Friday, April 28, 2006

ಹೀಗೊಂದು ಮುಂಜಾವು

ಇನ್ನೇನು ಶುಕ್ರವಾರ ಬಂತು ಎಂದು ಮೈ ಮುರಿದು ಏಳುತ್ತಿದ್ದ ಹಾಗೆ ಮಾಡಬೇಕಾದ ಮಾಡಬಹುದಾದ ಕೆಲಸಗಳೆಲ್ಲ ಕಣ್ಣಮುಂದೆ ದುತ್ತನೆ ಎದುರಾದವು, ಅವುಗಳಿಗೆಲ್ಲಾ ಸ್ವಲ್ಪ ತಡೆಯಿರಿ ಎಂದು ಹೇಳುವಂತೆ ಕಣ್ಣುಗಳನ್ನು ನೀವಿಕೊಳ್ಳುತ್ತಾ ಬಚ್ಚಲು ಮನೆಗೆ ನಡೆದಾಗ ಎಲ್ಲಿ ತಡವಾಗುತ್ತೊ ಅನ್ನೋ ಗಡಿಬಿಡಿ ತನ್ನಷ್ಟಕ್ಕೆ ತಾನೇ ನಾನು ಮಾಡುವ ಕೆಲಸಗಳಲ್ಲೆಲ್ಲ ಸುತ್ತಿಕೊಳ್ಳುವ ಪರಿಪಾಠವನ್ನು ಮುಂದುವರೆಸಿತು. ಸ್ನಾನ ಮಾಡಿ ಬಂದು ಮೈ ಒರೆಸಿಕೊಂಡು ದೇವರಿಗೆ ದೀಪ ಹಚ್ಚಿ ಇನ್ನೇನು ಹೊರಡಲನುವಾಗುವಾಗ ಇಂದು ಮನೆಯಲ್ಲಿಯೇ ತಿಂಡಿ ತಿಂದರೆ ಹೇಗೆ ಎಂದು ತಂಗಳು ಪೆಟ್ಟಿಗೆಯಲ್ಲಿನ ಹಾಲನ್ನು ತೆಗೆಯುವುದರ ಜೊತೆಗೆ ಕೈಗಳು ಅಲ್ಲೇನಾದರೂ ತಿನ್ನಲು ಸಿಗುತ್ತದೆಯೋ ಎಂದು ಹುಡುಕಾಡತೊಡಗಿದವು. ಕೈಗೆ ಸಿಕ್ಕಿದ್ದನ್ನು ತಿಂಡಿ ಎಂದು ತಿಂದು, ಬಿಸಿ ಚಹಾವನ್ನು ಕುಡಿದು ಬಾಗಿಲು ತೆಗೆದು ಕಾಲನ್ನು ಹೊರಗಿಟ್ಟಾಗ ಪ್ರಪಂಚದ ಕತ್ತಲೆಂಬ ಕೊಳೆಯನ್ನು ಇಂದು ಖಂಡಿತವಾಗಿ ಹೋಗಲಾಡಿಸುತ್ತೇವೆ ಎಂಬು ಬೀಗುವ ಸೂರ್ಯನ ಕಿರಣಗಳು ದಟ್ಟವಾದ ಕಪ್ಪು ಮೋಡದ ಮರೆಯಿಂದ ಇಣುಕಿ ನನ್ನ ಕಣ್ಣುಗಳನ್ನು ಕಿರಿದು ಮಾಡುವುದರ ಜೊತೆಗೆ ಸಂತಸವನ್ನೂ ಮೂಡಿಸಿದವು.

ಗಾಡಿಯಲ್ಲಿ ಕುಳಿತು ಹೊರಡಬೇಕೆನ್ನುವಾಗ ತೇವವಾದ ಗಾಳಿ ಸುಳಿದು ಎಂದಿಗಿಂತಲೂ ಸ್ವಲ್ಪ ಕಮ್ಮಿ ಬಿಸಿಲು ಬರಬಹುದಾದ ಮುನ್ಸೂಚನೆಯನ್ನು ನೀಡಿದವು, ನಾನು ಜೊತೆಯಲ್ಲಿ ಛತ್ರಿ ಇರುವುದನ್ನು ಧೃಡಪಡಿಸಿಕೊಂಡೆ. ಇನ್ನೇನು ವಾಹನ ಚಲಾವಣೆ ಮಾಡಬೇಕು ಎನ್ನುವಷ್ಟರಲ್ಲಿ ಅದೆಲ್ಲಿಂದಲೋ ಎರಡು ಪಾರಿವಾಳಗಳ ಗುಟುರುವಿಕೆ ಕಿವಿಗೆ ಬಿದ್ದು ಬೆಳ್ಳಂ ಬೆಳಗ್ಗೆ ನಡೆಯುವ ಅತ್ತೆ-ಸೊಸೆಯ ಜಗಳವನ್ನು ನೆನಪಿಗೆ ತಂದಿತು. ಇನ್ನೊಂದು ನಲವತ್ತು ನಿಮಿಷಗಳಲ್ಲೆಲ್ಲ ನಾನು ತಲುಪಬಹುದಾದ ಜಾಗವನ್ನು ತಲುಪುತ್ತೇನೆ ಎಂದು ದೇಹ ಹಾಗೂ ಮನಸ್ಸು ತಮ್ಮ ತಮ್ಮ ಕೆಲಸವನ್ನು ಮುಂದುವರೆಸಿದವು.

ಇನ್ನೇನು ಕತ್ತಲು ಸರಿದು ಬೆಳಕು ಮೂಡುವಷ್ಟರಲ್ಲಿ ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು 'ನಾನು ಏನೇ ಮಾಡಿದರೂ ಪ್ರತಿಫಲಿಸುವುದಿಲ್ಲ' ಎಂದು ಹಠ ತೊಟ್ಟ ಮಗುವಿನಂತೆ ಮುಖಮಾಡಿಕೊಂಡು ಕರಿಯಾದ ರಸ್ತೆ ಮಲಗಿತ್ತು, ಅಲ್ಲಲ್ಲಿ ಇಬ್ಬನಿಯ ತೇವ ರಸ್ತೆ ಬದಿಯಲ್ಲಿ ನೀರಿನಂತೆ ಜಿನುಗಿದ್ದು ರಾತ್ರಿ ಹಾಲು ಕುಡಿದು ಮಲಗಿದ ಮಗುವಿನ ತುಟಿಯಿಂದ ಒಸರಿದ ಹಾಲು-ಜೊಲ್ಲಿನಂತೆ ಕಂಡು ಬರುತ್ತಿತ್ತು. ರಸ್ತೆ ಬದಿಯ ಮಡಗಿರಗಳು ನೀನು ಮುಂದೆ ಹೋಗು ಸಂಜೆ ಸಿಗುತ್ತೇವೆ ಎಂದು ಕೈ ಬೀಸಿ ಹಿಂದೆ ಸರಿಯುವಂತೆ ಅನ್ನಿಸಿತು.

ವೃತ್ತ ಪತ್ರಿಕೆಗಳಿಂದ ಹಿಡಿದು ಯಾವ ಮಾಧ್ಯಮವನ್ನು ತಳುಕು ಹಾಕಿಕೊಂಡರೂ ಅವೇ ಹಳಸಲು ಸುದ್ದಿಗಳು! ಕಗ್ಗತ್ತಲೆಯ ಖಂಡದ ಕೊಲೆ-ಸುಲಿಗೆ-ಅತ್ಯಾಚಾರ-ಅನಾಚಾರಗಳಿಂದ ಹಿಡಿದು ಮುಂದುವರೆದ ದೇಶಗಳ ಅವೇ ಸುದ್ದಿಗಳ ಮತ್ತೊಂದು ಮಗ್ಗುಲನ್ನು ಇಂದಿನ ಬೆಳವಣಿಗೆಯ ಯುಗದಲ್ಲಿ ತಾವು ಪ್ರತಿಸ್ಪಂದಿಸುತ್ತೇವೆ ಎಂದು ತಮ್ಮಷ್ಟಕ್ಕೆ ತಾವೇ ಎಲ್ಲ ಸುದ್ದಿಗಳನ್ನೂ ಹಿಡಿದು ವರದಿ ಒಪ್ಪಿಸಿದ ವರದಿಗಾರರೋಪಾದಿಯಲ್ಲಿ ತಿಣುಕುತ್ತಿದ್ದವು. ಈ ವರದಿಗಳು, ವರದಿಗಾರರು ಇವರೆಲ್ಲ ಶತ-ಶತಮಾನಗಳಿಂದ ಮಾಡಿದ್ದೇನು, ಮಾಡೋದೇನಿದೆ, ಅದರಿಂದ ಏನಾಯಿತು, ಎಂಬಿತ್ಯಾದಿ ಆಲೋಚನೆಗಳು ಸುಳಿಯತೊಡಗಿದವು, ಅವು ಬಂದಷ್ಟೇ ವೇಗದಲ್ಲಿ ಹಿಂದೆ ಸರಿದವು ಎಂದರೆ ಸರಿಯಾದೀತು. ಅಲ್ಲಲ್ಲಿ ಸ್ವಲ್ಪ ನಿಧಾನ, ಮಧ್ಯೆ ಎಳೆ ಬಿಸಿಲಿನಲ್ಲಿ ಮಿರುಗಿ ಬೀಗುವ ಕಪ್ಪು ರಸ್ತೆಯ ಕಪಾಲಗಳು ಕಂಡಲ್ಲೆಲ್ಲ ಸ್ವಲ್ಪ ವೇಗ, ಎಲ್ಲಿ ಯಾರಾದರೂ ಹಿಡಿದು ದಂಡ ವಿಧಿಸುತ್ತಾರೋ ಎಂಬ ಭಯದ ನೆರಳು - ಹಾಗೂ ತಲೆಯಲ್ಲಿ ಹತ್ತಾರು ಆಲೋಚನೆಗಳು, ಇವೆಲ್ಲದರ ಮಧ್ಯೆ ಪ್ರಯಾಣ ನಿರಾತಂಕವಾಗಿ ಸಾಗಿತ್ತು.

ಪ್ರತಿಯೊಂದು ಪ್ರಯಾಣಕ್ಕೂ ಎಲ್ಲೋ ಹೇಗೋ ಒಂದು ಕೊನೆ ಇರುವ ಹಾಗೆ ನನ್ನ ಈ ಚಿಕ್ಕ ಪ್ರಯಾಣವೂ ಕಛೇರಿಯನ್ನು (ಯಾವುದೇ ತೊಂದರೆಗಳಿಲ್ಲದೇ) ತಲುಪಿದ್ದರಿಂದ ಕೊನೆಯಾಗುತ್ತದೆ. ನಾನು ತಲುಪಿದೆನೆಂದು ನೆನಪಿಸುವ ನನ್ನ ಮುಖ ಪರಿಚಯ ಇರುವಂತೆ ಗಾಳಿಯ ಸಹಾಯದಿಂದ ತೊನೆಯುವ ಮರಗಿಡಗಳ ನಗೆಯಿಂದ ಪುಳಕಿತನಾಗುತ್ತೇನೆ - ಇತ್ತೀಚೆಗಷ್ಟೇ ಕಡು ಚಳಿಯಲ್ಲಿ ಬಳಲಿ ಚೈತ್ರಮಾಸದ ದೆಸೆಯಿಂದ ಈಗಷ್ಟೇ ಚಿಗುರಿ ಮೊಗ್ಗು, ಹೂವು, ಮಿಡಿ, ಹೀಚುಗಳನ್ನು ಬಿಡುತ್ತಿರುವ ಅವುಗಳ ಸಂತೋಷವನ್ನು ಕಂಡು ನಾನಾದರೂ ಏಕೆ ಕರುಬಬೇಕು? ವಾಹನವನ್ನು ಎಲ್ಲಿಡಬೇಕೋ ಅಲ್ಲಿಟ್ಟು, ಇನ್ನೇನು ಮೆಟ್ಟಿಲುಗಳನ್ನು ಹತ್ತಿ ಕಛೇರಿಯ ಆವರಣದಲ್ಲಿ ಕಾಲಿಟ್ಟೊಡನೆ ಒಂದು ರೀತಿಯ ಗಮಲು ವಾಸನೆ ಮೂಗಿಗೆ ಅಡರಿಕೊಂಡು - 'ಈಗ ಎಲ್ಲಿದ್ದೀಯಾ ಗೊತ್ತೇ!' ಎಂದು ಅಪಹಾಸ್ಯ ಮಾಡಿ ಕೇಕೆ ಹಾಕಿದಂತೆ ಕಂಡುಬಂತು. ಕಿಟಕಿಯ ಒಳಗಡೆ ಬರಲು ಹವಣಿಸುತ್ತಿದ್ದ ಸೂರ್ಯ ಕಿರಣಗಳು ಹೊರಗಿದ್ದನ್ನು ಬೆಳಗಿಯಾಯ್ತು, ಇನ್ನು ಅಂತರಂಗವನ್ನು ತೊಳೆಯಬೇಕಿದೆ, ದಾರಿ ಬಿಡು ಎಂದು, ನನ್ನ ಪ್ರತಿಕ್ರಿಯೆಗೂ ಕಾಯದೇ ಎಂದಿನ ವೇಗದಲ್ಲಿ ಮುನ್ನುಗ್ಗುತ್ತಿದ್ದವು. ನಾನು ಬಗಲಿನಿಂದ ಚೀಲವನ್ನಿಳಿಸಿ, ಆಗಲೇ ಉಸ್ ಎಂದು ಉಸಿರು ಬಿಟ್ಟು ಗಣಕ ಯಂತ್ರದ ಪರದೆಯ ಗುಂಡಿಯನ್ನುಮುಕಿದೆ, 'ಅದೇನು ಕಡಿದು ಹಾಕುತ್ತೀಯೋ, ಹಾಕು' ಎಂದು ಅಟ್ಟಹಾಸ ಬೀರುತ್ತಾ ಹತ್ತೊಂಬತ್ತು ಅಂಗುಲದ ಪರದೆಯ ಮಧ್ಯಭಾಗದಿಂದ ನೀಲಿ ಬಣ್ಣದ ಬೆಳಕೊಂದು ತೂರಿ ಬಂತು.

***

There is a difference in this post did you notice? Clue! This itself is a clue :-)

3 comments:

Anonymous said...

There is a difference in this post did you notice?

ಉತ್ತರ - ನಿಮ್ಮ ಉಳಿದ ಲೇಖನಗಳಲ್ಲಿ ಇರುವ ಅಳುಮುಂಜಿ ಛಾಯೆ(cry baby :)) ಇಲ್ಲಿಲ್ಲ. (ತಮಾಷೆಗೆ, ತಪ್ಪು ತಿಳಿಯಬೇಡಿ.)

v.v. said...

ಆಂಗ್ಲ ಭಾಷಾ ಪ್ರಯೋಗ ಇಲ್ಲದಿರುವುದೇ?

Satish said...

ಪ್ರಿಯ 'ಸಂಜಯ',

ನಿಮ್ಮನ್ನು ಕಲಿಯುಗದ ಸಂಜಯನೆಂದು ನಾನೆಂದುಕೊಂಡಿದ್ದರಲ್ಲಿ ಏನೂ ತಪ್ಪಿಲ್ಲ ಬಿಡಿ, ನಿಮ್ಮಿಂದ ಅದೆಷ್ಟೋ ಕುರುಕ್ಷೇತ್ರ ಯುದ್ಧಗಳ ವೀಕ್ಷಕ ವಿವರಣೆ ಆಗುತ್ತಿದೆ, ಆಗುವುದರಲ್ಲಿದೆ! ನಿಮ್ಮಿಂದ ಒಂದು ಸಹಾಯವನ್ನು ಕೇಳಬೇಕಾಗಿ ಬಂದಿದೆ, ಮುಂದೆ ಓದಿ.

ನೀವು ಒಂದೇ ವಾಕ್ಯದಲ್ಲಿ ಸೂಚಿಸಿದಂತೆ 'ಆಂಗ್ಲ' ಪದಗಳ ಬಳಕೆ ಇರದೆ ಬರೆಯದೇ ಇದ್ದುದೇ ಇಂದಿನ ಬರಹದ ವಿಶೇಷ, ಸ್ವಲ್ಪ ಹೊತ್ತು ಯೋಚಿಸಿದ ಮೇಲೆ sritri ಅವರು ಹೇಳಿದ 'cry baby' ಯ ಉತ್ತರವೂ ಸರಿಯಾದುದೇ ಅನ್ನಿಸಿತು. ಆದ್ದರಿಂದ ಬಂದ ಉತ್ತರಗಳೆರಡೂ ಸರಿ! ಎಲ್ಲೂ ನಿಲ್ಲಿಸದೇ ಪೂರ್ತಿಯಾಗಿ ಕನ್ನಡದಲ್ಲೇ ಬರೆಯಬೇಕೆಂದು ಅಂದುಕೊಂಡಾಗ ಈ ಲೇಖನ ಹುಟ್ಟಿತು.

ನಿಮ್ಮಿಂದ ಬೇಕಾದ ಸಹಾಯವೆಂದರೆ - ನಿಮ್ಮ 'ದಿವ್ಯದೃಷ್ಟಿ'ಯಲ್ಲಿ 'ಅಂತರಂಗ'ದ ಭವಿಷ್ಯದ ಬಗ್ಗೆ ನಿಚ್ಚಳವಾಗಿ ಏನು ಕಾಣುತ್ತಿದೆಯೆಂದು ದಯವಿಟ್ಟು ನನಗೆ ತಿಳಿಸುತ್ತೀರಾ?

ಇತಿ,
ನಿಮ್ಮವ