Monday, April 10, 2006

ಮೋಸ ಮಾಡೋದೇ ಬದುಕು ಅನ್ನೋದಾದ್ರೆ...

ಆಲ್ಟನ್ ಬ್ರೌನ್‌ನ ಗುಡ್ ಈಟ್ಸ್ (Food Network, Alton Brown, Good Eats) ಕಾರ್ಯಕ್ರಮದಲ್ಲಿ ಪೆಪ್ಪರ್ (ಕರಿ ಮೆಣಸು, ಕಾಳು ಮೆಣಸು)ನ ವಿಷಯ ಬಂದಾಗೆಲ್ಲ ಭಾರತದ ಪ್ರಸ್ತಾಪ ಸಹಜವಾಗಿ ಆಗುತ್ತದೆ. ಈ ಹಿಂದೆ ಯಾವುದೋ ಒಂದು ಎಪಿಸೋಡ್‌ನಲ್ಲಿ ಆಲ್ಟನ್ ಬ್ರೌನ್ ಈ ಕಾಳು ಮೆಣಸಿನ ಮಹಿಮೆಯನ್ನು ಕೊಂಡಾಡುತ್ತಾ ಭಾರತವನ್ನು ಸ್ಮರಿಸುವುದರೊಂದಿಗೆ ಕಾಳು ಮೆಣಸಿನ ನಡುವೆ ಪಪ್ಪಾಯಿ ಹಣ್ಣಿನ ಬೀಜವನ್ನು ಒಣಗಿಸಿ ಮಿಶ್ರಣ ಮಾಡಿ ಮಾರುತ್ತಾರೆಂತಲೂ, ಜಾಗರೂಕತೆಯಿಂದ ಖರೀದಿಸಿರೆಂತಲೂ ಆತ ವೀಕ್ಷಕರಿಗೆ ತಿಳಿಸಿ ಹೇಳಿದ್ದ. ಕಲಬೆರಕೆಯ ಬಗ್ಗೆ ನನಗೇನೂ ಹೊಸತಾಗಿ ತಿಳಿಯಬೇಕಾಗಿರಲಿಲ್ಲ ಆದರೆ ಭಾರತದ ಪದಾರ್ಥಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಪರೀಕ್ಷೆಗೆ ಒಳಪಡುತ್ತವೆ, ಭಾರತದಲ್ಲಿ ಬೆಳೆದ, ತಯಾರಿಸಿದ ವಸ್ತುಗಳ ಬಗ್ಗೆ ಉಳಿದವರಿಗೆ ಏನೇನು ಗೊತ್ತು, ಯಾವ್ಯಾವ ಮಾಹಿತಿ ಎಂದು ತಿಳಿಯಲು ಗುಡ್ ಈಟ್ಸ್ ಕಾರ್ಯಕ್ರಮ ಒಂದು ಉದಾಹರಣೆಯಷ್ಟೇ. ಫುಡ್ ನೆಟ್‌ವರ್ಕ್ಸ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಗುಡ್ ಈಟ್ಸ್ ನನಗೆ ಅಚ್ಚು ಮೆಚ್ಚು, ಅದರಲ್ಲಿ ಆಹಾರವನ್ನು ವಿಶ್ಲೇಷಿಸುವ ಬಗೆ, ನವಿರಾಗಿ ಹಾಸ್ಯವನ್ನೂ ಸೇರಿಸಿ ಕಾರ್ಯಕ್ರಮವನ್ನು ನಿರೂಪಿಸುವ ಬಗೆ ತುಂಬಾ ವಿಶೇಷವಾಗಿರುತ್ತೆ. ಆಲ್ಟನ್ ಬ್ರೌನ್, ಯಾವುದೊಂದು ಆಹಾರ ಪದಾರ್ಥವನ್ನಾದರೂ ತೆಗೆದುಕೊಂಡು ಅದರ ಮೂಲವನ್ನು ಜಾಡಿಸಿಬಿಡಬಲ್ಲ, ಅದರ ಸೂತ್ರಗಳನ್ನು ಕಂಡು ಹಿಡಿಯಬಲ್ಲ.

ಇಂದಿನ ವಿಷಯ ಕಲಬೆರಕೆಗೆ ಬರುತ್ತೇನೆ: ಇದರಲ್ಲಿ ತೊಡಗಿರುವ ವ್ಯಾಪಾರಿಗಳೂ, ವರ್ತಕರು, ಮಧ್ಯವರ್ತಿಗಳು ಅಂದುಕೊಳ್ಳುವುದೇನೆಂದರೆ ಅವರು ಮಾಡಿದ್ದು (ಮೋಸ) ಗ್ರಾಹಕರಿಗೆ ಗೊತ್ತಾಗುವುದಿಲ್ಲವೆಂತಲೂ, ಗೊತ್ತಾದರೂ ಗ್ರಾಹಕರು ಏನನ್ನೂ ಮಾಡುವುದಿಲ್ಲವೆಂತಲೂ, ಹಾಗೇನಾದರೂ ಮಾಡಿದರೆ ಅವರಿಗೆ ಅವರದೇ ಅಭಯ ಹಸ್ತ ಇದ್ದು ಅವರನ್ನು 'ರಕ್ಷಿಸು'ತ್ತದೆ ಎಂಬುದಾಗಿ. ವರ್ತಕರು ಮಾಡಿರುವ ಮೋಸ ಗ್ರಾಹಕರಿಗೆ ಗೊತ್ತಾಗೇ ಆಗುತ್ತದೆ, ಆದರೆ ನಮ್ಮಲ್ಲಿನ ವ್ಯವಸ್ಥೆಯಲ್ಲಿ ಅವರ ವಿರುದ್ಧ ತಿರುಗಿ ಬೀಳದಂತೆ ತಡೆಯುವ, ತಿರುಗಿ ಬಿದ್ದರೂ ಅದರಿಂದ ವರ್ತಕರಿಗೆ ಯಾವ ನಷ್ಟವೂ ಆಗದಂತೆ ಕಾಯುವ ವ್ಯವಸ್ಥೆಯೂ ಇದೆ. ಸರಿ, ಜನ ಸಾಮಾನ್ಯರು ದಿನ ನಿತ್ಯ ಬಳಸುವ ವಸ್ತುಗಳಿಗೆ ವರ್ತಕರು ಕೇಳಿದಷ್ಟು ಹಣವನ್ನು ಕೊಟ್ಟು ತಂದಾಗಲೂ ಮೊದಲೇ ಗುಣಮಟ್ಟ ಕಳಪೆಯದಾಗಿರುವುದೂ ಅಲ್ಲದೇ ಇನ್ನು ತಂದ ವಸ್ತುವಿನಲ್ಲಿ ಕಲಬೆರೆಕೆಯ ರೂಪದಲ್ಲೂ ಮೋಸವೂ ಆದರೆ ಗ್ರಾಹಕರ ಗತಿ ಏನು?

ಶಿವಮೊಗ್ಗದ ಮಾರ್ಕೆಟ್‌ನಲ್ಲಿ ಕೆಲವು ವರ್ಷಗಳ ಹಿಂದೆ ಸೇಬು ಹಣ್ಣನ್ನು ಖರೀದಿಸಲು ನಾನು ನನ್ನ ಅಕ್ಕನ ಜೊತೆ ಹೋಗಿದ್ದೆ. ಎಂದಿನಂತೆ ಒಂದೆರಡು ಕಡೆ ನೋಡಿ, ಆಮೇಲೆ ಚೌಕಾಸಿ ಮಾಡಿ, ಇದ್ದುದರಲ್ಲಿಯೇ ಒಳ್ಳೆಯ ಹಣ್ಣುಗಳನ್ನು ಕೊಡಲು ಹೇಳಿದೆವು, ಆದರೆ ಅಂಗಡಿಯವನು ಐದು ಹಣ್ಣುಗಳ ಜೊತೆ ಆರನೆಯ ಹಣ್ಣನ್ನು ಸ್ವಲ್ಪ ಹೆಚ್ಚು ಮಾಗಿರುವುದೋ ಅಥವಾ ಹೊಡೆತ ಬಿದ್ದಿರುವುದನ್ನೋ ಕೊಟ್ಟು ಸಾಗ ಹಾಕಲು ನೋಡಿದ. ಆದರೆ, ನಾನು ಅವನ ಎದುರಿನಲ್ಲೇ ಪ್ಯಾಕೇಟ್ ತೆರೆದು, ಅಷ್ಟೊಂದು ಚೆನ್ನಾಗಿಲ್ಲದ ಹಣ್ಣನ್ನು ವಾಪಾಸು ಕೊಟ್ಟು, ಮತ್ತೆ ಅದರ ಬದಲಿಗೆ ಒಳ್ಳೆಯ ಹಣ್ಣನ್ನು ಪಡೆದರೂ ಮನೆಗೆ ಬಂದು ಪ್ಯಾಕೇಟ್ ತೆರೆದು ನೋಡಿದಾಗ ಅದರಲ್ಲಿ ಒಂದು ಹಣ್ಣು ಸುಮಾರಿನದೇ ಇತ್ತು. ಅಂಗಡಿಯವನು ನಮ್ಮನ್ನು ಬೇಸ್ತು ಬೀಳಿಸಿ ಒಂದು ಸುಮಾರಾದ ಹಣ್ಣನ್ನು ದಾಟಿಸಿದ್ದಕ್ಕೆ ಖುಷಿ ಪಡಬಹುದು, ತನಗೆ ತಾನು ಶಭಾಸ್‌ಗಿರಿ ಕೊಟ್ಟುಕೊಳ್ಳಬಹುದು, ಆದರೆ ಮೋಸ ಹೋದವರು ನಾವು ಎನ್ನುವುದು ಸಾಬೀತಾಗಿ ಹೋಗಿತ್ತು. ನಮ್ಮ ಬಳಿ ಹಲವಾರು ಪರ್ಯಾಯಗಳಿದ್ದವು: ಆ ಹಣ್ಣುಗಳನ್ನು ನಾವು ಹಾಗೆಯೇ ಮರುದಿನ ವಾಪಾಸ್ಸು ಕೊಟ್ಟು ಬರಬಹುದಿತ್ತು, ಅಥವಾ ಅವನ ಬಗ್ಗೆ ಅಲ್ಲಿ ಯಾರಿಗಾದರೂ ದೂರು ಸಲ್ಲಿಸಬಹುದಿತ್ತು, ಅಥವಾ ನಮ್ಮ ಕಡೆಯಿಂದ ನಾಲ್ಕು ಜನ ಹೋಗಿ ದಬಾಯಿಸಬಹುದಿತ್ತು. ಆದರೆ ನಿಮಗೆಲ್ಲ ಗೊತ್ತಿರುವಂತೆ, ಆ ರೀತಿ ಏನೂ ಆಗಲಿಲ್ಲ. ಅಂಗಡಿಯವನು ಒಂದು ಸುಮಾರಾದ ಹಣ್ಣನ್ನು ಒಳ್ಳೆಯ ಹಣ್ಣಿನ ಬೆಲೆಗೆ ಮಾರಿ ಲಾಭ ಗಳಿಸಿದ, ನಾವು ನಮ್ಮ ದೇಶದಲ್ಲೇ ಬೇಸ್ತು ಬಿದ್ದುದಕ್ಕೆ ಕೈ-ಕೈ ಹಿಸುಕಿಕೊಂಡೆವು. ಇದು ಬರೀ ಸೇಬು ಹಣ್ಣಿನ ಕಥೆಯಲ್ಲ, ಈ ರೀತಿ ಪ್ರತಿಯೊಂದರಲ್ಲೂ ಆಗುತ್ತದೆ: ಬಂಗಾರದ ವ್ಯವಹಾರವಿರಬಹುದು, ತರಕಾರಿ ವ್ಯವಹಾರವಿರಬಹುದು, ಮನೆ ಕಟ್ಟಿಸುವ ವಿಷಯವಿರಬಹುದು, ಮದುವೆ ಮಾತಾಗಿರಬಹುದು, ಎಲ್ಲದರಲ್ಲೂ ನಿಮ್ಮ ತರ್ಕವನ್ನು ಪ್ರಶ್ನಿಸುವ, ನಿಮ್ಮ ಬುದ್ಧಿಮತ್ತೆಯನ್ನು ಅಳೆಯುವ ಅಥವಾ ನಿಮ್ಮ ಶಕ್ತಿ ಪ್ರದರ್ಶನದ ಅವಕಾಶಗಳು ಸಿಕ್ಕೇ ಸಿಗುತ್ತವೆ, ಎದುರಾಗೇ ತೀರುತ್ತವೆ.

ಡಿಸ್ಕವರಿ ಚಾನಲ್‌ನಲ್ಲಿ ತೋರಿಸೋ ಜರೆಮಿ ಪಿವನ್‌ನ ಭಾರತದ ಪ್ರವಾಸ ಕಥನವಿರಬಹುದು (Jeremy Piven, Joureny of a Lifetime, Disovery Channel) ಅಥವಾ ಆಲ್ಟನ್ ಬ್ರೌನ್‌ನ ಸಂಶೋಧನೆಯ ತಿರುಳಿರಬಹುದು, ಇವರೆಲ್ಲರ ಕಣ್ಣಿನಲ್ಲಿ ಕಳಪೆಯನ್ನು ನೋಡಿದಾಗ, ನಮ್ಮ ಎದೆ ಧಸಕ್ ಎನ್ನುತ್ತದೆ. ಆದೇ ನಾವೇ ಇಂತಹ ವರ್ತಕರ ವಂಚನೆಗಳಿಗೆ ಏಮಾರಿದಾಗ ಅಷ್ಟು ನೋವೆನಿಸುವುದಿಲ್ಲ, ಅದು 'ನಾರ್ಮಲ್' ಬದುಕಿನ ಒಂದು ಅಂಗವಾಗಿ ಹೋಗುತ್ತದೆ!

ನನ್ನ ಪ್ರಕಾರ ಮೋಸಕ್ಕೆ ಒಂದೇ ಮದ್ದು, ತಕ್ಕ ಶಾಸ್ತಿ, ಅಥವಾ ಶಿಕ್ಷೆ. ನನ್ನ ಕಣ್ಣಿಗೆ ಕಾಣುವುದು ಈ ಎರಡೇ ಆಪ್ಷನ್‌ಗಳು:
೧) ಮೋಸ ಮಾಡುವ ವರ್ತಕರನ್ನು ಗ್ರಾಹಕರ ನ್ಯಾಯಾಲಯಕ್ಕೆ ಎಳೆದೊಯ್ಯುವುದು, ವ್ಯಾಪಾರೀ ನಿಯಮದ ಪ್ರತಿಯೊಂದು ಉಲ್ಲಂಘನೆಗೂ ಇಂತಿಷ್ಟು (ಹೆಚ್ಚಿನ) ದಂಡ ವಿಧಿಸಿ, ಮೂರು ಬಾರಿ ಅದೇ ನಡತೆ ಪುನರಾವರ್ತನೆಯಾದೊಡನೆ, ಅಪೀಲು ರಹಿತವಾಗಿ ಅವರವರ ಲೈಸನ್ಸ್ ಕ್ಯಾನ್ಸಲ್ ಮಾಡುವುದು. (ಈ ನ್ಯಾಯಾಲಯದಲ್ಲಿ ಒಂದು ವಾರದ ಒಳಗಡೆ ಯಾವುದೇ ಕೇಸನ್ನು ತೀರ್ಮಾನಿಸುವಂತಾಗಬೇಕು).

ಇದು ಬೇಡವೆಂದರೆ
೨) ದಂಡಂ ದಶಗುಣಂ - ಅನ್ಯಾಯಕೊಳಪಟ್ಟ ವ್ಯಕ್ತಿ (ಶಕ್ತಿಶಾಲಿಯಾಗಿದ್ದಲ್ಲಿ ಅಥವಾ ಇತರರ ನೆರವು ಪಡೆದು) ವರ್ತಕನ ಮೇಲೆ ತಿರುಗಿ ಬಿದ್ದು, ಅವನ ಅಂಗಡಿಗೇ ಬೆಂಕಿ ಇಟ್ಟರೆ ಅದನ್ನು ಕಾನೂನು ಪ್ರಕಾರ ಮನ್ನಿಸುವುದು! ಕಲಬೆರಕೆಯ ಹೆಸರಿನಲ್ಲಿ ಸಮಾಜಕ್ಕೆ, ಮುದ್ದು ಮಕ್ಕಳ ಆರೋಗ್ಯಕ್ಕೆ, ಪರಿಸರಕ್ಕೆ, ಎಲ್ಲರಿಗೂ ಹೊರೆಯಾಗುವಂತಿರುವ ಶತಮಾನಗಳ ದೌರ್ಜನ್ಯವನ್ನು ಗ್ರಾಹಕ ಎಷ್ಟೂ ಅಂತ ಸಹಿಸಿಕೊಳ್ಳೋದು ನೀವೇ ಹೇಳಿ.

***

ನನಗೆ ಗೊತ್ತು, ನಾನು ಆಪ್ಷನ್ ೧ ರಲ್ಲಿ ನಂಬಿಕೆಯುಳ್ಳವನು ಎಂದು, ಆದರೂ ಮೋಸ ಮಾಡುವವರ ಪ್ರವೃತ್ತಿಯನ್ನು ನೋಡಿ ಹೀಗೆ ಹೇಳಬೇಕಾಯಿತು. ನಿಮಗೆಂದಾದರೂ ಈ ರೀತಿ ಮೋಸ ಆಗಿದ್ದಿದೆಯೇ? ಅಥವಾ ನಿಮ್ಮಲ್ಲಿ ಬೇರೆ ಯಾವುದಾದರೂ ಆಪ್ಷನ್‌ಗಳಿವೆಯೇ?

No comments: