Monday, April 17, 2006

ಬೈತೀರೇನ್ರೀ? ಬೈರಿ...

'ಅವನಿಗೆ ಬಯ್ಯ್ ಬೇಡ್ವೋ, ಅದರಿಂದ ನಿನಗೇನ್ ಸಿಗುತ್ತೆ?'

'ಮತ್ತೆ, ಅವ್ನು ಬಯ್ದ್ರೆ ಸುಮ್ನೇ ಬಯ್ಸ್‌ಗೊಂಡ್ ಇರೋಕ್ ಆಗುತ್ತಾ?'

'ಅವನು ಬಯ್ದಾ ಅಂತ ನೀನೂ ಬಯ್‌ದ್ರೆ, ನೀನು ನಿನ್ನ ನಾಲಿಗೇನ ಹಾಳುಮಾಡಿಕೊಂಡಂಗ್ ಆಗಲ್ವಾ?'

'ಸುಮ್ನಿರೋ, ಮುಳ್ಳನ್ನ ಮುಳ್ಳಿಂದ್ಲೇ ತೆಗೀ ಬೇಕು, ಅವನು ಬಾಯಿಗೆ ಬಂದಂಗ್ ಮಾತಾಡ್‌ದ್ರೆ ನಾನು ನೋಡಿಕೊಂಡ್ ಸುಮ್ನೇ ಇರೋಕಾಗುತ್ತಾ?'

'ಹಂಗಲ್ಲ, ಅವ್ನು ಕೆಟ್ಟ ಕೆಟ್ಟ ಪದ ಉಪಯೋಗ್ಸಿ ಬಯ್‌ತಾನೆ ಅಂದ್ರೆ, ನೀನು ಹಂಗೆ ಮಾಡಬೇಕಾ? ನೀನು ಅವನಿಗೆ ಬೋ...ಮಗ, ಸೂ...ಮಗ ಅಂದ್ರೆ ಅದರಿಂದ ಏನಾಗುತ್ತೆ!'

'ಏನಾಗುತ್ತೋ, ಬಿಡುತ್ತೋ...ನಿನ್ನ ಉಪದೇಶ ನನಗಂತೂ ಬ್ಯಾಡಪ್ಪಾ, ಈ ನನ್ ಮಕ್ಳೀಗೆ ಹೆಂಗ್ ಬುದ್ಧಿ ಕಲಸ್ ಬೇಕು ಅಂತ ನಂಗೂ ಗೊತ್ತು!'

'ಸ್ವಲ್ಪ ಸಮಾಧಾನವಾಗಿ ಯೋಚ್ನೆ ಮಾಡೋ, ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ...'

'ಏ, ನಿನಗ್ ಗೊತ್ತಾಗಲ್ಲ ಬಿಡೋ, ನಿನ್ನ ಪ್ರಪಂಚಾನೇ ಬೇರೆ!'

***

ನನ್ನ ಮತ್ತು ನನ್ನ ಅಣ್ಣನ ನಡುವೆ ನಡೆದ ಈ ಮೇಲಿನ ಸಂಭಾಷಣೆ ಒಂದು ನಿದರ್ಶನವಷ್ಟೇ - ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವನಾಗಿ ಹುಟ್ಟಿದ್ದಕ್ಕೋ ಏನೋ, ಈ ಮಾತುಗಳನ್ನು ಪದೇ-ಪದೇ ಕೇಳಿದ್ದೇನೆ. 'ನಿನಗ್ ಗೊತ್ತಾಗಲ್ಲ ಬಿಡೋ' ಅನ್ನೋ ಮಾತು ಹಲವಾರು ಸ್ಥರಗಳಲ್ಲಿ ನನ್ನನ್ನು ಬೆಳೆಯುವಂತೆ ಪ್ರಚೋದಿಸಿದೆ - ನನ್ನ ಇಂದಿನ ತರ್ಕ, ಬುದ್ಧಿಮತ್ತೆ, ವಿವೇಚನೆ, ಪ್ರಬುದ್ಧತೆ ಹಾಗೂ ನನ್ನನ್ನು ನನಗೇ ಗೊತ್ತಿಲ್ಲದ ರೀತಿಯಲ್ಲಿ ಥಳುಕು ಹಾಕಿಕೊಂಡಿರುವ ಕೀಳರಿಮೆ ಇವುಗಳೆಲ್ಲವೂ 'ನನಗೇನೋ ಗೊತ್ತಿಲ್ಲವಂತೆ' ಅನ್ನೋ ವಾಕ್ಯದಿಂದಲೇ ಹುಟ್ಟಿದವೇನೋ ಅನುವಷ್ಟು ಸಹಜವಾಗಿದೆ!

***

ಇನ್ನು ಬೈಗುಳದ ವಿಷಯಕ್ಕೆ ಬಂದರೆ, ನಮ್ಮ ಊರುಗಳಲ್ಲಿ ಅದು ಸಾಮಾನ್ಯ ಹಾಗೂ ಸಹಜ. 'ಮಗನೇ...' ಅನ್ನೋ ಸಂಬೋಧನೆಯಲ್ಲಿಯೇ ನಾನು ಎಷ್ಟೋ ಜನರು ತಮ್ಮ ವಾಕ್ಯಗಳನ್ನು ಆರಂಭಿಸುವುದನ್ನು ನೋಡಿದ್ದೇನೆ. ನನ್ನ ಶಾಲಾ ದಿನಗಳಲ್ಲಿ ಈ 'ನನ್ ಮಗ' ಅನ್ನೋ ವಿಲಕ್ಷಣ ವಿಶೇಷಣವನ್ನು ನಾನೂ ಧಾರಾಳವಾಗಿ ಉಪಯೋಗಿಸ್ತಾ ಇದ್ದೆ. ಇವತ್ತಿಗೂ ಕೂಡ ನನ್ನ ಮನಸ್ಸು ಒಂದೇ ಸಂದಿಗ್ದದಲ್ಲಿ ಸಿಕ್ಕಿದಾಗಲೋ, ಅಥವಾ ಹೆಚ್ಚು ಉದ್ರೇಕಗೊಂಡಾಗಲೋ 'ಆ ಮಗ, ಈ ಮಗ...' ಅನ್ನೋ ಪದಗಳು ಮಾತುಗಳಲ್ಲಿ ತಂತಾನೆ ನುಸುಳಿಕೊಳ್ಳುತ್ತವೆ. ಸದ್ಯ, ನಾನು ಕನ್ನಡದಲ್ಲಿಯೇ ಅವುಗಳನ್ನು ಹೇಳೋದರಿಂದ ಆಫೀಸ್ ವಾತಾವರಣದಲ್ಲಿ ಈವರೆಗೂ ಯಾವ ತೊಂದರೆಗೂ ಸಿಕ್ಕಿ ಹಾಕಿಕೊಂಡಿದ್ದಿಲ್ಲ, ಆದರೆ ಮನೆಯಲ್ಲಿ ನನ್ನ ಹೆಂಡತಿ 'ಇವ ಯಾವ ಕಾಡಿನಿಂದ ಬಂದವನು...' ಎಂಬಂತೆ ಹಲವಾರು ಬಾರಿ look ಕೊಟ್ಟಿದ್ದಾಳೆ!

ನಮ್ಮ ಮಲೆನಾಡು, ಅರೆಮಲೆನಾಡು ವಾತಾವರಣದಲ್ಲಿ ಬೈಗಳು ಸಹಜವಾಗಿ ಮಾತುಕಥೆಯಲ್ಲಿ ಹಾಸುಹೊಕ್ಕಾಗಿರುವ ವಿಷಯ ಎಲ್ಲರಿಗೂ ಗೊತ್ತು, ನಾವು ಮಂಗಳೂರಿನವರಂತೆ (ಮಾತಿನಲ್ಲಿ ಮಾತ್ರ) nice ಜನರೂ ಅಲ್ಲ, ಧಾರವಾಡದವರಂತೆ ಒರಟರೂ ಅಲ್ಲ, ಒಂಥರಾ ಮಧ್ಯ - ನನ್ನ "ಮಧ್ಯಸ್ಥಿಕೆ"ಯ ಮೂಲ ಇಲ್ಲಿಂದಲೇ ಶುರುವಾಗಿರಲಿಕ್ಕೂ ಸಾಕು. ಮುಂದೆ ನಾನು ಸಾಗರ, ಶಿವಮೊಗ್ಗ, ಮೈಸೂರುಗಳಲ್ಲಿ ಬೆಳೆದಂತೆಲ್ಲ ನಮ್ಮ ನಾಡಿನ ಯಾವ ಪ್ರದೇಶಕ್ಕೂ ಸೇರದ ಗ್ರಾಂಥಿಕ ಭಾಷೆಯನ್ನೇ ಆಡು ಭಾಷೆಯಾಗಿ ಕನ್ನಡವನ್ನು ಅಲ್ಲಲ್ಲಿ ಮಾತನಾಡುವುದಕ್ಕೆ ವ್ಯಥೆ ಪಡುತ್ತೇನೆ - ನನ್ನ ಮೂಲ ಭಾಷೆಯನ್ನೇ ಇಂದಿಗೂ ನಾನು ಮಾತನಾಡುವಂತಿದ್ದರೆ ಎಷ್ಟೊಂದು ಚೆನ್ನಿತ್ತು! ನನ್ನ ಅನೇಕ ಧಾರವಾಡ (ಅಥವಾ ಉತ್ತರ ಕರ್ನಾಟಕದ) ಸ್ನೇಹಿತರಿಗೆ, ಪರಿಚಯಸ್ತರಿಗೆ ಕೋರಿಕೊಂಡಿದ್ದೇನೆ - ಅವರು ತಮ್ಮ ಮೂಲ ಮಾತುಗಳನ್ನು ಆಡಿದರೇನೆ ಚೆಂದ, ಮೈಸೂರು, ಮಂಗಳೂರಿನವರೂ ಮುಂದೂ ಅಲ್ಲ, ಹಿಂದೂ ಅಲ್ಲ, ಮೇಲೂ ಅಲ್ಲ, ಕೆಳಗೂ ಅಲ್ಲ - ಅವರವರದ್ದು ಅವರವರಿಗೆ ಚೆಂದ. ಆದರೆ ನನಗೆ ಇವತ್ತಿಗೂ ಆಶ್ಚರ್ಯವಾಗುವಂತೆ ನನ್ನ ಧಾರವಾಡದ ಸ್ನೇಹಿತರು ಕೇವಲ (ಬರೀ) ಅವರ ಮನೆಯವರೊಂದಿಗೆ (ಅಥವಾ ಉಳಿದವರು ಧಾರವಾಡದವರೆಂದು ನೂರಕ್ಕೆ ನೂರು ಖಚಿತವಾದ ನಂತರ) ಮಾತ್ರ ಆಡುತ್ತಾರೆ, ನಾವು ಶಿವಮೊಗ್ಗದವರೋ, ಮೈಸೂರು-ಮಂಗಳೂರಿನ ಕಡೆಯವರು ಸಿಕ್ಕಿದರೆ ಸಂಭಾಷಣೆ ಕ್ರಮೇಣ ಇಂಗ್ಲೀಷ್‌ನ ಹಾದಿ ಹಿಡಿಯುತ್ತದೆ. ಈ ನಡತೆಯನ್ನು ನಾನು ಕೀಳರಿಮೆ ಎಂದು define ಮಾಡೋಲ್ಲ, ಆದರೆ ಧಾರವಾಡದ ಮಂದಿಗೆ ತಮ್ಮ ಮೇಲೆ ತಮಗೆ ನಂಬಿಕೆ ಕಡಿಮೆ ಎಂದು ವ್ಯಾಖ್ಯಾನಿಸುತ್ತೇನೆ - ನನಗೆ ಗೊತ್ತು ಇದರಿಂದ ಕೆಲವರಿಗೆ ಉರಿದುಕೊಂಡಿದೆ, ಕೊಳ್ಳುತ್ತದೆ ಎಂದು - ಹಾಗೆ ಆಗಿಯಾದರೂ ಒಬ್ಬನಾದರೂ ನನ್ನ ಮಾತನ್ನು ಕೇಳಿದರೆ ನನ್ನ ಪ್ರಯತ್ನ ಸಾರ್ಥಕ.

ಈ ಅಕ್ಕ-ಪಕ್ಕದ ಮನೆಯವರು ಜಗಳ-ಹೊಡೆದಾಟ ಮಾಡಿಕೊಳ್ಳುವುದಿದೆಯಲ್ಲ, ಅಲ್ಲಿ ಬೈಗಳು ಪ್ರಧಾನ - ನಿಮಗೆ ಆಶ್ಚರ್ಯವಾಗುವಂತೆ ವಿಷಯಗಳು ಎಲ್ಲೆಲ್ಲಿಂದ ಎಲ್ಲೆಲ್ಲಿಯವರೆಗೆ ಬರುತ್ತವೆ - ಈ ಮೂಲವೇ ಇರಬಹುದು ನಾವು ಇಂದಿಗೂ ನಮ್ಮ ನಮ್ಮ bagage ಹೊತ್ತುಕೊಂಡು ತಿರುಗಾಡುವುದಕ್ಕೆ ಕಾರಣ! If there is one thing I want to do, I want to stop carrying bags... ಚೀಲಗಳನ್ನು ಹೆಗಲ ಮೇಲೆ ಎತ್ತಿಕೊಂಡು ಬದುಕನ್ನು ದುಸ್ತರ ಮಾಡಿಕೊಳ್ಳುವುದರಲ್ಲಿ ನಾವು ನಿಸ್ಸೀಮರು (ನಾನು ನಿಸ್ಸೀಮ ಅನ್ನುವುದು ಸರಿಯಾದ ಬಳಕೆ), ಯಾಕೆ ಹೀಗೆ ಎಂದು ಪ್ರಶ್ನೆ ಕೇಳಿಕೊಂಡಾಗಲೆಲ್ಲ ನಮ್ಮ-ನಮ್ಮ ಸಂಸ್ಕಾರಗಳ ಬುಡಕ್ಕೇ ಬಂದು ನಿಲ್ಲುತ್ತದೆ, ಈ ಸಂಸ್ಕಾರಗಳನ್ನು ಕಿತ್ತೆಸೆಯುವುದು ಇದೇ ನೋಡಿ ಅದು ಬಲು ಕಷ್ಟದ ಕೆಲಸ - ನನ್ನ ಪ್ರಕಾರ ಹತ್ತು ವರ್ಷ ಧ್ಯಾನ ಮಾಡಿದ್ರೆ, ಒಂದು ವರ್ಷದ ಸಂಸ್ಕಾರ ಅಳಿಸಬಹುದೋ ಏನೋ - ಈ ಹೊತ್ತುಕೊಂಡ ಚೀಲಗಳು ನಮಗೆ ಒಂದು ವಿಶೇಷವಾದ ವ್ಯಕ್ತಿತ್ವ, ರೂಪವನ್ನು ಕೊಡುತ್ತದೆ - ಅದಕ್ಕೆ ಇರಬೇಕು ನಾನು ಎಲ್ಲೇ ಯಾವ ಭಾರತೀಯ ಮುಖಗಳನ್ನು ನೋಡಿದರೂ ಪ್ರತಿಯೊಬ್ಬರೂ ತಮ್ಮ ತಲೆ ಮೇಲೆ ಇಡೀ ಪ್ರಪಂಚದ ಭಾರವೇ ಬಿದ್ದಿದೇ ಅನ್ನೋ ಹಾಗಿರೋದು! ಯಾವೊಂದು ಸಂಭ್ರಮದ ಮುಖವೂ, ಅರಳಿದ ಕಣ್ಣುಗಳೂ, ಸದಾ ಪಸರಿಸಿರುವ ಲಘು ಲಾಸ್ಯವೂ, ನಿಷ್ಕಳಂಕ ಭಾವವೂ ಕಂಡಿದ್ದಿಲ್ಲ (ಉತ್ಪ್ರೇಕ್ಷೆ ಇದೆ, but you know what I mean) , ಶತಶತಮಾನಗಳ ಧರ್ಮ, ಧ್ಯಾನ, ದಯೆಯ ಪರಿಣಾಮ ನಮ್ಮನ್ನು ಈ ಸ್ಥಿತಿಗೆ ತಂದಿದೆಯೇ, ಅಥವಾ ನಮ್ಮ ನಮ್ಮ ಮುಖಗಳು ಇರುವುದೇ ಹಾಗೋ? ತ್ರೇತಾಯುಗ, ದ್ವಾಪರ ಯುಗಗಳಲ್ಲಿ ಹಾಗಿರಲಿಕ್ಕಿಲ್ಲ, ಏಕೆಂದರೆ ನಾನೆಲ್ಲಿ ಶ್ರೀ ರಾಮ, ಶ್ರೀ ಕೃಷ್ಣರ ಚಿತ್ರಗಳನ್ನು ನೋಡಿದರೂ ಅವರು ಸ್ಥಿತಪ್ರಜ್ಞೆಯನ್ನು, ಹಸನ್ಮುಖವನ್ನೇ ತೋರೋದು - ಆ ಚಿತ್ರಗಳನ್ನು ಸೃಷ್ಟಿಸಿದವರು ಕಲಿಯುಗದವರು ಅನ್ನೋದು ಬೇರೆ ವಿಷಯ - ನಾವು ಬ್ಯಾಗುಗಳನ್ನು ಹೊತ್ತುಕೊಂಡು ಓಡಾಡುವುದನ್ನು ತಪ್ಪಿಸಲು ನಿಮ್ಮಲ್ಲಿ ಬೇರೆ ಉಪಾಯಗಳಿದ್ದರೆ ದಯವಿಟ್ಟು ತಿಳಿಸಿ.

***

ಒಂದು ಸಾರಿ ನಾನು ಡಿ. ಆರ್. ನಾಗರಾಜ್‌ರವರ 'ಶಕ್ತಿ ಶಾರದೆಯ ಮೇಳ' ಓದುತ್ತಿದ್ದಾಗ ಅವರು ಬರೆದ ಯಾವುದೋ ಒಂದು ಪ್ರತಿಮೆ ನನಗೆ ಇಷ್ಟವಾಗಿ ನಾನು ಹೊರಗೆ ಕೇಳುವಂತೆ ಗಟ್ಟಿಯಾಗಿ, involuntary ಆಗಿ 'ಸೂ...ಮಗನೇ', ಅಥವಾ 'ಸೂ...ಮಗಂದು' ಎಂದುಕೊಂಡಿದ್ದೆ - ಅದೊಂದು ಭಾವ ಪರವಶತೆಯ ಸ್ಥಾಯಿ ಕ್ಷಣವಿರಬಹುದು, ಅಥವಾ ಪರಮಾವಧಿ ಇರಬಹುದು. ನನಗೆ ಅವಾಗಾವಾಗ ಹೀಗಾಗುತ್ತೆ, ಹೀಗನಿಸುತ್ತೆ - ಅಂತ ನಾನು ಒಮ್ಮೆ ನನ್ನ ಕೆಲವು ಸ್ನೇಹಿತರಲ್ಲಿ ಹೇಳಿಕೊಂಡೆ - ಅವರೆಲ್ಲರೂ ನನ್ನನ್ನು ಯಾವುದೋ ಕಾಡಿನಿಂದ ಬಂದವನಂತೆ ನೋಡಿದರು ಅಲ್ಲದೇ, ಅವರ ಜೀವಮಾನದಲ್ಲಿ ಎಲ್ಲೂ son of a bitch (SOB) ಅನ್ನೋ ಪ್ರಯೋಗವನ್ನೇ ಮಾಡಿಲ್ಲವೆಂದು ಆಶ್ಚರ್ಯವನ್ನೂ ಹುಟ್ಟಿಸಿದರು (ನೋಡಿ, ಇಲ್ಲಿ SOB ಎಂದು ಸಲೀಸಾಗಿ ಬರೆಯಬಹುದು, ಆದರೆ ಸೂ...ಮಗ ಅನ್ನುವುದಕ್ಕೆ ellipses ಬಳಕೆ ಬೇಕಾಗುತ್ತೆ - ಅಂದ್ರೆ ಈ ಎರಡು ಪದಗಳ ಬಳಕೆ, ವ್ಯಾಪ್ತಿಗಳಲ್ಲಿ ನಾವು ಅಂದು ಅರ್ಥಮಾಡಿಕೊಳ್ಳುವ ಹಾಗೆ ವ್ಯತ್ಯಾಸವಿದೆಯೇ?). ಲಂಕೇಶ್ ಎಲ್ಲೋ ಬರೆದಿದ್ದರು - ಅವರು ಮೈಸೂರು ಅನಂತ ಸ್ವಾಮಿಯವರ ಸುಗಮ ಸಂಗೀತ ಕಛೇರಿಯೊಂದರಲ್ಲಿ, ಶಿವರುದ್ರಪ್ಪನವರ 'ಎದೆ ತುಂಬಿ ಹಾಡಿದೆನು...' ಕೇಳಿದಾಗ, ಅವರಿಗೆ ಅದುವರೆಗೆ ಗೋಚರಿಸದ ಯಾವುದೋ ಒಂದು ಪ್ರತಿಮೆ, ಅರ್ಥ ಅಲ್ಲಿ ಹೊಳೆದಿತ್ತಂತೆ - ಹಾಗೆ ಆ ಕ್ಷಣ ತುಂಬಾ ವಿಶೇಷವಾದದ್ದು - it deserves a better phrase from the heart! - ಅಂತದ್ದನ್ನು ನಾನು ಆದಷ್ಟು ಅನುಭವಿಸಬೇಕು, ಅದೆಷ್ಟೇ 'ಸೂ...ಮಗ' ಎನ್ನುವ ಮಾತು ಹೊರಗೆ ಬಂದರೂ ಪರವಾಗಿಲ್ಲ, ಏನಂತೀರಿ?

ನಾನು ಹೀಗೆ ಬರೆದೆ ಅಂತ ನೀವು ಬೈದುಕೊಂಡ್ರೆ ನನಗೆ ಸಂತೋಷವಾಗುತ್ತೆ, ಏನೇನು ಬೈದುಕೊಂಡಿರೆಂದು ಮನ ಬಿಚ್ಚಿ ತಿಳಿಸದೇ ಹೋದರೆ ದುಃಖವಾಗುತ್ತೆ!

4 comments:

ಶೇಖರ್‌ಪೂರ್ಣ said...

ಇದು ನಿಜವಾಗಿಯ ಖುಷಿಯಾಗುವ ರೀತಿಯಲ್ಲಿ ಬರೆದಿದ್ದೀರಿ. ಇದೇ ರೀತಿ ನಾನು ನಿನ್ನನ್ನ ಪ್ರೀತಿಸ್ತೀನಿ ಅಂತ ಹೇಳುವುದನ್ನು ಬಿಟ್ಟು I love you ಎನ್ನುವುದಕ್ಕೆ ಆತುಕೊಳ್ಳುತ್ತೇವೆ. ಆದರೆ, ಸಂಬಂಧದ ಭಾವಕೋಶ ಬಿಗಿಯಾಗಿರುವ ಕಡೆ ಸೂ..ಮಗನೆ, ಬೋಳಿಮಗನೆ ಎಂದು ಆತ್ಮೀಯತೆಯನ್ನ ಸೆಲಬ್ರೇಟ್ ಮಾಡುತ್ತೇವೆ. ಅಚ್ಚರಿಯೇನಿಲ್ಲ. ಆದರೆ, ಈ ಕುರಿತಂತೆ ಒಂದು ಅತ್ಯುತ್ತಮ ಲಹರಿಯಲ್ಲಿ, ಸರಳವಾಗಿ ಚೆನ್ನಾಗಿ ಬರೆದಿದ್ದೀರ. ಖಂಡಿತವಾಗಿ ಆಗಾಗ್ಯೇ ನಿಮ್ಮ ಪುಟಗಳಿಗೆ ಬಿಡುವಾದಾಗ ಭೇಟಿ ಕೊಡುತ್ತಿರುತ್ತೇನೆ..
ಶೇಖರ್‌ಪೂರ್ಣ

Satish said...

ಪ್ರಿಯ ಶೇಖರ್,


ನಮ್ಮ ನಡುವಿನ ಹಲವಾರು ಮಾತುಕಥೆಗಳು ಕನ್ನಡದಲ್ಲೇ ಆಗಲಿ ಎನ್ನುವವ ನಾನು, ನಮ್ಮ ತಾಯ್‌ನುಡಿಯಲ್ಲಿ ಪ್ರತಿಯೊಂದು ಮಾತಿಗೂ ಹತ್ತಿರವಾದ ಅರ್ಥವಿರುತ್ತದೆ, ಉದಾಹರಣೆಗೆ ನಮ್ಮ ಯುವ ಸ್ನೇಹಿತರು ಮಾತುಮಾತಿಗೆ shit ಎನ್ನುವುದು ಕೇಳಿಬರುತ್ತದಲ್ಲ, ಅದರ ಬದಲಿಗೆ 'ಹೇಲು' ಎನ್ನಲಿ ಆಗ ಗೊತ್ತಾಗುತ್ತದೆ!

ಅಲ್ಲದೇ ಭಾಷೆ ಒಂದು ಸಂಸ್ಕೃತಿಯನ್ನು ಪ್ರತಿನಿಧಿಸುವ ಅಂಗವಾದ್ದರಿಂದ ನಮ್ಮ ಭಾಷೆಯನ್ನು ನಾವೇ ಆಡಿ-ಬೆಳೆಸದೇ ಹೋದರೆ ನಮ್ಮ ಸಂಸ್ಕೃತಿಯಿಂದಲೇ ದೂರ ಉಳಿದಂತಾಗುವುದಿಲ್ಲವೇ? ನಾನೆದಷ್ಟೋ ಸಾರಿ ಅಂದುಕೊಂಡಿದ್ದೇನೆ, ಸಾವಿರಾರು ವರ್ಷಗಳ ಹಿಂದೆ ಒಂದು ಭಾಷೆಯೋ, ಅದರ ಆಡುನುಡಿಯೋ ಹುಟ್ಟಿಕೊಂಡಿದೆಯೆಂದರೆ ಅದರ ಹಿಂದೆ ಬಲವಾದ ಯಾವುದೋ ಒಂದು ಕಾರಣ ಇದ್ದಿರಲೇಬೇಕು. ನಮ್ಮ ಹಿರಿಯರು ಬುದ್ಧಿವಂತರು ಎಂಬುದನ್ನು ಯಾವ ಸಮುದಾಯವೂ ಅಲ್ಲಗಳೆಯುವುದಿಲ್ಲ ಅಲ್ಲವೇ?

ಇತಿ,
ನಿಮ್ಮವ

ಶೇಖರ್‌ಪೂರ್ಣ said...

ಉದಾಹರಣೆಗೆ ನಮ್ಮ ಯುವ ಸ್ನೇಹಿತರು ಮಾತುಮಾತಿಗೆ shit ಎನ್ನುವುದು ಕೇಳಿಬರುತ್ತದಲ್ಲ, ಅದರ ಬದಲಿಗೆ 'ಹೇಲು' ಎನ್ನಲಿ ಆಗ ಗೊತ್ತಾಗುತ್ತದೆ!

shitಗೆ ಹತ್ತಿರವಾದದ್ದು: ಗಬ್ಬು ನನ್ ಮಗನೆ, ತಿಪ್ಪೇಸೂಳೆ ಮಗನೆ-ಇತ್ಯಾದಿ. ನೀವು ಎಲ್ಲೋ ಕೊಂಚ ಭಾವುಕರಾಗಿದ್ದೀರಿ.

ಶೇಖರ್‌ಪೂರ್ಣ said...

ಮೇಲಿನ ಟಿಪ್ಪಣಿಯನಂತರ-ತೋಚಿದ್ದು.
ನಾವು ಮಾತನಾಡುವಾಗ ಮಹಿಳೆಯರಿಗೆ ಅವಮಾನವಾಗದಂತೆ-್ಯಾವುದಾದರೂ ಬಯ್ಗಳ ಇವೆಯೆ ಅಂತ ಪಟ್ಟಿ ಮಾಡಬಹುದೆ. ಕೋಪ ಬಂದಾಗ ಅದಕ್ಕೂ ಸಾಂದರ್ಭಿಕವಾದ ಸೂಚನೆ ಕೊಡಬಗುದಾದಂತೆ? ಚಿತ್ತಾಲರೂ ಇದನ್ನ ತನ್ನ ಶಿಕಾರಿಯಲ್ಲಿ, ಪ್ರಾರಂಭದ ಅಧ್ಯಾಯದಲ್ಲಿ ಎದುರಿಸಿದ್ದಾರೆ..