Sunday, June 04, 2006

ನನಗ್ಗೊತ್ತು "ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎಂದು...

ಇಂದು (ಜೂನ್ ೪, ೨೦೦೬ - ಭಾನುವಾರ) ಮುಂಜಾನೆ ಸಾಪ್ತಾಹಿಕ ಪುರವಣಿಯನ್ನು ತಿರುವಿಹಾಕುತ್ತಿದ್ದಾಗ ಎಸ್. ದಿವಾಕರ್ ಬರೆದಿರೋ "ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎನ್ನುವ ಲೇಖನ ಶೀರ್ಷಿಕೆಯಲ್ಲೇ ಆಕರ್ಷಿಸಿ ಮುಂದೆ ಓದುವಂತೆ ಮಾಡಿತು, ಈ ಲೇಖನವನ್ನು ನಾನು ಓದದಿದ್ದರೇನೇ ಎಷ್ಟೋ ಚೆನ್ನಾಗಿತ್ತು ಎಂದುಕೊಂಡೆ. ಲೇಖನವನ್ನು ಓದಿದ ಮೇಲೆ ಭಯಂಕರ ಉರಿ ಹತ್ತಿದ್ದರಿಂದ ಈ ಪ್ರತಿ ಲೇಖನವನ್ನು ಬರೆಯಬೇಕಾಯ್ತು, ಇದು ದಿವಾಕರ್ ಹಾಗೂ ಕೃಷ್ಣಮೂರ್ತಿ ಹನೂರು ಅವರುಗಳಿಗೆ ತಲುಪುತ್ತದೆಯೋ ಇಲ್ಲವೋ ಅವರುಗಳಂತೆ ನಾನು ಅಡ್ಡಗೋಡೆಯ ಮೇಲೆ ದೀಪವಿಡದೇ, ಇಬ್ಬರನ್ನೂ ಮಹಾನೀಚರೆಂದು ಬಹಿರಂಗವಾಗಿ ಉಗಿಯುವ ಸಾಹಸಕ್ಕೆ ಇಳಿದಿದ್ದೇನೆ, ಇದರ ಪರಿಣಾಮಗಳು ಏನಾದರೂ ಆಗಲಿ ಅದನ್ನೊಂದು ಕೈ ನೋಡಿಕೊಂಡೇ ಬಿಡುತ್ತೇನೆ.

***

ದಿವಾಕರ್ ಅವರ ಲೇಖನದಲ್ಲಿ ಬರೆದಿರುವಂತೆ ಡಾ. ಕೃಷ್ಣಮೂರ್ತಿ ಹನೂರು ಯಾವ ಸಂದರ್ಭದಲ್ಲಿ (ಕಾಂಟೆಕ್ಸ್ಟ್) "ಪುತಿನ ಹೇಳಲಿಕ್ಕೇನೂ ಇಲ್ಲದಿದ್ದರೂ ಏನೇನೋ ಇದೆಯೆಂದು ಭಾಸವಾಗುವಂತೆ ಸಂಕೃತಭೂಯಿಷ್ಠವಾದ ಭಾಷೆಯನ್ನು ರೂಢಿಸಿಕೊಂಡವರು. ನಿಜಕ್ಕೂ ಓದಲರ್ಹವಾದ ಒಂದೇ ಒಂದು ಸಾಲನ್ನೂ ಅವರು ಬರೆದಿಲ್ಲ" ಎಂದು ಹೇಳಿದರೋ ಸ್ಪಷ್ಟವಾಗಿರದಿದ್ದರೂ ಪುತಿನರವರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ವಿಚಾರಗೋಷ್ಠಿಯಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ಮಾತನಾಡಿದರು ಎಂದು ಬರೆದಿದ್ದಾರೆ. ಕಳೆದ ವರ್ಷ ಎಂದು ಬರೆದದ್ದರಿಂದ ೨೦೦೫ ರಲ್ಲಿ ಆಗಿರಬಹುದಾದ ಘಟನೆ ಎಂದುಕೊಂಡರೂ ಸುಮಾರು ಆರೇಳು ತಿಂಗಳುಗಳ ನಂತರ ಈ ಪ್ರತಿಕ್ರಿಯೆಯನ್ನು ದಿವಾಕರ್ ಹೀಗೇಕೆ ಬರೆದಿದ್ದಾರೆ ಎಂದು ತಲೆಕೆಡಿಸಿಕೊಂಡಷ್ಟೂ ಉತ್ತರ ಗೋಜಲಾಗತೊಡಗಿತು. ಅದೂ ಅಲ್ಲದೇ ಒಂದು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದಾಗ ಪುತಿನರವರ ಬಗ್ಗೆಯೇ ವಿಚಾರಗಳನ್ನು ಉಳಿದವರೆಲ್ಲರೂ ಮಂಡಿಸಿ ಮಾತನಾಡುತ್ತಿದ್ದಾಗ ಬೇರೆಯವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ದಿವಾಕರ್ ಬರೆದಿಲ್ಲ, ಅಲ್ಲದೇ ಅಧ್ಯಕ್ಷರಾಗಿ ಕೃಷ್ಣಮೂರ್ತಿಯವರಿಗೆ ಅದೇ ಸಭೆಯಲ್ಲಿಯೇ ಏನನ್ನಾದರೂ ಇವರು ಹೇಳಿದರೇ, ಏಕಿಲ್ಲ? ಅಲ್ಲದೇ ಹೀಗೆ ಹಳತಾದ ಘಟನೆಗಳನ್ನು ಇಂದು ಇವರು ನೆನೆಸಿಕೊಳ್ಳುವ ಔಚಿತ್ಯವೇನು?

ಅದೇ ಸಭೆಯಲ್ಲಿ ನಾನೇನಾದರೂ ಅಧ್ಯಕ್ಷ ಅಥವಾ ಸಭಿಕನಾಗಿದ್ದರೆ ಕೃಷ್ಣಮೂರ್ತಿಯವರನ್ನು ಮಾತನಾಡಿಸುತ್ತಿದ್ದೆ - ಅವರ ಮನದ ಇಂಗಿತವನ್ನು ಅರಿಯಲು ಪ್ರಯತ್ನಪಡುತ್ತಿದ್ದೆ. ಸಾರ್‌ಕ್ಯಾಷ್ಟಿಕ್ ಆಗಿ ಹೇಳಿದ್ದಾರೇನೂ ಎಂದು ಕೊಂಚ ಯೋಚಿಸುತ್ತಿದ್ದೆ. ಒಳಮನಸ್ಸು ಅಲ್ಲೆ ವೇದಿಕೆಯಿಂದ ಅವರನ್ನು ಹಿಡಿದೆಳೆದು ಕೊರಳಪಟ್ಟಿ ಹಿಡಿದು ಎರಡು ಬಾರಿಸೋಣವೆಂದು ಹೇಳುತ್ತಿದ್ದರೂ ಅದಕ್ಕೆ ಸಮಾಧಾನ ಹೇಳಿಕೊಂಡು ಮಾತಿಗೆ ತೊಡಗಿಸುತ್ತಿದ್ದೆ. ಹಾಗೇನೂ ಆಗಲಿಲ್ಲವಲ್ಲಾ, ಅಂದರೆ ಆ ಸಭೆಯಲ್ಲಿದ್ದವರೆಲ್ಲ ಬಾಯಿಗೆ ಕಡುಬು ತುಂಬಿಕೊಂಡಿದ್ದರೇ? ದಿವಾಕರ್ ಅವರು ಹಿಂದಿನದನ್ನು ಸ್ಮರಿಸುತ್ತಾ 'ಇಪ್ಪತ್ತೈದು ವರ್ಷಗಳ ಹಿಂದೆ ಹೀಗೆಲ್ಲೂ ಆಗುತ್ತಿರಲಿಲ್ಲ" ಎಂದು ಪದೇ-ಪದೇ ಲೇಖನದುದ್ದಕ್ಕೂ ಬರೆದಿದ್ದಾರೆ - ಅದು ನಿಜ, ಇಪ್ಪತ್ತೈದು ವರ್ಷಗಳ ಹಿಂದೆ ಇಂತಹ ಸೂಕ್ಷ್ಮ ವಿಷಯಕ್ಕೆ ಸ್ಪಂದಿಸಲು ವರ್ಷದ ಮೇಲೆ ಹಿಡಿಯುತ್ತಿರಲಿಲ್ಲ ಎನ್ನುವುದನ್ನೂ ಅವರು ಮರೆತಂತಿದೆ. ಇದು ಬರೀ 'ಬೂಸಾ ಬಸವಲಿಂಗಪ್ಪನ ಕಥೆ'ಯಲ್ಲ, ಕನ್ನಡ ಸಾಹಿತ್ಯವನ್ನು ಬೋಧಿಸುವ ಒಬ್ಬ ಪಿ.ಎಚ್‌ಡಿ ಮಾಡಿರೋ ಒಬ್ಬರು ಒಂದು ವಿಶ್ವವಿದ್ಯಾನಿಲಯದ ಬಹಿರಂಗ ವೇದಿಕೆಯಲ್ಲಿ ಈ ಮಾತನ್ನು ಹೇಳಿದ್ದು, ಅದನ್ನು ಕನ್ನಡದ ಸಾಹಿತ್ಯವನ್ನು ಅಭ್ಯಸಿಸುವ ಯಾವೊಬ್ಬ ವಿದ್ಯಾರ್ಥಿಯಾಗಲೀ, ಕನ್ನಡವನ್ನು ಅಲ್ಪಸ್ವಲ್ಪ ಓದಿಕೊಂಡಿರೋ ಒಬ್ಬ ಸಾಮಾನ್ಯನಾಗಲೀ, ವೇದಿಕೆಯ ಮೇಲೆ ಕುಳಿತ ಇತರ ಗಣ್ಯರಾಗಲೀ ಅಥವಾ ಅಧ್ಯಕ್ಷರಾಗಲೀ ಈ ಮಾತಿನ ಹಿಂದಿನ ಔಚಿತ್ಯವನ್ನು ಪ್ರಶ್ನಿಸಬಹುದಿತ್ತು, ಕೊನೆಗೆ ಏನಿಲ್ಲವೆಂದರೂ ತಮ್ಮ ಅಧ್ಯಕ್ಷ ಭಾಷಣದಲ್ಲಿ ಪುತಿನರವರ ಬಗೆಗೆ ಹೇಳಿದ್ದನ್ನೆಲ್ಲಾ ಸಮರೈಸ್ ಮಾಡುತ್ತಾ ಕೃಷ್ಣಮೂರ್ತಿಯವರನ್ನು ಕೆಣಕಬಹುದಿತ್ತು, ಹಾಗೇನೂ ಆಗಲಿಲ್ಲ, ಆದರೆ ಹಲವಾರು ತಿಂಗಳುಗಳ ಮೇಲೆ ಯಾರದ್ದೋ ಕಣ್ಣೀರು ಒರೆಸುವ ಹಾಗೆ, ಕನ್ನಡಸಾಹಿತ್ಯವನ್ನು ಕೊಂಡುಕೊಂಡೋರ ಹಾಗೆ ದೊಡ್ಡದಾಗಿ ಲೇಖನವನ್ನು ಬರೆದಿದ್ದಾರೆ ಅದಕ್ಕೇ ಅವರನ್ನು ಮಹಾನೀಚ ಎಂದು ಕರೆದದ್ದು.

ಇನ್ನು ಕೃಷ್ಣಮೂರ್ತಿಯವರಿಗೆ ಈ ಮಾತು ಅನ್ವಯವಾಗುತ್ತದೆ - ಅವರು ನಿಜಕ್ಕೂ 'ಪುತಿನ ಅವರು ಓದಲರ್ಹವಾದ ಒಂದೇ ಒಂದು ಸಾಲನ್ನೂ ಬರೆದಿಲ್ಲ' ಎಂದರೆ ಖಂಡಿತ ತಪ್ಪುತಿಳಿದುಕೊಂಡಿದ್ದಾರೆ, ಆ ಮಾತು ನಿಜವಲ್ಲ. ಪುತಿನ ಅವರು ಬರೆದದ್ದು ಬೇಕಾದಷ್ಟಿದೆ, ದಶಕಗಳ ಕಾಲ ಸಾಹಿತ್ಯ ಕೃಷಿಯನ್ನು ಮಾಡಿದವರು ಪುತಿನ. ವಿದೇಶದ ಮ್ಯೂಸಿಕಲ್‌ಗಳಿಂದ ಪ್ರೇರೇಪಿತರಾಗಿ ಕನ್ನಡದಲ್ಲಿ ಅವತರಣಿಕೆಗಳನ್ನು ಬರೆದವರು ಪುತಿನ. ತೀನಂಶ್ರೀ ಯವರ ಗರಡಿಯಲ್ಲಿ ಪಳಗಿ ಮೈಸೂರಿನ ಮಹಾ ಸಾಹಿತಿಗಳ ಯಾದಿಯಲ್ಲಿ ನಿಲ್ಲುವವರು ಪುತಿನ. ಅವರ ಹಲವಾರು ಪದ್ಯಗಳು, ನಾಟಕಗಳು ಇವತ್ತಿಗೂ ಜನಜನಿತ. ಇಂಥವರು 'ಒಂದೇ ಒಂದು ಓದಲರ್ಹವಾದ ಸಾಲನ್ನೂ ಬರೆದಿಲ್ಲವೇ?'. ನನಗೆ ಇದರಿಂದ ಕೃಷ್ಣಮೂರ್ತಿಯವರಲ್ಲಿಯೇ ನಂಬಿಕೆ ಕಡಿಮೆ ಆಯಿತೇ ವಿನಾ ಪುತಿನರವರ ಮೇಲಿರುವ ಗೌರವ ಇನ್ನೂ ಇಮ್ಮಡಿಗೊಂಡಿತು. ಕೃಷ್ಣಮೂರ್ತಿಯವರು 'ಓದಲರ್ಹ' ಎಂದು ಯಾವುದನ್ನು ಕರೆಯುತ್ತಾರೆ? ಅವರ ಪಿಎಚ್‌ಡಿ ಥೀಸೀಸ್ ಏನಾದರೂ ಸಿಕ್ಕಿದ್ದರೆ ನೋಡಬಹುದಿತ್ತು, ಅಥವಾ ಅದನ್ನೆಲ್ಲಾದರೂ 'ಸಂಪಾದನೆ' ಮಾಡಿದ್ದಾರೆಯೇ ಎನ್ನುವ ಅನುಮಾನವೂ ಬರದೇ ಇಲ್ಲ. ನಾನು ಅಲ್ಪಸ್ವಲ್ಪ ಕನ್ನಡ ಸಾಹಿತ್ಯವನ್ನು ಓದಿಕೊಂಡವನು, ನನಗೇ ಇಷ್ಟೊಂದು ಉರಿಸಿದ ಅವರನ್ನು ಉಳಿದವರು ಅದು ಹೇಗೆ ಸುಮ್ಮನೇ ಬಿಟ್ಟರು ಎಂದು ಆಶ್ಚರ್ಯವಾಗುತ್ತದೆ. ಇನ್ನು ಮುಂದೆಂದಾದರೂ ಹೀಗೆ ಅಯೋಗ್ಯ ಹೇಳಿಕೆಗಳನ್ನು ಹೇಳದಿದ್ದರೆ ಅವರಿಗೇ ಒಳ್ಳೆಯದು. ದಿವಾಕರ್ ಹೇಳಿದ್ದೆಲ್ಲವೂ ನಿಜವಾದರೆ ಕೃಷ್ಣಮೂರ್ತಿಯಂತಹ ಮಹಾನೀಚ ಕನ್ನಡ ಅಧ್ಯಾಪಕರನ್ನು ನಾನೆಲ್ಲೂ ನೋಡಿಲ್ಲ.

***

"ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ?" ಎನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿದೆ: ಇಪ್ಪತ್ತೈದು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ, ಕನ್ನಡಕ್ಕೆ ಈಗೆಲ್ಲ ಇರುವವರು ನನ್ನಂತಹ ಕೈಲಾಗದವರು, ದಿವಾಕರ್ ಅಂತಹ ಬಸವನಹುಳುವಿನ ತರಹ ಕೊರಗಿ ಪ್ರತಿಕ್ರಿಯೆ ನೀಡುವ ಅಧಕ್ಷರು, ಕೃಷ್ಣಮೂರ್ತಿಯವರಂತಹ ನಾಲಿಗೆಯ ಮೇಲೆ ಹತೋಟಿಯಿರದ, ಬಾಯಿಗೆ ಬಂದಿದ್ದನ್ನು ಆಡುವ ಮೇಷ್ಟ್ರುಗಳು. 'ಕೈಲಾಗದವನು ಮೈ ಪರಚಿಕೊಂಡನಂತೆ' ಎಂದು ನನ್ನಂಥವರು ಈ ಪ್ರತಿ ಲೇಖನವನ್ನು ಬರೆದು ಕೈ ತೊಳೆದುಕೊಳ್ಳುತ್ತಾರೆ, ದಿವಾಕರ್ ಅಂಥವರು ಹಲವಾರು ತಿಂಗಳುಗಳ ನಂತರವಾದರೂ ಒಂದು ಕೆಟ್ಟ ಲೇಖನದಲ್ಲಿ ಸ್ಪಂದಿಸುತ್ತಾರೆ, ಕೃಷ್ಣಮೂರ್ತಿಯಂಥವರಿಗೆ ಸೂಕ್ಷ ಸಂವೇದನೆಗಳು ಅರ್ಥವೇ ಆಗೋದಿಲ್ಲ, ಆ ಸಭೆಯಲ್ಲಿದ್ದ ಸಭಿಕರು ಒಂದು ಕ್ಷಣದ ಮಟ್ಟಿಗೆ ನರಸತ್ತವರಾಗಿ ಬಿಡುತ್ತಾರೆ. ನಮ್ಮ ಸಾಹಿತ್ಯ ಲೋಕಕ್ಕೆ ಏನಾಗಿದೆ ಎಂದರೆ ಇಂಥ ನರಸತ್ತವರ ಕೊಡುಗೆ ಹೆಚ್ಚಾಗಿದೆ, ಸತ್ವವಿರುವವರು ಸಮಸ್ಯೆಗಳಿಂದ ದೂರವೇ ಉಳಿದಿದ್ದಾರೆ, ಸತ್ವವಿರದವರು ತುಂಬದ ಕೊಡದ ಹಾಗೆ ಬಡಬಡಿಸುತ್ತಾರೆ. ಇಪ್ಪತ್ತೈದೇನೂ ಇನ್ನೂರೈವತ್ತು ವರ್ಷಗಳು ಹೋದರೂ ಇದರಿಂದ ಪರಿಸ್ಥಿತಿಯ ಬದಲಾವಣೆ ಆಗೋದಿಲ್ಲ. ಅಷ್ಟೂ ಮಾಡಿ ದಿವಾಕರ್ ಅಂತಹವರಿಗೆ "ಏನಾಗಿದೆ" ಎನ್ನುವ ಪ್ರಶ್ನೆಯನ್ನು ಕೇಳುವ ಹಕ್ಕೂ ಇಲ್ಲ, ಏಕೆಂದರೆ ಅವರ ವ್ಯಾಖ್ಯೆಯಲ್ಲಿ ಎಲ್ಲವೂ ಇಪ್ಪತ್ತೈದು ವರ್ಷಗಳ ಹಿಂದಿನ ಸಂದರ್ಭಗಳಿಗೆ ಸ್ಪಂದಿಸಬೇಕಾಗುತ್ತದೆ.

ದಿವಾಕರ್ ಅವರ ಲೇಖನಕ್ಕೆ 'ವಾಚಕರ ವಾಣಿ'ಯಲ್ಲಿ ಯಾರಾದರೂ ಸ್ಪಂದಿಸುತ್ತಾರೆಯೋ ಎಂದು ದಿನವೂ ಕಾದು ನೋಡುತ್ತೇನೆ. ಇಲ್ಲವೆಂದರೆ ಸಾಮಾನ್ಯ ಜನರೂ ತಮ್ಮ-ತಮ್ಮ ಗಂಟಲನ್ನು ವ್ಯಸ್ತ ಜೀವನಕ್ಕೆ ಧಾರೆ ಎರೆದುಕೊಟ್ಟುಬಿಟ್ಟಿದ್ದಾರೆಂದುಕೊಂಡು ದೊಡ್ಡ ನಿಟ್ಟುಸಿರೊಂದನ್ನು ಬಿಡುತ್ತೇನೆ.

10 comments:

Sarathy said...

ಅಂತರಂಗಿಗಳೇ, ನಿಮ್ಮ ವಾಚಾಮಗೋಚರ ಬೈಗುಳಕ್ಕೆ ಕಾರಣ ಸರಿಯಾಗಿ ತಿಳಿಯುತ್ತಿಲ್ಲ. ಡಾ. ಕೃಷ್ಣಮೂರ್ತಿ ಹನೂರು ಅವರು ಹೇಳಿದ್ದರೆನ್ನಲಾದ ಅಭಿಪ್ರಾಯಗಳನ್ನು ಎಷ್ಟೋ ದಿನಗಳ ನಂತರ ದಿವಾಕರ್ ಅವರು ನೆನಪಿಸಿಕೊಳ್ಳುತ್ತಿದ್ದಾರೆಂದು ನೀವು ಕೋಪ ವ್ಯಕ್ತಪಡಿಸಿದ್ದೀರಿ. ತಡವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ಕೋಪವೇ ಅಥವಾ ಪುತಿನ ಅವರ ವಿರುದ್ಧದ ಟೀಕೆಗಳನ್ನು ಲೇಖನದಲ್ಲಿ ಟೀಕೆ ಮಾಡಿ ಟೀಕೆಗೆ ಪ್ರಚಾರ ನೀಡಿದರೆಂದು ಕೋಪವೇ?

ಹಳತಾದ ಘಟನೆಗಳನ್ನು ಇಂದು ನೆನಪಿಸಿಕೊಳ್ಳುವ ಔಚಿತ್ಯವೇನು ಎಂದು ಪ್ರಶ್ನಿಸಿದ್ದೀರಿ. ಅಂದರೆ ಆ ಘಟನೆಗಳನ್ನು ಮರೆತುಬಿಡಬೇಕೆಂದು ನಿಮ್ಮ ಅಭಿಪ್ರಾಯವೇ? ಎಸ್. ದಿವಾಕರ್ ಅವರ ಲೇಖನವನ್ನು ನಾನೂ ಓದಿದೆ. ಅವರ ಈ ಘಟನೆಯ ಪ್ರಸ್ತಾಪ ಔಚಿತ್ಯ ಪೂರ್ಣವಾಗಿಲ್ಲವೆಂದು ನನಗನಿಸಲಿಲ್ಲ. ನೀವು ವ್ಯಕ್ತಪಡಿಸಿದ ಕಳಕಳಿಯನ್ನೇ ಅವರೂ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಿಮ್ಮ ಟೀಕೆಯ ಔಚಿತ್ಯ ಅಗತ್ಯವಿರಲಿಲ್ಲ ಎಂಬುದು ನನ್ನ ಅನಿಸಿಕೆ.

ಮತ್ತೊಂದು ವಿಷಯ. ಓರ್ವ ವ್ಯಕ್ತಿಯನ್ನು ವೈಯಕ್ತಿಕವಾಗಿ ನಿಂದಿಸುವುದು ನನಗೆ ಸಮಂಜಸವಾಗಿ ತೋರುವುದಿಲ್ಲ. ಕನ್ನಡ ಸಾಹಿತ್ಯದ ವಿಮರ್ಶಾ ಪ್ರಪಂಚದಲ್ಲಿ ದಿವಾಕರ್ ಅವರಿಗೆ ಗೌರವಯುತ ಸ್ಥಾನವಿದೆ. ಕಡ್ಡಿತುಂಡಾಗುವಂತಹ ನೇರವಾದ ಮಾತುಗಳಿಗೆ ದಿವಾಕರ್ ಅವರು ಪ್ರಸಿದ್ಧರು.

ಇರಲಿ... ಅನಿಸಿಕೆಗಳು ವೈಯಕ್ತಿಕ ಸ್ವಾತಂತ್ರ್ಯ...

Satish said...

ಸಾರಥಿಯವರೇ,

ನನಗೆ ಅವರು ಹಳೆಯ ಘಟನೆಯನ್ನು ನೆನೆಸಿದ್ದಕ್ಕೆ ಬೇಸರವಿಲ್ಲ ('ಅಂತರಂಗ'ದಲ್ಲಿ ಇಪ್ಪತ್ತು ವರ್ಷಕ್ಕೂ ಹಳೆಯ ವಸ್ತುಗಳನ್ನು ಬರೆದಿದ್ದೇನೆ), ಆದರೆ ವೇದಿಕೆಯಲ್ಲಿ ಕೃಷ್ಣಮೂರ್ತಿಯವರು ಹೇಳಿದ್ದಕ್ಕೆ ದಿವಾಕರ್ ಅವರು ಇಷ್ಟು ತಡವಾಗಿ ಈ ಲೇಖನವನ್ನು ಬರೆದುದಲ್ಲದೇ ಇನ್ನೇನನ್ನು ಮಾಡಿದರು ಎನಿಸಿದ್ದರಿಂದ ಹಾಗೆ ಬರೆದೆ. ಅದೇ ಸಭೆಯಲ್ಲಿ ನೀವೇ ಅಧ್ಯಕ್ಷರಾಗಿದ್ದರೆ ಏನು ಮಾಡುತ್ತಿದ್ದಿರಿ? ಇಂತಹ ಹೇಳಿಕೆಗಳನ್ನು ಕೇಳಿಕೊಂಡು ಹಲವಾರು ತಿಂಗಳುಗಳವರೆಗೆ ಸುಮ್ಮನಿರುವುದಾದರೂ ಹೇಗೆ ಸಾಧ್ಯ?

ದಿವಾಕರ್ ಅವರಿಗೆ ಗೌರವಯುತ ಸ್ಥಾನವಿರುವುದು ನನಗೆ ಗೊತ್ತು, 'ಕಡ್ಡಿ ತುಂಡಾಗುವಂತೆ' ಮಾತನಾಡುವ ಅವರು ಕೃಷ್ಣಮೂರ್ತಿಯವರ ಮಾತಿಗೆ ಈ ಲೇಖನವಲ್ಲದೇ ಮತ್ಯಾವ ಪ್ರತಿಕ್ರಿಯೆಯನ್ನು ತೋರಿಸಿಲ್ಲವೆಂದು ನಂಬುವುದಕ್ಕೆ ಮೊದಮೊದಲು ಕಷ್ಟವಾಯಿತು.

ಇವರಿಬ್ಬರನ್ನು ಬಹಳ ಯೋಚಿಸಿಯೇ ನಿಂದಿಸಿದ್ದೇನೆ, ಇದೇನೂ ಹೊಸತಲ್ಲ, ನನಗೆ ಇಷ್ಟವಾದ ಬೇಂದ್ರೆಯವರ ಮೇಲೆ ಯಾರಾದರೂ ಹೀಗೆ ಹಗುರವಾಗಿ ಮಾತನಾಡಿದಾಗಲೆಲ್ಲ ನನ್ನ ಮತ್ತೊಂದು ಮುಖ ಹೊರಗೆ ಬರುತ್ತಿತ್ತು.

ದಿವಾಕರ್‌ರವರು ಇಷ್ಟೊಂದು ತಿಂಗಳುಗಳು ತಡೆದರು, ಇನ್ನೊಂದಾರು ತಿಂಗಳು ತಡೆದು ಪ್ರಕಟಿಸಿದ್ದರೆ ನವೆಂಬರ್ ಒಂದರ ರಾಜ್ಯೋತ್ಸವಕ್ಕೆ ಒಳ್ಳೆಯ ಲೇಖನವಾಗಬಹುದಿತ್ತು!

Anonymous said...

Yes I do agree with your views.

As I have read about Mr. S Diwakar, he is straight forward. If that is the case, why did not he raised his discontent over Hanoor's remarks on the same dias? His delay is questionable.

Mr. Diwakar's comments about Hanooru Krishnamurthy shows his hypocratic approach.

Raghunth said...

ಅನಾಮಿಕ ಬ್ಲಾಗಿಗ,

ಪ್ರಜಾವಾಣಿಯಲ್ಲಿನ 'ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ' ಎನ್ನುವ್ ದಿವಾಕರ್ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ಓದಿ ಆಘಾತವಾಯಿತು.

ನಿಮ್ಮ ತಕರಾರುಗಳಾದರೂ ಏನು? ಚೆನ್ನೈನ ಸಭೆಯಲ್ಲಿ ಹನೂರು ಅವರ ಮಾತನ್ನು ದಿವಾಕರ್ ವಿರೋದಿಸಲಿಲ್ಲವೆಂದೇ? ಬರಹದಲ್ಲಿ ಉಲ್ಲೇಖ ಇಲ್ಲವೆಂದ ಮೇಲೆ ದಿವಾಕರ್ ವಿರೋದಿಸಲಿಲ್ಲ ಎಂದು ಹೇಗೆ ಭಾವಿಸುತ್ತೀರಿ. ಪತ್ರಿಕೆಯ ಪುಟಗಳ ಮಿತಿ ಹಾಗೂ ಅಂತರ್ಜಾಲದ ಪುಟಗಳ ಸ್ವಚ್ಚಂದದ ಅರಿವು ನಿಮಗಿದೆ ಎಂದು ಭಾವಿಸುವೆ. ಆಗ ಪ್ರಶ್ನಿಸಿಲ್ಲ ಎಂದಿಟ್ಟುಕೊಳ್ಳಿ. ೨೫ ವರುಶಗಳ ನಂತರವಾದರೂ ಬಹಿರಂಗ ವೇದಿಕೆಯಲ್ಲಿ ಅಪದ್ಡವೊಂದನ್ನು ಪ್ರಸ್ತಾಪಿಸಿರುವ ಲೇಖಕರ ದಿಟ್ಟತನ ಮೆಚ್ಚಿಕೊಳ್ಳಲೇಬೇಕು.

ದಿವಾಕರ್ ಅವರ ಲೇಖನ ಬರಹಗಾರರ ಆತ್ಮಶೋದನೆಗೆ ಒತ್ತಾಯಿಸುತ್ತಿದೆ. ಈ ಮಹತ್ವದ್ ಅಂಶವನ್ನು ಹಾಗೂ ಲೇಖನದ ಮುಖ್ಯ ಭಾಗವನ್ನು ಪಕ್ಕಕ್ಕಿಟ್ಟು, ಹನೂರು ಸಂಗತಿಗೆ ಮಾತ್ರ ಜೋತು ಬಿದ್ದಿರುವ ನಿಮ್ಮ ನಿಲುವಿಗೆ ಏನನ್ನಬೇಕೋ?

ಒಂದಂತೂ ನಿಜ. ನಿಮಗೆ ಲೇಖನದ ಆಶಯ ಅರ್ಥವಾಗಿಲ್ಲ. ಆ ಸಹನೆಯೂ ನಿಮಗೆ ಇದ್ದಂತಿಲ್ಲ. ಈ ಪರಿಯ ಆತುರದಿಂದಲೇ ಸಾಹಿತ್ಯ ಸೊರಗುತ್ತಿದೆ.

ಬ್ಲಾಗ್ ನಲ್ಲಿ ನಿಮ್ಮ ಹೆಸರು ಸಿಗಲಿಲ್ಲ. ಈ ಅನಾಮಿಕತನವೇ ನಿಮ್ಮ ಬಯ್ಯುವ್ ಚಪಲಕ್ಕೆ ಪೂರಕವಾಗಿ ಇರುವಂತಿದೆ. ನೀಚ-ಪರಮ ನೀಚ, ಎನ್ನುವ ಪದ ಬಳಸಿದ್ದೀರಿ. ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಯಾವ ಯಾವ ಪದಗಳಿವೆಯೋ?

- ರಘುನಾಥ, ಬೆಂಗಳೂರು.

Satish said...

ರಘುನಾಥ ಅವರೇ,

ಈ ದಿನ ದಿವ್ಯದೃಷ್ಟಿ ಸಿದ್ಧಿಸಿದ ನೂರೆಂಟು ಸುಳ್ಳಿನ "ಸಂಜಯ"ರ ಜೊತೆ ಕೆಲಕಾಲ ಮಾತನಾಡುವ ಅವಕಾಶ ಬಂದಿತ್ತು, ಆಗ ಈ ವಿಷಯವೂ ಚರ್ಚೆಗೆ ಬಂತು.

ನಾನು ದಿವಾಕರ್ ಬರೆದಿರೋ ಈ ಲೇಖನವನ್ನು ಹಲವಾರು ಬಾರಿ ಓದಿದ್ದೇನೆ, ತಕ್ಕ ಮಟ್ಟಿಗೆ ಅರ್ಥವೂ ಆಗಿದೆ, ಅದರಲ್ಲಿ ಸಂಶಯವೇನೂ ಇಲ್ಲ.

ನನ್ನ ಊಹೆಯ ಪ್ರಕಾರ ದಿವಾಕರ್ ಹನೂರು ಅವರನ್ನು ಸಭೆಯಲ್ಲಿಯೋ ಸಭೆಯ ನಂತರವೋ ಅವರಾಡಿದ ಮಾತಿನ ಬಗ್ಗೆ ಕೇಳಿರಬಹುದು ಆದರೆ ಈ ವಿಷಯವನ್ನು ಓದುಗರಿಗೆ ತಿಳಿಸಿದ್ದಾರೆಯೇ ವಿನಾ ಅದಕ್ಕೆ ತಮ್ಮ ಪ್ರತಿಕ್ರಿಯೆ ಅಂದು ಹೇಗಿತ್ತು ಎಂದು ಅವರು ತಿಳಿಸಿಲ್ಲ. ಅಲ್ಲದೇ, ಪುತಿನರವರಾಗಲೀ, ಕುವೆಂಪು, ಬೇಂದ್ರೆ ಯಾರೇ ಆಗಲಿ 'ಓದಲರ್ಹವಾದ ಒಂದೇ ಒಂದು ಸಾಲನ್ನು ಬರೆದಿಲ್ಲ' ಎಂದು ಒಂದು ವ್ಯವಸ್ಥಿತ ವೇದಿಕೆಯಲ್ಲಿ ಒಬ್ಬರು ಅವಹೇಳನ ಮಾಡಿದ್ದನ್ನು ಸಹಿಸಿಕೊಂಡು ಅದರ ಬಗ್ಗೆ ಚಕಾರವೆತ್ತದೆ ಆ ದಿನ ಮನೆಗೆ ಹೋಗಲಿಕ್ಕೆ ಹೇಗೆ ಸಾಧ್ಯವಿದೆ? ಇಂಥಾ ಹೇಳಿಕೆಗಳನ್ನು ಅವರ ಅಭಿಪ್ರಾಯ, ಅನಿಸಿಕೆ ಎಂದು ಸುಮ್ಮನೆ ಹೇಗೆ ಬಿಡಲಾದೀತು? ನೀವೇ ಹೇಳಿ. ಮೇಲಾಗಿ ಒಬ್ಬ ಲೇಖಕರ ಬಗ್ಗೆ ಹೀನ ಭಾವನೆಗಳನ್ನಿಟ್ಟುಕೊಂಡು ಜನ್ಮ ಶತಾಬ್ಧಿಯ ಸಂದರ್ಭದಲ್ಲಿ ಅವರಿಗೆ ಮಾತನಾಡುವ ಮನಸ್ಸಾದರೂ ಹೇಗೆ ಬರುತ್ತದೆ?

ದಿವಾಕರ್ ಅವರಲ್ಲಿ ನನಗೆ ವೈಯುಕ್ತಿಕ ದ್ವೇಷವಾಗಲೀ, ಪುತಿನರವರ ಮೇಲೆ ನನಗೆ ವಿಶೇಷ ಪ್ರೇಮವಾಗಲೀ ಇಲ್ಲ. ಒಬ್ಬ ನಾನೊಬ್ಬ ಸಾಮಾನ್ಯ ಓದುಗ ಅಷ್ಟೇ. ನನಗೇನಾದರೂ ದಿವಾಕರ್ ಅದೇ ವೇದಿಕೆಯಲ್ಲಿ ಅಥವಾ ಬೇರೆಡೆಯಲ್ಲೆಲ್ಲಾದರು ಹನೂರು ಅಂತಹವರಿಗೆ ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆಂದು ಗೊತ್ತಾದರೆ ನಾನು ಅಪಾಲಜಿಯನ್ನು ಕೇಳುವುದಕ್ಕೇನೂ ಹಿಂದೆ-ಮುಂದೆ ನೋಡುವುದಿಲ್ಲ. ಆದರೆ ಇವತ್ತಲ್ಲ ನಾಳೆ, ಒಂದಲ್ಲ ಒಂದು ದಿನ ಹನೂರರ ನಂಬರನ್ನು ಹುಡುಕಿ ಇಲ್ಲಿಂದಲೇ ಫೋನು ಮಾಡಿ ಅವರ ಮಾತಿನ ಇಂಗಿತವನ್ನು ಕುರಿತು ವಿಚಾರಿಸುತ್ತೇನೆ, ಅಷ್ಟು ಸುಲಭವಾಗಿ ನನಗೆ ಅರ್ಥವಾಗದ ವಿಷಯವನ್ನು ಬಿಟ್ಟು ಬಿಡುವ ಜಾಯಮಾನದವನಲ್ಲ.

'ಅಂತರಂಗಿ'ಗೂ ಬಯ್ಯುವುದಕ್ಕೂ ಯಾವ ಸಂಬಂಧವೂ ಇಲ್ಲ, ದಯವಿಟ್ಟು ನನ್ನ ಪ್ರೊಫೈಲನ್ನು ಮತ್ತೊಮ್ಮೆ ನೋಡಿ. ಅಲ್ಲದೇ ದಿವಾಕರ್ ಅವರನ್ನು 'ಪರಮ'ನೀಚನೆಂದು ಬೈದವನು ನಾನಲ್ಲ :-) (ಇನ್ನು ಕೆಲವೇ ವಾರಗಳಲ್ಲಿ 'ಅಂತರಂಗಿ'ಯ ನಿಜ ಸ್ವರೂಪ ಬಯಲಾಗುವುದು ಖಂಡಿತ).

ಕರ್ನಾಟಕದ ಉದ್ದಗಲಗಳಲ್ಲಿ ಬೇಕಾದಷ್ಟು ತಿರುಗಾಡಿದ ನನ್ನ ಬತ್ತಳಿಕೆಯಲ್ಲಿ ಬೇಕಾದಷ್ಟು ಪದಗಳಿವೆ, ಅದಕ್ಕಿಂತಲೂ ಹೆಚ್ಚಾಗಿ ಕನ್ನಡ ನನ್ನ ಅವಿಭಾಜ್ಯ ಅಂಗ ಎಂದು ಕೊರಗುವ ಹೃದಯವೂ ಇದೆ, ಭಂಡತನವನ್ನು ಸ್ಥಳದಲ್ಲಿಯೇ ಎದುರಿಸುವ ಧೈರ್ಯವೂ ಇದೆ. ನನ್ನ "ಬೈತೀರೇನ್ರಿ, ಬೈರಿ" ಲೇಖನವನ್ನು ನೋಡಿದ ಸ್ನೇಹಿತರೊಬ್ಬರು ನನ್ನ ಬೈಗುಳದ ಡಿಕ್ಷನರಿಯ ಬಗ್ಗೆ ಕೇಳಿದ್ದರು, 'ಪ್ರಯತ್ನಿಸಿ ನೋಡಿ' ಎಂದಿದ್ದೆ, ಅವರಿಂದ ಇನ್ನೂ ಆ ಬಗ್ಗೆ ಸುದ್ದಿ ಬಂದಿಲ್ಲ!

Satish said...

Plese see "ಸ್ವಾಗತ" (my first post) not "Profile" as mentioned above.

Sanjaya said...

"ಆದರೆ ಇವತ್ತಲ್ಲ ನಾಳೆ, ಒಂದಲ್ಲ ಒಂದು ದಿನ ಹನೂರರ ನಂಬರನ್ನು ಹುಡುಕಿ ಇಲ್ಲಿಂದಲೇ ಫೋನು ಮಾಡಿ ಅವರ ಮಾತಿನ ಇಂಗಿತವನ್ನು ಕುರಿತು ವಿಚಾರಿಸುತ್ತೇನೆ, ಅಷ್ಟು ಸುಲಭವಾಗಿ ನನಗೆ ಅರ್ಥವಾಗದ ವಿಷಯವನ್ನು ಬಿಟ್ಟು ಬಿಡುವ ಜಾಯಮಾನದವನಲ್ಲ."

ನೀವು ನಂಬರು ಹುಡುಕಿ ಫೋನು ಮಾಡಿದರೂ, ನಿಮ್ಮಿಂದ "ಮಹಾನೀಚ" ಎನ್ನಿಸಿಕೊಂಡ ಹನೂರು ನಿಮ್ಮೊಡನೆ ಮಾತನಾಡುವರೆ? ಮಾತನಾಡಬೇಕೇಕೆ? "ಮಾತಿನ ಇಂಗಿತ" ವಿಚಾರಿಸುವ ಮುನ್ನವೇ "ಮಹಾನೀಚ" ಎನ್ನುವುದು ಸರಿಯೇ?

ನಾನು ಸಾಹಿತ್ಯದ ಕುರಿತು ಅಷ್ಟಾಗಿ ತಿಳಿದವನಲ್ಲ. ಹನೂರು ನೀಡಿದರೆನ್ನಲಾದ overly broad dismissive comment ನನ್ನ ದೃಷ್ಟಿಯಲ್ಲಿ ಸರಿಯೆನ್ನಿಸುವುದಿಲ್ಲವಾದರೂ, ಅಂತಹ ಒಂದು ಅಭಿಪ್ರಾಯದಿಂದಲೇ ಯಾರೂ ಮಹಾನೀಚರಾಗುವುದಿಲ್ಲ. ಹಾಗೆಯೇ, ಅಂತಹ ಕಾಮೆಂಟ್ ಕೇಳಿದಾಕ್ಷಣ ನೀವೆಣಿಸಿದಂತೆಯೇ ಪ್ರತಿಕ್ರಿಯಿಸದಿರಬಹುದಾದ ದಿವಾಕರ್ ಅವರೂ ಮಹಾನೀಚರೇ ಎನ್ನುವ ನಿಮ್ಮ ನಿಲುವು ನನಗೆ ಒಪ್ಪಿಗೆಯಿಲ್ಲ.

"ಇಬ್ಬರನ್ನೂ ಮಹಾನೀಚರೆಂದು ಬಹಿರಂಗವಾಗಿ ಉಗಿಯುವ ಸಾಹಸಕ್ಕೆ ಇಳಿದಿದ್ದೇನೆ"

ನಿಮ್ಮಿಂದ ಬೈಸಿಕೊಂಡವರು ಬಹಿರಂಗವಿದ್ದರೂ, ನನ್ನ ದೃಷ್ಟಿಯಲ್ಲಿ ನಿಮ್ಮ ಬೈಗುಳ ಸದ್ಯಕ್ಕಂತೂ ಬಹಿರಂಗವೂ ಅಲ್ಲ, ಸಾಹಸವೂ ಅಲ್ಲ.

"ಲೇಖನವನ್ನು ಓದಿದ ಮೇಲೆ ಭಯಂಕರ ಉರಿ ಹತ್ತಿದ್ದರಿಂದ ಈ ಪ್ರತಿ ಲೇಖನವನ್ನು ಬರೆಯಬೇಕಾಯ್ತು"
"ಉರಿ" ಕಡಿಮೆಯಾದ ಮೇಲೆ ನಿಮ್ಮದು over-reaction ಹೌದೋ-ಅಲ್ಲವೋ ಯೋಚಿಸಿ ನೋಡಿ.

ಅಸತ್ಯ ಅನ್ವೇಷಿ said...

ಅಂಥ ಹಿರಿಯ ಮತ್ತು ತಮ್ಮ ಬರವಣಿಗೆಗಾಗಿಯೇ ಹೆಸರು ಗಳಿಸಿಕೊಂಡ ಸಾಹಿತಿಗಳು 'ಓದಲರ್ಹವಾದ ಒಂದೇ ಒಂದು ಸಾಲನ್ನು ಬರೆದಿಲ್ಲ' ಎಂಬ ಅಸಂಬದ್ಧ ಮಾತು ಇದು ಚರ್ಚಾರ್ಹ ಸಂಗತಿಯಾಗಿರುವುದರಿಂದ ಅದಕ್ಕೆ ದಿವಾಕರ್ ಪ್ರತಿಭಟಿಸಿದ್ದಾರೋ ಎಂಬುದನ್ನು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಬಹುದಿತ್ತಲ್ಲವೆ?

ವಿಶ್ವನಾಥ ಬಸವನಾಳಮಠ said...

'ಅಂತರಂಗಿ' ಯವರೇ,

ಪ್ರಜಾವಾಣಿಯಲ್ಲಿ ಪ್ರಕಟವಾದ ಎಸ್. ದಿವಾಕರ್ ಅವರ 'ಏನಾಗಿದೆ ನಮ್ಮ ಸಾಹಿತ್ಯ ಲೋಕಕ್ಕೆ' ಲೇಖನಕ್ಕೆ ಪ್ರತಿಯಾಗಿ ನಿಮ್ಮ ಪೋಸ್ಟ್ ಓದಿದೆ.

ಸಾಹಿತ್ಯದ ಕುರಿತು, ಸಾಹಿತಿಗಳ ಕುರಿತು ನಿಮ್ಮ ಕಳಕಳಿ ಮೆಚ್ಚುವಂಥದ್ದೇ. ಆದರೆ ಉರಿದು ಹೋಗಿ ನೀವು ಮಾಡಿರುವ ಪ್ರತಿಕ್ರಿಯೆ ಮಾತ್ರ ನನ್ನನ್ನೂ ಉರಿಯುವಂತೆ ಮಾಡಿತು.

ಶ್ರೀಯುತ ದಿವಾಕರ್ ಅವರು ಚೆನ್ನೈನಲ್ಲಿ ಇರುವಷ್ಟು ದಿನವೂ ಅವರನ್ನು ಅತಿ ಹತ್ತಿರದಿಂದ ಕಾಣುವ, ಒಡನಾಡುವ ಭಾಗ್ಯ ನನಗೆ ದೊರೆತಿದೆ.
ತಮಗೆ ಸರಿ ಅನ್ನಿಸದಿದ್ದ ವಿಷಯಗಳನ್ನು ನೇರವಾಗಿಯೇ ಅವರು ಹೇಳಿದ ಅನೇಕ ಪ್ರಸಂಗಗಳು ನನಗೆ ನೆನಪಿವೆ. ಹನೂರು ಪ್ರಕರಣದಲ್ಲೂ ಕೂಡ ಅವರು ಈ ವಿಷಯವನ್ನು ವೇದಿಕೆಯಲ್ಲಿ ಪ್ರಸ್ತಾಪಿಸದಿರಲು ಸಾಧ್ಯವೇ ಇಲ್ಲ. ದಿವಾಕರ್ ಅವರೂ ಕೂಡ ತಮಗೆ ಸರಿ ಕಾಣದ ಯಾವುದನ್ನೂ ಬಿಟ್ಟುಕೊಡದ ಜಾಯಮಾನದವರಲ್ಲ. ರಘುನಾಥ್ ಅವರು ಹೇಳಿದಂತೆ ಪತ್ರಿಕೆಯ ಸ್ಥಳ ಮಿತಿಯಿಂದಾಗಿ ಅದನ್ನು ಲೇಖನದಲ್ಲಿ ಪ್ರಸ್ತಾಪಿಸದಿರಬಹುದು.

ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ರತ್ನಕೋಶ' ದಲ್ಲಿ ನೀಚ ಎಂಬ ಪದಕ್ಕೆ-ಕೆಡುಕ, ಕೆಟ್ಟ, ಕೀಳಾದ ಎಂಬ ಅರ್ಥಗಳಿವೆ. ಕನ್ನಡದಲ್ಲಿ ಅತ್ಯುತ್ತಮ ಕತೆಗಳನ್ನು ಬರೆಯುವ ಮೂಲಕ ವಿಶಿಷ್ಠ ಸಾಹಿತ್ಯವನ್ನು ರಚಿಸಿದ ಎಸ್ ದಿವಾಕರ್ ಅವರನ್ನು ನೀವು ಮಹಾನೀಚ ಎಂದು ಕರೆದಿರುವುದು ಎಷ್ಟು ಸೂಕ್ತ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ ('ಪರಮ'ನೀಚ ಎಂದು ನೀವು ಕರೆದದ್ದಲ್ಲ ಎಂದೂ ನಿಮ್ಮ ಪೋಸ್ಟ್ ನಲ್ಲಿ ಹೇಳಿದ್ದೀರಿ, ಹಾಗಿದ್ದರೆ ಕರೆದವರು ಯಾರು?).

ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭೇದಗಳಿರುವುದು ಸಹಜ. ಆದರೆ ದೂರದ ದೇಶದಲ್ಲಿದ್ದೂ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ತುಂಬಾ ಆಸ್ಥೆಯುಳ್ಳ ನಿಮ್ಮಂಥವರು ನಿಮ್ಮ ಮನಸ್ಸಿಗೆ ಬಂದಂತೆ ಶಬ್ದಗಳನ್ನು ಪ್ರಯೋಗಿಸುವುದು ಎಷ್ಟು ಉಚಿತ ಎಂದು ಯೋಚಿಸಿ.

"ನನಗೇನಾದರೂ ದಿವಾಕರ್ ಅದೇ ವೇದಿಕೆಯಲ್ಲಿ ಅಥವಾ ಬೇರೆಡೆಯಲ್ಲೆಲ್ಲಾದರು ಹನೂರು ಅಂತಹವರಿಗೆ ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆಂದು ಗೊತ್ತಾದರೆ ನಾನು ಅಪಾಲಜಿಯನ್ನು ಕೇಳುವುದಕ್ಕೇನೂ ಹಿಂದೆ-ಮುಂದೆ ನೋಡುವುದಿಲ್ಲ" ಎಂದು ಬರೆದಿದ್ದೀರಿ. ಇದು ನಿಮ್ಮ ದೊಡ್ಡ ಗುಣ.

ಅದಕ್ಕಿಂತ ಮುನ್ನ ಎಸ್ ದಿವಾಕರ್ ಅವರ ಮನಸ್ಸಿಗೆ ನೋವಾಗಿದ್ದರೆ ನಾನೇ ಅವರ ಕ್ಷಮೆ ಕೇಳುತ್ತೇನೆ.

ನಮಸ್ಕಾರ.

-ವಿಶ್ವನಾಥ

Satish said...

"ಸಂಜಯ" ಅವರೇ,

ಹನೂರು ಅವರ ಮಾತಿನ ಇಂಗಿತದ ಪ್ರಶ್ನೆಯೇ ಬರೋಲ್ಲ, ಯಾವ ಇಂಗಿತದಲ್ಲಿ ಹೇಳಿದ್ದರೂ ಅವರ ಮಾತಿಗೆ ಬೆಲೆ ಇರೋದಿಲ್ಲ, ಹಾಸ್ಯ, ವ್ಯಂಗ್ಯ ಅಥವಾ ಸಾರ್‌ಕ್ಯಾಸ್ಟಿಕ್ ಆಗಿಯೂ ಆ ರೀತಿಯ ಹೇಳಿಕೆಗಳನ್ನು ಆ ವೇದಿಕೆಯಲ್ಲಿ ಹೇಗೆ ಮಾಡಲು ಸಾಧ್ಯ? ನನ್ನದು ಓವರ್ ರಿಯಾಕ್ಷನ್ ಇರಬಹುದು, ಆದರೆ ಒಂದು ಅಸಂಬಂದ್ಧ ಹೇಳಿಕೆಯನ್ನು ನನಗನ್ನಿಸಿದಂತೆ ಪ್ರತಿಭಟಿಸಿದ್ದೇನೆ, ನಾನು ಒಂದು 'ಕೆಟ್ಟದ್ದು' ಘಟಿಸುತ್ತಿರುವುದನ್ನು ನೋಡಿಕೊಂಡು ಸುಮ್ಮನೇ ಇದ್ದರೆ ಆ 'ಕೆಟ್ಟದ್ದನ್ನು' ಮಾಡಿದ ತಪ್ಪಿನಷ್ಟೇ ನನ್ನ ಮೌನವೂ ಸಹ ಎಂಬ ನಂಬಿಕೆಯುಳ್ಳವನು.ವಿಶ್ವನಾಥ ಅವರೇ,

ನಾನು ನೀಚ ಎನ್ನುವ ಪದವನ್ನು '(ಕೆಳಗೆ) ಬಿದ್ದವರು' ಎನ್ನುವ ಅರ್ಥದಲ್ಲಿ ಬಳಸಿದ್ದೇನೆ.

ದಿವಾಕರ್ ಅವರಿಂದ ಅವರು ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದರೋ ಇಲ್ಲವೋ ಎನ್ನುವುದನ್ನು ಯಾರಾದರೂ ನನಗೆ ತಿಳಿಸಿದರೆ ಅದು ದೊಡ್ಡ ಉಪಕಾರವಾಗುತ್ತದೆ. (ನಾನು ಅಂದುಕೊಂಡಂತೆ) ಅವರು ಅದೇ ವೇದಿಕೆಯಲ್ಲಿ ಅಥವಾ ಅದರ ನಂತರ(ದ ದಿನಗಳಲ್ಲಿ) ಪ್ರತಿಭಟಿಸಿದ್ದೇ ಆದರೆ ಇದೇ ಅಂಕಣದಲ್ಲಿ ಅವರ ಕ್ಷಮೆ ಕೇಳುತ್ತೇನೆ.

ಒಂದು ವೇಳೆ ಅವರೇನಾದರೂ ಹಾಗೆ ಮಾಡಿರದೇ ಇದ್ದರೆ ನಾನು ದಿವಾಕರ್ ಮೇಲಿಟ್ಟಿರುವ ಗೌರವ ಹಾಗೂ ನಂಬಿಕೆಗಳನ್ನು ಪುನರ್‌ವಿಮರ್ಶೆ ಮಾಡಿಕೊಳ್ಳುತ್ತೇನೆ.

ಹೆಚ್ಚಿನವರು ದಿವಾಕರ್ ಅವರನ್ನು ನಾನು ನನ್ನ ಮನಸ್ಸಿಗೆ ಬಂದ ಹಾಗೆ ಕರೆದದ್ದನ್ನು ಪ್ರತಿಭಟಿಸುತ್ತಿದ್ದಾರೆಯೇ ವಿನಾ ಹನೂರು ಅವರು ಪುತಿನ ಅವರ ಬಗ್ಗೆ ಕೇಳಿದ ಮಾತಿನ ಬಗ್ಗೆ ಎಲ್ಲರೂ ಕೊಡವಿಕೊಳ್ಳುತ್ತಿರುವುದನ್ನು ನೋಡಿ ನನಗೇಕೆ ಬೇಸರವಾಗಬಾರದು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಹನೂರು ಅವರು ಪುತಿನ ಅವರ ಬರಹಗಳೆಲ್ಲದರ ಬಗ್ಗೆ ಕೆಟ್ಟ ಹೇಳಿಕೆಯನ್ನು ನೀಡಿದ್ದು ಗೌಣವಾಗಿ ನಾನು ದಿವಾಕರ್ ಅವರನ್ನು ಒಂದೇ ಒಂದು ಸಂದರ್ಭದಲ್ಲಿ (ಪೂರ್ಣ ವಿಷಯದ ಅರಿವಿರದೇ ಹಾಗೂ ಹಾಗೆ ಇರಲಾರದು ಎನ್ನುವ ಎಲ್ಲ ಅನುಮಾನಗಳ ಸಹಿತ) ನೀಚನೆಂದು ಕರೆದದ್ದು ದೊಡ್ಡ ವಿಷಯವಾಗಿದ್ದು ಆಶ್ಚರ್ಯವನ್ನು ಉಂಟುಮಾಡಿತು.

ದಿವಾಕರ್ ಸಹ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದವರು ಒಂದು ವೇಳೆ ಸ್ಥಳದ ಮಿತಿಯಿಂದ ಪ್ರಜಾವಾಣಿಯವರು ಮುಖ್ಯವಾದ ವಿಷಯವೊಂದನ್ನು ಕತ್ತರಿಸಿದ್ದರೆ ಆ ಬಗ್ಗೆ ನಾನು ಏನು ಹೇಳಲಿ? ನನಗೆ ಹೆಚ್ಚೇನೂ ಬೇಕಾಗಿಲ್ಲ, ದಿವಾಕರ್ ಅವರ ಲೇಖನದಲ್ಲಿ 'ಹನೂರು ಅವರು ಆ ಮಾತನ್ನು ಹೇಳಿದ ನಂತರ ನಾನು ಆ ಬಗ್ಗೆ ಅವರನ್ನು ಪ್ರಶ್ನಿಸಿದೆ' ಎನ್ನುವ ಒಂದೇ ಒಂದು ಸಾಲಿದ್ದರೂ ಸಾಕಾಗುತ್ತಿತ್ತು.