Sunday, April 30, 2006

Susquehanna ಎಂಬ ನದಿ

ನನ್ನ ಸ್ನೇಹಿತರ ಜೊತೆ ನಾನು ತಮಾಷೆ ಮಾಡುವುದಿದೆ, 'I am an Indian but not a native American!' ಎಂದು.

ಆದರೆ ಇಲ್ಲಿನ ನೇಟಿವ್ ಅಮೇರಿಕನ್ನರ ಹಾಗೆ ನಮಗಿರೋ ಒಂದು ಸ್ವಭಾವವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನ ನಾವು ಭಾರತೀಯರು ಗೌರವಿಸೋದು. ನಾನು ಯಾರ ಜೊತೆಯಲ್ಲೇ ಕಾರಿನಲ್ಲಿ ಹೋಗುತ್ತಿರಲಿ, ಅವರೆಲ್ಲರೂ ದಾರಿಯಲ್ಲಿ ಬರುವ ನದಿ, creek ಮುಂತಾದವುಗಳನ್ನು ಗುರುತಿಸಿ 'ಓಹ್' ಎನ್ನುವ ಉದ್ಗಾರ ತೆಗೆಯುವುದನ್ನು ನೋಡಿದ್ದೇನೆ. ಕೆಲವೊಮ್ಮೆ, 'ಇದೇನಾ ಪೋಟೋಮ್ಯಾಕ್ ನದಿ', ಅಥವಾ 'ಈ ನದಿ ಎಷ್ಟೊಂದು ಚೆನ್ನಾಗಿದೆ!' ಅಥವಾ 'ತುಂಬಾ ಅಗಲವಾಗಿದೆಯಪ್ಪಾ!' ಅನ್ನೋ ಪ್ರಶಂಸೆಯ ಮಾತುಗಳು ಭಾರತದಿಂದ ಹೊಸದಾಗಿ ಬಂದಿರುವವರಿಂದ ಹಿಡಿದು, ಇಲ್ಲಿ ಎಷ್ಟೋ ವರ್ಷಗಳಿಂದ ಇದ್ದವರಿಂದಲೂ ಹೊರಬರುತ್ತೆ. 'ನಾವು ಪ್ರಕೃತಿಯ ಆರಾಧಕರು' ಅನ್ನೋದು ನನಗೆ ಹೆಮ್ಮೆಯ ವಿಷಯ.

***



ವಾಷಿಂಗ್‌ಟನ್ ಡಿಸಿ ಹಾಗೂ ನ್ಯೂ ಯಾರ್ಕ್ ಸಿಟಿಗಳ ಮಧ್ಯೆ ಪ್ರಯಾಣ ಮಾಡಿದವರಿಗೆ Susquehannaಳ ಪರಿಚಯ ಖಂಡಿತವಾಗಿ ಆಗಿರುತ್ತೆ. ಅಮೇರಿಕದ ಈಸ್ಟ್ ಕೋಸ್ಟ್‌ನಲ್ಲಿ ಅತ್ಯಂತ ಉದ್ದವಾದ ನದಿಗಳಲ್ಲಿ ಇದೂ ಒಂದು, ಸುಮಾರು ೪೪೦ ಮೈಲು ಹರಿಯುವ ಈ ನದಿಗೆ ಬಹಳಷ್ಟು ಐತಿಹಾಸಿಕ ಹಿನ್ನೆಲೆ ಇದೆ.

***

ಬಾಬ್ ಎರ್ಲಿಚ್ (Robert Ehrlich) ಮೇರಿಲ್ಯಾಂಡ್‌ನ ಗವರ್ನರ್ ಆದಮೇಲೆ ಸ್ಥಳೀಯ ಬ್ರಿಡ್ಜ್ ಹಾಗೂ ಟನಲ್‌ಗಳ ಟೋಲ್ ಹೆಚ್ಚು ಮಾಡಿದಾಗ ಅವನಿಗೆ ಹಿಡಿ ಶಾಪ ಹಾಕಿದವರಲ್ಲಿ ನಾನೂ ಒಬ್ಬ. ಬಾಲ್ಟಿಮೋರ್ ಟನಲ್‌ಗೆ ಒಂದು ಡಾಲರ್ ಇದ್ದುದ್ದನ್ನ ಎರಡು ಮಾಡಿದ, ನನ್ನ ಪ್ರೀತಿಯ ಸಸ್ಕ್ವೆಹಾನ್ನಾ ನದಿಗೆ ಕಟ್ಟಲಾದ ಸೇತುವೆಗಳ ಮೇಲೆ ಎರಡು ಅಥವಾ ಮೂರು ಡಾಲರ್ ಇದ್ದುದ್ದನ್ನ ಐದು ಡಾಲರ್‌ಗೆ ಹೆಚ್ಚಿಸಿ, ಈಸ್ಟ್ ಕೋಸ್ಟ್‌ನಲ್ಲೇ ಅತಿ ಹೆಚ್ಚು ಟೋಲ್ ಇರುವ ಬ್ರಿಜ್‌ಗಳಲ್ಲೊಂದನ್ನಾಗಿ ಮಾಡಿದ. ಯಾಕೆಂದರೆ ನ್ಯೂ ಯಾರ್ಕ್‌ಗೆ ಹೋಗೋವಾಗ ವಾಶಿಂಗ್ಟನ್ ಬ್ರಿಜ್‌ಗೆ ಕೇವಲ ಒಂದೇ ಮುಖವಾಗಿ ಆರು ಡಾಲರ್ ಕೊಟ್ಟರೆ ಇಲ್ಲಿ ಸಸ್ಕ್ವೆಹಾನ್ನಾಕ್ಕೆ ೯೫ ನಲ್ಲಿ ಹೋದಾಗ ಹೋಗಿ-ಬರುವಾಗ ಕೊಡುವ ಟೋಲ್ ಎಂಟು ಡಾಲರ್ ಆಗುತ್ತದೆ. ಆದರೆ ಎರ್ಲಿಚ್‌ಗೆ ಥ್ಯಾಂಕ್ಸ್ ಹೇಳಲೇ ಬೇಕು, ಏಕೆಂದರೆ ಅವನ ದೆಸೆಯಿಂದಾಗಿಯೇ ನಾನು ಸಸ್ಕ್ವೆಹಾನ್ನಾಳನ್ನು ಇನ್ನೂ ಹೆಚ್ಚು ತಿಳಿದುಕೊಳ್ಳುವಂತಾಗಿದ್ದು!



ನೂ ಯಾರ್ಕ್‌ನಿಂದ ವಾಶಿಂಗ್ಟನ್‌ಗೆ ಬರುವಾಗ ಡೆಲಾವೇರ್ ಸೇತುವೆ ದಾಟಿದ ನಂತರ ನಾನು ಎಲ್ಲರಂತೆ ೯೫ ನಲ್ಲಿ ಪ್ರಯಾಣ ಮುಂದುವರಿಸದೇ ಪಶ್ಚಿಮ ಮುಖಿ ರೂಟ್ ೪೦ ಅನ್ನು ಹಿಡಿಯುತ್ತೇನೆ. ಡೆಲಾವೇರ್‌ನ ತೆರಿಗೆ ಮುಕ್ತ ಅಂಗಡಿಗಳನ್ನು, ಹಾಗೂ ದಾರಿಯಲ್ಲಿ ಸಿಗುವ ಕೆಲವು ಉತ್ತಮ ರೆಸ್ಟೋರಂಟುಗಳನ್ನೋ ನೋಡಿಕೊಂಡು ಉದ್ದಾನುದ್ದ ರೂಟ್ ೪೦ರಲ್ಲಿ ಬರುತ್ತಲೇ ಮೇರಿಲ್ಯಾಂಡ್‌ನ ಸೆಸಿಲ್ ಕೌಂಟಿ ಸಿಗುತ್ತದೆ. ಇಲ್ಲಿಂದ ಸುಮಾರು ೨೦ ಮೈಲ್ ಪ್ರಯಾಣ ಮಾಡುತ್ತಿದ್ದಂತೆ Havre de Grace ಸಿಗುತ್ತೆ, ಹಾಗೇ ಮುಂದೆ ಹೋದರೆ ಅದೇ ಸಸ್ಕ್ವೆಹಾನ್ನಾಳ ಮೇಲೆ ಕಟ್ಟಿದ Hatem bridge ಸಿಗುತ್ತದೆ. ಇಲ್ಲಿ ಯಾವುದೇ ಟೋಲ್ ಕೊಡಬೇಕಾಗಿಲ್ಲ. ಈ ಸೇತುವೆ ದಾಟಿ ರೂಟ್ ೧೫೫ ರಲ್ಲಿ ಬಂದರೆ ಅದೇ ೯೫ ಮತ್ತೆ ಸಿಗುತ್ತೆ, ಮುಂದೆ ಬಾಲ್ಟಿಮೋರ್ ಸಿಗುವ ವರೆಗೆ ನೀವು ಯಾವುದೇ ಟೋಲ್ ಕೊಡಬೇಕಾಗಿಲ್ಲ. (ನ್ಯೂ ಜೆರ್ಸಿ ಹಾಗೂ ವಾಷಿಂಗ್ಟನ್ ನಡುವೆ ಕೇವಲ ಮೂರು ಅಥವಾ ಏಳು ಡಾಲರ್ ಟೋಲ್ ಕೊಟ್ಟು ಬಂದು ಹೋಗುವ ಮಾರ್ಗಗಳ ಅಗತ್ಯ ನಿಮಗಿದ್ದಲ್ಲಿ ಅವಶ್ಯವಾಗಿ ನನಗೆ ಬರೆಯಿರಿ, ನಾನು ನಿಮಗೆ ವಿವರಗಳನ್ನು ತಿಳಿಸಿ ಇ-ಮೇಲ್ ಕಳಿಸುತ್ತೇನೆ - again thanks to Ehrlich!). ಹೀಗೆ ಹಣ ಉಳಿಸುವುದಕ್ಕೋ ಅಥವಾ ಸಸ್ಕ್ವೆಹಾನ್ನಾಳ ಮೇಲಿನ ಪ್ರೀತಿಗೋ ಕಟ್ಟುಬಿದ್ದು ರೂಟ್ ೧ ರಲ್ಲಿ ಬರುವ Conowingo ಅಣೆಕಟ್ಟನ್ನೂ ನೋಡಿಕೊಂಡು ಬಂದಿದ್ದೇನೆ.

ನೀವು ಮಿಡ್-ಅಟ್ಲಾಂಟಿಕ್ ಪ್ರದೇಶದಲ್ಲಿದ್ದು ಸಸ್ಕ್ವೆಹಾನ್ನಾಳ ಹಲವಾರು ಪಾತ್ರಗಳನ್ನು ಹಾಗೂ ಸ್ಟೇಟ್ ಪಾರ್ಕ್‌ಗಳನ್ನೂ ನೋಡದೇ ಹೋದಲ್ಲಿ ಬಹಳ ಮಹತ್ವವಾದದನ್ನೇನೋ ಕಳೆದುಕೊಂಡಿದ್ದೀರೆಂದು ನಿಸ್ಸಂಶಯವಾಗಿ ಹೇಳಬಲ್ಲೆ.

***

ನನ್ನ ಸಹೋದ್ಯೋಗಿ ಎಡ್ ಕಾಲಿನ್ಸ್ ಮೀನು ಹಿಡಿಯುವುದರಲ್ಲಿ ನಿಸ್ಸೀಮ, ಅವನನ್ನು ಮಾತನಾಡಿಸಿದಾಗೆಲ್ಲ ಮೀನಿನ ಬಗ್ಗೆ ಕೇಳಿದರೆ ಅವನ ಕಣ್ಣುಗಳು ತಂತಾನೆ ಅಗಲವಾಗುತ್ತವೆ, ಕೆಲಸದಲ್ಲಿ ಎಷ್ಟೇ ವ್ಯಸ್ತನಾಗಿದ್ದರೂ ಮೀನು ಹಿಡಿಯುವುದರ ಬಗ್ಗೆ ಮಾತನಾಡಲು ಅವನಲ್ಲಿ ಸಮಯವಿರುತ್ತೆ! ಅವನು ಇಲ್ಲೇ Philadelphia ಏರಿಯಾದಲ್ಲಿ ಇರುತ್ತಾನಾದ್ದರಿಂದ ಸಸ್ಕ್ವೆಹಾನ್ನಾಳಿಗೂ ಹಲವಾರು ಬಾರಿ ಅಗತ್ಯವಾಗಿ ಭೇಟಿಕೊಟ್ಟಿದ್ದಾನೆ. ಅವನ ಜೊತೆ ಮಾತನಾಡಿದಾಗೆಲ್ಲ ನಾನೂ fishingಗೆ ಹೋಗಿದ್ದರೆ ಎಷ್ಟೊಂದು ಚೆನ್ನಿತ್ತು ಎಂದು ಅನ್ನಿಸಿದೆ.

ನಿಮಗೆ ಗೊತ್ತಿರೋ ಹಾಗೆ - ಫಿಷಿಂಗ್ ಅನ್ನೋದು ತಂದೆ ಮಗನಿಗೆ tricks of the trade ಹೇಳಿಕೊಡುವ, ಒಂದು ತಲೆಮಾರಿನ ಜಾಣತನವನ್ನು ಮತ್ತೊಂದು ತಲೆಮಾರಿಗೆ ದಾಟಿಸುವ ಒಂದು ಚೌಕಟ್ಟಾಗಿ ಇಲ್ಲಿ ನನಗೆ ಕಂಡಿದೆ. ನನಗೆ ಬಿಡುವಿದ್ದಾಗಲೆಲ್ಲ ಸಸ್ಕ್ವೆಹಾನ್ನಾ ನದಿಯ ಪಕ್ಕದ ಸ್ಟೇಟ್ ಪಾರ್ಕಿಗೆ ಹೊಗುತ್ತೇನೆ. ಅಲ್ಲಿ ಮೀನು ಹಿಡಿಯುವರನ್ನು ನಾನೇ ಮೈಮೇಲೆ ಬಿದ್ದು ಮಾತನಾಡಿಸುತ್ತೇನೆ, ಅವರು ಮೊದ ಮೊದಲು ಒಂದು ರೀತಿಯ ಪ್ರತಿರೋಧವನ್ನು ತೋರಿಸಿದರೂ, ಅವರನ್ನು ಮಾತನಾಡಿಸಲೆಂದೇ ಸಸ್ಕ್ವೆಹಾನ್ನಾ ನದಿಯಲ್ಲಿ ಸಿಗುವ White catfish, Shad, Smallmouth Bass ಮುಂತಾದ ಮೀನುಗಳ ಬಗ್ಗೆ ತಿಳಿದುಕೊಂಡು ಏನಾದರೊಂದು ಪ್ರಶ್ನೆ ಕೇಳಿ ಮಾತಿಗಿಳಿದರೆ ಅವರು ನನ್ನನ್ನೆಂದೂ ತಿರಸ್ಕರಿಸಿದ್ದಿಲ್ಲ.



'ನೀವೂ ನಿಮ್ಮ ಮಕ್ಕಳನ್ನು fishingಗೆ ಕರೆದುಕೊಂಡು ಹೋಗಿ' ಎಂದು ಅಮೇರಿಕದಲ್ಲಿ ಸುಮಾರು ಮೂವತ್ತು ವರ್ಷ ಇದ್ದಿರೋ ಕನ್ನಡಿಗ ಸ್ನೇಹಿತೆ ಒಬ್ಬರು ನನಗೆ ಸಲಹೆ ಮಾಡಿದ್ದರು, ಅವರು ಮೀನು ತಿನ್ನೋದಿಲ್ಲ, ಆದರೆ fishing ಆಗುವಾಗ ನಡೆಯೋ ಮೌನ ಸಂಭಾಷಣೆ ಹಾಗೂ ತಲೆಮಾರುಗಳ ಮಾಹಿತಿ ವಿನಿಮಯದ ಮಹತ್ವವನ್ನು ಅವರು ಚೆನ್ನಾಗೇ ಅರಿತಿದ್ದರು. ಆದ್ದರಿಂದಲೇ ಮೀನನ್ನು ಗಾಳ ಹಾಕಿ ಹಿಡಿದು ಮತ್ತೆ ನದಿಗೇ ಬಿಡುವ ಜನರನ್ನು ನೋಡಿದರೆ ನನಗೆ ಮೊದಲೆಲ್ಲ ಆಶ್ಚರ್ಯವಾದಂತೆ ಈಗೀಗ ಆಗೋದಿಲ್ಲ. ಮೀನು ಹಿಡಿಯುವ ಕ್ರಿಯೆಗಿಂತ, ಅದರ ಪ್ರಕ್ರಿಯೆ, ಅದರ ಹಿಂದಿನ ಯೋಚನಾ ಲಹರಿ, ಇಂದಿನ ವ್ಯಸ್ತ ದಿನಗಳಲ್ಲಿ ಅದು ನೀಡುವ ಪ್ರಕೃತಿಯ ಜೊತೆಗೆ ಒಡನಾಡುವ ಅವಕಾಶ ಇವೆಲ್ಲ ಮುಖ್ಯವಾಗಿ ಕಾಣುತ್ತದೆ.

***

ಇನ್ನು ಎಂದಾದರೂ ನನ್ನ ಕಾರಿನಲ್ಲಿ ಅಥವಾ ಮನೆಯಲ್ಲಿ fishing ರಾಡ್ ನೋಡಿದರೆ ನೀವು 'ಅಯ್ಯೋ ನೀವೂ ಮೀನು ತಿನ್ತೀರಾ' ಎಂದು ಪ್ರಶ್ನಿಸೋಲ್ಲ, ಅಕಸ್ಮಾತ್ ಹಾಗೆ ಕೇಳಿದರೂ ನಾನು ಅದನ್ನು ತಪ್ಪು ಎಂದುಕೊಳ್ಳೋದಿಲ್ಲ, ಆದರೆ ನನ್ನ ವಿವರಣೆ ಕೇಳುವುದಕ್ಕೆ ನಿಮ್ಮಲ್ಲಿ ವ್ಯವಧಾನವಿರಬೇಕಷ್ಟೇ!

Saturday, April 29, 2006

ಹಾಡು ಕಾಡುವ ಹೊತ್ತು

ನಿನಗೆಂದು ನಾನು ನನಗೆಂದು ನೀನು
ಕನಸಾಗಿ ಕಣ್ಣ ತುಂಬಿರೇ

ಒಡಲಾಳದಲ್ಲಿ ಹಿತವಾದ ನೋವು
ಅನುಕಂಪವಾಗಿ ಬೆಳೆದಿರೇ

ಹೊಸಹಾಡು ಉಕ್ಕಿ ಹೊನಲಾಗಿ ಹರಿದು
ಸುಧೆಯಾಗಿ ಪಯಣ ಬೆಳೆಸಿರೇ

ಮೂಡಣದ ಚೆಲುವು ಮೂಡುತಲಿ ಒಲವು
ನಗೆ ಸಂಭ್ರಮವ ಬಿತ್ತಿರೇ

ಈ ಸೃಷ್ಟಿಯ ಸಮಷ್ಟಿಯಲ್ಲಿ
ಜೊತೆಯಾಗಿ ನಿಂತ ಜೋಡಿಯೇ

ನನ್ನೆದೆಯ ಎದೆಗೆ ಸಿಂಚನದ ಕೊಡುಗೆ
ಹೊಸ ಬುಗ್ಗೆಯಾದ ಚೇತನಾ

ಬರಿಗಾಲಿನಲ್ಲಿ ಭುವಿಯನ್ನು ಸುತ್ತೋ
ಹೊಸ ಹುರುಪು ತಂದ ಭಾವವೇ

***

ಈಗ್ಗೆ ನಾಲ್ಕೈದು ತಿಂಗಳಿನಿಂದ ಈ ಹಾಡು ಮನಸ್ಸಿನಲ್ಲಿ ನಿಂತಿದೆ, ಯಾರಿಗಾದರೂ ಸಂಗೀತ ಬರುವವರಿಗೆ ಈ ಹಾಡನ್ನು ತೋರಿಸಿ ಒಂದು ರೂಪ ಕೊಡುವ ಉತ್ಸಾಹ ಒಮ್ಮೆ ಬಂದರೂ, who cares ಅನ್ನೋ ಸಿಂಚನ ಈ ಅಲೋಚನೆಗಳಿಗೆಲ್ಲ ತಣ್ಣಿರೆರಚಿಬಿಡುತ್ತದೆ. ಇಲ್ಲಿ ಬರೆದ ಹಲವು ಪಂಕ್ತಿಗಳ ಇತರ ವೇರಿಯೇಷನ್‌ಗಳನ್ನು ಬರೆದುಕೊಂಡು ಅಲ್ಲಲ್ಲಿ ಗೀಚಿದ್ದಾಯ್ತು, ತಿದ್ದಿದ್ದಾಯ್ತು. ಆಫೀಸಿನ ಸಮಯದಲ್ಲಿ ಬಿಡುವು ಸಿಕ್ಕಾಗ ಗುನುಗಿ ಕೊಂಡಾಯ್ತು, ಏನು ಮಾಡಿದರೂ ಈ ಹಾಡು ಕಾಡುವುದೊಂದನ್ನು ಬಿಟ್ಟು ಇನ್ನೇನನ್ನೂ ಮಾಡುತ್ತಿಲ್ಲ.

ಇದು ಯಾವ ರಾಗದಲ್ಲಿ ಹುಟ್ಟಿದೆಯೋ ಯಾರಿಗೆ ಗೊತ್ತು, ಸಂಗೀತ ಕಲಿಯುವುದಕ್ಕೆಂದು ಎರಡು ಬಾರಿ ಪ್ರಯತ್ನಿಸಿ ಅದಕ್ಕೆ ತಿಲಾಂಜಲಿ ಇಟ್ಟವನು ನಾನು, ನನ್ನಂತವರಿಗೆ ಅದು ಒದಗಿಬರಲಿಲ್ಲ. ಆದರೆ ಅಲ್ಲಲ್ಲಿ ಮಿಣುಕು ಹುಳದೋಪಾದಿಯಲ್ಲಿ ಯಾವುದೋ ಒಂದು ರಾಗದ ಯಾವುದೋ ಒಂದು ತುಣುಕು ಮನಸ್ಸಲ್ಲಿ ಅವತರಿಸಿ ತಣ್ಣಗೆ ಕೊರೆಯಲು ಶುರುಮಾಡುತ್ತದೆ, ಅದನ್ನು ಹೊರ ಹಾಕುವವರೆಗೆ ಸಮಾಧಾನವೇ ಆಗುವುದಿಲ್ಲ ಒಂದು ರೀತಿ ಸ್ನಾನ ಮಾಡಿದ ಮೇಲೆ ಕಿವಿಯ ಒಳಗೆ ನೀರು ಸೇರಿ ಹಿಂಸೆ ಆಗುವ ಹಾಗೆ. ನನ್ನ ಕೇಳಿದರೆ ಘಂಟೆಗಟ್ಟಲೇ ಯಾವ ಭಾಷೆಯ ಹಂಗೂ ಇಲ್ಲದೇ ಬರೀ ರಾಗಗಳ (ಅದರಲ್ಲೂ ಹಿಂದೂಸ್ಥಾನಿಯ) ಮೋಡಿಗೆ ಮಾರುಹೋಗುವ ಸುಖ ಇದೆ ನೋಡಿ, ಅದು ಭಯಂಕರವಾದುದು. ದೇವ ನಿರ್ಮಿತ ರಾಗಕ್ಕೆ ಮಾನವ ನಿರ್ಮಿತ ಭಾಷೆಯ ಬಂಧನವೇಕೆ? ಭಾಷೆಯ ಬಂಧನವಿದ್ದರೂ ಮೊನ್ನೆ ನಡೆದ ಜಸ್‌ರಾಜರ ಕಛೇರಿಯಲ್ಲಿ ತಲ್ಲೀನರಾದ ಹಲವರ ತೇವವಾದ ಕಣ್ಣುಗಳನ್ನು (ನನ್ನನ್ನೂ ಸೇರಿ) ವಿವರಿಸುವ ಬಗೆ ಎಂತು?

ಪಠ್ಯ ಪುಸ್ತಕದಲ್ಲಿ 'ವೀರ ರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ...' ಎಂದು ಭಾಮಿನಿ ಷಟ್ಪದಿಯನ್ನು ಓದುತ್ತಿದ್ದಾಗ ಹೊಳೆದಿತ್ತು, ಆರು ಸಾಲಿನಲ್ಲಿರುವವೆಲ್ಲ ಷಟ್ಪದಿಗಳಲ್ಲ ಎಂದು - ಬರಿ ಸಾಲುಗಳ ಸಂಖ್ಯೆ ಅಷ್ಟೇ ಅಲ್ಲ, ಲಘು-ಗುರು ಗಳೂ ಲೆಕ್ಕಕ್ಕಿರಬೇಕು ಎಂದು ಹತ್ತನೇ ತರಗತಿಯಲ್ಲಿ ಮೇಷ್ಟ್ರು ಸ್ವಲ್ಪ ಹೆಚ್ಚಾಗೇ ತಿವಿದಿದ್ದರಿಂದಲೋ ಏನೋ ಇಂದಿಗೂ ಅವು ನನ್ನ ನೆನಪನ್ನು ಬಿಟ್ಟು ಹೋಗುತ್ತಿಲ್ಲ. ಮುಂದೆ ಹದಿನಾಲ್ಕು ಸಾಲಿರುವ ಪದ್ಯಗಳನ್ನು ಬರೆದವರೆಲ್ಲ ಶೇಕ್ಸ್‌ಪಿಯರ್ ಆಗುತ್ತಾರೆ ಎಂದುಕೊಂಡು ನಂಬಿ ಬರೀ ಹದಿನಾಲ್ಕು ಸಾಲಿನಲ್ಲಿ ಮುಗಿಯುವಂತೆ ಪದ್ಯವನ್ನು ಬರೆದು ಅದನ್ನು ಕಾಲೇಜಿನ ಮ್ಯಾಗಜೀನ್‌ನಲ್ಲಿ ಸಾನೆಟ್ ಎಂದು ಪ್ರಕಟಿಸಿದವನೂ ನಾನೆ ಎಂದು ಇಂದು ಯೋಚಿಸಿ ನಾಚಿಕೆಯಾಗುತ್ತದೆ.

***

ಜಸ್‌ರಾಜರ ಭೈರವ ಕೇಳುತ್ತಿದ್ದಂತೆ ಅನ್ನಿಸುತ್ತಿತ್ತು, ಯಾಕೋ ಪಕ್ಕ ವಾದ್ಯ ಸರಿಯಾಗಿ ಬರುತ್ತಿಲ್ಲ ಎಂದು, ಅಥವಾ ಸಾತ್‌ನಲ್ಲಿ ಏನೋ ಕೊರತೆ ಇದೆಯೋ, ಅಥವಾ ಭೈರವದ ಬಗ್ಗೆ ನನಗೆ ಅಂತದ್ದೇನು ಗೊತ್ತು? ಅದರಲ್ಲಿ ಎಷ್ಟು ಬಗೆ ಇದೆ, ಯಾವ ಹೊತ್ತಿಗೆ ಹಾಡುತ್ತಾರೆ, ಯಾವ ಭಾವದಲ್ಲಿ ಮೂಡುತ್ತೆ ಎಂದು. ಮನಸ್ಸು ಇನ್ನೇನು ರಾಗದ ಪದರಗಳಲ್ಲಿ ಹುದುಗಬೇಕು ಎಂದು ಕೊಂಡಾಗ ಒಂದು ಬದಿಯ ಸ್ಪೀಕರ್ ಕೆಲಸ ಮಾಡುವುದು ನಿಲ್ಲಿಸಿ, ಇಷ್ಟು ಹೊತ್ತಿನವರೆಗೆ ನನ್ನ ತಲೆಯ ಹಿಂದೆ ಬರುತ್ತಿದ್ದ ಧ್ವನಿ ಈಗ ಎಲ್ಲೋ ದೂರದಲ್ಲಿ ಕೇಳಿ ಬರುತ್ತಿದ್ದಂತೆ ಕಣ್ಣು ಬಿಟ್ಟು ನೋಡುವುದರೊಳಗೆ ದಿನವಿಡಿ ಕಾಡುವ problem resolution modeಗೆ ಮನಸ್ಸು ಒಂದು ನ್ಯಾನೋ ಸೆಕೆಂಡಿನಲ್ಲಿ ಬಂದು ಬಿಡುತ್ತದೆ. ಇಷ್ಟು ದೊಡ್ಡ ಆಡಿಟೋರಿಯಂ‌ನಲ್ಲೂ ಈ ಥರನ ಸಮಸ್ಯೆಯೇ, 'ಛೇ' ಅಂದುಕೊಳ್ಳುತ್ತೇನೆ, ಸಂಗೀತ ಕಛೇರಿ ನಡೆಯುತ್ತಿದ್ದಂತೆಯೇ ಆಡಿಟೋರಿಯಂ‌ನ ಟೆಕ್ನಿಷಿಯನ್ ಬಂದು ರಿಪೇರಿ ಮಾಡಿದಂತೆ ಮಾಡುವುದು, ಮತ್ತೆ ಕೆಡುವುದೂ ಹೀಗೆ ಒಂದೆರಡು ಬಾರಿ ನಡೆದು ಕೊನೆಗೆ ಸ್ಪೀಕರ್ ಸರಿ ಆಗುತ್ತದೆ, ಇಷ್ಟರಲ್ಲಿ ಭೈರವನ ಗತಿ ಭೈರವನಿಗೇ ಪ್ರೀತಿಯಾಗಿರುತ್ತದೆ! ಒಂದು ರೀತಿ - ರಸ್ತೆಯ ಒಂದು ಬದಿಯಲ್ಲಿ ಅಪಘಾತವಾದರೆ, ಅಪಘಾತಕ್ಕೆ ಯಾವುದೂ ಸಂಬಂಧವಿಲ್ಲದ ಮತ್ತೊಂದು ಕಡೆಯ ರಸ್ತೆಯಲ್ಲೂ ಟ್ಯಾಫಿಕ್ ಜಾಮ್ ಆಗುವ ಹಾಗೆ! ಇಂತಹ ಸ್ಪೀಕರ್ ದುರಸ್ತಿಯಾಗುತ್ತಿರುವ ಸಂದರ್ಭದಲ್ಲೋ, ಅಥವಾ ಎಲ್ಲೋ ನಡೆದ ಅಪಘಾತದ ಕಡೆಗೋ ಗಮನ ಕೊಡಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಇಂದ್ರಿಯಗಳೆಲ್ಲ ಆಕಡೆಗೇ ತಿರುಗುವ ಪರಿಗೆ ಏನೆಂದು ಹೇಳಲಿ?

ನನಗೆ ಇನ್ನೂ ಚೆನ್ನಾಗಿ ನೆನಪಿದೆ: ೨೦೦೦ ಸೆಪ್ಟೆಂಬರ್‌ರಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾವೆಲ್ಲ ಹೋಗಿದ್ದೆವು, ಶುಕ್ರವಾರ ಸಂಜೆಯೇ ನೋಂದಾವಣೆ ಹಾಗೂ ಬಾಯುಪಚಾರ, ಊಟ ಎಂಬಂತೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಎಲ್ಲರೂ ರಂಗುಗಳ ಪ್ರದರ್ಶನ ಮಾಡುತ್ತಿದ್ದರು. ಒಳಗೆ ಆಡಿಟೋರಿಯಂ‌ನಲ್ಲಿ ಬೆರಳೆಣಿಕೆಯಷ್ಟು ಜನರು ಕುಳಿತು ಅದ್ಯಾರೋ ಭಾರತದಿಂದ ಬಂದ ಪುಣ್ಯಾತ್ಮರ ಗಾನ ಸುಧೆಯನ್ನು ಸವಿಯುತ್ತಿದ್ದರು, ನಾನೂ ನೋಡೋಣವೆಂದು ಒಳಹೊಕ್ಕೆ, ಆಗ ಕೇಳಿದ 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾs' ಹಾಡು, ಮುಖ್ಯವಾಗಿ ಅದರ ರಾಗ ಇಂದಿಗೂ ನನ್ನನ್ನು ಕಾಡುತ್ತದೆ. ನನಗೆ ಹಿಂದೂಸ್ಥಾನೀ ಹೇಳಿಕೊಟ್ಟ ಮೇಷ್ಟ್ರು ನೆನಪಿಗೆ ಬರುತ್ತಾರೆ, ನನ್ನ ಪ್ರಕಾರ ಹಿಂದೂಸ್ಥಾನಿ ಹಾಡುವವರಿಗೆ ಇಹಪರದ ಗತ್ತಿಲ್ಲ, ಸೊತ್ತೂ ಇಲ್ಲ, ಸರಳೆ-ಜಂಟಿ ಎಂದು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜನ್ನು ಹೇಳಿಕೊಡದೇ 'ಈಜು ಮಗನೇ' ಎಂದು ಮಹಾ ಸಾಗರದಲ್ಲೇ ಬಿಸಾಡುವಂತೆ ತಲೆ ಮೇಲೆ ಕಟಿದು ದೊಡ್ಡ ರಾಗದಿಂದಲೇ ಆರಂಭಿಸುವ ಎಷ್ಟೋ ಕಥೆಗಳನ್ನು ಕೇಳಿದ್ದೇನೆ. ನಮ್ಮ ಮೇಷ್ಟ್ರು ಕೊಳೆಯಾದ ಬನಿಯನ್ ಮತ್ತು ಪಂಚೆ ಧರಿಸಿಯೇ ಹಾಡುತ್ತಿದ್ದರು, ರಾಗಗಳು ಅವರ ಜೀವಾಳವಾಗಿದ್ದವು, ಆದರೆ ನಾನು ಕೇಳಿದ ಕರ್ನಾಟಕ ಸಂಗೀತದ ಗುಂಗಿನ ಹಿಂದೆ ಗರಿ-ಗರಿಯಾದ ರೇಶಿಮೆ ಬಟ್ಟೆ, ಹಾಗೂ ಕೈಯಲ್ಲಿನ ಉಂಗುರಗಳ ಪ್ರದರ್ಶನವೂ ಉಳಿದು ನನ್ನನ್ನು ಅಲ್ಪನನ್ನಾಗಿ ಮಾಡುತ್ತವೆ. ಹಾಗೆಯೇ ಇಲ್ಲಿ ನಾನು ಕೇಳಬಹುದಾದ ಭಾರತೀಯ ಸಂಗೀತವನ್ನು ಹಾಡುವವರ ಹಿಂದಿರುವ ವೈಭವದ ಬೆಳಕಿನಲ್ಲಿ ನನ್ನ ಕಣ್ಣು ಕುರುಡಾಗುತ್ತದೆ, ಮನಸ್ಸು ತೆರೆದುಕೊಳ್ಳುವುದಿಲ್ಲ. ಮನಸ್ಸು, ಸಾಧನೆ, ಸಿದ್ಧಿ ಇವುಗಳಿಗೆ ಹತ್ತಿರವಾದ ಸಂಗೀತಕ್ಕೆ ನಮ್ಮ ಜೋಕಿ-ಶೋಕಿಯ ಮೆರುಗೇಕೆ? ಛೇ, ದಸರಾ ಸಮಯದಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ಹಮ್ಮೂ ಬಿಮ್ಮೂ ಒಂದೂ ಇಲ್ಲದ ಹಲವಾರು ಸಂಜೆಗಳ ರಸದೂಟ ಸವಿಯುವ ಅವಕಾಶ ಮತ್ತೊಮ್ಮೆ ಸಿಗಬಾರದೇ?

***

ಈ ಹಾಡಿನಿಂದ ಏನು ಅನುಕೂಲವಾಗದಿದ್ದರೂ ಮುಂಜಾನೆ ನಾಲ್ಕೂವರೆಗೆಲ್ಲ ಏಳುವ ನನ್ನ ಮಗಳಂತೂ ಈ ಹಾಡನ್ನು ಕೇಳುತ್ತಲೇ ಪುನಃ ನಿದ್ದೆಗೆ ಶರಣು ಹೋಗುತ್ತಾಳೆ, ಹಾಡಿದ್ದನ್ನೇ ಹಾಡುವ ಕರ್ಮ ನನ್ನದು, ನಿದ್ರೆಯ ಮೋಡಿಗಾದರೂ ಜಾರಿ ನನ್ನ ಹಾಡನ್ನು ಕೇಳದಿರುವ ಮರ್ಮ ಅವಳದು!

Friday, April 28, 2006

ಹೀಗೊಂದು ಮುಂಜಾವು

ಇನ್ನೇನು ಶುಕ್ರವಾರ ಬಂತು ಎಂದು ಮೈ ಮುರಿದು ಏಳುತ್ತಿದ್ದ ಹಾಗೆ ಮಾಡಬೇಕಾದ ಮಾಡಬಹುದಾದ ಕೆಲಸಗಳೆಲ್ಲ ಕಣ್ಣಮುಂದೆ ದುತ್ತನೆ ಎದುರಾದವು, ಅವುಗಳಿಗೆಲ್ಲಾ ಸ್ವಲ್ಪ ತಡೆಯಿರಿ ಎಂದು ಹೇಳುವಂತೆ ಕಣ್ಣುಗಳನ್ನು ನೀವಿಕೊಳ್ಳುತ್ತಾ ಬಚ್ಚಲು ಮನೆಗೆ ನಡೆದಾಗ ಎಲ್ಲಿ ತಡವಾಗುತ್ತೊ ಅನ್ನೋ ಗಡಿಬಿಡಿ ತನ್ನಷ್ಟಕ್ಕೆ ತಾನೇ ನಾನು ಮಾಡುವ ಕೆಲಸಗಳಲ್ಲೆಲ್ಲ ಸುತ್ತಿಕೊಳ್ಳುವ ಪರಿಪಾಠವನ್ನು ಮುಂದುವರೆಸಿತು. ಸ್ನಾನ ಮಾಡಿ ಬಂದು ಮೈ ಒರೆಸಿಕೊಂಡು ದೇವರಿಗೆ ದೀಪ ಹಚ್ಚಿ ಇನ್ನೇನು ಹೊರಡಲನುವಾಗುವಾಗ ಇಂದು ಮನೆಯಲ್ಲಿಯೇ ತಿಂಡಿ ತಿಂದರೆ ಹೇಗೆ ಎಂದು ತಂಗಳು ಪೆಟ್ಟಿಗೆಯಲ್ಲಿನ ಹಾಲನ್ನು ತೆಗೆಯುವುದರ ಜೊತೆಗೆ ಕೈಗಳು ಅಲ್ಲೇನಾದರೂ ತಿನ್ನಲು ಸಿಗುತ್ತದೆಯೋ ಎಂದು ಹುಡುಕಾಡತೊಡಗಿದವು. ಕೈಗೆ ಸಿಕ್ಕಿದ್ದನ್ನು ತಿಂಡಿ ಎಂದು ತಿಂದು, ಬಿಸಿ ಚಹಾವನ್ನು ಕುಡಿದು ಬಾಗಿಲು ತೆಗೆದು ಕಾಲನ್ನು ಹೊರಗಿಟ್ಟಾಗ ಪ್ರಪಂಚದ ಕತ್ತಲೆಂಬ ಕೊಳೆಯನ್ನು ಇಂದು ಖಂಡಿತವಾಗಿ ಹೋಗಲಾಡಿಸುತ್ತೇವೆ ಎಂಬು ಬೀಗುವ ಸೂರ್ಯನ ಕಿರಣಗಳು ದಟ್ಟವಾದ ಕಪ್ಪು ಮೋಡದ ಮರೆಯಿಂದ ಇಣುಕಿ ನನ್ನ ಕಣ್ಣುಗಳನ್ನು ಕಿರಿದು ಮಾಡುವುದರ ಜೊತೆಗೆ ಸಂತಸವನ್ನೂ ಮೂಡಿಸಿದವು.

ಗಾಡಿಯಲ್ಲಿ ಕುಳಿತು ಹೊರಡಬೇಕೆನ್ನುವಾಗ ತೇವವಾದ ಗಾಳಿ ಸುಳಿದು ಎಂದಿಗಿಂತಲೂ ಸ್ವಲ್ಪ ಕಮ್ಮಿ ಬಿಸಿಲು ಬರಬಹುದಾದ ಮುನ್ಸೂಚನೆಯನ್ನು ನೀಡಿದವು, ನಾನು ಜೊತೆಯಲ್ಲಿ ಛತ್ರಿ ಇರುವುದನ್ನು ಧೃಡಪಡಿಸಿಕೊಂಡೆ. ಇನ್ನೇನು ವಾಹನ ಚಲಾವಣೆ ಮಾಡಬೇಕು ಎನ್ನುವಷ್ಟರಲ್ಲಿ ಅದೆಲ್ಲಿಂದಲೋ ಎರಡು ಪಾರಿವಾಳಗಳ ಗುಟುರುವಿಕೆ ಕಿವಿಗೆ ಬಿದ್ದು ಬೆಳ್ಳಂ ಬೆಳಗ್ಗೆ ನಡೆಯುವ ಅತ್ತೆ-ಸೊಸೆಯ ಜಗಳವನ್ನು ನೆನಪಿಗೆ ತಂದಿತು. ಇನ್ನೊಂದು ನಲವತ್ತು ನಿಮಿಷಗಳಲ್ಲೆಲ್ಲ ನಾನು ತಲುಪಬಹುದಾದ ಜಾಗವನ್ನು ತಲುಪುತ್ತೇನೆ ಎಂದು ದೇಹ ಹಾಗೂ ಮನಸ್ಸು ತಮ್ಮ ತಮ್ಮ ಕೆಲಸವನ್ನು ಮುಂದುವರೆಸಿದವು.

ಇನ್ನೇನು ಕತ್ತಲು ಸರಿದು ಬೆಳಕು ಮೂಡುವಷ್ಟರಲ್ಲಿ ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು 'ನಾನು ಏನೇ ಮಾಡಿದರೂ ಪ್ರತಿಫಲಿಸುವುದಿಲ್ಲ' ಎಂದು ಹಠ ತೊಟ್ಟ ಮಗುವಿನಂತೆ ಮುಖಮಾಡಿಕೊಂಡು ಕರಿಯಾದ ರಸ್ತೆ ಮಲಗಿತ್ತು, ಅಲ್ಲಲ್ಲಿ ಇಬ್ಬನಿಯ ತೇವ ರಸ್ತೆ ಬದಿಯಲ್ಲಿ ನೀರಿನಂತೆ ಜಿನುಗಿದ್ದು ರಾತ್ರಿ ಹಾಲು ಕುಡಿದು ಮಲಗಿದ ಮಗುವಿನ ತುಟಿಯಿಂದ ಒಸರಿದ ಹಾಲು-ಜೊಲ್ಲಿನಂತೆ ಕಂಡು ಬರುತ್ತಿತ್ತು. ರಸ್ತೆ ಬದಿಯ ಮಡಗಿರಗಳು ನೀನು ಮುಂದೆ ಹೋಗು ಸಂಜೆ ಸಿಗುತ್ತೇವೆ ಎಂದು ಕೈ ಬೀಸಿ ಹಿಂದೆ ಸರಿಯುವಂತೆ ಅನ್ನಿಸಿತು.

ವೃತ್ತ ಪತ್ರಿಕೆಗಳಿಂದ ಹಿಡಿದು ಯಾವ ಮಾಧ್ಯಮವನ್ನು ತಳುಕು ಹಾಕಿಕೊಂಡರೂ ಅವೇ ಹಳಸಲು ಸುದ್ದಿಗಳು! ಕಗ್ಗತ್ತಲೆಯ ಖಂಡದ ಕೊಲೆ-ಸುಲಿಗೆ-ಅತ್ಯಾಚಾರ-ಅನಾಚಾರಗಳಿಂದ ಹಿಡಿದು ಮುಂದುವರೆದ ದೇಶಗಳ ಅವೇ ಸುದ್ದಿಗಳ ಮತ್ತೊಂದು ಮಗ್ಗುಲನ್ನು ಇಂದಿನ ಬೆಳವಣಿಗೆಯ ಯುಗದಲ್ಲಿ ತಾವು ಪ್ರತಿಸ್ಪಂದಿಸುತ್ತೇವೆ ಎಂದು ತಮ್ಮಷ್ಟಕ್ಕೆ ತಾವೇ ಎಲ್ಲ ಸುದ್ದಿಗಳನ್ನೂ ಹಿಡಿದು ವರದಿ ಒಪ್ಪಿಸಿದ ವರದಿಗಾರರೋಪಾದಿಯಲ್ಲಿ ತಿಣುಕುತ್ತಿದ್ದವು. ಈ ವರದಿಗಳು, ವರದಿಗಾರರು ಇವರೆಲ್ಲ ಶತ-ಶತಮಾನಗಳಿಂದ ಮಾಡಿದ್ದೇನು, ಮಾಡೋದೇನಿದೆ, ಅದರಿಂದ ಏನಾಯಿತು, ಎಂಬಿತ್ಯಾದಿ ಆಲೋಚನೆಗಳು ಸುಳಿಯತೊಡಗಿದವು, ಅವು ಬಂದಷ್ಟೇ ವೇಗದಲ್ಲಿ ಹಿಂದೆ ಸರಿದವು ಎಂದರೆ ಸರಿಯಾದೀತು. ಅಲ್ಲಲ್ಲಿ ಸ್ವಲ್ಪ ನಿಧಾನ, ಮಧ್ಯೆ ಎಳೆ ಬಿಸಿಲಿನಲ್ಲಿ ಮಿರುಗಿ ಬೀಗುವ ಕಪ್ಪು ರಸ್ತೆಯ ಕಪಾಲಗಳು ಕಂಡಲ್ಲೆಲ್ಲ ಸ್ವಲ್ಪ ವೇಗ, ಎಲ್ಲಿ ಯಾರಾದರೂ ಹಿಡಿದು ದಂಡ ವಿಧಿಸುತ್ತಾರೋ ಎಂಬ ಭಯದ ನೆರಳು - ಹಾಗೂ ತಲೆಯಲ್ಲಿ ಹತ್ತಾರು ಆಲೋಚನೆಗಳು, ಇವೆಲ್ಲದರ ಮಧ್ಯೆ ಪ್ರಯಾಣ ನಿರಾತಂಕವಾಗಿ ಸಾಗಿತ್ತು.

ಪ್ರತಿಯೊಂದು ಪ್ರಯಾಣಕ್ಕೂ ಎಲ್ಲೋ ಹೇಗೋ ಒಂದು ಕೊನೆ ಇರುವ ಹಾಗೆ ನನ್ನ ಈ ಚಿಕ್ಕ ಪ್ರಯಾಣವೂ ಕಛೇರಿಯನ್ನು (ಯಾವುದೇ ತೊಂದರೆಗಳಿಲ್ಲದೇ) ತಲುಪಿದ್ದರಿಂದ ಕೊನೆಯಾಗುತ್ತದೆ. ನಾನು ತಲುಪಿದೆನೆಂದು ನೆನಪಿಸುವ ನನ್ನ ಮುಖ ಪರಿಚಯ ಇರುವಂತೆ ಗಾಳಿಯ ಸಹಾಯದಿಂದ ತೊನೆಯುವ ಮರಗಿಡಗಳ ನಗೆಯಿಂದ ಪುಳಕಿತನಾಗುತ್ತೇನೆ - ಇತ್ತೀಚೆಗಷ್ಟೇ ಕಡು ಚಳಿಯಲ್ಲಿ ಬಳಲಿ ಚೈತ್ರಮಾಸದ ದೆಸೆಯಿಂದ ಈಗಷ್ಟೇ ಚಿಗುರಿ ಮೊಗ್ಗು, ಹೂವು, ಮಿಡಿ, ಹೀಚುಗಳನ್ನು ಬಿಡುತ್ತಿರುವ ಅವುಗಳ ಸಂತೋಷವನ್ನು ಕಂಡು ನಾನಾದರೂ ಏಕೆ ಕರುಬಬೇಕು? ವಾಹನವನ್ನು ಎಲ್ಲಿಡಬೇಕೋ ಅಲ್ಲಿಟ್ಟು, ಇನ್ನೇನು ಮೆಟ್ಟಿಲುಗಳನ್ನು ಹತ್ತಿ ಕಛೇರಿಯ ಆವರಣದಲ್ಲಿ ಕಾಲಿಟ್ಟೊಡನೆ ಒಂದು ರೀತಿಯ ಗಮಲು ವಾಸನೆ ಮೂಗಿಗೆ ಅಡರಿಕೊಂಡು - 'ಈಗ ಎಲ್ಲಿದ್ದೀಯಾ ಗೊತ್ತೇ!' ಎಂದು ಅಪಹಾಸ್ಯ ಮಾಡಿ ಕೇಕೆ ಹಾಕಿದಂತೆ ಕಂಡುಬಂತು. ಕಿಟಕಿಯ ಒಳಗಡೆ ಬರಲು ಹವಣಿಸುತ್ತಿದ್ದ ಸೂರ್ಯ ಕಿರಣಗಳು ಹೊರಗಿದ್ದನ್ನು ಬೆಳಗಿಯಾಯ್ತು, ಇನ್ನು ಅಂತರಂಗವನ್ನು ತೊಳೆಯಬೇಕಿದೆ, ದಾರಿ ಬಿಡು ಎಂದು, ನನ್ನ ಪ್ರತಿಕ್ರಿಯೆಗೂ ಕಾಯದೇ ಎಂದಿನ ವೇಗದಲ್ಲಿ ಮುನ್ನುಗ್ಗುತ್ತಿದ್ದವು. ನಾನು ಬಗಲಿನಿಂದ ಚೀಲವನ್ನಿಳಿಸಿ, ಆಗಲೇ ಉಸ್ ಎಂದು ಉಸಿರು ಬಿಟ್ಟು ಗಣಕ ಯಂತ್ರದ ಪರದೆಯ ಗುಂಡಿಯನ್ನುಮುಕಿದೆ, 'ಅದೇನು ಕಡಿದು ಹಾಕುತ್ತೀಯೋ, ಹಾಕು' ಎಂದು ಅಟ್ಟಹಾಸ ಬೀರುತ್ತಾ ಹತ್ತೊಂಬತ್ತು ಅಂಗುಲದ ಪರದೆಯ ಮಧ್ಯಭಾಗದಿಂದ ನೀಲಿ ಬಣ್ಣದ ಬೆಳಕೊಂದು ತೂರಿ ಬಂತು.

***

There is a difference in this post did you notice? Clue! This itself is a clue :-)

Thursday, April 27, 2006

ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!

"A true friend stabs you in the front."- Oscar Wilde

'ಇವನೇನಪ್ಪಾ ಬರೀ ಇಲ್ಲಿ ತನ್ನ ಪ್ಲಾಬ್ಲಮ್ ಬಗ್ಗೆ ಕೊರೀತಾನೆ' ಅಂದುಕೋತೀರೋ ಏನೋ, ಮತ್ತೆ ನಿಮ್ಮಂಥ ಸ್ನೇಹಿತರು ಇರೋದಾದ್ರೂ ಯಾಕೆ ಹೇಳಿ?
'ಅದೇನು ಸ್ನೇಹ ಮತ್ತು ಅದರ ಬೆಲೆ, ಅದರಲ್ಲೂ ನಾಕು ಲಕ್ಷ ರೂಪಾಯಿ, ಬೇಗ ಹೇಳಿ ಬಿಡು' ಎಂದಿರೋ, ಕ್ಷಮಿಸಿ - ಈ ಅಂತರಂಗವನ್ನು ನೀವು ಸ್ವಲ್ಪ ವ್ಯವಧಾನದಿಂದ ನೋಡಲಿ ಎನ್ನುವ ಆಸೆ ನನ್ನದು.

***

ಸಾಗರದಲ್ಲಿ ನನ್ನ ಜೊತೆ ಡ್ರೈವರ್, ಕಂಡಕ್ಟರುಗಳು ಜೊತೆಯಲ್ಲಿದ್ದರೆಂದು ಈ ಮೊದಲೇ ಬರೆದಿದ್ದೆ. ಅವರಲ್ಲೆಲ್ಲ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾದ ವ್ಯಕ್ತಿಯೆಂದರೆ ಜಗದೀಶ. ಈತನ ಸಾಧು ಗುಣಗಳ ಜೊತೆಯಲ್ಲಿ ಹುದುಗಿರುವ ಹಾಸ್ಯ ಪ್ರವೃತ್ತಿಗಳ ದೆಸೆಯಿಂದ ಬಹಳಷ್ಟು ಸಾರಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇನೆ - ವೃತ್ತಿಯಲ್ಲಿ ಬಸ್ಸಿನ ಕಂಡಕ್ಟರಾದರೂ ಅವನ ಕೈ ಚಳಕ ಅದ್ಭುತವಾದದ್ದು. ಜಗದೀಶನ ಕೈಯಲ್ಲಿ ಬಸ್ಸನ್ನು ಕೊಟ್ಟು ಕಳಿಸಿದರೆ ಹಿಂತಿರುಗಿ ತಂದೇ ತರುತ್ತಾನೆ ಅನ್ನೋದು ಸಾಗರದ ಬಸ್ ಸ್ಟಾಂಡಿನಲ್ಲಿ ಜನಜನಿತವಾದ ಮಾತಾಗಿತ್ತು - ಈ ಮಾತು ಏಕೆ ಮುಖ್ಯವೆಂದರೆ, ಒಬ್ಬ ಖಾಸಗೀ ಬಸ್ ಮಾಲೀಕನ ಬಳಿ ಕೇವಲ ಒಂದು ಅಥವಾ ಎರಡು ಬಸ್‌ಗಳಿರಬಹುದು, ಅವು ಪ್ರತಿದಿನವೂ ತಮ್ಮ-ತಮ್ಮ ರೂಟ್‌ಗಳಲ್ಲಿ ಸರಿಯಾಗಿ ನಡೆಯದಿದ್ದರೆ ಅವರ ಬಂಡವಾಳಕ್ಕೆ ಸಂಚಕಾರ - ಮೇಲ್ನೋಟಕ್ಕೆ ಬಸ್ ಮಾಲೀಕರಾದರೂ 'ಇವತ್ತು ದುಡಿದು ಇವತ್ತು ತಿನ್ನುವ' ಬವಣೆ ತಪ್ಪಿದ್ದಿಲ್ಲ, ಏಕೆಂದರೆ ಬಂದ ಲಾಭಾಂಶದಲ್ಲಿ ಹೆಚ್ಚಿನಪಾಲು ಬ್ಯಾಂಕಿನ ಅಸಲು, ಬಡ್ಡಿಗೇ ಸೇರುತ್ತದೆ.

ಜಗದೀಶ ಮುಂದೆ ಡ್ರೈವಿಂಗ್‌ನ್ನು ಕಲಿತು, ತನ್ನ ತಮ್ಮಂದಿರೊಡಗೂಡಿ ಒಂದೆರಡು ಬಸ್ಸುಗಳನ್ನು ತಾನೇ ಇಟ್ಟುಕೊಂಡು ಅದರ ಮಾಲೀಕನೂ ಆದ. ಇತ್ತ ನಾನು ಭಾರತದ ಊರು-ಊರುಗಳನ್ನು ತಿರುಗಿ ಅಮೇರಿಕದ ಹಾದಿ ಹಿಡಿದೆ. ನನ್ನ ಮತ್ತು ಜಗದೀಶನ ಸುಮಾರು ೧೨ ವರ್ಷಗಳ ಗೆಳೆತನದಲ್ಲಿ (೧೯೮೮-೨೦೦೦), ನಾವಿಬ್ಬರೂ ಫ್ಯಾಮಿಲಿ ಸ್ನೇಹಿತರಾಗಿದ್ದೆವು, ನನ್ನ ಮದುವೆಗೆ ಅವನ ಮನೆಯವರೆಲ್ಲರೂ ಬಂದಿದ್ದರು, ಅವನ ಮನೆಗೆ ನಾನು ಹೋಗಿದ್ದಿದೆ, ಅವನೂ ನಮ್ಮ ಮನೆಗೆ ಬಂದಿದ್ದಾನೆ.

***

ನಾನು ೧೯೯೮ ರಲ್ಲಿ ಭಾರತಕ್ಕೆ ಹೋದಾಗ ಜಗದೀಶ (ಆಗಲೇ ತಾನು ಬಸ್ಸಿನ ಮಾಲಿಕನಾಗಿ ಸ್ವಯಂ ಭಡ್ತಿ ಪಡೆದಿದ್ದವ), ನನ್ನಲ್ಲಿ ತನ್ನ ಬಸ್ಸುಗಳನ್ನು ವಿಸ್ತರಿಸಿಕೊಳ್ಳುವ ಪ್ರಸ್ತಾವ ಮಾಡಿದ, ಅದಕ್ಕಾಗಿ ಹಣಕಾಸಿನ ಸಹಾಯವನ್ನೂ ಕೇಳಿದ - ತಾನು ತೆಗೆದುಕೊಂಡ ಹಣವನ್ನು ನ್ಯಾಯವಾಗಿ ಹಿಂತಿರುಗಿಸುತ್ತೇನೆಂತಲೂ, ಮತ್ತೆಲ್ಲ ಭರವಸೆಗಳನ್ನೂ ನೀಡಿದ - ನಾನು ಸ್ನೇಹದ ಕಟ್ಟಿಗೆ ಬಿದ್ದು ಹಾಗೂ ಪ್ರಪಂಚವನ್ನೂ ಇನ್ನೂ ಸರಿಯಾಗಿ ನೋಡಿರದ ನನ್ನ ಮೌಢ್ಯತೆಗೆ ಮಣಿದು 'ಸರಿ, ನಾಲ್ಕು ಲಕ್ಷ ರೂಪಾಯಿಗಳನ್ನು ಕಂತಿನಲ್ಲಿ ಕೊಡುತ್ತೇನೆ' ಎಂದು ಒಪ್ಪಿಕೊಂಡು ಮೊದಲನೇ ಕಂತಿನಲ್ಲಿ ಐವತ್ತು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಕೊಟ್ಟೆ. ಆಗ ನನ್ನ ಅಕ್ಕ ನನಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಳು, ಆದರೂ ನಾನೂ ಯಾವ ಮಾತನ್ನೂ ಕೇಳದ ಕಿವುಡನಾಗಿದ್ದೆ.

ಮುಂದೆ ರಜೆ ಮುಗಿಸಿ ಹಿಂತಿರುಗಿದ ಮೇಲೆ ಜಗದೀಶ ಮೇಲಿಂದ ಮೇಲೆ ಕರೆಗಳನ್ನು ಮಾಡುತ್ತಿದ್ದ, ಪತ್ರವನ್ನೂ ಬರೆಯುತ್ತಿದ್ದ. ನಾನು ಮುಂದಿನ ಕಂತಾಗಿ ಒಂದೂವರೆ ಲಕ್ಷ ರೂಪಾಯಿಗಳನ್ನು ೨೦೦೦ ದಲ್ಲಿ ಕೊಟ್ಟೆ. ಹಾಗೂ ಮುಂದೆ ಮದುವೆಯಾದ ಮೇಲೆ ನನ್ನ ಹೆಂಡತಿ ಬೇಡವೆಂದರೂ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದೆಂಬ ಒಂದೇ ತತ್ವಕ್ಕೆ ಮಣಿದು, ಇನ್ನುಳಿದ ಎರಡು ಲಕ್ಷ ರೂಪಾಯಿಗಳನ್ನೂ ಕೊಟ್ಟೆ.

ಈ ಹಣವನ್ನು ಪಡೆದ ಮೇಲೆ ಜಗದೀಶನ ನಡತೆಯಲ್ಲಿ ಬಹಳಷ್ಟು ಬದಲಾವಣೆಗಳಾದವು. ನನ್ನ ಕರೆಗೆ ತಪ್ಪಿಸಿಕೊಂಡು ಓಡಾಡುವ ಅವನ ಜೊಳ್ಳನ್ನು ಕಂಡು ಹಿಡಿಯಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ - ಮುಂದೆ ೨೦೦೩ ರ ಹೊತ್ತಿಗೆ ಅವನ ಬಸ್ಸಿನ ವ್ಯವಹಾರವೆಲ್ಲ ನಿಚ್ಚಳವಾಗಿ ನಷ್ಟದಲ್ಲಿತ್ತು, ನನಗೆ ಹಣ ಹಿಂದೆ ಬರುವ ಯಾವುದೇ ಲಕ್ಷಣಗಳು ಈ ವರೆಗೂ ತೋರುತ್ತಿಲ್ಲ.

ನಾನು ೨೦೦೩ ರಲ್ಲಿ ಭಾರತಕ್ಕೆ ಹೋದಾಗ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ (ಅಥವಾ ಕರೆಸಿದ್ದೆ), ಅವನು ನನ್ನನ್ನು ಮುಖ ಎತ್ತಿ ನೋಡುವ ಆತ್ಮ ಸ್ಥೈರ್ಯವನ್ನೂ ಉಳಿಸಿಕೊಂಡಿರಲಿಲ್ಲವೆಂದು ಕಾಣುತ್ತಿತ್ತು. ಮೊದಲೇ ಬರೆದಂತೆ ಸಾಧು ಸ್ವಭಾವದ ಅವನಿಗೆ ತಾನು ಮಾಡಿದ್ದು ಮೋಸ ಎನ್ನುವುದು ತಿಳಿಯಲು ಬಹಳ ಹೊತ್ತು ಬೇಕಾಗಲಿಲ್ಲ. ಆ ದಿನ ಅವನೇ ಹೇಳಿದಂತೆ ೨೦೦೩ ರ ಸೆಪ್ಟೆಂಬರ್ ಒಳಗೆ ಸ್ವಲ್ಪ ಹಣ ಹಿಂತಿರುಗಿಸುತ್ತೇನೆ ಎಂದವನು ಇವತ್ತಿಗೂ ಒಂದು ಪೈಸೆಯನ್ನೂ ಕೊಟ್ಟಿಲ್ಲ - ನಾನು ಅವನನ್ನು ಮಾತನಾಡಿಸಬೇಕೆಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ, ಅವನು ಯಾವತ್ತೂ 'ಮನೆಯಲ್ಲಿರೋಲ್ಲ'. ನನ್ನ ಎರಡನೇ ಅಣ್ಣನನ್ನೂ ಅವನ ಮನೆಗೆ ಕಳಿಸಿದ್ದೇನೆ, ಆದರೂ ಸಿಕ್ಕಿಲ್ಲ.

***

'ಅಣ್ಣಾ, ಏನಪ್ಪಾ ಮಾಡೋದೀಗ?' ಎಂದು ಯಾವತ್ತೋ ಫೋನಿನಲ್ಲಿ ನನ್ನ ಅಣ್ಣನನ್ನು ಕೇಳಿದ್ದೆ.'ಕೊಟ್ಟೋನ್ ಕೋಡಂಗಿ, ಇಸಗಂಡೋನ್ ಈರಭದ್ರ, ಈಗ ಹಣೆ ಮುಟ್ಟಿಕೋ, ಮತ್ತೇನ್ ಮಾಡ್ತೀ?' ಎಂದು ಉತ್ತರ ಬಂತು.

ಬೆಂಗಳೂರಿನ ಹಿತೈಷಿಗಳನ್ನು ಕೇಳಿದ್ದಕ್ಕೆ 'ಒಂದೇ ಕಾನೂನ್ ಪ್ರಕಾರ ಕೋರ್ಟಿಗೆ ಎಳೀರಿ, ಇಲ್ಲಾ ಗೂಂಡಾಗಳನ್ನು ಬಿಡಿ' ಎನ್ನುವ ಸಲಹೆ ಬಂತು.

ನನ್ನ ಅಮ್ಮ 'ಒಡ ಹುಟ್ದೋರಿಗೆ ದುಡ್ಡ್ ಕೊಟ್ಟಿದ್ರೆ ಅವರಾದ್ರೂ ನಿನ್ನ ಹೆಸರ್ ಹೇಳಿ ಉದ್ದಾರಾಗ್ತಾ ಇದ್ರು, ಅಲ್ವೋ ಇಷ್ಟೊಂದ್ ತಿಳುವಳಿಕೇ ಇರೋ ನೀನೇ ಹಿಂಗ್ ಮಾಡಿದ್ರೆ ಹೆಂಗೆ' ಎನ್ನುತ್ತಾಳೆ ಅಲ್ಲದೇ ನಾನು ಅವಳೊಟ್ಟಿಗೆ ಮಾತನಾಡಿದ ಹೆಚ್ಚಿನ ಕಾಲ್‌ಗಳು 'ಆ ಜಗದೀಶನ ಹತ್ರ ದುಡ್ಡು ಕೇಳೋ' ಎಂದು ಕೊನೆಯಾಗುತ್ತೆ, ನಾನು 'ಆಯ್ತು' ಅಂತೀನಿ.

ಇಲ್ಲಿ, ನಮ್ಮ ಮನೆಯಲ್ಲಿ ನನ್ನ ಹೆಂಡತಿ ಅವಾಗಾವಾಗ ತಿವಿತಾನೆ ಇರ್ತಾಳೆ.

ಒಟ್ಟಿನಲ್ಲಿ ಎಲ್ಲದರಲ್ಲೂ ಸರಿಯಾಗಿದ್ದ ನಾನು, ನನ್ನ ಸ್ನೇಹಿತನೊಬ್ಬನಿಗೆ ಮಾತಿಗೆ ತಪ್ಪದಂತೆ ಹಣ ಕೊಟ್ಟು, 'ಗಂಡ ಸತ್ತ ದುಕ್ಕ ಒಂದ್ ಕಡೇ, ಬಡ್ ಕೂಪಿನ ಉರಿ ಮತ್ತೊಂದ್ ಕಡೇ' ಅನ್ನೋ ಹಾಗೆ ನಾಲ್ಕು ಲಕ್ಷ ಕಳಕೊಳ್ಳ ಸ್ಥಿತಿಗೆ ಬಂದಿದ್ದೂ ಅಲ್ದೇ, 'ಎಲ್ಲದರಲ್ಲೂ ಸರಿಯಾದ ಮನುಷ್ಯ ಇದೊಂದರಲ್ಲಿ ಎಡವಿದ' ಎಂದು ಜನರಿಂದ ಅನ್ನಿಸಿಕೊಂಡೂ, ನಾಲ್ಕು ಜನ ರೌಡಿಗಳನ್ನು ಬಿಟ್ಟು ಕಾಲು ಮುರಿಸಿದರೆ ಹೆಂಗೆ ಎಂದು ನೈತಿಕವಾಗಿ ಹೀನ ಯೋಚನೆಗಳಲ್ಲಿ ತೊಡಗಿಕೊಳ್ಳೂದೂ ಅಲ್ಲದೇ, ಅಥವಾ ಒಬ್ಬ ಸ್ನೇಹಿತನಾದವನ್ನು ಕೋರ್ಟಿಗೆ ಎಳೆಯಬೇಕಾಗುತ್ತಲ್ಲಾ ಅನ್ನೋ ಜಂಜಾಟದಲ್ಲಿ ಮುಳುಗಿದ್ದೇನೆ.

***

ಈ ಸಾರಿ ಭಾರತಕ್ಕೆ ಹೋದಾಗ ಜಗದೀಶನನ್ನು ಮತ್ತೆ ಮನೆಗೆ ಬರುವಂತೆ ಹೇಳುತ್ತೇನೆ. ಒಬ್ಬ ಲಾಯರ್‌ಗೆ ಒಂದು ಲಕ್ಷ ರೂಪಾಯಿ ಹಣವನ್ನು ಕೊಟ್ಟರೂ ಪರವಾಗಿಲ್ಲ, ನನ್ನ ಹಣ ನನಗೆ ಬೇಕು, ಅದರ ಈಗಿನ ಮೌಲ್ಯ ಸುಮಾರು ಒಂಭತ್ತು ಸಾವಿರ ಡಾಲರ್ ಮೊತ್ತಕ್ಕಿಂತಲೂ ನಾನು ಮಾತಿಗೆ ತಕ್ಕಂತೆ ಕೊಟ್ಟ ಹಣವನ್ನು ಮಾತಿಗೆ ತಕ್ಕಂತೆ ಪಡೆದೇ ಪಡೆಯುತ್ತೇನೆ ಹಾಗೂ ನನ್ನ ವ್ಯಕ್ತಿತ್ವಕ್ಕಂಟಿದ ಕಪ್ಪು ಚುಕ್ಕೆಯನ್ನು ಹೋಗಲಾಡಿಸುತ್ತೇನೆ ಎಂಬ ಛಲದಿಂದ.

ಜಗದೀಶನ ಈ ಸಾಲದ ಪ್ರಹಸನದಿಂದ ಒಂದತ್ತೂ ಒಳ್ಳೆಯದಾಗಿದೆ, ನಾನು ಯಾರಿಗೂ ಇತ್ತೀಚೆಗೆ ಹಣವನ್ನು ಕೊಟ್ಟಿಲ್ಲ, ಕೊಟ್ಟರೂ ಅದನ್ನು ದಾನದ ಅಥವಾ ಸಹಾಯದ ರೂಪದಲ್ಲಿ ನೀಡಿರೋದರಿಂದ ನನಗೆ ಹಣಕಾಸಿಗೆ ಸಂಬಂಧಿಸಿದ ಇನ್ಯಾವ ನೋವುಗಳೂ ಇಲ್ಲ.

Wednesday, April 26, 2006

ಪ್ರತಿಭಾನ್ವಿತರು ಬೇಕಾಗಿದ್ದಾರೆ!


ಪ್ರತೀ ಮಂಗಳವಾರ ಕನ್ನಡಪ್ರಭದಲ್ಲಿ ಬರೋ ಪಾರ್ವತಮ್ಮನವರ ಅಂಕಣಕ್ಕೆ ನಾನೂ ಆಗಾಗ್ಗೆ ಭೇಟಿಕೊಡುತ್ತಿರುತ್ತೇನೆ (ಈ ಲೇಖನಗಳನ್ನು ಇಂಗ್ಲೀಷ್‌ನಲ್ಲೂ ಭಾಷಾಂತರ ಮಾಡಿ ಚಿತ್ರಲೋಕದಲ್ಲಿ ಪ್ರಕಟಿಸಲಾಗುತ್ತಿದೆ, ಅಡಿಯಲ್ಲಿ "For Earlier Writeups" ಎನ್ನುವ ಕೊಂಡಿಯನ್ನು ನೋಡಿ). ಕನ್ನಡ ಸಿನಿಮಾರಂಗದ ಬಗ್ಗೆ ಅವರಿಗಿರುವ ಅಪಾರ ಅನುಭವ ಓದುಗರನ್ನು ಕಂತು-ಕಂತುಗಳಲ್ಲಿ ತಲುಪುತ್ತಿರುವುದು ಓದುಗರ ಭಾಗ್ಯ ಎಂದೇ ಹೇಳಬೇಕು - ಹಳೆಯ ಕಥೆಗಳನ್ನು ಹೇಳಲು ಹೆಚ್ಚು ಜನ ಸಿಗುವುದು ವಿರಳ, ಸಿಕ್ಕರೂ ಹೀಗೆ ಪ್ರತೀವಾರ ಬರೆದು ಓದುಗರನ್ನು ತಲುಪುವುದು ವಿಶೇಷವೆಂದೇ ಹೇಳಬೇಕು. ಪಾರ್ವತಮ್ಮ ಒಬ್ಬ ನಿರ್ಮಾಪಕಿಯಾಗಿ, ಒಬ್ಬ ಮಹಾನ್ ನಟನ ಹೆಂಡತಿಯಾಗಿ ಹಾಗೂ ಕನ್ನಡ ಸಿನಿಮಾ ರಂಗ ಕಂಡ ಏಕೈಕ ಮಹಿಳಾ administrator ಆಗಿ ಓದುಗರಲ್ಲಿ ಹಂಚಿಕೊಳ್ಳುವುದು ಬಹಳಷ್ಟಿದೆ, ಅಲ್ಲಲ್ಲಿ ಭಾವಪೂರ್ಣವಾಗಿ ಬರೆಯುತ್ತಾರಾದರೂ ಅವರ ಬರವಣಿಗೆಯ ಸೀಕ್ವೆನ್ಸಿಂಗ್ ನನಗಿಷ್ಟ.

***

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತರಲ್ಲಿ ಚಿ.ಉದಯಶಂಕರ್ ಕೂಡಾ ಒಬ್ಬರು - ಒಬ್ಬ ಬರಹಗಾರರಾಗಿ ಚಿತ್ರಕಥೆ ಹಾಗೂ ಹಾಡುಗಳಲ್ಲಿ ಅವರದ್ದೇ ಆದ ನೈಪುಣ್ಯತೆ ಇತ್ತು. ಸರಳ ಕನ್ನಡ ಹಾಡುಗಳಾಗಿಯೂ ಅರ್ಥಗರ್ಭಿತವಾದ ಹಾಡುಗಳು ಇಂದಿಗೂ ಜನಜನಿತವಾಗಿವೆ (ಸುಮ್ಮನೇ ರ್‍ಯಾಂಡಮ್ಮಾಗಿ ಹುಡುಕಿದಾಗ ಇಷ್ಟೊಂದು ಹಾಡುಗಳು ಸಿಕ್ಕವು).

ಜನವರಿ ೧೦ರ ಅಂಕಣದಲ್ಲಿ "ಎಲ್ಲವನ್ನೂ ನಾನೇ ಮಾಡ್ತೀನಿ ಅಂದ್ರೆ ಹೀಗೇ ಆಗೋದು" ಎಂಬ ಲೇಖನದಲ್ಲಿ ಪಾರ್ವತಮ್ಮನವರು ಚಿ.ಉದಯಶಂಕರ್‌ರವರನ್ನು ವಿಶೇಷವಾಗಿ ನೆನೆಸಿಕೊಂಡಿದ್ದಾರೆ:



"...ಆಗ ರಾಜ್‌ಕುಮಾರ್ ಜೊತೆ ಯಾವಾಗ್ಲೂ ಉದಯಶಂಕರ್ ಇರ್ತಾ ಇದ್ರು. ಉದಯಶಂಕರ್ ಹೋದಮೇಲೆ ರಾಜ್‌ಕುಮಾರ್ ಸಿನಿಮಾ ಮಾಡೋದು ಕಮ್ಮಿ ಮಾಡಿದ್ರು. ಯಾರು ಬರೆದರೂ ಉದಯಶಂಕರ್ ಬರೆದ ಹಾಗೆ ಆಗ್ತಿರಲಿಲ್ಲ. ಅವರಿಲ್ಲದೆ ಒಂದು 'ಶಬ್ದವೇಧಿ' ಮಾಡಬೇಕಾದ್ರೇ ಸಾಕಾಗಿ ಹೋಯ್ತು. ಇವತ್ತಿಗೂ ಅವರಿಗೆ ಅದು ತೃಪ್ತಿ ಕೊಟ್ಟಿಲ್ಲ."

ರಾಜ್, ಉದಯಶಂಕರ್ ಇವರನ್ನೆಲ್ಲ ಗೌರವಿಸಿ ಇವರ ಬಗ್ಗೆ ಓದಿ ಬರೆಯುವ ಹೊತ್ತಿಗೆ ನಾನು ಒಂದಿಷ್ಟು ವಿಷಯಗಳನ್ನು ಕುರಿತು ಯೋಚಿಸುತ್ತೇನೆ:
೧) ಉದಯಶಂಕರ್ ತೀರಿಕೊಂಡಿದ್ದು ಅಥವಾ ಅವರ ಸಾವಿಗೆ ಕಾರಣವಾಗಿದ್ದು ಅವರ ಒಬ್ಬನೇ ಪುತ್ರ ರವಿಶಂಕರ್ ತೀರಿಕೊಂಡಿದ್ದರಿಂದ ('ಇನ್ನೂ ಗ್ಯಾರಂಟಿ ನಂಜುಂಡೀ ಕಲ್ಯಾಣ...' ಹಾಡಿನಲ್ಲಿ ಹಾಗೂ ಆ ಚಿತ್ರದಲ್ಲಿ ಸಿಕ್ಕ ಪಾತ್ರದಲ್ಲಿ ರವಿ ಮನೋಜ್ಞ ಅಭಿನಯ ನೀಡಿದ್ದನ್ನು ನಾನಿನ್ನೂ ಮರೆತಿಲ್ಲ). ಉದಯಶಂಕರ್ ಸಾವು ರಾಜ್‌ಕುಮಾರ್‌ಗೆ ಅರ್ಧ ಸಾವನ್ನು ತಂದುಕೊಟ್ಟಿತೆಂದೂ, ಮುಂದೆ ಸೋದರ ವರದರಾಜನ ಸಾವು ಅವರ ಆರೋಗ್ಯವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತೆಂದೂ ನಾನು ಓದಿದ್ದೇನೆ.

೨) ಉದಯಶಂಕರ್ ನಂತರ ಕನ್ನಡದಲ್ಲಿ ಬರಹಗಾರರು ಅವರಷ್ಟು ಎತ್ತರಕ್ಕೆ ಏರಿಲ್ಲ ಎನ್ನುವ ನನ್ನ ಅನಿಸಿಕೆ (ನನಗ್ಗೊತ್ತು, ವಿಚಾರ ಎಂದು ಬರೆದರೆ ನಿಮಗೆ ಇಷ್ಟವಾಗದಿರಬಹುದು ಎಂದು). ನಿಮಗೆ ಹಂಸಲೇಖ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನೆನಪಿರಬಹುದು - ಚೆನ್ನರಾಯಪಟ್ಟಣದ ಆಚೀಚೆ ಕೆಲಸವಿಲ್ಲದೇ ಸುತ್ತುತ್ತಿರುವವರನ್ನು ರವಿಚಂದ್ರನ್ ಗುರುತಿಸಿದರು, ಹಾಗೂ ಮೇಲಕ್ಕೂ ತಂದರು. ಹಂಸಲೇಖ ಹಾಡು, ಸಂಗೀತ ನಿಮಗೆ ರುಚಿಸುವುದಿಲ್ಲ ಎಂದು ನೀವು ಒಂದೇ ಮಾತಿನಲ್ಲಿ ತಳ್ಳಿ ಹಾಕಬಹುದು, ಆದರೆ ಹಾಗೆ conclude ಮಾಡುವುದಕ್ಕಿಂತ ಮುಂಚೆ ಒಂದು ಕ್ಷಣ ತಡೆಯಿರಿ - ಕನ್ನಡ ಸಿನಿಮಾಗಳಲ್ಲಿ ಹಾಡುಗಳು ಇನ್ನೇನು ತಮ್ಮ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ ಎನ್ನುವಾಗ 'ಪ್ರೇಮಲೋಕ'ದಲ್ಲಿ 'ಈ ನಿಂಬೇ ಹಣ್ಣಿನ ಹುಡುಗಿ'ಯಿಂದ ಆರಂಭಿಸಿ ಒಟ್ಟಾರೆ ಹತ್ತು ಹಾಡುಗಳಿರುವ ಆ ಚಿತ್ರದಲ್ಲಿ ಹಂಸಲೇಖರವರ ಪ್ರತಿಭೆಯನ್ನು ಎಲ್ಲರೂ ಕೊಂಡಾಡುವವರೇ, ಹದಿನಾರು ರೀಲುಗಳಿರುವ 'ಪ್ರೇಮಲೋಕದಲ್ಲಿ' ಪ್ರತೀ ಹದಿನೈದು ನಿಮಿಷಕ್ಕೊಂದು ಹಾಡು ಬರುವುದೂ, ಹಾಗೆ ಬಂದ ಹಾಡುಗಳು ಕನ್ನಡ ಚಿತ್ರ ಪ್ರೇಮಿಗಳನ್ನು ಒಂದು ಕ್ಷಣ 'ಮಾಯಾ ಬಜಾರ್'ನ ಕಾಲಕ್ಕೆ ಕೊಂಡೊಯ್ದಿರಲೂ ಸಾಕು! ನಾನು ಉದಯಶಂಕರ್ ಅಂತೆಯೇ ಹಂಸಲೇಖಾರ ಅಭಿಮಾನಿ ಕೂಡಾ - ಅವರ ಒಳ್ಳೆಯ ಹಾಗೂ ಕೆಟ್ಟ ಹಾಡುಗಳು ಬೇಕಾದಲ್ಲಿ ನನಗೆ ತಿಳಿಸಿ.




ಆಗಲೇ ನೋಡಿ, ಎಲ್ಲರೂ ಹಂಸಲೇಖಾರ ಬರಹ, ಸಂಗೀತಕ್ಕೆ ಮುಗಿಬಿದ್ದದ್ದು - ಎಲ್ಲ ನಿರ್ದೇಶಕ, ನಿರ್ಮಾಪಕರಿಗೂ ಹಂಸಲೇಖರು ಅಂದು ಬೇಕಾಗಿದ್ದರು, ಪಾರ್ವತಮ್ಮನವರ ವಜ್ರೇಶ್ವರಿ ಕಂಬೈನ್ಸ್‌ನವರೂ ಸೇರಿ! ಆಗಲೇ (೧೯೮೮ ರಲ್ಲಿ) ಶಿವರಾಜ್‌ಕುಮಾರ್‌ರ 'ರಣರಂಗ'ಕ್ಕೆ 'ಜಗವೇ ಒಂದು ರಣರಂಗ' ಎಂದು ಹಂಸಲೇಖಾ ಹಾಡುಬರೆದಿದ್ದರು. ನನಗೆ ಎಲ್ಲಿಯೋ ರಾಜ್ ಪರಂಪರೆ ತಮ್ಮ ಜೀವನಾಡಿಯಾದ ಉದಯಶಂಕರ್‌ರವರನ್ನು ಈ ಸಂದರ್ಭದಲ್ಲಿ ಉಪೇಕ್ಷಿಸಿದ್ದರು ಎಂದು ಓದಿದ್ದ ನೆನಪು - rumor ಇದ್ದರೂ ಇರಬಹುದು. ಅಕಸ್ಮಾತ್ ಆ ಸುದ್ದಿ ನಿಜವೆಂದೇ ಆದರೆ ಪಾರ್ವತಮ್ಮನವರು ಉದಯಶಂಕರ್‌ನಂತವರನ್ನು ಹೀಗೆ ಉಪೇಕ್ಷಿಸಿದ್ದು ಸರಿಯೇ?

***

ಇಲ್ಲಿದೆ ನೋಡಿ ನನ್ನ ನಿಜವಾದ ತೊಳಲಾಟ: ನೀವು ಪಾರ್ವತಮ್ಮನವರ ಲೇಖನಗಳನ್ನು ಓದುತ್ತಾ ಬಂದಂತೆ ಕನ್ನಡದಲ್ಲಿ 'ಸತ್ವಪೂರ್ಣ' ಬರಹಗಾರರ ಕೊರತೆ ಇದೆ ಎನ್ನುವ ಸತ್ಯ ದುತ್ತನೆ ಎದುರಾಗುತ್ತದೆ. ಚಿತ್ರ ಮಾಧ್ಯಮ ಅನ್ನೋದು ಹಲವಾರು ಜನರನ್ನು ತಲುಪುವಂತಹ ಮಹಾ ಮಾಧ್ಯಮ, ಅದರಲ್ಲಿ ಪ್ರತಿಭೆಗಳ ಕೊರತೆ ಇದ್ದು, ಕನ್ನಡಿಗರು mediocre ಬರಹಗಾರ, ಸಂಗೀತಗಾರರನ್ನೇ ಅನುಭವಿಸುತ್ತಾ ಬಂದಲ್ಲಿ ಚಿತ್ರರಂಗದ ಮೇಲಿನ ನಂಬಿಕೆ ಹಾಗೂ ಭರವಸೆಗಳು ಕ್ರಮೇಣ ಕಡಿಮೆಯಾಗತೊಡಗುತ್ತೆ. ಪ್ರತಿಭೆ ಇದ್ದು, ಅದರ ಮೇಲೆ ಪಟ್ಟ ಪರಿಶ್ರಮದಿಂದ, ತಮ್ಮ ಅನುಭವಗಳಿಂದ ಜನರಿಗೆ ಉತ್ತಮ ಕಥೆ, ಹಾಡುಗಳನ್ನು ನೀಡಬೇಕಾದವರಿಗೆ ದೊಡ್ಡ ಡಿಮ್ಯಾಂಡಿದೆ, ಹೀಗಿರುವಾಗ 'ನಾನೂ ಚಿತ್ರಕಥೆ ಬರೆಯುವವನಾಗುತ್ತೇನೆ' ಎಂದು ಕನಸ್ಸನ್ನಿಟ್ಟುಕೊಂಡು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾದರೆ...ಎಂದು ಹಲವಾರು 'ರೆ'ಗಳನ್ನಿಟ್ಟುಕೊಂಡು ಯೋಚಿಸುತ್ತೇನೆ.

***

ನನ್ನ ಸ್ನೇಹಿತರೊಬ್ಬರು ಮಾತಿನ ಮಧ್ಯೆ '...ಎ.ಆರ್. ರೆಹಮಾನ್‌ನ ಶೈಲಿಯಲ್ಲಿ ಈ ಟ್ಯೂನ್ ಇದೆ, ಕಳಿಸ್ತೇನೆ ನೋಡಿ...' ಎಂದರು.
'ಹೌದಾ, ಎ. ಆರ್. ರೆಹಮಾನೇ ಅಲ್ಲಿಂದ ಇಲ್ಲಿಂದ ಹಾಡು ಹಗಲೇ ಕದ್ದು ತರ್‍ತಾನಂತೆ, ಅವನನ್ನ ಯಾಕೆ ಜನ್ರು ಅನುಕರಿಸ್ತಾರೋ, ಅದರ ಬದಲಿಗೆ ಅವನ ಗುರು ಇಳಯರಾಜಾನೋ, ಅಥವಾ ಅವರ ಗುರು ಜಿ.ಕೆ.ವೆಂಕಟೇಶ್‌ರನ್ನೋ ಅನುಕರಿಸಿದ್ದರೆ ಎಷ್ಟೋ ಚೆನ್ನಾಗಿತ್ತು!' ಎಂದೆ.

ನನ್ನ ಸ್ನೇಹಿತರು ಜೋರಾಗಿ ನಕ್ಕು ಬಿಟ್ಟರು.

Tuesday, April 25, 2006

ಸುಗಮ ಸಂಗೀತ ಸುಲಭ ಸಾಧನೆಯೇ?

ಜೂನ್ ೧೨, ೨೦೦೫ರ ಪ್ರಜಾವಾಣಿಯಲ್ಲಿ 'ನವ್ಯ ಸಾಹಿತ್ಯದ ಅಬ್ಬರದ ಸಂದರ್ಭದಲ್ಲಿ ನವೋದಯ ಸಾಹಿತ್ಯಕ್ಕೆ ಸುಗಮ ಸಂಗೀತ ಸ್ಥಾನ ಕಲ್ಪಿಸಿತು' ಎಂದು ಹಿರಿಯ ಕವಿ ಶಿವರುದ್ರಪ್ಪನವರು ಹೇಳಿದರೆಂದು ವರದಿಯಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ಜೂನ್ ೧೭ನೇ ತಾರೀಖು ವಾಚಕರವಾಣಿಯಲ್ಲಿ ಡಿ.ಎ.ಶಂಕರ್ ಅವರು ನೊಂದು ಬರೆದಿದ್ದರು - 'ಸಾಹಿತ್ಯದಿಂದ ಸುಗಮಸಂಗೀತವೇ ಹೊರತು, ಸುಗಮ ಸಂಗೀತದಿಂದ ಸಾಹಿತ್ಯವಲ್ಲ. ಸುಗಮ ಸಂಗೀತವೆನ್ನುವುದು ಕಷ್ಟ ಪಟ್ಟು ಸಾಧನೆ ಮಾಡದವರು ಆಯ್ದುಕೊಳ್ಳುವ ಮಾರ್ಗ' ಎಂಬುದಾಗಿ (ಕಾರಣಾಂತರಗಳಿಂದ ಪ್ರಜಾವಾಣಿಯಲ್ಲಿ ಈ ಹಳೆಯ ಕೊಂಡಿ ಕಳಚಿಕೊಂಡಿದೆಯಾದ್ದರಿಂದ ನಿಮ್ಮ ಪರಾಮರ್ಶೆಗೆ ಪೂರ್ಣ ವಿಷಯವನ್ನು ಕೊಡಲಾಗಲಿಲ್ಲ). ಮುಂದೆ ಜೂನ್ ೨೦ರ ವಾಚಕರವಾಣಿಯಲ್ಲಿ ಶಿವರುದ್ರಪ್ಪನವರು ನಾನು ಆ ರೀತಿ ಹೇಳಿಲ್ಲ ಎಂದು ವಿವರಣೆ ನೀಡಿದರು. ಹೇಳಿದ್ದಾರೆ-ಹೇಳಿಲ್ಲ ಎನ್ನುವ ವ್ಯತಿರಿಕ್ತ ಮಾತುಗಳು ಅಚ್ಚಾಯಿತೇ ವಿನಾ ಪತ್ರಿಕೆಯವರು ಯಾವುದಕ್ಕೂ ಸ್ಪಷ್ಟೀಕರಣ ನೀಡದಿದ್ದುದನ್ನು ನೋಡಿ ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರಿಗೆ ಕನ್ನಡ ಪತ್ರಿಕೆಯ ಸಂಪಾದಕರೊಬ್ಬರು ಹೇಳಿದ 'ಕನ್ನಡ ಓದುಗರು ಅಷ್ಟೊಂದ್ mature ಇಲ್ಲಾ ರೀ' ಅನ್ನೋ ಮಾತು ನಿಜವಿರಬಹುದೇನೋ ಎಂದು ಒಮ್ಮೆ ದಿಗಿಲಾಯಿತು.

ಶಂಕರ್ ಅವರ ವಾಚಕರವಾಣಿಯ ಬರಹ ನನ್ನನ್ನು ಹಲವು ಯೋಚನೆಗಳಿಗೆ ಒಡ್ಡಿತ್ತು:

೧) ಪಕ್ಕಾ ಶಾಸ್ತ್ರೀಯ ಸಂಗೀತಕ್ಕೆ ಮಾರು ಹೋದವರಿಗೆ ಸುಗಮ ಸಂಗೀತ ರುಚಿಸಿರಲಾರದು, ಅಲ್ಲದೇ ಶಾಸ್ತ್ರೀಯ ಸಂಗೀತಕ್ಕೆ ಕಠಿಣ ಅಭ್ಯಾಸ ಮುಖ್ಯವೂ ಹೌದು, ಮೂಲವೂ ಹೌದು. ಆದರೆ ಸುಗಮ ಸಂಗೀತವನ್ನು ಹಾಡುವವರು ಹಾಗೂ (ಸುಗಮ ಸಂಗೀತಕ್ಕಾಗಿಯೆಂದೇ) ಅಂತಹ ಹಾಡುಗಳನ್ನು ಬರೆಯುವವರು 'ಮೈಗಳ್ಳರು' ಅಥವಾ 'ಕಠಿಣ ಪರಿಶ್ರಮ ಮಾಡದವರು' ಎಂದು ಯೋಚಿಸುವಂತೆ ಈ ಹಿಂದೆ ಹಲವಾರು ಸಾರಿ ನನಗೆ ಅನ್ನಿಸಿದೆ. ನಿಮಗೆ ಗೊತ್ತಿರಬೇಕು, ಲಂಕೇಶ್ ಕೆಲವರನ್ನು 'ಕ್ಯಾಸೆಟ್ ಕವಿಗಳು' ಎಂದು ಲೇವಡಿ ಮಾಡಿರೋ ವಿಚಾರ.

೨) ಕನ್ನಡದ ಕವನಗಳನ್ನು ಯಾವುದೋ ಒಂದು ರಾಗಕ್ಕೆ ಅಳವಡಿಸಿ ಅದರ ಮಹತ್ವವನ್ನೇ ಹಾಳು ಮಾಡುವ ವಿಚಾರ - ಉದಾಹರಣೆಗೆ ಬೇಂದ್ರೆಯವರ 'ಕುರುಡು ಕಾಂಚಾಣ'ವನ್ನು ಕೇಳಿದಾಗ ಯಾಕಾದಾರೂ ಕಷ್ಟ ಪಟ್ಟು ಹಾಡಿ ಕ್ಯಾಸೆಟ್ಟಿನಲ್ಲಿ ತುರುಕುತ್ತಾರೋ ಎಂದೆನಿಸಿದೆ, ಅದರ ಭಾಷೆ, ಅರ್ಥ, ಮಹತ್ವ ಎಲ್ಲವೂ ಯಾವುದೋ 'ಎದ್ದೋಡಿ' ರಾಗದಲ್ಲಿ ಲಯವಿಲ್ಲದೆ ಮೂಡಿ ಬರುವಾಗ ನನಗರಿವಿಲ್ಲದೇ ಫಾಸ್ಟ್ ಫಾರ್‌ವರ್ಡ್ ಗುಂಡಿ ಒತ್ತಬೇಕಾಗುತ್ತದೆ, ಇದೇ ಸಾಲಿಗೆ ಬರೋ ಮತ್ತೊಂದು ಉದಾಹರಣೆಯೆಂದರೆ 'ನಾಕು ತಂತಿ', ನಾನು ಹೇಳಿದೆನೆಂದು 'ನಾಕು ತಂತಿ'ಯನ್ನು ಒಮ್ಮೆ ಓದಿ ನೋಡಿ ಹಾಗೂ ಕೇಳಿ ನೋಡಿ ನಿಮಗೇ ಗೊತ್ತಾಗುತ್ತದೆ.

೩) ಹಾಡಿನ ರೂಪದಲ್ಲಿದ್ದಾಗ ಜನ ಸಾಮಾನ್ಯರನ್ನು ಸುಲಭವಾಗಿ ತಲುಪುತ್ತದೆ ಹಾಗೂ ಹೆಚ್ಚು ದಿನ ನೆನಪಿನಲ್ಲುಳಿಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಆಧುನಿಕ ಕನ್ನಡ ಕಾವ್ಯ, ಕವನ ಈ ಹಾಡಿನ, ಪ್ರಾಸದ ರೂಪದಿಂದ ಬಹಳಷ್ಟು ಮೇಲೆ ಬಂದಿದೆ. ನಾನು ಇತ್ತೀಚೆಗೆ ಓದಿದ ಅದೆಷ್ಟೋ ಕವಿತೆಗಳು ತಮ್ಮಲ್ಲಿ ಯಾವುದೆ ಪ್ರಾಸವಿಲ್ಲದೇ ಚೆನ್ನಾಗೇ ಓದಿಸಿಕೊಂಡು ಹೋಗುತ್ತವೆ, ಹಾಗೂ ಅವುಗಳಲ್ಲಿ ಬದುಕಿನ ಬೇಕಾದಷ್ಟು ಮುಖಗಳ ಪರಿಚಯವಾಗುತ್ತದೆ.

***

ನಾನೂ ಸುಗಮ ಸಂಗೀತವನ್ನು ಆಲಿಸುತ್ತೇನೆ, ಕೆಲವನ್ನು ಇಷ್ಟ ಪಟ್ಟಿದ್ದೇನೆ, ಹೆಚ್ಚಿನವುಗಳನ್ನು ಮತ್ತೆ ಕೇಳಲು ಹೋಗಿಲ್ಲ. ನನ್ನ ಪ್ರಶ್ನೆ ಇಷ್ಟೇ: ಸುಗಮ ಸಂಗೀತದ ಹಾದಿ ಹಿಡಿಯುವುದು ಸುಲಭ ಮಾರ್ಗವೇ, ಸುಗಮ ಸಂಗೀತಕ್ಕೆ ಅಳವಡಿಸಲು ಕವಿತೆಗಳನ್ನು ತಿರುಚುವುದು ಸರಿಯೇ? ಸುಗಮ ಸಂಗೀತದಲ್ಲಿ ಯಾವುದಕ್ಕೆ ಪ್ರಾಧಾನ್ಯತೆ ಹೆಚ್ಚು - ರಾಗಕ್ಕೋ, ಭಾವಕ್ಕೋ ಅಥವಾ ಅಕ್ಷರಗಳಿಗೋ?

***

ಇಲ್ಲಿಗೆ ಬಂದ ಮೇಲೆ ಕೆಲವು ಹೆವಿಮೆಟಲ್ ಬ್ಯಾಂಡ್‌ಗಳಿಂದ ಹಿಡಿದು, ಪಾಪ್ ಸಂಗೀತದ ಕೆಲವರನ್ನು ಹಾಗೂ ಕಂಟ್ರೀ ಮ್ಯೂಸಿಕ್‌ನಲ್ಲಿ ಇನ್ನು ಕೆಲವರನ್ನು ಕೇಳಲು ಶುರು ಮಾಡಿದೆ. ನನ್ನ ಅದೃಷ್ಟಕ್ಕೆ ಎಂಬಂತೆ ಸುಮಾರು ಆರು ತಿಂಗಳುಗಳ ಕಾಲ ಪ್ರತೀ ವಾರಾಂತ್ಯದಲ್ಲಿ ಸುಮಾರು ೫೦೦ ಮೈಲಿಗಳ ಡ್ರೈವ್ ಮಾಡುವುದು ಅನಿವಾರ್ಯವಾಗಿತ್ತು. ಆ ಸಮಯದಲ್ಲೇ ನಾನು ಇಲ್ಲಿನ ಬಹಳಷ್ಟು ಸಂಗೀತವನ್ನು ಕೇಳಿದ್ದು - ದಾರಿಯಲ್ಲಿ ಸಿಗುವ ಥರಾವರಿ ಎ.ಎಮ್., ಎಫ಼್.ಎಮ್. ಸ್ಟೇಷನ್‌ಗಳನ್ನು ಹಾಕಿಕೊಂಡು ಅಂತೂ ಇಂತೂ ಆರು ತಿಂಗಳು ಮುಗಿಯುವುದರೊಳಗೆ ಹಲವಾರು ಹಾಡುಗಳು ನನ್ನ ನಾಲಿಗೆಯ ಮೇಲೆ ನಲಿದಾಡತೊಡಗಿತು. ಇಲ್ಲಿನ ಬ್ಯಾಂಡ್‌ಗಳು ಇಂಗ್ಲೀಷ್‌ನಲ್ಲಿ ಹಾಡಿದ ಹಾಡುಗಳನ್ನು ನಾನು ನನ್ನ ಸ್ವರದಲ್ಲಿ ಹೇಳಿದರೆ ಅದು 'ಕನ್ನಡದ' ಉಚ್ಚಾರಣೆಯಲ್ಲಿ ಹಾಡಿದ ಹಾಡಿನಂತೆ ನನಗೇ ಕೇಳಿಸಿ ಮತ್ತೆ ಯಾರಾದರೂ ಕೇಳಿಯಾರೆಂಬ ಸಂಕೋಚಕ್ಕೆ ಒಳಒಳಗೇ ಹೇಳಿಕೊಳ್ಳುವಂತಾಯಿತು! ಈ ಪರಿಯಾಗಿ ಹಾಡುಗಳನ್ನು ಕೇಳಿದ್ದರಿಂದ ಒಂದಂತೂ ಅನುಕೂಲವಾಯಿತು - ಮೊದಮೊದಲು ರ್‍ಯಾಪ್‌ನ ಒಂದು ಪದವು ಅರ್ಥವಾಗದಿದ್ದುದು, ಕೊನೆಕೊನೆಗೆ ಸುಮಾರಾಗಿ ಅರ್ಥವಾಗತೊಡಗಿತು!

ಒಂದು ದಿನ ಆಫೀಸ್‌ನಲ್ಲಿ ಇದ್ದಾಗಲೇ Spice Girls ಹಾಡಿರೋ Wannabe ಹಾಡುಗಳನ್ನ ಓದುತ್ತಾ ಇದ್ದೆ. ನನ್ನ ಕೆನೆಡಿಯನ್ ಸಹೋದ್ಯೋಗಿ ಹತ್ತಿರ ಬಂದು ನೋಡಿ 'ಏನು ಮಾಡ್ತಾ ಇದ್ದೀಯಾ?' ಎಂದ, ನಾನು Spice Girls lyrics ಓದ್ತಾ ಇದ್ದೇನೆ ಎಂದೆ, ಅದಕ್ಕವನು ತಲೆಗೆ ತಿವಿದು 'ಅಯ್ಯೋ ಅದನ್ನೆಲ್ಲ ಯಾರು ಓದ್ತಾರೆ, ಸಂಜೆ ಮನೇಗೆ ಹೋದ್ ಮೇಲೆ ಕೈಯಲ್ಲಿ ಒಂದು ಬಿಯರ್ ಹಿಡಿದುಕೊಂಡು ಈ ಹಾಡುಗಳನ್ನು ಕೇಳಿದ್ರೆ ಏನಾದ್ರೂ ಸುಖ ಸಿಗಬಹುದು ನೋಡು!' ಎಂದು ನಕ್ಕ.

ಇನ್ನೂ ಇಲ್ಲಿನ ಹಾಡುಗಳನ್ನು ಓದುವ ಪರಿಪಾಠವನ್ನು ನಾನು ಬಿಟ್ಟಿಲ್ಲ - ಹಾಗೆ ಮಾಡದಿದ್ದರೆ ನನಗೆ ಪೂರ್ತಿ ಹಾಡಿನ ಅರ್ಥವಾಗುವುದಿಲ್ಲ, ಹಾಗೂ ಈ ಹಾಡುಗಳಲ್ಲಿನ ಭಾಷೆಯ ಬಳಕೆಗೂ, ಅದನ್ನು ಹಾಡುವ ರೀತಿಗೂ ಬಹಳಷ್ಟು ವ್ಯತ್ಯಾಸಗಳಿರೋದರಿಂದ ಹಾಡುಗಳನ್ನು ಕೇಳುವಾಗ ರಾಗಕ್ಕೋ, ರಿದಂ‌ಗೋ ಗಮನಕೊಟ್ಟರೆ, ಹಾಡುಗಳನ್ನು ಓದುವಾಗ ಅದರ ಉಳಿದ ಅರ್ಥ, ಹಿನ್ನೆಲೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಂತಾಗುತ್ತದೆ.

***
ಒಟ್ಟಿನಲ್ಲಿ ಎಲ್ಲಾದರೂ ಕೀರ್ತಿ ಒಬ್ಬ ಕಲಾವಿದನನ್ನು ಹುಡುಕಿಕೊಂಡು ಬರಬೇಕು ಎಂದರೆ ಅದರ ಹಿಂದೆ ಅವಿರತ ಪರಿಶ್ರಮವಂತೂ ಖಂಡಿತವಾಗಿರುತ್ತದೆ. ಪ್ರತಿಭೆ ಇದ್ದರೂ, ಇಲ್ಲದಿದ್ದರೂ ಯಶಸ್ಸಿನ ಉತ್ತುಂಗದಲ್ಲಿ ನಿಲ್ಲಬೇಕೆಂದರೆ ಅದು ಸುಲಭ ಸಾಧ್ಯವೇನಲ್ಲ. ಸುಗಮ ಸಂಗೀತವೋ, ಶಾಸ್ತ್ರೀಯ ಸಂಗೀತವೋ - ಎಲ್ಲೂ 'ಕಠಿಣ ಪರಿಶ್ರಮ'ವಿಲ್ಲದೇ ಅದು ಹೇಗಾದರೂ ಜನರು ಮುಂದೆ ಬರುತ್ತಾರ್‍ಓ? ಈ ನಿಟ್ಟಿನಲ್ಲಿ ಶಂಕರ್ ಅಂತವರೊಬ್ಬರಾದರೂ ಉರಿದುಕೊಂಡು ಬರೆದರಲ್ಲಾ ಎಂದು ಸಂತೋಷವಾಯಿತು, ಕನ್ನಡದ ಓದುಗರು ಪ್ರಬುದ್ಧರಲ್ಲ ಎಂದು ಹಗುರವಾಗಿ ಮಾತನಾಡಿದ ಆ ಸಂಪಾದಕರ ಹೇಳಿಕೆ ಸುಳ್ಳಾಗಲಿ.

Monday, April 24, 2006

ಓಟವೇ ಗುರಿಯೇ, ಗಡಿಯಾರ ದೇವರೇ ನಿನಗೆ...

ಕಾಲೇಜಿಗೆ ಹೋಗುವಾಗ 'ಟೈಪ್‌ರೈಟಿಂಗ್ ಕ್ಲಾಸ್‌ಗೆ ಸೇರಿಕೋ ಮುಂದೆ ಅನುಕೂಲವಾಗುತ್ತದೆ' ಎಂದು ಯಾರೋ ಹೇಳಿದ್ದರೆಂದು ನಾನೂ ಸೇರಿಕೊಂಡಿದ್ದೆ - ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಜ್ಯೂನಿಯರ್ ಪರೀಕ್ಷೆಗಳನ್ನು ಮುಗಿಸಿದ್ದೆ. ಆಗಿನ ಕಾಲದಲ್ಲಿ ಹಲವಾರು ಜನ ಟೈಪ್‌ರೈಟಿಂಗ್ ಕೋರ್ಸು ಮುಗಿಸೋರು, ಅವರಲ್ಲಿ ಕೆಲವು ಮಂದಿ ಮುಂದೆ ಶಾರ್ಟ್‌ಹ್ಯಾಂಡ್ ಕೂಡಾ ಮಾಡೋರು, ಆದರೆ ನಾನು ಜ್ಯೂನಿಯರ್ ಪರೀಕ್ಷೆಗಳನ್ನು ಮುಗಿಸಿ ಅಲ್ಲಿಗೇ ನಿಲ್ಲಿಸಿದ್ದೆ.

ನಾನು ಕಲಿತ ಟೈಪ್‌ರೈಟಿಂಗ್ ಕಲೆ (ಅಥವಾ ವಿದ್ಯೆ) ನನಗೆ ಬಹಳ ಅನುಕೂಲಗಳನ್ನು ಮಾಡಿಕೊಟ್ಟಿದೆ - ಸಾಗರ, ಶಿವಮೊಗ್ಗ, ಬನಾರಸ್, ಮದ್ರಾಸ್ ಮುಂತಾದೆಡೆಯಲ್ಲಾ ನಿಮಿಷಕ್ಕೆ ೪೦ ಪದಗಳನ್ನು ಟೈಪ್ ಮಾಡುತ್ತೇನೆ ಎಂದು ಹೇಳಿಕೊಳ್ಳೋದೇ ನನಗೆ ಹೆಮ್ಮೆಯ ವಿಷಯವಾಗಿತ್ತು. ಅಲ್ಲದೇ ಯಾವಾಗಲೂ ಜೋರಾಗಿ ಮಾತನಾಡುವವರ ವಾದವೇ ಗೆಲ್ಲೋ ಹಾಗೆ, ಅಂದಿನ ಡಾಸ್, ಯುನಿಕ್ಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ 'ಜೋರಾಗಿ ಟೈಪ್ ಮಾಡುವವನೇ ಜಾಣ' ಎಂಬ ಸ್ಟ್ರಾಟೀಜಿಕ್ ಅಡ್ವಾಂಟೇಜ್ ಕೂಡಾ ನನಗೆ ಬಂದಿತ್ತು. ಅಲ್ಲದೇ, ಪ್ರಾಮಾಣಿಕವಾಗಿ ಹೇಳೋದಾದರೆ, ನಾನು ಇಲ್ಲಿಯ ಮ್ಯಾನೇಜ್‌ಮೆಂಟ್ ತರಗತಿಯ ಪೇಪರ್‌ಗಳನ್ನು ತಯಾರು ಮಾಡುವಾಗಲೂ ನನ್ನ ಟೈಪಿಂಗ್ ಸ್ಪೀಡ್ ನನ್ನ ಕೈ ಬಿಟ್ಟಿದ್ದಿಲ್ಲ, ಉಳಿದವರಿಗೆ ಒಂದು ಪೇಪರ್‌ನ್ನು ಬರೆಯಲು (ಟೈಪ್ ಮಾಡಲು) ನಾಲ್ಕು ಘಂಟೆ ಬೇಕಾಗುತ್ತಿದ್ದರೆ, ನನಗೆ ಕೇವಲ ಒಂದು ಘಂಟೆ ಸಾಕಾಗುತ್ತಿತ್ತು.

***

ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ದೊಡ್ಡ ಕ್ರಾಂತಿಯೇ ನಡೆದು ಹೋಗಿದೆ. ಇಂದು ನನಗಿರುವ ಹಲವಾರು ಇ-ಮೇಲ್ ಅಕೌಂಟುಗಳೂ, ಇನ್ಸ್ಟಂಟ್ ಮೆಸ್ಸೇಜಿಂಗ್ ವ್ಯವಸ್ಥೆಯೂ, ನನ್ನನ್ನು ತಲುಪುವ ಥರಾವರಿ ಟೆಕ್ಸ್ಟ್ ಸಂದೇಶಗಳೂ ಇತ್ಯಾದಿ ನನ್ನನ್ನು ಹೈರಾಣಾಗಿಸಿವೆ. ಇಷ್ಟು ವೇಗವಾಗಿ ಟೈಪ್ ಮಾಡುವ ನನಗೇ ಹೀಗಾದರೆ ಇನ್ನು ಕೀ ಬೋರ್ಡ್ ನೋಡಿಕೊಂಡು ಟೈಪ್ ಮಾಡುವ ನನ್ನ ಸಹೋದ್ಯೋಗಿಗಳು ಅದು ಹೇಗೆ ತಮ್ಮ ತಮ್ಮ 'ಮೆಸ್ಸೇಜಿಂಗ್' ಅಗತ್ಯಗಳಿಗೆ ಸ್ಪಂದಿಸುತ್ತಾರೋ ಎಂದು ಹೆದರಿಕೆಯಾಗುತ್ತದೆ. ಏಕೆಂದರೆ, ಇಂದು ನಮ್ಮ ಆಫೀಸಿನಲ್ಲಿ ಯಾರನ್ನು ಕೇಳಿದರು ದಿನಕ್ಕೆ ಕೊನೇ ಪಕ್ಷ ಒಂದು ನೂರು (ಅಫಿಷಿಯಲ್) ಇ-ಮೇಲ್ ಬರೋದು ಗ್ಯಾರಂಟಿ, ಇನ್ನು ಅವುಗಳನ್ನು ಓದಿ, ಓದಬಾರದವುಗಳನ್ನು ತೆಗೆದುಹಾಕಿ, ಅದರ ಜೊತೆಯಲ್ಲೇ ಕಾರ್ಪೋರೇಟ್ ಕುತ್ತಿಗೆ ಪಟ್ಟಿಗಳಲ್ಲೊಂದಾಗಿರೋ ಇನ್ಸ್ಟಂಟ್ ಮೆಸ್ಸೇಜ್‌ಗಳ ವೇಗಕ್ಕೆ ಹೊಂದಿಕೊಂಡು ಉತ್ತರ ಕೊಡುವುದರಲ್ಲಿ ದಿನವೇ ಮುಗಿದು ಹೋಗುತ್ತದೆ. ಎಷ್ಟೋ ದಿನ ಹೀಗೇ ಹಲವಾರು ಮೆಸ್‌ಗಳ ಮಧ್ಯೆ ಇರುವಾಗ, ದಿನದ ಇಪ್ಪತ್ತು ಪರ್ಸೆಂಟ್ ಕೆಲಸವೂ ಇನ್ನೂ ಮುಗಿಯದಿರುವಾಗ ಸಂಜೆ ಐದು ಘಂಟೆ ಆಗಿ ಹೋಗಿ ಒಂದು ಕಡೆ ಮನೆಗೆ ಹೋಗುವ ತವಕ ಮತ್ತೊಂದು ಕಡೆ ನಾಳಿನ ಡೆಲಿವರೆಬಲ್ ಇವುಗಳ ನಡುವೆ ಮನಸ್ಸು ರೋಸಿ ಹೋಗುತ್ತದೆ, ಆಫೀಸ್‌ನಲ್ಲಿ ಒಂದೇ ಲೇಟ್‌ಆಗಿ ಕೆಲಸ ಮಾಡಿಯೋ, ಇಲ್ಲಾ ಮನೆಗೆ ಹೋಗಿ ಮನೆಯಿಂದ ಕೆಲಸ ಮಾಡಿ ಆಗ ಬೇಕಾದ ಕೆಲಸಗಳನ್ನು ಮುಗಿಸುವುದು ನಾರ್ಮ್ ಆಗುತ್ತದೆ.

***

ನಾನು ಮೊಟ್ಟ ಮೊದಲ ಬಾರಿಗೆ ಅಮೇರಿಕದಿಂದ ೧೯೯೮ ರಲ್ಲಿ ಭಾರತಕ್ಕೆ (ಹಲವಾರು ಬಣ್ಣಗಳನ್ನು ಬಳಿದುಕೊಂಡು) ಹೋಗಿದ್ದೆ, ವಿದೇಶದಿಂದ ಮೊಟ್ಟ ಮೊದಲ ಬಾರಿಗೆ ಹೋದ ಎಲ್ಲರಿಗೂ ಆಗುವಂತೆ (ಮೊದಮೊದಲು) ನನ್ನ ಕಣ್ಣಿಗೆ ಅವರೆಲ್ಲರೂ ಬದಲಾದಂತೆ ಕಂಡು ಬಂದಿದ್ದರು - ಆದರೆ ಬದಲಾದವನು ನಾನಾಗಿದ್ದೆ. ಕೈ ತುಂಬಿ ಮಿಕ್ಕುವಷ್ಟು ಕಾಸು ತುಂಬಿದ ಅಂದಿನ ದಿನಗಳಲ್ಲಿ, ನನ್ನ "ವಿದೇಶೀ ಸ್ಟೇಟಸ್" ನನ್ನನ್ನು ಓರಗೆಯವರಿಗಿಂತಲೂ ಹೆಚ್ಚಿನವನನ್ನಾಗಿ ಮಾಡಿದ್ದರಿಂದಲೋ ಏನೋ ನಾನು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲವೆಂದು ಕಾಣುತ್ತೆ. ಸುಮಾರು ಮೂರು ವಾರಗಳ ರಜಾ ದಿನಗಳು ಮುಗಿಯುತ್ತಾ ಬಂದಂತೆ ಹಾಗೂ-ಹೀಗೂ ಲೋಕಾಭಿರಾಮವಾಗಿ ಹರಟುತ್ತಿದ್ದ ಒಂದು ಘಳಿಗೆಯಲ್ಲಿ ನಾನು ಕೇಳಿದೆನೆಂತಲೋ ಅಥವಾ ಮತ್ಯಾವುದೋ ಕಾರಣದಿಂದ ನನ್ನ ಅಕ್ಕನ ಮಗಳು ಹೇಳಿದಳು 'ಮಾಮ, ನೀವು ಮೊದ್ಲೆಲ್ಲ ಕನ್ನಡ ಎಷ್ಟೊಂದು ಚೆನ್ನಾಗಿ ಮಾತಾಡ್ತಾ ಇದ್ರಿ, ಆದ್ರೆ ಈಗ ಇಂಗ್ಲೀಷ್ ಪದ ಜಾಸ್ತಿ ಬಳಸೋದಕ್ಕೆ ಶುರು ಮಾಡಿದೀರ, ಬಂದ ಮೊದಲಲ್ಲಿ ನಮಿಗೆಲ್ಲ ಇಂಗ್ಲೀಷ್‌ನಲ್ಲೇ ಬೈತಿದ್ರಿ ಆದ್ರೆ ಈಗ ಬಯ್ಯೋದಕ್ಕೆ ಕನ್ನಡ ಬಂದಿದೆ...' ಎಂದು ನಗುತ್ತಾ ಹೇಳಿ ಹೋದಳು - ಆಗ ನನ್ನ ತಲೆಯಲ್ಲಿ ಹತ್ತಿದ ಲೈಟ್ ಬಲ್ಬು ಇನ್ನೂ ಆರಿಲ್ಲ!

ಮುಂದೆ ೨೦೦೧ ರಲ್ಲಿ ಭಾರತಕ್ಕೆ ಹೋದಾಗ ನನ್ನನ್ನು ನೋಡಿ ಮಾತನಾಡಿಸಲೆಂದು ಜನತಾದಳ ಪಾರ್ಟಿ ಪ್ರೆಸಿಡೆಂಟೂ, ಮೈಸೂರು ಬ್ಯಾಂಕಿನ ಮ್ಯಾನೇಜರ್ರೂ, ನನ್ನ ಅಣ್ಣನ ಸಹೋದ್ಯೋಗಿ ಶಿಕ್ಷಕ ಮಿತ್ರರು ಹಲವಾರು ಜನ ಮನೆಗೆ ಬಂದಿದ್ದರು. ಅವರಲ್ಲಿ ಹೆಚ್ಚಿನವರು ನನ್ನ ಜೊತೆಯಲ್ಲಿ ಇಂಗ್ಲೀಷ್‌ನಲ್ಲೇ ಮಾತನಾಡಬೇಕೆಂದು ಹಟ ತೊಟ್ಟಿಕೊಂಡಿದ್ದರೆಂದೋ ಅಥವಾ ಮತ್ಯಾವುದೋ ಕಾರಣಗಳಿಗೆ ಅವರು ಹಿಡಿದು-ಹಿಡಿದು (ನನಗೆ ಹಿಂಸೆ ಎನ್ನಿಸುವಷ್ಟರ ಮಟ್ಟಿಗೆ) ಇಂಗ್ಲೀಷ್‌ನಲ್ಲೇ ಮಾತನಾಡುತ್ತಿದ್ದರು, ಆದರೆ ನಾನು ಸಾವಕಾಶವಾಗಿ ಕನ್ನಡದಲ್ಲಿಯೇ ಉತ್ತರಗಳನ್ನು ಕೊಡುತ್ತಾ ಬಂದಿದ್ದೆ. ಅವರಲ್ಲಿ ಕೆಲವರು 'ಅಮೇರಿಕದಲ್ಲಿದ್ದೂ ಎಷ್ಟೊಂದು ಚೆನ್ನಾಗಿ ಕನ್ನಡ ಮಾತಾಡ್ತಾರೆ!' ಎಂದು ನನ್ನ ಅಣ್ಣನಿಗೆ ಕಾಂಪ್ಲಿಮೆಂಟ್ ಕೊಟ್ಟಿದ್ದರು - ಅದು ನನ್ನ ಅಣ್ಣನಿಗೆ ರುಚಿಸದೇ 'ಅವರು ಇಂಗ್ಲೀಷ್‌ನಲ್ಲಿ ಮಾತನಾಡಿದ್ರೆ ನೀನು ಇಂಗ್ಲೀಷ್‌ನಲ್ಲೇ ಉತ್ತರ ಕೊಡಬೇಕಪ್ಪಾ!' ಎಂದು ನನಗೆ ಪರ್ಸನಲ್ ಆಗಿ ಹೇಳಿದ್ದ.

ನನ್ನ ತಲೆಯಲ್ಲಿ ಇನ್ನೂ ಲೈಟ್ ಬಲ್ಬು ಆರಿ ಹೋಗದಿದ್ದುದರಿಂದಲೋ ಏನೋ ನನ್ನ ಅಕ್ಕನ ಮಗಳು ಈ ಬಾರೀ ಯಾವ ಕಾಮೆಂಟನ್ನೂ ಹೇಳಲಿಲ್ಲ, ನಾನು ಕೇಳಲೂ ಇಲ್ಲ!

***

ಇವು ಇಂದು ನಡೆದ ತಾಜಾ ವಿಚಾರಗಳು:
೧) ಸುಮಾರು ಎಂಟು ಘಂಟೆಯ ಹೊತ್ತಿಗೆ ಆಫೀಸ್‌ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಸಹೋದ್ಯೋಗಿ ಒಬ್ಬಳಿಗೆ ಇನ್ಸ್ಟಂಟ್ ಮೆಸ್ಸೇಜ್ ಕಳಿಸುತ್ತಿದ್ದೆ, ನಾನು ಟೈಪ್ ಮಾಡ ಬೇಕಾಗಿದ್ದುದು 'I will update...' , ಆದರೆ 'update' ಎಂಬ ಪದದ ಬದಲಿಗೆ 'I will updated...' ಎಂದು ಒಮ್ಮೆ ಬರೆದೆ. ನನ್ನ ತಪ್ಪಿನ ಅರಿವಾಗಿ ಮತ್ತೆ ಆಕೆಗೆ ಬರೆದೆ 'I mean update...' ಎಂದು ಬರೆಯುವ ಬದಲಿಗೆ 'I mean updated...' ಎಂದು ಬರೆದೆ, third time is the charm ಅನ್ನೋ ಹಾಗೆ, ಇದನ್ನು ಸರಿ ಮಾಡಲು ನಾನು ಮೂರು ಭಾರಿ ಪ್ರಯತ್ನ ಮಾಡಬೇಕಾಯಿತು. ಪದಗಳನ್ನು ಟೈಪ್ ಮಾಡಿ ಎಂಟರ್ ಒತ್ತುವಲ್ಲಿ ನನ್ನ ಹತೋಟಿಯಲ್ಲಿ ಇರಬೇಕಾದ ಯಾವ ಕಂಟ್ರೋಲ್‌ಗಳೂ ನನ್ನಲ್ಲಿ ಉಳಿದಿಲ್ಲ. ಸುಮಾರು ೨೦ ಕ್ಕೂ ಹೆಚ್ಚು ವಿಂಡೋಗಳನ್ನಿಟ್ಟುಕೊಂಡು, ಮೇಲಿಂದ ಮೇಲೆ ಬರುವ ಇ-ಮೇಲ್, ಇನ್ಸ್ಟಂಟ್ ಮೆಸ್ಸೇಜ್‌ಗೆ ಉತ್ತರ ಕೊಟ್ಟವರಿಗೆ ನನ್ನ ಕಷ್ಟ ಅರ್ಥವಾದೀತು. ಹಾಗೆಯೇ 'her' ಎಂದು ಬರೆಯುವಲ್ಲಿ 'here' ಆಗೋದೂ, 'PC' ಎಂದು ಬರೆಯುವಲ್ಲಿ 'PCD' ಆಗೋದೂ, ಕೆಲವೊಮ್ಮೆ 'whether' ಎಂದು ಬರೆಯುವಲ್ಲಿ 'weather' ಆಗೋದೂ, 'week' ಎಂದು ಬರೆಯುವಲ್ಲಿ 'weak' ಆಗೋದೂ ಇವೆಲ್ಲಾ ಮಾಮೂಲಿಯಾಗಿವೆ.

೨) ಸುಮಾರು ಎಂಟೂವರೆಯ ಹೊತ್ತಿಗೆ, ಇನ್ನೂ ಹೆಚ್ಚಿಗೆ ಪರಿಚಯವಾಗಿರದ ನೆಟಿಜನ್ ಒಬ್ಬರಿಗೆ ನಾನು ಕಳಿಸಿದ ಇ-ಮೇಲ್‌ನಲ್ಲಿ ಸ್ಲ್ಯಾಂಗ್ ಬಳಸಿದ್ದಕ್ಕೆ ಉತ್ತರವಾಗಿ ಇ-ಮೇಲ್ ಒಂದು ಬಂದಿತ್ತು - ಅವರಿಗೆ ಆ ಪದ/ವಾಕ್ಯ ಇಷ್ಟವಾಗಲಿಲ್ಲವೆಂದೂ ಇನ್ನು ಮುಂದೆ ಹಾಗೆ ಮಾಡಬೇಡವೆಂದೂ ನಯವಾಗಿ ತಿಳಿಸಿದ್ದರು. ಮಾತುಕಥೆಯಲ್ಲಿ ಶಿಷ್ಟಾಚಾರವನ್ನು ಪಾಲಿಸಬೇಕಾದದ್ದು ನನ್ನ ಕರ್ತವ್ಯ, ನನಗೆ ದಿನದಲ್ಲಿ ಸಾವಿರಾರು ಪದಗಳನ್ನು ಟೈಪ್ ಮಾಡುವ ಅಗತ್ಯವಿರೋದಕ್ಕೆ, ನಾನು ಎಲ್ಲೆಲ್ಲಿಗೋ ಬಂದು ಏನೇನೋ ಕಲಿತದ್ದಕ್ಕೆ ಅವರೇಕೆ ಬಲಿ ಪಶುಗಳಾಗಬೇಕು, ಅವರೇಕೆ crap ಅನ್ನು ಸಹಿಸಿಕೊಳ್ಳಬೇಕು. ಇದರಿಂದ ನನ್ನ ತಲೆಯಲ್ಲಿನ ಉರಿಯುತ್ತಿದ್ದ ಬಲ್ಬಿನ ಪ್ರಕಾಶ ಇನ್ನಷ್ಟು ಹೆಚ್ಚಾಯಿತು.

***

ಸರಿ, ನಾನೇ ವೇಗವಾಗಿ ಟೈಪ್ ಮಾಡುವವನು, ನಾನೇ ವ್ಯಸ್ಥ (busy) ನೆಂದು ಕೊಂಡು ಬೀಗುತ್ತಿದ್ದವನಿಗೆ ೨೦೦೫ ರ ಜೂನ್ ತಿಂಗಳಿನಲ್ಲಿ ಲೀಡರ್‌ಶಿಪ್ ಪ್ರೋಗ್ರಾಮ್ ಒಂದರ ಆಡಿ ನಮ್ಮ ಸೀನಿಯರ್ ಡೈರೆಕ್ಟರ್ ಒಬ್ಬರನ್ನು ಒಂದು ದಿನದ ಮಟ್ಟಿಗೆ shadow ಮಾಡುವ ಅವಕಾಶ ದೊರೆಯಿತು. ಆ ಮಹಾನುಭಾವನ ಜೊತೆಯಲ್ಲಿ ಕಳೆದ ೮ ಘಂಟೆಗಳಲ್ಲಿ ನಾನು ಬಹಳಷ್ಟನ್ನು ಕಲಿತುಕೊಂಡೆ - ನನ್ನ ಕೆಲಸವೇ ಕಷ್ಟವೆಂದುಕೊಂಡರೆ, ಆತನ ಕೆಲಸ ನನ್ನದಕ್ಕಿಂತ ೧೦ ಪಟ್ಟು ಕಷ್ಟದ ಕೆಲಸವಾಗಿತ್ತು, ಆತನಿಗೆ ನನಗಿಂತಲೂ ಹೆಚ್ಚು ಇ-ಮೇಲ್, ಇನ್ಸ್ಟಂಟ್ ಮೆಸ್ಸೇಜುಗಳು ಬರುತ್ತಿದ್ದವು. ಆದರೆ, ಇವುಗಳಿಗೆಲ್ಲ ಅನುಕೂಲವಾಗಲೆಂಬಂತೆ ಈ ಡೈರೆಕ್ಟರ್ ನಿಮಿಷಕ್ಕೆ ೧0೦ ಪದಗಳನ್ನು ಟೈಪ್ ಮಾಡಬಲ್ಲವನಾಗಿದ್ದ! (ಇಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ). ಆತನ ಶಾಲಾ ದಿನಗಳಲ್ಲಿ ಅವರು ಯಾವುದೋ ಪಬ್ಲಿಷಿಂಗ್ ಹೌಸ್‌ಗೆ ಕೆಲಸ ಮಾಡುತ್ತಿದ್ದರಂತೆ! ನಾನು ನಿಮಿಷಕ್ಕೆ ೪೦ ಪದಗಳನ್ನು ಪೋಣಿಸುವವನು, ಆದರೆ ಇವರು ನನಗಿಂತಲೂ ಮೂರು ಬಾರಿ ವೇಗದವರು.

ಹೀಗೆ ಇಂತಹ ಸಂದರ್ಭಗಳು ಎದುರಾದಾಗಲೆಲ್ಲ ನನ್ನ ತಲೆಯಲ್ಲಿ ಉರಿಯೋ ಬಲ್ಬಿನ ಪ್ರಕಾಶ ಹೆಚಾಗುತ್ತಲೇ ಇದೆ, ಆದರೆ ಹೀಗೆ ಒಂದು ದಿನ ವೋಲ್ಟೇಜ್ ಹೆಚ್ಚಾಗಿ ಬರ್ನ್ ಆಗದಿದ್ದರೆ ಸಾಕು!

***

ನಿಸ್ಸಾರ್ ಅಹ್ಮದ್‌ರ 'ತರುಣ ಮಿತ್ರನಿಗೆ...' ನೆನಪಾಗುತ್ತದೆ - 'ಓಟವೇ ಗುರಿಯೇ, ಗಡಿಯಾರ ದೇವರೇ ನಿನಗೆ...' ಎನ್ನುವ ಪಂಕ್ತಿಗಳು ಎಂದಿಗಿಂತ ಹೆಚ್ಚಿನ ಪ್ರಜ್ವಲತೆಯಲ್ಲಿ ಅನುರಣಿಸತೊಡಗುತ್ತವೆ.

Saturday, April 22, 2006

ಒಂದು ಛತ್ರಿಯ ವೃತ್ತಾಂತ

ಶ್ರಾವಣ ಮಾಸ ಬಂದಿತೆಂದರೆ ನಮ್ಮಲ್ಲಿ ಜಿಟಿಪಿಟಿ ಮಳೆ ಕಿಚಿಪಿಚಿ ಕೆಸರು - ಒಂದು ಕಡೆ ಉಂಡೆಗಳನ್ನು ತಿಂದುಕೊಂಡು ಜೋಕಾಲಿ ಆಡಿಕೊಂಡು ಕೇಕೆ ಹೊಡೆಯುವ ಮಕ್ಕಳು, ಮತ್ತೊಂದೆಡೆ ಹೊಸದಾಗಿ ಮದುವೆ ಆಗಿ ಇದೀಗ ತಾನೇ ಬದುಕಿನ ಮತ್ತೊಂದು ಮಗ್ಗುಲನ್ನು ಉತ್ಸಾಹದಿಂದ ನೋಡುತ್ತಿರುವ ಜೋಡಿಗಳು - ಬಣ್ಣಗಳಿಗ್ಯಾವ ಕೊರತೆ ಇಲ್ಲ. ಅಲ್ಲದೇ ಮೊದಲೆಲ್ಲ ಮಳೆಗಾಲವೆಂದರೆ ವರ್ಷದ ಆರು ತಿಂಗಳವರೆಗೆ ಸೂರ್ಯನ ಕಿರಣಗಳು ಕಾಣದಂತೆ ಇರುತ್ತಿತ್ತೆಂದು ನನ್ನ ಹಿರಿಯರು ಹೇಳುತ್ತಿದ್ದರಾದರೂ ನಾನೆಂದೂ ಒಂದೆರಡು ತಿಂಗಳುಗಳ ನಂತರ 'ಮಳೆಗಾಲ'ವನ್ನು ನೋಡಿದ್ದಿಲ್ಲ. ಹೊಸ ಪೀಳಿಗೆಯವರು ಪ್ರಕೃತಿಯ ಮೇಲೆ ತೋರೋ ಅಸಡ್ಡೆಗೆ ವರುಣದೇವ ಮುನಿಸಿಕೊಂಡನೋ ಯಾರಿಗೆ ಗೊತ್ತು?

ಈ ಮಳೆಗಾಲಗಳಲ್ಲಿ ಶಾಲೆಗೆ ಹೋಗುವ ಹುಡುಗ-ಹುಡುಗಿಯರಿಂದ ಹಿಡಿದು ಮುದುಕರವರೆಗೂ ಮನೆಯಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಒಂದು ಜೊತೆ ಪ್ಲಾಸ್ಟಿಕ್ ಚಪ್ಪಲಿ (ಅಥವಾ ಬೂಟು) ಹಾಗೂ ಒಂದು ಛತ್ರಿ ಖಾಯಂ ಆಗಿ ಇದ್ದೇ ಇರುತ್ತಿತ್ತು. ಮಳೆಗಾಲ ಹಾಗೂ ಬಗಲಲ್ಲಿರುವ ಛತ್ರಿಗಳು 'ಮಲೆಗಳಲ್ಲಿ ಮದುಮಗಳ'ಲ್ಲಿನ ಗುತ್ತಿನಾಯಿ-ನಾಯಿಗುತ್ತಿಯಂತೆ ಒಂದಕ್ಕೊಂದು ಪೂರಕವಾಗಿದ್ದವು.

***

ಇಲ್ಲಿ ಕಾರುಗಳು ವೇಗವಾಗಿ ಹೋಗುವುದರಿಂದಲೋ, ಕಾರಿನ ಹಾಗೂ ಗಾಜಿನ ಮೇಲೆ ಬಿದ್ದ ಹನಿಗಳು ದೊಡ್ಡವಾಗಿ ಕಾಣುವುದರಿಂದಲೋ, ಅಥವಾ ಹನಿಗಳು ಬಿದ್ದ ಶಬ್ದ ನಮಗೆ ಕೇಳುವುದರಿಂದಲೋ ಅಥವಾ ಭಾರತದಲ್ಲಿ ಮಳೆಯನ್ನೇ ನೋಡದೆ ಇಲ್ಲಿಗೆ ಬಂದೇ ಕಂಡಂತೆ ಮುಖ ಮಾಡಿಕೊಳ್ಳುವ ಜನರ ಬಿಟ್ಟಿ ಅನುಭವಾಮೃತದ ಸೋಗಿಗೆ ಹೆದರಿಯೋ ಏನೋ 'ಅಮೇರಿಕದಲ್ಲಿ ಮಳೆ ಹೆಚ್ಚು' ಎನ್ನುವ ಮಾತನ್ನು ಆಗಾಗ ಕೇಳುತ್ತಿರುತ್ತೇನೆ (ಸರಿ-ತಪ್ಪು, ಅನ್ನುವ ವಾದಗಳನ್ನು ಹುಡುಕುತಾಣಗಳನ್ನು (search engine) ಮೇಯುವವರಿಗೆ ಬಿಡೋಣ). ಆದರೆ ನನಗೇಕೋ ಅಮೇರಿಕದಲ್ಲಿ ಮಳೆ ಹೆಚ್ಚು ಎಂದು ಅನ್ನಿಸುವುದಿಲ್ಲ - ನಿನ್ನೆ ಕೆಲಸದ ನಿಮಿತ್ತ ಬೋಸ್ಟನ್‌ಗೆ ಹೋಗಿದ್ದೆ, ಆ ರಾಜ್ಯದೆಲ್ಲ ಕಡೆಯೂ ಮಳೆಗಾಗಿ 'ಹಾಹಾಕಾರ' ಕೇಳಿ (ರೇಡಿಯೋದಲ್ಲಿ) ಬರುತ್ತಿತ್ತು. ಈಗ ನಾನಿರುವ ಪ್ರದೇಶದಲ್ಲೂ ಅಷ್ಟೇ ಹಲವಾರು ಬಾರಿ ರಾಜ್ಯ ಅಥವಾ ಪ್ರದೇಶಗಳನ್ನು 'ಬರ ಪೀಡಿತ'ವೆಂದು ಘೋಷಿಸಿದ್ದಾರೆ - ಹಾಗೆ ಮಾಡಿದಾಗಲೆಲ್ಲ ಹೊಟೆಲುಗಳಲ್ಲಿ ನೀರು ಬೇಕೆಂದರೆ ಮಾತ್ರ ತಂದಿಡುತ್ತಾರೆ, ಇಲ್ಲವೆಂದರೆ ಇಲ್ಲ. ನಾನು ಇಲ್ಲಿನ ಐವತ್ತು ರಾಜ್ಯಗಳ ಮಳೆಯ ಅಧ್ಯಯನವನ್ನು ಮಾಡಿಲ್ಲವಾದ್ದರಿಂದ ನನಗೆ ವೈಜ್ಞಾನಿಕವಾಗಿ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ ನನ್ನ ಅನುಭವವನ್ನು ಅಥವಾ ನನ್ನ ಅನಿಸಿಕೆಯನ್ನು ನಿಮಗೆ ಹೇಳುವುದಕ್ಕೆ ಅಡ್ಡಿಯೇನಿಲ್ಲ ಅಲ್ಲವೇ? ಅಥವಾ ಇಲ್ಲಿನ ಹವಾಮಾನ ವರದಿ ಉತ್ತಮವಾಗಿರುವುದಕ್ಕೋ (ಇಲ್ಲಾ ಸಿಕ್ಕುವ ವರದಿಯನ್ನು ಹಲವಾರು ಮಂದಿ (ಉತ್ತಮವಾಗಿದೆಯೆಂದುಕೊಂಡು) ದೈನಂದಿನ ಜೀವನದಲ್ಲಿ ಬಳಸುವುದಕ್ಕೋ), ಅಥವಾ ಇಲ್ಲಿನ ಒಳಚರಂಡಿ ವ್ಯವಸ್ಥೆ ಸುವ್ಯವಸ್ಥಿತವಾಗಿರುವುದಕ್ಕೋ (ಇಲ್ಲಾ ನನಗೆ ಹಾಗೆ ಅನ್ನಿಸುತ್ತಿರುವುದಕ್ಕೋ) ಅಥವಾ ಮತ್ತೇನೋ ಕಾರಣಗಳಿರಬಹುದು, ಆದರೆ ನನ್ನಂಥ ಭಾರತೀಯರು ಹೇಳುವ 'ಅಮೇರಿಕದಲ್ಲಿ ಮಳೆ ಹೆಚ್ಚು' ಎನ್ನುವ ಮಾತು ನನಗೆ ನಿಜವೆಂದು ಈವರೆಗೆ ಅನ್ನಿಸಿಲ್ಲ.

***

ನನಗೂ ನನ್ನದೇ ಆದ ಛತ್ರಿಯೊಂದಿತ್ತು, ನನ್ನ ಶಾಲೆಯ ಪುಸ್ತಕದ ಚೀಲದೊಂದಿಗೆ ಅದು ಕೂಡ ಶಾಲಾದಿನಗಳಲ್ಲಿ ನನ್ನ ಸಂಗಾತಿಯಾಗೇ ಇತ್ತು. ನಾನು ಇಲ್ಲಿಗೆ ಬರುವಾಗ ಸೂಟ್‌ಕೇಸ್‌ನಲ್ಲಿ ಒಂದು ಛತ್ರಿಯನ್ನೂ ಪ್ಯಾಕ್ ಮಾಡಿದ್ದೆ, ಅದನ್ನು ನೋಡಿದ ನನ್ನ ಜೊತೆಯವನೊಬ್ಬ 'ಅಲ್ಲಿಗೆ ಯಾಕೆ ಆ ಛತ್ರಿಯನ್ನು ತಗೊಂಡು ಹೋಗ್ತೀಯೋ?!' ಅಂದಿದ್ದ - ಅಮೇರಿಕೆಯ ಜ್ಞಾನ ನನ್ನಷ್ಟೇ ಅವನಿಗೆ ಇದ್ದಂತವನು ಆದರೆ ಏಕೆ ಹಾಗೆ ಹೇ/ಕೇಳಿದ್ದನೆಂದು ಗೊತ್ತಿಲ್ಲ. ಆದರೆ ನಾನು ನನ್ನ ಛತ್ರಿಯನ್ನು ಕೈ ಬಿಡಲಿಲ್ಲ. ನನ್ನ ಪ್ರಾಥಮಿಕ ಶಾಲೆಯಿಂದ ಹಿಡಿದು ಹೈಸ್ಕೂಲು ಮುಗಿಸುವವರೆಗೆ ಇದ್ದ ಪ್ರಶ್ನಾರ್ಥಕ ಚಿಹ್ನೆಯಂತಿದ್ದ ಉದ್ದನೆಯ ಛತ್ರಿ ಕಾಲೇಜಿನ ಮೆಟ್ಟಿಲನ್ನು ಹತ್ತಿ ಸುಮಾರು ಪ್ರಥಮ ಪಿಯುಸಿಯ ಮಧ್ಯ ಭಾಗದಲ್ಲಿ ಮುದುಡಿಕೊಳ್ಳುವ ಆಶ್ಚರ್ಯಸೂಚಕ ಚಿಹ್ನೆಯಾಗಿ ಮಾರ್ಪಾಟುಹೊಂದಿತ್ತು - ನನ್ನ ದೇಹ ಬೆಳೆದು ದೊಡ್ಡದಾದಂತೆ ನನ್ನ ಛತ್ರಿಯೂ ದೊಡ್ಡದಾಗುವುದರ ಬದಲು ಕಿರಿದಾದದ್ದು ಏಕೆ ಎಂದು ಸೋಜಿಗಪಟ್ಟಿದ್ದೇನೆ.

***

ನೀವೆಂದಾದರೂ ವಿಂಬಲ್ಡನ್ ಅಥವಾ ಯುಎಸ್ ಓಪನ್ ಟೆನ್ನಿಸ್ ಮ್ಯಾಚ್ ನೋಡಿದ್ದರೆ ನಿಮಗೆ ಗೊತ್ತು - ಅಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ದಿನಗಳಲ್ಲಿ ಆಟ ನಡೆದರೆ ಆಟ ನೋಡಲು ಬರುವ ಜನರು ಥರಾವರಿ ಬಣ್ಣ ಬಣ್ಣದ ಉದ್ದನೆಯ ಛತ್ರಿಗಳನ್ನು ತರುವ ವಿಷಯ. ಅಲ್ಲೆಲ್ಲ ವ್ಯಕ್ತಿಯ ದೇಹಕ್ಕೆ ತಕ್ಕಂತೆ ಅವನ ಛತ್ರಿಯೂ ದೊಡ್ಡದಾಗುತ್ತಾ ಹೋಗುತ್ತದೆ - ರೈನ್‌ಕೋಟ್, ಟೋಪಿ ಹಾಕಿಕೊಂಡೂ ಕೈಯಲ್ಲಿ ಛತ್ರಿ ಹಿಡಿಯುವ ಜನರು ಬೇರೆ. ಆದರೆ ನಾವು ನಮ್ಮಲ್ಲಿ ಎಷ್ಟೊಂದು ಅಗತ್ಯವಾದ ಛತ್ರಿಯೊಂದನ್ನು ಹಿಡಿದುಕೊಂಡು ಹೋಗಲು ಅದೇಕೆ ಹಿಂಜರಿಯುತ್ತೇವೋ? ಬಯಲು ಸೀಮೆಯ ಮಾತು ಬೇರೆ - ಸಾಗರ, ಚಿಕ್ಕಮಗಳೂರಿನಂತಹ ಪ್ರದೇಶಗಳಲ್ಲಿ ಮಳೆಯಾಗೇ ಆಗುತ್ತದೆ, ಆದರೆ ಇಂಥಾ ಮಲೆನಾಡಿನ ಕಾಲೇಜಿನ ಹುಡುಗ-ಹುಡುಗಿಯರನ್ನು ನೀವು ಮಳೆಗಾಲದಲ್ಲಿ ನೋಡಿ, ಇವರೆಲ್ಲ ಅದ್ಯಾವ ಸಿನಿಮಾ ಹೀರೋಗಳನ್ನು ಅನುಕರಣೆ ಮಾಡುತ್ತಾರೋ ಬಿಡುತ್ತಾರೋ ನಾನರಿಯೆ, ಹೆಚ್ಚಿನವರು ಮಳೆಯಲ್ಲಿ ನೆನೆಯುತ್ತಾರೆ, ಇಲ್ಲಾ ಆಶ್ಚರ್ಯಸೂಚಕ ಚಿಹ್ನೆಗೆ ಮೊರೆ ಹೋಗುತ್ತಾರೆ - ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸುವ (ಪ್ರಶ್ನಿಸುವ) ಪ್ರಶ್ನೆಯೇ ಬರೋಲ್ಲ!

ಹೀಗೆ ಪ್ರಶ್ನಾರ್ಥಕ ಹಾಗೂ ಆಶ್ಚರ್ಯಸೂಚಕ ಚಿಹ್ನೆಗಳನ್ನು ನೆನಪಿಸಿಕೊಂಡಾಗೆಲ್ಲ ಜಿ.ಎಸ್. ಶಿವರುದ್ರಪ್ಪನವರು ನೆನಪಿಗೆ ಬರುತ್ತಾರೆ. ಒಂದು ದಿನ ಸಾಗರದಲ್ಲಿ ಅವರು ಕವಿಗೋಷ್ಠಿಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ 'ಗಂಡಸರ ಛತ್ರಿ ಪ್ರಶ್ನಾರ್ಥಕ ಚಿಹ್ನೆ, ಹೆಂಗಸರ ಛತ್ರಿ ಆಶ್ಚರ್ಯಸೂಚಕ ಚಿಹ್ನೆ'ಯೆಂದೂ ತಮ್ಮ ಪದ್ಯವನ್ನೊಂದು ಪ್ರಸ್ತಾವಿಸಿ ಉದಾಹರಣೆ ನೀಡಿದ್ದರು - ಈ ಉಪಮೆಯನ್ನು ಅವರು ವಿದ್ಯಾರ್ಥಿಯಾಗಿದ್ದಾಗ ಅವರ ಮೇಷ್ಟ್ರು ಅವರಿಗೆ ಹೇಳಿದ್ದರಂತೆ ಮುಂದೆ ಅದೇ ಪದ್ಯವಾಯಿತಂತೆ.

ಇನ್ನು ಮೈಸೂರಿನಲ್ಲಿ ಮಾಸ್ತಿಯವರು ಮಳೆ ಇರಲಿ ಇಲ್ಲದಿರಲಿ ಕೊಡೆ ಹಿಡಿದುಕೊಂಡೇ ಓಡಾಡುತ್ತಿದ್ದರಂತೆ, ಪ್ರತಿದಿನ ಸಂಜೆ ಕೊಡೆ ಅರಳಿಸಿಕೊಂಡೇ ನಡೆಯುತ್ತಿದ್ದರಂತೆ, ಒಂದು ದಿನ 'ಮಳೆ ಇಲ್ಲ, ಬಿಸಿಲಿಲ್ಲ, ಛತ್ರಿ ಏಕೆ - ಅದೂ ಅರಳಿಸಿಕೊಂಡು!' ಎಂಬ ಪ್ರಶ್ನೆಗೆ ಉತ್ತರವಾಗಿ ಮೇಲೆ ಮರಗಳ ಮೇಲೆ ಇದೀಗ ತಾನೆ ಗೂಡಿಗೆ ಮರಳುತ್ತಿದ್ದ ಪಕ್ಷಿಗಳನ್ನು ತೋರಿಸಿ 'ಪ್ರಸಾದವನ್ನು ತಪ್ಪಿಸಿಕೊಳ್ಳಲು' ಎಂದು ತಿಳಿಸಿದ್ದರಂತೆ.

***

ನನ್ನ ಛತ್ರಿ ಇಲ್ಲಿಗೆ ಬಂದ ಕೆಲವು ತಿಂಗಳುಗಳಲ್ಲಿಯೇ ಯಾವುದೋ ಗಾಳಿಗೆ ಸಿಕ್ಕು ಕಂಗಾಲಾಗಿ ಹೋಯಿತು, ನನ್ನ ಮೆಚ್ಚಿನ ಛತ್ರಿಯ ಗತಿ ಹೀಗಾಗಿದ್ದನ್ನು ನೆನಸಿಕೊಂಡು ಸ್ವಲ್ಪ ದಿನ ಛತ್ರಿ ರಹಿತ ಬದುಕನ್ನು ಬದುಕಿದೆನಾದರೂ ಅಮೇರಿಕೆಯ ಗಾಳಿ-ಮಳೆಗೆ ಛತ್ರಿಯೊಂದರ ಅಗತ್ಯವಿದ್ದೇ ಇತ್ತು - ಅದಕ್ಕಾಗಿ ಇಲ್ಲಿನ ವಾಲ್‌ಮಾರ್ಟ್ ಒಂದರಲ್ಲಿ ಪ್ರಶ್ನಾರ್ಥಕ ಛತ್ರಿಯ ಆಕಾರ, ಗಾತ್ರ ಆದರೆ ಹಿಡಿಕೆಯ ವಿಷಯದಲ್ಲಿ ಆಶ್ಚರ್ಯಸೂಚಕ ಚಿಹ್ನೆಯನ್ನು ಹೋಲುವ ಒಂದು ದೈತ್ಯನನ್ನು ಕೊಂಡು ಇಟ್ಟುಕೊಂಡಿದ್ದೇನೆ. ಈ ಛತ್ರಿಗೆ ಎರಡು ಬಣ್ಣಗಳಿವೆ, ಆದರೆ ಇದರಲ್ಲಿನ ಕಪ್ಪು ಬಣ್ಣದಲ್ಲಿ ನನ್ನ ಭಾರತೀಯ ಛತ್ರಿಗಿದ್ದ ಮೆರುಗಿಲ್ಲ.

ಇಲ್ಲಿಗೆ ಬಂದು ನನ್ನ ಭಾರತೀಯ ಛತ್ರಿಯು ಮುರಿಯುವಷ್ಟು ಗಾಳಿಮಳೆಯಲ್ಲಿ ನನ್ನನ್ನು ನಾನು ಸಿಲುಕಿಸಿಕೊಂಡು, ನನ್ನ ಛತ್ರಿಗೆ ಆಗಬಾರದ ಗತಿಯಾಗಿ ಮುಂದೆ ಅಮೇರಿಕದ ದೈತ್ಯ ಛತ್ರಿಯನ್ನು ನನ್ನದಾಗಿಸಿಕೊಂಡ ಮಾತ್ರಕ್ಕೆ ನಾನು 'ಇಲ್ಲಿಯ ಮಳೆ ಹೆಚ್ಚು' ಎನ್ನುವ ಮಾತನ್ನು ಒಪ್ಪೋದಿಲ್ಲ, ನನಗೆ ನಮ್ಮೂರಿನ ಮಳೆಯೇ ಹೆಚ್ಚು ಏಕೆಂದರೆ ಪ್ರತೀಸಾರಿ ಬಿದ್ದಾಗಲೂ ಅದರಲ್ಲಿ (ಆ) ಮಣ್ಣಿನ ವಾಸನೆ ಇರುತ್ತದೆ, ಆ ಮಳೆ ಬಿದ್ದ ಮೇಲೆ ಕೈಕಾಲು ಕೆಸರಾಗುತ್ತದೆ, ಹಾಗೆ ಹರಿಯುವ ನೀರಿನಲ್ಲಿ ನಾನು ಎಷ್ಟೋ ದೋಣಿಗಳನ್ನು ತೇಲಿ ಬಿಟ್ಟಿದ್ದೇನೆ, ಮನ ತಣಿಯೆ ಆಡಿದ್ದೇನೆ...ಇವೆಲ್ಲಕ್ಕೂ ಇಲ್ಲಿ ನನ್ನ ಪ್ಯಾಂಟಿನ ಬುಡವೂ ತೋಯದ ಮಳೆಗೂ ಎಲ್ಲಿಯ ಸಮ?

ಇಲ್ಲಿಯ ಮಳೆ,

'...ಮುಂಗಾರು ಮಳೆ ಹೊಯ್ದು
ನಾವಿಬ್ಬರೂ ತೊಯ್ದು
ನಿಂತಾಗ ಮರಳ ಮನೆ ಕೊಚ್ಚಿ ಹೋದಾ ದಿವಸಾs...
ನೆನಪಿದೆಯಾ ನಿನಗೇ...'

ಎಂದು ಹಾಡಲೂ ಯೋಗ್ಯವಿಲ್ಲದ್ದು!

Friday, April 21, 2006

...wrong place at the wrong time

ಬರುವ ಜೂನ್ ತಿಂಗಳಿನಲ್ಲಿ ನನ್ನ ಮೂರು ಜನ ಸ್ನೇಹಿತರು ತಾಯ್ನಾಡಿಗೆ ಹಿಂತಿರುಗಿ ಹೋಗ್ತಾ ಇದ್ದಾರೆ ಅನ್ನೋದನ್ನ ನೆನೆಸಿಕೊಂಡಾಗಲೆಲ್ಲ ನಾನು ಇಲ್ಲೇ ಉಳಿದು ಬಿಡುತ್ತೇನೆಯೋ ಎಂದು ಕಸಿವಿಸಿಯಾಗುತ್ತದೆ. ಇಂಗ್ಲೀಷ್‌ನಲ್ಲಿ ಒಂದು ಮಾತು ಬರುತ್ತೆ - you are at the wrong place at the wrong time ಎಂದು. ಅಲ್ಲಿ ಎಂತೆಂಥ ದೊಡ್ಡ ಸಾಧನೆಗಳಾಗುತ್ತಿರುವಾಗ ನಾನು ಇಲ್ಲಿ ತೇಪೆ ಹಚ್ಚುವ ಕಾಯಕದಲ್ಲಿ ತೊಡಗಿದ್ದನ್ನು ನೋಡಿ ಹಲವಾರು ಬಾರಿ ಅಯ್ಯೋ ಅನಿಸಿದೆ. ಭಾರತಕ್ಕೆ ಹಿಂತಿರುಗಿ ಹೋದರೆ ಹೇಗೆ ಅನ್ನುವ ಆಸೆ ಮನದಲ್ಲಿ ಬರುತ್ತೆ ನೋಡಿ ಅದು ಸುಖ, ನಿಜವಾಗಿ ಹಿಂತಿರುಗಿ ಹೋದರೆ, ಹೋದ ಮೇಲೆ ಸ್ವರ್ಗ ಸುಖ - ಅನುಭವಿಸುವ ಮನಸ್ಸಿರಬೇಕು, ಜೋಬಿನ ತುಂಬಾ ಕಾಸಂತೂ ಇರಲೇಬೇಕು.

ನಾನು ೧೯೯೫ರ ಶುರುವಾತಿನಲ್ಲಿ ಭಾರತದಲ್ಲಿ ದೊಡ್ಡ ಟೆಕ್ನಾಲಜಿ ಕಂಪನಿಯೊಂದರಲ್ಲಿ ಕೆಲಸ ಮಾಡಲು ಶುರುಮಾಡಿದಾಗ ನನಗೆ ಪರದೇಶದ ಕಲ್ಪನೆ ಅಷ್ಟೊಂದಿರಲಿಲ್ಲ. ಅಲ್ಲಿ ನನ್ನ ಮೊದಲನೇ ತಿಂಗಳು ಸಂಬಳ ಬಂದ ದಿನ ಎಂದು ಕಾಣುತ್ತೆ ನಾನು ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿರುವಾಗ ಸಪ್ಲೈಯರ್ ತಂಗವೇಲು ಹೀಗೇ ಮಾತನಾಡಿಸುತ್ತಾ 'ನಿಮಗೆ ಎಷ್ಟು ಸಂಬಳ ಬರುತ್ತೆ?' ಎಂದು ಕೇಳಿಯೇ ಬಿಟ್ಟ - ನನ್ನ ಹಾಗಿನವರು ದಿನವೂ ಅಲ್ಲಿ ಹಲವಾರು ಜನ ಊಟ ಮಾಡುತ್ತಿದ್ದರಾದ್ದರಿಂದ ಅವನಿಗೆ ನಮ್ಮ ಅಂಕೆ ಸಂಖ್ಯೆಗಳೆಲ್ಲವೂ ಗೊತ್ತಿತ್ತು, ಆದರೂ ಹೀಗೆ ಕೇಳಿದನೆಂದು ಹೇಳಿದೆ - ನನಗೆ ಮೊದಲ ತಿಂಗಳ ಸಂಬಳ ಬಂದದ್ದು ಸುಮಾರು ರೂ. ೫೪೦೦. ಅದನ್ನು ಕೇಳಿ ಅವನು ನಕ್ಕು, ತಮಿಳು ಮಿಶ್ರಿತ ಇಂಗ್ಲೀಷ್‌ನಲ್ಲಿ 'ಅದು ಯಾವುದಕ್ಕೂ ಸಾಕಾಗೋಲ್ಲ, ನಾನೇ ಅದಕ್ಕಿಂತ ಹೆಚ್ಚು ದುಡೀತೀನಿ' ಎಂದು ಕುಚೋದ್ಯ ಮಾಡಿದ್ದ. ಒಮ್ಮೆ ದಿಗಿಲಾದರೂ ಇವನ ಹತ್ರ ನನ್ನದೇನು ಎಂದು ನಾನು ಸುಮ್ಮನೇ ಅಂದು ಊಟ ಮುಗಿಸಿ ಬಂದಿದ್ದೆ.

ನನ್ನ ಜೊತೆಯಲ್ಲಿ ಕೆಲಸ ಮಾಡುವ ತೆಲುಗರು, ತಮಿಳರು, ಉತ್ತರ ಭಾರತದವರಿಗೆಲ್ಲ ಹೋಲಿಸಿದರೆ ನಾನೇ ಕಡು ಬಡವ, ಯಾಕೆಂದರೆ ಅವರೆಲ್ಲ ತಮ್ಮ-ತಮ್ಮ ಸಂಬಳದ ಎರಡು-ಮೂರು ಪಟ್ಟು ಹಣವನ್ನು ಪ್ರತಿ ತಿಂಗಳು ಖರ್ಚು ಮಾಡುತ್ತಿದ್ದರು - ರಾತ್ರೋ ರಾತ್ರಿ ಕಾರು ಬುಕ್ಕು ಮಾಡಿಸಿ ಮಹಾಬಲಿಪುರಂ‌ಗೆ ಹೋಗಿ ಮಜಾ ಮಾಡೋದ್ರಿಂದ ಹಿಡಿದು, ಮದ್ರಾಸ್‌ನಲ್ಲಿರುವ ಅತ್ಯಂತ ದುಬಾರಿಯಾದ ಜಪಾನೀಸ್ ರೆಸ್ಟೋರಂಟಿನಲ್ಲಿ ಊಟಮಾಡುವುದರಿಂದ ಹಿಡಿದು (ಒಂದು ಸೂಪ್‌ಗೆ ಸುಮಾರು ಐನೂರು ರೂಪಾಯಿ ಇದ್ದಿರಬಹುದು, ಆಗ), ಕಂಡ ಕಂಡ ಸಿನಿಮಾಗಳನ್ನು ಪ್ರತಿ ಚಿತ್ರವೊಂದಕ್ಕೆ ನೂರು-ಇನ್ನೂರು-ಮುನ್ನೂರರ ವರೆಗೆ ಖರ್ಚು ಮಾಡಿಕೊಂಡು ನೋಡೋದು ಇತ್ಯಾದಿ, ಅವರ ಚಾಳಿಯಾಗಿತ್ತು - ಇದೇ ಸಮಯದಲ್ಲೇ ಅನ್ನಿಸುತ್ತೆ, ನನ್ನ ಜೀವಮಾನದ ಯಾವುದೇ ವರ್ಷವೂ ಕುಡಿಯದಷ್ಟು ಕೋಕ್‌ನ್ನು ನಾನು ಕುಡಿದದ್ದು! (ಇವರೆಲ್ಲರ ಜೊತೆ ಸೇರಿದರೆ ಇನ್ನೇನಾದೀತು?)

ಹೀಗಿರುವಲ್ಲಿ, ಒಂದಾರು ತಿಂಗಳು ಕೆಲಸ ಮಾಡುವುದರೊಂದಿಗೆ ನಮ್ಮನ್ನು ಒಂದೇ ಯುರೋಪಿಗೋ, ದಕ್ಷಿಣ ಏಷ್ಯಾಕ್ಕೋ ಅಥವಾ ಅಮೇರಿಕಕ್ಕೋ ರಫ್ತು (body shopping ಅನ್ನೋದು ಸರಿಯಾದ ಪದ, but I hate that word) ಮಾಡುವ ಹವಣಿಕೆಯಲ್ಲಿ ನಮ್ಮ ಕಂಪನಿಗಳು ಇದ್ದವೆಂದು ತಿಳಿಯಿತು. ನಾವು ಇದ್ದ ಕಂಪನಿಯಿಂದಲೇ ಹೋದರೆ ಕಡಿಮೆ ಸಂಬಳವನ್ನು ಕೊಡುವುದರ ಜೊತೆಗೆ ಮೂರು ವರ್ಷಗಳ ಕೆಟ್ಟ ಕಾಂಟ್ರಾಕ್ಟ್‌ನ್ನು ತಲೆಗೆ ಅಂಟಿಸಿಬಿಡುತ್ತಾರೆ ಎಂದು ಹೆದರಿ ಅಥವಾ ಈ ವಿಷ ವರ್ತುಲದಿಂದ ಹೊರಗೆ ಹೋಗುವ ಹವಣಿಕೆ ನಡೆಸುತ್ತಿರುವಾಗ ಇತರರು ಹೇಗೋ ಏನೋ ಗೊತ್ತಿಲ್ಲ, ನಾನಂತೂ ಅಮೇರಿಕೆಯಲ್ಲಿ ಹುಟ್ಟಿದವನಂತೆ ಆಡಲು ಶುರುಮಾಡಿದ್ದೆ! ಇನ್ನೂ ಅಮೇರಿಕದ ಭೂಪಟವನ್ನೂ ಸರಿಯಾಗಿ ನೋಡಿರಲಿಲ್ಲವೋ ಏನೋ ಆಗಲೇ ನಮ್ಮ ಪದ ಪಂಕ್ತಿಗಳಲ್ಲಿ 'How you doin'?' ಸೇರಿ ಹೋಗಿತ್ತು! ನಾನು ಅಮೇರಿಕೆಗೆ ಹೇಗೆ ಬಂದೆ ಅನ್ನೋದು ಒಂದು ದೊಡ್ಡ ಪ್ರಹಸನ ಅದನ್ನು ಇನ್ನೊಂದು ದಿನ ಇಟ್ಟುಕೊಳ್ಳೋಣ.

ಭಾರತದಲ್ಲಿ ಕೆಲಸಕ್ಕೆ ಸೇರಿ ಇನ್ನು ಆರು ತಿಂಗಳೂ ಆಗಿರದಿದ್ದರೂ ಆರು ಪುಟದ résumé ಇಟ್ಟುಕೊಂಡು, ಬರೀ ಪುಸ್ತಕ ಜ್ಞಾನವನ್ನು ತಲೆಯಲ್ಲಿ ತುಂಬಿಕೊಂಡು, ನಮ್ಮ résuméಗಳನ್ನು ತಿದ್ದಿ ಅದರ ಬದಲಾವಣೆಗಳನ್ನು ನಮಗೆ ಹೇಳದ ಮಿಟುಕಲಾಡಿ ತನುಜಾಳಂಥ ಸೆಕ್ರೆಟರಿಗಳಿಗೆ ಹಿಡಿಶಾಪ ಹಾಕುತ್ತಾ - ಸುಳ್ಳಿನ ಹಂದರವನ್ನು ಸೃಷ್ಟಿಸಿಕೊಂಡು ಅಂತೂ-ಇಂತೂ ಬಂದೇ ಬಿಟ್ಟೆವು - ಇದಕ್ಕೆ ಭಂಡತನ ಅನ್ನದೇ ಮತ್ಯಾವ ಪದಗಳೂ ನನ್ನ ಮನಸ್ಸಿಗೆ ತೋಚ್ತಾ ಇಲ್ಲ (ಬೇಕಾದರೆ ಸಹಾಯ ಮಾಡಿ, ಇದನ್ನ ಓದೋ ನಿಮಗೂ ಅದು ಅನ್ವಯಿಸಬಹುದು!). ಇಲ್ಲಿ ಬಂದ ಮೇಲೆ ಅಂತೂ ಇಂತೂ ನನ್ನ ಬೇಳೇಕಾಳು ಬೇಯಿತು (ಬರುವಾಗ ಪ್ರೆಷರ್ ಕುಕ್ಕರ್ ತಂದಿದ್ದೆ, ಅದು ಬೇರೆ ವಿಷಯ), ಇಷ್ಟು ದಿನ ಬದುಕಿದ್ದೂ ಆಯಿತು - ಮುಂದೆ ಇಲ್ಲಿ "ದೊಡ್ಡ ಮನುಷ್ಯ"ನಾದ ಮೇಲೆ ನಾನೆಷ್ಟೋ ಜನರನ್ನ ಇಂಟರ್‌ವ್ಯೂವ್ ಮಾಡಿದ್ದೇನೆ, ಅಭ್ಯರ್ಥಿ ಭಾರತೀಯನೆಂದರೆ ಕಣ್ಣಲ್ಲಿ ಕಣ್ಣಿಟ್ಟು ಒಮ್ಮೆ ನೋಡುತ್ತೇನೆ - ನಮ್ಮ ಕಣ್ಣುಗಳಲ್ಲಿ ಅದ್ಯಾವುದೋ ಮಾಹಿತಿ ವಿನಿಮಯವಾಗಿ ನಾವಿಬ್ಬರೂ ನಿರಾಳವಾಗಿ ಉಸಿರುಬಿಡುವಂತಾಗುತ್ತೆ - ಹಂಗಂಥ don't make a mistake about it, ಭಾರತೀಯ ಅಭ್ಯರ್ಥಿಗಳು ಒಳ್ಳೆಯವರು, ಕೆಟ್ಟವರು ಎಂದು ಯಾವ ಕಾಮೆಂಟನ್ನೂ ನಾನಿಲ್ಲಿ ಮಾಡುತ್ತಿಲ್ಲ.

***

ನಾನು ಇಲ್ಲಿಗೆ ಬಂದ ಮೊದಲಿನಲ್ಲಿ ನಮ್ಮ ಮನೆಯಲ್ಲಿಯಾಗಲೀ, ನನ್ನ ಅಣ್ಣನ ಅಂಗಡಿಯಲ್ಲಾಗಲೀ, ನನ್ನ ಯಾವುದೇ ಹತ್ತಿರ ಸಂಬಂಧಿಕರ ಮನೆಯಲ್ಲಾಗಲೀ ಫೋನ್ ಸಂಪರ್ಕ ಇರಲಿಲ್ಲ, ಆದರೆ ಇಂದಿನ ವಿಷಯವೇ ಬೇರೆ, ಅಲ್ಲಿ ಟೆಲಿಕಮ್ಮ್ಯುನಿಕೇಷನ್ ಎಷ್ಟು ಅಭಿವೃದ್ಧಿಯಾಗಿದೆ ಅನ್ನೋದು ನಿಮಗೆ ಗೊತ್ತಿರೋ ವಿಷಯವೇ, ಇವತ್ತು ಎಲ್ಲರ ಹತ್ತಿರವೂ ಒಂದು ಫೋನ್ ಇದೆ. ನಾನು ನನ್ನ ಅಮೇರಿಕನ್ ಸಹೋದ್ಯೋಗಿಗಳ ಜೊತೆ ಮಾತನಾಡುತ್ತಿರುವಾಗ ನಮ್ಮ ಭಾರತೀಯ ಆಫೀಸಿನ ವಿಷಯ ಮಾತುಗಳಲ್ಲಿ ಸಹಜವಾಗಿ ಬಂದೇ ಬರುತ್ತದೆ, ಅಲ್ಲಿನ ಬೆಳವಣಿಗೆಯನ್ನು ನೋಡಿ, ನನ್ನನ್ನು ಎಷ್ಟೋ ಜನರು ಕೇಳಿದ್ದಾರೆ - 'ನೀನು ಹೋಗುವುದಿಲ್ಲವೇ?', ಅಥವಾ ಹೇಳಿದ್ದಾರೆ 'ನೀನಲ್ಲಿರಬೇಕು ಇಂತಾ ಸಮಯದಲ್ಲಿ, ಇಲ್ಲಿದ್ದು ಏನು ಮಾಡುತ್ತೀ' ಮುಂತಾಗಿ. ಈ ಮೇಲೆ ಹೇಳಿದ ಭಾರತಕ್ಕೆ ವಾಪಾಸ್ಸಾಗುತ್ತಿರುವ ಸ್ನೇಹಿತರು ಪುಣ್ಯವಂತರು, ಅವರವರು ಹೇಗೆ ಪ್ಲಾನ್ ಮಾಡಿ ಅಲ್ಲಿ ಹೋಗಿ 'ಸೆಟಲ್' ಆಗುತ್ತಿದ್ದಾರೆಂದು ಕೇಳಿದರೆ ಒಮ್ಮೆ ಅಸೂಯೆಯಾಗುತ್ತದೆ. ಹೀಗೆ ವಿದೇಶದ ಅನುಭವವೂ, ಜೊತೆಯಲ್ಲಿ ಕೂಡಿಹಾಕಿದ ದುಡ್ಡೂ, ಇಲ್ಲಿನ ಕೆಲಸವನ್ನೇ ಅಲ್ಲಿ ಕುಳಿತು ಅದೇ ಕಂಪನಿಗೆ ಮಾಡುವ ವಿಧಿಯೂ, ಜೊತೆಯಲ್ಲಿ ಅಮೇರಿಕೆಯಲ್ಲಿ ನನ್ನಂತಹವರಿಗೆ ಸುಲಭವಾಗಿ ಸಿಗಲಾಗದ ವಿ.ಪಿ., ಡಿವಿಜನಲ್ ಮ್ಯಾನೇಜರ್, ಮುಂತಾದ ಸ್ಟೇಟಸ್ಸು ಇತ್ಯಾದಿಗಳನ್ನು ಕೇಳಿದಾಗ ನಾನು ಒಳಗೊಳಗೇ ಇವರನ್ನೆಲ್ಲ admire ಮಾಡುತ್ತೇನೆ. ಇವರೆಲ್ಲರೂ ಇಲ್ಲಿಗೆ ಹಲವಾರು ವರ್ಷಗಳ ಹಿಂದೆ ಬಂದವರು, ಹೀಗೆ ಹಿಂತಿರುಗುವಾಗ ಕೆಲವು ವರ್ಷಗಳ ಪೂರ್ವಭಾವಿ ಸಿದ್ಧತೆ ಅತ್ಯಂತ ಮುಖ್ಯ, ಇನ್ನು ಶಾಲೆಗೆ ಹೋಗುವ ಮಕ್ಕಳು ಮರಿಯಿದ್ದರಂತೂ ಇನ್ನೂ ಕಷ್ಟ. ಆದರೆ ಹಾಗೆ ನಾನ್ಯಾವ ಸಿದ್ಧತೆಯನ್ನೂ ಈ ವರೆಗೂ ಮಾಡಿಲ್ಲ.

***

ಇಷ್ಟು ವರ್ಷ ಇಲ್ಲಿ ಗೇಯ್ದ ಫಲವೋ ಏನೋ ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂಬ ಆಸೆಗಳಿವೆ, ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂಬ ಆಮಿಷಗಳನ್ನು ತುಂಬಿಕೊಂಡಿದ್ದೇನೆ ಆದರೆ ಬೆಂಗಳೂರಿನಲ್ಲಿ ಒಂದು ನಿವೇಶನ ತೆಗೆದುಕೊಂಡು ಒಂದು ಮನೆಕಟ್ಟುವ ಸಾಹಸಕ್ಕೆ ಮಾತ್ರ ಮನಸ್ಸು ಮುಂದೆ ಬರುತ್ತಿಲ್ಲ. ಮಧ್ಯಮ ವರ್ಗದವರ ಸಮಸ್ಯೆಗಳ ಆಯಾಮ ಎಲ್ಲಿದ್ದರೂ ಒಂದೇ, ನಮ್ಮ ಪೈಪೋಟಿ ಯಾವಾಗಲೂ ಊರ್ದ್ವಮುಖಿಯಾದ್ದರಿಂದ ಬದುಕು ಚಿಂತೆಯ ರೂಪದಲ್ಲಿ ಸುತ್ತಿಕೊಳ್ಳೋದು ಸಹಜ ಹಾಗೂ ಅನಿವಾರ್ಯ. ಆದರೆ ಈ ಚಿಂತೆಯ ಸುತ್ತ, ಹಾಗೆ-ಹೀಗೆ ಮಾಡುತ್ತೇನೆ ಎನ್ನುವ ಆಶಾವಾದದ ಸುತ್ತ ಇರೋ ಬವಣೆಗಳನ್ನು ಕಣ್ಣಿಗೆ ತೊಟ್ಟಿಕೊಂಡ ಬಣ್ಣದ ಗಾಜಿನ ಮೂಲಕ ನೋಡಿದಾಗ ಅದು ತನ್ನ ಬಣ್ಣವನ್ನು ಮಾತ್ರ ಬಿಟ್ಟು ಉಳಿದೆಲ್ಲ ಬಣ್ಣಗಳನ್ನು ಹೀರಿಕೊಳ್ಳೋದರ ಫಲವಾಗಿ ಕಾಣಬೇಕಾದುದೂ ಸರಿಯಾಗಿ ಕಾಣದು! ಎಲ್ಲಿಯವರೆಗೆ ನಮ್ಮದೇ ಆದ ಮನೆಯೊಂದು ಇರುವುದಿಲ್ಲವೋ ಅಲ್ಲಿಯವರೆಗೆ ಗಣಿತಜ್ಞರು ಒಪ್ಪದ, N = N + 1 ಎನ್ನುವ ಫಾರ್ಮುಲಾಕ್ಕೆ ತಾನೇ ತಾನಾಗಿ ಅರ್ಥ ಹುಟ್ಟಿಕೊಳ್ಳುತ್ತೆ!

ಇದನ್ನು ಓದುತ್ತಿರುವ ಎಲ್ಲಾ ಪ್ರೋಗ್ರಾಮರುಗಳಿಗೆ ಮುಂದೆ ತಮ್ಮ ವೇರಿಯಬಲ್‌ಗಳನ್ನು ಇಂಕ್ರಿಮೆಂಟ್, ಡಿಕ್ರಿಮೆಂಟ್ ಮಾಡುವ ಸಂದರ್ಭ ಬಂದಾಗ ನೆನಪಿರಲಿ, N = N + 1 ಅನ್ನೋ ಫಾರ್ಮುಲಾ mathematically incorrect, ಬೇಕಾದರೆ ಸುಂದರೇಶನಂತೋರನ್ನ ಕೇಳಿ ನೋಡಿ!

Thursday, April 20, 2006

ನಾನು ಇಷ್ಟೊಂದು ಒಳ್ಳೆಯವನಾಗಬಾರದಿತ್ತು!

'ನೋಡಿದ್ರಾ ಎಂಥಾ ಕೊಬ್ಬು ಇವನಿಗೆ, ತನ್ನನ್ನು ತಾನೇ ಒಳ್ಳೆಯವನೆಂದು ಸಾರಿ ಕೊಳ್ಳುತ್ತಿದ್ದಾನಲ್ಲಾ' ಅಂತ ಅಂದುಕೋತೀರೋ, ಅಂದುಕೊಳ್ಳಿ, ನನಗೇನಂತೆ!?

ನಾನು ಸಾಗರದಲ್ಲಿ ಐದು ವರ್ಷ ರೂಮು ಮಾಡಿಕೊಂಡು ಇದ್ದಿರುವಾಗ, ನನಗೆ ರೂಮ್‌ಮೇಟ್‌ಗಳಾಗಿ, ನೆರೆಹೊರೆಯವರಾಗಿ ಸಿಕ್ಕವರಲ್ಲಿ ನನ್ನ ಹಾಗಿನ ವಿದ್ಯಾರ್ಥಿಗಳು ಅತಿ ಕಡಿಮೆ, ಬದಲಿಗೆ ಖಾಸಗೀ ಬಸ್ಸ್‌ಗಳ ಡ್ರೈವರುಗಳು, ಕಂಡಕ್ಟರುಗಳು, ಗಜಾನನ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು (ಮೆಕ್ಯಾನಿಕ್, ಇತ್ಯಾದಿ), ಪಿ.ಡಬ್ಲು.ಡಿ ಗ್ಯಾಂಗ್‌ಮನ್‌ಗಳು (ಗ್ಯಾಂಗ್‌ಮನ್ ಅಂದ್ರೆ ಕೆಲಸಗಾರರ ಮುಖ್ಯಸ್ಥ ಅನ್ನೋ ಅರ್ಥದಲ್ಲಿ), ಟೈಲರ್‌ಗಳು ಮುಂತಾದವರು ನನ್ನ ದೋಸ್ತರು. ಕಾಲೇಜು ಮುಗಿಯುತ್ತಿದ್ದಂತೆ ಇವರ ಜೊತೆಯಲ್ಲಿ ಅಲ್ಲಿಲ್ಲಿ ತಿರುಗಾಡುವುದೇನು, ಹೊಟೇಲಿಗೆ ಹೋಗುವುದೇನು, ನನ್ನ ಸ್ವಾತ್ರಂತ್ರ್ಯವನ್ನು ಎಂಥವರೂ ಕರುಬುವ ಹಾಗಿದ್ದೆ. ಈ ಜೊತೆಗಾರರಿಗೆ ತರಾವರಿ ಹವ್ಯಾಸಗಳು, ಹುಡುಗಿಯರ ಹುಚ್ಚೇನು, ಬೀಡಾ, ಸಿಗರೇಟು, ಮಧ್ಯಪಾನದ ವ್ಯಸನವೇನು, ಯಾವುದಕ್ಕೂ ಎಲ್ಲೂ ಕಡಿಮೆ ಇರಲಿಲ್ಲ. ಇಂತಹ ವಾತಾವರಣದಲ್ಲಿ ನಾನು ಐದು ವರ್ಷ ಬೆಳೆದಿದ್ದನ್ನು ನೆನಸಿಕೊಂಡರೆ ಇಷ್ಟು ಹೊತ್ತಿಗೆ ಕೆಟ್ಟು ಕುಲಗೆಟ್ಟು ಹೋಗಬೇಕಿತ್ತು ಆದರೆ ಇವತ್ತಿಗೂ ನಾನು ಒಂದು ಸಿಗರೇಟನ್ನೂ ಬಾಯಿಗೆ ಇಟ್ಟವನಲ್ಲ, ಮದ್ಯಪಾನವನ್ನು ಮೂವತ್ತು ವರ್ಷದ ಮೇಲೆ ಮಾಡಿದವನು, ಹಾಗೂ ಹೆಣ್ಣು ಮಕ್ಕಳು ಅಂದ್ರೆ ಅಪಾರ ಸಂಕೋಚವೇ!

ಹಾಗಂತ ನನ್ನ ಇಬ್ಬರು ಅಣ್ಣಂದಿರು ತಮ್ಮ ಊರಿನ ಅಗಸೀ ಬಾಗಿಲನ್ನು ಬಿಟ್ಟು ಈವರೆಗೆ ಎಲ್ಲೂ ಹೋಗದಿದ್ದರೂ, ಅವರು ಆಡದ ಆಟವಿಲ್ಲ - ಮಾಡದ ಮಾಟವಿಲ್ಲ, ಚಲಿಸುವುದನೆಲ್ಲವನ್ನೂ ತಿಂದು, ಕುಡಿಯುವುದನ್ನೆಲ್ಲ ಕುಡಿದು, ಸುಡುವುದನೆಲ್ಲವನ್ನೂ ಸುಟ್ಟಿದ್ದಾರೆ! (ಉತ್ಪ್ರೇಕ್ಷೆ)

ಸರಿ, ನಾನು ಇಷ್ಟು "ಒಳ್ಳೆಯವ"ನಾಗಿರುವುದರ ಗುಟ್ಟೇನೋ ಎಂದು ಯೋಚಿಸುತ್ತಿದ್ದ ನನಗೆ ಮೊನ್ನೆ-ಮೊನ್ನೆ ತಾನೇ ಉತ್ತರ ಹೊಳೆಯಿತು. ನನ್ನ ಸ್ನೇಹಿತನೊಬ್ಬ ಒಂದು ಲೇಖನವನ್ನು ತಂದುಕೊಟ್ಟ, ಅದರ ಸಾರ ಹೀಗಿತ್ತು - ದೇವರು ಕರುಣಾಮಯಿ, ಆದರೂ ನಾವು ನಮಗೆ ಬೇಕಾದುದನ್ನು ಬೇಡಲೇ ಬೇಕು, ಕೊಡುವುದೂ ಬಿಡುವುದೂ ಅವನಿಗೆ ಬಿಟ್ಟದ್ದು, ಮುಂತಾಗಿ. ನನ್ನ ಅಮ್ಮ ನನಗೆ ಚಿಕ್ಕವನಿರುವಾಗ ದೇವರ ಮುಂದೆ ಕುಳಿತು ಬೇಡುವುದಕ್ಕೆ ಹೇಳಿಕೊಟ್ಟದ್ದು ಒಂದೇ ಮಾತು 'ದೇವರೇ ನನಗೆ ಒಳ್ಳೇ ಬುದ್ಧಿ ಕೊಡಪ್ಪಾ!', ಹೀಗೆ ಸುಮಾರು ಹದಿನೈದು ವರ್ಷ (ಅಂದ್ರೆ ಹತ್ತನೇ ಕ್ಲಾಸು ಪಾಸಾಗಿ ಊರು ಬಿಟ್ಟು ಸಾಗರ ಸೇರುವವರೆಗೆ) ಪ್ರತಿ ನಿತ್ಯ ಎಡಬಿಡದೇ ಬೇಡಿದೆನೆಂತಲೋ ಏನೋ ನನಗೆ ಈ ಬುದ್ಧಿ!

ನನ್ನ ಅಪ್ಪ-ಅಮ್ಮ ಇಬ್ಬರೂ ಮೇಷ್ಟ್ರು (ನನಗೆ ಕೊರೆಯುವ ಕಲೆ ಎಲ್ಲಿಂದ ಬಂದಿತೆಂದುಕೊಂಡಿರಿ?), ಅಮ್ಮ ಹೇಳೋ ಒಂದು ಮಾತು ಯಾವಾಗಲೂ ನನ್ನ ನೆನಪಿನಲ್ಲಿರುತ್ತೆ - 'ನೋಡೋ, ಕೆಟ್ಟ ಗುಣ ಅನ್ನೋದು ಬೆಂಕಿ ಇದ್ದ ಹಾಗೆ, ಅದು ತಾನು ಇರೋ ಜಾಗವನ್ನೇ ಮೊದಲು ಸುಡೋದು!'

ನನ್ನಮ್ಮ ನನಗೆ ಯಾವಾಗಲೂ 'ಚಿರಂಜೀವಿ ...ನಿಗೆ ನನ್ನ ಆಶಿರ್ವಾದಗಳು' ಅಂತಾನೇ ಪತ್ರ ಬರೆಯೋಳು, ನಾನು ಮದುವೆಯಾದ ನಂತರ ಬರೆದ ಮೊದಲ ಪತ್ರದಲ್ಲಿ 'ಶ್ರೀ ...ನಿಗೆ ನನ್ನ ಆಶಿರ್ವಾದಗಳು' ಎಂದು ಶುರು ಮಾಡಿದ್ದಳು! ನಾನು 'ಏನಮ್ಮಾ, ನಾನು ಮದುವೆ ಆದಮೇಲೆ ಚಿರಂಜೀವಿ ಆಗೋದು ಬ್ಯಾಡಾ ಅಂತ ನಿರ್ಧಾರ ಮಾಡಿದ ಹಾಗಿದೆ...' ಎಂದು ನಕ್ಕು ಕೇಳಿದಾಗ, 'ಹಂಗಲ್ವೋ, ನಿನ್ನ ಮದುವೆ ಆದ ಮೇಲೆ ನಿನಗೆ ನಿನ್ನ ಕುಟುಂಬ, ಪರಿವಾರ ಮೊದಲು ಬರುತ್ತೆ, ನೀನು ಒಬ್ಬ ಸಂಸಾರಸ್ಥನಾಗಿದ್ದೀಯೆ...ಉಳಿದವರಿಗೆ ಮರ್ಯಾದೆ ಕೊಡೋ ಹಾಗೆ ನಿನಗೂ ಮರ್ಯಾದೆ ಸಲ್ಲ ಬೇಕು, ನಾನೇ ಪತ್ರ ಬರೀಲಿ, ಇನ್ಯಾರೇ ಬರೀಲಿ, ಶ್ರೀ ಎಂದೇ ಬರೀ ಬೇಕು' ಎಂದು ಸೀರಿಯಸ್ಸಾಗಿ ಉತ್ತರ ಕೊಟ್ಟಳು.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳಿಗೆ ಇಂತಾ ಬುದ್ಧಿ ಹೆಂಗೆ ಬಂತು ಎಂದು ನನಗೇ ಆಶ್ಚರ್ಯವಾಗಿದೆ.

ನೀವೇ ಹೇಳಿ ಇಂಥಾ ಅಮ್ಮನ ಮಗನಾಗಿ ನಾನು ಕೆಟ್ಟವನಾಗೋದಕ್ಕೆ ಹೇಗೆ ಸಾಧ್ಯ?

ಆದರೆ ಹೊರಗಿನ ಬದುಕು ಹಲವಾರು ಸವಾಲುಗಳನ್ನು ಒಡ್ಡುತ್ತೆ - ನೀವು ಟ್ರ್ಯಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ನಿಮಗೆ ಸಿಟ್ಟು ಬರಿಸುವ ಅಕ್ಕ-ಪಕ್ಕದ ಡ್ರೈವರುಗಳಿರಬಹುದು, ಆಫೀಸ್‌ನಲ್ಲಿ ನಿಮ್ಮ ತಲೆ ತಿನ್ನೋ ಸಹೋದ್ಯೋಗಿಗಳಿರಬಹುದು, ಮನೆಯಲ್ಲಿ ನೀವು ಅದೇ ತಾನೇ ಹಾಕಿದ ಬಿಳಿ ಅಂಗಿಯ ಮೇಲೆ ಕೆಚಪ್ ಸಿಂಪಡಿಸೋ ಮಕ್ಕಳಿರಬಹುದು, ನಿಮ್ಮ ಕಣ್ಣ ಮುಂದೆಯೇ ನಿಮ್ಮನ್ನು ಏಮಾರಿಸೋ ವರ್ತಕರಿರಬಹುದು...ಇವರೆಲ್ಲರಿಗೂ ತೋರಿಸೋದಕ್ಕೆ ಒಂದು ಮುಖವಾಡವನ್ನು ಧರಿಸಲೇ ಬೇಕಾಗುತ್ತೆ. ಎಲ್ಲೀವರೆಗೆ ನೀವು ಈ ಮುಖವಾಡಗಳ ಹಿಂದಿನ ಮರ್ಮವನ್ನು ಅರಿತುಕೊಳ್ಳುವ ಪ್ರಯತ್ನ ಮಾಡ್ತೀರೋ ಅಲ್ಲೀವರೆಗೆ ನಾನು ಕೆಟ್ಟವನೆಂದೂ ಆಗೋದಕ್ಕೆ ಸಾಧ್ಯವೇ ಇಲ್ಲ!

ಸರಿ, ನಾನು ದೊಡ್ಡ ಮನುಷ್ಯ, ಬಹಳ ಒಳ್ಳೆಯವನು ಎಂದೆಲ್ಲಾ ಬೊಗಳೆ ಕೊಚ್ಚಿಕೊಂಡೆನಲ್ಲವೇ - ಆದರೆ, ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಈ 'ಒಳ್ಳೆಯ-ಕೆಟ್ಟದ್ದರ' ಜಿಜ್ಞಾಸೆನಿಲ್ಲುವುದಿಲ್ಲ: ನಾನು ಎಷ್ಟೇ ಹೊತ್ತು ನಿದ್ರೆ ಮಾಡಿದರೂ, ಮದ್ಯಪಾನದಿಂದ ಮೈಲು ದೂರವಿದ್ದು ಎಲ್ಲಿ-ಹೇಗೇ ಇದ್ದರೂ ನನ್ನ ಕಣ್ಣುಗಳು ಕುಡುಕರ ಹಾಗೆ ಯಾವಾಗಲೂ ಕೆಂಪಾಗಿರುತ್ತವೆ - ನಾನು ತೋರಿಸಿದ ಯಾವ ಕಣ್ ಡಾಕ್ಟ್ರಿಗೂ ಇದಕ್ಕೆ ಉತ್ತರ ಈ ವರೆಗೆ ದೊರಕಿಲ್ಲ. ಇನ್ನು ಎರಡನೆಯದಾಗಿ ನನಗೆ ನಾಟಕಗಳಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಲ್ಲೆಲ್ಲ ಈ ವರೆಗೆ ಕುಡುಕನ, ಕೊಲೆಗಡುಕನ ಪಾತ್ರಗಳೇ ಏಕೆ ಸಿಗುತ್ತವೋ? ಯಾರಿಗೆ ಗೊತ್ತು?

ನನ್ನ ಸ್ನೇಹಿತರು ಕೆಲವರು ನನ್ನನ್ನು ಕುರಿತು 'ನೀನು ಹಿಂಗೆ ಗಾಂಧಿಯಾಗಿ ಬದುಕೋದೇ ದಂಡಕ್ಕೆ' ಎಂದು ಅಪಹಾಸ್ಯ ಮಾಡಿದಾಗಲೆಲ್ಲ, ನನ್ನ ಸಹನೆಯನ್ನು ನನ್ನ ದೌರ್ಬಲ್ಯವೆಂದು ತಮ್ಮಷ್ಟಕ್ಕೇ ತಾವೇ ದೊಡ್ಡ ಸಿದ್ಧಾಂತವನ್ನು ಮಾಡಿಕೊಂಡು ನನ್ನೊಡನೆ ಜಗಳ ಕಾಯ್ದು ಗೆದ್ದಂತೆ ಬೀಗಿದ ಬಾಯ್‌ಬಡುಕರ ಮುಂದೆ, ಪಕ್ಕದ ಮನೆಯ ಹುಡುಗರು ನಾಲ್ಕಾರು ಜನ ಒಟ್ಟಾಗಿ ನನ್ನ ಅಣ್ಣನನ್ನು ಹೊಡೆದು ಹಾಕುತ್ತಿದ್ದಾಗ ನಾನು ಸುಮ್ಮನೇ ಅಳುತ್ತಾ ನಿಂತ ಸಂದರ್ಭದಲ್ಲಿ, ಅಹಮದಾಬಾದಿನ ರೈಲು ನಿಲ್ದಾಣದಲ್ಲಿ ರಿಸರ್‌ವೇಷನ್ ಕೊಡಿಸುತ್ತೇನೆಂದು ಕಣ್ಣೆದುರೇ ಮೋಸ ಮಾಡಿ ಯಾವನೋ ಓಡಿಹೋಗುತ್ತಿದ್ದಾಗ, ಸಿನಿಮಾ ನೋಡಿಕೊಂಡು ನನ್ನ ಅಕ್ಕನ ಜೊತೆ ಬರುತ್ತಿರುವಾಗ ಯಾವನೋ ಒಬ್ಬ ಅವಳ ಜಡೆಯನ್ನು ಎಳೆದು ಕಿಚಾಯಿಸಿದ ಸಂದರ್ಭದಲ್ಲಿ ನಾನು ಕೆಟ್ಟವನಾಗಬೇಕಿತ್ತು ಎಂದು ಬಲವಾಗಿ ಅನಿಸಿದೆ, ಆದರೆ ಏನು ಮಾಡಲಿ, ವರ್ಷಗಳ 'ದೇವರೇ ನನಗೆ ಒಳ್ಳೇ ಬುದ್ಧಿ ಕೊಡಪ್ಪಾ!' ಎಂಬ ಮೊರೆ ಹಾಗೂ ಅಗಾಧವಾದ ಅದರ ಪರಿಣಾಮ ನನ್ನನ್ನು ಇವತ್ತು ಈ ಸ್ಥಿತಿಯಲ್ಲಿರಿಸಿದೆ.

ಪ್ರಪಂಚದ ಒಳ್ಳೆಯವರಿಗೆಲ್ಲ ಜಯವಾಗಲಿ!

Wednesday, April 19, 2006

ಸ್ನೇಹಿತನಿಗೊಂದು ಪತ್ರ

ಏನೋ, ಬಹಳ ದಿನಗಳಿಂದ ನಿನ್ನಿಂದ ಸುದ್ದೀನೇ ಇಲ್ಲಾ? ನಾನಂತೂ ಈ ನಡುವೆ ಕೆಲಸದ ಜಂಜಾವಾತದಲ್ಲಿ ಬೆಂದು ಹೋಗಿದ್ದೇನೆ ಬಿಡು, ನಿನ್ನ ನೆನಪಿನಲ್ಲಾದರೂ ಉಸಿರುಬಿಡುವುದಕ್ಕಾಗುತ್ತದಲ್ಲಾ ಅನ್ನೋದೊಂದೇ ಸಮಾಧಾನ.

ಆದ್ರೆ, ನನಗೆ ಖುಷಿ ಆಗೋ ಹಾಗೆ ಇರೋ ವಿಷ್ಯಾ ಏನೂ ಅಂದ್ರೆ ನಾನೆಷ್ಟು ಕೆಲಸದ ಒತ್ತಡದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೋ, ಅಷ್ಟೇ ನನ್ನ ಮನಸ್ಸೂ ಇತರ ವಿಷಯಗಳತ್ತ ಯೋಚ್ನೆ ಮಾಡುತ್ತೆ, ಹಾಗೂ ನನ್ನ ಧಕ್ಷತೆ ಹೆಚ್ಚುತ್ತೆ. ಅಲ್ದೇ, ಇಂದಿನ ಐಪಿಓ, ಬಿಪಿಓ ಕಾಲದಲ್ಲಿ ಕೆಲಸವಿದ್ದವನೇ ಪುಣ್ಯವಂತ, ಕೊನೆಗೆ ಬಿಲ್ಲು ಕಟ್ಟಲಿಕ್ಕೆ ಕೆಲಸವಿಲ್ಲದ ನನ್ನ ಈ ಹಳವಂಡ ಯಾವ ಪ್ರಯೋಜನಕ್ಕೂ ಬಾರದು ಎಂಬುದು ಯಾವತ್ತಿಗೂ ಸತ್ಯ.

ಪ್ರತೀ ದಿನ ಹೀಗೆ ಟ್ರೈನ್ ಹಿಡಿದು ಸಿಟಿಗೆ ಬರುತ್ತೇನೆ, ಆದರೆ ಜನಗಳ ಒಂದು ಮನಸ್ಥಿತಿಯನ್ನು ಮಾತ್ರ ಇಲ್ಲೀವರೆಗೆ ನನ್ನಿಂದ ಅರ್ಥ ಮಾಡಿಕೊಳ್ಳಲಾಗಲಿಲ್ಲ, ಆರು ಯೋಜನ ದೂರದ ನಿನಗೇನಾದರೂ ತಿಳಿದರೆ ತಿಳಿಸಿಬಿಡು. ನಾವು ರಸ್ತೆಯಲ್ಲಿ ನಡೆದು ಟ್ರೈನ್ ಸ್ಟೇಷನ್ ಹತ್ತಿರ ಬರುತ್ತಿದ್ದಂತೆ ಜನ ಜಂಗುಳಿ ಹೆಚ್ಚಾಗುತ್ತೆ, ಅವರಲ್ಲಿ ಹೆಚ್ಚಿನವರಿಗೆ ಟ್ರೈನ್ ಸ್ಟೇಷನ್ ಸಮೀಪಿಸಿದಂತೆ ಯಾವುದೋ ಭೂತವೊಂದು ಮೈಮೇಲೆ ಸವಾರಿ ಮಾಡುತ್ತೆ ಎಂದು ಕಾಣ್ಸುತ್ತೆ, ಅವರೆಲ್ಲರು ಟ್ರೈನ್ ಬರುವ ಕಡೆಗೆ ಓಡಲು (ಅಥ್ವಾ ಜೋರಾಗಿ ನಡೆಯಲು) ತೊಡಗುತ್ತಾರೆ, ನೂರಕ್ಕೆ ತೊಂಭತ್ತು ಭಾಗ ಅಲ್ಲಿ ಯಾವ ಟ್ರೈನೂ ಇರೋದಿಲ್ಲ, ಯಾಕೆಂದ್ರೆ ಅಲ್ಲಿ ಬರೋ ಗಾಡಿಗಳೆಲ್ಲ ನಿಗದಿಯಾದ ಸಮಯಕ್ಕೇ ಬರೋದು, ಅಕಸ್ಮಾತ್ ಇವರು ಓಡಿಹೋದ ಮಾತ್ರಕ್ಕೆ ಅದರಿಂದ ಯಾವ ಬದಲಾವಣೆ ಆಗುತ್ತೆ ಅನ್ನೋದು ನಂಗೊತ್ತಿಲ್ಲ...ಆದರೆ ಈ ರಷ್ ಬಡುಕರು ನನ್ನಂಥ ಸಮಾಧಾನಿಗಳ ರಕ್ತದೊತ್ತಡವನ್ನೂ ಹೆಚ್ಚಿಸ್ತಾರೆ. ನನ್ನ ಮುಂದೆಯೇ ಓಡಿಹೋಗಿ, ಪ್ಲಾಟ್‍ಫಾರಂನಲ್ಲಿ ಯಾವುದೋ ಕಂಭಕ್ಕೊರಗಿರುವ ಇವರ ದೀನ ಮುಖಗಳನ್ನು ನನ್ನಿಂದಂತೂ ನೋಡೋಕಾಗಲ್ಲಪ್ಪಾ.

ಇಲ್ಲಂತೂ ಬಲು ಬೇಗ ವೃದ್ದಾಪ್ಯ ಬರುತ್ತೆ ಅನ್ನಿಸುತ್ತೆ, ಯಾಕೆ ಗೊತ್ತಾ, ಇಲ್ಲಿ ವೀಕ್ ಇನ್ ವೀಕ್ ಔಟ್ ಅಂತ ವಾರಾಂತ್ಯಗಳನ್ನು ನೆನೆಸಿಕೊಂಡು ಬದುಕೋದರಲ್ಲಿ ವಾರಗಳು ತಿಂಗಳುಗಳಾಗಿ, ತಿಂಗಳುಗಳು ವರ್ಷಗಳಾಗ್ತವೆ. ಒಂದು ಕಡೆ ವಾರಗಳನ್ನ ಎಣಿಸಿ ಎಣಿಸಿ ತಲೆಕೆಡಿಸಿಕೊಳ್ತಾರೆ, ಮತ್ತೊಂದು ಕಡೆ ತಾರೀಖು ಬರೆಯೋ ಕಡೆಯಲ್ಲ ತಿಂಗಳಿನಿಂದ ಶುರು ಮಾಡಿ ಹೈರಾಣಾಗ್ತಾರೆ, ಸರಿ ನಮ್ ಪಾಡಿಗೆ ನಮ್ಮನ್ನ ಬಿಡ್ರೋ ಅಂದ್ರೆ ತಿಂಗಳಿಗೆರಡು ಸರ್ತಿ ಬಟವಾಡೇ ಮಾಡಿ ಸಂಸಾರಸ್ಥರನ್ನ ಗೋಳು ಹೊಯ್ಕೋತಾರೆ - ಇವರದ್ದೆಲ್ಲ ಒಂಥರ ವಿಚಿತ್ರ ಕಣಯ್ಯಾ. 'ಮೊದಲ್ ತೇದಿ' ಯ 'ಒಂದರಿಂದ ಇಪ್ಪತ್ತರವರೆಗೆ ಉಂಡಾಟ, ಉಂಡಾಟ, ಇಪ್ಪತ್ತೊಂದರಿಂದ ಮೂವತ್ತರ ವರೆಗೆ ಬಂಡಾಟ, ಬಂಡಾಟ' ಹಾಡು ನೆನಪಿದೆಯಾ - ಅಲ್ಲಿ ತಿಂಗಳಿಗೊಂದ್ ಸರ್ತಿ ಒದ್ದಾಟ, ಅಂಥಾ ಒದ್ದಾಟವೂ ಇಲ್ಲಿ ತಿಂಗಳಿಗೆ ಎರಡು ಬಾರಿ ಆಗುತ್ತೆ ನೋಡು.

ಸರಿ, ಪತ್ರ ಪೂರ್ತಿ ನಂದೇ ಆಗೋದ್ ಬೇಡ ರಾಮಾಯ್ಣ - ನಿನ್ನ ಕಥೆ ಏನು? ಮೊನ್ನೆ ಸುಗ್ಗೀ ಎಲ್ಲಾ ಚೆನ್ನಾಗಾಯ್ತಾ? ಕಾಫಿಗೆ ಬೆಲೆ ಬರುತ್ತೆ ಅಂತ ಕಾಯ್ತಾ ಕೂರ್ ಬೇಡ್ವೋ, ಸುಮ್ನೇ ಸಿಕ್ಕಿದ್ ಬೆಲೆಗ್ ಮಾರಿ ಕೈ ತೊಳೊಕೋ, ಯಾವನಿಗ್ ಗೊತ್ತು ಮುಂದೆ ಏನಾಗುತ್ತೇ ಅಂತಾ? ವೆನ್ನಿಲ್ಲಾ-ಪನ್ನಿಲ್ಲಾ ಹೆಂಗ್ ಚಿಗುರಿದೆ, ನೀನು ಅದನ್ನ ಚಿಗುರ್‍ಸಿ, ಕಳ್‌ಕಾಕ್ರು ಎಗುರುಸ್‌ದಂಗೆ ಕಣ್ಣಲ್ಲಿ ಕಣ್ಣಿಟ್ಟು ಕಾದು, ಅದನ್ನ ಎಕ್ಸ್‌ಪೋರ್ಟ್ ಮಾಡ್ಸಿ, ನಾನಿಲ್ಲಿ ತಿನ್ನೋ ಕಾಲ ಯಾವತ್ತಿಗ್ ಬರುತ್ತೋ ನೋಡ್ತೀನಿ. ಮತ್ತೆ, ನಿಮ್ಮಲ್ಲಿ ಎಲ್ಲ ದೂರವಾಣಿ ಕರೆಗಳನ್ನೂ ಫ್ಲಾಟ್ ರೇಟ್ ಮಾಡಿದಾರೆ ಅಂತ ಕೇಳ್ದೆ, ಇಂಟರ್‌ನ್ಯಾಷನಲ್ ಕಾಲೂ ಚೀಪ್ ಆಗಿರಬೇಕಲ್ವಾ? ಅದು ಏನೇ ಆಗ್ಲೀ ನೀನಂತೂ ನನಗೆ ಫೋನ್ ಮಾಡ್ಬೇಡ, ಪುರುಸೊತ್ತಾದಾಗ ಹೀಗೇ ಪತ್ರ ಬರೀತಾ ಇರು, ನಿನ್ನ ಪತ್ರದ ಮೂಲ್ಕನಾದ್ರೂ ನಮ್ ಊರಿನ್ ವಾಸ್ನೆ ನಂಗ್ ಬರ್‍ಲಿ. ಮತ್ತೆ ನೀನು ಇತ್ತೀಚಿಗೆ ಓದಿರೋ ಸ್ವಾರಸ್ಯವಾಗಿರೋ ಯಾವ್ದಾದ್ರೂ ಪುಸ್ಕ ಇದ್ರೆ ತಿಳ್ಸು. ನಿಮ್ಮನೆಯವರಿಗೆಲ್ಲ ಕೇಳ್ದೆ ಅಂತ ಹೇಳು.

ಮತ್ತೆ ಬರೀತೀನಿ.

Tuesday, April 18, 2006

ಮೊದ್ಲು ನೆಟ್ಟಗ್ ಕನ್ನಡಾ ಮಾತಾಡೋದ್ ಕಲಿ...

ನಾನು ಅತ್ಯಂತ ಜಂಭದಿಂದ ಹೇಳಿಕೊಳ್ಳುವ ಮಾತೆಂದರೆ 'ನನಗೆ ಕನ್ನಡ ಚೆನ್ನಾಗಿ ಬರುತ್ತೇ' ಎಂಬುದಾಗಿ. ನಮ್ಮೂರಲ್ಲಿದ್ದಾಗ ಈ ರೀತಿ ಹೇಳಿದ್ರೆ ಅದಕ್ಯಾವ ಅರ್ಥವೂ ಇರ್‍ತಿರ್ಲಿಲ್ಲ, ಇರಲ್ಲ, ಆದರೆ ಮುಂದೆ ದೇಶ, ವಿದೇಶ ಸುತ್ತು ಹಾಕೋಕೆ ಶುರು ಮಾಡಿದ ಮೇಲೆ ಇಂಥಾ ಅರ್ಥಹೀನ ವಾಕ್ಯಕ್ಕೂ ಒಂದು ಅರ್ಥ ಅಂತ ತಾನಾಗೇ ಏನೋ ಹುಟ್ಟಿಕೊಂಡಿತು. ('ಕನ್ನಡಾ ಬರುತ್ತಾ' ಎಂದು ಕೇಳಿದವರಿಗೆಲ್ಲಾ 'ಎಲ್ಲಿಂದ?' ಎಂದು ಪ್ರಶ್ನೆ ಹಾಕಿದರೆ ಸ್ವಾರಸ್ಯವಾಗಿರುತ್ತೆ, ಅಥವಾ ನಮ್ಮ ಕನ್ನಡವೂ ಅಲ್ಲಿಂದ ಇಲ್ಲಿಂದ ನನ್ನ ಹಾಗೆ ವಲಸೆ ಬಂದಿದ್ದರೆ ಎಷ್ಟೋ ಚೆನ್ನಾಗಿತ್ತು - ಇನ್ನು 'ಕನ್ನಾಡ್' ಎಂದು ಹೇಳೋ ಉತ್ತರ ಭಾರತದವರಿಗೆಲ್ಲಾ ನಾನು 'ಕನ್ನಾಡ್' ಅಲ್ಲಾ 'ಕನ್ನಡ' ಎಂದು ಹೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ, ನೀವೂ ಹಾಗೆ ಮಾಡಿ).

ಹಿಂದೆ ಯಾವುದೋ ಒಂದು ಆನ್‌ಲೈನ್ ಮ್ಯಾಗಜೀನ್‌ಗೆ ಪ್ರತಿಕ್ರಿಯಿಸಿ ಒಂದು ಪತ್ರವನ್ನು ಕನ್ನಡದಲ್ಲಿ ಬರೆದಾಗ ಅದಕ್ಕುತ್ತರವಾಗಿ ನನಗೆ ಬಂದ ಪತ್ರದಲ್ಲಿ 'ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು' ಎಂದು ಬರೆದಿದ್ದರು. ನಾನು ಆ ಮಾತನ್ನು ಬಹಳ ವಿರೋಧಿಸಿದ್ದೆ: ನನ್ನ ಕನ್ನಡದ ಮೇಲೆ ನನಗೆ ಮಮತೆ, ಪ್ರೀತಿ, ಅಭಿಮಾನಗಳು ನಿಜವಾಗಿಯೂ ಇವೆಯೇ? ಕನ್ನಡ ಅನ್ನೋದು ನನ್ನ ತಾಯ್‌ನುಡಿ, ಅದು ನನ್ನ ಒಂದು ಭಾಗ (ಅವಿಭಾಜ್ಯ ಎಂದರೂ ತಪ್ಪಿಲ್ಲ), ಒಂದು ರೀತಿ ನನ್ನ ಮುಂಡಕ್ಕೆ ಅಂಟಿಕೊಂಡಿರೋ ರುಂಡದಂತೆ...ಅದರಲ್ಲಿ ಅಭಿಮಾನ ಪಟ್ಟುಕೊಳ್ಳುವುದೇನೂ ಇಲ್ಲ - ನನ್ನ ಮುಂಡದ ಮೇಲೆ ನನ್ನ ರುಂಡವಿದೆ ಎಂದು ಅಭಿಮಾನಪಟ್ಟುಕೊಳ್ಳಲಾಗುವುದೇ? ಕನ್ನಡೇತರರ ಕನ್ನಡ ಅಭಿಮಾನವನ್ನು ನಿಜವಾಗಿಯೂ ಕೊಂಡಾಡ ಬೇಕು, ಅವರು ಕಿಟ್ಟೆಲ್ ಅಂತಹ ಮಹಾತ್ಮರಿರಬಹುದು, ಅಥವಾ ನಾನು ಹೇಳಿದೆನೆಂದು ನನ್ನ ಮಾತಿಗೆ ಬೆಲೆ ಕೊಟ್ಟು ಕನ್ನಡ ಆಡಿಯೋ ಸಿ.ಡಿ. ಒಂದನ್ನು ಕೊಂಡ ನನ್ನ ಅಮೇರಿಕನ್ ಸ್ನೇಹಿತನಿರಬಹುದು, ಅಥವಾ 'ರವಿ ವರ್ಮನಾ ಕುಂಚದಾ ಕಲೆ'ಯನ್ನು ನನ್ನಿಂದ ದೇವನಾಗರಿಯಲ್ಲಿ ಬರೆಸಿಕೊಂಡು ಹಾಡುವ ತಮಿಳು ಮಿತ್ರ ರಾಮಮೂರ್ತಿ ಇರಬಹುದು. ನನ್ನ ವಾದವನ್ನು ಆ ಆನ್‌ಲೈನ್ ಪತ್ರಿಕೆಯ ಸಂಪಾದಕರೂ ಒಪ್ಪಿಕೊಂಡಿದ್ದರು - ನನ್ನ ಪ್ರಕಾರ, ಕನ್ನಡಿಗನೊಬ್ಬನಿಗೆ ಕನ್ನಡದ ಬಗ್ಗೆ ಅಭಿಮಾನವಿದೆ ಎಂದರೆ ಒಂದು ರೀತಿ ಅವಮಾನ ಮಾಡಿದ ಹಾಗೆಯೇ.

***

ಹೀಗೆ ನಾನು ನನ್ನ ಕನ್ನಡ ಸಾಮರ್ಥ್ಯದ ಬಗ್ಗೆ ಬೀಗುತ್ತಿರುವಾಗ ನಾನು ದಿನ ನಿತ್ಯ ಬಳಸುವ/ಕೇಳುವ ಹಲವಾರು ವಾಕ್ಯ/ಪದಗಳನ್ನು revisit ಮಾಡುವ ಅವಕಾಶಗಳು ಬಂದವು:
೧) ನಾನು ಹಾಡನ್ನು ಹೇಳುತ್ತೇನೆ ಅಥವಾ ಒಂದು ಹಾಡ್ ಹೇಳು.
೨) ನನ್ನನ್ನು ನಿದ್ದೆಯಿಂದ ಎಬ್ಬಿಸು.
೩) ಇವತ್ತು ಹುರುಳೀಕಾಯಿ ಪಲ್ಯ ಮಾಡೋಣ.
೪) ಒಲೇ ಮೇಲೆ ಅನ್ನಾ ಇಡು.
೫) ಅವ್ನು ಮ್ಯಾಲಿಂದ ಇಳಿಯಾಕ್ ಹತ್ಯಾನೆ.
೬) ಅದು ತುಂಬಾ ವಜ್ಜ್ ಐತಿ (ಇದೆ).
೭) ಏನಕ್ಕೇ?
೮) 'ಕಾ ಕ ಕೀ ಕಿ' ಅಲ್ಲ!
೯) ಮಹಾಪ್ರಾಣವೇ ಮುಖ್ಯ ಪ್ರಾಣ!
೧೦) ಕನ್ನಡದಲ್ಲಿ ಬೇಕಾದಷ್ಟು ಪದಗಳಿಲ್ಲ.

ಈಗ ಮೇಲಿನವುಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತಾ ಬರೋಣ (ನೆನಪಿರಲಿ, ನೂರು ಜನ ಬಳಸಿದ ಮಾತ್ರಕ್ಕೆ ಅದು ಸರಿಯಾದ ಬಳಕೆ ಅಲ್ಲ, acceptable ಇರಬಹುದು - ಒಂದು ರೀತಿ ಅಮೇರಿಕದಲ್ಲಿ ಕೆಲವರು I didn't do nothing! ಅನ್ನೋ ಹಾಗೆ).

೧) ಹಾಡನ್ನು ಹಾಡಬೇಕಾಗುತ್ತದೆ, 'ನಾನು ಹಾಡನ್ನು ಹಾಡುತ್ತೇನೆ' ಅಥವಾ 'ಒಂದು ಹಾಡ್ ಹಾಡು' ಅನ್ನೋದು ಸರಿಯಾದ ಬಳಕೆಯಲ್ಲವೇ?

೨) ಎಬ್ಬಿಸು ಅನ್ನುವುದರ ಬದಲಿಗೆ ಏಳಿಸು, ಎದ್ದೇಳಿಸು ಎಂದರೆ ಹೇಗೆ?

೩) ಈ ಬೆಂಗಳೂರಿನವರಿಗೆ ಅದು ಹೇಗೆ ಈ ಹುರುಳೀಕಾಯಿ ತಗುಲಿಕೊಂಡಿತೋ ಗೊತ್ತಿಲ್ಲ, ನಾನು ತಿಳಿದಂತೆ ಹುರುಳಿ ನವಧಾನ್ಯಗಳಲ್ಲಿ ಒಂದು, ತೊಗರಿ ಕಾಳುಗಳನ್ನು ಹಿಡಿದುಕೊಂಡಿರೋ ತೊಗರಿಕಾಯಿಯ ಹಾಗೆ, ಈ ಹುರುಳೀಕಾಯಿಯೂ ಹುರುಳಿಯನ್ನು ಹಿಡಿದುಕೊಂಡಿರಬೇಕಲ್ಲವೇ? ನಮ್ಮ ಊರುಗಳಲ್ಲಿ ಬೀನ್ಸ್‌ಅನ್ನು (string beans) ಬೀನ್ಸ್ ಎಂದೇ ಹೇಳುತ್ತೇವೆ. ಉದಾಹರಣೆಗೆ ಭಾರತದಲ್ಲದ ಟೊಮೇಟೋ‌ವನ್ನು ಟೊಮೇಟೋ ಎಂದೇ ಹೇಳುವುದಿಲ್ಲವೇ ಹಾಗೆ. ನಾನು ಬೆಂಗಳೂರಿನವರು ಹುರುಳೀಕಾಯಿ ಅಂದಾಗಲೆಲ್ಲ ಅವರಿಗೆ ಈ ಬಗ್ಗೆ ಕೇಳಿದರೆ ಯಾರಿಗೂ ಈ ಬೆಂಗಳೂರಿನ 'ಹುರುಳೀಕಾಯಿ'ಯ ಮೂಲ ಗೊತ್ತಿಲ್ಲ, ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ.

೪) ಒಲೇ ಮೇಲೆ ಅನ್ನಕ್ಕಿಡು ಅನ್ನೋದು ಸರಿಯಾದ ಬಳಕೆ - 'ಇಲ್ಲವೆಂದರೆ ಏಕದಂತನು ದಂತ ಮುರಿದುಕೊಂಡಂತೆ', 'ಕೃಷ್ಣನು ದಂತ ವಕ್ರನ ಹಲ್ಲು ಮುರಿದಂತೆ' ಅಪಹಾಸ್ಯವಾಗುತ್ತದೆ.

೫) ಇಂಗ್ಲೀಷ್‌ನಲ್ಲಿ Present Continuous Tense ನಲ್ಲಿ He is going to come ಎಂದಂತೆ 'ಅವ್ನು ಮೇಲಿಂದ ಇಳಿಯಾಕ್ ಹತ್ಯಾನೆ' ಅನ್ನೋದು ಸರಿಯಾದ ಬಳಕೆಯೇ, ಅದರಲ್ಲಿ ಹಾಸ್ಯವೇನೂ ಇಲ್ಲ, ಹೋದವನು ಬರುವುದು ಎಷ್ಟು ಸಹಜವೋ, ಮೇಲೆ ಹತ್ತಿದವನು ಇಳಿಯೋದೂ ಅಷ್ಟೇ ಸಹಜ! (ನನ್ನ ಉತ್ತರ ಕರ್ನಾಟಕದ ಮಿತ್ರರಿಗೆ ಅವರನ್ನು ದಕ್ಷಿಣದವರು 'ಇಳೀಲಿಕ್ಕೆ ಹತ್ಯಾನೆ...' ಎಂದು ಅಪಹಾಸ್ಯ ಮಾಡಿದಾಗಲೆಲ್ಲ ಉತ್ತರಿಸುವುದಕ್ಕೆ ಅಸ್ತ್ರವೊಂದು ಸಿಕ್ಕಿರಬೇಕು - 'going to come' ಅನ್ನು ಒಪ್ಪಿಕೊಂಡ ನಮಗೆ 'ಇಳೀಲಿಕ್ಕೆ ಹತ್ಯಾನೆ' ಅನ್ನೋದನ್ನ ಒಪ್ಪಿಕೊಳ್ಳೋದಕ್ಕೆ ಏಕೆ ಕಷ್ಟವಾಗುತ್ತೋ?)

೬) ಒಂದು ಭಾಷೆ ಸುಂದರವಾಗೋದು ಅನ್ಯ ಭಾಷಾ ಪದಗಳನ್ನು ಬಳಸಿದಾಗಲೇ ಎಂದು ನಾನೇನು ದೊಡ್ಡ ಜಾಣ್ಣುಡಿಯನ್ನು ಬರೆಯಲಿಕ್ಕೆ ಹೊರಟಿಲ್ಲ, ಆದರೂ ನಮ್ಮ ಪರಂಪರೆಯಲ್ಲಿ ಅನ್ಯ ಭಾಷಾ ಪದಗಳ ಬಳಕೆ ಮಿಳಿತವಾಗಿದೆ. ಮರಾಠಿ ಅಥವಾ ಹಿಂದೀ ಮೂಲದ 'ವಜನ್' ಅನ್ನೋ ಪದ ನಮ್ಮ ಕನ್ನಡದಲ್ಲಿ 'ವಜೆ', 'ವಜ್ಜಿ', 'ವಜ್' ಮುಂತಾದ ರೂಪ ಪಡೆದಿರಲಿಕ್ಕೂ ಸಾಕು - 'ವಜ್ಜಿ' ಅನ್ನೋ ಪದದಲ್ಲಿ 'ಜಿ' ಒತ್ತು ಇದೇ ನೋಡಿ, ಅದಕ್ಕೆ ಎಷ್ಟು ಒತ್ತು ಕೊಡುತ್ತೀರೋ ಅಷ್ಟು 'ಭಾರ'ದ ಕಲ್ಪನೆ ಮೂಡಲಿಕ್ಕೂ ಸಾಕು!

೭) ಈ 'ಏನಕ್ಕೆ' ಅನ್ನೋ ಪದ ಎಲ್ಲಿಂದ ಬಂತೋ ಗೊತ್ತಿಲ್ಲ, ನನ್ನ ಪ್ರಕಾರ ಕನ್ನಡದಲ್ಲಿ ಆ ಪದವಿಲ್ಲ - ದಯವಿಟ್ಟು ಇನ್ನಾದರೂ 'ಏನಕ್ಕೇ' ಎನ್ನಬೇಡಿ.

೮) ನಮ್ಮ ಕನ್ನಡ ಕಾಗುಣಿತ ಶುರುವಾಗೋದು 'ಕ' ಇಂದ, 'ಕಾ' ಇಂದ ಅಲ್ಲ, 'ಕ ಕಾ ಕಿ ಕೀ' ಅನ್ನೋದು ಸರಿ ಅಲ್ಲವೇ? ಆದ್ರೆ, ಇನ್ನೂ ಎಷ್ಟೋ ಜನ 'ಕಾಕ ಕೀಕಿ' ಅನ್ನೋದನ್ನ ನಾನು ಕೇಳಿದ್ದೇನೆ.

೯) ಸಂಸ್ಕೃತವನ್ನು ಬಲವಾಗಿ ಆಧರಿಸಿದ್ದರಿಂದಲೋ ಏನೋ ಅಲ್ಪಪ್ರಾಣ ಮಹಾಪ್ರಾಣ ಅನ್ನೋದು ನಮ್ಮ ಭಾಷೆ ಇಷ್ಟೊಂದು ವೈವಿಧ್ಯಮಯವಾಗಿ, ವಿಶೇಷವಾಗಿರೋ ಕಾರಣಗಳಲ್ಲೊಂದು. ನಾವು ಮಾತನಾಡುವಾಗ ಆ ಬಗ್ಗೆ ಎಚ್ಚರವಹಿಸದಿದ್ದರೆ ಕೇಳುಗರಿಗೆ ರುಚಿಸದು, ನಮ್ಮ ವ್ಯಂಜನ ಸಮೂಹ ಎಷ್ಟೊಂದು ವೈಜ್ಞಾನಿಕವಾಗಿ ನಿರ್ಮಿತವಾಗಿದೆ ಅನ್ನೋದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ - ನೀವು 'ಕ ಖ ಗ ಘ ಙ' ಇಂದ ಶುರು ಮಾಡಿ 'ಚ', 'ಟ', 'ತ', 'ಪ' ವನ್ನು ಗಟ್ಟಿಯಾಗಿ (ನಿಮಗಷ್ಟೇ ಕೇಳುವಂತೆ) ಹೇಳಿಕೊಂಡು ಬನ್ನಿ - ಕಿರು ನಾಲಿಗೆಯ ಅಡಿಯಲ್ಲೆಲ್ಲೋ ಆರಂಭವಾಗುವ 'ಕ'ಕಾರ, ನಾಲಿಗೆಯ ಮೇಲೆ 'ಚ'ಕಾರ ನಲಿದು, ನಾಲಿಗೆಯ ತುದಿಯಲ್ಲಿ 'ಟ'ಕಾರ ಬಂದು, ನಾಲಿಗೆಯ ತುದಿ ಹಾಗೂ ಒಸಡು ಕೂಡುವಲ್ಲಿ 'ತ'ಕಾರ ಬಂದು ಮುಂದೆ ತುಟಿಗಳಲ್ಲಿ 'ಪ'ಕಾರ ಮುಕ್ತಾಯವಾಗುತ್ತದೆ!

ಇಂಥಹ ಸುಂದರ ಸರಣಿಯನ್ನು ನಿಮಗೆ ಹೇಗೆ ಬೇಕೋ ಹಾಗೆ ಮಾಡಿಕೊಂಡು, ಇರುವ ೫೨ ಅಕ್ಷರಗಳನ್ನು ಮನಸಾ ಇಚ್ಛೆ ಹಿಂಸಿಸಿ ನಮ್ಮ ವರ್ಣಮಾಲೆಯಲ್ಲಿ ಬರಿ '೨೦' ಅಕ್ಷರಗಳಿವೆ ಅನ್ನೋದರಲ್ಲಿ ಯಾವ ದೊಡ್ಡತನವಿದೆ ನೀವೇ ಹೇಳಿ.

ನಾನು ಮದ್ರಾಸ್‌ನಲ್ಲಿದ್ದಾಗ (ನನ್ನ ಸಹೃದಯೀ ತಮಿಳು ಸ್ನೇಹಿತರಿಗೆ) ಈ ಮಾತನ್ನು ಪದೇ-ಪದೇ ಹೇಳ್ತಿದ್ದೆ: 'ಯಾವ ಭಾಷೆಯಲ್ಲಿ ನನ್ನ ಪೂರ್ಣ ಹೆಸರನ್ನು, ನನ್ನ ದೇಶದ ಹೆಸರನ್ನು, ನಮ್ಮ ಊರುಗಳ ಹೆಸರನ್ನು ಬರೆದು ಉಚ್ಚರಿಸಲಾಗದೋ ಅಂತಹ ಭಾಷೆಯನ್ನು ನಾನು ಕಲಿಯುವುದಿಲ್ಲ' ಎಂಬುದಾಗಿ. ಅವರು ಅದಕ್ಕೆ ಯಾವ ವಿರೋಧವನ್ನೂ ತೋರುತ್ತಿರಲಿಲ್ಲ (ಅದಕ್ಕೇ ಸಹೃದಯಿಗಳು ಎಂದದ್ದು!) - ಇಲ್ಲವೆಂದಾದರೇ ನೀವೇ ಯೋಚಿಸಿ, ಬರೆದಾಗ 'ಪರೋಠಾ'ಕ್ಕೂ 'ಬರೋಡಾ'ಕ್ಕೂ ವ್ಯತ್ಯಾಸವಿರಲೇಬೇಕಲ್ಲವೇ?

೧೦) ಹೌದು, ನಮ್ಮ ಕನ್ನಡದಲ್ಲಿ (ನಮಗೆ) ಬೇಕಾದಷ್ಟು ಪದಗಳಿವೆ. ಒಂದು ಭಾಷೆಯನ್ನು ಹಿಂದಿನ ತಲೆಮಾರಿನಿಂದ ಪಡೆದು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅದು ನಮ್ಮ ಕರ್ತವ್ಯ ಕೂಡಾ. ಈ ತಲೆಮಾರಿನ ಆಸ್ಥಿ ಸಮಯಕ್ಕೆ ತಕ್ಕಂತೆ ಬೆಳೆಯಬೇಕು, ಬೆಳೆಯುತ್ತೆ. ನಿಮಗೆ ಪದಗಳು ಗೊತ್ತಿಲ್ಲವೆಂದ ಮಾತ್ರಕ್ಕೆ ಅದು ನಿಮ್ಮ limitation ನ್ನೇ ವಿನಾ ಭಾಷೆಯ short coming ಅಲ್ಲ. ಪ್ರಪಂಚದಲ್ಲಿ ಜೀವ ಕುಲದ ಹಲವು ಸಂತತಿಗಳು ನಾಶವಾಗುವಂತೆ, ತಲೆಮಾರುಗಳು ತಮ್ಮ-ತಮ್ಮ ಭವಿತವ್ಯದ ಕರ್ತವ್ಯದಿಂದ ದೂರ ಸರಿದಂತೆ, ಭಾಷೆಯೂ ನಶಿಸುತ್ತದೆ. ಆದ್ದರಿಂದಲೇ ನಮ್ಮ ಭಾಷೆಯನ್ನು ಬಳಸ ಬೇಕು, ಬೆಳೆಸಬೇಕು. ಈ ಸತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳದೇ ಹೋದರೆ ಮುಂದಿನ ತಲೆಮಾರಿಗೆ ನಾವು ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡಿದಂತೆ.

***

ಹೀಗೆ ನಿಮ್ಮ ಅಂತೈರ್ಯವನ್ನು ಕೆಣಕಿದೆ ಅಂದುಕೊಳ್ಳಬೇಡಿ, ನಾನೇನು 'ಗಂಗಾಳಿಕ್ಕಿ ಉಣ್ಣಾಕ್ ಬಡಸ್ ತಾಯೇ' ಎಂದು ಅನ್ನಿ ಅಂತ ಹೇಳ್ತಾ ಇಲ್ಲ, ಇರೋದರಲ್ಲೇ ಸ್ವಲ್ಪ ಸ್ವಚ್ಛ ಕನ್ನಡ ಮಾತಾಡೋಣ ಅಂತ ಹೇಳ್ದೆ ಅಷ್ಟೆ. ನನಗ್ ಗೊತ್ತು ಸಮಯದ ಹಿಂದೆ ಬಿದ್ದು ನಾನಿಲ್ಲಿ ಬರೆಯೋವಾಗಲೇ ಹಲವಾರು ತಪ್ಪುಗಳಾಗ್ತಾವೆ ಅಂತ ಹಾಗೂ Microsoft ನ ತುಂಗಾ bugಗ್ಗಡವಾಗಿರೋದ್ರಿಂದಾನೂ ಕೆಲವೊಂದು ತಪ್ಪುಗಳಾಗ್ತಿವೆ ಅಂತ, ಅವರು ಅದನ್ನ ಸರಿ ಪಡಿಸೋವರೆಗೆ ನಾನು ಬರೆದದ್ದು ಸರಿಯಾಗಿ ಕಾಣಬೇಕೂ ಅಂದ್ರೆ 'ಮೂಲ' ಅನ್ನೋದನ್ನ 'mUಲ' ಅಂತ ಇಂಗ್ಲೀಷ್‍ನಲ್ಲೇ ಬರೀಬೇಕಾಗುತ್ತೆ! ನನಗೆ ತೋಚಿದ ತಪ್ಪುಗಳನ್ನ ನಾನು ತಿದ್ದ್‌ತಾ ಬರ್ತೀನಿ, ಅಕ್ಷರ ಸ್ಖಾಲಿತ್ಯ ಅನ್ನೋದು ಎಂತೋರನ್ನೂ ಬಿಟ್ಟಿಲ್ಲ ಇನ್ನು ನನ್ನನ್ನು ಬಿಟ್ಟೀತೆ?

ಕನ್ನಡದ ಬಗ್ಗೆ ಕನ್ನಡದಲ್ಲಿ ಬರೆದು, ಅಲ್ಪಾ-ಸ್ವಲ್ಪ ಓದುವ ಕನ್ನಡಿಗರಷ್ಟನ್ನೇ ಮುಟ್ಟುತ್ತೇವಲ್ಲ ಅನ್ನೋದು ನನ್ನ ಇತ್ತೀಚಿನ ಕೊರಗಿನೊಳಗೊಂದು. ನಮ್ಮಲ್ಲಿ ಕನ್ನಡವನ್ನು ಕುರಿತು, ಕನ್ನಡದ ಬಗ್ಗೆ ಪ್ರಕಟವಾದ ಎಲ್ಲ ಹೊತ್ತಿಗೆ, ರೂಪಕ, ಸಾಮಗ್ರಿಗಳನ್ನೂ ಒಂದು ವ್ಯವಸ್ಥಿತ ನೆಲೆಗಟ್ಟಿನ ಆಡಿಯಲ್ಲಿ ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದ ಮಾಡುವ/ಮಾಡಿಸುವ ಆಸಕ್ತಿ ಇತ್ತೀಚೆಗೆ ಬಲವಾಗಿದೆ. ಕನ್ನಡಮ್ಮ ನನಗೆ ಇನ್ನಷ್ಟು ಬಲವನ್ನು ಕೊಡಲಿ.

Monday, April 17, 2006

ಬೈತೀರೇನ್ರೀ? ಬೈರಿ...

'ಅವನಿಗೆ ಬಯ್ಯ್ ಬೇಡ್ವೋ, ಅದರಿಂದ ನಿನಗೇನ್ ಸಿಗುತ್ತೆ?'

'ಮತ್ತೆ, ಅವ್ನು ಬಯ್ದ್ರೆ ಸುಮ್ನೇ ಬಯ್ಸ್‌ಗೊಂಡ್ ಇರೋಕ್ ಆಗುತ್ತಾ?'

'ಅವನು ಬಯ್ದಾ ಅಂತ ನೀನೂ ಬಯ್‌ದ್ರೆ, ನೀನು ನಿನ್ನ ನಾಲಿಗೇನ ಹಾಳುಮಾಡಿಕೊಂಡಂಗ್ ಆಗಲ್ವಾ?'

'ಸುಮ್ನಿರೋ, ಮುಳ್ಳನ್ನ ಮುಳ್ಳಿಂದ್ಲೇ ತೆಗೀ ಬೇಕು, ಅವನು ಬಾಯಿಗೆ ಬಂದಂಗ್ ಮಾತಾಡ್‌ದ್ರೆ ನಾನು ನೋಡಿಕೊಂಡ್ ಸುಮ್ನೇ ಇರೋಕಾಗುತ್ತಾ?'

'ಹಂಗಲ್ಲ, ಅವ್ನು ಕೆಟ್ಟ ಕೆಟ್ಟ ಪದ ಉಪಯೋಗ್ಸಿ ಬಯ್‌ತಾನೆ ಅಂದ್ರೆ, ನೀನು ಹಂಗೆ ಮಾಡಬೇಕಾ? ನೀನು ಅವನಿಗೆ ಬೋ...ಮಗ, ಸೂ...ಮಗ ಅಂದ್ರೆ ಅದರಿಂದ ಏನಾಗುತ್ತೆ!'

'ಏನಾಗುತ್ತೋ, ಬಿಡುತ್ತೋ...ನಿನ್ನ ಉಪದೇಶ ನನಗಂತೂ ಬ್ಯಾಡಪ್ಪಾ, ಈ ನನ್ ಮಕ್ಳೀಗೆ ಹೆಂಗ್ ಬುದ್ಧಿ ಕಲಸ್ ಬೇಕು ಅಂತ ನಂಗೂ ಗೊತ್ತು!'

'ಸ್ವಲ್ಪ ಸಮಾಧಾನವಾಗಿ ಯೋಚ್ನೆ ಮಾಡೋ, ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ...'

'ಏ, ನಿನಗ್ ಗೊತ್ತಾಗಲ್ಲ ಬಿಡೋ, ನಿನ್ನ ಪ್ರಪಂಚಾನೇ ಬೇರೆ!'

***

ನನ್ನ ಮತ್ತು ನನ್ನ ಅಣ್ಣನ ನಡುವೆ ನಡೆದ ಈ ಮೇಲಿನ ಸಂಭಾಷಣೆ ಒಂದು ನಿದರ್ಶನವಷ್ಟೇ - ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವನಾಗಿ ಹುಟ್ಟಿದ್ದಕ್ಕೋ ಏನೋ, ಈ ಮಾತುಗಳನ್ನು ಪದೇ-ಪದೇ ಕೇಳಿದ್ದೇನೆ. 'ನಿನಗ್ ಗೊತ್ತಾಗಲ್ಲ ಬಿಡೋ' ಅನ್ನೋ ಮಾತು ಹಲವಾರು ಸ್ಥರಗಳಲ್ಲಿ ನನ್ನನ್ನು ಬೆಳೆಯುವಂತೆ ಪ್ರಚೋದಿಸಿದೆ - ನನ್ನ ಇಂದಿನ ತರ್ಕ, ಬುದ್ಧಿಮತ್ತೆ, ವಿವೇಚನೆ, ಪ್ರಬುದ್ಧತೆ ಹಾಗೂ ನನ್ನನ್ನು ನನಗೇ ಗೊತ್ತಿಲ್ಲದ ರೀತಿಯಲ್ಲಿ ಥಳುಕು ಹಾಕಿಕೊಂಡಿರುವ ಕೀಳರಿಮೆ ಇವುಗಳೆಲ್ಲವೂ 'ನನಗೇನೋ ಗೊತ್ತಿಲ್ಲವಂತೆ' ಅನ್ನೋ ವಾಕ್ಯದಿಂದಲೇ ಹುಟ್ಟಿದವೇನೋ ಅನುವಷ್ಟು ಸಹಜವಾಗಿದೆ!

***

ಇನ್ನು ಬೈಗುಳದ ವಿಷಯಕ್ಕೆ ಬಂದರೆ, ನಮ್ಮ ಊರುಗಳಲ್ಲಿ ಅದು ಸಾಮಾನ್ಯ ಹಾಗೂ ಸಹಜ. 'ಮಗನೇ...' ಅನ್ನೋ ಸಂಬೋಧನೆಯಲ್ಲಿಯೇ ನಾನು ಎಷ್ಟೋ ಜನರು ತಮ್ಮ ವಾಕ್ಯಗಳನ್ನು ಆರಂಭಿಸುವುದನ್ನು ನೋಡಿದ್ದೇನೆ. ನನ್ನ ಶಾಲಾ ದಿನಗಳಲ್ಲಿ ಈ 'ನನ್ ಮಗ' ಅನ್ನೋ ವಿಲಕ್ಷಣ ವಿಶೇಷಣವನ್ನು ನಾನೂ ಧಾರಾಳವಾಗಿ ಉಪಯೋಗಿಸ್ತಾ ಇದ್ದೆ. ಇವತ್ತಿಗೂ ಕೂಡ ನನ್ನ ಮನಸ್ಸು ಒಂದೇ ಸಂದಿಗ್ದದಲ್ಲಿ ಸಿಕ್ಕಿದಾಗಲೋ, ಅಥವಾ ಹೆಚ್ಚು ಉದ್ರೇಕಗೊಂಡಾಗಲೋ 'ಆ ಮಗ, ಈ ಮಗ...' ಅನ್ನೋ ಪದಗಳು ಮಾತುಗಳಲ್ಲಿ ತಂತಾನೆ ನುಸುಳಿಕೊಳ್ಳುತ್ತವೆ. ಸದ್ಯ, ನಾನು ಕನ್ನಡದಲ್ಲಿಯೇ ಅವುಗಳನ್ನು ಹೇಳೋದರಿಂದ ಆಫೀಸ್ ವಾತಾವರಣದಲ್ಲಿ ಈವರೆಗೂ ಯಾವ ತೊಂದರೆಗೂ ಸಿಕ್ಕಿ ಹಾಕಿಕೊಂಡಿದ್ದಿಲ್ಲ, ಆದರೆ ಮನೆಯಲ್ಲಿ ನನ್ನ ಹೆಂಡತಿ 'ಇವ ಯಾವ ಕಾಡಿನಿಂದ ಬಂದವನು...' ಎಂಬಂತೆ ಹಲವಾರು ಬಾರಿ look ಕೊಟ್ಟಿದ್ದಾಳೆ!

ನಮ್ಮ ಮಲೆನಾಡು, ಅರೆಮಲೆನಾಡು ವಾತಾವರಣದಲ್ಲಿ ಬೈಗಳು ಸಹಜವಾಗಿ ಮಾತುಕಥೆಯಲ್ಲಿ ಹಾಸುಹೊಕ್ಕಾಗಿರುವ ವಿಷಯ ಎಲ್ಲರಿಗೂ ಗೊತ್ತು, ನಾವು ಮಂಗಳೂರಿನವರಂತೆ (ಮಾತಿನಲ್ಲಿ ಮಾತ್ರ) nice ಜನರೂ ಅಲ್ಲ, ಧಾರವಾಡದವರಂತೆ ಒರಟರೂ ಅಲ್ಲ, ಒಂಥರಾ ಮಧ್ಯ - ನನ್ನ "ಮಧ್ಯಸ್ಥಿಕೆ"ಯ ಮೂಲ ಇಲ್ಲಿಂದಲೇ ಶುರುವಾಗಿರಲಿಕ್ಕೂ ಸಾಕು. ಮುಂದೆ ನಾನು ಸಾಗರ, ಶಿವಮೊಗ್ಗ, ಮೈಸೂರುಗಳಲ್ಲಿ ಬೆಳೆದಂತೆಲ್ಲ ನಮ್ಮ ನಾಡಿನ ಯಾವ ಪ್ರದೇಶಕ್ಕೂ ಸೇರದ ಗ್ರಾಂಥಿಕ ಭಾಷೆಯನ್ನೇ ಆಡು ಭಾಷೆಯಾಗಿ ಕನ್ನಡವನ್ನು ಅಲ್ಲಲ್ಲಿ ಮಾತನಾಡುವುದಕ್ಕೆ ವ್ಯಥೆ ಪಡುತ್ತೇನೆ - ನನ್ನ ಮೂಲ ಭಾಷೆಯನ್ನೇ ಇಂದಿಗೂ ನಾನು ಮಾತನಾಡುವಂತಿದ್ದರೆ ಎಷ್ಟೊಂದು ಚೆನ್ನಿತ್ತು! ನನ್ನ ಅನೇಕ ಧಾರವಾಡ (ಅಥವಾ ಉತ್ತರ ಕರ್ನಾಟಕದ) ಸ್ನೇಹಿತರಿಗೆ, ಪರಿಚಯಸ್ತರಿಗೆ ಕೋರಿಕೊಂಡಿದ್ದೇನೆ - ಅವರು ತಮ್ಮ ಮೂಲ ಮಾತುಗಳನ್ನು ಆಡಿದರೇನೆ ಚೆಂದ, ಮೈಸೂರು, ಮಂಗಳೂರಿನವರೂ ಮುಂದೂ ಅಲ್ಲ, ಹಿಂದೂ ಅಲ್ಲ, ಮೇಲೂ ಅಲ್ಲ, ಕೆಳಗೂ ಅಲ್ಲ - ಅವರವರದ್ದು ಅವರವರಿಗೆ ಚೆಂದ. ಆದರೆ ನನಗೆ ಇವತ್ತಿಗೂ ಆಶ್ಚರ್ಯವಾಗುವಂತೆ ನನ್ನ ಧಾರವಾಡದ ಸ್ನೇಹಿತರು ಕೇವಲ (ಬರೀ) ಅವರ ಮನೆಯವರೊಂದಿಗೆ (ಅಥವಾ ಉಳಿದವರು ಧಾರವಾಡದವರೆಂದು ನೂರಕ್ಕೆ ನೂರು ಖಚಿತವಾದ ನಂತರ) ಮಾತ್ರ ಆಡುತ್ತಾರೆ, ನಾವು ಶಿವಮೊಗ್ಗದವರೋ, ಮೈಸೂರು-ಮಂಗಳೂರಿನ ಕಡೆಯವರು ಸಿಕ್ಕಿದರೆ ಸಂಭಾಷಣೆ ಕ್ರಮೇಣ ಇಂಗ್ಲೀಷ್‌ನ ಹಾದಿ ಹಿಡಿಯುತ್ತದೆ. ಈ ನಡತೆಯನ್ನು ನಾನು ಕೀಳರಿಮೆ ಎಂದು define ಮಾಡೋಲ್ಲ, ಆದರೆ ಧಾರವಾಡದ ಮಂದಿಗೆ ತಮ್ಮ ಮೇಲೆ ತಮಗೆ ನಂಬಿಕೆ ಕಡಿಮೆ ಎಂದು ವ್ಯಾಖ್ಯಾನಿಸುತ್ತೇನೆ - ನನಗೆ ಗೊತ್ತು ಇದರಿಂದ ಕೆಲವರಿಗೆ ಉರಿದುಕೊಂಡಿದೆ, ಕೊಳ್ಳುತ್ತದೆ ಎಂದು - ಹಾಗೆ ಆಗಿಯಾದರೂ ಒಬ್ಬನಾದರೂ ನನ್ನ ಮಾತನ್ನು ಕೇಳಿದರೆ ನನ್ನ ಪ್ರಯತ್ನ ಸಾರ್ಥಕ.

ಈ ಅಕ್ಕ-ಪಕ್ಕದ ಮನೆಯವರು ಜಗಳ-ಹೊಡೆದಾಟ ಮಾಡಿಕೊಳ್ಳುವುದಿದೆಯಲ್ಲ, ಅಲ್ಲಿ ಬೈಗಳು ಪ್ರಧಾನ - ನಿಮಗೆ ಆಶ್ಚರ್ಯವಾಗುವಂತೆ ವಿಷಯಗಳು ಎಲ್ಲೆಲ್ಲಿಂದ ಎಲ್ಲೆಲ್ಲಿಯವರೆಗೆ ಬರುತ್ತವೆ - ಈ ಮೂಲವೇ ಇರಬಹುದು ನಾವು ಇಂದಿಗೂ ನಮ್ಮ ನಮ್ಮ bagage ಹೊತ್ತುಕೊಂಡು ತಿರುಗಾಡುವುದಕ್ಕೆ ಕಾರಣ! If there is one thing I want to do, I want to stop carrying bags... ಚೀಲಗಳನ್ನು ಹೆಗಲ ಮೇಲೆ ಎತ್ತಿಕೊಂಡು ಬದುಕನ್ನು ದುಸ್ತರ ಮಾಡಿಕೊಳ್ಳುವುದರಲ್ಲಿ ನಾವು ನಿಸ್ಸೀಮರು (ನಾನು ನಿಸ್ಸೀಮ ಅನ್ನುವುದು ಸರಿಯಾದ ಬಳಕೆ), ಯಾಕೆ ಹೀಗೆ ಎಂದು ಪ್ರಶ್ನೆ ಕೇಳಿಕೊಂಡಾಗಲೆಲ್ಲ ನಮ್ಮ-ನಮ್ಮ ಸಂಸ್ಕಾರಗಳ ಬುಡಕ್ಕೇ ಬಂದು ನಿಲ್ಲುತ್ತದೆ, ಈ ಸಂಸ್ಕಾರಗಳನ್ನು ಕಿತ್ತೆಸೆಯುವುದು ಇದೇ ನೋಡಿ ಅದು ಬಲು ಕಷ್ಟದ ಕೆಲಸ - ನನ್ನ ಪ್ರಕಾರ ಹತ್ತು ವರ್ಷ ಧ್ಯಾನ ಮಾಡಿದ್ರೆ, ಒಂದು ವರ್ಷದ ಸಂಸ್ಕಾರ ಅಳಿಸಬಹುದೋ ಏನೋ - ಈ ಹೊತ್ತುಕೊಂಡ ಚೀಲಗಳು ನಮಗೆ ಒಂದು ವಿಶೇಷವಾದ ವ್ಯಕ್ತಿತ್ವ, ರೂಪವನ್ನು ಕೊಡುತ್ತದೆ - ಅದಕ್ಕೆ ಇರಬೇಕು ನಾನು ಎಲ್ಲೇ ಯಾವ ಭಾರತೀಯ ಮುಖಗಳನ್ನು ನೋಡಿದರೂ ಪ್ರತಿಯೊಬ್ಬರೂ ತಮ್ಮ ತಲೆ ಮೇಲೆ ಇಡೀ ಪ್ರಪಂಚದ ಭಾರವೇ ಬಿದ್ದಿದೇ ಅನ್ನೋ ಹಾಗಿರೋದು! ಯಾವೊಂದು ಸಂಭ್ರಮದ ಮುಖವೂ, ಅರಳಿದ ಕಣ್ಣುಗಳೂ, ಸದಾ ಪಸರಿಸಿರುವ ಲಘು ಲಾಸ್ಯವೂ, ನಿಷ್ಕಳಂಕ ಭಾವವೂ ಕಂಡಿದ್ದಿಲ್ಲ (ಉತ್ಪ್ರೇಕ್ಷೆ ಇದೆ, but you know what I mean) , ಶತಶತಮಾನಗಳ ಧರ್ಮ, ಧ್ಯಾನ, ದಯೆಯ ಪರಿಣಾಮ ನಮ್ಮನ್ನು ಈ ಸ್ಥಿತಿಗೆ ತಂದಿದೆಯೇ, ಅಥವಾ ನಮ್ಮ ನಮ್ಮ ಮುಖಗಳು ಇರುವುದೇ ಹಾಗೋ? ತ್ರೇತಾಯುಗ, ದ್ವಾಪರ ಯುಗಗಳಲ್ಲಿ ಹಾಗಿರಲಿಕ್ಕಿಲ್ಲ, ಏಕೆಂದರೆ ನಾನೆಲ್ಲಿ ಶ್ರೀ ರಾಮ, ಶ್ರೀ ಕೃಷ್ಣರ ಚಿತ್ರಗಳನ್ನು ನೋಡಿದರೂ ಅವರು ಸ್ಥಿತಪ್ರಜ್ಞೆಯನ್ನು, ಹಸನ್ಮುಖವನ್ನೇ ತೋರೋದು - ಆ ಚಿತ್ರಗಳನ್ನು ಸೃಷ್ಟಿಸಿದವರು ಕಲಿಯುಗದವರು ಅನ್ನೋದು ಬೇರೆ ವಿಷಯ - ನಾವು ಬ್ಯಾಗುಗಳನ್ನು ಹೊತ್ತುಕೊಂಡು ಓಡಾಡುವುದನ್ನು ತಪ್ಪಿಸಲು ನಿಮ್ಮಲ್ಲಿ ಬೇರೆ ಉಪಾಯಗಳಿದ್ದರೆ ದಯವಿಟ್ಟು ತಿಳಿಸಿ.

***

ಒಂದು ಸಾರಿ ನಾನು ಡಿ. ಆರ್. ನಾಗರಾಜ್‌ರವರ 'ಶಕ್ತಿ ಶಾರದೆಯ ಮೇಳ' ಓದುತ್ತಿದ್ದಾಗ ಅವರು ಬರೆದ ಯಾವುದೋ ಒಂದು ಪ್ರತಿಮೆ ನನಗೆ ಇಷ್ಟವಾಗಿ ನಾನು ಹೊರಗೆ ಕೇಳುವಂತೆ ಗಟ್ಟಿಯಾಗಿ, involuntary ಆಗಿ 'ಸೂ...ಮಗನೇ', ಅಥವಾ 'ಸೂ...ಮಗಂದು' ಎಂದುಕೊಂಡಿದ್ದೆ - ಅದೊಂದು ಭಾವ ಪರವಶತೆಯ ಸ್ಥಾಯಿ ಕ್ಷಣವಿರಬಹುದು, ಅಥವಾ ಪರಮಾವಧಿ ಇರಬಹುದು. ನನಗೆ ಅವಾಗಾವಾಗ ಹೀಗಾಗುತ್ತೆ, ಹೀಗನಿಸುತ್ತೆ - ಅಂತ ನಾನು ಒಮ್ಮೆ ನನ್ನ ಕೆಲವು ಸ್ನೇಹಿತರಲ್ಲಿ ಹೇಳಿಕೊಂಡೆ - ಅವರೆಲ್ಲರೂ ನನ್ನನ್ನು ಯಾವುದೋ ಕಾಡಿನಿಂದ ಬಂದವನಂತೆ ನೋಡಿದರು ಅಲ್ಲದೇ, ಅವರ ಜೀವಮಾನದಲ್ಲಿ ಎಲ್ಲೂ son of a bitch (SOB) ಅನ್ನೋ ಪ್ರಯೋಗವನ್ನೇ ಮಾಡಿಲ್ಲವೆಂದು ಆಶ್ಚರ್ಯವನ್ನೂ ಹುಟ್ಟಿಸಿದರು (ನೋಡಿ, ಇಲ್ಲಿ SOB ಎಂದು ಸಲೀಸಾಗಿ ಬರೆಯಬಹುದು, ಆದರೆ ಸೂ...ಮಗ ಅನ್ನುವುದಕ್ಕೆ ellipses ಬಳಕೆ ಬೇಕಾಗುತ್ತೆ - ಅಂದ್ರೆ ಈ ಎರಡು ಪದಗಳ ಬಳಕೆ, ವ್ಯಾಪ್ತಿಗಳಲ್ಲಿ ನಾವು ಅಂದು ಅರ್ಥಮಾಡಿಕೊಳ್ಳುವ ಹಾಗೆ ವ್ಯತ್ಯಾಸವಿದೆಯೇ?). ಲಂಕೇಶ್ ಎಲ್ಲೋ ಬರೆದಿದ್ದರು - ಅವರು ಮೈಸೂರು ಅನಂತ ಸ್ವಾಮಿಯವರ ಸುಗಮ ಸಂಗೀತ ಕಛೇರಿಯೊಂದರಲ್ಲಿ, ಶಿವರುದ್ರಪ್ಪನವರ 'ಎದೆ ತುಂಬಿ ಹಾಡಿದೆನು...' ಕೇಳಿದಾಗ, ಅವರಿಗೆ ಅದುವರೆಗೆ ಗೋಚರಿಸದ ಯಾವುದೋ ಒಂದು ಪ್ರತಿಮೆ, ಅರ್ಥ ಅಲ್ಲಿ ಹೊಳೆದಿತ್ತಂತೆ - ಹಾಗೆ ಆ ಕ್ಷಣ ತುಂಬಾ ವಿಶೇಷವಾದದ್ದು - it deserves a better phrase from the heart! - ಅಂತದ್ದನ್ನು ನಾನು ಆದಷ್ಟು ಅನುಭವಿಸಬೇಕು, ಅದೆಷ್ಟೇ 'ಸೂ...ಮಗ' ಎನ್ನುವ ಮಾತು ಹೊರಗೆ ಬಂದರೂ ಪರವಾಗಿಲ್ಲ, ಏನಂತೀರಿ?

ನಾನು ಹೀಗೆ ಬರೆದೆ ಅಂತ ನೀವು ಬೈದುಕೊಂಡ್ರೆ ನನಗೆ ಸಂತೋಷವಾಗುತ್ತೆ, ಏನೇನು ಬೈದುಕೊಂಡಿರೆಂದು ಮನ ಬಿಚ್ಚಿ ತಿಳಿಸದೇ ಹೋದರೆ ದುಃಖವಾಗುತ್ತೆ!

Friday, April 14, 2006

We make people like President Bush...

ವಾರ ನಮ್ಮ ಟೀಮಿನ ಮೀಟಿಂಗ್‌ನಲ್ಲಿ ನಡೆದ ಸಂಭಾಷಣೆಯೊಂದು ನನ್ನ ಕಣ್ಣು ತೆರೆಸಿತು: ನಾವೊಂದು ಐದಾರು ಜನ ಮೀಟಿಂಗ್ ಸೇರಿದ್ದೆವು, ನಮ್ಮ ಬಾಸು ಎಂದಿನಂತೆ ಮೀಟಿಂಗ್‌ನ್ನು ಶುರು ಮಾಡಿದಳಾದರೂ, ಮೀಟಿಂಗ್ ಮಧ್ಯೆ ನಡೆದ ಸಂಭಾಷಣೆಯೊಂದರ ತುಣುಕು ಇಲ್ಲಿದೆ...

ನಮ್ಮ ಬಾಸ್ ಒಬ್ಬ ಸೀನಿಯರ್ ಮೆಂಬರ್‌ನ್ನು ಕುರಿತು 'Could you go in to the database and get me some details on this issue...'
ಸೀನಿಯರ್ ಮೆಂಬರ್ ''...You have the access to the system, why don't you go check it out yourself?'
ಹೀಗೆ ಹೇಳಿದೊಡನೆಯೇ ಒಂದೆರಡು ಕ್ಷಣಗಳ ಕಾಲ ಮೌನ ತಾಂಡವವಾಡಿತು, ನಂತರ ಬಾಸ್ 'okay...' ಎಂದೊಡನೆ ಪರಿಸ್ಥಿತಿ ತಿಳಿಯಾಯಿತು.

ಇಲ್ಲಿ ಆ ಸೀನಿಯರ್ ಮೆಂಬರ್ ನಮ್ಮ ಟೀಮಿಗೆ ಹೊಸಬರು ಎನ್ನುವುದನ್ನೂ ಅಲ್ಲದೇ ನನ್ನ ಬಾಸ್‌ಗೆ ಎಲ್ಲವನ್ನೂ ಇಲ್ಲೀವರೆಗೆ silver platter ನಲ್ಲಿ ನಾವು ಬಡಿಸಿ-ಬಡಿಸಿ ರೂಢಿ ಮಾಡಿಸಿಬಿಟ್ಟಿದ್ದೆವು ಎನ್ನುವುದನ್ನೂ ನಿಮ್ಮ ಅನುಕೂಲಕ್ಕೆ ಹೇಳಿಬಿಡುತ್ತೇನೆ.

Organizational Behavior ಕ್ಲಾಸ್‌ನಲ್ಲಿ power difference ಬಗ್ಗೆ ಮಾತುಗಳು ಬರುತ್ತವೆ. ಭಾರತ, ಆಷ್ಟ್ರಿಯಾ, ಮೆಕ್ಸಿಕೋ ಮುಂತಾದ ದೇಶಗಳಲ್ಲಿ ಬಾಸ್ ಬಾಸಾಗಿ ಮೇಲಿರುವುದೂ, ಅಮೇರಿಕ, ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ಬಾಸ್ ಬಾಸಾಗಿಯೂ ಎಲ್ಲರ ಜೊತೆಯಲ್ಲಿರುವುದೂ ಸಹಜ. ಉದಾಹರಣೆಗೆ ನಮ್ಮ ದೊಡ್ಡ ಕಾರ್ಪೋರೇಷನ್ನಿನ CEO ಹಾಗೂ ನನ್ನಂಥ ಸಾಮಾನ್ಯ ಕೆಲಸಗಾರರೂ ಒಂದೇ mens room ಉಪಯೋಗಿಸಬಹುದು, ಆದರೆ ಭಾರತದಂತಹ ದೇಶಗಳಲ್ಲಿ ದೊಡ್ಡ ಮನುಷ್ಯರಿಗೆ ಅವರದ್ದೇ ಆದ ಸವಲತ್ತುಗಳಿರುತ್ತವೆ.

ಆದರೂ, ನಮ್ಮ ಕಂಪನಿಯಲ್ಲಿ ಒಬ್ಬ vice president ಅಥವಾ ಎಕ್ಸೆಕ್ಯುಟೀವ್ ಹೇಳಿದರೆಂದರೆ ಅವರ ಮಾತುಗಳಿಗೆ ತುಂಬಾ ಬೆಲೆ. ಹೀಗಾಗಿಯೇ ಮೇಲೆ ಹೋದವರೆಲ್ಲ ಕೊಬ್ಬುತ್ತಾ ಹೋಗುವುದು, ಅವರು ಕೆಳಗಿನವರಿಗಿಂತ ಅಪಾರ ಹಣಗಳಿಸುವುದು ನಿಜವಾದರೂ ಅವರ ಮಾತಿಗೆ ಕುರಿಯಂತೆ ತಲೆಯಾಡಿಸುವ ಮಂದಿ ಅವರ ಕೊಬ್ಬನ್ನು ಇನ್ನೂ ಹೆಚ್ಚಿಸುತ್ತಾರೆ. ಈಗ ಮೇಲೆ ತಿಳಿಸಿದ ನಮ್ಮ ಟೀಮಿನ ಉದಾಹರಣೆಯನ್ನೇ ತೆಗೆದುಕೊಳ್ಳಿ, ಆ ಸೀನಿಯರ್ ಮೆಂಬರ್ ಆ ಮಾತನ್ನು ಏಕೆ ಹೇಳಿದಳೆಂದು ನನಗೆ ಚೆನ್ನಾಗಿ ಗೊತ್ತು (ಸಾಮಾನ್ಯವಾಗಿ ಅವಳೂ ಸಹ ಮೇಲಿನವರ ಮಾತಿಗೆ ತಲೆ ಆಡಿಸುವವಳೇ, ಆದರೆ ಆದಿನ ಅವಳ ಮನಸ್ಸು ಇಲ್ಲಿ ಪ್ರಸ್ತುತ ಪಡಿಸದ ಹಲವು ಕಾರಣಗಳಿಂದ ಕ್ಷೋಭೆಗೊಂಡಿತ್ತು), ನಾವು ನಮ್ಮ ಬಾಸನ್ನು ಮೊದಲಿನಿಂದ ಇದೇ ರೀತಿ treat ಮಾಡುತ್ತಾ ಬಂದಿದ್ದರೆ ಅದು ಬೇರೆಯದಿತ್ತು, ದಿಢೀರನೆ ಈ ರೀತಿ ಉತ್ತರ ಸಿಕ್ಕಿದ್ದು ಒಂದು ದೊಡ್ಡ ಬದಲಾವಣೆ, ಇಂತಹ ಬದಲಾವಣೆಗಳನ್ನು ಎಲ್ಲರೂ ವಿರೋಧಿಸುತ್ತಾರೆ (resist ಎನ್ನುವ ಅರ್ಥದಲ್ಲಿ).

ಮೇಲಿನವರ ಮಾತಿಗೆ ಕೆಳಗಿನವರು ಕುಣಿಯುವ ಜಾಯಮಾನ power difference ಇದ್ದ, ಇಲ್ಲದ್ದ ಮಾತ್ರಕ್ಕೆ ಬದಲಾಗುವುದೇನೂ ಇಲ್ಲ, ಅಲ್ಲವೇ?

'ಎಲ್ಲರೂ ಒಂದೇ' (ಅದೂ ಭಾರತದಲ್ಲಿ) ಎನ್ನುವ ಸೋಷಿಯಲಿಷ್ಟ್‌ಗಳ ದಶಕಗಳ ಸತ್ಯವೆನ್ನುವ ಮರೀಚಿಕೆಗೆ ಜೈ!

***

ನೀವು ಈ ಹಿಂದೆ ಅಮೇರಿಕದ ಅಧ್ಯಕ್ಷ George Bush ಮಾತನ್ನು ಕೇಳಿದ್ದರೆ, ಆತ nuclear ಎನ್ನುವಲ್ಲಿ ನ್ಯೂಕ್ಯುಲರ್ ('nue cue lar') ಎನ್ನುವುದನ್ನು ಗಮನಿಸಿರಬಹುದು. ಅಮೇರಿಕದ ಅಧಕ್ಶನೆಂದರೆ ಒಂದು ಸಂಸ್ಥೆ ಇದ್ದ ಹಾಗೆ, ಆತನಿಗೆ ಮಾತುಗಳನ್ನು ಬರೆದು, ಹೇಳಿಕೊಡುವ ದೊಡ್ಡ ತಂಡವೇ ಇದೇ. ಅಂತಾದ್ದರಲ್ಲಿ, ಆ white house ನ ಸಿಬ್ಬಂದಿಗಳಲ್ಲಿ ಒಬ್ಬರೂ president Bush ಗೆ ಹೇಳುವುದಿಲ್ಲವೇಕೆ - 'If you can pronounce 'clear' (which he does), you can pronouce 'nu clear' 'ಎಂದು? Shame on them!

ಬುಷ್‌ನ ಇಂತಹ ಸಣ್ಣ ತಪ್ಪುಗಳನ್ನೇ ತಿದ್ದದ ಅವನ ಜೊತೆಯವರು, ಇನ್ನು ಅವನು ಮಾಡಿದ, ಮಾಡುತ್ತಿರುವ, ಮಾಡಬಹುದಾದ ದೊಡ್ಡ-ದೊಡ್ಡ ತಪ್ಪುಗಳನ್ನು ತಿದ್ದುತಾರೋ ಎನ್ನುವುದು ಯಕ್ಷ ಪ್ರಶ್ನೆ.

***

ಆಳುವವರು ಆಳುತ್ತಲೇ ಇರುತಾರೆ, ಅಳುವವರು ಅಳುತ್ತಲೇ ಇರುತ್ತಾರೆ! ಪ್ರಪಂಚದಲ್ಲಿ ಪ್ರತಿಯೊಬ್ಬರ ರೀತಿ-ನೀತಿ, ನಡತೆಗಳಿಗೆ ಒಂದಲ್ಲ ಒಂದು ರೀತಿಯ ಸಾಮಾಜಿಕ ಶಿಫಾರಸ್ಸು (social influence) ಇದ್ದೇ ಇರುತ್ತೆ. 'ಅಪ್ಪಾ-ಅಮ್ಮ ಕಲಿಸದಿದ್ದರೆ ಬುದ್ಧಿ, ಊರೇ ಕಲಿಸುವುದು' ಎನ್ನುವುದು ಜಾಣ್ಣುಡಿಯಾದರೂ ಕಲಿಕೆಯನ್ನು ಬದಲಾವಣೆಗೆ ಪ್ರತ್ಯುತ್ತರವಾಗಿ ಸ್ವೀಕರಿಸುತ್ತಾ ಬಂದಲ್ಲೆಲ್ಲ ವಿರೋಧದ ಛಾಯೆ ಇರುತ್ತದೆ, ಯಾವ ಕಲಿಕೆಯಲ್ಲಿ ಪ್ರೀತಿ ಒಡಂಬಡುವುದಿಲ್ಲವೋ ಅದು ಮನಸ್ಸಿನ ಸ್ಥರಗಳ ಆಳಕ್ಕೆ ಇಳಿಯಲಾರದು.

ನೀವು ಈ ಮಾತನ್ನು ಒಪ್ಪಬೇಕೆಂದೇನೂ ಇಲ್ಲ, ಒಪ್ಪದಿರುವುದು ಏಕೆ ಎಂದು ಗೊತ್ತಾದರೆ ನಾನೂ ಹೊಸತನ್ನೇನೋ ಕಲಿತಂತಾಗುತ್ತೆ!

Thursday, April 13, 2006

About Raj


ರಾಜ್ ಬಗ್ಗೆ ಬರೀದೇ ಇದ್ರೆ ಹ್ಯಾಗೆ!?

ನಿನ್ನೆ ರಾಜ್‌ಕುಮಾರ್ ತೀರಿಕೊಂಡ್ರೂ ಅಂಥ ಗೊತ್ತಾದ ತಕ್ಷಣ ನನಗೆ ಗೊತ್ತಿರೋ ಕನ್ನಡ ಅಂತರ್ಜಾಲ ತಾಣಗಳೆಲ್ಲ busy ಆಗಿ ಹೋದವು. (ಈ busy ಅನ್ನೋ ಪದಕ್ಕೊಂದು ಕನ್ನಡ ಪದ suggest ಮಾಡ್ತೀರಾ? ನನಗೆ ಗೊತ್ತಿರೋ ಹಾಗೆ - ಕಾರ್ಯ ನಿರತ, ಅತಿಯಾದ ಕೆಲಸ, ಮಿತಿ ಮೀರಿದ ಕೆಲಸ, ವಿಪರೀತ ಚಟುವಟಿಕೆ, ಇತ್ಯಾದಿಗಳನ್ನು ಬಳಸಿದಾಗ ಸಮಾಧಾನವೇ ಆಗೋದಿಲ್ಲ, ಒಂಥರಾ ಬಹಳ ನೀರಡಿಸಿ ದಾಹವಾದಾಗ ನೀರಿನ ಬದಲು ಕೋಕ್ ಕುಡಿದಂತೆ ದಾಹ ಭಂಗವಾಗುತ್ತಿದೆ!). ಸರಿ, ನಾನೂ ರಾಜ್‌ಕುಮಾರ್ ಅವರ ಬಗ್ಗೆ ಬರೆಯಲೇ ಬೇಕು ಎಂದು ಸಂಕಲ್ಪ ತೊಟ್ಟಿದ್ದೇನೆ, ಆದರೆ ಉಳಿದವರು ಬರೆದವರಿಗಿಂತ ಭಿನ್ನವಾಗಿ ಬರೆದರೆ ಮಾತ್ರ ನೀವು ಈ ಬರಹವನ್ನು ಮೆಚ್ಚೋದು ಅಂತ ಚೆನ್ನಾಗಿ ಗೊತ್ತು, ಈಗಾಗ್ಲೇ ನಿಮಗೆ ಗೊತ್ತಿರೋ ವಿಷ್ಯಾನ ಮತ್ತೊಮ್ಮೆ ಹೇಳಿ ಏನು ಪ್ರಯೋಜನ, ನೀವೇ ಹೇಳಿ.

ನಾನು ರಾಜ್‌ಕುಮಾರರ ಕಟ್ಟಾ ಅಭಿಮಾನಿ, ಒಬ್ಬ ನಟನಾಗಿ ಅವರನ್ನು ನಾನು ಬಹಳ ಎತ್ತರದಲ್ಲಿಡುತ್ತೇನೆ, ಒಂದೇ ಮಾತಿನಲ್ಲಿ ಹೇಳೋದಾದರೆ ಅವರು ಕನ್ನಡ ಚಿತ್ರರಂಗ ಕಂಡ ಅತ್ಯುನ್ನತ ನಟ. ನಮ್ಮೂರಿನ ಟೂರಿಂಗ್ ಟಾಕೀಸ್‌ಗಳಲ್ಲಿ ಪ್ರತೀ ಸಿನಿಮಾಕ್ಕೆ ಒಂದೊಂದು ರೂಪಾಯಿಕೊಟ್ಟು, ೧೯೮೦ ರಿಂದ ೧೯೯೦ ರವಗೆ ಎಲ್ಲ ಸಿನಿಮಾಗಳನ್ನೂ ನೋಡಿದ್ದೇನೆ, ನಂತರ ಬಂದ ಸಿನಿಮಾಗಳನ್ನೂ ತಪ್ಪಿಸಿಲ್ಲ.

ನಾನೂ ನಮ್ಮ ಅಣ್ಣ ಇಬ್ಬರೂ ರಾಜ್‌ಕುಮಾರ್ ಅಭಿಮಾನಿಗಳು, ಆದರೆ ನಮ್ಮ ತಾಯಿಗೆ 'ಅವನನ್ನು ಕಂಡರೆ ಅಷ್ಟಕಷ್ಟೇ'! ಎಷ್ಟೋ ಸಾರಿ ರೇಡಿಯೋದಲ್ಲಿ ರಾಜ್‌ಕುಮಾರ್ ಹಾಡು ಕೇಳಿದಾಕ್ಷಣ 'ಇವನೊಬ್ಬ ದೊಡ್ಡದಾಗಿ ಬಾಯಿಬಿಟ್ಟ, ನೋಡು' ಅಂತ ಬೇಕಾದಷ್ಟು ಸಲ ರಾಜ್‌ಕುಮಾರ್‌ನ್ನು ಹೀಯಾಳಿಸಿದ್ದಿದೆ. ನಮ್ಮ ತಾಯಿಗೆ ಸುಮಾರು ಈಗ ಎಪ್ಪತ್ತರ ಹತ್ತಿರ ವಯಸ್ಸು, ಆಗಿನ ಕಾಲದಲ್ಲಿ ಪಿ.ಬಿ. ಶ್ರೀನಿವಾಸ್‌ರವರ ಕಂಠಕ್ಕೆ ಮಾರು ಹೋದ ಅನೇಕರಿಗೆ ರಾಜ್‌ಕುಮಾರ್ ಸಂಗೀತ ರುಚಿಸಿರಲಿಕ್ಕಿಲ್ಲ. ಎಮ್ಮೇ ಹಾಡಿನಿಂದ ಮುಂದೆ ಬಂದ ರಾಜ್ ಸಂಗೀತದಲ್ಲಿ ಮಹಾನ್ ಸಾಧನೆಯನ್ನೇ ಮಾಡಿದರು, ನೀವು ಎಂಭತ್ತರ ದಶಕದ ಅವರ ಹಾಡುಗಳನ್ನು ಅವರ ನಂತರದ ಹಾಡುಗಳಿಗೆ ಹೋಲಿಸಿದರೆ ನಿಮಗೇ ಗೊತ್ತಾಗುತ್ತದೆ ಅವರ ಕಂಠ ಸಿರಿಯಲ್ಲಿನ ಬದಲಾವಣೆ. ನಮ್ಮ ಅಮ್ಮನ ನಿಲುವು ಇಂದಿಗೂ ಬಹಳಷ್ಟು ಬದಲಾದಂತೇನಿಲ್ಲ, ಆದರೂ ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಇಂದಿಗೂ ಅವರ ಮೆಚ್ಚಿನ ಚಿತ್ರಗಳು. ಸಿನಿಮಾ ನಿರ್ದೇಶಕ-ನಿರ್ಮಾಪಕರ ಮಾತಿನಂತೆ ೫೫-೬೦ ವರ್ಷದ ರಾಜ್ 'ಹಾವಿನ ಹೆಡೆ' ಚಿತ್ರದಲ್ಲಿ ೧೮ ವರ್ಷದ ಸುಲಕ್ಷಣಳ ಜೊತೆ My name is Raj, what is your name please? ಎಂದು ಹಾಡಿದರೆ ನನ್ನ ಅಮ್ಮನಂಥವರಿಗೆ ಹೇಗೆ ತಾನೆ ರುಚಿಸೀತು ನೀವೇ ಹೇಳಿ. (ಇನ್ನು ರಾಜ್ ಅವರ ಕುಣಿತಕ್ಕೂ ಬೇರೆ ಬೇರೆ ಕಾಮೆಂಟ್‌ಗಳನ್ನು ಹೇಳಬಹುದು, ಅನಂತ್ ನಾಗ್ ಹಾಡಿನಲ್ಲಿ ಅವರು ಒಂದು ಕಡೆಯಿಂದ ಮತ್ತೊಂದು ಕಡೆ ಓಡೋದೇ ನೃತ್ಯವಾದರೆ, ರಾಜ್ ಹಾಡುಗಳಲ್ಲಿ ಕುಣಿದ ಹಾಗೆ ಮಾಡುತ್ತಾರೆ ಅಂತ).

ರಾಜ್ ಇಮೇಜ್‌ಗೆ ಸಿಕ್ಕಿ ಹಾಕ್ಕೊಂಡಿದ್ದು ಇತ್ತೀಚೆಗೆ ಅಂಥಾ ಕಾಣ್ಸುತ್ತೆ - ಮೊದಲೆಲ್ಲ ಖಳನಾಯಕನ ಕೈಯಲ್ಲಿ ಒದೆ ತಿನ್ನೋರು, ಆದ್ರೆ ಇತ್ತೀಚೆಗೆ ಯಾರೋ ಅವರನ್ನು (ಸಿನಿಮಾದಲ್ಲಿ) ತುಳಿದರು ಅನ್ನೋದು ದೊಡ್ಡ ವಿಷಯವಾಗಿತ್ತು. ನಾನು ೧೯೭೯ ರಲ್ಲಿ ಬೆಂಗಳೂರಿನ ಉಮಾ ಟಾಕೀಸಿನಲ್ಲಿ 'ನಾನೊಬ್ಬ ಕಳ್ಳ' ಚಿತ್ತ್ರವನ್ನು ನೋಡಿದ್ದೆ, ಅಲ್ಲಿನ ಅವರ ಕಳ್ಳನ ಇಮೇಜ್ ಅವರಿಗೆ ತುಂಬಾ ಕಷ್ಟ ಕೊಟ್ಟಿತ್ತು, ಆದರೂ ಆ ಪಾತ್ರಕ್ಕೆ ಸಮರ್ಥನೆ ನೀಡಿದಂತವರು ರಾಜ್‌. ಆದರೂ ರಾಜ್‌ನ್ನು ಬರೀ (ಅಥವಾ ಹೆಚ್ಚಾಗಿ) ನಾಯಕನ ಪಾತ್ರದಲ್ಲಿ ನಿರೀಕ್ಷಿಸಿದ್ದು ಅವರ ಅಭಿಮಾನಿ ದೇವರುಗಳ ತಪ್ಪು - ಒಬ್ಬ ನಟ ಅರವತ್ತು ವಸಂತಗಳನ್ನು ದಾಟಿದ ಮೇಲೂ ಪೋಷಕನ ಪಾತ್ರಗಳಲ್ಲಿ ಬರುವುದನ್ನು ನಾವು ಏಕೆ ಒಪ್ಪುವುದಿಲ್ಲ - ಪೋಷಕನ ಪಾತ್ರವೆಂದರೆ ಪೋಷಕ-centric ಪಾತ್ರವಲ್ಲ, ನಿಜವಾದ ಅರ್ಥದಲ್ಲಿ ತೆರೆಯ ಮೇಲೆ ಅಲ್ಪಕಾಲ ಬಂದು ಹೋಗುವಂತದ್ದು. ಅವರು ತಮ್ಮ ಕಂಠವನ್ನು ಇತರರಿಗೆ ಬಳುವಳಿಯಾಗಿ ಕೊಟ್ಟಿಲ್ಲ, ಹಿನ್ನೆಲೆ ಹಾಡುಗಳಲ್ಲಿ ಅಗೋಚರವಾಗಿ ಹಾಡಿದ್ದನ್ನು ಬಿಟ್ಟರೆ.

ನನಗೆ ಅತ್ಯಂತ ಇಷ್ಟವಾದ ಸನ್ನಿವೇಶಗಳಲ್ಲಿ ಇದೂ ಒಂದು:
ಯಾವುದೋ ಚಿತ್ರದಲ್ಲಿ (ಹೆಸರು ಮರೆತು ಹೋಗಿದೆ), ವಜ್ರಮುನಿ ಮಗುವನ್ನೊಂದನ್ನು ಅಪಹರಿಸಿರುತ್ತಾನೆ...
ರಾಜ್ ಕೇಳುತ್ತಾರೆ 'ಏನೋ ಮಾಡ್ದೇ ಮಗೂನಾ'
ವಜ್ರಮುನಿ 'ಕೊಂದು ಬಿಟ್ಟೆ!'
ರಾಜ್ 'ಆ... ಕೊಂ...ದು...ಬಿಟ್ಟೇ...' ಎಂದು ಹಲ್ಲು ಕಚ್ಚಿ ಹೇಳೋ ದೃಶ್ಯ ತುಂಬಾ ಮಾರ್ಮಿಕವಾಗಿ ಬಂದಿದೆ, ಎಂದೆಂದೂ ನೆನಪಿನಲ್ಲಿರುವಂತದ್ದು.

ರಾಜ್‌ಗೆ ಮುಖ್ಯವಾಗಿ ಅಸ್ಥೆ ಇತ್ತು, ಅವರ ಶಿಸ್ತು, ಅವರು ದೇಹವನ್ನು ಕಾಪಾಡಿಕೊಂಡ ಬಗೆ, ಮನಸ್ಸನ್ನು ನೋಡಿಕೊಂಡ ರೀತಿ ಅವರನ್ನೆಂದೂ ಕೈ ಬಿಡಲಿಲ್ಲ, ಅವರು ತೊಟ್ಟ ಪಾತ್ರಗಳಲ್ಲಿ ಅವರನ್ನು ವಿಶೇಷವಾಗಿ ನಿಲ್ಲಿಸುತ್ತಿದ್ದವು.

ರಾಜ್ ಒಂದು ಸಂಸ್ಥೆಯಂತೆ - ಅವರ ಉನ್ನತಿಯಲ್ಲಿ ಅವರ ಕುಟುಂಬದವರೂ, ಉದಯಶಂಕರ್‌ರಂಥಹ ಪ್ರತಿಭಾನ್ವಿತ ಬರಹಗಾರರೂ, ಆಗಿನ ಕಾಲದ ಕಥೆಗಳೂ, ಪಿ.ಬಿ.ಶ್ರೀನಿವಾಸರ ಕಂಠವೂ, ಕನ್ನಡಿಗರ ಒಲವೂ ಸಮಭಾಗಿಗಳು. ನಾನು ಈ ವರೆಗೆ ಇಬ್ಬರು ನಟರು ತೀರಿಕೊಂಡಾಗ ಕಣ್ಣೀರು ಹಾಕಿದ್ದೇನೆ, ಶಂಕರ್ ನಾಗ್ ಸತ್ತಾಗ ನನಗೆ ಅಪಾರ ದುಃಖವಾಗಿತ್ತು, ಇಂದೂ ಹಾಗೇ ಆಗಿದೆ.

ಕೊನೇ ಮಾತು - ನಮ್ಮ ಕನ್ನಡದಲ್ಲಿ ಅತ್ಯಂತ ಪ್ರೀತಿ ಪಾತ್ರರನ್ನೂ, ದೇವರನ್ನೂ, ದೊಡ್ಡ ಮನುಷ್ಯರನ್ನೂ ಏಕ ವಚನದಲ್ಲಿ ಕರೆಯುವ ಪರಿಪಾಠವಿದೆ, ನಾನು ರಾಜ್‌ಕುಮಾರ್ ನ್ನು ಏಕವಚನದಲ್ಲಿ ಕರೆದಿರೋದು ದಾರ್ಷ್ಟ್ಯ ಅಲ್ಲ, ಅವರ ಬಗ್ಗೆ ಇರೋ ಪ್ರೀತಿ ಅಷ್ಟೇ!

Monday, April 10, 2006

ಮೋಸ ಮಾಡೋದೇ ಬದುಕು ಅನ್ನೋದಾದ್ರೆ...

ಆಲ್ಟನ್ ಬ್ರೌನ್‌ನ ಗುಡ್ ಈಟ್ಸ್ (Food Network, Alton Brown, Good Eats) ಕಾರ್ಯಕ್ರಮದಲ್ಲಿ ಪೆಪ್ಪರ್ (ಕರಿ ಮೆಣಸು, ಕಾಳು ಮೆಣಸು)ನ ವಿಷಯ ಬಂದಾಗೆಲ್ಲ ಭಾರತದ ಪ್ರಸ್ತಾಪ ಸಹಜವಾಗಿ ಆಗುತ್ತದೆ. ಈ ಹಿಂದೆ ಯಾವುದೋ ಒಂದು ಎಪಿಸೋಡ್‌ನಲ್ಲಿ ಆಲ್ಟನ್ ಬ್ರೌನ್ ಈ ಕಾಳು ಮೆಣಸಿನ ಮಹಿಮೆಯನ್ನು ಕೊಂಡಾಡುತ್ತಾ ಭಾರತವನ್ನು ಸ್ಮರಿಸುವುದರೊಂದಿಗೆ ಕಾಳು ಮೆಣಸಿನ ನಡುವೆ ಪಪ್ಪಾಯಿ ಹಣ್ಣಿನ ಬೀಜವನ್ನು ಒಣಗಿಸಿ ಮಿಶ್ರಣ ಮಾಡಿ ಮಾರುತ್ತಾರೆಂತಲೂ, ಜಾಗರೂಕತೆಯಿಂದ ಖರೀದಿಸಿರೆಂತಲೂ ಆತ ವೀಕ್ಷಕರಿಗೆ ತಿಳಿಸಿ ಹೇಳಿದ್ದ. ಕಲಬೆರಕೆಯ ಬಗ್ಗೆ ನನಗೇನೂ ಹೊಸತಾಗಿ ತಿಳಿಯಬೇಕಾಗಿರಲಿಲ್ಲ ಆದರೆ ಭಾರತದ ಪದಾರ್ಥಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಪರೀಕ್ಷೆಗೆ ಒಳಪಡುತ್ತವೆ, ಭಾರತದಲ್ಲಿ ಬೆಳೆದ, ತಯಾರಿಸಿದ ವಸ್ತುಗಳ ಬಗ್ಗೆ ಉಳಿದವರಿಗೆ ಏನೇನು ಗೊತ್ತು, ಯಾವ್ಯಾವ ಮಾಹಿತಿ ಎಂದು ತಿಳಿಯಲು ಗುಡ್ ಈಟ್ಸ್ ಕಾರ್ಯಕ್ರಮ ಒಂದು ಉದಾಹರಣೆಯಷ್ಟೇ. ಫುಡ್ ನೆಟ್‌ವರ್ಕ್ಸ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಗುಡ್ ಈಟ್ಸ್ ನನಗೆ ಅಚ್ಚು ಮೆಚ್ಚು, ಅದರಲ್ಲಿ ಆಹಾರವನ್ನು ವಿಶ್ಲೇಷಿಸುವ ಬಗೆ, ನವಿರಾಗಿ ಹಾಸ್ಯವನ್ನೂ ಸೇರಿಸಿ ಕಾರ್ಯಕ್ರಮವನ್ನು ನಿರೂಪಿಸುವ ಬಗೆ ತುಂಬಾ ವಿಶೇಷವಾಗಿರುತ್ತೆ. ಆಲ್ಟನ್ ಬ್ರೌನ್, ಯಾವುದೊಂದು ಆಹಾರ ಪದಾರ್ಥವನ್ನಾದರೂ ತೆಗೆದುಕೊಂಡು ಅದರ ಮೂಲವನ್ನು ಜಾಡಿಸಿಬಿಡಬಲ್ಲ, ಅದರ ಸೂತ್ರಗಳನ್ನು ಕಂಡು ಹಿಡಿಯಬಲ್ಲ.

ಇಂದಿನ ವಿಷಯ ಕಲಬೆರಕೆಗೆ ಬರುತ್ತೇನೆ: ಇದರಲ್ಲಿ ತೊಡಗಿರುವ ವ್ಯಾಪಾರಿಗಳೂ, ವರ್ತಕರು, ಮಧ್ಯವರ್ತಿಗಳು ಅಂದುಕೊಳ್ಳುವುದೇನೆಂದರೆ ಅವರು ಮಾಡಿದ್ದು (ಮೋಸ) ಗ್ರಾಹಕರಿಗೆ ಗೊತ್ತಾಗುವುದಿಲ್ಲವೆಂತಲೂ, ಗೊತ್ತಾದರೂ ಗ್ರಾಹಕರು ಏನನ್ನೂ ಮಾಡುವುದಿಲ್ಲವೆಂತಲೂ, ಹಾಗೇನಾದರೂ ಮಾಡಿದರೆ ಅವರಿಗೆ ಅವರದೇ ಅಭಯ ಹಸ್ತ ಇದ್ದು ಅವರನ್ನು 'ರಕ್ಷಿಸು'ತ್ತದೆ ಎಂಬುದಾಗಿ. ವರ್ತಕರು ಮಾಡಿರುವ ಮೋಸ ಗ್ರಾಹಕರಿಗೆ ಗೊತ್ತಾಗೇ ಆಗುತ್ತದೆ, ಆದರೆ ನಮ್ಮಲ್ಲಿನ ವ್ಯವಸ್ಥೆಯಲ್ಲಿ ಅವರ ವಿರುದ್ಧ ತಿರುಗಿ ಬೀಳದಂತೆ ತಡೆಯುವ, ತಿರುಗಿ ಬಿದ್ದರೂ ಅದರಿಂದ ವರ್ತಕರಿಗೆ ಯಾವ ನಷ್ಟವೂ ಆಗದಂತೆ ಕಾಯುವ ವ್ಯವಸ್ಥೆಯೂ ಇದೆ. ಸರಿ, ಜನ ಸಾಮಾನ್ಯರು ದಿನ ನಿತ್ಯ ಬಳಸುವ ವಸ್ತುಗಳಿಗೆ ವರ್ತಕರು ಕೇಳಿದಷ್ಟು ಹಣವನ್ನು ಕೊಟ್ಟು ತಂದಾಗಲೂ ಮೊದಲೇ ಗುಣಮಟ್ಟ ಕಳಪೆಯದಾಗಿರುವುದೂ ಅಲ್ಲದೇ ಇನ್ನು ತಂದ ವಸ್ತುವಿನಲ್ಲಿ ಕಲಬೆರೆಕೆಯ ರೂಪದಲ್ಲೂ ಮೋಸವೂ ಆದರೆ ಗ್ರಾಹಕರ ಗತಿ ಏನು?

ಶಿವಮೊಗ್ಗದ ಮಾರ್ಕೆಟ್‌ನಲ್ಲಿ ಕೆಲವು ವರ್ಷಗಳ ಹಿಂದೆ ಸೇಬು ಹಣ್ಣನ್ನು ಖರೀದಿಸಲು ನಾನು ನನ್ನ ಅಕ್ಕನ ಜೊತೆ ಹೋಗಿದ್ದೆ. ಎಂದಿನಂತೆ ಒಂದೆರಡು ಕಡೆ ನೋಡಿ, ಆಮೇಲೆ ಚೌಕಾಸಿ ಮಾಡಿ, ಇದ್ದುದರಲ್ಲಿಯೇ ಒಳ್ಳೆಯ ಹಣ್ಣುಗಳನ್ನು ಕೊಡಲು ಹೇಳಿದೆವು, ಆದರೆ ಅಂಗಡಿಯವನು ಐದು ಹಣ್ಣುಗಳ ಜೊತೆ ಆರನೆಯ ಹಣ್ಣನ್ನು ಸ್ವಲ್ಪ ಹೆಚ್ಚು ಮಾಗಿರುವುದೋ ಅಥವಾ ಹೊಡೆತ ಬಿದ್ದಿರುವುದನ್ನೋ ಕೊಟ್ಟು ಸಾಗ ಹಾಕಲು ನೋಡಿದ. ಆದರೆ, ನಾನು ಅವನ ಎದುರಿನಲ್ಲೇ ಪ್ಯಾಕೇಟ್ ತೆರೆದು, ಅಷ್ಟೊಂದು ಚೆನ್ನಾಗಿಲ್ಲದ ಹಣ್ಣನ್ನು ವಾಪಾಸು ಕೊಟ್ಟು, ಮತ್ತೆ ಅದರ ಬದಲಿಗೆ ಒಳ್ಳೆಯ ಹಣ್ಣನ್ನು ಪಡೆದರೂ ಮನೆಗೆ ಬಂದು ಪ್ಯಾಕೇಟ್ ತೆರೆದು ನೋಡಿದಾಗ ಅದರಲ್ಲಿ ಒಂದು ಹಣ್ಣು ಸುಮಾರಿನದೇ ಇತ್ತು. ಅಂಗಡಿಯವನು ನಮ್ಮನ್ನು ಬೇಸ್ತು ಬೀಳಿಸಿ ಒಂದು ಸುಮಾರಾದ ಹಣ್ಣನ್ನು ದಾಟಿಸಿದ್ದಕ್ಕೆ ಖುಷಿ ಪಡಬಹುದು, ತನಗೆ ತಾನು ಶಭಾಸ್‌ಗಿರಿ ಕೊಟ್ಟುಕೊಳ್ಳಬಹುದು, ಆದರೆ ಮೋಸ ಹೋದವರು ನಾವು ಎನ್ನುವುದು ಸಾಬೀತಾಗಿ ಹೋಗಿತ್ತು. ನಮ್ಮ ಬಳಿ ಹಲವಾರು ಪರ್ಯಾಯಗಳಿದ್ದವು: ಆ ಹಣ್ಣುಗಳನ್ನು ನಾವು ಹಾಗೆಯೇ ಮರುದಿನ ವಾಪಾಸ್ಸು ಕೊಟ್ಟು ಬರಬಹುದಿತ್ತು, ಅಥವಾ ಅವನ ಬಗ್ಗೆ ಅಲ್ಲಿ ಯಾರಿಗಾದರೂ ದೂರು ಸಲ್ಲಿಸಬಹುದಿತ್ತು, ಅಥವಾ ನಮ್ಮ ಕಡೆಯಿಂದ ನಾಲ್ಕು ಜನ ಹೋಗಿ ದಬಾಯಿಸಬಹುದಿತ್ತು. ಆದರೆ ನಿಮಗೆಲ್ಲ ಗೊತ್ತಿರುವಂತೆ, ಆ ರೀತಿ ಏನೂ ಆಗಲಿಲ್ಲ. ಅಂಗಡಿಯವನು ಒಂದು ಸುಮಾರಾದ ಹಣ್ಣನ್ನು ಒಳ್ಳೆಯ ಹಣ್ಣಿನ ಬೆಲೆಗೆ ಮಾರಿ ಲಾಭ ಗಳಿಸಿದ, ನಾವು ನಮ್ಮ ದೇಶದಲ್ಲೇ ಬೇಸ್ತು ಬಿದ್ದುದಕ್ಕೆ ಕೈ-ಕೈ ಹಿಸುಕಿಕೊಂಡೆವು. ಇದು ಬರೀ ಸೇಬು ಹಣ್ಣಿನ ಕಥೆಯಲ್ಲ, ಈ ರೀತಿ ಪ್ರತಿಯೊಂದರಲ್ಲೂ ಆಗುತ್ತದೆ: ಬಂಗಾರದ ವ್ಯವಹಾರವಿರಬಹುದು, ತರಕಾರಿ ವ್ಯವಹಾರವಿರಬಹುದು, ಮನೆ ಕಟ್ಟಿಸುವ ವಿಷಯವಿರಬಹುದು, ಮದುವೆ ಮಾತಾಗಿರಬಹುದು, ಎಲ್ಲದರಲ್ಲೂ ನಿಮ್ಮ ತರ್ಕವನ್ನು ಪ್ರಶ್ನಿಸುವ, ನಿಮ್ಮ ಬುದ್ಧಿಮತ್ತೆಯನ್ನು ಅಳೆಯುವ ಅಥವಾ ನಿಮ್ಮ ಶಕ್ತಿ ಪ್ರದರ್ಶನದ ಅವಕಾಶಗಳು ಸಿಕ್ಕೇ ಸಿಗುತ್ತವೆ, ಎದುರಾಗೇ ತೀರುತ್ತವೆ.

ಡಿಸ್ಕವರಿ ಚಾನಲ್‌ನಲ್ಲಿ ತೋರಿಸೋ ಜರೆಮಿ ಪಿವನ್‌ನ ಭಾರತದ ಪ್ರವಾಸ ಕಥನವಿರಬಹುದು (Jeremy Piven, Joureny of a Lifetime, Disovery Channel) ಅಥವಾ ಆಲ್ಟನ್ ಬ್ರೌನ್‌ನ ಸಂಶೋಧನೆಯ ತಿರುಳಿರಬಹುದು, ಇವರೆಲ್ಲರ ಕಣ್ಣಿನಲ್ಲಿ ಕಳಪೆಯನ್ನು ನೋಡಿದಾಗ, ನಮ್ಮ ಎದೆ ಧಸಕ್ ಎನ್ನುತ್ತದೆ. ಆದೇ ನಾವೇ ಇಂತಹ ವರ್ತಕರ ವಂಚನೆಗಳಿಗೆ ಏಮಾರಿದಾಗ ಅಷ್ಟು ನೋವೆನಿಸುವುದಿಲ್ಲ, ಅದು 'ನಾರ್ಮಲ್' ಬದುಕಿನ ಒಂದು ಅಂಗವಾಗಿ ಹೋಗುತ್ತದೆ!

ನನ್ನ ಪ್ರಕಾರ ಮೋಸಕ್ಕೆ ಒಂದೇ ಮದ್ದು, ತಕ್ಕ ಶಾಸ್ತಿ, ಅಥವಾ ಶಿಕ್ಷೆ. ನನ್ನ ಕಣ್ಣಿಗೆ ಕಾಣುವುದು ಈ ಎರಡೇ ಆಪ್ಷನ್‌ಗಳು:
೧) ಮೋಸ ಮಾಡುವ ವರ್ತಕರನ್ನು ಗ್ರಾಹಕರ ನ್ಯಾಯಾಲಯಕ್ಕೆ ಎಳೆದೊಯ್ಯುವುದು, ವ್ಯಾಪಾರೀ ನಿಯಮದ ಪ್ರತಿಯೊಂದು ಉಲ್ಲಂಘನೆಗೂ ಇಂತಿಷ್ಟು (ಹೆಚ್ಚಿನ) ದಂಡ ವಿಧಿಸಿ, ಮೂರು ಬಾರಿ ಅದೇ ನಡತೆ ಪುನರಾವರ್ತನೆಯಾದೊಡನೆ, ಅಪೀಲು ರಹಿತವಾಗಿ ಅವರವರ ಲೈಸನ್ಸ್ ಕ್ಯಾನ್ಸಲ್ ಮಾಡುವುದು. (ಈ ನ್ಯಾಯಾಲಯದಲ್ಲಿ ಒಂದು ವಾರದ ಒಳಗಡೆ ಯಾವುದೇ ಕೇಸನ್ನು ತೀರ್ಮಾನಿಸುವಂತಾಗಬೇಕು).

ಇದು ಬೇಡವೆಂದರೆ
೨) ದಂಡಂ ದಶಗುಣಂ - ಅನ್ಯಾಯಕೊಳಪಟ್ಟ ವ್ಯಕ್ತಿ (ಶಕ್ತಿಶಾಲಿಯಾಗಿದ್ದಲ್ಲಿ ಅಥವಾ ಇತರರ ನೆರವು ಪಡೆದು) ವರ್ತಕನ ಮೇಲೆ ತಿರುಗಿ ಬಿದ್ದು, ಅವನ ಅಂಗಡಿಗೇ ಬೆಂಕಿ ಇಟ್ಟರೆ ಅದನ್ನು ಕಾನೂನು ಪ್ರಕಾರ ಮನ್ನಿಸುವುದು! ಕಲಬೆರಕೆಯ ಹೆಸರಿನಲ್ಲಿ ಸಮಾಜಕ್ಕೆ, ಮುದ್ದು ಮಕ್ಕಳ ಆರೋಗ್ಯಕ್ಕೆ, ಪರಿಸರಕ್ಕೆ, ಎಲ್ಲರಿಗೂ ಹೊರೆಯಾಗುವಂತಿರುವ ಶತಮಾನಗಳ ದೌರ್ಜನ್ಯವನ್ನು ಗ್ರಾಹಕ ಎಷ್ಟೂ ಅಂತ ಸಹಿಸಿಕೊಳ್ಳೋದು ನೀವೇ ಹೇಳಿ.

***

ನನಗೆ ಗೊತ್ತು, ನಾನು ಆಪ್ಷನ್ ೧ ರಲ್ಲಿ ನಂಬಿಕೆಯುಳ್ಳವನು ಎಂದು, ಆದರೂ ಮೋಸ ಮಾಡುವವರ ಪ್ರವೃತ್ತಿಯನ್ನು ನೋಡಿ ಹೀಗೆ ಹೇಳಬೇಕಾಯಿತು. ನಿಮಗೆಂದಾದರೂ ಈ ರೀತಿ ಮೋಸ ಆಗಿದ್ದಿದೆಯೇ? ಅಥವಾ ನಿಮ್ಮಲ್ಲಿ ಬೇರೆ ಯಾವುದಾದರೂ ಆಪ್ಷನ್‌ಗಳಿವೆಯೇ?

Sunday, April 09, 2006

Indians' quality conept

ಭಾರತೀಯರ ಕ್ವಾಲಿಟಿ ಕಾನ್ಸೆಪ್ಟ್

ಇವತ್ತು ಭಾರತೀಯ ಅಂಗಡಿಗಳಿಗೆ ಹೋಗಿದ್ದೆ, ಅದೇ ಪ್ರತೀವಾರಕ್ಕೊಮ್ಮೆ ತರಕಾರಿ ಹಾಗೂ ಇತರ ಸಾಮಾನುಗಳನ್ನು ತರೋಕೆ ಹೋದ ಹಾಗೆ. ಅಲ್ಲಿ ವಿಡಿಯೋ ಅಂಗಡಿಯೊಂದರ ಮುಂದೆ ದೊಡ್ಡದಾಗಿ ನಿಲ್ಲಿಸಿದ ಪೋಸ್ಟರ್ ಒಂದು ಕಂಡಿತು, ಅದು ಸೈಫ್ ಆಲಿ ಖಾನ್, ಅಕ್ಷಯ್ ಕುಮಾರ್, ಸುಸ್ಮಿತಾ ಸೇನ್ ಮುಂತಾದವರು ಅಮೇರಿಕದಲ್ಲಿ ಈ ತಿಂಗಳಿನಲ್ಲಿ ನಡೆಸಿಕೊಡುವ ಕಾರ್ಯಕ್ರಮದ ಬಗ್ಗೆ. ಈ ಪೋಸ್ಟರ್ ಸುಮಾರು ಆರು ಅಡಿ ಎತ್ತರ, ಮೂರ್‍ನಾಲ್ಕು ಅಡಿ ಅಗಲವಿದ್ದಿರಬಹುದು. ನಾನು ಸ್ವಲ್ಪ ಹೊತ್ತು ಅಲ್ಲೇ ಕಾರು ನಿಲ್ಲಿಸಿದ್ದೆನಾದ್ದರಿಂದ ಈ ಪೋಸ್ಟರನ್ನು ಗಮನವಿಟ್ಟು ನೋಡಲು ಅನುಕೂಲವಾಯಿತು.

ಈ ಪೋಸ್ಟರ್ ಭಾರತದಲ್ಲೇ ಮುದ್ರಣವಾದದ್ದು ಎನ್ನುವುದಕ್ಕೆ ಯಾವ ಸಂಶಯವೂ ಬರಲಿಲ್ಲ, ನೋಡಿದ ಕೂಡಲೇ ತಟ್ಟನೆ ಹೇಳಿಬಿಡಬಹುದಾಗಿತ್ತು - ಆ ಪೋಸ್ಟರ್‌ನ ಮೇಲೆ ಮುದ್ರಿಸಿರುವ ವಿಷಯಗಳಿಂದಲ್ಲ, ಅದರ ವಿಷಯವನ್ನು ಹೇಗೆ ಮುದ್ರಿಸಿದ್ದಾರೆ ಎಂಬುದಾಗಿ. ಹಲವಾರು ತಪ್ಪುಗಳಿದ್ದವು: ಇಲ್ಲಿ ಪ್ರದರ್ಶನ ನಡೆಯುವ ಊರಿನ ಹೆಸರು, ಫೋನ್ ನಂಬರ್ ಫಾರ್ಮ್ಯಾಟ್, ಕಾಮ (ಅರ್ಧ ವಿರಾಮ), ಪೂರ್ಣ ವಿರಾಮಗಳ ಅನಗತ್ಯ ಬಳಕೆ, ಸ್ಪೇಸಿಂಗ್‌ನಲ್ಲಿ ಕನ್‌ಸಿಸ್ಟೆನ್ಸಿ ಇಲ್ಲದಿರುವುದು, ಫಾಂಟ್‌ಗಳ ಬಳಕೆ ಸಮವಿಲ್ಲದಿದ್ದುದು, ಇತ್ಯಾದಿ, ಇತ್ಯಾದಿ. ಒಟ್ಟಿನಲ್ಲಿ ಪೋಸ್ಟರ್‌ನ ಗುಣಮಟ್ಟ ನೂರರಲ್ಲಿ ಕೇವಲ ಇಪ್ಪತ್ತೇ ಎನ್ನುವಷ್ಟರ ಮಟ್ಟಿಗೆ ಇತ್ತು.

ನಾನು ಭಾರತೀಯರ ಉತ್ಕೃಷ್ಟತೆಯ ಪರಿಕಲ್ಪನೆಯ (quality conept) ಬಗ್ಗೆ ಬಹಳಷ್ಟು ಗಹನವಾಗಿ ಆಲೋಚಿಸಿದ್ದೇನೆ. ನಮ್ಮಲ್ಲಿ ಉತ್ತಮ ವಸ್ತುವಿನ ಪರಿಕಲ್ಪನೆಯೇ ಇಲ್ಲ, ಅಥವಾ ಕಡಿಮೆ ಎನ್ನಬಹುದೇನೋ. ಯಾವುದಾದರೂ ವಸ್ತುವೊಂದನ್ನು ಖರೀದಿಸಿದರೆ ಅದರ workmanship ನೋಡುತ್ತೇವೋ ಇಲ್ಲವೋ? ಹಾಗೇ ಪ್ರತಿಯೊಂದು ವಸ್ತುವೂ ಒಂದೇ ಫ್ಯಾಕ್ಟರಿಯನ್ನು ಬಿಡುವಾಗ, ಅಥವಾ ಅಂಗಡಿಯನ್ನು ತೊರೆಯುವಾಗ ಒಂದಲ್ಲ ಒಂದು ರೀತಿಯ inspectionಗೆ ಒಳಪಡಲೇಬೇಕಲ್ಲವೇ? ಈ quality check ಒಂದೇ ಗ್ರಾಹಕ ನಿರ್ಧಾರಿತವಾಗಬಹುದು ಅಥವಾ ಆಯಾ ಅಂಗಡಿ/ಫ್ಯಾಕ್ಟರಿಯೇ ಒಂದು ಮೊದಲೇ ನಿರ್ಧರಿಸಿದ ಸ್ಟ್ಯಾಂಡರ್ಡ್‌ನ್ನು ಇಟ್ಟು ಅವುಗಳ ಉತ್ಪನ್ನವನ್ನು ಪರೀಕ್ಷಿಸಬಹುದು. ಹೀಗಿದ್ದಾಗ್ಯೂ ನಮ್ಮಲ್ಲಿಯ ಉತ್ಪನ್ನಗಳು ಕಳಪೇಯೇಕೆ ಎಂಬುದನ್ನು ಆಲೋಚಿಸಿಕೊಳ್ಳಿ, ನಿಮಗೇ ಗೊತ್ತಾಗುತ್ತದೆ.

ಈಗ ಪೋಸ್ಟರ್ ವಿಚಾರಕ್ಕೆ ಬರೋಣ: ಈ ಕಾರ್ಯಕ್ರಮ ಅಮೇರಿಕದಲ್ಲಿ ನಡೆಯುತ್ತಿರೋದು, ಆದರೆ ಪೋಸ್ಟರ್ ಮುದ್ರಿತವಾದದ್ದು ಭಾರತದಲ್ಲಿ, ಹೆಸರು ಮತ್ತಿತರ ಸ್ಥಳೀಯ ದೋಷಗಳನ್ನು ಮರೆತುಬಿಡೋಣ. ಆದರೆ ಈ ಪೋಸ್ಟರ್‌ನ್ನು ಮಾಸ್ ಪ್ರೊಡಕ್ಷನ್ ಮಾಡುವ ಮೊದಲು ಯಾರಾದರೊಬ್ಬರು ಪರೀಕ್ಷಿಸಿರಬೇಕಲ್ಲ, ಅದರಲ್ಲಿ ತಪ್ಪಿರಬಹುದೇ? ಅಥವಾ ಆ ರೀತಿಯ ಪರೀಕ್ಷೆಗೆ ಒಳಪಡದೇ ಹಾಗೇ ಹೊರಬಂದಿರಬಹುದು! ಕನ್ನಡದ ಪೋಸ್ಟರ್‌ಗಳು, ಬ್ಯಾನರ್‌ಗಳು ಬೆಂಗಳೂರಿನಲ್ಲಿ ಮುದ್ರಣಗೊಂಡಾಗ ದೋಷಗಳು ಇದ್ದೇ ಇರುತ್ತವೆ. ಇದು ಬರೀ ಪೋಸ್ಟರ್‌ಗಷ್ಟೇ ನಿಲ್ಲದು, ಕ್ಯಾಸೆಟ್ಟಿನ ಕವರ್‌ಗಳೂ, ಸಿನಿಮಾ ಟೈಟಲ್‌ಗಳೂ, ಎಲ್ಲವೂ ಈ ದೋಷಕ್ಕೆ ಒಳಪಡುವವೇ ('ಭಾವ ಸಂಗಮ' ಅನ್ನೋ ಆಸೆಯಿಂದ ಕ್ಯಾಸೆಟ್ಟನ್ನು ಕೊಂಡರೆ ಅದರ ಟೈಟಲ್ 'ಬಾವ ಸಂಗಮ'ವೆಂದು ಮುದ್ರಿತವಾದದ್ದನ್ನು ನೋಡಿ ರಸಭಂಗವಾದಂತೆ). ಇವೆಲ್ಲಕ್ಕೂ ಕನ್ನಡೇತರ ಕೆಲಸಗಾರರು ಮಾಡಿರುವ ತಪ್ಪು ಎಂದು ಒಂದೇ ಮಾತಿನಲ್ಲಿ ತಳ್ಳಿಹಾಕುವುದನ್ನು ನಾನು ಎಷ್ಟೋ ಬಾರಿ ಕೇಳಿದ್ದೇನೆ. ಆದರೆ ಮೇಲೆ ಹೇಳಿದ ಇಂಗ್ಲೀಷ್‌ನಲ್ಲಿ ಮುದ್ರಿತವಾದ ಪೋಸ್ಟರ್‌ಗಳಲ್ಲಿ ಹಾಗಾದರೆ ತಪ್ಪುಗಳು ಹೇಗೆ ನುಸುಳಿದವೆಂದು ನೀವು ಯೋಚಿಸುತ್ತಿರಬಹುದು - ಅದಕ್ಕೂ ಕಾರಣವಿದೆ, ಅದನ್ನು ಮುದ್ರಿಸಿದವರು, ತಯಾರಿಸಿದವರಿಗಷ್ಟು ಓದು ಬರಹ ಬಾರದು ಎಂದು. ನನ್ನ ಪ್ರಕಾರ ಅಲ್ಲೇ ಇರೋದು ಸಮಸ್ಯೆ: ಈ ಪೋಸ್ಟರ್ ಮುದ್ರಿಸೋ ವಿಷಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಈ ಪೋಸ್ಟರ್‌ನ ಲೈಪ್ ಸೈಕಲ್‌ನಲ್ಲಿ ಕೆಲಸ ಮಾಡುವವರಿಗೆಲ್ಲ ಸರಿಯಾದ ಶಿಕ್ಷಣವಾಗಲೀ, ತರಬೇತಿಯಾಗಲೀ ದೊರಕಿರುವುದಿಲ್ಲ. ಇವತ್ತಿಗೂ ನಮ್ಮೂರಿನ ಕಾರ್ಪೆಂಟರುಗಳು ಕಿವಿ ಮೇಲೆ ಪೆನ್ಸಿಲ್ ಇಟ್ಟುಕೊಂಡು ಓಡಾಡುತ್ತಾರೆಯೇ ವಿನಾ ಕಾರ್ಪೆಂಟರಿ ಬಗ್ಗೆಯಾಗಲೀ, ಮರಮುಟ್ಟುಗಳ ಬಗ್ಗೆಯಾಗಲೀ ಒಂದು ದಿನವೂ ಕಲಿಯುವ ಪ್ರಯತ್ನ ಮಾಡುವುದಿಲ್ಲ, ಮಾಡರು. ಬಡತನದ ಶಾಪಕ್ಕೋ, ಅಥವಾ ಸಮಾಜದ ವಿಕೋಪಕ್ಕೋ ಸಿಕ್ಕು ಬ್ಲೂ ಕಾಲರ್ ಕೆಲಸದಲ್ಲಿ ಸೇರಿಕೊಳ್ಳುವುದು ಅಪರಾಧವಲ್ಲ, ಆದರೆ ಹಲವಾರು ವರ್ಷಗಳು ಆಯಾ ಫೀಲ್ಡ್‌ನಲ್ಲಿ ಕೆಲಸ ಮಾಡಿಯೂ ಆ ಕೆಲಸದ ಬಗ್ಗೆ ತಿಳಿದುಕೊಳ್ಳುವ, ತಿಳಿಸಿ ಹೇಳುವ, ಹೆಚ್ಚು ಹೆಚ್ಚು ಕಲಿತು ಮುಂದೆ ಹೋಗುವ, ಇರುವ ಪ್ರಾಸೆಸ್ಸುಗಳನ್ನು ಅಭಿವೃದ್ಧಿ ಪಡಿಸುವ, ಹೊಸತಾಗಿ ಏನಾದರೊಂದನ್ನು ಕಂಡು ಹಿಡಿಯುವ, ಹೊಸತರ ಬಗ್ಗೆ ಆಲೋಚಿಸುವ ಯಾವ ಒಂದು ವ್ಯವಸ್ಥೆಯೂ ಇಲ್ಲದಿರುವುದು ಹೆದರಿಕೆ ಹುಟ್ಟಿಸುತ್ತದೆ. ಜಾತಿಯ ಆಧಾರದ ಮೇಲೋ, ಅಪ್ಪ ಮಾಡಿದ ಕೆಲಸವೆಂದೋ, ಟೈಮಿಗೆ ಸರಿಯಾಗಿ ಸಿಕ್ಕಿತೆಂದೋ ಯಾವುದೋ ಒಂದು ಕೆಲಸಕ್ಕೆ ಸೇರುವುದು ಸಹಜ. ಆದರೆ ಅದರಲ್ಲೆ ಮುಂದುವರಿಯುತ್ತೇವೆಂದು ನಿರ್ಧರಿಸಿ, 'ಪ್ರೊಫೆಷನಲ್ಸ್' ಆಗುತ್ತೇವೆಂದಾದ ತಕ್ಷಣ ಒಂದು ಹೆಜ್ಜೆ ಹಿಂದೆ ಸರಿದು ಯಾರೂ ಯಾಕೆ ಯೋಚಿಸುವುದಿಲ್ಲ - ಆ ರೀತಿ ಯೋಚನೆ ಮಾಡುವಂತೆ ಮಾಡುವ ಪರಿಸರವೂ ಯಾಕೆ ಹುಟ್ಟುವುದಿಲ್ಲವೋ?

When was the last time you complained in a restaurant about the quality of the food served or cleanliness?

ನೋಡಿದಿರಾ ಎಲ್ಲಿಂದ ಎಲ್ಲಿಗೆ ವಿಷಯ ಬಂತು? ಈ ಕ್ವಾಲಿಟಿಯ ಬಗ್ಗೆ ಬರೆದರೆ ಒಂದು ದೊಡ್ಡ ಹೊತ್ತಿಗೆಯನ್ನೇ ಬರೆಯಬಹುದು. ಈ ವಿಷಯವನ್ನು ಈಗ ಇಲ್ಲಿಗೇ ಬಿಡುತ್ತೇನೆ ಆದರೆ ಘಂಟಾಘೋಷವಾಗಿ ಈ final comment ಮಾಡಿದ ನಂತರ: ಭಾರತೀಯರಿಗೆ ವಸ್ತುಗಳ ಉತ್ಕೃಷ್ಟತೆಯ ಪರಿಕಲ್ಪನೆ ಕಡಿಮೆ - ಈ ಮಾತು ಎಲ್ಲ ಸ್ತರಗಳಲ್ಲೂ ಅನ್ವಯಿಸುತ್ತದೆ: ಕಾರಣಗಳನ್ನು ಹಲವಾರು ಕೊಟ್ಟರೂ, ಒಂದು ಉತ್ತಮ ಪ್ರಾಸೆಸ್ ಕಣ್ಣಿಗೆ ಬಿದ್ದು ಮನಸ್ಸಿಗೆ ಬಂದ ಮೇಲೂ ಅದನ್ನು ನಾವು ಅಳವಡಿಸಿಕೊಳ್ಳುವುದಿಲ್ಲವೆಂದರೆ ನಮ್ಮ ಮೇಲೆ ನಮಗೇ ನಾಚಿಕೆ ಆಗಬೇಕು.

(ವಿ.ಸೂ: ಈ ಕ್ವಾಲಿಟಿಯ ಕಾಮೆಂಟ್ ಭಾರತದಲ್ಲಿ ತಯಾರಾಗುವ, ಮಾರ್ಪಾಡಾಗುವ ಸಾಫ್ಟ್‌ವೇರ್‌ಗೂ ಅನ್ವಯಿಸುತ್ತೆ!)

Saturday, April 08, 2006

ಸುಂದರೇಶ ಅನ್ನೋ ಜೀನಿಯಸ್




ಸುಂದರೇಶನ ಬಗ್ಗೆ ಬರೆಯದೇ ಇದ್ರೆ ನನ್ನ ಬ್ಲಾಗೇ ಅಪೂರ್ಣ ಅನ್ನಿಸುತ್ತೆ. ಈ ಪುಣ್ಯಾತ್ಮನ ಪರಿಚಯ ನನ್ನ ಮಟ್ಟಿಗೆ ಕೇವಲ ಎರಡು-ಮೂರು ವರ್ಷವಿದ್ದಿರಬಹುದು, ಆದರೆ ಆತನ ಪರಿಣಾಮ ನನ್ನ ಮೇಲೆ ಅಪಾರ, ಅದಕ್ಕೆ ನಾನು ಅವನಿಗೆ ಚಿರಋಣಿ.

ಸುಂದರೇಶ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಶಿವಮೊಗ್ಗದ ಕೋಟೆ ಬೀದಿಯಲ್ಲಿ ಇವತ್ತಿಗೂ ಅವರ ಮನೆ ಇದೆ, ಅವನು ಕೂಡಾ ಅಲ್ಲೇ ಇದ್ದಾನೆ ಅನ್ನೋದು ನನ್ನ ಊಹೆ. ಸುಂದರೇಶ B.Sc.,ಯನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಮ್ಯಾಥ್‌ಮ್ಯಾಟಿಕ್ಸ್‌ನಲ್ಲಿ M.Sc., ಮುಗಿಸಿದವನು. ಈತನಿಗೆ ಗಣಿತದಲ್ಲಿ ಬಂದ ಅಂಕಗಳು ನೂರಕ್ಕೆ ನೂರು, ಹೌದು, ಪಕ್ಕಾ ನೂರು, ಉಳಿದಂತೆ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಲ್ಲೂ ಯುನಿವರ್ಸಿಟಿಗೇ ಹೆಚ್ಚಿನ ಸ್ಕೋರು.

ಅವನಿಗೆ ಅವನ ಮೇಲೆ ಗಣಿತದ ಮೇಷ್ಟ್ರು ತೋರಿದ ಪ್ರೀತಿ ಅತಿಯಾಯಿತೇನೋ ಎನ್ನುವಂತೆ, ಮೈಸೂರು, ಕುವೆಂಪು ವಿ.ವಿ.ಗಳಲ್ಲಿ ಸಿಕ್ಕಿದ ಎಲ್ಲ ಕೋರ್ಸುಗಳ ಸೀಟನ್ನು ಬಿಟ್ಟು, ಆತ M.Sc.,ಯಲ್ಲಿ ಗಣಿತವನ್ನೇ ಆರಿಸಿಕೊಂಡ! ಅಲ್ಲದೇ ಅದರಲ್ಲೂ ಬಹಳ ಹೆಚ್ಚಿನ ಅಂಕಗಳನ್ನು ಗಳಿಸಿ ಮೇಲೆಯೇ ಬಂದ...ಆದರೆ ಅವನು ಮೇಲೆ ಬಂದ ಬಗೆ ಬಹಳ ವಿಶೇಷವಾದದ್ದು...

ಸುಂದರೇಶನು B.Sc.,ಯಲ್ಲಿ ರ್‍ಯಾಂಕ್ ಬಂದಿದ್ದರ ಸಲುವಾಗಿ ತುಂಬ ಬೇಕಾದ ಫಾರ್ಮ್‌ಗಳನ್ನು ತುಂಬಿ ಘಟಿಕೋತ್ಸವಕ್ಕೆ ಕೊಡುವಾಗ ನಾನು ಅವನ ಜೊತೆಯಲ್ಲೇ ಇದ್ದೆ. ಎಲ್ಲೆಲ್ಲಿ ಮೆಡಲ್‌ಗಳು ಸಿಗುತ್ತವೆಯೋ ಅವೆಲ್ಲವೂ ಇವನನ್ನೇ ಹುಡುಕಿಕೊಂಡು ಬಂದಿದ್ದವು, ಆದರೆ ಇವ ಆ ಎಲ್ಲ ಮೆಡಲ್‍ಗಳ ಬದಲಿಗೆ ದುಡ್ಡೇ ಸಿಗಲಿ ಎಂದು ಹಣವನ್ನು ಆರಿಸಿಕೊಂಡ. ಬಂದ ಹಣದಲ್ಲಿ ಲೋಡುಗಟ್ಟಲೆ ಗಣಿತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಿ ತನ್ನ ಹಾಸ್ಟೆಲಿನ ರೂಮನ್ನು ತುಂಬಿಸಿಕೊಂಡ.

ಮೈಸೂರಿನಲ್ಲಿ ಓದಿರುವವರಿಗೆಲ್ಲ ಗೊತ್ತಿರುವಂತೆ, ಅಲ್ಲಿನ ಜಾತಿ ರಾಜಕೀಯವೂ, ಕೆಲವು ವಿದ್ಯಾರ್ಥಿಗಳ ಕೀಳು ಅಭಿರುಚಿಯೂ ಸುಂದರೇಶನಿಗೆ ಇಷ್ಟವಾಗಲಿಲ್ಲವೆಂದು ಕಾಣುತ್ತದೆ, ಜೊತೆಯಲ್ಲಿ ಅವನಿಗೆ ಪಾಠ ಹೇಳಿಕೊಡುವ ಕೆಲವು ಮೇಷ್ಟ್ರೂ ಸಹ. ಅವ ತರಗತಿಗೆ ಹೋದರೆ ಹೋದ ಬಿಟ್ಟರೆ ಬಿಟ್ಟ ಎನ್ನುವಂತೆ ಆದ! ನೋಟ್ಸು ಬರೆದುಕೊಂಡರೆ ಬಂತು, ಇಲ್ಲವೆಂದರೆ ಇಲ್ಲ. ಅಲ್ಲದೇ ಆತ ಹಾಸ್ಟೆಲಿನಲ್ಲಿ ತುಂಬಿಸಿಕೊಂಡ ಪುಸ್ತಕಗಳೆಲ್ಲ ಒಂದೊಂದಾಗಿ ಖಾಲಿಯೂ ಆಗ ತೊಡಗಿದವು, ಇವನು ಯಾವುದಕ್ಕೂ ತಲೆಕೆಡಿಸಿಕೊಂಡ ಜಾಯಮಾನದವನಲ್ಲ.

ನನ್ನ ಹಾಗೂ ಸುಂದರೇಶನ ಸಂಬಂಧ M.Sc.,ಯ ಎರಡನೇ ವರ್ಷದಲ್ಲಿ ಗಟ್ಟಿಯಾಗತೊಡಗಿತ್ತು. ನಾನೂ-ಉಮೇಶನೂ ಫಿಸಿಕ್ಸ್‍ನವರು, ನಮ್ಮ ಜೊತೆಯಲ್ಲಿ ಸುಂದರೇಶ ಇರ ತೊಡಗಿದ (ಸುಂದರೇಶ-ಉಮೇಶ ರೂಮ್ ಮೇಟ್‌ಗಳು, ಆದರೆ ನಾವೆಲ್ಲರೂ ಒಟ್ಟಿಗೇ ಓದಿಕೊಳ್ಳುತ್ತಿದ್ದೆವು).

ನನಗಿನ್ನೂ ಚೆನ್ನಾಗಿ ನೆನಪಿದೆ - ಯಾವುದೇ ನೋಟ್ಸ್ ಸಹಾಯವಿಲ್ಲದೇ, M.Sc.,ಯ ಅಬ್ಸ್ಟ್ರ್ಯಾಕ್ಟ್ ಗಣಿತವನ್ನು ಸುಂದರೇಶ ನೀರು ಕುಡಿದಂತೆ ಜೀರ್ಣಿಸಿಕೊಂಡಿದ್ದ. ಪರೀಕ್ಷೆಯ ಸಮಯದಲ್ಲಿ ಆತ ಒಂದೊಂದೇ ಪುಸ್ತಕವನ್ನು ತೆಗೆದುಕೊಂಡು, ನಾಲ್ಕೈದು ಘಂಟೆಗಳಲ್ಲಿ ಓದಿ ಮುಗಿಸಿ - 'ಆಯ್ತು ಕಣೋ!' ಎಂದಾಗ, ನನಗೂ ಉಮೇಶನಿಗೂ ದಿಗಿಲೋ-ದಿಗಿಲು! ಕೆಜಿಗಟ್ಟಲೆ ರಫ್ ಪೇಪರನ್ನು ತಂದು, ಅದರಲ್ಲಿ ಕೆಲವೇ ಸಾಲುಗಳು, ಇಲ್ಲಾ ಪದಗಳನ್ನು ಗೀಚಿ-ಗೀಚಿ ಎಸೆಯೋ ಅವನ ಶೈಲಿ ಇನ್ನೂ ಕಣ್ಣ ಮುಂದಿದೆ. ಅವ ಹೀಗೇ ಪ್ರತಿಯೊಂದು ಪುಸ್ತಕವನ್ನು ಮುಗಿಸುತ್ತಾ ಬಂದ, ಪ್ರತಿಯೊಂದು ಪರೀಕ್ಷೆಯ ನಂತರವೂ 'ಈ ಪೇಪರ್‌ನಲ್ಲಿ ೯೮ ಬರುತ್ತೆ, ಇದರಲ್ಲಿ ನೂರು, ಇದರಲ್ಲಿ ೯೯ ಬರುತ್ತೆ' ಅಂತಿದ್ದ, ಹಾಗೇ ಆಗೋದು! ಅಂತಾ ಸುಂದರೇಶನಿಗೆ ಜೀನಿಯಸ್ ಅನ್ನದೇ ಇನ್ನೇನು ಅನ್ನೋದು? ಬರೀ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆದನೆಂದಲ್ಲ, ಆತ ಉಸಿರಾಡೋದೇ ಗಣಿತವನ್ನು ಅನ್ನೋಹಾಗಿದ್ದ. ಒಂಥರಾ ನಮ್ಮ ನಡುವಿನ ರಾಮಾನುಜನ್ ಎಂದರೂ ತಪ್ಪಿಲ್ಲ. ಅವನನ್ನು ಎಲ್ಲೆಲ್ಲಿಂದಲೋ ಗಣಿತದ ಮೇಷ್ಟ್ರುಗಳು ತಮ್ಮ ಸಮಸ್ಯೆಗಳ ನಿವಾರಣೆಗೆ ಸಂಪರ್ಕಿಸೋರು!

***

ಸರಿ, ಶಿವಮೊಗ್ಗದಲ್ಲಿ ನಾವೆಲ್ಲ ಪಾರ್ಟ್‌ಟೈಮ್ ಲೆಕ್ಚರರ್ ಆಗಿದ್ವಿ, ಅದರಲ್ಲಿ ಸುಂದರೇಶನೂ ಇದ್ದ, ಆದರೆ ಅವನು ಅಲ್ಲಿಯ ವಿದ್ಯಾರ್ಥಿಗಳಿಗೆ ಮೀರಿದ ಗುರುವಾಗಿದ್ದ. ಕೊನೆಗೂ ಅವ ನನ್ನ ಮಾತನ್ನ ಕೇಳಲೇ ಇಲ್ಲ, ಅಲ್ಲಿಯ ಕಾಲೇಜಿನಲ್ಲಿ ಪಾಠ ಮಾಡಿಕೊಂಡು, ಮನೇ ಪಾಠ ಹೇಳಿಕೊಂಡು ಜೀವನ ಸಾಗಿಸುತ್ತಿದ್ದವನನ್ನು ನಾನು ೧೯೯೮ರಲ್ಲಿ ಭಾರತಕ್ಕೆ ಹೋದಾಗ ಭೇಟಿಯಾಗಿ ಉಗಿದು ಬಂದಿದ್ದೆ!

'ಅಲ್ವೋ, ಒಂದು ಜಾವನೋ, C++ ಕಲಿತು ನೀನು ಯಾಕೆ ನನ್ನ ಥರ ಅಮೇರಿಕಕ್ಕೆ ಬರಬಾರದು? ಸುಮ್ನೇ ಕೆಲಸಕ್ಕೆ ಅಂತ ಇಲ್ಲಿಗೆ ಬಾ, ಆಮೇಲೆ ಸ್ವಲ್ಪ ಕಾಸ್ ಮಾಡಿಕೊಂಡು, MIT ನೋ ಮತ್ತೂಂದೋ ಸೇರ್‌ಕೋವಂತೆ, ಮ್ಯಾಥ್‌ಮ್ಯಾಟಿಕ್ಸ್‌ನಲ್ಲೇ ರಿಸರ್ಚ್ ಮಾಡಿ ಮುಂದೆ ಹೋಗಬಹುದು' ಅನ್ನೋದು ನನ್ನ ಆಗಿನ ಕಾಲದ ಉಪದೇಶ.

'ಇಲ್ಲಿ ಟ್ಯೂಷನ್ ಮಾಡ್ಕೊಂಡು ಬರೋ ದುಡ್‌ನ್ನು ಕಲೆಕ್ಟ್ ಮಾಡಿಕೊಂಡು ಇದ್ರೆ ಸಾಕೋ, ಆದ್ರೂ ನೋಡ್ತೀನಿ, ಎಲ್ಲಾದ್ರೂ ಸೇರ್‌ಕೋತೀನಿ..' ಅಂದವನು ಶಿವಮೊಗ್ಗ ಬಿಡಲೇ ಇಲ್ಲ, ಯಾವತ್ತೋ ಅವನೇ ಹೇಳಿದ್ದ 'ಟ್ಯೂಷನ್ ಮಾಡೀ, ಮಾಡೀ ಬೇಕಾದಷ್ಟು ಕಾಸು ಮಾಡಿದೀನಿ ಕಣೋ!' ಅಂತ, ಅದನ್ನ ಬಿಟ್ರೆ, ಇವತ್ತಿಗೂ ಸುಂದರೇಶ ಶಿವಮೊಗ್ಗ ಬಿಡಲೇ ಇಲ್ಲ ಅಂತ ಕಾಣುತ್ತೆ.

ಹಾಗಾದ್ರೆ ಕಾಸು ಮಾಡೋದೇ ಜೀವನದ ಪರಮಗುರಿಯೇ? ಯಾವ ಮಿಲಿಯನರ್ರೂ ಯಾಕೆ ಮುಂದೆ ಬರೋದಿಲ್ಲ ಇಂಥವರನ್ನು ಕುರಿತು 'ನಿನ್ನ ಹಣಕಾಸಿನ ವಿಷಯವನ್ನು ನಾನು ನೋಡಿಕೊಳ್ತೇನೆ, ಮರ್ಯಾದೆಯಿಂದ ಗಣಿತದಲ್ಲಿ ಅದೇನು ಕಡೀತೀಯೋ ಕಡಿ' ಎಂದು ಹೇಳಲು!

ಈ ಶಿವಮೊಗ್ಗದ DVS, ಸಹ್ಯಾದ್ರಿ ಕಾಲೇಜುಗಳಲ್ಲಿ ಇವನ ದೊಡ್ಡತನವನ್ನ ಗುರುತಿಸೋರು ಯಾರು? ಅವನು ದೊಡ್ಡ ವಜ್ರದ ಥರಾ, ಅದನ್ನ ಹೊಳೆಯೋ ಹಾಗೆ ಮಾಡೋರು ಯಾರು?

***

ನೀವು Good Will Hunting ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ, ಸುಂದರೇಶ ನನ್ನ ಕಣ್ಣಿಗೆ Matt Damonನ ಪಾತ್ರದ ಥರಾನೆ ಕಾಣ್ತಾನೆ. ಸುಂದರೇಶನಿಗೆ ಶಿವಮೊಗ್ಗದಲ್ಲೇ ಟ್ಯೂಷನ್ ಮಾಡಿಕೊಂಡು ಬಿದ್ದಿರಬೇಕೆನ್ನುವುದು passion ಆಗದೇ ಇರಲಿ ಅನ್ನೋದು ನನ್ನ ಬಯಕೆ. ಇವತ್ತಲ್ಲ ನಾಳೆ ಅವನು ಮ್ಯಾಥ್‌ಮ್ಯಾಟಿಕ್ಸ್‌ನಲ್ಲಿ ಏನನ್ನಾದರೂ ಮಹತ್ತರವಾದದ್ದನ್ನು ಸಾಧಿಸಲಿ ಅನ್ನೋದು ನನ್ನ ಹಾರೈಕೆ.

Friday, April 07, 2006

America - Moral Responsibility

ಅಮೇರಿಕೆಯಲ್ಲಿ ನೈತಿಕ ಜವಾಬ್ದಾರಿಯ ಮಾತು ಕೇಳಿ ಬರದು...

ನಾನು USAಗೆ ಬರುವ ಮೊದಲು ಇಲ್ಲಿಯ ಮುಖ್ಯವಾಹಿನಿಯಲ್ಲಿ ನಾನು ಒಬ್ಬನಾಗಿ ಬದುಕುವುದಿಲ್ಲ ಎನ್ನುವುದು ಗೊತ್ತಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲವೇನೋ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಮುಖ್ಯವಾಹಿನಿ ಎಂದರೆ ಇಲ್ಲಿಯ ಸಮಾಜದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಎಂಬರ್ಥದಲ್ಲಿ. ಹೊರದೇಶಕ್ಕೆ ಹೀಗೆ ಕೆಲಸಗಾರರಾಗಿಯೋ ಅಥವಾ ವಲಸಿಗರಾಗಿಯೋ ಬರಲು ಹವಣಿಸುತ್ತಿರುವ ಯುವಕ/ಯುವತಿಯರು ಓದಲೇ ಬೇಕಾದ ಪುಸ್ತಕಗಳು, ನೋಡಲೇ ಬೇಕಾದ ಸಿನಿಮಾ ಅಥವಾ ಡಾಕ್ಯುಮೆಂಟರಿಗಳು ನಿಮಗೆ ಗೊತ್ತಿದ್ದರೆ ತಿಳಿಸಿ.

ಇಲ್ಲಿಯ citizen ಆಗದೇ ಇಲ್ಲಿ ಮತ ಚಲಾಯಿಸುವಂತಿಲ್ಲ (ಸಿಟಿಜನ್ ಆಗುವ ಹಾಗೂ ಬಿಡುವ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ), ಮತ ಚಲಾಯಿಸದವನಿಗೆ ಸಂವಿಧಾನದಲ್ಲಿ ಬರೆಯದಿರುವ ಹಕ್ಕಿನ ಮಿತಿಗಳು ದುತ್ತನೆ ಎದುರಾಗಿ ಪದೇ-ಪದೇ ಹಿಂಸಿಸತೊಡಗುತ್ತವೆ. ಅಲ್ಲದೇ ಹಲವಾರು ವರ್ಷಗಳು ಇಲ್ಲಿ ಬದುಕಿ ಹಲವು ವಿಭ್ರಮೆಗಳಿಗೊಳಗಾಗಿದ್ದೂ ಇದೆ, ಅಂತಹ ಮಹಾನ್ ವಿಭ್ರಮೆಗಳಲ್ಲಿ ಅಮೇರಿಕದವರು ಇರಾಕ್ ಮೇಲೆ ಧಾಳಿ ಮಾಡಿ ಅದನ್ನು ಸಾಧಿಸಿಕೊಳ್ಳುವ ವಿಷಯವೂ ಒಂದು - ಆದರೆ ಅದರ ವಿರುದ್ಧವಾಗಿ (ಯಾಕೆಂದರೆ ಅದು ನನ್ನ ರೀತಿಯಿಂದ ತಪ್ಪು ಎನ್ನುವ ಕಾರಣದಿಂದ) ನಾನು ಈವರೆಗೆ ಒಬ್ಬ ನಾಗರಿಕನಾಗಿ ಮಾಡಿದ್ದೇನೂ ಇಲ್ಲ, ಅಲ್ಲಲ್ಲಿ ಗೆಳೆಯರ ನಡುವೆ ಆ ಬಗ್ಗೆ ಮಾತನಾಡಿದ್ದನ್ನು ಬಿಟ್ಟರೆ. ಸರಿ, ನಾನು ಇಲ್ಲಿಯ ಮುಖ್ಯವಾಹಿನಿಯಲ್ಲಿ ಒಬ್ಬನಾಗಿ ಬೆರೆತಿದ್ದರೆ ಅದರಿಂದ ಏನು ವ್ಯತ್ಯಾಸವಾಗುತ್ತಿತ್ತು ಎಂದು ನೀವು ಕೇಳಬಹುದು - ಬಹಳಷ್ಟು ವ್ಯತ್ಯಾಸವಾಗುತ್ತಿತ್ತು: ಇಲ್ಲಿಯ ಲೋಕಲ್ ರೆಪ್ರೆಸೆಂಟೇಟಿವ್ಸ್‌ಗೆ ಬರೆಯಬಹುದಿತ್ತು, ಇರಾಕ್ ಯುದ್ಧದ ಸಂಬಂಧ ಮತ ಚಲಾವಣೆ ನಡೆದಾಗಲೆಲ್ಲ ಅಲ್ಲಿ ಅದರ ವಿರುದ್ಧವಾಗಿ ಧ್ವನಿಗೂಡಿಸಬಹುದಿತ್ತು, ಮುಖ್ಯವಾಗಿ ಒಬ್ಬ ಪ್ರಜೆಯಾಗಿ ಯುದ್ಧವನ್ನು ತಪ್ಪಿಸಲು, ಮುಂದೆ ಅದರಿಂದ ಆಗುವು ವಿಹಿತ ಪರಿಣಾಮಗಳ ವಿರುದ್ಧ ನಿಲ್ಲಬಹುದಿತ್ತು.

ಸರಿ, ಹಾಗಾದರೆ ಇವೆಲ್ಲವನ್ನೂ ನಾನು ಮಾಡದೇ ಇರುವುದಕ್ಕೆ ಕಾರಣಗಳನ್ನು ಕೊಟ್ಟು, escape ಆಗಿ ಹೋಗಲು ನೋಡುತ್ತಿದ್ದೇನೆಂದು ನೀವು ಅಂದುಕೊಳ್ಳಬಹುದು. ಹಾಗೂ ಅಲ್ಲ...

ಇರಾಕ್‌ನಲ್ಲಿ ಸಿಡಿಸಿದ ಪ್ರತಿಯೊಂದು ಬಾಂಬಿನ ಮೇಲೂ ಅಮೇರಿಕದಲ್ಲಿ ತೆರಿಗೆ ಕೊಡುವವರ ಪಾಲಿದೆ, ಆ ಪಾಲಿನಲ್ಲಿ ಬೇಕಾಗಿಯೋ, ಬೇಡವಾಗಿಯೋ ನಾನೂ ಒಬ್ಬನಾಗಿ ಸೇರಿಕೊಂಡಿದ್ದೇನೆ - ಇದು ಇಂದಿನ ತಳಮಳದ ಸಾರ!

***

ಇರಾಕ್ ಯುದ್ಧ ನಡೆದುಹೋಯಿತು, ಆಗಬಾರದ್ದು ಆಯಿತು, ಅದರಿಂದ ನನಗೇನು? ಅಷ್ಟು ಬೇಡವಾಗಿದ್ದರೆ ಇಲ್ಲಿಂದ ಗಂಟು-ಮೂಟೆಗಳನ್ನು ಕಟ್ಟಿ ಹೊರಡಬೇಕಪ್ಪ - ಎಂದಿರೋ, ಅಲ್ಲೇ ಬಂದಿರೋದು ಕಷ್ಟ, ಯಾಕೆಂದ್ರೆ ಅದು ಹೇಳಿದಷ್ಟು ಸುಲಭವಾದ ಮಾತಲ್ಲ.

ನಾವು ಕೆಟ್ಟದ್ದು ಆಗುವುದನ್ನು ನೋಡಿಕೊಂಡು ಅದರ ಬಗ್ಗೆ ಏನನ್ನೂ ಮಾಡದೇ ಹೋಗೋದು ಇದೇ ನೋಡಿ, ಅದಕ್ಕೂ ಆ ಮೂಲ ಕ್ರಿಯೆಗೂ ಏನು ವ್ಯತ್ಯಾಸ ನೀವೇ ಹೇಳಿ? ಹಾಗಂತ ನಮ್ಮ ದೇಶದಲ್ಲಿ (ಅಂದ್ರೆ ಭಾರತದಲ್ಲಿ), ಘಳಿಗೆಗೊಂದು, ಘಂಟೆಗೊಂದು ಯುದ್ಧಗಳಾಗುತ್ತಿರುವಾಗ ಅಲ್ಲಿ ಹೇಗೆ ಕಣ್ಣು ಮುಚ್ಚಿಕೊಳ್ಳುವುದು ಸಾಧ್ಯ? ಏನೇ ಹೇಳಿ ನಮ್ಮ ದೇಶವೇ ದೊಡ್ಡದು, ಅಲ್ಲಿಯ ಮುಂದಾಳುಗಳಿಗಳಿಗೆ ತಾವು ತೆಗೆದುಕೊಂಡ ನಿರ್ಧಾರಗಳಿಗೆ ತಾವು ನೈತಿಕವಾಗಿ ಹೊಣೆಗಾರರು ಎನ್ನುವುದನ್ನು ಅವರು ಮರೆಯದಂತೆ ಮಾಡುವ ಸಮಾಜವಿದೆ, ಆದರೆ ಇಲ್ಲಿ ಹಾಗಲ್ಲ, ತಾವು ಮಾಡಿದ್ದೇ ಸರಿ ಎಂದು ತಿಪ್ಪೇ ಸಾರಿಸುವವರ ಮೀಸೆ ತಿಕ್ಕುವವರಿದ್ದಾರೆ!

ಇಲ್ಲಿ, ದೊಡ್ಡ ಕಾರ್ಪೋರೇಷನ್ ಮಟ್ಟದ್ದಲ್ಲಿ, ವಾಷಿಂಗ್ಟನ್‌ನಲ್ಲಿ ಲಾಬಿ ಮಾಡುವವರ ಮಟ್ಟದಲ್ಲಿ ಲಂಚ ಇದೆ, ಆದರೆ ನನ್ನ ಮಟ್ಟಿಗೆ ದಿನ ನಿತ್ಯದ ಕೆಲಸ-ಕಾರ್ಯಗಳಲ್ಲಿ ಯಾವುದೇ ಲಂಚವನ್ನೂ ನಾನು ಕೊಡಬೇಕಾಗಿಲ್ಲ ಅನ್ನೋದು ದೊಡ್ಡ ಸಮಾಧಾನದ ವಿಷಯ. ಹಾಗಂತ ಇಲ್ಲೇ ನೆಲೆ ಊರೋದಕ್ಕೆ ನಾನು ಪೀಠಿಕೆ ಹಾಕುತ್ತಿಲ್ಲ, ಇಲ್ಲಿ ನೆಲೆ ಊರಿರುವವರು ಕೊಡುವ ಕಾರಣಗಳಲ್ಲಿ ಇದೂ ಒಂದು ಎಂದು ಹೇಳುತ್ತಿದ್ದೇನೆ ಅಷ್ಟೇ.

***

ಸರಿ, ಸದರಿ ಸರ್ಕಾರದ ಪಾಲಿಸಿಗಳು ಎಡವಟ್ಟಾಗಿದ್ದಕ್ಕೂ, ನಾನು ಕೊಡುವ ಟ್ಯಾಕ್ಸಿನ ಹಣಕ್ಕೂ ಇರಾಕ್ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲವೆಂದೂ, ನಾನು ಇಲ್ಲಿಯ ಕೆಲಸಗಾರರಲ್ಲಿ ಒಬ್ಬ - ಏಣಿಯ ಮೇಲೆ ನಿಂತು ಕೆಲಸಮಾಡುವಾಗ ಏಣಿಯನ್ನು ಒದೆಯಬಾರದೆಂಬ ಸಾಮಾನ್ಯ ಜ್ಞಾನವನ್ನಿಟ್ಟುಕೊಂಡು ನಿರ್ಲಿಪ್ತ ಬದುಕನ್ನು ಬದುಕಿ ಬಿಡುತ್ತೇನೆ - ದಯವಿಟ್ಟು, ನೀವು ನಿರ್ಲಿಪ್ತತೆಗೆ ಅರ್ಥಹೀನತೆ ಎಂದು ಅರ್ಥೈಸಿಕೊಳ್ಳದೇ ಬರೀ ಯಾವುದಕ್ಕೂ ಅಂಟಿಕೊಳ್ಳದವನೆಂದುಕೊಂಡರೆ ನನ್ನ ಶ್ರಮ ಸಾರ್ಥಕವಾದೀತು.

***

ಮೇಲೆ ಹೋಗಬೇಕೆನ್ನಿಸಿದಾಗ ಏಣಿ ಆಸರೆಯಾಯಿತು
ಏಣಿ ಮೇಲೆ ಏರಿದಂತೆ ಗೋಡೆಗೆ ಒರಗುವಂತಾಯಿತು

ಮೇಲೆ-ಮೇಲೆ ಹೋದಂತೆಲ್ಲ ತಗ್ಗು-ದಿಣ್ಣೆಗಳು ಕಂಡವು
ಒರಗಿದ ನುಣ್ಣನೆ ಗೋಡೆಯ ಪದರಗಳೂ ಬಿರುಸಾದವು

ಹತ್ತೋದೇನೋ ಹತ್ತಿದ್ದೇನೆ ಇಳಿದರೆ ಬಲು ನಷ್ಟ
ಮುಂದೆ ಹೋಗದೇ ಹತ್ತಿದ್ದಲ್ಲೇ ಇರುವುದು ಕಷ್ಟ

ಚಂದ್ರಲೋಕಕ್ಕೆ ಹೋದೋರೂ ಭೂಮೀನ ತಲೆ ಎತ್ತೇ ನೋಡ್ತಾರೆ
ನಾನು ಎತ್ತ ನೋಡಿದ್ರೂ ನನ್ನ ಭೂಮಿ ನನ್ನ ಕಣ್ಣ ಮರೆ

ಹೀಗೇ ನಾನು ಸುಮ್ನೇ ಇದ್ರೇ ಅಂಥ ಯೋಚ್ನೇ ಮಾಡ್ತೀನಿ
ಯೋಚ್ನೆ ಮಾಡ್ತಾ-ಮಾಡ್ತಾ ಸುಮ್ನೇ ದಿನಗಳ್ನ ಕಳೀತೀನಿ

ಮೇಲೆಕ್ಕೇನೂ ಮಿತಿಯಂತೂ ಇಲ್ಲ, ಕೆಳಗಡೇ ಇದ್ರೇನೇ ಚೆಂದ
ಸರಳತೆ, ಶುದ್ಧತೆ, ಸಾರ್ಥಕತೆ ಇರೋ ಬದುಕೇ ಬಲು ಅಂದ.

Wednesday, April 05, 2006

ಎಚ್. ಎಲ್. ಎಸ್. ರಾವ್ ಎಂಬ ಮೇಷ್ಟ್ರು

ನಾನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿದವನಲ್ಲ, ಆದರೆ ಅಲ್ಲಿ ಓದುವುದಕ್ಕೋಸ್ಕರ ಹೋಗಿ ನನ್ನ ಜೀವಿತಾವಧಿಯ ಐದು ವರ್ಷಗಳನ್ನು ಕಳೆದವನು. ಹಾಗಾಗಿ ನಾನು ಇಂದು ಏನೇ ಮಾಡಿದರೂ ಅದರಲ್ಲಿ ಸಾಗರದ ಪ್ರಭಾವ ಇರುತ್ತೆ, ನನ್ನ ಬರಹಗಳಲ್ಲೂ ಸಹ!

ಸಾಗರ ಅನ್ನೋ ಪಟ್ಟಣ ಹಲವಾರು ರೀತಿಯಿಂದ ಪ್ರಸಿದ್ಧವಾದದ್ದು: ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಬಹಳಷ್ಟು ಜನ ಈ ಮಾರ್ಗದಿಂದಲೇ ಹೋಗೋದು. ಸಾಗರದಲ್ಲಿ ಶ್ರೀಗಂಧದ ಸಂಕೀರ್ಣವಿದೆ, ಮಲೆನಾಡಿನ ಅಡಿಕೆ ಮಂಡಿಗಳಿವೆ, ಬೆಂಗಳೂರು-ಹೊನ್ನಾವರ ರಸ್ತೆಯ ಆಜುಬಾಜಿನಲ್ಲಿ ನಾವು ಇನ್ನೂ ಬದುಕಿದ್ದೇವೆ ಎಂದು ತೋರಿಸಿಕೊಡುವಂತೆ ಕಾಡಿದೆ, ಎಲ್ಲಕ್ಕೂ ಮುಖ್ಯವಾಗಿ ಒಳ್ಳೆಯ ಪರಿಸರವಿದೆ, ಸಹೃದಯರಿದ್ದಾರೆ. ಸಾಗರದಲ್ಲಿ ಏನೇನಿಲ್ಲ, ಏನಿದ್ದರೆ ಚೆನ್ನಾಗಿತ್ತು ಅನ್ನೋದು ಇನ್ನೊಂದು ದಿನದ ಮಾತಾಗಲಿ.

ನಾನು ಎಲ್. ಬಿ. ಕಾಲೇಜಿಗೆ ಮೊದಲು ಹೆಜ್ಜೆ ಇಟ್ಟಾಗ ಹೊಸ ಪ್ಯಾಂಟಿನ ಜೊತೆಯಲ್ಲಿ ಕೀಳರಿಮೆಯನ್ನೂ ಉಡುಪಾಗಿ ತೊಟ್ಟುಕೊಂಡಿದ್ದೆ. ನಮ್ಮ ಊರಿನ ಹೈ ಸ್ಕೂಲಿನಲ್ಲಿ ನಾನೇ ರಾಜ, ಆದರೆ ಸಾಗರದ ಅಗಾಧತೆ ನನ್ನನ್ನು ಸಂಪೂರ್ಣವಾಗಿ ತನ್ನಲ್ಲಿ ಕರಗಿಸಿಕೊಂಡಿತ್ತು. ನಿಜ ಹೇಳಬೇಕು ಎಂದರೆ ನನಗೆ ಪೂರ್ತಿಯಾಗಿ ಒಂದು ಸಾಲನ್ನೂ ಇಂಗ್ಲೀಷ್‌ನಲ್ಲಿ ಮಾತನಾಡಲು ಬರುತ್ತಿರಲಿಲ್ಲ. ಇನ್ನು ಬರೆದರೋ ಗುಬ್ಬಿ ಮರಿಯನ್ನು ಇಂಕಿನ ಬಾಟಲಿಯಲ್ಲಿ ಅದ್ದಿ ತೆಗೆದು ಬಿಳಿಯ ಕಾಗದದ ಮೇಲೆ ಬಿಟ್ಟರೆ ಬರುವ ಚಿತ್ತಾರದಂತಿತ್ತು. ನಾನು ಓದಿದ್ದ ಹೈ ಸ್ಕೂಲಿನಲ್ಲಿ ಕೊ-ಎಜುಕೇಷನ್ ಇರಲಿಲ್ಲವಾದ್ದರಿಂದ, ಹುಡುಗಿಯರು ಇದ್ದ ಕ್ಲಾಸಿನಲ್ಲಿ ಬಹಳ ಹಿಂಸೆಯಾಗುತ್ತಿತ್ತು.

ನನ್ನ ಮೊದಲ ಕ್ಲಾಸು ಲಂಬೋದರ ಅವರ ಆಲ್‌ಜೀಬ್ರಾ, ಅವರು 'A to the power B, B to the power C' ಎಂದಾಗ ನನಗೆ ಒಂದು ತುಣುಕೂ ಅರ್ಥವಾಗಿರಲಿಲ್ಲ. ನಾಗರಾಜ ಹೆಗಡೆ ಅವರು ಫಿಸಿಕ್ಸ್‌ನ ತರಗತಿಯಲ್ಲಿ, ರೂಮ್ ನಂಬರ್ ನಾಲ್ಕರಲ್ಲಿ ಮಧ್ಯಾಹ್ನ ೪ ರಿಂದ ೫ ರವರೆಗಿನ ಒಂದು ತರಗತಿಯಲ್ಲಿ Errors and Significant numbers ಬಗ್ಗೆ ಪಾಠ ಮಾಡಿದ್ದರು. ನನಗೆ ತರಗತಿ ಮುಗಿದು ನನ್ನ ರೂಮಿಗೆ ಹೋಗಿ ಡಿಕ್ಷನರಿ ನೋಡುವವರೆಗೆ Error ಎಂದರೇನೆಂದು ಗೊತ್ತಿರಲಿಲ್ಲ! ಇನ್ನು ಬಾಟನಿಯ ವಿಷಯವನ್ನು ಕೇಳಲೇ ಬೇಡಿ, ಪಾಠ ಮಾಡುವ ವೆಂಕಟಕೃಷ್ಣಯ್ಯನವರದ್ದು ಯಾವ ತಪ್ಪೂ ಇರಲಿಲ್ಲ - ನಾನು pteriodophyta, thallophyta ಎಂಬುದನ್ನೆಲ್ಲ ನನಗೆ ಹೇಗೆ ಬಂತೋ ಹಾಗೆ ಬರೆದುಕೊಳ್ಳುತ್ತಿದ್ದೆ!

ಹೀಗಿರುವಾಗ, ಮುಂದಿನ ಡೆಸ್ಕಿನಲ್ಲಿ ಕೂರುತ್ತಿದ್ದೆನೆಂತಲೋ ಏನೋ, ಉಳಿದೆಲ್ಲ ಬುದ್ಧಿವಂತ ಹುಡುಗ/ಹುಡುಗಿಯರ ಜೊತೆಯಲ್ಲಿ ಶ್ರೀ ಎಚ್. ಎಲ್. ಎಸ್. ರಾವ್ ಅವರ ಮನೆಗೆ ಬರುವಂತೆ ಬುಲಾವು ಬಂತು. ಅವರ ಮನೆಯೋ ಇದ್ದುದರಲ್ಲೇ ಚಿಕ್ಕದಾಗಿ ಚೊಕ್ಕದಾಗಿ ಕಟ್ಟಿದ ಮನೆ, ಮನೆಯ ದಾರಿಂದ್ರ್ಯ ಪಟ್ಟಿಗೆ ಚೊಕ್ಕದಾಗಿ ಬೀಟೆ ಹಾಗೂ ಗಂಧದ ತುಂಡಿನಲ್ಲಿ ಮಾಡಿದಂತಹ ಕೆತ್ತನೆ, ಗೋಡೆಗಳ ಮೇಲೆ ಅಲ್ಲಲ್ಲಿ ನೇತಾಡುತ್ತಿದ್ದ ತರಾವರಿ ಚಿತ್ತಾರಗಳು ನಾವು ಮುಂದೆ ಮಾಡಬಹುದಾದ ಪ್ರಾಜೆಕ್ಟ್‌ಗಳ ಚರ್ಚೆಗೆ ಸೂಕ್ತ ನೆಲೆಗಟ್ಟನ್ನು ಕೊಡುವಲ್ಲಿ ತಮ್ಮ ಪ್ರಯತ್ನಮಾಡುತ್ತಿದ್ದವು. ನಾವು ಸುಮಾರು ಹತ್ತು-ಹನ್ನೆರಡು ಜನರಿದ್ದಿರಬಹುದು. 'ಆ ಪ್ರಾಜೆಕ್ಟ್ ಮಾಡ್ರೋ, ಈ ಪ್ರಾಜೆಕ್ಟ್ ಮಾಡ್ರೋ!' ಅನ್ನೋ ಹುಮ್ಮಸ್ಸು ಮೇಸ್ಟ್ರುದ್ದು - ನನ್ನ ಜೊತೆಯಲ್ಲಿದ್ದವರೆಲ್ಲ ಡೀಸೆಲ್ ಇಂಜಿನ್ ಬಗ್ಗೆಯೋ, ಮತ್ತೊಂದರ ಬಗ್ಗೆಯೋ ಪ್ರಾಜೆಕ್ಟ್ ಮಾಡುತ್ತೇವೆಂತಲೂ, ಮತ್ತಿನ್ನೇನೋ ಮಾತನಾಡಿಕೊಳ್ಳುತ್ತಿದ್ದರು. ಈ ಮಧ್ಯೆ, ನಮ್ಮೆಲ್ಲರದ್ದು SSLC marks ಎಷ್ಟೆಷ್ಟು ಎನ್ನುವ ಪ್ರಶ್ನೆ ಬಂತು, ಯಾರೋ ಒಂದು ಪೇಪರ್ ಪೆನ್ನೂ ತಗೊಂಡು ಬರೆಯೋದಕ್ಕೂ ಮೊದಲು ಮಾಡಿದರು. ನೀವೆಣಿಸಿದಂತೆ, ಅದರಲ್ಲಿ ನನ್ನದೇ ಕೊನೇ ಹೆಸರು! first class ಗೆ ಎಷ್ಟು ಬೇಕೋ ಅದರ ಹತ್ತತ್ರ ಅಂಕಗಳಿಸಿ, ಅವರೆಲ್ಲರ ಮಧ್ಯೆ (ಶೇ. ೯೦ ರ ಮೇಲೆ ತೆಗೆದವರೂ, ರಾಜ್ಯ ರ್‍ಯಾಂಕ್‌ನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡವರೂ ಆ ಗುಂಪಿನಲ್ಲಿದ್ದರು) ನಾನು ಹೂವಿನ ಜೊತೆ ನಾರಿನ ಹಾಗೆ ಇದ್ದೆ - ಅಲ್ಲ, ನಾರು ಎಂದರೂ ತಪ್ಪಾದೀತು (ಕೀಳರಿಮೆ ಬಗ್ಗೆ ಈ ಮೊದಲೇ ಹೇಳಿದ್ದೇನೆ: ಹಾಸಿ, ಹೊದೆಯುವಷ್ಟು ಇವತ್ತಿಗೂ ಇದೆ!).

ಉಳಿದ ಬುದ್ಧಿವಂತ ಹುಡುಗ/ಹುಡುಗಿಯರು ಅದ್ಯಾವ ಪ್ರಾಜೆಕ್ಟ್ ಮಾಡಿ ಅದೆಲ್ಲಿ ಸಬ್‌ಮಿಟ್ ಮಾಡಿ ಏನನ್ನು ಸಾಧಿಸಿದರೋ ನನಗ್ಗೊತ್ತಿಲ್ಲ, ಆದರೆ ಅದ್ಯಾವುದರಲ್ಲೂ ನಾನಂತೂ ಇರಲಿಲ್ಲ!

ಮುಂದೆ ನಾನು ಬಿ.ಎಸ್ಸಿ. ಸೇರಿಕೊಂಡ ಮೇಲೆ ಕಬ್ಬಿಣದ ಕಡಲೆಯಂತಿದ್ದ HLS Rao ಆತ್ಮೀಯರಾದರು. ಅವರೇ ಬುಲಾವು ಮಾಡಿದರೆಂದು ಮತ್ತೊಮ್ಮೆ ಅವರ ಮನೆಗೆ ಕೆಲವೊಂದು ಜನರು ಹೋದೆವು. ಆ ದಿನ ಮೇಷ್ಟ್ರು ನಮಗೆಲ್ಲ ಕಂಪ್ಯೂಟರ್ ಬಗ್ಗೆ ತಿಳಿಸಿದ್ರು, ಅವರ ಮನೆಯಲ್ಲಿ Sinclair Spectrum ZX (CPU cum monitor) ಇತ್ತು, ಅದರಲ್ಲಿ ಅವರು GW Basic ನಲ್ಲಿ ಏನೇನೋ ಪ್ರೋಗ್ರಾಮ್ಮಿಂಗ್ ಮಾಡಿದ್ರು ಅಂತ್ಲೂ ಗೊತ್ತಾಯ್ತು. ಹೀಗೇ HLS Rao ಹಾಗೂ ನನ್ನ ನಡುವಿನ ಗುರು ಶಿಷ್ಯರ ಸಂಬಂಧ ಮುಂದೆ ನಾನು B.Sc. ಓದುವ ದಿನಗಳಲ್ಲಿ ಇನ್ನೂ ಪಕ್ಕಾ ಆಯಿತು. ಯಾವುದೋ ಬೇಸಿಗೆ ರಜೆಯೊಂದರಲ್ಲಿ ನಾವು ೬೦೦ ರೂಪಾಯಿ ಕೊಟ್ಟು, Programming in BASIC ತರಗತಿಗೆ ಸೇರಿಕೊಂಡೆವು. ಅಂದು ಮಾಡಿದ್ದ ಆ ಕೋರ್ಸೇ ನನಗೆ ಕಂಪ್ಯೂಟರ್ ಭಾಷೆಯ ಮೊದಲ ಅಧ್ಯಾಯ. ಆದ್ದರಿಂದಲೇ ನಾನು HLS Rao ಅವರನ್ನ ವಿಶೇಷವಾಗಿ ನೆನೆಸಿಕೊಳ್ತೀನಿ - ಅವರೇ ನನ್ನನ್ನು ಕಂಪ್ಯೂಟರ್ ಪ್ರೊಗ್ರಾಮ್ಮಿಂಗ್‌ಗೆ ಪರಿಚಯಿಸಿದ್ದು. ಅವರು ಅಂದು ಸಾಗರದಲ್ಲಿ ಅದರ ಭದ್ರ ಬುನಾದಿ ಹಾಕ್ದೇ ಇದ್ರೆ, ನಾನು ಅದನ್ನು pursue ಮಾಡ್ತಿರಲಿಲ್ಲ, ಇಂದು Information Technologyಯಲ್ಲಿ ಕೆಲಸವನ್ನೂ ಮಾಡ್ತಿರಲಿಲ್ಲ ಅನ್ಸುತ್ತೆ. ಅಷ್ಟೂ ಅಲ್ದೇ ಅವರು ಗಣಿತದ ಮೇಷ್ಟ್ರು, ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋ ಅವರ ದಾಹ ಯಾವತ್ತೂ ಹಿಂಗದ್ದು. ಹಂಗೂ-ಹಿಂಗೂ ಮಾಡಿ, ಅವರು ಕಂಪ್ಯೂಟರ್ ಬಗ್ಗೆ ಕಲಿತದ್ದು ಬಹಳ, ಅದರ ಜೊತೆಯಲ್ಲಿ ನನ್ನಂಥ ಮೂರ್ಖರಿಗೂ ಸ್ಪೂರ್ತಿ ನೀಡಿದ್ದು ನಾನೆಂದೂ ಮರೆಯದ ವಿಷಯ.

***

ನಮ್ ಮೇಷ್ಟ್ರು ಮೊದಮೊದಲು ತಮ್ಮ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದಕ್ಕೆ ಅವರ mutually independent ಆಗಿ ಬೇರೆ ಬೇರೆ planeನಲ್ಲಿ ಓಡಾಡೋ ಅವರ ಕಣ್ಣುಗುಡ್ಡೆಗಳೂ ಕಾರಣವಿರಬಹುದು! ಆದರೆ ಒಂದು ಸಾರಿ ನೀವು ಅವರನ್ನ ಅರ್ಥ ಮಾಡಿಕೊಂಡರೆ ಸಾಕು ಮುಂದೆ ಎಲ್ಲವೂ ಸುಲಭ. ನನ್ನಂತೆಯೇ ನಮ್ ಮೇಷ್ಟ್ರೂ ಸಹ ಮೊದ್ಲು ಇಂಗ್ಲೀಷ್‌ನಲ್ಲಿ ಕಷ್ಟ ಪಟ್ಟಿದ್ದರಂತೆ ಅವರೇ ಹೇಳಿದ ಹಾಗೆ ಒಂದ್ ಸಾರಿ ಯಾವ್ದೋ ದೊಡ್ಡ ಮನುಷ್ಯರನ್ನ ಇಂಗ್ಲೀಷ್‌ನಲ್ಲೇ introduce ಮಾಡ್ತೀನಿ ಅಂತ ಹೋಗಿ, 'I pay my sincere homage to so and so...' ಅಂಥ ಹೇಳಿ ತಮ್ಮನ್ನೇ ತಾವು ಪೇಚಿನಲ್ಲಿ ಸಿಕ್ಕಿಸಿಕೊಂಡಿದ್ದರಂತೆ. ನನಗೆ ಇಲ್ಲೀವರೆಗೂ ಅರ್ಥವಾಗ್ದೇ ಇರೋ ವಿಷಯಗಳಲ್ಲಿ, ಒಬ್ಬ ಗಣಿತದ ಮೇಷ್ಟ್ರಾಗಿ ತಾವು ಎಷ್ಟು ಸಿಗರೇಟ್ ಸೇದಿದ್ದೇವೆ ಅನ್ನೋ ಲೆಕ್ಕಾನೇ ಅವರಿಗೆ ಇಲ್ದೇ ಇರೋದು! ಈ ಬಗ್ಗೆ ಕೇಳ್ದಾಗ್ಲೆಲ್ಲ 'ಅದನ್ನ ಯಾಕೆ/ಯಾರು ಲೆಕ್ಕ ಇಟ್ಟಕೊಳ್ತಾರೋ?' ಅಂತ ಪ್ರಶ್ನೆಗೆ-ಪ್ರಶ್ನೆಯೊಂದನ್ನು ಉತ್ತರವಾಗಿ ಕೇಳಿ ಹಾರಿಸಿ ಬಿಡ್ತಾ ಇದ್ರು!

L B Collegeನಲ್ಲಿ, ಈಗ ಲೈಬ್ರರಿ ಇದೇ ನೋಡಿ, ಅದರ ಮೇಲನೇ ಮಹಡಿಯಲ್ಲಿ ಮೊದಲು ಕಂಪ್ಯೂಟರ್ ತರಗತಿಗಳನ್ನು ಶುರುಮಾಡಿದ್ರು. ಆಗ ಇದ್ದವು ಎರಡೇ ಕಂಪ್ಯೂಟರ್‍ಸ್, ಒಂದಕ್ಕೆ ಹಾರ್ಡ್ ಡಿಸ್ಕ್ ಇತ್ತು, ಮತ್ತೊಂದಕ್ಕೆ ಅದೂ ಇರಲಿಲ್ಲ, ಫ್ಲಾಪಿ ಹಾಕಬೇಕಿತ್ತು, MS DOS verison 5.0ಇದ್ದ ಹಾಗೆ ನೆನಪು. ಸ್ವಾರಸ್ಯದ ಸಂಗತಿಯೆಂದರೆ ಒಂದು ದಿನ ನಮ್ಮ ಮೇಷ್ಟ್ರು ಎಲ್ಲೆಲ್ಲಿಂದಲೋ ಬಂದ ವೈರಸ್‌ಗೆ ಹೆದರಿ CPU, Monitor, Keyboard ಎಲ್ಲದರ ಸಮೇತ ಡಬ್ಬಕ್ಕೆ ಹಾಕಿಕೊಂಡು ರಾತ್ರೋ ರಾತ್ರಿ ಬೆಂಗಳೂರಿನ ಬಸ್ಸು ಹತ್ತಿ ವೈರಸ್ 'ರಿಪೇರಿ' ಮಾಡಿಸಿಕೊಂಡು ಬಂದಿದ್ದರು!

ಮತ್ತೊಂದು ಪೇಚಿನ ಪ್ರಸಂಗ ಎಂದರೆ, ಒಂದು ದಿನ ಮೇಷ್ಟ್ರು ಒಂದು ರೂಮಿನಲ್ಲಿ ಕುಳಿತು ಕಾಲೇಜಿನ ಪೇ ರೋಲ್ ಶೀಟ್‌ಗಳನ್ನು ಡಾಟ್ ಮೆಟ್ರಿಕ್ಸ್ ಪ್ರಿಂಟರ್‌ನಲ್ಲಿ ತದೇಕ ಚಿತ್ತದಿಂದ ಪ್ರಿಂಟ್ ಹಾಕುತ್ತಿದ್ದರು, ಅದೇ ಸಮಯದಲ್ಲಿ ನಾನೂ-ಶ್ರೀಪಾದನೂ ಮತ್ತೊಂದು ಕಂಪ್ಯೂಟರ್‌ನಲ್ಲಿ ನಮ್ಮ BASIC ಪ್ರಾಜೆಕ್ಟ್‌ನ್ನು ತಿದ್ದುತ್ತಿದ್ದೆವು, ನಾನು ಅದ್ಯಾವ ರೀತಿಯಲ್ಲಿ CTRL P ಒತ್ತಿದೆನೋ ಗೊತ್ತಿಲ್ಲ, ಪೇ ರೋಲ್ ಪೇಪರ್‌ಗಳ ಮಧ್ಯೆ ನಮ್ಮ ಪ್ರಾಜೆಕ್ಟ್ ಪ್ರಿಂಟ್ ಆಗಿ ನಮ್ಮಿಬ್ಬರನ್ನೂ ಮೇಷ್ಟ್ರು ಹೊರಗೆ ಹಾಕಿದ್ದರು! ನಾವು ಅದನ್ನ ನೆನೆಸಿಕೊಂಡು ನಕ್ಕಿದ್ದೇ ನಕ್ಕಿದ್ದು, ಆದರೆ ಅವರ ಪರಿಪಾಟಲೆ ಹೇಳತೀರದಾಗಿತ್ತು!

***

ಮೊನ್ನೆ ನನ್ನ ಅಣ್ಣನ ಮಗಳು ಕಾಲ್ ಮಾಡಿದ್ಲು, 'ಫಸ್ಟ್ ಪಿ.ಯು.ಸಿ. ಪರೀಕ್ಷೆ ಎಲ್ಲಾ ಆಗಿದೆ, ಮುಂದಿನವಾರದಿಂದ್ಲೇ ಟ್ಯೂಷನ್‌ಗೆ ಹೋಗೋಣ ಅಂತಿದೀನಿ...ಮ್ಯಾಥ್‌ಮ್ಯಾಟಿಕ್ಸ್‌ಗೆ HLS Rao ಅಂತ ಒಬ್ರು retired ಮೇಷ್ಟ್ರು ಇದ್ದಾರೆ, ಅವರು ನಿಮಗ್ ಗೊತ್ತಾ? ಎಲ್ರೂ ಹೇಳ್ತಾರೆ ಅವರ ಪಾಠ ಅರ್ಥ ಮಾಡ್‌ಕೊಳ್ಳೋದು ಬಹಳ ಕಷ್ಟ ಅಂತ...'

ನಾನೆಂದೆ 'ಗೊತ್ತೂ, ಗೊತ್ತೂ...' ನನ್ನ ಮಾತನ್ನ ಮಧ್ಯದಲ್ಲಿಯೇ ತುಂಡು ಮಾಡಿ ಹೇಳಿದಳು...'ನೋಡ್ತೀನಿ, ಸಾಧ್ಯ ಆದ್ರೆ ಅಲ್ಲೇ ಹೋಗ್ತೀನಿ, ಆದ್ರೆ ಒಂದು ಸಮಸ್ಯೆ ಇದೆ, ಅವರು first PUC ನಲ್ಲಿ ಕಡಿಮೆ marks ತಗೊಂಡೋರಿಗೆ ಟ್ಯೂಷನ್ ಹೇಳೋಲ್ಲವಂತೆ, ಕೇಳ್ ನೋಡ್ತೀನಿ...' ಅಂದ್ಲು.

ನಾನು 'ಸರಿ' ಅಂದವನು, ಮನಸ್ಸಲ್ಲೇ 'ಏನ್ ಸಾರ್, ನನ್ನಂಥ ವಿದ್ಯಾರ್ಥಿಗಳಿಗೆ ಪಾಠ ಹೇಳೋಲ್ಲವಂತೆ, ಹೌದಾ?' ಎಂದು HLS Rao ಮೇಲೆ ಮೊದಲ ಬಾರಿಗೆ ಗದರಿಕೊಂಡೆ!

ನಕ್ಸಲರೆಂಬೋ ವಾದ!

ನಾವು ೮೦ ಹಾಗು ೯೦ ರ ದಶಕದಲ್ಲಿ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದೆವು: ದಕ್ಷಿಣ ಭಾರತದಲ್ಲಿ ಕರ್ನಾಟಕವೆಂದರೆ ಯಾವುದೇ ಭಯೋತ್ಪಾದಕರಿಲ್ಲದ ಸ್ಥಳ, ನಾವು ಸ್ನೇಹ ಪ್ರಿಯರು, ಪ್ರಪಂಚದ ಯಾವುದೇ ಭಾಗದಲ್ಲಿ ರಕ್ತಕ್ರಾಂತಿಯಾದರು ನಮ್ಮ ಕರ್ನಾಟಕದಲ್ಲಿ ಮಾತ್ರ ಹಾಗಾಗದೆಂದು. ಹೀಗೆ ಹೇಳುತ್ತಿದ್ದುದಕ್ಕೆ ಕಾರಣಗಳೂ ಇದ್ದವು, ನಮ್ಮ ನೆರೆಯ ರಾಜ್ಯಗಳಲ್ಲಿ ನಕ್ಸಲೀಯರು, ಎಲ್‌ಟಿಟಿಇ, ಪಿಡಬ್ಲುಜಿ, ಶಿವಸೇನೆ ಮುಂತಾದವರಿಂದ ಆಗಾಗ್ಗ ರಕ್ತ ಚೆಲ್ಲುತ್ತಿತ್ತು - ನಾಡಿನ, ನುಡಿಯ ಹಿತ-ಅಹಿತಗಳು ಅವುಗಳ ಮೇಲೆ ನಿರ್ಧರಿತಗೊಳ್ಳುತ್ತಿದ್ದವು.

ಆದರೆ, ನಮ್ಮ ಕರ್ನಾಟಕಕ್ಕೆ ಇತ್ತೀಚೆಗೆ ಎಂಥಾ ಸ್ಥಿತಿ ಬಂದಿದೆ ನೋಡಿ - ಆಗುಂಬೆ, ಚಿಕ್ಕ ಮಗಳೂರು, ಮಂಗಳೂರು, ಉಡುಪಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಇತ್ಯಾದಿ ಪ್ರದೇಶಗಳಲ್ಲಿ ಇತ್ತೀಚೆಗೆ ನಕ್ಸಲರ ಹಾವಳಿ ಅತಿಯಾಗಿದೆ - ಹೌದು, ಹಾವಳಿ ಎಂಬ ಪದವನ್ನು ನಮ್ಮ ಮಾಧ್ಯಮಗಳೂ ಬಳಸುತ್ತಿವೆ.

೧೯೯೧ರ ರಾಜೀವ್ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸರಹದ್ದಿನಲ್ಲಿ ಅಡಗಿ ಕುಳಿತಿದ್ದ ಶಿವರಸನ್ ಮತ್ತು ಅವನ ಸಹಚರರನ್ನು ಕರ್ನಾಟಕದ ಪೋಲೀಸರು ಗುಂಡಿಟ್ಟು ಕೊಂದಿದ್ದು, ಈ ರಕ್ತಕ್ರಾಂತಿಗೆ ನಾಂದಿಯಾಯಿತು ಎನ್ನಬಹುದೇ? ಅಥವಾ ಅದಕ್ಕೂ ಮುನ್ನ ನಡೆದ ಇಂತಹ ಯಾವುದಾದರೂ ಘಟಣೆಗಳನ್ನು ನೆನಪಿಗೆ ತಂದುಕೊಳ್ಳಿ.

ನಾನು ನಕ್ಸಲರ ಬಗ್ಗೆ, ಮಾವೋ ವಾದ, ಮಾರ್ಕ್ಸ್ ವಾದದ ಬಗ್ಗೆ ಸಾಕಷ್ಟು ಓದಿದ್ದೇನೆ. ಅವರ ಮೂಲ ತತ್ವಗಳಿಗೂ, ಅದರ ಇಂದಿನ ಅಳವಡಿಕೆಗೂ ಸಾಕಷ್ಟು ವ್ಯಾತ್ಯಾಸವಿದೆಯೆಂದೆನಿಸುತ್ತೆ. ಪ್ರಜಾಪ್ರಭುತ್ವದಲ್ಲಿ ದೊಡ್ಡ ಹೆಸರನ್ನು ಗಳಿಸಿದ ಭಾರತಕ್ಕೆ ಈ ಮಾವೋ-ಮಾರ್ಕ್ಸ್ ವಾದಗಳು ಹೇಗೆ ಬಂದು ಸುತ್ತಿಕೊಂಡವೋ, ಈ ವಾದದ ಹೆಸರಿನಲ್ಲಿ ಇಂದಿಗೂ ಸಿ.ಪಿಐ. ಪಕ್ಷದ ಅಭ್ಯರ್ಥಿಗಳು ಗೆದ್ದು ಬರುತ್ತಲೇ ಇದ್ದಾರೆ, ಅವರ ಪ್ರಣಾಳಿಕೆಗಳೂ ಅವರಂತೆಯೇ ಇನ್ನೂ ಚಲಾವಣೆಯಲ್ಲಿವೆ. ಉದಾಹರಣೆ ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳನ್ನು ತೆಗೆದುಕೊಂಡರೆ ಅವರ ಪ್ರಭಾವ ಅತಿ ಹೆಚ್ಚು, ಆದರೆ ಈ ರಾಜ್ಯಗಳ ಬೆಳವಣಿಗೆ ಅಷ್ಟಕಷ್ಟೇ. ಎಲ್ಲೆಲ್ಲೋ ಓದಿದ ನಮ್ಮ ಯುವಕರು ಈ ವಾದಗಳನ್ನು ಬೆಂಬಲಿಸಿ ಪೋಲೀಸರ ಗುಂಡಿಗೆ ಬಲಿಯಾದರೆಂದು ಕೇಳಿದಾಗ ಖೇದವಾಗುತ್ತದೆ, ತಮ್ಮ ಯುವ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯರ ರೋಧನ ಮುಗಿಲು ಮುಟ್ಟುತ್ತೆ, ನಕ್ಸಲರು ಎಂಬ ಹಣೆ ಪಟ್ಟಿ ಹೊತ್ತುಕೊಂಡ ಮಾತ್ರಕ್ಕೆ ಈ ಯುವಕರ ಹೆಣಗಳು ಮುನಿಸಿಪಾಲಿಟಿಯವರ ಸೊತ್ತಾಗುತ್ತದೆ.

ಯಾರು ಇವರಿಗೆಲ್ಲ ಹಣ (ಜೊತೆಯಲ್ಲಿ ಆಸೆ, ಆಮಿಷಗಳನ್ನೂ) ಸರಬರಾಜು ಮಾಡುವವರು? ಒಂದು ಒಳ್ಳೆಯ ಕಾರ್ಯವನ್ನು ಮಾಡಬೇಕೆಂದರೇ ಸಾಕಷ್ಟು ವಿಘ್ನಗಳು ತಲೆದೋರುವಾಗ ಇವರು ಇಷ್ಟೊಂದು ಯಶಸ್ವಿ ಅಥವಾ ವ್ಯವಸ್ಥಿತವಾದ ಕಾರ್ಯಾಚರಣೆಯನ್ನು ಅದು ಹೇಗೆ ನಡೆಸಿಕೊಂಡು ಬರುತ್ತಾರೆ? ಈ ಯುವಕ-ಯುವತಿಯರ ಅಂತಿಮ ಗುರಿ ಏನು, ಇವರ ಪ್ರಣಾಲಿಕೆಗಳೇನು? ಆಳುವವರ ವಿರುದ್ಧದ ಹೊಡೆದಾಟದಲ್ಲಿ ಬರೀ ಶಸ್ತ್ರಾಸ್ತ್ರಗಳಿಗೆ ಶರಣು ಹೋಗುವುದೇ ಇವರ ನಿಲುವೇ? ಇವರಿಂದ ಸಮಾಜದಲ್ಲಿನ ದುರ್ಬೀಜಗಳನೆಲ್ಲ ಹೊಸಕಿ ಹಾಕುವುದು ಸಾಧ್ಯವೇ? ಇವರಲ್ಲಿ ಸಿಟ್ಟಿದೆಯೇ? ಇವರು ಬಡವರ ಪರವೋ, ವಿರುದ್ಧವೋ? ಶಸ್ತ್ರಾಸ್ತ್ರಗಳನ್ನು ಬಳಸಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುನ್ನ ಉಳಿದ ದಾರಿಗಳನ್ನು ಇವರು ಅವಲೋಕಿಸಿದ್ದಾರೆಯೇ? ಇಷ್ಟೆಲ್ಲ ಆದ ಮೇಲೆ ಅದರಿಂದೇನಾಯಿತು? ಮನೆ ಗೆದ್ದು ಮಾರಿ ಗೆಲ್ಲು ಎಂಬ ಹಿರಿಯರ ಹೇಳಿಕೆಯನ್ನು ಮೀರಿ, ತಮ್ಮನ್ನು ಬೆಳೆಸಿ, ಪೋಷಿಸಿದವರನ್ನು ತೊರೆದು, ನಾಡಿಗೆ ನೇರವಾಗಿ ಯಾವುದೇ ರೀತಿಯಲ್ಲಿ ಉಪಯೋಗವಾಗದ ಕೆಲಸ ಕಾರ್ಯಗಳಲ್ಲಿ ಇವರು ತೊಡಗಿರುವುದನ್ನು ಇವರು ಹೇಗೆ ಸಾಧಿಸಿಕೊಳ್ಳುತ್ತಾರೋ ಎಂಬ ಕುತೂಹಲವಿದೆ.

ನಮ್ಮ ರಾಜ್ಯ ಸರ್ಕಾರ ಈ ಕುರಿತು ಹಲವಾರು ರೀತಿಯ ವರದಿಗಳನ್ನು ತಯಾರಿಸಲು ಕಮಿಷನ್‌ಗಳನ್ನು ನಿರ್ಮಿಸಿತು, ಅವುಗಳಿಂದ ಬೆಳಕಿಗೆ ಬಂದ ವಸ್ತುಗಳು ನಿಮಗೇನಾದರೂ ದೊರಕಿದ್ದರೆ ಕಳಿಸಿಕೊಡಿ. ನಕ್ಸಲರ ಬೆಳವಣಿಗೆ, ಕರ್ನಾಟಕದ ಮಟ್ಟಿಗೆ ಇನ್ನು ಮುಂದೆ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಯುವ ಜನತೆ ಹಾಗೂ ಅಮಾಯಕರು ಇದರ ಬಲೆಯಲ್ಲಿ ಬಿದ್ದು ಹಾಳಾಗಾದಿದ್ದರೆ ಸಾಕು.

ಒಂದು ವೇಳೆ ನಾನು ಯಾವುದಾದರೊಂದು ತತ್ವಕ್ಕೆ ಕಟ್ಟು ಬಿದ್ದವನಾದ ಮಾತ್ರಕ್ಕೆ, ಹಿಂದೆ ಮುಂದೆ ನೋಡದೆ ನನ್ನನ್ನು ಮುನಿಸಿಪಾಲಿಟಿ ನಾಯಿಯ ಹಾಗೆ ಹೊಡೆದುರುಳಿಸುವ ಅಧಿಕಾರ ಪೋಲೀಸಿನವರಿಗೆ ಸಿಗುತ್ತದೆಯೆಂದು ಗೊತ್ತಾದ ತಕ್ಷಣ ನನ್ನ ತತ್ವ ಹಾಗೂ ಹೆಜ್ಜೆಗಳನ್ನು ಪುನರಾವಲೋಕನ ಮಾಡಿಕೊಳ್ಳುತ್ತಿದ್ದೆ, ಈ ಯುವಕ-ಯುವತಿಯರಿಗೆ ಆ ಅವಕಾಶ ಬರಲಿ.