Thursday, April 20, 2006

ನಾನು ಇಷ್ಟೊಂದು ಒಳ್ಳೆಯವನಾಗಬಾರದಿತ್ತು!

'ನೋಡಿದ್ರಾ ಎಂಥಾ ಕೊಬ್ಬು ಇವನಿಗೆ, ತನ್ನನ್ನು ತಾನೇ ಒಳ್ಳೆಯವನೆಂದು ಸಾರಿ ಕೊಳ್ಳುತ್ತಿದ್ದಾನಲ್ಲಾ' ಅಂತ ಅಂದುಕೋತೀರೋ, ಅಂದುಕೊಳ್ಳಿ, ನನಗೇನಂತೆ!?

ನಾನು ಸಾಗರದಲ್ಲಿ ಐದು ವರ್ಷ ರೂಮು ಮಾಡಿಕೊಂಡು ಇದ್ದಿರುವಾಗ, ನನಗೆ ರೂಮ್‌ಮೇಟ್‌ಗಳಾಗಿ, ನೆರೆಹೊರೆಯವರಾಗಿ ಸಿಕ್ಕವರಲ್ಲಿ ನನ್ನ ಹಾಗಿನ ವಿದ್ಯಾರ್ಥಿಗಳು ಅತಿ ಕಡಿಮೆ, ಬದಲಿಗೆ ಖಾಸಗೀ ಬಸ್ಸ್‌ಗಳ ಡ್ರೈವರುಗಳು, ಕಂಡಕ್ಟರುಗಳು, ಗಜಾನನ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು (ಮೆಕ್ಯಾನಿಕ್, ಇತ್ಯಾದಿ), ಪಿ.ಡಬ್ಲು.ಡಿ ಗ್ಯಾಂಗ್‌ಮನ್‌ಗಳು (ಗ್ಯಾಂಗ್‌ಮನ್ ಅಂದ್ರೆ ಕೆಲಸಗಾರರ ಮುಖ್ಯಸ್ಥ ಅನ್ನೋ ಅರ್ಥದಲ್ಲಿ), ಟೈಲರ್‌ಗಳು ಮುಂತಾದವರು ನನ್ನ ದೋಸ್ತರು. ಕಾಲೇಜು ಮುಗಿಯುತ್ತಿದ್ದಂತೆ ಇವರ ಜೊತೆಯಲ್ಲಿ ಅಲ್ಲಿಲ್ಲಿ ತಿರುಗಾಡುವುದೇನು, ಹೊಟೇಲಿಗೆ ಹೋಗುವುದೇನು, ನನ್ನ ಸ್ವಾತ್ರಂತ್ರ್ಯವನ್ನು ಎಂಥವರೂ ಕರುಬುವ ಹಾಗಿದ್ದೆ. ಈ ಜೊತೆಗಾರರಿಗೆ ತರಾವರಿ ಹವ್ಯಾಸಗಳು, ಹುಡುಗಿಯರ ಹುಚ್ಚೇನು, ಬೀಡಾ, ಸಿಗರೇಟು, ಮಧ್ಯಪಾನದ ವ್ಯಸನವೇನು, ಯಾವುದಕ್ಕೂ ಎಲ್ಲೂ ಕಡಿಮೆ ಇರಲಿಲ್ಲ. ಇಂತಹ ವಾತಾವರಣದಲ್ಲಿ ನಾನು ಐದು ವರ್ಷ ಬೆಳೆದಿದ್ದನ್ನು ನೆನಸಿಕೊಂಡರೆ ಇಷ್ಟು ಹೊತ್ತಿಗೆ ಕೆಟ್ಟು ಕುಲಗೆಟ್ಟು ಹೋಗಬೇಕಿತ್ತು ಆದರೆ ಇವತ್ತಿಗೂ ನಾನು ಒಂದು ಸಿಗರೇಟನ್ನೂ ಬಾಯಿಗೆ ಇಟ್ಟವನಲ್ಲ, ಮದ್ಯಪಾನವನ್ನು ಮೂವತ್ತು ವರ್ಷದ ಮೇಲೆ ಮಾಡಿದವನು, ಹಾಗೂ ಹೆಣ್ಣು ಮಕ್ಕಳು ಅಂದ್ರೆ ಅಪಾರ ಸಂಕೋಚವೇ!

ಹಾಗಂತ ನನ್ನ ಇಬ್ಬರು ಅಣ್ಣಂದಿರು ತಮ್ಮ ಊರಿನ ಅಗಸೀ ಬಾಗಿಲನ್ನು ಬಿಟ್ಟು ಈವರೆಗೆ ಎಲ್ಲೂ ಹೋಗದಿದ್ದರೂ, ಅವರು ಆಡದ ಆಟವಿಲ್ಲ - ಮಾಡದ ಮಾಟವಿಲ್ಲ, ಚಲಿಸುವುದನೆಲ್ಲವನ್ನೂ ತಿಂದು, ಕುಡಿಯುವುದನ್ನೆಲ್ಲ ಕುಡಿದು, ಸುಡುವುದನೆಲ್ಲವನ್ನೂ ಸುಟ್ಟಿದ್ದಾರೆ! (ಉತ್ಪ್ರೇಕ್ಷೆ)

ಸರಿ, ನಾನು ಇಷ್ಟು "ಒಳ್ಳೆಯವ"ನಾಗಿರುವುದರ ಗುಟ್ಟೇನೋ ಎಂದು ಯೋಚಿಸುತ್ತಿದ್ದ ನನಗೆ ಮೊನ್ನೆ-ಮೊನ್ನೆ ತಾನೇ ಉತ್ತರ ಹೊಳೆಯಿತು. ನನ್ನ ಸ್ನೇಹಿತನೊಬ್ಬ ಒಂದು ಲೇಖನವನ್ನು ತಂದುಕೊಟ್ಟ, ಅದರ ಸಾರ ಹೀಗಿತ್ತು - ದೇವರು ಕರುಣಾಮಯಿ, ಆದರೂ ನಾವು ನಮಗೆ ಬೇಕಾದುದನ್ನು ಬೇಡಲೇ ಬೇಕು, ಕೊಡುವುದೂ ಬಿಡುವುದೂ ಅವನಿಗೆ ಬಿಟ್ಟದ್ದು, ಮುಂತಾಗಿ. ನನ್ನ ಅಮ್ಮ ನನಗೆ ಚಿಕ್ಕವನಿರುವಾಗ ದೇವರ ಮುಂದೆ ಕುಳಿತು ಬೇಡುವುದಕ್ಕೆ ಹೇಳಿಕೊಟ್ಟದ್ದು ಒಂದೇ ಮಾತು 'ದೇವರೇ ನನಗೆ ಒಳ್ಳೇ ಬುದ್ಧಿ ಕೊಡಪ್ಪಾ!', ಹೀಗೆ ಸುಮಾರು ಹದಿನೈದು ವರ್ಷ (ಅಂದ್ರೆ ಹತ್ತನೇ ಕ್ಲಾಸು ಪಾಸಾಗಿ ಊರು ಬಿಟ್ಟು ಸಾಗರ ಸೇರುವವರೆಗೆ) ಪ್ರತಿ ನಿತ್ಯ ಎಡಬಿಡದೇ ಬೇಡಿದೆನೆಂತಲೋ ಏನೋ ನನಗೆ ಈ ಬುದ್ಧಿ!

ನನ್ನ ಅಪ್ಪ-ಅಮ್ಮ ಇಬ್ಬರೂ ಮೇಷ್ಟ್ರು (ನನಗೆ ಕೊರೆಯುವ ಕಲೆ ಎಲ್ಲಿಂದ ಬಂದಿತೆಂದುಕೊಂಡಿರಿ?), ಅಮ್ಮ ಹೇಳೋ ಒಂದು ಮಾತು ಯಾವಾಗಲೂ ನನ್ನ ನೆನಪಿನಲ್ಲಿರುತ್ತೆ - 'ನೋಡೋ, ಕೆಟ್ಟ ಗುಣ ಅನ್ನೋದು ಬೆಂಕಿ ಇದ್ದ ಹಾಗೆ, ಅದು ತಾನು ಇರೋ ಜಾಗವನ್ನೇ ಮೊದಲು ಸುಡೋದು!'

ನನ್ನಮ್ಮ ನನಗೆ ಯಾವಾಗಲೂ 'ಚಿರಂಜೀವಿ ...ನಿಗೆ ನನ್ನ ಆಶಿರ್ವಾದಗಳು' ಅಂತಾನೇ ಪತ್ರ ಬರೆಯೋಳು, ನಾನು ಮದುವೆಯಾದ ನಂತರ ಬರೆದ ಮೊದಲ ಪತ್ರದಲ್ಲಿ 'ಶ್ರೀ ...ನಿಗೆ ನನ್ನ ಆಶಿರ್ವಾದಗಳು' ಎಂದು ಶುರು ಮಾಡಿದ್ದಳು! ನಾನು 'ಏನಮ್ಮಾ, ನಾನು ಮದುವೆ ಆದಮೇಲೆ ಚಿರಂಜೀವಿ ಆಗೋದು ಬ್ಯಾಡಾ ಅಂತ ನಿರ್ಧಾರ ಮಾಡಿದ ಹಾಗಿದೆ...' ಎಂದು ನಕ್ಕು ಕೇಳಿದಾಗ, 'ಹಂಗಲ್ವೋ, ನಿನ್ನ ಮದುವೆ ಆದ ಮೇಲೆ ನಿನಗೆ ನಿನ್ನ ಕುಟುಂಬ, ಪರಿವಾರ ಮೊದಲು ಬರುತ್ತೆ, ನೀನು ಒಬ್ಬ ಸಂಸಾರಸ್ಥನಾಗಿದ್ದೀಯೆ...ಉಳಿದವರಿಗೆ ಮರ್ಯಾದೆ ಕೊಡೋ ಹಾಗೆ ನಿನಗೂ ಮರ್ಯಾದೆ ಸಲ್ಲ ಬೇಕು, ನಾನೇ ಪತ್ರ ಬರೀಲಿ, ಇನ್ಯಾರೇ ಬರೀಲಿ, ಶ್ರೀ ಎಂದೇ ಬರೀ ಬೇಕು' ಎಂದು ಸೀರಿಯಸ್ಸಾಗಿ ಉತ್ತರ ಕೊಟ್ಟಳು.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳಿಗೆ ಇಂತಾ ಬುದ್ಧಿ ಹೆಂಗೆ ಬಂತು ಎಂದು ನನಗೇ ಆಶ್ಚರ್ಯವಾಗಿದೆ.

ನೀವೇ ಹೇಳಿ ಇಂಥಾ ಅಮ್ಮನ ಮಗನಾಗಿ ನಾನು ಕೆಟ್ಟವನಾಗೋದಕ್ಕೆ ಹೇಗೆ ಸಾಧ್ಯ?

ಆದರೆ ಹೊರಗಿನ ಬದುಕು ಹಲವಾರು ಸವಾಲುಗಳನ್ನು ಒಡ್ಡುತ್ತೆ - ನೀವು ಟ್ರ್ಯಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ನಿಮಗೆ ಸಿಟ್ಟು ಬರಿಸುವ ಅಕ್ಕ-ಪಕ್ಕದ ಡ್ರೈವರುಗಳಿರಬಹುದು, ಆಫೀಸ್‌ನಲ್ಲಿ ನಿಮ್ಮ ತಲೆ ತಿನ್ನೋ ಸಹೋದ್ಯೋಗಿಗಳಿರಬಹುದು, ಮನೆಯಲ್ಲಿ ನೀವು ಅದೇ ತಾನೇ ಹಾಕಿದ ಬಿಳಿ ಅಂಗಿಯ ಮೇಲೆ ಕೆಚಪ್ ಸಿಂಪಡಿಸೋ ಮಕ್ಕಳಿರಬಹುದು, ನಿಮ್ಮ ಕಣ್ಣ ಮುಂದೆಯೇ ನಿಮ್ಮನ್ನು ಏಮಾರಿಸೋ ವರ್ತಕರಿರಬಹುದು...ಇವರೆಲ್ಲರಿಗೂ ತೋರಿಸೋದಕ್ಕೆ ಒಂದು ಮುಖವಾಡವನ್ನು ಧರಿಸಲೇ ಬೇಕಾಗುತ್ತೆ. ಎಲ್ಲೀವರೆಗೆ ನೀವು ಈ ಮುಖವಾಡಗಳ ಹಿಂದಿನ ಮರ್ಮವನ್ನು ಅರಿತುಕೊಳ್ಳುವ ಪ್ರಯತ್ನ ಮಾಡ್ತೀರೋ ಅಲ್ಲೀವರೆಗೆ ನಾನು ಕೆಟ್ಟವನೆಂದೂ ಆಗೋದಕ್ಕೆ ಸಾಧ್ಯವೇ ಇಲ್ಲ!

ಸರಿ, ನಾನು ದೊಡ್ಡ ಮನುಷ್ಯ, ಬಹಳ ಒಳ್ಳೆಯವನು ಎಂದೆಲ್ಲಾ ಬೊಗಳೆ ಕೊಚ್ಚಿಕೊಂಡೆನಲ್ಲವೇ - ಆದರೆ, ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಈ 'ಒಳ್ಳೆಯ-ಕೆಟ್ಟದ್ದರ' ಜಿಜ್ಞಾಸೆನಿಲ್ಲುವುದಿಲ್ಲ: ನಾನು ಎಷ್ಟೇ ಹೊತ್ತು ನಿದ್ರೆ ಮಾಡಿದರೂ, ಮದ್ಯಪಾನದಿಂದ ಮೈಲು ದೂರವಿದ್ದು ಎಲ್ಲಿ-ಹೇಗೇ ಇದ್ದರೂ ನನ್ನ ಕಣ್ಣುಗಳು ಕುಡುಕರ ಹಾಗೆ ಯಾವಾಗಲೂ ಕೆಂಪಾಗಿರುತ್ತವೆ - ನಾನು ತೋರಿಸಿದ ಯಾವ ಕಣ್ ಡಾಕ್ಟ್ರಿಗೂ ಇದಕ್ಕೆ ಉತ್ತರ ಈ ವರೆಗೆ ದೊರಕಿಲ್ಲ. ಇನ್ನು ಎರಡನೆಯದಾಗಿ ನನಗೆ ನಾಟಕಗಳಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಲ್ಲೆಲ್ಲ ಈ ವರೆಗೆ ಕುಡುಕನ, ಕೊಲೆಗಡುಕನ ಪಾತ್ರಗಳೇ ಏಕೆ ಸಿಗುತ್ತವೋ? ಯಾರಿಗೆ ಗೊತ್ತು?

ನನ್ನ ಸ್ನೇಹಿತರು ಕೆಲವರು ನನ್ನನ್ನು ಕುರಿತು 'ನೀನು ಹಿಂಗೆ ಗಾಂಧಿಯಾಗಿ ಬದುಕೋದೇ ದಂಡಕ್ಕೆ' ಎಂದು ಅಪಹಾಸ್ಯ ಮಾಡಿದಾಗಲೆಲ್ಲ, ನನ್ನ ಸಹನೆಯನ್ನು ನನ್ನ ದೌರ್ಬಲ್ಯವೆಂದು ತಮ್ಮಷ್ಟಕ್ಕೇ ತಾವೇ ದೊಡ್ಡ ಸಿದ್ಧಾಂತವನ್ನು ಮಾಡಿಕೊಂಡು ನನ್ನೊಡನೆ ಜಗಳ ಕಾಯ್ದು ಗೆದ್ದಂತೆ ಬೀಗಿದ ಬಾಯ್‌ಬಡುಕರ ಮುಂದೆ, ಪಕ್ಕದ ಮನೆಯ ಹುಡುಗರು ನಾಲ್ಕಾರು ಜನ ಒಟ್ಟಾಗಿ ನನ್ನ ಅಣ್ಣನನ್ನು ಹೊಡೆದು ಹಾಕುತ್ತಿದ್ದಾಗ ನಾನು ಸುಮ್ಮನೇ ಅಳುತ್ತಾ ನಿಂತ ಸಂದರ್ಭದಲ್ಲಿ, ಅಹಮದಾಬಾದಿನ ರೈಲು ನಿಲ್ದಾಣದಲ್ಲಿ ರಿಸರ್‌ವೇಷನ್ ಕೊಡಿಸುತ್ತೇನೆಂದು ಕಣ್ಣೆದುರೇ ಮೋಸ ಮಾಡಿ ಯಾವನೋ ಓಡಿಹೋಗುತ್ತಿದ್ದಾಗ, ಸಿನಿಮಾ ನೋಡಿಕೊಂಡು ನನ್ನ ಅಕ್ಕನ ಜೊತೆ ಬರುತ್ತಿರುವಾಗ ಯಾವನೋ ಒಬ್ಬ ಅವಳ ಜಡೆಯನ್ನು ಎಳೆದು ಕಿಚಾಯಿಸಿದ ಸಂದರ್ಭದಲ್ಲಿ ನಾನು ಕೆಟ್ಟವನಾಗಬೇಕಿತ್ತು ಎಂದು ಬಲವಾಗಿ ಅನಿಸಿದೆ, ಆದರೆ ಏನು ಮಾಡಲಿ, ವರ್ಷಗಳ 'ದೇವರೇ ನನಗೆ ಒಳ್ಳೇ ಬುದ್ಧಿ ಕೊಡಪ್ಪಾ!' ಎಂಬ ಮೊರೆ ಹಾಗೂ ಅಗಾಧವಾದ ಅದರ ಪರಿಣಾಮ ನನ್ನನ್ನು ಇವತ್ತು ಈ ಸ್ಥಿತಿಯಲ್ಲಿರಿಸಿದೆ.

ಪ್ರಪಂಚದ ಒಳ್ಳೆಯವರಿಗೆಲ್ಲ ಜಯವಾಗಲಿ!

11 comments:

Anonymous said...

ಹೌದು, ಕೆಲವು ಸಲ ತುಂಬ ಒಳ್ಳೆಯತನ ಕೂಡ ಹೇಡಿತನ ಅನ್ನಿಸೋಕೆ ಶುರುವಾಗತ್ತೆ, ಅಲ್ವಾ?

Satish said...

ಮತ್ತಿನ್ನೇನು, ನಮ್ ದೇಶದಲ್ಲಿ ಒಳ್ಳೆಯವರಾಗಿ ಬದುಕೋದು ಅಂದ್ರೆ ಎಲ್ಲದನ್ನೂ ಸಹಿಸಿಕೊಳ್ಳೋದು ಅಂತ್ಲೇ ಅರ್ಥ. ಎಷ್ಟೋ ಸರ್ತಿ ಅನ್ಸುತ್ತೆ ಇವರಿಗೆಲ್ಲ ಒಂದೆರಡು ಬಾರಿಸಿ ಬಿಡೋಣ ಅಂತ, ಸುಮ್ನೇ ಪೋಲೀಸ್ ಕೇಸು ಅದೂ ಇದೂ ಅಂತ ಆಗೋ ಪರಿಣಾಮಗಳನ್ನ ನೆನೆದು ಸುಮ್ನೇ ಇರಬೇಕು ಅಷ್ಟೇ.

Anonymous said...

ನನಗೆ ಈಗ ಇನ್ನೊಂದು ಪ್ರಶ್ನೆ ಎದುಗಾಗ್ತಿದೆ. ಒಳ್ಳೆಯತನ ಎಂದರೇನು? ಒಬ್ಬರಿಗೆ ಒಳ್ಳೆಯದು ಅನ್ನಿಸಿದ್ದು, ಇನ್ನೊಬ್ಬರಿಗೆ ಕೆಟ್ಟದ್ದು ಆಗಬಹುದು ಅಲ್ವಾ? ಅದೇ ತರ ಏಕಕಾಲದಲ್ಲಿ ಒಬ್ಬರಿಗೆ ಒಳ್ಳೆಯವನು ಇನ್ನೊಬ್ಬನಿಗೆ ಕೆಟ್ಟವನೂ ಆಗ್ತಾನಲ್ಲ??

Anveshi said...

ಹ್ಹ... ಹ್ಹ... ಹ್ಹ.... ನಂಗೆ ನಗು ಬಂದಿದ್ದೇಕಂದ್ರೆ ನಿಮ್ಮ ಬ್ಲಾಗ್ ಯುಆರ್‌ಎಲ್ ದೊರೆತ ವಿಧಾನದಿಂದ! ನಮ್ಮ ಮಾವನ ಹುಡುಕಾಟದಲ್ಲಿದ್ದ ನಂಗೆ ಗೆಳೆಯನೊಬ್ಬ ಕೇಳಿದ ಪ್ರಶ್ನೆಯಿಂದ ಪ್ರೇರಿತನಾಗಿ 'ನಿಮ್ಮಾವ ಸಿಕ್ಕಿ ಬಿಟ್ರಾ, ನೆಟ್‌ನಲ್ಲೇನಾದರೂ ಹುಡುಕು' ಎಂದು ಕೇಳಿದಾಗ ತಕ್ಷಣ ಕಾರ್ಯಪ್ರವೃತ್ತನಾದಾಗ ಸಿಕ್ಕಿದ್ದು ನಿಮ್ಮ ಬ್ಲಾಗ್. nimmava ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡ ಇಂಟರ್ನೆಟ್ ಸರ್ಚ್ ಎಂಜಿನ್ ನನ್ನನ್ನು ನಿಮ್ಮಲ್ಲಿಗೆ ತಂದು ನಿಲ್ಲಿಸಿತು! ಹೇಗೂ ನೀವು ಕೂಡ ಒಬ್ಬ ಮಾವನೇ ಆಗಿದ್ದೀರಿ ಅಂತ ನಿಮ್ಮ 'ಮಾವನ ಮಿತಿ' ಓದಿ ತಿಳಿಯಿತು.

ಅದಿರ್ಲಿ... ನಿಮ್ಮ ಒಳ್ಳೆಯತನದ ಬಗ್ಗೆ "ಬೊಗಳೆ" ಬಿಟ್ಟದ್ದೇನೂ ತಪ್ಪಲ್ಲ ಬಿಡಿ. ಅಂತರಂಗ ಬಹಿರಂಗವಾಗಿದೆಯಷ್ಟೆ. ಒಳ್ಳೆತನವಿಲ್ಲದಿದ್ದರೆ ನೀವು ಪರದೇಸಿಯಾಗಿ ಉನ್ನತ ಹುದ್ದೆ ಪಡೆಯುವುದು ಸಾಧ್ಯವಿತ್ತೇ?

Anonymous said...

ಈ ಬರಹದಲ್ಲಿ "ಬೊಗಳೆ" ಬಿಟ್ಟಿದ್ದಾರೆ ಅಂತ ನನಗನ್ನಿಸಲಿಲ್ಲ.

Satish said...

ಪ್ರಿಯ ಅನಾಮಿಕ ಮಾನ್ಯರೆ,

(ನೀವೆಲ್ಲರೂ ನಿಮ್ಮ ಹೆಸರಿನಲ್ಲೇ ಬರೆಯೋದಕ್ಕೆ ಏಕೆ ಹಿಂಜರಿತೀರೋ, ನನಗೆ ಯಾವ ಅನಾಮಿಕರು ಯಾರು ಎಂದು ತಿಳಿಯೋದು ಹೇಗೆ?)

ಬರಹದಲ್ಲಿ ನಾನು "ಬೊಗಳೆ" ಎಂಬ ಪದವನ್ನು ಸತ್ಯ ಹೇಳುತ್ತಿದ್ದರೂ ಅತಿಯಾದ ಆತ್ಮಸ್ತುತಿಯಿಂದಾಗಿ 'ಬುರುಡೆ' ಅಥವಾ 'ದೌಲು' ಆಗಿ ಓದುಗರಿಗೆ ಕಾಣಬಹುದು ಎಂಬ ಅರ್ಥದಲ್ಲಿ ಬಳಸಿದ್ದೆ.

ಒಳ್ಳೇತನ ಎನ್ನುವುದನ್ನು ವ್ಯಕ್ತಿನಿಷ್ಠ ಹಾಗೂ ವಸ್ತುನಿಷ್ಠ (subjective and objective) ಪರಿಭಾಷೆಯಲ್ಲಿ ಬೇರೆ-ಬೇರೆಯಾಗಿ ಅರ್ಥೈಸಿಕೊಳ್ಳಬಹುದಾದರೂ ಇಲ್ಲಿಯ ಒಳ್ಳೆಯ ಮನುಷ್ಯನನ್ನು 'ಸೀದಾ ಮನುಷ್ಯ' ಅಥವಾ 'ಯಾರ ತಂಟೆಗೆ ಹೋಗದವನು' ಅಥವಾ 'ಕೆಟ್ಟ ಅಭ್ಯಾಸಗಳಿಲ್ಲದವನು' ಎಂದು ಅರ್ಥ ಮಾಡಿಕೊಂಡರೆ ಒಳ್ಳೆಯದು.

ಇತಿ,
ನಿಮ್ಮವ

Satish said...

ಪ್ರಿಯ ಅಸತ್ಯಾನ್ವೇಷಿಗಳೇ,

ನಿಮ್ಮ ಹೆಸರು ಯಾವುದೋ ಮಹಾಮುನಿಯ ನೆನಪು ತಂದುಕೊಡುತ್ತೆ!

ಅಂದ ಹಾಗೆ ನಿಮ್ಮ ಮಾವನವರನ್ನು ಹುಡುಕಲು ನನ್ನಿಂದಾದ ಸಹಾಯವನ್ನು ಮಾಡುತ್ತೇನೆ, ಆ ಮಾವನ ದೆಸೆಯಿಂದ ಈ ಮಾವನ ಮಿತಿಯನ್ನು ಓದಿ ನಿಮ್ಮ ಅನ್ವೇಷಣೆಯನ್ನು ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಿಮಗೋಸ್ಕರ 'ಅಸತೋಮಾ ಸದ್ಗಮಯ...'ವನ್ನು ಯಾರಾದರೂ ಬೇರೆ ಬರೆಯಲಿ.

ಇತಿ,
ನಿಮ್ಮವ

Shrilatha Puthi said...

i wonder why ur mother dint teach ur brothers to pray like that n preach them about 'ketta guNa'...

i also wonder why u categorise ppl who drink, smoke, n raise their voice when they want to as 'bad'. From where u got this definition of of 'bad'?

Satish said...

Dear shrilatha puthi,

Just like fingers on a hand we brothers are different in our own way, but we grew up together in a similar environment.

As mentioned earlier oLLeyatana is subjective, but if you try read 'keTTva' as being stubborn or tough, instead of 'bad' that probably will help.

Also, where I am from, if one does 'keTTa abhyAsa' such a person is tagged 'keTTavanu', got it?

iti,
nimmava

Anonymous said...

ನಿಮ್ಮ ತಾಯಿ ನಿಮಗೆ "ಶ್ರೀ.." ಎಂದು ಪತ್ರ ಬರೆಯೋದು ಅಸಹಜ ಅನ್ನಿಸಲ್ವಾ? ತಾಯಿ,ತಂದೆಗಳಿಗೆ ಮಗ ಎಂದಿಗೂ ಮಗನೇ, ಅವನು ಅವರ ಪಾಲಿಗೆ ಕೊನೆಯ ತನಕ ಚಿರಂಜೀವಿಯಾಗಿರುವುದಲ್ಲೇ, ಅವನ ಸುಖ, ಶ್ರೇಯಸ್ಸು ಅಡಗಿದೆ ಎಂದು ನನ್ನ ಅನಿಸಿಕೆ.

Satish said...

sritri ಅವರೇ,

ನನಗೂ ಮೊದಲು ಹಾಗೇ ಅನ್ನಿಸಿತು, ಕೆಲವು ಕಡೆ 'ಚಿರಂಜೀವಿ' ಅಂದರೆ 'ಕುಮಾರ' (ಇನ್ನೂ ಮದುವೆಯಾಗದವ) ಅನ್ನೋ ರೀತಿಯಲ್ಲಿ ಬಳಸುತ್ತಾರೆ ಎಂದೆನಿಸುತ್ತೆ, ಯಾರಾದರೂ ಗೊತ್ತಿರೋರಿಗೆ ಕೇಳಬೇಕು - ನನಗೂ ನನ್ನ ತಾಯಿ 'ಶ್ರ್‍ಈ' ಎಂದು ಪತ್ರದಲ್ಲಿ ಬರೆದಿದ್ದು ನನಗೆ ಇವತ್ತಿಗೂ ಸಮಾಧಾನ ತಂದಿಲ್ಲ.

ಇತಿ,
ನಿಮ್ಮವ