Wednesday, June 14, 2006

ಕಡಿಮೆ ಜನರು ಬಳಸುವ ಹೆಚ್ಚಿನ ಸಂಪನ್ಮೂಲಗಳು

ಆಫೀಸಿನಲ್ಲಿ ನಾನು ಕೂರುವಲ್ಲಿಂದ ಸುಮಾರು ಹತ್ತು ಅಡಿ ದೂರದಲ್ಲಿ ಮೈಕಲ್ ಕುಳಿತುಕೊಳ್ಳುತ್ತಾನೆ, ಆತ ಪ್ರತಿದಿನವೂ ಆಫೀಸಿಗೆ ಬಂದ ಕೂಡಲೇ ತನ್ನ ಮೇಜಿನ ಮೇಲಿರುವ ಎರಡು ಟ್ಯೂಬ್‌ಲೈಟುಗಳನ್ನು ಹೊತ್ತಿಸುತ್ತಾನೆ, ಹಾಗೆಯೇ ಪ್ರತಿದಿನವೂ ಮನೆಗೆ ತೆರಳುವಾಗ ಅವುಗಳನ್ನು ಆರಿಸಿ ಹೋಗುತ್ತಾನೆ. ನನ್ನ ಮೇಜಿನ ಮೇಲೂ ಈ ರೀತಿಯದ್ದೇ ಆದ ಎರಡು ಟ್ಯೂಬ್‌ಲೈಟ್‌ಗಳಿದ್ದರೂ ನನಗೆ ಅವುಗಳನ್ನು ಹೊತ್ತಿಸಬೇಕು ಎನ್ನುವ ಅವಶ್ಯಕತೆ ಅಥವಾ ಅಗತ್ಯ ಬಂದಿಲ್ಲವೆನ್ನುವುದಕ್ಕಿಂತಲೂ ಹಾಗೆ ಹೊತ್ತಿಸುವ ಮನಸ್ಸಿಲ್ಲವೆಂದೇ ಹೇಳಬೇಕು. ನನ್ನ ಪ್ರಕಾರ ಸೀಲಿಂಗ್‌ನಲ್ಲಿ ತೊಡಗಿಸಿರುವ ಅನೇಕ ಲೈಟುಗಳ ಬೆಳಕೇ ಬೇಕಾದಷ್ಟಿರುವಾಗ ಇನ್ನೂ ಹೆಚ್ಚಿನ ಬೆಳಕೇಕೆ ಎಂದು ನಾನು ಅಲ್ಲಿ ಇರುವ ಬೇಕಾದಷ್ಟು ಬೆಳಕಿಗೆ ಹೊಂದಿಕೊಂಡಿದ್ದೇನೆ. ಇದೇ ರೀತಿ ನಾವಿರುವ ವಠಾರದಲ್ಲಿ ಹೆಚ್ಚೂ-ಕಡಿಮೆ ಎಲ್ಲ ಮನೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ದೀಪಗಳು ಉರಿಯುತ್ತಿರುವಂತೆ ಕಂಡು ಬಂದರೂ ಕೆಲವೊಂದು ಮನೆಗಳಲ್ಲಿ ಎಷ್ಟೋ ಸಾರಿ ದೀಪಗಳನ್ನು ದಿನಗಟ್ಟಲೇ ಆರಿಸದೇ ಇರುವುದನ್ನೂ ನೋಡಿದ್ದೇನೆ.

ನನ್ನ ಹಾಗೆ ಹೆಚ್ಚಿನ ಭಾರತೀಯರು ನಂಬಿಕೊಂಡಿರುವ ಹಾಗೂ ಆಚರಿಸುವ ಹಾಗೆ ನಾವು ಎಷ್ಟು ಬೇಕೋ ಅಷ್ಟು ಸಂಪನ್ಮೂಲವನ್ನು ಮಾತ್ರ ಬಳಸುವುದನ್ನು ರೂಢಿಸಿಕೊಂಡಿದ್ದೇವೆ, ಆದರೆ ಈ ದೇಶದ ನನ್ನ ಸಹೋದ್ಯೋಗಿಗಳಲ್ಲಿ ಕೆಲವರಿಗೆ ತಾವು ರೀಮುಗಟ್ಟಲೇ ಪೇಪರನ್ನು ತೆಗೆದು ಕಸದ ಬುಟ್ಟಿಗೆ ಸುರಿಯುವಾಗ, 'ನಮ್ಮದಲ್ಲದ' ಸಂಪನ್ಮೂಲಗಳನ್ನು ಧಾರಾಳವಾಗಿ ಬಳಸುವಾಗ 'ಅಯ್ಯೋ' ಅನ್ನಿಸುವುದೇ ಇಲ್ಲ. ಎಲ್ಲರೂ ಹೀಗಿರುತ್ತಾರೆ ಎಂದು ಜನರಲೈಸ್ ಮಾಡುವುದು ತಪ್ಪಾಗುತ್ತದೆ, ಆದರೆ ಇಲ್ಲಿಯವರಿಗೆ 'ಬಡತನದಲ್ಲಿ ಬದುಕುವುದು' ಹೇಗೆ ಅನ್ನೋದು ನಮಗೆ ಗೊತ್ತಿದ್ದಷ್ಟು ಚೆನ್ನಾಗಿ ಗೊತ್ತಿಲ್ಲ ಎಂದು ಹೇಳಿದರೆ ತಪ್ಪೇನೂ ಆಗಲಾರದು.

ನಾವು ಹಾಸ್ಟೆಲಿನಲ್ಲಿದ್ದುಕೊಂಡು ಓದುತ್ತಿರುವಾಗ ನಮ್ಮಲ್ಲಿ ಎರಡು ಬಣಗಳಾಗುತ್ತಿದ್ದವು - ಒಂದು ಬಣದವರು ನಾವು ಬಾಡಿಗೆ ಕಟ್ಟುವುದಿಲ್ಲವೇ ಎಷ್ಟು ಲೈಟ್ ಉರಿಸಿದರೆ ನಮಗೇನಂತೆ ಎಂದೂ, ಮತ್ತೊಂದು ಬಣದವರು ನಾವು ಬಾಡಿಗೆ ಕಟ್ಟಿದ ಮಾತ್ರಕ್ಕೆ ಅನಗತ್ಯವಾಗಿ ಏಕೆ ಲೈಟ್ ಉರಿಸಬೇಕು ಎಂದೂ ವಾದವಾಗುತ್ತಿತ್ತು. ನಾನು ಮೇಲಿನ ವಾದದಲ್ಲಿ ಎರಡನೇ ಬಣಕ್ಕೆ ಸೇರಿಕೊಳ್ಳುತ್ತಿದ್ದೆ. ಒಂದು ಯೂನಿಟ್ ಕರೆಂಟು ಉಳಿಸಿದರೆ ಎರಡು ಯೂನಿಟ್ ಕರೆಂಟನ್ನು ಉತ್ಪಾದಿಸಿದ ಹಾಗೆ, ಒಂದು ಯೂನಿಟ್ ಕರೆಂಟು ಉತ್ಪಾದಿಸಲು ಸರ್ಕಾರಕ್ಕೆ ಎಷ್ಟೊಂದು ಹಣ ಖರ್ಚಾಗುತ್ತದೆ, ಇತ್ಯಾದಿ ಇತ್ಯಾದಿಯಾಗಿ ನಮ್ಮ ವಾದಗಳು ಹಬ್ಬಿಕೊಳ್ಳುತ್ತಿದ್ದವು. ಯಾವ ವಾದ ಹೇಗೆ ಹಬ್ಬಿದರೂ ನಾವು ಒಂದು ಕೋಣೆಯಲ್ಲಿದ್ದರೆ ಆ ಕೋಣೆಗೆ ಒಂದು ದೀಪಕ್ಕಿಂತ (ಬಲ್ಬ್) ಹೆಚ್ಚಿಗೆ ಇರುತ್ತಿರಲಿಲ್ಲ. ಅದೇ ಇಲ್ಲಿಗೆ ಬಂದ ಮೇಲೆ ಆಫೀಸಿನ ಕಟ್ಟಡಗಳಲ್ಲಿ ಕೋಣೆಯ ಗಾತ್ರದ ಮೇಲೆ ಲೈಟುಗಳ ಸಂಖ್ಯೆಯನ್ನು ನಿಗದಿ ಮಾಡುವುದಕ್ಕಿಂತಲೂ ಇಂತಿಷ್ಟು ದೂರದಲ್ಲಿ ಇಷ್ಟಿಟ್ಟು ಲೈಟುಗಳು ಇರಬೇಕು ಎನ್ನುವ ತರ್ಕದ ಮೇಲೆ ನಮ್ಮ ತಲೆಯ ಮೇಲೆ ಅದೆಷ್ಟೋ ಲೈಟುಗಳು ದಿನದ ಇಪ್ಪತ್ತನಾಲ್ಕು ಘಂಟೆಯೂ ಉರಿಯುತ್ತಿರುತ್ತವೆ. ಆಫೀಸಿನ ಮುಖ್ಯ ಸ್ಥಳಗಳಲ್ಲಿ ಹೇಗೋ ಹಾಗೆಯೇ ರೆಸ್ಟ್‌ರೂಮುಗಳಲ್ಲೂ ಸಹ ಸದಾ ಜಗಮಗಿಸುವ ಹಾಗೆ ಒಂದಿಪ್ಪತ್ತು ಟ್ಯೂಬ್‌ಲೈಟ್‌ಗಳಾದರೂ ಉರಿಯುತ್ತಿರುತ್ತವೆ.

ನಮ್ಮ ದೇಶದಲ್ಲಿ ಪದೇ-ಪದೇ ಕರೆಂಟು ಹೋಗುವುದೂ, ವೋಲ್ಟೇಜ್ ಏರಿಳಿತದಿಂದಾಗಿ ಪರಿಕರಗಳು ಸುಟ್ಟು ಹೋಗುವುದೂ, 'ಹೆಣ್ಣು ಹುಟ್ಟಿದೋರ ಮನೆ ದೀಪದ ಹಾಗೆ' ಒಂದು ರೂಮಿಗೆ ಒಂದೇ ಎಂಬಂತೆ ನಲವತ್ತೋ ಅರವತ್ತೋ ವ್ಯಾಟಿನ ಬಲ್ಬುಗಳು ಮಿಣಿಮಿಣಿ ಉರಿಯುವುದೆಲ್ಲವೂ ನಮ್ಮಲ್ಲಿ ಸರ್ವ ಸಾಮಾನ್ಯವಾಗಿದ್ದರೂ ಇಲ್ಲಿಯವರಿಗೆ ಎಷ್ಟೇ ವಿವರಿಸಿ ಹೇಳಿದರೂ ಅರ್ಥವಾಗುವುದಿಲ್ಲ. ಇವತ್ತಿಗೂ ಕೂಡ ಎಷ್ಟೋ ಜನರು ಇನ್ನೂ ಸೀಮೆ ಎಣ್ಣೆ ದೀಪದ ಬುಡದಲ್ಲೇ ರಾತ್ರಿಗಳನ್ನು ಕಳೆಯೋದೂ ಇದೆ. ಇವೆಲ್ಲವನ್ನೂ ನೆನಪಿಸಿ ನಮ್ಮ ದೇಶ ಬಡದೇಶ ಎಂದು ಹೀಯಾಳಿಸುವುದು ನನ್ನ ಇಂಗಿತವಲ್ಲ, ಬದಲಿಗೆ ಈ ಶ್ರೀಮಂತ ದೇಶದಲ್ಲಿರೋ ಸುಮಾರು ಮುನ್ನೂರು ಮಿಲಿಯನ್ ಜನರು ಪ್ರಪಂಚದಲ್ಲಿ ಬಳಸಬಹುದಾದ ಕಾಲುಭಾಗದಷ್ಟು ವಿದ್ಯುತ್ ಹಾಗೂ ಇತರ ಸಂಪನ್ಮೂಲಗಳನ್ನು ಬಳಸುವುದನ್ನು ನೋಡಿದರೆ ಶಾಕ್ ಆಗುತ್ತದೆ. ನನ್ನ ರಷಿಯನ್ ಸಹೋದ್ಯೋಗಿ ಬೋರಿಸ್ ತನಗೆ ಬರುವ ಹೆಚ್ಚೂಕಡಿಮೆ ಎಲ್ಲಾ ಇ-ಮೇಲ್‌ಗಳನ್ನೂ ಪ್ರಿಂಟ್ ಹಾಕಿ ತನ್ನ ಡೆಸ್ಕ್ ಮೇಲೆ ರಾಶಿ ಏರಿಸಿಕೊಂಡು ಅವುಗಳನ್ನು ಒಂದೊಂದಾಗೇ ಓದಿ ರಿಸೈಕಲ್ಡ್ ಬಿನ್‌ಗೆ ಬಿಸಾಡುವುದನ್ನು ನೋಡಿದಾಗಲೆಲ್ಲ ಅವನು ಪ್ರತಿನಿತ್ಯ ಅದೆಷ್ಟೋ ಗಿಡಮರಗಳನ್ನು ಕೊಲ್ಲುತ್ತಾನೆ ಎಂದು ನನಗೆ ಅನ್ನಿಸುವುದರಲ್ಲಿ ತಪ್ಪು ಕಾಣಿಸುವುದಿಲ್ಲ.

ಪ್ರಪಂಚದ ಕೇವಲ ಐದು ಪರ್‌ಸೆಂಟಿನಷ್ಟು ಇರುವ ಅಮೇರಿಕನ್ನರಲ್ಲಿ ನಾನೂ ಒಬ್ಬನಾಗಿ ಹೋಗಿದ್ದೇನೆ:
ಜನರಿಗೊಂದೊಂದು ಕಾರು; ಅಗತ್ಯವೋ ಇಲ್ಲವೋ ತಿಂದು ಚೆಲ್ಲುವಷ್ಟು ಆಹಾರ ಪದಾರ್ಥಗಳು; ಬೇಕಾಬಿಟ್ಟಿ ಚೆಲ್ಲುವ ನೀರು, ಸದಾ ಉರಿಸುವ ವಿದ್ಯುತ್ (ಹೀಟರ್ ಅಥವಾ ಏರ್‌ಕಂಡೀಷನರ್, ವಾಟರ್ ಹೀಟರ್, ಇತ್ಯಾದಿಗಳು ಎಂದೂ ಕೆಲಸ ನಿಲ್ಲಿಸಿದ್ದಿಲ್ಲ); ಬಾಯಿ ಒರೆಸೋದರಿಂದ ಹಿಡಿದು ಮತ್ತೇನೆಲ್ಲ ಒರಿಸುವುದರವರೆಗೆ ಉಪಯೋಗಿಸುವ, ಬೇಕಾದಷ್ಟು ಬರೆದು, ಮುದ್ರಿಸಿ, ಹರಿದು ಬಿಸಾಡುವ ಪೇಪರುಗಳು. ಪ್ರೆಟ್ರೋಲ್ ಬೆಲೆ ಐದು ಡಾಲರ್ ಆಗಬಹುದಾದಂತಹ ಜಿಯೋ ಪೊಲಿಟಿಕಲ್ ವಿಷಯಗಳನ್ನು ಅರಿತು ಸ್ಪಂದಿಸದಿರುವ ಸಾಕಷ್ಟು ಜನರು ಹಣದ ಕೊರತೆಯಿಂದ ಬಡತನವನ್ನು ಕಂಡವರೇ ವಿನಾ ಸಂಪನ್ಮೂಲಗಳ ಕೊರತೆಯಿಂದಲ್ಲ. ಹನಿಹನಿಗೂಡಿದರೆ ಹಳ್ಳವೆಂದು ಗೊತ್ತಿದ್ದರೂ ಸೂಕ್ಷತೆಗಳನ್ನೆಲ್ಲ ಕೊಡವಿಕೊಂಡು (ಹಾಗೆ ಮಾಡುವುದು ಸುಲಭವಾದ್ದರಿಂದ) ಎಲ್ಲರಲ್ಲಿ ಒಂದಾಗಿ ಬದುಕುತ್ತೇನೆ.

ನಾನು ಪ್ರತೀದಿನ ರೆಕಾರ್ಡ್ ಮಾಡಿ ವಾರಕ್ಕೆರಡು ಬಾರಿ ನೋಡುವ ಬಿಬಿಸಿ ವರ್ಲ್ಡ್ ಸರ್ವೀಸ್ ಸುದ್ದಿಗಳಲ್ಲಿ ಆಫ್ರಿಕಾದಲ್ಲಿ ಸಾವಿರಾರು ಮಕ್ಕಳು ಹಸಿವಿನಿಂದ, ಬಾಯಾರಿಕೆಯಿಂದ ಸಾಯುವುದನ್ನು ನೋಡಿ ನೋಡಿಯೂ ಮೊದಲೆಲ್ಲ ಆಗುತ್ತಿದ್ದ ಸ್ಪಂದನಗಳು ಆಗುವುದೇ ಇಲ್ಲ - ಹಾಗೆ ಮೊದಲಿನ ಸ್ಪಂದನಗಳಿಂದ ಆಗಿದ್ದಾದರೂ ಏನು ಎಂಬ ಧ್ವನಿ ಹತ್ತಿರದಲ್ಲೇ ಎಲ್ಲೋ ಕೇಳಿಬಂದಾಗುತ್ತದೆ.

3 comments:

ಅಸತ್ಯ ಅನ್ವೇಷಿ said...

ಭಾರತದಲ್ಲಿರೋವ್ರಿಗೆ ಎಷ್ಟು ಬಡತನದಲ್ಲೂ ಬದುಕಲು ಸಾಮರ್ಥ್ಯವಿದೆ. ಆದ್ರೆ ಅಮೆರಿಕದ "ಮೂಲ"ವಾಸಿಗಳಿಗೆ ಭಾರತದಲ್ಲಿ ಜೀವಿಸುವುದು ಸಾಧ್ಯವೇ? ಅವರಿಗೆ ಇದೊಂದು ಸವಾಲು.

ಆದ್ರೂ, ಭಾರತೀಯರ ಸಾಮರ್ಥ್ಯವನ್ನೇ ಕಡೆಗಣಿಸುವ ಅಮೆರಿಕವು ಭಾರತವನ್ನೇಕೆ ಡಂಪಿಂಗ್ ಯಾರ್ಡ್ ಮಾಡುತ್ತಿದೆ ಅನ್ನೋದು ಇನ್ನೂ ತಲೆಗೆ ಹೋಗದ ವಿಷಯ.

Sanjaya said...

ನನ್ನ ರಷಿಯನ್ ಸಹೋದ್ಯೋಗಿ ಬೋರಿಸ್ ತನಗೆ ಬರುವ ಹೆಚ್ಚೂಕಡಿಮೆ ಎಲ್ಲಾ ಇ-ಮೇಲ್‌ಗಳನ್ನೂ ಪ್ರಿಂಟ್ ಹಾಕಿ ತನ್ನ ಡೆಸ್ಕ್ ಮೇಲೆ ರಾಶಿ ಏರಿಸಿಕೊಂಡು ಅವುಗಳನ್ನು ಒಂದೊಂದಾಗೇ ಓದಿ ರಿಸೈಕಲ್ಡ್ ಬಿನ್‌ಗೆ ಬಿಸಾಡುವುದನ್ನು ನೋಡಿದಾಗಲೆಲ್ಲ ಅವನು ಪ್ರತಿನಿತ್ಯ ಅದೆಷ್ಟೋ ಗಿಡಮರಗಳನ್ನು ಕೊಲ್ಲುತ್ತಾನೆ ಎಂದು ನನಗೆ ಅನ್ನಿಸುವುದರಲ್ಲಿ ತಪ್ಪು ಕಾಣಿಸುವುದಿಲ್ಲ.

ಅಂತರಂಗಿಗಳೇ, ನಿಮ್ಮ ಸಹೋದ್ಯೋಗಿ ಬೋರಿಸ್ ಮರಗಳನ್ನು ಬೆಳೆಸುತ್ತಿರುವ ಸಾಧ್ಯತೆ ಸಹ ಇದೆ. ಅಮೆರಿಕದಲ್ಲಿ ಕಾಗದಕ್ಕೆ ಬಳಸುವ ಮರಗಳು, ಬಹುಮಟ್ಟಿಗೆ ಅವುಗಳನ್ನು ತಯಾರಿಸಲೆಂದೇ ಫಾರ್ಮ್‍ಗಳಲ್ಲಿ ಬೆಳೆಸುತ್ತಿರುವಂತಹ ಮರಗಳು. ಬಹಳ ವರ್ಷಗಳ ಹಿಂದೆ, ನ್ಯೂಯಾರ್ಕ್ ಟೈಮ್ಸಿನಲ್ಲಿ ನಾನು ಓದಿದ್ದ ಲೇಖನವೊಂದರ ಪ್ರಕಾರ, ಪೇಪರ್ ಉಪಯೋಗ ಕಡಿಮೆಯಾದರೇ, ಬೆಳೆಸುವ ಮರಗಳ ಸಂಖ್ಯೆಯೂ ಕಡಿಮೆಯಾಗಿ, ಫಾರ್ಮ್ ಜಾಗವನ್ನು ಕಟ್ಟಡ ಕಟ್ಟಲೋ, ಇನ್ನಾವುದೋ ಕಾರ್ಯಕ್ಕೋ ಬಳಸುವ ಸಾಧ್ಯತೆ ಇದೆ.

ಭಾರತದಲ್ಲಿರೋವ್ರಿಗೆ ಎಷ್ಟು ಬಡತನದಲ್ಲೂ ಬದುಕಲು ಸಾಮರ್ಥ್ಯವಿದೆ. ಆದ್ರೆ ಅಮೆರಿಕದ "ಮೂಲ"ವಾಸಿಗಳಿಗೆ ಭಾರತದಲ್ಲಿ ಜೀವಿಸುವುದು ಸಾಧ್ಯವೇ? ಅವರಿಗೆ ಇದೊಂದು ಸವಾಲು.

ಅನ್ವೇಷಿಗಳೇ, ಇದು ಹೆಮ್ಮೆಯ ಮಾತೋ ಅಥವಾ ಖೇದದ ವಿಷಯವೋ ಗೊತ್ತಿಲ್ಲ. ಒಟ್ಟಿನಲ್ಲಿ, ಭಾರತೀಯರಾಗಲೀ, ಅಮೆರಿಕನ್ನರಾಗಲೀ, ಅವರ ಸಾಮರ್ಥ್ಯಗಳೇನೇ ಇರಲಿ, ಬಡತನದಲ್ಲಿ ಬದುಕಲು ಇಷ್ಟಪಡಲಾರರೇನೋ.

ವಂದನೆಗಳು.

direkishore said...

tamma kannada prachandavagide. marali baruve.