ಎಚ್. ಎಲ್. ಎಸ್. ರಾವ್ ಎಂಬ ಮೇಷ್ಟ್ರು
ನಾನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿದವನಲ್ಲ, ಆದರೆ ಅಲ್ಲಿ ಓದುವುದಕ್ಕೋಸ್ಕರ ಹೋಗಿ ನನ್ನ ಜೀವಿತಾವಧಿಯ ಐದು ವರ್ಷಗಳನ್ನು ಕಳೆದವನು. ಹಾಗಾಗಿ ನಾನು ಇಂದು ಏನೇ ಮಾಡಿದರೂ ಅದರಲ್ಲಿ ಸಾಗರದ ಪ್ರಭಾವ ಇರುತ್ತೆ, ನನ್ನ ಬರಹಗಳಲ್ಲೂ ಸಹ!
ಸಾಗರ ಅನ್ನೋ ಪಟ್ಟಣ ಹಲವಾರು ರೀತಿಯಿಂದ ಪ್ರಸಿದ್ಧವಾದದ್ದು: ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಬಹಳಷ್ಟು ಜನ ಈ ಮಾರ್ಗದಿಂದಲೇ ಹೋಗೋದು. ಸಾಗರದಲ್ಲಿ ಶ್ರೀಗಂಧದ ಸಂಕೀರ್ಣವಿದೆ, ಮಲೆನಾಡಿನ ಅಡಿಕೆ ಮಂಡಿಗಳಿವೆ, ಬೆಂಗಳೂರು-ಹೊನ್ನಾವರ ರಸ್ತೆಯ ಆಜುಬಾಜಿನಲ್ಲಿ ನಾವು ಇನ್ನೂ ಬದುಕಿದ್ದೇವೆ ಎಂದು ತೋರಿಸಿಕೊಡುವಂತೆ ಕಾಡಿದೆ, ಎಲ್ಲಕ್ಕೂ ಮುಖ್ಯವಾಗಿ ಒಳ್ಳೆಯ ಪರಿಸರವಿದೆ, ಸಹೃದಯರಿದ್ದಾರೆ. ಸಾಗರದಲ್ಲಿ ಏನೇನಿಲ್ಲ, ಏನಿದ್ದರೆ ಚೆನ್ನಾಗಿತ್ತು ಅನ್ನೋದು ಇನ್ನೊಂದು ದಿನದ ಮಾತಾಗಲಿ.
ನಾನು ಎಲ್. ಬಿ. ಕಾಲೇಜಿಗೆ ಮೊದಲು ಹೆಜ್ಜೆ ಇಟ್ಟಾಗ ಹೊಸ ಪ್ಯಾಂಟಿನ ಜೊತೆಯಲ್ಲಿ ಕೀಳರಿಮೆಯನ್ನೂ ಉಡುಪಾಗಿ ತೊಟ್ಟುಕೊಂಡಿದ್ದೆ. ನಮ್ಮ ಊರಿನ ಹೈ ಸ್ಕೂಲಿನಲ್ಲಿ ನಾನೇ ರಾಜ, ಆದರೆ ಸಾಗರದ ಅಗಾಧತೆ ನನ್ನನ್ನು ಸಂಪೂರ್ಣವಾಗಿ ತನ್ನಲ್ಲಿ ಕರಗಿಸಿಕೊಂಡಿತ್ತು. ನಿಜ ಹೇಳಬೇಕು ಎಂದರೆ ನನಗೆ ಪೂರ್ತಿಯಾಗಿ ಒಂದು ಸಾಲನ್ನೂ ಇಂಗ್ಲೀಷ್‌ನಲ್ಲಿ ಮಾತನಾಡಲು ಬರುತ್ತಿರಲಿಲ್ಲ. ಇನ್ನು ಬರೆದರೋ ಗುಬ್ಬಿ ಮರಿಯನ್ನು ಇಂಕಿನ ಬಾಟಲಿಯಲ್ಲಿ ಅದ್ದಿ ತೆಗೆದು ಬಿಳಿಯ ಕಾಗದದ ಮೇಲೆ ಬಿಟ್ಟರೆ ಬರುವ ಚಿತ್ತಾರದಂತಿತ್ತು. ನಾನು ಓದಿದ್ದ ಹೈ ಸ್ಕೂಲಿನಲ್ಲಿ ಕೊ-ಎಜುಕೇಷನ್ ಇರಲಿಲ್ಲವಾದ್ದರಿಂದ, ಹುಡುಗಿಯರು ಇದ್ದ ಕ್ಲಾಸಿನಲ್ಲಿ ಬಹಳ ಹಿಂಸೆಯಾಗುತ್ತಿತ್ತು.
ನನ್ನ ಮೊದಲ ಕ್ಲಾಸು ಲಂಬೋದರ ಅವರ ಆಲ್‌ಜೀಬ್ರಾ, ಅವರು 'A to the power B, B to the power C' ಎಂದಾಗ ನನಗೆ ಒಂದು ತುಣುಕೂ ಅರ್ಥವಾಗಿರಲಿಲ್ಲ. ನಾಗರಾಜ ಹೆಗಡೆ ಅವರು ಫಿಸಿಕ್ಸ್‌ನ ತರಗತಿಯಲ್ಲಿ, ರೂಮ್ ನಂಬರ್ ನಾಲ್ಕರಲ್ಲಿ ಮಧ್ಯಾಹ್ನ ೪ ರಿಂದ ೫ ರವರೆಗಿನ ಒಂದು ತರಗತಿಯಲ್ಲಿ Errors and Significant numbers ಬಗ್ಗೆ ಪಾಠ ಮಾಡಿದ್ದರು. ನನಗೆ ತರಗತಿ ಮುಗಿದು ನನ್ನ ರೂಮಿಗೆ ಹೋಗಿ ಡಿಕ್ಷನರಿ ನೋಡುವವರೆಗೆ Error ಎಂದರೇನೆಂದು ಗೊತ್ತಿರಲಿಲ್ಲ! ಇನ್ನು ಬಾಟನಿಯ ವಿಷಯವನ್ನು ಕೇಳಲೇ ಬೇಡಿ, ಪಾಠ ಮಾಡುವ ವೆಂಕಟಕೃಷ್ಣಯ್ಯನವರದ್ದು ಯಾವ ತಪ್ಪೂ ಇರಲಿಲ್ಲ - ನಾನು pteriodophyta, thallophyta ಎಂಬುದನ್ನೆಲ್ಲ ನನಗೆ ಹೇಗೆ ಬಂತೋ ಹಾಗೆ ಬರೆದುಕೊಳ್ಳುತ್ತಿದ್ದೆ!
ಹೀಗಿರುವಾಗ, ಮುಂದಿನ ಡೆಸ್ಕಿನಲ್ಲಿ ಕೂರುತ್ತಿದ್ದೆನೆಂತಲೋ ಏನೋ, ಉಳಿದೆಲ್ಲ ಬುದ್ಧಿವಂತ ಹುಡುಗ/ಹುಡುಗಿಯರ ಜೊತೆಯಲ್ಲಿ ಶ್ರೀ ಎಚ್. ಎಲ್. ಎಸ್. ರಾವ್ ಅವರ ಮನೆಗೆ ಬರುವಂತೆ ಬುಲಾವು ಬಂತು. ಅವರ ಮನೆಯೋ ಇದ್ದುದರಲ್ಲೇ ಚಿಕ್ಕದಾಗಿ ಚೊಕ್ಕದಾಗಿ ಕಟ್ಟಿದ ಮನೆ, ಮನೆಯ ದಾರಿಂದ್ರ್ಯ ಪಟ್ಟಿಗೆ ಚೊಕ್ಕದಾಗಿ ಬೀಟೆ ಹಾಗೂ ಗಂಧದ ತುಂಡಿನಲ್ಲಿ ಮಾಡಿದಂತಹ ಕೆತ್ತನೆ, ಗೋಡೆಗಳ ಮೇಲೆ ಅಲ್ಲಲ್ಲಿ ನೇತಾಡುತ್ತಿದ್ದ ತರಾವರಿ ಚಿತ್ತಾರಗಳು ನಾವು ಮುಂದೆ ಮಾಡಬಹುದಾದ ಪ್ರಾಜೆಕ್ಟ್‌ಗಳ ಚರ್ಚೆಗೆ ಸೂಕ್ತ ನೆಲೆಗಟ್ಟನ್ನು ಕೊಡುವಲ್ಲಿ ತಮ್ಮ ಪ್ರಯತ್ನಮಾಡುತ್ತಿದ್ದವು. ನಾವು ಸುಮಾರು ಹತ್ತು-ಹನ್ನೆರಡು ಜನರಿದ್ದಿರಬಹುದು. 'ಆ ಪ್ರಾಜೆಕ್ಟ್ ಮಾಡ್ರೋ, ಈ ಪ್ರಾಜೆಕ್ಟ್ ಮಾಡ್ರೋ!' ಅನ್ನೋ ಹುಮ್ಮಸ್ಸು ಮೇಸ್ಟ್ರುದ್ದು - ನನ್ನ ಜೊತೆಯಲ್ಲಿದ್ದವರೆಲ್ಲ ಡೀಸೆಲ್ ಇಂಜಿನ್ ಬಗ್ಗೆಯೋ, ಮತ್ತೊಂದರ ಬಗ್ಗೆಯೋ ಪ್ರಾಜೆಕ್ಟ್ ಮಾಡುತ್ತೇವೆಂತಲೂ, ಮತ್ತಿನ್ನೇನೋ ಮಾತನಾಡಿಕೊಳ್ಳುತ್ತಿದ್ದರು. ಈ ಮಧ್ಯೆ, ನಮ್ಮೆಲ್ಲರದ್ದು SSLC marks ಎಷ್ಟೆಷ್ಟು ಎನ್ನುವ ಪ್ರಶ್ನೆ ಬಂತು, ಯಾರೋ ಒಂದು ಪೇಪರ್ ಪೆನ್ನೂ ತಗೊಂಡು ಬರೆಯೋದಕ್ಕೂ ಮೊದಲು ಮಾಡಿದರು. ನೀವೆಣಿಸಿದಂತೆ, ಅದರಲ್ಲಿ ನನ್ನದೇ ಕೊನೇ ಹೆಸರು! first class ಗೆ ಎಷ್ಟು ಬೇಕೋ ಅದರ ಹತ್ತತ್ರ ಅಂಕಗಳಿಸಿ, ಅವರೆಲ್ಲರ ಮಧ್ಯೆ (ಶೇ. ೯೦ ರ ಮೇಲೆ ತೆಗೆದವರೂ, ರಾಜ್ಯ ರ್‍ಯಾಂಕ್‌ನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡವರೂ ಆ ಗುಂಪಿನಲ್ಲಿದ್ದರು) ನಾನು ಹೂವಿನ ಜೊತೆ ನಾರಿನ ಹಾಗೆ ಇದ್ದೆ - ಅಲ್ಲ, ನಾರು ಎಂದರೂ ತಪ್ಪಾದೀತು (ಕೀಳರಿಮೆ ಬಗ್ಗೆ ಈ ಮೊದಲೇ ಹೇಳಿದ್ದೇನೆ: ಹಾಸಿ, ಹೊದೆಯುವಷ್ಟು ಇವತ್ತಿಗೂ ಇದೆ!).
ಉಳಿದ ಬುದ್ಧಿವಂತ ಹುಡುಗ/ಹುಡುಗಿಯರು ಅದ್ಯಾವ ಪ್ರಾಜೆಕ್ಟ್ ಮಾಡಿ ಅದೆಲ್ಲಿ ಸಬ್‌ಮಿಟ್ ಮಾಡಿ ಏನನ್ನು ಸಾಧಿಸಿದರೋ ನನಗ್ಗೊತ್ತಿಲ್ಲ, ಆದರೆ ಅದ್ಯಾವುದರಲ್ಲೂ ನಾನಂತೂ ಇರಲಿಲ್ಲ!
ಮುಂದೆ ನಾನು ಬಿ.ಎಸ್ಸಿ. ಸೇರಿಕೊಂಡ ಮೇಲೆ ಕಬ್ಬಿಣದ ಕಡಲೆಯಂತಿದ್ದ HLS Rao ಆತ್ಮೀಯರಾದರು. ಅವರೇ ಬುಲಾವು ಮಾಡಿದರೆಂದು ಮತ್ತೊಮ್ಮೆ ಅವರ ಮನೆಗೆ ಕೆಲವೊಂದು ಜನರು ಹೋದೆವು. ಆ ದಿನ ಮೇಷ್ಟ್ರು ನಮಗೆಲ್ಲ ಕಂಪ್ಯೂಟರ್ ಬಗ್ಗೆ ತಿಳಿಸಿದ್ರು, ಅವರ ಮನೆಯಲ್ಲಿ Sinclair Spectrum ZX (CPU cum monitor) ಇತ್ತು, ಅದರಲ್ಲಿ ಅವರು GW Basic ನಲ್ಲಿ ಏನೇನೋ ಪ್ರೋಗ್ರಾಮ್ಮಿಂಗ್ ಮಾಡಿದ್ರು ಅಂತ್ಲೂ ಗೊತ್ತಾಯ್ತು. ಹೀಗೇ HLS Rao ಹಾಗೂ ನನ್ನ ನಡುವಿನ ಗುರು ಶಿಷ್ಯರ ಸಂಬಂಧ ಮುಂದೆ ನಾನು B.Sc. ಓದುವ ದಿನಗಳಲ್ಲಿ ಇನ್ನೂ ಪಕ್ಕಾ ಆಯಿತು. ಯಾವುದೋ ಬೇಸಿಗೆ ರಜೆಯೊಂದರಲ್ಲಿ ನಾವು ೬೦೦ ರೂಪಾಯಿ ಕೊಟ್ಟು, Programming in BASIC ತರಗತಿಗೆ ಸೇರಿಕೊಂಡೆವು. ಅಂದು ಮಾಡಿದ್ದ ಆ ಕೋರ್ಸೇ ನನಗೆ ಕಂಪ್ಯೂಟರ್ ಭಾಷೆಯ ಮೊದಲ ಅಧ್ಯಾಯ. ಆದ್ದರಿಂದಲೇ ನಾನು HLS Rao ಅವರನ್ನ ವಿಶೇಷವಾಗಿ ನೆನೆಸಿಕೊಳ್ತೀನಿ - ಅವರೇ ನನ್ನನ್ನು ಕಂಪ್ಯೂಟರ್ ಪ್ರೊಗ್ರಾಮ್ಮಿಂಗ್‌ಗೆ ಪರಿಚಯಿಸಿದ್ದು. ಅವರು ಅಂದು ಸಾಗರದಲ್ಲಿ ಅದರ ಭದ್ರ ಬುನಾದಿ ಹಾಕ್ದೇ ಇದ್ರೆ, ನಾನು ಅದನ್ನು pursue ಮಾಡ್ತಿರಲಿಲ್ಲ, ಇಂದು Information Technologyಯಲ್ಲಿ ಕೆಲಸವನ್ನೂ ಮಾಡ್ತಿರಲಿಲ್ಲ ಅನ್ಸುತ್ತೆ. ಅಷ್ಟೂ ಅಲ್ದೇ ಅವರು ಗಣಿತದ ಮೇಷ್ಟ್ರು, ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋ ಅವರ ದಾಹ ಯಾವತ್ತೂ ಹಿಂಗದ್ದು. ಹಂಗೂ-ಹಿಂಗೂ ಮಾಡಿ, ಅವರು ಕಂಪ್ಯೂಟರ್ ಬಗ್ಗೆ ಕಲಿತದ್ದು ಬಹಳ, ಅದರ ಜೊತೆಯಲ್ಲಿ ನನ್ನಂಥ ಮೂರ್ಖರಿಗೂ ಸ್ಪೂರ್ತಿ ನೀಡಿದ್ದು ನಾನೆಂದೂ ಮರೆಯದ ವಿಷಯ.
***
ನಮ್ ಮೇಷ್ಟ್ರು ಮೊದಮೊದಲು ತಮ್ಮ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದಕ್ಕೆ ಅವರ mutually independent ಆಗಿ ಬೇರೆ ಬೇರೆ planeನಲ್ಲಿ ಓಡಾಡೋ ಅವರ ಕಣ್ಣುಗುಡ್ಡೆಗಳೂ ಕಾರಣವಿರಬಹುದು! ಆದರೆ ಒಂದು ಸಾರಿ ನೀವು ಅವರನ್ನ ಅರ್ಥ ಮಾಡಿಕೊಂಡರೆ ಸಾಕು ಮುಂದೆ ಎಲ್ಲವೂ ಸುಲಭ. ನನ್ನಂತೆಯೇ ನಮ್ ಮೇಷ್ಟ್ರೂ ಸಹ ಮೊದ್ಲು ಇಂಗ್ಲೀಷ್‌ನಲ್ಲಿ ಕಷ್ಟ ಪಟ್ಟಿದ್ದರಂತೆ ಅವರೇ ಹೇಳಿದ ಹಾಗೆ ಒಂದ್ ಸಾರಿ ಯಾವ್ದೋ ದೊಡ್ಡ ಮನುಷ್ಯರನ್ನ ಇಂಗ್ಲೀಷ್‌ನಲ್ಲೇ introduce ಮಾಡ್ತೀನಿ ಅಂತ ಹೋಗಿ, 'I pay my sincere homage to so and so...' ಅಂಥ ಹೇಳಿ ತಮ್ಮನ್ನೇ ತಾವು ಪೇಚಿನಲ್ಲಿ ಸಿಕ್ಕಿಸಿಕೊಂಡಿದ್ದರಂತೆ. ನನಗೆ ಇಲ್ಲೀವರೆಗೂ ಅರ್ಥವಾಗ್ದೇ ಇರೋ ವಿಷಯಗಳಲ್ಲಿ, ಒಬ್ಬ ಗಣಿತದ ಮೇಷ್ಟ್ರಾಗಿ ತಾವು ಎಷ್ಟು ಸಿಗರೇಟ್ ಸೇದಿದ್ದೇವೆ ಅನ್ನೋ ಲೆಕ್ಕಾನೇ ಅವರಿಗೆ ಇಲ್ದೇ ಇರೋದು! ಈ ಬಗ್ಗೆ ಕೇಳ್ದಾಗ್ಲೆಲ್ಲ 'ಅದನ್ನ ಯಾಕೆ/ಯಾರು ಲೆಕ್ಕ ಇಟ್ಟಕೊಳ್ತಾರೋ?' ಅಂತ ಪ್ರಶ್ನೆಗೆ-ಪ್ರಶ್ನೆಯೊಂದನ್ನು ಉತ್ತರವಾಗಿ ಕೇಳಿ ಹಾರಿಸಿ ಬಿಡ್ತಾ ಇದ್ರು!
L B Collegeನಲ್ಲಿ, ಈಗ ಲೈಬ್ರರಿ ಇದೇ ನೋಡಿ, ಅದರ ಮೇಲನೇ ಮಹಡಿಯಲ್ಲಿ ಮೊದಲು ಕಂಪ್ಯೂಟರ್ ತರಗತಿಗಳನ್ನು ಶುರುಮಾಡಿದ್ರು. ಆಗ ಇದ್ದವು ಎರಡೇ ಕಂಪ್ಯೂಟರ್‍ಸ್, ಒಂದಕ್ಕೆ ಹಾರ್ಡ್ ಡಿಸ್ಕ್ ಇತ್ತು, ಮತ್ತೊಂದಕ್ಕೆ ಅದೂ ಇರಲಿಲ್ಲ, ಫ್ಲಾಪಿ ಹಾಕಬೇಕಿತ್ತು, MS DOS verison 5.0ಇದ್ದ ಹಾಗೆ ನೆನಪು. ಸ್ವಾರಸ್ಯದ ಸಂಗತಿಯೆಂದರೆ ಒಂದು ದಿನ ನಮ್ಮ ಮೇಷ್ಟ್ರು ಎಲ್ಲೆಲ್ಲಿಂದಲೋ ಬಂದ ವೈರಸ್‌ಗೆ ಹೆದರಿ CPU, Monitor, Keyboard ಎಲ್ಲದರ ಸಮೇತ ಡಬ್ಬಕ್ಕೆ ಹಾಕಿಕೊಂಡು ರಾತ್ರೋ ರಾತ್ರಿ ಬೆಂಗಳೂರಿನ ಬಸ್ಸು ಹತ್ತಿ ವೈರಸ್ 'ರಿಪೇರಿ' ಮಾಡಿಸಿಕೊಂಡು ಬಂದಿದ್ದರು!
ಮತ್ತೊಂದು ಪೇಚಿನ ಪ್ರಸಂಗ ಎಂದರೆ, ಒಂದು ದಿನ ಮೇಷ್ಟ್ರು ಒಂದು ರೂಮಿನಲ್ಲಿ ಕುಳಿತು ಕಾಲೇಜಿನ ಪೇ ರೋಲ್ ಶೀಟ್‌ಗಳನ್ನು ಡಾಟ್ ಮೆಟ್ರಿಕ್ಸ್ ಪ್ರಿಂಟರ್‌ನಲ್ಲಿ ತದೇಕ ಚಿತ್ತದಿಂದ ಪ್ರಿಂಟ್ ಹಾಕುತ್ತಿದ್ದರು, ಅದೇ ಸಮಯದಲ್ಲಿ ನಾನೂ-ಶ್ರೀಪಾದನೂ ಮತ್ತೊಂದು ಕಂಪ್ಯೂಟರ್‌ನಲ್ಲಿ ನಮ್ಮ BASIC ಪ್ರಾಜೆಕ್ಟ್‌ನ್ನು ತಿದ್ದುತ್ತಿದ್ದೆವು, ನಾನು ಅದ್ಯಾವ ರೀತಿಯಲ್ಲಿ CTRL P ಒತ್ತಿದೆನೋ ಗೊತ್ತಿಲ್ಲ, ಪೇ ರೋಲ್ ಪೇಪರ್‌ಗಳ ಮಧ್ಯೆ ನಮ್ಮ ಪ್ರಾಜೆಕ್ಟ್ ಪ್ರಿಂಟ್ ಆಗಿ ನಮ್ಮಿಬ್ಬರನ್ನೂ ಮೇಷ್ಟ್ರು ಹೊರಗೆ ಹಾಕಿದ್ದರು! ನಾವು ಅದನ್ನ ನೆನೆಸಿಕೊಂಡು ನಕ್ಕಿದ್ದೇ ನಕ್ಕಿದ್ದು, ಆದರೆ ಅವರ ಪರಿಪಾಟಲೆ ಹೇಳತೀರದಾಗಿತ್ತು!
***
ಮೊನ್ನೆ ನನ್ನ ಅಣ್ಣನ ಮಗಳು ಕಾಲ್ ಮಾಡಿದ್ಲು, 'ಫಸ್ಟ್ ಪಿ.ಯು.ಸಿ. ಪರೀಕ್ಷೆ ಎಲ್ಲಾ ಆಗಿದೆ, ಮುಂದಿನವಾರದಿಂದ್ಲೇ ಟ್ಯೂಷನ್‌ಗೆ ಹೋಗೋಣ ಅಂತಿದೀನಿ...ಮ್ಯಾಥ್‌ಮ್ಯಾಟಿಕ್ಸ್‌ಗೆ HLS Rao ಅಂತ ಒಬ್ರು retired ಮೇಷ್ಟ್ರು ಇದ್ದಾರೆ, ಅವರು ನಿಮಗ್ ಗೊತ್ತಾ? ಎಲ್ರೂ ಹೇಳ್ತಾರೆ ಅವರ ಪಾಠ ಅರ್ಥ ಮಾಡ್‌ಕೊಳ್ಳೋದು ಬಹಳ ಕಷ್ಟ ಅಂತ...'
ನಾನೆಂದೆ 'ಗೊತ್ತೂ, ಗೊತ್ತೂ...' ನನ್ನ ಮಾತನ್ನ ಮಧ್ಯದಲ್ಲಿಯೇ ತುಂಡು ಮಾಡಿ ಹೇಳಿದಳು...'ನೋಡ್ತೀನಿ, ಸಾಧ್ಯ ಆದ್ರೆ ಅಲ್ಲೇ ಹೋಗ್ತೀನಿ, ಆದ್ರೆ ಒಂದು ಸಮಸ್ಯೆ ಇದೆ, ಅವರು first PUC ನಲ್ಲಿ ಕಡಿಮೆ marks ತಗೊಂಡೋರಿಗೆ ಟ್ಯೂಷನ್ ಹೇಳೋಲ್ಲವಂತೆ, ಕೇಳ್ ನೋಡ್ತೀನಿ...' ಅಂದ್ಲು.
ನಾನು 'ಸರಿ' ಅಂದವನು, ಮನಸ್ಸಲ್ಲೇ 'ಏನ್ ಸಾರ್, ನನ್ನಂಥ ವಿದ್ಯಾರ್ಥಿಗಳಿಗೆ ಪಾಠ ಹೇಳೋಲ್ಲವಂತೆ, ಹೌದಾ?' ಎಂದು HLS Rao ಮೇಲೆ ಮೊದಲ ಬಾರಿಗೆ ಗದರಿಕೊಂಡೆ!
7 comments:
I had a similar experience with my first year PUC in the college. I did not follow any subject for the first few months. especially trigonometry. oh man... sine theta cos theta and all those formulae always tricked me. It was not until my second year it all started making some sense and in the end mathematics became my fav subject, by that time I had started liking HLS classes, not only Lambodar's.
I do thank HLS for the way he taught me Comp-sc & Maths in my PU. which really helped me in building the basic knowlwdge on maths & cs prblem solving. Today the Problem solving is my professation.
Dear kc,
I am sure most Kannada medium students will suffer in PUC Science classes, some are overwhelmed by the medium itself. I wish there is some sort of coaching or consultation that was provided to all Kannada medium students.
Dear nsh,
I am sure HLS Rao has enlightened many in his career as a teacher. He is so quick in grasping something and I believe he wanted to establish a curiousity for Math among his students.
Hi,
An extra-ordinary blog. It was very nice to get back to the experiences even i had and to remember our great tution lecturer HLS... --> generalizing all... combined with (basically/natually/Enu agutte andre)MMB & Poornananda(Epsalan not) !
Thank you very much for the great blog.
Hi,
Nam tution Sir HLS na yendigu mareyalu aagalla, avaru raashi raash lekka maadalu kodutidhadhu (dinakke >100 maths problems solve maadalu kodtidhru ), maths nalli 100 tegedhre Rs.100 kodtini,99 tegedhre Rs.99 yella ella annutidhadhu yestu maja ethu.... too good :) ...Thank you HLS Sir - Deepa Nadig
ನಾಗ,
ಧನ್ಯವಾದಗಳು.
ಮೇಷ್ಟ್ರು ಏನ್ ಮಾಡ್ಕೊಂಡಿದ್ದಾರೆ ಈ ದಿನಗಳಲ್ಲಿ?
ಪೂರ್ಣಾನಂದ ಎಲ್.ಬಿ.ಕಾಲೇಜ್‌ಗೆ ಬರೋ ಹೊತ್ತಿಗೆಲ್ಲಾ ನಾವಲ್ಲಿರಲಿಲ್ಲ!
ದೀಪಾ,
ಹಾಗೆ ಅವರು ದಿನಕ್ಕೆ ಅಷ್ಟೊಂದು ಲೆಕ್ಕಗಳನ್ನು ಮಾಡೋಕ್ ಹೇಳಿದ್ರಿಂದ್ಲೇ ಎಷ್ಟೋ ಜನ ಅವರ ವಿದ್ಯಾರ್ಥಿಗಳು ಮೇಲಕ್ಕ್ ಬಂದಿರೋದು, ಅಲ್ವೇ!
ಕೊನೆಗೆ ನಿಮಗೆ ನೂರ್ ರುಪಾಯ್ ಸಿಗ್ತಾ?
Post a Comment