ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!
"A true friend stabs you in the front."- Oscar Wilde
'ಇವನೇನಪ್ಪಾ ಬರೀ ಇಲ್ಲಿ ತನ್ನ ಪ್ಲಾಬ್ಲಮ್ ಬಗ್ಗೆ ಕೊರೀತಾನೆ' ಅಂದುಕೋತೀರೋ ಏನೋ, ಮತ್ತೆ ನಿಮ್ಮಂಥ ಸ್ನೇಹಿತರು ಇರೋದಾದ್ರೂ ಯಾಕೆ ಹೇಳಿ?
'ಅದೇನು ಸ್ನೇಹ ಮತ್ತು ಅದರ ಬೆಲೆ, ಅದರಲ್ಲೂ ನಾಕು ಲಕ್ಷ ರೂಪಾಯಿ, ಬೇಗ ಹೇಳಿ ಬಿಡು' ಎಂದಿರೋ, ಕ್ಷಮಿಸಿ - ಈ ಅಂತರಂಗವನ್ನು ನೀವು ಸ್ವಲ್ಪ ವ್ಯವಧಾನದಿಂದ ನೋಡಲಿ ಎನ್ನುವ ಆಸೆ ನನ್ನದು.
***
ಸಾಗರದಲ್ಲಿ ನನ್ನ ಜೊತೆ ಡ್ರೈವರ್, ಕಂಡಕ್ಟರುಗಳು ಜೊತೆಯಲ್ಲಿದ್ದರೆಂದು ಈ ಮೊದಲೇ ಬರೆದಿದ್ದೆ. ಅವರಲ್ಲೆಲ್ಲ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾದ ವ್ಯಕ್ತಿಯೆಂದರೆ ಜಗದೀಶ. ಈತನ ಸಾಧು ಗುಣಗಳ ಜೊತೆಯಲ್ಲಿ ಹುದುಗಿರುವ ಹಾಸ್ಯ ಪ್ರವೃತ್ತಿಗಳ ದೆಸೆಯಿಂದ ಬಹಳಷ್ಟು ಸಾರಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇನೆ - ವೃತ್ತಿಯಲ್ಲಿ ಬಸ್ಸಿನ ಕಂಡಕ್ಟರಾದರೂ ಅವನ ಕೈ ಚಳಕ ಅದ್ಭುತವಾದದ್ದು. ಜಗದೀಶನ ಕೈಯಲ್ಲಿ ಬಸ್ಸನ್ನು ಕೊಟ್ಟು ಕಳಿಸಿದರೆ ಹಿಂತಿರುಗಿ ತಂದೇ ತರುತ್ತಾನೆ ಅನ್ನೋದು ಸಾಗರದ ಬಸ್ ಸ್ಟಾಂಡಿನಲ್ಲಿ ಜನಜನಿತವಾದ ಮಾತಾಗಿತ್ತು - ಈ ಮಾತು ಏಕೆ ಮುಖ್ಯವೆಂದರೆ, ಒಬ್ಬ ಖಾಸಗೀ ಬಸ್ ಮಾಲೀಕನ ಬಳಿ ಕೇವಲ ಒಂದು ಅಥವಾ ಎರಡು ಬಸ್‌ಗಳಿರಬಹುದು, ಅವು ಪ್ರತಿದಿನವೂ ತಮ್ಮ-ತಮ್ಮ ರೂಟ್‌ಗಳಲ್ಲಿ ಸರಿಯಾಗಿ ನಡೆಯದಿದ್ದರೆ ಅವರ ಬಂಡವಾಳಕ್ಕೆ ಸಂಚಕಾರ - ಮೇಲ್ನೋಟಕ್ಕೆ ಬಸ್ ಮಾಲೀಕರಾದರೂ 'ಇವತ್ತು ದುಡಿದು ಇವತ್ತು ತಿನ್ನುವ' ಬವಣೆ ತಪ್ಪಿದ್ದಿಲ್ಲ, ಏಕೆಂದರೆ ಬಂದ ಲಾಭಾಂಶದಲ್ಲಿ ಹೆಚ್ಚಿನಪಾಲು ಬ್ಯಾಂಕಿನ ಅಸಲು, ಬಡ್ಡಿಗೇ ಸೇರುತ್ತದೆ.
ಜಗದೀಶ ಮುಂದೆ ಡ್ರೈವಿಂಗ್‌ನ್ನು ಕಲಿತು, ತನ್ನ ತಮ್ಮಂದಿರೊಡಗೂಡಿ ಒಂದೆರಡು ಬಸ್ಸುಗಳನ್ನು ತಾನೇ ಇಟ್ಟುಕೊಂಡು ಅದರ ಮಾಲೀಕನೂ ಆದ. ಇತ್ತ ನಾನು ಭಾರತದ ಊರು-ಊರುಗಳನ್ನು ತಿರುಗಿ ಅಮೇರಿಕದ ಹಾದಿ ಹಿಡಿದೆ. ನನ್ನ ಮತ್ತು ಜಗದೀಶನ ಸುಮಾರು ೧೨ ವರ್ಷಗಳ ಗೆಳೆತನದಲ್ಲಿ (೧೯೮೮-೨೦೦೦), ನಾವಿಬ್ಬರೂ ಫ್ಯಾಮಿಲಿ ಸ್ನೇಹಿತರಾಗಿದ್ದೆವು, ನನ್ನ ಮದುವೆಗೆ ಅವನ ಮನೆಯವರೆಲ್ಲರೂ ಬಂದಿದ್ದರು, ಅವನ ಮನೆಗೆ ನಾನು ಹೋಗಿದ್ದಿದೆ, ಅವನೂ ನಮ್ಮ ಮನೆಗೆ ಬಂದಿದ್ದಾನೆ.
***
ನಾನು ೧೯೯೮ ರಲ್ಲಿ ಭಾರತಕ್ಕೆ ಹೋದಾಗ ಜಗದೀಶ (ಆಗಲೇ ತಾನು ಬಸ್ಸಿನ ಮಾಲಿಕನಾಗಿ ಸ್ವಯಂ ಭಡ್ತಿ ಪಡೆದಿದ್ದವ), ನನ್ನಲ್ಲಿ ತನ್ನ ಬಸ್ಸುಗಳನ್ನು ವಿಸ್ತರಿಸಿಕೊಳ್ಳುವ ಪ್ರಸ್ತಾವ ಮಾಡಿದ, ಅದಕ್ಕಾಗಿ ಹಣಕಾಸಿನ ಸಹಾಯವನ್ನೂ ಕೇಳಿದ - ತಾನು ತೆಗೆದುಕೊಂಡ ಹಣವನ್ನು ನ್ಯಾಯವಾಗಿ ಹಿಂತಿರುಗಿಸುತ್ತೇನೆಂತಲೂ, ಮತ್ತೆಲ್ಲ ಭರವಸೆಗಳನ್ನೂ ನೀಡಿದ - ನಾನು ಸ್ನೇಹದ ಕಟ್ಟಿಗೆ ಬಿದ್ದು ಹಾಗೂ ಪ್ರಪಂಚವನ್ನೂ ಇನ್ನೂ ಸರಿಯಾಗಿ ನೋಡಿರದ ನನ್ನ ಮೌಢ್ಯತೆಗೆ ಮಣಿದು 'ಸರಿ, ನಾಲ್ಕು ಲಕ್ಷ ರೂಪಾಯಿಗಳನ್ನು ಕಂತಿನಲ್ಲಿ ಕೊಡುತ್ತೇನೆ' ಎಂದು ಒಪ್ಪಿಕೊಂಡು ಮೊದಲನೇ ಕಂತಿನಲ್ಲಿ ಐವತ್ತು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಕೊಟ್ಟೆ. ಆಗ ನನ್ನ ಅಕ್ಕ ನನಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಳು, ಆದರೂ ನಾನೂ ಯಾವ ಮಾತನ್ನೂ ಕೇಳದ ಕಿವುಡನಾಗಿದ್ದೆ.
ಮುಂದೆ ರಜೆ ಮುಗಿಸಿ ಹಿಂತಿರುಗಿದ ಮೇಲೆ ಜಗದೀಶ ಮೇಲಿಂದ ಮೇಲೆ ಕರೆಗಳನ್ನು ಮಾಡುತ್ತಿದ್ದ, ಪತ್ರವನ್ನೂ ಬರೆಯುತ್ತಿದ್ದ. ನಾನು ಮುಂದಿನ ಕಂತಾಗಿ ಒಂದೂವರೆ ಲಕ್ಷ ರೂಪಾಯಿಗಳನ್ನು ೨೦೦೦ ದಲ್ಲಿ ಕೊಟ್ಟೆ. ಹಾಗೂ ಮುಂದೆ ಮದುವೆಯಾದ ಮೇಲೆ ನನ್ನ ಹೆಂಡತಿ ಬೇಡವೆಂದರೂ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದೆಂಬ ಒಂದೇ ತತ್ವಕ್ಕೆ ಮಣಿದು, ಇನ್ನುಳಿದ ಎರಡು ಲಕ್ಷ ರೂಪಾಯಿಗಳನ್ನೂ ಕೊಟ್ಟೆ.
ಈ ಹಣವನ್ನು ಪಡೆದ ಮೇಲೆ ಜಗದೀಶನ ನಡತೆಯಲ್ಲಿ ಬಹಳಷ್ಟು ಬದಲಾವಣೆಗಳಾದವು. ನನ್ನ ಕರೆಗೆ ತಪ್ಪಿಸಿಕೊಂಡು ಓಡಾಡುವ ಅವನ ಜೊಳ್ಳನ್ನು ಕಂಡು ಹಿಡಿಯಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ - ಮುಂದೆ ೨೦೦೩ ರ ಹೊತ್ತಿಗೆ ಅವನ ಬಸ್ಸಿನ ವ್ಯವಹಾರವೆಲ್ಲ ನಿಚ್ಚಳವಾಗಿ ನಷ್ಟದಲ್ಲಿತ್ತು, ನನಗೆ ಹಣ ಹಿಂದೆ ಬರುವ ಯಾವುದೇ ಲಕ್ಷಣಗಳು ಈ ವರೆಗೂ ತೋರುತ್ತಿಲ್ಲ.
ನಾನು ೨೦೦೩ ರಲ್ಲಿ ಭಾರತಕ್ಕೆ ಹೋದಾಗ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ (ಅಥವಾ ಕರೆಸಿದ್ದೆ), ಅವನು ನನ್ನನ್ನು ಮುಖ ಎತ್ತಿ ನೋಡುವ ಆತ್ಮ ಸ್ಥೈರ್ಯವನ್ನೂ ಉಳಿಸಿಕೊಂಡಿರಲಿಲ್ಲವೆಂದು ಕಾಣುತ್ತಿತ್ತು. ಮೊದಲೇ ಬರೆದಂತೆ ಸಾಧು ಸ್ವಭಾವದ ಅವನಿಗೆ ತಾನು ಮಾಡಿದ್ದು ಮೋಸ ಎನ್ನುವುದು ತಿಳಿಯಲು ಬಹಳ ಹೊತ್ತು ಬೇಕಾಗಲಿಲ್ಲ. ಆ ದಿನ ಅವನೇ ಹೇಳಿದಂತೆ ೨೦೦೩ ರ ಸೆಪ್ಟೆಂಬರ್ ಒಳಗೆ ಸ್ವಲ್ಪ ಹಣ ಹಿಂತಿರುಗಿಸುತ್ತೇನೆ ಎಂದವನು ಇವತ್ತಿಗೂ ಒಂದು ಪೈಸೆಯನ್ನೂ ಕೊಟ್ಟಿಲ್ಲ - ನಾನು ಅವನನ್ನು ಮಾತನಾಡಿಸಬೇಕೆಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ, ಅವನು ಯಾವತ್ತೂ 'ಮನೆಯಲ್ಲಿರೋಲ್ಲ'. ನನ್ನ ಎರಡನೇ ಅಣ್ಣನನ್ನೂ ಅವನ ಮನೆಗೆ ಕಳಿಸಿದ್ದೇನೆ, ಆದರೂ ಸಿಕ್ಕಿಲ್ಲ.
***
'ಅಣ್ಣಾ, ಏನಪ್ಪಾ ಮಾಡೋದೀಗ?' ಎಂದು ಯಾವತ್ತೋ ಫೋನಿನಲ್ಲಿ ನನ್ನ ಅಣ್ಣನನ್ನು ಕೇಳಿದ್ದೆ.'ಕೊಟ್ಟೋನ್ ಕೋಡಂಗಿ, ಇಸಗಂಡೋನ್ ಈರಭದ್ರ, ಈಗ ಹಣೆ ಮುಟ್ಟಿಕೋ, ಮತ್ತೇನ್ ಮಾಡ್ತೀ?' ಎಂದು ಉತ್ತರ ಬಂತು.
ಬೆಂಗಳೂರಿನ ಹಿತೈಷಿಗಳನ್ನು ಕೇಳಿದ್ದಕ್ಕೆ 'ಒಂದೇ ಕಾನೂನ್ ಪ್ರಕಾರ ಕೋರ್ಟಿಗೆ ಎಳೀರಿ, ಇಲ್ಲಾ ಗೂಂಡಾಗಳನ್ನು ಬಿಡಿ' ಎನ್ನುವ ಸಲಹೆ ಬಂತು.
ನನ್ನ ಅಮ್ಮ 'ಒಡ ಹುಟ್ದೋರಿಗೆ ದುಡ್ಡ್ ಕೊಟ್ಟಿದ್ರೆ ಅವರಾದ್ರೂ ನಿನ್ನ ಹೆಸರ್ ಹೇಳಿ ಉದ್ದಾರಾಗ್ತಾ ಇದ್ರು, ಅಲ್ವೋ ಇಷ್ಟೊಂದ್ ತಿಳುವಳಿಕೇ ಇರೋ ನೀನೇ ಹಿಂಗ್ ಮಾಡಿದ್ರೆ ಹೆಂಗೆ' ಎನ್ನುತ್ತಾಳೆ ಅಲ್ಲದೇ ನಾನು ಅವಳೊಟ್ಟಿಗೆ ಮಾತನಾಡಿದ ಹೆಚ್ಚಿನ ಕಾಲ್‌ಗಳು 'ಆ ಜಗದೀಶನ ಹತ್ರ ದುಡ್ಡು ಕೇಳೋ' ಎಂದು ಕೊನೆಯಾಗುತ್ತೆ, ನಾನು 'ಆಯ್ತು' ಅಂತೀನಿ.
ಇಲ್ಲಿ, ನಮ್ಮ ಮನೆಯಲ್ಲಿ ನನ್ನ ಹೆಂಡತಿ ಅವಾಗಾವಾಗ ತಿವಿತಾನೆ ಇರ್ತಾಳೆ.
ಒಟ್ಟಿನಲ್ಲಿ ಎಲ್ಲದರಲ್ಲೂ ಸರಿಯಾಗಿದ್ದ ನಾನು, ನನ್ನ ಸ್ನೇಹಿತನೊಬ್ಬನಿಗೆ ಮಾತಿಗೆ ತಪ್ಪದಂತೆ ಹಣ ಕೊಟ್ಟು, 'ಗಂಡ ಸತ್ತ ದುಕ್ಕ ಒಂದ್ ಕಡೇ, ಬಡ್ ಕೂಪಿನ ಉರಿ ಮತ್ತೊಂದ್ ಕಡೇ' ಅನ್ನೋ ಹಾಗೆ ನಾಲ್ಕು ಲಕ್ಷ ಕಳಕೊಳ್ಳ ಸ್ಥಿತಿಗೆ ಬಂದಿದ್ದೂ ಅಲ್ದೇ, 'ಎಲ್ಲದರಲ್ಲೂ ಸರಿಯಾದ ಮನುಷ್ಯ ಇದೊಂದರಲ್ಲಿ ಎಡವಿದ' ಎಂದು ಜನರಿಂದ ಅನ್ನಿಸಿಕೊಂಡೂ, ನಾಲ್ಕು ಜನ ರೌಡಿಗಳನ್ನು ಬಿಟ್ಟು ಕಾಲು ಮುರಿಸಿದರೆ ಹೆಂಗೆ ಎಂದು ನೈತಿಕವಾಗಿ ಹೀನ ಯೋಚನೆಗಳಲ್ಲಿ ತೊಡಗಿಕೊಳ್ಳೂದೂ ಅಲ್ಲದೇ, ಅಥವಾ ಒಬ್ಬ ಸ್ನೇಹಿತನಾದವನ್ನು ಕೋರ್ಟಿಗೆ ಎಳೆಯಬೇಕಾಗುತ್ತಲ್ಲಾ ಅನ್ನೋ ಜಂಜಾಟದಲ್ಲಿ ಮುಳುಗಿದ್ದೇನೆ.
***
ಈ ಸಾರಿ ಭಾರತಕ್ಕೆ ಹೋದಾಗ ಜಗದೀಶನನ್ನು ಮತ್ತೆ ಮನೆಗೆ ಬರುವಂತೆ ಹೇಳುತ್ತೇನೆ. ಒಬ್ಬ ಲಾಯರ್‌ಗೆ ಒಂದು ಲಕ್ಷ ರೂಪಾಯಿ ಹಣವನ್ನು ಕೊಟ್ಟರೂ ಪರವಾಗಿಲ್ಲ, ನನ್ನ ಹಣ ನನಗೆ ಬೇಕು, ಅದರ ಈಗಿನ ಮೌಲ್ಯ ಸುಮಾರು ಒಂಭತ್ತು ಸಾವಿರ ಡಾಲರ್ ಮೊತ್ತಕ್ಕಿಂತಲೂ ನಾನು ಮಾತಿಗೆ ತಕ್ಕಂತೆ ಕೊಟ್ಟ ಹಣವನ್ನು ಮಾತಿಗೆ ತಕ್ಕಂತೆ ಪಡೆದೇ ಪಡೆಯುತ್ತೇನೆ ಹಾಗೂ ನನ್ನ ವ್ಯಕ್ತಿತ್ವಕ್ಕಂಟಿದ ಕಪ್ಪು ಚುಕ್ಕೆಯನ್ನು ಹೋಗಲಾಡಿಸುತ್ತೇನೆ ಎಂಬ ಛಲದಿಂದ.
ಜಗದೀಶನ ಈ ಸಾಲದ ಪ್ರಹಸನದಿಂದ ಒಂದತ್ತೂ ಒಳ್ಳೆಯದಾಗಿದೆ, ನಾನು ಯಾರಿಗೂ ಇತ್ತೀಚೆಗೆ ಹಣವನ್ನು ಕೊಟ್ಟಿಲ್ಲ, ಕೊಟ್ಟರೂ ಅದನ್ನು ದಾನದ ಅಥವಾ ಸಹಾಯದ ರೂಪದಲ್ಲಿ ನೀಡಿರೋದರಿಂದ ನನಗೆ ಹಣಕಾಸಿಗೆ ಸಂಬಂಧಿಸಿದ ಇನ್ಯಾವ ನೋವುಗಳೂ ಇಲ್ಲ.
4 comments:
ಜಗದೀಶನಂತಹವರು ಅಲ್ಲಲ್ಲಿ ಇದ್ದೇ ಇರುತ್ತಾರೆ. ಅದು ಜಗನಿಯಮ. ಕೊಡುವವನಿರುವಾಗ ತೆಗೆದುಕೊಳ್ಳುವವನೂ ಇರಬೇಕಾಗುತ್ತದೆ.
hey are u from "Sagara" nera by to shimoga? are u havyaka?
"ನಿಮ್ಮವರೇ",
ನೀವೇ ಬರೆದಂತೆ, ಜಗದೀಶರ ಬಸ್ಸಿನ ವ್ಯವಹಾರವೆಲ್ಲ ನಿಚ್ಚಳವಾಗಿ ನಷ್ಟದಲ್ಲಿರುವಾಗ, ಅವರು ನಿಮಗೆ ಹೇಗೆ ತಾನೆ ಹಣ ವಾಪಸು ಕೊಡಬಲ್ಲರು? ನಾಲ್ಕು ಲಕ್ಷ ರೂಪಾಯಿ ಕಡಿಮೆ ಮೊತ್ತವಲ್ಲ. ಆದರೂ, ಈಗಾಗಲೇ ಆತ್ಮ ಸ್ಥೈರ್ಯ ಕಳೆದುಕೊಂಡವರ ಮೇಲೆ, ಲಾಯರಿಂದ ನೋಟೀಸು ಕಳುಹಿಸುವ ಯೋಚನೆ ನನಗೇಕೋ ಇಷ್ಟವಾಗಲಿಲ್ಲ.
ನೀವು ಬರೆದಿರುವ ವಿಚಾರ ನನ್ನ ಅನುಭವವನ್ನು ನೆನಪಿಗೆ ತಂದಿತು.
ಸುಮಾರು ಹನ್ನೆರಡು ವರ್ಷಗಳ ಹಿಂದಿನ ಮಾತು. ಆಗಿನ್ನೂ ನನಗೆ ಮದುವೆಯಾಗಿರಲಿಲ್ಲ. ನಾನು ಮತ್ತು ನನ್ನ ಇಬ್ಬರು ಮಿತ್ರರು ಸೇರಿ ನ್ಯೂಯಾರ್ಕಿನಲ್ಲಿ ಒಂದು ಅಪಾರ್ಟ್‌ಮೆಂಟನ್ನು ಬಾಡಿಗೆಗೆ ತೆಗೆದುಕೊಂಡು ಇರುತ್ತಿದ್ದೆವು. ನಾನಾಗಲೇ ನನ್ನ ವಿದ್ಯಾಭ್ಯಾಸ ಮುಗಿಸಿ ಕೆಲಸದಲ್ಲಿದ್ದೆ. ಆದರೆ, ಉಳಿದಿಬ್ಬರೂ ಇನ್ನೂ ವಿದ್ಯಾರ್ಥಿಗಳಾಗಿದ್ದರು. ಅಪಾರ್ಟ್‌ಮೆಂಟ್ ಲೀಸ್ ನನ್ನ ಹೆಸರಲ್ಲಿತ್ತು. ಟೆಲಿಫೋನ್ ಮಾತ್ರ ನನ್ನ ಮಿತ್ರನ ಹೆಸರಿನಲ್ಲಿತ್ತು.
೧೯೯೪ರ ಆಗಸ್ಟ್ ತಿಂಗಳಲ್ಲಿ ನಾನು ಭಾರತಕ್ಕೆ ಭೇಟಿ ಇತ್ತು ಮದುವೆಯಾಗಿ ವಾಪಸು ಬಂದೆ. ವೀಸಾ ಪೇಪರುಗಳಿಗಾಗಿ, ನನ್ನ ಹೆಂಡತಿ ಭಾರತದಲ್ಲಿಯೇ ಇದ್ದಳು.
ವಾಪಸು ಬಂದಾಗ ನನಗೆ ಆಶ್ಚರ್ಯ ಕಾದಿತ್ತು. ನಮ್ಮ ಅಪಾರ್ಟ್‌ಮೆಂಟಿನ ಫೋನ್ ಕೆಲಸ ಮಾಡುತ್ತಿರಲಿಲ್ಲ. ಫೋನ್ ನನ್ನ ಮಿತ್ರನ ಹೆಸರಲ್ಲಿ ಇದ್ದುದರಿಂದ, ಆತನ ಬಳಿ ವಿಚಾರಿಸಿದೆ. ಟೆಲಿಫೋನ್ ಕಂಪೆನಿಯವರೊಡನೆ ಮಾತನಾಡಿ ಸರಿಪಡಿಸುವುದಾಗಿ ತಿಳಿಸಿದ. ಆದರೆ, ಎರಡು ದಿನವಾದರೂ ಫೋನ್ ಇನ್ನೂ ಕೆಲಸ ಮಾಡದ್ದರಿಂದ, ಅವನನ್ನು ಮತ್ತೊಮ್ಮೆ ವಿಚಾರಿಸಿದೆ. ಬಿಲ್ ಕೊಡದೆ ಇದ್ದುದರಿಂದ ಫೋನ್ ಕಂಪೆನಿಯವರು ಲೈನ್ ಕಟ್ ಮಾಡಿದ್ದಾರೆ ಎಂದ.
"ಬಿಲ್ ಯಾಕೆ ಕೊಡಲಿಲ್ಲ?"
"ತುಂಬಾ ಬಿಲ್ ಬಂದಿದೆ. ೧೮೦೦ ಡಾಲರ್. ನನ್ನ ಬಳಿ ಅಷ್ಟು ಹಣ ಇಲ್ಲ".
"ಅಷ್ಟೊಂದು ದೊಡ್ಡ ಮೊತ್ತ ಹೇಗಾಯಿತು?"
"ನನಗೆ ಗೊತ್ತಿಲ್ಲ. ನನ್ನ ಕಾಲಿಂಗ್ ಕಾರ್ಡ್ ನಂಬರ್ ಯಾರೋ ನನಗೆ ತಿಳಿಯದೆ ಉಪಯೋಗಿಸಿದ್ದಾರೆ" ಎಂದ.
ಯಾರೋ ಮೋಸ ಮಾಡಿರುವಾಗ ನನ್ನ ಮಿತ್ರನಿಗೆ ಬಿಲ್ ಕಳುಹಿಸಿರುವ ಕಂಪೆನಿಯ ಮೇಲೆ ಕೋಪ ಬಂತು. ಅವರಿಗೆ ಪತ್ರವೊಂದನ್ನು ಬರೆದು, ಬಿಲ್ ರದ್ದು ಮಾಡಿ ಫೋನ್ ಸರ್ವೀಸ್ ರೆಸ್ಟೋರ್ ಮಾಡಬೇಕೆಂದು ಮನವಿ ಮಾಡಿಕೊಂಡೆ. ಎರಡು ದಿನದ ನಂತರ ಫೋನ್ ಕಂಪೆನಿಯಿಂದ ಕರೆ ಬಂತು. ಕಾಲಿಂಗ್ ಕಾರ್ಡ್ ಉಪಯೋಗಿಸಿದವರನ್ನು ಪತ್ತೆ ಹಚ್ಚಿರುವುದಾಗಿಯೂ, ಅದು ಪೆನ್ಸಿಲ್ವೇನಿಯಾದಲ್ಲಿನ ಹುಡುಗಿಯೆಂದೂ, ಆಕೆಗೆ ನನ್ನ ಮಿತ್ರನೇ ತನ್ನ ಕಾಲಿಂಗ್ ಕಾರ್ಡ್ ನಂಬರ್ ಕೊಟ್ಟಿರುವ ವಿಚಾರ ತಿಳಿಯಿತು.
ಆಗಾಗ್ಗೆ ಅವಳೊಂದಿಗೆ ಫೋನ್ ಸಂಭಾಷಣೆ ನಡೆಸುತ್ತಿದ್ದ ನನ್ನ ಮಿತ್ರ, ಆಕೆಯೂ ತನಗೆ ಫೋನ್ ಮಾಡಲೆಂದು ತನ್ನ ಕಾಲಿಂಗ್ ಕಾರ್ಡ್ ನಂಬರ್ ಇತ್ತಿದ್ದ. ಆದರೆ, ಆ ಮಹರಾಯ್ತಿ ನನ್ನ ಮಿತ್ರನಿಗೆ ಫೋನ್ ಮಾಡುವ ಬದಲು ಬೇರೆಲ್ಲರಿಗೂ ಫೋನ್ ಮಾಡಿ ಬಿಲ್ ಮೊತ್ತವನ್ನು ೧೮೦೦ ಡಾಲರ್ ಮಾಡಿದ್ದಳು.
ಫೋನ್ ಕಂಪೆನಿಯವರು, ಬಿಲ್ ಪಾವತಿ ಆಗುವವರೆಗೆ ನಾವಿದ್ದ ಅಪಾರ್ಟ್‌ಮೆಂಟಿಗೆ ಫೋನ್ ಕನೆಕ್ಷನ್ ಕೊಡಲು ನಿರಾಕರಿಸಿದರು. ನನ್ನ ಮಿತ್ರ ತನಗೆ ಫೋನಿನ ಅವಶ್ಯಕತೆ ಇಲ್ಲದಿದ್ದುರಿಂದ ತಾನು ಬಿಲ್ ಕಟ್ಟುವುದಿಲ್ಲ ಎಂದ. ಆಗತಾನೆ ಮದುವೆಯಾಗಿ ಬಂದಿದ್ದ ನನಗೆ ಮಾತ್ರ ಫೋನ್ ಬೇಕೇ ಬೇಕಿತ್ತು.
"ನೀನು ನನಗೆ ವಾಪಸು ಹಣ ಕೊಡ್ತೀಯೋ ಇಲ್ಲವೋ ನನಗೆ ತಿಳಿಯದು. ಆದರೆ, ಈಗ ನನಗೆ ಫೋನ್ ಬೇಕೇ ಬೇಕು. ನಾನು ಬಿಲ್ ಪಾವತಿ ಮಾಡ್ತೀನಿ. ಆಮೇಲಿಂದು ನಿನ್ನಿಷ್ಟ" ಎಂದು ನನ್ನ ಮಿತ್ರನಿಗೆ ತಿಳಿಸಿ ಬಿಲ್ ಪಾವತಿ ಮಾಡಿ ಫೋನ್ ಕನೆಕ್ಷನ್ ಮತ್ತೊಮ್ಮೆ ಹಾಕಿಸಿಕೊಂಡೆ.
ನನ್ನ ಮಿತ್ರ "ಈಗ ನನ್ನ ಹತ್ರ ಹಣ ಇಲ್ಲ. ಕೆಲಸ ಸಿಕ್ಕ ಮೇಲೆ ಕೊಡ್ತೀನಿ" ಅಂದ.
ಕೆಲವೇ ತಿಂಗಳಲ್ಲಿ ನನ್ನ ಹೆಂಡತಿ ಅಮೆರಿಕಕ್ಕೆ ಬಂದಳು. ಅಷ್ಟರಲ್ಲಿ ನನ್ನ ಮಿತ್ರರು ವಿದ್ಯಾಭ್ಯಾಸ ಮುಗಿಸಿ ಬೇರೆ ಊರುಗಳಲ್ಲಿ ಕೆಲಸ ಪಡೆದು ಹೊರಟು ಹೋಗಿದ್ದರು. ಅವರಿಂದ ಆಗೊಮ್ಮೆ-ಈಗೊಮ್ಮೆ ಫೋನ್ ಬರುತ್ತಿತ್ತು.
ಒಂದು ದಿನ ಇದ್ದಕ್ಕಿದ್ದಂತೆ ನನ್ನ ಮಿತ್ರನಿಂದ ೨೦೦ ಡಾಲರ್ ಚೆಕ್ ಬಂತು. ಅದರ ಜೊತೆಗೆ ಬರೆದಿದ್ದ ಪತ್ರದಲ್ಲಿ ಉಳಿದ ಹಣವನ್ನು ಕಂತುಗಳಲ್ಲಿ ಕಳುಹಿಸುವ ಆಶ್ವಾಸನೆ ಇತ್ತು. ನನ್ನ ಹೆಂಡತಿ ಅದರ ವಿವರ ವಿಚಾರಿಸಿದಳು. ಅವಳಿಗೆ ಪೂರ್ತಿ ಕತೆ ಹೇಳಿದೆ.
ಆದರೆ, ಆ ಮೊದಲ ಕಂತಿನ ನಂತರ ಹಲವು ತಿಂಗಳುಗಳಾದರೂ ಇನ್ನಾವ ಕಂತೂ ಬರಲಿಲ್ಲ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಹೆಂಡತಿ ಸಹ ಮರೆತು ಬಿಟ್ಟಳು.
ಸುಮಾರು ಆರು ತಿಂಗಳ ನಂತರ ನನ್ನ ಮಿತ್ರನಿಂದ ಈ-ಮೇಲ್ ಬಂತು. ತಾನು ಬೆಂಗಳೂರಿಗೆ ಹೋಗಿ ಮದುವೆ ಮಾಡಿಕೊಂಡು ಬಂದಿರುವುದಾಗಿ ಬರೆದಿದ್ದ. ಅಭಿನಂದನೆಗಳನ್ನು ತಿಳಿಸಿ ಉತ್ತರ ಬರೆದೆ. ಆ ದಿನ ರಾತ್ರಿ ನನ್ನ ಹೆಂಡತಿಗೆ ಆ ವಿಷಯ ತಿಳಿಸಿದೆ.
ಮಾರನೆಯ ದಿನ ಇದ್ದಕ್ಕಿದ್ದಂತೆ ನನ್ನ ಆಫೀಸಿಗೆ ಇನ್ನೊಂದು ಈ-ಮೇಲ್ ಬಂತು - ನನ್ನ ಹೆಂಡತಿಯ ಮೇಲೆ ಕೆಂಡ ಕಾರಿ! ಆ ದಿನ ಬೆಳಿಗ್ಗೆ, ನಾನು ಆಫೀಸಿಗೆ ಬಂದ ನಂತರ ನನ್ನ ಹೆಂಡತಿ ನನ್ನ ಮಿತ್ರನಿಗೆ ಫೋನ್ ಮಾಡಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಳು!!
ನನ್ನ ಹೆಂಡತಿಯ ತಪ್ಪಿಗೆ ಕ್ಷಮೆ ಬೇಡಿ ನನ್ನ ಮಿತ್ರನಿಗೆ ಉತ್ತರ ಕಳುಹಿಸಿದೆ. ಹಾಗೆಯೇ, ಆ ಹಣ ವಾಪಸು ಕೊಡಬೇಕಿಲ್ಲವೆಂದೂ, ಆತನ ಮದುವೆಯ ಉಡುಗೊರೆಯಾಗಿ ಭಾವಿಸಬೇಕೆಂದೂ ಬರೆದೆ.
ಆ ನಂತರ, ಆ ಮಿತ್ರನೊಂದಿಗಿನ ಸ್ನೇಹ ಸಂಪೂರ್ಣವಾಗಿ ಕಡಿದು ಬಿತ್ತು. ಹಲವಾರು ವರ್ಷಗಳೇ ಉರುಳಿದವು. ಕನಿಷ್ಠ, 8 ವರ್ಷಗಳಾದರೂ ಸಂದಿರಬೇಕು. ನಾನು ಮತ್ತು ನನ್ನ ಪತ್ನಿ ಈ ವಿಷಯವನ್ನು ಸಂಪೂರ್ಣ ಮರೆತಿದ್ದೆವು.
ಇದ್ದಕ್ಕಿದ್ದಂತೆ, ನನ್ನ ಆಫೀಸಿಗೆ ನನ್ನ ಮಿತ್ರನಿಂದ ಕರೆ ಬಂತು. ಮೊದಲು ನನ್ನಲ್ಲಿ ಕ್ಷಮೆ ಬೇಡಿದ ನನ್ನ ಮಿತ್ರ, ಹಣವನ್ನು ಕೂಡಲೇ ಕಳುಹಿಸುವುದಾಗಿ ಹೇಳಿದ. ಮಾರನೆಯ ದಿನವೇ ಕೂರಿಯರ್ ಮೂಲಕ ಹಣ ವಾಪಸ್ ಕಳುಹಿಸಿದ!
ಇಂದಿನವರೆಗೆ ಆ ಹಣ ವಾಪಸ್ಸು ನೀಡುವಂತೆ ಆತನಿಗೆ ಇದ್ದಕ್ಕಿದ್ದಂತೆ ಮನಸ್ಸಾಗಲು ಕಾರಣವೇನೆಂದು ನನಗೆ ತಿಳಿದಿಲ್ಲ. ಆತನ ಒಳ್ಳೆಯತನದಲ್ಲಿ ನನಗಿದ್ದ-ಇರುವ ನಂಬಿಕೆಯೇ ಎಂಬ ನಂಬಿಕೆ ನನ್ನದು.
ವಂದನೆಗಳೊಂದಿಗೆ,
"ಸಂಜಯ"
'ಸಂಜಯ',
ಜಗದೀಶನಿಗೆ ಲಾಯರ್ ನೋಟೀಸ್ ಕಳಿಸುವುದೋ ಬೇಡವೋ ಎಂದು ನಾನೂ ಹಲವಾರು ಬಾರಿ ಯೋಚಿಸಿದ್ದೇನೆ. ಜೀವನದಲ್ಲಿ ಯಾರಿಗೆ ತಾನೇ ಕಷ್ಟವಿಲ್ಲ ಹೇಳಿ, ಹಾಗೇ ವ್ಯವಹಾರದಲ್ಲೂ ನಷ್ಟ ಎಲ್ಲರಿಗೂ ಇದ್ದದ್ದೇ. ನನ್ನ ಪ್ರಕಾರ ಜಗದೀಶ ಹಣ ತೆಗೆದುಕೊಂಡು ಅದನ್ನು ಇವತ್ತಲ್ಲ ನಾಳೆ ಹಿಂತಿರುಗಿ ಕೊಡುವ ಆಲೋಚನೆಯನ್ನಾದರೂ ಇಟ್ಟುಕೊಂಡು ಸ್ವಲ್ಪ ಸ್ವಲ್ಪವನ್ನಾದರೂ ಕೊಡುತ್ತಾ ಬರಬೇಕಿತ್ತು. ನಾನೇನು ಬಡ್ಡಿಯನ್ನು ಕೊಡು ಎಂದು ಕೇಳುತ್ತಿಲ್ಲ, ಅಸಲನ್ನಾದರೂ ಇವತ್ತಲ್ಲ ನಾಳೆ ಕೊಟ್ಟರೆ ಸಾಕು.
ಅಂದ ಹಾಗೆ, ನಿಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡು ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ. ನಿಮ್ಮ ಸ್ನೇಹಿತರು ನಿಜವಾಗಲೂ ಒಳ್ಳೆಯವರು, ಎಷ್ಟೋ ವರ್ಷಗಳ ನಂತರವಾದರೂ ಅವರಾಗೇ ಹಣ ಹಿಂತಿರುಗಿಸುವುದು ಸಾಮಾನ್ಯದ ಮಾತಲ್ಲ.
ಇತಿ,
ನಿಮ್ಮವ
Post a Comment