Saturday, June 17, 2006

ಅನಿವಾರ್ಯವಾದ ಸಂಬಂಧಗಳು

ತಂದೆ-ಮಗನ, ತಾಯಿ-ಮಗಳ ಸಂಬಂಧ ಅಪರೂಪವಾದದ್ದಂತೆ. ಎಷ್ಟೋ ತಲೆಮಾರುಗಳು ತಮ್ಮ ತಮ್ಮ ರಹಸ್ಯಗಳನ್ನು ಈ ರೀತಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನಿಸುತ್ತವಂತೆ. ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ 'ಹೀಗಲ್ಲ ಹಾಗೆ ಮಾಡು' ಅನ್ನೋ ಸರಳವಾದ ಮಾರ್ಗದರ್ಶನವಿರಬಹುದು, ಅಥವಾ ಕುತೂಹಲ ಹುಟ್ಟುವ ವಯಸ್ಸಿನಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರಕೊಡುವುದರ ಮೂಲಕ ಅನುಭವಗಳ ರವಾನೆಯಾಗಬಹುದು ಅಥವಾ ಬದುಕಿನಲ್ಲಿ ಆಗಾಗ್ಗೆ ಎದುರುಗೊಳ್ಳುವ ಸವಾಲುಗಳನ್ನೆದುರಿಸಲು ಕೊಡುವ ಧೈರ್ಯವಿರಬಹುದು - ತಲತಲಾಂತರಗಳಿಂದ ಈ ಪ್ರಕ್ರಿಯೆ ನಡೆದು ಬಂದಿದೆ, ಅದು ಹೀಗೇ ಮುಂದುವರೆಯುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವೂ ಹೌದು.

ಕಳೆದ ವರ್ಷ ಸ್ಥಳೀಯ ಪತ್ರಿಕೆಯೊಂದರಲ್ಲಿ ಓದಿದ್ದೆ - ಯಾವೊದೋ ಒಂದು ಕಮ್ಮ್ಯೂನಿಟಿಯಲ್ಲಿ ಪ್ರಾಯಕ್ಕೆ ಬಂದ ಹುಡುಗರು ದಾಂಧಲೆ ಎಬ್ಬಿಸಿ ಮಾಡುತ್ತಿದ್ದ ಅನಾಚಾರಗಳ ಬಗ್ಗೆ ಅಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಕ್ರೈಮ್ ರೇಟಿನ ಬಗ್ಗೆ ಬರೆದಿದ್ದ ವರದಿಯೊಂದರಲ್ಲಿ ಯುವಕರಲ್ಲಿ ಹೆಚ್ಚಿದ ಅನ್‌ರೆಸ್ಟ್ ಗೆ ಕಾರಣವಾಗಿ ಅಲ್ಲಿನ ಕುಟುಂಬಗಳು ಏಕ ಪೋಷಕ ಕುಟುಂಬಗಳಾಗಿರುವುದನ್ನೂ ಹಾಗೂ ಎಷ್ಟೋ ಜನ ಹುಡುಗರು ತಂದೆಯಿಲ್ಲದೆ ಬೆಳೆದವರೆಂದೂ ಬರೆದಿದ್ದರು. ಅದೇ ಲೇಖನದಲ್ಲಿ ಮದವೇರಿದ ತರುಣ ಆನೆಗಳನ್ನು ನಿಯಂತ್ರಿಸಲು ಪಳಗಿದ ದೊಡ್ಡ ಆನೆಗಳನ್ನು ತಂದು ಯುವ ಆನೆಗಳನ್ನು ಹತೋಟಿಯಲ್ಲಿ ತಂದ ಹಿಂದಿನ ಉದಾಹರಣೆಯೊಂದನ್ನೂ ನೀಡಿದ್ದರು, ಅದೇ ರೀತಿ ಈ ಹದಗೆಟ್ಟ ಕಮ್ಮ್ಯೂನಿಟಿಯಲ್ಲಿ ಯಾವುದಾದರೊಂದು ರೀತಿಯಲ್ಲಿ ರೋಲ್ ಮಾಡೆಲ್‌ಗಳನ್ನು ತಂದು ತಂದೆಯ ಸ್ಥಾನದಲ್ಲಿ ನಿಲ್ಲಿಸಿ ದಾರಿ ತಪ್ಪಿದ ಯುವಕರಿಗೆ ಮಾರ್ಗದರ್ಶನವನ್ನು ನೀಡಿದರೆ... ಎಂದೂ ಬರೆದಿದ್ದಂತೆ ನೆನಪು. ಈ ನ್ಯೂ ಯಾರ್ಕ್ ನಗರದ ಸುತ್ತ ಮುತ್ತಲೂ ಇರುವ ಹಲವಾರು ಕಮ್ಮ್ಯೂನಿಟಿಗಳಲ್ಲಿ ಏಕ ಪೋಷಕ ಕುಟುಂಬಗಳು ಹಲವಾರು ಇದ್ದು ಬೆಳವಣಿಗೆಯ ವಯಸ್ಸಿನಲ್ಲಿ ಮಕ್ಕಳಿಗೆ ತಂದೆ-ತಾಯಿ ಇಬ್ಬರಿಂದಲೂ ಸಿಗಬೇಕಾದ ಮಾರ್ಗದರ್ಶನ ಸಿಗದೇ ಹೋದರೆ 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎನ್ನುವಂತೆ ಮುಂದೆ ದಾರಿ ತಪ್ಪಿದ, ತಪ್ಪಬಹುದಾದ ಯುವಕ-ಯುವತಿಯರನ್ನು ಒಳ್ಳೆಯ ದಾರಿಗೆ ತರುವುದು ಕಷ್ಟ ಸಾಧ್ಯ.

ಹದಿನೆಂಟು ವರ್ಷಗಳಾದ ಮೇಲೆ ಕಳಚಿಕೊಳ್ಳಬಹುದಾದ (ಅಥವಾ ನಾವು ಕಳಚಿಕೊಂಡೆವು ಎಂದುಕೊಂಡ) ತಂದೆ-ತಾಯಿ, ಸಹೋದರ-ಸಹೋದರಿಯರ ಸಂಬಂಧಗಳು ಜೀವನ ಪರ್ಯಂತ ನಾವು ಬದುಕುವ ರೀತಿಯನ್ನು, ನಾವು ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸುತ್ತೇವೆನ್ನುವುದನ್ನು ನಿರ್ಧರಿಸಿಬಿಡುತ್ತವೆ. ಅವಿಭಕ್ತ ಕುಟುಂಬದಲ್ಲಿ ಇದ್ದವರಿಗಂತೂ ಈ ಸಂಬಂಧಗಳ ಪರಿಣಾಮ ಇನ್ನೂ ಹೆಚ್ಚು. ನಾನು ಯಾವತ್ತಿದ್ದರೂ ನನ್ನ ಸಹೋದರ-ಸಹೋದರಿಯರ ಜೊತೆ ಒಡನಾಡಿ ಬೆಳೆದ ದಿನಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ - ದೇವರೇ, ಇನ್ನು ನೂರು ಜನ್ಮವಿದ್ದರೂ ನನ್ನನ್ನು ತುಂಬಿದ ಕುಟುಂಬದಲ್ಲಿಯೇ ಹುಟ್ಟಿಸು ಎನ್ನುವ ಪ್ರಾರ್ಥನೆ ನನ್ನದು. ನನ್ನ ಎಷ್ಟೋ ಜನ ಯುವ ಸ್ನೇಹಿತರು ತಮ್ಮ ತಂದೆ-ತಾಯಿಯರಿಗೆ ಒಬ್ಬರೇ ಮಕ್ಕಳು - ನಾನು ಅಂತರ್ಮುಖಿಯಾಗಿ ಈಗೇನೋ ದಿನಗಟ್ಟಲೇ ನಾಲ್ಕು ಗೋಡೆಗಳ ಮಧ್ಯೆಯಲ್ಲಿ ಇರಬಲ್ಲವನಾದರೂ ಅಕ್ಕ-ತಂಗಿ-ಅಣ್ಣ-ತಮ್ಮಂದಿರಿಲ್ಲದ ಬಾಲ್ಯವನ್ನು ಊಹಿಸಿಕೊಳ್ಳುವುದೂ ನನ್ನಿಂದ ಅಸಾಧ್ಯ. ಇಂತಹ ಹಲವಾರು ದೃಷ್ಟಿಕೋನದಿಂದಲೇ ನಾನು ನಮ್ಮ ದೇಶವನ್ನು ಮಹಾನ್ ಎನ್ನೋದು - ಚೀನಾದಲ್ಲಿ 'ಒಂದು ಮನೆಗೆ ಒಂದೇ ಮಗು' ಎಂದು ಕಾನೂನನ್ನು ಹೇರಿ ಸಂಬಂಧಗಳ ಕುಡಿಗಳನ್ನೇ ಚಿವುಟಿ ಹಾಕುತ್ತಾರಲ್ಲ ಅಂತಹ ಸತ್ತೆಯಲ್ಲಿ ಬದುಕುವುದಾದರೂ ಹೇಗೆ, ಏಕೆ?

ನಾವೇ ಆಯ್ದುಕೊಂಡ ಸ್ನೇಹಿತರೂ ಹೀಗೆ ಬಂದು ಹಾಗೆ ಹೋಗುತ್ತಾರೆ, ಆದರೆ ಕೊನೇವರೆಗೂ ಉಳಿಯೋದೇನಿದ್ರೂ ಈ ಸಂಬಂಧಗಳು ಮಾತ್ರ, 'ನನ್ನ ಅಣ್ಣ', 'ನನ್ನ ತಂಗಿ' ಎಂದು ನಾವು ಮಾತುಗಳನ್ನು ಆರಂಭಿಸುತ್ತೇವಲ್ಲ ಅದರಲ್ಲೊಂದು ಸ್ವಂತಿಕೆ ಇದೆ - ಅದು ಬರೀ ಇಬ್ಬರು ಭೌತಿಕ ವ್ಯಕ್ತಿಗಳ ನಡುವಿನ ಪ್ರಸಕ್ತ ಕೊಂಡಿಯಷ್ಟೇ ಅಲ್ಲ - ಯಾರಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಕೊನೇವರೆಗೂ ಬದಲಾಗದೇ ಉಳಿಯುವ ಜೀವಂತ ವ್ಯವಸ್ಥೆ ಅದರಲ್ಲಿದೆ. ಅದು ನಮ್ಮ ನಡುವಿನ ವರ್ತಮಾನದ ಲೆಕ್ಕಕ್ಕೆ ಯಾವ ಬೆಲೆಯನ್ನು ಕೊಡದೇ ಒಮ್ಮೆ ಹುಟ್ಟಿದ ಸಂಬಂಧವಾಗಿ ಎಂದೆಂದೂ ಹಾಗೇ ಗಟ್ಟಿಯಾಗಿಯೇ ಇರುತ್ತದೆ. ನಾನು ನನ್ನ ಅಣ್ಣನೋ ತಂಗಿಯೋ ನನಗೇನೋ ಸಹಾಯ ಮಾಡಿದರೆಂದು ನನ್ನ ಈ ಪ್ರಬುದ್ಧತೆಗೆ ತಕ್ಷಣ ಗೋಚರಿಸುವ 'ಓ ತುಂಬಾ ಥ್ಯಾಂಕ್ಸ್ ಕಣೋ/ಕಣೇ' ಎಂದು ಅಪರೂಪಕ್ಕೆ ಹೇಳಿದ್ದಕ್ಕೆ ಹೆಚ್ಚೂಕಡಿಮೆ 'ಅದರಲ್ಲಿ ಥ್ಯಾಂಕ್ಸ್ ಹೇಳೋದೆನಿದೆ?' ಅನ್ನೋ ಪ್ರತಿಕ್ರಿಯೆ ಬಂದಿದೆ. ನಾನು ಒಮ್ಮೆ ಕಕ್ಕಾಬಿಕ್ಕಿಯಾದಂತೆ ಕಂಡು ಬಂದರೂ 'ಇವರು ನನ್ನ ಒಡಹುಟ್ಟಿದವರು' ಅನ್ನೋ ಮಾತು ಎಲ್ಲವನ್ನೂ ತೇಲಿಸಿಬಿಡುತ್ತದೆ. ಎಂದಾದರೂ ನಾನು ನನ್ನ ಒಡಹುಟ್ಟಿದವರಿಗೆ 'ಥ್ಯಾಂಕ್ಸ್' ಹೇಳಿದೆನೆಂದರೆ ಮದುವೆ ಮನೆಯ ಊಟದ ಪಂಕ್ತಿಯಲ್ಲಿ ಕುಳಿತಾಗ ಬಡಿಸಿದವರೆಲ್ಲರಿಗೋ ಅಥವಾ ದೇವಸ್ಥಾನದಲ್ಲಿ ತೀರ್ಥ ಕೊಟ್ಟ ಅರ್ಚಕರಿಗೋ ಥ್ಯಾಂಕ್ಸ್ ಹೇಳಿದಷ್ಟೇ ಅಪಹಾಸ್ಯವಾಗುತ್ತದೆ, ನಮ್ಮ-ನಮ್ಮ ಹಿರಿಮೆ-ಗರಿಮೆಗಳೇನೇ ಇರಲಿ ಕೊನೇಪಕ್ಷ ಎಲ್ಲೆಲ್ಲಿ 'ಥ್ಯಾಂಕ್ಸ್' ಹೇಳಬಾರದು ಅನ್ನೋದನ್ನು ಮೊದಲು ಕಲಿತರೆ ಒಳ್ಳೆಯದು, ಒಮ್ಮೆ ಅದು ಗಟ್ಟಿಯಾಗಿ ಡೀ ಫಾಲ್ಟ್ ಆಗಿ ನಮ್ಮ ತುಮುಲಗಳಿಗೆ ಸ್ಪಂದಿಸುವವರು 'ಥ್ಯಾಂಕ್ಸ್'ನ್ನು ನಿರೀಕ್ಷಿಸೋದಿಲ್ಲ ಎಂದು ಕನ್‌ಫರ್ಮ್ ಆದ ಮೇಲೆ ಎಲ್ಲೆಲ್ಲಿ ಹೇಗೆ ಹೇಗೆ 'ಥ್ಯಾಂಕ್ಸ್' ಹೇಳಬೇಕೆಂದು ಕಲಿತರೆ ಒಳ್ಳೆಯದು ಅನ್ನೋದು ನನ್ನ ಅನಿಸಿಕೆ.

***

ಯಾವುದೋ ಮಾರ್ಕೆಟಿಂಗ್ ಕ್ಲಾಸಿನಲ್ಲಿ ಕಲಿತ ಹಾಗೆ ದೊಡ್ಡ-ದೊಡ್ಡ ಕುಟುಂಬಗಳು ಇರುವ ಮನೆಗಳು, ವಠಾರಗಳು, ಗಲ್ಲಿಗಳು, ನೆರೆಹೊರೆಗಳು ಕೆಳ ಅಥವಾ ಕೆಳ-ಮಧ್ಯಮ ವರ್ಗದ ಕುಟುಂಬಗಳನ್ನು ಪ್ರತಿಬಿಂಬಿಸುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ನಾವು ಆಧುನಿಕರಾದಂತೆ ಸಂಬಂಧಗಳನ್ನು ಕಡಿಮೆ ಮಾಡಿಕೊಳ್ಳುತ್ತೇವೆಯೇ - ಅದು ಹೌದಾದರೆ ಹೀಗೇಕೆ ಎನ್ನುವ ಪ್ರಶ್ನೆಗಳು ಮನದಲ್ಲಿ ನೀರಿನಲ್ಲಿ ಎಸೆದ ಕಲ್ಲು ಹುಟ್ಟಿಸುವ ಅಲೆಗಳ ಹಾಗೆ ಒಂದರ ಹಿಂದೊಂದು ಬರುತ್ತಲೇ ಇದ್ದರೂ ಅದೇ ಸಮಯಕ್ಕೆ ನಾನು ಈ ಹಿಂದೆ ಮಾಡಿಕೊಂಡ 'ದೇವರೇ, ಇನ್ನು ನೂರು ಜನ್ಮವಿದ್ದರೂ ನನ್ನನ್ನು ತುಂಬಿದ ಕುಟುಂಬದಲ್ಲಿಯೇ ಹುಟ್ಟಿಸು' ಎನ್ನೋ ಪ್ರಾರ್ಥನೆ 'ಹಾಗಾದರೆ, ನೀನು ಕೆಳ ಅಥವಾ ಮಧ್ಯಮ ವರ್ಗದಲ್ಲಿ ಹುಟ್ಟುತ್ತೀಯೆ' ಅನ್ನೋ ಕಂಡೀಷನ್ನನ್ನು ನೆನಪಿಗೆ ತಂದರೂ ನನ್ನ ಪ್ರಾರ್ಥನೆಯಲ್ಲಿ ಬದಲಾವಣೆಯೇನಾಗೋದಿಲ್ಲ - ಬಡತನವಿದ್ದರೆ ಅದು ನನ್ನ ಬವಣೆ, ತುಂಬಿದ ಕುಟುಂಬವಿದ್ದರೆ ನನ್ನಾತ್ಮಕ್ಕೆ ಮನ್ನಣೆ!

No comments: