಿಕೆ' ಬಗ್ಗೆ ಅಷ್ಟೊಂದು ಚೆನ್ನಾಗಿ ಗೊತ್ತಿಲ್ಲದ್ದರಿಂದ ಹೀಗೆ ರೇಟಿಂಗ್ ಅನ್ನು ಕೊಟ್ಟಿದ್ದಾರೆ ಎಂದ. ಕಳೆದ ವರ್ಷದ ನಮ್ಮ ಕಂಪನಿಯ ಎಕ್ಸೆಕ್ಯುಟಿವ್ ಒಬ್ಬರು ತಮ್ಮ ಅಣಿಮುತ್ತುಗಳನ್ನು ಸುರಿಸುವಾಗ ಹೇಳಿದ "If you are mad at someone else, it is generally because YOU haven't done something." ಎನ್ನುವ ಹೇಳಿಕೆಯನ್ನು ಅವನಿಗೆ ಹೇಳಿ ನಿನ್ನ ಮೊದಲಿನ ಮ್ಯಾನೇಜರನ್ನು ಕ್ಯಾಂಟ್ಯಾಕ್ಟ್ ಮಾಡಿ, ಅವರಿಗೆ ಈ ಹೊಸ ಮ್ಯಾನೇಜರ್ ಬಗ್ಗೆ ಈ ಮೊದಲೇ ಹೇಳಿದ್ದರೆ ಒಳ್ಳೆಯದಿತ್ತು, ಅಥವಾ ಈ ಹೊಸ ಮ್ಯಾನೇಜರ್‌ಗೆ ನಿನ್ನ ಹಳೆಯ ಕೆಲಸಗಳ ವಿವರಗಳನ್ನು ನೀನೇ ಕೊಡಬಹುದಿತ್ತು ಎಂದೆ. ಅದನ್ನು ಕೇಳಿ ಅವನು ಆ ಕಡೆ ಏನು ಮಾಡಿದನೋ ಗೊತ್ತಿಲ್ಲ, ಸ್ವಲ್ಪ ಹೊತ್ತಿನಲ್ಲೆ 'ನನ್ನನ್ನು ಮತ್ತೊಮ್ಮೆ ಇವ್ಯಾಲ್ಯುಯೇಟ್ ಮಾಡುತ್ತಾರಂತೆ!' ಎಂದು ಹೇಳಿದ, ನಾನು 'ಒಳ್ಳೆಯದಾಗಲಿ' ಎಂದು ಚಾಟ್ ಸಂಬಂಧವನ್ನು ಕತ್ತರಿಸಿಕೊಂಡೆ.

***

೨೦೦೫ ರ ಜನವರಿಯಲ್ಲಿ ನನಗೂ ಒಂದು ಪ್ರೊಮೋಷನ್ ಅವಕಾಶ ಬಂದಿತ್ತು, ನಾನು ಅಂದು ಪಡೆಯಬಹುದಾದ ಕೆಲಸಕ್ಕೆ ಹನ್ನೊಂದು ಜನರನ್ನು ಇಂಟರ್‌ವ್ಯೂವ್ ಮಾಡಿದ್ದರು. ಅದೇ ಕಂಪನಿಯಲ್ಲಿ ಬೇರೆ ಗ್ರೂಪಿನ ಕೆಲಸವಾದ್ದರಿಂದ ತುಂಬಾ ರಿಗರಸ್ ಆಗಿ ಇಂಟರ್‌ವ್ಯೂ ಸಹ ಮಾಡಿದ್ದರು. ಡಿಸೆಂಬರ್ ೨೯, ೨೦೦೪ ರಂದು ನಡೆದ ೯೦ ನಿಮಿಷಗಳ ಇಂಟರ್‌ವ್ಯೂವ್ ನಲ್ಲಿ ನಾನು ಚೆನ್ನಾಗಿಯೇ ಮಾತನಾಡಿದ್ದೆ ಎಂದುಕೊಂಡು ಸ್ವಲ್ಪ ಆಸೆಗಳನ್ನೂ ಎತ್ತರಕ್ಕೆ ಏರಿಸಿಟ್ಟುಕೊಂಡಿದ್ದೆ. ಸಂದರ್ಶನ ನಡೆದ ದಿನ ಹಾಗೂ ಸಂದರ್ಶನ ನಡೆದ ಒಂದು ವಾರದ ತರುವಾಯ 'ಪುಸ್ತಕದಲ್ಲಿ ಬರೆದಂತೆ' ನ್ಯಾಯವಾಗಿ ಫಾಲೋ ಅಪ್ ಮಾಡಿದ್ದೆನಾದರೂ 'ನಿನ್ನನ್ನು ಆಯ್ಕೆ ಮಾಡಿಲ್ಲ' ಎಂದು ಎಲ್ಲಿಯೂ ಕೇಳಿ ಬರದಿದ್ದುದರಿಂದ ಆ ಹೊಸ ಕೆಲಸ ಇನ್ನೇನು ಸಿಕ್ಕೇ ಬಿಟ್ಟಿತು ಎಂದು ಕನಸನ್ನೂ ಕಾಣತೊಡಗಿದೆ, ಆದರೆ ಆದದ್ದೇ ಬೇರೆ.

ನಮ್ಮ ಆಫೀಸಿನಲ್ಲಿ ಪ್ರತಿಯೊಂದು ಆಂತರಿಕ ಕೆಲಸಗಳ ಬದಲಾವಣೆಯ ಸಂದರ್ಭದಲ್ಲಿ ಹಯರಿಂಗ್ ಮ್ಯಾನೇಜರ್ ಕರೆಂಟ್ ಮ್ಯಾನೇಜರ್ ಅವರ ಅನುಮತಿಯನ್ನು ಪಡೆದೇ ಮುಂದೆ ಸಾಗಬೇಕು ಎಂಬ ನಿಯಮವಿದೆ, ಹಾಗೂ ಸಿಗಬೇಕಾದ ಕೆಲಸ ಪ್ರಮೋಷನ್ ಅವಕಾಶವಾದರೆ ಹೇಳುವಂತಹ ಮಹಾನ್ ಕಾರಣಗಳನ್ನು ಸರಿಯಾಗಿ ಡಾಕ್ಯುಮೆಂಟ್ ಮಾಡದೇ ನಿರಾಕರಿಸಬಾರದು ಎಂಬ ನಿಯಮವೂ ಇದೆ. ನಾನು ಇದ್ದ ಪರಿಸ್ಥಿತಿಯಲ್ಲಿ ನನ್ನ 'ಬಿಡುಗಡೆ'ಗೆ ಯಾವ ತೊಂದರೆಯೂ ಇದ್ದಿರಲಿಲ್ಲವಾದ್ದರಿಂದ ಕರೆಂಟ್ ಮ್ಯಾನೇಜರ್‌ಗೆ ನಾನೇನೂ ಹೊಸ ಕೆಲಸ ಸಿಗಬಹುದಾದ ಬಗ್ಗೆ ಹೇಳಲಿಲ್ಲ. ಡಿಸೆಂಬರ್ ೨೯ ರಿಂದ ಕಾದದ್ದಕ್ಕೆ ಪ್ರತಿಫಲವೆಂಬುವಂತೆ ಜನವರಿ ೧೯ ನೇ ತಾರೀಖು ನನಗೆ ಹೊಸ ಕೆಲಸದ ಹಯರಿಂಗ್ ಡೈರೆಕ್ಟರ್‌ರಿಂದ ಒಂದು ಇ-ಮೇಲ್ ಬಂದಿತು. ಅದರ ಪ್ರಕಾರ ಹೊಸ ಕೆಲಸಕ್ಕೆ ನನ್ನ ಆಯ್ಕೆಯಾಗಿರಲಿಲ್ಲ. ನಾನು ತುಂಬಾ ನಿರಾಶೆಯಿಂದ 'ನನ್ನನ್ನು ಆಯ್ಕೆ ಮಾಡದಿರುವುದಕ್ಕೆ ಏನು ಕಾರಣ, ದಯವಿಟ್ಟು ಫೀಡ್‌ಬ್ಯಾಕ್ ಕೊಡಿ' ಎಂದು ಇ-ಮೇಲ್‌ಗೆ ಉತ್ತರ ಬರೆದಿದ್ದಕ್ಕೆ ಅದೇ ದಿನ ಸಂಜೆ ಆರೂ ಮೂವತ್ತರ ಮೇಲೆ ಆ ಡೈರೆಕ್ಟರ್ ಕಾಲ್ ಮಾಡಿದ್ದರಿಂದ ಮರುದಿನ ವಾಯ್ಸ್ ಮೆಸ್ಸೇಜನ್ನು ಕೇಳಿ ಇನ್ನಷ್ಟು ಕುಗ್ಗಿ ಹೋದೆ, ಆ ವಾಯ್ಸ್ ಮೆಸ್ಸೇಜಿನ ಪ್ರಕಾರ ಈ ಡೈರೆಕ್ಟರ್ 'ನಿನ್ನ ಇಂಟರ್‌ವ್ಯೂವ್ ಚೆನ್ನಾಗಿ ಆಗಿತ್ತು, ನಿನ್ನ ಬಿಡುಗಡೆಯ ಬಗ್ಗೆ ನನ್ನ ಕರೆಂಟ್ ಬಾಸಿನ ಬಳಿ ಕೇಳಿದ್ದಕ್ಕೆ ಆಕೆ ಇನ್ನಾರು ತಿಂಗಳು ಬಿಡುಗಡೆ ಆಗುವುದಿಲ್ಲವೆಂದು ಹೇಳಿಬಿಟ್ಟಳು, ನಮಗೆ ಇನ್ನಾರು ತಿಂಗಳು ತಡೆಯಲು ಸಾಧ್ಯವಿರದಿದ್ದುದರಿಂದ ನಿನ್ನ ನಂತರದ ಒಬ್ಬ ಕ್ಯಾಂಡಿಡೇಟನ್ನು ತೆಗೆದುಕೊಂಡಿದ್ದೇವೆ' ಎಂದಿತ್ತು. ನನಗೆ ನಿರಾಶೆ, ಕೋಪ, ಸಂಕಟವೆಲ್ಲ ಒಟ್ಟೊಟ್ಟಿಗೆ ಆಗ ತೊಡಗಿದವು, ಆ ಕೂಡಲೇ ನನಗೆ ಸಿಕ್ಕ ಮಹತ್ವಪೂರ್ಣ ಅವಕಾಶವೊಂದನ್ನು ನಿರಾಕರಿಸಿದ ನನ್ನ ಬಾಸನ್ನು ಫೋನ್ ಮಾಡಿ ಮನಪೂರ್ವಕವಾಗಿ ಬೈದುಬಿಡಲೇ ಎನ್ನಿಸಿದರೂ ವಿವೇಕ ಹಾಗೆ ಮಾಡಗೊಡಲಿಲ್ಲ.

ಆ ವಾರ ಪೂರ್ತಿ, ಅದರ ಮುಂದಿನ ಒಂದೆರಡು ವಾರ ಏನೇನು ಮಾಡಬಹುದು ಎಂದೆಲ್ಲ ಯೋಚಿಸತೊಡಗಿದೆ. ನಮ್ಮ ಕಂಪನಿಯ ಹ್ಯೂಮನ್ ರಿಸೋರ್ಸ್‌ನ ಒಂದೆರಡು ಜನರನ್ನೂ, ಕಂಪನಿಯ ಒಳಗೆ ಹಾಗೂ ಹೊರಗೆ ಇರುವ ಸ್ನೇಹಿತರನ್ನೂ ಕೇಳಿ ನನ್ನ ಆಪ್ಷನ್‌ಗಳು ಏನೇನು ಎಂದು ಲೆಕ್ಕ ಹಾಕತೊಡಗಿದೆ. ಕೊನೆಯಲ್ಲಿ ಅಧಿಕೃತವಾಗಿ ಕಂಪ್ಲೇಂಟ್ ಕೊಟ್ಟು ವಿಚಾರಿಸುವ ಮೊದಲೆ ನನ್ನ ಬಾಸನ್ನೊಮ್ಮೆ ಈ ನಿರಾಕರಣೆಯ ಕಾರಣವೇನೆಂದು ಕೇಳೋಣವೆಂದು ತೀರ್ಮಾನಿಸಿ ಒಂದು ಮಧ್ಯಾಹ್ನ ವೈಯುಕ್ತಿಕ ವಿಷಯ ಮಾತನಾಡಬೇಕೆಂದು ಒಂದು ಅಪಾಯಿಂಟ್‌ಮೆಂಟನ್ನೂ ಪಡೆದುಕೊಂಡೆ. ಆದರೆ ನನಗೆ ತುಂಬಾ ಆಶ್ಚರ್ಯ ಕಾದಿತ್ತು, ನನ್ನ ಬಾಸಿಗೆ ಕೇಳಿದೆ - 'ನನ್ನನ್ನೇಕೆ ಬಿಡುಗಡೆ ಮಾಡಲಿಲ್ಲ, ಅದು ಇದ್ದ ಕೆಲಸಗಳಲ್ಲೇ ಅತ್ಯಂತ ಒಳ್ಳೆಯ ಕೆಲಸವಾಗಿತ್ತು' ಎಂದು. ಅದಕ್ಕುತ್ತರವಾಗಿ ಆಕೆ 'ನಾನು ಹಾಗೆ ಹೇಳಿಯೇ ಇಲ್ಲ, ಹಾಗೆ ಹೇಳುವುದೂ ಇಲ್ಲ, ನಿನಗೆ ಒಳ್ಳೆಯದಾಗುತ್ತದೆ ಎಂದರೆ ನಾನೇಕೆ ಅಡ್ಡಿ ಪಡಿಸಲಿ' ಎಂದು ಸುಳ್ಳು ಹೇಳಿಬಿಟ್ಟಳು. ನಾನು ಆಕೆಯ ಎದುರಿನಲ್ಲೇ 'ನೀನು ಹೇಳುತ್ತಿರುವುದು ಸುಳ್ಳು, ಬೇಕಾದರೆ ಈ ಮೆಸ್ಸೇಜನ್ನು ಕೇಳು' ಎಂದು ಆ ಡೈರೆಕ್ಟರ್ ನನಗೆ ಬಿಟ್ಟ ವಾಯ್ಸ್ ಮೆಸ್ಸೇಜನ್ನು ಆಕೆಗೆ ಸ್ಪೀಕರ್ ಫೋನಿನಲ್ಲಿ ಕೇಳಿಸಿದೆ. ಆಕೆಗೆ ಗೊತ್ತಿರಲಿಲ್ಲ ನಾನು ಹೀಗೆ ಹಿಡಿದುಕೊಳ್ಳುತ್ತೇನೆಂದು - ಆಕೆಯ ಕಪ್ಪು ಮುಖ ಇನ್ನಷ್ಟು ಕಪ್ಪಾಯಿತು, ಧ್ವನಿ ಭಾರವಾಯಿತು, ಒಸಡುಗಳು ಕೆಳಕ್ಕೆ ಬಿದ್ದು ಹೋದವು. ನನಗೂ ಹೀಗೆ ಮಾಡಿದೆನಲ್ಲಾ, ಮಾಡಬೇಕಾಯಿತಲ್ಲ ಎಂದು ಬಹಳ ಬೇಸರವಾಗಿ ಹೋಯಿತು. ನಮ್ಮ ನಡುವೆ ಬೇಕಾದಷ್ಟು ಸೈಲೆನ್ಸ್ ಸೃಷ್ಟಿಯಾಗಿ ನಮ್ಮಿಬ್ಬರನ್ನೂ ಅಣಗಿಸತೊಡಗಿತೇ ವಿನಾ ಆಕೆ ಹೀಗೆ ಮಾಡಿದ್ದಕ್ಕೆ ಕ್ಷಮೆ ಕೇಳಲೂ ಇಲ್ಲ, I will make it up to you ಎನ್ನಲೂ ಇಲ್ಲ. ನಾನು ಅಲ್ಲಿ ಇನ್ನೂ ಹೆಚ್ಚು ಹೊತ್ತು ಇದ್ದರೆ ಅನಾಹುತವೇನಾದರೂ ಆಗಬಹುದೇನೋ ಎಂದು ಎದ್ದು ನನ್ನ ಕ್ಯೂಬಿಗೆ ಬಂದೆ.

ಇದಾದ ತರುವಾಯ ನನಗಾದ ಅನ್ಯಾಯಕ್ಕೆ ಪ್ರತೀಕಾರವಾಗಿ ನಾನು ಏನು ಬೇಕಾದರೂ ಮಾಡಬಹುದಿತ್ತು, ಆದರೆ ನನಗೆ ಸಿಗಬಹುದಾದ ಅವಕಾಶ ಈಗಾಗಲೇ ಹೋಗಿಬಿಟ್ಟಿದ್ದರಿಂದ ರಿಯಾಕ್ಷನರಿಯಾಗಿ ಏನು ಮಾಡಿದರೂ ಅದರಿಂದ ಪ್ರಯೋಜನವೇನು ಎಂಬ ಯೋಚನೆಯಿಂದ ನಾನು ಆಕೆಯ ಮೇಲೆ ಯಾವ ಕೇಸನ್ನೂ ಹಾಕಲಿಲ್ಲ. ಆದಷ್ಟು ಬೇಗ ಈ ಟೀಮಿನಿಂದ, ಈ ಬಾಸಿನಿಂದ ಕಳಚಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿದ್ದಾಗ ನಮ್ಮ ಕಂಪನಿಯಲ್ಲೇ ಹಲವಾರು ಬೆಳವಣಿಗೆಯ ಅವಕಾಶಗಳಲ್ಲಿ ನನಗೆ ಮೋಸ ಮಾಡಿದ ಬಾಸ್ ಭಾಗವಹಿಸುವಂತೆ ಅವಕಾಶ ಮಾಡಿಕೊಟ್ಟಳು. ಅಲ್ಲದೇ ಕಂಪನಿಯ ಒಳಗೇ ಬೇಕಾದಷ್ಟು ಕೆಲಸಗಳು ಇರುತ್ತಿದ್ದವಾದ್ದರಿಂದ ಜನವರಿಯಿಂದ ಜೂನ್ ವರೆಗೆ ಬೇರೆ ಕೆಲಸವನ್ನು ನೋಡೋಣವೆಂದು ಅದರ ಮೇಲೆ ಕೇಂದ್ರೀಕರಿಸಿದೆ.

ಆದರೆ ನಾನು ಅದೆಷ್ಟು ಕೆಲಸಗಳಿಗೆ ಅರ್ಜಿ ಗುಜರಾಯಿಸಿದರೂ ಇಂಟರ್‌ವ್ಯೂವ್ ಅವಕಾಶಗಳು ಬರುವುದು ಕಡಿಮೆಯಾಗತೊಡಗಿತು, ಒಂದೆರಡು ಇಂಟರ್‌ವ್ಯೂವ್ ಬಂದರೂ ಕೆಲಸ ಸಿಗಲಿಲ್ಲ. ಅಂತೂ ಇಂತೂ ಹೀಗೇ ಕೆಲಸ ಹುಡುಕುತ್ತಾ ಹುಡುಕುತ್ತಾ ೨೦೦೫ ಕಳೆದುಹೋಯಿತು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರದಿಂದ ಆಗಾಗ್ಗೆ ಸೇವ್ ಮಾಡಿ, ನನಗೆ ನಾನೇ ಫಾರ್‌ವರ್ಡ್ ಮಾಡಿಕೊಳ್ಳುತ್ತಿದ್ದ ಆ ವಾಯ್ಸ್ ಮೆಸ್ಸೇಜನ್ನು ಕೇಳುತ್ತಿದ್ದೆನಾದರೂ ಅದು ನನ್ನ ಕೊರಗನ್ನು ಹೆಚ್ಚಿಸುತ್ತಿತ್ತೇ ವಿನಾ ಯಾವ ಕೆಲಸವನ್ನು ಪಡೆಯಲು ಸಹಾಯ ಮಾಡಲಿಲ್ಲ. ಹಲವರ ಬಳಿ ಹೀಗಾಯಿತು ಎಂದು ಹೇಳಿಕೊಂಡರೆ ಪರಿಸ್ಥಿತಿಗೆ ತಕ್ಕಂತೆ ಅವರೂ ಪ್ರತಿಕ್ರಿಯೆ ತೋರಿಸಿದರಷ್ಟೆ.

ಕೊನೆಗೆ ೨೦೦೬ ರ ಮಾರ್ಚ್‌ನಲ್ಲಿ ನನಗೆ ಇಷ್ಟವಾದ ಕೆಲಸವೊಂದಕೆ ಅರ್ಜಿ ಗುಜರಾಯಿಸಿದೆ, ಆ ಕೆಲಸ ಎಲ್ಲ ರೀತಿಯಿಂದಲೂ ನನಗೇ ಹೇಳಿ ಮಾಡಿಸಿದ ಹಾಗಿದ್ದುದರಿಂದ ನಾನು ಯಾವ ರೀತಿಯ ಚಾನ್ಸನ್ನೂ ತೆಗೆದುಕೊಳ್ಳಲಿಲ್ಲ. ಆ ಕೆಲಸಕ್ಕೆ ಅರ್ಜಿ ಗುಜರಾಯಿಸುವ ಮುನ್ನ ನನ್ನ ಕರೆಂಟ್ ಬಾಸಿನಿಂದ 'ನಾನು ಬಿಡುಗಡೆಯಾಗಬಹುದು' ಎಂದು ಬರೆಸಿಕೊಂಡಿದ್ದೆ, ಹ್ಯೂಮನ್ ರಿಸೋರ್ಸ್‌ನವನೊಬ್ಬನಿಗೆ ಆ ಇ-ಮೇಲನ್ನು ಫಾರ್‌ವರ್ಡ್ ಮಾಡಿ ಹಿಂದಿನ ಅನುಭವವನ್ನು ಹೇಳಿಕೊಂಡು ಸಮಯ ಬಂದರೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದೆ, ಹೊಸ ಕೆಲಸದ ಇಂಟರ್‌ವ್ಯೂವ್‌ಗೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡು, 'ಪುಸ್ತಕದಲ್ಲಿ ಬರೆದಂತೆ', ಎಲ್ಲ ಸ್ಟೆಪ್‌ಗಳನ್ನೂ ನಿರ್ವಹಿಸಿದ್ದರಿಂದ ಕೊನೆಗೆ ನನಗೆ ಬೇಕಾದ ಕೆಲಸ ಸಿಕ್ಕೇ ಬಿಟ್ಟಿತು! ಮುಂದೆ ಅವರು ಆಫರ್ ಕಳಿಸಿದಾಗ ಈ ಬಾಸ್ ನನ್ನನ್ನು 'ಖುಷಿ'ಯಿಂದಲೇ ಬಿಡುಗಡೆಮಾಡಿದಳು. ಹಾಗೂ ನಾನು ಆಕೆಯ ವಿರುದ್ಧ ಯಾವ ಸೇಡನ್ನೂ ತೀರಿಸಿಕೊಳ್ಳದಿದ್ದುದು ಖಚಿತವಾದ ಮೇಲೆ ನನ್ನ ಅತ್ಯಂತ ಕ್ಲೋಸ್ ಫ್ರೆಂಡೂ ಆಗಿ ಹೋದಳು. ಆದರೆ ಈ ವರೆಗೆ ಎಲ್ಲೂ ಆ ಹಳೆಯ ಘಟನೆಯನ್ನು ಅಪ್ಪಿತಪ್ಪಿಯೂ ನೆನಸುವುದಿಲ್ಲ, ಅವಳು ಮಾಡಿದ ತಪ್ಪಿಗೆ ಕ್ಷಮೆ ಕೇಳಲೂ ಇಲ್ಲ.

ಈ ನನ್ನ ಅನುಭವದಿಂದ ಕೆಲಸ ತೆಗೆದುಕೊಳ್ಳುವುದು ಹೇಗೆ ಎಂದು ಒಂದು ಪುಸ್ತಕವನ್ನು ಬರೆಯಬಲ್ಲೆ, ನನಗೆ ಅನ್ಯಾಯವಾಗಿದ್ದಕ್ಕೆ ನಾನು ಫಾರ್ಮಲ್ ಆಗಿ ಕಂಪ್ಲೇಂಟ್ ಕೊಡದಿರುವುದನ್ನು ಸಾಧಿಸಿಕೊಳ್ಳಬಲ್ಲೆ, ಆದರೆ ಆಕೆ ಹೇಳಿದ ಒಂದೇ ಒಂದು ಸುಳ್ಳಿನಿಂದ ಚೇತರಿಸಿಕೊಳ್ಳಲು ಜನವರಿ ೨೦೦೫ ರಿಂದ ಏಪ್ರಿಲ್ ೨೦೦೬ ರವರೆಗೆ ಹಿಡಿಯಿತು ಎನ್ನುವ ವಿಷಯವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದಾಗೆಲ್ಲ ಹೊಟ್ಟೆ ಕಿವುಚಿದಂತಾಗುತ್ತದೆ.

ಈಗ ನಮ್ಮ ಎಕ್ಸೆಕ್ಯುಟಿವ್ ಹೇಳಿದ "If you are mad at someone else, it is generally because YOU haven't done something" ಸಾಲನ್ನು ಪದೇ-ಪದೇ ನೆನೆಸಿಕೊಂಡು ಒಂದು ಸನ್ನಿವೇಶದ ಔಟ್‌ಕಮ್ ನನ್ನ ನಿರೀಕ್ಷೆಗೆ ತಕ್ಕಂತೆ ಆಗಬೇಕೆಂದುಕೊಂಡು ನನ್ನ ಕೈಯಿಂದ ಏನೇನೆಲ್ಲ ಆಗುತ್ತದೋ ಅದನ್ನೆಲ್ಲ ಮಾಡುತ್ತೇನೆ, ಕೆಲವೊಮ್ಮೆ ಅತಿ ಅಥವಾ ಮೈಕ್ರೋ ಮ್ಯಾನೇಜ್‌ಮೆಂಟ್ ಎನ್ನಿಸಿದರೂ ಫಲಿತಾಂಶ ನಾನು ಅಂದುಕೊಂಡಿದ್ದಕಿಂತ ಭಿನ್ನವಾದರೆ ನನಗೆ ಇನ್ನೊಬ್ಬರ ಮೇಲೆ ಸಿಟ್ಟುಬರುವುದಕ್ಕಿಂತ ಮೊದಲು 'ನಾನೇನು ಮಾಡಬಹುದಿತ್ತು' ಎಂದು ಮತ್ತೊಮ್ಮೆ ಯೋಚಿಸುತ್ತೇನೆ.

No comments: