Monday, June 05, 2006

ಎರಡು ಸೈಟಿನ ಗೋಳು

ಬೆಂಗಳೂರಿನಲ್ಲಿ ಕಷ್ಟಾ ಪಟ್ಟು ತೆಗೆದುಕೊಂಡ ಸೈಟನ್ನು ನಾನು ಇನ್ನೂ ರಿಜಿಸ್ಟ್ರೇಷನ್ ಮಾಡ್ಸಿಲ್ಲ, ಅಲ್ಲಿಗೆ ರಜೆಗೆ ಹೋದಾಗ ಮಾಡಿಸೋಣ ಎಂದುಕೊಂಡು ಇಷ್ಟು ದಿನ ತಳ್ಳಿದ್ದಾಯ್ತು, ಆದ್ರೆ ಇತ್ತಿಚಿಗಂತೂ ನಮ್ಮನೆಯವರು 'ರಿಜಿಸ್ಟ್ರೇಷನ್ ಮಾಡಿಸ್ದೇ ಹಾಗೇ ಬಿಟ್ರೆ ಆ ಸೈಟು ಹೋದ ಹಾಗೆಯೇ!' ಎಂದು ಹೆದರಿಸತೊಡಗಿದ ಮೇಲೆ ದಿಗಿಲು ಇನ್ನೂ ಹೆಚ್ಚಾಗಿದೆ. ಒಂದೇ ಯಾರಿಗಾದ್ರೂ ಪವರ್ ಆಫ್ ಆಟಾರ್ನಿ ಕೊಟ್ಟು ಅವರ ಹೆಸರಿಗೆ ಮಾಡಿಸಿ ಆಮೇಲೆ ನನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು, ಇಲ್ಲಾ ಅಲ್ಲಿಗೆ ಹೋದಮೇಲೆ ನೋಡೋಣವೆಂದು ಸುಮ್ಮನಿರಬೇಕು, ಅಲ್ಲಿಯವರೆಗೆ ಮತ್ತು ಅದರ ನಂತರ ರಿಸ್ಕ್‌ಗಳು ಎಷ್ಟು ದೊಡ್ಡದಾದರೂ ಬರಬಹುದು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಟುಗಳಿಗೆ ಸಂಬಂಧಿಸಿದಂತೆ ನಡೆದ ಇನ್ನೂ ಎರಡು ಘಟನೆಗಳನ್ನು ಹೇಳಿಬಿಟ್ಟರ್‍ಏನೇ ನನಗೊಂದು ಸಮಾಧಾನ. ಮೊದಲನೆಯದಾಗಿ ನನ್ನ ಸಂಬಂಧಿಕರೊಬ್ಬರು ೧೯೮೫ ರಲ್ಲಿ ಅವರ ಕೋ ಆಪರೇಟಿವ್ ಸೊಸೈಟಿ ಮೂಲಕ ಅವರ ಆಫೀಸಿನಲ್ಲಿ ತುಂಬಾ ಜನ ಸೇರಿ ಹಲವಾರು ಸೈಟುಗಳನ್ನು ಖರೀದಿಸಿದ್ದರು. ಖರೀದಿಸಿ, ರಿಜಿಸ್ಟರೇಷನ್ ಆಗಿದ್ದರೂ ಸ್ವಲ್ಪ ದಿನಗಳಲ್ಲಿ ಆಗ ಊರಿನ ಹೊರವಲಯದಲ್ಲಿದ್ದ ಆ ಸೈಟುಗಳಲ್ಲಿ ಒಂದು ಜಾತಿಯ ಜನರು ಬಂದು ಗುಡಿಸಲನ್ನೆಬ್ಬಿಸಿದರು. ಆಗಲೇ ಕಾನೂನಿನೆ ವಿರುದ್ಧವಾಗಿ ಆಕ್ರಮಿಸಿಕೊಂಡಿದ್ದ ಸೈಟುಗಳನ್ನು ತೆರವುಗೊಳಿಸಲು ಸೊಸೈಟಿ ಹಾಗೂ ಅದರ ನೌಕರರು ಕಾನೂನಿನ ಮೊರೆಗೆ ಹೋಗಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ. ಆದರೆ ಕಳೆದ ತಿಂಗಳು, ಅಂದರೆ ಸುಮಾರು ೧೫ ವರ್ಷಗಳ ನಂತರ 'ನ್ಯಾಯ' ತೀರ್ಮಾನವಾಗಿ ಕೋರ್ಟು ಆಕ್ರಮವಾಗಿ ಜಾಗಕ್ಕೆ ನುಗ್ಗಿ ಗುಡಿಸಲು ಕಟ್ಟಿಕೊಂಡವರ ಪರವಾಗಿ ತೀರ್ಪು ನೀಡಿದೆಯಂತೆ. ಇದರಿಂದಾಗಿ ತುಂಬಾ ನೋವಿನಲ್ಲಿದ್ದ ನನ್ನ ಸಂಬಂಧಿಕರು ಇಷ್ಟು ವರ್ಷ ಕಾದಿದ್ದಕ್ಕೆ ಅಸಲೂ ಇಲ್ಲ, ಬಡ್ಡಿಯೂ ಇಲ್ಲ, ನಮ್ಮ ಹಣವೂ ಹೋಯಿತು ಹಾಗೂ ಸುಮ್ಮನೇ ಕಾಲಹರಣವಾಯಿತು ಎಂದು ನನ್ನಲ್ಲಿ ಗೋಳುತೋಡಿಕೊಂಡರು.

ಎರಡನೆಯದಾಗಿ, ನನ್ನ ಸ್ನೇಹಿತರೊಬ್ಬರು, ಸುಮಾರು ೨೫ ವರ್ಷದ ಹಿಂದೆಯೇ ಅಮೇರಿಕೆಗೆ ಬಂದು ಇಲ್ಲಿಯೇ ನೆಲೆಸಿದವರು, ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ೬೦ ಬೈ ೪೦ ವಿಸ್ತೀರ್ಣದ ಒಂದು ಸೈಟನ್ನು ತೆಗೆದುಕೊಂಡಿದ್ದರಂತೆ. ಈಗ ನಿವೃತ್ತರಾಗಿರುವ ಅವರು ಮೊನ್ನೆ-ಮೊನ್ನೆ ಅದನ್ನು ಮಾರಿ ಬಂದ ಹಣದಿಂದ ಏನೇನನ್ನೋ ಮಾಡಬಹುದು ಎಂದು ಯೋಜನೆ ಹಾಕಿಕೊಂಡಿದ್ದವರಿಗೆ ಆಶ್ಚರ್ಯಕಾದಿತ್ತು. ಅವರು ಅಮೇರಿಕೆಯಲ್ಲಿರುವಾಗಲೇ ಅವರ ಹೆಸರಿನಲ್ಲಿ ರಿಜಿಸ್ಟರಾಗಿ, ಖಾತ್ರೆ ಪತ್ರಗಳಿದ್ದ ಸೈಟನ್ನು ಈಗಾಗಲೇ ಯಾರೋ ಬೇರೆಯವರಿಗೆ ಮಾರಿಬಿಟ್ಟಿದ್ದಾರಂತೆ! ಇವರು ಎಲ್ಲದರಲ್ಲೂ ನೇರವಾಗಿ, ನ್ಯಾಯವಾಗಿರುವ ತಮ್ಮ ದಾಖಲೆಗಳನ್ನು ತೋರಿಸಿ ಎಷ್ಟೇ ಹಣವನ್ನು ಖರ್ಚು ಮಾಡಿದರೂ, ಇವರ ವಿರುದ್ಧವಾಗಿ ಕೆಲಸಮಾಡುವ ಶಕ್ತಿಗಳು ನ್ಯಾಯಾಧೀಶರಿಗೆ ಲಂಚವನ್ನು ಕೊಟ್ಟು ಆದಷ್ಟು ದಿನ ಒಂದಲ್ಲ ಒಂದು ಕಾರಣದಿಂದ ಕೇಸನ್ನು ಮುಂದೆ ಹಾಕಿಸುತ್ತಲೇ ಇದ್ದಾರಂತೆ. ಇವತ್ತು ಮೂವತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಆ ಸೈಟನ್ನು ಹೇಗಾದರೂ ಮಾಡಿ ಪಡೆದುಕೊಂಡೇ ತೀರುವ ಸಂಚನ್ನು ಹೂಡಿದ್ದಾರಂತೆ.

ಇವರ ಮಾತನ್ನು ಕೇಳಿ ಪಿಚ್ಚೆನಿಸಿದಾಗ ನನ್ನ ಸ್ನೇಹಿತರು ತಮ್ಮ ಮಾತನ್ನು ಮುಂದುವರೆಸುತ್ತಾ 'ಇವರೆಲ್ಲಾ ಏನನ್ನು ಕಾಯುತ್ತಿದ್ದಾರೆ, ಗೊತ್ತೇ?' ಎಂದರು. ನಾನು ಸುಮ್ಮನಿದ್ದೆ. ಮತ್ತೆ ಅವರೇ 'ಹೀಗೇ ಕೇಸನ್ನು ಮುಂದುವರೆಸುತ್ತಾ ಇದ್ದರೆ, ಒಂದಲ್ಲ ಒಂದು ದಿನ ನಾನು ಗೊಟಕ್ ಅನ್ನುತ್ತೇನೆ, ಆಗ ನನ್ನ ಹೆಂಡತಿ ಮಕ್ಕಳು ಈ ಸೈಟಿನ ವಿಚಾರಕ್ಕೆ ಹೋಗುವುದಿಲ್ಲ, ಹಾಗಾದರೂ ಸಿಗಲಿ ಎಂದುಕೊಂಡಿದ್ದಾರೆ' ಎಂದರು. ಹಾಗೇ ಮುಂದುವರೆಸಿ 'ಅದೇ ಕೋರ್ಟಿನ ಆವರಣದಲ್ಲೇ, ಎಲ್ಲಾ ನ್ಯಾಯಾಧೀಶರ ಎದುರೇ ಕ್ಲರ್ಕುಗಳು ಲಂಚವನ್ನು ಕೇಳಿ ಪಡೆದು, ಅಲ್ಲೇ ಟೇಬಲ್ಲಿನ ಮೇಲಿರುವ ಗಲ್ಲಾ ಪೆಟ್ಟಿಗೆಯಲ್ಲಿ ಸಾಮಾನ್ಯ ವ್ಯವಹಾರವೇನೋ ಎನ್ನುವಂತೆ ದುಡ್ಡನ್ನು ಪಡೆದು ಜೋಡಿಸಿಡುವುದನ್ನು ನೋಡಿದರೆ, ಅಲ್ಲಿಯ ಯಾವುದೇ ನ್ಯಾಯಾನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದೇನೆ' ಎಂದರು. 'ಸರಿ, ಈಗೇನು ಮಾಡುತ್ತೀರಿ?' ಎಂದುದಕ್ಕೆ 'ಮತ್ತೇನಿಲ್ಲ, ಆಕ್ರಮವಾಗಿ ಈ ಸೈಟನ್ನು ಕಬಳಿಸಿಕೊಂಡಿರುವವನ ಹತ್ತಿರವೇ ಒಂದು ಡೀಲ್ ಕುದುರಿಸಿ, ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಆದಷ್ಟು ಬೇಗ ಹಿಂತಿರುಗಿ ಪಡೆಯುವುದೇ ಜಾಣತನ ಅನ್ನಿಸುತ್ತೆ' ಎಂದರು.

***

ಕಾಸ್ಮೋಪಾಲಿಟನ್ ವಾತಾವರಣದ ಬೆಂಗಳೂರಿನಲ್ಲಿ ನಾನು ಸೈಟು ತೆಗೆದುಕೊಳ್ಳುವಾಗಿನ ಸ್ಪರ್ಧೆಯಲ್ಲಿ ಕನ್ನಡಿಗರಿಗಿಂತ ಉಳಿದವರೇ ಹೆಚ್ಚು ಕಂಡುಬರುತ್ತಾರೆ. ನಿವೇಶನಗಳ ಅಭಾವದಲ್ಲಿ ಕೇಳಿದ ಹಣಕ್ಕೆ ತಕ್ಕಂತೆ ಒಂದೇ ಬಿಡಿಎ ಸೈಟೋ ಅಥವಾ ಖಾಸಗೀ ಸಹಕಾರ ಸಂಘಗಳ ಮೂಲಕವೋ ತೆಗೆದುಕೊಂಡರೂ ಹೆಚ್ಚು ಬೆಲೆಯನ್ನು ತೆರದೇ ಬೇರೆ ದಾರಿಯೇ ಇಲ್ಲ. ನನ್ನ ಅಮೇರಿಕನ್ ಡಾಲರ್‌ಗೇನೆ ಈ ಸ್ಥಿತಿ ಇದ್ದರೆ ಇನ್ನು ಅಲ್ಲಿಯೇ ದುಡಿದು, ಹಣ ಉಳಿಸಿ ಅದರಿಂದ ಇವೇ ಸೈಟುಗಳನ್ನು ಖರೀದಿಸುವವರ ಗತಿಯೇನು ಎಂದು ಹೆದರಿಕೆಯಾಗುತ್ತದೆ. ನಿವೇಶನವನ್ನು ತೆಗೆದುಕೊಳ್ಳುವುದು ಬರೀ ಅರ್ಧ ಕೆಲಸ, ಇನ್ನು ಅಲ್ಲಿ ಮನೆಯನ್ನು ಕಟ್ಟಿ ಇರಲು ವ್ಯವಸ್ಥೆ ಮಾಡಿಕೊಳ್ಳುವುದು ಎಂದರೆ ಸಾಕುಬೇಕಾಗಿ ಹೋಗುತ್ತದೆ. ಅಂತದ್ದರಲ್ಲಿ ಇದ್ದಬದ್ದ ದುಡ್ಡನ್ನೆಲ್ಲ ಸುರಿದು ನಿವೇಶನ ತೆಗೆದುಕೊಂಡವರು ಮೋಸ ಹೋಗದೇ ಇರಲು ಬಹಳ ಪರದಾಡಬೇಕಾಗುತ್ತದೆ. ಈ ಪರದಾಟ ನನ್ನಂತಹವರಿಗೆ ಅರ್ಥವಾಗೋದಿಲ್ಲ, ಜೀವನ ಪರ್ಯಂತ ದುಡಿದು, ಬಂದ ಪೆನ್ಷನ್ ಹಣದಲ್ಲಿ ಕೊಂಡ ಸೈಟನ್ನೋ ಅಥವಾ ಮಗಳ ಮದುವೆಯ ಖರ್ಚಿಗೆಂದು ಇಟ್ಟ ಸೈಟನ್ನು ಯಾರೋ ಅನ್ಯಾಯವಾಗಿ ಆಕ್ರಮಿಸಿಕೊಂಡಿದ್ದು ಗೊತ್ತಾದರೂ ಒಂದೇ ನ್ಯಾಯ ದೊರೆಯುವುದಿಲ್ಲ, ಹಾಗೆ ದೊರೆತರೂ ಸುಮಾರು ಹತ್ತು ವರ್ಷಗಳ ಮೇಲೆ ಆಗುತ್ತದೆ ಎನ್ನುವುದನ್ನು ನೆನೆಸಿಕೊಂಡಾಗೆಲ್ಲ ಮೈನಡುಗುತ್ತದೆ.

ಜೀವನದಲ್ಲಿ ನೆಟ್ಟಗೆ ಬದುಕಬೇಕು ಎನ್ನುವುದೇ ದೊಡ್ಡ ಹೋರಾಟ, ಅದರ ಜೊತೆಯಲ್ಲಿ ದುರ್ಮಾರ್ಗಿಗಳ ಹಾವಳಿಯಿಂದ ತಪ್ಪಿಸಿಕೊಂಡು ನಿಶ್ಚಿಂತವಾಗಿರೋದಕ್ಕೆ ಸಾಧ್ಯವೇ ಇಲ್ಲ ಎನ್ನಿಸಿಬಿಟ್ಟಿದೆ. ಅದೆಷ್ಟೋ ಸಾವಿರ ವರ್ಷಗಳ ಪರಂಪರೆ ಇರುವ ನಮ್ಮಲ್ಲಿ ಇಷ್ಟೊಂದು ವರ್ಷಗಳಲ್ಲಿ ಜನರ ಮನಸ್ಥಿತಿ ವಿಕಾಸಗೊಂಡರೂ 'ಕೆಟ್ಟದಾಗಿ ಬದುಕುವ' ವಿಧಿ ವಿಧಾನಗಳಲ್ಲಿ ಹೆಚ್ಚು ಪ್ರಗತಿಯಾಗಿದೆಯೇ ವಿನಾ ಅವುಗಳನ್ನು ಎದುರಿಸಿ ಗೆಲ್ಲುವ ವ್ಯವಸ್ಥೆಯಲ್ಲಲ್ಲ. ಬೆಂಗಳೂರಿನ ನ್ಯಾಯಾಧೀಶರ ಮುಂದೆ ಅನ್ಯಾಯವಾಗಿ ಸೈಟನ್ನು ಆಕ್ರಮಿಸಿಕೊಂಡಿದ್ದಾರೆಂದು ಸಾವಿರ ಕೇಸುಗಳು ಸಾಲು ಕಟ್ಟಿ ಇರಲಿ, ಕೊನೇ ಪಕ್ಷ ದಿನಕ್ಕೆ ಎರಡು ಇಂತಹ ಕೇಸುಗಳಿಗೆ ಮುಕ್ತಿ ಸಿಕ್ಕು 'ನಿಜವಾದ' ನ್ಯಾಯ ಸಿಕ್ಕುವಂತಾಗಿದ್ದರೆ ಎಷ್ಟೋ ಚೆನ್ನಾಗಿತ್ತು.

***

ನಿಮ್ಮ ಯಾವುದೇ ನಿವೇಶನವನ್ನು ಆಕ್ರಮಿಸಿಕೊಳ್ಳುವುದು ಬಹಳ ಸುಲಭ, ಒಂದೇ ಅಲ್ಲಿ ಹಾಡು ಹಗಲೇ ಕಲ್ಲೊಂದನ್ನು ಪ್ರತಿಷ್ಟಾಪಿಸಿ ಪೂಜೆ ಮಾಡಿಸಿಬಿಡಬೇಕು, ಅಥವಾ ಸರ್ಕಾರದ ಪೋಷಣೆಯಲ್ಲಿರುವ ಯಾವುದೋ ಒಂದು ಗುಂಪಿನವರು ಬಂದು ರಾತ್ರೋ ರಾತ್ರಿ ವಕ್ಕರಿಸಿಬಿಡಬೇಕು, ಅಷ್ಟೇ. ಆದರೆ ಕೇವಲ ನಿಮಿಷಗಳಲ್ಲಿ ಆಗುವ ಈ ಆಕ್ರಮಣದ ಪ್ರಕ್ರಿಯೆಯನ್ನು ಎದುರಿಸಿ ನೀವು ವರ್ಷಗಟ್ಟಲೇ ಏಗಿದರೂ ಕೊನೆಗೆ ಜಯಸಿಗುವುದೇನೂ ಗ್ಯಾರಂಟಿಯಲ್ಲ, ಅಲ್ಲದೇ ಈ ತೀರ್ಪಿನ ಕೊನೆಯವರೆಗೂ ಫಲಾನುಭವಿಸುವ ಹಕ್ಕು ಆಕ್ರಮವಾಗಿ ಸೇರಿಕೊಂಡವರದ್ದೇ.

3 comments:

Dr U B Pavanaja said...

ಬೆಂಗಳೂರಿನ ಸೈಟು (ಅ)ವ್ಯವಹಾರಗಳ ಬಗ್ಗೆ ಚರ್ಚಿಸುವ ಒಂದು ವೇದಿಕೆ ಇದೆ. ಗೊತ್ತಾ?

-ಪವನಜ

ಅಸತ್ಯ ಅನ್ವೇಷಿ said...

Ref: ಅದೆಷ್ಟೋ ಸಾವಿರ ವರ್ಷಗಳ ಪರಂಪರೆ ಇರುವ ನಮ್ಮಲ್ಲಿ ಇಷ್ಟೊಂದು ವರ್ಷಗಳಲ್ಲಿ ಜನರ ಮನಸ್ಥಿತಿ ವಿಕಾಸಗೊಂಡರೂ 'ಕೆಟ್ಟದಾಗಿ ಬದುಕುವ' ವಿಧಿ ವಿಧಾನಗಳಲ್ಲಿ ಹೆಚ್ಚು ಪ್ರಗತಿಯಾಗಿದೆಯೇ ವಿನಾ ಅವುಗಳನ್ನು ಎದುರಿಸಿ ಗೆಲ್ಲುವ ವ್ಯವಸ್ಥೆಯಲ್ಲಲ್ಲ.

ಈ ಮಾತು ನೂರಕ್ಕೆ ನೂರು ಸತ್ಯ. ಆದ್ರೆ ಸಾವಿರ ವರ್ಷಗಳ ಪರಂಪರೆಯಲ್ಲಿ ಜನರ ಮನಸ್ಥಿತಿ ವಿಕಾಸವಾಗಲಿಲ್ಲ, ವಿಕಾರವಾಗಿದೆ ಅಂತ ತಿದ್ದಿಕೊಳ್ಳಬಹುದೇನೋ...!
ಇಲ್ಲವಾದಲ್ಲಿ, ನ್ಯಾಯಾಧೀಶರಿಗೇ ಲಂಚ ಕೊಡುವುದು, ನ್ಯಾಯ ನೀಡಬೇಕಾದವರು ಲಂಚ ತೆಗೆದುಕೊಳ್ಳುವುದು... ಇವೇನೂ ನಂಬಲಾಗದ ಸಂಗತಿ ಅಂತ ಅನಿಸುವುದೇ ಇಲ್ಲವೆಂಬಷ್ಟರ ಮಟ್ಟಿಗೆ ನಮ್ಮ ಸಮಾಜ "ಮುನ್ನಡೆ"ದಿದೆ.

ಶ್ರೀತ್ರಿ said...

ನೀವು ದುಸ್ಸಾಹಸಿಗಳೇ ಇರಬೇಕು. ಈ ಕೂಡಲೇ, ನಿಮಗೆ ಬೇಕಾದವರೊಬ್ಬರಿಗೆ GPA ಕೊಟ್ಟು ನೋಂದಣಿ ಮಾಡಿಸಿ. ಅದಕ್ಕೆ ಮೊದಲು ನಿಮ್ಮ ನಿವೇಶನದ ಮೇಲೆ ಬೇರಾರದೋ ಮನೆ ಇಲ್ಲ ಎಂದು ಖಾತರಿಪಡಿಸಿಕೊಳ್ಳಿ :-)