Wednesday, April 26, 2006

ಪ್ರತಿಭಾನ್ವಿತರು ಬೇಕಾಗಿದ್ದಾರೆ!


ಪ್ರತೀ ಮಂಗಳವಾರ ಕನ್ನಡಪ್ರಭದಲ್ಲಿ ಬರೋ ಪಾರ್ವತಮ್ಮನವರ ಅಂಕಣಕ್ಕೆ ನಾನೂ ಆಗಾಗ್ಗೆ ಭೇಟಿಕೊಡುತ್ತಿರುತ್ತೇನೆ (ಈ ಲೇಖನಗಳನ್ನು ಇಂಗ್ಲೀಷ್‌ನಲ್ಲೂ ಭಾಷಾಂತರ ಮಾಡಿ ಚಿತ್ರಲೋಕದಲ್ಲಿ ಪ್ರಕಟಿಸಲಾಗುತ್ತಿದೆ, ಅಡಿಯಲ್ಲಿ "For Earlier Writeups" ಎನ್ನುವ ಕೊಂಡಿಯನ್ನು ನೋಡಿ). ಕನ್ನಡ ಸಿನಿಮಾರಂಗದ ಬಗ್ಗೆ ಅವರಿಗಿರುವ ಅಪಾರ ಅನುಭವ ಓದುಗರನ್ನು ಕಂತು-ಕಂತುಗಳಲ್ಲಿ ತಲುಪುತ್ತಿರುವುದು ಓದುಗರ ಭಾಗ್ಯ ಎಂದೇ ಹೇಳಬೇಕು - ಹಳೆಯ ಕಥೆಗಳನ್ನು ಹೇಳಲು ಹೆಚ್ಚು ಜನ ಸಿಗುವುದು ವಿರಳ, ಸಿಕ್ಕರೂ ಹೀಗೆ ಪ್ರತೀವಾರ ಬರೆದು ಓದುಗರನ್ನು ತಲುಪುವುದು ವಿಶೇಷವೆಂದೇ ಹೇಳಬೇಕು. ಪಾರ್ವತಮ್ಮ ಒಬ್ಬ ನಿರ್ಮಾಪಕಿಯಾಗಿ, ಒಬ್ಬ ಮಹಾನ್ ನಟನ ಹೆಂಡತಿಯಾಗಿ ಹಾಗೂ ಕನ್ನಡ ಸಿನಿಮಾ ರಂಗ ಕಂಡ ಏಕೈಕ ಮಹಿಳಾ administrator ಆಗಿ ಓದುಗರಲ್ಲಿ ಹಂಚಿಕೊಳ್ಳುವುದು ಬಹಳಷ್ಟಿದೆ, ಅಲ್ಲಲ್ಲಿ ಭಾವಪೂರ್ಣವಾಗಿ ಬರೆಯುತ್ತಾರಾದರೂ ಅವರ ಬರವಣಿಗೆಯ ಸೀಕ್ವೆನ್ಸಿಂಗ್ ನನಗಿಷ್ಟ.

***

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತರಲ್ಲಿ ಚಿ.ಉದಯಶಂಕರ್ ಕೂಡಾ ಒಬ್ಬರು - ಒಬ್ಬ ಬರಹಗಾರರಾಗಿ ಚಿತ್ರಕಥೆ ಹಾಗೂ ಹಾಡುಗಳಲ್ಲಿ ಅವರದ್ದೇ ಆದ ನೈಪುಣ್ಯತೆ ಇತ್ತು. ಸರಳ ಕನ್ನಡ ಹಾಡುಗಳಾಗಿಯೂ ಅರ್ಥಗರ್ಭಿತವಾದ ಹಾಡುಗಳು ಇಂದಿಗೂ ಜನಜನಿತವಾಗಿವೆ (ಸುಮ್ಮನೇ ರ್‍ಯಾಂಡಮ್ಮಾಗಿ ಹುಡುಕಿದಾಗ ಇಷ್ಟೊಂದು ಹಾಡುಗಳು ಸಿಕ್ಕವು).

ಜನವರಿ ೧೦ರ ಅಂಕಣದಲ್ಲಿ "ಎಲ್ಲವನ್ನೂ ನಾನೇ ಮಾಡ್ತೀನಿ ಅಂದ್ರೆ ಹೀಗೇ ಆಗೋದು" ಎಂಬ ಲೇಖನದಲ್ಲಿ ಪಾರ್ವತಮ್ಮನವರು ಚಿ.ಉದಯಶಂಕರ್‌ರವರನ್ನು ವಿಶೇಷವಾಗಿ ನೆನೆಸಿಕೊಂಡಿದ್ದಾರೆ:"...ಆಗ ರಾಜ್‌ಕುಮಾರ್ ಜೊತೆ ಯಾವಾಗ್ಲೂ ಉದಯಶಂಕರ್ ಇರ್ತಾ ಇದ್ರು. ಉದಯಶಂಕರ್ ಹೋದಮೇಲೆ ರಾಜ್‌ಕುಮಾರ್ ಸಿನಿಮಾ ಮಾಡೋದು ಕಮ್ಮಿ ಮಾಡಿದ್ರು. ಯಾರು ಬರೆದರೂ ಉದಯಶಂಕರ್ ಬರೆದ ಹಾಗೆ ಆಗ್ತಿರಲಿಲ್ಲ. ಅವರಿಲ್ಲದೆ ಒಂದು 'ಶಬ್ದವೇಧಿ' ಮಾಡಬೇಕಾದ್ರೇ ಸಾಕಾಗಿ ಹೋಯ್ತು. ಇವತ್ತಿಗೂ ಅವರಿಗೆ ಅದು ತೃಪ್ತಿ ಕೊಟ್ಟಿಲ್ಲ."

ರಾಜ್, ಉದಯಶಂಕರ್ ಇವರನ್ನೆಲ್ಲ ಗೌರವಿಸಿ ಇವರ ಬಗ್ಗೆ ಓದಿ ಬರೆಯುವ ಹೊತ್ತಿಗೆ ನಾನು ಒಂದಿಷ್ಟು ವಿಷಯಗಳನ್ನು ಕುರಿತು ಯೋಚಿಸುತ್ತೇನೆ:
೧) ಉದಯಶಂಕರ್ ತೀರಿಕೊಂಡಿದ್ದು ಅಥವಾ ಅವರ ಸಾವಿಗೆ ಕಾರಣವಾಗಿದ್ದು ಅವರ ಒಬ್ಬನೇ ಪುತ್ರ ರವಿಶಂಕರ್ ತೀರಿಕೊಂಡಿದ್ದರಿಂದ ('ಇನ್ನೂ ಗ್ಯಾರಂಟಿ ನಂಜುಂಡೀ ಕಲ್ಯಾಣ...' ಹಾಡಿನಲ್ಲಿ ಹಾಗೂ ಆ ಚಿತ್ರದಲ್ಲಿ ಸಿಕ್ಕ ಪಾತ್ರದಲ್ಲಿ ರವಿ ಮನೋಜ್ಞ ಅಭಿನಯ ನೀಡಿದ್ದನ್ನು ನಾನಿನ್ನೂ ಮರೆತಿಲ್ಲ). ಉದಯಶಂಕರ್ ಸಾವು ರಾಜ್‌ಕುಮಾರ್‌ಗೆ ಅರ್ಧ ಸಾವನ್ನು ತಂದುಕೊಟ್ಟಿತೆಂದೂ, ಮುಂದೆ ಸೋದರ ವರದರಾಜನ ಸಾವು ಅವರ ಆರೋಗ್ಯವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತೆಂದೂ ನಾನು ಓದಿದ್ದೇನೆ.

೨) ಉದಯಶಂಕರ್ ನಂತರ ಕನ್ನಡದಲ್ಲಿ ಬರಹಗಾರರು ಅವರಷ್ಟು ಎತ್ತರಕ್ಕೆ ಏರಿಲ್ಲ ಎನ್ನುವ ನನ್ನ ಅನಿಸಿಕೆ (ನನಗ್ಗೊತ್ತು, ವಿಚಾರ ಎಂದು ಬರೆದರೆ ನಿಮಗೆ ಇಷ್ಟವಾಗದಿರಬಹುದು ಎಂದು). ನಿಮಗೆ ಹಂಸಲೇಖ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನೆನಪಿರಬಹುದು - ಚೆನ್ನರಾಯಪಟ್ಟಣದ ಆಚೀಚೆ ಕೆಲಸವಿಲ್ಲದೇ ಸುತ್ತುತ್ತಿರುವವರನ್ನು ರವಿಚಂದ್ರನ್ ಗುರುತಿಸಿದರು, ಹಾಗೂ ಮೇಲಕ್ಕೂ ತಂದರು. ಹಂಸಲೇಖ ಹಾಡು, ಸಂಗೀತ ನಿಮಗೆ ರುಚಿಸುವುದಿಲ್ಲ ಎಂದು ನೀವು ಒಂದೇ ಮಾತಿನಲ್ಲಿ ತಳ್ಳಿ ಹಾಕಬಹುದು, ಆದರೆ ಹಾಗೆ conclude ಮಾಡುವುದಕ್ಕಿಂತ ಮುಂಚೆ ಒಂದು ಕ್ಷಣ ತಡೆಯಿರಿ - ಕನ್ನಡ ಸಿನಿಮಾಗಳಲ್ಲಿ ಹಾಡುಗಳು ಇನ್ನೇನು ತಮ್ಮ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ ಎನ್ನುವಾಗ 'ಪ್ರೇಮಲೋಕ'ದಲ್ಲಿ 'ಈ ನಿಂಬೇ ಹಣ್ಣಿನ ಹುಡುಗಿ'ಯಿಂದ ಆರಂಭಿಸಿ ಒಟ್ಟಾರೆ ಹತ್ತು ಹಾಡುಗಳಿರುವ ಆ ಚಿತ್ರದಲ್ಲಿ ಹಂಸಲೇಖರವರ ಪ್ರತಿಭೆಯನ್ನು ಎಲ್ಲರೂ ಕೊಂಡಾಡುವವರೇ, ಹದಿನಾರು ರೀಲುಗಳಿರುವ 'ಪ್ರೇಮಲೋಕದಲ್ಲಿ' ಪ್ರತೀ ಹದಿನೈದು ನಿಮಿಷಕ್ಕೊಂದು ಹಾಡು ಬರುವುದೂ, ಹಾಗೆ ಬಂದ ಹಾಡುಗಳು ಕನ್ನಡ ಚಿತ್ರ ಪ್ರೇಮಿಗಳನ್ನು ಒಂದು ಕ್ಷಣ 'ಮಾಯಾ ಬಜಾರ್'ನ ಕಾಲಕ್ಕೆ ಕೊಂಡೊಯ್ದಿರಲೂ ಸಾಕು! ನಾನು ಉದಯಶಂಕರ್ ಅಂತೆಯೇ ಹಂಸಲೇಖಾರ ಅಭಿಮಾನಿ ಕೂಡಾ - ಅವರ ಒಳ್ಳೆಯ ಹಾಗೂ ಕೆಟ್ಟ ಹಾಡುಗಳು ಬೇಕಾದಲ್ಲಿ ನನಗೆ ತಿಳಿಸಿ.
ಆಗಲೇ ನೋಡಿ, ಎಲ್ಲರೂ ಹಂಸಲೇಖಾರ ಬರಹ, ಸಂಗೀತಕ್ಕೆ ಮುಗಿಬಿದ್ದದ್ದು - ಎಲ್ಲ ನಿರ್ದೇಶಕ, ನಿರ್ಮಾಪಕರಿಗೂ ಹಂಸಲೇಖರು ಅಂದು ಬೇಕಾಗಿದ್ದರು, ಪಾರ್ವತಮ್ಮನವರ ವಜ್ರೇಶ್ವರಿ ಕಂಬೈನ್ಸ್‌ನವರೂ ಸೇರಿ! ಆಗಲೇ (೧೯೮೮ ರಲ್ಲಿ) ಶಿವರಾಜ್‌ಕುಮಾರ್‌ರ 'ರಣರಂಗ'ಕ್ಕೆ 'ಜಗವೇ ಒಂದು ರಣರಂಗ' ಎಂದು ಹಂಸಲೇಖಾ ಹಾಡುಬರೆದಿದ್ದರು. ನನಗೆ ಎಲ್ಲಿಯೋ ರಾಜ್ ಪರಂಪರೆ ತಮ್ಮ ಜೀವನಾಡಿಯಾದ ಉದಯಶಂಕರ್‌ರವರನ್ನು ಈ ಸಂದರ್ಭದಲ್ಲಿ ಉಪೇಕ್ಷಿಸಿದ್ದರು ಎಂದು ಓದಿದ್ದ ನೆನಪು - rumor ಇದ್ದರೂ ಇರಬಹುದು. ಅಕಸ್ಮಾತ್ ಆ ಸುದ್ದಿ ನಿಜವೆಂದೇ ಆದರೆ ಪಾರ್ವತಮ್ಮನವರು ಉದಯಶಂಕರ್‌ನಂತವರನ್ನು ಹೀಗೆ ಉಪೇಕ್ಷಿಸಿದ್ದು ಸರಿಯೇ?

***

ಇಲ್ಲಿದೆ ನೋಡಿ ನನ್ನ ನಿಜವಾದ ತೊಳಲಾಟ: ನೀವು ಪಾರ್ವತಮ್ಮನವರ ಲೇಖನಗಳನ್ನು ಓದುತ್ತಾ ಬಂದಂತೆ ಕನ್ನಡದಲ್ಲಿ 'ಸತ್ವಪೂರ್ಣ' ಬರಹಗಾರರ ಕೊರತೆ ಇದೆ ಎನ್ನುವ ಸತ್ಯ ದುತ್ತನೆ ಎದುರಾಗುತ್ತದೆ. ಚಿತ್ರ ಮಾಧ್ಯಮ ಅನ್ನೋದು ಹಲವಾರು ಜನರನ್ನು ತಲುಪುವಂತಹ ಮಹಾ ಮಾಧ್ಯಮ, ಅದರಲ್ಲಿ ಪ್ರತಿಭೆಗಳ ಕೊರತೆ ಇದ್ದು, ಕನ್ನಡಿಗರು mediocre ಬರಹಗಾರ, ಸಂಗೀತಗಾರರನ್ನೇ ಅನುಭವಿಸುತ್ತಾ ಬಂದಲ್ಲಿ ಚಿತ್ರರಂಗದ ಮೇಲಿನ ನಂಬಿಕೆ ಹಾಗೂ ಭರವಸೆಗಳು ಕ್ರಮೇಣ ಕಡಿಮೆಯಾಗತೊಡಗುತ್ತೆ. ಪ್ರತಿಭೆ ಇದ್ದು, ಅದರ ಮೇಲೆ ಪಟ್ಟ ಪರಿಶ್ರಮದಿಂದ, ತಮ್ಮ ಅನುಭವಗಳಿಂದ ಜನರಿಗೆ ಉತ್ತಮ ಕಥೆ, ಹಾಡುಗಳನ್ನು ನೀಡಬೇಕಾದವರಿಗೆ ದೊಡ್ಡ ಡಿಮ್ಯಾಂಡಿದೆ, ಹೀಗಿರುವಾಗ 'ನಾನೂ ಚಿತ್ರಕಥೆ ಬರೆಯುವವನಾಗುತ್ತೇನೆ' ಎಂದು ಕನಸ್ಸನ್ನಿಟ್ಟುಕೊಂಡು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾದರೆ...ಎಂದು ಹಲವಾರು 'ರೆ'ಗಳನ್ನಿಟ್ಟುಕೊಂಡು ಯೋಚಿಸುತ್ತೇನೆ.

***

ನನ್ನ ಸ್ನೇಹಿತರೊಬ್ಬರು ಮಾತಿನ ಮಧ್ಯೆ '...ಎ.ಆರ್. ರೆಹಮಾನ್‌ನ ಶೈಲಿಯಲ್ಲಿ ಈ ಟ್ಯೂನ್ ಇದೆ, ಕಳಿಸ್ತೇನೆ ನೋಡಿ...' ಎಂದರು.
'ಹೌದಾ, ಎ. ಆರ್. ರೆಹಮಾನೇ ಅಲ್ಲಿಂದ ಇಲ್ಲಿಂದ ಹಾಡು ಹಗಲೇ ಕದ್ದು ತರ್‍ತಾನಂತೆ, ಅವನನ್ನ ಯಾಕೆ ಜನ್ರು ಅನುಕರಿಸ್ತಾರೋ, ಅದರ ಬದಲಿಗೆ ಅವನ ಗುರು ಇಳಯರಾಜಾನೋ, ಅಥವಾ ಅವರ ಗುರು ಜಿ.ಕೆ.ವೆಂಕಟೇಶ್‌ರನ್ನೋ ಅನುಕರಿಸಿದ್ದರೆ ಎಷ್ಟೋ ಚೆನ್ನಾಗಿತ್ತು!' ಎಂದೆ.

ನನ್ನ ಸ್ನೇಹಿತರು ಜೋರಾಗಿ ನಕ್ಕು ಬಿಟ್ಟರು.

9 comments:

sritri said...

ಹೌದು, ಚಿ.ಉದಯಶಂಕರ್ ರಾಜ್ ಕ್ಯಾಂಪಿನ "ಆಸ್ಥಾನ ಪಂಡಿತ"ರೆಂದೇ ಗುರುತಿಸಿಕೊಳ್ಳುತ್ತಿದ್ದ ಕಾಲ ಅದು.ಆಗ ಆ ಜಾಗಕ್ಕ ಹಂಸಲೇಖ ಬಂದಾಗ, ಪತ್ರಿಕೆಗಳಲ್ಲಿ ಹಬ್ಬಿದ ಸುದ್ದಿಗಳೂ ನನಗೂ ನೆನಪಿದೆ.

ಆದರೆ , ಪಾರ್ವತಮ್ಮನವರು ಚಿ.ಉ ಅವರನ್ನು ಉಪೇಕ್ಷಿಸರು ಎಂಬ ಮಾತು ಒಪ್ಪಿಗೆಯಾಗಲಿಲ್ಲ, ಒಬ್ಬ ನಿರ್ಮಾಪಕಿಯಾಗಿ ತಮ್ಮ ಸಿನಿಮಾವನ್ನು ಗೆಲ್ಲಿಸಲು, ಹೊಸ ಹೊಸ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದು ಅವರ ಹೊಣೆಯಾಗಿತ್ತು, ಅನಿವಾರ್ಯವೂ ಆಗಿತ್ತು. ರಾಜ್ ಚಿತ್ರಗಳಿಗೆ ಹೊಂದಿಕೆಯಾಗುತ್ತಿದ್ದ ಉದಯಶಂಕರ್ ಸಾಹಿತ್ಯ , ಶಿವರಾಜ್ ಕುಮಾರ್‍ಗೆ ಹೊಂದುವುದೇ ಎಂಬ ಗೊಂದಲ ಅವರನ್ನು ಕಾಡಿರಲೂ ಬಹುದು.

ರಣರಂಗ, ಓಂ, ಆಕಸ್ಮಿಕ ..ಮುಂತಾದ ಚಿತ್ರಗಳ ಮೂಲಕ ಹಂಸಲೇಖ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡರು.

ವಿಕಿಗೆ ಹಾಕಲು ಚಿ.ಉದಯಶಂಕರ್ ಚಿತ್ರ ಹುಡುಕುತ್ತಿದ್ದೆ. ನಿಮಗೆಲ್ಲಿ ಸಿಕ್ಕಿತು?

sritri said...

ಉಪೇಕ್ಷಿಸರು ಎಂಬುದನ್ನು "ಉಪೇಕ್ಷಿಸಿದರು" - ಎಂದು ತಿದ್ದಿ.

Anonymous said...

ಅಂದ ಹಾಗೆ ಪಾರ್ವತಮ್ಮ ರಾಜಕುಮಾರ್ ಅವರ ಅಂಕಣ ಸ್ವಂತ ಬರವಣಿಗೆಯಲ್ಲ ಎಂದು ನಾನು ಓದಿದ್ದೇನೆ. ಅದರಲ್ಲಿರುವ ಘಟನೆಗಳು ಮಹತ್ವವಾಗಿದ್ದರೂ ಅದರ ಬರವಣಿಗೆಯ ಕ್ರೆಡಿಟ್ ಲೇಖಕರಿಗೆ ದೊರಕಬೇಕು ಎಂದು ನನ್ನ ಅನಿಸಿಕೆ

Satish said...

sritri ಅವರೆ,

ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ ಹೀಗನ್ನಿಸಿತು - ಉದಯಶಂಕರ್ ಅವರ ಬರಹ ರಾಜ್‌ಗೆ ಒಪ್ಪಿಯಾಗುತ್ತಿತ್ತು, ತಮ್ಮ ಮಕ್ಕಳಿಗೆ ಪಾರ್ವತಮ್ಮನವರು ಬೇರೆ ಬರಹಗಾರರನ್ನು ಆಧರಿಸಿರಲಿಕ್ಕೂ ಸಾಕು. ನಿಮ್ಮ ಹಾಗೇ ನಾನೂ ಮುಖ್ಯವಾಹಿನಿಯಲ್ಲಿ ಸಿಗುವ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಆಧರಿಸಿ (ನನ್ನ ನೆನಪಿನ ಶಕ್ತಿಯ ಸಹಾಯದಿಂದ) ಬರೆಯುವವನಾದ್ದರಿಂದ ಈ ವಿಷಯದಲ್ಲಿ ಖಂಡಿತವಾಗಿ ಏನನ್ನೂ ಹೇಳಲಾರೆ.

ಉದಯಶಂಕರ್‌ರವರ ಚಿತ್ರ ನನಗೆ KannadaStore.com ಸೈಟ್‌ನಲ್ಲಿರುವ ಸಿಡಿ ಕವರ್ ಒಂದರಲ್ಲಿ ಸಿಕ್ಕಿತು, ಅದನ್ನು ನಾನು ಕತ್ತರಿಸಿ ಇಲ್ಲಿ ಹಾಕಿದ್ದೇನೆ, ಅದರ ಮೂಲ ಕೊಂಡಿ ಇಲ್ಲಿದೆ.

ಇತಿ,
ನಿಮ್ಮವ

Satish said...

ಅನಾಮಿಕರೇ,

ಹೌದು, ಅದು ಅವರ ಸ್ವಂತ ಬರವಣಿಗೆಯೆಲ್ಲ ಎಂದು ನನಗೂ ಅನ್ನಿಸಿದೆ, ಆದರೆ ಬರೆದವರ ಬಗ್ಗೆ ಎಲ್ಲೂ ತೋರಿಸದಿರುವುದು ನಮ್ಮ ಪತ್ರಿಕೆಗಳ ಮಿತಿಯನ್ನು ತೋರಿಸುತ್ತದೆ. ಕೊನೇಪಕ್ಷ 'ಸಂಗ್ರಹ" ಎಂದಾದರೂ ಕ್ರೆಡಿಟ್ ಕೊಡಬಹುದಿತ್ತು.

ನೀವು ಗಮನಿಸಿರಬಹುದು, ಬರವಣಿಗೆಗಳು ಅಲ್ಲಲ್ಲಿ ತುಂಡು-ತುಂಡಾಗಿ ಪ್ರಕಟವಾಗುತ್ತಿದ್ದು, ಯಾರೋ ಟೇಪ್‌ರೆಕಾರ್ಡರ್ ಒಂದನ್ನು ಕೇಳಿ ಬರೆದಂತಿದೆ.

ಇತಿ,
ನಿಮ್ಮವ

Satish said...

sritri ಅವರೆ,

ಆ ಕೊಂಡಿ ಇಲ್ಲಿದೆ, ಏಕೋ ಅದು ಹಿಂದಿನ ಕಾಮೆಂಟ್‌ನಲ್ಲಿ ಸೇರಿಕೊಳ್ಳಲಿಲ್ಲ:

http://www.kannadastore.com/product_info.php?products_id=706&osCsid=3a8417119a0133e818d99a35d30049f5

ಇತಿ,
ನಿಮ್ಮವ

Anonymous said...

ಪಾರ್ವತಮ್ಮ ಅವರ ಅಂಕಣ ಕನ್ನಡಪ್ರಭದಲ್ಲಿ ಪ್ರಕಟವಾಗುವ ಬಗ್ಗೆ:

ನನ್ನ ಅಂದಾಜಿನ ಪ್ರಕಾರ, ಕನ್ನಡಪ್ರಭ ವರದಿಗಾರರ ಪೈಕಿ ಒಬ್ಬರು ಪಾರ್ವತಮ್ಮನವರ ಮನೆಗೆ ಹೋಗಿ, ಮಾತುಕತೆಯನ್ನು ಧ್ವನಿಮುದ್ರಿಸಿಕೊಂಡು ಸಂದರ್ಶನ-ಲೇಖನವನ್ನು ಬರೆಯುವುದು. ಡಾ|ರಾಜ್ ನಿಧನರಾಗುವ ೨ ದಿನಗಳ ಹಿಂದೆ ಕನ್ನಡಪ್ರಭದ 'ಜೋಗಿ'ಯವರು ಪಾರ್ವತಮ್ಮನವರ ಜತೆ ಮಾತುಕತೆ (ಅಂಕಣಕ್ಕಾಗಿ) ನಡೆಸಿದ್ದರ ಬಗ್ಗೆ ಬೇರೊಂದು ಲೇಖನದಲ್ಲಿ ತಿಳಿಸಿದ್ದರು.

sritri said...

ನೀವು, ನಿಮ್ಮ ಬ್ಲಾಗ್ "ಅಂತರಂಗ" ಬಗ್ಗೆ ಬರೆದಿರುವ ವಿವರಣೆಯಲ್ಲೂ ಒಂದು ಹಂಸಲೇಖ ಹಾಡಿನ ಸಾಲು ಅಡಗಿದೆ. ಯಾವುದು ಅಂತ ಹೇಳಿ ನೋಡೋಣ. :)

Satish said...

sritri ಅವರೇ,

ಪರವಾಗಿಲ್ಲರೀ, ನನ್ನನ್ನ 'ಸತ್ಯವನ್ನೇ ಹೇಳೋ'ದಕ್ಕೆ ಆಗ್ರಹಿಸುತ್ತಾ ಇರೋ ಹಾಗಿದೆ! ಬರೀ ಕನ್ನಡಿವರೆಗಿನ ಉಪಮೆ ಮಾತ್ರ ಹಂಸಲೇಖ ಅವರ 'ಓ ದಿನಕರಾ...' ಹಾಡಿನಿಂದ, ಅಲ್ಲಲ್ಲ, ರಾಜ್‌ಕುಮಾರ್ ಹಾಡಿದ 'ಓ ದಿನಕರಾ...' ಹಾಡಿನಿಂದ ಎರವಲು ಪಡೆದಿದ್ದು!

(ಇನ್ನು ಈ "ಅಂತರಂಗ" 'ಮನದ ಮಾತುಗಳಿಗೆ ಮುನ್ನುಡಿ'ಯಾದರೆ ಪೂರ್ತಿ ಪುಸ್ತಕ ಯಾವುದು ಎಂದು ಕೇಳಬೇಡಿ!)

ಇತಿ
ನಿಮ್ಮವ