ನಮ್ಮೋರೂ ಫುಟ್ಬಾಲ್ ಆಡಿದ್ದಿದ್ರೆ...
ನಮ್ಮೋರೂ ಫುಟ್ಬಾಲ್ ಆಡಿದ್ದಿದ್ದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಇವತ್ತು ಅರ್ಜೆಂಟೀನಾ-ಮೆಕ್ಸಿಕೋ, ಜರ್ಮನಿ-ಸ್ವೀಡನ್ ಮ್ಯಾಚ್ ನೋಡಿದ್ ಮೇಲೆ ಬಲವಾಗಿ ಅನ್ಸೋಕೆ ಶುರುವಾಯ್ತು. ಕೆಲವು ತಿಂಗ್ಳ ಹಿಂದೆ ನನ್ನ ಸಹೋದ್ಯೋಗಿ ಒಬ್ರಿಗೆ ನಾವ್ ವಿಂಟರ್ ಓಲಂಪಿಕ್ಸ್ನಲ್ಲಿ ಏಕೆ ಭಾಗವಹಿಸೋದಿಲ್ಲ ಅಂತ ಹತ್ತಾರು ಕಾರಣಗಳನ್ನು ನೀಡಿದ್ದೆ, ಆದ್ರೆ ಇವತ್ತು ನಮ್ಮೋರು ಈ ವಿಶ್ವಕಪ್ ಫುಟ್ಬಾಲ್ ಲೀಗ್ನಲ್ಲಿ ಏಕೆ ಆಡ್ತಾ ಇಲ್ಲಾ ಅಂತ ಎಷ್ಟೊತ್ತು ಯೋಚ್ನೆ ಮಾಡಿದ್ರೂ ಅಪ್ಪಂತ ಕಾರ್ಣಾ ಏನೂ ಸಿಗ್ಲಿಲ್ಲ. ನಮ್ಮೋರಿಗೆಲ್ಲ ಕ್ರಿಕೇಟ್ ಅನ್ನೋದು ಒಂಥರಾ ಮಲೇರಿಯಾದ್ ಜ್ವರದ್ ಹಾಗೆ ಆಗಾಗ್ಗೆ ಬಿಟ್ಟ್ ಬರುತ್ತೆ, ಹೋಗುತ್ತೆ, ಎಂಥಾ ಬಿಸಿಲಲ್ಲೂ ಬೆನ್ ಹುರಿಯಲ್ಲಿ ಛಳಿ ಹುಟ್ಸುತ್ತೆ, ಆದ್ರೆ ವಿಶ್ವದ ತುಂಬೆಲ್ಲಾ ಬೇಕಾದಷ್ಟು ಜನ ಆಡಿ ಮಜಾ ಮಾಡೋ ಫುಟ್ಬಾಲ್ ಮಾತ್ರ ಆಡಲ್ಲ, ಆಡಿದ್ರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಯಾಕ್ ಬರಲ್ವೋ ಯಾರಿಗ್ ಗೊತ್ತು?
ಕಲ್ಕತ್ತಾದ ಮೋಹನ್ ಬಗಾನ್, ರೇಲ್ವೇ ಟೀಮು, ಇನ್ನೊಂದಿಷ್ಟು ಟೀಮ್ಗಳು ಫುಟ್ಬಾಲ್ ಹೆಸರ್ನಲ್ಲಿ ಆಗಾಗ್ಗೆ ಸುದ್ದಿ ಮಾಡ್ತಾನೇ ಇರ್ತಾವೆ, ನಮ್ಮ ಮೇಜರ್ ಲೀಗ್ ಫುಟ್ಬಾಲ್ ಅಂದ್ರೆ ಇವೇ ಒಂದಿಷ್ಟು ತಂಡಗಳು ಆಡೋ ಆಟ, ಅದು ಬಿಟ್ರೆ ನನ್ನ್ ನೆನಪಿಗಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಆಡಿದ್ದಂತೂ ಬರಲ್ಲ. ಹಾಕಿ ತಗೊಂಡ್ರೆ ಅದು ನಮ್ಮ ರಾಷ್ಟ್ರೀಯ ಆಟ, ಕೊನೇಪಕ್ಷಾ ಆ ಧ್ಯಾನ್ಚಂದ್ ಕಾಲ್ದಲ್ಲಾದ್ರೂ ನಾವು ಚೆನ್ನಾಗಿ ಆಡ್ತಿದ್ವಿ, ಧ್ಯಾನ್ಚಂದ್ ನಂತಾ ಮಾಂತ್ರಿಕರನ್ನು ವಿಶ್ವವೇ ಬೆರಗಾಗಿ ನೋಡ್ತಿತ್ತು, ನನಗೆ ನೆನಪಿರೋ ಹಾಗೆ ನಮ್ಮೋರು ಅಮೇರಿಕದ ಟೀಮನ್ನೂ ಯಾವ್ದೋ ಓಲಂಪಿಕ್ಸ್ನಲ್ಲಿ ಸೋಲ್ಸಿದ್ರು. ಹಂಗ್ ನೋಡಿದ್ರೆ, ರೀತಿ-ರಿವಾಜು, ವಿಧಿ-ವಿಧಾನಗಳಲ್ಲಿ ಹಾಕಿಗೆ ಹತ್ತಿರವಾಗಿ ಫುಟ್ಬಾಲ್ ಬರುತ್ತ್ಯೇ ವಿನಾ ಕ್ರಿಕೇಟ್ ಅಲ್ಲ, ಆದ್ರೂ ನಮ್ಮ್ ಹುಡುಗ್ರಿಗೆಲ್ಲ ಕ್ರಿಕೇಟ್ಟೇ ದೊಡ್ದು. ಇನ್ ಮುಂದಾದ್ರೂ ಫುಟ್ಬಾಲ್ ಮೇಲೆ ಗಮನ ಹರಿಸಿದ್ರೆ ಅಷ್ಟೇ ಸಾಕು. ಟ್ರಿನಿಡಾಡ್ ಟೊಬೇಗೋ ಅಂತ ಸಣ್ಣ ರಾಷ್ಟ್ರಗಳ ಪ್ರತಿನಿಧಿತ್ವ ಇದೆ, ಅಂತಾದ್ದರಲ್ಲಿ ಭಾರತದೋರೇ ಇಲ್ಲಾ ಅಂದ್ರೆ ಹೇಗೆ?
ನನ್ನ ಮೆಚ್ಚಿನ ಟೀಮಂತೂ ಬ್ರೆಜಿಲ್ನೋರಪ್ಪಾ, ಈ ದೇಶ ಆರ್ಥಿಕ ದೃಷ್ಟಿಯಿಂದ ಹೆಂಗಾದ್ರೂ ಇರ್ಲಿ, ಅವರಾಡೋ ವಾಲಿಬಾಲ್, ಫುಟ್ಬಾಲ್ ಆಟಾನ ನೋಡೋಕೆ ಎರಡು ಕಣ್ಣೂ ಸಾಲ್ದೂ. ದಕ್ಷಿಣ ಅಮೇರಿಕದಲ್ಲಿರೋ ಬೇಜಾನ್ ದೇಶಗಳು ಯಾವತ್ತಿಂದ್ಲೂ ಫುಟ್ಬಾಲ್ ಆಡ್ತಾವೆ, 'ಕೋಪ ಅಮೇರೀಕಾ' ಅಂತ್ಲೋ, ಇನ್ನ್ಯಾವ್ದೋ ಸ್ಪರ್ಧೇನಲ್ಲೋ ಆಗಾಗ್ಗೆ ಟಿವಿನಲ್ಲಿ ಬಿತ್ತರವಾಗೋ ಪಂದ್ಯಗಳ್ನ ನಾನೂ ನೋಡ್ತೀನಿ. ಒಂದ್ ರೀತೀಲಿ ನಾನು ಈ ಬ್ರೆಜಿಲ್ನೋರ್ನ ಎಷ್ಟು ಹಚ್ಚಿಕೊಂಡಿದೀನಿ ಅಂದ್ರೆ ನಾಳೆ ಯಾವತ್ತಾದ್ರು ನಮ್ಮೋರು ಆಡಿದ್ರೂ ನನಗೆ ಈ ಬ್ರೆಜಿಲ್ ಮೇಲೆ ವಿಶ್ವಾಸವೆಂದೂ ಕಡಿಮೆ ಆಗೋದಿಲ್ಲ - ಒಂಥರಾ ಫ್ಯಾನ್ ಫಾರ್ ಲೈಫ್ ಅನ್ನೋ ಹಾಗೆ. ನನಗೆ ಬೇರೆ ದೇಶದ್ ಆಟಗಾರ್ರ ಬಗ್ಗೆ ಪ್ರೀತಿ ಹುಟ್ಟೋದು ಇವತ್ತು ನಿನ್ನೇ ಮಾತಲ್ಲ - ಕ್ರಿಕೇಟ್ನಲ್ಲಿ ಇವತ್ತಿಗೂ ಬ್ರಯಾನ್ ಲಾರಾ ಆಟ ಅಂದ್ರೆ ನನಗೆ ಪಂಚಪ್ರಾಣ, ನನ್ನ ಮನಸ್ನಲ್ಲಿ ಗವಾಸ್ಕರ್, ತೆಂಡೂಲ್ಕರ್, ಡ್ರಾವಿಡ್ ಮೇಲೆ ಇರೋ ಪ್ರೀತಿ (ಅಥವಾ ಭಕ್ತಿ)ಗಿಂತ ಲಾರಾ ಅಂದ್ರೇನೇ ನನಗೆ ಹೆಚ್ಚು ಇಷ್ಟ, ಹಂಗಂತ ನಮ್ಮೋರು ಅಂದ್ರೆ ಕಡಿಮೆ ಅಂತಲ್ಲ, ಆದ್ರೂ ಈ ಲಾರಾನ ಮೇಲೆ ನನಗ್ಯಾಕೋ ಮೊದ್ಲಿಂದ್ಲೂ ಬಹಳ ವಿಶ್ವಾಸ, ಅವನ ಆಟ ನೋಡೋಕೇ ನನ್ನಲ್ಲಿ ಯಾವತ್ತಿದ್ರೂ ಟೈಮಿರುತ್ತೆ.
ಏನೋಪ್ಪ, ನಮ್ ದೇಶ್ದಲ್ಲಿ ದಿನವಿಡೀ ಕ್ರಿಕೇಟ್ ನೋಡೋದನ್ನ ಸ್ವಲ್ಪ ಕಡಿಮೆ ಮಾಡಿ ಈ ತೊಂಭತ್ತು ನಿಮಿಷದಲ್ಲಿ ಮುಗಿಯೋ ಆಟಾನ ಸ್ವಲ್ಪ ಅಸ್ಥೆಯಿಂದ ಕಲ್ತಿದ್ರೆ ಎಷ್ಟೋ ಚೆನ್ನಾಗಿತ್ತು. ನಮ್ಮಲ್ಲಿ ಎಷ್ಟೋ ಜನ ಪ್ರತಿಭಾನ್ವಿತರಿದ್ದಾರೆ, ಅವರಿಗೆಲ್ಲ ಒಂದು ಸರಿಯಾದ ಕೋಚ್ ಸಿಕ್ಕು ಅವರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ರೆ ಎಷ್ಟೋ ಚೆನ್ನಾಗಿತ್ತು. ಈಗ್ಲೂ ಏನ್ ತಡಾ ಆಗಿಲ್ಲ, ಇದು ಹೋದ್ರೆ ಹೋಗ್ಲಿ ಮುಂದಿನ ವಿಶ್ವಕಪ್ ಹೊತ್ತಿಗಾದ್ರೂ ನಮ್ಮವ್ರು ಅರ್ಹತೆ ಮಟ್ಟಕ್ಕಾದ್ರೂ ಬಂದ್ರೂ ಪರವಾಗಿಲ್ಲ, ಲೀಗಿನ ಎಲ್ಲಾ ಮ್ಯಾಚ್ಗಳನ್ನು ಸೋತ್ರೂ ಅಡ್ಡಿ ಇಲ್ಲ, ಇವತ್ತಲ್ಲ ನಾಳೆ ಈ ವಿಶ್ವಕಪ್ಪನ್ನ ಗೆದ್ದೇ ಗೆಲ್ತಾರೆ ಅನ್ನೋ ಆಶಾಭಾವನೆಯಿಂದಾದ್ರೂ ಆಟ ನೋಡ್ತೀನಿ.
ಅಬ್ಬಾ, ಇವತ್ತು ಆಟಾ ನೋಡ್ತಾ-ನೋಡ್ತಾ ಅದೇನ್ ಚೆನ್ನಾಗ್ ಆಡ್ತಾರಪ್ಪಾ ಅನ್ನಿಸ್ತು. ಕೊನೇ ಕ್ಷಣದಲ್ಲಿ ಮಾಡೋ ನಿರ್ಧಾರದ ಮೇಲೆ ಒಬ್ಬರಿಂದ ಇನ್ನೊಬ್ರಿಗೆ ಪಾಸ್ ಕೊಟ್ಟು, ಚೆಂಡನ್ನ ಒಳ್ಳೇ ಮಂತ್ರಿಸಿಟ್ಟ ಹಾಗೆ ಗೋಲಿನ ಕಟಕಟೆ ಒಳಗೆ ತಳ್ಳೋದು ಅಂದ್ರೇನು ಹುಡುಗಾಟಾನಾ? ಈ ಆಟಗಾರ್ರು ಓಡಿದ್ ದೂರಾನೆಲ್ಲ ಆಳತೆ ಮಾಡಿ ಉದ್ದುಕೆ ಸೇರ್ಸಿದ್ದ್ರೆ ಒಂದ್ ಸಲ ಭೂಮಿ ಸುತ್ತಿ ಬರಬಹುದೇನೋ ಅನ್ಸುತ್ತೆ - ಆ ಪಾಟಿ ಓಡಾಟ. ಅಲ್ದೇ ಅದೇನು ಜನಗಳು, ಕೆಲವಂದ್ ಸರ್ತಿ ಸ್ಟೇಡಿಯಮ್ ಭರ್ತಿ - ಈಗಿನ್ನು ತಂಡಗಳು ಕ್ವಾರ್ಟಲ್ ಫೈನಲ್ ಹಂತಕ್ಕೆ ಬರ್ತಾ ಇವೆ, ಇನ್ನು ಮುಂದೆ ಬಹಳ ಮಜಾ ಇರುತ್ತೆ. ಕೊನೆಗೆ ಕಪ್ಪನ್ನ ಯಾರಾದ್ರೂ ಗೆಲ್ಲಿ, ಸಡನ್ ಡೆತ್ನಲ್ಲಿ ಗೆಲ್ದೇ ಇದ್ರೆ ಸಾಕು, ಹಿಂದೆ ಒಂದ್ಸಲ ಹೀಗೇ ಆಗೀ ಯಾರೋ ಗೆದ್ದಾಗ ಒಂಥರಾ ಉಪ್ಪಿರದ ಸಾರಿನಲ್ಲಿ ಊಟ ಮಾಡಿದ ಹಾಗಿತ್ತು.
ನಮ್ಮೋರೇನಾದ್ರೂ ಈ ಆಟಾನ ಆಡ್ತಾರೆ ಅಂದ್ರೆ ನನ್ನ್ ಹೃದಯದಲ್ಲಿ ಅರ್ಧದಷ್ಟು ಜಾಗ ಬಿಟ್ಕೊಡ್ತೀನಿ, ಕ್ರಿಕೇಟ್ನಲ್ಲಿರೋ ಹಾಗೆ ಪೇಪರ್ ಹುಲಿಗಳಾಗ್ದೇ ಒಂದಿಷ್ಟು ನಿಜವಾದ ಆಟಾನಾ ಆಡ್ಲಿ ಅಂತ ಯಾವತ್ತೂ ಕಾಯ್ತೀನಿ!
3 comments:
ನಮ್ಮ ದೇಶದಲ್ಲಿ ಆಟದಲ್ಲೂ ರಾಜಕೀಯ ಪ್ರವೇಶಿಸದೇ ಇದ್ದರೆ, ಯಾವ ದೇಶಕ್ಕೂ ನಾವೇನು ಕಡಿಮೆಯಲ್ಲ ಎಂಬುದನ್ನು ಸಾಬೀತುಪಡಿಸಬಹುದು. ಬೆಂಗಳೂರಿನ ಐಟಿಐ ಟೀಮು ಒಂದು ಕಾಲದಲ್ಲಿ ಬಹಳ ಅತ್ಯುತ್ತಮ ಆಟವನ್ನು ಆಡುತ್ತಿದ್ದರು. ಆ ಟೀಮಿನಲ್ಲಿದ್ದ ಮಣಿ ಎನ್ನುವವರೊಬ್ಬರು, ಐಟಿಐನಲ್ಲಿ ಸರಿಯಾದ ಪ್ರೋತ್ಸಾಹ ಸಿಗುವುದಿಲ್ಲವೆಂದು ಮೋಹನ್ ಬಗಾನ್ಗೆ ಆಡಲು ಹೋದರು. ಇದೇ ತರಹ ಕಿಟ್ಟು ದಂಪತಿಗಳೂ ಫುಟ್ಬಾಲ್ನಲ್ಲಿ ಹೆಸರು ಮಾಡಿದ್ದರು.
ಈಗ ಕ್ರಿಕೆಟ್ಗೆ ಕೊಡುತ್ತಿರುವಷ್ಟು ಮುತುವರ್ಜಿ, ಪ್ರೋತ್ಸಾಹವನ್ನು ಫುಟ್ಬಾಲಿಗೆ ಕೊಟ್ಟರೆ ನಿಜಕ್ಕೂ ಭಾರತದಿಂದ ಒಂದು ಉತ್ತಮ ತಂಡವನ್ನು ವಿಶ್ವಮಟ್ಟಕ್ಕೆ ಕಳುಹಿಸಬಹುದು.
ಬಹಳ ಒಳ್ಳೆಯ ಲೇಖನ ಬರೆದಿದ್ದೀರಿ. ಇದನ್ನು ಪತ್ರಿಕೆಯಲ್ಲೂ ಪ್ರಕಟಿಸಿದರೆ ಇನ್ನೂ ಹೆಚ್ಚಿನ ಜನಗಳ ಕಣ್ತಿರೆಸಿದಂತಾಗುವುದು.
ನಿಮ್ಮ ಎಲ್ಲ ಲೇಖನಗಳನ್ನೂ ನೋಡುತ್ತಿರುತ್ತೇನೆ. ಆದರೆ ಪ್ರತಿಕ್ರಿಯಿಸಿರಲಿಲ್ಲ. ಇದೂ ಒಂದು ತರಹ ಪ್ರೋತ್ಸಾಹ ನೀಡದೇ ಇರುವ ಬಗೆ ಅಲ್ಲವೇ? ಅದಕ್ಕಾಗಿ ಕ್ಷಮೆ ಇರಲಿ.
ಬೇಡಾ ಬೇಡಾ....
ಈಗಾಗಲೇ ಕ್ರಿಕೆಟ್ ಜ್ವರ ಹತ್ತಿಸಿಕೊಂಡು ನಾವೆಲ್ಲಾ ಹಾಳಾಗ್ತಿದೀವಿ ಅಂತ ಅನಿಸ್ತಿದೆ.
ನಾವು ನಮ್ಮೆಲ್ಲಾ ಸಮಯ, ಭಾರ, ಆಸೆ ಆಕಾಂಕ್ಷೆಗಳನ್ನು ಕ್ರೆಟ್ ತಂಡದ ಮೇಲಿಡೋದು, ಅವರು ಕೂಡ ಆಗಾಗ್ಗೆ ನಮ್ಮ ಆಸೆಯನ್ನು ಹೆಚ್ಚಿಸಿ ರುಚಿ ತೋರಿಸೋದು, ಕಡೆಗೆ ಫೈನಲಿನಲ್ಲಿ ಧಢಾರನೆ ಮಗುಚಿ ಬೀಳುವುದು, ಇದರಿಂದ ನಮ್ಮ ಮನಸ್ಸು, ಮೂಡ್ ಹಾಳಾಗೋದು.... ಈ ಸೈಕಲ್ ಸಾಗುತ್ತಾ ಇದೆ.
ಇನ್ನು ಫುಟ್ಬಾಲ್ ಜ್ವರ ಬಂದ್ರೆ ಟ್ರೀಟ್ಮೆಂಟಿಗೆ ಏನು ಮಾಡೋದು?
ಮಾವಿನಯನಸ ಅವರೇ,
ನನಗೆ ಫುಟ್ಬಾಲ್ ಹಿಡಿಸಲಿಕ್ಕೆ ಇನ್ನೂ ಒಂದು ಕಾರಣ ಅಂದ್ರೆ ಎಲ್ಲ ಆಟಗಾರ್ರೂ ಎಂಗೇಜ್ ಆಗಿ ಇರ್ತಾರೆ, ಅಂಪೈರ್ಗಳೂ ಸಹ!
ದಯವಿಟ್ಟು ಕ್ಷಮೆ ಬಗ್ಗೆ ಹೇಳ್ಬೇಡಿ, ನಾನು ಎಷ್ಟೋ ಸಾರಿ ಕೆಲವೊಂದನ್ನು ಓದೋದೇ ಇಲ್ಲ, ನೀವು ದಿನವೂ ಓದ್ತೀರಿ ಹಾಗೂ ಬರೀತಿರಿ, ನೀವು ನನಗಿಂತಲೂ ಆಕ್ಟೀವ್ ಆಗಿರೋದರಿಂದ 'ಸದಾ ನನ್ ಲೋಕದಲ್ಲಿ ಮುಳುಗಿರೋ' ನನ್ನನ್ನು ನೀವೇ ದೊಡ್ ಮನಸ್ ಮಾಡಿ ಕ್ಷಮಿಸಿ ಬಿಡಿ!
ಅನ್ವೇಷಿಗಳೇ,
ಬಿಲಿಯನ್ಗಟ್ಟಲೆ ಜನರಿರೋವಾಗ ಬೇರೆ-ಬೇರೆ ರೋಗದಿಂದಲೂ ಜನರು ಗ್ರಸ್ಥರಾಗ್ಲಿ ಬಿಡಿ, ಎಲ್ಲ ರೋಗಕ್ಕೂ ಮದ್ದು ಕೊಡ್ಲೇ ಬೇಕು ಏನಿಲ್ಲವಲ್ಲಾ!
Post a Comment