Tuesday, April 18, 2006

ಮೊದ್ಲು ನೆಟ್ಟಗ್ ಕನ್ನಡಾ ಮಾತಾಡೋದ್ ಕಲಿ...

ನಾನು ಅತ್ಯಂತ ಜಂಭದಿಂದ ಹೇಳಿಕೊಳ್ಳುವ ಮಾತೆಂದರೆ 'ನನಗೆ ಕನ್ನಡ ಚೆನ್ನಾಗಿ ಬರುತ್ತೇ' ಎಂಬುದಾಗಿ. ನಮ್ಮೂರಲ್ಲಿದ್ದಾಗ ಈ ರೀತಿ ಹೇಳಿದ್ರೆ ಅದಕ್ಯಾವ ಅರ್ಥವೂ ಇರ್‍ತಿರ್ಲಿಲ್ಲ, ಇರಲ್ಲ, ಆದರೆ ಮುಂದೆ ದೇಶ, ವಿದೇಶ ಸುತ್ತು ಹಾಕೋಕೆ ಶುರು ಮಾಡಿದ ಮೇಲೆ ಇಂಥಾ ಅರ್ಥಹೀನ ವಾಕ್ಯಕ್ಕೂ ಒಂದು ಅರ್ಥ ಅಂತ ತಾನಾಗೇ ಏನೋ ಹುಟ್ಟಿಕೊಂಡಿತು. ('ಕನ್ನಡಾ ಬರುತ್ತಾ' ಎಂದು ಕೇಳಿದವರಿಗೆಲ್ಲಾ 'ಎಲ್ಲಿಂದ?' ಎಂದು ಪ್ರಶ್ನೆ ಹಾಕಿದರೆ ಸ್ವಾರಸ್ಯವಾಗಿರುತ್ತೆ, ಅಥವಾ ನಮ್ಮ ಕನ್ನಡವೂ ಅಲ್ಲಿಂದ ಇಲ್ಲಿಂದ ನನ್ನ ಹಾಗೆ ವಲಸೆ ಬಂದಿದ್ದರೆ ಎಷ್ಟೋ ಚೆನ್ನಾಗಿತ್ತು - ಇನ್ನು 'ಕನ್ನಾಡ್' ಎಂದು ಹೇಳೋ ಉತ್ತರ ಭಾರತದವರಿಗೆಲ್ಲಾ ನಾನು 'ಕನ್ನಾಡ್' ಅಲ್ಲಾ 'ಕನ್ನಡ' ಎಂದು ಹೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ, ನೀವೂ ಹಾಗೆ ಮಾಡಿ).

ಹಿಂದೆ ಯಾವುದೋ ಒಂದು ಆನ್‌ಲೈನ್ ಮ್ಯಾಗಜೀನ್‌ಗೆ ಪ್ರತಿಕ್ರಿಯಿಸಿ ಒಂದು ಪತ್ರವನ್ನು ಕನ್ನಡದಲ್ಲಿ ಬರೆದಾಗ ಅದಕ್ಕುತ್ತರವಾಗಿ ನನಗೆ ಬಂದ ಪತ್ರದಲ್ಲಿ 'ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು' ಎಂದು ಬರೆದಿದ್ದರು. ನಾನು ಆ ಮಾತನ್ನು ಬಹಳ ವಿರೋಧಿಸಿದ್ದೆ: ನನ್ನ ಕನ್ನಡದ ಮೇಲೆ ನನಗೆ ಮಮತೆ, ಪ್ರೀತಿ, ಅಭಿಮಾನಗಳು ನಿಜವಾಗಿಯೂ ಇವೆಯೇ? ಕನ್ನಡ ಅನ್ನೋದು ನನ್ನ ತಾಯ್‌ನುಡಿ, ಅದು ನನ್ನ ಒಂದು ಭಾಗ (ಅವಿಭಾಜ್ಯ ಎಂದರೂ ತಪ್ಪಿಲ್ಲ), ಒಂದು ರೀತಿ ನನ್ನ ಮುಂಡಕ್ಕೆ ಅಂಟಿಕೊಂಡಿರೋ ರುಂಡದಂತೆ...ಅದರಲ್ಲಿ ಅಭಿಮಾನ ಪಟ್ಟುಕೊಳ್ಳುವುದೇನೂ ಇಲ್ಲ - ನನ್ನ ಮುಂಡದ ಮೇಲೆ ನನ್ನ ರುಂಡವಿದೆ ಎಂದು ಅಭಿಮಾನಪಟ್ಟುಕೊಳ್ಳಲಾಗುವುದೇ? ಕನ್ನಡೇತರರ ಕನ್ನಡ ಅಭಿಮಾನವನ್ನು ನಿಜವಾಗಿಯೂ ಕೊಂಡಾಡ ಬೇಕು, ಅವರು ಕಿಟ್ಟೆಲ್ ಅಂತಹ ಮಹಾತ್ಮರಿರಬಹುದು, ಅಥವಾ ನಾನು ಹೇಳಿದೆನೆಂದು ನನ್ನ ಮಾತಿಗೆ ಬೆಲೆ ಕೊಟ್ಟು ಕನ್ನಡ ಆಡಿಯೋ ಸಿ.ಡಿ. ಒಂದನ್ನು ಕೊಂಡ ನನ್ನ ಅಮೇರಿಕನ್ ಸ್ನೇಹಿತನಿರಬಹುದು, ಅಥವಾ 'ರವಿ ವರ್ಮನಾ ಕುಂಚದಾ ಕಲೆ'ಯನ್ನು ನನ್ನಿಂದ ದೇವನಾಗರಿಯಲ್ಲಿ ಬರೆಸಿಕೊಂಡು ಹಾಡುವ ತಮಿಳು ಮಿತ್ರ ರಾಮಮೂರ್ತಿ ಇರಬಹುದು. ನನ್ನ ವಾದವನ್ನು ಆ ಆನ್‌ಲೈನ್ ಪತ್ರಿಕೆಯ ಸಂಪಾದಕರೂ ಒಪ್ಪಿಕೊಂಡಿದ್ದರು - ನನ್ನ ಪ್ರಕಾರ, ಕನ್ನಡಿಗನೊಬ್ಬನಿಗೆ ಕನ್ನಡದ ಬಗ್ಗೆ ಅಭಿಮಾನವಿದೆ ಎಂದರೆ ಒಂದು ರೀತಿ ಅವಮಾನ ಮಾಡಿದ ಹಾಗೆಯೇ.

***

ಹೀಗೆ ನಾನು ನನ್ನ ಕನ್ನಡ ಸಾಮರ್ಥ್ಯದ ಬಗ್ಗೆ ಬೀಗುತ್ತಿರುವಾಗ ನಾನು ದಿನ ನಿತ್ಯ ಬಳಸುವ/ಕೇಳುವ ಹಲವಾರು ವಾಕ್ಯ/ಪದಗಳನ್ನು revisit ಮಾಡುವ ಅವಕಾಶಗಳು ಬಂದವು:
೧) ನಾನು ಹಾಡನ್ನು ಹೇಳುತ್ತೇನೆ ಅಥವಾ ಒಂದು ಹಾಡ್ ಹೇಳು.
೨) ನನ್ನನ್ನು ನಿದ್ದೆಯಿಂದ ಎಬ್ಬಿಸು.
೩) ಇವತ್ತು ಹುರುಳೀಕಾಯಿ ಪಲ್ಯ ಮಾಡೋಣ.
೪) ಒಲೇ ಮೇಲೆ ಅನ್ನಾ ಇಡು.
೫) ಅವ್ನು ಮ್ಯಾಲಿಂದ ಇಳಿಯಾಕ್ ಹತ್ಯಾನೆ.
೬) ಅದು ತುಂಬಾ ವಜ್ಜ್ ಐತಿ (ಇದೆ).
೭) ಏನಕ್ಕೇ?
೮) 'ಕಾ ಕ ಕೀ ಕಿ' ಅಲ್ಲ!
೯) ಮಹಾಪ್ರಾಣವೇ ಮುಖ್ಯ ಪ್ರಾಣ!
೧೦) ಕನ್ನಡದಲ್ಲಿ ಬೇಕಾದಷ್ಟು ಪದಗಳಿಲ್ಲ.

ಈಗ ಮೇಲಿನವುಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತಾ ಬರೋಣ (ನೆನಪಿರಲಿ, ನೂರು ಜನ ಬಳಸಿದ ಮಾತ್ರಕ್ಕೆ ಅದು ಸರಿಯಾದ ಬಳಕೆ ಅಲ್ಲ, acceptable ಇರಬಹುದು - ಒಂದು ರೀತಿ ಅಮೇರಿಕದಲ್ಲಿ ಕೆಲವರು I didn't do nothing! ಅನ್ನೋ ಹಾಗೆ).

೧) ಹಾಡನ್ನು ಹಾಡಬೇಕಾಗುತ್ತದೆ, 'ನಾನು ಹಾಡನ್ನು ಹಾಡುತ್ತೇನೆ' ಅಥವಾ 'ಒಂದು ಹಾಡ್ ಹಾಡು' ಅನ್ನೋದು ಸರಿಯಾದ ಬಳಕೆಯಲ್ಲವೇ?

೨) ಎಬ್ಬಿಸು ಅನ್ನುವುದರ ಬದಲಿಗೆ ಏಳಿಸು, ಎದ್ದೇಳಿಸು ಎಂದರೆ ಹೇಗೆ?

೩) ಈ ಬೆಂಗಳೂರಿನವರಿಗೆ ಅದು ಹೇಗೆ ಈ ಹುರುಳೀಕಾಯಿ ತಗುಲಿಕೊಂಡಿತೋ ಗೊತ್ತಿಲ್ಲ, ನಾನು ತಿಳಿದಂತೆ ಹುರುಳಿ ನವಧಾನ್ಯಗಳಲ್ಲಿ ಒಂದು, ತೊಗರಿ ಕಾಳುಗಳನ್ನು ಹಿಡಿದುಕೊಂಡಿರೋ ತೊಗರಿಕಾಯಿಯ ಹಾಗೆ, ಈ ಹುರುಳೀಕಾಯಿಯೂ ಹುರುಳಿಯನ್ನು ಹಿಡಿದುಕೊಂಡಿರಬೇಕಲ್ಲವೇ? ನಮ್ಮ ಊರುಗಳಲ್ಲಿ ಬೀನ್ಸ್‌ಅನ್ನು (string beans) ಬೀನ್ಸ್ ಎಂದೇ ಹೇಳುತ್ತೇವೆ. ಉದಾಹರಣೆಗೆ ಭಾರತದಲ್ಲದ ಟೊಮೇಟೋ‌ವನ್ನು ಟೊಮೇಟೋ ಎಂದೇ ಹೇಳುವುದಿಲ್ಲವೇ ಹಾಗೆ. ನಾನು ಬೆಂಗಳೂರಿನವರು ಹುರುಳೀಕಾಯಿ ಅಂದಾಗಲೆಲ್ಲ ಅವರಿಗೆ ಈ ಬಗ್ಗೆ ಕೇಳಿದರೆ ಯಾರಿಗೂ ಈ ಬೆಂಗಳೂರಿನ 'ಹುರುಳೀಕಾಯಿ'ಯ ಮೂಲ ಗೊತ್ತಿಲ್ಲ, ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ.

೪) ಒಲೇ ಮೇಲೆ ಅನ್ನಕ್ಕಿಡು ಅನ್ನೋದು ಸರಿಯಾದ ಬಳಕೆ - 'ಇಲ್ಲವೆಂದರೆ ಏಕದಂತನು ದಂತ ಮುರಿದುಕೊಂಡಂತೆ', 'ಕೃಷ್ಣನು ದಂತ ವಕ್ರನ ಹಲ್ಲು ಮುರಿದಂತೆ' ಅಪಹಾಸ್ಯವಾಗುತ್ತದೆ.

೫) ಇಂಗ್ಲೀಷ್‌ನಲ್ಲಿ Present Continuous Tense ನಲ್ಲಿ He is going to come ಎಂದಂತೆ 'ಅವ್ನು ಮೇಲಿಂದ ಇಳಿಯಾಕ್ ಹತ್ಯಾನೆ' ಅನ್ನೋದು ಸರಿಯಾದ ಬಳಕೆಯೇ, ಅದರಲ್ಲಿ ಹಾಸ್ಯವೇನೂ ಇಲ್ಲ, ಹೋದವನು ಬರುವುದು ಎಷ್ಟು ಸಹಜವೋ, ಮೇಲೆ ಹತ್ತಿದವನು ಇಳಿಯೋದೂ ಅಷ್ಟೇ ಸಹಜ! (ನನ್ನ ಉತ್ತರ ಕರ್ನಾಟಕದ ಮಿತ್ರರಿಗೆ ಅವರನ್ನು ದಕ್ಷಿಣದವರು 'ಇಳೀಲಿಕ್ಕೆ ಹತ್ಯಾನೆ...' ಎಂದು ಅಪಹಾಸ್ಯ ಮಾಡಿದಾಗಲೆಲ್ಲ ಉತ್ತರಿಸುವುದಕ್ಕೆ ಅಸ್ತ್ರವೊಂದು ಸಿಕ್ಕಿರಬೇಕು - 'going to come' ಅನ್ನು ಒಪ್ಪಿಕೊಂಡ ನಮಗೆ 'ಇಳೀಲಿಕ್ಕೆ ಹತ್ಯಾನೆ' ಅನ್ನೋದನ್ನ ಒಪ್ಪಿಕೊಳ್ಳೋದಕ್ಕೆ ಏಕೆ ಕಷ್ಟವಾಗುತ್ತೋ?)

೬) ಒಂದು ಭಾಷೆ ಸುಂದರವಾಗೋದು ಅನ್ಯ ಭಾಷಾ ಪದಗಳನ್ನು ಬಳಸಿದಾಗಲೇ ಎಂದು ನಾನೇನು ದೊಡ್ಡ ಜಾಣ್ಣುಡಿಯನ್ನು ಬರೆಯಲಿಕ್ಕೆ ಹೊರಟಿಲ್ಲ, ಆದರೂ ನಮ್ಮ ಪರಂಪರೆಯಲ್ಲಿ ಅನ್ಯ ಭಾಷಾ ಪದಗಳ ಬಳಕೆ ಮಿಳಿತವಾಗಿದೆ. ಮರಾಠಿ ಅಥವಾ ಹಿಂದೀ ಮೂಲದ 'ವಜನ್' ಅನ್ನೋ ಪದ ನಮ್ಮ ಕನ್ನಡದಲ್ಲಿ 'ವಜೆ', 'ವಜ್ಜಿ', 'ವಜ್' ಮುಂತಾದ ರೂಪ ಪಡೆದಿರಲಿಕ್ಕೂ ಸಾಕು - 'ವಜ್ಜಿ' ಅನ್ನೋ ಪದದಲ್ಲಿ 'ಜಿ' ಒತ್ತು ಇದೇ ನೋಡಿ, ಅದಕ್ಕೆ ಎಷ್ಟು ಒತ್ತು ಕೊಡುತ್ತೀರೋ ಅಷ್ಟು 'ಭಾರ'ದ ಕಲ್ಪನೆ ಮೂಡಲಿಕ್ಕೂ ಸಾಕು!

೭) ಈ 'ಏನಕ್ಕೆ' ಅನ್ನೋ ಪದ ಎಲ್ಲಿಂದ ಬಂತೋ ಗೊತ್ತಿಲ್ಲ, ನನ್ನ ಪ್ರಕಾರ ಕನ್ನಡದಲ್ಲಿ ಆ ಪದವಿಲ್ಲ - ದಯವಿಟ್ಟು ಇನ್ನಾದರೂ 'ಏನಕ್ಕೇ' ಎನ್ನಬೇಡಿ.

೮) ನಮ್ಮ ಕನ್ನಡ ಕಾಗುಣಿತ ಶುರುವಾಗೋದು 'ಕ' ಇಂದ, 'ಕಾ' ಇಂದ ಅಲ್ಲ, 'ಕ ಕಾ ಕಿ ಕೀ' ಅನ್ನೋದು ಸರಿ ಅಲ್ಲವೇ? ಆದ್ರೆ, ಇನ್ನೂ ಎಷ್ಟೋ ಜನ 'ಕಾಕ ಕೀಕಿ' ಅನ್ನೋದನ್ನ ನಾನು ಕೇಳಿದ್ದೇನೆ.

೯) ಸಂಸ್ಕೃತವನ್ನು ಬಲವಾಗಿ ಆಧರಿಸಿದ್ದರಿಂದಲೋ ಏನೋ ಅಲ್ಪಪ್ರಾಣ ಮಹಾಪ್ರಾಣ ಅನ್ನೋದು ನಮ್ಮ ಭಾಷೆ ಇಷ್ಟೊಂದು ವೈವಿಧ್ಯಮಯವಾಗಿ, ವಿಶೇಷವಾಗಿರೋ ಕಾರಣಗಳಲ್ಲೊಂದು. ನಾವು ಮಾತನಾಡುವಾಗ ಆ ಬಗ್ಗೆ ಎಚ್ಚರವಹಿಸದಿದ್ದರೆ ಕೇಳುಗರಿಗೆ ರುಚಿಸದು, ನಮ್ಮ ವ್ಯಂಜನ ಸಮೂಹ ಎಷ್ಟೊಂದು ವೈಜ್ಞಾನಿಕವಾಗಿ ನಿರ್ಮಿತವಾಗಿದೆ ಅನ್ನೋದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ - ನೀವು 'ಕ ಖ ಗ ಘ ಙ' ಇಂದ ಶುರು ಮಾಡಿ 'ಚ', 'ಟ', 'ತ', 'ಪ' ವನ್ನು ಗಟ್ಟಿಯಾಗಿ (ನಿಮಗಷ್ಟೇ ಕೇಳುವಂತೆ) ಹೇಳಿಕೊಂಡು ಬನ್ನಿ - ಕಿರು ನಾಲಿಗೆಯ ಅಡಿಯಲ್ಲೆಲ್ಲೋ ಆರಂಭವಾಗುವ 'ಕ'ಕಾರ, ನಾಲಿಗೆಯ ಮೇಲೆ 'ಚ'ಕಾರ ನಲಿದು, ನಾಲಿಗೆಯ ತುದಿಯಲ್ಲಿ 'ಟ'ಕಾರ ಬಂದು, ನಾಲಿಗೆಯ ತುದಿ ಹಾಗೂ ಒಸಡು ಕೂಡುವಲ್ಲಿ 'ತ'ಕಾರ ಬಂದು ಮುಂದೆ ತುಟಿಗಳಲ್ಲಿ 'ಪ'ಕಾರ ಮುಕ್ತಾಯವಾಗುತ್ತದೆ!

ಇಂಥಹ ಸುಂದರ ಸರಣಿಯನ್ನು ನಿಮಗೆ ಹೇಗೆ ಬೇಕೋ ಹಾಗೆ ಮಾಡಿಕೊಂಡು, ಇರುವ ೫೨ ಅಕ್ಷರಗಳನ್ನು ಮನಸಾ ಇಚ್ಛೆ ಹಿಂಸಿಸಿ ನಮ್ಮ ವರ್ಣಮಾಲೆಯಲ್ಲಿ ಬರಿ '೨೦' ಅಕ್ಷರಗಳಿವೆ ಅನ್ನೋದರಲ್ಲಿ ಯಾವ ದೊಡ್ಡತನವಿದೆ ನೀವೇ ಹೇಳಿ.

ನಾನು ಮದ್ರಾಸ್‌ನಲ್ಲಿದ್ದಾಗ (ನನ್ನ ಸಹೃದಯೀ ತಮಿಳು ಸ್ನೇಹಿತರಿಗೆ) ಈ ಮಾತನ್ನು ಪದೇ-ಪದೇ ಹೇಳ್ತಿದ್ದೆ: 'ಯಾವ ಭಾಷೆಯಲ್ಲಿ ನನ್ನ ಪೂರ್ಣ ಹೆಸರನ್ನು, ನನ್ನ ದೇಶದ ಹೆಸರನ್ನು, ನಮ್ಮ ಊರುಗಳ ಹೆಸರನ್ನು ಬರೆದು ಉಚ್ಚರಿಸಲಾಗದೋ ಅಂತಹ ಭಾಷೆಯನ್ನು ನಾನು ಕಲಿಯುವುದಿಲ್ಲ' ಎಂಬುದಾಗಿ. ಅವರು ಅದಕ್ಕೆ ಯಾವ ವಿರೋಧವನ್ನೂ ತೋರುತ್ತಿರಲಿಲ್ಲ (ಅದಕ್ಕೇ ಸಹೃದಯಿಗಳು ಎಂದದ್ದು!) - ಇಲ್ಲವೆಂದಾದರೇ ನೀವೇ ಯೋಚಿಸಿ, ಬರೆದಾಗ 'ಪರೋಠಾ'ಕ್ಕೂ 'ಬರೋಡಾ'ಕ್ಕೂ ವ್ಯತ್ಯಾಸವಿರಲೇಬೇಕಲ್ಲವೇ?

೧೦) ಹೌದು, ನಮ್ಮ ಕನ್ನಡದಲ್ಲಿ (ನಮಗೆ) ಬೇಕಾದಷ್ಟು ಪದಗಳಿವೆ. ಒಂದು ಭಾಷೆಯನ್ನು ಹಿಂದಿನ ತಲೆಮಾರಿನಿಂದ ಪಡೆದು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅದು ನಮ್ಮ ಕರ್ತವ್ಯ ಕೂಡಾ. ಈ ತಲೆಮಾರಿನ ಆಸ್ಥಿ ಸಮಯಕ್ಕೆ ತಕ್ಕಂತೆ ಬೆಳೆಯಬೇಕು, ಬೆಳೆಯುತ್ತೆ. ನಿಮಗೆ ಪದಗಳು ಗೊತ್ತಿಲ್ಲವೆಂದ ಮಾತ್ರಕ್ಕೆ ಅದು ನಿಮ್ಮ limitation ನ್ನೇ ವಿನಾ ಭಾಷೆಯ short coming ಅಲ್ಲ. ಪ್ರಪಂಚದಲ್ಲಿ ಜೀವ ಕುಲದ ಹಲವು ಸಂತತಿಗಳು ನಾಶವಾಗುವಂತೆ, ತಲೆಮಾರುಗಳು ತಮ್ಮ-ತಮ್ಮ ಭವಿತವ್ಯದ ಕರ್ತವ್ಯದಿಂದ ದೂರ ಸರಿದಂತೆ, ಭಾಷೆಯೂ ನಶಿಸುತ್ತದೆ. ಆದ್ದರಿಂದಲೇ ನಮ್ಮ ಭಾಷೆಯನ್ನು ಬಳಸ ಬೇಕು, ಬೆಳೆಸಬೇಕು. ಈ ಸತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳದೇ ಹೋದರೆ ಮುಂದಿನ ತಲೆಮಾರಿಗೆ ನಾವು ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡಿದಂತೆ.

***

ಹೀಗೆ ನಿಮ್ಮ ಅಂತೈರ್ಯವನ್ನು ಕೆಣಕಿದೆ ಅಂದುಕೊಳ್ಳಬೇಡಿ, ನಾನೇನು 'ಗಂಗಾಳಿಕ್ಕಿ ಉಣ್ಣಾಕ್ ಬಡಸ್ ತಾಯೇ' ಎಂದು ಅನ್ನಿ ಅಂತ ಹೇಳ್ತಾ ಇಲ್ಲ, ಇರೋದರಲ್ಲೇ ಸ್ವಲ್ಪ ಸ್ವಚ್ಛ ಕನ್ನಡ ಮಾತಾಡೋಣ ಅಂತ ಹೇಳ್ದೆ ಅಷ್ಟೆ. ನನಗ್ ಗೊತ್ತು ಸಮಯದ ಹಿಂದೆ ಬಿದ್ದು ನಾನಿಲ್ಲಿ ಬರೆಯೋವಾಗಲೇ ಹಲವಾರು ತಪ್ಪುಗಳಾಗ್ತಾವೆ ಅಂತ ಹಾಗೂ Microsoft ನ ತುಂಗಾ bugಗ್ಗಡವಾಗಿರೋದ್ರಿಂದಾನೂ ಕೆಲವೊಂದು ತಪ್ಪುಗಳಾಗ್ತಿವೆ ಅಂತ, ಅವರು ಅದನ್ನ ಸರಿ ಪಡಿಸೋವರೆಗೆ ನಾನು ಬರೆದದ್ದು ಸರಿಯಾಗಿ ಕಾಣಬೇಕೂ ಅಂದ್ರೆ 'ಮೂಲ' ಅನ್ನೋದನ್ನ 'mUಲ' ಅಂತ ಇಂಗ್ಲೀಷ್‍ನಲ್ಲೇ ಬರೀಬೇಕಾಗುತ್ತೆ! ನನಗೆ ತೋಚಿದ ತಪ್ಪುಗಳನ್ನ ನಾನು ತಿದ್ದ್‌ತಾ ಬರ್ತೀನಿ, ಅಕ್ಷರ ಸ್ಖಾಲಿತ್ಯ ಅನ್ನೋದು ಎಂತೋರನ್ನೂ ಬಿಟ್ಟಿಲ್ಲ ಇನ್ನು ನನ್ನನ್ನು ಬಿಟ್ಟೀತೆ?

ಕನ್ನಡದ ಬಗ್ಗೆ ಕನ್ನಡದಲ್ಲಿ ಬರೆದು, ಅಲ್ಪಾ-ಸ್ವಲ್ಪ ಓದುವ ಕನ್ನಡಿಗರಷ್ಟನ್ನೇ ಮುಟ್ಟುತ್ತೇವಲ್ಲ ಅನ್ನೋದು ನನ್ನ ಇತ್ತೀಚಿನ ಕೊರಗಿನೊಳಗೊಂದು. ನಮ್ಮಲ್ಲಿ ಕನ್ನಡವನ್ನು ಕುರಿತು, ಕನ್ನಡದ ಬಗ್ಗೆ ಪ್ರಕಟವಾದ ಎಲ್ಲ ಹೊತ್ತಿಗೆ, ರೂಪಕ, ಸಾಮಗ್ರಿಗಳನ್ನೂ ಒಂದು ವ್ಯವಸ್ಥಿತ ನೆಲೆಗಟ್ಟಿನ ಆಡಿಯಲ್ಲಿ ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದ ಮಾಡುವ/ಮಾಡಿಸುವ ಆಸಕ್ತಿ ಇತ್ತೀಚೆಗೆ ಬಲವಾಗಿದೆ. ಕನ್ನಡಮ್ಮ ನನಗೆ ಇನ್ನಷ್ಟು ಬಲವನ್ನು ಕೊಡಲಿ.

3 comments:

Anonymous said...

"ಅಂತರಂಗ"ಕ್ಕೆ ಆಗಾಗ ಭೇಟಿ ಕೊಡುತ್ತಿದ್ದೇನೆ. ಚೆನ್ನಾಗಿ ಬರೆಯುತ್ತಿದ್ದೀರಿ. ಅಂತರಂಗದಲ್ಲಿ ನಿಮ್ಮ ಹೆಸರನ್ನು ಬಹಿರಂಗಗೊಳಿಸಿಕೊಂಡಿದ್ದರೆ ಊಹೆಗಳನ್ನು ಮಾಡಿಕೊಳ್ಳುವುದು ತಪ್ಪುತ್ತಿತ್ತು :)

Satish said...

ಪ್ರಿಯ anonymous,

ಊರಿಗೆ ಬಂದವಳು ನೀರಿಗೆ ಬಾರಳೇ ಎನ್ನುವಂತೆ ಇವತ್ತಲ್ಲ ನಾಳೆ ಬಹಿರಂಗಗೊಂಡೇಗೊಳ್ಳುತ್ತೆ, ನೀವು ಹಾಗಾದಾಗಲೂ "ಅಂತರಂಗಕ್ಕೆ" ಭೇಟಿಕೊಡುತ್ತೀರಿ ಎಂಬ ನಂಬಿಕೆ ನನ್ನದು!

ಇತಿ,
ನಿಮ್ಮವ

Ravi Hamsa said...

ಲೇಖನ ಅದ್ಭುತವಾಗಿದೆ ಇಷ್ವೆಲ್ಲಾ ಅಧ್ಯಯನ ಮಾಡಿ ಬರೆದ , ಅಥವ ಗಮನಿಸಿ ಬರೆದ ನಿಮ್ಮ ತಾಳ್ಮೆಯನ್ನು ಮೆಚ್ಚದೆ ವಿಧಿಯಿಲ್ಲ. ಹೀಗೇ ಮು0ದುವರೆಸಿ.

ಧನ್ಯವಾದಗಳು