Saturday, April 01, 2006

ಎಲ್ಲಿ ಹೋದರೀ ಸ್ನೇಹಿತರು?

ಸ್ನೇಹಿತ ಅನ್ನೋ ಪದವೇ ಸ್ವಾರಸ್ಯಕರವಾದದ್ದು, ಅದರಲ್ಲಿ ಹಿತವೂ ಇದೆ, ಸ್ನೇಹವೂ ಇದೆ!

ಈ ಪದಗಳನ್ನು ಮನಸ್ಸಲ್ಲಿ ತಂದುಕೊಳ್ಳಿ - ಹಿತೈಷಿ, ವಿಶ್ವಾಸಿ, ಬಂಧು, ಬಳಗ, ನೆಂಟ, ಸಂಬಂಧಿ, ಇತ್ಯಾದಿ... ಇವುಗಳಲ್ಲೆಲ್ಲ 'ಸ್ನೇಹಿತ'ನಿರಲೇಬೇಕು ಎಂದೇನಿಲ್ಲ, ಆದರೆ ಸ್ನೇಹಿತನಲ್ಲಿ ಇವೆಲ್ಲವೂ ಇವೆ.

ನನ್ನಂಥ ವಲಸಿಗನಿಗೆ ಬಂದಿರಬಹುದಾದ ಹಲವಾರು ಸಮಸ್ಯೆಗಳಲ್ಲಿ ಸ್ನೇಹಿತರ ಬರವೂ ಒಂದು. ನೀವು ಕೇಳಬಹುದು - ಇಷ್ಟೊಂದು ದೊಡ್ಡ ದೇಶದಲ್ಲಿ ಸ್ನೇಹಿತರಿಗೇನು ಬರವೇ? ಎಂದು. ಹೌದು - ನನಗರಿವಿಲ್ಲದಂತೆ ಬಹಳಷ್ಟನ್ನು ಕಳೆದುಕೊಂಡಿದ್ದೇನೆ ಅದರಲ್ಲಿ ನನ್ನ ಭಾರತೀಯ ಸ್ನೇಹಿತರನ್ನೂ ಕೂಡ.

ಈ ದೇಶಕ್ಕೆ ಬಂದ ಮೊದಲಿನಲ್ಲಿ ನನ್ನ ಸ್ನೇಹಿತರುಳಿಗೆ ಪುಟಗಟ್ಟಲೆ ಪತ್ರ ಬರೆಯುತ್ತಿದ್ದೆ. ಅವರು ಬರೆದ ಪತ್ರಗಳನ್ನು ಓದುವಲ್ಲಿ ಆಗುತ್ತಿದ್ದ ಸಂತೋಷ, ಸಂಭ್ರಮ ಇಂದು ಕಣ್ಣು ಮಿಟುಕಿಸುವುದರೊಳಗೆ ಎತ್ತೆತ್ತಲಿಂದಲೂ ಬಂದು ಬೀಳಬಹುದಾದ ಇ-ಮೇಲ್‌ಗಳನ್ನು ಓದುವುದರಿಂದ ಆಗುವುದಿಲ್ಲ. ಅಂತೆಯೇ, ಪತ್ರ ಬರೆಯುವುದೂ ಯಾವತ್ತಿಗೋ ನಿಂತು ಹೋಗಿದೆ - ಇವತ್ತಿಗೂ ಸಹ ಮನೆಯವರಿಗೆ ಚೆಕ್ಕೋ ಮತ್ತೊಂದೋ ಕಳಿಸುವಾಗ ಬರೆದರೂ ಬರಹ ಅರ್ಧ ಪುಟ ತುಂಬುವುದಿಲ್ಲ, ದೂರವಾಣಿಯಲ್ಲಿ ಮಾತನಾಡಿ ನಮ್ಮ-ನಮ್ಮ ಸಂಬಂಧಗಳನ್ನು ಅವಿಷ್ಕರಿಸುವ ಪರಿಪಾಟಲೆಗೆ ಈ ಪತ್ರದ ಸಾಲುಗಳು ಬರೀ ನೆಪಮಾತ್ರ ಎಂದರೆ ಅತಿಯಾಗುತ್ತದೆಯೇ?

ಹಾಗಂತ, ಇದರಲ್ಲಿ ನನ್ನ ತಪ್ಪೂ ಇದೆ: ಮುಂಚೆ ಪ್ರತಿ ವರ್ಷವೂ ತಪ್ಪದೇ ರಾಖಿಯನ್ನು ಕಳಿಸುತ್ತಿದ್ದ ನನ್ನ ಅಕ್ಕ-ತಂಗಿಯರಿಗೆ ನಾನು ಕಳಿಸಬೇಡಿರೆಂದು ಹೇಳಿದ್ದೇನೆ. ಅವರು ದಿನಕ್ಕೆ ಮೂವತ್ತೈದು ರೂಪಾಯಿ ದುಡಿದು, ಅದರಲ್ಲಿ ಹದಿನೈದು ರೂಪಾಯಿ ಸ್ಟ್ಯಾಂಪು ಅಂಟಿಸಿ, ಇನ್ನು ಅಮೇರಿಕೆಗೆ ಕಳಿಸಬೇಕಾಗಿರುವುದರಿಂದ ಊರಿನಲ್ಲಿ ಸಿಗುವುದರಲ್ಲಿಯೇ ಇದ್ದ ಒಳ್ಳೆಯ ರಾಖಿಯನ್ನು ಪತ್ರದಲ್ಲಿ ಕಳಿಸುವುದಕ್ಕೆ ಅವರ ಒಂದು ದಿನದ ಕಮಾಯಿಯೇ ಬೇಕೆನ್ನಿ. ಸರಿ, ಅವರು ಕಳಿಸಿದ ಮಾತ್ರಕ್ಕೆ ನಾನು ಅದನ್ನು ಕೊನೇಪಕ್ಷ ಒಂದು ಪೂರ್ಣ ದಿನವಾದರೂ ರಾಖಿಯನ್ನು ಧರಿಸಿದರೆ ಅದರ ಸಾರ್ಥಕವಾಗುತ್ತೆ, ಇಲ್ಲಿ ಹಾಗೆ ಮಾಡಲಾಗುವುದಿಲ್ಲವಲ್ಲಾ! ನೀವೆಲ್ಲಿಯಾದರೂ ರಾಖಿಯನ್ನು (ರಕ್ಷಾ ಬಂಧನದ ಒಂದೆಳೆ ದಾರವಲ್ಲ, ಪೂರ್ಣ ಪ್ರಮಾಣದ ರಾಖಿಯನ್ನು) ಧರಿಸಿರುವವರನ್ನು ನೀವು ನೋಡಿದ್ದೀರಾ?

ಇನ್ನು ಸ್ನೇಹಿತರ ವಿಷಯಕ್ಕೆ ಬರೋದಾದರೆ, ಸ್ನೇಹಿತರು ಯಾವಾಗಲೂ ವಿಶೇಷವಂತೆ, ಏಕೆಂದರೆ ಅವರನ್ನು ನಾವೇ ಆರಿಸಿಕೊಳ್ಳುತ್ತೇವಾದ್ದರಿಂದ. ಅಲ್ಲದೇ, ಸ್ನೇಹಿತರೆಲ್ಲರೂ ಸಮಾನ ಮನಸ್ಥಿತಿಯವರಿರಬೇಕೆಂದೇನೂ ಇಲ್ಲ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಸಹೋದ್ಯೋಗಿಗಳು ಸ್ನೇಹಿತರಾಗೋದಿಲ್ಲ! ಇವೆಲ್ಲವನ್ನೂ ಗಮನಿಸಿದರೆ, ಇಲ್ಲಿ ನನ್ನ ಸುತ್ತಮುತ್ತಲೂ ನನ್ನಂಥ ಅವಕಾಶವಾದಿಗಳೇ ಇರೋದು, ಯಾರಿಗೆ 'ಹಾಯ್' ಎಂದರೂ ಬರೀ ಶುಷ್ಕ ನಗೆ ಮಾತ್ರ ಸಿಗುತ್ತೆ ಇಲ್ಲಿ. ಒಬ್ಬೊರನೊಬ್ಬರು ಆಡಿಕೊಂಡು, ತಳ್ಳಿಕೊಂಡು, ಹೊಡೆದಾಡಿಕೊಂಡು ಯಾವ ಕಾಲವಾಯಿತೋ ಏನೋ? ನಾನು ಸ್ನೇಹಿತನೆಂದ ಮಾತ್ರಕ್ಕೆ, ಬರೀ ಗಂಡಸರು ಗಂಡಸರ ಸ್ನೇಹವನ್ನು ಮಾತ್ರ ಹೇಳುತ್ತಿಲ್ಲ. ನಾನು ಭಾರತದಲ್ಲಿದ್ದಾಗ ಹುಡುಗರ ಪರಿಚಯವಿದ್ದ ಹಾಗೆ ಹುಡುಗಿಯರ ಪರಿಚಯವೂ ಇತ್ತು, ಅದಂತೂ ಇಲ್ಲಿ ಆಗಿ ಹೋಗದ ವಿಷಯ ಬಿಡಿ.

ನೀವು ಅಮೇರಿಕೆಗೆ ಬರುವವರಿರಬಹುದು, ಅಥವಾ ಬಂದು ಹಲವಾರು ತಿಂಗಳು ವರ್ಷಗಳನ್ನು ಕಳೆದಿರಬಹುದು. ಇಲ್ಲಿನ ಅಗಾಧವಾದ ಅದಮ್ಯತೆಯಲ್ಲಿ ಸ್ನೇಹಿತರ ಕೊರತೆಯೂ ಒಂದು, ನಿಮ್ಮ ಸ್ನೇಹಿತರ ಬಗ್ಗೆ ಒಂದು ಕ್ಷಣ ಆಲೋಚಿಸಿ, ಅವರ ಸಂಖ್ಯೆ ಐದಕ್ಕಿಂತ ಹೆಚ್ಚಿದ್ದರೆ 'ಭಲೇ' ಎಂದು ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳಿ, ಇಲ್ಲವೆಂದಾದರೆ ನೀವು ನನ್ನಂಥವರಾದ್ದರಿಂದ ನನ್ನ ಸ್ನೇಹಿತರಾಗಿ!

No comments: