Tuesday, June 20, 2006

ಅದೆಲ್ಲೋ ಹುಟ್ಟಿದ ಆಂತರಿಕ ಹೋರಾಟ ಹಾಗೂ ಸ್ವರ್ಧೆ

ಯಾವುದೇ ಕೆಲಸವಿರಲಿ, ಚಟುವಟಿಕೆ ಇರಲಿ ಅದರಲ್ಲೆಲ್ಲ ನನಗೆ ಬಿಲ್ಟ್-ಇನ್ ಆಗಿ ಕಾಣೋದು ಸ್ಪರ್ಧಾ ಮನೋಭಾವವೇ ಎಂದು ಹೇಳಿದರೆ ತಪ್ಪೇನೂ ಇಲ್ಲ. ಮಾಡಿದ್ದನ್ನು ಸರಿಯಾಗಿ ಮಾಡಬೇಕು ಅನ್ನೋದಿರಲಿ ಅದನ್ನು ಸಮಯಕ್ಕೆ ತಕ್ಕಂತೆ ನಿರ್ವಹಿಸಬೇಕು ಅನ್ನೋದು ಕೂಡಾ ಸ್ಪರ್ಧೆಯಾಗೇ ಕಂಡು ಬಂದು ಹೆದರಿಕೆಯನ್ನು ಮೂಡಿಸುತ್ತದೆ. ಯಾವುದೇ ಸ್ಪರ್ಧೆಯಲ್ಲಿ ಕನಿಷ್ಟ ಇಬ್ಬರಾದರೂ ಇರಬೇಕಾದ್ದರಿಂದ ನನ್ನೊಳಗೆ ನಡೆಯುವ ವ್ಯಾಪಾರದಲ್ಲಿ ಆ 'ಮತ್ತೊಬ್ಬರು' ಯಾರು ಎಂದೂ ಗೊಂದಲವಾಗುತ್ತದೆ.

ಅದು ಒಂದು ಸರಳವಾದ ಪೂಲ್ ಟೇಬಲ್ಲಿನ ವ್ಯವಸ್ಥೆ ಇರಬಹುದು, ನಾನು ಮತ್ತೊಬ್ಬರ ಜೊತೆ ಆಡುತ್ತಿರಬಹುದು ಅಥವಾ ನಾನೇ ಎರಡೂ ಕಡೆಯ ಆಟವನ್ನು ಆಡುತ್ತಿರಬಹುದು - ಇಂತಹ ಒಂದು ಸರಳ ಸನ್ನಿವೇಶದಲ್ಲೂ ಎಷ್ಟೇ ನಿಧಾನವಾಗಿ ಆರಂಭವಾದ ಆಟದಲ್ಲೂ ಆಟ ಕೊನೆಯನ್ನು ತಲುಪುತ್ತಿದ್ದ ಹಾಗೆ ಒಬ್ಬನೇ ಆಡುತ್ತಿರುವ ಇಬ್ಬರ ಆಟದಲ್ಲಿ ಒಂದು ರೀತಿಯ ಸ್ಪರ್ಧೆ ಏರ್ಪಟ್ಟು ಕೊನೆಗೆ ಆ ಸ್ಪರ್ಧೆ ಹುಟ್ಟಿಸಿದ ಏರಿಳಿತಗಳಿಂದ ಹೊರಗಿರುವುದು ಕಷ್ಟವಾಗೇ ಕಂಡು ಬಂದಿದೆ. ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಆಡಿ ಮ್ಮನ್ನಣೆ ಪಡೆದ ನನ್ನ ಸಹಪಾಠಿ ಸುರೇಶ ಸಲಹೆ ನೀಡಿದ ಹಾಗೆ ನಾನು ಒಬ್ಬನೆ ಎಷ್ಟೋ ಸಲ ಚದುರಂಗವನ್ನು ಆಡಿಕೊಂಡಿದ್ದಿದೆ - ಬಿಳಿ, ಕಪ್ಪು ಕಾಯಿಗಳಲ್ಲಿ ಯಾವುದರಿಂದ, ಎಲ್ಲೇ ಆರಂಭಿಸಿದರೂ, ಸುರೇಶ ಹೇಳಿಕೊಟ್ಟ ಅದ್ಯಾವುದೋ ಸಿಸಿಲಿಯನ್, ಕ್ವೀನ್ಸ್ ತರ್ಕಗಳನ್ನು ಇಂಡಿಪೆಂಡಾಂಟಾಗಿ ಬಳಸಿಕೊಂಡರೂ ಮೊದಮೊದಲು ಸಹಜವಾಗಿ ರೂಪಗೊಳ್ಳುತ್ತಿದ್ದ ಆಟ, ಮಧ್ಯದ ಹಂತ ತಲುಪಿದಾಗ ಒಂದು ರೀತಿಯ ಸ್ಪರ್ಧೆಯಾಗಿ ಬದಲಾಗುತ್ತಿತ್ತು - ಇದನ್ನು ಆಂತರಿಕ ಸ್ಪರ್ಧೆಯೆಂದೇ ಹೇಳಬೇಕು. ಇಬ್ಬರ ಮಧ್ಯೆ ಹುಟ್ಟಬಹುದಾದ ಸಹಜ ಸ್ಪರ್ಧಾ ಮನೋಭಾವ ಅಷ್ಟೇ ತೀವ್ರವಾಗಿ ಒಬ್ಬನಲ್ಲೇ ಏರ್ಪಟ್ಟಿರೋದು ನನಗೆ ವಿಶೇಷವಾಗಿ ಕಂಡುಬಂದಿದೆ. ಈ ರೀತಿ ಹುಟ್ಟಬಹುದಾದ ಅತಿಯಾದ ಸ್ಪರ್ಧೆಯೇ ನನ್ನನ್ನು ಎಷ್ಟೋ ಬಾರಿ ಅಲ್ಲಲ್ಲಿ ಭಾಗವಹಿಸದಂತೆಯೂ ಮಾಡಿದೆ. ಎಷ್ಟೋ ಸಾರಿ ಇಲ್ಲಿ ಬ್ರಯಂಟ್ ಪಾರ್ಕಿನಲ್ಲಿ ಮಧ್ಯಾಹ್ನದ ಬಿಡುವಿನಲ್ಲಿ ತುಂಬಾ ಜನ ಚೆಸ್ ಆಡುವುದನ್ನು ನೋಡಿದ್ದೇನೆ, ಬೇರೆಯವರು ಆಡುವುದನ್ನು ಮೌನವಾಗಿ ನೋಡಿಬಂದಿದ್ದೇನೆಯೇ ವಿನಾ ಎಲ್ಲೂ ಯಾರ ಜೊತೆಗೂ ಆಡಿಲ್ಲ - ಆಡುವುದು ಸುಲಭ, ಅದು ಹುಟ್ಟಿಸಬಹುದಾದ ಸ್ಪರ್ಧೆ, ಅದರ ಪರಿಣಾಮಗಳು ವಿಪರೀತವಾದ್ದರಿಂದ 'ನಯವಾಗಿ' ನಿರಾಕರಿಸಿದ್ದೇನೆ ಎಂದು ಹೇಳಿಕೊಂಡರೂ, ಇಲ್ಲಿ ಎಲ್ಲವೂ ಲೈಟನಿಂಗ್ ಆಟವಾಗಿ - 'ಹಾಗೆ ಆಡಿದರೆ ನಿನ್ನ ಆಟ ಹಾಳಾಗುತ್ತದೆ' - ಎಂದು ಸುರೇಶ ನೀಡಿದ ಎಚ್ಚರಿಕೆಯ ಮಾತುಗಳು ನೆನಪಾಗುವುದೂ ನನ್ನನ್ನೂ ಇಂತಹ ಆಟಗಳಿಂದ ದೂರವಿರಿಸಿದೆ ಎಂದರೆ ತಪ್ಪಾಗಲಾರದು.

ಈ ಸ್ಪರ್ಧೆಯ ಒರಿಜಿನ್ ಎಲ್ಲಿದೆಯೋ ಯಾರಿಗೆ ಗೊತ್ತು, ಆದರೂ ನಮ್ಮ ಶಾಲೆಗಳಲ್ಲಿ, ನಮ್ಮ ವಠಾರಗಳಲ್ಲಿ ಕೆಲವೊಮ್ಮೆ ವಿಪರೀತ ಎನ್ನುವಂತೆ ಕಾಣುವ ತುಲನೆ ಇವೆಲ್ಲದರ ಮೂಲದಲ್ಲಿ ಕಂಡುಬರುತ್ತೆ. 'ನೋಡು, ಅವನು ಎಷ್ಟು ಚೆನ್ನಾಗಿ ಆಡ್ತಾನೆ', 'ಅವರ ಮಗ ಶಾಲೆಗೇ ಫಸ್ಟಂತೆ', 'ಇದ್ದರೆ ಅವನ ಹಾಗಿರಬೇಕು...' ಮುಂತಾದ ಹೇಳಿಕೆಗಳು ಒಂದು ತುಲನೆಯ ವಾತಾವರಣವನ್ನು ಸೃಷ್ಟಿಸಿ, ಒಂದು ಕಡೆಯಲ್ಲಿ 'ಬಹಳ' ಚೆನ್ನಾಗಿರೋದನ್ನೂ ಹಾಗೂ ಮತ್ತೊಂದು ಕಡೆಯಲ್ಲಿ 'ಸಾಧಾರಣ'ವಾಗಿರೋದನ್ನೂ ಒಂದೇ ತಕ್ಕಡಿಯಲ್ಲಿ ತೂಕ ಮಾಡುವ ವ್ಯವಸ್ಥೆಯನ್ನು ಹುಟ್ಟಿಹಾಕುತ್ತವೆ. ಈ ತುಲನೆಯ ಶಾಪದಿಂದ ಹೊರಬರುವುದಕ್ಕೆ ಇರೋದು ಒಂದೇ ದಾರಿ - ಆ 'ಬಹಳ' ಚೆನ್ನಾಗಿರೋದನ್ನು 'ಸಾಧಾರಣ'ವಾಗಿರೋದು ಮೀರಬೇಕು, ಅದಿಲ್ಲವೆಂದಾದರೆ ಈ 'ಸಾಧಾರಣ'ವಾದದ್ದು 'ಏನೂ ಪ್ರಯೋಜನವಿಲ್ಲ', 'ಎಲ್ಲಾ ದಂಡ', 'ಇದ್ದರೆ ಹಾಗಿರಬೇಕಪ್ಪ!' ಎಂಬೆಲ್ಲ ಹೇಳಿಕೆಗಳನ್ನು ಪರಾಕುಗಳಾಗಿ ಸ್ವೀಕರಿಸಬೇಕಾಗಿಬರುತ್ತದೆ. ಆದರೆ ಇವೆಲ್ಲವೂ ಸೃಷ್ಟಿಸಿದ ಸ್ಪರ್ಧಾ ಮನೋಭಾವ ಒಂದು ರೀತಿಯ ಉತ್ತೇಜನವನ್ನು ಬೆಳೆಸದೇ ಈ ವ್ಯವಸ್ಥೆಯ ಬಗ್ಗೆ ರೋಸಿ ಹೋಗುವಂತೆ ಮಾಡಿ 'ಸಾಧಾರಣ'ವಾದದ್ದೂ 'ಇನ್ನೂ ಕಡಿಮೆ' ಫಲಿತಾಂಶವನ್ನು ಪಡೆಯುವಂತೆ ಮಾಡುತ್ತದೆ.

ನಮ್ಮಲ್ಲಿ ಎಷ್ಟು ಜನ ತಂದೆ-ತಾಯಿಯರಿಗೆ ತಮ್ಮ ಮಕ್ಕಳು ತರಗತಿಯಲ್ಲಿ (ಯಾವಾಗಲೂ) ಮೊದಲನೆಯವರಾಗಿರೋದಿಲ್ಲ, ಏಕೆ ಎಂಬ ಪರಿಜ್ಞಾನವಿದೆ? ತಮ್ಮ ಮಕ್ಕಳ ಸಾಮರ್ಥ್ಯ, ಅವರ ಪ್ರತಿಭೆಗಳನ್ನು ಚೆನ್ನಾಗಿ ತಿಳಿದ ಪೋಷಕರಿಂದ ಮಕ್ಕಳು ತಮಗೆ 'ಬೇಕಾದ್ದನ್ನು' ಓದಿ ಅನುಸರಿಸಿ ಮುಂದೆ ಬಂದರೆ ಅದರಿಂದ ಎಷ್ಟೋ ಅನುಕೂಲವಾಗುತ್ತದೆಯೇ ವಿನಾ ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ನಿರೀಕ್ಷೆ ಇದೆಯಲ್ಲ ಅದಂತೂ ನನ್ನ ದೃಷ್ಟಿಯಲ್ಲಿ ಭಯಂಕರವಾದ ಸ್ಪರ್ಧೆಯನ್ನು ಹುಟ್ಟಿಹಾಕುತ್ತದೆ - ಈಗೆಲ್ಲ ಹೇಗೋ ಗೊತ್ತಿಲ್ಲ, ನಾನು ಓದುವ ಹೊತ್ತಿಗಂತೂ 'ಇಂಜಿನಿಯರ್ ಅಥವಾ ಡಾಕ್ಟರ್ ಆಗದಿದ್ದರೆ ಏನು ಪ್ರಯೋಜನ?' ಎನ್ನುವ ಮಾತುಗಳನ್ನು ಧಾರಾಳವಾಗಿ ಕೇಳುತ್ತಿದ್ದೆ, 'ಪ್ರತಿಭೆಗೆ ತಕ್ಕ ಫಲ'ವನ್ನು ಅನುಭೋಗಿಸೋದಂತು ಖಂಡಿತವಾಗಿ ಇರಲಿಲ್ಲ. ಈಗ ಬದಲಾಗಿರಬಹುದು ಎಂದುಕೊಂಡಿದ್ದೇನೆ.

ಪ್ರಪಂಚದಲ್ಲಿರೋರೆಲ್ಲ ಐ.ಎ.ಎಸ್. ಆಫೀಸರುಗಳೇ ಆದರೆ ಅವರ ಚಪ್ಪಲಿಯನ್ನು ಹೊಲಿಯುವವರು ಯಾರು? ಬರೀ ಐ.ಎ.ಎಸ್. ಆಫೀಸರುಗಳೇ ಇರೋ ಊರಿನಲ್ಲಿ ಕಣ್ಣೀರೇ ಇರೋದಿಲ್ವೇ? ಮುಂತಾದ ಪ್ರಶ್ನೆಗಳನ್ನು ಕೇಳಿಕೊಂಡಾಗ ಅವರವರ ಪ್ರತಿಭೆ ಅವರವರಿಗೆ ವಿಶೇಷವಾದದ್ದು, ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಗುರುತಿಸಿಕೊಂಡು ಅದನ್ನು ಬದುಕಿನ ಒಂದು ಅಂಗವನ್ನಾಗಿ ಮಾಡಿಕೊಂಡರೆ ಅಂಥದ್ದರಲ್ಲಿ ಹೆಚ್ಚು ಸ್ವಾರಸ್ಯವಿರುತ್ತೆ, ಮಾಡೋ ಕೆಲಸಗಳಲ್ಲಿ ಒಂದು ಅಸ್ಥೆ ಇರುತ್ತೆ ಅಥವಾ ಕೊನೇ ಪಕ್ಷ ಮುಂದೆ ಅದರಲ್ಲೊಂದು ಸ್ಪರ್ಧೆ ಹುಟ್ಟಿದರೂ ಅದು ವಿಶೇಷವಾಗಿರುತ್ತೆ ಅಂದುಕೊಂಡಿದ್ದೇನೆ.

No comments: