ಸ್ನೇಹಿತನಿಗೊಂದು ಪತ್ರ
ಏನೋ, ಬಹಳ ದಿನಗಳಿಂದ ನಿನ್ನಿಂದ ಸುದ್ದೀನೇ ಇಲ್ಲಾ? ನಾನಂತೂ ಈ ನಡುವೆ ಕೆಲಸದ ಜಂಜಾವಾತದಲ್ಲಿ ಬೆಂದು ಹೋಗಿದ್ದೇನೆ ಬಿಡು, ನಿನ್ನ ನೆನಪಿನಲ್ಲಾದರೂ ಉಸಿರುಬಿಡುವುದಕ್ಕಾಗುತ್ತದಲ್ಲಾ ಅನ್ನೋದೊಂದೇ ಸಮಾಧಾನ.
ಆದ್ರೆ, ನನಗೆ ಖುಷಿ ಆಗೋ ಹಾಗೆ ಇರೋ ವಿಷ್ಯಾ ಏನೂ ಅಂದ್ರೆ ನಾನೆಷ್ಟು ಕೆಲಸದ ಒತ್ತಡದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೋ, ಅಷ್ಟೇ ನನ್ನ ಮನಸ್ಸೂ ಇತರ ವಿಷಯಗಳತ್ತ ಯೋಚ್ನೆ ಮಾಡುತ್ತೆ, ಹಾಗೂ ನನ್ನ ಧಕ್ಷತೆ ಹೆಚ್ಚುತ್ತೆ. ಅಲ್ದೇ, ಇಂದಿನ ಐಪಿಓ, ಬಿಪಿಓ ಕಾಲದಲ್ಲಿ ಕೆಲಸವಿದ್ದವನೇ ಪುಣ್ಯವಂತ, ಕೊನೆಗೆ ಬಿಲ್ಲು ಕಟ್ಟಲಿಕ್ಕೆ ಕೆಲಸವಿಲ್ಲದ ನನ್ನ ಈ ಹಳವಂಡ ಯಾವ ಪ್ರಯೋಜನಕ್ಕೂ ಬಾರದು ಎಂಬುದು ಯಾವತ್ತಿಗೂ ಸತ್ಯ.
ಪ್ರತೀ ದಿನ ಹೀಗೆ ಟ್ರೈನ್ ಹಿಡಿದು ಸಿಟಿಗೆ ಬರುತ್ತೇನೆ, ಆದರೆ ಜನಗಳ ಒಂದು ಮನಸ್ಥಿತಿಯನ್ನು ಮಾತ್ರ ಇಲ್ಲೀವರೆಗೆ ನನ್ನಿಂದ ಅರ್ಥ ಮಾಡಿಕೊಳ್ಳಲಾಗಲಿಲ್ಲ, ಆರು ಯೋಜನ ದೂರದ ನಿನಗೇನಾದರೂ ತಿಳಿದರೆ ತಿಳಿಸಿಬಿಡು. ನಾವು ರಸ್ತೆಯಲ್ಲಿ ನಡೆದು ಟ್ರೈನ್ ಸ್ಟೇಷನ್ ಹತ್ತಿರ ಬರುತ್ತಿದ್ದಂತೆ ಜನ ಜಂಗುಳಿ ಹೆಚ್ಚಾಗುತ್ತೆ, ಅವರಲ್ಲಿ ಹೆಚ್ಚಿನವರಿಗೆ ಟ್ರೈನ್ ಸ್ಟೇಷನ್ ಸಮೀಪಿಸಿದಂತೆ ಯಾವುದೋ ಭೂತವೊಂದು ಮೈಮೇಲೆ ಸವಾರಿ ಮಾಡುತ್ತೆ ಎಂದು ಕಾಣ್ಸುತ್ತೆ, ಅವರೆಲ್ಲರು ಟ್ರೈನ್ ಬರುವ ಕಡೆಗೆ ಓಡಲು (ಅಥ್ವಾ ಜೋರಾಗಿ ನಡೆಯಲು) ತೊಡಗುತ್ತಾರೆ, ನೂರಕ್ಕೆ ತೊಂಭತ್ತು ಭಾಗ ಅಲ್ಲಿ ಯಾವ ಟ್ರೈನೂ ಇರೋದಿಲ್ಲ, ಯಾಕೆಂದ್ರೆ ಅಲ್ಲಿ ಬರೋ ಗಾಡಿಗಳೆಲ್ಲ ನಿಗದಿಯಾದ ಸಮಯಕ್ಕೇ ಬರೋದು, ಅಕಸ್ಮಾತ್ ಇವರು ಓಡಿಹೋದ ಮಾತ್ರಕ್ಕೆ ಅದರಿಂದ ಯಾವ ಬದಲಾವಣೆ ಆಗುತ್ತೆ ಅನ್ನೋದು ನಂಗೊತ್ತಿಲ್ಲ...ಆದರೆ ಈ ರಷ್ ಬಡುಕರು ನನ್ನಂಥ ಸಮಾಧಾನಿಗಳ ರಕ್ತದೊತ್ತಡವನ್ನೂ ಹೆಚ್ಚಿಸ್ತಾರೆ. ನನ್ನ ಮುಂದೆಯೇ ಓಡಿಹೋಗಿ, ಪ್ಲಾಟ್‍ಫಾರಂನಲ್ಲಿ ಯಾವುದೋ ಕಂಭಕ್ಕೊರಗಿರುವ ಇವರ ದೀನ ಮುಖಗಳನ್ನು ನನ್ನಿಂದಂತೂ ನೋಡೋಕಾಗಲ್ಲಪ್ಪಾ.
ಇಲ್ಲಂತೂ ಬಲು ಬೇಗ ವೃದ್ದಾಪ್ಯ ಬರುತ್ತೆ ಅನ್ನಿಸುತ್ತೆ, ಯಾಕೆ ಗೊತ್ತಾ, ಇಲ್ಲಿ ವೀಕ್ ಇನ್ ವೀಕ್ ಔಟ್ ಅಂತ ವಾರಾಂತ್ಯಗಳನ್ನು ನೆನೆಸಿಕೊಂಡು ಬದುಕೋದರಲ್ಲಿ ವಾರಗಳು ತಿಂಗಳುಗಳಾಗಿ, ತಿಂಗಳುಗಳು ವರ್ಷಗಳಾಗ್ತವೆ. ಒಂದು ಕಡೆ ವಾರಗಳನ್ನ ಎಣಿಸಿ ಎಣಿಸಿ ತಲೆಕೆಡಿಸಿಕೊಳ್ತಾರೆ, ಮತ್ತೊಂದು ಕಡೆ ತಾರೀಖು ಬರೆಯೋ ಕಡೆಯಲ್ಲ ತಿಂಗಳಿನಿಂದ ಶುರು ಮಾಡಿ ಹೈರಾಣಾಗ್ತಾರೆ, ಸರಿ ನಮ್ ಪಾಡಿಗೆ ನಮ್ಮನ್ನ ಬಿಡ್ರೋ ಅಂದ್ರೆ ತಿಂಗಳಿಗೆರಡು ಸರ್ತಿ ಬಟವಾಡೇ ಮಾಡಿ ಸಂಸಾರಸ್ಥರನ್ನ ಗೋಳು ಹೊಯ್ಕೋತಾರೆ - ಇವರದ್ದೆಲ್ಲ ಒಂಥರ ವಿಚಿತ್ರ ಕಣಯ್ಯಾ. 'ಮೊದಲ್ ತೇದಿ' ಯ 'ಒಂದರಿಂದ ಇಪ್ಪತ್ತರವರೆಗೆ ಉಂಡಾಟ, ಉಂಡಾಟ, ಇಪ್ಪತ್ತೊಂದರಿಂದ ಮೂವತ್ತರ ವರೆಗೆ ಬಂಡಾಟ, ಬಂಡಾಟ' ಹಾಡು ನೆನಪಿದೆಯಾ - ಅಲ್ಲಿ ತಿಂಗಳಿಗೊಂದ್ ಸರ್ತಿ ಒದ್ದಾಟ, ಅಂಥಾ ಒದ್ದಾಟವೂ ಇಲ್ಲಿ ತಿಂಗಳಿಗೆ ಎರಡು ಬಾರಿ ಆಗುತ್ತೆ ನೋಡು.
ಸರಿ, ಪತ್ರ ಪೂರ್ತಿ ನಂದೇ ಆಗೋದ್ ಬೇಡ ರಾಮಾಯ್ಣ - ನಿನ್ನ ಕಥೆ ಏನು? ಮೊನ್ನೆ ಸುಗ್ಗೀ ಎಲ್ಲಾ ಚೆನ್ನಾಗಾಯ್ತಾ? ಕಾಫಿಗೆ ಬೆಲೆ ಬರುತ್ತೆ ಅಂತ ಕಾಯ್ತಾ ಕೂರ್ ಬೇಡ್ವೋ, ಸುಮ್ನೇ ಸಿಕ್ಕಿದ್ ಬೆಲೆಗ್ ಮಾರಿ ಕೈ ತೊಳೊಕೋ, ಯಾವನಿಗ್ ಗೊತ್ತು ಮುಂದೆ ಏನಾಗುತ್ತೇ ಅಂತಾ? ವೆನ್ನಿಲ್ಲಾ-ಪನ್ನಿಲ್ಲಾ ಹೆಂಗ್ ಚಿಗುರಿದೆ, ನೀನು ಅದನ್ನ ಚಿಗುರ್‍ಸಿ, ಕಳ್‌ಕಾಕ್ರು ಎಗುರುಸ್‌ದಂಗೆ ಕಣ್ಣಲ್ಲಿ ಕಣ್ಣಿಟ್ಟು ಕಾದು, ಅದನ್ನ ಎಕ್ಸ್‌ಪೋರ್ಟ್ ಮಾಡ್ಸಿ, ನಾನಿಲ್ಲಿ ತಿನ್ನೋ ಕಾಲ ಯಾವತ್ತಿಗ್ ಬರುತ್ತೋ ನೋಡ್ತೀನಿ. ಮತ್ತೆ, ನಿಮ್ಮಲ್ಲಿ ಎಲ್ಲ ದೂರವಾಣಿ ಕರೆಗಳನ್ನೂ ಫ್ಲಾಟ್ ರೇಟ್ ಮಾಡಿದಾರೆ ಅಂತ ಕೇಳ್ದೆ, ಇಂಟರ್‌ನ್ಯಾಷನಲ್ ಕಾಲೂ ಚೀಪ್ ಆಗಿರಬೇಕಲ್ವಾ? ಅದು ಏನೇ ಆಗ್ಲೀ ನೀನಂತೂ ನನಗೆ ಫೋನ್ ಮಾಡ್ಬೇಡ, ಪುರುಸೊತ್ತಾದಾಗ ಹೀಗೇ ಪತ್ರ ಬರೀತಾ ಇರು, ನಿನ್ನ ಪತ್ರದ ಮೂಲ್ಕನಾದ್ರೂ ನಮ್ ಊರಿನ್ ವಾಸ್ನೆ ನಂಗ್ ಬರ್‍ಲಿ. ಮತ್ತೆ ನೀನು ಇತ್ತೀಚಿಗೆ ಓದಿರೋ ಸ್ವಾರಸ್ಯವಾಗಿರೋ ಯಾವ್ದಾದ್ರೂ ಪುಸ್ಕ ಇದ್ರೆ ತಿಳ್ಸು. ನಿಮ್ಮನೆಯವರಿಗೆಲ್ಲ ಕೇಳ್ದೆ ಅಂತ ಹೇಳು.
ಮತ್ತೆ ಬರೀತೀನಿ.
No comments:
Post a Comment