Friday, April 07, 2006

America - Moral Responsibility

ಅಮೇರಿಕೆಯಲ್ಲಿ ನೈತಿಕ ಜವಾಬ್ದಾರಿಯ ಮಾತು ಕೇಳಿ ಬರದು...

ನಾನು USAಗೆ ಬರುವ ಮೊದಲು ಇಲ್ಲಿಯ ಮುಖ್ಯವಾಹಿನಿಯಲ್ಲಿ ನಾನು ಒಬ್ಬನಾಗಿ ಬದುಕುವುದಿಲ್ಲ ಎನ್ನುವುದು ಗೊತ್ತಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲವೇನೋ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಮುಖ್ಯವಾಹಿನಿ ಎಂದರೆ ಇಲ್ಲಿಯ ಸಮಾಜದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಎಂಬರ್ಥದಲ್ಲಿ. ಹೊರದೇಶಕ್ಕೆ ಹೀಗೆ ಕೆಲಸಗಾರರಾಗಿಯೋ ಅಥವಾ ವಲಸಿಗರಾಗಿಯೋ ಬರಲು ಹವಣಿಸುತ್ತಿರುವ ಯುವಕ/ಯುವತಿಯರು ಓದಲೇ ಬೇಕಾದ ಪುಸ್ತಕಗಳು, ನೋಡಲೇ ಬೇಕಾದ ಸಿನಿಮಾ ಅಥವಾ ಡಾಕ್ಯುಮೆಂಟರಿಗಳು ನಿಮಗೆ ಗೊತ್ತಿದ್ದರೆ ತಿಳಿಸಿ.

ಇಲ್ಲಿಯ citizen ಆಗದೇ ಇಲ್ಲಿ ಮತ ಚಲಾಯಿಸುವಂತಿಲ್ಲ (ಸಿಟಿಜನ್ ಆಗುವ ಹಾಗೂ ಬಿಡುವ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ), ಮತ ಚಲಾಯಿಸದವನಿಗೆ ಸಂವಿಧಾನದಲ್ಲಿ ಬರೆಯದಿರುವ ಹಕ್ಕಿನ ಮಿತಿಗಳು ದುತ್ತನೆ ಎದುರಾಗಿ ಪದೇ-ಪದೇ ಹಿಂಸಿಸತೊಡಗುತ್ತವೆ. ಅಲ್ಲದೇ ಹಲವಾರು ವರ್ಷಗಳು ಇಲ್ಲಿ ಬದುಕಿ ಹಲವು ವಿಭ್ರಮೆಗಳಿಗೊಳಗಾಗಿದ್ದೂ ಇದೆ, ಅಂತಹ ಮಹಾನ್ ವಿಭ್ರಮೆಗಳಲ್ಲಿ ಅಮೇರಿಕದವರು ಇರಾಕ್ ಮೇಲೆ ಧಾಳಿ ಮಾಡಿ ಅದನ್ನು ಸಾಧಿಸಿಕೊಳ್ಳುವ ವಿಷಯವೂ ಒಂದು - ಆದರೆ ಅದರ ವಿರುದ್ಧವಾಗಿ (ಯಾಕೆಂದರೆ ಅದು ನನ್ನ ರೀತಿಯಿಂದ ತಪ್ಪು ಎನ್ನುವ ಕಾರಣದಿಂದ) ನಾನು ಈವರೆಗೆ ಒಬ್ಬ ನಾಗರಿಕನಾಗಿ ಮಾಡಿದ್ದೇನೂ ಇಲ್ಲ, ಅಲ್ಲಲ್ಲಿ ಗೆಳೆಯರ ನಡುವೆ ಆ ಬಗ್ಗೆ ಮಾತನಾಡಿದ್ದನ್ನು ಬಿಟ್ಟರೆ. ಸರಿ, ನಾನು ಇಲ್ಲಿಯ ಮುಖ್ಯವಾಹಿನಿಯಲ್ಲಿ ಒಬ್ಬನಾಗಿ ಬೆರೆತಿದ್ದರೆ ಅದರಿಂದ ಏನು ವ್ಯತ್ಯಾಸವಾಗುತ್ತಿತ್ತು ಎಂದು ನೀವು ಕೇಳಬಹುದು - ಬಹಳಷ್ಟು ವ್ಯತ್ಯಾಸವಾಗುತ್ತಿತ್ತು: ಇಲ್ಲಿಯ ಲೋಕಲ್ ರೆಪ್ರೆಸೆಂಟೇಟಿವ್ಸ್‌ಗೆ ಬರೆಯಬಹುದಿತ್ತು, ಇರಾಕ್ ಯುದ್ಧದ ಸಂಬಂಧ ಮತ ಚಲಾವಣೆ ನಡೆದಾಗಲೆಲ್ಲ ಅಲ್ಲಿ ಅದರ ವಿರುದ್ಧವಾಗಿ ಧ್ವನಿಗೂಡಿಸಬಹುದಿತ್ತು, ಮುಖ್ಯವಾಗಿ ಒಬ್ಬ ಪ್ರಜೆಯಾಗಿ ಯುದ್ಧವನ್ನು ತಪ್ಪಿಸಲು, ಮುಂದೆ ಅದರಿಂದ ಆಗುವು ವಿಹಿತ ಪರಿಣಾಮಗಳ ವಿರುದ್ಧ ನಿಲ್ಲಬಹುದಿತ್ತು.

ಸರಿ, ಹಾಗಾದರೆ ಇವೆಲ್ಲವನ್ನೂ ನಾನು ಮಾಡದೇ ಇರುವುದಕ್ಕೆ ಕಾರಣಗಳನ್ನು ಕೊಟ್ಟು, escape ಆಗಿ ಹೋಗಲು ನೋಡುತ್ತಿದ್ದೇನೆಂದು ನೀವು ಅಂದುಕೊಳ್ಳಬಹುದು. ಹಾಗೂ ಅಲ್ಲ...

ಇರಾಕ್‌ನಲ್ಲಿ ಸಿಡಿಸಿದ ಪ್ರತಿಯೊಂದು ಬಾಂಬಿನ ಮೇಲೂ ಅಮೇರಿಕದಲ್ಲಿ ತೆರಿಗೆ ಕೊಡುವವರ ಪಾಲಿದೆ, ಆ ಪಾಲಿನಲ್ಲಿ ಬೇಕಾಗಿಯೋ, ಬೇಡವಾಗಿಯೋ ನಾನೂ ಒಬ್ಬನಾಗಿ ಸೇರಿಕೊಂಡಿದ್ದೇನೆ - ಇದು ಇಂದಿನ ತಳಮಳದ ಸಾರ!

***

ಇರಾಕ್ ಯುದ್ಧ ನಡೆದುಹೋಯಿತು, ಆಗಬಾರದ್ದು ಆಯಿತು, ಅದರಿಂದ ನನಗೇನು? ಅಷ್ಟು ಬೇಡವಾಗಿದ್ದರೆ ಇಲ್ಲಿಂದ ಗಂಟು-ಮೂಟೆಗಳನ್ನು ಕಟ್ಟಿ ಹೊರಡಬೇಕಪ್ಪ - ಎಂದಿರೋ, ಅಲ್ಲೇ ಬಂದಿರೋದು ಕಷ್ಟ, ಯಾಕೆಂದ್ರೆ ಅದು ಹೇಳಿದಷ್ಟು ಸುಲಭವಾದ ಮಾತಲ್ಲ.

ನಾವು ಕೆಟ್ಟದ್ದು ಆಗುವುದನ್ನು ನೋಡಿಕೊಂಡು ಅದರ ಬಗ್ಗೆ ಏನನ್ನೂ ಮಾಡದೇ ಹೋಗೋದು ಇದೇ ನೋಡಿ, ಅದಕ್ಕೂ ಆ ಮೂಲ ಕ್ರಿಯೆಗೂ ಏನು ವ್ಯತ್ಯಾಸ ನೀವೇ ಹೇಳಿ? ಹಾಗಂತ ನಮ್ಮ ದೇಶದಲ್ಲಿ (ಅಂದ್ರೆ ಭಾರತದಲ್ಲಿ), ಘಳಿಗೆಗೊಂದು, ಘಂಟೆಗೊಂದು ಯುದ್ಧಗಳಾಗುತ್ತಿರುವಾಗ ಅಲ್ಲಿ ಹೇಗೆ ಕಣ್ಣು ಮುಚ್ಚಿಕೊಳ್ಳುವುದು ಸಾಧ್ಯ? ಏನೇ ಹೇಳಿ ನಮ್ಮ ದೇಶವೇ ದೊಡ್ಡದು, ಅಲ್ಲಿಯ ಮುಂದಾಳುಗಳಿಗಳಿಗೆ ತಾವು ತೆಗೆದುಕೊಂಡ ನಿರ್ಧಾರಗಳಿಗೆ ತಾವು ನೈತಿಕವಾಗಿ ಹೊಣೆಗಾರರು ಎನ್ನುವುದನ್ನು ಅವರು ಮರೆಯದಂತೆ ಮಾಡುವ ಸಮಾಜವಿದೆ, ಆದರೆ ಇಲ್ಲಿ ಹಾಗಲ್ಲ, ತಾವು ಮಾಡಿದ್ದೇ ಸರಿ ಎಂದು ತಿಪ್ಪೇ ಸಾರಿಸುವವರ ಮೀಸೆ ತಿಕ್ಕುವವರಿದ್ದಾರೆ!

ಇಲ್ಲಿ, ದೊಡ್ಡ ಕಾರ್ಪೋರೇಷನ್ ಮಟ್ಟದ್ದಲ್ಲಿ, ವಾಷಿಂಗ್ಟನ್‌ನಲ್ಲಿ ಲಾಬಿ ಮಾಡುವವರ ಮಟ್ಟದಲ್ಲಿ ಲಂಚ ಇದೆ, ಆದರೆ ನನ್ನ ಮಟ್ಟಿಗೆ ದಿನ ನಿತ್ಯದ ಕೆಲಸ-ಕಾರ್ಯಗಳಲ್ಲಿ ಯಾವುದೇ ಲಂಚವನ್ನೂ ನಾನು ಕೊಡಬೇಕಾಗಿಲ್ಲ ಅನ್ನೋದು ದೊಡ್ಡ ಸಮಾಧಾನದ ವಿಷಯ. ಹಾಗಂತ ಇಲ್ಲೇ ನೆಲೆ ಊರೋದಕ್ಕೆ ನಾನು ಪೀಠಿಕೆ ಹಾಕುತ್ತಿಲ್ಲ, ಇಲ್ಲಿ ನೆಲೆ ಊರಿರುವವರು ಕೊಡುವ ಕಾರಣಗಳಲ್ಲಿ ಇದೂ ಒಂದು ಎಂದು ಹೇಳುತ್ತಿದ್ದೇನೆ ಅಷ್ಟೇ.

***

ಸರಿ, ಸದರಿ ಸರ್ಕಾರದ ಪಾಲಿಸಿಗಳು ಎಡವಟ್ಟಾಗಿದ್ದಕ್ಕೂ, ನಾನು ಕೊಡುವ ಟ್ಯಾಕ್ಸಿನ ಹಣಕ್ಕೂ ಇರಾಕ್ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲವೆಂದೂ, ನಾನು ಇಲ್ಲಿಯ ಕೆಲಸಗಾರರಲ್ಲಿ ಒಬ್ಬ - ಏಣಿಯ ಮೇಲೆ ನಿಂತು ಕೆಲಸಮಾಡುವಾಗ ಏಣಿಯನ್ನು ಒದೆಯಬಾರದೆಂಬ ಸಾಮಾನ್ಯ ಜ್ಞಾನವನ್ನಿಟ್ಟುಕೊಂಡು ನಿರ್ಲಿಪ್ತ ಬದುಕನ್ನು ಬದುಕಿ ಬಿಡುತ್ತೇನೆ - ದಯವಿಟ್ಟು, ನೀವು ನಿರ್ಲಿಪ್ತತೆಗೆ ಅರ್ಥಹೀನತೆ ಎಂದು ಅರ್ಥೈಸಿಕೊಳ್ಳದೇ ಬರೀ ಯಾವುದಕ್ಕೂ ಅಂಟಿಕೊಳ್ಳದವನೆಂದುಕೊಂಡರೆ ನನ್ನ ಶ್ರಮ ಸಾರ್ಥಕವಾದೀತು.

***

ಮೇಲೆ ಹೋಗಬೇಕೆನ್ನಿಸಿದಾಗ ಏಣಿ ಆಸರೆಯಾಯಿತು
ಏಣಿ ಮೇಲೆ ಏರಿದಂತೆ ಗೋಡೆಗೆ ಒರಗುವಂತಾಯಿತು

ಮೇಲೆ-ಮೇಲೆ ಹೋದಂತೆಲ್ಲ ತಗ್ಗು-ದಿಣ್ಣೆಗಳು ಕಂಡವು
ಒರಗಿದ ನುಣ್ಣನೆ ಗೋಡೆಯ ಪದರಗಳೂ ಬಿರುಸಾದವು

ಹತ್ತೋದೇನೋ ಹತ್ತಿದ್ದೇನೆ ಇಳಿದರೆ ಬಲು ನಷ್ಟ
ಮುಂದೆ ಹೋಗದೇ ಹತ್ತಿದ್ದಲ್ಲೇ ಇರುವುದು ಕಷ್ಟ

ಚಂದ್ರಲೋಕಕ್ಕೆ ಹೋದೋರೂ ಭೂಮೀನ ತಲೆ ಎತ್ತೇ ನೋಡ್ತಾರೆ
ನಾನು ಎತ್ತ ನೋಡಿದ್ರೂ ನನ್ನ ಭೂಮಿ ನನ್ನ ಕಣ್ಣ ಮರೆ

ಹೀಗೇ ನಾನು ಸುಮ್ನೇ ಇದ್ರೇ ಅಂಥ ಯೋಚ್ನೇ ಮಾಡ್ತೀನಿ
ಯೋಚ್ನೆ ಮಾಡ್ತಾ-ಮಾಡ್ತಾ ಸುಮ್ನೇ ದಿನಗಳ್ನ ಕಳೀತೀನಿ

ಮೇಲೆಕ್ಕೇನೂ ಮಿತಿಯಂತೂ ಇಲ್ಲ, ಕೆಳಗಡೇ ಇದ್ರೇನೇ ಚೆಂದ
ಸರಳತೆ, ಶುದ್ಧತೆ, ಸಾರ್ಥಕತೆ ಇರೋ ಬದುಕೇ ಬಲು ಅಂದ.

No comments: