Thursday, June 15, 2006

ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಲೋಕ ಕಲ್ಯಾಣ

ರೀಟೈಲ್ ವ್ಯವಹಾರ ಮಾಡೋದು ಅಂದರೆ ಹೋಲ್‌ಸೇಲ್‌ನಲ್ಲಿ ವಸ್ತುಗಳನ್ನು ಕೊಂಡು ಸ್ವಲ್ಪ ಮಾರ್ಜಿನ್‌ನಲ್ಲಿ ವಸ್ತುಗಳಿಗೆ ಬೆಲೆ ಹೆಚ್ಚಿಸಿ ಬಂದ ಆ ಹೆಚ್ಚಳದಲ್ಲಿ ಖರ್ಚುಗಳನ್ನು ಕಳೆದು ಲಾಭಾಂಶ ಪಡೆಯುವುದು ಎಂದುಕೊಂಡಿದ್ದವನಿಗೆ ನಮ್ಮೂರುಗಳಲ್ಲಿ ವ್ಯವಹಾರ ಮಾಡುವವರು ಈ ಮಾರ್ಜಿನ್‌ಗಿಂತಲೂ ಹೆಚ್ಚು ಹಣವನ್ನು ಮೋಸಮಾಡಿಯೇ ಪಡೆಯುತ್ತಾರೆಂಬುದು ನನಗೆ ಗೊತ್ತಿತ್ತಾದರೂ ಅದನ್ನು ಎದುರಿಸಿ ಪ್ರಶ್ನೆಗಳನ್ನು ಕೇಳುವ ಧೈರ್ಯ ಬಂದಿದ್ದು ಇತ್ತೀಚೆಗೆ ಎಂದೇ ಹೇಳಬೇಕು. ಆದರೆ ಇಂತಹ ವರ್ತಕರಲ್ಲಿ ಮೋಸ ಮಾಡುವ ಪ್ರವೃತ್ತಿ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಮೋಸ ಮಾಡುವುದು ಅವರ ವಹಿವಾಟಿನ ಒಂದು ದೊಡ್ಡ ಅಂಗವಾಗಿಬಿಟ್ಟು, ಅದಕ್ಕೆ ಅಡ್ಡ ಬಂದವರನ್ನು ಬಾಯಿಗೆ ಬಂದಂತೆ ಬಯ್ಯುವುದು ಕೆಲವು ಕಡೆಗಳಲ್ಲಿ ಕೈ ಮುಂದು ಮಾಡುವವರೆಗೂ ಹೋಗುತ್ತದೆ. ವ್ಯವಹಾರದಲ್ಲಿ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದಾದರೂ ಈ ಕೆಳಗಿನವು ಹೆಚ್ಚು ಪ್ರಸ್ತುತವೆನಿಸುತ್ತವೆ:

೧) ಬೆಂಗಳೂರಿನ ಸಂಜಯ ನಗರದಲ್ಲಿ ಮಾರ್ವಾಡಿ ಅಂಗಡಿಯೊಂದಕ್ಕೆ ಅದೇನೇನೋ ಕಾಸ್ಮೆಟಿಕ್ಸ್ ಹಾಗೂ ಬಹುಪಯೋಗಿ ಪದಾರ್ಥಗಳನ್ನು ಖರೀದಿಸುವುದಕ್ಕೆ ನಾವು ನಮ್ಮ ಮನೆಯಿಂದ ಮೂರ್ನಾಲ್ಕು ಜನರು ಹೋಗಿದ್ದೆವು. ಅಂಗಡಿಯವನು ನಮ್ಮ ಮನೆಯವರಿಗೆಲ್ಲ ಪರಿಚಯದವನಂತೆ, ಬೆಂಗಳೂರಿನಲ್ಲಿ ಅದೆಷ್ಟೋ ವರ್ಷಗಳಿಂದ ಅಂಗಡಿಯನ್ನು ಹಾಕಿ ಮನೆ-ಮಠ ಕಟ್ಟಿಸಿಕೊಂಡಿದ್ದರೂ ಆತ 'ಕನ್ನಾಡ್' ಮಾತನಾಡುವುದು ಅಷ್ಟಕಷ್ಟೇ ಎನ್ನುವುದು ಕೇಳಿ ನನಗೆ ಸ್ವಲ್ಪ ಬೇಸರವಾಗಿತ್ತು, ಆದರೂ ಸುಮ್ಮನಿದ್ದೆ. ಕೆಲವೊಂದು ವಸ್ತುಗಳ ಮೇಲೆ 'ಲೋಕಲ್ ಟ್ಯಾಕ್ಸೂ ಸೇರಿದೆ' ಎಂದು ನಮೂದಿಸಿರುತ್ತಾರಾದ್ದರಿಂದ (ಆಗಿನ್ನೂ ವ್ಯಾಟ್ ಇದ್ದಿರಲಿಲ್ಲ), ಕೆಲವೊಂದು ವಸ್ತುಗಳ ಬೆಲೆ ಅವುಗಳ ಮೇಲೆ ಮುದ್ರಿತವಾದದ್ದನ್ನು ಕೊಡುವಂತೆಯೂ, ಇನ್ನು ಕೆಲವು ವಸ್ತುಗಳ ಮೇಲೆ ನಮ್ಮ ಮನೆಯವರು ಚೌಕಾಶಿಯನ್ನು ಮಾಡಿ ಕೊನೆಗೆ ಬಿಲ್ ಕೊಡುವ ಹೊತ್ತಿಗೆ ನಾನು 'ರಶೀದಿ' ಕೊಡಿ ಎಂದೆ. ಅಂಗಡಿಯವನು ಶಿಸ್ತಾಗಿ ಒಂದು ಹಳದಿ ಬಣ್ಣದ ಸಣ್ಣ ನೋಟ್ ಪುಸ್ತಕವೊಂದರಲ್ಲಿ ಒಂದು ಹಾಳೆಯಲ್ಲಿ ಕೊಂಡ ವಸ್ತುಗಳ ಹೆಸರನ್ನು ಅವನ ಬ್ರಹ್ಮ ಲಿಪಿಯಲ್ಲಿ ಗೀಚಿ ಅದರ ಮುಂದೆ ಇಂತಿಷ್ಟು ಹಣ ನಮೂದಿಸಿ ಪುಟ್ಟ ಕ್ಯಾಲ್ಕ್ಯುಲೇಟರ್ ಸಹಾಯದಿಂದ ಅದನ್ನು ಟೋಟಲ್ ಮಾಡಿ ನನಗೆ ಕೊಡಲು ಮುಂದೆ ಬಂದ, ನಾನು ಅಲ್ಲಿಯವರೆಗೂ ಸುಮ್ಮನಿದ್ದವನು 'ಇದು ರಶೀದಿಯಲ್ಲ, ನನಗೆ ನಿಜವಾದ ರಶೀದಿ ಬೇಕು' ಎಂದಿದ್ದಕ್ಕೆ ಅಂಗಡಿಯವನು ನನ್ನಿಂದ ಈ ಮಾತನ್ನು ನಿರೀಕ್ಷಿಸಿಲ್ಲವಾದ್ದರಿಂದ ಹಾಗೂ ಅವನ ದಿನನಿತ್ಯದ 'ವ್ಯವಹಾರ'ಕ್ಕೆ ಇದು ಭಿನ್ನವಾದ್ದರಿಂದ 'ರಶೀದಿ ಕೊಡುತ್ತೇನೆ, ಅದರ ಮೇಲೆ ಟ್ಯಾಕ್ಸ್ ಕೊಡಬೇಕಾಗುತ್ತದೆ' ಎಂದ. ನಾನು 'ಆಗಲಿ' ಎಂದಿದ್ದಕ್ಕೆ ನಮ್ಮ ಮನೆಯವರು ಟ್ಯಾಕ್ಸಿನ ವಿಷಯ ಬಂದಾಗ ಇನ್ಯಾರು ಹೆಚ್ಚಿಗೆ ಹಣಕೊಡುವವರು ಎಂದು ನನ್ನನ್ನು ಪ್ರಶ್ನಿಸಿದರೂ ನಾನು 'ಪರವಾಗಿಲ್ಲ ಬಿಡಿ' ಎಂದಿದ್ದರಿಂದ ಅಂಗಡಿಯವನು ಸ್ವಲ್ಪ ನಾನ್ನ ಮೇಲೆ ಸಿಟ್ಟನ್ನು ಮಾಡಿಕೊಂಡು ಒಳಗಡೆಯಿಂದ ರಶೀದಿಯ ಪುಸ್ತಕವನ್ನು ಬರೆಸಿ, ಟ್ಯಾಕ್ಸೂ ಸೇರಿ ನಿಜವಾದ ರಶೀದಿ ಕೊಟ್ಟನು. ನಾನು 'ಈಗಾಗಲೇ ಕೆಲವೊಂದು ವಸ್ತುಗಳ ಮೇಲೆ ಲೋಕಲ್ ಟ್ಯಾಕ್ಸು ಸೇರಿಸಿರೋದರಿಂದ ಆ ಐಟಮ್ಮುಗಳಿಗೆ ಮತ್ತೆ ಹೆಚ್ಚಿನ ಟ್ಯಾಕ್ಸು ಕೊಡಬೇಕಾಗಿಲ್ಲ, ಲೆಕ್ಕ ತಪ್ಪಾಗಿದೆ' ಎಂದಿದ್ದಕ್ಕೆ ಅಂಗಡಿಯವನಿಗೂ ನಮ್ಮ ಮನೆಯವರಿಗೂ ನನ್ನ ಮೇಲೆ ನಿಜವಾಗಿ ಸಿಟ್ಟುಬಂದಿದ್ದು ಅವರ ಮುಖಗಳಲ್ಲಿ ಕಾಣುತ್ತಿತ್ತು. ಅವನು ಒಟ್ಟು ಮೊತ್ತ ಹಾಕಿದ ರಶೀದಿಯಲ್ಲಿ ಕೊನೆಗೆ ಹೆಚ್ಚಿಗೆ ಸೇರಿಸಿದ ಟ್ಯಾಕ್ಸನ್ನು ಅವನ ಕಾರ್ಬನ್ ಕಾಪಿಯಲ್ಲೂ ಮೂಡುವಂತೆ ಕಳೆದು ಕೊನೆಗೆ ಹಣವನ್ನು ಕೊಟ್ಟಾಗ ಅಂಗಡಿಯವನಿಗೆ ಸುಸ್ತಾಗಿ ಹೋಗಿತ್ತು. ನಮ್ಮ ಮನೆಯವರಿಗೆ ಇಷ್ಟು ಹೊತ್ತು ಅಂಗಡಿಯಲ್ಲಿ ಸಾಮಾನುಗಳನ್ನು ನೋಡುವಾಗ ತಡವಾಗದಿದ್ದುದು ಈಗ ರಶೀದಿ ಹಾಕುವಾಗ ಆದ ವಿಳಂಬದಿಂದ ನಾನು ಅವರ ಸಮಯವನ್ನು ತಿಂದೆನೆಂದು ಆಡಿಕೊಂಡರು, ಅಲ್ಲದೇ 'ಈ ಅಂಗಡಿಯವನು ನಮಗೆ ವರ್ಷಗಳಿಂದಲೂ ಗೊತ್ತು, ಅವನು ಯಾವಾಗಲೂ ನಮಗೆ ಕಡಿಮೆ ಬೆಲೆಗೇ ಕೊಡೋದು, ಹಾಗೆ ಅಂಥವರನ್ನು ಎದುರು ಹಾಕಿಕೊಳ್ಳಬಾರದು' ಎಂದು ನನಗೆ ಉಪದೇಶವನ್ನೂ ಮಾಡಿದರು. ನಾನು 'ಹೌದಾ' ಎಂದು ಸುಮ್ಮನಾದೆ. (ಇಷ್ಟೂ ಮಾಡಿ ಅವನ ಬಳಿ ಸಿ.ಎಸ್.ಟಿ., ಕೆ.ಎಸ್.ಟಿ. ಮುದ್ರಿತವಾಗಿರೋ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂದು ಎರಡು ರಶೀದಿ ಪುಸ್ತಕಗಳಿದ್ದರೆ ಅದಕ್ಕೆ ನಾನು ತಾನೇ ಏನು ಮಾಡಲು ಸಾಧ್ಯ?)

೨) ನನ್ನ ಅಣ್ಣನ ಲಾರಿಯಲ್ಲಿ ಒಂದು ದಿನ ಸಾಮಾನುಗಳನ್ನು ಸಾಗಿಸಿ ಬರಲು ಹೋಗಿದ್ದೆ. ಡ್ರೈವರ್ ಬದಲಿಗೆ ಅಣ್ಣನೇ ಲಾರಿ ಚಲಾಯಿಸುತ್ತಿದ್ದ, ಯಾರದ್ದೋ ಒಂದಿಷ್ಟು ಸಾಮಾನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಾಡಿಗೆಗೆ ಹೊಡೆಯಬೇಕಾದಂತಹ ಸಣ್ಣ ವ್ಯವಹಾರವದು. ಸಾಮಾನುಗಳನ್ನು ಲೋಡ್ ಮಾಡಿಕೊಂಡು ತೆಗೆದುಕೊಂಡು ಹೋಗಿ ಅಲ್ಲಿ ಇಳಿಸಿ ಬಂದಿದ್ದಕ್ಕೆ ಗುತ್ತಿಗೆ ಆಧಾರದ ಮೇಲೆ ಇಷ್ಟು ಎಂದು ಮೊದಲೇ ಮಾತನಾಡಿಕೊಂಡಿದಷ್ಟು ಹಣವನ್ನು ತೆಗೆದುಕೊಂಡು ಬಂದರೆ ಆಯಿತು, ಅತ್ಯಂತ ಸರಳವಾದ ಈ ವ್ಯವಹಾರದಲ್ಲಿ ಎಲ್ಲವೂ ಕ್ಯಾಶ್ ಮೂಲಕವೇ ನಡೆಯೋದಾದ್ದರಿಂದ ಯಾವ ರಶೀದಿಯಂತೂ ಸಿಗೋದಿಲ್ಲ, ಇನ್ನು ಯಾರಾದರೂ ಟ್ಯಾಕ್ಸ್ ಕಟ್ಟುವ ಮಾತು ಹಾಗಿರಲಿ! ಆ ಕಡೆಯವರು ಸಾಮಾನುಗಳನ್ನು ಇಳಿಸಿಕೊಂಡು ಹಣವನ್ನು ಎಣಿಸಿಕೊಡುವಾಗ ಅವರ ಕಣ್ತಪ್ಪಿನಿಂದಲೋ, ಅಥವಾ ತಪ್ಪು ಲೆಕ್ಕದಿಂದಲೋ ನೂರು ರೂಪಾಯಿಗಳನ್ನು ನನ್ನ ಅಣ್ಣನಿಗೆ ಹೆಚ್ಚು ಕೊಟ್ಟುಬಿಟ್ಟರು. ಅವರು ಹಣವನ್ನು ಎಣಿಸುತ್ತಿರುವಾಗ ನಾನೂ ಎಣಿಸಿಕೊಂಡಿದ್ದೆನಾದ್ದರಿಂದ ಹೆಚ್ಚಿದ್ದದ್ದು ನನಗೂ ಗಮನಕ್ಕೆ ಬಂತು ಆದರೆ ನಿಖರವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ, ಅಲ್ಲದೇ ದುಡ್ಡು ತೆಗೆದುಕೊಳ್ಳುತ್ತಿರುವವನು ನಾನಲ್ಲ ಎಂದು ಸುಮ್ಮನಿದ್ದೆ. ನನ್ನ ಅಣ್ಣನಿಗೆ ದುಡ್ಡಿನ ವ್ಯವಹಾರ ಮಾಡುವಾಗ ಮಾತನಾಡಬೇಡವೆಂದು ಸಾವಿರ ಬಾರಿ ಹೇಳಿದರೂ ಅವನು ಲೋಕಾಭಿರಾಮವಾಗಿ ಒಂದಲ್ಲ ಒಂದು ಹರಟೆಯನ್ನು ಕೊಚ್ಚುತ್ತಲೇ ಹಣವನ್ನು ಕೊಟ್ಟು ತೆಗೆದುಕೊಳ್ಳುತ್ತಾನಾದ್ದರಿಂದ ಅವನ ಲೆಕ್ಕದಲ್ಲಿ ಬೇಕಾದಷ್ಟು ತಪ್ಪುಗಳನ್ನು ನಾನು ಎಷ್ಟೋ ಸಲ ಎದುರೆದುರೇ ತೋರಿಸಿದ್ದೇನೆ, ಅದರೂ ಅವನ ಬುದ್ಧಿ ಬದಲಾಗೋದಿಲ್ಲ - ಅಲ್ಲದೇ ಅವನು ಹಾಗೆ ಕಳೆದುಕೊಳ್ಳುವ ಹಣಕ್ಕೂ, ಕೆಲವೊಮ್ಮೆ ಹೆಚ್ಚಾಗಿ ಸಿಗುವ ಹಣಕ್ಕೂ ಎಲ್ಲೋ ಒಂದು ಸಮೀಕರಣವಿದ್ದಿರಲೇ ಬೇಕು ಎಂದು ನನಗೂ ಅನ್ನಿಸಿಬಿಟ್ಟಿದೆ! ನನ್ನ ಅಣ್ಣ ಹಣವನ್ನು ಎಣಿಸಿದಂತೆ ಮಾಡಿ ತನ್ನ ಅಂಗಿ ಜೇಬಿನಲ್ಲಿ ಸೇರಿಸಿಕೊಂಡು ತನ್ನ ಹರಟೆಯ ಮಧ್ಯೆಯೇ 'ಬರ್ತೇವೆ' ಹೇಳಿ ನಾವಿಬ್ಬರೂ ಲಾರಿಯ ಕಡೆಗೆ ನಡೆದೆವು. ಲಾರಿಯ ಒಳಗೆ ಕೂರುತ್ತಿದ್ದಂತೆ 'ಅವರು ನಿನಗೆ ಒಂದು ನೋಟನ್ನು ಹೆಚ್ಚಿಗೆ ಕೊಟ್ಟಿದ್ದಾರೆ ಅಂತ ಕಾಣ್ಸುತ್ತೆ, ಎಣಿಸಿ ನೋಡು, ಇದ್ದರೆ ಕೊಟ್ಟು ಬಿಡು ಪಾಪ' ಎಂದೆ, ನನ್ನ ಅಣ್ಣ ಎಣಿಸಿದ, ನಿಜವಾಗಿಯೂ ನೂರು ರೂಪಾಯಿ ಅವರು ಕೊಡಬೇಕಾದುದಕ್ಕಿಂತಲೂ ಹೆಚ್ಚಿತ್ತು - ಆದರೆ ನನ್ನ ಅಣ್ಣ 'ಹೋಗೋ, ನಾವೇನಾದ್ರೂ ಹೆಚ್ಚಿಗೆ ಕೊಟ್ರೆ ಅವರೇನಾದ್ರೂ ವಾಪಾಸ್ ಕೊಡ್ತಾರೆ ಅಂತ ತಿಳಕಂಡಿದೀಯಾ, ಸತ್ಯವಂತ್ರ ಕಾಲ ಹೋಯ್ತು!' ಅಂದು ಬಿಡಬೇಕೆ! ನಾನು 'ಹಾಗಲ್ಲ, ಪ್ರಾಮಾಣಿಕವಾಗಿರಬೇಕಾದ್ದು ನಿನ್ನ ಧರ್ಮ, ಅವರು ಏನಾದ್ರೂ ಮಾಡಿಕೊಳ್ಳಲಿ' ಎಂದರೂ ಕೇಳದೆ ಅಣ್ಣ ಗಾಡಿಯನ್ನು ಚಲಾಯಿಸಿ ಮರು ಮಾತನಾಡದೇ ಹಿಂತಿರುಗಿ ಬಂದೇ ಬಿಟ್ಟ.

***

ಅಮೇರಿಕಕ್ಕೆ ಬಂದ ಹೊಸತರಲ್ಲಿ ನಾನು ಒಂದು ಡಾಲರ್ ಬದಲಿಗೆ ಸೂಪರ್ ಮಾರ್ಕೆಟ್‌ನಲ್ಲಿ ನೂರು ಡಾಲರನ್ನು ತಪ್ಪಿಕೊಟ್ಟಿದ್ದನ್ನು ನೆನಪಿಸಿ ಪದೇ-ಪದೇ ಕೇಳಿದಾಗಲು ಕೌಂಟರ್ ಕ್ಲರ್ಕ್ ಇಲ್ಲ ಎಂದು ಸಾಧಿಸಿಕೊಂಡಿದ್ದರಿಂದ ನಾನು ಹಣವನ್ನು ಕಳೆದುಕೊಂಡಿದ್ದೆ, ಆಗೆಲ್ಲ ಕಷ್ಟಮರ್ ಸರ್ವೀಸ್ ಡಿಪಾರ್ಟ್‌ಮೆಂಟ್ ಇದೆಯೆನ್ನುವುದೂ ನನಗೆ ಗೊತ್ತಿರಲಿಲ್ಲವಾದ್ದರಿಂದ ಸುಮ್ಮನೇ ಪೆಚ್ಚು ಮೋರೆ ಹಾಕಿಕೊಂಡು ಹೊರಬಂದದ್ದು ನನಗೆ ಬೇಸರ ತರಿಸಿದ್ದರೂ ನನ್ನ ಜೊತೆಯವರಿಗೆ ಹಲವು ದಿನಗಳ ಮಟ್ಟಿಗಾದರೂ ಖುಷಿಯ ವಿಷಯವಾಗಿತ್ತು.

ನನ್ನದೊಂದು ನಂಬಿಕೆ ಇದೆ - ನಮ್ಮೂರಿನ ರಿಟೈಲ್ ವರ್ತಕರು ನ್ಯಾಯವಂತರಾದರೆ ಸರ್ಕಾರದ ಬೊಕ್ಕಸ ತೆರಿಗೆಯ ಹಣದಿಂದ ತುಂಬಿ ತುಳುಕುತ್ತದೆ, ಅದರಿಂದ ಲೋಕ ಕಲ್ಯಾಣವಾಗುತ್ತದೆ ಎಂದು - ಇದು ನನ್ನ ಭ್ರಮೆ ಇದ್ದಿರಲೂ ಬಹುದು.

No comments: