Saturday, June 03, 2006

ಕರುಣಾನಿಧಿಯ ಕಣ್ಣನ್ನು ಕಂಡವರು ಯಾರು?


ಕಂಪ್ಯೂಟರ್ ಶುರುಮಾಡಿದೊಡನೆ ಕನ್ನಡಪ್ರಭದ ಮುಖಪುಟದಲ್ಲಿ "೨ ರೂ. ಗೆ ಕೆಜಿ ಅಕ್ಕಿ ಯೋಜನೆ ಉದ್ಭಾಟಿಸಿದ ಕರುಣಾನಿಧಿ" ಬರಹ ದುತ್ತನೆ ಎದುರಾಗಿ ನಮ್ಮ ರಾಮಕೃಷ್ಣ ಹೆಗಡೆಯವರ ಆಡಳಿತ ಕನಸನ್ನು ನೆನಪಿಗೆ ತಂದಿತು. ನಮ್ಮ ಕರ್ನಾಟಕ ರಾಜ್ಯ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆಯವರದು ಅಗ್ರಮಾನ್ಯ ಹೆಸರು. ನಾನು ಶಾಲಾದಿನಗಳಿಂದಲೂ ಅವರ ದೊಡ್ಡ ಫ್ಯಾನ್. ವಿದ್ಯಾಭ್ಯಾಸ, ಅನುಭವ, ಅರ್ಹತೆ ಹಾಗೂ ಧುರೀಣರಾಗಿ ಅವರನ್ನು ಮೀರಿಸುವ ಮತ್ತೊಬ್ಬ ರಾಜಕಾರಣಿ ನಮ್ಮ ರಾಜ್ಯದಲ್ಲಿ ಮತ್ತೊಬ್ಬರು ಇರಲಾರರು. ಹೆಗಡೆಯವರನ್ನು ನೆನಪಿಗೆ ತಂದುಕೊಂಡಾಗ ಅವರ ಕ್ಷಿಪ್ರ ಹಾಸ್ಯ, ಅತ್ಯುತ್ತಮ ಇಂಗ್ಲೀಷ್ ಮಾತು, ಬರಹಗಳ ಜೊತೆಗೆ ಮಂಡಲ ಪಂಚಾಯತಿಯನ್ನು ರಾಜ್ಯದ ಮೂಲೆಮೂಲೆಯಲ್ಲಿ ಹುಟ್ಟು ಹಾಕಿಸಿ ಬೆಳೆಸಿ 'ಹಳ್ಳಿಗಳ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ' ಎನ್ನುವ ಗಾಂಧೀಜಿಯವರ ಕನಸನ್ನು ನನಸು ಮಾಡಿದ ಮೊಟ್ಟ ಮೊದಲ ಆಡಳಿತಗಾರನಾಗಿ ಅವರು ನನಗೆ ಕಂಡುಬರುತ್ತಾರೆ. ಅವರ ಕಾಲದಲ್ಲಿಯೇ(ಯೂ) ಹಸಿರು-ಕೇಸರಿ ಕಾರ್ಡುಗಳ ಜೊತೆಗೆ ಬಡಬಗ್ಗರಿಗೆ ಎರಡು ರೂಪಾಯಿಗೆ ಒಂದು ಕೆಜಿ ಅಕ್ಕಿ ಹಾಗೂ ವಿದ್ಯಾರ್ಥಿಗಳಿಗೆ ಪುಕ್ಕಟೆ ಪುಸ್ತಕ ವಿತರಣೆ ಮುಂತಾದ ಮಹಾಯೋಜನೆಗಳು ಅನುಷ್ಟಾನಕ್ಕೆ ಬಂದದ್ದು.

***

ತಮಿಳುನಾಡಿನ ರಾಜಕೀಯದಲ್ಲಿ ನನ್ನ ತಲೆಮಾರಿನವರಿಗೆ ರಾಜಕಾರಣಿಗಳಾಗಿ ಪರಿಚಯವಿರೋರಲ್ಲಿ ಇಬ್ಬರು ಬಹು ಮುಖ್ಯವಾದವರು: ಒಬ್ಬರು ಕರುಣಾನಿಧಿ, ಇನ್ನೊಬ್ಬರು ಜಯಲಲಿತಾ. ೧೯೮೯ರಿಂದ, ಇತ್ತೀಚೆಗೆ ೨೦೦೧ರಲ್ಲಿ ಪನ್ನೀರ್ ಸೆಲ್ವಮ್ ಅವರ ಐದು ತಿಂಗಳ ಆಡಳಿತವನ್ನು ಬಿಟ್ಟರೆ, ಇಲ್ಲಿಯವರೆಗೂ ಒಂದೇ ಕರುಣಾನಿಧಿ ಅಥವಾ ಜಯಲಲಿತಾ ಮುಖ್ಯಮಂತ್ರಿಗಳಾಗಿ ಆಡಳಿತವನ್ನು ಹಂಚಿಕೊಂಡು ಬರುತ್ತಲೇ ಇದ್ದಾರೆ. ಸುಮಾರು ಈ ಎರಡು ದಶಕಗಳಲ್ಲಿ ಐದಾರು ಬಾರಿ ಸರ್ಕಾರಗಳು ಬದಲಾಗಿದ್ದರೂ ಒಮ್ಮೆ ಸೋತ ಕರುಣಾನಿಧಿ ಅಥವಾ ಜಯಲಲಿತಾ ಹಾಗೂ ಅವರ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಜಯಗಳಿಸಿಯೇ ತೀರುತ್ತವೆ. ಹೀಗೆ ನಾನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕರುಣಾನಿಧಿಗೂ ೮೪ ವರ್ಷವಾಯಿತು ಎಂದು ಗೊತ್ತಾದ ಮೇಲಂತೂ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಶಾಲೆಗೆ ಹೋಗುತ್ತಿದ್ದಾಗ ಐವತ್ತು ಅರವತ್ತರ ಹರೆಯದಲ್ಲೇ ಅಷ್ಟೊಂದು 'ಉರಿದ' ಕರುಣಾನಿಧಿಯ ದೀಪದ ಬುಡ್ಡಿ ಇನ್ನೂ ಸೊರಗಿಲ್ಲವೆಂದರೆ? ಕರುಣಾನಿಧಿಯನ್ನು ಯಾರು ಏನಾದರೂ ಅಂದುಕೊಳ್ಳಲಿ ಅವರ ತಮಿಳು ಭಕ್ತಿ ಅಪಾರವಾದುದು, ಒಂದುಕಡೆ ಜಯಲಲಿತಾ ಇಂಗ್ಲೀಷ್‌ನಲ್ಲಿ ನಿರರ್ಗಳವಾಗಿ ಮಾತನಾಡಿ ದಿಲ್ಲಿಯಲ್ಲಿದ್ದವರಿಗೆ ಮಂಕು ಕವಿದರೆ ಮತ್ತೊಂದು ಕಡೆ ಕರುಣಾನಿಧಿ ತಮಿಳಿನಲ್ಲೇ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದಾರೆ. ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಈ 'ಮಹಾ' ಮುತ್ಸದ್ಧಿಗಳಿಬ್ಬರೂ ಮೊದಲೇ ಯಾವುದೋ ಅವ್ಯಕ್ತ ಸಂಚಿನಲ್ಲಿ ಪಾಲುದಾರರಾದಂತೆ ದೆಹಲಿಯ ಭೂಪರಿಗೆ ಮಂಕುಬೂದಿ ಎರಚಿ ತಮ್ಮ ನಾಡಿನ ಹಿತಗಳನ್ನು ಸಾಧಿಸಿಕೊಳ್ಳಬಲ್ಲರು. ಅದು ಹೊಸ ರೈಲು ಯೋಜನೆ ಇರಲಿ, ನೆರೆ ಸಂತ್ರಸ್ಥರಿಗೆ ಪರಿಹಾರವಿರಲಿ, ನೀರಿನ ವಿಷಯವಾಗಲಿ, ಮತ್ತೊಂದಾಗಲಿ ತಮಿಳು ನಾಡಿನ ಜನರನ್ನು ಕರುಣಾನಿಧಿ ಹಾಗೂ ಅವರ ಪಕ್ಷಗಳು ಬಿಟ್ಟುಕೊಡುವುದಿಲ್ಲ, ಜನರ ಹಿತಕ್ಕೋಸ್ಕರ ಕೆಲಸ ಮಾಡುವ ಅವರ ಪರಂಪರೆಯೇ ಅವರನ್ನು ಸದಾ ಗೆಲ್ಲಿಸುವುದು, ಯಾರ ವಿರುದ್ಧ ಯಾವುದೇ ಮೊಕದ್ದಮೆಗಳಿರಲಿ, ಜಯಲಲಿತಾ ಹಾಗೂ ಕರುಣಾನಿಧಿ ತಮ್ಮನ್ನು ಶರಣಾಗತರನ್ನಾಗಿಸಿಕೊಳ್ಳೋದಿಲ್ಲ, ಅವರಿಗೋಸ್ಕರವೇ ಸುದ್ದಿಗಳನ್ನು ತಿದ್ದಿ ಬಿತ್ತರಿಸುವ ಟೆಲಿವಿಜನ್ ನೆಟ್‌ವರ್ಕ್‌ಗಳಿವೆ, ಪೇಟೆಯಲ್ಲಿ 'ಥೂ' ಎಂದರೂ ಹಳ್ಳಿಗಳಲ್ಲಿ ಆರಾಧಿಸುವವ ಜನರಿದ್ದಾರೆ, ವಿತರಿಸಲು ಬೇಕಾದಷ್ಟು ಅಕ್ಕಿ ಇದೆ, ಹಂಚಲು ಭೂಮಿ ಇದೆ, ಇಬ್ಬರೂ ಹೊಟ್ಟೆ ತುಂಬಿದವರು, ಹಾಗೂ ಎಲ್ಲಕ್ಕೂ ಮಿಗಿಲಾಗಿ ಇವರ ಭಿನ್ನಾಭಿಪ್ರಾಯಗಳನ್ನು ಹೆಣೆದು ಜೋಡಿಸುವ ತಮಿಳು ಪರಂಪರೆ ಇದೆ - ಯಶಸ್ವಿಯಾಗಲು ಇನ್ನೇನು ಬೇಕು?

***

೨೦೦೧ ರಲ್ಲಿ ಕರುಣಾಧಿಯನ್ನು ಜೂನ್ ೩೦ ರ ಬೆಳಗಿನ ಜಾವ ಅವರ ಮನೆಯಲ್ಲಿ ಪೋಲೀಸರು ಹೊಡೆದು ಬಡಿದು ಬಂಧಿಸಿದ ಘಟನೆ ಯಾರಿಗೆ ತಾನೆ ಗೊತಿಲ್ಲ? ಇದಕ್ಕೆ ಕೆಲವು ವರ್ಷಗಳ ಹಿಂದೆ ಜಯಲಲಿತಾರನ್ನು ಬಂಧಿಸಿ ಜೈಲು ಸೇರಿಸಿದ್ದ ಅಪ್ಪ ಮಗನ ಮೇಲೆ ಸೇಡು ತೀರಿಸಿಕೊಳ್ಳುವ ಜಯಲಲಿತಾರ ಪ್ಲಾನು ಅದಾಗಿತ್ತು, ಅದಕ್ಕೆ ೧೨ ಕೋಟಿ ರುಪಾಯಿಗಳ ಫ್ಲೈ ಓವರ್ ಸ್ಕ್ಯಾಮ್ ಎನ್ನುವುದು ಬರೀ ನೆಪಮಾತ್ರ. ಈ ಸಂದರ್ಭದಲ್ಲಿ ರಿಡಿಫ್‌ನಲ್ಲಿ ಘಟನೆಗಳ ಗ್ರಾಫಿಕ್ ವರದಿಯನ್ನು ನಾನು ನೋಡಿದ್ದೆ, ಆ ಸಂದರ್ಭದಲ್ಲಿ ತೆಗೆದ ಹಲವಾರು ಚಿತ್ರಗಳಲ್ಲಿ ಯಾವುದೋ ಒಂದರಲ್ಲಿ ಕರುಣಾನಿಧಿಯ ಕಪ್ಪು ಕನ್ನಡಕ ಜಾರಿ ಹೋಗಿ ಅವರ ಯಾವತ್ತೂ ಕಾಣದ ಕಣ್ಣುಗಳ ದರ್ಶನ ಎಲ್ಲರಿಗೂ ಆಗಿತ್ತು. ಈ ಚಿತ್ರವನ್ನು ಎಷ್ಟು ಹುಡುಕಿದರೂ ಇಂದು ಸಿಗದೇ ಹೋಗಿ ಆ ಘಟನೆಯನ್ನು ನೆನಪಿಗೆ ತರುವ ಕೆಲವು ಚಿತ್ರಗಳನ್ನು ಇಲ್ಲಿ ತೋರಿಸಿದ್ದೇನೆ.

ನಮ್ಮಲ್ಲಿಯ ಮಕ್ಕಳು 'ಅಮ್ಮಾ ಸದಾ ಅವರೇಕೆ ಕಪ್ಪು ಕನ್ನಡಕವನ್ನು ಹಾಕಿಕೊಂಡಿರುತ್ತಾರೆ?' ಎಂದು ಪ್ರಶ್ನಿಸುತ್ತಾರೋ ಇಲ್ಲವೋ ಕರುಣಾನಿಧಿಯ ಕಪ್ಪು ಕನ್ನಡಕದ ಹಿಂದಿನ ರಹಸ್ಯ ಹೆಚ್ಚು ಜನರಿಗೆ ಗೊತ್ತಿಲ್ಲ, ನಾನು ಮದ್ರಾಸಿನಲ್ಲಿ ಕೆಲಸಮಾಡುತ್ತಿರುವಾಗ ನನ್ನ ಸ್ಥಳೀಯ ಸಹೋದ್ಯೋಗಿಗಳಿಗೆ ಕೇಳಿದಾಗ ಯಾರೊಬ್ಬರೂ ಸಮಾಧಾನಕರವಾಗಿ ಉತ್ತರಿಸಿಲ್ಲ - ಕರುಣಾನಿಧಿಯ ಒಂದು ಕಣ್ಣು ಕುರಿಗಣ್ಣು, ಒಂದು ಕಣ್ಣು ಕಾಣೋದೇ ಇಲ್ಲ ಮುಂತಾದ ದಂತ ಕಥೆಗಳನ್ನು ಕೇಳಿ ಸುಮ್ಮನಿರಬೇಕಾಗಿತ್ತು. ಏನನ್ನು ಕೇಳಿದರೂ ಅವರದೇ ಆದ ರೀತಿಯಲ್ಲಿ ಉತ್ತರ ಕೊಡುವ ತಮಿಳರಿಂದ ತಿಳಿದುಕೊಂಡ ವಿಷಯವನ್ನು ಪರಾಮರ್ಶಿಸದೇ ನಂಬುವುದೇ ಬಲು ಕಷ್ಟ, ನನ್ನ ಜೊತೆಯಲ್ಲಿ ಇಂಜಿನಿಯರಿಂಗ್ ಮುಂತಾದ ಪದವಿಗಳನ್ನು ಓದಿಕೊಂಡವರೂ ಮಣಿರತ್ನಮ್ಮೇ 'ಪ್ರಪಂಚ'ದಲ್ಲಿನ ಬೆಸ್ಟ್ ಡೈರೆಕ್ಟರ್, ಎ.ಆರ್. ರೆಹಮಾನೇ 'ಪ್ರಪಂಚ'ದ ಬೆಸ್ಟ್ ಮ್ಯೂಸಿಕ್ ಕಂಪೋಸರ್, ಮೌಂಟ್ ರೋಡಿನ ಹತ್ತು-ಹನ್ನೊಂದು ಮಹಡಿಗಳ ಎಲ್.ಐ.ಸಿ. ಕಟ್ಟಡವೇ 'ಪ್ರಪಂಚ'ದಲ್ಲಿ ದೊಡ್ಡ ಕಟ್ಟಡ ಎಂದು ರಾಜಾರೋಷವಾಗಿ ಇತರರ ನಂಬಿಕೆಗಳನ್ನೆಲ್ಲ ಒಂದೇ ಸಮನೆ ಬುಡಮೇಲು ಮಾಡುವಂತೆ ಪುಂಕಾನುಪುಂಕವಾಗಿ ಹೊರಬರುತ್ತಿದ್ದ ಇತರ ಇನ್ನಿತರ ಅವರ ಪ್ರಪಂಚದ ದೊಡ್ಡಸ್ತಿಕೆಗಳನ್ನೆಲ್ಲ ಕೇಳಿ ಸಹಿಸಿಕೊಳ್ಳಬೇಕೆಂದರೆ ಅಪಾರ ತಾಳ್ಮೆ ಇರಲೇಬೇಕು. ಆದ್ದರಿಂದಲೇ ಮೋಕ್ಷವನ್ನು ಪಡೆಯಲು ತಪಸ್ಸು ಮಾಡುವುದಕ್ಕಾಗಿ ಹಿಮಾಲಯಕ್ಕೆ ಹೋಗುವುದರ ಬದಲಾಗಿ ಮದ್ರಾಸಿಗೆ ಹೋಗಿ ಎಂದು ನನ್ನ ಸ್ನೇಹಿತರಿಗೆ ನಾನು ತಮಾಷೆ ಮಾಡೋದು.

***

ಯಾವ ಪತ್ರಿಕೆಗಳವರ ಕಿಡು ನುಡಿಗೂ ಕರುಣಾನಿಧಿಯ ಕನ್ನಡಕದ ಹಿಂದಿನ ಮರ್ಮವನ್ನು ಅರಿಯಲಾಗಲಿಲ್ಲ, ಎಂತಹ ಅದ್ಭುತವಾದ ಬೆಳಕಿಗೂ ಅವರ ಕಪ್ಪು ಕನ್ನಡಕವನ್ನೆದುರಿಸುವ ಸಾಹಸ ಒದಗಿ ಬಂದಿಲ್ಲ, ಜಯಲಲಿತಾ ಕರುಣಾನಿಧಿಯನ್ನು ಜೈಲಿಗೆ ಹಾಕಿ ಉಸ್ಸಂತ ಉಸಿರು ಬಿಟ್ಟಿದ್ದೂ ಹೆಚ್ಚು ಕಾಲ ನಿಲ್ಲಲಿಲ್ಲ. ಈ ಕರುಣಾನಿಧಿ ಮತ್ತೆ-ಮತ್ತೆ ಅಧಿಕಾರಕ್ಕೆ ಬರುತ್ತಲೇ ಇರುತ್ತಾರೆ, ಅವರ ಬಳಿಕ ಅವರ ಮಗನಿಗೆ ಮುಂದೆ ಬರುವ ಎಲ್ಲ ಅವಕಾಶಗಳೂ ಇವೆ. ೮೫ ವರ್ಷದ ಹತ್ತಿರ-ಹತ್ತಿರ ಇದ್ದು ಇನ್ನೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಕರುಣಾನಿಧಿ ಭಾರತದ ರಾಜಕಾರಣಿಗಳ ಯಾದಿಯಲ್ಲಿ ಬಹಳ ದೊಡ್ಡ ಮನುಷ್ಯರಾಗಿ ಉಳಿಯುತ್ತಾರೆ, ಅವರ ಶಿಸ್ತು, ಹಿಂದೆ ಬಿದ್ದು ಮುಂದೆ ಬರಬಹುದಾದ ಕೆಚ್ಚು ಹಾಗೂ ತಮಿಳುನಾಡಿನ ಬಡವರ ಮೇಲಿನ ಅಪಾರ ಕಳಕಳಿ ಇವೆಲ್ಲದರ ಹತ್ತನೇ ಒಂದು ಭಾಗದಷ್ಟು ಕರ್ನಾಟಕದ ರಾಜಕಾರಣಿಗಳಲ್ಲಿದ್ದರೆ ಅದರ ಕಥೆಯೇ ಬೇರೆಯಿರುತ್ತಿತ್ತು.

3 comments:

Anonymous said...

ಕೆಲವು ಮುಖ್ಯ ಘಟನೆಗಳ ಹೊರತಾಗಿ, ತಮಿಳುನಾಡು ರಾಜಕೀಯದ ಪರಿಚಯ ಅಷ್ಟಾಗಿಲ್ಲ. ಆದರೂ ಕರುಣಾನಿಧಿ,ಜಯಲಲಿತಾ ಅವರಿಗೆ ನಾಡು,ನುಡಿಗಳ ಮೇಲಿರುವ ಪ್ರೇಮ ನಿರ್ವಿವಾದ. ನಮಗೆ ಅಂತಹ ಒಬ್ಬೇ ಒಬ್ಬ ನಾಯಕನೂ ಸಿಗಲಿಲ್ಲವಲ್ಲಾ ಎಂದು ಅಸೂಯೆಯಾಗುತ್ತಿದೆ.

Anveshi said...

ಇನ್ನೊಂದು ವಿಷಯ ನಿಮಗೆ ಗೊತ್ತೇ?

ಕರುಣಾನಿಧಿ ಅರೆಸ್ಟ್ ಚಲನಚಿತ್ರ ಬಂದಿದ್ದು ಸನ್ ಟಿವಿಯಲ್ಲಿ ಮಾತ್ರ.

ಅರೆಸ್ಟ್ ಆಗಿದ್ದು ನಿಜವಾಗಿದ್ರೂ, ಕೊಲೆ ಕೊಲೆ ಅಂತ ಕರುಣಾನಿಧಿ ಕ್ಯಾಮರಾ ಎದುರು ಬೊಬ್ಬಿಟ್ಟಿದ್ದು, ಕೈಕಾಲು ಬಡಿದದ್ದು ಎಲ್ಲವೂ ಪೂರ್ವಯೋಜಿತ. ಬಹುಶಃ ತಮಿಳುನಾಡು ರಾಜಕೀಯದಲ್ಲಿ ಇದು ಅನಿವಾರ್ಯವೂ ಆಗಿತ್ತು. ಎಷ್ಟೆಂದರೂ ಅವರು ಪಳಗಿದವರಲ್ಲವೆ?

ಮುಂದೆ ತೀರಾ ಮೊನ್ನೆ ನಡೆದ ಚುನಾವಣೆ ಸಂದರ್ಭವೂ ಸನ್ ಟಿವಿಯ ಜನಪ್ರಿಯ ಸೀರಿಯಲ್ ಮತ್ತಿತರ ಕಾರ್ಯಕ್ರಮಗಳ ಮಧ್ಯೆ ಈ ಬಂಧನದ ಚಲನಚಿತ್ರವನ್ನು ತೋರಿಸಿದ್ದರು (ಉದಾ: ತಂಗವೇಟ್ಟೈ).

ಕರುಣಾನಿಧಿ-ಜಯಲಲಿತಾ ಏನು ಬೇಕಾದರೂ ಹೊಡೆದುಕೊಳ್ಳಲಿ, ಎಷ್ಟೇ ತಿಂದುಕೊಳ್ಳಲಿ.... ತಮಿಳುನಾಡು ಮತ್ತು ಚೆನ್ನೈಗಾಗಿ ಅವರು ಸಾಕಷ್ಟು ಕಾರ್ಯಕ್ರಮ ಮಾಡಿದ್ದಾರೆ ಎಂಬುದು ಸತ್ಯ. ಇಂಥ ಕೆಲಸ ಮಾಡುವ ರಾಜಕಾರಣಿಗಳು ಕರ್ನಾಟಕದಲ್ಲಿ ಇಲ್ಲವೆಂಬುದು ಬೇಸರದ ಸಂಗತಿ.

ಒಟ್ಟಿನಲ್ಲಿ ನಾನೂ ಇಲ್ಲಿ ಮೋಕ್ಷಸಾಧನೆಗಾಗಿ ಶ್ರಮಿಸುತ್ತಿದ್ದೇನೆ.

Dr U B Pavanaja said...

ಬಹುಶಃ ಕರುಣಾನಿಧಿಯವರು ಯುಎಸ್‌ಬಿ ಎಂಪಿ-3 ಪ್ಲೇಯರ್ ಇರುವ ಕನ್ನಡಕ ಹಾಕಿಕೊಂಡಿರಬೇಕು :-)

-ಪವನಜ