Friday, June 02, 2006

ಬನಾರಸ್ಸಿನ ಬದುಕು - ಭಾಗ ೨

ಹೀಗೇ ಬನಾರಸ್ಸಿನ ಬಗ್ಗೆ ಯೋಚಿಸಿ ಎರಡನೇ ಭಾಗವನ್ನು ಬರೆದರೆ ಹೇಗೆ ಯೋಚಿಸುತ್ತಿದ್ದಾಗ ಕಾಕತಾಳೀಯವಾಗಿ ನಿನ್ನೆ ರಾಮಚಂದ್ರ ಸಿಂಗ್‌ನಿಂದ ಒಂದು ಇ-ಮೇಲ್ ಬಂದಿತು. 'ನಾನು ರಾಮ್ ಸಿಂಗ್, ಪ್ರೊಫೆಸ್ಸರ್ ವೈ.ಸಿಂಗ್ ಕೆಳಗೆ ಕೆಲಸ ಮಾಡುತ್ತಿದ್ದವ, ನಿನ್ನ ಸೀನಿಯರ್ ಆಗಿದ್ದೆ, ಯಾರೋ ನಿನ್ನ ಇ-ಮೇಲ್ ಐಡಿಯನ್ನು ಕೊಟ್ಟರು, ನೀನೇನಾ ಆ ಮನುಷ್ಯ, ನನ್ನ ಪರಿಚಯವಿದ್ದರೆ ಉತ್ತರಿಸು' ಎಂದು ಚಿಕ್ಕದಾಗಿ ಒಂದು ಇ-ಮೇಲ್ ಬರೆದಿದ್ದ (ಕೆಳಗೆ ಸಿಗ್ನೇಚರ್ ಆಗ್ರಾದ ಆನಂದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಎಂಬ ಟೈಟಲ್ ಅನ್ನು ಹೊತ್ತುಕೊಂಡಿತ್ತು). ಪಾಪ, ರಾಮ್ ಸಿಂಗ್ ಹೋಗೀ-ಹೋಗಿ ಪ್ರೊಫೆಸರ್ ವೈ.ಸಿಂಗ್ ಕೆಲಗಡೆ ಸಿಕ್ಕಿಹಾಕಿಕೊಂಡು ಥಿಯರಿಟಿಕಲ್ ಫಿಸಿಕ್ಸ್‌ನಲ್ಲಿ ಪಿ.ಎಚ್.ಡಿ. ಮುಗಿಸುವಾಗ ಸುಮಾರು ಎಂಟು ವರ್ಷಕ್ಕೂ ಮೇಲೆ ಹಿಡಿದಿತ್ತು. ರಾಮ್ ಸಿಂಗ್ ತಂದೆ ಬನಾರಸ್ಸಿನ ಎಕನಾಮಿಕ್ಸ್ ವಿಭಾಗದಲ್ಲಿ ದೊಡ್ಡ ಪ್ರೊಫೆಸರ್ ಆಗಿದ್ದವರು, ರಾಮ್ ಸಿಂಗ್ ಹುಟ್ಟಿ ಬೆಳೆದದ್ದೆಲ್ಲ ಬಿ.ಎಚ್.ಯು. ವಾತಾವರಣದಲ್ಲಿಯೇ.

ನಾನು ಬನಾರಸ್ಸನ್ನು ಸೇರಿಕೊಂಡಿದ್ದು ಜ್ಯೂನಿಯರ ರಿಸರ್ಚ್ ಫೆಲ್ಲೋ ಆಗಿ, ಆದರೆ ಅಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲು ರಾಮ್ ಸಿಂಗ್‌ನ ಯಾವುದೇ ಪರಿಚಯವಿರಲಿಲ್ಲ. ನಾನು ಡಿಪಾರ್ಟ್‌ಮೆಂಟಿನ ಮೊದಲ ದಿನವೇ ಪ್ರೊಫೆಸ್ಸರ್ರನ್ನು ಭೇಟಿ ಮಾಡಿ, ಅವರ ಮೂಲಕವೇ ಎಲ್ಲರಿಗೂ ಪರಿಚಿತನಾದದ್ದರಿಂದ ರಾಮ್ ಸಿಂಗ್ ನನಗೆ ಗೊತ್ತಾಗಿದ್ದು ಅಲ್ಲಿಗೆ ನಾನು ಸೇರಿಕೊಂಡ ಮೇಲೆಯೆ. ನನ್ನ ಬಳಿ ರಾಮ್ ಸಿಂಗ್ ಎಷ್ಟೋ ಸಾರಿ ತನ್ನ ಕಷ್ಟಗಳನ್ನು ತೋಡಿಕೊಂಡಿದ್ದ - ಅದು ಹೇಗೆ ಅವನು ಈ ವೈ. ಸಿಂಗ್ ರ ಚಕ್ರದಲ್ಲಿ ಸಿಕ್ಕಿ ಬಿದ್ದನೋ ಏನೋ ನಾನು ಹೋಗಿ ಸೇರುವಾಗ ಅವನು ವೈ. ಸಿಂಗರ ಜೊತೆ ನಾಲ್ಕು ವರ್ಷದ ಮೇಲೆ ಕೆಲಸ ಮಾಡಿದ್ದರೂ ಅವನ ಬಳಿ ಅಂತಾರಾಷ್ಟ್ರ್‍ಈಯ ಮಟ್ಟದಲ್ಲಿ ಪ್ರಕಟವಾದಂತೆ ಇದ್ದದ್ದು ಕೇವಲ ಎರಡೇ ಎರಡು ಪೇಪರುಗಳು. ಅವನ ಕಣ್ಣ ಮುಂದೆಯೇ ಎಷ್ಟೋ ಜನ ಎಮ್.ಎಸ್ಸಿ., ಮುಗಿಸಿ ಪಿ.ಎಚ್.ಡಿಯ ಥೀಸೀಸ್ ಅನ್ನು ಪ್ರೆಸೆಂಟ್ ಮಾಡಿದಾಗ ಬಹಳ ನೊಂದುಕೊಂಡೇ ಅವೆಲ್ಲವನ್ನೂ ಸಹಿಸಿಕೊಂಡು ಒಂದು ರೀತಿಯ ರೆಬೆಲ್ ಥರಾ ಆಗಿ ಹೋಗಿದ್ದ. ತನಗೆ ಪಿ.ಎಚ್.ಡಿ ಬರುವ ಮುನ್ನ ಬೇರೆ ಯಾರಿಗೂ ವೈ. ಸಿಂಗ್ ಅಡಿಯಲ್ಲಿ ಕೆಲಸ ಸಿಗಬಾರದು, ತನ್ನನ್ನು 'ಈ' ಸ್ಥಿತಿಗೆ ತಂದ ವೈ. ಸಿಂಗ್‌ಗೆ ಒಂದು ಕೈ ತೋರಿಸಿಯೇ ಬಿಡುತ್ತೇನೆ ಎಂದು ಅವನ ರಜಪೂತ ರಕ್ತ ಕುದಿಯುತ್ತಿತ್ತು. ಹೀಗೆ ಉತ್ತರ ಭಾರತದ ಎಲ್ಲೆಲ್ಲಿಂದಲೋ ಅದೆಷ್ಟೋ ಜನರು ಬಂದು ವೈ. ಸಿಂಗ್ ಅಡಿಗೆ ಸೇರಿಕೊಂಡಿದ್ದರೂ ಅವರೆಲ್ಲರನ್ನೂ ರಾಮ್ ಸಿಂಗ್ ಒಂದಲ್ಲ ಒಂದು ರೀತಿಯಲ್ಲಿ ತೊರೆಯುವಂತೆ ಮಾಡಿದ್ದ. ಈ ವಿಷಯ್ ವೈ. ಸಿಂಗ್‌ಗೂ ಗೊತ್ತಿತ್ತೆಂದು ಕಾಣುತ್ತದೆ, ಆದ್ದರಿಂದಲೇ ರಾಮ್ ಸಿಂಗ್ ಮತ್ತು ವೈ ಸಿಂಗ್ ರ ಸಂಬಂಧ ಅಷ್ಟಕಷ್ಟೇ ಇತ್ತು - ಈ ಪಿ.ಎಚ್.ಡಿ. ಮಾಡುವ ವಿಷಯದಲ್ಲಿ ಬೇರೆ ಏನನ್ನು ಹಾಳು ಮಾಡಿಕೊಂಡರು ಪ್ರೊಫೆಸರ್ ಜೊತೆಗಿರುವ ಸಂಬಂಧವನ್ನು ಹಾಳು ಮಾಡಿಕೊಂಡರೆ ಕಥೆ ಮುಗಿದಂತೆಯೇ ಎಂದು ಹೇಳಬೇಕು ಏಕೆಂದರೆ ಡಿಪಾರ್ಟ್‌ಮೆಂಟಿನ ತುಂಬಾ 'ಹೀಗಾಯಿತೇ, ಛೇ!' ಎಂದು ಬೇಕಾದಷ್ಟು ಸಹಾನುಭೂತಿಯನ್ನು ಅನುಭವಿಸಿಕೊಂಡು ಕಾಲ ತಳ್ಳಬೇಕೇ ವಿನಾ ಅದರಿಂದ ಮತ್ತೇನೂ ಆಗುವುದಿಲ್ಲ, ಪ್ರೊಫೆಸರುಗಳು ಎಷ್ಟಿದ್ದರೂ ಅವರವರನ್ನು ಬಿಟ್ಟುಕೊಡುವುದಿಲ್ಲ, ವಿದ್ಯಾರ್ಥಿಗಳಲ್ಲಿ ಎಲ್ಲರಿಗೂ ಅವರವರದೇ ಪೀಕಲಾಟವಿರುವುದರಿಂದ ಅವರು ತಮ್ಮ ಪಾಡಿಗೆ ಒಂದೇ ಸುಮ್ಮನಿರುತ್ತಾರೆ, ಅಥವಾ ಯಾವುದಕ್ಕೂ ಬೇಡವಾದ ಪುಕ್ಕಟೆ ಸಲಹೆಗಳನ್ನು ಎಸೆಯುತ್ತಿರುತ್ತಾರೆ - ಅವರಿಗೇನು ಅದರಿಂದ ನಷ್ಟವೇನೂ ಇರೋದಿಲ್ಲವಲ್ಲ.

ಹೀಗೆ ವೈ. ಸಿಂಗ್ ರ ಅಡಿಯಲ್ಲಿ 'ದಕ್ಷಿಣ್ ಕಾ ಬಂದಾ' ಎಂದು ನಾನು ಸೇರಿಕೊಂಡಿದ್ದೆ - ನನ್ನಲ್ಲಿ ಬೇಕಾದಷ್ಟು ಕನಸುಗಳೂ ಆದರ್ಶಗಳೂ ಅದೇ ತಾನೇ ರೂಪ ತಳೆಯುತ್ತಿದ್ದುದರಿಂದ ಒಂದು ರೀತಿ 'ಗಂಭೀರ ಹಾಗೂ ರಚನಾತ್ಮಕ ಉದ್ದೇಶದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವನು ಸಾಕಷ್ಟು ಬೇಸರವನ್ನೂ ಸಹಿಸಿಕೊಳ್ಳಬೇಕು' ಎಂದು ಎಲ್ಲದಕ್ಕೂ ತಯಾರಾಗಿಯೇ ಇದ್ದೆ. ಆರೇನು ಎಂಟು ವರ್ಷಬೇಕಾದರೂ ಆಗಲಿ, ಪಿ.ಎಚ್.ಡಿ. ಮಾಡಿ ಮುಗಿಸುತ್ತೇನೆ ಎಂದುಕೊಂಡವನಿಗೆ ಆಸರೆಯಾದವರು ಮೂರು ಜನ - ನನ್ನದೇ ಡಿಪಾರ್ಟ್‌ಮೆಂಟಿನ ರಾಮ್ ಸಿಂಗ್, ಪ್ರೊಫೆಸ್ಸರ್ ಶ್ರೀ ವಾಸ್ತವರ ಕೆಳಗೆ ಹೈಡ್ರೋಜನ್ ಎನರ್ಜಿಯ ಬಗ್ಗೆ ಕೆಲಸ ಮಾಡುತ್ತಿದ್ದ ಶೇಷ ಸಾಯಿ ರಾಮನ್ ಹಾಗೂ ಪ್ರೊ. ಡಿ.ಎನ್. ತ್ರಿಪಾಟಿಯವರ ಕೆಳಗೆ ಕೆಲಸ ಮಾಡುತ್ತಿದ್ದ ಪೆರುಮಾಳ್. ರಾಮನ್ ಹಾಗೂ ಪೆರುಮಾಳ್ ಇಬ್ಬರೂ ತಮಿಳರು, ಇವತ್ತಿಗೂ ಸಹ ನನ್ನ ಅತ್ಯಂತ ಆತ್ಮೀಯ ಸ್ನೇಹಿತರು, ರಾಮ್ ಸಿಂಗ್ ನನ್ನ ದೊಡ್ಡ ಅಣ್ಣನ ಹಾಗೆ. ನಮ್ಮ ಗ್ರೂಪ್‌ನಲ್ಲಿ ಕಂಪ್ಯೂಟರ್ ಸಿಮಿಲೇಶನ್ ಮಾಡುತ್ತಿದ್ದುದರಿಂದ ಬನಾರಸ್ ವಿಶ್ವವಿಧ್ಯಾನಿಲಯದಲ್ಲೇ ಒಳ್ಳೆಯ ಕಂಪ್ಯೂಟರುಗಳು ನಮ್ಮಲ್ಲಿ ಇದ್ದವು. ಎಚ್.ಪಿ. ಮ್ಯಾಗ್ನಮ್ ಮಲ್ಟಿ ರಿಸ್ಕ್ ಎನ್ನುವ ಒಂದು ಮಿಡ್ ರೇಂಜ್ ಕಂಪ್ಯೂಟರ್ರೂ ಹಾಗೂ ಎರಡು ಪಿ.ಸಿ. ಯೂ ಇದ್ದವೂ. ೧೯೯೪-೧೯೯೫ ರಲ್ಲಿ ಇದೇ ದೊಡ್ಡ ವಿಷಯವಾಗಿತ್ತು. ಅಲ್ಲಿನ ದೊಡ್ಡ ಕಂಪ್ಯೂಟರ್ ಗೆ ಒಂದು ಕನ್ಸೋಲ್ ರೂಮ್ ಇತ್ತು, ಹಾಗೂ ಅರ್ಧ ದಿನದ ಮಟ್ಟಿಗೆ ಪವರ್ ಸಪ್ಲೈ ಮಾಡುವಷ್ಟು ದೊಡ್ಡ ಯು.ಪಿ.ಎಸ್. ಕೂಡಾ ಇತ್ತು. ಬನಾರಸ್ಸಿನಲ್ಲಿ ಬೇಸಿಗೆಯಲ್ಲಿ ಹೊರಗೆ ೪೫ ಡಿಗ್ರಿ ಬೇಸಿಗೆ ಬಿಸಿಲಿರುತ್ತಿದ್ದರೆ ನಾವು ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕೂತಿರುತ್ತಿದ್ದೆವು ಹಾಗೂ ಎಲ್ಲ ಕಡೆ ಕರೆಂಟ್ ಹೋದರೂ ನಮ್ಮಲ್ಲಿ ಆ ರೀತಿಯ ತೊಂದರೆ ಎಂದೂ ಇದ್ದಿದ್ದಿಲ್ಲ.

ರಾಮ್ ಸಿಂಗ್ ಯುನಿಕ್ಸ್‌ನಲ್ಲಿ ಗುರು, ಆಪರೇಟಿಂಗ್ ಸಿಸ್ಟಂ‌ನಿಂದ ಹಿಡಿದು ಅದರಲ್ಲಿ ಲೋಡ್ ಮಾಡಲಾಗಿದ್ದ ಫೋರ್ಟಾನ್, ಹಾಗೂ ಸಿ. ಯಲ್ಲೂ ಆತನಿಗೆ ಅಗಾಧವಾದ ಪರಿಣಿತಿ ಇತ್ತು. ಅವನ ಜೊತೆಯಲ್ಲಿ ಪಿ.ಸಿ.ಯನ್ನೂ ಅದರಲ್ಲೂ ಆಗಿನ ಡಾಸ್ ಆಪರೇಟಿಂಗ್ ಸಿಸ್ಟಂ ಅನ್ನು ಒಳಗೂ-ಹೊರಗೂ ತಿಳಿದುಕೊಂಡ ನಾನು ಒಂದು ರೀತಿಯಲ್ಲಿ ಭಲೇಜೋಡಿಯಾಗಿದ್ದೆವು. ಕ್ಯಾಂಪಸ್ಸಿನಲ್ಲಿ, ನಮ್ಮ ವಿಭಾಗದಲ್ಲಿ ಯಾರದ್ದೇ ಕಂಪ್ಯೂಟರ್ ತೊಂದರೆಗಳಿದ್ದರೂ ರಾಮ್ ಸಿಂಗ್‌ಗೆ ಕರೆ ಬರುತ್ತಿತ್ತು, ಅವನ ಜೊತೆಯಲ್ಲಿ ನಾನೂ ಹೋಗುತ್ತಿದ್ದೆ, ಆಗಿನ್ನೂ ವಿಂಡೋಸ್ ೩.೧ ಮಟ್ಟದಲ್ಲಿ ಇದ್ದು ಒಂದು ಅಪ್ಲಿಕೇಷನ್ ಅಂತೆ ನಡೆಯುತ್ತಿದ್ದರೂ ಡಾಸ್ ೫.೦, ೬.೦ ಹಾಗೂ ಆಗಿನ ಕಾಲದ ಹಾರ್ಡ್‌ವೇರುಗಳಿಗೂ ಅಷ್ಟೊಂದು ಆಗದಿದ್ದುದರಿಂದ ಒಬ್ಬರಲ್ಲ ಒಬ್ಬರಿಗೆ ತೊಂದರೆ ಆಗುತ್ತಿದ್ದುದೂ ಅವುಗಳಲ್ಲಿ ಕೆಲವನ್ನು ನಿಖರವಾಗಿ, ಉಳಿದವುಗಳನ್ನು ಪದೇ-ಪದೇ ಪ್ರಯತ್ನಿಸಿ ಒಂದಲ್ಲ ಒಂದು ರೀತಿಯಲ್ಲಿ ಸರಿ ಮಾಡೇ ತೀರುತ್ತಿದ್ದೆನಾದ್ದರಿಮ್ದ ಎಲ್ಲರೂ ನನ್ನನ್ನು ದೊಡ್ಡ ಮನುಷ್ಯನೆಂದು ಗೌರವಿಸುತ್ತಿದ್ದರು - ಕಂಪ್ಯೂಟರ್‌ಗಳು ಕೆಟ್ಟು ಹೋಗುವುದನ್ನು ತಪ್ಪು ಎಂದವರ್‍ಯಾರು? ನನ್ನನ್ನು ರಾಮ್ ಸಿಂಗ್ ಉಳಿದವರಿಗೆ ಪರಿಚಯಿಸುತ್ತಿದ್ದುದು ಇನ್ನೂ ಚೆನ್ನಾಗಿ ನೆನಪಿದೆ, ಯಾವುದೇ ಲಾಸ್ಟ್ ನೇಮ್ ನನ್ನ ಹೆಸರಿನಲ್ಲಿಲ್ಲವಾದ್ದರಿಂದ ನನ್ನ ಹೆಸರನ್ನು ಕೇಳಿದವರು 'ಆಗೇ ಕ್ಯಾ ಹೈ' ಎನ್ನುತ್ತಿದ್ದರು, ರಾಮ್ ಸಿಂಗ್ 'ಆಗೇ ಕುಛ್ ನಹೀನಾ ಹೈ, ಏ ದಕ್ಷೀಣ್‌‍ಸೆ ಆಯಾ ಹೈ' ಎನ್ನುತ್ತಿದ್ದ ಅವರೆಲ್ಲರೂ ಮುಖದಲ್ಲಿ ಬರೆಯಲಾಗದ ಅದ್ಯಾವುದೋ ಭಾವನೆಯನ್ನು ಪ್ರಕಟಿಸಿ ಸುಮ್ಮನಾಗುತ್ತಿದ್ದರು.

ರಾಮ್ ಸಿಂಗ್‌ಗೆ ಅಮೇರಿಕೆಗೆ ಬರಬೇಕೆನ್ನುವ ಆಸೆ ಬಹಳಷ್ಟಿತ್ತು, ತನ್ನ ಪಿ.ಎಚ್.ಡಿ. ಬೇಗ ಬೇಗನೆ ಆಗಲಿ, ಮುಂದೆ ಎಲ್ಲಾದರೂ ಕೆಲಸ ಹುಡುಕಿಕೊಂಡು ಹೇಗಾದರೂ ಇರುತ್ತೇನೆ ಎನ್ನುವಂತಾಗಿದ್ದ. ರಾಮ್ ಸಿಂಗ್‌ಗೆ ಪಿ.ಎಚ್‌ಡಿ. ಇನ್ನೂ ಮುಗಿಯುವುದಕ್ಕಿಂತ ಮುಂಚೆಯೇ ಮದುವೆಯೂ ಆಗಿತ್ತು, ನಾನು ಪರಿಚಯವಾಗುವ ಹೊತ್ತಿಗೆ ಆಯುಷ್ ಎನ್ನುವ ಒಬ್ಬ ಮಗನೂ ಇದ್ದ. ನಮ್ಮ ಲ್ಯಾಬ್‌ನಲ್ಲಿರುವ ಎರಡು ಪಿ.ಸಿ.ಗಳಲ್ಲೊಂದರಲ್ಲಿ ಯಾರೋ ಗುಪ್ತ ಎಂಬುವವರು ಸಿ ಯಲ್ಲಿ ಬರೆದ ಹಾರೋಸ್ ಎನ್ನುವ ಅಪ್ಲಿಕೇಶನ್ ಇತ್ತು, ಅದರಲ್ಲಿ ನಮ್ಮ ಹುಟ್ಟಿದ ತಾರೀಖು, ಜನ್ಮ ಸ್ಥಳ, ಮುಂತಾದ ವಿವರಗಳನ್ನು ಕೊಟ್ಟರೆ ಕುಂಡಲಿ ಬರುತ್ತಿತ್ತು. ನಾನೇನು ದೊಡ್ಡ ಅಸ್ಟ್ರಾಲಜರ್ ಅಲ್ಲದಿದ್ದರೂ ಅಗಾಗ್ಗೆ ಬಿಡುವಿನಲ್ಲಿ ಓದಿ ಯಾರು ಉಚ್ಛ, ಯಾರು ನೀಚ, ಯಾವ ಗ್ರಹ ಎಲ್ಲಿದ್ದರೆ ಒಳ್ಳೆಯದು ಮುಂತಾದವುಗಳನ್ನು ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದೆ. ಇದೇ ಸಾಫ್ಟ್‌ವೇರ್‌ನಲ್ಲಿ ನನ್ನ ಜನ್ಮ ವಿವರಗಳನ್ನು ಹಾಕಿ ನೋಡಿದರೆ ನಾನು ಕೆಟ್ಟ ಶನಿ ದೆಸೆಯ ಮಧ್ಯೆದಲ್ಲಿರುವಂತೆಯೂ, ಹತ್ತೊಂಬತ್ತು ವರ್ಷಗಳ ದೀರ್ಘವಾದ ಮಹಾದೆಸೆ, ಅಂತರದೆಸೆ, ಪ್ರತ್ಯಾಂತರ ದೆಸೆಗಳ ವಿವರಗಳೆಲ್ಲವನ್ನು ಇಟ್ಟುಕೊಂಡು ನನ್ನ ತಿಳುವಳಿಕೆಯಲ್ಲೇ ನೋಡಲಾಗಿ 'ಟನಲಿನ ಕೊನೆಯಲ್ಲಿ ಬೆಳಕು ಇದ್ದುದು ಸ್ಪಷ್ಟವಾದರೂ ಟನಲ್ ತುಂಬಾ ಉದ್ದವಿದ್ದಂತೆ' ಕಂಡುಬಂದಿತು! ಹಿಂದೆ ಕಳೆದು ಹೋದ ಶನಿದೆಸೆಯ ಅಂಶಗಳನ್ನು ರೆಟ್ರ್‍ಓಸ್ಪೆಕ್ಟಿವ್ ಆಗಿ ನೋಡಿದಾಗ ಎಲ್ಲವೂ ನಿಜವೆಂದೂ ಅನ್ನಿಸಿತು. ನನ್ನ ಈ ಕುತೂಹಲವನ್ನು ನೋಡಿ ರಾಮ್ ಸಿಂಗ್ ತನ್ನ ಕುಂಡಲಿಯನ್ನೂ ಅನಲೈಜ್ ಮಾಡಬೇಕಾಗಿ ಕೇಳಿಕೊಂಡಿದ್ದರಿಂದ ಅವನ ಕುಂಡಲಿಯನ್ನು ನೋಡಿದೆನಾದರೂ ಅವನ 'ನಾನು ಫಾರಿನ್‌ಗೆ ಹೋಗ್ತೀನಾ' ಎನ್ನುವ ಅವನ ಖಚಿತವಾದ ಉತ್ತರಬೇಡುವ ಪ್ರಶ್ನೆಗೆ ನಾನು ಯಾವತ್ತೂ ಖಚಿತವಾದ ಉತ್ತರವನ್ನು ಕೊಡುವುದು ಸಾಧ್ಯವಾಗಲೇ ಇಲ್ಲ - ಅದೂ ಅಲ್ಲದೇ ಜಾತಕಗಳನ್ನು ನೋಡಿ ನಿಖರವಾದ ಉತ್ತರಗಳನ್ನು ಕೊಡುವುದು ನನಗೆ ಗೊತ್ತೂ ಇರಲಿಲ್ಲ.

ಆದರೆ ಅದೇ ಸಾಫ್ಟ್‌ವೇರ್ 'ನಿಮಗೆ ಶನಿ ದೆಸೆ ಇದೆ, ನೀಲವನ್ನು ಧರಿಸಿ' ಎಂದು ಸಲಹೆ ಕೊಟ್ಟ ಹಾಗೆ ನಾನು ಏಕೆ ಒಂದು ಕೈ ನೋಡಬಾರದು ಎಂದುಕೊಂಡು ರ್‍ಆಮ್ ಸಿಂಗ್ ಜೊತೆಯಲ್ಲಿ ಒಮ್ಮೆ ಗೊದೋಲಿಯಾದ ಚಿನ್ನ-ರತ್ನಗಳ ವರ್ತಕರ ಬಳಿ ಹೋದೆ. ಅಲ್ಲಿ ನೀಲದ ಬಗ್ಗೆ ವಿಚಾರಿಸಲಾಗಿ ೫೦೦ ರೂಪಾಯಿಗಳಿಂದ ೫೦೦೦ ರೂಪಾಯಿಗಳವರೆಗಿನ ಎಲ್ಲ ಹರಳುಗಳನ್ನೂ ಅಂಗಡಿಯವರು ತೋರಿಸಿದರು, ನಾನು ಅವುಗಳಲ್ಲೇ ಒಂದು ರತ್ತಿಗೂ (ಕ್ಯಾರೆಟ್) ಸ್ವಲ್ಪ ಕಡಿಮೆ ತೂಕವಿರುವ ನೀರಿನ ಬಣ್ಣವಿರುವ ಕೊಲಂಬೋ ನೀಲವನ್ನು ೬೫೦ ರೂಪಾಯಿಗೆ ಖರೀದಿಸಿ ಅದನ್ನು ಬೆಳ್ಳಿಯಲ್ಲಿ ಉಂಗುರವನ್ನಾಗಿ ಕಟ್ಟಿಸಿದೆ. ನಮ್ಮಲ್ಲಿ ಒಂದು ಮಾತನ್ನು ಹೇಳುತ್ತಾರೆ, ನೀಲ ತುಂಬಾ ಪ್ರಭಾವಶಾಲಿಯಾದ ರತ್ನ, ಅದರ ಜೊತೆ ಹುಡುಗಾಟವಾಡಬಾರದೆಂದು - 'ಒಲಿದರೆ ನೀಲ, ಮುನಿದರೆ ಮೂಲ' ಎನ್ನುತ್ತಾರೆ. ನಾನು ಬೇರೆಯವರು ನೀಲವನ್ನು ಮೊದಲು ತಮ್ಮ ಜೇಬಿನಲ್ಲೋ, ರಾತ್ರಿ ಮಲಗಿದಾಗ ತಲೆ ದಿಂಬಿನ ಕೆಳಗೆ ಇಟ್ಟುಕೊಂಡೋ ಒಂದಿಷ್ಟು ದಿನ 'ಟ್ರೈ' ಮಾಡಿ ನಂತರ ಧರಿಸುತ್ತಾರೆ. ಆದರೆ ಇವೆಲ್ಲವೂ ಗೊತ್ತಿದ್ದೂ ಗೊತ್ತಿದ್ದೂ ನಾನು 'ಏನು ಬೇಕಾದ್ದಾಗಲಿ' ಎಂದು ನೀಲದ ಉಂಗುರವನ್ನು ಧರಿಸಿಕೊಂಡು ಓಡಾಡತೊಡಗಿದೆ. ಆ ಉಂಗುರವನ್ನು ಧರಿಸಿದಂದಿನಿಂದ ನಾನು ನಿಂತ ಜಾಗದಲ್ಲಿ ನಿಂತಿಲ್ಲ, ಕೆಲವೇ ತಿಂಗಳುಗಳಲ್ಲಿ ಲಗುಬಗೆಯಿಂದ ಬನಾರಸ್ಸನ್ನು ಬಿಟ್ಟು, ಎಲ್ಲೆಲ್ಲೋ ಹೋಗಿ, ನನಗೆ ಈ ಉಂಗುರವನ್ನು ಧರಿಸಲು ಸಹಾಯ ಮಾಡಿದ ರಾಮ್ ಸಿಂಗ್ ಬರದೇ ಇದ್ದರೂ ನಾನಂತೂ ಅಮೇರಿಕೆಗೆ ಬಂದೇ ಬಿಟ್ಟೆ! ಈ ಉಂಗುರದಿಂದ ಒಳ್ಳೆಯದಾಯಿತೋ ಕೆಟ್ಟದಾಯಿತೋ ಯಾರು ಬಲ್ಲರು, ಬನಾರಸ್ಸಿನಲ್ಲಿ ಕೈಯಲ್ಲಿ ಬೆಳ್ಳಿಯ ಉಂಗುರವನ್ನು ಧರಿಸುತ್ತಿದ್ದುದರಿಂದ ಉತ್ತರಭಾರತದವರ ಸಂಪ್ರದಾಯದಲ್ಲಿ ನಾನೂ ಒಂದಾಗಲು ಖಂಡಿತವಾಗಿ ಸಹಾಯವಾಗಿತ್ತು (ಅಲ್ಲಿ ಹೆಚ್ಚಿನ ಜನರು ಒಂದಲ್ಲ ಒಂದು ರತ್ನವನ್ನು ಕೈಯಲ್ಲಿ ಧರಿಸುತ್ತಾರೆ ಎನ್ನೋ ಅರ್ಥದಲ್ಲಿ).

***

ಇವತ್ತಿಗೂ ನನ್ನ ದೊಡ್ಡ ಅಣ್ಣನಿಗೆ ಫೋನ್ ಮಾಡಿ ಕೇಳಿದರೆ, ನಾನು ಅಮೇರಿಕೆಗೆ ಬಂದದ್ದು ಈ ಉಂಗುರದ ದೆಸೆಯಿಂದಲೇ ಎಂದು ಅವನು ಹೇಳುತ್ತಾನೆ! ಬನಾರಸ್ಸಿನ ಪ್ರಭಾವ ನನ್ನ ಮೇಲೆ ಎಷ್ಟಿದೆಯೆಂದರೆ ಇಂದಿಗೂ ಸಹ ನಾನು ನನ್ನ ಕೈಯಲ್ಲಿ ಬೆಳ್ಳಿಯಲ್ಲಿ ಮಾಡಿಸಿದ ಉಂಗುರವೊಂದರಲ್ಲಿ ನೀಲವನ್ನು ಧರಿಸುತ್ತೇನೆ, ಆ ಹಳೇ ಉಂಗುರ ನನ್ನ ಹತ್ತಿರವೇ ಇನ್ನೂ ಇದ್ದರೂ ಅದರ ಬದಲಿಗೆ ಬೇರೆಯ ಹರಳನ್ನು ಹಾಕಿಕೊಂಡಿದ್ದೇನೆ.

ನನಗೆ ಒಳ್ಳೆಯದೇನಾದರೂ ಆಗಿದ್ದರೆ ಅದು ನೀಲದ ಮಹಿಮೆ ಇರಬಹುದು, ಅಥವಾ ಅದೆಷ್ಟೋ ಸಾರಿ ಬನಾರಸ್ಸಿನ ಗಂಗೆಯಲ್ಲಿ ಮಿಂದು ಪಾಪಗಳನ್ನು ಕಳೆದುಕೊಂಡಿದ್ದಕ್ಕಿರಬಹುದು!

2 comments:

Anveshi said...

ಕೆಲವು ನಂಬಿಕೆಗಳನ್ನು ಮೂಢ ನಂಬಿಕೆಗಳು ಅಂತ ತಳ್ಳಿಹಾಕಬಹುದು. ಆದರೆ ಅದನ್ನು ಅನುಸರಿಸುವವನಿಗೆ ಅದೊಂದು ಆತ್ಮವಿಶ್ವಾಸವನ್ನು ಪೋಷಿಸುವ ಕೆಲಸ ಮಾಡುವುದಂತೂ ಸತ್ಯಸ್ಯ ಸತ್ಯ.
ಆಚರಿಸುವವರಿಗೂ ಗೊತ್ತಿರುತ್ತದೆ ಅದು ಮೂಢನಂಬಿಕೆ ಅಂತ. ಆದ್ರೂ ಬಿಡಲೊಲ್ಲರು. ಯಾಕೆಂದರೆ ಅದರಿಂದಾಗಿ ಆತ್ಮವಿಶ್ವಾಸ ವೃದ್ಧಿಯಾಗುತ್ತದಲ್ಲ!

Satish said...

ಅನ್ವೇಷಿಗಳೇ,

ಬರೀ 'ನಂಬಿಕೆ' ಎಂದು ಕರೆದರೆ ನಿಮ್ಮ ಅಡ್ಡಿ ಇಲ್ಲವಷ್ಟೇ? 'ಮೂಢನಂಬಿಕೆ' ಯಲ್ಲಿ 'ನಂಬಿಕೆ'ಗಂಟಿದ 'ಮೌಲ್ಯ'ವನ್ನು 'ಮೌಢ್ಯ'ವೆಂದು ಕರೆಯಲು ಅದೇಕೋ ಮನಸು ಬಾರದು! :-)