ನಕ್ಸಲರೆಂಬೋ ವಾದ!
ನಾವು ೮೦ ಹಾಗು ೯೦ ರ ದಶಕದಲ್ಲಿ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದೆವು: ದಕ್ಷಿಣ ಭಾರತದಲ್ಲಿ ಕರ್ನಾಟಕವೆಂದರೆ ಯಾವುದೇ ಭಯೋತ್ಪಾದಕರಿಲ್ಲದ ಸ್ಥಳ, ನಾವು ಸ್ನೇಹ ಪ್ರಿಯರು, ಪ್ರಪಂಚದ ಯಾವುದೇ ಭಾಗದಲ್ಲಿ ರಕ್ತಕ್ರಾಂತಿಯಾದರು ನಮ್ಮ ಕರ್ನಾಟಕದಲ್ಲಿ ಮಾತ್ರ ಹಾಗಾಗದೆಂದು. ಹೀಗೆ ಹೇಳುತ್ತಿದ್ದುದಕ್ಕೆ ಕಾರಣಗಳೂ ಇದ್ದವು, ನಮ್ಮ ನೆರೆಯ ರಾಜ್ಯಗಳಲ್ಲಿ ನಕ್ಸಲೀಯರು, ಎಲ್‌ಟಿಟಿಇ, ಪಿಡಬ್ಲುಜಿ, ಶಿವಸೇನೆ ಮುಂತಾದವರಿಂದ ಆಗಾಗ್ಗ ರಕ್ತ ಚೆಲ್ಲುತ್ತಿತ್ತು - ನಾಡಿನ, ನುಡಿಯ ಹಿತ-ಅಹಿತಗಳು ಅವುಗಳ ಮೇಲೆ ನಿರ್ಧರಿತಗೊಳ್ಳುತ್ತಿದ್ದವು.
ಆದರೆ, ನಮ್ಮ ಕರ್ನಾಟಕಕ್ಕೆ ಇತ್ತೀಚೆಗೆ ಎಂಥಾ ಸ್ಥಿತಿ ಬಂದಿದೆ ನೋಡಿ - ಆಗುಂಬೆ, ಚಿಕ್ಕ ಮಗಳೂರು, ಮಂಗಳೂರು, ಉಡುಪಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಇತ್ಯಾದಿ ಪ್ರದೇಶಗಳಲ್ಲಿ ಇತ್ತೀಚೆಗೆ ನಕ್ಸಲರ ಹಾವಳಿ ಅತಿಯಾಗಿದೆ - ಹೌದು, ಹಾವಳಿ ಎಂಬ ಪದವನ್ನು ನಮ್ಮ ಮಾಧ್ಯಮಗಳೂ ಬಳಸುತ್ತಿವೆ.
೧೯೯೧ರ ರಾಜೀವ್ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸರಹದ್ದಿನಲ್ಲಿ ಅಡಗಿ ಕುಳಿತಿದ್ದ ಶಿವರಸನ್ ಮತ್ತು ಅವನ ಸಹಚರರನ್ನು ಕರ್ನಾಟಕದ ಪೋಲೀಸರು ಗುಂಡಿಟ್ಟು ಕೊಂದಿದ್ದು, ಈ ರಕ್ತಕ್ರಾಂತಿಗೆ ನಾಂದಿಯಾಯಿತು ಎನ್ನಬಹುದೇ? ಅಥವಾ ಅದಕ್ಕೂ ಮುನ್ನ ನಡೆದ ಇಂತಹ ಯಾವುದಾದರೂ ಘಟಣೆಗಳನ್ನು ನೆನಪಿಗೆ ತಂದುಕೊಳ್ಳಿ.
ನಾನು ನಕ್ಸಲರ ಬಗ್ಗೆ, ಮಾವೋ ವಾದ, ಮಾರ್ಕ್ಸ್ ವಾದದ ಬಗ್ಗೆ ಸಾಕಷ್ಟು ಓದಿದ್ದೇನೆ. ಅವರ ಮೂಲ ತತ್ವಗಳಿಗೂ, ಅದರ ಇಂದಿನ ಅಳವಡಿಕೆಗೂ ಸಾಕಷ್ಟು ವ್ಯಾತ್ಯಾಸವಿದೆಯೆಂದೆನಿಸುತ್ತೆ. ಪ್ರಜಾಪ್ರಭುತ್ವದಲ್ಲಿ ದೊಡ್ಡ ಹೆಸರನ್ನು ಗಳಿಸಿದ ಭಾರತಕ್ಕೆ ಈ ಮಾವೋ-ಮಾರ್ಕ್ಸ್ ವಾದಗಳು ಹೇಗೆ ಬಂದು ಸುತ್ತಿಕೊಂಡವೋ, ಈ ವಾದದ ಹೆಸರಿನಲ್ಲಿ ಇಂದಿಗೂ ಸಿ.ಪಿಐ. ಪಕ್ಷದ ಅಭ್ಯರ್ಥಿಗಳು ಗೆದ್ದು ಬರುತ್ತಲೇ ಇದ್ದಾರೆ, ಅವರ ಪ್ರಣಾಳಿಕೆಗಳೂ ಅವರಂತೆಯೇ ಇನ್ನೂ ಚಲಾವಣೆಯಲ್ಲಿವೆ. ಉದಾಹರಣೆ ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳನ್ನು ತೆಗೆದುಕೊಂಡರೆ ಅವರ ಪ್ರಭಾವ ಅತಿ ಹೆಚ್ಚು, ಆದರೆ ಈ ರಾಜ್ಯಗಳ ಬೆಳವಣಿಗೆ ಅಷ್ಟಕಷ್ಟೇ. ಎಲ್ಲೆಲ್ಲೋ ಓದಿದ ನಮ್ಮ ಯುವಕರು ಈ ವಾದಗಳನ್ನು ಬೆಂಬಲಿಸಿ ಪೋಲೀಸರ ಗುಂಡಿಗೆ ಬಲಿಯಾದರೆಂದು ಕೇಳಿದಾಗ ಖೇದವಾಗುತ್ತದೆ, ತಮ್ಮ ಯುವ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯರ ರೋಧನ ಮುಗಿಲು ಮುಟ್ಟುತ್ತೆ, ನಕ್ಸಲರು ಎಂಬ ಹಣೆ ಪಟ್ಟಿ ಹೊತ್ತುಕೊಂಡ ಮಾತ್ರಕ್ಕೆ ಈ ಯುವಕರ ಹೆಣಗಳು ಮುನಿಸಿಪಾಲಿಟಿಯವರ ಸೊತ್ತಾಗುತ್ತದೆ.
ಯಾರು ಇವರಿಗೆಲ್ಲ ಹಣ (ಜೊತೆಯಲ್ಲಿ ಆಸೆ, ಆಮಿಷಗಳನ್ನೂ) ಸರಬರಾಜು ಮಾಡುವವರು? ಒಂದು ಒಳ್ಳೆಯ ಕಾರ್ಯವನ್ನು ಮಾಡಬೇಕೆಂದರೇ ಸಾಕಷ್ಟು ವಿಘ್ನಗಳು ತಲೆದೋರುವಾಗ ಇವರು ಇಷ್ಟೊಂದು ಯಶಸ್ವಿ ಅಥವಾ ವ್ಯವಸ್ಥಿತವಾದ ಕಾರ್ಯಾಚರಣೆಯನ್ನು ಅದು ಹೇಗೆ ನಡೆಸಿಕೊಂಡು ಬರುತ್ತಾರೆ? ಈ ಯುವಕ-ಯುವತಿಯರ ಅಂತಿಮ ಗುರಿ ಏನು, ಇವರ ಪ್ರಣಾಲಿಕೆಗಳೇನು? ಆಳುವವರ ವಿರುದ್ಧದ ಹೊಡೆದಾಟದಲ್ಲಿ ಬರೀ ಶಸ್ತ್ರಾಸ್ತ್ರಗಳಿಗೆ ಶರಣು ಹೋಗುವುದೇ ಇವರ ನಿಲುವೇ? ಇವರಿಂದ ಸಮಾಜದಲ್ಲಿನ ದುರ್ಬೀಜಗಳನೆಲ್ಲ ಹೊಸಕಿ ಹಾಕುವುದು ಸಾಧ್ಯವೇ? ಇವರಲ್ಲಿ ಸಿಟ್ಟಿದೆಯೇ? ಇವರು ಬಡವರ ಪರವೋ, ವಿರುದ್ಧವೋ? ಶಸ್ತ್ರಾಸ್ತ್ರಗಳನ್ನು ಬಳಸಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುನ್ನ ಉಳಿದ ದಾರಿಗಳನ್ನು ಇವರು ಅವಲೋಕಿಸಿದ್ದಾರೆಯೇ? ಇಷ್ಟೆಲ್ಲ ಆದ ಮೇಲೆ ಅದರಿಂದೇನಾಯಿತು? ಮನೆ ಗೆದ್ದು ಮಾರಿ ಗೆಲ್ಲು ಎಂಬ ಹಿರಿಯರ ಹೇಳಿಕೆಯನ್ನು ಮೀರಿ, ತಮ್ಮನ್ನು ಬೆಳೆಸಿ, ಪೋಷಿಸಿದವರನ್ನು ತೊರೆದು, ನಾಡಿಗೆ ನೇರವಾಗಿ ಯಾವುದೇ ರೀತಿಯಲ್ಲಿ ಉಪಯೋಗವಾಗದ ಕೆಲಸ ಕಾರ್ಯಗಳಲ್ಲಿ ಇವರು ತೊಡಗಿರುವುದನ್ನು ಇವರು ಹೇಗೆ ಸಾಧಿಸಿಕೊಳ್ಳುತ್ತಾರೋ ಎಂಬ ಕುತೂಹಲವಿದೆ.
ನಮ್ಮ ರಾಜ್ಯ ಸರ್ಕಾರ ಈ ಕುರಿತು ಹಲವಾರು ರೀತಿಯ ವರದಿಗಳನ್ನು ತಯಾರಿಸಲು ಕಮಿಷನ್‌ಗಳನ್ನು ನಿರ್ಮಿಸಿತು, ಅವುಗಳಿಂದ ಬೆಳಕಿಗೆ ಬಂದ ವಸ್ತುಗಳು ನಿಮಗೇನಾದರೂ ದೊರಕಿದ್ದರೆ ಕಳಿಸಿಕೊಡಿ. ನಕ್ಸಲರ ಬೆಳವಣಿಗೆ, ಕರ್ನಾಟಕದ ಮಟ್ಟಿಗೆ ಇನ್ನು ಮುಂದೆ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಯುವ ಜನತೆ ಹಾಗೂ ಅಮಾಯಕರು ಇದರ ಬಲೆಯಲ್ಲಿ ಬಿದ್ದು ಹಾಳಾಗಾದಿದ್ದರೆ ಸಾಕು.
ಒಂದು ವೇಳೆ ನಾನು ಯಾವುದಾದರೊಂದು ತತ್ವಕ್ಕೆ ಕಟ್ಟು ಬಿದ್ದವನಾದ ಮಾತ್ರಕ್ಕೆ, ಹಿಂದೆ ಮುಂದೆ ನೋಡದೆ ನನ್ನನ್ನು ಮುನಿಸಿಪಾಲಿಟಿ ನಾಯಿಯ ಹಾಗೆ ಹೊಡೆದುರುಳಿಸುವ ಅಧಿಕಾರ ಪೋಲೀಸಿನವರಿಗೆ ಸಿಗುತ್ತದೆಯೆಂದು ಗೊತ್ತಾದ ತಕ್ಷಣ ನನ್ನ ತತ್ವ ಹಾಗೂ ಹೆಜ್ಜೆಗಳನ್ನು ಪುನರಾವಲೋಕನ ಮಾಡಿಕೊಳ್ಳುತ್ತಿದ್ದೆ, ಈ ಯುವಕ-ಯುವತಿಯರಿಗೆ ಆ ಅವಕಾಶ ಬರಲಿ.
2 comments:
ಮಾವೋ ಅಥವಾ ಮಾರ್ಕ್ಸ್ ವಾದಗಳು ನೀವು ಭಾವಿಸಿರುವಂತೆ ಭಾರತಕ್ಕೆ ಸುತ್ತಿಕೊಂಡಿಲ್ಲ. ಚಾರಿತ್ರಿಕ ಒತ್ತಡ ಕೆಲವು ಯುವಕರನ್ನು ಅವನ್ನು ಅನುಸರಿಸುವಂತೆ ಮಾಡಿವೆ. ನಕ್ಸಲು ಕಾರ್ಯಾಚರಿಸುತ್ತಿರುವ ಯಾವುದೇ ಪ್ರದೇಶದ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಮೇಲೆ ತಾವು ಕಣ್ಣು ಹಾಯಿಸಿದರೆ ನಕ್ಸಲು ಯಾಕೆ ನೆಲೆ ಕಂಡುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ.
ಇನ್ನು ಪಶ್ಚಿಮ ಬಂಗಾಳ ಮತ್ತು ಕೇರಳಗಳ ಬಗೆಗಿನ ತಮ್ಮ ಅಭಿಪ್ರಾಯ ಕೂಡಾ ಅರೆಬೆಂದದ್ದು. ಅಭಿವೃದ್ಧಿ ಅಷ್ಟಕಷ್ಟೇ ಅಂದರೆ ಏನರ್ಥ. ನಿಮ್ಮ ಅಭಿವೃದ್ಧಿಯ ಮಾನದಂಡ ಯಾವುದು ಎಂಬುದನ್ನು ನೀವು ಸ್ಪಷ್ಟ ಪಡಿಸಿದರೆ ಒಳ್ಳೆಯದು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳ ಭಾರತದ ಇತರ ಎಲ್ಲಾ ರಾಜ್ಯಗಳಿಗಿಂತ ಮೇಲಿದೆ. ಶಿಕ್ಷಣದಲ್ಲೂ ಅಷ್ಟೇ. ಲಿಂಗಾನುಪಾತದದ ವಿಷಯಕ್ಕೆ ಬಂದರೂ ಕೇರಳ ನಿಮ್ಮದೇ ದೃಷ್ಟಿಯವಲ್ಲಿ ಬಹಳ ಅಭಿವೃದ್ಧಿ ಹೊಂದಿರುವ ಪಾಶ್ಚಾತ್ಯ ರಾಷ್ಟ್ರಗಳ ಮಟ್ಟದಲ್ಲಿದೆ.
ಕೇರಳದಲ್ಲಿಯೂ ಸಮಸ್ಯೆಗಳಿವೆ. ನಿರುದ್ಯೋಗವಿದೆ. ಇದು ದೇಶದ ಇತರೆಡೆಗಳಲ್ಲಿಯೂ ಇದೆ. ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಮಹಾರಾಷ್ಟ್ರದಂತೆ ಕೇರಳದಲ್ಲಿ ಹಸಿವಿನಿಂದ ಸಾವುಗಳು ಸಂಭವಿಸಿಲ್ಲ.
ಇದರ ಅರ್ಥ ಸಿಪಿಐ ಅಥವಾ ಸಿಪಿಎಂ ಆಡಳಿತ ನಡೆಸುತ್ತಿರುವಲ್ಲಿ ಎಲ್ಲವೂ ಸರಿಯಾಗಿವೆ ಎಂದಲ್ಲ. ತಮಗೊಂದು ವಿಷಯ ತಿಳಿದಿರಲಿ. ನಕ್ಸಲರನ್ನು ನಿರ್ದಯವಾಗಿ ಹತ್ತಿಕ್ಕುತ್ತಿರುವವರಲ್ಲಿ ಪಶ್ಚಿಮ ಬಂಗಾಳದ ಸಿಪಿಎಂ ಸರಕಾರವೂ ಒಂದು.
ಟಿ ಕೆ ಎಸ್ ಭಟ್
ನನ್ನ ಈ ಮೊದಲ ಕಮೆಂಟ್ ಗೆ ಸಂಬಂಧಿಸಿದಂತೆ ಪತ್ರಕರ್ತ ವಿನೋದ್ ಮೆಹ್ತಾವರ ಅಂಕಣದ ಕೆಲಸ ಸಾಲುಗಳನ್ನು ಇಲ್ಲಿ ಉಲ್ಲೇಖಿಸಬಹುದೇನೋ. One understands India is an economic superpower challenging China, it is experiencing unprecedented growth rates, its middle class can buy Danish bacon and Spanish olives at the neighbourhood store. Conspicuous consumption reigns. But nine hundred million people must wait for market forces to somehow touch their lives. Sheer callousness apart, these 900 million people have something called the vote. And they use it extremely craftily. In 2004, they threw out a government which considered itself invincible. Forget the ethics, forget conscience, any political party which panders to the prejudices of India's fickle middle class is committing electoral suicide.
Remember, the poor will not go away. You cannot tuck them away in Kalahandi or Bastar. They will haunt India's affluent in Mumbai, Delhi, Bangalore and Chennai at traffic lights, in unregulated slums, in shopping malls, outside five-star hotels. They will join Maoists and threaten the Indian state while slitting the throats of rich farmers. The 'Red Corridor' is an ominous development. Any moderately sane middle-class person must ask himself why the wretched of the earth increasingly decide to take up arms against a vastly better-armed and organised force in a war they know they are bound to lose. Better to die fighting than to die of hunger.
ನೀವು ಎತ್ತಿರುವ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಧನ್ಯವಾದಗಳು
ಟಿ ಕೆ ಎಸ್ ಭಟ್
Post a Comment