Saturday, April 29, 2006

ಹಾಡು ಕಾಡುವ ಹೊತ್ತು

ನಿನಗೆಂದು ನಾನು ನನಗೆಂದು ನೀನು
ಕನಸಾಗಿ ಕಣ್ಣ ತುಂಬಿರೇ

ಒಡಲಾಳದಲ್ಲಿ ಹಿತವಾದ ನೋವು
ಅನುಕಂಪವಾಗಿ ಬೆಳೆದಿರೇ

ಹೊಸಹಾಡು ಉಕ್ಕಿ ಹೊನಲಾಗಿ ಹರಿದು
ಸುಧೆಯಾಗಿ ಪಯಣ ಬೆಳೆಸಿರೇ

ಮೂಡಣದ ಚೆಲುವು ಮೂಡುತಲಿ ಒಲವು
ನಗೆ ಸಂಭ್ರಮವ ಬಿತ್ತಿರೇ

ಈ ಸೃಷ್ಟಿಯ ಸಮಷ್ಟಿಯಲ್ಲಿ
ಜೊತೆಯಾಗಿ ನಿಂತ ಜೋಡಿಯೇ

ನನ್ನೆದೆಯ ಎದೆಗೆ ಸಿಂಚನದ ಕೊಡುಗೆ
ಹೊಸ ಬುಗ್ಗೆಯಾದ ಚೇತನಾ

ಬರಿಗಾಲಿನಲ್ಲಿ ಭುವಿಯನ್ನು ಸುತ್ತೋ
ಹೊಸ ಹುರುಪು ತಂದ ಭಾವವೇ

***

ಈಗ್ಗೆ ನಾಲ್ಕೈದು ತಿಂಗಳಿನಿಂದ ಈ ಹಾಡು ಮನಸ್ಸಿನಲ್ಲಿ ನಿಂತಿದೆ, ಯಾರಿಗಾದರೂ ಸಂಗೀತ ಬರುವವರಿಗೆ ಈ ಹಾಡನ್ನು ತೋರಿಸಿ ಒಂದು ರೂಪ ಕೊಡುವ ಉತ್ಸಾಹ ಒಮ್ಮೆ ಬಂದರೂ, who cares ಅನ್ನೋ ಸಿಂಚನ ಈ ಅಲೋಚನೆಗಳಿಗೆಲ್ಲ ತಣ್ಣಿರೆರಚಿಬಿಡುತ್ತದೆ. ಇಲ್ಲಿ ಬರೆದ ಹಲವು ಪಂಕ್ತಿಗಳ ಇತರ ವೇರಿಯೇಷನ್‌ಗಳನ್ನು ಬರೆದುಕೊಂಡು ಅಲ್ಲಲ್ಲಿ ಗೀಚಿದ್ದಾಯ್ತು, ತಿದ್ದಿದ್ದಾಯ್ತು. ಆಫೀಸಿನ ಸಮಯದಲ್ಲಿ ಬಿಡುವು ಸಿಕ್ಕಾಗ ಗುನುಗಿ ಕೊಂಡಾಯ್ತು, ಏನು ಮಾಡಿದರೂ ಈ ಹಾಡು ಕಾಡುವುದೊಂದನ್ನು ಬಿಟ್ಟು ಇನ್ನೇನನ್ನೂ ಮಾಡುತ್ತಿಲ್ಲ.

ಇದು ಯಾವ ರಾಗದಲ್ಲಿ ಹುಟ್ಟಿದೆಯೋ ಯಾರಿಗೆ ಗೊತ್ತು, ಸಂಗೀತ ಕಲಿಯುವುದಕ್ಕೆಂದು ಎರಡು ಬಾರಿ ಪ್ರಯತ್ನಿಸಿ ಅದಕ್ಕೆ ತಿಲಾಂಜಲಿ ಇಟ್ಟವನು ನಾನು, ನನ್ನಂತವರಿಗೆ ಅದು ಒದಗಿಬರಲಿಲ್ಲ. ಆದರೆ ಅಲ್ಲಲ್ಲಿ ಮಿಣುಕು ಹುಳದೋಪಾದಿಯಲ್ಲಿ ಯಾವುದೋ ಒಂದು ರಾಗದ ಯಾವುದೋ ಒಂದು ತುಣುಕು ಮನಸ್ಸಲ್ಲಿ ಅವತರಿಸಿ ತಣ್ಣಗೆ ಕೊರೆಯಲು ಶುರುಮಾಡುತ್ತದೆ, ಅದನ್ನು ಹೊರ ಹಾಕುವವರೆಗೆ ಸಮಾಧಾನವೇ ಆಗುವುದಿಲ್ಲ ಒಂದು ರೀತಿ ಸ್ನಾನ ಮಾಡಿದ ಮೇಲೆ ಕಿವಿಯ ಒಳಗೆ ನೀರು ಸೇರಿ ಹಿಂಸೆ ಆಗುವ ಹಾಗೆ. ನನ್ನ ಕೇಳಿದರೆ ಘಂಟೆಗಟ್ಟಲೇ ಯಾವ ಭಾಷೆಯ ಹಂಗೂ ಇಲ್ಲದೇ ಬರೀ ರಾಗಗಳ (ಅದರಲ್ಲೂ ಹಿಂದೂಸ್ಥಾನಿಯ) ಮೋಡಿಗೆ ಮಾರುಹೋಗುವ ಸುಖ ಇದೆ ನೋಡಿ, ಅದು ಭಯಂಕರವಾದುದು. ದೇವ ನಿರ್ಮಿತ ರಾಗಕ್ಕೆ ಮಾನವ ನಿರ್ಮಿತ ಭಾಷೆಯ ಬಂಧನವೇಕೆ? ಭಾಷೆಯ ಬಂಧನವಿದ್ದರೂ ಮೊನ್ನೆ ನಡೆದ ಜಸ್‌ರಾಜರ ಕಛೇರಿಯಲ್ಲಿ ತಲ್ಲೀನರಾದ ಹಲವರ ತೇವವಾದ ಕಣ್ಣುಗಳನ್ನು (ನನ್ನನ್ನೂ ಸೇರಿ) ವಿವರಿಸುವ ಬಗೆ ಎಂತು?

ಪಠ್ಯ ಪುಸ್ತಕದಲ್ಲಿ 'ವೀರ ರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ...' ಎಂದು ಭಾಮಿನಿ ಷಟ್ಪದಿಯನ್ನು ಓದುತ್ತಿದ್ದಾಗ ಹೊಳೆದಿತ್ತು, ಆರು ಸಾಲಿನಲ್ಲಿರುವವೆಲ್ಲ ಷಟ್ಪದಿಗಳಲ್ಲ ಎಂದು - ಬರಿ ಸಾಲುಗಳ ಸಂಖ್ಯೆ ಅಷ್ಟೇ ಅಲ್ಲ, ಲಘು-ಗುರು ಗಳೂ ಲೆಕ್ಕಕ್ಕಿರಬೇಕು ಎಂದು ಹತ್ತನೇ ತರಗತಿಯಲ್ಲಿ ಮೇಷ್ಟ್ರು ಸ್ವಲ್ಪ ಹೆಚ್ಚಾಗೇ ತಿವಿದಿದ್ದರಿಂದಲೋ ಏನೋ ಇಂದಿಗೂ ಅವು ನನ್ನ ನೆನಪನ್ನು ಬಿಟ್ಟು ಹೋಗುತ್ತಿಲ್ಲ. ಮುಂದೆ ಹದಿನಾಲ್ಕು ಸಾಲಿರುವ ಪದ್ಯಗಳನ್ನು ಬರೆದವರೆಲ್ಲ ಶೇಕ್ಸ್‌ಪಿಯರ್ ಆಗುತ್ತಾರೆ ಎಂದುಕೊಂಡು ನಂಬಿ ಬರೀ ಹದಿನಾಲ್ಕು ಸಾಲಿನಲ್ಲಿ ಮುಗಿಯುವಂತೆ ಪದ್ಯವನ್ನು ಬರೆದು ಅದನ್ನು ಕಾಲೇಜಿನ ಮ್ಯಾಗಜೀನ್‌ನಲ್ಲಿ ಸಾನೆಟ್ ಎಂದು ಪ್ರಕಟಿಸಿದವನೂ ನಾನೆ ಎಂದು ಇಂದು ಯೋಚಿಸಿ ನಾಚಿಕೆಯಾಗುತ್ತದೆ.

***

ಜಸ್‌ರಾಜರ ಭೈರವ ಕೇಳುತ್ತಿದ್ದಂತೆ ಅನ್ನಿಸುತ್ತಿತ್ತು, ಯಾಕೋ ಪಕ್ಕ ವಾದ್ಯ ಸರಿಯಾಗಿ ಬರುತ್ತಿಲ್ಲ ಎಂದು, ಅಥವಾ ಸಾತ್‌ನಲ್ಲಿ ಏನೋ ಕೊರತೆ ಇದೆಯೋ, ಅಥವಾ ಭೈರವದ ಬಗ್ಗೆ ನನಗೆ ಅಂತದ್ದೇನು ಗೊತ್ತು? ಅದರಲ್ಲಿ ಎಷ್ಟು ಬಗೆ ಇದೆ, ಯಾವ ಹೊತ್ತಿಗೆ ಹಾಡುತ್ತಾರೆ, ಯಾವ ಭಾವದಲ್ಲಿ ಮೂಡುತ್ತೆ ಎಂದು. ಮನಸ್ಸು ಇನ್ನೇನು ರಾಗದ ಪದರಗಳಲ್ಲಿ ಹುದುಗಬೇಕು ಎಂದು ಕೊಂಡಾಗ ಒಂದು ಬದಿಯ ಸ್ಪೀಕರ್ ಕೆಲಸ ಮಾಡುವುದು ನಿಲ್ಲಿಸಿ, ಇಷ್ಟು ಹೊತ್ತಿನವರೆಗೆ ನನ್ನ ತಲೆಯ ಹಿಂದೆ ಬರುತ್ತಿದ್ದ ಧ್ವನಿ ಈಗ ಎಲ್ಲೋ ದೂರದಲ್ಲಿ ಕೇಳಿ ಬರುತ್ತಿದ್ದಂತೆ ಕಣ್ಣು ಬಿಟ್ಟು ನೋಡುವುದರೊಳಗೆ ದಿನವಿಡಿ ಕಾಡುವ problem resolution modeಗೆ ಮನಸ್ಸು ಒಂದು ನ್ಯಾನೋ ಸೆಕೆಂಡಿನಲ್ಲಿ ಬಂದು ಬಿಡುತ್ತದೆ. ಇಷ್ಟು ದೊಡ್ಡ ಆಡಿಟೋರಿಯಂ‌ನಲ್ಲೂ ಈ ಥರನ ಸಮಸ್ಯೆಯೇ, 'ಛೇ' ಅಂದುಕೊಳ್ಳುತ್ತೇನೆ, ಸಂಗೀತ ಕಛೇರಿ ನಡೆಯುತ್ತಿದ್ದಂತೆಯೇ ಆಡಿಟೋರಿಯಂ‌ನ ಟೆಕ್ನಿಷಿಯನ್ ಬಂದು ರಿಪೇರಿ ಮಾಡಿದಂತೆ ಮಾಡುವುದು, ಮತ್ತೆ ಕೆಡುವುದೂ ಹೀಗೆ ಒಂದೆರಡು ಬಾರಿ ನಡೆದು ಕೊನೆಗೆ ಸ್ಪೀಕರ್ ಸರಿ ಆಗುತ್ತದೆ, ಇಷ್ಟರಲ್ಲಿ ಭೈರವನ ಗತಿ ಭೈರವನಿಗೇ ಪ್ರೀತಿಯಾಗಿರುತ್ತದೆ! ಒಂದು ರೀತಿ - ರಸ್ತೆಯ ಒಂದು ಬದಿಯಲ್ಲಿ ಅಪಘಾತವಾದರೆ, ಅಪಘಾತಕ್ಕೆ ಯಾವುದೂ ಸಂಬಂಧವಿಲ್ಲದ ಮತ್ತೊಂದು ಕಡೆಯ ರಸ್ತೆಯಲ್ಲೂ ಟ್ಯಾಫಿಕ್ ಜಾಮ್ ಆಗುವ ಹಾಗೆ! ಇಂತಹ ಸ್ಪೀಕರ್ ದುರಸ್ತಿಯಾಗುತ್ತಿರುವ ಸಂದರ್ಭದಲ್ಲೋ, ಅಥವಾ ಎಲ್ಲೋ ನಡೆದ ಅಪಘಾತದ ಕಡೆಗೋ ಗಮನ ಕೊಡಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಇಂದ್ರಿಯಗಳೆಲ್ಲ ಆಕಡೆಗೇ ತಿರುಗುವ ಪರಿಗೆ ಏನೆಂದು ಹೇಳಲಿ?

ನನಗೆ ಇನ್ನೂ ಚೆನ್ನಾಗಿ ನೆನಪಿದೆ: ೨೦೦೦ ಸೆಪ್ಟೆಂಬರ್‌ರಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾವೆಲ್ಲ ಹೋಗಿದ್ದೆವು, ಶುಕ್ರವಾರ ಸಂಜೆಯೇ ನೋಂದಾವಣೆ ಹಾಗೂ ಬಾಯುಪಚಾರ, ಊಟ ಎಂಬಂತೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಎಲ್ಲರೂ ರಂಗುಗಳ ಪ್ರದರ್ಶನ ಮಾಡುತ್ತಿದ್ದರು. ಒಳಗೆ ಆಡಿಟೋರಿಯಂ‌ನಲ್ಲಿ ಬೆರಳೆಣಿಕೆಯಷ್ಟು ಜನರು ಕುಳಿತು ಅದ್ಯಾರೋ ಭಾರತದಿಂದ ಬಂದ ಪುಣ್ಯಾತ್ಮರ ಗಾನ ಸುಧೆಯನ್ನು ಸವಿಯುತ್ತಿದ್ದರು, ನಾನೂ ನೋಡೋಣವೆಂದು ಒಳಹೊಕ್ಕೆ, ಆಗ ಕೇಳಿದ 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾs' ಹಾಡು, ಮುಖ್ಯವಾಗಿ ಅದರ ರಾಗ ಇಂದಿಗೂ ನನ್ನನ್ನು ಕಾಡುತ್ತದೆ. ನನಗೆ ಹಿಂದೂಸ್ಥಾನೀ ಹೇಳಿಕೊಟ್ಟ ಮೇಷ್ಟ್ರು ನೆನಪಿಗೆ ಬರುತ್ತಾರೆ, ನನ್ನ ಪ್ರಕಾರ ಹಿಂದೂಸ್ಥಾನಿ ಹಾಡುವವರಿಗೆ ಇಹಪರದ ಗತ್ತಿಲ್ಲ, ಸೊತ್ತೂ ಇಲ್ಲ, ಸರಳೆ-ಜಂಟಿ ಎಂದು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜನ್ನು ಹೇಳಿಕೊಡದೇ 'ಈಜು ಮಗನೇ' ಎಂದು ಮಹಾ ಸಾಗರದಲ್ಲೇ ಬಿಸಾಡುವಂತೆ ತಲೆ ಮೇಲೆ ಕಟಿದು ದೊಡ್ಡ ರಾಗದಿಂದಲೇ ಆರಂಭಿಸುವ ಎಷ್ಟೋ ಕಥೆಗಳನ್ನು ಕೇಳಿದ್ದೇನೆ. ನಮ್ಮ ಮೇಷ್ಟ್ರು ಕೊಳೆಯಾದ ಬನಿಯನ್ ಮತ್ತು ಪಂಚೆ ಧರಿಸಿಯೇ ಹಾಡುತ್ತಿದ್ದರು, ರಾಗಗಳು ಅವರ ಜೀವಾಳವಾಗಿದ್ದವು, ಆದರೆ ನಾನು ಕೇಳಿದ ಕರ್ನಾಟಕ ಸಂಗೀತದ ಗುಂಗಿನ ಹಿಂದೆ ಗರಿ-ಗರಿಯಾದ ರೇಶಿಮೆ ಬಟ್ಟೆ, ಹಾಗೂ ಕೈಯಲ್ಲಿನ ಉಂಗುರಗಳ ಪ್ರದರ್ಶನವೂ ಉಳಿದು ನನ್ನನ್ನು ಅಲ್ಪನನ್ನಾಗಿ ಮಾಡುತ್ತವೆ. ಹಾಗೆಯೇ ಇಲ್ಲಿ ನಾನು ಕೇಳಬಹುದಾದ ಭಾರತೀಯ ಸಂಗೀತವನ್ನು ಹಾಡುವವರ ಹಿಂದಿರುವ ವೈಭವದ ಬೆಳಕಿನಲ್ಲಿ ನನ್ನ ಕಣ್ಣು ಕುರುಡಾಗುತ್ತದೆ, ಮನಸ್ಸು ತೆರೆದುಕೊಳ್ಳುವುದಿಲ್ಲ. ಮನಸ್ಸು, ಸಾಧನೆ, ಸಿದ್ಧಿ ಇವುಗಳಿಗೆ ಹತ್ತಿರವಾದ ಸಂಗೀತಕ್ಕೆ ನಮ್ಮ ಜೋಕಿ-ಶೋಕಿಯ ಮೆರುಗೇಕೆ? ಛೇ, ದಸರಾ ಸಮಯದಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ಹಮ್ಮೂ ಬಿಮ್ಮೂ ಒಂದೂ ಇಲ್ಲದ ಹಲವಾರು ಸಂಜೆಗಳ ರಸದೂಟ ಸವಿಯುವ ಅವಕಾಶ ಮತ್ತೊಮ್ಮೆ ಸಿಗಬಾರದೇ?

***

ಈ ಹಾಡಿನಿಂದ ಏನು ಅನುಕೂಲವಾಗದಿದ್ದರೂ ಮುಂಜಾನೆ ನಾಲ್ಕೂವರೆಗೆಲ್ಲ ಏಳುವ ನನ್ನ ಮಗಳಂತೂ ಈ ಹಾಡನ್ನು ಕೇಳುತ್ತಲೇ ಪುನಃ ನಿದ್ದೆಗೆ ಶರಣು ಹೋಗುತ್ತಾಳೆ, ಹಾಡಿದ್ದನ್ನೇ ಹಾಡುವ ಕರ್ಮ ನನ್ನದು, ನಿದ್ರೆಯ ಮೋಡಿಗಾದರೂ ಜಾರಿ ನನ್ನ ಹಾಡನ್ನು ಕೇಳದಿರುವ ಮರ್ಮ ಅವಳದು!

2 comments:

Sarathy said...

ಥಳುಕು ಉಡುಗೆಗಳನ್ನು ಹಾಕಿಕೊಂಡು ಗಾಯನ ಮಾಡುವುದು ಈಗಿನ ಭಾರತೀಯ ಸಂಗೀತಗಾರರ ಫ್ಯಾಷನ್. ಆದರೆ ಫ್ಯಾಷನ್ ಪ್ರೇಮಿ ಸಂಗೀತಗಾರರಿಗೂ ಅವರ ಸಂಗೀತ ಸಾಧನೆಗೂ ತಳುಕು ಹಾಕುವುದು ಅಪ್ರಸ್ತುತ ಎಂದೆನಿಸುತ್ತದೆ.

Enigma said...

:)