Wednesday, June 07, 2006

ಗಡಿಯಾರ ರಹಿತ ದಿನಗಳ ಮುನ್ನೋಟ

ನಮ್ಮನೇಲಿರೋ ಗಡಿಯಾರಗಳಿಗೆಲ್ಲಾ ಏನೋ ಖಾಯಿಲೆ ಬಂದ ಹಾಗೆ ಒಂದರ ಮೇಲೊಂದು ನಿಲ್ಲುವುದನ್ನು ನೋಡಿದ ನನಗೆ ಖಾಯಿಲೆ ಬಂದಿರುವುದು ಗಡಿಯಾರಗಳಿಗೋ ಅಥವಾ ನನಗೋ ಎಂದು ಎಷ್ಟೋ ಬಾರಿ ಸಂಶಯವಾಗಿದೆ. ಆದರೂ ಕೈ ಗಡಿಯಾರ, ಗೋಡೆ ಗಡಿಯಾರ ಎಂದೆಲ್ಲ ಗುಡಿಸಿ ಲೆಕ್ಕ ಹಾಕಿದರೆ ಒಟ್ಟು ಒಂಭತ್ತು ಗಡಿಯಾರಗಳಿರುವ ನಮ್ಮನೆಯಲ್ಲಿ ಈ ಕ್ಷಣದಲ್ಲಿ ನೋಡಿದರೆ ಯಾವೊಂದೂ ಸರಿಯಾಗಿ ನಡೆಯುತ್ತಿಲ್ಲ, ಹೆಚ್ಚಿನವು ಬ್ಯಾಟರಿ ಕಡಿಮೆಯಾಗಿ ನಿಂತುಹೋಗಿದ್ದರೆ ಇನ್ನು ಕೆಲವು ಕಾವು ಕೊಡುತ್ತಾ ನಿದ್ದೆ ಮಾಡುತ್ತಿರುವ ಕೋಳಿಯ ಹಾಗೆ ಈಗೋ ಆಗೋ ನಿಂತು ಬಿಡುವ ಸೂಚನೆಗಳನ್ನು ಕೊಡುತ್ತಿವೆ.

ನನ್ನ ಬಳಿ ಇರುವವು ನಾಲ್ಕು ಕೈ ಗಡಿಯಾರಗಳು, ಅವುಗಳಲ್ಲಿ ಒಂದೊದಕ್ಕೆ ಒಂದು ಕಥೆಯನ್ನು ಹೇಳಬಲ್ಲೆನಾದರೂ ನಾನು ಮದುವೆಯಾದಾಗ ಕೊಂಡ ಟೈಮೆಕ್ಸ್ ಗಡಿಯಾರದ ಬಗ್ಗೆ ಹೇಳದಿದ್ದರೆ ನನಗಂತೂ ಸಮಾಧಾನವೇ ಆಗೋದಿಲ್ಲ. ೧೮ ಕ್ಯಾರೆಟಿನ ಬಂಗಾರದಿಂದ ಮಾಡಿದ ಈ ಗಡಿಯಾರಕ್ಕೆ ಹನ್ನೊಂದು ಸಾವಿರದ ನಾನ್ನೂರು ರೂಪಾಯಿಗಳನ್ನು ಕೊಟ್ಟು, ಅದಕ್ಕೆ ಹಾಕಿದ್ದ ಚರ್ಮದ ಸ್ಟ್ರ್ಯ್ರ್‍ಆಪನ್ನು ತೆಗೆದು ಬಂಗಾರದ್ದೇ ಯಾಕೆ ಹಾಕಿಸಬಾರದು ಎಂದು ಯಾರೋ ಹೇಳಿದರೆಂದು ಅದಕ್ಕಿನ್ನಷ್ಟು ದುಡ್ಡು ಸುರಿದದ್ದಾಯ್ತು, ಆದರೆ ತೆಗೆದುಕೊಂಡು ಐದು ವರ್ಷದ ಮೇಲಾದರೂ ಐವತ್ತು ದಿನಗಳ ಮಟ್ಟಿಗೂ ಈ ಗಡಿಯಾರವನ್ನು ಕಟ್ಟಿಕೊಳ್ಳಲೇ ಇಲ್ಲ. ಅದನ್ನು ಖರೀದಿಸಿ ಇಲ್ಲಿಗೆ ಬಂದ ಮೇಲೆ ಬ್ಯಾಟರಿ ಕಡಿಮೆಯಾಗಿ ನಿಂತು ಹೋಯಿತು, ಮುಂದೆ ಯಾವಾಗಲಾದರೂ ಬ್ಯಾಟರಿ ಹಾಕಿಸೋಣವೆಂದು ದಿನಗಳನ್ನು ತಳ್ಳೀ-ತಳ್ಳಿ ಯಾವತ್ತೋ ಒಂದು ದಿನ ಬ್ಯಾಟರಿಯನ್ನು ಹಾಕಿಸಿದರೂ ಸ್ವಲ್ಪ ದಿನ ಕಟ್ಟುವುದರಲ್ಲಿಯೇ ಇದ್ದಕ್ಕಿದ್ದ ಹಾಗೆ ಅದರ ನಿಮಿಷದ ಮುಳ್ಳು ಮುರಿದು ಡೊಂಕಾಗಿ ವಾಚಿನಲ್ಲಿಯೇ ಬಿದ್ದು ಹೋಗುವುದೇ? ನನಗಂತೂ ಆ ರೀತಿ ಹೇಗೆ/ಏಕಾಯಿತು ಎಂಬುದು ಇನ್ನೂ ಅರ್ಥವಾಗಿಲ್ಲ. ಸಫ್ಪೈರ್ ಕ್ರಿಸ್ಟಲ್‌ನಿಂದ ಮಾಡಿದ ಗಾಜಿಗಾಗಲಿ, ಲೋಹದ ಸುತ್ತಲಿನ ಕವಚಕ್ಕಾಗಲೀ ಎಲ್ಲೂ ಒಂದು ಗೆರೆ ಸಹ ಬೀಳದೇ ಅದರ ಒಳಗಿನ ಮುಳ್ಳು ಹೇಗೆ ಮುರಿಯಿತು ಎನ್ನುವುದು ಇನ್ನೂ ಸೋಜಿಗದ ವಿಷಯವೇ. ಇಂಡಿಯಾಕ್ಕೆ ತೆಗೆದುಕೊಂಡು ಹೋಗಿ ತೋರಿಸಿದರಾಯಿತು ಎಂದು ಕೊಂಡಿದ್ದರಿಂದ ಅದು ಎಲ್ಲೋ ಒಂದು ಮೂಲೆಯಲ್ಲಿ ಬಿದ್ದು ಧೂಳು ತಿನ್ನುತ್ತಿದೆ - ಅಪರೂಪಕ್ಕೊಮ್ಮೆ ನನ್ನ ದರ್ಶನವಾದಾಗಲೆಲ್ಲ 'ಏನು, ಊರಿಗೆ ಹೋಗೋಲ್ವಾ?' ಎಂದು ಪ್ರಶ್ನೆ ಹಾಕಿದವರ ಥರ ಕಂಡುಬರುತ್ತದೆ.

ಇನ್ನುಳಿದ ಮೂರು ಗಡಿಯಾರಗಳು ಅಷ್ಟಕಷ್ಟೇ - ಅವೂ ಕೂಡ ಬ್ಯಾಟರಿ ಸೊರಗಿ ತಮ್ಮ ಕೆಲಸವನ್ನು ಮಾಡುವುದಿಲ್ಲ ಎಂದು ಶಪಥ ತೊಟ್ಟುಕೊಂಡು ಬಹಳ ದಿನಗಳಾದವು. ವಾರಾಂತ್ಯದಲ್ಲಿ ಮಾಡೋಣವೆಂದು ಬಹಳ ದಿನಗಳಿಂದ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಅಲೆದೆ, ಊಹೂ, ಎಲ್ಲೂ ನನ್ನ ಕಣ್ಣಿಗೆ ಬ್ಯಾಟರಿ ಬದಲಾಯಿಸುವ ಒಂದು ಅಂಗಡಿಯೂ ಕಾಣಲಿಲ್ಲ, ಮೊನ್ನೆ ಶನಿವಾರ ಐದಾರು ಅಂಗಡಿಗಳ ಬಾಗಿಲನ್ನು ಹೊಕ್ಕು ಕೇಳಿ ನೋಡಿದೆ, ಯಾರೂ ಬ್ಯಾಟರಿ ಬದಲಾಯಿಸುತ್ತೇವೆ ಎಂದು ಒಪ್ಪಿಕೊಳ್ಳಲಿಲ್ಲ. ಇನ್ನು ನನಗೆ ಗೊತ್ತಿರುವ ಒಂದು ಮಾಲ್‌ನ ಒಂದು ಅಂಗಡಿಯಲ್ಲಿ ಬದಲಾಯಿಸುತ್ತಾರೆ ಅಲ್ಲಿಗೆ ಹೋಗಿ ಬರಲು ಕನಿಷ್ಠ ಪಕ್ಷ ಒಂದು ಘಂಟೆಯಾದರೂ ಬೇಕು, ಅಲ್ಲದೇ ಇಪ್ಪತ್ತೈದು ಡಾಲರಿನ ಆಸು-ಪಾಸಿರುವ ಗಡಿಯಾರಕ್ಕೆ ಏಳು ಡಾಲರನ್ನು ಕೊಟ್ಟು ಬ್ಯಾಟರಿ ಬದಲಾಯಿಸಲು ಮನಸ್ಸು ಒಮ್ಮೆ ಹಿಂದೆ ಮುಂದೆ ನೋಡುತ್ತದೆ. ಈ ಕಡೆ ಅವುಗಳನ್ನು ಎಸೆದು ಹೊಸತನ್ನು ಕೊಳ್ಳುವುದೂ ಇಲ್ಲ, ಅವುಗಳಿಗೆ ಮತ್ತೆ ಚಲನೆಯನ್ನು ಮೂಡಿಸಲು ಬ್ಯಾಟರಿಯನ್ನು ಹಾಕಿಸಲೂ ಆಗುತ್ತಿಲ್ಲ, ಇಂಥಾ ತುಂಬಾ ಸಣ್ಣ ವಿಷಯವೂ 'ಕೈಯಲ್ಲಿ ಗಡಿಯಾರವಿಲ್ಲದವನ' ಹಣೆಬರಹವನ್ನು ಜಗಜ್ಜಾಹೀರು ಮಾಡಿಬಿಡುತ್ತೇವೆ ಎಂದು ಹಠ ತೊಟ್ಟವರಂತೆ ಕಾಡುತ್ತಿವೆ. ಬರೀ ನನ್ನ ಕೈ ಗಡಿಯಾರಗಳ ಕಥೆಯೇ ಹೀಗೆ ಎಂದು ಕೊಂಡರೆ ನನ್ನ ಹೆಂಡತಿಯ ಗಡಿಯಾರಗಳೇನು ಬೇರೆಯಲ್ಲ, ಅವುಗಳದೂ ಇದೇ ಕಥೆ, ನನ್ನ ಕಣ್ಣಿಗೆ ಕಾಣುವಂತೆ ಅವಳ ಮೂರು ಗಡಿಯಾರಗಳು ಮೋಕ್ಷದ ದಾರಿಯನ್ನು ಕಾಯುತ್ತಾ ಬಿದ್ದುಕೊಂಡಿರುವುದು ನನಗೆ ಚೆನ್ನಾಗಿ ಗೊತ್ತು.

ಏಳು ಕೈಗಡಿಯಾರಗಳ ಕಥೆ ಹೀಗಾದರೆ ಇನ್ನು ಗೋಡೆ ಗಡಿಯಾರಗಳಿಗೇನು ಸಬೂಬು ಹೇಳುತ್ತೇನೆ ಎಂದು ಕುತೂಹಲವಿದ್ದಿರಬಹುದು. ಅವುಗಳ ಕಥೆಯೂ ಅಷ್ಟೇ, ಬ್ಯಾಟರಿ ಹೀನತೆ. ಆದರೆ ಅದರ ಹಿಂದೆ ಒಂದು ಸಣ್ಣ ಕಥೆಯಿದೆ. ಕೆಲವು ತಿಂಗಳ ಹಿಂದೆ ನಾನು ರಜಾ ಹಾಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ ಚೈನಾ ಟೌನಿಗೆ ಹೋಗಿ ಬಂದರೆ ಹೇಗೆ ಎಂದುಕೊಂಡು ಹೋಗಿ ಬಂದಿದ್ದೆ. ಅಲ್ಲಿ ಅತಿಕಡಿಮೆ ಬೆಲೆಗೆ ಸಿಗುವ ಅನೇಕ ಪದಾರ್ಥಗಳನ್ನು ಖರೀದಿ ಮಾಡಿಕೊಂಡು ನ್ಯೂ ಯಾರ್ಕಿನ ಡೌನ್ ಟೌನ್‌ಗೆ ಕೆಲವೇ ಮೈಲಿಗಳ ದೂರದಲ್ಲಿ ನಾಲ್ಕು ಡಾಲರ್ ಕೊಟ್ಟು ಮನಪೂರ್ತಿ ಅದೇನೇನೋ ಚೈನೀಸ್ ಊಟವನ್ನು ಮಾಡಿಕೊಂಡು ಕಂಡ ಕಂಡ ಅಂಗಡಿಗಳಿಗೆ 'ನಾಳೆ ಬಂದು ಕದ್ದುಕೊಂಡು ಹೋಗುವವರ ಹಾಗೆ' ಭೇಟಿಕೊಟ್ಟು ಏನೇನೆಲ್ಲ ಕೊಳ್ಳುತ್ತಿರುವಾಗ ಒಂದು ಡಾಲರ್‌ಗೆ ಹದಿನಾರು ಬ್ಯಾಟರಿ ಇರುವ ಒಂದು ಪ್ಯಾಕೇಟ್ ನನ್ನನ್ನು ಆಕರ್ಷಿಸಿತು. ಹೊರಗಡೆ ಅಂಗಡಿಯಲ್ಲಿ ಏನಿಲ್ಲವೆಂದರೂ ಅದಕ್ಕೆ ಹತ್ತು ಡಾಲರ್‌ಗಳಾದರೂ ಇರುವಾಗ ಒಂದೇ ಒಂದು ಡಾಲರ್‌ಗೆ ಹದಿನಾರು ಬ್ಯಾಟರಿ ಸೆಲ್‌ಗಳೇ! ನಂಬುವುದಕ್ಕೆ ಕಷ್ಟವಾದರೂ ತಂದೆ, ಕೊನೆಗೆ ಬೇರೆ ಯಾವುದಕ್ಕೆ ಹಾಕಲು ಆಗದಿದ್ದರೂ ಮನೆಯಲ್ಲಿದ್ದ ನಾಲ್ಕು ರಿಮೋಟ್ ಕಂಟ್ರ್‍ಓಲ್‌ಗಳಿಗಾದರೂ ಹಾಕಲು ಬರುತ್ತದೆಯೆಂದು ಅಂದುಕೊಂಡಿದ್ದವನಿಗೆ ಆಶ್ಚರ್ಯಕಾದಿತ್ತು. ಆದಿನ ಮೂರನೇ ರಘು ಕೊಟ್ಟ ಗೋಡೆ ಗಡಿಯಾರಕ್ಕೆ ಬ್ಯಾಟರಿ ಬದಲಾಯಿಸಿದ್ದೆ, ಅಂದಿನಿಂದ ಇಂದಿನವರೆಗೆ, ಇನ್ನು ಒಂದು ತಿಂಗಳೂ ಆಗಿಲ್ಲ ಆಗಲೇ ಎರಡು ಬಾರಿ ಬ್ಯಾಟರಿಗಳನ್ನು ಬದಲಾಯಿಸಿದ್ದೇನೆ! ಗಡಿಯಾರದಲ್ಲಿ ಏನೂ ಸಮಸ್ಯೆ ಇಲ್ಲ, ಇರೋದು ಏನಿದ್ದರೂ ಡಾಲರ್‌ಗೆ ಹದಿನಾರರಂತೆ ತಂದ ಬ್ಯಾಟರಿಯಲ್ಲಿಯೇ. ಈ ಕನಿಷ್ಟ ಬ್ಯಾಟರಿಗಳು ನನಗೆ ಎಷ್ಟು ತೊಂದರೆ ಕೊಟ್ಟಿವೆಯೆಂದರೆ ನಾನು ಯಾವಾಗಲೂ ರಘುವಿನ ಗಡಿಯಾರವನ್ನು ನೋಡಿ ಸಮಯ ಹೇಳುವವನು ಈಗ ಅದನ್ನು ನೋಡುವುದೇ ಇಲ್ಲ, ಅದರ ಬದಲಿಗೆ ಕಾಮ್‌ಕ್ಯಾಸ್ಟಿನ ಡಿವಿಆರ್ ಅನ್ನು ನೋಡುತ್ತೇನೆ. ಅಂದರೆ ತಲೆ ಎತ್ತಿ ಗಡಿಯಾರ ನೋಡುವ ಅಭ್ಯಾಸವನ್ನು ಬದಲಾಯಿಸಲು ಹಾಗೂ ತಲೆ ತಗ್ಗಿಸಿ ಸಮಯವನ್ನು ನೋಡುವ ಅಭ್ಯಾಸವನ್ನು ಹುಟ್ಟಿ ಹಾಕಿದ್ದಕ್ಕೆ ನಾನು ಈ ಚೈನಾ ಟೌನ್‌ನ ಬ್ಯಾಟರಿಗಳನ್ನು ಪ್ರಶಂಸಿಸುತ್ತೇನೆ, ಏಕೆಂದರೆ ಇಂತಹ ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ತಂದಿದ್ದಕ್ಕೆ ಬಯ್ಯಲು ಬೇರೆ ಯಾರೂ ಸಿಗದಿದ್ದುದರಿಂದ!

***

ನಾನು ಒಂದು ಕಾಲದಲ್ಲಿ ಸಮಯಕ್ಕೇ ಹುಟ್ಟಿದವರ ಹಾಗೆ ಆಡುತ್ತಿದ್ದೆ, ಎಲ್ಲಿಗೆ ಹೋಗುವುದಾದರೂ ಡಾಟ್ ಮೇಲೆ ಸರಿಯಾಗಿ ಹೋಗದಿದ್ದರೆ ಸಂಕಟವಾಗುತ್ತಿತ್ತು. ಆಗೆಲ್ಲ ನನ್ನ ಕೈಯಲ್ಲಿ ಮೂವತ್ತೈದು ರೂಪಾಯಿಗಳ ಎಲ್ಕೆಕ್ಟ್ರಾನಿಕ್ ಗಡಿಯಾರಗಳು ಇದ್ದುದೇ ಹೆಚ್ಚು. ಒಂದು ದಿನ ಸೊರಬದಿಂದ ಸಾಗರಕ್ಕೆ ಮಧ್ಯಾಹ್ನ ಹನ್ನೆರಡೂವರೆಗೆ ಹೊರಡೋ ಮಲ್ಲಿಕಾರ್ಜುನ ಬಸ್ಸಿನಲ್ಲಿ ೨೯ ಕಿ.ಮೀ.ಗಳ ದೂರವನ್ನು ೫೧ ನಿಮಿಷಗಳಲ್ಲಿ ತಂದು ಮುಟ್ಟಿಸಿದ್ದಕ್ಕಾಗಿ ಬಸ್ಸಿನ ಕಂಡಕ್ಟರ್ ಶಿವಪ್ರಸಾದ ಹಾಗೂ ಟಿಕೇಟ್ ಏಜೆಂಟ್ ಸಿದ್ದಪ್ಪನ ಹತ್ತಿರ ಜಗಳವಾಡಿದ್ದೆ. '೨೯ ಕಿಲೋ ಮೀಟರ್‌ಗೆ ಐವತ್ತೊಂದು ನಿಮಿಷ ತಗೊಂತೀರಲ್‌ರೀ, ಈ ಬಸ್ಸಿನ ಬದಲಿಗೆ ಓಡಿಕೊಂಡು ಬರಬಹುದಿತ್ತು!' ಎಂದು ಸಿಟ್ಟು ಮಾಡಿಕೊಂಡ ಮುಖವನ್ನು ತೊಟ್ಟುಕೊಂಡಿದ್ದೆ. ಅದೇ ಇಲ್ಲಿ ಈ ಊರಿನಲ್ಲಿ ಕೆಲವೊಮ್ಮೆ ನಾನು ಹತ್ತುವ ಸಿಟಿ ಬಸ್ಸುಗಳು, ಮೀನು ಮಾರೋರ ಸೈಕಲ್ಲಿನ ಹಾಗೆ ಅಲ್ಲಿ ನಿಂತು ಇಲ್ಲಿ ನಿಂತು ನಮ್ಮ ಮನೆಯ ಬಸ್ ಸ್ಟಾಪ್‌ನಿಂದ ಕೇವಲ ನಾಲ್ಕೇ ಮೈಲು ದೂರವಿರುವ ರೈಲು ನಿಲ್ದಾಣಕ್ಕೆ ಹೋಗಲು ಕೆಲವೊಮ್ಮೆ ಇಪ್ಪತ್ತೈದು ನಿಮಿಷಗಳ ಮೇಲೆ ತೆಗೆದುಕೊಂಡರೂ ನಾನು ಜಪ್ಪಯ್ಯ ಎನ್ನುವುದಿಲ್ಲ, ಒಂದು ಬಿಸಿಯುಸಿರನ್ನೂ ಬಿಡುವುದಿಲ್ಲ, ಬದಲಿಗೆ ಪ್ರಪಂಚದ ಯಾವುದೋ ಭಾರವೊಂದು ನನ್ನ ತಲೆಯನ್ನು ಸುತ್ತಿಕೊಂಡವನ ಹಾಗೆ ಮುಖ ಮಾಡಿಕೊಂಡು ಏನನ್ನೋ ಓದಿಕೊಳ್ಳುವ ಹಾಗೆ ಕುಳಿತಲ್ಲೇ ಚಡಪಡಿಸುತ್ತಿರುತ್ತೇನೆ.

ನನ್ನ ಡಾಟ್ ಮೇಲೆ ಹೋಗುವ ಅಭ್ಯಾಸ ಇಲ್ಲಿಗೆ ಬಂದ ಮೇಲೂ ಕೆಲವು ವರ್ಷ ಮುಂದುವರೆದಿತ್ತು, ಯಾವುದಾದರೂ ಡಾಕ್ಟರ್ ಆಫೀಸಿಗೆ ಹೋದರೆ, ಅಥವಾ ಕಾರನ್ನು ಸರ್ವೀಸ್ ಮಾಡಿಸುವುದಕ್ಕೋಸ್ಕರ ತೆಗೆದುಕೊಂಡು ಹೋದರೆ ಅಲ್ಲೂ ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದು ಛಲ ತೊಟ್ಟುಕೊಂಡಿರುತ್ತಿದ್ದೆ. ಆದರೆ ಡಾಕ್ಟರ್ ಆಫೀಸಿನಲ್ಲಿ ದೊಡ್ಡ ರೂಮಿನಿಂದ ಚಿಕ್ಕ ರೂಮೂ, ಚಿಕ್ಕ ರೂಮಿನಿಂದ ಮತ್ತೊಂದು ರೂಮೂ ಎಂದು ಅಲ್ಲಲ್ಲಿ ಕೂರಿಸಿ ಕಾಯಿಸುತ್ತಿದ್ದುದ್ದನ್ನು ನೋಡಿ ಹಾಗೂ ಮೆಕ್ಯಾನಿಕ್‌ಗಳು ಡಾಟ್ ಮೇಲೆ ಬಂದವನಿಗೆ ಯಾವುದೇ ವಿಶೇಷ ಮಣೆಯನ್ನು ಹಾಕದಿರುವುದನ್ನು ಕಂಡು ಕೊನೆಗೆ ನಾನೂ ಅಮೇರಿಕನ್ ಆಗಿ ಹೋದೆ! ಅಂದಿನಿಂದ ನಾನು ಡಾಟ್ ಮೇಲೆ ಹೋಗಲಿ ಬಿಡಲಿ ನನಗಂತೂ ಕಸಿವಿಸಿ ಆಗಿದ್ದಿಲ್ಲ, ಎಲ್ಲಾದರೂ ಯಾರಾದರೂ ಏಕೆ ತಡವೆಂದು ಕೇಳಿದರೆ ಹುಡುಕೋದಕ್ಕೆ ನೆಪಗಳೇನು ಸಾವಿರಾರು ಸಿಗುತ್ತವಾದ್ದರಿಂದ ನನ್ನ ಡಾಟ್ ಸಂಸ್ಕೃತಿ ಹೋಗುವುದಿರಲಿ ಇತ್ತೀಚೆಗೆ ಗಡಿಯಾರ ರಹಿತನಾಗಿ ಬದುಕುವ ಧೈರ್ಯವೂ ಸಿದ್ಧಿಸಿಬಿಟ್ಟಿದೆ!

***

ಸಮಯ ಪರಿಪಾಲನೆ ಅನ್ನೋದು ಒಂದು ರೀತಿಯ ರೋಗವಿದ್ದ ಹಾಗೆ, ಆ ರೋಗಕ್ಕೆ ಗುರಿಯಾದವರನ್ನು ಸಮಾಧಾನ ಮಾಡುವುದು ಬಹಳ ಕಷ್ಟ. ಆನ್ ಟೈಮ್ ಮೆಂಟಾಲಿಟಿ ಹೋಗಿ ವೆನ್‌ಎವರ್ ಟೈಮ್ ಮೆಂಟಾಲಿಟಿ ಬಂದರೆ ಅದರಂತ ಸ್ವರ್ಗ ಸುಖ ಇನ್ನೊಂದಿಲ್ಲ - ಈ ಪ್ರಪಂಚದಲ್ಲಿ ಎಷ್ಟೋ ಜನ ಕೇರ್ ಮಾಡದ ಸಮಯಕ್ಕೆ ನಾನಾದರೂ ಏಕೆ ತಲೆ ಕೆಡಿಸಿಕೊಳ್ಳಬೇಕು? ಎಷ್ಟೊಂದು ವರ್ಷ ಡಾಟ್ ಮೇಲೆ ಬದುಕಿದ್ದೇನೆ ಎಂದು ಯಾರೂ ಏನು ಸನ್ಮಾನವನ್ನು ಮಾಡೋದಿಲ್ಲವಲ್ಲ.

ಸಮಯ ಪರಿಪಾಲನೆಯನ್ನು ಮಾಡಲು ಹೆಣಗಬೇಕಾದವನು ನಾನೊಬ್ಬನೇ, ಆದರೆ ನನ್ನ ವ್ರತವನ್ನು ಹಾಳು ಮಾಡಲು ಹಲವಾರು ತಂತ್ರ, ಪ್ರತಿ ತಂತ್ರಗಳು ಯಾವಾಗಲೂ ಕಾರ್ಯರೂಪಿಯಾಗಿರೋದರಿಂದ ಹೆಚ್ಚಿನ ಪಾಲು ಸೋಲು ನನ್ನದೇ ಆಗುತ್ತಿತ್ತು, ನನ್ನ ಎದುರಾಳಿಗಳ ಜೊತೆಯಲ್ಲಿ ರಾಜಿ ಮಾಡಿಕೊಂಡಿದ್ದರಿಂದ ಮೇಲ್ನೋಟಕ್ಕೆ ಬದುಕೇನೋ ಸುಗಮವೆನಿಸಿದಂತೆ ಕಂಡುಬಂದರೂ ರಾಜಿ ಮಾಡಿಕೊಂಡ ಫಲದ ಪರಿಣಾಮವಾಗಿ ಸಮಸ್ಯೆ ಇನ್ನೂ ಸಮಸ್ಯೆಯಾಗೇ ಉಳಿದಿದೆ!

No comments: